ಜ್ಞಾನಶಾಸ್ತ್ರದ  ಪ್ರತಿನಿಧಿತ್ವದ (ಪ್ರತಿಮಾ) ಅವಿಷ್ಕಾರ

ಯಾವುದೇ ನಂಬಿಕೆ ಮನಸ್ಸಿನಲ್ಲಿ ಒಂದು ಪ್ರಕ್ರಿಯೆಯನ್ನು ನಿರ್ಮಿಸುತ್ತದೆ ಎಂದಾಗ, ಮನಸ್ಸು ಈ ಪ್ರತಿಮೆಗಳನ್ನುಹೇಗೆ ರಚಿಸುತ್ತದೆ? ಅದಕ್ಕೆ ತನ್ನದೇ ಆದ ಅನುಕೂಲಕರ ನಿಯಮಗಳನ್ನು ಹಾಕಿಕೊಂಡಿದೆಯೆ? ಅದಕ್ಕಾಗಿಯೇ ಸಿದ್ಧಗೊಂಡ ರಚನಾಕ್ರಮ ಮಾದರಿಗಳು ಲಭ್ಯವಿದೆಯೇ?  ಇತ್ಯಾದಿ ಪ್ರಶ್ನೆಗಳು ಉದ್ಭವಿಸುವುದು ಸಾಮಾನ್ಯ. ಮನಸ್ಸಿನ ಸಂಯೋಜನಾ ಸಾಮರ್ಥ್ಯ, ಅದರ ಚಟುವಟಿಕೆಯನ್ನು ಜ್ಞಾನಶಾಸ್ತ್ರದಲ್ಲಿ ಆಳವಾಗಿ ಚರ್ಚಿಸಲಾಗಿದೆ. ಅಂತಸ್ಫುರಣೆಯ ಸಾಧ್ಯತೆ ಮತ್ತು ತಿಳಿವಿನಲ್ಲಿರುವ ಸ್ತರಗಳು ಈ ಪ್ರತಿಮಾ ನಿರ್ಮಾಣದ ಕೆಲಸದಲ್ಲಿ ಕೊಡುಗೆಯನ್ನಿಯುತ್ತವೆ ಎಂದು ಕಂಡುಕೊಳ್ಳಲಾಗಿದ. ಹೀಗೆ ಒಂದು ಸಂಗತಯನ್ನು ಮನಸ್ಸು ಪ್ರತಿಮೆಗಳ ಮೂಲಕ ಕಟ್ಟಿಕೊಡುವ ಕ್ರಿಯೆ ಕುತೂಹಲಕರವಾದುದು.

ಈ ಪ್ರತಿಮಾ ಅವಷ್ಕಾರ ಎಷ್ಟರಮಟ್ಟಿಗೆ ಒಂದು ಸಂಗತಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತದೆ ಎಂಬುದು ಕೂಡ ಪ್ರತಿಭೆಯ ವಿಷಯವಾಗಿದೆ. ಈ ಅವಿಷ್ಕಾರದ ಒತ್ತಡಗಳು ಕೂಡ ಸ್ಥಳ, ಕಾಲ, ದೇಶ, ಸನ್ನಿವೇಶಕ್ಕೆ ಅನುಸಾರವಾಗಿ ಭಿನ್ನವಾಗಿರುತ್ತವೆ. ಇದರ ಬಗೆಗಿನ ಬಹಳಷ್ಟು ಸಿದ್ಧಾಂತಗಳು ನಂಬಿಕೊಂಡಂತೆ ಮನಸ್ಸು ಅನುಭವವನ್ನು ವಿವಿಧ ಭಾಗಗಳನ್ನಾಗಿ ಪರಿವರ್ತಿಸುತ್ತದೆ. ಈ ಪರಿವರ್ತನೆ ವಿಂಗಡನಾತ್ಮಕವಾಗಲಿ, ವಿಭಜನೆ ರೂಪದಲ್ಲಾಗಲಿ ಇರುತ್ತದೆ. ಇಲ್ಲಿ ಸಣ್ಣ ಸಣ್ಣ ಪ್ರತ್ಯೇಕ ಪ್ರತಿಮೆಗಳ ಕಟ್ಟುವಿಕೆ ನಡೆಯುತ್ತದೆ. ಈ ಎಲ್ಲ ಘಟಕಗಳನ್ನು ಸಂಸ್ಕರಿಸುವ ವಿಶ್ಲೇಷಿಸುವ ಕ್ರಿಯೆಯಲ್ಲಿ ಮನಸ್ಸು ಸಹಕಾರಿಯಾಗಿರುತ್ತದೆ. ಇದರಿಂದಾಗಿ ಹೊಸ ಪ್ರತಿಮಾ ಅವಿಷ್ಕಾರಗಳು ನಿರ್ಮಾಣವಾಗಿ ಪೂರ್ವಾಪರಗಳ ಕೊಂಡಿಯಾಗಿ ಅವತರಿಸುತ್ತವೆ. ಈ ಶ್ರೇಣಿಕೃತ ಪ್ರತಿಮಾ ನಿರ್ಮಾಣ ಕ್ರಿಯೆ ಕೆಲವು ಸಲ ಸುಲಭವಾಗಿ, ಕೆಲವು ಸಲ ಸಂಕೀರ್ಣವಾಗಿ ಮನಸಿನಲ್ಲಿ ನಡೆಯುತ್ತಿರುತ್ತದೆ.

