ಜ್ಞಾನಶಾಸ್ತ್ರದ ಸಿದ್ಧಾಂತಗಳು

ಅನುಭವಜನ್ಯ ಸಿದ್ಧಾಂತ (Empericism)

ಜ್ಞಾನವೆನ್ನುವುದು ಮಾನವನ, ಸ್ವಾನುಭವದ ಫಲಿತ. ವೀಕ್ಷಣೆ, ಪರಿವೀಕ್ಷಣೆ ಇವುಗಳಿಗೆ ಇಲ್ಲಿ ಪ್ರಮುಖ ಸ್ಥಾನ. ನಮ್ಮ ಪರಿಕಲ್ಪನೆಗಳನ್ನು ಸತ್ಯದ ಒರೆಗಲ್ಲಿಗೆ ಹಚ್ಚಬೇಕೆಂಬುದನ್ನು ಇದು ಪ್ರತಿಪಾದಿಸುತ್ತದೆ. ಸಿದ್ಧಾಂತಗಳನ್ನು  ಒಪ್ಪಿಕೊಳ್ಳುವ ಇಲ್ಲವೇ ತಿರಸ್ಕರಿಸುವ ಅಂಶಗಳ ಆಧಾರದ ಮೇಲೆ ಈ ಪರಿಕಲ್ಪನೆಗಳು ನಿರ್ಧರಿತವಾಗುತ್ತವೆ. ಜ್ಞಾನಶಾಸ್ತ್ರಕ್ಕೆ ವಿಜ್ಞಾನದ ಜೊತೆ ಸಹಜವಾಗಿಯೇ ಹೊಂದಾಣಿಕೆ ಇದೆ. ವಿಜ್ಞಾನದ ಪ್ರಭಾವ ಹಾಗೂ ಪರಿಣಾಮಗಳ ಬಗೆಗೆ ವಿವಾದವಿಲ್ಲದಿದ್ದರೂ ವಿಜ್ಞಾನ ಕೆಲಸ ಮಾಡುವ ಪರಿ ಹಾಗೂ ಉದ್ದೇಶಗಳ ಬಗೆಗೆ ವಾದ-ವಿವಾದಗಳಿವೆ. ಒಂದು ಕಾಲದಲ್ಲಿ ವೈಜ್ಞಾನಿಕ ಪದ್ಧತಿಯು ವಿಜ್ಞಾನದ ಯಶಸ್ಸಿಗೆ ಕಾರಣವೆಂದೂ ಭಾವಿಸಲಾಗುತ್ತಿತ್ತು. ಆದರೆ ಈ ವೈಜ್ಞಾನಿಕ ಮತ್ತು ತತ್ವಶಾಸ್ತ್ರಗಳ ವೈರುಧ್ಯದಿಂದಾಗಿ ಇತ್ತೀಚಿಗೆ ಸುಸಂಗತಿಯುಳ್ಳ ಜ್ಞಾನದ ಶಾಖೆಗೆ ಹೆಚ್ಚು ಮಹತ್ವ ಸಿಗಲಾರಂಭಿಸಿದೆ. ಅನುಭವಜನ್ಯ ಸಿದ್ಧಾಂತ ಕೆಲವು ಸಹ ತಾರ್ಕಿಕ ಅನುಭವವಾಗಿ ಅಥವಾ ಧನಾತ್ಮಕ ಆಶಯವಾಗಿ ಪರಿಗಣಿಸಲಾಗುತ್ತಿದೆ. ಅದು ಸತ್ಯದ ಅನುಭವಕ್ಕಿಂತ ಸತ್ಯದ ಪರಿಕಲ್ಪನೆಗೆ ಹೆಚ್ಚು ಒತ್ತು ನೀಡುತ್ತದೆ.

ಪ್ರಾತಿನಿಧಿಕವಾದ (Representative Realism)

ಜಗತ್ತು ನೇರವಾಗಿ ಇದ್ದಂತೆಯೇ ನಮಗೆ ಗೋಚರಿಸದೇ ನಮ್ಮ ಪರಿಕಲ್ಪನೆಗಳ ಪ್ರತಿನಿಧಿಯಾಗಿ, ನಮ್ಮ ಸುತ್ತಮುತ್ತಲಿನ ವಸ್ತುಗಳು ಹಾಗೂ ಪರಿಸರ ನಮ್ಮ ಅಂತರಂಗದಲ್ಲಿ ಸ್ಥಾಪಿತ ಸತ್ಯಗಳ ಪ್ರತಿಬಿಂಬವಾಗಿ ಕಾಣುತ್ತದೆ ಎಂಬುದು ಈ ವಾದದ ತಾತ್ಪರ‍್ಯ. ಈ ಪರಿಕಲ್ಪನಾ ಸಾಮ್ರಾಜ್ಯ ನಿಜವಾದ ಜಗತ್ತಿನಿಂದ ದೂರ ಮಾಡಿರುತ್ತದೆ ಎಂಬುದೂ ಸತ್ಯ.

ಆದರ್ಶವಾದ (Idealism)

ಆದರ್ಶವಾದದ ಪ್ರಕಾರ ಯಾವುದನ್ನು ನಾವು ಹೊರಜಗತ್ತು ಎಂದು ಭಾವಿಸುತ್ತೇವೋ ಅದು ಮಾನಸಿಕ ಕಲ್ಪನಾ ವಿಲಾಸವಾಗಿದೆ. ವಿಶ್ಲೇಷಣಾತ್ಮಕ ವ್ಯಾಖ್ಯೆಗಳು ಹೊರಗಿನ ಜಗತ್ತಿನ ಪರಾಮರ್ಶೆಯಿಲ್ಲದೆಯೇ ಸತ್ಯದ ಬಗ್ಗೆ ಮಾತನಾಡುತ್ತವೆ. ಆದರೆ ಆದರ್ಶವಾದ ಒಂದು ಆಧ್ಯಾತ್ಮಿಕ ಸಿದ್ಧಾಂತವೇ ಆಗಿದೆ. ಅದರಂತೆ ಅದು ಜ್ಞಾನಶಾಖೆಯ ಮಹತ್ವದ ಪರಿಣಾಮಗಳಲ್ಲೊಂದು. ಸಾಮಾನ್ಯ ಗ್ರಹಿಕೆಯ ಸಿದ್ಧಾಂತ (Common Sense Realism) ಪ್ರಕಾರ ಸ್ವಯಂಸಿದ್ಧವಾದ ಒಂದು ಹೊರಜಗತ್ತು ಅಸ್ತಿತ್ವದಲ್ಲಿದೆ. ನಮ್ಮ ಪರಿಕಲ್ಪನೆಗಳು ಹೊರ ಜಗತ್ತಿನಿಂದ ಪ್ರಭಾವಿತವಾಗುತ್ತವೆ. ವಸ್ತುವಿನ ಅಸ್ತಿತ್ವ ಸತ್ಯವಾಗಿರುವುದರಿಂದಲೇ ನಾವು ಅದನ್ನು ನೋಡುತ್ತೇವೆ. ಪರ‍್ಯಾಯವಾಗಿ ಹೇಳುವುದಾದರೆ ಜಗತ್ತಿನ ಸ್ಥಿತಿಯು ನಾವು ಗ್ರಹಿಸಿದಾಗ ಹೇಗೆ ಇರುತ್ತದೆಯೋ ಅದೇ ರೀತಿ ಪರಿಗ್ರಹಿಸದೇ ಇರುವಾಗ ಕೂಡಾ ಇರುತ್ತದೆ. ನಾವು ಕೋಣೆಯಿಂದ ಹೊರಗೆ ಹೋದಾಗ ಕೂಡಾ ಕೋಣೆಯ ಅಸ್ತಿತ್ವ ಅಬಾಧಿತವಾಗಿರುತ್ತದೆ.

ಪ್ರಕ್ರಿಯಾವಾದ (Phenomenalism)

ಈ ಪ್ರಕ್ರಿಯಾವಾದದ ಪ್ರಕಾರ ಯಾವುದೇ ಒಂದು ವಸ್ತುವನ್ನು ನೋಡಿದಾಗ ಅದರ ಆಕಾರ ಮತ್ತು ಸ್ವರೂಪದದ ಜ್ಞಾನವಾಗುತ್ತದೆ. ಆ ವಸ್ತುವನ್ನು ಮುಟ್ಟಿದಾಗ ಬೆರಳಿಗೆ ಒತ್ತಡದ ಅನುಭವವಾಗುತ್ತದೆ ಮತ್ತು ಅದರ ಸ್ವರೂಪ ನಮ್ಮ ಬೆರಳಿಗೆ ಗೋಚರಿಸುತ್ತದೆ.

ಆದ್ದರಿಂದ ನಮ್ಮ ಜ್ಞಾನೇಂದ್ರಿಯದ ಜೊತೆಗೆ ವ್ಯವಹರಿಸುವ ವಸ್ತುವು ವಿವಿಧ ಪರಿಣಾಮಗಳನ್ನುಂಟು ಮಾಡುತ್ತದೆ. ಈ ಎಲ್ಲ ಅನುಭವಗಳನ್ನು ಪ್ರತ್ಯೇಕಿಸಿ ನೋಡದೇ ಈ ಎಲ್ಲ ಅನುಭವಗಳ ಸಮುಚ್ಚಯಕ್ಕೆ ನಿಜವಾದ ಅಸ್ತಿತ್ವವಿದೆ ಎಂದು ಈ ವಾದ ಪ್ರತಿಪಾದಿಸುತ್ತದೆ.

