ಅಮೆರಿಕಾದ ಭೂಪಟದಲ್ಲಿ ಕಣ್ಣಿಟ್ಟು ಹುಡುಕಿದಲ್ಲದೆ, ಕಾಣಲು ದೊರೆಯದ ಒಂದು ಪುಟ್ಟ ಊರು ಬೋಜೆಮಿನ್. ಎಲ್ಲೋಸ್ಟೋನ್ ಪಾರ್ಕ್ ಎಂಬ ಜಗತ್ ಪ್ರಸಿದ್ಧವಾದ ರಾಷ್ಟ್ರೀಯ ಅರಣ್ಯಧಾಮಕ್ಕೆ ಕೇವಲ ನೂರು ಮೈಲಿಗಳ ದೂರದಲ್ಲಿರುವ ಈ ಊರನ್ನು ವಿಮಾನ ಮಾರ್ಗದ ಮೂಲಕ ತಲುಪಬೇಕಾದರೆ, ಡೆನ್ವರ್‌ಗೆ ಹೋಗಿ ಅಲ್ಲಿಂದ ಮತ್ತೆ ಉತ್ತರ ದಿಕ್ಕಿಗೆ ಹಾರಬೇಕು. ಸೇಂಟ್‌ಲೂಯಿಸ್‌ನಿಂದ ನಾನು ೨೨.೯.೮೭ರ ಮಧ್ಯಾಹ್ನ ಕಾಂಟಿನೆಂಟಲ್ ಏರ್‌ಲೈನ್ಸ್‌ಗೆ ಸೇರಿದ ವಿಮಾನದಲ್ಲಿ ಹೊರಟು ಸುಮಾರು ಎರಡು ಗಂಟೆಗಳ ಗಗನಯಾನದ ಅನಂತರ ಡೆನ್ವರ್ ತಲುಪಿ, ಅಲ್ಲಿ ಬೇರೊಂದು ವಿಮಾನ ನಿಲ್ದಾಣಕ್ಕೆ ಹೋಗಿ ಒಂದೂವರೆ ಗಂಟೆಗಳ ಕಾಲ ಕಾದು, ಇನ್ನೊಂದು ವಿಮಾನದ ಮೂಲಕ ಬೋಜೆಮಿನ್ ತಲುಪಿದಾಗ ರಾತ್ರಿ ಎಂಟು ಗಂಟೆ. ಹರಿಹರೇಶ್ವರ ಅವರ ಪ್ರಯತ್ನದಿಂದಾಗಿ, ಅಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಮುಂಬೈನ (ಕನ್ನಡಿಗ) ಸುರೇಶ್ ಕೋಟಿಯವರನ್ನು ಸಂಪರ್ಕಿಸಿ ನಾನು ಬರುವುದನ್ನು ದೂರವಾಣಿಯ ಮೂಲಕ ಮೊದಲೇ ತಿಳಿಸಿದ್ದರಿಂದ, ಶ್ರೀ ಕೋಟಿಯವರು ತಮ್ಮ ಮೂರು ಜನ ಸಹಪಾಠಿಗಳೊಂದಿಗೆ, ವಿಮಾನ ನಿಲ್ದಾಣದಲ್ಲಿ ನನಗಾಗಿ ಕಾದಿದ್ದು, ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದರು. ಆ ಮನೆ, ಈ ನಾಲ್ಕು ಜನ, ಇಂಡಿಯಾದ ಬೇರೆ ಬೇರೆ ರಾಜ್ಯಗಳಿಂದ ಇಲ್ಲಿನ ವಿಶ್ವವಿದ್ಯಾಲಯಕ್ಕೆ ಓದಲೆಂದು ಬಂದು, ಬಾಡಿಗೆಗೆ ಹಿಡಿದು, ತಾವೇ ಅಡುಗೆ ಮಾಡಿಕೊಂಡು ವಾಸಿಸುತ್ತಿದ್ದ ಮನೆ. ಹೀಗಾಗಿ ಈ ‘ಬ್ರಹ್ಮಚಾರಿಗಳು’ ತಾವೇ ಸಾಮೂಹಿಕವಾಗಿ ತಯಾರಿಸಿದ ಚಪಾತಿ – ಸಾಗು – ಅನ್ನ- ಸಾರಿನ ಊಟಕ್ಕೆ ಅತಿಥಿಯಾದ ನನ್ನನ್ನು ಜತೆಗೂಡಿಸಿಕೊಂಡರು. ಅವರ ಕಾಲೇಜಿನ ಪಾಠ ಪ್ರವಚನಗಳು ಪ್ರಾರಂಭವಾಗಲು ಇನ್ನೂ ಎರಡು ದಿನಗಳ ಅವಕಾಶವಿದ್ದುದರಿಂದ, ಮರುದಿನ ಬೆಳಿಗ್ಗೆ ಒಂದು ಬಾಡಿಗೆಯ ಕಾರನ್ನು ಗೊತ್ತು ಮಾಡಿಕೊಂಡು ನನ್ನನ್ನು ಎಲ್ಲೋಸ್ಟೋನ್ ಪಾರ್ಕ್‌ಗೆ ಕರೆದುಕೊಂಡು ಹೋಗುವುದಾಗಿ ಕಾರ‍್ಯಕ್ರಮವನ್ನು ಗೊತ್ತುಪಡಿಸಿದರು. ನಾನು ಈ ಕಾರಿನ ಬಾಡಿಗೆಯನ್ನು ಸಂತೋಷದಿಂದ ವಹಿಸಿಕೊಳ್ಳುವುದಾಗಿ ಒಪ್ಪಿಕೊಂಡೆ.

ಬೆಳಗಾದಾಗ, ಸುರೇಶ್ ಕೋಟಿಯವರು ಗೊತ್ತುಮಾಡಿಕೊಂಡು ತಂದ ಬಾಡಿಗೆಯ ಕಾರಿನಲ್ಲಿ, ಕೋಟಿ ಮತ್ತು ಅವರ ಮೂವರು ಗೆಳೆಯರೂ ದಾರಿಯುದ್ದಕ್ಕೂ ತಿನ್ನಲು ಅಗತ್ಯವಾದಷ್ಟು ಬಿಸ್ಕತ್ತು – ಹಣ್ಣು – ಹಂಪಲುಗಳನ್ನಿರಿಸಿಕೊಂಡು, ಬೋಜೆಮಿನ್‌ಗೆ ನೂರು ಮೈಲಿಗಳ ದೂರದಲ್ಲಿರುವ ಎಲ್ಲೋಸ್ಟೋನ್ ಪಾರ್ಕಿನ ಕಡೆ ಹೊರಟೆವು. ಕೋಟಿ ಮತ್ತು ಅವರ ಮೂವರು ಗೆಳೆಯರಿಗೂ, ಡ್ರೈವಿಂಗ್  ಗೊತ್ತಿದ್ದರಿಂದ, ಉದ್ದಕ್ಕೂ ಈ ಕಾರ್ಯವನ್ನು ಅತ್ಯಂತ ಉತ್ಸಾಹದಿಂದ ಸರದಿಯ ಮೇಲೆ ಹಂಚಿಕೊಂಡು, ಮಹಾವೇಗದಲ್ಲಿ ಪ್ರಯಾಣ ಬೆಳೆಸಿದೆವು. ತಾರುಣ್ಯಕ್ಕೆ ಸಹಜವಾದ ಹಾಡು-ಹರಟೆ-ಕಿರುಚುಗಳ ನಡುವೆ, ಕೇವಲ ಒಂದೂವರೆ ಗಂಟೆಗಳೊಳಗೆ ಹಾಸಿಕೊಂಡ ಬಯಲು ನಾಡನ್ನು ದಾಟಿ, ಬೆಟ್ಟ-ಕಣಿವೆಗಳ ನಡುವಣ ಪೈನ್ ವೃಕ್ಷಗಳ ಕಾಡುಗಳನ್ನು ಹಾದು, ಎಲ್ಲೋಸ್ಟೋನ್ ಅರಣ್ಯಧಾಮದ ಪಶ್ಚಿಮದ ಪ್ರವೇಶ ದ್ವಾರವನ್ನು ತಲುಪಿದೆವು. ಐದು ಡಾಲರ್ ಪ್ರವೇಶ ಶುಲ್ಕವನ್ನು ತೆಗೆದುಕೊಂಡ, ಚಿನ್ನದ ಬಣ್ಣದ ಕೂದಲಿನ ಹುಡುಗಿ ನಮ್ಮ ಕೈಗೆ ಈ ಅರಣ್ಯಧಾಮದ ಮುದ್ರಿತ ನಕ್ಷೆಯನ್ನೂ, ಪ್ರಾಣಿಗಳನ್ನು ಕೆಣಕಬೇಡಿ ಎಂದು ದಪ್ಪಕ್ಷರದಲ್ಲಿ ಮುದ್ರಿತವಾದ ಕರಪತ್ರವನ್ನೂ ನಮಗೆ ಕೊಟ್ಟು Have a nice day ಎಂದು ಸುಮಧುರ ಕಂಠದಲ್ಲಿ ಶುಭಾಶಯ ಕೋರಿದಳು. ಆ ಹುಡುಗಿಯ ಕಡೆಗೊಂದು ತುಂಟ ನೋಟ ಬೀರಿ ಮುಸಿ ಮುಸಿ ನಕ್ಕ ನನ್ನ ತರುಣ ಸಂಗಾತಿಗಳು, ಮತ್ತೆ ಮಹಾ ವೇಗದಲ್ಲಿ ಕಾರನ್ನು ಓಡಿಸಿದರು.

