ಮಳೆಗಾಲ ಮುಗಿದನಂತರ ಒಂದು ಸಂಜೆ. ಬಿಠೂರ‍್ನ ಹೊರಾಂಗಣದಲ್ಲಿ ಗಂಗಾನದಿಯ ಬದಿಯ ಹಾದಿಯಲ್ಲಿ ಮೂವರು ವೇಗವಾಗಿ ಕುದುರೆ ಓಡಿಸುತ್ತಿದ್ದರು. ಈ ಪೈಕಿ ಇಬ್ಬರು ಯುವಕರು, ಒಬ್ಬಳು ಬಾಲೆ.

ವೀರಬಾಲೆ

ಯುವಕನೊಬ್ಬ ತನಗಿಂತ ವೇಗವಾಗಿ ಕುದುರೆ ಓಡಿಸಿದಾಗ ಆ ಪುಟ್ಟ ಸವಾರಳು ಇನ್ನಷ್ಟು ವೇಗದಿಂದ ತನ್ನ ಕುದುರೆ ಓಡಿಸಿ ಅವನನ್ನು ಹಿಂದಕ್ಕೆ ಹಾಕಿದಳು. ಯುವಕ ಸೋಲೊಪ್ಪುವುದೇ? ಅವನೂ ಅವಳನ್ನು ಸೋಲಿಸಲು ಪ್ರಯತ್ನವನ್ನೇನೋ ನಡೆಸಿದ. ಆದರೆ ಕುದುರೆ ಮುಗ್ಗರಿಸಿತು. ಸವಾರ ಕೆಳಗೆ ಬಿದ್ದ.

“ಮನೂ, ಅಯ್ಯೋ ನಾನು ಸತ್ತೆ.”

ಈ ಆರ್ತನಾದ ಕೇಳಿದೊಡನೆ ಬಾಲೆ ಕುದುರೆಯನ್ನು ಹಿಂದಕ್ಕೆ ತಿರುಗಿಸಿದಳು. ಯುವಕನಿಗೆ ಗಾಯವಾಗಿ ರಕ್ತ ಹರಿಯುತ್ತಿದೆ. ಅವನನ್ನು ಪ್ರಯಾಸದಿಂದ ಎತ್ತಿ ತನ್ನ ಕುದುರೆ  ಮೇಲೆ ಕೂರಿಸಿಕೊಂಡಳು. ಆ ವೇಳೆಗೆ ಮತ್ತೊಬ್ಬ ಯುವಕನೂ ಅಲ್ಲಿಗೆ ಬಂದ. ಮೂವರು ಅರಮನೆಗೆ ಹಿಂದಿರುಗಿದರು.

ಬರಿ ಕುದುರೆಯೊಂದೇ ಹಿಂದಿರುಗಿದ್ದನ್ನು ನೋಡಿದಾಗ ಮರಾಠ ರಾಜ್ಯದ ಪೇಶ್ವೆಗಳಾಗಿದ್ದ ಎರಡನೇ ಬಾಜೀರಾಯರಿಗೆ ಉಂಟಾದ ಕಳವಳ ಅಷ್ಟಿಷ್ಟಲ್ಲ. ಜೊತೆಯಲ್ಲಿದ್ದ ಮೋರೋಪಂತರು ಸಮಾಧಾನ ಹೇಳಿದರೂ ಅವರಿಗೆ ಕಳವಳ ತಪ್ಪಿರಲಿಲ್ಲ. ಅಂತೂ ಮಕ್ಕಳು ಹಿಂದಿರುಗಿದಾಗ ಅವರು ನೆಮ್ಮದಿಯ ಉಸಿರಾಡಿದರು.

ಗಾಯಗೊಂಡ ಯುವಕ ಬಾಜೀರಾಯರ ದತ್ತು ಪುತ್ರ ನಾನಾಸಾಹೇಬ್ ಮತ್ತು ಜೊತೆಗಿದ್ದವನು ತಮ್ಮ ರಾವ್‌ಸಾಹೇಬ್. ಬಾಲೆ ಪೇಶ್ವೆಗಳ ಆಪ್ತವರ್ಗಕ್ಕೆ ಸೇರಿದ ಮೋರೋಪಂತರ ಏಕಮಾತ್ರ ಪುತ್ರಿ ಮನೂಬಾಯಿ.

ಮನೆಗೆ ಹಿಂದಿರುಗಿದ ಮೇಲೆ ಮೋರೋಪಂತ್ ಹೇಳಿದರು:

“ಮನೂ, ಎಷ್ಟು ಅನ್ಯಾಯವಾಯಿತಮ್ಮ! ನಾನಾ ತುಂಬ ಗಾಯಗೊಂಡಿದ್ದಾನೆ.”

“ಏನಿಲ್ಲಪ್ಪ, ಸ್ವಲ್ಪ ಗಾಯ ಅಷ್ಟೇ. ಅಭಿಮನ್ಯು ಇದಕ್ಕೂ ಹೆಚ್ಚು ಗಾಯಗೊಂಡು ಹೋರಾಡಲಿಲ್ಲವೆ?”

“ಆ ಕಾಲವೇ ಬೇರೆ ಮನೂ.”

“ಏಕೆ ಬೇರೆ ಅಪ್ಪಾಜಿ? ಅದೇ ಆಕಾಶವಿದೆ, ಅದೇ ಭೂಮಿ ಇದೆ. ಸೂರ್ಯ ಚಂದ್ರರೂ ಅಷ್ಟೇ.”

“ಆದರೆ ಈಗ ದೇಶದ ಭಾಗ್ಯವೇ ಬದಲಾಗಿದೆ ಮನೂ. ಈಗ ಏನಿದ್ದರೂ ಇಂಗ್ಲಿಷರ ಕಾಲ. ಅವರ ಮುಂದೆ ನಮ್ಮದೆಲ್ಲ ನಿಸ್ತೇಜಗೊಂಡಿದೆ.”

ತಂದೆಯ ವಾದ ಮಗಳಿಗೆ ಸಮ್ಮತವೆನಿಸಲಿಲ್ಲ. ಸಾಧ್ವಿ ಸೀತೆ, ವೀರಮಾತೆ ಜೀಜಾಬಾಯಿ, ವೀರಾಂಗನ ತಾರಾಬಾಯಿಯವರ ಜೀವನ-ಆದರ್ಶಗಳ ಪಾಠವನ್ನು ತಂದೆಯೇ ಹೇಳಿದ್ದರು.

ಅದೇ ಬಿಠೂರ‍್ನಲ್ಲಿ ಇನ್ನೊಮ್ಮೆ ನಡೆದ ಘಟನೆ: ನಾನಾಸಾಹೇಬ್ ಮತ್ತು ರಾವ್ ಸಾಹೇಬ್ ಇಬ್ಬರೂ ಆನೆಯ ಮೇಲೆ ಕುಳಿತು ಹೊರಟಿದ್ದರು. ಮನೂಬಾಯಿಯನ್ನೂ ಜೊತೆಯಲ್ಲಿ ಕಳುಹಿಸಬೇಕೆಂದು ಬಾಜೀರಾಯರಿಗೆ ಇಷ್ಟ. ಮೋರೋಪಂತರಿಗೂ ಹಾಗೇ. ಆದರೂ ಆಸೆ ಈಡೇರಲಿಲ್ಲ. ನಾನಾಸಾಹೇಬ್ ಆನೆಯ ಮಾವಟಿಗನಿಗೆ ಮುನ್ನಡೆಯಲು ಆದೇಶ ನೀಡಿದ. ಮನೂ ಖಿನ್ನಳಾದಳು.

ಮನೆಯಲ್ಲಿ ತಂದೆ ಮಗಳಿಗೆ ಹೇಳಿದರು: “ಮನೂ, ನಾವು ಸಮಯಕ್ಕೆ ತಕ್ಕಹಾಗೆ ಇರಬೇಕು. ಆನೆಯ ಮೇಲೆ ಕೂರಲು ನಾವೇನು ಛತ್ರಪತಿಗಳೇ, ಸಾಮಂತರೇ? ನಮ್ಮ ಹಣೆಯ ಬರಹವಿಲ್ಲದಿರುವುದಕ್ಕೆ ಆಸೆಪಡಬಾರದು.”

“ಏನಿಲ್ಲ, ನನ್ನ ಹಣೆಯಲ್ಲಿ ಒಂದಲ್ಲ, ಹಲವಾರು ಆನೆಗಳ ಒಡೆತನ ಬರೆದಿದೆ.” ಮಾರುತ್ತರವಿತ್ತಳು ಮನೂ.

“ಹಾಗೇ ಆಗಲಮ್ಮ.”

ನನ್ನ ಹಣೆಯಲ್ಲಿ ಹಲವಾರು ಆನೆಗಳ ಒಡೆತನ ಬರೆದಿದೆ."

“ಅಪ್ಪಾಜಿ, ನಾನು ಈಗ ಬಂದೂಕಿನ ಗುರಿಸಾಧನೆ ಮಾಡುತ್ತೇನೆ” ಎಂದು ಹೇಳಿ ಹೊರಟಳು.

ಅವಳ ಈ ಪುರುಷಸಹಜ ಪ್ರವೃತ್ತಿಯನ್ನು ಕಂಡು ಮೋರೋಪಂತ್ ಚಿಂತಿತರಾದರು.

ಬಾಲ್ಯ ವಿವಾಹ

ಆಗ ಹೆಸರಿಗೆ ಮಾತ್ರ ಪೇಶ್ವೆಗಳೆನಿಸಿದ್ದ ಎರಡನೇ ಬಾಜೀರಾಯರಿಗೆ ಇಂಗ್ಲಿಷರ ಈಸ್ಟ್‌ಇಂಡಿಯಾ ಕಂಪೆನಿಯ ಸರ್ಕಾರ ವರ್ಷಕ್ಕೆಎಂಟು ಲಕ್ಷ ರೂಪಾಯಿಗಳ ವೇತನವನ್ನೂ ಬಿಠೂರ‍್ನ ಜಹಗೀರಿಯನ್ನೂ ನೀಡಿತ್ತು.

ಭಾಗೀರಥಿಬಾಯಿ ಮೋರೋಪಂತಿ ಪತ್ನಿ ಸುಶೀಲೆ, ಸುಂದರಿ ಹಾಗೂ ಚತುರೆಯಾದ ಧರ್ಮಪರಾಯಣ ಸ್ತ್ರೀ. ಈ ಅನುರೂಪ ದಂಪತಿಗಳ ಪುತ್ರಿ ಮನೂಬಾಯಿ.

ಕಾರ್ತಿಕ ಮಾಸದ ಬಿದಿಗೆಯ ದಿನ ೧೮೩೫ನೇ ಇಸವಿ ನವೆಂಬರ್ ೧೫ರಂದು ಜನಿಸಿದ ಮಗು ಮುದ್ದಾಗಿತ್ತು. ತಾಯಿಯ ಹಾಗೇ ರೂಪವಂತೆ. ವಿಶಾಲವಾದ ಹಣೆ ಮತ್ತು ಕಣ್ಣುಗಳು. ತುಂಬಿದ ಮುಖದಲ್ಲಿ ರಾಜತೇಜಸ್ಸು.

ಮನೂ ನಾಲ್ಕು ವರ್ಷದವಳಿದ್ದಾಗ ಮಾತೃವಿಯೋಗವಾಯಿತು. ಮಗಳ ಪೂರ್ಣ ಜವಾಬ್ದಾರಿ ತಂದೆಯದಾಯಿತು. ಕತ್ತಿವರಸೆ, ಕುದುರೆ ಸವಾರಿ, ಬಂದೂಕುಗುರಿ ಸಾಧನೆಗಳ ಜೊತೆಯಲ್ಲೇ ವಿದ್ಯಾಭ್ಯಾಸವೂ ದೊರಕಿತು.

ಪುಟ್ಟಕನ್ಯೆ ನಲವತ್ತೈದು ವರ್ಷದ ಝಾನ್ಸಿ ಮಹಾರಾಜ ಗಂಗಾಧರರಾಯರ ಗೃಹಲಕ್ಷ್ಮೀಯಾದಳು (೧೮೪೨). ಬಡ ಬ್ರಾಹ್ಮಣ ಕನ್ಯೆ, ಝಾನ್ಸಿ ರಾಜ್ಯದ ರಾಣಿ ಲಕ್ಷ್ಮೀಬಾಯಿಯಾದಳು.

ಆ ದುರ್ದಿನಗಳು

ಹತ್ತೊಂಬತ್ತನೆಯ ಶತಮಾನದ ಆರಂಭ. ಸಾಗರೋತ್ತರ ವ್ಯಾಪರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷರು ಈಸ್ಟ್‌ಇಂಡಿಯಾ ಕಂಪೆನಿಯ ಹೆಸರಿನಲ್ಲಿ ದಿನ ಕ್ರಮದಲ್ಲಿ ರಾಜ್ಯಸೂತ್ರವನ್ನೂ ಹಿಡಿಯತೊಡಗಿದ್ದರು.

