ಒಬ್ಬ ಲಲಯ ವಿದ್ವಾಂಸರ ಮೂಲಭೂತ ಗುಣಗಳೇನು ಎನ್ನುವುದನ್ನು ತಿಳಿದು, ಆ ಹಿನ್ನೆಲೆಯಲ್ಲಿ ಶ್ರೀ ಪುಟ್ಟಸ್ವಾಮಯ್ಯನವರನ್ನು ಕಾಣ ಉವ ಸದಾಶಯ ಈ ಲೇಖನದ್ದು.

ಲಯವಿದ್ವಾಂಸರು ಮುಖ್ಯ ಕಲಾವಿದರ ಗಾಯನ ಅಥವಾ ವಾದನಕ್ಕೆ ಪೂರಕವಾಗಿ ಅಥವಾ ಪೋಷಕವಾಗಿ ನುಡಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಬೇಕು. ಯಾವ ಯಾವ ರಚನೆಗೆ ಎಷ್ಟೆಷ್ಟು ನುಡಿಸಬೇಕು. ಯಾವ ರೀತಿ ನುಡಿಸಿದರೆಕ ಆ ವಾಗ್ಗೇಯ ರಚನೆಗಳ ಸೌಂದರ್ಯಕ್ಕೆ ಪೂರಕವಾಗಿರುತ್ತದೆ ಎನ್ನುವ ಪರಿಜ್ಞಾನ ಅತ್ಯಗತ್ಯ. ಕೃತಿ, ನೆರವಲ್‌, ಸ್ವರಕಲ್ಪನೆಗಳಲ್ಲಿ ಮುಖ್ಯ ಕಲಾವಿದರ ಅಂತರಂಗವನ್ನರಿತು ನುಡಿಸಬೇಕು. ಇದು ವಾದ್ಯಕಾರರ ಸಂಪೂರ್ಣ ಪ್ರತಿಭಾ ಪ್ರದರ್ಶನಕ್ಕೆಂದೇ ಇರುವಂತಹುದು -‘ತನಿ’. ಇದು ಕರ್ನಾಟಕ ಸಂಗೀತದ ವೈಶಿಷ್ಟ್ಯ. ಇಲ್ಲಿ ತಮ್ಮ ಎಲ್ಲ ಸಾಧನೆ, ಪ್ರತಿಭೆಯನ್ನು ಶ್ರೋತೃವಿನ ಮುಂದಿಡಬಹುದು.

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಗಾನಕಲಾಸಿಂಧು ಪುಟ್ಟಸ್ವಾಮಯ್ಯನವರನ್ನು ಕಂಡಾಗ ಮೇಲಿನ ಅಂಶಗಳೆಲ್ಲದರ ಸಾಕಾರಮೂರ್ತಿಯೇ ಅವರಾಗಿದ್ದರೆಂದು ತಿಳಿದು ಬರುತ್ತದೆ. ಭಾರತದ ಸಾಂಸ್ಕೃತಿಕ ಭೂಪಟದಲ್ಲಿ ಮೈಸೂರಿನ ಸ್ಥಾನ ಅತ್ಯಂತ ವಿಶಿಷ್ಟವಾದುದು. ಇದು ಲಲಿತಕಲೆಗಳ ತವರೂರು. ಸಂಸ್ಥಾನವನ್ನಾಳಿದ ಒಡೆಯರ ಕಾಲದಲ್ಲಿ ಸರ್ವತೋಮುಖ ಪ್ರಗತಿ ಹೊಂದಿದ ಮೈಸೂರು ಎಲ್ಲ ಲಲಿತಕಲೆಗಳ ನೆಲಮನೆಯಾಗಿತ್ತು. ಆಳಿದ ಅರಸರ ಕಲಾಭಿರುಚಿ, ಪ್ರೋತ್ಸಾಹ ಮತ್ತು ರಸಾಭಿಜ್ಞತೆಯ ಫಲ. ನಾವು ಪುಟ್ಟಸ್ವಾಮಯ್ಯನವರಂಥ ಕಲಾವಿದರನ್ನು ನೆನೆಸಲು ಸಾಧ್ಯವಾಗಿರುವುದು.

