ಜಗತ್ತಿನ ಮಹಾಸಾಹಿತಿಗಳ ಸಾಲಿನಲ್ಲಿ ಕೌಂಟ್ ಲಿಯೋ ಟಾಲ್‌ಸ್ಟಾಯ್ ಹೆಸರು ದೊಡ್ಡದು. ಈತನ ಕಾದಂಬರಿಗಳಾದ ‘ವಾರ್ ಅಂಡ್ ಪೀಸ್’, ‘ರಿಸರಕ್ಷನ್’, ‘ಅನಾಕರೀನಾ’ ಮೊದಲಾದವು ಜಗತ್ತಿನ ಎಲ್ಲ ಭಾಷೆಗಳಿಗೂ ಅನುವಾದಗೊಂಡಿವೆ. ಶ್ರೀಮಂತನಾಗಿದ್ದರೂ, ಬಡಜನರ ಬಗ್ಗೆ ಮರುಗಿ, ಅವರಂತೆ ತಾನೂ ಸರಳ ಜೀವನವನ್ನನುಸರಿಸಿದ, ಸಾಂಪ್ರದಾಯಿಕವಾದ ಧಾರ್ಮಿಕ ಸಂಸ್ಥೆಗಳ ವಿರುದ್ಧ ಬಂಡೆದ್ದ,  ಈತನ ಜೀವನ ಇನ್ನೂ ದೊಡ್ಡದು. ಸ್ವಾವಲಂಬನೆ, ಕಾಯಕ ಹಾಗೂ ಸರಳತೆಯನ್ನು ಪ್ರಾಯೋಗಿಕವಾಗಿ ಬದುಕಿಗಿಳಿಸಿದ ಈತನ ತತ್ವ ಮಹಾತ್ಮಾಗಾಂಧಿಯವರಿಗೆ ಸ್ಫೂರ್ತಿಯ ಸೆಲೆ. ಭಾರತೀಯರು ಈತನನ್ನು ಗೌರವದಿಂದ ‘ಮಹರ್ಷಿ ಟಾಲ್‌ಸ್ಟಾಯ್’ ಎನ್ನುತ್ತಾರೆ. ಆತ ಇದ್ದದ್ದೂ ಹಾಗೆಯೆ. ನಾನು ರಷ್ಯಾಕ್ಕೆ ಹೊರಟಾಗ ಈ ಮಹಾವ್ಯಕ್ತಿಯ ಜನ್ಮಸ್ಥಳ ಯಾಸ್ನಾಯಾ ಪೋಲಾಯ್ನಕ್ಕೆ ಹೇಗಾದರೂ ಮಾಡಿ ಹೋಗಿ ಬರಬೇಕೆಂಬ ಆಸೆಯನ್ನು ಬೆಳೆಯಿಸಿಕೊಂಡಿದ್ದೆ. ಮಾಸ್ಕೋ ತಲುಪಿದ ಮೇಲೆ ಪ್ರೊಫೆಸರ್ ಆಕ್ಸಿನೋವ್ (A.T. Axenov) ಅವರಿಗೆ ನನ್ನ ಅಪೇಕ್ಷೆಯನ್ನು ತಿಳಿಸಿದಾಗ ಅವರು “Oh! that is a place of pilgrimage to every Indian” ಎಂದಿದ್ದರು. ಆ ಮಾತು ನಿಜ.

ಈ ದಿನ ಯಾಸ್ನಾಯಾ ಪೋಲಾಯ್ನಕ್ಕೆ ಹೋಗುವ ಸಡಗರದಿಂದ ಬೇಗ ಎದ್ದೆ. ನಿನ್ನೆಯ ದಿನದ ಹಾಗೆ ಮಳೆ ಕವಿದುಕೊಂಡಿದ್ದರೆ, ಮಾಸ್ಕೋದಿಂದ ೨೩೦ ಕಿಲೋಮೀಟರ್ ದೂರವಿರುವ ಆ ಊರಿಗೆ ಹೇಗಪ್ಪ ಹೋಗಿ ಬರುವುದು ಎಂಬ ಆತಂಕ, ಬೆಳಗಿನ ಆಕಾಶವನ್ನು ನೋಡಿದೊಡನೆ ಮಾಯವಾಯಿತು. ನಿರ್ಮಲವಾಗಿತ್ತು ಆಕಾಶ; ಹಿಂದಿನ ದಿನದ ಮಳೆ ತೊಳೆದ ನಗರದ ಮೇಲೆ ಲಕಲಕಿಸುವ ಎಳೆ ಬಿಸಿಲು. ಯಾವಾಗ ೯.೩೦ ಆದೀತೋ ಎಂದು ಕಾತರ. ಬೇಗ ಬೇಗ ಉಪಹಾರ ಮುಗಿಸಿ ನನ್ನ  ದ್ವಿಭಾಷಿಗೆ ಹಾಗೂ ಕಾರಿಗೆ ಕಾದು ಕುಳಿತೆ. ಜತೆಗೆ ನನ್ನ ಪಾಸ್‌ಪೋರ್ಟನ್ನು ತೆಗೆದಿರಿಸಿಕೊಂಡಿದ್ದೆ.

ಇಲ್ಲಿ ಒಂದೂರಿನಿಂದ ಇನ್ನೊಂದು ಊರಿಗೆ ಹೋಗಬೇಕಾದರೂ ವೀಸಾ, ನನ್ನಂಥ  ವಿದೇಶೀಯನಿಗೆ ಅಗತ್ಯ. ದಾರಿಯಲ್ಲಿ ಯಾರಾದರೂ ಕಾವಲಿನವರು ತನಿಖೆ ಮಾಡಿದರೆ ತೋರಿಸಬೇಕು. ಮಾಸ್ಕೋದಿಂದ ನಲವತ್ತು ಕಿಲೋಮೀಟರ್ ಆಚೆ ಹೋಗಬೇಕಾದರೆ ಸರ್ಕಾರದ ಪರವಾನಗಿ ಬೇಕು. ಇಷ್ಟೊಂದು ನಿರ್ಬಂಧದ ಅರ್ಥವೇನೋ ನನಗೆ ತಿಳಿಯದು.

