ಬುದ್ಧ ಮತ್ತು ಕಬೀರರ ಸಾಲಿನಲ್ಲಿ ಸೇರಿಸಿ ಡಾಕ್ಟರ್ ಅಂಬೇಡ್ಕರ್ ಅವರು ಜ್ಯೋತಿರಾವ್ ಫುಲೆ ಅವರನ್ನು ಬಹು ದೊಡ್ಡ ಸಾಮಾಜಿಕ ಸುಧಾರಕನೆಂದು ಕರೆದರು. ಮಹಾತ್ಮ ಗಾಂಧೀಜಿಯವರು ಫುಲೆಯನ್ನು ನಿಜವಾದ ಮಹಾತ್ಮನೆಂದು ಗಣಿಸಿದರು. ವೀರ ಸಾವರ್ಕರ್ ಅವರು ಆತನನ್ನು ಒಬ್ಬ ಸಾಮಾಜಿಕ ಕ್ರಾಂತಿಕಾರನೆಂದು ಹೆಸರಿಸಿದರು.

ಮಹಾರಾಷ್ಟ್ರದಲ್ಲಿ ಮೊಟ್ಟ ಮೊದಲಿಗೆ ಹರಿಜನರಿಗಾಗಿ ಮತ್ತು ಹೆಣ್ಣು ಮಕ್ಕಳಿಗಾಗಿ ಇವರೇ ಶಾಲೆಯನ್ನು ತೆಗೆದವರು. ಅಜ್ಞಾನ, ಮೂಢನಂಬಿಕೆಗಳ ವಿರುದ್ಧ ಹಾಗೂ ಭಾರತೀಯ ಮಹಿಳೆಯರ ಪರವಾಗಿ ಹೋರಾಟ ಮಾಡಿದವರೂ ಇವರೇ. ಸಾಮಾಜಿಕ ಸಮಾನತೆ ಮತ್ತು ನ್ಯಾಯದ ತಳಹದಿಯ ಮೇಲೆ ಸಮಾಜವನ್ನು ನಿರ್ಮಿಸಲು ಈತ ಶ್ರಮಿಸಿದರು. ಭಾರತೀಯರ ರೈತರ ಪರವಾಗಿ ಮತ್ತು ಕಾರ್ಮಿಕರ ಪರವಾಗಿ ಚಳುವಳಿ ಮಾಡಿದರು.

ವಿಧವಾ ವಿವಾಹದ ನಾಯಕತ್ವ ವಹಿಸಿದವರೂ, ಅನಾಥರಿಗಾಗಿ ಆಶ್ರಮವನ್ನು ತೆಗೆದು ಸೇವೆ ಮಾಡಿದ ಮಹಾವ್ಯಕ್ತಿಯೂ ಇವರೇ. ಮಾನವನ ಗೌರವ, ಮತೀಯ ಸಹನೆ ಮತ್ತು ಮಾನವನ ಹಕ್ಕುಗಳಿಗಾಗಿ ಈ ಮಹಾಪುರುಷ ಜ್ಯೋತಿರಾವ್ ಫುಲೆ ಶ್ರಮಿಸಿದರು.

ಬಡ ಕುಟುಂಬ

ಇಂತಹ ಗೌರವಾನ್ವಿತ ವ್ಯಕ್ತಿಯೇ ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹರೆನಿಸಿದ ಮಹಾತ್ಮ ಜ್ಯೋತಿರಾವ್ ಫುಲೆ.

ಇವರು ಹುಟ್ಟಿದ್ದು ಒಂದು ಬಡಕುಟುಂಬದಲ್ಲಿ. ಇವರ ಮುತ್ತಜ್ಜ ಮಹಾರಾಷ್ಟ್ರದ ಸತಾರದಿಂದ ಇಪ್ಪತ್ತೈದು ಮೈಲಿ ದೂರದ ಕಟಗಾಂವ್ ನಲ್ಲಿ ಚೌಗುಲ ಎಂಬ ಹಳ್ಳಿಯಲ್ಲಿ ಕೆಳದರ್ಜೆಯ ಸೇವಕನಾಗಿದ್ದವನು. ಇಂತಹವರಿಗೆ ಅನೇಕ ಬಗೆಯ ಕೆಲಸಗಳನ್ನು ಹಚ್ಚುತ್ತಿದ್ದರು. ಇವರು ಹಳ್ಳಿಯ ಅಧಿಕಾರಿಗಳ ಸೇವೆ ಮಾಡಿಕೊಂಡಿರುತ್ತಿದ್ದರು.

ಈ ಬಡ ಸಂಸಾರ ಪೂನಾಕ್ಕೆ ವಲಸೆ ಹೋಯಿತು. ಜ್ಯೋತಿರಾಯರ ತಾತ ಶೇಟಿಬಾ ಅವರಿಗೆ ರಾಣೋಜಿ, ಕೃಷ್ಣ ಮತ್ತು ಗೋವಿಂದ ಎಂಬ ಮೂರು ಜನ ಗಂಡುಮಕ್ಕಳಿದ್ದರು. ತಂದೆಯವರ ಸ್ಥಿತಿಯನ್ನು ತಿಳಿದುಕೊಂಡಿದ್ದ ಮಕ್ಕಳು ತಾವೂ ಕಷ್ಟಪಟ್ಟು ಸಂಪಾದಿಸತೊಡಗಿದರು. ಹೂ ಕಟ್ಟುವ ಮತ್ತು ಮಾರುವ ಕಸುಬಿನಲ್ಲಿ ಪರಿಣತಿ ಪಡೆದರು. ಪೇಶ್ವೆಯವರೂ ಇವರ ಸೇವೆಯನ್ನು ಪಡೆದರು. ಇದರಿಂದ ಶೇಟಿಬಾ ಸಂಸಾರಕ್ಕೆ ೩೫ ಎಕರೆ ಭೂಮಿ ದೊರೆಯಿತು. ಇವರು ಹೂ ಮಾರಾಟ ಮಾಡುವುದರಲ್ಲಿ ಹೆಸರು ಗಳಿಸಿದ್ದುದರಿಂದ ಇವರ ಮನೆತನಕ್ಕೆ ’ಫುಲೆ’ ಎಂಬ ಹೆಸರು ಬಂದಿತು.

ಶೇಟಿ ಬಾ ಮರಣಾ ನಂತರ ಮಕ್ಕಳು ತಮ್ಮ ಸೋದರಮಾವ ಜಗಾಡೆಯೊಂದಿಗೆ ವಾಸ ಮಾಡತೊಡಗಿದರು. ರಾಣೋಜಿಗೆ ಕೃಷ್ಣ ಮತ್ತು ಗೋವಿಂದರನ್ನು ಕಂಡರೆ ಆಗುತ್ತಿರಲಿಲ್ಲ. ಅವರನ್ನು ಜಗಾಡೆಯಿಂದ ರಾಣೋಜಿ ಓಡಿಸಿದ. ತಾನೇ ಜಮೀನನ್ನು ಪಡೆದುಕೊಂಡ.

ಗೋವಿಂದ ಜಗಾಡೆಯ ಪಕ್ಕದ ಹಳ್ಳಿಗೆ ಹೋಗಿ ಅಲ್ಲಿ ಹೊಲದ ಕೆಲಸ ಮಾಡತೊಡಗಿದನು. ನಂತರ ಪೂನಾದಲ್ಲಿ ಒಂದು ಅಂಗಡಿಯನ್ನು ಇಟ್ಟುಕೊಂಡನು. ಸ್ಥಿತಿ ಉತ್ತಮಗೊಂಡಿತು. ಚಿಮ್ನಾಬಾಯಿ ಎಂಬ ಯುವತಿಯೊಡನೆ ಗೋವಿಂದನ ವಿವಾಹವಾಯಿತು. ಅವರಿಗೆ ಇಬ್ಬರು ಮಕ್ಕಳಿದ್ದರು. ಹಿರಿಯವನ ಹೆಸರು ರಾಜರಾಮ, ಕಿರಿಯವನ ಹೆಸರು ಜ್ಯೋತಿರಾವ್. ಹುಟ್ಟಿದ್ದು ೧೮೨೭ರಲ್ಲಿ. ಜ್ಯೋತಿ ಎಂದರೆ ದೀಪ. ಅಂತೆಯೇ ಆತನು ಮುಂದೆ ಅನೇಕರಿಗೆ ದಾರಿದೀಪವಾಗಿ ಬೆಳಗಿದನು.

ಮಲಿನ ಸಮಾಜ

ಆ ದಿನಗಳಲ್ಲಿ ಹಿಂದೂ ಸಮಾಜ ಅವ್ಯವಸ್ಥೆಯಲ್ಲಿತ್ತು. ಮರಾಠರ ಸಾಮ್ರಾಜ್ಯ ಅಳಿಯುತ್ತಾ ಬರುತ್ತಿತ್ತು. ಪೂನಾದ ಪ್ರತಿಷ್ಠೆ ಅಳಿದಿತ್ತು. ಬ್ರಿಟಿಷರ ಕೈ ಮೇಲಾಯಿತು. ಸಮಾಜದಲ್ಲಿ ಜೂಜುಗಾರಿಕೆ ಹೆಚ್ಚಾಗುತ್ತಿತ್ತು. ಲಂಚಗಾರಿಕೆ ಕಂಡು ಬಂದಿತು. ಬಹಳ ಜನ ನಾಯಕರು ಕೆಳಮಟ್ಟಕ್ಕೆ ಇಳಿದಿದ್ದರು. ಅವರಿಗೆ ಸಮಾಜದ ಪ್ರಗತಿಯ ಯೋಚನೆಯೇ ಇರಲಿಲ್ಲ.

ಈ ಕಾಲದಲ್ಲಿ ಚಿತ್ ಪಾವನ್ ಬ್ರಾಹ್ಮಣರು ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ದೊಡ್ಡ ದೊಡ್ಡ ಪದವಿಗಳಿಗೇರಿದ್ದರು. ಇತರ ಜಾತಿಯವರು ಎಷ್ಟೇ ಬುದ್ಧಿವಂತರಾಗಿದ್ದರೂ, ಶಕ್ತಿವಂತರಾಗಿದ್ದರೂ ಅವರಿಗೆ ಉನ್ನತ ಸ್ಥಾನಗಳು ಸಿಕ್ಕುವಂತಿರಲಿಲ್ಲ. ಬ್ರಾಹ್ಮಣರ ಕೈ ಮೇಲಾಯಿತು. ಅವರಿಗೆ ಅನೇಕ ಸೌಲಭ್ಯಗಳು ಸಿಕ್ಕಿದವು. ಕೆಲವು ವಿಷಯಗಳಲ್ಲಿ ಅವರಿಗೆ ವಿನಾಯಿತಿ ದೊರೆಯಿತು. ಬರಗಾಲದಲ್ಲಿಯೂ ಅವರಿಗೆ ಸಹಾಯ ದೊರೆಯಿತು. ಊಟೋಪಚಾರ ದೊರೆಯಿತು. ರೈತರು ಹಾಗೂ ಕೂಲಿಯವರು ಹಿಂಸೆಗೆ ಒಳಗಾದರು. ಮೇಲಿನ ವರ್ಗದವರು ಕೆಳದರ್ಜೆಯ ಜನರನ್ನು ತಮಗೆ ಆಹಾರಧಾನ್ಯಗಳನ್ನು ಬೆಳೆಯುವುದಕ್ಕಾಗಿ, ಬಟ್ಟೆ ನೇಯ್ದು ಕೊಡುವುದಕ್ಕಾಗಿ, ತಮ್ಮ ಸೇವೆಗಾಗಿಯೇ ಹುಟ್ಟಿರುವುದಾಗಿ ಭಾವಿಸಿದ್ದರು. ಸಾಲ ತೀರಿಸುವವರೆಗೆ ಸಾಲಗಾರನು ತನ್ನ ಮಕ್ಕಳನ್ನು ಸಾಲ ಕೊಟ್ಟವರ ಬಲಿ ಒತ್ತೆ ಇಡಬೇಕಾಗಿತ್ತು. ಅನೇಕರು ಇಡೀ ಜೀವಮಾನವನ್ನೇ ಸಾಲವನ್ನು ತೀರಿಸುವುದಕ್ಕಾಗಿ ದುಡಿದರೂ ಸಾಲಗಾರರಾಗಿಯೇ ಸಾಯಬೇಕಾಯಿತು. ಉತ್ತಮರನೇಕರು ಪೂನಾ ನಗರವನ್ನೇ ಬಿಟ್ಟುಹೋದರು. ಕೆಲವರು ಉತ್ತಮ ಸ್ಥಾನ ಗಳಿಸಿಕೊಳ್ಳುವುದರಲ್ಲಿ ತೊಡಗಿದರು. ನೀತಿ ಕೆಟ್ಟಿತು. ಸಂಸ್ಕೃತಿ ಹಾಳಾಯಿತು. ಧರ್ಮ ಅಳಿಯಿತು.