೧೮೭೨ರಲ್ಲಿ ಸಂರಕ್ಷಿತ ರಾಷ್ಟ್ರೀಯ ಅರಣ್ಯಧಾಮವೆಂದು ಘೋಷಿಸಲ್ಪಟ್ಟ ಈ ಎಲ್ಲೋಸ್ಟೋನ್ ಪಾರ್ಕ್ – ಹಳದಿ ಕಲ್ಲುಗಳ ಉದ್ಯಾನ – ಜಗತ್ತಿನ ಮೊಟ್ಟ ಮೊದಲ ‘ನ್ಯಾಷನಲ್ ಪಾರ್ಕ್’ ಮಾತ್ರವಲ್ಲ, ಅಮೆರಿಕಾದಲ್ಲಿರುವ ಈ ಬಗೆಯ ಹಲವು ಅರಣ್ಯಧಾಮಗಳಲ್ಲಿಯೇ ಇದು ಬಹು ದೊಡ್ಡದು. ಇಪ್ಪತ್ತೊಂದು ಮಿಲಿಯನ್ ಎಕರೆಗಳಷ್ಟು ವಿಸ್ತಾರವಾದ ಈ ಅರಣ್ಯಧಾಮ, ಬೋಜೆಮಿನ್‌ದ ಸಮತಲ ಪ್ರದೇಶದನಂತರ ಕ್ರಮಕ್ರಮವಾದ ಏರುವೆಯಲ್ಲಿ ನಾಲ್ಕು ಸಾವಿರದಿಂದ, ಏಳು ಸಾವಿರ ಅಡಿಗಳ ಎತ್ತರದಲ್ಲಿ ಹರಡಿಕೊಂಡಿದೆ. ಕಾರಿನಲ್ಲಿ ಕೂತು ಈ ಅರಣ್ಯ ವಿಸ್ತೀರ್ಣದ ಅಚ್ಚುಕಟ್ಟಾದ ದಾರಿಗಳಲ್ಲಿ ಪ್ರಯಾಣ ಮಾಡಿದ ನಾವು, ಬೆಟ್ಟದ ಮೈಯನ್ನು ಏರುತ್ತಿದ್ದೇವೆ ಎನ್ನುವ ಅರಿವೇ ಇಲ್ಲದೆ ಹಲವು ಸಾವಿರ ಅಡಿಗಳನ್ನು ಆರೋಹಿಸಿರುತ್ತೇವೆ. ಈ ಎತ್ತರದ ಘಟ್ಟಗಳ ಆಚೆ-ಈಚೆಯ ಕಣಿವೆಗಳು ನಮ್ಮ ಗಮನಕ್ಕೇ ಬಾರದ ರೀತಿಯಲ್ಲಿ, ಎರಡೂ ಕಡೆ ಕಿಕ್ಕಿರಿದ ಪೈನ್ ಮರಗಳ ದಾರಿಯ ನಡುವೆ ನಮ್ಮ ಗಾಲಿಗಳು ಉರುಳುತ್ತವೆ.

ಈ ಅರಣ್ಯದ ನಡುವಣ ದಾರಿಯೋ ಅತ್ಯಂತ ಸ್ವಚ್ಛವಾಗಿದೆ. ಎಲ್ಲೂ ಒಂದು ಚೂರು ಕಸ ಇಲ್ಲ. ದಾರಿ ಉದ್ದಕ್ಕೂ ರಸ್ತೆ ಬದಿಗೆ ಕಸದ ಡಬ್ಬಗಳು; ಈ ಅರಣ್ಯದ ದಾರಿಯನ್ನು ಸದಾ ಚೊಕ್ಕಟವಾಗಿ ಇರಿಸಿ ಎಂದು ಬರೆದ ಹಲಗೆಗಳು; ಅಲ್ಲಲ್ಲಿ ಕಾರು ನಿಲ್ಲಿಸಿ ವಿಶ್ರಮಿಸಲು ಮರಗಳ ನೆರಳಲ್ಲಿ ಶಿಲಾಸನಗಳು. ದಾರಿಯುದ್ದಕ್ಕೂ ಎರಡೂ ಕಡೆ ಗೋಪುರಾಕಾರದ, ಅಷ್ಟೇನೂ ದಪ್ಪವಲ್ಲದ ಕಾಂಡಗಳ ಮರಗಳು, ನೇರವಾಗಿ, ಸಾಲಾಗಿ ಒಂದರ ಬದಿಗೊಂದು ಕ್ರಮಬದ್ಧವಾದ ಅಂತರದಲ್ಲಿ ಹಬ್ಬಿಕೊಂಡಿವೆ. ನಮ್ಮ ಬಂಡೀಪುರ, ಮದುಮಲೈ, ನಾಗರಹೊಳೆ ಅಭಯಾರಣ್ಯ ಗಳಲ್ಲಿಯಂತೆ ಭಾರೀ ಮರಗಳಿಂದ ಕಿಕ್ಕಿರಿದ ಕಾಡು ಇದಲ್ಲ. ಎಲ್ಲ ಒಂದೇ ರೀತಿಯ, ಬಹುಶಃ ಒಂದೇ ಜಾತಿಯ ಮರಗಳು ಕಾಣುತ್ತವೆ, ಇಲ್ಲಿನ ಬೆಟ್ಟಗಳ ಏರುವೆಗಳಲ್ಲಿ ಹಾಗೂ ಕಣಿವೆಗಳ ಇಳುಕಲುಗಳಲ್ಲಿ.

ಒಂದರ್ಧ ಗಂಟೆಯ ಪಯಣದ ನಂತರ, ಒಂದೆಡೆ ಭುಸ್ಸೆಂದು ನೆಲದಿಂದ ಮೇಲಕ್ಕೆ ಹಾರುವ ಬಿಸಿ ನೀರಿನ ಬುಗ್ಗೆಗಳ ಬದಿಗೆ ಹಲವು ಜನ ನಿಂತದ್ದನ್ನು ಕಂಡು, ಕಾರು ನಿಲ್ಲಿಸಿ ನಾವೂ ಹೋದೆವು. ಒಂದಷ್ಟಗಲ ಜಾಗದಲ್ಲಿ ಹಲವಾರು ಬಿಸಿ ನೀರಿನ ಬುಗ್ಗೆಗಳು, ಒಂದರ ನಂತರ ಮತ್ತೊಂದು, ಭುಸ್ಸೆಂದು ಎತ್ತರಕ್ಕೆ ನೆಗೆದು ಮತ್ತೆ ಹೆಡೆಮುದುರಿ ಮಲಗುತ್ತಿವೆ. ಅವುಗಳಿಂದ ಹೊರಡುವ ಗಂಧಕದ ಹೊಗೆಯ ವಾಸನೆ ಇಡೀ ಪರಿಸರವನ್ನೆಲ್ಲಾ ವ್ಯಾಪಿಸಿದೆ. ಜನ ಅಲ್ಲಲ್ಲಿ ನಿಂತು ಈ ಬುಗ್ಗೆಗಳ ನೆಗೆತಗಳನ್ನು ಕ್ಯಾಮರಾಗಳಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಈ ದೃಶ್ಯವನ್ನು ನೋಡಿಕೊಂಡು, ನಾವು ಈ ಉದ್ಯಾನದ ದಾರಿಯಲ್ಲಿ ಮುಂದೆ ಹೋದಂತೆ, ಇನೂ ಅನೇಕ ಬಿಸಿ ನೀರ ಬುಗ್ಗೆಗಳನ್ನು ನೋಡಿದೆವು. ನನ್ನ ಪಾಲಿಗೆ ಅದೊಂದು ಅದ್ಭುತವಾಗಿತ್ತು. ನೆಲದೊಳಗಿನ ಬಿಲಗಳಿಂದ ‘ಬುಸುಗುಟ್ಟುವ ಪಾತಾಳದ ಹಾವೋ’ ಎಂಬಂತೆ ರೋಷದಿಂದ ಚಿಮ್ಮಿ ನೆಗೆಯುವ ಬಿಸಿ ನೀರಿನ ಬುಗ್ಗೆಗಳ ಮೈ, ಬೀಸುವ ಗಾಳಿಗೆ ತುಂತುರು ತುಂತುರಾಗಿ ಬಹು ದೂರಕ್ಕೆ ಹನಿಗಳನ್ನು ಎರಚಿ, ಮತ್ತೆ ಏರಿದೆತ್ತರದಿಂದ ಥಟ್ಟನೆ ನೆಲಕ್ಕೆ ಕುಸಿದು, ಬಿಸಿ ಕಳೆದುಕೊಂಡು ತಣ್ಣಗೆ ಹರಿದು ಹೋಗುವ ನಿರಂತರ ದೃಶ್ಯ ಯಾರನ್ನೂ ಚಕಿತಗೊಳಿಸುತ್ತದೆ. ಮತ್ತೆ ಅಲ್ಲಲ್ಲಿ ಕೊತ ಕೊತ ಕುದಿಯುವ ಬೂದು ಬಣ್ಣದ ಕೆಸರು ಗುಂಡಿಗಳೂ – ಹೊಂಡಗಳೂ ಸಾಕಷ್ಟಿವೆ. ಇಂಥ ಕಡೆ ಅವುಗಳ ಬದಿಗೆ ಹಾಕಿರುವ ಮರದ ಹಲಗೆಗಳ ದಾರಿಯಲ್ಲಿ ನಿಂತು ಹೊಗೆಯಾಡುವ ಈ ಗುಂಡಿಗಳನ್ನು ನೋಡಬಹುದು. ಎಲ್ಲಾದರೂ ತಿಳಿಯದೆ, ಈ ಹಲಗೆ ದಾರಿಯ ಬದಿಗೆ ಕಾಲಿಟ್ಟೆವೋ ಮುಗಿಯಿತು ಗತಿ. ಎಲ್ಲೋಸ್ಟೋನ್ ಪಾರ್ಕಿನ ಅನೇಕ ನೂರು ಮೈಲಿಗಳಗಲಗಳಲ್ಲಿ ಹೀಗೆ ಕಣ್ಣಿಗೆ ಕಾಣುವ ಭುಸುಗುಟ್ಟುವ ಬಿಸಿ ನೀರಿನ ನೆಗೆತಗಳೂ, ಕೆಸರು – ಬೆಂಕಿ ಕೊತ ಕೊತ ಕುದಿಯುವ ಸಣ್ಣ ಸಣ್ಣ ಗುಂಡಿಗಳೂ – ಹೊಂಡಗಳೂ ಬಹು ಸಂಖ್ಯೆಯಲ್ಲಿವೆ. ಎಲ್ಲೋಸ್ಟೋನ್ ಪಾರ್ಕಿನ ವಿಶೇಷತೆ ಇರುವುದೇ ಈ ಗೈಸರ್ ಅಥವಾ ಬಿಸಿನೀರ ಬುಗ್ಗೆಗಳಿಂದಾಗಿ. ಈ ಪರಿಸರದಲ್ಲಿ ಮೂರು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯ ಬುಗ್ಗೆಗಳಿವೆ; ಮೂರು – ನಾಲ್ಕು ಅಡಿಗಳಿಂದ ಹಿಡಿದು ಇನ್ನೂರು ಅಡಿ ಎತ್ತರದವರೆಗೂ ನೀರನ್ನು ಚಿಮ್ಮಿಸುವ ಬುಗ್ಗೆಗಳೂ ಇನ್ನೂರಕ್ಕಿಂತ ಹೆಚ್ಚಾಗಿವೆ. ನ್ಯೂಜಿಲ್ಯಾಂಡ್ ಮತ್ತು ಐಸ್‌ಲೆಂಡ್‌ಗಳನ್ನು ಹೊರತುಪಡಿಸಿದರೆ, ಜಗತ್ತಿನಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಗೈಸರ್‌ಗಳಿರುವುದು ಎಲ್ಲೋಸ್ಟೋನ್ ಪಾರ್ಕಿನಲ್ಲಿ.