ವಾಸ್ತವಿಕವಾದ (Pragmatism)

ಈ ವಾದದ ಪ್ರಕಾರ ಯಾವುದ ಜಗತ್ತು ಮತ್ತು ವ್ಯಕ್ತಿಯೊಳಗಿನ ಬಂಧದ ಸಮಸ್ಯೆಗಲನ್ನು ಬಗೆಹರಿಸುತ್ತದೋ ಅದು ಅತ್ಯಂತ ಮಹತ್ವಪೂರ್ಣ ಜ್ಞಾನ. ನಂಬಿಕೆ ಮತ್ತು ಕೃತ್ಯ ಇವುಗಳ ನಡುವಿನ ಸಮಸ್ಯೆಗಳನ್ನು ಪರಿಹರಿಸುವುದೇ ಮಾನವೀಯ ಜ್ಞಾನಕ್ಕೆ ಇರುವ ಮಹತ್ವದ ಸ್ಥಾನ. ಯಾವುದೇ ವಿಷಯದಲ್ಲಿ ವಿಚಾರಣೆ, ಈಗಾಗಲೇ ಗೊತ್ತಿರುವ ಜ್ಞಾನದ ಬಗೆಗಿನ ವಿಮರ್ಶಾತ್ಮಕ ದೃಷ್ಟಿ ಹಾಗೂ ಭವಿಷ್ಯತ್ತಿನ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗುವ ತಿಳಿವಳಿಕೆಯೇ       ‘ಜ್ಞನ’ ಎಂಬುದು ಈ ವಾದದ ಪ್ರಮುಖ ಲಕ್ಷಣ. ಈ ವಾದ ವಿಜ್ಞಾನದ ಪರೀಕ್ಷಾ ವಿeಜಾನಕ್ಕೆ ಹತ್ತಿರವಾದುದು.

ಸಾಪೇಕ್ಷವಾದ (Relativism)

ಒಂದು ವಿಶಿಷ್ಟ ಸ್ಥಿತಿಯಲ್ಲಿ ಎಲ್ಲ ವಿಷಯವಸ್ತುಗಳು ಸತ್ಯವಾಗಿ ಗೋಚರವಾಗುತ್ತವೆ ಮತ್ತು ಆ ಸ್ಥಿತಿಯಲ್ಲಿ ಸತ್ಯದ ಮುಖಗಳನ್ನು ತೋರಿಸುತ್ತವೆ. ಆದರೆ ವಿಭಿನ್ನ ಸನ್ನಿವೇಶದಲ್ಲಿ ಮುಂಚಿನ ಸತ್ಯದ ಮುಖವು ಸುಪ್ತಾವಸ್ಥೆಯಲ್ಲಿರುತ್ತದೆ. ಆದ್ದರಿಂದಲೇ ಸನ್ನಿವೇಶದ ಆಧಾರದ ಮೇಲಿಂದಲೇ ಸತ್ಯದ ಕೆಲವು ಮುಖಗಳು ಗೋಚರವಾಗುತ್ತವೆ. ಯಾವುದೂ ನಿರಪೇಕ್ಷವಾದ ಸತ್ಯವಲ್ಲ. ಒಬ್ಬ ಮನುಷ್ಯ ಪರಿಭಾವಿತ ಸತ್ಯವು ಇನ್ನೊಬ್ಬ ಮನುಷ್ಯನ ಪರಿಭಾವಿತಸತ್ಯಕ್ಕಿಂತ ವಿಭಿನ್ನವಾಗಿರಬಹುದು. ಆದ್ದರಿಂದಲೇ ಪರಿಕಲ್ಪನೆಗಳ ಸುಸಂಗತಿಯನ್ನು ಸತ್ಯದ ಜೊತೆಗೆ ಸರಿಯಾದ ಅರ್ಥದಲ್ಲಿ ಸ್ಥಾಪಿಸಿದರೆ ಇವುಗಳ ಪರಸ್ಪರ ವರುಧ್ಯಗಳನ್ನು ತಡೆಗಟ್ಟಬಹುದು.

ಸಂದೇಹವಾದ (Skepticism)

ಯಾವುದೇ ಸಂಗತಿಯು ಸರಿ ಅಥವಾ ತಪ್ಪು ಎಂಬ ನಿರ್ಣಯವನ್ನು ಸಂದೇಹದಿಂದ ನೋಡುವುದರಿಂದ ನಿರ್ಣಂ, ಸಾಧ್ಯತೆಗಳನ್ನು ತೀವ್ರ ವಿಶ್ಲೇಷಣೆಗೆ ಒಡ್ಡುವ ಗುಣ ಇದರಲ್ಲಿವೆ. ಬೇರೆಯವರು ಹೇಳುವ ವಿಷಯ ವಿಶ್ಲೇಷಿಸುವ ಬಗೆ ಇದಾಗಿದೆ. ಪೂರ್ಣ ಪ್ರಮಾಣದ ಸಂದೇಹವಾದದ ಪ್ರಕಾರ ಯಾವುದೂ ಸಂಪೂರ್ಣವಾಗಿ ಸತ್ಯವಲ್ಲ ಎಂಬುದು ತಾತ್ಪರ‍್ಯ.

ಸಂದೇಹವಾದವು ೩ ವಿಧದ ರೂಪಗಳಲ್ಲಿ ಗಮನಾರ್ಹವಾಗಿದೆ. ವಿಷಯ, ವ್ಯಾಪ್ತಿ, ಸಾಮರ್ಥ್ಯ., ಈ ಮೂರು ವಿಧಗಳಲ್ಲಿ ಈ ವಾದ ರೂಪ ತಳೆದಿದೆ.

ವಿಷಯ ಪಾಶ್ಚಾತ್ಯರಲ್ಲಿ ಎರಡು ವಿಧದ ಧಾರೆಗಳನ್ನು ನೋಡಬಹುದು. ಒಂದು ಧಾರೆಯ ಪ್ರಕಾರ ನಮ್ಮ ಅನುಭವದ ಕಕ್ಷೆಯ ಪರಿಮಿತಿಯಾಚೆಗೆ ಮಂಡಿತವಾದ ಯಾವುದೇ ಹೇಳಿಕೆ ಸಂದೇಹಾಸ್ಪದ, ಸ್ಪಷ್ಟವಲ್ಲದ್ದು. ಇನ್ನೊಂದು ವಾದ ಇದಕ್ಕೆ ವಿರುದ್ಧವಾದದ್ದು. ನಮ್ಮ ಅನುಭವ ಕಕ್ಷೆಗೆ ಮೀರಿದ ಹೇಳಿಕೆಗಳ ಸತ್ಯವನ್ನು ಅದು ನಿರಾಕರಿಸುವುದಿಲ್ಲ. ಪರ‍್ಯಾಯವಾಗಿ ಆ ಹೇಳಿಕೆಯ ಮೇಲೆ ನಿರ್ಣಯವನ್ನು ಕೊಡುವುದಿಲ್ಲ. ಸತ್ಯದ ಸ್ವರೂಪದ ಬಗ್ಗೆ ಬದ್ಧರಾಗದೇ ಜಗತ್ತು ಹೇಗೆ ಕಾಣಿಸುತ್ತದೆಯೋ ಅದರ ಜೊತೆಗೆ ಹೊಂದಿಕೊಂಡು ಹೋಗುವುದು.

ಸದ್ಯದ ಜ್ಞಾನಶಾಸ್ತ್ರದ ಪ್ರಕಾರ ಸಂದೇಹವಾದ ಜ್ಞಾನಶಾಸ್ತ್ರದ ಸಾಧನೆಗಳ ಋಣಾತ್ಮಕ ಅವಲೋಕನ. ಇಲ್ಲಿ ಸಂದೇಹವಾದ ಎರಡು ಬಗೆಗಳಲ್ಲಿ ಇದೆ. ತಿಳಿವಿನ ಸಮರ್ಥನೆಯಲ್ಲಿನ ಸಂದೇಹ ಮತ್ತು ತಿಳಿವಿನ ಬಗೆಗಿನ ಸಂದೇಹ. ಆದ್ದರಿಂದ ಸಂದೇಹವಾದವು ತಿಳಿವಿನ ವಿಷಯವಾಗಿರಬೇಕು ಅಥವಾ ಸಮರ್ಥನೆಯ ಕಕ್ಷೆಗೆ ಬರಬೇಕು.

ವ್ಯಾಪ್ತಿ ಸಂದೇಹವಾದವು ತನ್ನವಿಷಯದಂತೆಯೇ ತನ್ನ ವ್ಯಾಪ್ತಿಯಿಂದ ಕೂಡ ವಿಭಿನ್ನ ಸ್ವರೂಪವನ್ನು ತಾಳಬಹುದು. ಎಲ್ಲ ಬಗೆಯ ತಿಳಿವಿನ ಮತ್ತು ಸಮರ್ಥನೆಗಳನ್ನು ನಿರಾಕರಿಸುತ್ತದೆ. ಇದು ಅತಿರೇಕ ಸ್ವರೂಪದ ವಾದ. ಬಹಳಷ್ಟು ವಾದಗಳು ವಿಶಿಷ್ಟ ವಲಯದಲ್ಲಿ ಸಂದೇಹವಾದವನ್ನು ಅನ್ವಯಿಸುತ್ತವೆ. ಸಂದೇಹವಾದ ತಿಳಿವು ಸಮರ್ಥನೆ ಇತ್ಯಾದಿ ಪರಿಪ್ರೇಕ್ಷ್ಯಗಳ ಸಾಧ್ಯಾಸಾಧ್ಯತೆ ಕುರಿತು ಚಿಂತಿಸುತ್ತದೆ.ಸಂದೇಹವಾದ ತನ್ನ ಸಾಮರ್ಥ್ಯದ ಅನುಗುಣವಾಗಿ ವಿಭಿನ್ನ ಆಯಾಮವನ್ನು ಪಡೆಯುತ್ತದೆ.

ಸಾಮರ್ಥ್ಯ ಸಂದೇಹವಾದ ಸಾಮರ್ಥ್ಯವು ಜ್ಞಾನಶಾಸ್ತ್ರದ ಸಾಧನೆಯ ವಿಲೋಮವಾಗಿರುತ್ತದೆ. ಸಂದೇಹವಾದದ ಉನ್ನತ ವಲಯದಲ್ಲಿ ಅತ್ಯುತ್ತಮ ಸಮಥ ಮತ್ತು ಅತ್ಯುತ್ತಮ ತಿಳಿವಳಿಕೆಯನ್ನು ಪ್ರಶ್ನಿಸಲಾಗುತ್ತದೆ. ಸಾಧಾರಣವಾಗಿ ಸಮರ್ಥಿಸಲಾದ ಸಂಗತಿಗಳನ್ನು ಕೂಡ ಪ್ರಶ್ನಿಸಲಾಗುತ್ತದೆ.

