ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಗಳಲ್ಲಿ, ಮೃದಂಗ ಪಕ್ಕವಾದ್ಯಕ್ಕೆ ಅನುಪಮ ಸ್ಥಾನಮಾನವಿದೆ. ಮೃದಂಗ ವಿದ್ವಾಂಸರುಗಳಿಗೆ ಅಪಾರ ಗೌರವ ಸಲ್ಲುತ್ತಿದೆ. ಮೃದಂಗ ವಾದ್ಯಕ್ಕೆ ಹಾಗೂ ವಾದಕರಿಗೆ ಮೈಸೂರಿನಲ್ಲಿ ವಿಶಿಷ್ಟ ಸ್ಥಾನ ಮಾನವನ್ನು ತಂದುಕೊಟ್ಟಕ ವಿದ್ವಾಂಶರುಗಳಲ್ಲಿ ಮೂಲತಃ ತಮಿಳುನಾಡಿನವರಾದ ದೇವರ್’ ೧) ಮೂಲತಃ ‘ತೇವರ್’ ಎಂಬುದು ಜಾತಿ ಸೂಚಕವಾಗಿದ್ದು, ಕರ್ಣಾಟಕದಲ್ಲಿ ಕಾಲಕ್ರಮದಲ್ಲಿ ‘ದೇವರ್’ ಆಗಿ, ‘ದೇವರು’ ಎಂದು ನಿಂತಿತು. ಇವರು ಶೈವ ಸಂಪ್ರದಾಯಕ್ಕೆ ಸೇರಿದವರು. ವಂಶಜರು ಪ್ರಾತಃ ಸ್ಮರಣೀಯರು.

ಮೃದಂಗ ವಿದ್ವಾನ್‌ ಟಿ.ಎಂ. ವೆಂಕಟೇಶ ದೇವರು, ೧೯೦೮ ರಲ್ಲಿ ತಮಿಳುನಾಡಿನ ಕಡಲೂರು ಬಳಿಯ ತಿರುಪಾದಿರಿ ಪುಲಿಯೂರು ಎಂಬ ಸ್ಥಳದಲ್ಲಿ ಜನಿಸಿದರು. ಪುಲಿಯೂರಿನ ಪಾಟಲೀಶ್ವರ ಕೊಯಿಲ್‌ ಬಹು ಪ್ರಸಿದ್ಧವಾದ ದೇವಸ್ಥಾನ, ಹಾಗೂ ಈ ಮನೆತನದವರ ಮೇಲೆ ಬಹಳ ಪರಿಣಾಮ ಬೀರಿದ ದೇವಸ್ಥಾನ. ಇವರ ತಂದೆ ಮೃದಂಗ ವಿದ್ವಾನ್‌ ಮುತ್ತುಸ್ವಾಮಿ ದೇವರ್’ ೨) ಇವರು ಮುತ್ತುಸ್ವಾಮಿ ದೇವರ್ ಎಂದು ಪರಿಚಿತರಾಗಿದ್ದು, ಮುತ್ತುಸ್ವಾಮಿ, ಮುತ್ತಣ್ಣ ಎಂದು ಕರೆಯಲ್ಪಡುತ್ತಿದ್ದರು. ಇವರ ಸಂಪೂರ್ಣ ನಾಮಧೇಯ, ಮೃದಂಗ ಮುತ್ತುಕುಮಾಋ ಸ್ವಾಮಿ ದೇವರ್. ಪ್ರಸಿದ್ಧ ಮೃದಂಗ ವಾದಕರು. ಮದ್ರಾಸಿನ ತೊಂಡಮಂಡ ಸ್ಕೂಲಿನಲ್ಲಿ ಲೋಯರ್ ಸೆಕೆಂಡರಿವರೆಗೆ ವಿದ್ಯಾಭ್ಯಾಸ ಮಾಡಿದರು. ಇವರ ಅಣ್ಣ ಕನ್ನಯ್ಯದೇವರ್, ಮೃದಂಗ ವಾದಕರಾಗಿದ್ದು ವೃತ್ತಿಗಾಗಿ ಡಿ.ಸಿ. ಕಚೇರಿಯಲ್ಲಿ ಟೈಪಿಸ್ಟ್‌ ಆಗಿದ್ದರು. ಟಿ.ಕೆ. ವೈಯ್ಯಾಪುರಿ ದೇವರ್ ಇವರ ಜ್ಞಾತಿಗಳು ೩) ವೈಯ್ಯಾಪುರಿ ದೇವರ್ ರವರು ಬಹುಕಾಲ ಆಕಾಶವಾಣಿಯಲ್ಲಿ ನಿಲಯ ಕಲಾವಿದರಾಗಿದ್ದು, ಜನ ಮನ್ನಣೆ ಗಳಿಸಿದ್ದರು. ಕಂದಸ್ವಾಮಿ ದೇವರ್ ರವರ ಪುತ್ರರು ಹಾಗೂ ವೆಂಕಟೇಶದೇವರ್ ರವರಲ್ಲಿ ಪಾಠ ಮಾಡಿದವರು.