ಸುಮಾರು ಆರು ಸಾವಿರ ವರ್ಷಗಳ ಹಿಂದೆ, ಈ ಅರಣ್ಯ ಪ್ರದೇಶದ ನಟ್ಟನಡೂ ಭಾಗ ಒಂದು ಆಸ್ಫೋಟಗೊಂಡ ಜ್ವಾಲಾಮುಖಿಯಾಗಿದ್ದದ್ದೆ ಈ ಬಿಸಿ ನೀರಿನ ಊಟೆಗಳ ಹಾಗೂ ಪುಟಿಯುವ ಚಿಲುಮೆಗಳ ಅಧಿಕ ಸಂಖ್ಯೆಗೆ ಕಾರಣ ಎಂದು ಹೇಳಲಾಗಿದೆ. ಈ ಎಲ್ಲೋಸ್ಟೋನ್ ಪಾರ್ಕಿನ ಉದ್ದಗಲಕ್ಕೂ ಸದಾ ಭುಸುಗುಟ್ಟುತ್ತಾ ಹೆಡೆಯೆತ್ತುವ ಗೈಸರ್ ಅಥವಾ ಬಿಸಿನೀರಿನ ಊಟೆಗಳು, ಕೊತ ಕೊತ ಕುದಿಯುತ್ತ ಹುತ್ತದ ಕಣ್ಣುಗಳಂತೆ ಹರಡಿಕೊಂಡ ಕೆಸರಿನ ಗುಂಡಿಗಳು – ಎಲ್ಲವೂ ಪ್ರಪ್ರಾಚೀನವಾದ ಜ್ವಾಲಾಮುಖಿಯ ಹೊಟ್ಟೆಯೊಳಗಿನ ಸಿಟ್ಟಿನಂತೆ, ಎಂದೂ ಮಾಯದ ಗಾಯದ ನಿರಂತರ ನೆನಪುಗಳಂತೆ ಅಂಕಿತವಾಗಿವೆ.

ಈ ಗೈಸರ್ ಅಥವಾ ಊಟೆಗಳಲ್ಲಿ ಅತ್ಯಂತ ಹೆಸರುವಾಸಿಯಾದದ್ದು ‘ಓಲ್ಡ್ ಫೇಯ್ತ್‌ಫುಲ್’ ಎಂಬುದು. ಇಲ್ಲಿರುವ ಅನೇಕ ಬಿಸಿನೀರ ಬುಗ್ಗೆಗಳು ಯಾವುದೇ ನಿಯತ ಕಾಲವನ್ನನುಸರಿಸಿ ಏರಿಳಿಯುವುದಿಲ್ಲ. ಆದರೆ ಈ ‘ಹಳೆಯ ನಂಬಿಗಸ್ಥ’ ಬುಗ್ಗೆ ಮಾತ್ರ ಅದರ ಹೆಸರೇ ಸೂಚಿಸುವಂತೆ, ಅದರ ನೆಗೆತದಲ್ಲಿ ಒಂದು ಅನುಕ್ರಮವಾದ, ಬಹುಮಟ್ಟಿಗೆ ನಿಗದಿತವಾದ ಕಾಲಮಾನವನ್ನು ಅನುಸರಿಸುತ್ತದೆಂದು ತಿಳಿಯಲಾಗಿದೆ. ಅರ್ಧಗಂಟೆಯಿಂದ, ಒಂದುನೂರಾ ಇಪ್ಪತ್ತು ನಿಮಿಷದ ಅಂತರದಲ್ಲಿ, ಈ ಗೈಸರ್ ನಿಯತವಾಗಿ ಎತ್ತರಕ್ಕೆ ನೆಗೆಯುತ್ತದೆ. ಅಲ್ಲಿ ಹಾಕಲಾಗಿರುವ ಸೂಚನಾ ಫಲಕದ ಮೇಲೇನೋ, ಈ ಬುಗ್ಗೆ ಪ್ರತಿ ನಲವತ್ತು ನಿಮಿಷಕ್ಕೆ ಒಂದು ಸಲ ನೆಗೆಯುತ್ತದೆ ಎಂದು ಕಾಣಿಸಲಾಗಿದೆ. ನಾವು ಅಲ್ಲಿಗೆ ಹೋದ ಕೆಲವೇ ನಿಮಿಷಗಳಲ್ಲಿ ಅದು ಪುಟಿಯಲು ಪ್ರಾರಂಭವಾಗಿ, ಕ್ರಮಕ್ರಮವಾಗಿ ಸುಮಾರು ನೂರು – ನೂರೈವತ್ತು ಅಡಿಗಳೆತ್ತರಕ್ಕೆ ಭುಸುಗುಟ್ಟುತ್ತಾ ನೆಗೆದ ಬೆಳ್ಳನೆಯ ಬಿಸಿ ನೀರಿನ ಧಾರೆ, ಸುಮಾರು ಎರಡು ಮೂರು ನಿಮಿಷಗಳ ಕಾಲ ಅಗಲವಾದ ತನ್ನ ಬೆಳ್ಳನೆಯ ಹೆಡೆಯನ್ನು ಬಿಚ್ಚಿ, ಮತ್ತೆ ಹಾಗೆಯೇ ಕುಸಿದು, ಮೈಮುರಿದು ಮಲಗಿಕೊಂಡಿತು. ಈ ಬಿಸಿನೀರಿನ  ಚಿಮ್ಮುಗೆಯ ಸುತ್ತಲೂ ದೊಡ್ಡದಾದ ಹಸುರು ಬಯಲೂ, ಎತ್ತರವಾಗಿ ಬೆಳೆದ ಹಸುರು ಮರಗಳೂ ಇವೆ. ಮತ್ತು ಈ ಹಸುರು ಬಯಲಿನ ಬದಿಗೆ, ಹಲವು ವಸತಿ ಗೃಹಗಳೂ, ರೆಸ್ಟೋರಾಂಟುಗಳೂ, ಕಾರಿಗೆ ಪೆಟ್ರೋಲು ತುಂಬಿಸಿ ಕೊಡುವ ವ್ಯವಸ್ಥೆಗಳೂ ಇವೆ. ಇಡೀ ರಾಷ್ಟ್ರೀಯ ಉದ್ಯಾನದ ಉದ್ದಗಲಕ್ಕೂ ಅಲ್ಲಲ್ಲಿ ಪ್ರವಾಸಿಗಳು ಬಂದು ತಂಗಲು ಅನೇಕ ಕಾಟೇಜ್‌ಗಳಿವೆ. ಅದು ಬೇಡವೆಂದರೆ, ತಾವೇ ಟೆಂಟ್ (ಗುಡಾರ)ಗಳನ್ನು ಹಾಕಿಕೊಂಡು ವಾಸಿಸಲು ತಕ್ಕ ನೆಲೆಗಳೂ ಇವೆ. ಜತೆಗೆ ಪುಟ್ಟ ಮನೆಗಳಂತೆ ಅನುಕೂಲಗಳನ್ನುಳ್ಳ ವಾಹನಗಳನ್ನು ನಿಲ್ಲಿಸಿಕೊಳ್ಳಲು ‘ಕ್ಯಾಂಪ್ ಏರಿಯಾ’ಗಳೂ ಇವೆ. ಈ ರಾಷ್ಟ್ರೀಯ ಉದ್ಯಾನದ ವಿಸ್ತಾರಗಳಲ್ಲಿ, ಹರಿಯುವ ನದೀತೀರಗಳಲ್ಲಿ, ಅಗಲವಾದ ಸರೋವರದ ದಡಗಳಲ್ಲಿ, ಎತ್ತರವಾದ ಬೆಟ್ಟದ ಮುಡಿಗಳಲ್ಲಿ ಹಾಗೂ ಕಣಿವೆಗಳ ಕಾಡುಗಳ ಮಡಿಲುಗಳಲ್ಲಿ ಪ್ರವಾಸಿಗಳು ತಂಗಲು ಅನುಕೂಲಗಳನ್ನು ಕಲ್ಪಿಸಲಾಗಿದೆ. ನದೀ- ಸರೋವರ ಜಲಗಳಲ್ಲಿ ದೋಣಿಗಳಲ್ಲಿ ಪಯಣಿಸುತ್ತಲೋ, ಮೀನು ಹಿಡಿಯುತ್ತಲೋ, ಬೆಟ್ಟದ ಅಂಚಿನ ದುರ್ಗಮ ಪಥಗಳಲ್ಲಿ ವಿಹರಿಸುತ್ತಲೋ, ಕಾಡುಗಳ ನಡುವೆ ಬೇಟೆಯ ಸಾಹಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಲೋ ಇಲ್ಲಿನ ಜನ ತಮ್ಮ ಬಿಡುವಿನ ವೇಳೆಗಳನ್ನು ಅರ್ಥಪೂರ್ಣವನ್ನಾಗಿ ಮಾಡಿಕೊಳ್ಳುತ್ತಾರೆ.