ಅಂತಃಕಲಹಗಳಲ್ಲಿ ನಿರತರಾಗಿದ್ದ ಭಾರತೀಯ ರಾಜ ಮಹಾರಾಜರು ಪೈಪೋಟಿಯ ಮೇಲೆ ಬ್ರಿಟಿಷರ ಕೈಗೊಂಬೆಗಳಾಗಿದ್ದರು.

ಅಂದಿನ ಭಾರತದ ಪ್ರತಿ ದುರ್ಘಟನೆಯನ್ನೂ ಇಂಗ್ಲಿಷ್ ಸಾಮ್ರಾಜ್ಯದ ವಿಸ್ತಾರಕ್ಕೆ ಬಳಸಿಕೊಳ್ಳಲಾಯಿತು. ಇಂಗ್ಲಿಷರ ಕೈಮೇಲಾದಾಗ ಒಂದು ರೀತಿಯ ಒಪ್ಪಂದವಾದರೆ ಅವರು ಸೋಲನ್ನು ಅನುಭವಿಸಿದಾಗ ಬೇರೊಂದು ಬಗೆಯ ಒಪ್ಪಂದ. ಅಂತೂ ಹಾನಿ ಭಾರತೀಯರಿಗೇ.

ಕುಗ್ಗಿದ ಪ್ರಾಬಲ್ಯ

ಕೊನೆಯ ಪೇಶ್ವೆಯನ್ನು ಹುದ್ದೆಯಿಂದ ಕಿತ್ತುಹಾಕಿದ ಮೇಲೆ ಇಂಗ್ಲಿಷರ ಅಟ್ಟಹಾಸಕ್ಕೆ ಅಡೆತಡೆಗಳಿಲ್ಲವಾದವು. ಮೊಗಲ್ ಚಕ್ರವರ್ತಿಯನ್ನೂ ಮೂಲೆಗೊತ್ತಿದರು.

ಇರುಳಿನಿಂದಲೇ ಬೆಳಕಿನ ಹುಟ್ಟು. ಸ್ವಾತಂತ್ರ್ಯದ ಅಪಹರಣ ವ್ಯವಸ್ಥಿತವಾಗಿ ಒಂದು ಕಡೆ ಸಾಗುತ್ತಿದ್ದರೆ, ದಾಸ್ಯ ವಿಮೋಚನೆಗೆ ಪ್ರಯತ್ನವೂ ನಡೆಯುತ್ತಿತ್ತು.

ಸ್ವಾತಂತ್ರ್ಯವೊಂದು ಅದಮ್ಯ ಬಯಕೆ, ತಿಳಿದಷ್ಟೂ ಹೆಡೆ ಎತ್ತಿ ನಿಲ್ಲುವ ಅಂತಃಶಕ್ತಿ. ದೇಶನರೇಶರ ಮುಕುಟಗಳು ಉರುಳಿ, ಕಂಪೆನಿ ಸರ್ಕಾರದ ಅಧೀನತೆಯನ್ನು ಒಪ್ಪಿಕೊಂಡು, ಅಪಮಾನಕರ ಷರತ್ತುಗಳೊಡನೆ ಆಶ್ರಿತ ರಾಜ್ಯಗಳಾಗುತ್ತಿದ್ದುದು ಒಂದು ಕಡೆ. ಇನ್ನೊಂದು ಕಡೆ ಆಂಗ್ಲ ಅಧಿಪತ್ಯವನ್ನು ಆರಂಭದಲ್ಲೇ ಅಂತ್ಯಗೊಳಿಸಿ, ರಾಷ್ಟ್ರದ ಧವಳ ಕೀರ್ತಿಯನ್ನೂ ಸ್ವಾತಂತ್ರ್ಯ-ಅಭಿಮಾನಗಳನ್ನೂ ರಕ್ಷಿಸಿಕೊಳ್ಳುವ ಬಯಕೆ ಬಲಿಯತೊಡಗಿತ್ತು. ಆದರೆ ಎಲ್ಲ ಗುಪ್ತ, ಸುಪ್ತ-ಸ್ಫೋಟಕ್ಕೆ ಮೊದಲು ಶಾಂತವಾಗಿರುವ ಅಗ್ನಿಪರ್ವತದಂತೆ.

ಝಾನ್ಸಿಯ ಕಥೆ

ಝಾನ್ಸಿ ಈಗ ಉತ್ತರಪ್ರದೇಶದ ಒಂದು ಜಿಲ್ಲಾ ಕೇಂದ್ರ. ಇಂಗ್ಲಿಷರಿಗೂ ಝಾನ್ಸಿಯ ರಾಜರಿಗೂ ಆದ ಒಪ್ಪಂದಗಳಲ್ಲಿ ಎರಡು ಷರತ್ತುಗಳಿದ್ದವು. ಇಂಗ್ಲಿಷರಿಗೆ ಅಗತ್ಯವಿದ್ದಾಗ ಝಾನ್ಸಿ ನೆರವಾಗಬೇಕು ಮತ್ತು ಝಾನ್ಸಿಗೆ ಯಾರು ರಾಜರಾಗಬೇಕೆಂಬುದಕ್ಕೆ ಇಂಗ್ಲಿಷರ ಒಪ್ಪಿಗೆ ಬೇಕು. ಹೀಗೆ ಸರ್ವನಾಶದ ಬೀಜ ಬಿತ್ತಿದ್ದಾಯಿತು.

೧೮೩೮ರಲ್ಲಿ ಇಂಗ್ಲಿಷರು ಗಂಗಾಧರರಾಯರನ್ನು ಅಧಿಪತಿಗಳನ್ನಾಗಿ ನೇಮಿಸಿದರು.

ಹಿಂದಿನ ಅಧಿಪತಿ ರಘುನಾಥರಾವ್ ರಾಜ್ಯ ಕೋಶವನ್ನು ಬರಿದುಮಾಡಿ ಹೋಗಿದ್ದರು. ಆಡಳಿತ ಹಾಳಾಗಿ ಪ್ರಜೆಗಳಿಗೆ ನೆಮ್ಮದಿ ದೂರವಾಗಿತ್ತು.

ಈ ಕೊರೆತೆಗಳನ್ನು ಗಂಗಾಧರರಾಯರು ಬೇಗನೆ ಪರಿಹರಿಸಿದರು.

ಗೋಶಾಲೆ, ಗಜಶಾಲೆ, ಅಶ್ವಶಾಲೆಗಳು ಪುಷ್ಪಗೊಂಡವು. ಅಸ್ತ್ರಾಗಾರ ಮದ್ದುಗುಂಡುಗಳಿಂದ ಸಜ್ಜುಗೊಂಡಿತು. ಐದು ಸಾವಿರ ಮಂದಿ ಕಾಲಾಳುಗಳು, ಐನೂರು ಅಶ್ವಾರೋಹಿಗಳನ್ನು ಒಳಗೊಂಡ ಸುಸಜ್ಜಿತ ಸೇನೆಗೆ ಫಿರಂಗಿ ಪಡೆಯ ಬೆಂಬಲವೂ ಇದ್ದು, ಸೇನಾಶಕ್ತಿ ಬಲವಾಗಿತ್ತು.

ಆದರೆ ರಾಜ್ಯದಲ್ಲಿ ಇಂಗ್ಲಿಷರ ಸೇನೆಯೂ ಇತ್ತು. ಇದರ ಸಲುವಾಗಿಯೇ ಕೋಶಕ್ಕೆ ೨,೨೭೦೦೦ ರೂಪಾಯಿಗಳ ವೆಚ್ಚ ತಗುಲುತ್ತಿತ್ತು.

ವಜ್ರಾಘಾತ

೧೮೫೧ರಲ್ಲಿ ಮಹಾರಾಣಿ ಲಕ್ಷ್ಮೀಬಾಯಿ ಗಂಡು ಮಗುವಿನ ತಾಯಿಯಾದಳು. ಆದರೆ ಕ್ರೂರವಿಧಿ, ಮೂರು ತಿಂಗಳಲ್ಲಿ ಮಗು ತೀರಿಕೊಂಡಿತು. ರಾಜ್ಯದ ಬಗ್ಗೆ ಚಿಂತಿತರಾದ ಗಂಗಾಧರರಾಯರಿಗೆ ಮನೋರೋಗ ಅಂಟಿಕೊಂಡಿತು.

ಆ ವೇಳೆಗೆ ಕಂಪೆನಿ ಸರ್ಕಾರದ ಗವರ್ನರ್ ಜನರಲ್ ಆಗಿದ್ದ ಲಾರ್ಡ್‌ಡಾಲ್ ಹೌಸಿ ಜಾರಿಗೆ ತಂದಿದ್ದ ಕರಾಳ ಶಾಸನೇ ಈ ಸಂಕಟಕ್ಕೆ ಕಾರಣ. “ಸಹಾಯಕ ಸೈನ್ಯ ಪದ್ಧತಿಯ ಷರತ್ತಿಗೆ ಒಪ್ಪಿ ಇಂಗ್ಲಿಷರ ಆಸರೆ ಪಡೆದಿದ್ದ ದೇಶೀಯ ರಾಜರು ಸಂತಾನವಿಲ್ಲದೆ ಸತ್ತರೆ ಆ ರಾಜ್ಯದ ಆಡಳಿತ ಅರಸರ ಕೈತಪ್ಪುತ್ತದೆ. ರಾಜರು ದತ್ತುಸ್ವೀಕಾರ ಮಾಡಿದರೂ ದತ್ತುಪುತ್ರರಿಗೆ ರಾಜ್ಯಾಧಿಕಾರವಿಲ್ಲ. ಮಹಾರಾಜರ ವಂಶೀಯರಿಗೆ ವಾರ್ಷಿಕ ವೇತನ ಗೊತ್ತು ಮಾಡಲಾಗುವುದು ಮತ್ತು ರಾಜ್ಯದ ರಕ್ಷಣೆಯ ಪೂರ್ಣ ಜವಾಬ್ದಾರಿ ಕಂಪೆನಿ ಸರ್ಕಾರದ್ದಾಗುತ್ತದೆ-ಇದೇ ಲಾರ್ಡ್‌ಡಾಲ್‌ಹೌಸಿಯ ಸೂತ್ರ.

ಈ ವಿಧಾನದ ಮೂಲಕ ಅನೇಕ ದೇಶೀಯ ರಾಜ್ಯಗಳನ್ನು ಇಂಗ್ಲಿಷರು ಕಬಳಿಸಿದ್ದರು. ಈಗ ಝಾನ್ಸಿಯ ಸರದಿ ಬಂದಿತ್ತು. ಆಗಲೇ ಸಾಕಷ್ಟು ವೃದ್ಧರಾಗಿದ್ದ ಮಹಾರಾಜ ಗಂಗಾಧರರಾಯರಿಗೆ ವಜ್ರಾಘಾತವಾದಂತಾಯಿತು. ಅವರು ಹಾಸಿಗೆ ಹಿಡಿದರು. ಮಹಾರಾಜರೂ ಲಕ್ಷ್ಮೀಬಾಯಿಯೂ ತಮ್ಮ ಕುಲದ ಆನಂದರಾವ್ ಎಂಬ ಹುಡುಗನನ್ನು ದತ್ತು ತೆಗೆದುಕೊಳ್ಳಲು ನಿಶ್ಚಯಿಸಿದರು (೧೮೫೩).

ಶಾಸ್ತ್ರವಿಧಿಗಳಿಗೆ ಅನುಗುಣವಾಗಿ ದತ್ತು ಸ್ವೀಕಾರ ನಡೆದು ಆನಂದರಾಯನಿಗೆ ದಾಮೋದರರಾವ್ ಎಂದು ನಾಮಕರಣ ಮಾಡಲಾಯಿತು.

ಕಮರಿದ ಆಸೆ

ಉತ್ಸವ ಮುಗಿದ ಮೇಲೆ ದತ್ತು ಸ್ವೀಕಾರದ ಬಗ್ಗೆ ವಿವರಗಳನ್ನು ನೀಡಿ ದತ್ತುಪುತ್ರನಿಗೆ ಉತ್ತರಾಧಿಕಾರವಿರುವಂತೆ ಒಪ್ಪಿಕೊಳ್ಳಬೇಕೆಂದು ಮತ್ತು ದಾಮೋದರರಾವ್ ಪ್ರೌಢನಾಗುವವರೆಗೆ ರಾಣಿ ಲಕ್ಷ್ಮೀಬಾಯಿಯನ್ನು ಅವನ ಪ್ರತಿನಿಧಿಯನ್ನಾಗಿ ಮನ್ನಿಸಬೇಕೆಂದು ಕೋರಿ ಬರೆದ ಪತ್ರದಲ್ಲಿ ಝಾನ್ಸಿ ಮತ್ತು ಕಂಪೆನಿ ಸರ್ಕಾರಗಳ ನಡುವಿನ ದೀರ್ಘ ಸಂಬಂಧವನ್ನು ನೆನಪು ಮಾಡಿಕೊಡಲಾಗಿತ್ತು. ಈ ಪತ್ರವನ್ನು ಲಾರ್ಡ್‌ಡಾಲ್‌ಹೌಸಿಗೆ ಒಪ್ಪಿಸುವಂತೆ ಮಹಾರಾಜರು ಮೇಜರ್ ಎಲಿಸ್‌ನ ಕೈಗೆ ಕೊಟ್ಟರು.