ಗಡಿಯಾರ ಒಂಬತ್ತೂವರೆಯನ್ನು ದಾಟಿ ಹತ್ತನ್ನು ಸಮೀಪಿಸಿತ್ತು. ಒಂಬತ್ತೂವರೆಗೆ ಬರುತ್ತೇನೆಂದು ಹೇಳಿದ ದ್ವಿಭಾಷಿ ಪತ್ತೆಯಿಲ್ಲ. ನಿಮಿಷಗಳು ಭಾರವಾಗತೊಡಗಿದವು. ಕಡೆಗೆ ಹತ್ತು ಗಂಟೆಗೆ ಬಾಗಿಲ ಮೇಲೆ ಬಡಿದ ಸದ್ದಿನ ಹಿಂದೆ, ವೊಲೋಜ ಮುಖ ತೋರಿಸಿದ. ಬೇಗ ಬೇಗ ಇಬ್ಬರೂ ಇಳಿದು, ಹೋಟೆಲ ಹೊರಗೆ ಹೋಗಿ ನೋಡುತ್ತೇವೆ, ಕಾರೂ ಇಲ್ಲ ಗೀರೂ ಇಲ್ಲ. ಏನೇನೂ ಆಗಿರದ ಹಾಗೆ, ನಿರ್ಭಾವದಲ್ಲಿ ವೊಲೋಜ ಹೇಳಿದ: ‘ಬಹುಶಃ ಕಾರು ಬಂದು ನಮಗಾಗಿ ಕಾದು ಹೊರಟುಹೋಗಿರಬೇಕು.’ ನನಗೆ ಅವನ ಮಾತು ತುಂಬ ವಿಚಿತ್ರವೆನಿಸಿತು. ನನಗೆ ಕೊಂಚ  ಅಸಮಾಧಾನವಾಯಿತು. ‘ಹಾಗಾದರೆ  ನಿಮ್ಮ  ದೇಶದಲ್ಲಿ  ಗೊತ್ತು ಮಾಡಿದ ಕಾರ್ಯಕ್ರಮಗಳನ್ನು ಕಾರಿನ ಡ್ರೈವರನೇ ರದ್ದು ಮಾಡುತ್ತಾನೇನು; ಹೀಗಿದ್ದರೆ ಇದು ತುಂಬ ತಮಾಷೆಯಾಗಿದೆ. ನಮ್ಮಲ್ಲಿ ವಿದೇಶದ ಅತಿಥಿಗಳನ್ನು ನಾವು ಹೀಗೆ ನಡೆಸಿಕೊಳ್ಳುವುದಿಲ್ಲ’ – ಎಂದೆ.

ನಾನಂದದ್ದು ಅವನ ತಲೆಗೆ ಹೋದಂತೆ ತೋರಲಿಲ್ಲ. ಮುಂದೇನು ಮಾಡಲೂ ತೋಚದೆ ನೆಟ್ಟಗೆ ಮೇಲೇರಿ ಕೋಣೆಗೆ ಬಂದು ಕೂತೆವು. ವೊಲೋಜ ಫೋನ್ ಮೂಲಕ ಸಂಬಂಧಪಟ್ಟವರೊಂದಿಗೆ ಮಾತನಾಡಿ, ನನಗೆ ಹೇಳಿದ : ‘ಕಾರು ರಿಪೇರಿಯಲ್ಲಿದೆ; ಸರಿಹೋದರೆ ಬಹುಶಃ ಇನ್ನರ್ಧ ಗಂಟೆಯಲ್ಲಿ ಬಂದೀತು.’ ನನಗೆ ಒಳಗೇ ಕೋಪ – ಅಸಮಾಧಾನ. ಟಾಲ್‌ಸ್ಟಾಯ್ ಅವರ ಊರನ್ನು ಇಷ್ಟು ದೂರ ಬಂದು ನೋಡದೆ ಹೋಗುವಂತಾಯಿತಲ್ಲ ಎಂಬ ಕಾರಣ ಒಂದು ; ಈ ಜನ ಕಾರ‍್ಯಕ್ರಮವೊಂದನ್ನು  ಸಿದ್ಧಪಡಿಸಿ ಎಷ್ಟು  ಸಲೀಸಾಗಿ, ನಿರ್ಭಾವವಾಗಿ ಮುರಿಯುತ್ತಾರಲ್ಲ ಎಂಬುದು ಎರಡನೆಯದು. ಆದದ್ದಾಗಲಿ ಎಂದು ತೆಪ್ಪಗೆ ಬಿಸಿಲೇರುವ ಬಾನನ್ನು ನಿಟ್ಟಿಸುತ್ತ ಕೂತೆ. ಮುಂದೆ ಹದಿನೈದು ನಿಮಿಷದಲ್ಲಿ ಫೋನ್ ಬಂತು, ‘ಹನ್ನೊಂದು ಗಂಟೆಗೆ ಕಾರು ಬರುತ್ತದೆ, ಸಿದ್ಧವಾಗಿರಿ’ ಎಂದು.