‘ಓಲ್ಡ್ ಫೇಯ್ತ್‌ಫುಲ್’ ಗೈಸರ್ ಅನ್ನು ನೋಡಿಕೊಂಡು, ಅದರ ಹತ್ತಿರದ ಉಪಹಾರ ಗೃಹವೊಂದರಲ್ಲಿ ನಮ್ಮ ಹಸಿವು ನೀರಡಿಕೆಗಳನ್ನು ತೀರಿಸಿಕೊಂಡು, ಪರ್ವತದ ನೇರ ದಾರಿಗಳಲ್ಲಿ, ಎರಡೂ ಕಡೆ ಒತ್ತುಗೊಂಡ ಪೈನ್ ವೃಕ್ಷಗಳ ಓಣಿಗಳಲ್ಲಿ ಹಾದು, ಒಂದೆಡೆ ಬೆಟ್ಟದ ಮೈಯನ್ನು ಬಳಸಿಕೊಂಡು ಇಳಿಯತೊಡಗಿದಾಗ, ಮಧ್ಯಾಹ್ನದ ಮೂರು ಗಂಟೆಯ ಬಿಸಿಲಿನಲ್ಲಿ ಹಠಾತ್ತನೆ ಗೋಚರಿಸಿತು, ಮೈಲಿ ಮೈಲಿಗಳಗಲಕ್ಕೆ ಹರಹಿಕೊಂಡು ಥಳಥಳಿಸುವ ಮಹಾ ಸರೋವರದ ಜಲವಿಸ್ತೀರ್ಣ., ಹದಿನಾಲ್ಕು ಮೈಲಿಗಳಷ್ಟು ಅಗಲವೂ, ಇಪ್ಪತ್ತು ಮೈಲಿಗಳಷ್ಟು ಉದ್ದವೂ ಇರುವ ಈ ಎಲ್ಲೋಸ್ಟೋನ್ ಸರೋವರ ಉತ್ತರ ಅಮೆರಿಕಾದ ಪರ್ವತ ಪ್ರಾಂತ್ಯಗಳಲ್ಲಿರುವ ಸರೋವರಗಳಲ್ಲಿಯೆ ದೊಡ್ಡದೆಂದು ಎಣಿಕೆಯಾಗಿದೆ. ಸುಮಾರು ನಲವತ್ತು ಅಡಿಗಳಿಂದ ಹಿಡಿದು, ನೂರಾನಲವತ್ತು ಅಡಿಗಳ ಸರಾಸರಿ ಆಳಗಳಲ್ಲಿ ನಿಲ್ಲುವ ಈ ಸರೋವರದ ನೀರು, ಮೆಕ್ಸಿಕೋ ಕೊಲ್ಲಿಯ ಮೂಲಕ ಅಟ್ಲಾಂಟಿಕ್ ಮಹಾಸಾಗರಕ್ಕೆ ಹರಿದು ಹೋಗುತ್ತದೆ. ಈ ಸರೋವರದ ಬದಿಯ ಕಾಡುಗಳಲ್ಲಿ ಕಾಡು ಕೋಣಗಳ ಹಿಂಡು ಹಿಂಡೇ ಮೇಯುವುದನ್ನು ಕಂಡು, ಸಂಭ್ರಮಗೊಂಡು ಕಾರನ್ನು ನಿಧಾನಿಸಿದೆವು. ರಸ್ತೆಗೆ ತೀರಾ ಸಮೀಪದಲ್ಲಿ ಮೇಯುತ್ತಿದ್ದ ಕಾಡೆಮ್ಮೆಯೊಂದು (ಕಾಡುಕೋಣ?). ಮೆತ್ತಗೆ  ತಲೆಯೆತ್ತಿ ನಮ್ಮ ಕಡೆಗೆ ಕನಿಕರದ ನೋಟವೊಂದನ್ನು ಬೀರಿ, ತೀರಾ ನಿರ್ಲಕ್ಷ್ಯದಿಂದ ತನ್ನ ಪಾಡಿಗೆ ತಾನು ಮೇಯತೊಡಗಿತು. ಈ ಕಾಡೆಮ್ಮೆ-ಹಾಗೂ ಕಾಡುಕೋಣಗಳು, ನಾನು ಕರ್ನಾಟಕದ ಬಂಡೀಪುರ, ನಾಗರಹೊಳೆ ಅರಣ್ಯಗಳಲ್ಲಿ ಕಂಡ ಕಾಡುಕೋಣಗಳಷ್ಟು ಎತ್ತರವೂ, ಬಲಿಷ್ಠವೂ, ಭಯೋತ್ಪಾದಕವೂ ಆಗಿ ತೋರಲಿಲ್ಲ. ಸುಮಾರು ನಾಲ್ಕೈದು ಅಡಿ ಎತ್ತರದ, ಸೊಂಟದಿಂದ ಕುತ್ತಿಗೆಯವರೆಗೆ ‘ಉಲ್ಲನ್ ವೇಸ್ಟ್ ಕೋಟ್’ ತೊಟ್ಟಂತಿರುವ ಕಂದುಬಣ್ಣದ ತುಪ್ಪುಳದ, ಮುಖದ ಸುತ್ತ ಮುತ್ತ ಜೋಲುವ ಕೂದಲುಗಳುಳ್ಳ ಈ ಕಾಡೆಮ್ಮೆಗಳು, ಮೇಲೆ ನೋಡುವುದಕ್ಕೆ ತೀರಾ ನಿರುಪದ್ರವಕಾರಿಗಳಂತೆ ತೋರಿದರೂ, ಒಂದೊಂದು ಸಲ ಇವೂ ಅಪಾಯಕಾರಿಯಾಗಿ ಪರಿಣಮಿಸಬಲ್ಲವು ಎಂಬ ಎಚ್ಚರಿಕೆಯನ್ನು, ನಮಗೆ ಈ  ಉದ್ಯಾನದ ಪ್ರವೇಶ ದ್ವಾರದಲ್ಲಿಯೇ ಕೊಟ್ಟ ಕರಪತ್ರ ಸ್ಪಷ್ಟಪಡಿಸಿತ್ತು. ಹೀಗಾಗಿ ನಾವು ಅಲ್ಲಲ್ಲಿ ಕಾರು ನಿಲ್ಲಿಸಿ ಕೆಳಕ್ಕೆ ಇಳಿಯದೆ, ಸಾಕಷ್ಟು ಸಂಖ್ಯೆಯಲ್ಲಿ ದಾರಿಬದಿಯ ಏರಿಳಿತಗಳಲ್ಲಿ ಮೇಯುತ್ತಿದ್ದ ಮತ್ತು ಪ್ರವಾಸಿಗಳ ಕಾರುಗಳನ್ನು ಅತ್ಯಂತ ನಿರ್ಲಕ್ಷ್ಯದಿಂದ ನೋಡುತ್ತ ರಸ್ತೆ ದಾಟುತ್ತಿದ್ದ ಕಾಡೆಮ್ಮೆಗಳನ್ನು ಕಂಡೆವು. ಕೆಲವರಂತೂ, ಕಾರಿನಿಂದಾಚೆ ಬಂದು, ವೀಡಿಯೋ ಕ್ಯಾಮರಾಗಳಲ್ಲಿ ಈ ಕಾಡೆಮ್ಮೆಗಳ ಹಿಂಡುಗಳನ್ನೆ ಫೋಟೋ ತೆಗೆಯುತ್ತಿದ್ದರು. ಈ ಕಾಡುಗಳಲ್ಲಿ, ಕಾಡೆಮ್ಮೆಗಳಲ್ಲದೆ ಅಧಿಕ ಸಂಖ್ಯೆಯ ‘ಗ್ಲಿಸ್ಲಿ ಬೇರ್’ ಎಂಬ ಹೆಸರಿನ ಕರಡಿಗಳೂ ಇವೆ. ಇವಂತೂ ಮನುಷ್ಯರಿಗೆ ತೀರಾ ಅಪಾಯಕಾರಿಯಾದ ಪ್ರಾಣಿಗಳೆಂದು ಹೇಳಲಾಗಿದೆ. ಹಾಗೆಯೇ ಜಿಂಕೆಗಳೂ, ಕಡವೆಗಳೂ, ಮೊಲಗಳೂ ಬಹು ಸಂಖ್ಯೆಯಲ್ಲಿವೆ. ನಾವು ಮುಂದೆ ಕಂಡದ್ದು ಒಂದೋ ಎರಡೋ ಕಡವೆಗಳನ್ನು ಮಾತ್ರ, ಆದರೆ. ತಾವು ಎಲ್ಲೋಸ್ಟೋನ್ ಪಾರ್ಕಿಗೆ ಹಿಂದೆ ಹಲವು ಸಲ ಬಂದಿದ್ದರೂ ಇವತ್ತು ಕಂಡಷ್ಟು ಅಧಿಕ ಸಂಖ್ಯೆಯ ಕಾಡೆಮ್ಮೆಗಳ ಹಿಂಡನ್ನು ನೋಡಿದ್ದು ಇದೇ ಮೊದಲ ಸಲವೆಂದೂ, ಇದು ನಮ್ಮೆಲ್ಲರ ಅದೃಷ್ಟವೆಂದೂ ನನ್ನ ಸಂಗಾತಿಗಳಾದ ಸುರೇಶ್ ಕೋಟಿ ಹಾಗೂ ಅವರ ಗೆಳೆಯರು ಮಾತನಾಡಿಕೊಂಡರು.