ಪತ್ರವನ್ನು ಕೊಡುವಾಗ ಮಹಾರಾಜರ ಕಣ್ಣುಗಳು ತೇವಗೊಂಡವು. ಭಾವೋದ್ವೇಗದಿಂದ ಅವರ ಗಂಟಲು ಬಿಗಿದುಬಂತು. ತೆರೆಯ ಹಿಂಬದಿಯಲ್ಲಿ ಮಹಾರಾಣಿಯು ಬಿಕ್ಕಿ ಬಿಕ್ಕಿ ಅಳುತ್ತಿರುವುದೂ ಕೇಳಿಸಿತು.

ಮೇಜರ‍್ನನ್ನು ಕುರಿತು ಗಂಗಾಧರರಾಯರು, “ಮೇಜರ್ ಸಾಹೇಬರೇ, ನಮ್ಮ ರಾಣಿಯೂ ಸ್ತ್ರೀ. ಆದರೂ ಜಗತ್ತಿನ ಪುರುಷಶ್ರೇಷ್ಠರೂ ಮನ್ನಿಸಬೇಕಾದ ಗುಣಾತಿಶಯಗಳು ಈಕೆಯಲ್ಲಿವೆ” ಎಂದು ಹೇಳುವಾಗ ಅವರಿಗರಿವಿಲ್ಲದಂತೆಯೇ ಕಣ್ಣಾಲಿಗಳಲ್ಲಿ ನೀರು ತುಂಬಿತು.

“ಮೇಜರ್ ಸಾಹೇಬರೇ, ಯಾವ ಕಾರಣಕ್ಕೂ ಝಾನ್ಸಿ ಅನಾಥಗೊಳ್ಳದಂತೆ ನೋಡಿಕೊಳ್ಳಿ” ಎಂದು ಹೇಳಿದರು.

ಕೆಲವೇ ದಿನಗಳಲ್ಲಿ ೧೮೫೩ರ ನವೆಂಬರ್ ೨೧ರಂದು ಗಂಗಾಧರರಾಯರು ಮರಣಹೊಂದಿದರು. ೧೮ ವರ್ಷದ ಅನನುಭವಿ ಲಕ್ಷ್ಮೀಬಾಯಿಯ ಹಣೆಯಿಂದ ಕುಂಕುಮ ಅಳಿಸಿಹೋಯಿತು.

ಸಂಪ್ರದಾಯದ ಶೃಂಖಲೆಯಲ್ಲಿ ಸಿಕ್ಕಿದ ಹಿಂದು ಹೆಣ್ಣು ಮಗಳು – ಅದೂ ಯುವತಿ ಮತ್ತು ವಿಧವೆ; ಮೇಲೆ ಒಂದು ದಿಕ್ಕುಗೆಟ್ಟ ಅರಸೊತ್ತಿಗೆಯ ಹೊಣೆಗಾರಿಕೆ; ನುಂಗಲು ಬಾಯ್ದೆರೆದು ಕೂತ ಡಾಲ್‌ಹೌಸಿ; ತೋಳಿನಲ್ಲಿ ಎಳೆಯ ಮಗು ದಾಮೋದರರಾವ್. ಲಕ್ಷ್ಮೀಬಾಯಿಯ ಕಷ್ಟಕ್ಕೆ ಇತಿ ಎಲ್ಲಿ, ಮಿತಿ ಎಲ್ಲಿ?

ಡಾಲ್‌ಹೌಸಿಗೆ ಕಳುಹಿಸಿದ್ದ ಮನವಿಪತ್ರವನ್ನು ಹಿಂಬಾಲಿಸಿ ಲಕ್ಷ್ಮೀಬಾಯಿ ಮೇಲಿಂದಮೇಲೆ ವಿಜ್ಞಾಪನ ಪತ್ರಗಳನ್ನು ಬರೆದಳು. ಮೂರು ತಿಂಗಳಾದರೂ ಒಂದು ಸಾಲಿನ ಉತ್ತರವೂ ಸಿಗಲಿಲ್ಲ.

೧೮೫೪ರ ಮಾರ್ಚ್‌ತಿಂಗಳ ಒಂದು ದುರ್ದಿನ ಡಾಲ್‌ಹೌಸಿಯ ಆದೇಶ ತಲುಪಿತು.

“ದಿವಂಗತ ಮಹಾರಾಜ ಗಂಗಾಧರರಾಯರಿಗೆ ದತ್ತು ಸ್ವೀಕಾರದ ಹಕ್ಕನ್ನು ಕಂಪೆನಿಯು ಒಪ್ಪುವುದಿಲ್ಲ. ಆದ್ದರಿಂದ ಝಾನ್ಸಿಯನ್ನು ಇಂಗ್ಲಿಷ್ ರಾಜ್ಯದಲ್ಲಿ ವಿಲೀನಗೊಳಿಸಿಕೊಳ್ಳಲು ನಿರ್ಧರಿಸಲಾಗಿದೆ. ರಾಣಿಯು ಕೋಟೆಯನ್ನು ತ್ಯಜಿಸಿ ಝಾನ್ಸಿಯ ಜನವಸತಿಯಲ್ಲಿ ಇರುವ ಅರಮನೆಯಲ್ಲಿ ವಾಸಿಸತಕ್ಕದ್ದು ಮತ್ತು ಅವರಿಗೆ ತಿಂಗಳಿಗೆ ಐದು ಸಹಸ್ರ ರೂಪಾಯಿಗಳ ಮಾಸಿಕ ವೇತನ ದೊರಕುವುದು” ಎಂಬುದನ್ನು ತಿಳಿಸಿದ್ದಾಯಿತು.

ಇದನ್ನು ಒಮ್ಮಲೇ ನಂಬಲು ರಾಣಿಗೆ ಸಾಧ್ಯವಾಗಲಿಲ್ಲ. ಕ್ಷಣಕಾಲ ಮೈಮರೆತ ಮಹಾರಾಣಿ, “ಇಲ್ಲ, ಸಾಧ್ಯವಿಲ್ಲ. ನಾನು ಝಾನ್ಸಿಯನ್ನು ಬಿಟ್ಟುಕೊಡಲಾರೆ” ಎಂದು ಉದ್ಗರಿಸಿದಳು.

ಆದರೆ ಇಂಗ್ಲಿಷರ ಶಕ್ತಿ-ಸನ್ನಾಹಗಳ ಎದುರಿನಲ್ಲಿ ಪೇಶ್ವೆಗಳೇ ತಲೆಬಾಗಿರುವಾಗ ಮತ್ತು ದೆಹಲಿಯ ಬಾದಶಹರು ಮಂಡಿಯೂರಿ ನಮಸ್ಕರಿಸುತ್ತಿರುವಾಗ ಪುಟ್ಟ ರಾಜ್ಯವಾದ ಝಾನ್ಸಿ ಸೆಟೆದು ನಿಲ್ಲುವುದೆಂದರೆ ಎಷ್ಟ ಕಷ್ಟವೆಂಬುದು ಅವಳಿಗೆ ತಿಳಿಯಲು ಹೆಚ್ಚು ಕಾಲ ಬೇಕಿರಲಿಲ್ಲ.

ಆಡಳಿತದ ಹೊಣೆ ತಪ್ಪಿದ ಮೇಲೆ ರಾಣಿಯ ದಿನಚರ್ಯೆಯೇ ಬದಲಾಯಿತು. ಮುಂಜಾನೆ ನಾಲ್ಕರಿಂದ ಎಂಟರವರೆಗೆ ಸ್ನಾನ, ಪೂಜೆ, ಧ್ಯಾನ, ಭಜನೆಗಳಿಗೆ ಮೀಸಲು. ಎಂಟಾದ ನಂತರ ಹನ್ನೊಂದರ ತನಕ ಭವನದ ಆವರಣದಲ್ಲಿ ಕುದುರೆ ಸವಾರಿ, ಬಂದೂಕು ಗುರಿ ಸಾಧನೆ, ಬಾಯಲ್ಲಿ ಲಗಾಮು ಕಚ್ಚಿಕೊಂಡು ಎರಡೂ ಕೈಗಳಿಂದ ಕತ್ತಿವರಸೆಯ ಅಭ್ಯಾಸ. ಧನರ್ವಿದ್ಯೆಯ ಸಾಧನೆಗಳಲ್ಲಿ ನಿರತಳಾಗುತ್ತಿದ್ದಳು. ಅದಾದನಂತರ ಮತ್ತೆ ಸ್ನಾನ. ಹಸಿದವರಿಗೆ ಅನ್ನವಿಟ್ಟು, ದಾನಧರ್ಮ ನಡೆಸಿದ ನಂತರ ಭೋಜನ ಮತ್ತು ಸ್ವಲ್ಪ ಕಾಲ ವಿಶ್ರಾಂತಿ. ಅನಂತರ ಏಕಾಂಗಿಯಾಗಿ ಕುಳಿತು ರಾಮನಾಮ ಸ್ಮರಣೆ. ಸಂಜೆ ಮತ್ತೆ ಲಘು ವ್ಯಾಯಾಮ. ಸಂಜೆಯಾದ ಮೇಲೆ ಧರ್ಮಗ್ರಂಥ ಪಾರಾಯಣ, ಶ್ರಾವಣ ನಡೆಸುತ್ತಿದ್ದಳು. ಮತ್ತೊಮ್ಮೆ ಇಷ್ಟದೇವತೆಯ ಧ್ಯಾನದ ನಂತರ ಭೋಜನ. ಎಲ್ಲ ಕಾರ್ಯಗಳೂ ನಿಯಮಬದ್ಧವಾಗಿ ಸಾಗುತ್ತಿದ್ದವು.

ಸ್ಫೋಟಕ್ಕೆ ಸನ್ನಾಹ

ಅಕ್ರಮ ಅನ್ಯಾಯಗಳನ್ನು ಸಹಿಸಿಯೂ ಬದುಕುವ ಜನಾಂಗ ಜೀವವುಳ್ಳ ಶವವಿದ್ದಂತೆ. ನ್ಯಾಯಕ್ಕೆ ತಲೆಬಾಗುವುದು ಧರ್ಮವಾದರೆ ಅನ್ಯಾಯಕ್ಕೆ ತಲೆಬಾಗುವುದು ಅಧರ್ಮ.

ಕತ್ತರಿಗೆ ಸಿಕ್ಕಿದ ಅಡಿಕೆಯೂ ಚಿಮ್ಮುತ್ತದೆ. ಒತ್ತಡ ಬಲವಾದಾಗ ಫಿರಂಗಿಯ ಗುಂಡು ಸಿಡಿಯುತ್ತದೆ. ಹಿಂಸೆಯ ಎದುರು ಸಾದು ಪ್ರಾಣಿಯೂ ಪ್ರತಿಹಿಂಸೆಗೆ ಸಜ್ಜಾಗುತ್ತದೆ ಪರಿಣಾಮವನ್ನೂ ಲೆಕ್ಕಿಸದೆ.

ಪುತ್ರಸಂತಾನವಿಲ್ಲದೆ ಆಡಳಿತ ಕಳೆದುಕೊಂಡ ರಾಜರು, ಅವರ ಪರಿವಾರ, ಆಶ್ರಿತ ವರ್ಗ, ವಿಸರ್ಜನೆಗೊಂಡ ಸೇನೆ, ಇವರೆಲ್ಲರ ಹಿತೈಷಿಗಳು ಅತೃಪ್ತಿಯ ಜ್ಞಾಲೆಯಲ್ಲಿ ಬೇಯತೊಡಗಿದರು.

ತಾತ್ಯಾಟೋಪಿ, ರಘುನಾಥ ಸಿಂಹ, ಜವಾಹರ ಸಿಂಹ ಮುಂತಾದ ಸ್ವಾತಂತ್ರ್ಯಪ್ರಿಯರು ರಾಣಿ ಲಕ್ಷ್ಮೀಬಾಯಿಯ ಭೇಟೆಗೆ ರಹಸ್ಯವಾಗಿ ಆಗಮಿಸುತ್ತಿದ್ದರು. ಜನತೆಯ ಅತೃಪ್ತಿ ಅಸಮಾಧಾನಗಳ ವಿವರಗಳನ್ನು ನೀಡುತ್ತಿದ್ದರು.

ತನ್ನ ರಾಜ್ಯದ ಸುತ್ತಮುತ್ತಲಿನ ಭೌಗೋಳಿಕ ಪರಿಸ್ಥಿತಿ, ಆಯಕಟ್ಟಿನ ಸ್ಥಳಗಳು, ಪಂಜಾಬಿನ ಸಿಖ್ಖರು ಬ್ರಿಟಿಷರೊಡನೆ ಸೆಣಸಿದ ವಿಧಾನ-ವ್ಯೂಹಗಳನ್ನು ಕುರಿತು ರಾಣಿ ಲಕ್ಷ್ಮೀಬಾಯಿ ಎಚ್ಚರಿಕೆಯಿಂದ ಅಭ್ಯಾಸ ನಡೆಸಿದ್ದಳು.