ಹನ್ನೊಂದರ ವೇಳೆಗೆ ಮತ್ತೆ ಕೆಳಗೆ ಬಂದೆವು. ನನ್ನ ಅದೃಷ್ಟ. ಕಾರು ಬಂದಿತ್ತು. ಹನ್ನೊಂದರ ಬಿಸಿಲಲ್ಲಿ ಕಾರು ಮಾಸ್ಕೋ ನಗರದೊಳಗೆ ಹಾದು ಪೂರ್ವಾಭಿಮುಖವಾಗಿ ಹೊರಟಿತು. ನಗರ ವಲಯವನ್ನು ದಾಟಲು ಅರ್ಧಗಂಟೆ ಕಳೆಯಿತು. ಅನಂತರ ಷುರುವಾಯಿತು ರಷ್ಯಾದೇಶದ ವಿಸ್ತಾರವಾದ ಏರಿಳಿವುಗಳ ಬಯಲು. ದಿಗಂತದವರೆಗೂ ಹರಹಿದ, ಒಂದಾದರೂ ಬೆಟ್ಟಗುಡ್ಡವಿಲ್ಲದ ಸಮತಲ ಭೂಮಿ; ಅದರ ತುಂಬ ಸಮೃದ್ಧವಾದ ಹಸಿರು. ರಸ್ತೆಯ ಎರಡೂ ಕಡೆ ಅಲ್ಲಲ್ಲಿ ಪೈನ್ ಮರಗಳ ಒತ್ತು. ಅವುಗಳ ನಡುವೆ ನಿಡು ದೀರ್ಘವಾಗಿ ಸುರುಳಿ ಬಿಚ್ಚಿ ಹಾಸಿದ ರಿಬ್ಬನ್ ರಸ್ತೆ; ಅಸಾಧ್ಯವಾದ ವಾಹನ ಸಂಚಾರ. ಬಹುಮಟ್ಟಿಗೆ ಲಾರಿ – ಟ್ರಕ್ಕುಗಳೇ. ಮಾಸ್ಕೋ ನಗರಕ್ಕೆ ಸಾಮಾನು ಸಾಗಿಸುವ, ದನಗಳನ್ನು, ಹಂದಿಗಳನ್ನು ಸಾಗಿಸುವ ವಾಹನಗಳು. ಮುಂದೆ ಹೋದಂತೆ ದಾರಿಯಿಕ್ಕೆಲದಲ್ಲಿ, ಕೋಟೆ ಕಟ್ಟಿದ ಹಸಿರು ಕಾಡುಗಳು. ಕಾಡಿನ ಮರಗಳು ನಮ್ಮ ಮಲೆನಾಡಿನ ಕಾಡಿನ ಮರಗಳಂತೆ ದಪ್ಪ ಹಾಗೂ ಎತ್ತರದವುಗಳಲ್ಲ.  ಮಧ್ಯಮ ಗಾತ್ರದ ಮರಗಳು. ಗರಿಗಳೆಲ್ಲಾ ಆಗಲೇ ಹಳದಿಯಾಗಿ, ಬಿಸಿಲಲ್ಲಿ ಚಿನ್ನದ ಎಲೆಗಳಂತೆ ತೋರುತ್ತಿದ್ದವು. ಅಲ್ಲಿ ಇಲ್ಲಿ ಹಳ್ಳಿಗಳು; ಮಿರುಗುವ ಕೆರೆಗಳು; ಬಾತು ಕೋಳಿಗಳು ಈಸಾಡುವ ಹೊಂಡಗಳು; ಹಚ್ಚ ಹಸಿರು ಹೊಲಗಳಲ್ಲಿ ಮೇಯುವ ಹಸು-ಕುರಿ ಹಂದಿಗಳು. ಮತ್ತೆ ಕಾಡು; ಮತ್ತೆ ಬಯಲು; ಮತ್ತೆ ಹಳ್ಳಿ. ಹಳ್ಳಿಯ ಮನೆಗಳು; ಮನೆಯ ಸುತ್ತ ಮರದ ಬೇಲಿ; ಗಾಜಿನ ಕಿಟಕಿಗಳು; ಹಿತ್ತಲಿನಲ್ಲಿ ತಂತಿಯ  ಮೇಲೆ ಒಗೆದು ಒಣಗಲು ಹಾಕಿದ ಸಾಲಾದ  ಬಟ್ಟೆಗಳು.  ಈ ಹಳ್ಳಿಗಳಂತೂ ಥೇಟ್ ನಮ್ಮ ಹಳ್ಳಿಗಳಂತೆಯೇ – ಮನೆಗಳ ಆಕಾರವೊಂದನ್ನು ಹೊರತು. ಆದರೆ ಹಳ್ಳಿಗಳಲ್ಲಿ ಅಂಥ ಜನಸಂಚಾರವಿಲ್ಲ; ದಾರಿಯ ಬರಿಯ ಬದಿಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು. ಊರಜನ ಎಲ್ಲಿ ? ಕಡೇ ಪಕ್ಷ ಮಕ್ಕಳೆಲ್ಲಿ ? ಬಹುಶಃ ಊರ ಜನ ಕೃಷಿ ಕ್ಷೇತ್ರಗಳ ಕೆಲಸಕ್ಕೆ, ಮಕ್ಕಳು ಶಾಲೆಗೆ ಹೋಗಿದ್ದಾರು. ಈ ಹಳ್ಳಿಗಳನ್ನು, ಮಾಸ್ಕೋ  ನಗರಕ್ಕೆ  ಕೇವಲ ಮೂವತ್ತು ನಲವತ್ತು ಮೈಲಿಗಳ ದೂರದ ಹಳ್ಳಿಗಳನ್ನು ನೋಡಿದಾಗ, ನಾನು ಇಷ್ಟು ದಿನ ಕಂಡ ಮಾಸ್ಕೋ ನಗರಕ್ಕೂ ಈ ಹಳ್ಳಿಗಳಿಗೂ ಬಹಳ ವ್ಯತ್ಯಾಸ ಕಂಡಿತು. ಅದೇ ಕೊಳಕು ರಸ್ತೆಗಳು; ಒಂದರ ಒತ್ತಿಗೊಂದು ನಿಂತ ಮರದ ಪುಟ್ಟ ಮನೆಗಳು. ಈ ಜನಕ್ಕೆ ಯಾವ ಅನುಕೂಲಗಳಿವೆಯೋ, ಜನ ಹೇಗೆ ಬದುಕುತ್ತಾರೋ, ಕಾರಲ್ಲಿ ಕೂತು ವೇಗವಾಗಿ ಧಾವಿಸುವ ನನಗೆ ಹೇಗೆ ತಿಳಿದೀತು ? ಹಳ್ಳಿಯಿಂದ ಹಳ್ಳಿಗೆ ಧಾವಿಸುತ್ತಾ ಮಧ್ಯಾಹ್ನ ಒಂದೂವರೆ ಗಂಟೆಗೆ ತೂಲ ಎಂಬ ನಗರಕ್ಕೆ ಮುಟ್ಟಿದೆವು. ಇದು ಅದೇ ಹೆಸರಿನ ಜಿಲ್ಲೆಯ ಮುಖ್ಯ ಪಟ್ಟಣ. ರಸ್ತೆಯ ತುಂಬ ಬಸ್ಸು ಟ್ರಾಂಗಳ ಗಲಭೆ. ಹಸಿದ ಹೊಟ್ಟೆಗೆ ಏನಾದರೂ ತುಂಬಲೆಂದು ಹುಡುಕಿ ಹುಡುಕಿ, ಒಂದು ರೆಸ್ಟೋರಾಂಟಿನ ಮುಂದೆ ನಿಂತದ್ದಾಯಿತು.