ಇಂತಹ ಪರಿಸರದಲ್ಲಿ ವಿಜೃಂಭಿಸಿದ ಹಿಂದಿನ ಹಾಗೂ ಇಂದಿನ ಲಯವಾದ್ಯಕಾರರ ಪರಂಪರೆಯನ್ನು ತಿಳಿದುಕೊಂಡು, ಆ ನಂತರ ಮುಖ್ಯ ಭಾಗಕ್ಕೆ ಬರೋಣ.

ಈ ಪರಂಪರೆಯಲ್ಲಿ ನಮಗೆ ಕಾಣಬರುವ ಮೊತ್ತ ಮೊದಲ ಹೆಸರು ಮೃದಂಗ ವಿದ್ವಾನ್‌ ಮುತ್ತುಸ್ವಾಮಿ ದೇವರ್. ಇವರೇ ಪುಟ್ಟಸ್ವಾಮಯ್ಯನವರ ಗುರುಗಳು. ತಮಿಳುನಾಡಿನಿಂದ ಕಚೇರಿಗಾಗಿ ಮೈಸೂರಿಗೆ ಬಂದು, (೧೯೨೩-೨೪) ನಾಲ್ವಡಿಯವರ ಮೆಚ್ಚುಗೆಗೆ ಪಾತ್ರರಾಗಿ, ಇಲ್ಲಿಯೇ ಆಸ್ಥಾನವಿದ್ವಾಂಸರಾಗಿ ನೇಮಕಗೊಂಡು ಬಂದು ಹಿರಿಯ ಪರಂಪರೆ ಬೆಳೆಯಲು ಕಾರಣರಾದರು. ಈ ಪರಂಪರೆಯಲ್ಲಿ ಮೂಡಿ ಬಂದ ಪ್ರತಿಭೆ ಟಿ.ಎಂ. ಪುಟ್ಟಸ್ವಾಮಯ್ಯನವರು. ತಗಡೂರು ಮರೇಗೌಡ ಪುಟ್ಟಸ್ವಾಮಯ್ಯನವರು ಮೈಸೂರು ಜಿಲ್ಲೆಯ ನರಸೀಪುರ ತಾಲ್ಲೂಕಿನ ತಗಡೂರಿನವರು. ತಂದೆ ಮರೇಗೌಡರಲ್ಲಿ ಹತ್ತನೆಯ ವಯಸ್ಸಿನಲ್ಲೇ ಸಂಗೀತಾಭ್ಯಾಸ ಪ್ರಾರಂಭ. ಸ್ವಲ್ಪ ಕಲಿತು ಕೊನೆಗೆ ಮೈಸೂರಿಗೇ ಬಂದು ಬಿಡಾರಂ ಕೃಷ್ಣಪ್ಪನವರಲ್ಲಿ ಶಿಕ್ಷಣ ಮುಂದುವರಿಕೆ. ಮುಂದೆ ಲಯವಾದ್ಯಕಾರರಾಗಿ ಪ್ರಸಿದ್ಧಿಪಡೆದ ಪುಟ್ಟಸ್ವಾಮಯ್ಯನವರಿಗೆ ಈ ಸಂಗೀತ ಶಿಕ್ಷಣ ಬಹಳಷ್ಟು ಸಹಕಾರಿಯಾಯಿತು. ಈ ಅಂಶ ಪರಸ್ಪರ ಸಂಗೀತಗಾರರಿಗೂ, ಲಯ ವಿದ್ವಾಂಸರಿಗೂ ಇರಬೇಕಾದ ಸಾಮರಸ್ಯವನ್ನು ತಿಳಿಸುತ್ತದೆ. ಇದನ್ನು ಪುಟ್ಟಸ್ವಾಮಯ್ಯನವರು ಮಾಡಿ ತೋರಿಸಿದರು. ಇವರ ತಬಲಾವಾದನವನ್ನು ಕೇಳಿ ಸಂತೋಷಗೊಂಡು ಬಿಡಾರಂ ಅವರು ಮುತ್ತುಸ್ವಾಮಿ ಅವರಲ್ಲಿ ಮೃದಂಗದಲ್ಲಿ ಶಿಕ್ಷಣ ಪಡೆಯುವಂತೆ ಏರ್ಪಾಡುಮಾಡಿದರು. ತಮ್ಮ ೧೮ನೇ ವಯಸ್ಸಿನ ವೇಳೆಗೆ ಗುರುಗಳೊಂದಿಗೆ ಎಲ್ಲೆಡೆ ಮೃದಂಗ ಸಹಕಾರನೀಡಲು ಪ್ರಾರಂಭಿಸಿದರು. ಜೊತೆಗೇ ದಕ್ಷಿಣ ಭಾರತದ ಎಲ್ಲ ಹಿರಿಯ ವಿದ್ವಾಂಸರಿಗೂ ಮೃದಂಗ ಸಹಕಾರ ನೀಡಿದರು. “ಮೂಗಯ್ಯನವರ ಕೈಯಲ್ಲಿ ಮೃದಂಘ ಮೃದುವಾದ ಅಂಗವಾಗಿ, ಅವರ ನುಡಿಸುವಿಕೆ ಗಾಯನ ವಾದನದಿಂದ ಪ್ರತ್ಯೇಕವೆನಿಸುವುದಿಲ್ಲ ಎನ್ನುವುದು ವಿದ್ವಾಂಸರ ಹೇಳಿಕೆ. ತಮ್ಮ ಒಳ್ಳೆಯ ಮೃದಂಗವಾದನಕ್ಕಾಗಿ ಶ್ರೀ ಜಯಚಾಮರಾಜ ಒಡೆಯರಿಂದ ಸಂಗೀತ ರತ್ನ ಬಿರುದನ್ನು ಪಡೆದಿದ್ದರು. ಮೈಸೂರು ಸಂಗೀತ ಸಮ್ಮೇಳನದಲ್ಲಿ ಗಾನಕಲಾ ಸಿಂಧು ಪ್ರಶಸ್ತಿ ಪಡೆದರು.

ಸುಮಾರು ೭೪ ವರ್ಷಗಳ ಸಾರ್ಥಕ ಬದುಕನ್ನು ನಡೆಸಿದ ಶ್ರೀ ಮೂಗಯ್ಯನವರ ಕಲಾಜೀವನದ ಮತ್ತೊಂದು ಮಗ್ಗುಲನ್ನು ಕಂಡಾಗ ಅವರ ಬಗೆಗಿನ ಗೌರವ ಇಮ್ಮಡಿಗೊಳ್ಳುತ್ತದೆ.