೧೮೧೮ರಲ್ಲಿ ಮರಾಠ ಸಾಮ್ರಾಜ್ಯ ಕುಸಿದು ಬಿದ್ದಿತು. ಆಗಿನ ಕಾಲದಲ್ಲಿ ಬ್ರಾಹ್ಮಣರದೇ ಮೇಲುಗೈ. ಆದುದರಿಂದ ಸಮಾಜ ಮತ್ತು ದೇಶದ ದುಃಸ್ಥಿತಿಗೆ ಬ್ರಾಹ್ಮಣರೇ ಕಾರಣ ಎಂಬ ಅಭಿಪ್ರಾಯ ಬೆಳೆಯಿತು. ಮರಾಠರ ಅರಮನೆಗಳು ನೆಲಸಮವಾದವು. ಅವರ ಸೈನ್ಯ ನಾಶವಾಯಿತು. ಮೊದಲಬಾರಿಗೆ ಅದು ಹೊರಗಿನವರ ಆಳ್ವಿಕೆಗೆ ಒಳಪಟ್ಟಿತು.

ಹೊಸ ಯುಗ

ಜ್ಯೋತಿರಾವ್ ಜನನಕ್ಕೆ ಮೊದಲು ಇದ್ದ ವಿದ್ಯಾಭ್ಯಾಸ ಈ ಕಾಲದ ವಿದ್ಯಾಭ್ಯಾಸದ ಹಾಗಿರಲಿಲ್ಲ. ಶಾಲೆಗಳನ್ನು ಸರ್ಕಾರ ನಡೆಸುತ್ತಿರಲಿಲ್ಲ. ಖಾಸಗಿ ವ್ಯಕ್ತಿಗಳು ಕೆಲವರು ಶಾಲೆಗಳನ್ನು ನಡೆಸುತ್ತಿದ್ದರು. ಅವುಗಳಲ್ಲಿ ಉತ್ತಮ ಜಾತಿಗಳವರ ಮಕ್ಕಳಿಗೆ ಸಂಸ್ಕೃತ, ವ್ಯಾಕರಣ, ತರ್ಕ, ವೇದಾಂತ ಮತ್ತು ಕಾನೂನುಗಳನ್ನು ಕುರಿತ ಶಿಕ್ಷಣವನ್ನು ಕೊಡಲಾಗುತ್ತಿತ್ತು. ಕೆಳವರ್ಗದವರಿಗೆ ಈ ಶಿಕ್ಷಣ ಲಭ್ಯವಾಗುತ್ತಿರಲಿಲ್ಲ. ಆಗ ದೇಶದ ಬಹುಭಾಗ ಇಂಗ್ಲಿಷರು ನಡೆಸುತ್ತಿದ್ದ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದಲ್ಲಿತ್ತು. ೧೯೧೩ರ ಮಸೂದೆಯಂತೆ ಈಸ್ಟ್ ಇಂಡಿಯಾ ಕಂಪನಿಯ ಸರ್ಕಾರ ಒಂದು ಲಕ್ಷಕ್ಕೆ ಕಡಿಮೆಯಿಲ್ಲದಷ್ಟು ಹಣವನ್ನು ಶಿಕ್ಷಣಕ್ಕಾಗಿ ಮೀಸಲಾಗಿಟ್ಟಿತು. ೧೯೨೪ರ ಹೊತ್ತಿಗೆ ಕ್ರೈಸ್ತ  ಪಾದ್ರಿಗಳು ಮರಾಠಿ ಶಾಲೆಗಳನ್ನು ತೆರೆದಿದ್ದರು. ೧೮೩೫ರಲ್ಲಿ ಯೂರೋಪಿನ ಸಾಹಿತ್ಯ ಮತ್ತು ವಿಜ್ಞಾನಗಳನ್ನು ಬೋಧಿಸುವುದು ತನ್ನ ಗುರಿ ಎಂದು ಸರ್ಕಾರ ಸ್ಪಷ್ಟಪಡಿಸಿತು. ಅಲ್ಲಲ್ಲಿ ದೇಶೀಯ ಶಾಲೆಗಳು ಪ್ರಾರಂಭವಾದವು. ೧೮೩೬ರಲ್ಲಿ ಸರ್ಕಾರದವರು ಕೆಲವು ಶಾಲೆಗಳನ್ನು ತೆರೆದು ಓದುವುದು, ಬರೆಯುವುದು ಮತ್ತು ಗಣಿತಗಳನ್ನು ಬೋಧಿಸತೊಡಗಿದರು. ಇಂಗ್ಲಿಷ್ ಶಿಕ್ಷಣದಿಂದ ಅನೇಕರು ಪ್ರಯೋಜನ ಪಡೆದರು. ಇಂಗ್ಲಿಷರ ನಾಗರಿಕೆತೆ, ವ್ಯಕ್ತಿಗಳ ಸ್ವಾತಂತ್ರ‍್ಯ ಮತ್ತು ಸಮಾನತೆಗಳನ್ನು ಕುರಿತ ಅವರ ಭಾವನೆಗಳು ನಮ್ಮ ದೇಶದ ವಿದ್ಯಾವಂತರ ಮೇಲೆ ಪ್ರಭಾವ ಬೀರಿದವು. ಸಮಾಜದಲ್ಲಿ ಎಲ್ಲರೂ ಸರಿಸಮ, ಪ್ರತಿಯೊಬ್ಬನಿಗೂ ಗೌರವ ದೊರೆಯಬೇಕು. ಎಲ್ಲ ಮನುಷ್ಯರಿಗೂ ಕೆಲವು ಹಕ್ಕುಗಳಿವೆ. ಇಂತಹ ವಿಚಾರ ರೀತಿ ಬೆಳೆಯಿತು. ಸ್ವಾತಂತ್ರ‍್ಯ ಪ್ರೇಮ ಎಲ್ಲರಲ್ಲಿ ಮೂಡಿತು. ಸ್ವದೇಶಿ ಪ್ರೇಮ ಜನರಲ್ಲಿ ಉಂಟಾಯಿತು. ಈ ಅಂಶ ಬ್ರಿಟಿಷರಿಗೂ ತಿಳಿದಿತ್ತು. ಚಿತ್ ಪಾವನರು ಇಂಗ್ಲಿಷ್ ಶಿಕ್ಷಣ, ಸಂಬಳ, ನೌಕರಿಗಳಿಂದ ತೃಪ್ತರಾಗಿರಲಿಲ್ಲ. ಭಾರತೀಯರನ್ನು ತೃಪ್ತಿ ಪಡಿಸುವ ಕೆಲಸ ಬ್ರಿಟಿಷರಿಗೆ ಕಠಿಣವಾಯಿತು. ವಿಚಾರಗಳ ಹೊಸ ಗಾಳಿ ಬೀಸಿ ಒಂದು ಹೊಸ ಯುಗವೇ ನಿರ್ಮಾಣವಾಗುತ್ತಿತ್ತು.

ವಿದ್ಯಾಭ್ಯಾಸ ಮತ್ತು ವಿವಾಹ

ಜ್ಯೋತಿರಾವ್ ಗೆ ಸುಮಾರು ಒಂದು ವರ್ಷವಾಗಿರಬೇಕು. ಆತನ ತಾಯಿ ಚಿಮ್ನಾಬಾಯಿ ತೀರಿಕೊಂಡರು. ಜ್ಯೋತಿರಾವ್ ತಂದೆಯವರಾದ ಗೋವಿಂದರಾವ್ ತುಂಬಾ ದುಃಖಕ್ಕೀಡಾದರು. ಜ್ಯೋತಿರಾವ್ ಗೆ ಐದು ವರ್ಷವಾಯಿತು. ಅವರ ಮನೆತನದಲ್ಲಿ ಯಾರೂ ವಿದ್ಯಾಭ್ಯಾಸ ಮಾಡಿರಲಿಲ್ಲ. ವಿದ್ಯಾಭ್ಯಾಸ ಊಹೆಗೂ ನಿಲುಕದ್ದಾಗಿತ್ತು. ಆದರೆ ದೀರ್ಘ ಆಲೋಚನೆಯ ನಂತರ ಗೋವಿಂದರಾವ್ ಜ್ಯೋತಿರಾವನನ್ನು ಶಾಲೆಗೆ ಸೇರಿಸಿದರು. ಜ್ಯೋತಿರಾವ್ ಚೆನ್ನಾಗಿ ಓದತೊಡಗಿದ. ಆದರೆ ಯಾರೋ ಗೋವಿಂದರಾಯರ ಮನಸ್ಸನ್ನು ಕಹಿ ಮಾಡಿದರು. ವಿದ್ಯೆಯಿಂದ ಆಗುವ ಪ್ರಯೋಜನವಾದರೂ ಏನು? ಎಂದು ಕೇಳಿದರು. ಗೋವಿಂದರಾವ್ ಅವರ ಅಂಗಡಿಯಲ್ಲಿ ಗುಮಾಸ್ತನಾಗಿದ್ದು ವ್ಯಕ್ತಿಯೊಬ್ಬ ಅವರ ಮನಸ್ಸನ್ನು ಕಹಿ ಮಾಡಿದ್ದ. ಅಷ್ಟು ಹೊತ್ತಿಗೆ ಜ್ಯೋತಿರಾವ್ ಮರಾಠಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದನು. ಓದುವುದನ್ನು, ಬರೆಯುವುದನ್ನು ಕಲಿತಿದ್ದನು. ಮನಸ್ಸಿನಲ್ಲೆ ಲೆಕ್ಕಗಳನ್ನು ಮಾಡುವಷ್ಟು ಮುಂದುವರಿದಿದ್ದ.

ಆದರೂ ಗೋವಿಂದರಾವ್ ಜ್ಯೋತಿರಾವ್ ನನ್ನು ಶಾಲೆ ಬಿಡುವಂತೆ ಮಾಡಿದರು. ಜ್ಯೋತಿರಾವ್ ಕೊಡಲಿ, ಕುಡುಗೋಲು, ಪಿಕಾಸಿಗಳನ್ನು ಹಿಡಿದು  ತೋಟದ ಕೆಲಸ ಮಾಡತೊಡಗಿದನು. ಆದರೆ ಆತನ ಓದಿನ ಗೀಳು ಬಿಟ್ಟಿರಲಿಲ್ಲ. ತನ್ನ ನಿತ್ಯದ ಕೆಲಸವಾದ ನಂತರ ರಾತ್ರಿ ಓದುವುದರಲ್ಲಿ ನಿರತನಾಗಿರುತ್ತಿದ್ದನು. ಹುಡುಗ ಬುದ್ಧಿವಂತನಾಗಿದ್ದು ಚುರುಕಾಗಿದ್ದನು. ಇದರಿಂದ ಅಕ್ಕಪಕ್ಕದವರ ಗಮನವನ್ನು ಸೆಳೆದನು. ಅಕ್ಕಪಕ್ಕದವರಲ್ಲಿ ಉರ್ದು ಮತ್ತು ಪರ್ಷಿಯನ್ ಶಿಕ್ಷಕರಾಗಿದ್ದ ಗಫಾರ‍್ ಬೇಗ್ ಮುನ್ಷಿ, ಮತ್ತೊಬ್ಬರೆಂದರೆ ಲೆಗಿಟ್. ಇಬ್ಬರೂ ವಿದ್ವಾಂಸರು. ಜ್ಯೋತಿರಾವ್ ನನ್ನು ಓದಿಸುವಂತೆ ಇಬ್ಬರೂ ಗೋವಿಂದರಾಯರಿಗೆ ಮತ್ತೆ ಮತ್ತೆ ಹೇಳಿದರು. ಕಡೆಗೆ ಗೋವಿಂದರಾಯರಿಗೂ ಒಪ್ಪಿಗೆಯಾಯಿತು. ೧೮೪೧ರಲ್ಲಿ ಜ್ಯೋತಿಬಾನನ್ನು ಮಿಷನ್ ಶಾಲೆಯೊಂದಕ್ಕೆ ಸೇರಿಸಿದರು. ಆಗ ಆತನಿಗೆ ಹದಿನಾಲ್ಕು ವರ್ಷ.

ಹುಡುಗ ಓದಿ ಎಲ್ಲರ ಮೆಚ್ಚುಗೆಗೆ ಪಾತ್ರನಾದ. ಆಗಲೇ ಆತನಿಗೆ ಸದಾಶಿವ ಬಲ್ಲಾಳ, ಗೋವಂಡೆ ಅವರ ಗಾಢ ಸ್ನೇಹ ದೊರೆತದ್ದು. ಆತನು ಓದುತ್ತಿದ್ದ ಶಾಲೆ ಸ್ಕಾಟಿಷ್ ಮಿಷನ್ ಅವರದ್ದು. ಅಲ್ಲಿ ಆತನು ಹೆಚ್ಚಿನ ಜ್ಞಾನ ಸಂಪಾದನೆ ಮಾಡಿದ. ಎಲ್ಲ ಮನುಷ್ಯರಿಗೂ ಕೆಲವು ಹಕ್ಕುಗಳಿವೆ, ಎಲ್ಲ ಮನುಷ್ಯರೂ ಸಮಾನರು, ಮನುಷ್ಯ ಉಂಡು, ಉಟ್ಟು ಹೇಗೋ ಬದುಕಿ ಹೋದರೆ ಸಾಲದು, ನಾಲ್ಕು ಜನರಿಗೆ ಉಪಕಾರ ಮಾಡಿದರೆ ಮನುಷ್ಯನಾಗಿ ಹುಟ್ಟಿದ್ದಕ್ಕೆ ಸಾರ್ಥಕ – ಇಂತಹ ಹಲವಾರು ವಿಷಯಗಳನ್ನು ಹುಡುಗ ಈ ಶಾಲೆಯಲ್ಲಿ ಕಲಿತ.

