ರಾಮನಗರ ಯಾವುದಕ್ಕೆ ಪ್ರಸಿದ್ಧಿ ಎಂದರೆ ಬಂಡೆಗಳು, ಬೆಟ್ಟಗಳು, ದೇವೇಗೌಡ, ಕುಮಾರಸ್ವಾಮಿ ಹೀಗೆಲ್ಲಾ ಉತ್ತರ ಬರಬಹುದು. ಆದರೆ ಇಲ್ಲಿ ಬ್ರಿಟಿಷ್ ಕಾಲದಿಂದಲೂ ಅಚಲವಾಗಿ ನಿಂತು ಇನ್ನೂ ಫಸಲು ನೀಡುತ್ತಿರುವ ಮಾವಿನತೋಪುಗಳ ಸುದ್ದಿಯನ್ನು ಯಾರಿಗೆ ಕೇಳಿದರೂ ಗೊತ್ತಿಲ್ಲ.`

ಬಾದಾಮಿ, ರಸಪೂರಿ, ನೀಲಂ, ತೋತಾಪುರಿ, ಮಿಡಿಮಾವು, ಗೊಲ್ಟೆಮಾವು ಹೀಗೆ ಕಸಿ ಮಾಡಿದ್ದು, ಒಲ್ಞೆಯಿಂದ ಎಬ್ಬಿಸಿದ್ದು ಮುಂತಾದ ಹತ್ತಾರು ತೋಪುಗಳು ನೂರು ವರ್ಷಗಳ ಹಿಂದಿನ ಕತೆಯನ್ನು ಹೇಳುತ್ತವೆ. ಕೇಳುವವರಿಲ್ಲ!

’ಶಾನುಭೋಗನ ಹಳ್ಳಿಯ ಮೂಡು ತಿಮ್ಮೇಗೌಡರ ತೋಪು, ಡಾ||ವೆಂಕಟೇಗೌಡ, ಡಾ|| ರಾಜು, ಗುಂಡಪ್ಪ ಮುಂತಾದವರ ತೋಪುಗಳಲ್ಲಿರುವ ತಾತಮಾವಿನಮರಗಳನ್ನು ನೋಡುವುದೇ ಅಚ್ಚರಿ, ಖುಷಿಯ ವಿಷಯ.

ಅಂದು ಅವೆಲ್ಲಾ ರಾಗಿ ಹೊಲಗಳು. ಬೇರೇನೋ ಮಾಡಬೇಕೆಂಬ ಉತ್ಸಾಹಿ ಕೃಷಿಕರಿಗೆ ಬ್ರಿಟಿಷ್‌ ಸರ್ಕಾರ ನೀಡಿದ ಕಸಿ ಗಿಡಗಳವು. ೪೫ ಅಡಿಗಳ ಅಂತರದಲ್ಲಿ ನೆಟ್ಟರು. ಬಾವಿಯಿಲ್ಲದ ತೋಪುಗಳು. ಆದರೆ ಕೆರೆ ಕಟ್ಟಿಸಿದ್ದು ಕೆಲವು ಕಡೆ ಇವೆ.

ಅದೇ ಶಾನುಭೋಗನ ಹಳ್ಳಿಯ ಮರವೊಂದು ಒಂದು ಲಾರಿ ಅಂದರೆ ಎಂಟು ಟನ್‌ ಹಣ್ಣು ಬಿಡ್ತಿತ್ತು. ಅದು ಫಸಲು ಹೊತ್ತಾಗ ನೋಡಲು ಗಾಡಿ ಕಟ್ಟಿಕೊಂಡು ಹೋಗ್ತಿದ್ದೆವು ಎನ್ನುವ ರೋಚಕ ದೃಷ್ಟಾಂತ ವಿಠಲೇನಳ್ಳಿ ರಾಮಕೃಷ್ಣಪ್ಪ ಅವರಿಂದ.

ಕುರುಬರಹಳ್ಳಿ ಕಲಗಚ್ಚಿನ ಹಣ್ಣಿನ ಮರ ಸಹ ೨೫ ಅಡಿ ಸುತ್ತಳತೆಯಿತ್ತು. ಅಷ್ಟೇ ಹಣ್ಣು ಬಿಡ್ತಿತ್ತು. ಆದರೆ ಹೊಲದ ತುಂಬಾ ಅದೇ ನಿಂತಿದೆ ಎಂದು ತಿರುಮಲೇಗೌಡರು ಕಡಿಸಿಬಿಟ್ರು ಅನ್ನೋ ದುಃಖದ ಕತೆಯೂ ಅವರಲ್ಲುಂಟು.