ಒಂದು ವಾಕ್ಯದ ರಚನೆ ಗಮನಿಸಿದರೆ ಅದು ಒಂದು ಶ್ರೇಣೀಕೃತ ರಚನೆಯಾಗಿದೆ. ಆ ವಾಕ್ಯದಲ್ಲಿ ನಾಮ, ಕ್ರಿಯಾಪದ ಮತ್ತು ಕರ್ಮಗಳೆಂಬ ಘಟಕಗಳಿವೆ. ಹಾಗೆಯೇ ಉಳಿದ ವ್ಯಾಕರಣ ನಿಯಮಗಳಿವೆ. ಇವೆಲ್ಲ ಘಟಕಗಳು ಕೂಡಿ ಒಂದು ವಾಕ್ಯವಾಗಿ, ಮುಂದಿನ  ವಾಕ್ಯದ ದೃಷ್ಟಿಯಿಂದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಕೂಡುತ್ತವೆ. ಭೌತಿಕ ವಸ್ತುಗಳು, ಜೀವಿಗಳು (ಪ್ರಾಣಿ, ಪಕ್ಷಿ ಇತ್ಯಾದಿ) ಒಟ್ಟು ಸಮುಚ್ಚಯ ಒಂದು ರಚನಾಚಾಲವನ್ನು ಒದಗಿಸಿಕೊಡುತ್ತವೆ. ಇಲ್ಲಿ ವಿವಿಧ ಉಪ ವಿಭಾಗದಲ್ಲಿ ಅಂತರಬಂಧದಿಂದ ಒಂದು ಸಂಕೀರ್ಣ ರಚನಾಕ್ರಮ ಸಾಧ್ಯವಿದೆ. ಸಣ್ಣ ಸಣ್ಣ ದೃಶ್ಯಾವಳಿಗಳ ಸಮುಚ್ಚಯ ಒಂದು ಮಹತ್ವ ನೋಟಕ್ಕೆ ಕಾರಣವಾಗುತ್ತದೆ. ಒಂದು ಗುಡ್ಡದ ಮೇಲೆ ನಿಂತಾಗ ನದಿ, ಕೊಳ, ವೃಕ್ಷಗಳು, ಪ್ರಾಣಿ, ಪಕ್ಷಿಗಳು, ಪ್ರತ್ಯೇಕವಾಗಿ ಇಂದ್ರಿಯ ಗೋಚರವಾಗುತ್ತವೆ. ಕೊನೆಗೆ ಅದರ ಏಕೀಕರಣವಾಗಿ ಒಟ್ಟು ನೋಟ ಸಿಗುತ್ತದೆ.

ಯಾವುದೇ ಒಂದು ಕಥೆ ಅಥವಾ ಕಾದಂಬರಿಯಲ್ಲಿ ಶ್ರೇಣೀಕೃತವಾಗಿ ಘಟನೆಗಳನ್ನು ಬಂಧ ಮತ್ತು ಉಪಬಂಧದ ರೂಪಕಗಳಿಂದ ಕಟ್ಟಿ, ಆ ಕಥೆಗೆ ಒಂದು ದೃಶ್ಯಾವಳಿಯ ಚೌಕಟ್ಟನ್ನು ರಚಿಸಬಹುದು. ಮಾನವ ಸ್ವಭಾವದ ವಿವರಣೆಯನ್ನು ಮುಖ್ಯ ಪ್ರಚೋದನೆ ಮತ್ತು ಉಳಿದ ಮಾನವಿಕ ಉಪ ಪ್ರಚೋದಕಗಳ ಮೂಲಕ ಗುರುತಿಸಬಹುದು. ಹಾಗೆಯೇ ಗಣಿತದಲ್ಲಿನ ಸಮಸ್ಯೆಯನ್ನು ವಿವಿಧ ಸಣ್ಣ ಸಣ್ಣ ಸಮಸ್ಯೆಗಳನ್ನಾಗಿ ಪರಿವರ್ತಿಸಿ ಅದಕ್ಕೆ ಪರಿಹಾರವನ್ನು ಕಂಡು ಹಿಡಿಯಬಹುದು.

ದೃಶ್ಯ ಮಾದರಿಯ ಪ್ರತಿಮಾ ನಿರ್ಮಾಣದಲ್ಲಿ (Visual Representation) ಪರಿಕಲ್ಪನೆ ಮತ್ತು ಪ್ರತಿಮೆ ಇವರೆಡರ ಸಂಗಮವಾಗಿ ಶ್ರೇಣಿಬದ್ಧ ಕಲಾಕುಸುರಿಯನ್ನು ನಾವು ನೋಡಬಹುದು. ಒಬ್ಬ ಮನುಷ್ಯನು ನಿಂತಿರುವ ಭಂಗಿಯನ್ನು ಪ್ರತಿಬಿಂಬಿಸುವಾಗ, ಆ ನಿರ್ದಿಷ್ಟ ಸಮಯಕ್ಕೆ, ಸಂದರ್ಭಕ್ಕೆ ಎಷ್ಟು ಬೇಕು ಅಷ್ಟು ಮಾತ್ರ ತೆಗೆದುಕೊಳ್ಳುತ್ತೇವೆ. ನಿಂತಿರುವ ಮನುಷ್ಯನ ಕೇವಲ ಅಸ್ತಿತ್ವ ತೋರಿಸಬೇಕಾದಾಗ ನಾವು ಗೆರೆಗಳು ಮತ್ತು ಅಂಡಾಕೃತಿ ರಚನೆಯಿಂದ ಅದನ್ನು ಪ್ರತಿನಿಧಿಸುತ್ತೇವೆ. ಅಂದರೆ ಮನಸ್ಸು ಪ್ರತಿಮೆಗಳ ನಿರ್ಮಾಣ ಕಾರ್ಯದಲ್ಲಿ ತೊಡಗುವಾಗ ಸಂದರ್ಭದ ಅವಶ್ಯಕತೆ ಮತ್ತು ಸಮಯದ ಲಭ್ಯತೆ ಎರಡನ್ನು ಗಮನಿಸುತ್ತದೆ. ಎರಡು ಸಂಗತಿಗಳ ಸಾಮೀಪ್ಯ ತೋರಿಸಬೇಕಾದಾಗ ಎರಡು ಗೆರೆಗಳನ್ನು ಜೋಡಿಯಾಗಿ ಸಮೀಪದಲ್ಲಿರುವಂತೆ ಚಿತ್ರಿಸುತ್ತೇವೆ.

ವಸ್ತುಗಳ ನಡುವಿನ ಸಾಮ್ಯತೆ (similarly) ಕೂಡ ಪ್ರತಿಮಾ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಮನೋವೈಜ್ಞಾನಿಕದಲ್ಲಿ ‘ಸಾಮ್ಯತೆ’ಯ ಅವಿಷ್ಕಾರವನ್ನು, ಒಂದು ಚೇತನಶಕ್ತಿಯಾಗಿ, ಎರಡು ಸಂಗತಿಗಳ ನಡುವಿನ ಸಾಮಾನ್ಯ ತತ್ವದ ಗುರುತಿಸುವಿಕೆಯಾಗಿ, ಶೈಲಿಯ ಗುರುತಿಸುವ ಸಾಮರ್ಥ್ಯವಾಗಿ ಪರಿಗಣಿಸಲಾಗುತ್ತದೆ. ‘ಸಾಮ್ಯತೆ’ಯಲ್ಲಿ ಎರಡು ವಿಷಯಗಳಲ್ಲಿ ಕಾರ್ಯಶೈಲಿಯನ್ನು ವಿಶ್ಲೇಷಿಸಲಾಗುತ್ತದೆ.