ಜ್ಯೋತಿರಾವ್ ಮತ್ತು ಗೋವಂಡೆಯವರು ಶಿವಾಜಿ ಮತ್ತು ಅಮೆರಿಕದ ಪ್ರಸಿದ್ಧ ಸ್ವಾತಂತ್ರ‍್ಯ ಹೋರಾಟಗಾರ ಜಾರ್ಜ್ ವಾಷಿಂಗ್ ಟನ್ ಅವರುಗಳ ಜೀವನ ಚರಿತ್ರೆಗಳನ್ನು ಓದಿ ಅವರುಗಳ ಕಾರ್ಯ, ದೇಶಭಕ್ತಿ ಹಾಗೂ ಒಳ್ಳೆಯ ಗುರಿಗಳನ್ನು ಅರಿತುಕೊಂಡರು. ಅವರಂತೆ ತಾಯ್ನಾಡಿನ ಸೇವೆ ಮಾಡಬೇಕೆಂದು ಬಯಸಿದರು. ಅವರ ಮೇಲೆ ಪ್ರಭಾವ ಬೀರಿದ ಮತ್ತೊಂದು ಕೃತಿಯೆಂದರೆ ಅಮೆರಿಕದ ಥಾಮಸ್ ಪೇಯ್ನ್ ಅವರ ಮಾನವನ ಹಕ್ಕುಗಳು ( ದಿ ರೈಟ್ಸ್ ಆಫ್ ಮ್ಯಾನ್) ಎಂಬ ಪುಸ್ತಕ.

ಮುಂದೆ ಗೋವಂಡೆ ಪೂನಾದ ಸಂಸ್ಕೃತ ಕಾಲೇಜಿನಲ್ಲಿ ಶಿಕ್ಷಕರಾದರು. ಜ್ಯೋತಿರಾವ್ ಇಂಗ್ಲಿಷ್ ಶಾಲೆಯಲ್ಲಿ ಶಿಕ್ಷಣ ಮುಗಿಯುವವರೆಗೆ ಶಿಕ್ಷಣವನ್ನು ಮುಂದುವರೆಸಿದರು. ೧೮೪೭ರಲ್ಲಿ ಅವರ ಶಿಕ್ಷಣ ಮುಗಿಯಿತು.

ಆಗಿನ ಪದ್ಧತಿಯಂತೆ ಗೋವಿಂದರಾವ್ ಜ್ಯೋತಿರಾವ್ ನ ವಿವಾಹಕ್ಕೆ ಅಣಿ ಮಾಡಿದರು. ಬಹು ಚಿಕ್ಕ ವಯಸ್ಸಿನಲ್ಲಿ ಹುಡುಗ ಹುಡುಗಿಯರಿಗೆ ಮದುವೆ ಮಾಡಿಬಿಡುತ್ತಿದ್ದ ಕಾಲ ಅದು. ಆತನಿಗೆ ವಿವಾಹವಾದಾಗ ಆತನ ವಯಸ್ಸು ೧೩. ಆತನ ಹೆಂಡತಿಯ ವಯಸ್ಸು ೮. ಆಕೆ ಪೂನಾ ಹತ್ತಿರದ ಕವಾಡಿ ಎಂಬ ಹಳ್ಳಿಯ ಜಗಾಡೆ ಪಾಟೀಲ್ ಮನೆತನಕ್ಕೆ ಸೇರಿದ ಹುಡುಗಿ. ಇಬ್ಬರಿಗೂ ವಿವಾಹ ಎಂದರೆ ಏನೆಂದು ತಿಳಿದಿರಲಿಲ್ಲ. ಜ್ಯೋತಿಬಾ ಹೆಂಡತಿಯನ್ನು ಸಾಕುವ ವಿಷಯದಲ್ಲಿ ಅಷ್ಟಾಗಿ ಚಿಂತಿಸಲಿಲ್ಲ. ತನ್ನ ಕೆಲಸವಾಯಿತು, ತನ್ನ ಓದುಗಾರಿಕೆಯಾಯಿತು.

ಅಪಮಾನ

ಜ್ಯೋತಿಬಾನ ಶಿಕ್ಷಣ ಮುಗಿಯಿತು. ಇನ್ನೇನು ಅವನು ತಂದೆಯ ಕಸುಬನ್ನು ಮುಂದುವರಿಸಿಕೊಂಡು ಹೋಗುತ್ತಾನೆ ಎಂದೇ ಎಲ್ಲರ ನಂಬಿಕೆ. ಆದರೆ ಜ್ಯೋತಿರಾವ್ ಮಾತೇ ಬೇರೆಯಾಯಿತು. ಆತ ಬೇರೆಯವರು ತುಳಿದ ದಾರಿಯನ್ನು ತುಳಿಯುವವನಾಗಿರಲಿಲ್ಲ. ತನಗೆ ಸರಿ ಎಂದು ಕಂಡ ದಾರಿಯಲ್ಲಿ ನಡೆಯುವವನು. ಆತ ಜನರ ಸೇವೆ ಮತ್ತು ಅವರ ಹಿತ ಇವನ್ನೇ ಕುರಿತು ಯೋಚಿಸುತ್ತಿದ್ದ.

ಆಗ ಒಂದು ವಿಶೇಷ ಘಟನೆ ನಡೆಯಿತು.

ಒಂದು ಮದುವೆಯ ಸಮಾರಂಭದಲ್ಲಿ ಭಾಗವಹಿಸುವಂತೆ ಈತನ ಸ್ನೇಹಿತನೊಬ್ಬ ಈತನನ್ನು ಕರೆದಿದ್ದ. ಆಹ್ವಾನಿಸಿದ ಸ್ನೇಹಿತ ಬ್ರಾಹ್ಮಣ. ಆತ ಆಪ್ತಸ್ನೇಹಿತನಾಗಿದ್ದುದರಿಂದ ಜ್ಯೋತಿರಾವ್ ಸಮಾರಂಭದಲ್ಲಿ ಭಾಗವಹಿಸಿದ. ಮೆರವಣಿಗೆಯವರೊಂದಿಗೆ ನಡೆದ. ಇದನ್ನು ಕಂಡ ಆಚಾರವಂತ ಬ್ರಾಹ್ಮಣರೊಬ್ಬರು ಕೋಪಗೊಂಡರು. ಮಾಲಿಯೊಬ್ಬ ಮೆರವಣಿಗೆಯಲ್ಲಿ ಬರುತ್ತಿದ್ದುದನ್ನು ಸಹಿಸದಾದರು. ಬೈಯಲು ಪ್ರಾರಂಭಿಸಿದರು. ’ಬ್ರಾಹ್ಮಣರೊಂದಿಗೆ ಮೆರವಣಿಗೆಯಲ್ಲಿ ಬರುವುದೆಂದರೇನು!’

ಆದ ಅವಮಾನದಿಂದ ತರುಣ ಕೋಪಗೊಂಡ.

’ಶೂದ್ರನಾದ ನೀನು ಮತೀಯ ನಿಯಮಗಳನ್ನು ಮೀರಿದ್ದೀಯ. ಅವಮಾನ ಮಾಡಿದ್ದೀಯೆ. ಜೊತೆಗೆ ಬರುವ ಮೊದಲು ನೂರು ಬಾರಿ ಆಲೋಚನೆ ಮಾಡಬೇಕಾಗಿತ್ತು. ಜನರು ಬ್ರಿಟಿಷ್ ರಾಜ್ಯದಲ್ಲಿ ಅಹಂಕಾರಿಗಳಾಗುತ್ತಿದ್ದಾರೆ’ ಎಂದೆಲ್ಲ ಕೂಗಾಡಿದರು.

ಜ್ಯೋತಿರಾವ್ ಗೆ ದಿಕ್ಕು ತೋಚದಂತಾಯಿತು. ಆತನಿಗೆ ಗಾಬರಿಯಾಯಿತು. ಆತನ ರಕ್ತ ಕುದಿಯತೊಡಗಿತು. ಅಂತಹ ಸ್ಥಿತಿಯಲ್ಲಿ ಆತ ತನ್ನ ಮನೆಯನ್ನು ಸೇರಿದ.

ತರುಣ ಜ್ಯೋತಿರಾವ್ ನಡೆದ ಸಂಗತಿಯನ್ನು ತಂದೆಗೆ ನಿರೂಪಿಸಿದ. ಆತನ ಕಣ್ಣುಗಳು ಕೋಪದಿಂದ ಕೂಡಿದ್ದವು. ಬಿಕ್ಕಿಬಿಕ್ಕಿ ಅತ್ತ, ನರಳಿದ, ಕೋಪಗೊಂಡ.

ಪರಂಪರೆ ಮತ್ತು ಆಚಾರಗಳಿಗೆ ಹೊಂದಿಕೊಂಡಿದ್ದ ಗೋವಿಂದರಾವ್ ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಅಂದಿನ ಆಚಾರ ವಿಚಾರಗಳನ್ನು ವಿವರಿಸಿದರು. ಶಿವಾಜಿ, ವಾಷಿಂಗ್ ಟನ್ ಮುಂತಾದ ಸ್ವಾತಂತ್ರ‍್ಯ ಪ್ರಿಯರ ಜೀವನಚರಿತ್ರೆಗಳನ್ನು ಜ್ಯೋತಿರಾವ್ ಓದಿದ. ಯೂರೋಪಿನಲ್ಲಿ ಮತ ಸಂಸ್ಥೆಗಳಲ್ಲಿ ಮೋಸ ಅನ್ಯಾಯ ತುಂಬಿದಾಗ ಮಾರ್ಟಿನ ಲೂಥರ‍್ ಎಂಬಾತ ಸಿಡಿದೆದ್ದಿದ್ದ. ಆತನ ಜೀವನದ ಕಥೆಯೂ ಜ್ಯೋತಿರಾವ್ ನ ಮನಸ್ಸನ್ನು ಗೆದ್ದಿತ್ತು. ಅವನ ಮನಸ್ಸಿನ ಮೇಲೆ ತಂದೆಯ ಮಾತುಗಳು ಯಾವ ಪರಿಣಾಮವನ್ನೂ ಬೀರಲಿಲ್ಲ. ಮನಸ್ಸು ಹೋರಾಟಕ್ಕೆ ಎಳೆಯುತ್ತಿತ್ತು. ಆತ ಒಂದು ಗೊತ್ತಾದ ಜೀವನದ ರೀತಿಯನ್ನು ರೂಪಿಸಿಕೊಂಡ. ಮನುಷ್ಯನ ಗುರಿ ಅವನ ಜೀವನವನ್ನು ರೂಪಿಸುತ್ತದೆ. ಗುರಿ ದೊಡ್ಡದಾದಷ್ಟೂ ಬದುಕು ದೊಡ್ಡದಾಗುತ್ತದೆ.

ಜ್ಯೋತಿರಾವ್ ವಿದ್ಯಾಭ್ಯಾಸವನ್ನು ಮುಗಿಸಿ ಜೀವನಕ್ಕೆ ಕಾಲಿಡುತ್ತಿದ್ದ ದಿನಗಳು ಭಾರತದಲ್ಲೂ ಹೊರದೇಶಗಳಲ್ಲೂ ಬಹು ಮುಖ್ಯ ಕಾಲ. ಕಾರ್ಲ್ ಮಾರ್ಕ್ಸ್ ಎಂಬಾತ ಸಮತಾವಾದ (ಕಮ್ಯೂನಿಸಂ) ವನ್ನು ವಿವರಿಸುತ್ತಿದ್ದ. ಅಮೇರಿಕದಲ್ಲಿ ಹೆಂಗಸರಿಗೆ ಇನ್ನೂ ಹೆಚ್ಚು ಸ್ವಾತಂತ್ರ‍್ಯವಿರಬೇಕು, ಹಕ್ಕುಗಳು ದೊರೆಯಬೇಕು ಎಂದು ಚಳುವಳಿ ಪ್ರಾರಂಭವಾಗಿತ್ತು. ಭಾರತದಲ್ಲಿ ಪಾಶ್ಚಾತ್ಯ ವಿದ್ಯಾಭ್ಯಾಸದಿಂದ ಜನರಲ್ಲಿ ಎಚ್ಚರ ಉಂಟಾಗುತ್ತಿತ್ತು. ಸ್ವಾತಂತ್ರ‍್ಯ, ಸಮಾನತೆ ಇವನ್ನು ಕುರಿತು ಜನ ಹೆಚ್ಚು ಯೋಚಿಸುವಂತೆ ಆಯಿತು.

ರಾಜಕೀಯ ಬದಲಾವಣೆಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದವು. ಮಹಾರಾಷ್ಟ್ರದಲ್ಲಿ ಹೊಸ ನಾಯಕತ್ವ ಪ್ರಭಾವ ಬೆಳೆಸುತ್ತಿತ್ತು. ಬ್ರಿಟಿಷರ ಆಡಳಿತ ಮತ್ತು ಪಾಶ್ಚಿಮಾತ್ಯರ ಶಿಕ್ಷಣ ಮರಾಠರ ಸಾಮಾಜಿಕ ಮತ್ತು ರಾಜಕಾರಣದ ಮೇಲೆ ತಮ್ಮ ಪ್ರಭಾವ ಬೀರಿದ್ದವು. ಹಿಂದುಗಳಲ್ಲಿ ಹೊಸ ಜನಾಂಗದ ಸೃಷ್ಟಿಯಾಗುತ್ತಿತ್ತು. ವಿದ್ವಾಂಸರು, ದೇಶಪ್ರೇಮಿಗಳು, ಸಮಾಜ ಸುಧಾರಕರು ಹುಟ್ಟಿಕೊಂಡರು.