ರಾಣಿ ಕುದುರೆ ಸವಾರಿಗೆಂದು ಹೊರಹೊರಟಾಗ ವೀರಯೋಧನ ಉಡುಪು ಧರಿಸುತ್ತಿದ್ದಳು. ಲೋಹದ ಶಿರಸ್ತ್ರಾಣ ಮತ್ತು ಅದರ ಮೇಲೆ ಹಿಂದಕ್ಕೆ ಸೆರಗು ಬಿಟ್ಟ ಪೇಟಾ, ವಕ್ಷಸ್ಥಲದಲ್ಲಿ ಬಿಗಿಯಾದ ಅಂಗರಕ್ಷೆ, ಪೈಜಾಮಾ ಮತ್ತು ಅದರ ಮೇಲೆ ಕಟ್ಟಿದ ಪಟ್ಟಿ. ಎರಡೂ ಬದಿಗಳಲ್ಲಿ ಪಿಸ್ತೂಲು ಮತ್ತು ಖಡ್ಗಗಳು. ಜೊತೆಗೊಂದು ಕಠಾರಿ.

ಕುದುರೆಗಳ ಲಕ್ಷಣ ಮತ್ತು ಸ್ವಭಾವಗಳ ಪರಿಚಯವನ್ನು ಹೊಂದಿದ್ದ ಮಹಾರಾಣಿಗೆ ಕಾಥೇವಾಡದ ಶುಭ್ರ ಶ್ವೇತವರ್ಣದ ಕುದುರೆ ಅತ್ಯಂತ ಪ್ರಿಯವಾಗಿತ್ತು.

ನೀಳ ಕೇಶಸಂಪತ್ತು ಹೊಂದಿದ್ದ ರಾಣಿಗೆ ಶಿರಸ್ತ್ರಾಣ ಧರಿಸಿ ಅದರ ಮೇಲೆ ಪೇಟ ಕಟ್ಟುವುದು ಕಷ್ಟವಾಗುತ್ತಿತ್ತು. ಮಹಾರಾಷ್ಟ್ರದ ವಿಧವೆಯರು ಕೂದಲು ತೆಗೆಸುತ್ತಿದ್ದರು. ಕಾಶೀಕ್ಷೇತ್ರದಲ್ಲಿ ಕೂದಲು ತೆಗೆಸಿಕೊಂಡು ಬರುವ ನಿರ್ಧಾರ ಕೈಗೊಂಡಳು. ಜೊತೆಗೆ ಆ ಭಾಗದ ರಾಜನೈತಿಕ ಸ್ಥಿತಿ-ಸನ್ನಿವೇಶಗಳ ಪರಿಚಯ ಹೊಂದುವ ಇಚ್ಛೆಯೂ ಇತ್ತು. ಆದರೆ ಇಂಗ್ಲಿಷ್ ಅಧಿಕಾರಿಗಳು ಅವಳ ಪ್ರಯಾಣಕ್ಕೆ ಅನುಮತಿ ನೀಡಲಿಲ್ಲ.

“ನಾಡಿಗೆ ಸ್ವಾತಂತ್ರ್ಯ ಸಿಕ್ಕಾಗಲೇ ನಾನು ಕೂದಲು ತೆಗೆಸುತ್ತೇನೆ, ಇಲ್ಲವೇ ಅದು ಸ್ಮಶಾನದಲ್ಲಿ ಆಗಬೇಕು” ಎಂದು ಪ್ರತಿಜ್ಞೆ ಕೈಗೊಂಡಳು ರಾಣಿ.

ಅಸಂತುಷ್ಟ ನಾನಾಸಾಹೇಬ್ ಮತ್ತು ರಾವ್ ಸಾಹೇಬ್, ದೆಹಲಿಯ ಬಾದಶಹ ಬಹಾದ್ದೂರ್ ಶಹಾ, ಔಧ್ ನವಾಬರ ಹಿತೈಷಿಗಳು ಎಲ್ಲರೂ ಒಂದುಗೂಡುವ ತವಕ ಹೊಂದಿದ್ದರು. ಈ ಇಚ್ಛೆ ರಾಣಿಗೂ ಉಂಟಾಯಿತು.

ಎಲ್ಲ ಪ್ರಮುಖರೂ ಸೇರಲು ಸಾಧ್ಯವಿರುವ ಸಂದರ್ಭವೆಂದರೆ ಧಾರ್ಮಿಕ ಉತ್ಸವ.

ಸಂಘಟನೆ

ದತ್ತು ಪುತ್ರ ದಾಮೋದರರಾಯನಿಗೆ ಆಗ ಆರು ವರ್ಷ ತುಂಬಿ ಏಳನೆಯ ವರ್ಷ ಆರಂಭವಾಗಿತ್ತು. ಮಗನ ಉಪನಯನ ಏರ್ಪಾಟನ್ನು ಮಾಡಲಾಯಿತು.

ದಾಮೋದರರಾಯನ ಹೆಸರಿನಲ್ಲಿ ಖಜಾನೆಯಲ್ಲಿ ಆರು ಲಕ್ಷ ರೂಪಾಯಿಗಳಿವೆ. ಉಪನಯನ ನಡೆಸಲು ಒಂದು ಲಕ್ಷ ರೂಪಾಯಿಗಳ ಅಗತ್ಯವಿದೆ. ಅದನ್ನು ಪಡೆಯಲು ಅನುಮತಿ ಕೊಡಿ ಎಂದು ಇಂಗ್ಲಿಷ್ ಅಧಿಕಾರಿಗೆ ಅರ್ಜಿ ಸಲ್ಲಿಸಲಾಯಿತು.

“ದಾಮೋದರರಾವ್ ಇನ್ನೂ ಚಿಕ್ಕವನು. ಆದ್ದರಿಂದ ಹಣ ಪಡೆಯಲು ನನಗೆ ತೃಪ್ತಿಯುಂಟಾಗುವಂತೆ ನಾಲ್ಕು ಮಂದಿ ಜಾಮೀನು ಕೊಟ್ಟರೆ ಹಣ ಪಾವತಿ ಸಾಧ್ಯ” ಎಂದು ಅಧಿಕಾರಿ ತಿಳಿಸಿದ.

ಲಕ್ಷ್ಮೀಬಾಯಿ ಪುರುಷ ವೇಷ ಧರಿಸಿ ರಣಚಂಡಿಯಂತೆ ಹೋರಾಡಿದಳು.

ರಾಣಿ ಅಪಮಾನವನ್ನು ನುಂಗಿಕೊಂಡು ಹಣ ಪಡೆದಳು. ಉಪನಯನಕ್ಕೆಂದು ಪ್ರಮುಖರೆಲ್ಲ ಕೂಡಿದರು.

ಭವನದ ಸುತ್ತ ಮಹಿಳೆಯರ ಕಠೋರ ಪಹರೆಯ ನಡುವೆ ಪ್ರಮುಖರ ಸಭೆ ಸೇರಿತು.

ಬ್ರಿಟಿಷರ ಸೇನೆಯಲ್ಲಿರುವ ಹಿಂದು ಸಿಪಾಯಿಗಳು ಹಣೆಯ ಮೇಲೆ ತಿಲಕವಿಡಕೂಡದೆಂದು ಪ್ರತಿಬಂಧನ ಹಾಕಿರುವುದು ಹಿಂದುಗಳನ್ನು ಕೆರಳಿಸಿರುವಂತೆಯೇ, ಕೊಬ್ಬ ಸವರಿದ ಕಾಡತೂಸುಗಳನ್ನು ಬಳಸಬೇಕಾಗಿರುವ ಮುಸಲ್ಮಾನ ಸೈನಿಕರೂ ಕೆರಳಿದ್ದಾರೆ; ಸೇನೆಯಲ್ಲಿ ಅಸಂತುಷ್ಟಿ ಪ್ರಬಲವಾಗಿದೆ ಎಂದು ಪ್ರಮುಖರು ತಿಳಿಸಿದರು.

ಆತುರ ಸಲ್ಲದು. ಜೊತೆಗೆ ಸೇನೆಯ ಸಜ್ಜು ಸಾಲದು. ಅಲ್ಲದೆ ಯುದ್ಧಕಾಲದಲ್ಲಿ ಲೂಟಿ, ದರೋಡೆಗಳಿಗೆ ಅವಕಾಶವಿರದಂತೆ ನೋಡಿಕೊಳ್ಳುವ ಏರ್ಪಾಟಾಗಬೇಕು. ಇಲ್ಲವಾದರೆ ಜನತೆಯ ಸಹಾನುಭೂತಿ ಕಳೆದು ಹೋಗುತ್ತದೆ-ಇದು ರಾಣಿ ತಳೆದ ನಿಲುವು ಎಲ್ಲರಿಗೂ ಒಪ್ಪಿಗೆಯಾಯಿತು.

ಸಿಡಿದ ಕಿಡಿ

ಗಾನ-ಮೇಳ-ಮನೋಲ್ಲಾಸದ ರೂಪದಲ್ಲಿ ಸೇನಾ ಶಿಬಿರದಲ್ಲಿ ಅತೃಪ್ತಿಯ ಅಗ್ನಿಯನ್ನು ಪ್ರಜ್ವಲಗೊಳಿಸುವ ಕಾರ್ಯದಲ್ಲಿ ಮಹಿಳೆಯರೂ ತೊಡಗಿದರು. ಎಲ್ಲ ಸಮಾಚಾರಗಳೂ ರಾಣಿಗೆ ತಲುಪುತ್ತಿದ್ದವು.

ಕಾಮನ ಹುಣ್ಣಿಮೆ ಕಳೆದಿತ್ತು. ಫೆಬ್ರವರಿ ತಿಂಗಳಿನ ಕಗ್ಗತ್ತಲಿನ ನಡುರಾತ್ರಿ. ರಾಣಿಯನ್ನು ಕಾಣಲು ತತ್ಯಾಟೋಪಿ ಬಂದ.

“ಇನ್ನು ಸಹಿಸಲು ಸಾಧ್ಯವಿಲ್ಲ. ಎದೆಗೆ ಹೊಕ್ಕ ಚೂರಿಯ ಯಾತನೆ ಸಹಿಸುವುದು ಎಷ್ಟ ಕಾಲ? ಎದ್ದೇಳಿ, ಧರ್ಮದ ಸಲುವಾಗಿ ಪ್ರಾಣ ಕೊಡಲೂ ಸಿದ್ಧರಾಗಿ. ಕೆಲವು ವಿದ್ರೋಹಿಗಳು ಈ ವಿಶಾಲ ದೇಶವನ್ನು ಹಿಡಿದಿಟ್ಟುಕೊಂಡಿದ್ದಾರೆ. ಅವರನ್ನು ಹೊಡೆದೊಡಿಸಿ ದೇಶವನ್ನು ಸ್ವತಂತ್ರಗೊಳಿಸಿ; ಧರ್ಮ ರಕ್ಷಣೆ ಮಾಡಿ” ಎಂದು ಪ್ರಕಟಿಸಿದ್ದ ಪತ್ರಿಕೆಯೊಂದನ್ನು ತತ್ಯಾ ತಂದಿದ್ದ.

ಇನ್ನೂ ಕಾಲ ಪಕ್ವವಾಗಿಲ್ಲ ಎಂದು ರಾಣಿಯ ಭಾವನೆ. ಸೈನಿಕರಲ್ಲಿ ಅತೃಪ್ತಿ ಮಿತಿಮೀರಿದೆ. ಹಣ ಸಿಕ್ಕುವುದೂ ಕಷ್ಟವಲ್ಲ, ಮದ್ದುಗುಂಡುಗಳೂ ಶೇಖರವಾಗಿವೆ ಎಂದು ಹೇಳಿದ ತತ್ಯಾ.

ಮೇ ೩೧ನೇ ತಾರೀಖು ಭಾನುವಾರ ದೇಶದಲ್ಲೇ ದಂಗೆಯಾಗಬೇಕು ಎಂದು ತೀರ್ಮಾನವಾಯಿತು.

ವಾಗ್ವೇವಿ ಸರಸ್ವತಿಯ ಹಿರಿಮೆ, ಧನಲಕ್ಷ್ಮಿಯ ಮಹಿಮೆಗಳೆರಡೂ ಕಮಲಪುಷ್ಪದಲ್ಲಿವೆ. ಇದೇ ಕಮಲ ಪುಷ್ಪವನ್ನು ಕ್ರಾಂತಿಯ ಸಂಕೇತವನ್ನಾಗಿ ಆರಿಸಲಾಯಿತು. ಜೊತೆಗೆ ರೊಟ್ಟಿಯೂ ಕ್ರಾಂತಿಯ ಚಿಹ್ನೆಯಾಯಿತು.

ಒಂದೂರಿಂದ ಬಂದ ರೊಟ್ಟಿಯನ್ನು ಸ್ವೀಕರಿಸಿ ಅದರ ಬದಲು ಹೊಸ ರೊಟ್ಟಿ ಮಾಡಿ ನೆರೆಯೂರಿಗೆ ಕಳುಹಿಸುವುದು ಕ್ರಾಂತಿ ಸಂದೇಶದ ರವಾನೆಗೆ ಇದೇ ಮಾರ್ಗವಾಯಿತು.