ಕೆಲವು ಸಲ ಒಂದು ಸಂಗತಿಯ ಪ್ರತಿನಿಧಿತ್ವ ರೂಪಾಲಂಕಾರದಲ್ಲಿ ಪ್ರಕಟವಾಗುತ್ತದೆ. ‘ನಾವು ಯಶಸ್ಸಿನ ತುದಿಯಲ್ಲಿದ್ದೇವೆ’, ‘ಅವನು ತನ್ನ ಶಕ್ತಿಮೀರಿ ಮೇಲಕ್ಕೆ ಏರಲು ಪ್ರಯತ್ನಿಸುತ್ತಾನೆ’, ‘ಅವಳ ಆರೋಗ್ಯ ಪಾತಾಳ ಸೇರಿದೆ’ ಎಂಬರ್ಥದ ವಾಕ್ಯದಲ್ಲಿ ಪ್ರತಿಮೆಯ ಆವಿಷ್ಕಾರ ಕಾಣುತ್ತೇವೆ. ಭೌತಶಾಸ್ತ್ರದ ಸಂಶೋಧನೆಯಲ್ಲಿ ಒಂದು ಸೀಮಿತ ಪರಿಧಿಯಲ್ಲಿ ನಮ್ಮ ಎಲ್ಲ ಗಣಿತೀಯ/ಭೌತಿಕ ವಿಶ್ಲೇಷಣೆಯನ್ನು ಮಾಡಿ ಅದರಿಂದ ಬಂದಂಥ ಫಲಿತಾಂಶವನ್ನು ವಿಸ್ತೃತ ಪರಿಧಿಯಲ್ಲಿ ಅನ್ವಯಿಸಿ, ಸಿದ್ಧಾಂತವನ್ನು  ಸ್ಥಿರೀಕರಿಸುವ ಪ್ರಯತ್ನವನ್ನು ಕಾಣುತ್ತೇವೆ.

ಅಂತರ್ಜಾಲ ಜ್ಞಾನಶಾಸ್ತ್ರ (Internet Epistemology)

ಇಂಟರ್‌ನೆಟ್ ತಂತ್ರಜ್ಞಾನ, ಇವತ್ತಿನ ಅನಿವಾರ‍್ಯ ಜ್ಞಾನವಾಹಿ ಘಟಕವೆನಿಸಿ ಉಪಯುಕ್ತವಾಗಿದೆ. ಇ-ಮೇಲ್, World wide web, preprint archieve ಮುಂತಾದ ಸೌಲಭ್ಯಗಳಿಂದಾಗಿ ಅದು ವಿಶ್ವವ್ಯಾಪಿಯಾಗಿ ಕಾರ್ಯನಿರ್ವಹಿಸುತ್ತಿದೆ. ಜ್ಞಾನಶಾಸ್ತ್ರದ ದೃಷ್ಟಿಯಿಂದ ಅಂತರ್ಜಾಲದ ಕಾಣಿಕೆ ಮಹತ್ವವಾದುದು. ಜ್ಞಾನಶಾಸ್ತ್ರದ ಲಕ್ಷಣಗಳಾದ ವಿಶ್ವಾಸಾರ್ಹತೆ, ಶಕ್ತಿ (ಸಾಮರ್ಥ್ಯ), ವೇಗ, ದಕ್ಷತೆ, ಫಲವತ್ತತೆ ಖಂಡಿತವಾಗಿಯೂ ಅಂತರ್ಜಾಲ ತಂತ್ರಜ್ಞಾನಕ್ಕಿದೆ. ಈ ಎಲ್ಲ ಲಕ್ಷಣಗಳಿಂದಾಗಿ ಅದು ವೈಜ್ಞಾನಿಕ ಸಂಶೋಧನೆ ವಿಚಾರ  ವಿಮರ್ಶೆಗಳಿಗೆ ತನ್ನದೇ ಆದ ಧನಾತ್ಮಕ ಕೊಡುಗೆಯನ್ನು ನೀಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

೧೪೫೦ರಲ್ಲಿ Johan Guteubery ಎಂಬುವವನು ಮುದ್ರಣ ಯಂತ್ರವನ್ನು ಸಂಶೋಧಿಸಿ ಉಪಯೋಗಿಸಿದಾಗ, ಬೈಬಲನ ಸಾವಿರಾರು ಪ್ರತಿಗಳು ಜನರಿಗೆ ಲಭ್ಯವಾದವು. ಮೊದಲನೇ ವೈಜ್ಞಾನಿಕ ನಿಯತಕಾಲಿಕೆ ಪ್ರಾರಂಭವಾದುದು ೧೬೬೫ರಲ್ಲಿ. ಇದರಿಂದಾಗಿ ವಿಜ್ಞಾನಿಗಳ ನಡುವಿನ ಸೇತುವೆ ಮತ್ತು ಸಂವಾದವಾಗಿ ಇವು ಉಪಯುಕ್ತವಾದವು. ೧೯೯೦ರಲ್ಲಿ ಸಂವಹನ ಮಾಧ್ಯಮದಲ್ಲಿ ಮತ್ತೊಂದು ಕಾರಂತಿ ಅಂತರ್ಜಾಲದ (world wide web) ಮುಖಾಂತರ ಸಮಾಜಕ್ಕೆ ಒದಗಿತು. ೧೯೬೦ರಲ್ಲೇ ಅಮೇರಿಕಾದ ಮಿಲಿಟರಿ ಸಂಪರ್ಕ ತಂತ್ರಜ್ಞಾನವಾಗಿ ARPANET ಎಂದು ಕರೆಯಿಸಿಕೊಂಡ ವ್ಯವಸ್ಥೆಯೇ ಇದಕ್ಕೆ ಮೂಲ. ೧೯೮೦ರಲ್ಲಿ ಇಂಟರ್‌ನೆಟ್ ಅನ್ನುವುದು ವೈಜ್ಞಾನಿಕ ಸಂವಹನಕ್ಕೆ, ವಿವಿಧ ಪ್ರಮುಖ ಸಂಶೋಧನಾ ಕೇಂದ್ರದ ನಡುವಿನ ಸಂಪರ್ಕಕ್ಕೆ ಕಾರಣವಾಯಿತು.

ಇ-ಮೇಲ್ ಕಡತಗಳ ವರ್ಗಾವಣೆ (Files Transfer) ಇತ್ಯಾದಿ ಚಟುವಟಿಕೆಗಳಿಗೆ ಇದು ನಾಂದಿಯಾಯಿತು. ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ೧೯೮೧ರಲ್ಲಿ ೨೩೧ ಇದ್ದು, ೧೯೯೬ರ ಹೊತ್ತಿಗೆ ೨೩೦೦೦೦ಕ್ಕೆ ತಲುಪಿತು. ನಂತರದ ದಿನಗಳಲ್ಲಿ ಅದರ ಬಳಕೆದಾರರ ಸಂಖ್ಯೆ ಏರುತ್ತಲೇ ಇದೆ.