ಗಾಳಿ ಮೊದಲು ಮುಟ್ಟುವುದು ದೊಡ್ಡ ಮರಗಳನ್ನು, ಮಹಾರಾಷ್ಡ್ರದಲ್ಲಿ ಪಾಶ್ಚಿಮಾತ್ಯರ ಶಿಕ್ಷಣ ಮತ್ತು ಅವರ ವಿಚಾರಗಳು ಮೊದಲು ಪ್ರಭಾವಿಸಿದ್ದು ಅಲ್ಲಿನ ದೊಡ್ಡ ದೊಡ್ಡ ನಾಯಕರನ್ನು. ಅವರು ಪ್ರಗತಿಪರ ಅಭಿಪ್ರಾಯಗಳಿಗೆ ಮನ್ನಣೆ ನೀಡಿದರು. ಇವರೆಲ್ಲರೂ ಮಧ್ಯಮ ವರ್ಗಕ್ಕೆ ಸೇರಿದವರು. ಅವರು ತಮ್ಮ ಯೋಗ್ಯತೆ ಮತ್ತು ಬುದ್ಧಿಶಕ್ತಿಗಳಿಂದ ಪ್ರಸಿದ್ಧಿಗೆ ಬಂದಿದ್ದರು.

ಜ್ಯೋತಿರಾವ್ ಮಾತು ಬೇರೆ. ಆತ ಅವರಷ್ಟು ಕಲಿತವನಲ್ಲ. ಆದರೆ ಆತನಲ್ಲಿ ಧೈರ್ಯ ಮತ್ತು ಸ್ಥೈರ್ಯಗಳಿದ್ದವು. ಆತ ಬಿಚ್ಚು ಮಾತಿನವನಾಗಿದ್ದು. ಆತನಲ್ಲಿ ತ್ಯಾಗ ಮನೋಭಾವವಿತ್ತು. ಈತನಿಂದ ಒಂದು ಹೊಸ ಯುಗವೇ ಪ್ರಾರಂಭವಾಗಲಿತ್ತು.

ಜಲಪಾತಗಳಂತೆ ಧೀರನಾದವನು ತನ್ನ ಪಾತ್ರವನ್ನು ತಾನೇ ನಿರ್ಮಿಸಿಕೊಳ್ಳುತ್ತಾನೆ. ಸಾಮಾಜಿಕ ದೃಷ್ಟಿಯಿಂದ ಕೆಳದರ್ಜೆಯಿಂದ ಬಂದ ಜ್ಯೋತಿರಾವ್ ಮಹಾರಾಷ್ಟ್ರಕ್ಕೆ ಒಂದು ಹೊಸ ಬಗೆಯ ನಾಯಕತ್ವವನ್ನು ಒದಗಿಸಿಕೊಟ್ಟರು.

ಪರಿವರ್ತನೆ

ಜ್ಯೋತಿರಾವ್ ಮಹಾರಾಷ್ಟ್ರದಲ್ಲಿ ಸಮಾಜ ಸುಧಾರಣೆಯನ್ನು ಪ್ರಾರಂಭ ಮಾಡಿದರು. ಅವರು ಹಿಂದೂ ಮಹಿಳೆಯರನ್ನು ಮೇಲೆತ್ತುವ ತೀರ್ಮಾನ ಕೈಕೊಂಡರು. ಮಹಿಳೆಯರನ್ನು ಮತ್ತು ಶೂದ್ರರನ್ನು ಶಿಕ್ಷಣದಿಂದ ದೂರ ಇಡಲಾಗಿತ್ತು. ಅಜ್ಞಾನವೇ ಕತ್ತಲೆ, ಜ್ಞಾನವೇ ಬೆಳಕು. ಜ್ಯೋತಿಬಾ ಮಹಿಳೆಯರಿಯಾಗಿ ಮತ್ತು ಶೂದ್ರರಿಗಾಗಿ ಜ್ಞಾನದ ಬಾಗಿಲನ್ನು ತೆರೆದರು. ಪೂನಾದಲ್ಲಿ ಮಹಿಳೆಯರಿಗಾಗಿ ಒಂದು ಶಾಲೆ ಸ್ಥಾಪಿಸಿದರು. ಅಲ್ಲಿ ಓದುವುದನ್ನು ಹಾಗೂ ಗಣಿತ ಮತ್ತು ವ್ಯಾಕರಣಗಳನ್ನು ಹೇಳಿಕೊಡಲು ತೊಡಗಿದರು. ಉತ್ತಮ ವರ್ಗದವರು ಇದನ್ನು ಸಹಿಸಲಿಲ್ಲ. ಅವರು ಜ್ಯೋತಿರಾವ್ ಅವರನ್ನು ಬೆದರಿಸಿದರು.

ಅವರ ಬೆದರಿಕೆಗೆ ಜ್ಯೋತಿರಾವ್ ಸೊಪ್ಪು ಹಾಕಲಿಲ್ಲ. ಅವರಿಗೆ ಬೇರೆ ಉಪಾಧ್ಯಾಯರ ಸಹಾಯ ಸಿಕ್ಕದಿದ್ದಾಗ ತಮ್ಮ ಹೆಂಡತಿಯ ಸಹಾಯವನ್ನೇ ಪಡೆದರು. ವಿದ್ವಾಂಸ ಬ್ರಾಹ್ಮಣರು ಸಾವಿತ್ರಿಬಾಯಿಗೆ ಕೊಡಬಾರದ ಹಿಂಸೆ ಕೊಟ್ಟರು. ಆಕೆ ಹಿಂಸೆಯನ್ನು ಸಹನೆಯಿಂದ ಸಹಿಸಿಕೊಂಡರು. ಜ್ಯೋತಿರಾವ್ ಬಂಡಾಯಗಾರನಾಗಬೇಕಾಯಿತು. ಅವರು ಎದೆಗುಂದಲಿಲ್ಲ. ತಮ್ಮ ಕಾಯಕವನ್ನು ಮುಂದುವರಿಸಿದರು.

ಆಚಾರವಂತರಿಗೆ ಹೇಗಾದರೂ ಜ್ಯೋತಿರಾವ್ ನನ್ನು ಮುರಿಯಬೇಕು ಎಂದು ಹಠ. ಜ್ಯೋತಿರಾವ್ ಯಾವ ಹಿಂಸೆಗಳಿಗೂ ಬಗ್ಗಲಿಲ್ಲ. ಅವರ ಶತ್ರುಗಳು ಮುದುಕರಾದ ಅವರ ತಂದೆಯನ್ನು ಬೆದರಿಸಿದರು. ಜ್ಯೋತಿರಾವ್ ನ ಕೆಲಸಗಳಿಂದ ಇಡೀ ಸಂಸಾರಕ್ಕೆ ಕುತ್ತು ಎಂದು ಹೆದರಿಸಿದರು. ಅವರ ಒತ್ತಡದಿಂದಾಗಿ ಗೋವಿಂದರಾವ್ ಜ್ಯೋತಿರಾವ್  ಮತ್ತು ಸಾವಿತ್ರಿಬಾಯಿಯವರನ್ನು ಮನೆಯಿಂದ ಹೊರಕ್ಕೆ ಅಟ್ಟಿದರು. ಗಂಡಹೆಂಡತಿಯರು ತಮ್ಮ ದಾರಿ ಹಿಡಿದರು. ಐದು ಆರು ತಿಂಗಳುಗಳವರೆಗೆ ಶಾಲೆಗಾಗಿ ದುಡಿದರು. ಶಾಲೆಯನ್ನು ಮುಂದೆ ನಡೆಸಲಾಗಲಿಲ್ಲ. ಅದನ್ನು ಬೇರೆಯವರಿಗೆ ವಹಿಸಿಕೊಟ್ಟರು.

ಬಡವರ ಬಂಧು

ಕೆಲಕಾಲಾ ನಂತರ ಫುಲೆಯವರ ಹೆಂಡತಿಯಾದ ಸಾವಿತ್ರಿಬಾಯಿ ಶಿಕ್ಷಣವನ್ನು ಪಡೆದರು. ಆಗ ಜ್ಯೋತಿಬಾ ಶಾಲೆಯನ್ನು ಪೇಲ್ ಜೂನಾ ಗಂಜ್ ನಲ್ಲಿ ಪುನಃ ಪ್ರಾರಂಭಿಸಿದರು. ಸಾಕಷ್ಟು ಮಕ್ಕಳು ಶಾಲೆಯನ್ನು ಸೇರಿದರು. ಗೋವಂಡೆಯವರು ಮಕ್ಕಳಿಗೆ ಸ್ಲೇಟುಗಳನ್ನು ಕೊಡಿಸಿದುದಲ್ಲದೆ ತಿಂಗಳಿಗೆ ಎರಡು ರೂಪಾಯಿ ವಂತಿಗೆ ಕೊಡತೊಡಗಿದರು. ಜ್ಯೋತಿರಾವ್ ಕುಡಿಯುವ ನೀರನ್ನು ಒದಗಿಸಿದರು. ಬಟ್ಟೆಗಳನ್ನು ಕೊಡಿಸಿದರು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಾಗ ಶಾಲೆಯನ್ನು ಅವರು ವಿಸ್ತರಿಸಬೇಕಾಯಿತು. ೧೮೫೧ರಲ್ಲಿ ಬುಧವಾರಪೇಟೆಯಲ್ಲಿ ಮತ್ತೊಂದು ಶಾಲೆಯನ್ನು ತೆರೆದರು. ಶಾಲೆಗಳ ಮೂಲಕ ಸಾಕಷ್ಟು ಸಾಮಾಜಿಕ ಬದಲಾವಣೆ ಆಗತೊಡಗಿತ್ತು.

ಜಯಗೀತೆ

ಜ್ಯೋತಿರಾವ್ ಅವರ ಹೆಸರು ಮಹಾರಾಷ್ಟ್ರದ ಮನೆಮಾತಾಯಿತು. ಅವರು ಮಹಿಳೆಯರ ಮತ್ತು ಕೆಳವರ್ಗದವರ ಮುಂದಾಳು  ಎನಿಸಿಕೊಂಡರು. ಮೇಜರ‍್ ಕ್ಯಾಂಡಿ, ಸರ‍್ ಎರ‍್ಸ್ಕಿನ್ ಪೆರಿ, ಕರ್ನಲ್ ಮೆಡೊಪಟ್ವಿಲರ‍್ ಜ್ಯೋತಿರಾವ್ ರವರನ್ನು ಕೊಂಡಾಡಿದರು. ಅನೇಕ ಜನ ಬ್ರಾಹ್ಮಣರು ಅವರನ್ನು ಹೊಗಳಿದರು. ಬಲ್ಲಾಚಾರ್ಯ ಎಂಬ ಸರಕಾರಿ ನೌಕರರೊಬ್ಬರು ಶಾಲೆಗಾಗಿ ತಮ್ಮ ಒಂದು ತಿಂಗಳ ಸಂಬಳವನ್ನು ದಾನ ಮಾಡಿದರು. ಅನೇಕ ಪತ್ರಿಕೆಗಳವರು ಜ್ಯೋತಿರಾವ್ ರ ಕೆಲಸವನ್ನು ಮೆಚ್ಚಿಕೊಂಡು ಬರೆದರು.

ಸ್ಥಳೀಯ ಭಾಷಾ ಶಾಲೆಗಳು ಅಷ್ಟು ಚೆನ್ನಾಗಿ ನಡೆಯುತ್ತಿರಲಿಲ್ಲ. ಅದಕ್ಕಾಗಿ ಜ್ಯೋತಿರಾವ್ ಶ್ರಮಿಸಿದರು. ಎಲ್ಲಾ ಮೂಲಗಳನ್ನು ಹುಡುಕಿದರು. ಅನೇಕ ಜನ ದಾನಿಗಳನ್ನು ಪತ್ತೆ ಹಚ್ಚಿದರು.