ಒಳಗೆ ಹೋಗಿ ಒಂದು ಸ್ಥಳವನ್ನು ಹುಡುಕಿ ಕೂತೆವು. ಯಥಾಪ್ರಕಾರ ಬಡಿಸುವಾಕೆ  ಬರಲಿಲ್ಲ. ಕೂತು ಅರ್ಧ ಗಂಟೆಯಾದರೂ ಹೇಳುವವರಿಲ್ಲ, ಕೇಳುವವರಿಲ್ಲ. ಯಾವ ಊರಿನ ರೆಸ್ಟೋರಾಂಟಾದರೇನು. ತಡ ಮಾಡಿ ಬಡಿಸುವುದರಲ್ಲಿ ಈ ಜನ ಕಾಯ್ದುಕೊಂಡಿರುವ ಸಮಾನತೆ ಕೂಡಾ, ಇವರ ಸೋಶಿಯಲಿಸಂನ ಒಂದು ಭಾಗವೊ ಏನೋ ! ಕಡೆಗೆ ಡ್ರೈವರ್ ಎದ್ದು ಹೋಗಿ ಮುಖ್ಯಸ್ಥೆಗೆ ದೂರು ಕೊಟ್ಟ ಮೇಲೆ ನಮ್ಮ  ಟೇಬಲ್ಲಿನ ಬಳಿಗೆ ಒಬ್ಬ ಪರಿಚಾರಿಕೆ ದಯಮಾಡಿಸಿದಳು. ನನಗೆ ಹಾಗೂ ಉಳಿದಿಬ್ಬರಿಗೆ ಏನೇನು ಬೇಕು ಎಂಬುದನ್ನು ವರದಿ ಒಪ್ಪಿಸಿದ್ದಾಯಿತು. ಈ ನಡುವೆ ನಾನು ವೊಲೋಜ ಬಾತ್ ರೂಂ ಹುಡುಕಿಕೊಂಡು ಹೊರಟೆವು. ಅದೇ ಹೋಟೆಲೊಳಗೆ ಒಂದು ಮೂಲೆಯ ಕಡೆ ಕಾವಲುಗಾರ ಕೈ ತೋರಿಸಿದ. ಆ ಮೂಲೆಗೆ ಹೋದದ್ದೆ ತಡ, ಬಾತ್ ರೂಂ ಎಲ್ಲಿದೆ  ಎಂಬುದು ಸ್ವಯಂ ವೇದ್ಯವಾಯಿತು. ಒಳಗೆ ಹೋದರೆ ಗಬ್ಬುನಾತ – ನಮ್ಮಲ್ಲಿನಂತೆಯೇ. ಅಂತೂ ಮೂಗು ಮುಚ್ಚಿಕೊಂಡು ಉಚ್ಚೆಹೊಯ್ದು, ಸಿಂಕ್ ಅನ್ನು ಹುಡುಕಿಕೊಂಡು ಇನ್ನೊಂದು ಮೂಲೆಗೆ ಹೋದೆವು. ಸರ್ಕಾರದ ವಿ.ಐ.ಪಿ. ಗಳಾಗಿ ದೊಡ್ಡ ದೊಡ್ಡ ನಗರಗಳ ಹೋಟೆಲುಗಳಲ್ಲಿ ಉಳಿದುಕೊಂಡು, ತಿಂದದ್ದು ಅಲುಗದಂಥ ದೊಡ್ಡ ಕಾರಿನಲ್ಲಿ ಓಡಾಡುವ ಜನಕ್ಕೆ ದೊರೆಯುವ ಅನುಭವವೇ ಬೇರೆ; ಕಾರಲ್ಲಿ,  ಬಸ್ಸಲ್ಲಿ, ಮೆಟ್ರೋದಲ್ಲಿ, ಟಾಕ್ಸಿಗಳಲ್ಲಿ  ಮತ್ತೆ  ಕಾಲಲ್ಲಿ ನಡೆದು ನೋಡಿದ ಜನಕ್ಕೆ ದೊರೆಯುವ ಅನುಭವಗಳೇ ಬೇರೆ.

ಊಟ ಮುಗಿಯುವಾಗ ಎರಡೂವರೆ ಗಂಟೆ. ತೂಲಾ ನಗರದಿಂದ ಯಾಸ್ನಾಯಾ ಪೋಲಾಯ್ನ ಮೂವತ್ತು ಕಿಲೋಮೀಟರ್. ಕಾರು ತೂಲಾ ನಗರದೊಳಗೆ ಹಾದು ಹೋದಾಗ ನಮ್ಮ ದೇಶದ ನಗರಗಳಂತೆಯೇ ತೋರಿತು. ಈ ನಗರ ರಷ್ಯದ ಒಂದು ಸೈನ್ಯದ ಕೇಂದ್ರ. ಊರಾಚೆ ಉಕ್ಕಿನ ಕಾರ್ಖಾನೆ ಇದೆ.