ಜ್ಞಾನವಾಹಿನಿಯ ಹೊಸ ಅವಿಷ್ಕಾರವೆನಿಸಿದ ಇಂಟರ್‌ನೆಟ್ ವ್ಯಕ್ತಿಯ ಜ್ಞಾನದ ದಿಗಂತವನ್ನು ವಿಸ್ತರಿಸುತ್ತ, ಹೊಸ ದಿಗಂತದೆಡೆಗಿನ ಪಯಣವಾಗಿ ಸಾಗುತ್ತಿದೆ. ಅಂತರ್ಜಾಲದ ಕೆಲಸದ ವೇಗ ಊಹಾತೀತವಾದದ್ದು. ಜ್ಞಾನಶಾಸ್ತ್ರದ ಲಕ್ಷಣವಾದ ವೇಗ ಇಲ್ಲಿ ಸ್ಪುಟಗೊಂಡಿದೆ. ವಿಶ್ವದ ಯಾವುದೇ ಬಾಗದಲ್ಲಿ ನಾವು ನಮ್ಮ ಇ-ಮೇಲ್ ಅಥವಾ ವೈಬ್‌ಸೈಟ್‌ನ್ನು ನೋಡಬಹುದು. ವೃತ್ತ ಪತ್ರಿಕೆಗಳ ಇಂಟರ್‌ನೆಟ್ ಆವೃತ್ತಿ ನಮಗೆ ಎಲ್ಲೆಂದರಲ್ಲಿ ಲಭ್ಯ. ಈ ಮೂಲಕ ನಮ್ಮ ರಾಷ್ಟ್ರ ವ್‌ತು ಭಾಷೆ ಅಪರಿಚಿತ ಸ್ಥಳದಲ್ಲಿಯೂ ಲಭ್ಯವಾಗುತ್ತದೆ. ಅಂತರ್ಜಾಲದ ಮೂಲಕವೇ ವಾಣಿಜ್ಯ ಚಟುವಟಿಕೆಗಳು ನಡೆಯುವ ಸಂದರ್ಭ ಈಗ ನಮ್ಮ ಮುಂದಿದೆ. E-Commerce ಈ ಹೆಜ್ಜೆಯಲ್ಲಿ ಆಯಾತ/ನಿರ್ಯಾತದ ಹೊಸ ಸಾಧ್ಯತೆಗಳನ್ನು, ಏಕಕಾಲದಲ್ಲಿಪರ್ಯಾಯ ದಾರಿಗಳನ್ನು ತೆರೆದಿದೆ. ನಮ್ಮದೇ ದೇಶದಲ್ಲಿ ವಿವಿಧ ಪ್ರೇವಶದಲ್ಲಿನ ವಾಣಿಜ್ಯ ಚಟುವಟಿಕೆಯನ್ನು ಹೆಚ್ಚಿಸಿದೆ. ವ್ಯವಹಾರಿಕ ಸಂಬಂಧಗಳು ಜ್ಞಾನದ ವಿನಿಮಯ/ವರ್ಗಾವಣೆಗೆ ದಾರಿ ಮಾಡಿಕೊಡುತ್ತದೆ. ಇದು ಕೇವಲ ಮಾಹಿತಿ ಸಂಗ್ರಹ ಮಾತ್ರವಲ್ಲದೇ, ಚರ್ಚೆ, ಪರಿಷ್ಕರಣೆ, ಸಂವಾದ/ವಾದ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ. ಒಂದು ನಿದರ್ಶನದ ಮೂಲಕ ಈ ಮಾತನ್ನು ಸ್ಥಿರೀಕರಿಸಬಹುದಾಗಿದೆ.

ಒಬ್ಬ ವಿಜ್ಞಾನಿಯ ದಿನಚರಿ ಹಲವಾರು ರೀತಿಯಿಂದ ಇಂಟರ್‌ನೆಟ್ ಬಳಕೆಯ ಅನಿವಾರ್ಯತೆಯಲ್ಲಿ ಮುಳುಗಿ ಹೋಗಿರುತ್ತದೆ. ವಿಜ್ಞಾನದ ವಿವಿಧ ಸಂಪರ್ಕ, ವಿಶ್ಲೇಷಣೆ, ಚರ್ಚೆ, ಪರಿಷ್ಕರಣೆ, ವಿವೇಚನೆ ಮುಂತಾದ ವಿವಿಧ ಹಂತದ ಸಂಕೀರ್ಣ ಕ್ರಿಯೆಗೆ ವೇಗ ಮತ್ತು ವಿಶ್ವಾಸಾರ್ಹ ಮಾಧ್ಯಮವಾಗಿ ಅಂತರ್ಜಾಲ ಕೆಲಸ ನಿರ್ವಹಿಸುತ್ತದೆ. ವಿಜ್ಞಾನಿಗೆ ಬರುವ ಇ-ಮೇಲ್‌ಗಳು. ಅವನ/ಅವಳ ಶಿಷ್ಯರ ಪ್ರಶ್ನೆ ಅಥವಾ ಸಹ ವಿಜ್ಞಾನಿಗಳಿಂದಬಂದ ಪ್ರತಿಕ್ರಿಯಾತ್ಮಕ ವಿಶ್ಲೇಷಣೆಯೋ ಆಗಿರಬಹುದು. ಮುಂದಿನ ಪ್ರಯೋಗ ಹಾದಿಯನ್ನು ಆತ ಮರು ಇ-ಮೇಲ್‌ನಲ್ಲೇ ಕಳುಹಿಸುತ್ತಾನೆ. ಕೆಲವು ಸಲ ಬೇರೆ ದೇಶದಿಂದಸಂದೇಶ ಬಂದಿರುತ್ತದೆ. ಇಲ್ಲಿ ಸಂಶೋಧನಾ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಕೂಟವಾಗಿ ಕೆಲಸ ನಿರ್ವಹಿಸುವ ಸಹವರ್ತಿ ತನ್ನ ಫಲಿತಾಂಶವನ್ನು ಇ-ಮೇಲ್ ಮುಖಾಂತರ ಅರಹುತ್ತಾನೆ. ಅವನ ಒಂದು ಪ್ರಬಂಧ ನಿಯತಕಾಲಿಕೆಗೆ ಆಯ್ಕೆಯಾದ ಸುದ್ದಿ ಅಲ್ಲಿ ಇರಬಹುದು.