ವೆಂಕಟೇಶ ದೇವರ್ ರವರಿಗೆ ಮೃದಂಗ ರಕ್ತಗತವಾಗಿ ಬಂದ ವಿದ್ಯೆ. ತಂದೆಯವರಿಂದಲೇ ಪಾಠ ಮಾಡಿದ ಇವರು ಸುಮಾರು ೧೦ನೆಯ ವಯಸ್ಸಿನಿಂದಲೇ ಕಚೇರಿ ಮಾಡಲು ಪ್ರಾರಂಭಿಸಿದರು. ತಂದೆಯವರೊಡನೆ ಕೆಲವೊಮ್ಮೆ ಖಂಜರಿ ಅಥವಾ ಮೃದಂಗ ನುಡಿಸುತ್ತಾ ಎಲ್ಲಾ ಹಿರಿಯ ವಿದ್ವಾಸರುಗಳ ಪರಿಚಯವನ್ನಲ್ಲದೆ ಪಕ್ಕ ವಾದ್ಯ ನುಡಿಸುವ ತಂತ್ರಗಾರಿಕೆಯನ್ನು ಪಡೆದರು. ದೇವರ್ ವಂಶಜರೆಲ್ಲಾ ಮೃದಂಗವಾದಕರಾಗಿದ್ದು ವೆಂಕಟೇಶ ದೇವರು ಈ ಪೀಳಿಗೆಯಲ್ಲಿ ೨೨ನೆಯ ತಲೆಮಾರಿನವರೆಂದು ಹೇಳಲಾಗಿದೆ.

ಮುತ್ತುಸ್ವಾಮಿ ದೇವರ್ ಮತ್ತು ವೆಂಕಟೇಶ ದೇವರು ಇವರು ಮೈಸೂರಿಗೆ ಮೃದಂಗ ಪರಿಚಯಿಸಿದ ಶ್ರೇಷ್ಠರೆಂದರೆ ತಪ್ಪಿಲ್ಲ. ಇವರು ಮೈಸೂರಿಗೆ ಬಂದು ನೆಲೆಸುವುದಕ್ಕೆ ಕಾರಣ ಅಂದು ಮೈಸೂರಿನಲ್ಲಿ ಅಗ್ರಗಣ್ಯ ಸಂಗೀತ ವಿದ್ವಾಂಸರುಗಳಿದ್ದರೂ ಮೃದಂಗ ಪಕ್ಕವಾದ್ಯದ ಕೊರತೆ ಇದ್ದು ತಬಲಾ ಸಾಥಿಯೊಂದಿಗೆ ಕಚೇರಿ ಮಾಡಬೇಕಿತ್ತು. ಅಂದಿನ ಚಿಕ್ಕರಂಗಣ್ಣ ದೊಡ್ಡರಂಗಣ್ಣ ಹಿರಿಯ ಸಾಲಿನ ತಬಲಾ ಪಕ್ಕವಾದ್ಯಗಾರರಾಗಿದ್ದರು. ಅಪರೂಪಕ್ಕೊಮ್ಮೆ ಮದ್ರಾಸಿನಿಂದ ಮೃದಂಗ ವಾದಕರು ಈ ಕಡೆ ಬರುತ್ತಿದ್ದು ಮೃದಂಗ ವಾದನವೇ ಅಂದಿಗೆ ವಿಸ್ಮಯವಾಗಿ ಕಾಣುವ ಸಂಧರ್ಭವಾಗಿತ್ತು.

