ಶ್ರೀಮತಿ ಜ್ಯೋತಿ ಪಟ್ಟಾಭಿರಾಮ್ ವೃತ್ತಿಯಲ್ಲಿ ಆಂಗ್ಲಭಾಷಾ ಸಾಹಿತ್ಯದ ಅಧ್ಯಾಪಕರಾದರೂ ಪ್ರವೃತ್ತಿಯಲ್ಲಿ ಭರತನಾಟ್ಯ  ಕಲಾವಿದರು ಮತ್ತು ಗುರುಗಳು. ಬೆಂಗಳೂರಿನಲ್ಲಿ ಸಾಧನ ಸಂಗಮ ನೃತ್ಯ ಕೇಂದ್ರ ಸ್ಥಾಪಿಸಿ, ನೃತ್ಯ ಶಿಕ್ಷಣದಲ್ಲಿ ತಮ್ಮನ್ನು ಸೃಜನಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಹಿಮಾಲಯದ ಮಹಾನ್ ಯೋಗಿ, ದಾರ್ಶನಿಕ ಮತ್ತು ಆಧ್ಯಾತ್ಮಿಕ ಗುರುಸ್ವಾಮಿ ರಾಮ ಅವರಿಂದ ಮಂತ್ರ ದೀಕ್ಷೆ ಪಡೆದು, ಆದ್ಯಾತ್ಮ ಸಾಧನೆ ಮಾಡುತ್ತಾ, ನೃತ್ಯಕ್ಕೆ ಯೋಗ ಮತ್ತು ಆಧ್ಯಾತ್ಮದ ಕಂಪನ್ನು ಬೆರೆಸಿ ಪ್ರಸಾರ ಮಾಡುತ್ತಿದ್ದಾರೆ. ಪ್ರಸ್ತುತ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಮನಗರದ ಬಳಿ ತಮ್ಮ ’ಸಾಧನ ಧಾಮ’ದಲ್ಲಿ ’ದಾಕ್ಷಿಣಿ’ ನೃತ್ಯ ಗುರುಕುಲವನ್ನು ಕಟ್ಟುವುದರಲ್ಲಿ ನಿರಂತರವಾಗಿ, ಶಾಸ್ತ್ರೀಯ ನೃತ್ಯ ಶೈಲಿಗಳ ಸಂಗಮವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.

ಶ್ರೀ ಮುರುಳೀಧರರಾಯರು, ಪ್ರೋ. ಕಲಾಮಂಡಲಂ ಉಷಾ ದಾತಾರ್ ಮತ್ತು ನಾಟ್ಯಾಚಾರ್ಯ ಹೆಚ್. ಆರ್. ಕೇಶವಮೂರ್ತಿ ಜ್ಯೋತಿ ಅವರ ನೃತ್ಯ ಗುರುಗಳು. ಜೊತೆಗೆ ದಿವಂಗತ ಕಿಟ್ಟಪ್ಪ ಪಿಳ್ಳೈ, ಪದ್ಮಭೂಷಣ ಶ್ರೀಮತಿ ಕಲಾನಿಧಿ ನಾರಾಯಣ್, ಶ್ರೀಮತಿ ಚಿತ್ರ ವಿಶ್ವೇಶ್ವರನ್, ಶ್ರೀಮತಿ ಕನಕ ರಿಲೆ ಮುಂತಾದ ನೃತ್ಯ ಕ್ಷೇತ್ರದ ದಿಗ್ಗಜರು ಜ್ಯೋತಿ ಅವರಿಗೆ ನಾಟ್ಯಶಾಸ್ತ್ರ ನೃತ್ಯದಲ್ಲಿ ಅಭಿನಯ ಮತ್ತು ನಟುವಾಂಗದಲ್ಲಿ ವಿಶೇಷ ಮಾರ್ಗದರ್ಶನ ನೀಡಿದ್ದಾರೆ.