ಒಬ್ಬ ವ್ಯಕ್ತಿ ತಾನು ಕೆಲಸ ಮಾಡುವ ಸಂಸ್ಥೆಯ  Website ಅಂತರ್ಜಾಲದ ತಾಣಕ್ಕೆ ಭೇಟಿಕೊಡುತ್ತಾನೆ. ತನ್ನ ಸಂಸ್ಥೆಗೆ ಭೇಟಿಕೊಡುವ ಇವತ್ತಿನ ಮತ್ತು ನಾಳೆಯ ವಿದ್ವಾಂಸರ ಪಟ್ಟಿ ನೋಡಿ ಅವರು ಮಾತನಾಡುವ ವಿಷಯದ ಸಾರಾಂಶ ತಿಳಿದು, ಯಾವುದಕ್ಕೆ ಉಪಸ್ಥಿತವಿದ್ದರೆ ತನ್ನ ಸಂಶೋಧನೆಗೆ ಉಪಯುಕ್ತ ಎಂದು ಗುರುತು ಮಾಡಿಕೊಳ್ಳುತ್ತಾನೆ. ತದನಂತರ ತನ್ನ ಪ್ರಕಟಣಾ ಪೂರ್ವ ಪತ್ರಾಗಾರದಲ್ಲಿ (Preprint Archieve) ದಲ್ಲಿ ಪ್ರಕಟಗೊಳ್ಳದೆ Electronic ಮಾಧ್ಯಮದಲ್ಲಿರುವ ಸಂಶೋಧನಾ ಲೇಖನಗಳನ್ನು ನೋಡುತ್ತಾನೆ. ತನ್ನ ವಿಶಿಷ್ಟ ಸಂಶೋಧನಾ ವಲಯದಲ್ಲಿ ಯಾವ ಪ್ರಕಟಣೆಗಳು ಇವೆ ಎಂಬುದನ್ನು ನೋಡುತ್ತಾನೆ. ನಂತರ ಬೇರೆ ಸಂಶೋಧನಾ ಕೇಂದ್ರದ Website ತಾಣಕ್ಕೆ ಭೇಟಿಕೊಡುತ್ತಾನೆ.ಅಲ್ಲಿನ ಕೆಲವು ಸಂಶೋಧನಾ ಪ್ರಕಟಣೆಗಳನ್ನು Downloa ಮಾಡಿ ಕೊಳ್ಳುತ್ತಾನೆ. ಮತ್ತೆ ತನ್ನ ಸಂಸ್ಥೆಯ Websiteನಲ್ಲಿ ದಾಖಲಿಸಿದ ನೂತನ ಪ್ರಾಯೋಗಿಕ ಫಲಿತಾಂಶಗಳನ್ನು ಗಮನಿಸಿ, ವಿಶ್ಲೇಷಿಸಿ, ಇ-ಮೇಲ್ ಮಾಡುತ್ತಾನೆ. ಇದೇ ವಿಷಯದ ಮೇಲೆ ಮಾಡಲಾದ ಪ್ರಯೋಗದ ಫಲಿತಾಂಶಕ್ಕಾಗಿ Search Engine ಮುಖಾಂತರ ಪ್ರಯತ್ನಿಸಿ ದಾಖಲೆಗಳನ್ನು ವಿಶ್ಲೇಷಿಸುತ್ತಾನೆ. ಯಾವುದೇ ವಸ್ತುವಿನ ೩Dನೋಟ ಬೇಕಾದರೆ ಅದನ್ನು ವಿವಿಧ ತಾಣದಲ್ಲಿ ಹುಡುಕುತ್ತಾನೆ. ಅಂಥವು ಸಿಕ್ಕರೆ Download ಮಾಡಿಕೊಳ್ಳುತ್ತಾನೆ. ಇಂಥ structure ಗಳ ಮೂಲಕ ವಸ್ತುವನ್ನು ವಿವಿಧ ಕೋನದಿಂದ ವೀಕ್ಷಿಸಿ ಹೆಚ್ಚಿನ ಸ್ಥಾನವನ್ನು ಗಳಿಸಬಹುದು. ವಿವಿಧ ಸಂಸ್ಥೆಗಳೊಡನೆ Web Conference (ಅಂತರ್ಜಾಲ ಭೇಟಿ) ನಡೆಸಬಹುದು. ಜ್ಞಾನಕ್ಕೆ ವಾಹಕವಾಗುವ ಎಲ್ಲ ಅಡೆತಡೆಗಳನ್ನು ಮೀರುವ ಮಾನವ ಪ್ರಯತ್ನ ಇಲ್ಲಿ ಎದ್ದು ಕಾಣುತ್ತದೆ. ಸಮಾನಮನಸ್ಕರು ಏಕಕಾಲಕ್ಕೆ ವಿಶ್ವದಲ್ಲಿ ಭೌಗೋಳಿಕ ಅಂತರ ಮೀರಿ ಸಮೀಪವಾಗುವುದು ಇಲ್ಲಿ ಸಾಧ್ಯ. ಹೀಗೆ ಜ್ಞಾನಶಾಸ್ತ್ರದ ಬೆಳವಣಿಗೆಯಲ್ಲಿ ಇಂಟರ್‌ನೆಟ್ ಪ್ರಭಾವ ತನ್ನದೇ ಆದ ವಿಶಿಷ್ಟ ಬಗೆಯಲ್ಲಿ ಮೂಡಿ ಬಂದಿದೆ.

ಇತಿಹಾಸದ ಜ್ಞಾನಶಾಸ್ತ್ರ (Epistemology of History)