ಇಂತಹ ಹಿರಿಯರ ಬಗೆಗಿನ ಒಂದು ಘಟನೆ ನೆನಪಾಗುತ್ತದೆ: ನನ್ನ ಅವರ ಭೇಟಿ ಒಂದೆರಡು ಕಾರ್ಯಕ್ರಮಗಳಲ್ಲಾಗಿದ್ದು ಹೆಚ್ಚಿನ ಪರಿಚಯವಿರಲಿಲ್ಲ, ೧೯೭೩ರಲ್ಲಿ ಗಾನಕಲಾ ಪರಿಷತ್ತಿನ ಸಮ್ಮೇಳನ ಬೆಂಗಳೂರಿನ ಕುಚಲಾಂಬ ಛತ್ರದಲ್ಲಿ, ಸಮ್ಮೇಳನದ ಕೊನೆಯ ದಿನ. ಶ್ರೀ ಬಿ.ಎಸ್‌.ಎಸ್‌. ಕೌಶಿಕ್‌ ಅವರು ನಿರ್ದೇಶಿಸಿದ ಕುಂತಿ-ಕರ್ಣ ಗಮಕ ಗೀತರೂಪಕದ ಕಾರ್ಯಕ್ರಮ. ಕಾರ್ಯಕ್ರಮ ಮುಗಿದ ನಂತರ, ಒಳ ಕೊಠಡಿಯಲ್ಲಿ ಭಾಗವಹಿಸಿದ್ದ ಕಲಾವಿದರೆಲ್ಲಾ ಇದ್ದರು. ಆರಡಿ ಎತ್ತರದ ಗಾತ್ರವುಳ್ಳ ಮೂಗಯ್ಯನವರು ಒಳ ಬಂದು ಕೃಷ್ಣಪಾತ್ರಧಾರಿಗೆ ದೀರ್ಘದಂಡ ನಮಸ್ಕಾರ ಮಾಡಿ, “ಇಂದು ನಿಜವಾದ ಕೃಷ್ಣನನ್ನು ಕಂಡೆ. ಕೃಷ್ಣನೇ ಆಬಿರ್ಭೂತನಾಗಿದ್ದಾನೆ” ಎಂದು ಮೆಚ್ಚುಗೆಯ ನುಡಿಗಳಾಡಿದುದು ಇಂದಿಗೂ ಕಿವಿಯಲ್ಲಿ ಆಗಾಗ ಮೊಳಗುತ್ತಿರುತ್ತದೆ. ಕಾರಣ ಅಂದಿನ ಕೃಷ್ಣ ಪಾತ್ರಧಾರಿ ನಾನು. ಕಿರಿಯರಾದರೂ ಆ ಪ್ರೋತ್ಸಾಹದ ನುಡಿಗಳನ್ನಾಡಿ, ಬೆನ್ನುತಟ್ಟುವ ಸ್ವಭಾವ ಎಷ್ಟು ಜನ ಹಿರಿಯರಿಗಿರುತ್ತದೆ. ಆ ಹೃದಯಸಂಪನ್ನತೆ ಕೆಲವರಿಗಷ್ಟೇ ಸಾಧ್ಯ. ಡಾ. ವಿ.ಎಸ್‌. ಸಂಪತ್ಕುಮಾರಾಚಾರ್ಯರು ಹೇಳುವಂತೆ “ಚಿಕ್ಕಂದಿನಿಂದಲೂ ಗದುಗಿನ ಭಾರತ” ಮತ್ತು ಲಕ್ಷ್ಮೀಶನ ಜೈಮಿನಿ ಭಾರತವನ್ನು ನೂರಾರು ಬಾರಿ ವಾಚನ ಮಾಡಿದ್ದರು. ಈ ಮಾತನ್ನು ನೆನೆದಾಗ, ಅಂದಿನ ಗಮಕಗೀತರೂಪಕದ ಪ್ರತಿಯೊಂದು ಅಂಶವನ್ನು ಗಮನವಿಟ್ಟು ನೋಡಿ, ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು ಎನಿಸುತ್ತದೆ.