ಸಾಮರ್ಥ್ಯಕ್ಕೆ ಮಾನವನ ಮಿತಿ ಕೂಡ ಕೆಲವು ಸಲ ಸವಾಲನ್ನು ಒಡ್ಡಿದೆ. ಮಾನವನ ಮಾನಸಿಕ ಸ್ಥಿತಿ ಹೇಗೆ ಸಂದೇಹ ಸುಳಿಗೆ ಸಿಲುಕುತ್ತದೆ. ಮನುಷ್ಯನ ಇಂದ್ರಿಯ ಜ್ಞಾನದ ಮಿತಿ ಸಂದೇಹಕ್ಕಿದ್ದ ಕಾರಣವೇ? ಮಾನವನ ಮನಸ್ಸು ಎಷ್ಟರಮಟ್ಟಿಗೆ ವಸ್ತುಸ್ಥಿತಿಗಳನ್ನು ಪರಿಭಾವಿಸಿಕೊಳ್ಳಲು ಸಮರ್ಥವಾಗಿದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗುತ್ತದೆ.

ಸಾಮರ್ಥ್ಯದ ಅಡಿಯಲ್ಲೇ ಬರುವ ಇನ್ನೊಂದು ಸಂಗತಿಯೆಂದರೆ ‘ನೇರ ಸಂದೇಹವಾದ’ ಮತ್ತು ಪುನರಾವರ್ತಿತ ಸಂದೇಹವಾದ’ ನಾವು ಏನನ್ನು ತಿಳಿದುಕೊಳ್ಳುವ ಸಾಧ್ಯತೆ ಇಲ್ಲ ಎಂಬುದು ನೇರ ಸಂದೇಹವಾದ. ಪುನರಾವರ್ತಿತ ಸಂದೇಹವಾದದ ಪ್ರಕಾರ ನಾವು ಏನನ್ನು ತಿಳಿದುಕೊಂಡಿದ್ದೇವೆಯೋ ಅದನ್ನು ನಾವು ತಿಳಿದುಕೊಳ್ಳಲು ಸಾಧ್ಯವಿಲ್ಲ. ಬಹುತರವಾಗಿ ಸಂದೇಹವಾದದ ತಳಹದಿಯಾಗಿ ದೋಷವನ್ನು ಅನಿವಾರ‍್ಯವಾಗಿ ಎತ್ತಿ ಹಿಡಿಯಲಾಗುತ್ತದೆ. ಎಂತಹಸನ್ನಿವೇಶದಲ್ಲೂ ದೋಷಗಳ ನುಸುಳುವಿಕೆಯನ್ನು ತಡೆಗಟ್ಟಲಾಗದು ಎಂಬುದ ಸತ್ಯ. ಇನ್ನೊಂದು ಮಗ್ಗುಲಲ್ಲಿ ವಿಚಾರ ಮಾಡಿದರೆ, ಯಾವ ನಂಬಿಕೆಯ ಮೇಲೆ ಮನುಷ್ಯ ಒಂದು ಕ್ರಿಯೆಯಲ್ಲಿ ತೊಡಗುತ್ತಾನೋ, ಆ ಕ್ರಿಯೆ ಯಶಸ್ವಿಯಾದರೂ ಆ ನಂಬಿಕೆಗೆ ಸಮರ್ಥನೆ ಸಿಗಬಹುದೇ ಹೊರತು ಅದು ಪೂರ್ಣ ಸತ್ಯವಲ್ಲ.ಹಲವಾರು ಸಲ ಕಾರ್ಯಕಾರಣ ಸಂಬಂಧಗಳನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆಗಳು ಇವೆ.

ಜ್ಞಾನಶಾಸ್ತ್ರದ ಒಳಹರಿವು (ಅಂತರಮುಖಿ ನಿಲುವು)

ಪ್ರತಿಸ್ಪಂದನ ಗುಣವಿರುವ, ಸತರ್ಕ ತತ್ಪರವಾಗಿರುವ ‘ಶೋಧಕಗಳ’ ನೆರವಿನಿಂದ ನಮ್ಮ ನಂಬುಗೆಗಳನ್ನು ಒರೆಗೆ ಹಚ್ಚಿ ಅವು ಜ್ಞಾನಶಾಸ್ತ್ರದ ಧನಾತ್ಮಕ ಅಂಶಗಳಾಗಿವೆಯೇ? ಇಲ್ಲವೇ ಎಂಬುದನ್ನು ವಿವೇಚಿಸಬಹುದಾದ ಸಾಧ್ಯತೆಯನ್ನು ಜ್ಞಾನಶಾಸ್ತ್ರದ ಒಳಹರಿವು ಎನ್ನುತ್ತಾರೆ. ನಮ್ಮ ನಂಬುಗೆಗಳಿಗೆ ಸರಿಯಾದ ಕಾರಣಗಳಿವೆ ಎಂಬುದನ್ನು ತೋರಿಸಲು ಯಾವ ಶೋಧಕಗಳಿವೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಬೇಕಾಗುತ್ತದೆ. ಹಾಗಾದರೆ ಜ್ಞಾನಶಾಸ್ತ್ರದ ಶೋಧಕ ವಿಧಾನ ಕೇವಲ ನಂಬುಗೆಯ ಕಾರಣಗಳ್‌ನು ಕಂಡು ಹಿಡಿಯಲು ಶಕ್ತವಾಗುತ್ತದೆಯೋ ಅಥವಾ ಆ ಕಾರಣಗಳ ಸಾಧಾರ ನಿರೂಪಣೆಯನ್ನು ಕಂಡು ಹಿಡಿಯಲು ಶಕ್ತವಾಗುತ್ತದೆಯೋ ಅಥವಾ ಆ ಕಾರಣಗಳ ಸಾಧಾರ ನಿರೂಪಣೆಯನ್ನು ಮಾಡುತ್ತದೆಯೋ ಎಂಬುದನ್ನು ವಿವೇಚಿಸಬೇಕಾಗುತ್ತದೆ. ಇನ್ನೊಂದು ಸವಾಲೆಂದರೆ ಈ ಶೋಧಕದಿಂದ ಅವನ ಅವಳಿಗಿರುವ ನಂಬುಗೆಯ ಕಾರಣವನ್ನುಪತ್ತೆ ಹಚ್ಚಬೇಕೋ ಅಥವಾ ಅವನ ಅವಳಿಗಿರುವ ನಂಬುಗೆಗಳ ಸಕಾರಣಗಳನ್ನು ಕೇವಲ ಮನವರಿಕೆ ಮಾಡಿದರೆ ಸಾಕೆ? ಮೂರನೆಯದಾಗಿ ಯಾವ ಪ್ರಕಾರದ ಪ್ರಯತ್ನಗಳ ಅವಶ್ಯಕತೆ ಈ ಸತ್ಯಶೋಧಕ್ಕೆ ಬೇಕು? ಈ ಎಲ್ಲ ಬಗೆಯ ಸವಾಲುಗಳಿಗೆ ಜ್ಞಾನಶಾಸ್ತ್ರದ ಒಳಹರಿವು ಉತ್ತರಿಸಲು ಬಯಸುತ್ತದೆ.

ಜ್ಞಾನಶಾಸ್ತ್ರದ ಒಳಹರಿವು ಮೂರು ಪ್ರಕಾರಗಳಲ್ಲಿರುತ್ತದೆ. ಮೊದಲನೆಯದಾಗಿ ಜ್ಞಾನಶಾಸ್ತ್ರದ ಧನಾತ್ಮಕ ನಂಬುಗೆಗಳನ್ನು ಹೇಗೆ ಹೆಚ್ಚು ಗುಣಾತ್ಮಕವಾಗಿಸುವುದು? ಒಂದು ವೇಳೆ ನಂಬುಗೆಗಳ ಗುಣಾತ್ಮಕತೆಗೆ ಅವಕಾಶವಿದ್ದರೆ ಯಾವ ನಂಬುಗೆಯನ್ನು ಆಯ್ದುಕೊಳ್ಳುವುದು? ಇದನ್ನ ನಿರ್ಣಯಿಸುವುದಕ್ಕಾಗಿ ಯಾವ ಜ್ಞಾನಶಾಸ್ತ್ರೀಯ ‘ಶೋಧಕ’ದ ಬಳಕೆ ಮಾಡಬೇಕು? ಎರಡನೆಯದಾಗಿ ಸಮರ್ಥನೆ ಒದಗಿಸುವ ಬಗೆಯನ್ನು ಹೇಗೆ ನಿರ್ವಹಿಸುವುದು? ಏಕೆಂದರೆ ಅದು ಜ್ಞಾನಶಾಸ್ತ್ರದ ಜೀವಾಳವಾಗ್‌ದರೂ ಅನಿವಾರ‍್ಯ ಕರ್ತವ್ಯವಾಗಿದೆ. ಇದಕ್ಕಾಗಿ ಜ್ಞಾನಶಾಸ್ತ್ರದ ಶೋಧಕಗಳು ಸನ್ನಿವೇಶದ ಎಲ್ಲ ಮಗ್ಗುಲಗಳನ್ನು ಉಜ್ವಲಗೊಳಿಸುವ ಪ್ರಯತ್ನ ಮಾಡಬೇಕಾಗುತ್ತದೆ. ಮೂರನೆಯಿಂದಾಗಿ ಸಂದೇಹಗಳಿಗೆ ಉತ್ತರಿಸುವ ಕರ್ತವ್ಯ. ಇದು ಪ್ರಶ್ನೆಗಳಿಗೆ ಸಿಗುವ ಉತ್ತರಗಳಿಗೆ ಸಂಬಂಧಿಸಿದ್ದಾಗಿರುತ್ತದೆ.