ಇತಿಹಾಸದ ಸಂಶೋಧನೆಯಲ್ಲಿ ಜ್ಞಾನಶಾಸ್ತ್ರದ ಸ್ಥಾನವನ್ನು ಕುರಿತು ಜಿಜ್ಞಾಸೆ ಮಾಡಿದಾಗ ಹಲವಾರು ವಿಚಾರಗಳಲ್ಲಿ ಇತಿಹಾಸವು ಜ್ಞಾನಶಾಸ್ತ್ರದ ಲಕ್ಷಣಗಳನ್ನು ಪ್ರಮಾಣಗಳನ್ನು ಉಪಯೋಗಿಸುವುದು ಕಂಡಬರುತ್ತದೆ. ಐತಿಹಾಸಿಕ ಘಟನೆಗಳು. ಅದರ ಇಸ್ವಿಗಳು ಮುಂತಾದವುಗಳಿಗೆ ಪ್ರಮಾಣ ಒದಗಿಸಲು ಇತಿಹಾಸವು  ಸದಾಕಾಲವೂ ಪ್ರಯತ್ನಿಸುತ್ತಿರುತ್ತದೆ. ಶಾಸನಗಳು, ಕೈಫಿಯತ್ತುಗಳು, ವಾಸ್ತುಶಿಲ್ಪ ಸಾಹಿತ್ಯಿಕ ಉಲ್ಲೇಖಗಳು, ಪುರಾತತ್ವದ ವೈಜ್ಞಾನಿಕ ಸಂಶೋಧನೆಗಳು, ಗ್ಯಾಜೆಟಿಯರಗಳು, ತಾಮ್ರಪಟ, ಅದರ ಭಾಷೆ, ಆಕರಗಳು ಇತ್ಯಾದಿ ಅನೇಕ ಆಧಾರಗಳನ್ನು ಉಪಯೋಗಿಸಿ ತುಲನಾತ್ಮಕವಾಗಿ ವಿಶ್ಲೇಷಿಸಿ ನಿರ್ಣಯಗಳಿಗೆ ಬರಲಾಗುತ್ತದೆ. ಇತಿಹಾಸಕಾಲೀನ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಜನಪದೀಯ ಆಡಳಿತ, ಸಾಹಿತ್ಯ, ಕಲಾ ಪ್ರಕಾರಗಳ ಅಧ್ಯಯನಗಳನ್ನು ಈ ಆಧಾರದ ಮುಖಾಂತರವೇ ಸ್ಥಿರೀಕರಿಸಬೇಕಾಗುತ್ತದೆ. ಹೊಸ ಹೊಸ ಸಂಶೋಧನೆಗಳು ನಡೆದಂತೆಲ್ಲ ಹಳೆಯ ಮಾನ್ಯತೆ ಪಡೆದ ನಿರ್ಣಯಗಳನ್ನು ಮಾರ್ಪಾಡು ಮಾಡಿಕೊಳ್ಳುವ ಅವಶ್ಯಕತೆ ಉಂಟಾಗುವ ಸಾಧ್ಯತೆ ಇದೆ. ಹಳೆಯ ದಾಖಲೆಗಳನ್ನು ಪರೀಕ್ಷಿಸುವಾಗ ಪೂರ್ವದಲ್ಲಿ ನಡೆಸಿದ ಅನುಮಾನಗಳು ಸುಳ್ಳಂದು ಸಾಬೀತಾಗಬಹುದು ಅಥವಾ ಹೊಸ ದಾಖಲೆಗಳು ಪೂರ್ವದ ನಿರ್ಣಯಗಳಲ್ಲಿ ನಿಖರತೆ ತರಬಹುದು.

ಜ್ಞಾನಶಾಸ್ತ್ರದ ಎಲ್ಲ ನಿಖರ ಲಕ್ಷಣಗಳನ್ನು ಇತಿಹಾಸಕ್ಕೆ ಅನ್ವಯಿಸಿಪೂರ್ಣ ಪ್ರಮಾಣದ ಇತಿಹಾಸ ಪುನರ್‌ನಿರ್ಮಾಣ ಸಂದೇಹಾಸ್ಪದ. ಇತಿಹಾಸದಲ್ಲಿ ನಿಖರವಾಗಿ ಏನು ನಡೆದಿದೆಯೋ ಅದನ್ನು ನಿರೂಪಿಸಲು ಸಂಪ್ರದಾಯ, ಪುರಾಣ ನೆನಪುಗಳ ದಾಖಲೆಗಳು, ಮೇಲ್ಕಾಣಿಸಿದ ಎಲ್ಲ ಆಧಾರಗಳು ವಿವಿಧ ಅಭಿಪ್ಯಾಗಳಿಗೆ ದಾರಿ ಮಾಡಿಕೊಡಬಹುದು. ಒಂದು ವೇಳೆ ನಿಖರವಾದ ಅಭಿಪ್ರಾಯಗಳು ಸಾಧ್ಯವಿದ್ದರೂ ಸಾಮಾಜಿಕ ಮತ್ತು ರಾಜಕೀಯ ಪರಿಣಾಮಗಳ ಒತ್ತಡ ಇದಕ್ಕೆ ಭಿನ್ನದಾರಿಯಾಗಿ        ಒದಗಬಹುದು.ಆದ್ದರಿಂದಲೇ ಕೆಲವು ಸಲ ಇತಿಹಾಸದಲ್ಲಿನ ಒಂದು ಕಾಲಮಿತಿಯಲ್ಲಿ ಯುದ್ಧಗಳು, ಸಾಮ್ರಾಜ್ಯ ವಿಸ್ತರಣೆಯ ವಾಹದಿಂದ ಕೂಡಿರುವ ಭೌಗೋಲಿಕ, ಆಡಳಿತಾತ್ಮಕ ಪುನಾರಚನೆಗಳು, ವಿವಿಧ ಸಂಪ್ರದಾಯ, ವರ್ಗ, ಭಾಷೆ, ಜನಾಂಗವನ್ನು ಅನಿವಾರ‍್ಯವಾಗಿ ಪರಸ್ಪರ ಜೋಡಿಸುವಂತೆ ಮಾಡುತ್ತವೆ. ಇದರಿಂದಾಗಿ ಹೊಸ ಬಿಕ್ಕಟ್ಟು ಉದ್ಭವವಾಗುತ್ತದೆ. ಹೊಸ ಸಂರಚನೆಗಳು, ವಾಣಿಜ್ಯ ವ್ಯವಹಾರಗಲು, ಹೊಸ ರೂಪ ಪಡೆದು, ಅದರಲ್ಲಿನ ಲಾಭದ ಚಾಲನಶಕ್ತಿ ವಿವಿಧ ಅವಕಾಶಗಳನ್ನು ತೆರೆಯುತ್ತವೆ. ರಾಜಕೀಯ ಧೃವೀಕರಣ ವಿವಿಧ ಗುಂಪುಗಳನ್ನು ಅನಿವಾರ್ಯವಾಗಿ ಹತ್ತಿರ ತರುತ್ತವೆ. ಆದ್ದರಿಂದಲೇ ಸತತ ಬದಲಾಗುವ ಈ ಪರಿಧಿಗಳು, ವಿವಿಧ ಇತಿಹಾಸದ ಧ್ವನಿಗಳಾಗಿ ಪರಿವರ್ತನೆಗೊಂಡು, ನಿಖರವಾದ ಇತಿಹಾಸವನ್ನು  ಗುರುತಿಸಲು ತೊಡಕಾಗುತ್ತವೆ.