ಬಾರಕ್‌ಪುರದಲ್ಲಿ ನಿಶ್ಚಿತ ದಿನಕ್ಕೆ ಮೊದಲೇ ತೊಂದರೆ ಆರಂಭವಾಯಿತು. ಮೇ ೧೦ ರಂದೇ ಮೀರತ್‌ನಲ್ಲಿ ಕ್ರಾಂತಿಯ ಕಿಡಿ ಸ್ಫೋಟಿಸಿತು. ಮೀರತ್ ಮತ್ತು ದೆಹಲಿಯ ಭಾರತೀಯ ಸೈನ್ಯ ಒಂದುಗೂಡಿ ದೆಹಲಿಯ ಸಿಂಹಾಸನದ ಮೇಲೆ ಅಧಿಕಾರ ಸ್ಥಾಪಿಸಿಬಿಟ್ಟವು. ಪದಭ್ರಷ್ಟನಾಗಿದ್ದ ಬಹಾದ್ದೂರ್ ಶಹಾನನ್ನು ಹಿಂದೂಸ್ಥಾನದ ಚಕ್ರವರ್ತಿ ಎಂದು ಮತ್ತೆ ಘೋಷಿಸಲಾಯಿತು.

ಸಿಪಾಯಿ ದಂಗೆ”

೧೮೫೭ರಲ್ಲಿ ಉಕ್ಕಿಹರಿದ ಜನತಾ ರೋಷವನ್ನು, ಆಂಗ್ಲ ಅರಸರು ತಮ್ಮ ಮೂಗುನೇರಕ್ಕೆ ಬರೆದ ಇತಿಹಾಸ “ಸಿಪಾಯಿ ದಂಗೆ” ಎಂದು ಬಣ್ಣಿಸಿತು. ಅಂದರೆ ಇದರಲ್ಲಿ ಪಾಲ್ಗೊಂಡವರು ಕೇವಲ ಸಿಪಾಯಿಗಳು. ಬೇರೆ ಯಾರೂ ಅಲ್ಲ ಎಂದು ಅರ್ಥವಾಗುತ್ತದೆ.

ಸಿಪಾಯಿಗಳು ಈ ಜನತಾ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿದ್ದು ನಿಜ. ಆದರೆ ಇದರಲ್ಲಿ ಕೇವಲ ಅವರು ಮಾತ್ರವೇ ಇರಲಿಲ್ಲ. ರಾಜ ಮಹಾರಾಜರು, ಮಂಡಲಾಧಿಪತಿಗಳು, ಪೇಶ್ವೆಗಳು, ನವಾಬರು, ದೆಹಲಿಯ ಬಾದಶಹರು ಮಾತ್ರವಲ್ಲ, ಹಿಂದು ಮುಸ್ಲಿಮರು, ಮೌಲ್ವಿಗಳು ಮತ್ತು ಪುರೋಹಿತರು ಒಂದುಗೂಡಿ ನಿಂತರು. ಎಲ್ಲಕ್ಕೂ ಹೆಚ್ಚಾಗಿ ಮಹಿಳಾಮಣಿಗಳು ಮಹತ್ತರ ಪಾತ್ರ ವಹಿಸಿದರು. ಹದಿನೆಂಟು ಇಪ್ಪತ್ತು ತಿಂಗಳ ಕಾಲ ರಕ್ತದ ಓಕುಳಿಯಾಟ ನಡೆಯಿತು.

ಇತಿಹಾಸ ಬಣ್ಣಿಸುವಂತೆ ಇದರಲ್ಲಿ ನಾವು ಸೋಲು ಉಂಡದ್ದು ನಿಜವೇ. ದಾಸ್ಯಕ್ಕೆ ಒಳಗಾದ ದೇಶ ವಿಮೋಚನೆಗಾಗಿ ಎಷ್ಟು ಬಾರಿ ಸೆಣಸಿ ಸೋತರೂ ಅದು ಅಪಮಾನಕರವಲ್ಲ. ಹೋರಾಟವೇ ಜನತೆಯ ಜೀವಂತಿಕೆಗೆ ಸಾಕ್ಷಿ. ಅದೇ ಗೌರವ.

ಭಾರತ ವಿಶಾಲವಾದ ರಾಷ್ಟ್ರ. ತಮ್ಮ ವ್ಯಾಪಾರಕ್ಕೆ ಹುಲುಸಾದ ಬೀಡು. ಕಚ್ಚಾಮಾಲನ್ನು ಇಲ್ಲಿಂದಲೇ ಕೊಂಡು ಅದರಿಂದ ಮಾಡಿದ ಸಿದ್ಧವಸ್ತುವನ್ನು ನಾಲ್ಕುಪಟ್ಟು ಹೆಚ್ಚು ಬೆಲೆಗೆ ಮಾರಿ ತಮ್ಮ ಕೋಶವನ್ನು ಹಿಗ್ಗಿಸಿಕೊಳ್ಳುವ ಮುಕ್ತ ಅವಕಾಶ. ಭಾರತೀಯರಲ್ಲಿ ಒಗ್ಗಟ್ಟಿಲ್ಲದೆ ಇದ್ದುದನ್ನೇ ತನ್ನ ಯಶಸ್ಸಿನ ರಹಸ್ಯವನ್ನಾಗಿ ಮಾಡಿಕೊಂಡಿತು ಈಸ್ಟ್‌ಇಂಡಿಯಾ ಕಂಪೆನಿ.

೧೭೫೨ರಲ್ಲಿ ಭಾರತದಲ್ಲಿ ವ್ಯಾಪಾರ ಮಾಡಲು ಅನುಮತಿ ಕೋರಿ ಮೊಗಲ್ ಚಕ್ರವರ್ತಿಗಳ ಮುಂದೆ ಮಂಡಿಯೂರಿ ಕುಳಿತಾಗ ಕಂಪೆನಿಯ ಮೂರು ಉಗ್ರಾಣಗಳಿದ್ದವು. ಒಟ್ಟು ಇಪ್ಪತ್ತು ಚದರ ಮೈಲಿ ಭೂಮಿ ಅವರ ಕೈಯಲ್ಲಿತ್ತು. ಒಂದು ನೂರು ವರ್ಷಗಳ ನಂತರ ಇದೇ ಕಂಪೆನಿಯ ಒಡೆತನಕ್ಕೆ ಸೇರಿದ್ದ ಭೂಮಿ ಆರೂವರೆ ಲಕ್ಷ ಚದರ ಮೈಲಿ.

ರಾಜಕೀಯ, ಆರ್ಥಿಕ ದೃಷ್ಟಿಗಳಿಂದ ದೇಶ ಹಿಡಿತಕ್ಕೆ ಬಂದರೆ ಸಾಲದು, ಧಾರ್ಮಿಕವಾಗಿಯೂ ತನ್ನ ಅನುಚರವಾಗಬೇಕು ಎಂದು ಈಸ್ಟ್ ಇಂಡಿಯಾ ಕಂಪೆನಿ ಕ್ರೈಸ್ತ ಧರ್ಮ ಪ್ರಚಾರವನ್ನೂ ಬಲಗೊಳಿಸಿತು.

ಹೀಗೆ ಜನತಾ ಆಂದೋಳನಕ್ಕೆ ಪ್ರೇರಣೆ ನೀಡಿದ ಅಂಶಗಳು ಹಲವು.

ಆವರಿಸಿದ ಅಗ್ನಿ

ರಾಣಿಯ ಜೀವನ ಕ್ರಮದಲ್ಲಿ ಬದಲಾವಣೆ ಇರಲಿಲ್ಲ. ಸ್ನಾನ, ಪೂಜೆ, ಜಪ-ತಪ, ಪುರಾಣ ಪುಣ್ಯಕಥೆಗಳ ಶ್ರವಣದ ನಡುವೆ ಸಮರ ಸಾಧನೆಯೂ ನಡೆದೇ ಇತ್ತು.

“ಮಹಾರಾಣಿ, ಇನ್ನೂ ಈ ಯುದ್ಧವಿದ್ಯೆಯ ಅಭ್ಯಾಸ ನಿಮಗೇಕೆ ಇನ್ನಷ್ಟು ಕಾಲವನ್ನು ದೇವರ ಚಿಂತನೆಗೇ ಮೀಸಲಾಗಿಡಬಹುದಲ್ಲವೆ?” ಆಪ್ತಸಖಿ ಒಮ್ಮೆ ಪ್ರಶ್ನಿಸಿದಳು.

“ಕ್ಷತ್ರಿಯ ಸ್ತ್ರೀಯಾದ ನಾನು ಧರ್ಮಪಾಲನೆ ಮಾಡುತ್ತಿದ್ದೇನೆ. ದೇಶ ಮತ್ತು ಧರ್ಮದ ಪಾಲನೆಯೇ ಕ್ಷತ್ರಿಯರ ಕರ್ತವ್ಯ. ಅಗತ್ಯ ಒದಗಿದರೆ ಹೋರಾಟಕ್ಕೆ ಇಳಿಯಬೇಕು. ಅಸಹಾಯಕ ವಿಧವೆಯಂತೆ ಶತ್ರುವಿಗೆ ಶರಣಾಗಲಾರೆ. ಅತ್ತು ಸಾಯುವುದು ನನಗೆ ಸೇರದು. ನನ್ನ ಧ್ಯೇಯಕ್ಕಾಗಿ ಸೆಣಸುತ್ತಾ ನಗುಮುಖದಿಂದ ಸಾವನ್ನಪ್ಪುತ್ತೇನೆ.”

ಜೂನ್ ನಾಲ್ಕರಂದು ಕಾನ್‌ಪುರದಲ್ಲಿ ಕ್ರಾಂತಿ ಭುಗಿಲೆದ್ದಿತು. ಅಂದೇ ಝಾನ್ಸಿಯಲ್ಲಿ ಆ ಲಕ್ಷಣಗಳು ಕಂಡುಬಂದವು. ಒಬ್ಬ ಹವಾಲ್ದಾರ್ ಕೆಲವು ಸೈನಿಕರೊಡನೆ ಇಂಗ್ಲಿಷರು ಹೊಸದಾಗಿ ನಿರ್ಮಿಸಿಕೊಂಡಿದ್ದ ತಾರಾದುರ್ಗ (ಸ್ಟಾರ್ ಫೋರ್ಟ್‌)ವನ್ನು ಪ್ರವೇಶಿಸಿ ಯುದ್ಧ ಸಾಮಗ್ರಿ ಮತ್ತು ಹಣವನ್ನು ವಶಪಡಿಸಿಕೊಂಡ.

ತಕ್ಷಣವೇ ಇಂಗ್ಲಿಷರ ಶಿಬಿರದಲ್ಲಿದ್ದ ಅವರ ಹೆಂಗಸರು ಮಕ್ಕಳನ್ನೆಲ್ಲಾ ಕೋಟೆಗೆ ಸಾಗಿಸುವ ಕ್ರಮ ಆರಂಭವಾಯಿತು. ಇಂಗ್ಲಿಷ್ ಅಧಿಕಾರಿಗಳು ರಾಣಿಯ ನೆರವಿನ ಯಾಚನೆಗೆ ಬಂದರು. “ಪರಿಸ್ಥಿತಿಯನ್ನು ಹತೋಟಿಗೆ ತಂದುಕೊಳ್ಳುವ ಪೂರ್ಣ ಭರವಸೆ ನಮಗಿದೆ. ಆದರೆ ಕಷ್ಟಕಾಲದಲ್ಲಿ ತಾವೂ ನಮಗೆ ನೆರವಾಗಬೇಕು” ಎಂದು ಕೋರಿದರು.

ರಾಣಿ ಉತ್ತರವಿತ್ತಳು: “ನನ್ನ ಬಳಿ ಸೇನೆಯೂ ಇಲ್ಲ, ಶಸ್ತ್ರಾಸ್ತ್ರಗಳೂ ಇಲ್ಲ. ನಿಮಗೆ ಒಪ್ಪಿಗೆ ಇದ್ದರೆ ಜನತಾ ರಕ್ಷಣೆಗಾಗಿ ಒಂದು ಸೇನೆಯನ್ನು ಕೊಡಿಸಬಲ್ಲೆ.”

ಇದಕ್ಕೆ ಇಂಗ್ಲಿಷರು ಒಪ್ಪಿದರು. ಆದರೆ ಮರುದಿನವೇ ಸೈನಿಕರು ಇಂಗ್ಲಿಷ್ ಅಧಿಕಾರಿಯೊಬ್ಬನನ್ನು ಗುಂಡಿಟ್ಟು ಕೊಂದಾಗ ಅವರ ಕಳವಳ ಅತಿಯಾಯಿತು.