ಶ್ರೀಮತಿ ಜ್ಯೋತಿ ಹಲವು ನೃತ್ಯ ರೂಪಕಗಳನ್ನು ನಿರ್ಮಿಸಿದ್ದು, ಅವೆಲ್ಲಾ ಆಧ್ಯಾತ್ಮ ಮತ್ತು ಯೋಗವನ್ನು ನೃತ್ಯ ದೊಂದಿಗೆ ಸಮನ್ವಯಗೊಳಿಸುವ ಕ್ರಿಯಾಶೀಲ ಪ್ರಯತ್ನಗಳಾಗಿ ಯಶಸ್ವಿಯಾಗಿವೆ. ದೂರದರ್ಶನಕ್ಕಾಗಿ ನಿರ್ಮಿಸಿದ ’ನವರಾತ್ರಿ-ಸತ್ವ ಸಂದೇಶ’ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪ್ರದರ್ಶಿಸಿದ ’ನೃತ್ಯಸಂಧ್ಯಾ’, ದೂರದರ್ಶನದಲ್ಲಿ ಮಕ್ಕಳಿಗಾಗಿ ಚಿಗುರು ಕಾರ್ಯಕ್ರಮಕ್ಕೆ ನವರಾತ್ರಿ ಸಂದರ್ಭದಲ್ಲಿ ರೂಪಿಸಿದ ’ಬೊಂಬೆ-ಜೀವ-ಭಾವ’ ಇಸ್ಕಾನ್ ದೇವಾಲಯದಲ್ಲಿ ಪ್ರದರ್ಶಿಸಿದ ’ದ್ವಾದಶ ರಾಸ ಗೀತಿಕ’ ತಮ್ಮದೇ ನೃತ್ಯ ಶಾಲೆಯ ವಾರ್ಷಿಕೋತ್ಸವಕ್ಕೆ ನಿರ್ಮಿಸಿದ ’ವಿಶ್ವಾಮಿತ್ರ ಗಾಯತ್ರಿ’ ದೇವಿ ಬಾಗವತ ಆಧಾರಿತ ನವರಸಗಳನ್ನು ಒಳಗೊಂಡ ’ನವರಸ ದೇವಿ’, ಮಹಾ ಭಾರತದ ಕೀಚಕ ವಧೆ ಸನ್ನಿವೇಶವನ್ನು ಕುರಿತ ’ಪ್ರೇಕ್ಷಾಗೃಹ’ ಪ್ರಸ್ತುತ ಸಮಾಜದಲ್ಲಿನ ಸ್ತ್ರೀಪ್ರಜ್ಞೆ ಮತ್ತು ಸ್ತ್ರೀ ಶಕ್ತಿಯ ಕುರಿತ ’ಅಭಿಜ್ಞಾನ ಶಾಕುಂತಲ’ ರಾಮಾಯಣದ ಸಾತ್ವಿಕ ಅಂಶಗಳನ್ನು ಆಧರಿಸಿದ ’ಸಂಸ್ಕಾರ ರಾಮಾಯಣ’ ಇವೆಲ್ಲಾ ಜ್ಯೋತಿಯವರ ಅಂತಹ ಪ್ರಮುಖ ಯಶಸ್ವೀ ನಿರ್ಮಾಣಗಳು.

ಜೊತೆಗೆ ಶ್ರೀಮತಿ ಜ್ಯೋತಿ ಯೋಗ-ನೃತ್ಯ-ಸಮನ್ವಯ ಕುರಿತ ಅನೇಕ ಕಾರ್ಯಾಗಾರಗಳನ್ನು ನಾಡಿನ ಅನೇಕ ಕಡೆ ಮತ್ತು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹಾಗೂ ಅಮೆರಿಕಾದ ನ್ಯೂಯಾರ್ಕ್‌, ನ್ಯೂಜರ್ಸಿ, ಪೋರ್ಟ್‌‌ಲಂಡ್, ಚಿಕಾಗೋ ಮುಂತಾದ ನಗರಗಳಲ್ಲಿ ನಡೆಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನಡೆಸುವ ಕಾರ್ಯಾಗಾರಗಳಲ್ಲಿ ಉಪನ್ಯಾಸಕರಾಗಿ,ಶಿಷ್ಯ ವೇತನಗಳಿಗೆ ತೀರ್ಪುಗಾರರಾಗಿ ಜ್ಯೋತಿ ಅಕಾಡೆಮಿಯ ಸಂಪರ್ಕದಲ್ಲಿರುತ್ತಾರೆ. ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿಯ ನೃತ್ಯ ಪರೀಕ್ಷೆಗಳ ಪಠ್ಯ ಪುಸ್ತಕ ಸಮಿತಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸುತ್ತಿರುವ ಜ್ಯೋತಿ ಈವರೆಗೆ ಒಂಬತ್ತು ರಂಗ ಪ್ರವೇಶಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಅವರ ಶಿಷ್ಯರನೇಕರು ಮಾಧ್ಯಮದಲ್ಲಿ ಭರವಸೆಯ ಕಲಾವಿದರಾಗಿ ಮುನ್ನಡೆಯುತ್ತಿದ್ದಾರೆ.

ಆಸ್ಟ್ರೇಯಾದ ಸಿಡ್ನಿ ಕನ್ನಡ ಸಂಘದಿಂದ ’ಯೋಗನಾಟ್ಯ ಸರಸ್ವತಿ’ ಬಿರುದಿನೊಂದಿಗೆ ಗೌರವಿಸಲ್ಪಟ್ಟಿರುವ ಶ್ರೀಮತಿ ಜ್ಯೋತಿ ಪಟ್ಟಾಭಿರಾಮ್ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೫-೦೬ನೇ ಸಾಲಿನ ತನ್ನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.