ಕುರುಬರಹಳ್ಳಿಯಲ್ಲಿ ಪುಟ್ಟ ಸಿದ್ದೇಗೌಡರ ತೋಟ ಸಹ ಅಷ್ಟೇ ಹಳೆಯದು. ತಾತ ಸಿದ್ದೇಗೌಡರು ನೆಟ್ಟ ಮರಗಳು. ಗುಡ್ಡ, ಬೆಟ್ಟ, ದಿಣ್ಣೆ, ಕಲ್ಲು ತುಂಬಿದ ೨೫ ಎಕರೆ ಹೊಲದಲ್ಲಿ ನೂರಾರು ತಾತಂದಿರಿದ್ದಾರೆ. ಒಂದೊಂದೂ ಒಂದೊಂದು ಗುಂಟೆ ಪ್ರದೇಶವನ್ನಾವರಿಸಿವೆ. ದೇವಮೂಲೆಯಲ್ಲಿ ಎರಡು ಎಕರೆ ಕೆರೆಯಿದೆ. ನಾಲ್ಕು ಬಾಂದಾರಗಳಿವೆ. ಇಡೀ ಜಮೀನನ್ನು ಸಮಪಾತಳಿ ವಿಧಾನದಲ್ಲಿ ಸರಿಪಡಿಸಿಕೊಂಡು ಮಾವಿನಮರಗಳನ್ನು ನೆಟ್ಟಿದ್ದಾರೆ. ಜಮೀನಿನ ತಗ್ಗಿನಲ್ಲೂ ಒಂದು ಕೆರೆಯಿದೆ.

೨೫ ಬಾದಾಮಿ, ರಸಪೂರಿ ಮರಗಳು ಕನಿಷ್ಠ ಒಂದು ಟನ್‌ ಮಾವಿನಹಣ್ಣು ಪ್ರತಿ ಸಾರಿ ಕೊಡುತ್ತವೆ. ಉಳಿದವುಗಳೆಲ್ಲಾ ೫-೬ ಕ್ವಿಂಟಾಲ್‌, ಕನಿಷ್ಠ ಒಂದು ಟನ್‌ ಮಾವಿನಹಣ್ಣು ಪ್ರತಿಸಾರಿ ಕೊಡುತ್ತದೆ. ಕನಿಷ್ಠ ಇಳುವರಿ ನೂರು ಟನ್‌, ಗರಿಷ್ಠ ಇನ್ನೂರು ?!

ಎಂತಹ ಬರದಲ್ಲೂ ಫಸಲಿಗೆ ಕೊರತೆಯಿಲ್ಲ. ಆದರೆಮೊಯ್ಲಿ, ರಾಮಕೃಷ್ಣಹೆಗಡೆ, ಎಸ್.ಎಂ. ಕೃಷ್ಣಹಾಗೂಕುಮಾರಸ್ವಾಮಿಯವರುಮುಖ್ಯಮಂತ್ರಿಗಳಾದವರ್ಷಮಾತ್ರಮಾವೆಲ್ಲಾಹಾಳಾಯ್ತುಎನ್ನುವಡೈರಿಲೆಕ್ಕಇದೆ.

ಪುಟ್ಟಸಿದ್ದೇಗೌಡರೇ ಸ್ವತಃ ಕೃಷಿ ಮಾಡುತ್ತಾರೆ. ಎರಡೂವರೆ ಕಿಲೋಮೀಟರ್‌ ದೂರವಿರುವ ಜಮೀನಿನಿಂದ ಊರದಾರಿಯಲ್ಲಿ ಈ ತೋಪಿಗೆ ನೀರು ತಂದಿದ್ದಾರೆ. ಗೊಬ್ಬರ, ಕೊಂಬೆ ಸವರುವುದು ಹೀಗೆ ತೋಪನ್ನು ಸುಸ್ಥಿತಿಯಲ್ಲಿಡಲು ಸದಾ ಶ್ರಮ. ದಿನಾಲೂ ರಾಮನಗರದಿಂದ ಎರಡೂ ಹೊತ್ತು ಬಂದು ತೋಪಿನಲ್ಲಿರುತ್ತಾರೆ.

ಇತ್ತೀಚೆಗೆ ಏಳೆಂಟು ರೀತಿಯ ರೋಗಗಳು ಮರಕ್ಕೆ ಬರುತ್ತಿವೆ. ಕೆಲವು ಸತ್ತುಹೋದವು. ಆ ಜಾಗದಲ್ಲಿ ರತ್ನಗಿರಿ, ಸೇಂದೂರ ಮುಂತಾದವುಗಳನ್ನು ನೆಟ್ಟಿದ್ದೇವೆಂದು ತೋರಿಸುತ್ತಾರೆ. ನೀರು ಹೊರಹೋಗದಂತೆ ಬದುಗಳ ನಿರ್ಮಾಣ ಸಹ ಮಾಡಿದ್ದಾರೆ. “ಒಳ್ಳೆ ತೋಟ ನೋಡಲು ಸಿಕ್ಕರೆ ತಿರುಪತಿಗೆ ಹೋಗುವುದನ್ನೂ ನಿಲ್ಲಿಸುತ್ತೇನೆ” ಎನ್ನುವ ಕೃಷಿ ಉತ್ಸಾಹ ಗೌಡರದು.

ಸಾವಿರಾರು ಕಾಯಿ, ಹಣ್ಣುಗಳನ್ನು ತುಂಬಿಕೊಂಡಿರುವ, ವಿದೇಶದಿಂದ ಬಂದ ಈ ಮರಗಳ ಸಾಮರ್ಥ್ಯ, ಹಣ್ಣುಗಳ ರುಚಿ, ಗಾತ್ರ ಹೀಗೆ ಏನೆಲ್ಲಾ ಮಾನದಂಡಗಳಲ್ಲಿ ಅತ್ಯಂತ ಮುಂದಿರುವ ಈ ತೋಪು ಹೆಚ್ಚು ಗಳಿಕೆಯನ್ನೂ ಮಾಡುತ್ತದೆ.