ತಕ್ಷಣ ಸೇನೆಯ ಹಿರಿಯ ಅಧಿಕಾರಿ ರಾಣಿಯ ಬಳಿಗೆ ಓಡಿ ಬಂದು, “ನಾವು ಗಂಡಸರು, ನಮ್ಮ ಚಿಂತೆಯಿಲ್ಲ. ಆದರೆ ನಮ್ಮಹೆಂಗಸರು ಮಕ್ಕಳಿಗೆ ನಿಮ್ಮ ಅರಮನೆಯಲ್ಲಿ ಆಶ್ರಯ ಕೊಡಬೇಕು” ಎಂದು ಕೋರಿದ.

ರಾಣಿಯ ಆಪ್ತರು ಈ ಭರವಸೆ ಕೊಡಬಾರದೆಂದು ಸಲಹೆ ನೀಡಿದರು. ಆದರೆ ಆಕೆ ದೃಢ ಸ್ವರದಲ್ಲಿ ಹೇಳಿದಳು: “ನಮ್ಮ ಯುದ್ಧ ಇಂಗ್ಲಿಷ್ ಪುರುಷರೊಡನೆಯೇ ಹೊರತು ಅವರ ಹೆಂಗಸರು ಮಕ್ಕಳ ಮೇಲಲ್ಲ. ಈ ವಿಷಯದಲ್ಲಿ ನಮ್ಮ ಸಿಪಾಯಿಗಳನ್ನು ತಡೆಯಲು ಹೇಗೆ ಆಗಬಲ್ಲೆ? ತಕ್ಷಣವೇ ಇಂಗ್ಲಿಷರ ಹೆಂಗಸರು ಮಕ್ಕಳಿಗೆಲ್ಲ ಅರಮನೆಯಲ್ಲಿ ಆಶ್ರಯ ಸಿಗುತ್ತದೆ” ಎಂದು ಭರವಸೆ ನೀಡಿದಳು.

ಅಷ್ಟೇ ಅಲ್ಲ, ಯುದ್ಧದ ಕಾಲದಲ್ಲಿ ಅನ್ನಾಹಾರಗಳನ್ನು ನೀಡಿ ಅವರನ್ನು ರಾಣಿ ಕಾಪಾಡಿದಳು.

ಅಂಕೆ ತಪ್ಪಿದ ಸೇನೆ ಇಂಗ್ಲಿಷರ ಮೇಲೆ ಗೆಲುವನ್ನು ಸಾಧಿಸಿತ್ತು. ಝಾನ್ಸಿ ನಗರವನ್ನು ಲೂಟಿ ಮಾಡುವ ಬಯಕೆ ಮೂಡಿತು. ರಾಣಿ ಆಗ ತನ್ನಲ್ಲಿದ್ದ ನಗ-ನಾಣ್ಯವನ್ನೇ ಸೈನಿಕರಿಗೆ ನೀಡಿ ಅವರನ್ನು ತೃಪ್ತಿಪಡಿಸಿದಳು. ಸೇನೆ ದೆಹಲಿಯ ಕಡೆಗೆ ಹೊರಟಿತು.

ನಲಿತ ಸ್ವತಂತ್ರ ನಿಕೇತನ

ತಕ್ಷಣ ರಾಣಿ ಅರಾಜಕತೆಯನ್ನು ಕೊನೆಗೊಳಿಸಲು ಕ್ರಮ ಕೈಗೊಂಡಳು. ಸಾಮಂತರು, ಸರದಾರರು ಒಕ್ಕೊರಲಿನಿಂದ ರಾಜ್ಯದ ಒಡೆತನವನ್ನು ರಾಣಿ ವಹಿಸಿಕೊಳ್ಳಬೇಕೆಂದು ಕೋರಿದರು. ರಾಣಿ ಒಪ್ಪಿದಳು. ಕೋಟೆಯ ಮೇಲೆ ಮತ್ತೆ ಭಗವಾಧ್ವಜ ಏರಿ ನಲಿಯತೊಡಗಿತು.

ಹಗಲು ರಾತ್ರಿಗಳ ಭೇದವಿಲ್ಲದೆ ಝಾನ್ಸಿ ಯುದ್ಧಸಿದ್ದತೆ ನಡೆಸಿತು. ಹೊಸ ಶಸ್ತ್ರಾಸ್ತ್ರಗಳು ತಯಾರಾಗತೊಡಗಿದವು. ಅದರ ನಾಲ್ಕೈದು ದಿನಗಳ ಒಳಗಾಗಿ ಇನ್ನೊಂದು ವಿಪತ್ತು ಎದುರಾಯಿತು.

ಅಬಲೆ ಮಹಿಳೆಯ ಆಡಳಿತದಲ್ಲಿ ಝಾನ್ಸಿಇದೆ ಎಂದು ಭಾವಿಸಿದ್ದ ಸದಾಶಿವರಾವ್ ಎಂಬುವನು ರಾಜ್ಯದ ಒಂದು ಭಾಗದಲ್ಲಿ ದಂಗೆ  ಎದ್ದು ತಾನು ಮಹಾರಾಜನೆಂದು ಘೋಷಿಸಿಕೊಂಡ. ತಕ್ಷಣ ಮಹಾರಾಣಿ ಅಲ್ಲಿಗೆ ಧಾವಿಸಿ ದಂಗೆಯನ್ನು ಅಡಗಿಸಿದಳು.

ಸೋಲು-ಗೆಲುವುಗಳ ನೆರಳು-ಬೆಳಕು

ದಳಪತಿ ಸರ್ ಹ್ಯೂ ರೋಸ್‌ನ ಮುಂದಾಳುತನದಲ್ಲಿ ಒಂದು ಸೇನೆ ಝಾನ್ಸಿಯನ್ನು ತಲುಪಿತು. ಮಹಾರಾಣಿ ತನ್ನ ಆಪ್ತರೊಡನೆ ನಿಶ್ಯಸ್ತ್ರಳಾಗಿ ತನ್ನನ್ನು ಕಾಣಬೇಕು ಎಂದು ಆತ ಹೇಳಿಕಳಿಸಿದ.

ಆದರೆ ರಾಣಿ ಇದಕ್ಕೆ ಒಪ್ಪಲಿಲ್ಲ. ಭೇಟಿ ಏನಿದ್ದರೂ ಅದು ಸೈನ್ಯ ಸಮೇತರಾಗಿ ಎಂದು ತಿಳಿಸಿದ್ದಾಯಿತು.

ಇಂಗ್ಲಿಷರ ಆಡಳಿತ ಕೈತಪ್ಪಿ ಝಾನ್ಸಿಯ ಒಡೆತನ ಲಕ್ಷ್ಮೀಬಾಯಿಯ ಕೈ ಸೇರಿದ ಹತ್ತು ತಿಂಗಳ ಅವಧಿಯಲ್ಲಿ (ಜೂನ್ ೧೮೫೭ ರಿಂದ ೧೮೫೮ ರ ಮಾರ್ಚ್‌‌ವರೆಗೆ) ರಾಜ್ಯದ ಆಡಳಿತ ಉತ್ತಮಗೊಂಡಿತ್ತು. ಖಜಾನೆ ತುಂಬಿತ್ತು. ಸೇನೆಯ ಸಂಘಟನೆ ಉತ್ತಮವಾಗಿ ನಡೆದಿತ್ತು. ಸ್ತ್ರೀ ಸೇನೆಯೊಂದು ಪುರುಷ ಸೇನೆಗೆ ಸರಿಸಾಟಿಯಾಗಿತ್ತು.

“ಘನ ಗರ್ಜನೆ”, “ಭವಾನೀ ಶಂಕರ” “ಕೋಲ್ಮಿಂಚು” ಇವು ರಾಣಿಯು ತನ್ನ ಫಿರಂಗಿಗಳ ಪೈಕಿ ಕೆಲವಕ್ಕೆ ಕೊಟ್ಟ ಹೆಸರು. ಇವುಗಳನ್ನು ಸರದಿಯ ಮೇಲೆ ಪುರುಷರೂ ಸ್ತ್ರೀಯರೂ ನಡೆಸುತ್ತಿದ್ದರು. ಹಳೆಯ ಶಸ್ತ್ರಾಸ್ತ್ರಗಳಿಗೆ ಸಾಣೆ ಕೊಡಲಾಯಿತು. ಹೊಸ ಶಸ್ತ್ರಗಳು ಸಿದ್ಧವಾಗತೊಡಗಿದವು. ಅಂದಿನ ಝಾನ್ಸಿಯ ಪ್ರತಿ ಮನೆಯೂ ಸಮರ ಸಜ್ಜಿನಲ್ಲಿತ್ತು. ಎಲ್ಲ ಮಹಾರಾಣಿಯ ಮಾರ್ಗದರ್ಶನದಲ್ಲೇ ನಡೆದಿತ್ತು.

ಸರ್ ಹ್ಯೂ ರೋಸ್‌ನ ಸೇನೆ ೧೮೫೮ರ ಮಾರ್ಚ್‌೨೩ರಂದು ಸಮರ ಸಾರಿತು.

ಪುಟ್ಟ ರಾಜ್ಯವಾದ ಝಾನ್ಸಿ ೧೦-೧೨ ದಿನಗಳವರೆಗೆ ಸೋಲು-ಗೆಲುವುಗಳ ನೆರಳು-ಬೆಳಕಿನಲ್ಲೇ ಸಾಗಿತು. ಒಮ್ಮೆ ಗೆಲುವು ಕಂಡು ನೆಮ್ಮದಿಯುಂಟಾದರೆ ಮರುಗಳಿಗೆಯಲ್ಲೇ ಸೋಲಿನ ಆಘಾತ. ನಿಷ್ಠರಾಗಿದ್ದ ಅನೇಕ ಸರದಾರರು ನೆಲವನ್ನಪಿದ್ದರು. ದುರ್ದೈವದಿಂದ ಹೊರಗಿನ ನೆರವೂ ಬಾರದಾಯಿತು.

ರಣಚಂಡಿ

ಇಂಗ್ಲಿಷರ ಕೈ ಮೇಲಾಗಿ ಹ್ಯೂ ರೋಸ್‌ನ ಸೇನೆ ಝಾನ್ಸಿ ನಗರವನ್ನು ಪ್ರವೇಶಿಸಿದಾಗ ರಾಣಿಯೇ ಸ್ವಯಂ ಶಸ್ತ್ರ ಧರಿಸಿದಳು. ಪುರುಷ ವೇಷ ಧರಿಸಿ ರಣಚಂಡಿಯಂತೆ ಸೆಣಸಿದಳು. ಅವಳು ಎಲ್ಲಿ ನುಗ್ಗಿದರೆ ಅಲ್ಲಿ ಬ್ರಿಟಿಷರ ಸೇನೆಯು ಆಹುತಿಯಾಗುತ್ತಿತ್ತು. ಆಕೆಯ ಸಮರ ಸಂಚಾಲನ ಕಾರ್ಯ ಮತ್ತು ಪುರುಷ ಸಹಜವಾದ ಕೆಚ್ಚಿನ ಕಾದಾಟ ಹ್ಯೂ ರೋಸ್‌ನನ್ನೂ ಬೆರಗುಗೊಳಿಸಿತು.

ಪರಿಸ್ಥಿತಿ ಹತೋಟಿ ತಪ್ಪಿದಾಗ ಮಹಾರಾಣಿ ಅಳಿದುಳಿದಿದ್ದ ಸಭಾಸದರನ್ನೇ ಸೇರಿಸಿ ತನ್ನ ಸಲಹೆ ಮುಂದಿಟ್ಟಳು. – “ನಮ್ಮ ದಳಪತಿಗಳು, ಪರಮವೀರ ಸೇನಾನಿಗಳು, ಫಿರಂಗಿಗಳ ಚಾಲಕರು ಈಗ ನಮ್ಮೊಡನಿಲ್ಲ. ಕೋಟೆಯ ಒಳಗಿದ್ದ ನಾಲ್ಕು ಸಹಸ್ರ ಸೈನಿಕರ ಪೈಕಿ ಈಗ ನಾನೂರು ಮಂದಿ ಕೂಡ ಉಳಿದಿಲ್ಲ. ಕೋಟೆ ಬಲವಾಗಿಲ್ಲ. ಆದ್ದರಿಂದ ಇಲ್ಲಿಂದ ಆದಷ್ಟೂ ಬೇಗ ಹೊರಬೀಳಬೇಕು. ಸೇನೆಯನ್ನು ಸಂಘಟಿಸಿ ಮತ್ತೆ ಆಕ್ರಮಣ ಹೂಡಬೇಕು.” ಸರದಾರರು ಒಪ್ಪಿದರು.

ಕೆಲವು ವೀರರೊಡನೆ ಶತ್ರು ಸೇನೆಯನ್ನು ಸೀಳಿಕೊಂಡು ರಾಣಿ ಝಾನ್ಸಿಯನ್ನು ಬಿಟ್ಟು ಹೊರನಡೆದಳು.