ಕಾಲು ಗಂಟೆಯೊಳಗೆ ಪೂರ್ವಾಭಿಮುಖವಾದ ನೇರವಾದ ರಸ್ತೆಯಿಂದ ಬಲಕ್ಕೆ ದಕ್ಷಿಣ ದಿಕ್ಕಿಗೆ ಹೊರಳಿದ ಕೂಡಲೆ ನಮಗೆ ಮಲೆನಾಡನ್ನು ಹೊಕ್ಕ ಅನುಭವವಾಯಿತು. ಮಲೆನಾಡಿನಲ್ಲಿಯಂಥ ಎತ್ತರವಾದ ಬೆಟ್ಟಗಳು ಕಾಣದಿದ್ದರೂ, ಅಲೆಯಲೆಯಾಗಿ ದಾರಿಯಿಕ್ಕೆಲದಲ್ಲಿ ಏರಿಳಿವ  ದಟ್ಟವಾದ ಹಸಿರುಕಾಡು ಮಲೆನಾಡಿನ ನೆನಪು  ತಂದಿತು. ಯಾಸ್ನಾಯಾ ಪೋಲಾಯ್ನಾ ಸಮೀಪಿಸಿದಂತೆ ಈ ಹಸುರು ಇನ್ನೂ ದಟ್ಟವಾಗತೊಡಗಿತ್ತು. ಈ ಹಸುರಿನ ನಡುವೆ ಟಾಲ್‌ಸ್ಟಾಯ್ ಅವರ ಮನೆ ಇರುವ ಎಸ್ಟೇಟು. ಎಸ್ಟೇಟಿನ ಹೊರಗೆ ನಮ್ಮ ಕಾರನ್ನು ನಿಲ್ಲಿಸಿ, ಟಿಕೇಟನ್ನು  ತೆಗೆದುಕೊಂಡು, ಮಾರ್ಗದರ್ಶಿನಿಯ ಜತೆಯಲ್ಲಿ ಯಾಸ್ನಾಯಾ ಪೋಲಾಯ್ನಾ ಗ್ರಾಮದ ಬದಿಯ ಎಸ್ಟೇಟನ್ನು ಹೊಕ್ಕೆವು.

ಎಸ್ಟೇಟಿನ ಬಾಗಿಲನ್ನು ದಾಟಿದೊಡನೆಯೆ ಮಿರು ಮಿರುಗುವ ವಿಸ್ತಾರವಾದ ಕೆರೆ  ಇದೆ.  ಟಾಲ್‌ಸ್ಟಾಯ್ ಇಲ್ಲಿ  ಬೇಸಗೆಯಲ್ಲಿ ಈಜಾಡುತ್ತಿದ್ದನಂತೆ;  ಚಳಿಗಾಲದಲ್ಲಿ ಗಟ್ಟಿಗೊಂಡ ನೀರಿನ ಮೇಲೆ ಸ್ಕೇಟಿಂಗ್ ಆಡುತ್ತಿದ್ದನಂತೆ. ಕೆರೆಯ ಪಕ್ಕದಲ್ಲಿ ದಟ್ಟವಾದ  ಮರಗಳು  ಕವಾಯತಿಗೆ ನಿಂತಹಾಗಿವೆ. ಹೆಮ್ಮರಗಳ ಓಣಿಯಲ್ಲಿ ಇಳಿ ಹಗಲ ಬಿಸಿಲ ರಂಗೋಲಿಯಲ್ಲಿ ಹಾದುಹೋದನಂತರ ಕಾಣಿಸುತ್ತದೆ. ಟಾಲ್‌ಸ್ಟಾಯ್‌ರವರ ಅಜ್ಜನಕಾಲದ ಮನೆ. ಅದರ ಎದುರಿಗೆ ಕುದುರೆಯ ಲಾಯ. ಈಗಲೂ ಅಲ್ಲಿ ಕುದುರೆಗಳನ್ನು ಕಟ್ಟುತ್ತಾರೆ. ಲಾಯದ ಬದಿಗೆ ಒಂದು ಕೋಣೆಯಲ್ಲಿ ಟಾಲ್‌ಸ್ಟಾಯ್ ಬಳಸುತ್ತಿದ್ದ ಕುದುರೆ ಗಾಡಿಯೊಂದಿದೆ. ಟಾಲ್‌ಸ್ಟಾಯ್‌ಗೆ ಕುದುರೆ ಸವಾರಿ ಎಂದರೆ ತುಂಬ ಇಷ್ಟವಂತೆ. ಕುದುರೆಯ ಮೇಲೆ ಕೂತು ಸುತ್ತಣ ಎಷ್ಟೋ ದಟ್ಟವಾದ  ಕಾಡುಗಳಲ್ಲಿಯೂ ಸುತ್ತುವ  ಬೇಟೆಗಾರನಾಗಿದ್ದನಂತೆ; ಎಷ್ಟೋ ವೇಳೆ ಆತ  ಕಾಡಿನಲ್ಲಿ  ದಿನಗಟ್ಟಲೆ ದಾರಿ ತಪ್ಪಿ ಅಲೆದದ್ದುಂಟು. ಮನೆ ಮಂದಿ ಗಾಬರಿಗೊಂಡು,  ಆಕ್ಷೇಪಿಸಿದರೂ  ಆತನಿಗೆ ಗಮನವಿರುತ್ತಿರಲಿಲ್ಲ. ಈತ ದಾರಿಯಿಲ್ಲದ ಕಗ್ಗಾಡುಗಳಲ್ಲಿ ದಾರಿಯನ್ನು ಕಂಡುಕೊಂಡವನು. ಕ್ರಮೇಣ ಕುದುರೆ ಸವಾರಿಯನ್ನೂ ನಿಲ್ಲಿಸಿದ. ಬರಿಗಾಲಿನಲ್ಲಿ ನಡೆಯುವ ಸಾಮಾನ್ಯ ರೈತರ ಎದುರಿಗೆ, ತಾನು ಮಾತ್ರ ಕುದುರೆ ಏರುವುದು ಅವಮಾನಕರ ಎಂದು ಭಾವಿಸಿದ. ಅಷ್ಟೊಂದು ಕನಿಕರ ಬಡವರ ಮೇಲೆ.

