`ಮಧ್ಯಾನ್ಹ ಬರೋಬ್ಬರಿ ೪ ಗಂಟೆ, ಮನೆ ಜಗುಲಿಯಲ್ಲಿ ಕೂತಿದ್ದೆ, ಮಳೆ ಅಬ್ಬರ ಜೋರಾಗಿತ್ತು. ಮನೆ ಎದುರಿನ ತೆಂಗಿನ ಮರಗಳು ಇದ್ದಕ್ಕಿದ್ದಂತೆ ಮೇಲಕ್ಕೂ ಕೆಳಕ್ಕೂ ನರ್ತಿಸಿದವು ! ಜಾರು ಬಂಡಿಯಲ್ಲಿ ಕೂತು ಸುಯ್ಯನೇ ಸಾಗಿದಂತೆ ಗುಡ್ಡದತ್ತ ತಲೆ ಬಾಗಿಸುತ್ತ  ಸರಿಯತೊಡಗಿದವು . ಮತ್ತೆ ಮತ್ತೆ ನೋಡಿದೆ, ಅರೆರೇ …. ! ಏನಾಗುತ್ತಿದೆ ? ನಾವೂ ಮನೆ ಸಹಿತ ಜಾರುತ್ತಿದ್ದೇವೆ !  ಓಡಿ ಅಂಗಳ ಜಿಗಿದೆ, ೩೦೦ ಮೀಟರ್ ದೂರದ ಕೊಂಕಣ ರೈಲ್ವೆ ಟ್ರ್ಯಾಕ್  ತಲುಪಿ ತಕ್ಷಣ ಹಿಂತಿರುಗಿ ನೋಡಿದೆ. ಸಾವಿರಾರು ತೆಂಗಿನ ಮರಗಳ ನಡುವೆ ನಿಂತ ನಮ್ಮ  ಝರಿವಾಡದಲ್ಲಿ ಮನೆಗಳೇ ನಾಪತ್ತೆ! ಸುಮಾರು ೨೦ ಅಡಿ ಎತ್ತರದ ರಾಡಿಮಣ್ಣು  ಇಡೀ ಊರಿನ ಮನೆಗಳನ್ನು ಸಾವಿನ ಸಗಟುಗುತ್ತಿಗೆ ಹಿಡಿದಂತೆ ಮುಚ್ಚಿ ಹಾಕಿತು. ೫೨ ಬಾಗಿಲುಗಳ ಶತಮಾನದ ನಮ್ಮ ಮನೆ ಹುಡುಕಿದೆ,  ಮನೆಯಷ್ಟೇ ಅಲ್ಲ, ಅದರೊಳಗಿನ ೮ ಜನರನ್ನು  ಗುಡ್ಡ ನುಂಗಿತ್ತು! ಕೆಮರಸ್ ನಿಳೋಬಾ ಮನೆಯ ದಯಾನಂದ ತಳೇಕರ್ ಕುಸಿದ ಗುಡ್ಡದ ಪ್ರತ್ಯಕ್ಷದರ್ಶಿ.  ೮ ಮನೆಗಳ ೧೯ ಜನ ಸಜೀವ ಸಮಾದಿಯಾದ  ಜರಿವಾಡಾ ಪ್ರದೇಶದಲ್ಲಿ  ಓಡಾಡಿ ವಿವರ ಕೇಳಿದರೆ  ಈಗಲೂ ನಿಂತ ನೆಲ ಅದುರಿದ ಅನುಭವ.