ಜ್ಞಾನಶಾಸ್ತ್ರದ ಹೊರಹರಿವು (ಬಹಿರ್ಮುಖ ನಿಲುವು)

ಜ್ಞಾನಶಾಸ್ತ್ರದ ಶೋಧಕಗಳು ಮೇಲುಮೇಲಿನ ಜ್ಞಾನ ಮೀಮಾಂಸೆಯಲ್ಲಿ ಮಾತ್ರ ಉಪಯುಕ್ತವಾಗುತ್ತವೆ ಎಂಬ ನಂಬಿಕೆಯನ್ನು ಒಪ್ಪಬೇಕಾಗಿಲ್ಲ. ಯಾವುದೇ ನಂಬುಗೆಯು ತನ್ನ ಎಲ್ಲ ಪರಿಮಿತಿಯಲ್ಲಿ ಕೆಲಸ ಮಾಡುವ ರೀತಿಯನ್ನು ತಿಳಿದರೂ, ಆ ನಂಬುಗೆಗಳ ಮೌಲ್ಯಮಾಪನ ಸಾಧ್ಯವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಕೆಲವು ಜ್ಞಾನದ ಒಳಹರಿವಿನ ಪರಿಕಲ್ಪನೆಯನ್ನು ತಿರಸ್ಕರಿಸಲಾಗುತ್ತದೆ. ಜೊತೆಗೆ ಅದರ ಎಲ್ಲ ವೈಶಿಷ್ಟ್ಯಗಳನ್ನು ಉದಾ. ಸಂಶಯ, ವಿಶ್ಲೇಷಣೆ ಇತ್ಯಾದಿ ಶೋಧಕಗಳು ಅಂತರ್ಮುಖಿಯಾಗಿವೆ. ಇವು ಸದಾಕಾಲ ಉಪಯುಕ್ತವೆಂದು ಹೇಳಲಾಗುವುದಿಲ್ಲ. ಈ ಪರಿಕಲ್ಪನೆಯನ್ನು ಜ್ಞಾನಶಾಸ್ತ್ರದ ಹೊರಹರಿವು ಎನ್ನುತ್ತಾರೆ.

ಜ್ಞಾನದ ಹೊರಹರಿವಿನ ವಾದವನ್ನು ಸಮರ್ಥಿಸಲು ಹಲವು ಪ್ರಚೋದನೆಗಳು ಕೆಲಸ ಮಾಡುತ್ತವೆ. ಸಮರ್ಥನೆ ಮತ್ತು ತರ್ಕಬ್ಧತೆಯನ್ನು ಸತ್ಯಶೋಧನೆಗಾಗಿ ಉಪಯೋಗಿಸಿ ಅದರ ಮುಖಾಂತರ ವಿಶ್ವಾಸಾರ್ಹತೆಯೆಡೆಗೆ ಹೋಗಬೇಕು. ಸತ್ಯಕೇಂದ್ರಿತ ನಂಬುಗೆಗಳನ್ನು ಮಾತ್ರ ಸಮರ್ಥಿಸುವ ಅವಕಾಶ ಇಲ್ಲಿರುತ್ತದೆ. ಈ ವಾದ, ನಂಬಿಕೆಗಳ ವಿನ್ಯಾಸದ ಕಡೆಗೆ ಹೆಚ್ಚು ದೃಷ್ಟಿ ಹಾಯಿಸುವುದಿಲ್ಲ. ಈ ವಾದ ನಂಬುಗೆಯ ವ್ಯಕ್ತ ಸ್ವರೂಪ ಹಾಗೂ ಅದರ ಕಾರಣಗಳು ಮುಖ್ಯವಾಗಬೇಕು ಎಂದು ಪ್ರತಿಪಾದಿಸುತ್ತದೆ.

ನೈಸರ್ಗಿಕ ಜ್ಞಾನಶಾಸ್ತ್ರ

ನೈಸರ್ಗಿಕ ಜ್ಞಾನಶಾಸ್ತ್ರವು ಸಹಜವಾಗಿಯೇ ಬಹಿರ್ಮುಖ (ಹೊರಹರಿವಿನ) ರೂಪದ್ದಾಗಿದೆ. ಇಲ್ಲಿ ಅಂತಃಸ್ಫುರಣೆ (intution) ದಿಂದ ಉಂಟಾದ ನಂಬುಗೆಗಳನ್ನು ‘ಸ್ವಾನುಭವ ನಿಷ್ಠ’ ಸಿದ್ಧಾಂತದ ಜೊತೆಗೆ ಹೋಲಿಸಬೇಕಾಗುತ್ತದೆ. ಸ್ಫುರಣೆಯ ಬೆಂಬಲವಿಲ್ಲದೆ ಕಾರಣ ಮೀಮಾಂಸೆಯೇ ಪ್ರಧಾನವಾಗಿರುತ್ತದೆ. ತರ್ಕಬದ್ಧವಾಗಿ, ಸುಸಂಬದ್ಧನವಾಗಿ, ಹಂತ ಹಂತವಾಗಿ ಸತ್ಯದ ಸಂಕೀರ್ಣತೆಯೆಡೆಗೆ ಹೋಗುವ ಪ್ರಕ್ರಿಯೆ ಇದಾಗಿದೆ.

ಜ್ಞಾನಶಾಸ್ತ್ರದ ಮೌಲ್ಯ ನಿರ್ಣಯ

ಜ್ಞಾನಶಾಸ್ತ್ರದ ಮೌಲ್ಯ ನಿರ್ಣಯ ಸಾಮಾನ್ಯ ಗಣಿತೀಯ ಕ್ರಿಯೆಯಲ್ಲ. ಇದು ಮೌಲ್ಯಮಾಪನದ ಅನೇಕ ಅಂಶಗಳನ್ನು ಪ್ರತಿಪಾದಿಸುತ್ತದೆ. ನಂಬಲರ್ಹ – ನಂಬಲ ಸಾಧ್ಯ. ಸಮರ್ಥನೀಯ – ಅಸಮರ್ಥನೀಯ, ಅಧಿಕೃತ ಅನಧಿಕೃತ, ಸಕಾರಣ-ವಿನಾಕರಣ, ತರ್ಕಬದ್ಧೃ ತರ್ಕಹೀನ ಇತ್ಯಾದಿ ಅದರ ಮೌಲ್ಯಮಾಪಕ ತತ್ವ ನಿಷ್ಠತೆಯನ್ನು ವ್ಯಕ್ತಪಡಿಸುತ್ತವೆ.

ಜ್ಞಾನಶಾಸ್ತ್ರೀಯ ಮೌಲ್ಯಮಾಪನಕ್ಕೆ ನಾಲ್ಕು ಬಗೆಯ ಆಯಾಮಗಳಿವೆ. ಮೌಲ್ಯ ನಿರ್ಣಂದ ಪರಿಧಿ, ಮೌಲ್ಯ ನಿರ್ಣಯದ ನಿಬಂಧನೆ ಹಾಗೂ ಮಾಪಕಗಳು, ಮೌಲ್ಯ ನಿರ್ಣಯದ ದರ್ಜೆ, ಮೌಲ್ಯ ನಿರ್ಣಯದ ಶೈಲಿ.

ಮೌಲ್ಯ ನಿರ್ಣಯದ ಪರಿಧಿ- ನಂಬುಗೆಗಳು ಮತ್ತು ನಂಬುಗೆಯ ವಿಚಾರಗಲು ಇದರಲ್ಲಿ ಒಳಗೊಂಡಿವೆ. ಇದರ ಜೊತೆಗೆ ಜ್ಞಾನಶಾಸ್ತ್ರದ  ಪದ್ಧತಿಗಳು ಎಂದರೆ ವಾದಗಳು, ಪ್ರತಿವಾದಗಳು, ಸೂತ್ರಗಳು, ಮಾನಸಶಾಸ್ತ್ರೀಯ ಪ್ರಕ್ರಿಯೆಗಳು ವಿವರಗಳು, ಮಾನಸಿಕ ಪ್ರಕ್ರಿಯೆಗಳಲ್ಲಿ ಜನಿಸುವ ವಿಚಾರಸರಣಿ, ಕಲ್ಪನೆಗಳ ವಿಚಾರಸರಣಿ,ಹುಡುಕಾಟ ಇವುಗಳನ್ನೆಲ್ಲ ಒಳಗೊಂಡಿದೆ.

ಮೌಲ್ಯ ನಿರ್ಣಯದ ನಿಬಂಧನೆಗಳೂ ಹಾಗೂ ಮಾಪಕಗಳು

ಯಾವುದೇ ಒಂದು ಮೌಲ್ಯಮಾಪನಕ್ಕೆ ತನ್ನದೇ ಮಾನದಂಡಗಳಿರುತ್ತವೆ. ಜ್ಞಾನಶಾಸ್ತ್ರದಲ್ಲಿ ನಾವು ಸಮರ್ಥನೆ. ಸಕಾರಣ, ತರ್ಕಬದ್ಧ,ತತ್ವಬದ್ಧ ಇತ್ಯಾದಿ ಪದಗಳನ್ನು ಬಳಸುತ್ತೇವೆ. ಸಹಜವಾಗಿಯೇ ಪದಗಳು ಒಂದಕ್ಕೊಂದು ಸಮಾನಾರ್ಥಕವಿಲ್ಲ. ಪ್ರತಿಯೊಂದಕ್ಕೂ ತನ್ನದೇ ಆದ ಮೌಲ್ಯ ಮತ್ತು ವೈಶಿಷ್ಟ್ಯವಿರುತ್ತದೆ. ಒಂದೇ ಪದಕ್ಕೆ ಬೇರೆ ಬೇರೆ ಅರ್ಥವಿರುವ ಹಾಗೆ ಮೌಲ್ಯವೂ ಇದೆ. ಕಡಿಮೆ ದರ್ಜೆಯ ತತ್ವಗಳಿಗೆ ಪ್ರಬುದ್ಧವಾದ ಸಮರ್ಥನೆ ಕೊಟ್ಟರೂ ಅದರ ಮೌಲ್ಯ ಹೆಚ್ಚುವುದಿಲ್ಲ. ಅಲ್ಲದೇ ವಿಚಾರಗಳಲ್ಲಿನ ಸ್ವತಂತ್ರತೆ, ಸ್ವಂತಿಕೆಗೆ ಹೆಚ್ಚು ಮಹತ್ವ ಕೊಡಬೇಕಾಗಿರುವುದು ಪ್ರಮುಖ ಅಂಶ.