ಇತಿಹಾಸಿಕ ಸತ್ಯವೆನ್ನುವುದು, ಎಲ್ಲ ಬಗೆಗಳಿಂದ ನಡೆಯುವ ಸಂಶೋಧನಾ ಸಮ್ಮಿಲನದಿಂದ ನಡೆಯುವಂತಹದ್ದು. ಘಟನೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾದರೂ ಅದರ ಹಿಂದಿನ ಒತ್ತಾಸೆಗಳನ್ನು ಅಳೆಯುವುದು ಕಷ್ಟ. ಒಂದು ಪ್ರಖರ ನಾಯಕತ್ವ ಎಲ್ಲ ಸಾಮಾಜಿಕ, ಸಾಂಸ್ಕೃತಿಕ ಒತ್ತಡಗಳನ್ನು ಮೀರಿಸಿ ಘಟನಾವಳಿಗಳ ಮೇಲೆ ಪ್ರಭಾವ ಬೀರಬಹುದು.

ವಿಕಸನ ಜ್ಞಾನಶಾಸ್ತ್ರ (Evolutionary Epistemology)

ವಿಕಸನ ಜ್ಞಾನಶಾಸ್ತ್ರವು ನೈಸರ್ಗಿಕ ವಿಚಾರಧಾರೆಯನ್ನು ಒಳಗೊಂಡಿದೆ. ನೈಸರ್ಗಿಕ ಆಯ್ಕೆ ಪ್ರಕ್ರಿಯೆಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಇಲ್ಲಿ ನಿಸರ್ಗಕ್ಕೆ ಎರಡು ಪಾತ್ರಗಳಿವೆ. ನಮ್ಮ ಜ್ಞಾನೇಂದ್ರಿಯಗಳ ಹುಟ್ಟು, ನಿರಂತರತೆ ಮತ್ತು ಅದರ ಕಾರ್ಯ ವಿಧಾನದ ವಿಶ್ವಾಸಾರ್ಹತೆ. ಅದರ ಜೊತೆಗೆ ತಿಳಿವಿನ ಕ್ರಿಯೆ ಇವೆಲ್ಲ ಜಗತ್ತನ್ನು ಸಂಯೋಜಿಸುವ ಬಗೆ ಇದು ಒಂದು ರೀತಿ. ಇನ್ನೊಂದು ರೀತಿಯಲ್ಲಿ ತಪ್ಪು, ಒಪ್ಪುಗಳ ಪುನರಾವರ್ತಿತ ಸರಣಿಗಳ ಮೂಲಕ ವೈಜ್ಞಾನಿಕ ಸಿದ್ಧಾಂತಗಳನ್ ರೂಪಿಸುವುದು.

ಈ ವಾದದ ಪ್ರಕಾರ ವ್ಯಕ್ತಿಗತ ಸಂಶೋಧನೆಗಳು/ಚಿಂತನೆಗಳು ಭಾಗಸ್ಥವಾಗಿ ಮತ್ತು ತರ್ಕದೋಷದಿಂದ ದೂಷಿತವಾಗುವ ಸಾಧ್ಯತೆ ಇದೆ. ಸಮಾಜದ/ನಿಸರ್ಗದ ವಿವಿಧ ಘಟಕಗಳಿಂದ ಆವೃತ್ತರಾಗಿ ಇರುವುದರಿಂದ ನಮಗೆ ಅತೀಂದ್ರಿಯ, ವಸ್ತುನಿಷ್ಠ ಮತ್ತು ವೈಶ್ಚಿಕ ದೃಷ್ಟಿಯಿಂದ ನೋಡಲು ಆಗುವುದಿಲ್ಲ. ಆದ್ದರಿಂದಲೇ ನಮ್ಮ ತಿಳಿವಿನ ಪರಿಧಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದಾಗ ನಾವು ಸತ್ಯದ ಸಮೀಪವಿರಲು ಸಾಧ್ಯ. ಬಿಡಿ ವಿದ್ವಾಂಸರಾಗಿ ತಮ್ಮ ಕ್ಷೇತ್ರದ ಬಗೆಗಿನ ಜ್ಞಾನವನ್ನು ಹೆಚ್ಚಿಸಿಕೊಂಡವರಿಗೂ ಕೂಡ ಪರಸ್ಪರ ಕೊಡುಕೊಳ್ಳುವಿಕೆ ಅನಿವಾರ‍್ಯವಾಗಿದೆ.

ಪ್ಲೇಟೊನ ಪ್ರಕಾರ ನಮ್ಮ ಆತ್ಮದಲ್ಲಿ ಎಲ್ಲ ಜ್ಞಾನವೂ ಅಡಗಿದೆ. ಅದಕ್ಕೆ ಶರೀರದ ಆವರಣವಿರುವುದರಿಂದ ಅದನ್ನು ನಾವು ಮರೆತಿದ್ದೇವೆ. ನಮ್ಮ ಎಲ್ಲಸಮಯವನ್ನು ಮರೆತು ಹೋದದ್ದನ್ನು ಜ್ಞಾಪಿಸುವ ಕ್ರಿಯೆಯಲ್ಲಿ ತೊಡಗಿಸುತ್ತೇವೆ. ವಿದ್ವಾಂಸನೊಬ್ಬ ಸತ್ಯ ಮತ್ತು ಸರಿ ಉತ್ತರದ ಅಸ್ತಿತ್ವದ ಬಗ್ಗೆ ವಾದಿಸಬಹುದಾದರೂ ಅದು ಸರಿಯಾಗಿರುವುದು ಅನುಮಾನಾಸ್ಪದ. ಆದ್ದರಿಂದಲೇ ನಮ್ಮ ಪರಿಕಲ್ಪನೆಗಳನ್ನು ಪರಸ್ಪರ ಚರ್ಚೆಯ ಅಗ್ನಿದಿವ್ಯಕ್ಕೆ ಒಡ್ಡಿದಾಗ ತಿಳಿವಿನ ಹರವು ಹೆಚ್ಚಾಗಿ ಸಂಭಾವ್ಯ ವಿಶ್ವಾಸವು ವೃದ್ಧಿಸುತ್ತದೆ. ಜ್ಞಾನದ ಬಹುಮುಖಿ ಚಿಂತನೆಯ ಈ ಪಥ, ಜ್ಞಾನಶಾಸ್ತ್ರದ ಲಕ್ಷಣಗಳನ್ನು ಇನ್ನೂ ಅರ್ಥಪೂರ್ಣವಾಗಿ ಉಪಯೋಗಿಸುತ್ತದೆ. ಇಲ್ಲಿ ಜ್ಞಾನವೆಂದರೆ ಹತ್ತಿರವಾಗುವುದು. ವಿನಿಮಯಗೊಳ್ಳುವಿಕೆ ಮತ್ತು ವಿಚಾರಧಾರೆಯ ಬಲಿಷ್ಠತೆ ತನ್ಮೂಲಕ ಸತ್ಯಕ್ಕೆ ಸಮೀಪವಾಗುವುದು ಎಂದರ್ಥ.