ಮಾರ್ಗದರ್ಶಿನಿ ಇಷ್ಟನ್ನು ಹೇಳುವ ವೇಳೆಗೆ ಟಾಲ್‌ಸ್ಟಾಯ್ ವಾಸವಾಗಿರುತ್ತಿದ್ದ ಮನೆಯ ಹತ್ತಿರ ಬಂದೆವು. ಮನೆಗೆ ಸಮೀಪದ ದಾರಿಯಲ್ಲಿ ಒಂದು ಮರ; ಮರದ ಕೆಳಗೆ ಒಂದು ಕಲ್ಲಿನ ಹಲಗೆ. ‘ಟಾಲ್‌ಸ್ಟಾಯ್ ಹುಟ್ಟಿದ್ದು ಇಲ್ಲಿ’ ಎಂದು ಬರೆದಿದೆ. ಟಾಲ್‌ಸ್ಟಾಯ್ ಹುಟ್ಟುವ ಕಾಲಕ್ಕೆ  ಅಲ್ಲಿ ಅವರ ಪೂರ್ವಿಕರ ಮನೆ ಇತ್ತು; ಟಾಲ್‌ಸ್ಟಾಯ್ ಬೆಳೆದು ದೊಡ್ಡವನಾಗುವ ವೇಳೆಗೆ ಆ ಮನೆ ಬಿದ್ದುಹೋಗಿ ಅಲ್ಲೊಂದು ಮರ ಹುಟ್ಟಿತ್ತು.  ಟಾಲ್‌ಸ್ಟಾಯ್ ದೊಡ್ಡವರಾದ ಮೇಲೆ, ತಮ್ಮ ಮನೆಗೆಬಂದ ಅತಿಥಿಗಳನ್ನು ಎಸ್ಟೇಟಿನಲ್ಲಿ ಅಡ್ಡಾಡಿಸುವಾಗ, ಆ ಮರದ ಎತ್ತರವಾದ ಕೊಂಬೆಯನ್ನು ತೋರಿಸಿ ‘ನಾನು ಹುಟ್ಟಿದ್ದ ಅಲ್ಲಿ’ ಎನ್ನುತ್ತಿದ್ದರಂತೆ. ಟಾಲ್‌ಸ್ಟಾಯ್ ಮನೆಯ ಅಂಗಳದಲ್ಲೆ ಇನ್ನೊಂದು ಮರ ಇದೆ. ಅದಕ್ಕೆ ‘ಬಡವರ ಮರ’ ಎಂದೇ ಹೆಸರಾಗಿದೆ. ಯಾಸ್ನಾಯ ಪೋಲಾಯ್ನಾ ಹಳ್ಳಿಯ ಬಡ ರೈತರು ದಿನವೂ ಟಾಲ್‌ಸ್ಟಾಯ್ ಅವರನ್ನು ಕಾಣಲು ಬಂದು ಆ ಮರದ ಕೆಳಗೆ ಗುಂಪು ಗೂಡುತ್ತಿದ್ದರಂತೆ.

ಈ ಮನೆಯ ಒಳಗೆ ಹೋಗುವ ಮುನ್ನ, ನಮ್ಮ ಬೂಡ್ಸುಗಳ ಮೇಲೆ ಅಲ್ಲಿರಿಸಲಾದ ಬಟ್ಟೆಯ ಬೂಡ್ಸನ್ನು ಕಟ್ಟಿಕೊಳ್ಳಬೇಕು. ಹಳೆಯ ಕಾಲದ ಮನೆ. ಟಾಲ್‌ಸ್ಟಾಯ್ ಕಾಲದಲ್ಲಿ ಹೇಗಿತ್ತೋ ಹಾಗೆಯೆ ಉಳಿಸಲಾಗಿದೆ. ವಿದ್ಯುದ್ದೀಪಗಳನ್ನು ಹಾಕಿ ಆವರಣ ಭಂಗ ಮಾಡಿಲ್ಲ. ಟಾಲ್‌ಸ್ಟಾಯ್ ಅವರು ‘ವಾರ್ ಅಂಡ್ ಪೀಸ್’ ಬರೆದ, ‘ಅನಾ ಕರೀನಾ’ ಬರೆದ ಕೊಠಡಿಯನ್ನು ನೋಡಿದೆವು. ಅವರು ತಮ್ಮ ಕಾಲದ ಸಾಹಿತಿಗಳ ಜೊತೆಯಲ್ಲಿ ಕೂತು ಚರ್ಚಿಸುತ್ತಿದ್ದ ಮೂಲೆಯನ್ನು ಕಂಡೆವು. ಆತನ ಹೆಂಡತಿ ಮಕ್ಕಳ ಭಾವಚಿತ್ರಗಳು; ಆತನ ಮನೆಯ ಅಂದಿನ ಸಮಸ್ತ ವಸ್ತುಗಳು; ಮಂಚ, ಹಾಸಿಗೆ, ಕುರ್ಚಿ, ಟೇಬಲ್ಲು, ಪುಸ್ತಕ ಭಂಡಾರ, ಗಾಲಿ ಕುರ್ಚಿ, ಎಲ್ಲವನ್ನೂ ನೋಡಿದೆವು. ಕಿಟಕಿಯಾಚೆಗೆ ಹಸಿರು ಮರಗಳ ಮೇಲೆ ಬಿಸಿಲು ಯಾವುದೋ ನೆನಪನ್ನು ಬರೆಯುತ್ತಿತ್ತು.