ಜ್ಞಾನಶಾಸ್ತ್ರದ ಮೌಲ್ಯಮಾಪನ ದರ್ಜೆ

ಮೌಲ್ಯಮಾಪನ ಮಾಡುವಾಗ ನಮಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಯಾವುದೇ ಮೌಲ್ಯಮಾಪನಕ್ಕೆ ಕೆಲವು ವಸ್ತುನಿಷ್ಠ ಆಧಾರದ ಅವಶ್ಯಕತೆ ಇದೆ. ಯಾವುದೇ ಒಬ್ಬ ವ್ಯಕ್ತಿಯನ್ನು ಪರೀಕ್ಷಿಸುವಾಗ ಆತನ ಸಾಧನೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗೂ ದರ್ಜೆಯನ್ನು ನಿರ್ಣಯಿಸುವಾಗ ಆಯಾ ಮಟ್ಟದಲ್ಲಿನ ಬೇರೆಯವರ ಸಾಧನೆಗಳನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಮೌಲ್ಯಮಾಪನಕ್ಕಾಗಿ ತೆಗೆದುಕೊಂಡ ಆಧಾರಭೂತ ಅಂಶಗಳು ವಾದಗ್ರಸ್ಥವಾಗಿರುತ್ತವೆ. ಆದರೆ ಮೌಲ್ಯಮಾಪನದ ಗುರಿಯೆಂದರೆ ಸಾಧನೆಗೆ ಯಾವ ಅಂಶ ಕಾರಣವಾಗಿದೆ ಎಂಬುದನ್ನು ನಿರ್ದಿಷ್ಟವಾಗಿ ಗುರುತಿಸುವುದು. ಮೌಲ್ಯಮಾಪನ ಕ್ರಿಯೆಯಲ್ಲಿ ಬಳಸುವ ವಿವಿಧ ಪದಗಳು ಕೆಲವು ಸಲ ಗೊಂದಲ ಮೂಡಿಸಿದಾಗ ಒಂದು ಪದವನ್ನು ವಿವಿಧ ವಸ್ತುನಿಷ್ಠ ಆಧಾರಗಳಿಗೆ ಪರ‍್ಯಾಯವಾಗಿ ಬಳಸಿ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.

ಯಾವುದೋ ಒಂದು ಕ್ರಿಯೆ ಕೊಡುವ ತೃಪ್ತಿಗೆ ಯಾವ ದರ್ಜೆಯಿದೆ? ಯಾವ ತೃಪ್ತಿ ಹೆಚ್ಚು ಅಥವಾ ಕಡಿಮೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಹಾಗಾದರೆ ಈ ಆನಂದವನ್ನು ಯಾವ ಮಾನದಂಡದಿಂದ ಅಳೆಯಬೇಕು? ಈ ತೃಪ್ತಿಯ ಪ್ರಮಾಣ ತಿಳಿದ ಮೇಲೆ ಉಳಿದ ಅತೃಪ್ತಿಯ ಪ್ರಮಾಣವೇನು? ಒಟ್ಟಾರೆ ಪರಿಣಾಮವೇನು? ಈ ಎಲ್ಲ ಪ್ರಶ್ನೆಗಳು ಮೌಲ್ಯ ಮಾಪನದ ಕ್ಲಿಷ್ಠತೆಯನ್ನು ಗಮನಕ್ಕೆ ತರುತ್ತವೆ. ಈ ಕಾರಣದಿಂದಲೇ ಮೌಲ್ಯಮಾಪನದ ಸ್ಥಾನಮಾನವು ವಸ್ತುನಿಷ್ಠ, ತಕ್ಕಷ್ಟು ಪ್ರತಿಸ್ಪಂದನವಿರುವ, ನಿಬಂಧನೆಗಳ ಅರಿವಿರುವ ಸಂಕೀರ್ಣ ಸ್ವರೂಪದ ಆಧಾರದ ಮೇಲೆ ನಿಂತಿದೆ. ಕೇವಲ ‘ತರ್ಕಬದ್ಧ’ ‘ಸಾಕಷ್ಟು ಆಧಾರಗಳಿವೆ’ ಎಂಬಿತ್ಯಾದಿ ಪದಗಳಿಂದ ಮೌಲ್ಯಮಾಪನ ಪೂರ್ಣವಾಗುವುದಿಲ್ಲ. ಇದರ ಜೊತೆಗೆ ತರ್ಕಬದ್ಧ ನಿಬಂಧನೆ, ಸಾಧ್ಯತೆಗಳ ಪರಿಧಿ, ಮಾನಸಿಕ ವಿಚಾರಗಳು ಸಾಮಾಜಿಕ ನಿಬಂಧನೆಗಳು, ತಾತ್ವಿಕ ನಿಬಂಧನೆಗಳು ಇತ್ಯಾದಿಗಳ  ಅವಶ್ಯಕತೆ ಇದೆ. ನಂಬಿಕೆಗಳಲ್ಲಿ ತರ್ಕಬದ್ಧತೆ ಇದ್ದರೂ, ಆನಂಬಿಕೆಗಳು ‘ಸಮರ್ಥನೆ’ಯಿಂದ ಕೂಡಿದ ‘ನಂಬಿಕೆ’ಗಳಾಗಿಲ್ಲ. ಆದ್ದರಿಂದ ಈ ಸಿದ್ಧಾಂತ ಪೂರ್ತಿಯಾಗಿ ಸ್ವೀಕಾರಾರ್ಹವಾಗಿಲ್ಲ. ಸಮರ್ಥನೆಗಳನ್ನು ಯಾವುದೇ ಸಂಗತಿಯ ‘ಸಾಧ್ಯತೆ’ಗಳ ಮೇಲೆ ಕಟ್ಟಿಕೊಳ್ಳುವುದು ಅನುಕೂಲಕರವಾದರೂ ಇದರಲ್ಲಿ ಎಚ್ಚರಿಕೆ ಇರಬೇಕು. ನಮ್ಮ ನಂಬಿಕೆಗಳು ಮತ್ತು ಆ ನಂಬಿಕೆಗಳ ಮುಖಾಂತರ ಉಳಿದ ಆಧಾರಗಳೊಡನೆ ನಂಬಬೇಕಾದ ನಿರ್ದಿಷ್ಟ ನಂಬಿಕೆಯಲ್ಲಿನ ಸುಸಂಗತಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

‘ಸಮರ್ಥನೆ’ಗಳಿಗೆ ಮಾನಸಿಕ ಪ್ರಕ್ರಿಯೆಯ ಆಧಾರ ಕೊಡಬಹುದಾದರೂ ಕೆಲವು ಸಲ ಸಾಮಾಜಿಕ ಬಂಧಗಲು ಮಾನಸಿಕ ಪ್ರಕ್ರಿಯೆಗಳಲ್ಲಿ ಪ್ರಭಾವ ಬೀರುವುದನ್ನು ನೋಡಬಹುದು. ಆದರೆ ಆ ಸಾಮಾಜಿಕ ನಿಬಂಧನೆಗಳು (ಭಾಷೆ, ರೂಢಿ, ಸಂಪ್ರದಾಯ, ಸಮೂಹ, ಚಟುವಟಿಕೆ ಇತ್ಯಾದಿ) ತನ್ನ ಅಸ್ತಿತ್ವವಿರುವತನಕ ಪ್ರಭಾವಿಸುತ್ತವೆ. ಅದೇ ರೀತಿ ಪೀಳಿಗೆಯಿಂದ ಪೀಳಿಗೆಗೆ ಈ ಸಾಮಾಜಿಕ ನಿಬಂಧನೆಗಳು ಮತ್ತು ಅವುಗಳಿಂದ ಹೊರಡುವ ಧ್ವನಿಗಳು ಭಿನ್ನವಾಗಿರುತ್ತವೆ.

ವ್ಯಕ್ತಿಯ ಮಾನಸಿಕ ಪ್ರಕ್ರಿಯೆಗೆ ಅನುಗುಣವಾಗುವ ಸಿದ್ಧಾಂತ ‘ಅಂತರ್ಮುಖಿ’ ಎನಿಸುತ್ತದೆ. ಯಾವುದು ವಸ್ತುನಿಷ್ಠ, ಸಂಗತಿನಿಷ್ಠ ಲಕ್ಷಣಗಳನ್ನು ಹೊಂದಿದೆಯೋ ಅದು ಬಹಿರ್ಮುಖಿ ಸಿದ್ಧಾಂತವಾಗಿರುತ್ತದೆ. ತರ್ಕಬದ್ಧತೆ ಮತ್ತು ಸಾಧ್ಯತೆಗಳ ಲಕ್ಷಣಗಳು ಅಂತರ್ಮುಕಿ ಹಾಗೂ ಬಹಿರ್ಮುಖಿ ಎರಡೂ ರೀತಿಗಳಲ್ಲೂ ಉಪಯುಕ್ತವಾದವುಗಳು. ವಸ್ತುನಿಷ್ಠವಾಗಿರುವಾಗ ಅಂಕೆ, ಸಂಖ್ಯೆ, ಪರಿಣಾಮ ಇತ್ಯಾದಿಗಳು ಮಾನದಂಡಗಳಾಗಬಹುದು.ಆದರೆ ವ್ಯಕ್ತಿಗತ ಆಂತರಿಕ ಭಾವಗಳಿಗೆ ಮಾನದಂಡಕ್ಕಿಂತ ಭಾವದ ಉಪಸ್ಥಿತಿಯಲ್ಲಿ ಉಂಟಾಗುವ ಪ್ರಭಾವ ಗಣನೆಗೆ ಬರುತ್ತವೆ.

ಮೌಲ್ಯಮಾಪನದ ಶೈಲಿ

ಶೋಧನ, ಮೌಲ್ಯಮಾಪನ, ಇವೇ ಮೊದಲಾದ ಪದಗಳು ಕೆಲವು ವೈಶಿಷ್ಟ್ಯಗಳನ್ನು ‘ಒಳ್ಳೆಯ ನಿರ್ಮಾಣ’ ಅಥವಾ ಕೆಟ್ಟ ನಿರ್ಮಾಣ ಎಂಬುದಾಗಿ ವಿಂಗಡಿಸುತ್ತವೆ. ಇದರರ್ಥ ಯಾವುದೇ ಒಂದು ಗುಣವನ್ನು ‘ಸಗುಣ’ ಅಥವಾ ‘ಅವಗುಣ’ ಎಂಬುದನ್ನು ನಿರ್ಧರಿಸಲು ಜ್ಞಾನಶಾಸ್ತ್ರ ಸಾಮಾನ್ಯವಾಗಿ ವೈಚಾರಿಕ ಅಥವಾ ತಾರ್ಕಿಕ ನೆಲೆಗಟ್ಟನ್ನು ಹುಡುಕಲು ಪ್ರಯತ್ನಿಸುತ್ತದೆ. ‘ಎಚ್ಚರ’ ಮತ್ತು ‘ಮೂಲ’ ಇಂಥ ಶಬ್ದಗಳು ಜ್ಞಾನದ ಒಳ್ಳೆಯ ನಿರ್ಮಾಣದ ವರ್ಗದ ಸಂಗತಿಗಳ ಅಂದರೆ ಬೌದ್ಧಿಕ ಔನತ್ಯ ಮತ್ತು ಸಾಧನೆಯ ಕುರಿತದ್ದಾಗಿದೆ.