ಗುಡ್ಡ ಕುಸಿತದ ಸುದ್ದಿ ಕೇಳಿ ಹಳ್ಳಿಯ ಸರೋಜಾ ಗೋವೆಕರಿಗೆ ತಂಗಿ ಲಲಿತೆಯ ನೆನಪಾಯ್ತು. ಲಘುಬಗೆಯಲ್ಲಿ ರೈಲ್ವೆ ಹಳಿಯಲ್ಲಿ ಓಡಿ ಜರಿವಾಡಾದ ದಿಕ್ಕು ನೋಡಿದಳು. ಅಲ್ಲಿ ಮನೆಗಳಿಲ್ಲ, ರೇಲ್ವೆ ಹಳಿಯಲ್ಲಿ  ಇಬ್ಬರು ಹುಡುಗಿಯರು ಕೂತಿದ್ದರು …..ಹೋಗಿ ನೋಡಿದರೆ ತಂಗಿಯ ಮಕ್ಕಳು… ನೋಡು ನೋಡುತ್ತಲೇ ಅಡುಗೆ ಮನೆಯ ಗೋಡೆ ಕುಸಿದು ತಾಯಿ ಕಣ್ಮರೆಯಾದಳು, ತಂದೆಯೂ ಅದೇ ಮಾರ್ಗ ಅನುಸರಿಸಿದರು. ಜಗುಲಿಯಿಂದ ಅಂಗಳಕ್ಕೆ ಜಿಗಿದ ಮನಿಷಾ, ಅಂಜಲಿಯರಿಗೆ  ಸಹೋದರ ಅಜಯ ಮಣ್ಣಿನಲ್ಲಿ ಸಿಲುಕಿದ್ದು ಕಂಡಿತು. ಸಹೋದರನನ್ನು ಎಬ್ಬಿಸಲು ಮನಿಷಾ  ಪ್ರಯತ್ನಿಸಿ ಅವಳೂ ಸಿಕ್ಕಿಕೊಂಡಳು! ಹಳ್ಳಿಗ ಸೂರಜ್ ಪ್ರಯತ್ನದಿಂದ  ಮನಿಷಾ ಬಚಾವಾದಳು. ಮನೆ ಮಂದಿಯನ್ನು ಕಳೆದುಕೊಂಡ  ಅನಾಥ ಹುಡುಗಿಯರು ದಿಕ್ಕು ತೋಚದೆ ರೇಲ್ವೆ ಟ್ರ್ಯಾಕ್‌ನಲ್ಲಿ ಬಂದು ಕುಳಿತರು. ಕೆಲಸದ ನಿಮಿತ್ತ ಗೋವಾಕ್ಕೆ ಹೋಗಿದ್ದ ಪ್ರೀತಿ ಸುರಕ್ಷಿತವಾಗಿದ್ದಳು. ಈ ಮಕ್ಕಳು ಈಗ ದೊಡ್ಡಮ್ಮ ಸುಶೀಲಳ ಮನೆ ಜಗುಲಿಯ ಮಂಚದಲ್ಲಿ ಶೂನ್ಯ ದೃಷ್ಟಿಯಲ್ಲಿ  ಕಳೆದ ೧೧ ದಿನಗಳಿಂದ ಕೂತಿದ್ದಾರೆ !.

ಅಕ್ಟೋಬರ್ ೨ರ ದಿನ ಕಾರವಾರದಲ್ಲಿ ಅಬ್ಬರದ ಮಳೆ, ಪ್ರತಿ ಚದರ್ ಮೀಟರ್ ಜಾಗದಲ್ಲಿ ೫೫೦ ಲೀಟರ್ ನೀರು ಸುರಿದಿದೆ, ಪರಿಣಾಮ ಜರಿವಾಡ ಗುಡ್ಡ ಕುಸಿತ ! ಊರಿನ ರಸ್ತೆಗಳು ಜಲಾವೃತವಾದವು, ರಸ್ತೆಗೆ ಕಲ್ಲು ಬಂಡೆಗಳು ಉರುಳಿದವು, ಸಂಪರ್ಕ ಕಡಿತವಾಯ್ತು. ಗುಡ್ಡ ಕುಸಿತದ ಸ್ಥಳಕ್ಕೆ  ಪರಿಹಾರ ಕಾರ್ಯಕ್ಕೆ ದಾರಿಯಿರಲಿಲ್ಲ. ಪಕ್ಕದ ರೇಲ್ವೆ ಹಳಿಯ ಮುಖೇನ ಜೆಸಿಬಿಗಳು ಬಂದವು. ಸೈನಿಕರು, ಜಿಲ್ಲಾಡಳಿತ, ಪೋಲಿಸ್ ಇಲಾಖೆಗಳು ಟೊಂಕಕಟ್ಟಿದವು. ಜೆಸಿಬಿ ಚಾಲಕರಂತೂ ಊಟ ನಿದ್ದೆ ಮರೆತು ಶ್ರಮಿಸಿದರು. ಹೂಳಿನೊಳಗಡೆ ಕಳೆದು ಹೋದ ದೇಹ ಹುಡುಕುವದು ದೊಡ್ಡ ಸವಾಲು, ಹಳ್ಳಿಗ ದೇವದಾಸ ತಳೇಕರ್ ಇಡೀ ಉತ್ಖನನಕ್ಕೆ  ನಿರ್ದೇಶಕರಂತೆ ಮುಂದಾದರು. ಮಣ್ಣಿನ ಮೇಲ್ಗಡೆ ಕಾಣುವ ಪಾತ್ರೆ, ಬಟ್ಟೆ, ಹೆಂಚು, ಮರ ಹೀಗೆ ವಿವಿಧ ವಸ್ತುಗುರುತಿಸಿ ಇಂತಹ ಮನೆ ಇಲ್ಲಿತ್ತು, ಇಲ್ಲಿ ಇಂತಿಷ್ಟು ಜನರಿದ್ದರೆಂದು ಪತ್ತೆ ನೀಡಿದರು. ಸತತ ೭ ದಿನಗಳ ಪ್ರಯತ್ನದಿಂದ ೧೯ ದೇಹಗಳು ಈಚೆ ಬಂದವು. ‘ ೧೨ ತಿಂಗಳ ಹಸುಳೆ ಆಸ್ತಾ ಕೊಟಾರ್‌ಕರ್ ತನ್ನ ಅಜ್ಜನ ಜತೆ ಚಾದರ ಹೊದ್ದು ಮಲಗಿದ್ದಳು, ಹೆಣ ತೆಗೆಯುವಾಗ ಕಂಡ ಆ ಮಗುವಿನ ಮುಗ್ದ ಮುಖ, ಕತ್ತಿನ ಸರ  ಈಗಲೂ ಕಣ್ಣಿಗೆ ಕಟ್ಟಿದಂತಿದೆ’ ಹೆಣ ಎತ್ತಿದ ಕ್ಷಣ  ಹೇಳುವಾಗ ದೇವದಾಸ್ ಗಂಟಲು ಕಟ್ಟುತ್ತದೆ. ಊರಿನ ಹಳ್ಳದ ದಂಡೆ ವಾರಕಾಲ ಹರಿಶ್ಚಂದ್ರಘಾಟ್‌ನಂತೆ ಸರಣಿ ಹಣ ಸುಡುವ  ನೆಲೆ!. ಊರು ನಂಬಿದ ನೆಲ ಜೀವ ಕಬಳಿಸಿದ ಯಾತ್ರೆಗೆ ಸಾಕ್ಷಿಯಾುತು.

ಕೃಷಿ ಪುಟದ ಓದುಗರಾದ ನಮಗೆ ಏಕೆ ಇಂತಹ ಘಟನೆ ವಿವರಿಸ್ತೀರಿ? ಪ್ರಶ್ನೆ ಕಾಡಬಹುದು. ಝರಿವಾಡದ ಸಾವಿನ ಗುಡ್ಡ ನೋಡಲು ಹೋಗಿದ್ದಾಗ ಕೃಷಿಕ ವೈಂಗಣಕರ ಅಲ್ಲಿನ ಮಾಜಿನ್‌ತಳ್, ದೇವತಳ್ ಎಂಬ ಗಜನಿ(ಕರಾವಳಿ ಜಲಭೂಮಿ)ಯಲ್ಲಿ ಬೆಳೆದ ಕರೆಕಗ್ಗ ಭತ್ತದ ಕದಿರು ಕಿತ್ತು ತಂದರು. ‘ಈ ವರ್ಷ ಭತ್ತ ಚೆನ್ನಾಗಿದೆ, ಹಾಲುತುಂಬಿ ಕಾಳು ಇನ್ನೇನು ಹಣ್ಣಾಗಲಿದೆ ! ಎಂದು ವಿವರಿಸುತ್ತಿದ್ದರು.  ಆದರೆ ಈಗ ಬೆಳೆವರ ಮನೆಯಲ್ಲಿ ಜನಗಳಿಲ್ಲ, ಕಾಳಿನ ಕನಸು ಕಂಡವರು ಕಾಲನ ನರ್ತನಕ್ಕೆ ಭೂಮಿಗೆ ಬಿದ್ದ ಬೀಜಗಳಂತೆ ಹೂಳಿನಲ್ಲಿ ಜೀವತೆತ್ತಿದ್ದಾರೆ ! ಊರಿನ ಬೆನ್ನಿಗೆ ನಿಂತ ಜರಿವಾಡಾದ ಮಹಾಗುಡ್ಡ ಜೀವ ಕಬಳಿಸಿ ಮನೆ ಮನೆಗೆ ಭಯದ  ಬೀಜ ಬಿತ್ತಿದೆ.