ಪುಟ್ಟಸ್ವಾಮಯ್ಯನವರ ಮತ್ತೊಂದು ವಿಶೇಷ ಗುಣ-ಶಿಷ್ಯರಲ್ಲಿ ಅವರು ತೋರುತ್ತಿದ್ದ ವಾತ್ಸಲ್ಯ. ಇದನ್ನು ಅವರಿಂದಲೇ ನೇರ ಶಿಕ್ಷಣ ಪಡೆದ ಶ್ರೀಮತಿ ಶೈಲಾ ಅವರ ಮಾತಿನಲ್ಲೇ ಹೇಳುವುದಾದರೆ:

ಯಾವ ರೀತಿಯ ಪ್ರತಿಫಲಾಪೇಕ್ಷೆಯೂ ಇಲ್ಲದೆ ವಿದ್ಯೆ ಮುಂದುವರಿಯಬೇಕೆನ್ನುವ ದೃಷ್ಟಿ, ಕಾಲಮಿತಿಯಿಲ್ಲದೆ, ಶಿಷ್ಯರಿಗೆ ಬರುವ ತನಕ ಬಿಡದೆ, ಅದು ಬಂದ ನಂತರವೇ ಬಿಡುಗಡೆ. ಆ ಕ್ಷಣ ಯಾಕಾದರೂ ಈ ಶಿಕ್ಷೆ ಕೊಡುತ್ತಾರೋ ಎಂದುಕೊಳ್ಳುತ್ತಿದ್ದೆವು. ಆದರೆ ಈಗ ಅದರ ಬೆಲೆ ಗೊತ್ತಾಗುತ್ತದೆ’. ಇವರೊಂದಿಗೆ ಅವರ ಸಹೋದರ ದಿ. ಶ್ರೀನಿಧಿ ಅವರೂ ಇವರ ನೇರ ಶಿಷ್ಯರು. ಶಿಷ್ಯರಿಗೆ ಅವರು ಹೇಳುತ್ತಿದ್ದ ಕೆಲವು ಅಂಶಗಳು ಇಂದಿಗೂ ಪ್ರಸ್ತುತವೆನಿಸುತ್ತದೆ. ವಿದ್ಯಾರ್ಥಿಗೆ ಮೊದಲು ಏಕಾಗ್ರತೆ ಬಹಳ ಮುಖ್ಯ. ಹೆಚ್ಚುಮಾತನಾಡದೆ, ಗಾಂಭೀರ್ಯ ಅತ್ಯವಶ್ಯ, ಮೃದಂಗದ ಎಡಬಲಗಳ ಹೊಂದಾಣಿಕೆ ಚೆನ್ನಾಗಿರಬೇಕು. ಜೀವಾಳ ಹೆಚ್ಚಾಗಕೂಡದು. ಹೆಚ್ಚಾದರೆ Metallic Sound ಬರುತ್ತದೆ. ಛಾಪು, ಅರೆಛಾಪು, ಮೀಟುಗಳಿಗೆ ತನ್ನದೇ ಆದ ಅರ್ಥವಿದೆ. ಅದನ್ನರಿತು ನುಡಿಸುವವ ನಿಜವಾದ ಲಯವಾದ್ಯಗಾರ, ಶ್ರುತಿ ಮಾಡಿಕೊಳ್ಳುವುದು ಬೇರೆಯವರಿಗೆ ಕೇಳಿಸಬಾರದು. ಛಾಪು ಹಾಕುವಾಗ ಬೆರಳುಗಳೇ ಮುಖ್ಯ. ಅದು ಆಡುವುದು ಬೇರೆಯವರಿಗೆ ಕಾಣುವಂತಿರಬಾರದು. ಅಷ್ಟು ಸೂಕ್ಷ್ಮವಾಗಿರಬೇಕು. ಮುಖ್ಯ ಕಲಾವಿದ ಮುಕ್ತಾಯ ಮಾಡುತ್ತಿದ್ದಂತೆ ಲಯವಾದ್ಯಕಾರರು ಜೊತೆಯಲ್ಲಿ ಮುಗಿಸಬೇಕು. ಮೀರಿ ಹೋಗಬಾರದು. ಎಲ್ಲಕ್ಕಿಂತ ಮುಖ್ಯವಾಗಿ ವಿಧೇಯತೆ, ವಿನಯಗಳೇ ಎಲ್ಲ ವಿದ್ಯೆಗಳ ಆಧಾರ. ಈ ಮಾತುಗಳೇ ಇಂದಿಗೂ ನಮಗೆ ಒಳ್ಳೆಯ ಸಂಗೀತ, ಸರಿಯಾದ ಮೃದಂಗವಾದನ ಎಂದರೇನು ಎಂದು ತಿಳಿದುಕೊಳ್ಳಲು ಸಹಕಾರಿಯಾಗಿರುವಂಥದು ಎಂದು ತಮ್ಮ ಗುರುಗಳನ್ನು ಭಕ್ತಿ ನೆನೆಯುತ್ತೃಎ ಶ್ರೀಮತಿ ಶೈಲ.