ಬೋಕರ್ ಎಂಬಾತ ಸೈನ್ಯದೊಡನೆ ಹಿಂಬಾಲಿಸಿದ. ಕದನದಲ್ಲಿ ಅವನೇ ಗಾಯಗೊಂಡು ಹಿಂದಿರುಗಿದ. ರಾಣಿಯ ಕುದುರೆ ಸಾವನ್ನಪ್ಪಿತು. ಆದರೂ ಆಕೆ ಎದೆಗುಂದದರೆ ಕಾಲಪಿಗೆ ಹೋಗಿ ತತ್ಯಾಟೋಪಿ ಮತ್ತು ರಾವ್‌ಸಾಹೇಬ್ ಜೊತೆಗೂಡಿದಳು.

ದೀಪ ಆರುವ ಮೊದಲು

ಕಾಲಪಿಯಲ್ಲಿಯೂ ರಾಣಿ ಸೇನೆಯನ್ನು ಸಜ್ಜುಗೊಳಿಸುವ ಕೆಲಸದಲ್ಲಿ ಮಗ್ನಳಾದಳು. ಹ್ಯೂ ರೋಸ್ ಕಾಲಪಿಯನ್ನು ಮುತ್ತಿದ. ಸೋಲು ನಿಶ್ಚಿತವಾದಾಗ ರಾಣಿಯ ಸಹಿತ ರಾವ್‌ಸಾಹೇಬ್, ತತ್ಯಾ ಮತ್ತಿತರರು ಗ್ವಾಲಿಯರ್ ಕಡೆಗೆ ಪಲಾಯನ ಮಾಡಿದರು.

ಗೋಪಾಲಪುರ ತಲುಪಿ ಅಲ್ಲಿನ ತೋಟದಲ್ಲಿ ಮಿರಮಿಸಿದರು. ರಾತ್ರೋರಾತ್ರಿ ರಾವ್‌ಸಾಹೇಬ್, ತತ್ಯಾ ಮತ್ತು ಬಾಂದಾ ನವಾಬರು ಸಮಾಲೋಚನೆ ನಡೆಸಿ ಮರುದಿನ ಬೆಳಗ್ಗೆ ರಾಣಿಯನ್ನು ಕಂಡರು. ಹೋರಾಟ ನಡೆಸುವ ಉತ್ಸಾಹ ಅವರಲ್ಲಿ ಉಳಿದಿರಲಿಲ್ಲ.

ರಾಣಿ ಹೇಳಿದಳು. “ನಾವು ಇದುವರೆಗೆ ಇಂಗ್ಲಿಷರನ್ನು ಎದುರಿಸಿರುವುದೇ ಕೋಟೆಯಲ್ಲಿ ನಿಂತು. ಈಗಲೂ ಅಷ್ಟೇ ಮಾಡಬೇಕು. ಗ್ವಾಲಿಯರ್ ಕೋಟೆ ಇಲ್ಲಿಗೆ ಸಮೀಪವಾಗಿದೆ. ಅಲ್ಲಿನ ರಾಜರು ಇಂಗ್ಲಿಷರ ಪಕ್ಷಪಾತಿಗಳೆಂಬುದು ನಿಜ. ಆದರೆ ಸೇನೆ ಮತ್ತು ಜನತೆ ವಿರುದ್ಧವಾಗಿದೆ ಎಂಬುದು ನನಗೆ ಗೊತ್ತು. ಜೊತೆಗೆ ಅಲ್ಲಿ ಈಗಾಗಲೇ ಸಿದ್ಧವಾಗಿರುವ ಮದ್ದು-ಗುಂಡು ಮತ್ತು ಫಿರಂಗಿಗಳ ದೊಡ್ಡ ಉಗ್ರಾಣವೇ ಇದೆ.”

ರಾಣಿಯ ಸಲಹೆ ಸರದಾರರಿಗೆಲ್ಲ ಸಮ್ಮತವಾಯಿತು. ತತ್ಯಾಟೋಪಿ ಗ್ವಾಲಿಯರ‍್ಗೆ ಪುಟ್ಟ ಸೇನೆಯೊಡನೆ ಹೋಗಿ ನಿಂತ ಕೂಡಲೇ ಗ್ವಾಲಿಯರ್ ಸೇನೆಯ ಬಹುದೊಡ್ಡ ಭಾಗ ಸಹಕರಿಸಿತು. ಗ್ವಾಲಿಯರ‍್ನ ರಾಜ ಅಲ್ಲಿಂದ ಪಲಾಯನ ಮಾಡಿ ಆಗ್ರಾದಲ್ಲಿ ಇಂಗ್ಲಿಷರ ಆಶ್ರಯ ಪಡೆದ.

ಆದರೆ ಅಲ್ಲಿಂದ ಮುಂದಕ್ಕೆ ನಡೆದುದೆಲ್ಲ ಅವಿವೇಕದ ಪುನರಾವರ್ತನೆ.

ರಾಣಿ ಮತ್ತು ಅವಳ ಆಪ್ತರನ್ನುಳಿದು ಉಳಿದೆಲ್ಲ ಮುಂದಾಳುಗಳೂ ಭೋಗವೈಭವಗಳಲ್ಲಿ ಮೈಮರೆತರು. ರಾಣಿ ನೀಡಿದ ಸಕಾಲಿಕ ಎಚ್ಚರಿಕೆ ಗಾಳಿಯ ಅಲೆಯಲ್ಲಿ ತೇಲಿಹೋಯಿತು.

ಈ ಸಡಗರಗಳಿಂದ ದೂರವಿದ್ದ ರಾಣಿ ಗ್ವಾಲಿಯರ್ ಕೋಟೆಯ ಆಯಕಟ್ಟಿನ ಸ್ಥಳಗಳ ನಿರೀಕ್ಷಣೆ ಕೈಗೊಂಡಳು. ಸಮರವ್ಯೂಹ ರಚಿಸಿದಳು. ಆದರೆ ಈ ಹೆಂಗಸಿನ ಬುದ್ಧಿವಾದ ಕೇಳುವ ಕಿವಿಗಳು ನಾಯಕ ಪುರುಷರಿಗೆ ಇರಲಿಲ್ಲ.

ಮುಗಿದ ಯುದ್ಧ

ಹ್ಯೂರೋಸ್ ವಿಳಂಬಕ್ಕೆ ತಯಾರಿರಲಿಲ್ಲ. ೧೮೫೮ರ ಜೂನ್ ೧೭ರಂದು ಯುದ್ಧ ಪುನರಾರಂಭವಾಯಿತು. ಪುರುಷವೇಷ ಧರಿಸಿ ರಾಣಿ ಸನ್ನದ್ಧಳಾದಳು.

ರೋಸ್ ಒಂದು ಉಪಾಯವನ್ನು ಹೂಡಿದ. ಗ್ವಾಲಿಯರ್ನಿಂದ ಓಡಿಹೋಗಿ ಆಗ್ರಾದಲ್ಲಿ ಇಂಗ್ಲಿಷರ ಆಶ್ರಯ ಪಡೆದಿದ್ದ ಮಹಾರಾಜ ಜಯಾಜಿರಾವ್ ಸಿಂಧಿಯಾನನ್ನು ಅಲ್ಲಿಗೆ ಕರೆಸಿಕೊಂಡ. ಇಂಗ್ಲಿಷರು ಮಹಾರಾಜ ಜಯಾಜಿರಾಯರಿಗೆ ಸಿಂಹಾಸನ ವಾಪಸು ಕೊಡಿಸಲು ಯುದ್ಧ ಮಾಡುತ್ತಿದ್ದಾರೆ. ಆದ್ದರಿಂದ ಸೇನೆಗೆ ಹಿಂದಿರುಗುವ ಸೈನಿಕರಿಗೆಲ್ಲ ಕ್ಷಮೆ ನೀಡಲಾಗುವುದು” ಎಂದು ಸಾರಿದ.

ಈಗ ಸ್ವಲ್ಪ ಮಟ್ಟಿಗೆ ಪೇಶ್ವೆಗಳ ವಿವೇಕ ಜಾಗೃತವಾಯಿತು. ರಾಣಿ ಲಕ್ಷ್ಮೀಬಾಯಿಯ ಮುಖ ನೋಡುವುದಕ್ಕೂ ಅವರಿಗೆ ನಾಚಿಕೆ. ಕೊನೆಗೆ ತತ್ಯಾಟೋಪಿಯನ್ನು ಕಳುಹಿಸಿದರು. ಅವರಿಂದ ಕ್ಷಮಾ ಯಾಚನೆಯಾದ ನಂತರ, ರಾಣಿ ತನ್ನ ಯುದ್ಧ ಯೋಜನೆಯನ್ನು ಮುಂದಿಟ್ಟಳು. ಅದು ತತ್ಯಾಟೋಪಿಗೆ ಸರಿಯೆನಿಸಿತು.

ಸಂಖ್ಯಾಬಲದಿಂದ ಸ್ವಲ್ಪವೇ ಆಗಿದ್ದರೂ ಸರದಾರರ ಅಸಾಮಾನ್ಯ ಶೌರ್ಯ ಮತ್ತು ರಾಣಿಯ ಸಮರೋಪಾಯ, ಧೈರ್ಯಗಳ ನಡುವೆ ಬ್ರಿಟಿಷ್‌ಸೈನ್ಯ ಸೋಲನ್ನಪ್ಪಿತು. ಅಂದಿನ ಗೆಲುವು ರಾಣಿಗೆ ಲಭಿಸಿತು.

ಮರುದಿನ (೧೮ರಂದು) ಸುರ್ಯೋದಯಕ್ಕೆ ಮೊದಲೇ ಇಂಗ್ಲಿಷರ ರಣಕಹಳೆ ಮೊಳಗಿತು. ಮಹಾರಾಜ ಜಯಾಜಿರಾಯರು ಹೊರಡಿಸಿದ್ದ ಕ್ಷಮಾದಾನ ಘೋಷಣೆ ಸಾಕಷ್ಟು ಪ್ರಲೋಭನ ಉಂಟು ಮಾಡಿತ್ತು. ರಾವ್ ಸಾಹೇಬರ ಅಧೀನದಲ್ಲಿದ್ದ ಎರಡು ದಳಗಳು ಮತ್ತು ಇಂಗ್ಲಿಷರ ಪರ ವಹಿಸಿದ ಸುದ್ದಿಯೂ ತಿಳಿಯಿತು.

ರಾಣಿ ಲಕ್ಷ್ಮೀಬಾಯಿ ರಾಮಚಂದ್ರರಾವ್ ದೇಶಮುಖರನ್ನು ಕರೆಸಿ ಹೇಳಿದಳು: “ಇಂದು ಯುದ್ಧದ ಮುಕ್ತಾಯವೆಂದು ತೋರುತ್ತದೆ. ನಾನು ಸತ್ತರೆ ಮಗು ದಾಮೋದರನನ್ನು ನನ್ನ ಪ್ರಾಣಕ್ಕಿಂತಲೂ ಹೆಚ್ಚು ಮುಖ್ಯ ಎಂದು ಕಾಪಾಡಿ. ಇನ್ನೊಂದು ಮಾತು, ನಾನು ಸತ್ತರೆ ನನ್ನ ಶರೀರ ವಿಧರ್ಮೀಯರ ಕೈ ಸೇರಿದಂತೆ ನೋಡಿಕೊಳ್ಳಿ.”

ನಿರೀಕ್ಷೆಯಂತೆ ರೋಸ್ ನ ಅಂದು ಬಲಗೊಂಡಿತ್ತು. ವಿಪ್ಲವಕಾರರ ಸೈನ್ಯದ ಬಹುಭಾಗ ನೆಲವನ್ನಪ್ಪಿತು. ಅವರ ಫಿರಂಗಿಗಳು ಇಂಗ್ಲಿಷರ ವಶವಾದವು. ಪ್ರವಾಹದ ರಭಸದೊಡನೆ ಇಂಗ್ಲಿಷ್‌ಸೈನ್ಯ ಕೋಟೆಗೆ ನುಗ್ಗಿತು.

ಇನ್ನು ಅಲ್ಲಿಂದ ಕಣ್ಮರೆಯಾಗದೆ ರಾಣಿಗೆ ಅನ್ಯ ಉಪಾಯವೇ ಇರಲಿಲ್ಲ. ಕುದುರೆಯ ಲಗಾಮನ್ನು ಹಲ್ಲಿನಿಂದ ಕಚ್ಚಿಕೊಂಡು ಎರಡೂ ಕೈಗಳಿಂದ ಕತ್ತಿ ಬೀಸುತ್ತಾ ರಾಣಿ ಮುನ್ನಡೆದಳು. ಹಿಡಿಮಂದಿ ಪಠಾಣ ಸರದಾರರು, ರಘುನಾಥ ಸಿಂಹ, ರಾಮಚಂದ್ರರಾವ್ ದೇಶಮುಖ್ ಜೊತೆಗಿದ್ದರು. ಇಂಗ್ಲಿಷರ ಸೇನೆ ಸುತ್ತುಗಟ್ಟಿತ್ತು.