ಇನ್ನೊಂದು ಬಗೆಯಲ್ಲಿ ಮೌಲ್ಯಮಾಪನದ ಶೈಲಿಯನ್ನು ನಿಯಂತ್ರಕ ಮತ್ತು ಅನಿಯಂತ್ರಕವೆಂದು ವರ್ಗೀಕರಿಸಲಾಗುತ್ತದೆ. ನಿಯಂತ್ರಕ ಶೈಲಿಯ ವ್ಯವಸ್ಥೆಯಲ್ಲಿ ವಿಧಿವಿಧಾನಗಳನ್ನು ನಿಯಮಗಳನ್ನು ಪ್ರಜ್ಞಾಪೂರ್ವಕವಾಗಿ ಸ್ವೀಕರಿಸಿ ಅಳವಡಿಸಲಾಗುತ್ತದೆ. ಅನಿಯಂತ್ರಕ ಶೈಲಿಯ ವ್ಯವಸ್ಥೆಯಲ್ಲಿ ಸಾಧನೆಯ ಮೌಲ್ಯಮಾಪನಕ್ಕೆ ತತ್ವಗಳನ್ನು ರೂಪಿಸಲಾಗುತ್ತದೆ.

ಮೌಲ್ಯಮಾಪನದ ದರ್ಜೆಯ ಮೂರು ವಿಧಗಳು

ವಿಶ್ವಾಸಾರ್ಹತೆ :ಒಂದು ಸಂಗತಿಯು ವಿಶ್ವಾಸಾರ್ಹವೆಂದು ಕರೆಯಬೇಕಾದರೆ ನಂಬಿಕೆಗಳನ್ನು ಬೆಳೆಸುವ ಗುಣ ಇರಬೇಕು. ಹಾಗೂ ಆ ಸಂಗತಿಯಿಂದ ಸಿದ್ಧವಾಗುವ ನಿಜನಂಬಿಕೆಗಳ ಪ್ರಮಾಣ ಒಟ್ಟು ನಂಬಿಕೆಗಳ ಪ್ರಮಾಣದಲ್ಲಿ ಹೆಚ್ಚಾಗಿರಬೇಕು. ಮತ್ತು ಆ ನಂಬಿಕೆಗಳ ಪ್ರಮಾಣ ಒಂದು ನಿರ್ದಿಷ್ಟ ನಿರ್ಧರಿತ ಮೌಲ್ಯವನ್ನು ದಾಟಬೇಕು. ಅಂದರೆ ಉತ್ಪನ್ನವಾಗುವ ನಿಜ ನಂಬುಗೆಗಳ ಪ್ರಮಾಣ ಹೆಚ್ಚಾಗಿರಬೇಕು. ವಿಶ್ವಾಸಾರ್ಹತೆಯು ದೋಷ ಮತ್ತು ನಿರ್ಲಕ್ಷ್ಯ ಇವೆರಡರಲ್ಲಿನ ವ್ಯತ್ಯಾಸವನ್ನು ವಿಶದಪಡಿಸುತ್ತದೆ. ದೋಷ ಎಂದರೆ ತಪ್ಪಾದ ನಂಬುಗೆ. ನಿರ್ಲಕ್ಷ್ಯವೆಂದರೆ ನಿಜ ನಂಬುಗೆಗಳ ಅಸ್ತಿತ್ವದ ಅಭಾವ. ವಿಶ್ವಾಸಾರ್ಹತೆಯ ಪ್ರಮಾಣ ಎಷ್ಟು ದೊಡ್ಡದೋ, ಅಷ್ಟು  ಪ್ರಮಾಣದಲ್ಲಿ ದೋಷ ಕಡಿಮೆಯಾಗುತ್ತದೆ. ವಿಶ್ವಾಸಾರ್ಹತೆ ಎಂಬುದು ಕಷ್ಟಕರ. ಅತಿ ಎಚ್ಚರಿಕೆ, ಪೂರ್ಣ ನಂಬಬಹುದಾದ ಸಂಪ್ರದಾಯಸ್ಥ ಮಾರ್ಗದ ಅಲಂಬನೆ, ಸರಕ್ಷಿತ ಪರಿಸರದಲ್ಲಿ ಹುಟ್ಟಿದ ನಂಬಿಕೆಗಳ ಆಧಾರ ಅಥವಾ ತಪ್ಪು ಮಾಡಲು ಸಾಧ್ಯವೇ ಇಲ್ಲ ಎನ್ನುಂಥ ಪರಿಸರ ಇತ್ಯಾದಿಗಳಿಂದ ನಾವು ಸಂಪೂರ್ಣ ವಿಶ್ವಾಸಾರ್ಹತೆ ಸಾಧಿಸಲು ಪ್ರಯತ್ನಿಸಬಹುದು. ಆದರೆ ಇಂಥ ಬಿಗಿ ಬಂಧದಿಂದಕೂಡಿದ ಪರಿಸರದಲ್ಲಿ ನಂಬಿಕೆಗಳ ಬಗ್ಗೆ ನಿರ್ಲಕ್ಷ್ಯ ಭಾವನೆ ಬರಬಹುದಾದ ಸಾಧ್ಯತೆ ಇದೆ. ಇಲ್ಲಿ ಹೊಸ ನಂಬುಗೆಗಳು ಹುಟ್ಟುವುದೇ ಇಲ್ಲ.

ಬಲ :ದೋಷಗಳ ನಿವಾರಣೆಗೆ ವಿಶ್ವಾಸಾರ್ಹತೆ ಮದ್ದು. ಅದರಂತೆಯೇ ನಿರ್ಲಕ್ಷ್ಯಕ್ಕೆ ‘ಬಲ’ ಮದ್ದು. ಈ ಬಲವನ್ನು ಧೀಮಂತಿಕೆ ಅಥವಾ ಜಾಣ್ಮೆ ಎಂದು ಕರೆಯಬಹುದು. ಯಾವುದೇ ಸಂಗತಿಯ ‘ನಿಜ ನಂಬಿಕೆ’ಗಳನ್ನು ಸೃಷ್ಟಿ ಮಾಡುವ ಸಾಮರ್ಥ್ಯವು ‘ಬಲ’ ಎನಿಸಿಕೊಳ್ಳುತ್ತದೆ.

ವೇಗ : ಮೌಲ್ಯಮಾಪನದ ದರ್ಜೆಯನ್ನು ನಿರ್ಧರಿಸುವಲ್ಲಿನ ಇನ್ನೊಂದು ಆಯಾಮವೆಂದರೆ ‘ವೇಗ’, ‘ವೇಗ’ ಎಂದರೆ ನಿಜ ನಂಬುಗೆಗಳನ್ನು ಕಾಲಮಿತಿಯೊಳಗೆ ಗುರುತಿಸುವುದು. ಕಾಲಮಿತಿ ಮುಗಿದ ಮೇಲೆ ಬಂದಂಥ ಮಾಹಿತಿ ತನ್ನ ಬೆಲೆ ಕಳೆದುಕೊಳ್ಳುತ್ತದೆ.

ಸ್ತ್ರೀವಾದಿ ಜ್ಞಾನಶಾಸ್ತ್ರ

ಸ್ತ್ರೀವಾದಿ ಜ್ಞಾನಶಾಸ್ತ್ರವು ೧೯೮೦ರ್‌ರಾರಂಭದಲ್ಲಿ ತನ್ನ ಅಸ್ತಿತ್ವವನ್ನು ತೋರಲು ಆರಂಭಿಸಿತು. ಅದು ಜ್ಞಾನಶಾಸ್ತ್ರಕ್ಕೆ ಸ್ತ್ರೀ ಕೇಂದ್ರಿತ ಸಾಮಾಜಿಕ ಆಯಾಮವನ್ನು ಕೊಡುವ ಪ್ರಯತ್ನ ಮಾಡುತ್ತದೆ.ಹೇಗೆ ಲಿಂಗತಾರತಮ್ಯತೆಯು, ಸಮಾಜದ ಜ್ಞಾನಾರ್ಜನೆಯ ಪ್ರಕ್ರಿಯೆಗೆ ಪ್ರಬಾವಬೀರುತ್ತದೆ ಎಂಬುದನ್ನು ವಿವರಿಸುತ್ತದೆ. ಉನ್ನತ ಮತ್ತು ಸಾಮಾನ್ಯ ಜ್ಞಾನಾರ್ಜನೆಯ ವಿಧಾನಗಳನ್ನು ಪ್ರತ್ಯೇಕಿಸಿ ಸಹಜ ಸಾಮಾಜಿಕ ಆದರ್ಶಗಳನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತದೆ. ಈ ಬಗೆಯನ್ನು ಶುದ್ಧ ಜ್ಞಾನದ ಆರ್ಜನೆಗೆ ಹಾಗೂ ಸಾಮಾಜಿಕ ನ್ಯಾಯದ ಸ್ಥಾಪನೆಗೆ ಬಳಸಲಾಗುತ್ತದೆ. ಕಾರ್ಯಕಾರಣ ಸಂಬಂಧ, ನ್ಯಾಯಬದ್ಧತೆ, ವಸ್ತುನಿಷ್ಠತೆ ಇವುಗಳ ಬಗ್ಗೆ ವಿಫುಲವಾದ ಮಾಹಿತಿಯನ್ನು ನೀಡುತ್ತದೆ. ಇದರ ಜೊತೆಗೆ ವ್ಯಕ್ತಿ ವ್ಯಕ್ತಿ ನಡುವಿನ ಸಂಬಂಧ, ಭಾವನೆಗಳ ಪ್ರಾಮುಖ್ಯತೆ, ತಿಳಿವಳಿಕೆ ಎಂಬ ಭಾವನಾತ್ಮಕ ಪ್ರಪಂಚ, ಸಮುದಾಯದ ಭಾವನೆಗಳು. ಈ ಎಲ್ಲ ವಿಷಯಗಳನ್ನು ಸ್ತ್ರೀ  ಕೇಂದ್ರಿತ ನೆಲೆಯಿಂದ ನೋಡಲಾಗುತ್ತದೆ.ತಾರತಮ್ಯದ ನೆಲೆಯಿಂದ ಸ್ತ್ರೀವಾದಿ ಜ್ಞಾನಶಾಸ್ತ್ರ ಪ್ರಾರಂಭವಾಗಿದ್ದರೂ ಕೂಡ, ಸಮಾಜದ ವಿವಿಧ ಸ್ತರಗಳಲ್ಲಿ ಜಾತಿ, ವರ್ಗ, ಸಶಕ್ತವರ್ಗ, ಸಮಾಜದ ದಿಕ್ಸೂಚಿ ಇವೇ ಮೊದಲಾದ ಅಂಶಗಳು ಗಣನೆಗೆ ಬರುತ್ತವೆ. ಜ್ಞಾನಶಾಸ್ತ್ರದ ಮೂಲ ತಾತ್ವಿಕ ಚಿಂತನೆಗಳು ಪುರುಷ ಕೇಂದ್ರಿತ ನೆಲೆಯಲ್ಲಿ ಸ್ಥಾಪನೆಗೊಂಡರೂ ಕೂಡಾ, ಇತ್ತೀಚಿನ ಜ್ಞಾನಶಾಸ್ತ್ರದ ಸಾಮಾಜಿಕ ನಿಲುವಿನ ಬದ್ಧತೆ ಸ್ತ್ರೀವಾದಿ ದೃಷ್ಟಿಕೋನವನ್ನು ಸಮರ್ಥವಾಗಿ ಪ್ರತಿಪಾದಿಸಿದೆ. ಈ ವಾದ ಜ್ಞಾನಶಾಸ್ತ್ರದ ಸಾಮಾಜಿಕ ಆಯಾಮ ಕುರಿತು ಪ್ರಸ್ತಾಪಿಸಿದ ಚಿಂತನೆಯನ್ನು ಸಮರ್ಥವಾಗಿ ಸ್ಪಷ್ಟಪಡಿಸುತ್ತದೆ.

