ಎದೆಯೊಲವಿನ ಮಂಗಳ ಸ್ಮೃತಿ
ಚಿರ ಬಂಧುರ ಭದ್ರಾಕೃತಿ
ಹಿರಿಯಾಸೆಯ ಪ್ರಿಯ ಸಂಸ್ಕೃತಿ
ಈ ಟಾಜದ ನಿಲುವು !
ಅಮಲ ಮಧುರ ಅಮೃತ ರೂಪ
ಪ್ರಿಯ ವಿರಹದ ಧವಳ ದೀಪ
ಮಮತಾಜಳ ಯಶೋಧೂಪ
ಇದು ಒಲವಿನ ಗೆಲುವು.

ಬೆಳುದಿಂಗಳ ಕನಸು ಇದು
ಮಲ್ಲಿಗೆಗಳ ಮನಸು ಇದು
ಲಲಿತರಾಗದಾಲಾಪದ
ಹಾಲ್ಗಲ್ಲಿನ ಗೀತ !
ದೇವಶಿಲ್ಪ ಮಾಟವೊಂದು
ವಿಶ್ರಾಂತಿಗೆ ಬಂದು ನಿಂದು
ನುಡಿಯುತಲಿದೆ ಆ ಲೋಕದ
ಸೌಂದರ್ಯದ ಮಾತ !

ಏನು ಧವಳ ! ಏನು ಚೆಲುವು !
ಮಮತಾಜಳ ಕುರಿತ ಒಲವು
ಷಹಜಹಾನನೆದೆಯ ಕೊರೆದು
ಬಿಡಿಸಿದ ಸಂತಾಪ !
ಮೇಲೊ ಹಾಲುಗಲ್ಲ ಚೆಲುವು
ಒಳಗೊ ಪ್ರಿಯನ ತಪ್ತ ನೋವು
ಕಂಬನಿಗಳ ಚೆಂಬೆಳಕೊಳು
ಬೆಳಗುವ ಮಣಿದೀಪ !