ರಕ್ತದ ಓಕುಳಿ ನಡೆಯುತ್ತಿತ್ತು. ಪಶ್ಚಿಮ ದಿಗಂತದಲ್ಲಿ ಸೂರ್ಯನೂ ಅದೇ ಬಣ್ಣ ತೊಟ್ಟಿದ್ದ. ಕತ್ತಲಾಗುವುದಕ್ಕೆ ಕೆಲವು ಕಾಲ ಮಾತ್ರ ಇತ್ತು. ಅತ್ಯಂತ ಸಮೀಪದಕ್ಕೆ ಬಂದ ಇಂಗ್ಲಿಷ್ ಸೈನಿಕನೊಬ್ಬ ರಾಣಿಯ ಎದೆಗೆ ಗುರಿ ಇಟ್ಟು ಚೂರಿಯನ್ನೆಸೆದ. ಅದು ಸ್ವಲ್ಪ ಕೆಳಕ್ಕೆ ತಗಲಿತು. ರಾಣಿ ಅದನ್ನೆಸೆದ ಸೈನಿಕನನ್ನು ಯಮಸದನಕ್ಕೆ ಕಳುಹಿಸಿದಳು. ಆಕೆಯ ಶರೀರದಿಂದ ರಕ್ತ ಸುರಿಯುತ್ತಿತ್ತು. ಆದರೆ ವಿರಾಮ ಪಡೆಯಲು ವ್ಯವಧಾನವಿರಲಿಲ್ಲ. ಇಂಗ್ಲಿಷರ ಸೇನೆ ಹಿಂಬಾಲಿಸುತ್ತಿತ್ತು. ರಾಣಿ ಸ್ವರ್ಣರೇಖಾ ನೆಲೆಯನ್ನು ಹಾಯ್ದು ಹೋಗಬೇಕೆನ್ನುವಷ್ಟರಲ್ಲಿ ಅಲ್ಲಿಗೆ ಧಾವಿಸಿ ಬಂದ ಇಂಗ್ಲಿಷ್‌ಸೈನ್ಯದ ಸರದಾರನೊಬ್ಬ ಹಾರಿಸಿದ ಗುಂಡು ಬಲತೊಡೆಗೆ ತಗುಲಿತು. ಎಡಗೈಯಿಂದಲೇ ಖಡ್ಗ ಪ್ರಹಾರ ಮಾಡಿದ ರಾಣಿ ಅವನಿಗೆ ಕೊನೆಗಾಣಿಸಿದಳು.

ಕ್ರೂರ ಪ್ರಹಾ – ಅವಸಾನ

ಆಪತ್ಕಾಲಕ್ಕೆಂದು ಏರಿದ ಕುದುರೆಯೂ ಸಹಕಾರ ಕೊಡಲಿಲ್ಲ. ಒಂದು ತೊಡೆಯೇ ನಿಶ್ಚೇಷ್ಟವಾಗಿತ್ತು. ಹೊಟ್ಟೆಯಿಂದಲೂ ರಕ್ತ ಹರಿಯುತ್ತಿತ್ತು. ವೇಗವಾಗಿ ಹಿಂಬಾಲಿಸಿದ ಇಂಗ್ಲಿಷ್ ಸೈನಿಕನೊಬ್ಬನ ಖಡ್ಗ ಪ್ರಹಾರದಿಂದ ಬಲಕೆನ್ನೆಯೇ ಹರಿಯಿತು. ಆಕೆಯ ಕಣ್ಣು ಗುಡ್ಡೆಯೇ ಕಿತ್ತುಬಂತು. ಆದರೂ ರಾಣಿ ಎಡಗೈಯಿಂದಲೇ ಆ ಸೈನಿಕನ ಭುಜವನ್ನು ಕತ್ತರಿಸಿದಳು.

ರಾಣಿಯ ಬೆಂಗಾವಲಾಗಿ ಕಾಯುತ್ತಿದ್ದ ಗುಲ್‌ಮಹಮದ್‌ನಿಗೆ ತನ್ನ ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಶೌರ್ಯದಿಂದ ಕಾದಾಡಿದ ಆ ಶೂರ ಬಿಕ್ಕಿಬಿಕ್ಕಿ ಅಳತೊಡಗಿದ.

ರಘುನಾಥಸಿಂಹ ಮತ್ತು ರಾಮಚಂದ್ರರಾವ್ ದೇಶಮುಖ್ ರಾಣಿಯನ್ನು ಕುದುರೆಯಿಂದ ಕೆಳಗಿಳಿಸಿಕೊಂಡರು. ರಘುನಾಥ ಸಿಂಹ ಹೇಳಿದ: “ಇನ್ನೊಂದು ಕ್ಷಣವೂ ವಿಳಂಬವಾಗಕೂಡದು. ಬೇಗ ಹತ್ತಿರದಲ್ಲಿರುವ ಬಾಬಾ ಗಂಗಾದಾಸರ ಕುಟೀರವನ್ನು ಸೇರಬೇಕು.”

ಕಣ್ಣೀರಿಡುತ್ತಿದ್ದ ಮಗು ದಾಮೋದರನನ್ನು ಕುದುರೆಯ ಮೇಲೆ ಕೂರಿಸಿದ ರಾಮಚಂದ್ರರಾವ್ ರಾಣಿಯ ಶರೀರವನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಗಂಗಾದಾಸರ ಕುಟೀರಕ್ಕೆ ಧಾವಿಸಿದ. ರಘುನಾಥ ಸಿಂಹ ಮತ್ತು ಗುಲ್ ಮಹಮದ್ ಬೆಂಗಾವಲಾಗಿ ನಡೆದರು.

ಇರುಳಿನಲ್ಲೂ ಬಾಬಾ ಗಂಗಾದಾಸ್ ರಾಣಿಯ ರಕ್ತಮಯ ಮುಖವನ್ನು ಗುರುತಿಸಿದರು. ತಣ್ಣೀರಿನಲ್ಲಿ ಮುಖ ತೊಳೆದರು. ಕೂಡಲೇ ಗಂಗಾಜಲ ಕುಡಿಸಿದರು. ಸ್ವಲ್ಪ ಚೇತರಿಸಿಕೊಂಡ ರಾಣಿ ನಡುಗುತ್ತಿದ್ದ ತುಟಿಗಳಿಂದ “ಹರಹರ ಮಹಾದೇವ್‌” ಎಂದು ಅಸ್ಪಷ್ಟವಾಗಿ ಹೇಳಿದಳು. ತಕ್ಷಣ ಮೂರ್ಛಿತಳಾದಳು. ಸ್ವಲ್ಪ ವೇಳೆಯನಂತರ ರಾಣಿ ಪ್ರಯಾಸದಿಂದ ಕಣ್ತೆರೆದಳು. ಆಗ ಅವಳು ತನಗೆ ಬಾಲ್ಯದಿಂದ ಬಾಯಿ ಪಾಠವಾಗಿದ್ದ ಭವದ್ಗೀತೆಯ ಶ್ಲೋಕಗಳನ್ನು ಮೆಲುಕು ಹಾಕುತ್ತಿದ್ದಳು. ಧ್ವನಿ ಕ್ಷೀಣಿವಾಗುತ್ತ ಕೊನೆಗೆ, “ವಾಸುದೇವಾಯ ನಮಃ” ಎಂದು ಕೇಳಿಬಂತು. ಝಾನ್ಸಿಯ ಭಾಗ್ಯದ ಅಸ್ತಮಯವಾಯಿತು.

ರಘುನಾಥ ಸಿಂಹ, ಗುಲ್‌ಮಹಮದ್, ದಾಮೋದರರಾವ್ ಆಶ್ರುತರ್ಪಣವಿತ್ತರು.

ಗಂಭೀರ ವಾಣಿಯಿಂದ ಬಾಬಾ ಗಂಗಾದಾಸ್‌ಹೇಳಿದರು. “ಪ್ರಕಾಶಕ್ಕೆ ಕೊನೆಯಿಲ್ಲ. ಅದು ಪ್ರತಿ ಕಣದಲ್ಲೂ ಅಡಗಿರುತ್ತದೆ. ಕಾಲ ಬಂದಾಗ ಮತ್ತೆ ಪ್ರಜ್ವಲಿಸುತ್ತದೆ”. ಅಪ್ರತಿಮ ರಾಣಿಯ ದೇಹ ಬೆಂಕಿಯಲ್ಲಿ ಅಡಗಿತು.

ಝಾನ್ಸಿಯ ಭಾಗ್ಯದ ಅಸ್ತಮಯವಾಯಿತು.

ಮಹಿಮಾನ್ವಿತೆ

ಭಾರತೀಯ ಮಹಿಳಾ ಸಮುದಾಯಕ್ಕೇ ಏಕೆ, ಜಗತ್ತಿನ ನಾರೀ ಸಮುದಾಯಕ್ಕೇ ಗೌರವ ತಂದುಕೊಟ್ಟ ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ಜೀವನವೊಂದು ಪವಿತ್ರ ಗೀತೆ, ಸತೀತ್ವ, ಶೌರ್ಯ, ಸಾಹಸ, ಅಚಲ ದೇಶಪ್ರೇಮ ಮತ್ತು ಬಲಿದಾನಗಳ ರೋಮಾಂಚಕ ಕಥೆ.

ಕೋಮಲ ಶರೀರದಲ್ಲಿ ಸಿಂಹದ ಕೆಚ್ಚು ತುಂಬಿದ್ದ ರಾಣಿಯೂ ಹೆಣ್ಣೇ. ಆದರೆ ರಾಜನೀತಿಯಲ್ಲಿ ಚತುರೆ. ಎಲ್ಲ ಹೆಣ್ಣುಮಕ್ಕಳಂತೆ ಅಬಲೆ. ಆದರೆ ಸಮರಕ್ಕಿಳಿದು ಶಸ್ತ್ರಹಿಡಿದಾಗ ಶಕ್ತಿದೇವತೆ ಕಾಳಿಯ ಪ್ರತಿಮೂರ್ತಿ. ಸುಂದರಿ-ಸುಕುಮಾರಿ. ಆದರೆ ಪುರುಷರನ್ನೂ ಎದೆಗುಂದಿಸಬಲ್ಲ ತೇಜಸ್ವಿ. ವಯೋಮಾನದಿಂದ ಚಕ್ಕವಳು. ಆದರೆ ಆಕೆಯ ದೂರದೃಷ್ಟಿ, ದೃಢ ನಿರ್ಧಾರಗಳು ಪ್ರೌಢವೆನಿಸಿದ್ದವು.

ತಂದೆಯ ವಾತ್ಸಲ್ಯದ ನೆರಳಿನಲ್ಲಿ ಬೆಳೆದು ಪತಿಗೃಹ ಸೇರಿದಾಗ ಆದರ್ಶ ಪತ್ನಿಯಾದಳು. ಪತಿಯ ವಿಯೋಗದ ನಂತರ ವಿರಕ್ತಳಾಗಿದ್ದರೂ ತನ್ನ ಹೊಣೆಗಾರಿಕೆ ಮರೆಯಲಿಲ್ಲ. ಆಕೆ ಧರ್ಮನಿಷ್ಠ ಹಿಂದು ಸ್ತ್ರೀಯಾಗಿದ್ದರೂ ಅನ್ಯಮತ ಸಹಿಷ್ಣುವಾಗಿದ್ದರಿಂದಲೇ ಒಂದು ರಾಜ್ಯದ ಒಡತಿಯಾಗಿ, ಒಂದು ಮಹಾ ಸಮರದ ಸೇನಾನಿಯಾಗಿ ನಿಂತಾಗ ಹಿಂದುಗಳಂತೆಯೇ ಮುಸಲ್ಮಾನರೂ ಅವಳ ಅನುಚರರಾದರು.

೨೨ ವರ್ಷ ಏಳು ತಿಂಗಳ ಅವಧಿಯ ೧೯ ನವೆಂಬರ್ ೧೮೩೫-೧೮ ಜೂನ್‌೧೮೫೮. ಸಂಕ್ಷಿಪ್ತ ಜೀವನ ನಡೆಸಿ ಲಕ್ಷ್ಮೀಬಾಯಿ ಕಾರ್ಗತ್ತಲಿನಲ್ಲಿ ಕಣ್ಣು ಕೋರೈಸುವ ಮಿಂಚಿನಂತೆ ಬೆಳಗಿ ಕಣ್ಮರೆಯಾದಳು.

ರಾಣಿಯ ಜೊತೆ ಹಲವು ಸಲ ಕಾದಾಡಿ ಸೋಲಿನ ಮೇಲೆ ಸೋಲುಂಡರೂ, ಸನ್ನಿವೇಶಗಳ ಪಿತೂರಿಗೆ ಬಲಿಯಾದ ರಾಣಿಯ ಮೇಲೆ ಅಂತಿಮ ವಿಜಯ ಗಳಿಸಿದ ಬ್ರಿಟಿಷ್‌ದಳಪತಿ ಸರ್ ಹ್ಯೂ ರೋಸ್‌ಬರೆದ ಮಾತುಗಳೇ ಅವಳ ಹಿರಿಮೆಗೆ ಸಾಕ್ಷಿ:

“ದಂಗೆಕೋರರಲ್ಲಿ ಅತಿ ಧೀರ ಮತ್ತು ಅತಿ ಶ್ರೇಷ್ಠ ಸೇನಾಧಿಪತಿ ರಾಣಿಯೇ.”