ಜ್ಯೋತಿರಾವ್ ೧೮೫೨ರಲ್ಲಿ ಸ್ಥಾಪಿಸಿದ ಶಾಲೆಗೆ ವಿಶಾಲ ತಳಹದಿ ಹಾಕಿದ್ದರು. ಇದನ್ನು ಕುರಿತು ಪೂನಾ ಅಬ್ಸರ‍್ ವರ‍್ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿತು. ಮೇಜರ‍್ ಕ್ಯಾಂಡಿ ಈ ಸಂಸ್ಥೆಗೆ ಅನುದಾನ ಕೊಡಬೇಕೆಂದು ಸಲಹೆ ಮಾಡಿದರು.  ಮಹಂಗರು, ದೇಡರು, ಮಾಂಗರು ಮತ್ತು ಚಮ್ಮಾರವರು ಈ ಜಾತಿಯವರಿಗೆ ಸಮಾಜದಲ್ಲಿ ತುಂಬ ಕೀಳು ಸ್ಥಾನವಿತ್ತು. ಅವರನ್ನು ಮೇಲಿನ ಜಾತಿಯವರು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಇಂತಹ ದಲಿತರಿಗಾಗಿ ಶಾಲೆಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದರು ಜ್ಯೋತಿರಾವ್. ತಾವು ಸ್ಥಾಪಿಸಿದ ಶಾಲೆಗಳಿಗಾಗಿ ಮೊಟ್ಟಮೊದಲನೆಯ ಪುಸ್ತಕ ಭಂಡಾರವನ್ನು ತೆರೆದರು. ಜ್ಯೋತಿರಾವ್ ಕೇವಲ ಒಂದು ಶಾಲೆಯ ಶಿಕ್ಷರಾಗಿರದೆ ಇಡೀ ಸಾಜದ ಶಿಕ್ಷಕರಾಗಿದ್ದರು. ಸರ್ಕಾರಿ ಶಾಲೆಗಳಿಗಿಂತ ಇವರ ಶಾಲೆಗಳು ಉತ್ತಮವಾಗಿದ್ದವು. ಮಹಿಳೆಯರ ಶಿಕ್ಷಣಕ್ಕೆ ಮಾಡಿದ ಸೇವೆಗಾಗಿ ಬ್ರಿಟಿಷ್ ಸರ್ಕಾರ ಜ್ಯೋತಿರಾವ್ ಅವರಿಗೆ ೨೦೦ ರೂಪಾಯಿ ಬೆಲೆಬಾಳುವ ಶಾಲನ್ನು ಹೊದಿಸಿ ಸನ್ಮಾನಿಸಿತು. ’ಬಾಂಬೆ ಗಾರ್ಡಿಯನ್’ ಪತ್ರಿಕೆ ಜ್ಯೋತಿಬಾ ಅವರ ಸೇವೆಯನ್ನು ಕೊಂಡಾಡಿತು. ವಿಚಾರವಂತರೆಲ್ಲ ಅವರ ಸೇವೆಯನ್ನು ಮೆಚ್ಚಿಕೊಂಡಿದ್ದರು.

ಸಮಾನತೆ

ಪಾಶ್ಚಿಮಾತ್ಯ ಶಿಕ್ಷಣ ಭಾರತದಲ್ಲಿ ಬೇರು ಬಿಟ್ಟಿತ್ತು. ಪಶ್ಚಿಮ ದೇಶಗಳ ಶಿಕ್ಷಣ, ಚರಿತ್ರೆ ಇವೆಲ್ಲ ಪರಿಚಯ ಆದಂತೆ ಭಾರತದಲ್ಲಿ ಹೊಸ ವಿಚಾರರೀತಿ ಪ್ರಬಲವಾಗುತ್ತಿತ್ತು. ದೇಶದಲ್ಲಿ ಎಲ್ಲರಿಗೂ ವಿದ್ಯಾಭ್ಯಾಸ ಪಡೆಯಲು ಒಂದೇ ರೀತಿಯ ಹಕ್ಕಿದೆ, ಎಲ್ಲರಿಗೂ ಸಮಾನ ಅವಕಾಶ ಇರಬೇಕು ಎಂಬ ಅಭಿಪ್ರಾಯ ಬೆಳೆಯುತ್ತಿತ್ತು. ಜ್ಯೋತಿರಾವ್ ಸಾಮಾಜಿಕ ಸಮಾನತೆಯ ಕ್ರಾಂತಿಯ ಸಂಕೇತವಾಗಿದ್ದರು. ಸಮಾನತೆಯ ಮಾತು ಎಲ್ಲೆಲ್ಲೂ ಕೇಳಿ ಬರತೊಡಗಿತು. ಈ ಒಂದು ಕೆಲಸ ಮಹಿಳೆಯರ ಮತ್ತು ಶೂದ್ರರಿಗೆ ಶಿಕ್ಷಣ ನೀಡುವ ಮೂಲಕ ನಡೆದಿತ್ತು. ಇಂತಹ ಶಾಲೆಗಳನ್ನು ಗವರ್ನರುಗಳು ಹಾಗೂ ನ್ಯಾಯಾಧೀಶರುಗಳು ಗಮನಿಸತೊಡಗಿದರು. ನಾಡಿನ ಪ್ರಮುಖರೆಲ್ಲರೂ ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಮನಸ್ಸು ಮಾಡಿದರು. ಇದರಿಂದ ಸಾಮಾಜಿಕವಾಗಿ ಕೆಳಮಟ್ಟದವರೂ ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೆಚ್ಚು ಸಾಧ್ಯವಾಯಿತು.

ಸಮಾಜದ ಕೆಳಮಟ್ಟದ ಜನರ ಏಳಿಗೆಗಾಗಿ ಹೆಚ್ಚು ಜನ ದುಡಿಯತೊಡಗಿದರು. ಅದುವರೆಗೆ ರೈತರನ್ನು, ಕೂಲಿನಾಲಿ ಮಾಡುವವರನ್ನು ಕೇಳುವವರೇ ಇರಲಿಲ್ಲ. ಆದರೆ ಅವರ ದುಡಿಮೆಯಿಂದ ದೇಶದ ಬೊಕ್ಕಸ ಮಾತ್ರ ತುಂಬುತ್ತಿತ್ತು. ೧೮೨೧ರಲ್ಲಿ ಸ್ಥಾಪಿತವಾದ ಪೂನಾ ಹಿಂದು ಕಾಲೇಜಿನಲ್ಲಿ ಓದುವ ಅವಕಾಶ ಬ್ರಾಹ್ಮಣರಿಗೆ ಮಾತ್ರ ಇತ್ತು. ೧೮೩೮ರಲ್ಲಿ ಸರ್ವರಿಗೂ ಅಲ್ಲಿ ಅವಕಾಶ ಕೊಡಲಾಯಿತು. ಆದರೆ ವಿದ್ಯಾರ್ಥಿವೇತನಗಳು ಎಲ್ಲರಿಗೂ ಸಿಕ್ಕುತ್ತಿರಲಿಲ್ಲ. ಈ ಅಂಶವನ್ನು ’ಬಾಂಬೆ ಟೈಮ್ಸ್’ ಪತ್ರಿಕೆ ಪ್ರಕಟಪಡಿಸಿದ ಕೂಡಲೇ ಆಗ್ರಾದ ಕಾಲೇಜಿನವರು ವಿದ್ಯಾರ್ಥಿವೇತನಗಳು ದೊರೆಯುವಂತೆ ಮಾಡಿದರು. ಅತಿ ಶೂದ್ರರಿಗೆ ಓದುವ ಅವಕಾಶವೇ ಇರಲಿಲ್ಲ. ಜ್ಯೋತಿರಾವ್ ಮೊದಲಾದವರು ಎಲ್ಲರಿಗೂ ಶಿಕ್ಷಣದಲ್ಲಿ ಸೌಲಭ್ಯಗಳಿರಬೇಕೆಂದು ಹಾತೊರೆಯುತ್ತಿದ್ದರು. ಕೆಳವರ್ಗದವರ ಶಿಕ್ಷಣದಲ್ಲಿ ಸರ್ಕಾರಕ್ಕೆ ಆಸಕ್ತಿಯಿರಲಿಲ್ಲ. ಹೋರಾಟ ನಡೆದೇ ಇತ್ತು. ಇನ್ನೂ ಸಮಾನತೆ ದೊರೆತಿರಲಿಲ್ಲ.

ಕೊಲೆಗೆ ಸನ್ನಾಹ

ಜ್ಯೋತಿರಾವ್ ಅವರು ಸ್ಥಾಪಿಸಿದ ಶಾಲೆಗಳು ಕ್ರಮೇಣ ಪ್ರಗತಿ ತೋರಿಸಿದವು. ಅವರು ಶಾಲೆಗೆ ಬೇಕಾದ ಎಲ್ಲ ವಸ್ತುಗಳನ್ನು ಒದಗಿಸಿದರು.

ಜ್ಯೋತಿರಾವ್ ಶಾಲೆಯ ಲೆಕ್ಕಪತ್ರಗಳನ್ನು ಚೆನ್ನಾಗಿ ಇಟ್ಟಿದ್ದರು. ಶಾಲೆಗಾಗಿ ಅನೇಕ ಜನ ಯೂರೋಪಿಯನ್ನರು ದೇಣಿಗೆ ನೀಡಿದ್ದರು. ಹಣ ಸಾಕಾಗದೆ ಪ್ರಗತಿ ಸಾಕಷ್ಟು ಆಗಿರಲಿಲ್ಲ. ಅನೇಕ ಜನ ಅಧಿಕಾರಿಗಳು ಆಗಾಗ್ಗೆ ಶಾಲೆಗಳಿಗೆ ಭೇಟಿ ಕೊಡುತ್ತಿದ್ದರು. ಜ್ಯೋತಿರಾವ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಹಿಂದುಳಿದ ಜಾತಿಗಳವರ ಹಣಕಾಸಿನ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಆದುದರಿಂದ ಶಾಲೆಯ ನಿರ್ವಹಣೆಯನ್ನು ಒಂದು ಸಮಿತಿಗೆ ವಹಿಸಿಬಿಟ್ಟರು. ತಾವು ಕ್ರಮೇಣ ಹಿಂದಕ್ಕೆ ಸರಿದರು.

ಜ್ಯೋತಿರಾವ್ ತಮ್ಮ ಜೀವನಕ್ಕಾಗಿ ಹಣ ಸಂಪಾದಿಸಬೇಕಾಗಿತ್ತು. ಸ್ಕಾಟಿಷ್ ಮಿಷನರಿ ಒಂದರಲ್ಲಿ ಜ್ಯೋತಿರಾವ್ ಕೆಲಸಕ್ಕೆ ಸೇರಿಕೊಂಡರು. ಜೊತೆಗೆ ಒಂದು ಹೊಲಿಗೆ ಅಂಗಡಿಯನ್ನು ಇಟ್ಟುಕೊಂಡಿದ್ದರು.  ಇದಲ್ಲದೆ ವಯಸ್ಕರಿಗಾಗಿ ರಾತ್ರಿ ಶಾಲೆಯನ್ನು  ನಡೆಸುತ್ತಿದ್ದರು.

ಜ್ಯೋತಿರಾವ್ ಅವರ ಕಾರ್ಯಕ್ರಮಗಳು ಎಲ್ಲರನ್ನೂ ಚಕಿತಗೊಳಿಸಿದವು. ಮಹಿಳಾ ಶಿಕ್ಷಣ, ದಲಿತರ ಶಿಕ್ಷಣ, ಮಿಷನರಿ ಶಾಲೆಗಳಲ್ಲಿ ಕೆಲಸ ಮಾಡುವಿಕೆ ಹೀಗೆ ಅವರ ಕಾರ್ಯಕ್ರಮಗಳು ಹಲವಾರು. ಹಿಂದಿನ ಸಂಪ್ರದಾಯಗಳಿಗೆ ಇದೆಲ್ಲ ವಿರುದ್ಧ. ಹೀಗೆ ವಿರುದ್ಧವಾಗಿ ನಡೆದವರನ್ನು ಅಂದಿನ ಸಮಾಜ ಪುರಸ್ಕರಿಸುತ್ತಿರಲಿಲ್ಲ. ಪೂನಾದ ಬ್ರಾಹ್ಮಣರಿಗೆ ಇವರ ಮೇಲೆ ಅತೀವ ಕೋಪವುಂಟಾಯಿತು. ಅವರ ಕೊಲೆಗೆ ಸಂಚು ಮಾಡಿದರು. ರೋಡ್ ಮತ್ತು ನಾಮದೇವ್ ಕುಂಬಾರ ಎಂಬುವವರನ್ನು ಜ್ಯೋತಿರಾವ್ ಅವರ ಕೊಲೆ ಮಾಡುವುದಕ್ಕೆ ಹಣ ಕೊಟ್ಟು ನೇಮಿಸಿದರು.

ಆ ಕೊಲೆಗಡುಕರು ಖಡ್ಗಗಳನ್ನು ಹಿಡಿದು ಮಧ್ಯರಾತ್ರಿಯಲ್ಲಿ ಜ್ಯೋತಿರಾವ್ ಅವರ ಮನೆಯನ್ನು ಪ್ರವೇಶಿಸಿದರು. ಜ್ಯೋತಿರಾವ್ ಹಾಸಿಗೆಯಲ್ಲಿ ಮಗ್ಗಲು  ತಿರುಗಿದರು. ಒಳಗೆ ಯಾರೋ ಪ್ರವೇಶಿಸಿದ ಸದ್ದು ಕೇಳಿಸಿತು. ಹಾಸಿಗೆ ಮೇಲೆ  ಕುಳಿತುಕೊಂಡರು ಜ್ಯೋತಿರಾವ್. ದೀಪದ ಬೆಳಕನ್ನು ಹೆಚ್ಚು ಮಾಡಿದರು. ಬಂದಿದ್ದ ಇಬ್ಬರು ’ನಿಮ್ಮನ್ನು ಮುಗಿಸಿಬಿಡುತ್ತೇವೆ’ ಎಂದು ಬಡಬಡಿಸಿದರು. ’ಸರಿ, ನನ್ನನ್ನು ಕೊಂದರೆ ನಿಮಗೆ ಪ್ರಯೋಜನವಾಗುವುದಾದರೆ ಕೊಂದುಬಿಡಿ’ ಎಂದು ತಲೆ ಅಲ್ಲಾಡಿಸಿದರು ಜ್ಯೋತಿರಾವ್. ಪರಮಾತ್ಮ ಕೊಲೆಗಡುಕರಿಗೆ ಬುದ್ಧಿಕೊಟ್ಟಿರಬೇಕು. ಅವರು ಜ್ಯೋತಿರಾವ್ ಅವರ ಶಿಷ್ಯರಾದರು. ರಾತ್ರಿ ಶಾಲೆಯಲ್ಲಿ ಕಲಿಯತೊಡಗಿದರು. ರೋಡ್ ಅವರ ಅಂಗರಕ್ಷಕನಾದನು, ಕುಂಬಾರ‍್ ಮುಂದೆ ಒಬ್ಬ ಪಂಡಿತನಾದನು. ಮುಂದೆ ಸತ್ಯಶೋಧಕ ಸಮಾಜದ ಪ್ರಮುಖರಲ್ಲೊಬ್ಬನಾದನು.