ಮನೆಯಿಂದ  ಎಡಗಡೆಗಿರುವ ಮರಗಳ ತೋಪಿನಲ್ಲಿ ನಡೆದೆವು. ತನ್ನ ತಾಯಿಯ ನೆನಪಿಗಾಗಿ ಟಾಲ್‌ಸ್ಟಾಯ್ ನೆಟ್ಟು ಬೆಳೆಯಿಸಿದ ಸೇಬಿನ ಮರಗಳಿವೆ ಅಲ್ಲಲ್ಲಿ. ಎತ್ತರವಾದ ಮರಗಳ ಓಣಿಗಳು ಎಂಟೂ ಕಡೆಯಿಂದ ಬಂದು ತೋಟದ ನಡುವೆ ಸೇರುತ್ತವೆ. ಈ ದಟ್ಟ ಮರಗಳ ನಡುವೆ ಟಾಲ್‌ಸ್ಟಾಯ್ ದಿನವೂ ಬೆಳಿಗ್ಗೆ ಸಂಚಾರ ಹೋಗುತ್ತಿದ್ದರಂತೆ. ಹಾಗೆ ಸಂಚಾರ ಮಾಡುವಾಗ ಅವರ ಮನದಲ್ಲಿ ಯಾವ ಯಾವ ಕಾದಂಬರಿಯ ಯಾವ ಯಾವ ಪುಟಗಳು ಮೂಡುತ್ತಿದ್ದವೊ; ತಿರುಗಾಟ, ಮುಗಿಸಿ ಬಂದು ಕೃತಿ ರಚನೆಗೆ ತೊಡಗುತ್ತಿದ್ದರಂತೆ.

ಈ ವಿಸ್ತಾರವಾದ ಹೆಮ್ಮರಗಳ ನಡುವೆ ಟಾಲ್‌ಸ್ಟಾಯ್ ಅವರ ಸಮಾಧಿಯನ್ನು ತೋರಿಸಲು ಮಾರ್ಗದರ್ಶಕಿ ನಮ್ಮನ್ನು ಕರೆದುಕೊಂಡು ಹೊರಟಳು. ಮಲೆನಾಡಿನ ಕಾಡಿನ ಮಧ್ಯೆ ಹೋದಂತಾಯಿತು. ಟಾಲ್‌ಸ್ಟಾಯ್ ಮೊದಲೇ ಹೇಳಿದ್ದರಂತೆ – ತಮ್ಮನ್ನು ಧಾರ್ಮಿಕ ವಿಧಿಗಳೊಡನೆ, ಯಾವ ಒಂದು ಚರ್ಚಿನ ಅಂಗಳದಲ್ಲೂ ಸಮಾಧಿ ಮಾಡಬಾರದು; ತನ್ನ ಎಸ್ಟೇಟಿನ ಗುಡ್ಡದ ಅಂಚಿನಲ್ಲಿ ತನ್ನ ಸಮಾಧಿಯಾಗಲಿ ಎಂದು. ಕವಿಯ ಅಪೇಕ್ಷೆಯನ್ನು ನಡೆಯಿಸಿಕೊಟ್ಟಿದ್ದರು ಅವರ ಮನೆಮಂದಿ. ಈಗಲೂ ಟಾಲ್‌ಸ್ಟಾಯ್ ಅವರ ಮನೆಯಿಂದ ದಟ್ಟವಾದ ಮರಗಳನ್ನು ಹಾದು ಅರ್ಧ ಮೈಲಿ ನಡೆಯಬೇಕು. ಎತ್ತರವಾದ ಹಸಿರು ಮರಗಳ ಕೋಟೆಯ ಮೇಲೆ ಜೋಲಿ ಹೊಡೆಯುತ್ತದೆ ಗಾಳಿ. ನಿರಂತರವಾದ ನೀರಿನ ತೊರೆಯೊಂದು ಮರ್ಮರಿಸುವಂಥ ಗಾಳಿಯ ಸದ್ದು. ಹಸಿರು ತೂಗುವ ದಾರಿಯಲ್ಲಿ ನಡೆದರೆ, ಅಲ್ಲಿ ಒಂದೆಡೆ ಗುಡ್ಡದೋರೆಯಲ್ಲಿ, ಹಸಿರು ಬೆಳೆದ ಮಹಾಕಾದಂಬರಿಕಾರನ ಸಮಾಧಿ. ಮತ – ಮೌಢಗಳ ಬೇಲಿಯಾಚೆ. ನಿಸರ್ಗದ ಸೊಬಗಿನ ನಡುವೆ, ಅನಿರ್ಬಂಧ ಚೇತನಕ್ಕೆ ಸ್ಮಾರಕವಾಗಿದೆ ಟಾಲ್‌ಸ್ಟಾಯ್ ಅವರ ಸಮಾಧಿ.

ಮತ್ತೆ ಮೌನವಾಗಿ, ಹಸುರಿನ ಪಾತ್ರದಲ್ಲಿ ಮೊರೆಯುವ ಗಾಳಿಯ ಹೊನಲನ್ನಾಲಿಸುತ್ತ ಹಿಂದಿರುಗಿದೆವು. ಉದ್ದಕ್ಕೂ ನನಗೆ ನಮ್ಮ ಕುವೆಂಪು ಅವರ ನೆನಪು. ಇಂಥದೇ ಹಸುರಿನ ದಟ್ಟಗಾಡಿನ ನಡುವೆ ಬೆಳೆದದ್ದು ಅವರ ಚೇತನ. ಟಾಲ್‌ಸ್ಟಾಯ್‌ನಂತೆಯೇ ಕ್ರಾಂತಿಕಾರಕವಾದ ದಿಟ್ಟ ವ್ಯಕ್ತಿತ್ವ ಕುವೆಂಪು ಅವರದು. ಸತ್ವದಲ್ಲಿ  ಗಾತ್ರದಲ್ಲಿ ಅವರ ಕೃತಿಗಳು ಟಾಲ್‌ಸ್ಟಾಯ್ ಬರೆದ ಕೃತಿಗಳನ್ನು ನೆನಪಿಸುತ್ತವೆ. ಟಾಲ್‌ಸ್ಟಾಯ್‌ನಂತೆಯೇ ಕುವೆಂಪು ಅವರೂ ದಟ್ಟವಾದ ಅರಣ್ಯಗಳ ನಡುವೆ ತಮ್ಮ ದಾರಿಗಳನ್ನು ದಿಟ್ಟತನದಿಂದ ತೆರೆದು ನಡೆದವರು.