ಸ್ತ್ರೀವಾದಿ ಜ್ಞಾನಶಾಸ್ತ್ರದಲ್ಲಿ ಮೂರು ತರಹದ ಪರಿಕಲ್ಪನೆಗಳನ್ನು ಕಾಣಬಹುದು. ಸ್ತ್ರೀವಾದಿ ಅನುಭವ ನಿಷ್ಠ ಪರಿಕಲ್ಪನೆ, ಸ್ತ್ರೀವಾದಿ ವಿಧಿಬಿಂದು ಪರಿಕಲ್ಪನೆ, ಸ್ತ್ರೀವಾದಿ ಆಧುನಿಕೋತ್ತರವಾದ. ಇವುಗಳು ಜ್ಞಾನವು ಸಮಾಜಕೇಂದ್ರಿತವಾಗಿರಬೇಕು ಎಂಬ ಅಭಿಪ್ರಾಯವನ್ನು ಪ್ರಸ್ತುತಪಡಿಸುತ್ತವೆ. ಅಲ್ಲದೇ ಕೆಲವು ಸ್ತ್ರೀವಾದಿ ತತ್ವಗಳು ಜ್ಞಾನಶಾಸ್ತ್ರ ಸ್ತ್ರೀಪರ ಧೋರಣೆಯನ್ನು ಹೇಗೆ ವ್ಯಕ್ತಪಡಿಸಿದೆ ಎಂಬ ಚಿಂತನೆಗೆ ದಾರಿ ಮಾಡಿಕೊಡುತ್ತವೆ.

ಸ್ತ್ರೀವಾದಿ ವಿಜ್ಞಾನ ತತ್ವ – ವಿಜ್ಞಾನದ ಸಾಂಸ್ಕೃತಿಕ ಯಜಮಾನಿಕೆಯನ್ನು ಅದರ ಪುರುಷರಪರ ವಿಚಾರಧಾರೆಯನ್ನು ಇದು ಅನಾವರಣಗೊಳಿಸುತ್ತದೆ.

ಸ್ತ್ರೀವಾದಿ ನಿಲುವು – ಈ ತತ್ವ ಮಾರ್ಕಸಿಸ್ಟ್ ತತ್ವದಿಂದ ಪ್ರಭಾವಿತವಾದದ್ದು, ಸಮಾಜದಲ್ಲಿ ತುಳಿತಕ್ಕೆ ಒಳಗಾದ ವರ್ಗ (ಸ್ತ್ರೀ ಒಳಗೊಂಡಂತೆ) ಮೇಲ್ವರ್ಗದ ಜನರು ಗಳಿಸಲಾರದ ಜ್ಞಾನ/ತಿಳಿವಳಿಕೆಯನ್ನು ಸಮಾಜದ ಗಟ್ಟಿಯಾದ ಬಂದದಿಂದ ಕಲಿಯುತ್ತಾರೆ. ಸ್ತ್ರೀ ಸಮಾಜದ ವಿವಿಧ ಸ್ತರಗಳಲ್ಲಿನ ಪರಿಸ್ಥಿತಿಯನ್ನು ಗಮನಿಸಿ, ಅದರ ಎಲ್ಲ ಉಪವರ್ಗಗಳಿಗೆ ಅನ್ವಯವಾಗುವಂತೆ ‘ರಾಜಕೀಯ’ ಪರಿಹಾರವನ್ನು ಪಡೆಯಲು ಹವಣಿಸುತ್ತದೆ. ಈ ಎಲ್ಲ ಸ್ತ್ರೀ ವರ್ಗಗಳಲ್ಲಿ ನಿರ್ಲಕ್ಷಿತ ಸ್ತ್ರೀವರ್ಗಕ್ಕೆ ಹೆಚ್ಚು ಧ್ವನಿಯನ್ನು ಕೊಡಲು ಹವಣಿಸುತ್ತದೆ.

ವ್ಯಕ್ತಿ ಸಾಪೇಕ್ಷ ತಿಳಿವಳಿಕೆ/ ವಿವರಣೆ ವಿಜ್ಞಾನವನ್ನು ತಿಳಿವಳಿಕೆಯ ಏಕೈಕ ಅಸ್ತ್ರವೆಂಬಂತೆ ವಿವರಿಸುವುದನ್ನು ವಿರೋಧಿಸುವುದು ಹಾಗೂ ಇತರ ಅಲಕ್ಷಿತ ಜ್ಞಾನದ ಅರ್ಜನೆಯ ದಾರಿಯನ್ನು ಅವಲೋಕಿಸುವುದು ಸ್ತ್ರೀವಾದಿ ಜ್ಞಾನಶಾಸ್ತ್ರದ ಪ್ರಮುಖ ಅಂಶವಾಗಿದೆ.

ಭಾರತೀಯ ಜ್ಞಾನಶಾಸ್ತ್ರ

ಈ ಬಗೆಯಲ್ಲಿ ಅನೇಕ ಚರ್ಚೆಗಳು ನಡೆದಿದ್ದರೂ, ಅದೆಲ್ಲ ಜ್ಞಾನದ ಗಮ್ಯದೆಡೆಗೆ ಮಹತ್ತರವಾಗಿ ಗಮನ ಕೊಡುತ್ತವೆ. ಇದಕ್ಕೆ ಅಂದು ಕರೆಯುತ್ತಾರೆ. ಆದರೆ ಜ್ಞಾನಶಾಸ್ತ್ರಕ್ಕೆ ಇದಕ್ಕಿಂತ ಜ್ಞಾನಾರ್ಜನೆಯ ಪ್ರಕ್ರಿಯೆಯಲ್ಲಿ ಹೆಚ್ಚು ಆಸಕ್ತಿಯಿದೆ. ಆ ಅನುಭವಗಳು ಹೇಗಾಗುತ್ತವೆ? ಅವುಗಳ ಸ್ವರೂಪವೇನು? ಮನೋವೈಜ್ಞಾನಿಕ ಸ್ಥಿತ್ಯಂತರಗಳೇನು? ಬದ್ಧತೆಗಳೇನು? ಎಂಬುದನ್ನು ಇಲ್ಲಿ ಗಮನಿಸಲಾಗಿಲ್ಲ. ಬಹುಶಃ ಅನುಭವಗಳನ್ನು ವ್ಯಕ್ತಿ ಸಾಪೇಕ್ಷವಾಗಿ ಭಿನ್ನವಾಗಿ ಪ್ರವಹಿಸುವುದನ್ನು ವಿವಿಧ ಜನರಲ್ಲಿನ ಅನುಭವದ ಹೊರನೋಟದ ಭಿನ್ನ ಅಭಿವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಂಡು ಸಮಾನ ಹಾಗೂ ಏಕಪ್ರಕಾರವಾದ ವ್ಯಾಖ್ಯೆಗಳ್ನು ಸಾಧ್ಯವಿಲ್ಲ ಎಂಬ ನಿಷ್ಕರ್ಷೆಗೆ ಬಂದಿರಬಹುದಾಗಿದೆ. ಈ ಅನುಭವಗಳು ಎಲ್ಲರಿಗೂ ದಕ್ಕುವುದಿಲ್ಲ ಏಕೆ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ವಿವಿಧ ಧರ್ಮಗಳ ವೈಶಿಷ್ಟ್ಯಪೂರ್ಣ, ವೈವಿದ್ಯತೆಗಳನ್ನು ಪರಂಪರ/ಸಂಸ್ಕೃತಿ ಹಾಗೂ ಅನುಭವಗಳ ಮೂಲಕ ತೋರ್ಪಡಿಸುತ್ತಿದ್ದರೂ, ನಿಜ ಸ್ವರೂಪದ ಜ್ಞಾನ ಆಶ್ಚರ್ಯಕಾರಕವಾಗಿ ಏಕಪ್ರಕಾರವಾಗಿದೆ. ಆದ್ದರಿಂದಲೇ ಸ್ವಾಮಿ ವಿವೇಕಾನಂದರು ಹೇಳಿದಂತೆ, ಅನುಭಾವವೆಂಬುದು ಎಲ್ಲ ಮತಗಳಿಗೆ ಒಂದೇ ನಾಲಿಗೆಯಿಂದ ಅಭಿವ್ಯಕ್ತವಾಗುತ್ತದೆ ಮತ್ತು ಅದೇ ಸತ್ಯವನ್ನು ಕಲಿಸುತ್ತದೆ. ಜರ್ಮನ್ ವಿದ್ವಾಂಸರೊಬ್ಬರು ಅಭಿಪ್ರಾಯಪಟ್ಟಂತೆ, ಅನುಭಾವ ಎಲ್ಲ ವಯಸ್ಸಿನಲ್ಲಿ, ಸ್ಥಳದಲ್ಲಿ, ವೇಳಯಲ್ಲಿ, ಇತಿಹಾಸದ ಹಂಗಿಲ್ಲದ ಸ್ವತಂತ್ರವಾಗಿದೆ ಹಾಗೂ ಒಂದೇ ಆಗಿದೆ. ಆದ್ದರಿಂದಲೇ ಪೂರ್ವ ಹಾಗೂ ಪಶ್ಚಿಮ ಎಂಬ ಭೇದ ಅಳಿಸಿಹೋಗುತ್ತದೆ. ಅನುಭಾವದ ಹೂವು ಎಲ್ಲೆ ಅರಳಿದರೂ ಅದು ಒಂದೇ ಸುಗಂಧ ನೀಡುತ್ತದೆ.