ಬ್ರಿಟಿಷ್ ಸರ್ಕಾರವನ್ನು ಉರುಳಿಸುವುದಕ್ಕಾಗಿ ೧೮೫೭ರಲ್ಲಿ ಭಾರತದಲ್ಲಿ ಪ್ರಥಮ ಸ್ವಾತಂತ್ರ‍್ಯ ಯುದ್ಧ ಪ್ರಾರಂಭವಾಯಿತು. ಮಹಾರಾಷ್ಟ್ರದ ಅನೇಕ ನಾಯಕರು ಇದರಲ್ಲಿ ಮುಂದಾದರು. ಬ್ರಿಟಿಷರ ಆಡಳಿತ ಕೊನೆಗೊಂಡಿತೆಂದೇ ತಿಳಿದುಕೊಂಡರು.

ಜ್ಯೋತಿರಾವ್ ಅವರ ದೃಷ್ಟಿಯಲ್ಲಿ ಆಗ ಆಡಳಿತ ನಡೆಸುತ್ತಿದ್ದ ಸರ್ಕಾರವೇ ಇರಬೇಕೆನ್ನಿಸಿತು. ಕಾರಣ ಅದು ಸಾಮಾಜಿಕ ಪರಿವರ್ತನೆ ಮತ್ತು ಪ್ರಗತಿಗೆ ಸಹಾಯಕವಾಗಿತ್ತು. ಅವರು ಸ್ವಾತಂತ್ರ‍್ಯ ಚಳುವಳಿಯಲ್ಲಿ ಆಸಕ್ತಿ ವಹಿಸಲಿಲ್ಲ. ಆದರೆ ಜ್ಯೋತಿರಾವ್ ಬ್ರಿಟಿಷರಿಗೆ ಸಹಾಯವನ್ನೇನೂ ಮಾಡಲಿಲ್ಲ. ಒಬ್ಬರೆ ಒಂಟಿಯಾಗಿದ್ದರು.

ಶಾಲೆಗಳಿಗೆ ಬರುವ ಸಹಾಯ ಕಡಿಮೆಯಾಯಿತು. ಸ್ಥಳೀಕರು ಸಹಾಯ ನಿಲ್ಲಿಸಿದ್ದರು. ಯೂರೋಪಿಯನ್ನರೂ ಸಹಾಯಕ್ಕೆ ಬರಲಿಲ್ಲ. ಇದರಿಂದ ಶಾಲಾ ಕಟ್ಟಡವನ್ನು ಕಟ್ಟಲಾಗಲಿಲ್ಲ. ಜ್ಯೋತಿರಾಯರು ಬೇಸರದಿಂದ ಕ್ರಮೇಣ ಎಲ್ಲ ಸಂಸ್ಥೆಗಳಿಂದ ದೂರ ಸರಿದರು.

ವಿಧವೆಯರ ಹಾಡು

ಜ್ಯೋತಿರಾವ್ ಮತ್ತೊಂದು ಪ್ರಮುಖ ಸಾಮಾಜಿಕ ವಿಷಯವನ್ನು ಕೈಗೆತ್ತಿಕೊಂಡರು. ಕುರುಡು ನಂಬಿಕೆಗಳ ವಿರುದ್ಧ ಸಮರ ಸಾರಿದರು. ಸುಧಾರಣೆಗಳ ಬಾಗಿಲು ತೆರೆದರು. ಕಲಿತ ಜನರ ಕ್ರೂರ ಸಂಪ್ರದಾಯಗಳನ್ನು ಬಿಡತೊಡಗಿದರು. ಸತಿ ಪದ್ಧತಿ (ಗಂಡ ಸತ್ತರೆ ಅವನೊಡನೆ ಹೆಂಡತಿಯನ್ನು ಸುಡುವುದು) ಅಂತ್ಯವಾಯಿತು. ಆದರೂ ಇನ್ನೂ ಅನೇಕ ಮೂಢನಂಬಿಕೆಗಳಿಗೆ ಉತ್ತರ ಕಂಡುಹಿಡಿಯಬೇಕಾಗಿತ್ತು. ಖಾಯಿಲೆಯಾದವರನ್ನು ಗಂಗಾನದಿ ದಂಡೆಯ ಮೇಲೆ ಇಡುತ್ತಿದ್ದುದು ಸಂಬಂಧಿಕರ ಪ್ರೀತಿಯ ಗುರುತಾಗಿತ್ತಂತೆ. ಇದರಿಂದ ಅನೇಕ ಕೊಲೆಗಳಾಗುತ್ತಿದ್ದವಂತೆ. ಬಡವರಲ್ಲಿ ಶಿಶುಹತ್ಯೆಯೂ ರೂಢಿಯಲ್ಲಿತ್ತಂತೆ. ಮೂಢನಂಬಿಕೆಯಿಂದ ಕೆಲವು ಜನ ಹೆಣ್ಣುಮಕ್ಕಳು ಅಕ್ಕಿ ಅಥವಾ ಗೋಧಿ ಕಾಳುಗಳನ್ನು ಒಂದು ಲಕ್ಷದವರೆಗೆ ಎಣಿಸಿ ದೇವರಿಗೆ ಕಾಣಿಕೆ ಸಲ್ಲಿಸುತ್ತಿದ್ದರಂತೆ. ವಿವಿಧ ಬಗೆಯ ಬತ್ತಿಗಳನ್ನು ದೇವರಿಗೆ ಅರ್ಪಿಸುತ್ತಿದ್ದರಂತೆ. ಇವುಗಳೆಲ್ಲವನ್ನೂ ಜ್ಯೋತಿರಾವ್ ವಿರೋಧಿಸಿದರು.

ವಿಧವಾ ವಿವಾಹ ಒಂದು ದೊಡ್ಡ ಸಮಸ್ಯೆಯಾಗಿಯೇ ಇತ್ತು. ಸತಿ ನಿಂತಿದ್ದರೂ ಸಹ ವಿಧವೆಯರು ಅನೇಕ ಬಗೆಯ ಸಂಕಟಗಳನ್ನು ಅನುಭವಿಸುತ್ತಿದ್ದರು. ಅವರನ್ನು ಸಮಾಜ ತೀರ ತಿರಸ್ಕಾರದಿಂದ ಕಾಣುತ್ತಿತ್ತು. ವಿಧವೆ ತಲೆ ಬೋಳಿಸಿಕೊಳ್ಳಬೇಕಾಗಿತ್ತು. ಕುಂಕುಮ, ಬಳೆ, ಧರಿಸುವಂತಿರಲಿಲ್ಲ. ವಿಧವರೆಯರ ದರ್ಶನ ಅಪಶಕುನ ಎಂದು ಪರಿಗಣಿಸಲಾಗುತ್ತಿತ್ತು. ಬೆಳಗಾದಾಗ ಆಕೆಯ ದರ್ಶನವಾದರೆ  ಯಾವ ಕೆಲಸವೂ ಆಗುವುದಿಲ್ಲವೆಂದು ತಿಳಿದಿದ್ದರು. ಆಕೆಯನ್ನು ಅಪರಿಶುದ್ಧಳಂತೆ ಕಾಣುತ್ತಿದ್ದರು. ಆಕೆ ಒಂದು ಮೂಲೆಯಲ್ಲಿ ಕುಳಿತಿರಬೇಕಾಗಿತ್ತು. ಒಡವೆಗಳನ್ನು ಹಾಕಿಕೊಳ್ಳುವಂತಿರಲಿಲ್ಲ. ಒಳ್ಳೆ ಬಟ್ಟೆ ಧರಿಸಿಕೊಳ್ಳುವಂತಿರಲಿಲ್ಲ. ಮದುವೆ ಸಮಾರಂಭಗಳಲ್ಲಿ ಭಾಗವಹಿಸುವಂತಿರಲಿಲ್ಲ. ಆದರೆ ಇತರಿಗಾಗಿ ಮೈಮುರಿದು ದುಡಿಯಬೇಕಾಗಿತ್ತು.

ಜ್ಯೋತಿರಾವ್ ಅವರಿಗಾಗಿ ಮರುಗಿದರು. ವಿಧವಾ ವಿವಾಹಕ್ಕೆ ಪ್ರೋತ್ಸಾಹ ಕೊಟ್ಟರು. ಅವರಿಗಾಗಿ ಒಂದು ಅನಾಥಾಲಯವನ್ನು ಸ್ಥಾಪಿಸಿದರು. ಅದು ಚೆನ್ನಾಗಿ ನಡೆಯುತ್ತಿತ್ತು.

ಈ ಕಾಲದಲ್ಲಿ ಜ್ಯೋತಿರಾವ್ ಅವರ ತಂದೆಯವರು ತೀರಿಕೊಂಡರು. ಅವರ ತಿಥಿಯನ್ನು ಸಂಪ್ರದಾಯಕ್ಕೆ ಅನುಗುಣವಾಗಿ ಮಾಡಲಿಲ್ಲ. ತಮಗೆ ಸರಿ ಎಂದು ತೋರಿದ ರೀತಿಯಲ್ಲಿ ಮಾಡಿದರು. ಬಡವರಿಗೆ ನೆಂಟರಿಗೆ ಊಟ ಹಾಕಿದರು. ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಹಂಚಿದರು.

ಮೋಸವನ್ನು ಬಯಲಿಗೆಳೆದರು

ಸೇವೆಯೇ ಜ್ಯೋತಿರಾವ್ ಅವರ ಗುರಿಯಾಗಿತ್ತು. ಆದರೂ ತಮ್ಮ ಜೀವನಕ್ಕಾಗಿ ಒಂದು ಕೆಲಸವೆಂಬುದು ಬೇಡವೆ? ಆಗ ಖಡಕವಾಸ್ಲಾ ಕೆರೆಯ ನಿರ್ಮಾಣ ಆಗುತ್ತಿತ್ತು. ಜ್ಯೋತಿರಾವ್ ಅದಕ್ಕೆ ಕಲ್ಲುಗಳನ್ನು ಸರಬರಾಜು ಮಾಡಲು ತೊಡಗಿದರು. ಆಗ ಕೂಲಿಗಳ ಸಂಪರ್ಕ ದೊರೆಯಿತು. ಅವರನ್ನು ಒಂದುಗೂಡಿಸಿ ಅವರಿಗೆ ಹಿತವಚನಗಳನ್ನು ಹೇಳುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸ ಕುರಿತು ಮಾತನಾಡುತ್ತಿದ್ದರು. ಅವರ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವಂತೆ ಬುದ್ಧಿವಾದ ಹೇಳುತ್ತಿದ್ದರು.

ತಮ್ಮ ವಿರಾಮ ವೇಳೆಯಲ್ಲಿ ಜ್ಯೋತಿರಾವ್ ಮಹಾರಾಷ್ಟ್ರದ ಸಂತ ಕವಿಗಳ ಕೃತಿಗಳನ್ನು ಓದಿದರು. ಜ್ಯೋತಿರಾವ್ ವರ್ಣಾಶ್ರಮ (ಎಂದರೆ ಹಿಂದುಗಳನ್ನು ಬ್ರಾಹ್ಜಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ನಾಲ್ಕು ವರ್ಗಗಳಾಗಿ ವಿಂಗಡಿಸುವುದು) ಧರ್ಮವನ್ನು ಒಪ್ಪಲಿಲ್ಲ. ಅವರು ಒಳ್ಳೆಯ ರೀತಿಯಲ್ಲಿ ಬದುಕುವುದು ಮುಖ್ಯ. ಯಾವ ಜಾತಿಯಲ್ಲಿ ಹುಟ್ಟಿದೆವು ಎನ್ನುವುದು ಮುಖ್ಯವಲ್ಲ ಎಂದು ನಂಬಿದ್ದರು. ಇವರು ಕೆಳಜಾತಿಯವರೆಂದು ತಿರಸ್ಕಾರಕ್ಕೆ ಗುರಿಯಾಗಿದ್ದವರಿಗಾಗಿ ಬಾವಿ ತೋಡಿಸಿದರು. ಆಚಾರವಂತರನ್ನು ಇದು ಕೆಣಕಿತು. ಆದರೆ ಜ್ಯೋತಿರಾವ್ ಇದನ್ನು ಲೆಕ್ಕಿಸಲಿಲ್ಲ.