ಟಾಲ್‌ಸ್ಟಾಯ್ ಅವರ ಈ ‘ಎಸ್ಟೇಟ್ ಮ್ಯೂಸಿಯಂ’ ಜಗತ್ತಿನ ಅತಿ ದೊಡ್ಡ ಸಂರಕ್ಷಿತ ಸ್ಮಾರಕವಾಗಿದೆ. ನಾಲ್ಕು ನೂರು ಹೆಕ್ಟೇರುಗಳಷ್ಟು ವಿಸ್ತಾರವಾದ ಈ ಎಸ್ಟೇಟನ್ನು ಹಾಗೆಯೇ ಉಳಿಸಿಕೊಂಡು, ರಷ್ಯಾದ ಮಹಾಕ್ರಾಂತಿಗೆ, ಹಾಗೂ ತತ್ಪರಿಣಾಮವಾದ ಇಂದಿನ ಪ್ರಗತಿಗೆ ಪ್ರೇರಕರಲ್ಲೊಬ್ಬನಾದ ಈ ಮಹಾಲೇಖಕನ ನೆನಪನ್ನು ಸ್ಥಾಯಿಯಾಗಿಸಲಾಗಿದೆ.

ಐದು ಗಂಟೆಗೆ ಒಲ್ಲದ ಮನಸ್ಸಿನಿಂದ ಯಾಸ್ನಾಯಾ ಪೋಲಾಯ್ನವನ್ನು ಬಿಟ್ಟೆವು. ಕಾರು ತೂಲಾನಗರವನ್ನು ಅರ್ಧಗಂಟೆಯಲ್ಲಿ ಹಾದು ಮಾಸ್ಕೋಗೆ ಅಭಿಮುಖವಾಗಿ ಧಾವಿಸುತ್ತಿತ್ತು. ಮನಸ್ಸಿನ ತುಂಬ ಟಾಲ್‌ಸ್ಟಾಯ್ ಅವರ ನೆನಪು ತುಂಬಿತು. ಹಾಗೆಯೇ ಈ ಜನ ಕವಿಗಳಿಗೆ ತೋರುವ ಗೌರವದ ಬಗ್ಗೆ ಅಭಿಮಾನವೆನಿಸಿತು. ಗಾರ್ಕಿಮ್ಯೂಸಿಯಂ, ಪುಷ್ಕಿನ್ ಮ್ಯೂಸಿಯಂ, ಟಾಲ್‌ಸ್ಟಾಯ್ ಮ್ಯೂಸಿಯಂ, ಲೆನಿನ್ ಮ್ಯೂಸಿಯಂ- ಹೀಗೆ ತಮ್ಮ ರಾಷ್ಟ್ರಜೀವನದ ಕೇಂದ್ರಶಕ್ತಿಗಳಾದ ಕವಿಗಳನ್ನು ಮಹಾನಾಯಕರನ್ನು ಗೌರವಿಸುವ ವಿಧಾನ ಆಶ್ಚರ್ಯಕರವಾಗಿದೆ. ಆದರೆ ನಮ್ಮಲ್ಲಿ  ಕವಿಗಳನ್ನು  ಕುರಿತು ಈ ಬಗೆಯ ಸ್ಮಾರಕಗಳು ಎಷ್ಟಿವೆ ? ರಾಘವಾಂಕನ ಸಮಾಧಿ ಬೇಲೂರಿನ ದಾರಿಯ ಬದಿಯ ತಿಪ್ಪೆಗುಂಡಿಯಲ್ಲಿ ಅಡಗಿಹೋಗಿದೆ. ಪಂಪನ ಸಮಾಧಿ ಆಂಧ್ರ ಪ್ರದೇಶದಲ್ಲಿ ಎಲ್ಲೋ ಇದೆ ಎಂದು ಕೆಲವರು; ಅದು ಪಂಪನದೇ ಅಲ್ಲ ಎಂದು ಕೆಲವರು. ನಮ್ಮವರ ನಿರಭಿಮಾನ, ದೌರ್ಬಲ್ಯ ನಾಚಿಕೆ ತರಿಸುತ್ತದೆ, ಮನಸ್ಸನ್ನು ಕೊರೆಯುತ್ತದೆ. ಈ ಕೊರೆತವನ್ನು ಅನುಭವಿಸುತ್ತ ಇದ್ದ ಹಾಗೆ ಎಂಟು ಗಂಟೆಯ ವೇಳೆಗೆ ಮಾಸ್ಕೋ ಮಹಾನಗರದೊಳಗೆ ಕಾರು ಓಡುತ್ತಿತ್ತು. ಬೆಳಕಿನ ಇಟ್ಟಿಗೆಯಿಂದ ಕಟ್ಟಿದ್ದವೆಂಬಂತೆ ಹೆಡೆಯತ್ತಿದ್ದ ಸಾವಿರ ಕಣ್ಣುಗಳ ಮಹಲುಗಳ ಬದಿಗೆ ಗಾಲಿ ಉರುಳಿ, ಹೋಟೆಲಿನ ನನ್ನ ಕೋಣೆ ಸೇರಿ ನೆನಪಿನ ಗೂಡಿನೊಳಗೆ ಮಲಗಿದೆ.