ಮತ್ತಷ್ಟು ಮೈಲಿಗಳು, ಥಳಥಳಿಸುವ ಸರೋವರದ ಅಂಚಿನ  ಹಸಿರದಾರಿಗಳಲ್ಲಿ ಸಾಗಿತು ನಮ್ಮ ಪಯಣ. ಸಂಜೆ ನಾಲ್ಕರ ಹೊತ್ತಿಗೆ ಈ ಅರಣ್ಯ ಧಾಮದ ‘ಗ್ರ್ಯಾಂಡ್ ಕ್ಯಾನಿಯನ್’ ಪ್ರದೇಶದ ‘ಆರ್ಟಿಸ್ಟ್ ಪಾಯಿಂಟ್’ ಎಂಬ ಸ್ಥಳವನ್ನು ತಲುಪಿದೆವು. ಈ ಮಹಾಕಂದರ (ಗ್ರ್ಯಾಂಡ್ ಕ್ಯಾನಿಯನ್) ಎಂಬುದು, ಎಲ್ಲೋಸ್ಟೋನ್ ನದಿ ಹರಿಯುವ ಮತ್ತು ಜಲಪಾತಗಳಾಗಿ ಧುಮುಕುವ, ಒಂದು ಕಣಿವೆಯ ವಿಸ್ತೀರ್ಣವಾಗಿದೆ. ಸುಮಾರು ಎಂಟು ನೂರು ಅಡಿಗಳಿಂದ, ಒಂದು ಸಾವಿರದ ಎರಡುನೂರು ಅಡಿಗಳಷ್ಟು ಆಳವಾದ, ಎರಡು ಸಾವಿರದ ನಾಲ್ಕು ನೂರು ಅಡಿಗಳಷ್ಟು ಅಗಲವಾದ ಈ ಕಣಿವೆ ಇಪ್ಪತ್ತನಾಲ್ಕು ಮೈಲಿ ಉದ್ದಕ್ಕೆ ಚಾಚಿಕೊಂಡಿದೆ. ಬಾಯ್ದೆರೆದುಕೊಂಡು ಮಲಗಿದ ಈ ಕಣಿವೆಗಳ ನಸು ಹಳದಿ ಬಣ್ಣದ ಸುಣ್ಣಕಲ್ಲುಗಳ ವಕ್ರ ವಿನ್ಯಾಸಗಳ ಮೇಲೆ ಸಂಜೆಯ ಸೂರ್ಯನ ಬೆಳಕು ಬಿದ್ದು ಹಳದಿ ಮತ್ತು ಕಿತ್ತಳೆ ಬಣ್ಣಗಳಿಂದ ಅತ್ಯಂತ ಮೋಹಕವಾಗಿ ತೋರುತ್ತಿತ್ತು. ಈ ಅರಣ್ಯಧಾಮಕ್ಕೆ ‘ಹಳದಿ ಕಲ್ಲುಗಳ ರಾಷ್ಟ್ರೀಯ ಉದ್ಯಾನ’ (ಎಲ್ಲೋಸ್ಟೋನ್ ಪಾರ್ಕ್) ಎಂದು ಹೆಸರು ಬರಲು ಬಹುಶಃ ಈ ಕಣಿವೆಯೊಳಗಣ ಬೆಟ್ಟಗಳ ಮೈ ಸಹಜವಾಗಿಯೇ ಹಳದಿ ಬಣ್ಣದಲ್ಲಿರುವುದು ಕಾರಣವೆಂದು ತೋರುತ್ತದೆ. ಈ ವರ್ಣವೈಭವಕ್ಕೆ                ನಾದವೈಭವವನ್ನೂ ಕೂಡಿಸುವಂತೆ, ಈ ಕಂದರದೊಳಗೆ, ಒಟ್ಟು ನಾಲ್ಕು ನೂರು ಅಡಿಗಳ ಆಳಕ್ಕೆ ಧಮುಕುವ ಎರಡು ಜಲಪಾತಗಳು, ಚಿನ್ನದ ಬಣ್ಣದಿಂದ ರಾರಾಜಿಸುವ ಬೆಟ್ಟದ ಬಂಡೆಗಳ ಮಧ್ಯೆ ಕಾಮನಬಿಲ್ಲನ್ನು ನೇಯ್ದು  ತೋರಣ ಕಟ್ಟುತ್ತಿವೆ. ಮೈಲಿ ಮೈಲಿಗಳ ಅಗಲಕ್ಕೆ ತೆರೆದುಕೊಂಡ ಈ ಪರ್ವತ ಕಣಿವೆಗಳುದ್ದಕ್ಕೂ, ಪ್ರೇಕ್ಷಕರು ನಿಂತು ನೋಡಲು ತಕ್ಕ ಹಲವು ದೃಶ್ಯ ವೇದಿಕೆಗಳನ್ನು ನಿರ್ಮಿಸಲಾಗಿದೆ. ಅವುಗಳಿಗೆ ‘ಆರ್ಟಿಸ್ಟ್ ಪಾಯಿಂಟ್’, ‘ಇನ್‌ಸ್ಪಿರೇಷನ್ ಪಾಯಿಂಟ್’, ಎಂದು ಹೆಸರು ಕೊಡಲಾಗಿದೆ.

ಇಡೀ ಪರ್ವತ ಪ್ರದೇಶದ ಈ ಭಯಂಕರ ಸೀಳುಗಳು, ಅನೇಕ ಕೋಟಿ ವರ್ಷಗಳ ಹಿಂದೆ ಭೂಗರ್ಭವನ್ನು ಭೇದಿಸಿಕೊಂಡು ಹೊರ ಹೊಮ್ಮಿದ ಜ್ವಾಲಾಮುಖಿಗಳ ಪರಿಣಾಮವೆಂದು ವಿಜ್ಞಾನಿಗಳು ಹೇಳುತ್ತಾರೆ. ಇಂದಿಗೂ, ಆ ಜ್ವಾಲಾಮುಖಿಯ ಕೋಪ – ತಾಪಗಳು, ಈ ಕಣಿವೆಯ ಕಲ್ಲಿನ ಗೋಡೆಗಳ ನಡುವೆ ಅಲ್ಲಲ್ಲಿ ಹೊಗೆಯಾಡುವುದನ್ನು ನಾವು ಕಂಡೆವು.

ಈ ಅದ್ಭುತವನ್ನು ನೋಡಿಕೊಂಡು, ಆ ಕಣಿವೆಯ ದಾರಿಯಲ್ಲಿ ಸುಮಾರು ಒಂದು ಗಂಟೆಯ ಪ್ರಯಾಣದ ನಂತರ ‘ಮಾಮತ್ ಹಾಟ್ ಸ್ಪ್ರಿಂಗ್ಸ್’ ಎಂಬಲ್ಲಿಗೆ ಬಂದೆವು. ಮಾಮತ್ ಎಂದರೆ ಮಹತ್ತಾದುದು, ದೊಡ್ಡದು ಎಂದು ಅರ್ಥ. ಒಂದೇ ಕಡೆ ಹಲವು ಹಂತಗಳಲ್ಲಿ, ಸದಾ ಕೊತ ಕೊತ ಕುದಿಯುತ್ತ ಹೊಗೆಯಾಡುವ ಬಹುಸಂಖ್ಯೆಯ ಬಿಸಿನೀರ ಚಿಲುಮೆಗಳ ಸಮುಚ್ಚಯವನ್ನು ‘ಮಾಮತ್ ಹಾಟ್ ಸ್ಪ್ರಿಂಗ್ಸ್ ‘ ಎಂದು ಕರೆಯಲಾಗಿದೆ. ಇವುಗಳನ್ನು ನೋಡಲು ಎತ್ತರವಾದ ಏರುವೆಯನ್ನು ಹತ್ತಲು, ಮರದ ಮೆಟ್ಟಿಲು ದಾರಿಯನ್ನು ನಿರ್ಮಿಸಲಾಗಿದೆ. ವಿಲಕ್ಷಣವಾದ ಗಂಧಕದ ಕಟುವಾಸನೆಯ ನಡುವೆ, ಹಲವು ಹಂತಗಳಲ್ಲಿ ಸಣ್ಣಗೆ ಹೊರಳಾಡುವ ಹಲವು ಚಿಲುಮೆಗಳನ್ನೂ ಕಂಡೆವು.