ಕನ್ನಡ ಕಾವ್ಯಗಳ ಅಧ್ಯಯನ, ವಾಚನಗಳ ಜೊತೆಗೆ ಶ್ರೀ ಶಂಕರರ ಅದ್ವೈತ, ರಾಮಾನುಜರ ವಿಶಿಷ್ಟಾದ್ವೈತಗಳ ಬಗೆಗೆ ಬಹಳ ಆಳವಾಗಿ ಅಧ್ಯಯನ ಮಾಡಿ, ತಿಳಿದವರೊಂದಿಗೆ ಮಾತನ್ನಾಡುವಷ್ಟು ಪರಿಣತಿ ಪಡೆದಿದ್ದರು. ಮೂಲತಃ ವ್ಯವಸಾಯಗಾರರಾಗಿದ್ದು ಪ್ರವೃತ್ತಿಯಾಗಿ ಸಂಗೀತವನ್ನು ಆಯ್ದಿದ್ದರೂ ಅಧ್ಯಯನ ಅವರ ಹವ್ಯಾಸವಾಗಿದ್ದಿತು ಎನ್ನುತ್ತಾರೆ ಶ್ರೀಮತಿ ರತ್ನ ಶ್ರೀನಿಧಿ, ಅವರ ಸಹೋದರಿ.

ಕಿರಿಯರನ್ನು ಪ್ರೋತ್ಸಾಹಿಸುತ್ತಿದ್ದ ರೀತಿ ನಿಜಕ್ಕೂ ಅನುಕರಣೀಯ. ಇವರ ಬಗೆಗೆ ಸಂಗೀತ ರತ್ನ ಎಂ.ಎ. ನರಸಿಂಹಾಚಾರ್ ಅವರಿ ಅತ್ಯಂತ ಭಕ್ತಿಯಿಂದ ಆತ್ಮೀಯತೆಯಿಂದ ನೆನೆಸಿಕೊಳ್ಳುತ್ತಾರೆ. “ಮೊದಲಕಾರ್ಯಕ್ರಮ ಬಿಡಾರಂ ಕೃಷ್ಣಪ್ಪನವರ ರಾಮಮಂದಿರದಲ್ಲಿ. ದಿಗ್ಗಜರೆಲ್ಲರ ಸಮ್ಮುಖದಲ್ಲಿ ಹಾಡಲು ಸಹಜವಾದ ಭಯ, ಆತಂಕ ಪುಟ್ಟಸ್ವಾಮಯ್ಯನವರ ಮೃದಂಗ ಪಕ್ಕವಾದ್ಯ. ಬಳಿ ಬಂದು “ಹೆದರಬೇಡಿ, ಚೆನ್ನಾಗಿ ಹಾಡಿ, ನನ್ನಿಂದಾಗಿ ತೊಂದರೆಯು ಆಗದು” ಎಂದು ಬೆನ್ನತಟ್ಟಿ ಹುರಿದುಂಬಿಸಿದುದೇ ನನ್ನ ಆ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಯಿತು”.

