ಮೈಸೂರು ಸಂಗೀತ ಸಂಪ್ರದಾಯದ ಹಿರಿಮೆಯನ್ನು ಎತ್ತಿ ಹಿಡಿದು ಅದರ ಸ್ಥಾನಮಾನಗಳನ್ನು ಉಳಿಸಿ ಬೆಳೆಸಿದ ವಿದ್ವಾಂಸರುಗಳಲ್ಲಿ ಮೃದಂಗ ವಾದನ ಪ್ರವೀಣರಾದ ಪುಟ್ಟಸ್ವಾಮಯ್ಯನವರು ಒಬ್ಬರು. ತಂದೆ ಮರಿಗೌಡರಿಂದ ತಮ್ಮ ಹತ್ತನೇ ವಯಸ್ಸಿನಲ್ಲಿ ಸಂಗೀತಾಭ್ಯಾಸ ಆರಂಭಿಸಿ ನಂತರ ಮೈಸೂರು ವಾಸುದೇವಾಚಾರ್ಯ ಅವರ ಶಿಷ್ಯ ರಂಗಾಚಾರ್ಯರಲ್ಲಿ ಪಾಠ ಮುಂದುವರೆಸಿದರು. ಹದಿನಾಲ್ಕನೆಯ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದು ವಿದ್ವಾನ್‌ ಅನಂತ ಶಾಸ್ತ್ರಿಯವರಲ್ಲಿ ತರಬೇತಿ ಪಡೆದರು. ಎರಡು ವರ್ಷಗಳ ನಂತರ ಮೈಸೂರಿಗೆ ತೆರಳಿ ಬಿಡಾರಂ ಕೃಷ್ಣಪ್ಪನವರ ಶಿಷ್ಯರಾದರು. ಕೃಷ್ಣಪ್ಪನವರು ಶ್ರೀಯುತರಿಗೆ ಮುತ್ತುಸ್ವಾಮಿದೇವರ್ ಅವರಿಂದ ಮೃದಂಗ ವಾದನದಲ್ಲಿ ಪಾಠ ಹೇಳಿಸಿದರು. ಹದಿನೆಂಟು ವರ್ಷ ವಯಸ್ಸಾಗುವ ವೇಳೆಗೆ ಪುಟ್ಟಸ್ವಾಮಯ್ಯನವರು ನಿಷ್ಣಾತ ಮೃದಂಗ ವಾದಕರಾಗಿ ಪ್ರಸಿದ್ಧರಾದರು. ಗುರು ಕೃಷ್ಣಪ್ಪನವರ ಜೀವನ ಪರ್ಯಂತ ಅವರ ಕಛೇರಿಗಳಿಗೆ ಮೃದಂಗ ನುಡಿಸುತ್ತಿದ್ದರಲ್ಲದೆ ಅವರೊಡನೆ ಅಖಿಲ ಭಾರತ ಪ್ರವಾಸವನ್ನೂ ಕೈಗೊಂಡರು. ಅಂದಿನ ಅನೇಕ ವಿಖ್ಯಾತ ಕಲಾವಿದರುಗಳಿಗೆ ಸಮರ್ಥವಾಗಿ ಪಕ್ಕವಾದ್ಯ ನುಡಿಸಿ ಮೆಚ್ಚುಗೆ ಗಳಿಸಿದರು. ಭಾವಪ್ರಧಾನ ಸಂಗೀತಕ್ಕೆ ಆದ್ಯತೆ ಕೊಡುತ್ತಿದ್ದ ಇವರು ವಾದ್ಯ ಸಂಗೀತದ ಅನುಕರಣೆಯಲ್ಲಿ ಸಿದ್ಧ ಹಸ್ತರಾಗಿದ್ದರು.

ಅತ್ಯಂತ ಸರಳರೂ ಸಜ್ಜನರೂ, ಆಗಿದ್ದ ಪುಟ್ಟಸ್ವಾಮಯ್ಯನವರು ರಸೋಪಾಸಕರೂ, ಉದಾರಿ ದಾನಿಗಳೂ ಆಗಿದ್ದರು. ಕೆಲವು ಗೆಳೆಯರ ನೆರವಿನಿಂದ ನಂಜನ ಗೂಡಿನಲ್ಲಿ ಇವರು ಸ್ಥಾಪಿಸಿರುವ ‘ಕನಕದಾಸ ವಿದ್ಯಾರ್ಥಿ ನಿಲಯ’ವೇ ಇದಕ್ಕೆ ಸಾಕ್ಷಿ. ಇಂದಿಗೂ ಈ ವಿದ್ಯಾರ್ಥಿ ನಿಲಯವು ನೂರಾರು ವಿದ್ಯಾರ್ಥಿಗಳಿಗೆ ಆವಾಸ ಅಶನ ವಸನಗಳನ್ನು ಒದಗಿಸುತ್ತಿದೆ.