ಆಗಲೇ ಕಾಡು ಕಣಿವೆಗಳ ಮೇಲೆ ಸಂಜೆ ತನ್ನ ಕಪ್ಪು ರೆಕ್ಕೆಗಳನ್ನು ಹರಡತೊಡಗಿತ್ತು. ಬೆಳಗಿನಿಂದ ಒಂದೇ ಸಮನೆ ನೂರಾರು ಮೈಲಿಗಳ ವಿಸ್ತಾರದಲ್ಲಿ  ಪ್ರಯಾಣಮಾಡಿದ ಆಯಾಸದಿಂದ, ನನ್ನ ಜತೆಗಿದ್ದ ತರುಣರ ಉತ್ಸಾಹ, ಆದಷ್ಟು ಬೇಗ ಮನೆ ಸೇರಿಕೊಳ್ಳುವ ಕಾತರವಾಗಿ ಪರಿಣಮಿಸಿತ್ತು. ಅನೇಕ ಕಣಿವೆಗಳ ಹಾಗೂ ಊರುಗಳ ದಾರಿಗಳಲ್ಲಿ ಉರುಳಿ ಬೋಜೆಮಿನ್ ತಲುಪುವ ಹೊತ್ತಿಗೆ ರಾತ್ರಿ ಒಂಬತ್ತೂವರೆಯಾಗಿತ್ತು. ನನ್ನ ಅವಸರದ ಈ ಪಯಣದ ಹಾದಿಯಲ್ಲಿ, ಮೂರು ದಿನಗಳು ನೋಡಿದರೂ ಮುಗಿಯದ ಈ ಎಲ್ಲೋಸ್ಟೋನ್ ಪಾರ್ಕಿನ ಒಂದಷ್ಟು ಸ್ಥಳಗಳನ್ನು, ಕೇವಲ ಒಂದೇ ದಿನದಲ್ಲಿ ತೋರಿಸಿದ ಸುರೇಶ್‌ಕೋಟಿ ಹಾಗೂ ಅವರ ಗೆಳೆಯರ ಉಪಕಾರವನ್ನು ನೆನೆಯುತ್ತ, ಅವರ ಆತಿಥ್ಯದಲ್ಲಿ ನೆಮ್ಮದಿಯಿಂದ ನಿದ್ದೆ ಮಾಡಿದೆ.

* * *

ಬೆಳಿಗ್ಗೆ ಬೋಜೆಮಿನ್‌ದಿಂದ ಎಂಟೂವರೆಗೆ ಹೊರಟ ವಿಮಾನ, ಒಂದೂವರೆ ಗಂಟೆಯ ಪಯಣದ ನಂತರ, ನನ್ನನ್ನು ಡೆನ್ವರ್‌ನಲ್ಲಿ ಇಳಿಸಿತು. ಮತ್ತೆ ಮುಂದಕ್ಕೆ ಆ ದಿನವೇ ಸ್ಯಾನ್‌ಫ್ರಾನ್ಸಿಸ್‌ಸ್ಕೋಗೆ ಬೇರೊಂದು ವಿಮಾನವನ್ನು ಹಿಡಿಯಲು, ಪಕ್ಕದಲ್ಲೇ ಇದ್ದ ಇನ್ನೊಂದು ಏರೋಡ್ರೋಮಿಗೆ ಬಂದೆ. ಈ ವಿಮಾನ ಹೊರಡುವುದು ಮಧ್ಯಾಹ್ನ ಹನ್ನೆರಡು ಗಂಟೆಗೆ. ಆದಕಾರಣ ನಿಗದಿತವಾದ ಕೌಂಟರ್ ಎದುರಿನ ಉದ್ದನೆಯ ಮೊಗಸಾಲೆಯಲ್ಲಿ ಬೇರೆ ಬೇರೆ ವಿಮಾನಗಳಿಗಾಗಿ ಕಾದು ಕೂತ, ಹಾಗೂ ಓಡಾಡುವ ಪ್ರಯಾಣಿಕರನ್ನು ನೋಡುತ್ತ ಕೂತೆ.

ನನ್ನ ಬದಿಗೆ ಒಬ್ಬ ಅಮೆರಿಕನ್ ಸಭ್ಯ ಗೃಹಸ್ಥ, ತನ್ನ ಹೆಂಡತಿ ಹಾಗೂ ಮಗುವಿನೊಂದಿಗೆ ಬಂದು ಕುಳಿತರು. ಅವರು ಬಂದೊಡನೆಯೇ, ನನ್ನನ್ನು ಪೂರ್ವಪರಿಚಿತನೋ ಏನೋ ಎಂಬಂತೆ. ‘ಹಾಯ್’ ಎಂದು, ಗುಡ್‌ಮಾರ್ನಿಂಗ್ ಹೇಳಿದರು. ಅಮೆರಿಕಾದ ಜನದ ಈ ನಡವಳಿಕೆ ನನಗೆ ಈ ವೇಳೆಗಾಗಲೇ ಸಾಕಷ್ಟು ಪರಿಚಯವಾಗಿತ್ತು. ಈ ಜನಕ್ಕೆ ತಾವಾಗಿಯೇ ಇತರರನ್ನು ಮಾತನಾಡಿಸುವುದರಲ್ಲಿ ಯಾವ ಬಿಗುಮಾನವೂ ಇಲ್ಲ. ನೀವು ಗೊತ್ತಿರಲಿ, ಗೊತ್ತಿಲ್ಲದಿರಲಿ, ಗಂಡಾಗಲಿ, ಹೆಣ್ಣಾಗಲಿ, ಮುಗುಳ್ನಗೆ ಬೀರಿ ‘ಹಾಯ್’ ಅನ್ನುವುದು ಸಾಮಾನ್ಯವಾದ ಸಂಗತಿ. ನನ್ನನ್ನು ಮಾತಾಡಿಸಿದ ಈ ದಂಪತಿಗಳಿಗೆ, ನಾನೂ ‘ಗುಡ್‌ಮಾರ್ನಿಂಗ್ ‘ ಹೇಳಿದೆ. ನಾನು ಬರುತ್ತಿರುವುದೆಲ್ಲಿಂದ, ಹೋಗುವುದೆಲ್ಲಿಗೆ ಎಂಬ ಪ್ರಶ್ನೆಗಳೊಂದಿಗೆ, ಈ ನಮ್ಮ ದೇಶ ನಿಮಗೆ ಹಿಡಿಸಿತೇ, ಏನೂ ತೊಂದರೆಯಾಗಲಿಲ್ಲವಷ್ಟೆ- ಎಂದೂ ಕೇಳಿದರು. ಅಷ್ಟರಲ್ಲಿ ಅವರ ಮೂರು ವರ್ಷದ ಪುಟ್ಟ ಮಗು, ಏನು ಕೇಳಿತೋ, ಅದರ ತಾಯಿ ಅದನ್ನು ಮೊಗಸಾಲೆಯೊಳಗಿನ ಅಂಗಡಿಗೆ ಕರೆದುಕೊಂಡು ಹೋಗಿ ಒಂದೆರಡು ಚಾಕಲೇಟು ಕೊಡಿಸಿ ಮತ್ತೆ ಕರೆದುಕೊಂಡು ಬಂದಳು. ಮಗು ಆ ಚಾಕಲೇಟಿಗೆ ಸುತ್ತಿದ್ದ ಬಣ್ಣದ ಹೊದಿಕೆಯನ್ನು ಬಿಚ್ಚಿ, ಕೈಯ್ಯಲ್ಲಿ ಹಿಡಿದುಕೊಂಡು, ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ, ನಡೆದುಹೋಗಿ, ಸಮೀಪದಲ್ಲಿಯೇ ಇದ್ದ ಪೋಸ್ಟ್ ಬಾಕ್ಸ್ ಆಕಾರದ ಕಸದ ಬುಟ್ಟಿಗೆ ಹಾಕಿತು. ಇದನ್ನು ಕಂಡು ನನಗೆ ಆಶ್ಚರ್ಯ – ಸಂತೋಷ ಉಂಟಾಯಿತು. ನಮ್ಮ ದೇಶದ, ಈ ವಯಸ್ಸಿನ ಮಗುವೊಂದು ಇಂಥ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಮೆರಿಕಾದ ಮಗು, ಕಸವನ್ನು ಎಲ್ಲೆಂದರೆ ಅಲ್ಲಿ ಎಸೆಯಬಾರದೆಂಬ ತಿಳಿವಳಿಕೆಯನ್ನು ಅದು ಹುಟ್ಟಿದಂದಿನಿಂದ ತನ್ನ ಪ್ರಜ್ಞೆಯೊಳಗೆ ತಂದುಕೊಂಡಿರುತ್ತದೆ. ಅದಕ್ಕೆ ಅದರ ತಂದೆ – ತಾಯಂದಿರ, ಹಾಗೂ ಅದರ ಸಾಮಾಜಿಕ ಪರಿಸರದ ನಡವಳಿಕೆಯೆ ಬಹು ಮುಖ್ಯವಾದ ಕಾರಣ.