ಮತ್ತೊಂದು ಸಂದರ್ಭದಲ್ಲಿ ಪ್ರಿಯ ಶಿಷ್ಯ ಶ್ರೀನಿಧಿ ಹಿರಿಯ ವಿದ್ವಾಂಸರಾದ ಆರ್.ಆರ್. ಕೇಶವಮೂರ್ತಿಗಳಿಗೆ ನುಡಿಸುವ ಸಂದರ್ಭ. ತುಂಬಿದ ಸಭೆ ಕಂಢು ಭೀತಿಗೊಂಡ ಶಿಷ್ಯನಿಗೆ “ತೋಟದಲ್ಲಿ ದೊಡ್ಡ ಮರಗಳೂ ಇರುತ್ತವೆ. ಚಿಕ್ಕಗಿಡಗಳೂ ಇರುತ್ತವೆ. ಚಿಕ್ಕ ಗಿಡಗಳೇ ಮುಂದೆ ದೊಡ್ಡ ಮರವಾಗುವುದು. ಭಯ ಬೇಡ, ಚೆನ್ನಾಗಿ ನುಡಿಸು ಭಗವಂತನಿದ್ದಾನೆ” ಎಂದು ತುಂಬಿದ ಧೈರ್ಯ ಎಂದೆಂದೂ ಆತ್ಮವಿಶ್ವಾಸ ತುಂಬಿರುವಂತೆ ಮಾಡಿತು.

ಶಿಷ್ಯರನ್ನು ಕಂಡರೆ ಎಷ್ಟು ವಾತ್ಸಲ್ಯ ಮಯಿಯೋ, ಅಷ್ಟೇ ಕೋಪಿಷ್ಠರೂ ಆಗಿದ್ದರು. ಸರಿಯಾಗಿ ಅಭ್ಯಾಸ ಮಾಡದಿದ್ದಲ್ಲಿ ಎರಡೇಟು ಕೊಡಲೂ ಹಿಂತೆಗೆಯುತ್ತಿರಲಿಲ್ಲ. ಸಂಗೀತಕ್ಕಾಗಿ ಮಿಕ್ಕೆಲ್ಲವನ್ನು ತ್ಯಾಗ ಮಾಡಬೇಕೆಂದು ಆಶಿಸುತ್ತಿದ್ದರು. ಆದಿತಾಳ ಒಂದನ್ನು ವಶಪಡಿಸಿಕೊಂಡರೆ ಮಿಕ್ಕೆಲ್ಲಾ ತಾನೇ ಬರುತ್ತದೆ ಎನ್ನುತ್ತಿದ್ದರು. ಸದಾ ವಿಳ್ಳೆದೆಲೆ ಜಗಿಯುವ ಅಭ್ಯಾಸವಿದ್ದ ಪುಟ್ಟಸ್ವಾಮಯ್ಯನವರು ಅರಿಯಕುಡಿ ಶ್ರೀ ರಾಮಾನುಜ ಅಯ್ಯಂಗಾರ್, ಚಂಬೈ ವೈದ್ಯನಾಥ ಅಯ್ಯರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರ ಸಂಗೀತವನ್ನು ಬಹಳವಾಗಿ ಮೆಚ್ಚಿಕೊಳ್ಳುತ್ತಿದ್ದರು. ಇವರ ವೀಳ್ಳೆದೆಲೆ ಸೇವನೆಯೇ ನಮ್ಮೊಡನೆ ಹೆಚ್ಚು ಮಾತನಾಡಲು ಬಿಡುವುದಿಲ್ಲ ಎಂದು ಹುಸಿಮುನಿಸು ತೋರುತ್ತಿದ್ದರಂತೆ, ಈ ವಿದ್ವಾಂಸರು. ಮೃದಂಗ ವಾದನದಲ್ಲಿ ಸುಬ್ಬುಡು, ಪಾಲ್‌ಘಾಟ್‌ ರಘು ಅವರು ಕೂರುತ್ತಿದ್ದ ಭಂಗಿ ಗಾಂಭೀರ್ಯದಲ್ಲಿ ಉಮಯಾಳಪುರಂ ಶಿವರಾಮನ್‌ ಅವರನ್ನು ಬಹಳ ಇಷ್ಟಪಡುತ್ತಿದ್ದರು. ಎಂದು ತಿಳಿದವರು ಹೇಳುತ್ತಾರೆ. ಮಹಿಳಾ ಗಾಯಕಿಯರಲ್ಲಿ ಡಾ. ಎಂ.ಎಸ್‌. ಸುಬ್ಬಲಕ್ಷ್ಮಿ ಅವರನ್ನು ಬಹಳ ಹೊಗಳುತ್ತಿದ್ದರು. ಪ್ರತಿಯೊಂದು ಪದದಲ್ಲಿನ ಸ್ಪಷ್ಟ ಉಚ್ಛಾರ, ತನ್ಮಯತೆ, ಉಸಿರು ತೆಗೆದುಕೊಳ್ಳುವ ರೀತಿ, ಗಾಂಭೀರ್ಯೃ, ಸ್ನಿಗ್ಧ ಸೌಂದರ್ಯ, ಎಲ್ಲರಲ್ಲೂ ಪೂಜ್ಯ ಭಾವನೆಗಳನ್ನು ಉಂಟುಮಾಡುತ್ತದೆ. ಎಂದು ಪದೇ ಪದೇ ಹೇಳುತ್ತಿದ್ದರು.