ಸನಾತನ ತಾತ್ವಿಕ ಚಿಂತನೆಯ ಪ್ರಕಾರ ಎಪಿಸ್ಟೇಮೋಲಜಿ ಎಂದರೆ ಪ್ರಮಾಶಾಸ್ತ್ರ  ಎಪಿಸ್ಟೆಮ್ ಎಂದರೆ ‘ಪ್ರಮಾ’ ಈ ‘ಪ್ರಮಾ’ ಪ್ರಮಾಣಗಳ ಮೂಲಕ ಗ್ರಾಹ್ಯವಾಗುವ ಕ್ರಮ. ಅರ್ಥಾತ್ ಅರಿವಿಗೆ ಗೋಚರವಾಗುವ ಬಗೆ. ಇಂತಹ ಈ ಚಿಂತನೆ ತನ್ನ ಹಲವಾರು ಪ್ರಮಾಣಗಳ ಮೂಲಕ, ಹಲವಾರು ಅಧ್ಯಯನ ಶಿಸ್ತುಗಳ ಮೂಲಕ ಸ್ತಯದ ಸಾಕ್ಷಾತ್ಕಾರಕ್ಕೆ ತೊಡಗಿಕೊಂಡಿದೆ. ತಿಳಿವಿನ ವ್ಯಾಖ್ಯೆಯನ್ನುಕೊಡುವುದು ಒಂದು ಸಂಕೀರ್ಣ ವಿಚಾರ. ಆದರೂ ಸಾಮಾನ್ಯವಾಗಿ ಸತ್ಯವೆಂದು ತೋರಿದ್ದು ಸಾಕ್ಷಾ ಧಾರಗಳಿಂದ ಸ್ಥಾಪಿತವಾಗಿ ಸಕಾರಣವಾಗಿ ನಂಬಬಹುದಾದಂತಹ ಸನ್ನಿವೇಶ ಇದ್ದಾಗ ಉಂಟಾಗುವ ಜ್ಞಾನಕ್ಕೆ ತಿಳಿವು ಎನ್ನಬಹುದು. ಒಂದು ನಂಬಿಕೆಗೆ ಕೂಡ ಪ್ರತ್ಯಕ್ಷ ಪ್ರಮಾಣ ಆಧಾರ ಬೇಕಾಗುತ್ತದೆ. ಯಾವುದೇ ಒಂದು ಸನ್ನಿವೇಶದಲ್ಲಿ ನಮ್ಮ ನಂಬಿಕೆಗೆ ಅನುಗುಣವಾಗಿ. ಸಕಾರಣವಾಗಿ ಘಟನೆ ನಡೆದರೆ ಅದನ್ನು ತಿಳಿವು ಎಂದು ಪರಿಗಣಿಸಬಹುದು. ಒಂದು ವಿಷಯದಲ್ಲಿನ ತಿಳಿವನ್ನು ಸ್ಥಿರೀಕರಿಸಲು Nocickನ ಪ್ರಕಾರ ಒಂದು ಸಂಗತಿ ನಾಲ್ಕು ನಿಬಂಧನೆಗಳನ್ನು ಹೊಂದಬೇಕು. ಆ ಸಂಗತಿಯ ನಿಜವಿರಬೇಕು. ವ್ಯಕ್ತಿಯೂ ಆ ಸಂಗತಿಯನ್ನು ನಂಬಬೇಕು. ಆ ಸಂಗತಿ ನಿಜವಿದ್ದರೆ ಮಾತ್ರ ಆ ಸಂಗತಿಯನ್ನು ನಂಬಬೇಕು. ಆ ಸಂಗತಿ ನಿಜವಿರದಿದ್ದರೆ ವ್ಯಕ್ತಿಯು ಅದನ್ನು ನಂಬಬಾರದು. ಒಟ್ಟಿನಲ್ಲಿ ಈ ಅಗಾಧ ಜ್ಞಾನವಾಹಿನಿಯಲ್ಲಿನ ಕೆಲ ಅಂಶಗಳನ್ನು ಮಾತ್ರ ಇಲ್ಲಿ ವಿವರಿಸಲಾಗಿದೆ.

ಈ ಜ್ಞಾನಶಾಸ್ತ್ರ ತರ್ಕ, ಮಾನಸ, ತತ್ವ, ಇತ್ಯಾದಿ ಶಾಸ್ತ್ರಗಳೆಲ್ಲದರ ನೇಯ್ಗೆಯಾಗಿದೆ. ಆಳವಾಗಿ ಯೋಚಿಸಿದಾಗ ತತ್ವಶಾಸ್ತ್ರದ ಸಮರ್ಥನೆಯಾಗಿ ತರ್ಕಶಾಸ್ತ್ರವನ್ನು ಬಳಸಿಕೊಂಡರೂ ಕೂಡ ಅದೇ ತರ್ಕ. ಇಂದ್ರಿಯಾರ್ಹ ಸನ್ನಿಕರ್ಷಜನ್ಯ ಜ್ಞಾನವೆಂದು ಮನಸ್ಸಿನ ಅಗತ್ಯತೆಯನ್ನು ಹೇಳುತ್ತದೆ. ಕೇವಲ ಜ್ಞಾನದ (ತತ್ವಶಾಸ್ತ್ರದ) ಬಗೆಯಾಗಿರದೆ, ಇನ್ನೂ ಅನೇಕ ಆಯಾಮಗಳಲ್ಲಿ ಅಂತರಶಿಸ್ತೀಯ ನೆಲೆಗಳಲ್ಲಿ ಈ ಜ್ಞಾನಶಾಸ್ತ್ರವನ್ನು ನೋಡುವ ಸಾಧ್ಯತೆಯನ್ನು ಹಾಗೂ ಈಗಾಗಲೇ ವಿಭಿನ್ನ ನೆಲೆಗಳಲ್ಲಿ ಚರ್ಚಿತಗೊಂಡ ಬಗೆಯೊಂದನ್ನು ಇಲ್ಲಿ ಸಂಕ್ಷಿಪ್ತವಾಗಿ ಅವಲೋಕಿಸಲಾಗಿದೆ.