ಜ್ಯೋತಿರಾವ್ ಒಂದು ಲಾವಣಿ ಪುಸ್ತಕವನ್ನು ಬರೆದು ಪ್ರಕಟಿಸಿ ಬ್ರಾಹ್ಮಣರು ಕೆಳವರ್ಗದವರನ್ನು ವಿವಿಧ ರೀತಿಯಲ್ಲಿ ಮೋಸ ಪಡಿಸುತ್ತಿದ್ದುದನ್ನು ವಿವರಿಸಿದರು. ಕುಲಕರ್ಣಿಗಳು, ಹಳ್ಳಿಯ ಶ್ಯಾನುಭೋಗರು ಮತ್ತು ಇತರ ಅಧಿಕಾರಿಗಳು ಯಾವ ರೀತಿ ಜನರಿಗೆ ಮೋಸ ಮಾಡುತ್ತಾರೆಂಬುದನ್ನು ತಿಳಿಸಿದರು. ಶಿವಾಜಿಯ ಕಾರ್ಯಗಳನ್ನು ಕುರಿತು ಹಾಡುತ್ತಿದ್ದರು. ಜ್ಯೋತಿರಾವ್ ಅನೇಕ ಕವನಗಳನ್ನು ಪ್ರಕಟಿಸಿದರು. ಅವುಗಳಲ್ಲಿ ಅಜ್ಞಾನಿಗಳನ್ನು ಮತ್ತು ಮೂಢನಂಬಿಕೆಯ ಶೂದ್ರರನ್ನು ಹೇಗೆ ಮೋಸಗೊಳಿಸುತ್ತಿದ್ದರು ಎಂಬುದನ್ನು ವಿವರಿಸುತ್ತಿದ್ದರು. ೧೮೯೬ರಲ್ಲಿ ಅವರು ’ಪುರೋಹಿತಶಾಹಿಯನ್ನು ಬಯಲಿಗೆಳೆಯುವುದು’ ಎಂಬ ಪುಸ್ತಕ ಪ್ರಕಟಿಸಿದರು. ಅವರು ಆಗ ಖಂಡಿಸಿದ ಅನೇಕ ಆಚಾರಗಳು ಈಗ ಆಚರಣೆಯಲ್ಲಿಲ್ಲ.

ಜ್ಯೋತಿರಾವ್ ’ಗುಲಾಮಗಿರಿ’ ಎಂಬ ಪುಸ್ತಕವನ್ನು ಪ್ರಕಟಿಸಿದರು. ಅದರ ಒಂದು ಸಾವಿರ ಪ್ರತಿಗಳನ್ನು ಬಿಡುಗಡೆ ಮಾಡಿದರು. ಅದರ ಬೆಲೆ ಹನ್ನೆರಡು ಆಣೆ. ಶೂದ್ರರಿಗೆ, ಅತಿ ಶೂದ್ರರಿಗೆ ಅರ್ಧ ಬೆಲೆಗೆ ಮಾರಲಾಗುತ್ತಿತ್ತು. ಈ ಪುಸ್ತಕಗಳನ್ನು ರೈತರು, ಅತಿ ಶೂದ್ರರು ಮತ್ತು ಅವರ ಒಡೆಯರಿಗಾಗಿ ಬರೆಯಲಾಗುತ್ತಿತ್ತು. ಈ ವರ್ಗಗಳ ಜನ ಹೆಚ್ಚಾಗಿ ಕೊಂಡು ಅದರ ಲಾಭವನ್ನು ಪಡೆಯಬೇಕೆಂಬುದೇ ಜ್ಯೋತಿರಾವ್ ಅವರ ನಿಲುವಾಗಿತ್ತು.

ಧಾರ್ಮಿಕ ಕ್ರಿಯೆಗಳಲ್ಲಿ ಮಧ್ಯವರ್ತಿಗಳು ಇರಬಾರದೆಂಬುದು ಅವರ ವಾದವಾಗಿತ್ತು. ಎಂದರೆ ಎಲ್ಲರೂ ದೇವರ ಮಕ್ಕಳು, ಧಾರ್ಮಿಕ ಕ್ರಿಯೆ (ಮದುವೆ, ಯಾರಾದರೂ ತೀರಿಕೊಂಡಾಗ ಉತ್ತರ ಕ್ರಿಯೆ ಇತ್ಯಾದಿ) ಗಳಲ್ಲಿ ದೇವರ ಆಶೀರ್ವಾದ ಪಡೆಯುವುದು ಮುಖ್ಯ. ಇದಕ್ಕೆ ಪುರೋಹಿತರು ಮಧ್ಯವರ್ತಿಗಳಾಗಿ ಏಕಿರಬೇಕು ಎಂದು ಅವರ ಪ್ರಶ್ನೆ. ಸಂಸ್ಕೃತ ಪುಸ್ತಕಗಳ ಸಹಾಯದಿಂದ ಒಬ್ಬ ಅಕ್ಕಸಾಲಿ ಮಧ್ಯವರ್ತಿಗಳಿಲ್ಲದೆ ಎಲ್ಲಾ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದನಂತೆ. ಜ್ಯೋತಿರಾವ್ ಅರ್ಚಕರ, ಬ್ರಾಹ್ಮಣರ, ದೇವರುಗಳ, ವೇದ ಪುರಾಣಗಳ ವಿರುದ್ಧ ಹೋರಾಡಿದರು. ಬ್ರಿಟಿಷರ ಆಡಳಿತ ವೈಜ್ಞಾನಿಕ ಮನೋಭಾವವನ್ನು ತಂದುಕೊಟ್ಟಿತ್ತು. ಜ್ಯೋತಿರಾವ್ ಇದರಿಂದ ಸಂತಸಗೊಂಡಿದ್ದರು. ಶೋಷಣೆಯ ವಿರುದ್ಧ ಜ್ಯೋತಿರಾವ್ ಜೀವನಪರ್ಯಂತ ಹೋರಾಡಿದರು.

ಸತ್ಯಶೋಧನೆಗಾಗಿ

ತಮ್ಮ ಅಭಿಪ್ರಾಯದ ಪ್ರಸಾರಕ್ಕೆ ಜ್ಯೋತಿರಾವ್ ಅವರಿಗೆ ಒಂದು ಸಂಸ್ಥೆ ಬೇಕಾಗಿತ್ತು. ಅದಕ್ಕಾಗಿ ಸತ್ಯಶೋಧಕ ಸಮಾಜ ನಿರ್ಮಾಣವಾಯಿತು. ಇದರ ಉದ್ದೇಶ ಶೂದ್ರರನ್ನು ಮತ್ತು ಅತಿ ಶೂದ್ರರನ್ನು ಬ್ರಾಹ್ಮಣರ ಧರ್ಮಗ್ರಂಥಗಳಿಂದ ದೂರ ಮಾಡುವುದು ಮತ್ತು ಅವರ ಪ್ರಭಾವದಿಂದ ಪಾರು ಮಾಡುವುದು.

ಜ್ಯೋತಿರಾವ್ ಅವರಿಗೆ ಮತಗಳಲ್ಲಿ ನಂಬಿಕೆಯಿರಲಿಲ್ಲ. ವರ್ಣಾಶ್ರಮ ಧರ್ಮದಲ್ಲೂ ಅವರಿಗೆ ಯಾವ ಅರ್ಥವೂ ಕಂಡು ಬರಲಿಲ್ಲ. ಅವರು ಕೆಲವು ಧಾರ್ಮಿಕ ವಿಧಿಗಳನ್ನು ಇಟ್ಟುಕೊಂಡರು. ಮಧ್ಯವರ್ತಿಗಳನ್ನು ತೆಗೆದು ಹಾಕಿದರು. ಸತ್ಯಶೋಧಕ ಸಮಾಜಕ್ಕೆ ಪ್ರಮುಖ ಬುದ್ಧಿಜೀವಿಗಳ ಬೆಂಬಲವಿರಲಿಲ್ಲ. ಜ್ಯೋತಿರಾವ್ ಆದರೋ ಒಬ್ಬ ಸಾಮಾನ್ಯ ನಿಷ್ಠಾವಂತ ರೈತನಾಗಿದ್ದವರು. ಅವರು ಲೋಕವನ್ನು ತಿಳಿದವರಾಗಿದ್ದು, ಗ್ರಹಣ ಶಕ್ತಿ ಪಡೆದು ತರ್ಕ ಬುದ್ಧಿಯುಳ್ಳವರಾಗಿದ್ದರು. ಸಾಮಾನ್ಯ ಜನರ ಭಾಷೆಯಲ್ಲಿ ಅವರಿಗೆ ಅರ್ಥವಾಗುವಂತೆ ವಿಷಯಗಳನ್ನು ವಿವರಿಸಿ ಹೇಳುತ್ತಿದ್ದರು. ಮೇಲಿನ ವರ್ಗದವರು ಅವರನ್ನು ಹೇಗೆ ಸುಲಿಯುತ್ತಾರೆ, ಧರ್ಮದ ಹೆಸರಿನಲ್ಲಿ ಹೇಗೆ ಮೋಸ ಮಾಡುತ್ತಾರೆ ಎಂದು ವಿವರಿಸುತ್ತಿದ್ದರು. ಹಿಂದುಳಿದವರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬೇಕೆಂದು ಬುದ್ಧಿವಾದ ಹೇಳುತ್ತಿದ್ದರು. ಅವರ ಭಾಷೆ ಜನರ ಭಾಷೆಯಾಗಿತ್ತು.

ತಮ್ಮ ಅಭಿಪ್ರಾಯಗಳನ್ನು ಪ್ರಸಾರ ಮಾಡಲು ಜ್ಯೋತಿರಾವ್ ’ಸತ್ಯಶೋಧಕ ಸಮಾಜ’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದರಲ್ಲವೆ? ಹಿಂದುಳಿದವರನ್ನು ಮುಂದಕ್ಕೆ ತರಲು ಏನು ಮಾಡಬೇಕೆಂಬುದನ್ನು ಪರಿಶೀಲಿಸುವಂತೆ ಸಂಸ್ಥೆಗೆ ಹೇಳಿದರು. ೧೮೭೬ರಲ್ಲಿ ಸಮಾಜ ತನ್ನ ವರದಿ ನೀಡಿತು. ಕೆಳವರ್ಗದವರಿಗೆ ಶಿಕ್ಷಣ ನೀಡಬೇಕು, ಶಿಕ್ಷಣವನ್ನು ಕೊಡದಿದ್ದರೆ ಮಕ್ಕಳ ಭವಿಷ್ಯವೇ ಹಾಳಾಗುವುದು ಎಂದು ಹೇಳಿತು. ಇದಕ್ಕಾಗಿ ಹಣ ಸಂಗ್ರಹ ಮಾಡಬೇಕೆಂದು ಸೂಚಿಸಿತು.

ಪೂನಾದ ಪುರಸಭೆಯಲ್ಲಿ ಹಿಂದುಳಿದವರ ಹಿತವನ್ನು ಕಾಯುವಂತಹ ಯಾವ ಸದಸ್ಯರೂ ಇರಲಿಲ್ಲ. ಅವರ ಸೌಲಭ್ಯಗಳಿಗಾಗಿ ಯಾರೂ ಹೋರಾಡುತ್ತಿರಲಿಲ್ಲ. ಇಂತಹ ಒಂದು ಅವಕಾಶ  ಜ್ಯೋತಿರಾವ್ ಅವರಿಗೆ ಲಭಿಸಿತು. ಸರ್ಕಾರ ಅವರನ್ನು ಸದಸ್ಯರನ್ನಾಗಿ ನೇಮಿಸಿತು. ಅವರು ತುಂಬಾ ಚಟುವಟಿಕೆಯ ಸದಸ್ಯರಾಗಿದ್ದರು.

ಹಲವು ರೀತಿಯ ಸೇವೆ

ಜ್ಯೋತಿರಾವ್ ಆಗಾಗ್ಗೆ ಮುಂಬಯಿಗೆ ಹೋಗುತ್ತಿದ್ದರು. ಅಲ್ಲಿ ಕಾರ್ಮಿಕರ ಕಷ್ಟಗಳನ್ನು ಕಂಡಿದ್ದರು. ಅವರು ಬೆಳಗಿನಿಂದ ಸಂಜೆಯವರೆಗೆ ದುಡಿಯಬೇಕಾಗಿತ್ತು. ಜ್ಯೋತಿರಾವ್ ಅವರಿಂದ ಪ್ರೇರಿತರಾಗಿ ಲೋಖಂಡೆಯವರು ಕಾರ್ಮಿಕರ ಕುಂದುಕೊರತೆಗಳನ್ನು ಕುರಿತು ತಮ್ಮ ಧ್ವನಿಯನ್ನು ಎತ್ತಿದರು. ಅವರು ೧೮೮೮ರಲ್ಲಿ ಕಾರ್ಮಿಕರ ಸಂಘವನ್ನು ಸ್ಥಾಪಿಸಿದರು. ಅದಕ್ಕೆ ಅಧ್ಯಕ್ಷರಾಗಿ ಆರಿಸಿ ಬಂದರು. ಮಿಲ್ ಮಾಲೀಕರು ಇದನ್ನು ವಿರೋಧಿಸಲಿಲ್ಲ. ಸಂಘ ಕಟ್ಟುವ ಹಕ್ಕನ್ನು ಅವರು ಒಪ್ಪಿಕೊಂಡರು. ಸಂಘ ತನ್ನ ಅಳಿಲುಸೇವೆ ಸಲ್ಲಿಸಿತು.