ಶಿಷ್ಯರನ್ನು ಸ್ವೀಕರಿಸುವ ಮೊದಲು ಅವರು ಇಡುತ್ತಿದ್ದ ಪರೀಕ್ಷೆ ಬಹಳ ಸ್ವಾರಸ್ಯಕರವಾಗಿರುತ್ತಿತ್ತಂತೆ. ಮೃದಂಗದಲ್ಲಿ ನುಡಿಸುತ್ತಿದ್ದ ಶಬ್ದವನ್ನು ಬಾಯಲ್ಲಿ ಹೇಳಬೇಕು. ಆಗ ಮಾತ್ರ ತೇರ್ಗಡೆ, ಅದಕ್ಕೆ ಕೊಡುತ್ತಿದ್ದ ಕಾರಣ, ಒಬ್ಬ ಕಲಾವಿದನಿಗೆ ಶಬ್ದಗ್ರಹಣ ಬಹಳ ಮುಖ್ಯ, ಅದಿಲ್ಲದಿದ್ದರೆ ಮಿಕ್ಕೆಲ್ಲ ವ್ಯರ್ಥ ಎನ್ನುತ್ತಿದ್ದರು. ಎಂದು ತಿಳಿಸಿದರು ಶ್ರೀಮತಿ ಸುಶೀಲ. ಇಂತಹ ಸಹೃದಯೀ ಕಲಾವಿದರನ್ನು ಪ್ರಶಸ್ತಿಗಳು ಆರಸಿಬಂದಿರುವುದು ಸಹಜ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಗಾನಕಲಾಸಿಂಧು, ಸಂಗೀತರತ್ನ, ಸಂಗೀತ ಕಲಾರತ್ನ, ಗಾನಭೂಷಣ, ಪ್ರಶಸ್ತಿಗಳನ್ನು ಪಡೆದಿದ್ದರು. ಹಲವಾರು ವಿದ್ಯಾಕಾಂಕ್ಷಿಗಳಿಗೆ ಭೇದವಿಲ್ಲದ ವಿದ್ಯಾದಾನ ಮಾಡಿದರು. ತಗಡೂರಿನಲ್ಲಿ ಕನಕ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ, ಸುಮಾರು ೧೦೦ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ ಒದಗಿಸುತ್ತಿದ್ದರು. ಹೀಗೆ ಒಬ್ಬ ಕೃಷಿಕ ಸಂಗೀತಾಭ್ಯಾಸಿಯಾಗಿ ಮೃದಂಗ ವಾದಕನಾಗಿ, ಅಭಿಮಾನ-ವಾತ್ಸಲ್ಯವುಳ್ಳ ಗುರುವಾಗಿ, ಮೇಲಾಗಿ ಮಾನವೀಯತೆಯೇ ಮೂರ್ತಿವೆತ್ತಂತಿದ್ದಕ ಶ್ರೀ ಪುಟ್ಟಸ್ವಾಮಯ್ಯನವರಿಗೆ ಇದೋ ನಮ್ಮ ನಮನ.