ಇವೆಲ್ಲಾ ನಿಜವಾಗಿದ್ದರೂ ವಿವಿಧ ಮತಗಳಲ್ಲಿ ಅಥವಾ ಒಂದೇ ಮತದ ವಿವಿಧ ಶಾಖೆಗಳಲ್ಲಿ ಗುರುತಿಸಬಹುದಾದ, ನಿರಾಕರಿಸಲಾಗದ  ಭಿನ್ನತೆ ಕಂಡುಬರುತ್ತದೆ. ತೆರೆಸ್ಸಾ ಹಾಗೂ ಮೀರಾಬಾಯಿ ಇವರ ಅನುಭಾವ, ಶಂಕರಾಚಾರ‍್ಯ ಮತ್ತು ಏಸು ಇವರುಗಳಲ್ಲಿನ ಅನುಭಾವಗಳ ಸಾಮ್ಯ ಎಷ್ಟು? ಕೆಲವು ಪಂಡಿತರ ಪ್ರಕಾರ, ಅನುಭಾವದಲ್ಲಿನ ಸಾಂಸ್ಕೃತಿಕ ಭಿನ್ನತ್ವ, ಸ್ಥಳೀ೫ಯ ಪರಿಸರ ದೇಶದ ಅಗತ್ಯತೆ ಇವುಗಳು ಈ ಭಿನ್ನತೆಗೆ ಕಾರಣವಾಗಿರಬಹುದು.

ಪಾಶ್ಚಾತ್ಯರಲ್ಲಿ, ಮತಶ್ರದ್ಧೆ ಹಾಗೂ ಮತ ಪರಂಪರೆಯ ಮೂಲಕವಾಗಿ ಬಂದಂತಹ ಜ್ಞಾನಕ್ಕೆ ಹೆಚ್ಚು ಮಹತ್ವವಿದೆ. ಒಂದು ಶಾಖೆಯ ಪ್ರಕಾರ ದಿವ್ಯತ್ವವೆನ್ನುವುದು ಮತಶ್ರದ್ಧೆಯಿಂದ ಉಂಟಾದ ಅನುಭವದ ತಾತ್ಪರ‍್ಯ ಅಥವಾ ಫಲಿತ. ಅನುಭಾವವನ್ನು ಒಪ್ಪಿಕೊಂಡರೂ, ಅದರ ಸ್ವಾತಂತ್ರ್ಯತ್ಯನ್ನು ಸ್ವಯಂಸಿದ್ಧ ಹಾಗೂ ತತ್ಕಾಲದ ಅಭಿವ್ಯಕ್ತಿಯನ್ನು ನಿರಾಕರಿಸುತ್ತಾರೆ. ಅನುಭವಗಳನ್ನು ವಿಶ್ಲೇಷಣೆಗೆ ಒಡ್ಡುವ ಅವಶ್ಯಕತೆ ಬಗ್ಗೆ ಜಾಸ್ತಿ ಒತ್ತು ಕೊಡುತ್ತಾರೆ.

ಇನ್ನೊಂದು ಶಾಖೆಯ ಪ್ರಕಾರ, ಅನುಭಾವವೆಂಬುದು ದಿವ್ಯತ್ವದೆಡೆಗಿನ ಸಾಮೀಪ್ದಯ, ಮತದ ಹಂಗಿಲ್ಲದ ಸಂಬಂಧ ಆದರೆ ಇಲ್ಲಿ ಎರಡು ಪ್ರಕಾರದ ಸಾಮೀಪ್ಯಗಳಿವೆ. ಒಂದು ಅನುಭಾವ ಸ್ವರೂಪದ್ದು, ಮತ್ತೊಂದು ಸ್ವಯಂವೇದ್ಯವಾದಂಥ ಸಾಮೀಪ್ಯದಲ್ಲಿ ಮನುಷ್ಯ ದೇವರನ್ನು ತನ್ನ ಅಂತರಂಗದ ಸಾಕ್ಷಿ ಪ್ರಜ್ಞೆಯನ್ನಾಗಿಸುವ ಕಲೆಗೆ ಸಂಬಂಧಿಸಿದ್ದು. ಕೆಲವರ ಪ್ರಕಾರ ಅನುಭಾವವೆಂಬುದು ಮನುಷ್ಯ ಮತ್ತು ದೈವಿಕತೆ  ನಡುವಿನ ಮುಖಾಮುಖಿ. ಅನುಭಾವ ಸ್ವರೂಪದ ಸಾಮೀಪ್ಯ ಮತ್ತು ದೈವಿಕತೆ ನಡುವಿನ ಮುಖಾಮುಖಿ. ಅನುಭಾವ ಸ್ವರೂಪದ ಸಾಮೀಪ್ಯದಲ್ಲಿ ಚಿಂತನೆಯ ಮೂಲಕ  ಅತೀಂದ್ರಿಯ ಪ್ರಜ್ಞೆಯನ್ನು ಗಳಿಸುವುದು.

ಹಿಂದೂ ಧರ್ಮದಲ್ಲಿ ಪ್ರಮುಖವಾಗಿ ವೇದಾಂತಗಳಿಗೆ ಮಹತ್ವವಿದೆ. ಪ್ರತ್ಯಕ್ಷ, ಅನುಮಾನ ಮತ್ತು ಶಬ್ದ ಈ ಮೂರು ಪ್ರಮಾಣಗಳನ್ನು ಅದು ನಂಬುತ್ತದೆ. ಇವುಗಳಲ್ಲಿ ಪ್ರತ್ಯಕಷವು ನೇರವಾದ ಮಾರ್ಗ, ಉಳಿದೆರಡು ಅಪ್ರತ್ಯಕ್ಷ ಅಥವಾ ಪರೋಕ್ಷ ಮಾರ್ಗಗಳು. ಇವುಗಳು ಬಾಹ್ಯ ಜಗತ್ತಿನ ಪದಾರ್ಥಗಳಿಗೆ ಅನ್ವಯವಾಗುವಂತಹವುಗಳು.ಆದರೆ ಅನುಭಾವವೆಂಬುದು ಪರಮೋಚ್ಚ ಸತ್ಯ. ಅದು ಸತ್ಯ ಹಾದಿಯಲ್ಲ. ಜ್ಞಾನವೆನ್ನುವುದು ಆತ್ಮವನ್ನು ಬಂಧನದಿಂದ ಮುಕ್ತಿಗೊಳಿಸುವುದು. ಈ ಜ್ಞಾನ ಪ್ರಾಪ್ತಿಗೆ ಇಂದ್ರಿಯಗಳದ್ದೆ ಅಡ್ಡಿ Mysticism ಎಂಬ ಪದವನ್ನು Mystikos (ನಿಗೂಢಗಳಿಗೆ ಸಂಬಂಧಿಸಿದ) ಎಂಬ ಗ್ರೀಕ್ ಶಬ್ದದಿಂದ ಹೇಳಲಾಗಿದೆ. Mystos ಅಂದರೆ,        ಮೌನ/ಮೌನ ಸಾಧನೆ ಎಂದಾಗುತ್ತದೆ. ಮೂರು ಬಗೆಯ ಅನುಭಾವಗಳನ್ನು ಗುರುತಿಸುತ್ತಾರೆ. ನೈಸರ್ಗಿಕ, ದೇವಪ್ರಣೀತ, ಆತ್ಮನಿಷ್ಠ, ವೇದಗಳಲ್ಲಿ ಪ್ರಕೃತಿ ಆರಾಧನೆಗೆ ಮಹತ್ವವಿದ್ದು ಅದು ನೈಸರ್ಗಿಕ ಅನುಭಾವವಾಗಿದೆ. ಋಗ್ವೇದದ ಅನೇಕ ಋಕ್ಕುಗಳು ಅದನ್ನೇ ಹೇಳುತ್ತವೆ. ನಂತರ ಬಂದ ಉಪನಿಷತ್‌ಗಳಲ್ಲಿ ಆತ್ಮನಿಷ್ಠತೆ ಪ್ರಮುಖವಾಗಿ ನೈಸರ್ಗಿಕತೆಯನ್ನು ಮಸಕಾಗಿಸಿದವು. ಭಕ್ತಿ ಚಳವಳಿ ದೇವತಾ ಪ್ರಣೀತ ಅನುಭಾವಕ್ಕೆ ಹೆಚ್ಚಿನ ಮಹತ್ವ ಕೊಟ್ಟವು. ಅನುಭಾವವನ್ನು ಎರಡು ಪ್ರಧಾನಧಾರೆಗಳಲ್ಲಿ ವಿವರಿಸಬಹುದಾಗಿದೆ. ಎ) ವಿಶ್ವಪ್ರೇಮದ ಹಾದಿಯಾಗಿ ಭಕ್ತಿ ಬಿ) ಜ್ಞಾನದ ಸ್ವಯಂ ಪ್ರಯತ್ನದ ಪಥವಾಗಿ (ಜ್ಞಾನಮಾರ್ಗ) ಇದರ ಜೊತೆಗೆ ಯೋಗ ಮಾರ್ಗವೂ ಒಂದು.