ಹನ್ನೊಂದೂವರೆಯ ವೇಳೆಗೆ ಸ್ಯಾನ್‌ಫ್ರಾನ್ಸಿಸ್ಕೋಗೆ ಹೊರಡಲಿರುವ ಬೋಯಿಂಗ್ ವಿಮಾನ ಸಿದ್ಧವಾಗಿದೆ ಎಂಬ ಕರೆಯನ್ನು ಕೇಳಿ, ಕೊಳವೆಯಾಕಾರದ ದಾರಿಯ ಮೂಲಕ ವಿಮಾನದ ಹೊಟ್ಟೆಯನ್ನು ಹೊಕ್ಕು ಮೊದಲೇ ಕೇಳಿ ಗುರುತು ಮಾಡಿಸಿಕೊಂಡ ಕಿಟಕಿಯ ಪಕ್ಕದ ಸೀಟಿನಲ್ಲಿ ಕುಳಿತೆ. ನೂರಾರು ಜನರನ್ನು ತುಂಬಿಕೊಂಡ ಆ ದೊಡ್ಡ ವಿಮಾನ, ಡೆನ್‌ವರ್ ವಿಮಾನ ನಿಲ್ದಾಣದ ಉಡ್ಯಾಣಪಥ (ರನ್‌ವೇ) ದ ಮೇಲೆ ಸ್ವಲ್ಪ ದೂರ ಹೋಗಿ ಮೇಲೇರದೆ ಹಾಗೆಯೇ ನಿಂತುಬಿಟ್ಟಿತು. ಇನ್ನೇನು ಈಗ ಏರಬಹುದು, ಆಗ ಏರಬಹುದು ಎಂದು ಕುಳಿತರೆ, ಚಲನೆಯೇ ಇಲ್ಲ. ವಿಮಾನದೊಳಗಿನ ಯಾವ ಪ್ರಯಾಣಿಕರೂ ಈ ಕುರಿತು ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ನಿಶ್ಚಿಂತರಾಗಿರುವಂತೆ ತೋರಿತು. ಸುಮಾರು ಇಪ್ಪತ್ತು ನಿಮಿಷಗಳಾದ ನಂತರ, ಈ ವಿಮಾನ ಆಕಾಶಪಥಕ್ಕೆ ಏರಲು ‘ರನ್‌ವೇ’ ಖಾಲಿ ಇಲ್ಲವೆಂದೂ, ನಾನು ಮುಂದೆ ತಾನು ಮುಂದೆ ಎಂದು ಏರಲು ಸಿದ್ಧವಾಗಿ ರನ್‌ವೇಯ ಮೇಲೆ ಈಗಾಗಲೇ ಸರದಿ ಕಾಯುತ್ತಿರುವ ವಿಮಾನಗಳು ಅನುಕ್ರಮವಾಗಿ ಹಾರಿದ ನಂತರವೇ, ಈ ನಮ್ಮ ವಿಮಾನ ಏರಲಿದೆಯೆಂದೂ ತಿಳಿಯಿತು. ಕಡೆಗೆ ಅರ್ಧಗಂಟೆಯ ಹೊತ್ತಿಗೆ, ಸ್ತಬ್ಧವಾದ ವಿಮಾನದ ಗಾಲಿಗಳು ಚಲಿಸತೊಡಗಿ ಭೋರೆಂಬ ಅಬ್ಬರದೊಂದಿಗೆ ನಮ್ಮ ವಿಮಾನ ತೆರವಾದ ದಾರಿಯ ಮೇಲೆ ಒಂದಷ್ಟು ದೂರ ಓಡಿ, ಆಕಾಶಮಾರ್ಗವನ್ನು ಸೇರಿತು. ಡೆನ್ವರ್ ಬಿಟ್ಟ ಸ್ವಲ್ಪ ಹೊತ್ತಿನಲ್ಲಿ ಪಶ್ಚಿಮಾಭಿಮುಖವಾಗಿ ಹೊರಟ ವಿಮಾನದ ಕಿಟಕಿಗಾಜಿಗೆ ಮುಖವೊತ್ತಿ ನೊಡಿದರೆ, ಕೆಳಗೆ ಪದರ ಪದರಗಳಾಗಿ ತೆರೆದುಕೊಳ್ಳುವ ಪರ್ವತ ಮಂಡಲಗಳ ದೃಶ್ಯ ಅದ್ಭುತವಾಗಿತ್ತು. ಆಳವಾದ ಕಣಿವೆಗಳು; ಅವುಗಳ ನಡುವೆ ಅಲ್ಲಲ್ಲಿ ಸರೋವರಗಳು; ಕಣಿವೆಗಳೊಳಗೆ ತೂರಿ ಬಯಲಲ್ಲಿ ಬೆಳ್ಳಿಯ ಡೊಂಕು ಗೆರೆಗಳಾದ ನದಿಗಳು; ನೆಲದ ಏರಿಳಿತಗಳಿಗೆ ಅನುಸಾರವಾದ ವರ್ಣವಿನ್ಯಾಸಗಳ ತೇಪೆಗಳು; ಎತ್ತರದ ಬೆಟ್ಟದ ಕಣಿವೆಯ ತೊಟ್ಟಿಲುಗಳಲ್ಲಿ ಮಲಗಿದ ಮಂಜುಗಳು; ಅಲ್ಲಲ್ಲಿ ದಟ್ಟ ಹಸುರಿನ  ನೆಲೆಗಳು; ಮತ್ತೆ ಕೆಲವೆಡೆ ಹಸುರೇ ಇಲ್ಲದ ಕಂದು ಬಣ್ಣದ ಹರಹುಗಳು. ಈ ನಿಸರ್ಗದ ಸೊಗಸನ್ನು ನೋಡುತ್ತಾ ಇದ್ದ ಹಾಗೆ ‘ಇದೀಗ ಮಧ್ಯಾಹ್ನದ ಊಟವನ್ನು ಕೊಡಲಾಗುತ್ತದೆ’ ಎಂಬ ಘೋಷಣೆ ಕೇಳಿಸಿ ಎಲ್ಲರೂ ಒಂದಷ್ಟು ಉತ್ಸಾಹಿತರಾದರು.

ನಾನಂತೂ ನೂರಕ್ಕೆ ನೂರ ಹತ್ತರಷ್ಟು ಸಸ್ಯಾಹಾರಿ. ಚಿಕ್ಕಂದಿನಲ್ಲಿ ಒಂದು ದಿನ ಕೋಳೀಮೊಟ್ಟೆಯನ್ನು ತಿಂದೆ. ಆದರೆ ಇಡೀ ದಿನ ಜೀವಂತವಾದ ಕೋಳಿಯೊಂದು ನನ್ನ ದೇಹಾದ್ಯಂತ ಕೊಕ್ಕೊಕೋ ಎಂದು ಅರಚುತ್ತಾ ಓಡಾಡಿದ ಅನುಭವವಾಗಿ, ಕೋಳೀಮೊಟ್ಟೆ ತಿನ್ನುವುದನ್ನು ರೂಢಿಸಿಕೊಳ್ಳಬೇಕೆಂದು ನಾನು ಮಾಡಿದ ಪ್ರಯತ್ನ ವಿಫಲವಾಯಿತು. ಹೀಗಾಗಿ ನಾನು ಬಲವಂತದ ಸಸ್ಯಾಹಾರಿಯಾಗಿಯೇ ಉಳಿಯಬೇಕಾಯಿತು. ಹಿಂದೆ, ೧೯೭೩ರಲ್ಲಿ ನಾನು ಮಾಸ್ಕೋಗೆ ಹೋದಾಗ, ಈ ವಿದೇಶಗಳಲ್ಲಿ ನನ್ನಂಥ ಸಸ್ಯಾಹಾರಿಯ ಗತಿ ಏನು ಎಂಬ ದಿಗಿಲಾಗಿದ್ದರೂ, ರಷ್ಯಾದಲ್ಲಿ ನನಗೇನೂ ತೊಂದರೆಯಾಗಲಿಲ್ಲ. ಹಾಲು – ಹಣ್ಣು – ಹಣ್ಣಿನ ರಸ-ಬ್ರೆಡ್ಡು- ಮೊಸರು – ತರಕಾರಿ ಇವುಗಳಿಗೇನೂ ಅಲ್ಲಿ ಕೊರತೆಯಿರಲಿಲ್ಲ. ಅಮೆರಿಕಾದಲ್ಲಂತೂ ಈ ಬಗೆಯ  ಹಣ್ಣು- ಹಂಪಲುಗಳಿಗಾಗಲಿ, ಸಸ್ಯಾಹಾರಿ ತಿನಿಸುಗಳಿಗಾಗಲಿ ಯೋಚನೆ ಮಾಡಬೇಕಾದುದಿಲ್ಲ. ಅಮೆರಿಕಾದ ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವಾಗಲಂತೂ, ದೇಶಾದ್ಯಂತ ‘ಡಂಕಿನ್ ಡೋನಟ್’, ‘ಮಿಸ್ಟರ್ ಡೋನಟ್’, ‘ಮಾಕ್ಡೊನಾಲ್ಡ್’,  ‘ಪೀಜಾಹಟ್’ – ಹೆಸರಿನ ಉಪಹಾರ ಗೃಹಗಳ ಸರಣಿಯೇ ಇದೆ. ಇವುಗಳಲ್ಲಿ ಮಾಂಸಾಹಾರ ಹಾಗೂ ಸಸ್ಯಾಹಾರದ ತಿನಿಸುಗಳು ದೊರೆಯುತ್ತವೆ. ಸೊಗಸಾದ ಹಾಲು, ಸೊಗಸಾದ ಹಣ್ಣಿನ ರಸ, ಅಚ್ಚುಕಟ್ಟಾದ ಪ್ಯಾಕೆಟ್‌ಗಳಲ್ಲಿ ದೊರೆಯುತ್ತದೆ. ಹೀಗಾಗಿ ನನ್ನ ಪಯಣದಲ್ಲಿ ಯಾವುದೇ ತೊಂದರೆಯಾಗಲಿಲ್ಲ. ಜತೆಗೆ ಎಲ್ಲ ಊರುಗಳಲ್ಲಿಯೂ ನಾನು ಉಳಿದುಕೊಂಡದ್ದು ನಮ್ಮ ಕನ್ನಡಿಗರ ಮನೆಗಳಲ್ಲಿಯೇ. ಅಲ್ಲದೆ ನನ್ನ ಬಹುಮಟ್ಟಿನ ವಿಮಾನ ಪ್ರಯಾಣ ಬೆಳಿಗ್ಗೆ ಅಥವಾ ಸಂಜೆಯ ಕಾಲಗಳಲ್ಲಿ. ಅವೂ ಮುಕ್ಕಾಲುಘಂಟೆಯಿಂದ ಹೆಚ್ಚೆಂದರೆ ಒಂದೂವರೆ ಗಂಟೆಗಳ ಅವಧಿಗೆ ಒಳಪಟ್ಟವಾಗಿದ್ದವು. ಆದರೆ ಈ ದಿನದ ಪ್ರಯಾಣ ಮಾತ್ರ, ಬೆಳಿಗ್ಗೆ ಎಂಟೂವರೆ ಗಂಟೆಯಿಂದ ಒಂಬತ್ತೂವರೆಯವರೆಗೆ, ಅನಂತರ ಹನ್ನೆರಡೂವರೆಯಿಂದ ಎರಡೂವರೆಯವರೆಗೆ ಇದ್ದುದರಿಂದ ವಿಮಾನದಲ್ಲಿ ಊಟ ಮಾಡಲೇಬೇಕಾದ ಪರಿಸ್ಥಿತಿಗೆ ನಾನು ಸಿಕ್ಕಿ ಬಿದ್ದೆ.