ಆಗಿನ ಕಾಲದಲ್ಲಿ ಕಳ್ಳತನದಲ್ಲಿ ಮದ್ಯ ಮಾರಾಟವಾಗುತ್ತಿತ್ತು. ಸರ್ಕಾರ ಹೆಚ್ಚಿನ ಮದ್ಯದಂಗಡಿಗಳನ್ನು ತೆರೆಯಲು ಆಲೋಚಿಸುತ್ತಿತ್ತು. ೧೮೮೦ರಲ್ಲಿ ಸರ್ಕಾರ ಕೆಲವರಿಗೆ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿತು. ಅವುಗಳ ಸಂಖ್ಯೆ ಹೆಚ್ಚಾಯಿತು. ಜ್ಯೋತಿರಾವ್ ನಗರಸಭೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದರು. ಮದ್ಯದಂಗಡಿಗಳು ಹೆಚ್ಚಾಗಿದ್ದು ಹಾನಿಕಾರಕ ಪರಿಣಾಮವನ್ನು ಉಂಟು ಮಾಡುತ್ತಿರುವುದಾಗಿಯೂ, ಅವುಗಳನ್ನು ಕಡಮೆ ಮಾಡುವ ಸಲುವಾಗಿ ತೆರಿಗೆ ಹಾಕಬೇಕೆಂದೂ ಸಲಹೆ ಮಾಡಿದರು. ಇದರಿಂದ ಅನೇಕರ ಕಣ್ಣು ತೆರೆಯುವಂತಾಯಿತು. ಹಲವು ಪತ್ರಿಕೆಗಳು ಜ್ಯೋತಿರಾಯರ ಸಲಹೆಯನ್ನು ಸಮರ್ಥಿಸಿದವು.

೧೮೮೨ರಲ್ಲಿ ’ಹಂಟರ‍್ ಸಮಿತಿ’ ಎಂಬ ಸಮಿತಿ ನೇಮಕವಾಗಿತ್ತು. ಅದರ ಉದ್ದೇಶ ವಿವಿಧ ಪ್ರದೇಶಗಳ ಶೈಕ್ಷಣಿಕ ಸಮಸ್ಯೆಗಳನ್ನು ಅರಿತುಕೊಳ್ಳುವುದು. ಆ ಸಮಿತಿಗೆ ಸಾಕ್ಷ್ಯ ನೀಡಿದವರಲ್ಲಿ ಜ್ಯೋತಿರಾವ್ ಫುಲೆ ಒಬ್ಬರು.

ಜ್ಯೋತಿರಾಯರು ಸಮಾಜದ ಕೆಳಗಿನ ವರ್ಗದವರಿಗೆ ಶಿಕ್ಷಣ ಸರಿಯಾಗಿ ದೊರೆಯುತ್ತಿಲ್ಲ ಎಂದು ಹೇಳಿದರು. ಕಂದಾಯದ ಹಣ ಕೊಡುತ್ತಿದ್ದವರು ರೈತರು. ಆ ಹಣದಿಂದ ಉಪಯೋಗ ಪಡೆಯುತ್ತಿದ್ದವರು ಉತ್ತಮ ವರ್ಗಗಳ ಜನಗಳು. ಎಲ್ಲಾ ಉನ್ನತ ಹುದ್ದೆಗಳೂ ಉತ್ತಮ ವರ್ಗದವರಿಗೇ ಸಿಕ್ಕುತ್ತವೆ ಎಂದು ವಾದಿಸಿದರು. ರೈತರ ಹಿತ ಸಮಾಜಕ್ಕೆ ನಿಜವಾಗಿ ಬೇಕಾಗಿದ್ದರೆ ಅವರಲ್ಲಿ ಕೆಲವರಾದರೂ ಸರ್ಕಾರಿ ಕೆಲಸಕ್ಕೆ ಬರುವಂತಾಗಬೇಕೆಂದರು ಜ್ಯೋತಿರಾಯರು.

ಮುಂಬಯಿ ಪ್ರಾಂತದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಪ್ರಾಶಸ್ತ್ಯ ಸಿಕ್ಕಿರಲಿಲ್ಲ. ಪ್ರಾಥಮಿಕ ಶಾಲೆಗಳಿಗೆ ಬೇಕಾದ ಸಲಕರಣೆಗಳನ್ನು ಕೊಟ್ಟಿರಲಿಲ್ಲ. ಶಿಕ್ಷಣಕ್ಕಾಗಿ ಬೇರೆ ತೆರಿಗೆ ವಿಧಿಸಲಾಗಿತ್ತು. ಆದರೆ ಈ ತೆರಿಗೆಯಿಂದ ಬಂದ ಹಣ ಶಿಕ್ಷಣಕ್ಕೆ ಖರ್ಚಾಗುತ್ತಿರಲಿಲ್ಲ.

ಜ್ಯೋತಿರಾವ್ ತಾವು ಹೊರಬಿದ್ದ ಬಟ್ಟೆಯನ್ನೇ ಕೊಟ್ಟರು.

ಹತ್ತು ಲಕ್ಷ ಮಕ್ಕಳಿಗೆ ಶಿಕ್ಷಣದ ಸೌಲಭ್ಯಗಳಿರಲಿಲ್ಲ. ಹೊಲ ಉಳುವವರು ಮತ್ತು ಇತರ ಬಡವರ್ಗದವರಿಗೆ ಶಿಕ್ಷಣ ಕನಸಿನ ಮಾತಾಗಿತ್ತು. ಇವೆಲ್ಲವನ್ನೂ ಸರ್ಕಾರದ ಗಮನಕ್ಕೆ ತಂದ ಜ್ಯೋತಿಯವರು ಮಗುವಿನ ಹನ್ನೆರಡನೇ ವರ್ಷದವರೆಗೆ  ಶಿಕ್ಷಣ ಕಡ್ಡಾಯವಾಗಬೇಕೆಂದು ತಿಳಿಸಿದರು. ಹೆಣ್ಣುಮಕ್ಕಳ ಪ್ರಾಥಮಿಕ ಶಿಕ್ಷಣಕ್ಕೆ ಉದಾರವಾಗಿ ವೆಚ್ಚ ಮಾಡಬೇಕೆಂದು ವಾದಿಸಿದರು. ಪಠ್ಯವಸ್ತು, ಪಠ್ಯಪುಸ್ತಕಗಳು, ಶಿಕ್ಷಣ ಶುಲ್ಕ, ಪರಿವೀಕ್ಷಣೆ ಮೊದಲಾದ ವಿಷಯಗಳಲ್ಲಿ ವಿಚಾರಪೂರಿತ ಅಭಿಪ್ರಾಯಗಳನ್ನು ಜ್ಯೋತಿರಾವ್ ಪ್ರಕಟಪಡಿಸಿ ಒತ್ತಾಯಮಾಡಿದರು.

ವ್ಯಕ್ತಿತ್ವ

ಜ್ಯೋತಿರಾವ್ ಅವರದು ಬಹು ಮೃದು ಮನಸ್ಸು. ನಮ್ರ ಸ್ವಭಾವ. ಒಮ್ಮೆ ಜ್ಯೋತಿರಾವ್ ದಲಿತರ ಕೇರಿಯಲ್ಲಿ ಹೋಗುತ್ತಿದ್ದರು. ಒಂದು ಮಗು ಹಸಿವಿನಿಂದ ಅಳುತ್ತಿತ್ತು. ಮಗುವಿನ ತಂದೆತಾಯಿಗಳು ಕೆಲಸಕ್ಕಾಗಿ ಹೊರಗೆ ಹೋಗಿದ್ದರು. ಜ್ಯೋತಿರಾವ್ ಮಗುವನ್ನು ಸ್ವಚ್ಛಗೊಳಿಸಿ ತಿನ್ನಲು ಕೂಡಿಸಿದರು.

ಒಂದು ದಿನ ಅವರು ಅಂಗಡಿಯಿಂದ ಮನೆಗೆ ಹೋಗುತ್ತಿದ್ದರು. ಭಿಕ್ಷುಕನೊಬ್ಬ ತಮ್ಮ ಮನೆಯ ಹತ್ತಿರ ನಿಂತು ಭಿಕ್ಷೆ ಬೇಡುತ್ತಿದ್ದ. ಜೋಳಿಗೆ ಹರಿದು ಹೋಗಿದ್ದುದರಿಂದ ಭಿಕ್ಷೆ ಹಾಕಿಸಿಕೊಂಡ ಕಾಳುಗಳು ಉದುರಿ ಹೋಗುತ್ತಿದ್ದವು. ಇದನ್ನು ಕಂಡ  ಜ್ಯೋತಿರಾವ್ ತಾವು ಹೊದೆದುಕೊಂಡಿದ್ದ ಬಟ್ಟೆಯನ್ನೇ ತೆಗೆದು ಆತನಿಗೆ ಕೊಟ್ಟರು.

೧೮೮೮ರ ಮೇ ೧೦ ಜ್ಯೋತಿರಾವ್ ಅವರ ಜೀವನದಲ್ಲಿ ಒಂದು ಮುಖ್ಯ ದಿನ. ಅವರ ಅಭಿಮಾನಿಗಳು ಅವರಿಗೆ ಸತ್ಕಾರ ಏರ್ಪಡಿಸಿದ್ದರು. ಜನ ಕಿಕ್ಕಿರಿದು ತುಂಬಿದ್ದರು. ಅಭಿಮಾನಿಗಳು ಅವರನ್ನು ಅಭಿನಂದಿಸಿದರು. ಅವರ ಸೇವೆಯನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ತಮ್ಮ ಪ್ರೇಮ, ಭಕ್ತಿ, ವಿಶ್ವಾಸಗಳನ್ನು ತೋರಿಸಿದರು. ಅವರಿಗೆ ’ಮಹಾತ್ಮ’ ಎಂಬ ಬಿರುದನ್ನಿತರು. ಬಡಜನರ ಕೃತಜ್ಞತೆಗೆ ಜ್ಯೋತಿರಾವ್ ಅವರ ಮನಸ್ಸು ಕರಗಿತು. ನಮ್ರಭಾವದಿಂದ ತಾವು ತಮ್ಮ ಕರ್ತವ್ಯವನ್ನು ಮಾತ್ರ ಮಾಡಿರುವುದಾಗಿ ತಿಳಿಸಿದರು.

ಬಡಜನರು ಮತ್ತು ಹಿಂದುಳಿದವರಿಂದ ಬಿರುದನ್ನು ಪಡೆಯುವುದರಲ್ಲಿ ಜ್ಯೋತಿರಾವ್ ಅವರೇ ಮೊದಲಿಗರು. ಮಹಾತ್ಮನೆಂದರೆ ಮನುಕುಲದ ಪ್ರೇಮಿ. ಜ್ಯೋತಿರಾವ್ ಅಂತಹ ಮನುಕುಲದ ಪ್ರೇಮಿಯಾಗಿದ್ದರು.

ಶೋಷಣೆಗೆ ಸವಾಲು

ಜ್ಯೋತಿರಾವ್ ಮಾಡಿದ ಕೆಲಸಗಳು ಅಗಣಿತ. ಜ್ಯೋತಿರಾವ್ ಇತರರಂತೆ ತಮ್ಮ ಉದ್ಯೋಗವನ್ನು ಮಾಡಿಕೊಂಡು ನೆಮ್ಮದಿಯಾಗಿ ಇರಬಹುದಾಗಿತ್ತು. ಆದರೆ ಅವರು ಅಸಾಮಾನ್ಯರಾಗಿದ್ದರು. ಸಮಾಜದಲ್ಲಿ  ಅನ್ಯಾಯ, ಶೋಷಣೆ ಕಂಡ ಕಡೆ ಎಲ್ಲ ಅವರು ಪ್ರತಿಭಟಿಸಿದರು. ಸಾಮಾನ್ಯರಿಗಾಗಿ, ದೀನದಲಿತರಿಗಾಗಿ, ಕೂಲಿಗಳಾಗಿ, ಕಾರ್ಮಿಕರಿಗಾಗಿ, ರೈತರಿಗಾಗಿ ಹೆಣಗಿದ ಮಹಾನುಭಾವ. ಮಹಿಳೆಯರ ಶಿಕ್ಷಣಕ್ಕಾಗಿ ಅವರು ಮಾಡಿದ ಪ್ರಯತ್ನ ಮರೆಯಲಾಗದಂತಹದು. ವಿಧವಾ ವಿವಾಹ ಅವರ ಶ್ರಮದಿಂದ ಯಶಸ್ವಿಯಾಯಿತು. ಕಡ್ಡಾಯ ಶಿಕ್ಷಣಕ್ಕಾಗಿ ಅವರು ಆಗ್ರಹಪಡಿಸಿದರು. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ  ಮೋಸಕ್ಕೆ ಕೊಡಲಿ ಏಟು ಹಾಕಿದರು. ಅಂಧಶ್ರದ್ಧೆಯ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಎಲ್ಲಾ ಬಗೆಯ ಅನಾಚಾರಗಳನ್ನು ಬಯಲಿಗೆಳೆದರು. ಈ ಎಲ್ಲಾ ಕೆಲಸಗಳಲ್ಲಿಯೂ ಕ್ರಾಂತಿಯ ಕಿಡಿಗಳು ಕಾಣಿಸುತ್ತಿದ್ದವು. ಮಹಾತ್ಮ  ಜ್ಯೋತಿರಾವ್ ಫುಲೆ ಸಾಮಾಜಿಕ ಕ್ರಾಂತಿಗೆ ಹೆಸರಾಗಿದ್ದರು. ಅಂತೆಯೇ ಜನತೆ ಅವರನ್ನು ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹನೆಂದು ಗೌರವಿಸಿತು.