ಒಂದು ಸಂಗತಿ ಎಂದರೆ, ಏನು ಮಾಡಿದರೂ ಇಲ್ಲಿನ ಜನಕ್ಕೆ ‘ವೆಜಿಟೇರಿಯನ್’ ಎಂಬ ಪದದ ಅರ್ಥವನ್ನು ಸರಿಯಾಗಿ ಮನದಟ್ಟು ಮಾಡಿಕೊಡುವುದು ಬಲು ಕಷ್ಟ. ‘ವೆಜಿಟೇರಿಯನ್’ ಅಂದೊಡನೆಯೇ, ‘ಅಯ್ಯೋ ಪಾಪ’ಎಂಬಂಥ ಕನಿಕರದಿಂದ ನಮ್ಮನ್ನು ನೋಡುತ್ತಾರೆ. ಒಂದೊಂದು ಸಲ ವಿಮಾನಗಳಲ್ಲಿ ಬೆಳಗಿನ ಉಪಹಾರಕ್ಕೆ  ಕೊಡುವುದು ‘ಹಾಟ್‌ಡಾಗ್’ ಅಥವಾ ‘ಹ್ಯಾಂಬರ್ಗರ್’ನ್ನು. ಈ ಎರಡೂ ದನದ ಮಾಂಸವನ್ನು ಮಧ್ಯೆ ತುರುಕಿ ಬೇಯಿಸಿದ ಬ್ರೆಡ್ಡಿನ ತಯಾರಿಕೆಗಳು. ನನಗೆ ‘ವೆಜಿಟೇರಿಯನ್’ ಉಪಹಾರ ಬೇಕು ಎಂದಾಗ, ನಗು ಮುಖದ ಗಗನಸಖಿಯರು, ಭುಜ ಕುಣಿಸಿ “Sorry, this is what we have” (ಕ್ಷಮಿಸಿ, ನಮ್ಮಲ್ಲಿರುವುದು ಇಷ್ಟು ಮಾತ್ರ) ಎಂದದ್ದುಂಟು. ಅಂಥವೇಳೆ ನಾನು ಪ್ಯಾಕೆಟ್‌ನೊಳಗಿನ ಥಣ್ಣನೆಯ ಹಾಲನ್ನೂ, ಹಣ್ಣಿನ ರಸವನ್ನೂ ತೆಗೆದುಕೊಂಡು ಸುಮ್ಮನಾಗುತ್ತಿದ್ದೆ. ‘ವೆಜಿಟೇರಿಯನ್’ ಬೇಕು ಎಂದು ತಿಳಿಸುವಾಗ. “No Fish, No Egg, No Meat.” (ಮೀನು ಬೇಡ, ಮೊಟ್ಟೆ ಬೇಡ, ಮಾಂಸ ಬೇಡ) ಎಂದು ನಾನು ಸ್ಪಷ್ಟಪಡಿಸುವುದು ಅಗತ್ಯ ಎಂದು ನನ್ನ ಗೆಳೆಯರು ನನಗೆ ಹೇಳಿದ್ದರು. ಅದರಂತೆ, ನಾನು ಈ ವಿಮಾನದ ಪ್ರಯಾಣದ ಸಂದರ್ಭದಲ್ಲಿ ನನಗೆ ಮಧ್ಯಾಹ್ನದ ಊಟವನ್ನು ಕೊಡಲು ಬಂದ ಗಗನಸಖಿಗೆ,  – “No Fish, No Egg, No Meat. I am a Vegetarian” ಎಂಬ ಗಾಯತ್ರೀ ಮಂತ್ರವನ್ನು ಪಠಿಸಿದೆ. ಆಕೆ ಕನಿಕರದ ಮುಖ ಮಾಡಿಕೊಂಡು. “O.K. I shall get you something Vegetarian’’ (ಆಗಲಿ, ನಿಮಗೆ ಒಂದಷ್ಟು ಸಸ್ಯಾಹಾರವನ್ನೇ ಕೊಡುತ್ತೇನೆ) ಎಂದು ಆಶ್ವಾಸನೆ ಕೊಟ್ಟು, ಸ್ವಲ್ಪ ಹೊತ್ತಿನ ಮೇಲೆ ಒಂದು ಟ್ರೇಯನ್ನು ತಂದು ನನ್ನ ಮುಂದೆ ಹೆಮ್ಮೆಯಿಂದ ಇರಿಸಿದಳು. ನೋಡುತ್ತೇನೆ. ಅದರಲ್ಲಿ ಅರ್ಧಕ್ಕೆ ಕತ್ತರಿಸಿದ ಹಸೀ ಕೋಸುಗಡ್ಡೆ, ಒಂದಷ್ಟು ಹಸೀ ಸೊಪ್ಪು; ಸಣ್ಣಗೆ ಕ್ಯಾರೆಟ್ ಹೋಳುಗಳು; ಒಂದಷ್ಟು ಬೇಯಿಸಿದ ಹುರುಳೀಕಾಯಿ! ನಾನು ನನ್ನ ಮುಂದಿಟ್ಟ ‘ಸಸ್ಯಾಹಾರ’ವನ್ನು ಮೇಯಲಿಲ್ಲ. ಒಂದಷ್ಟು ಹಣ್ಣಿನ ರಸ ತರಿಸಿಕೊಂಡು ಕುಡಿದು, ವಿಮಾನದ ಅವತರಣಕ್ಕೆ ಕಾದು ಕುಳಿತೆ.

ನಮ್ಮ ವಿಮಾನ ಸ್ಯಾನ್‌ಫ್ರಾನ್ಸಿಸ್ಕೋ ತಲುಪಿದಾಗ ಮಧ್ಯಾಹ್ನ ಎರಡೂವರೆ ಗಂಟೆ. ಅಮೆರಿಕಾದ ಪಶ್ಚಿಮ ಸಾಗರ ತೀರದಲ್ಲಿರುವ ಸ್ಯಾನ್‌ಫ್ರಾನ್ಸಿಸ್ಕೋ ನಗರದ ಭೂಭಾಗದೊಳಕ್ಕೆ ಚಾಚಿಕೊಂಡ ಪೆಸಿಫಿಕ್ ಮಹಾಸಾಗರದ ಕಡುನೀಲಿಯ ಮೇಲೆ, ಉದ್ದಕ್ಕೂ ಹಾಸಿಕೊಂಡ ಸೇತುವೆಗಳ ವೈಚಿತ್ರ್ಯವನ್ನು ವೀಕ್ಷಿಸುತ್ತಾ ಇದ್ದಂತೆ, ವಿಮಾನ ನೆಲವನ್ನು ತಾಗಿ, ರನ್‌ವೇಯ ಮೇಲೆ ಹಾದು ನಿಲುಗಡೆಗೆ ಬಂದಿತು. ತೆರೆದ ಬಾಗಿಲ ಮೂಲಕ, ಕೊಳವೆ ದಾರಿಯೊಳಗಿನಿಂದ ದಂಗು ಬಡಿಸುವ ವಿಮಾನದ ನಿಲ್ಮನೆಯ ಮೊಗಸಾಲೆಗಳನ್ನು ದಾಟಿಕೊಂಡು, ಈ ನಿಲ್ಮನೆಯ ಕೆಳಗಿನ ಹಂತದಲ್ಲಿ ನಾನು ನನ್ನ ಲಗ್ಗೇಜುಗಳನ್ನು ಪಡೆದುಕೊಳ್ಳುವ ಸ್ಥಳದಲ್ಲಿ ನನಗಾಗಿ ಕಾಯುತ್ತಿರುವುದಾಗಿ, ಹಿಂದಿನ ದಿನವೇ ದೂರವಾಣಿಯ ಮೂಲಕ ಖಚಿತ ಪಡಿಸಿದ, ನನ್ನ ಹಳೆಯ ಹಾಗೂ ಆತ್ಮೀಯ ಗೆಳೆಯರಾದ ಡಾ.ಎ. ಸುಬ್ಬರಾಯರ ಮಗಳು, ಶ್ರೀಮತಿ ನಂದಾಳಿಗಾಗಿ ಹುಡುಕತೊಡಗಿದೆ.