ಈ ಪರಿಸ್ಥಿತಿಯಲ್ಲಿ ೧೯ ೨೪ರಲ್ಲಿ ಮುತ್ತುಸ್ವಾಮಿದೇವರ್ ಪ್ರಥಮವಾಗಿ ಅಂದಿನ ಖ್ಯಾತ ಸಂಗೀತ ವಿದುಷಿ ಕೊಯಮತ್ತೂರು ತಾಯಿಯವರೊಡನೆ ಪಕ್ಕವಾದ್ಯ  ನುಡಿಸಲು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಆಸ್ಥಾನಕ್ಕೆ ಆಗಮಿಸಿದರು. ಅಂದಿನ ಮೃದಂಗ ವಾದನ, ನಾದಕ್ಕೆ ಮಾರುಹೋದ ಮಹಾರಾಜರು ಮರುದಿನ ಬೆಳಿಗ್ಗೆ ಖಾಸಾ ತನಿ ಕಚೇರಿ ಏರ್ಪಡಿಸಿ ದೇವರ್ ರವರನ್ನು ಸತ್ಕರಿಸಿದ್ದೇ ಅಲ್ಲದೆ ಆಸ್ಥಾನ ವಿದ್ವಾಂಸರಾಗಿ ನಿಯೋಜಿಸಿದರು. ಅಂದಿನಿಂದ ಮೈಸೂರು ಸಂಸ್ಥಾನದಲ್ಲಿ ಮೃದಂಗ ನಾದದ ತರಂಗಗಳು ಹರಡತೊಡಗಿದವು. ನಂತರದಲ್ಲಿ ದೇವರ್ ರವರಲ್ಲಿ ಸ್ವಯಂ ಮಹಾರಾಜರೇ ಮೃದಂಗ ಅಭ್ಯಾಸ ಮಾಡಿದರು ಹಾಗೂ ಕಲಾವಿದರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿದರು. ಶ್ರೀ ಉಪಾಸಕರಾಗಿದ್ದ ದೇವರ್ ಕ್ಲಿಷ್ಟ ಕಾಲದಲ್ಲಿ ಸಂಸ್ಥಾನದ ಮರ್ಯಾದೆ ಉಳಿಸಿದ್ದುದು ಇಂದಿಗೂ ದಾಖಲೆ. ೪) ಇದು ಉಲ್ಲೇಖಾರ್ಹ ಸನ್ನಿವೇಶ ೧೯೨೭ರಲ್ಲಿ ಪಳನಿ ಮುತ್ತಯ್ಯ ಪಿಳ್ಳೆಯವರು ಎಸೆದ ಸವಾಲನ್ನು ಸ್ವೀಕರಿಸಿದರು. ಅಂಬಾ ವಿಲಾಸ ತೊಟ್ಟಿಯಲ್ಲಿ ಸೇಲಂ ದೊರೆಸ್ವಾಮಿ ಅಯ್ಯಂಗಾರ್ ರ ಹಾಡುಗಾರಿಕೆಗೆ ಕಂದಿನ ಉದಯೋನ್ಮುಖ ಕಲಾವಿದ ಟಿ.ಚೌಡಯ್ಯನವರ ಪಿಟೀಲು. ಇದಕ್ಕೆ ಮೃದಂಗ ಹಾಗೂ ‘ಕೊನೆಗೋಲು’ ಎರಡು ಸವಾಲನ್ನು ಸ್ವೀಕರಿಸಿ ವಿಜೇತರಾಗಿ ಸುವರ್ಣ ಸರಸ್ವತಿಯನ್ನು ಬಹುಮಾನವಾಗಿ ಪಡೆದರು. ಮುತ್ತಯ್ಯ ಪಿಳ್ಳೆಯವರು ತುಂಬಿದ ಸಭೆಯಲ್ಲಿ ಸೋಲೊಪ್ಪಿದರು. ಕೆಲವು ಹಿರಯ ಮೃದಂಗ ವಾದಕರು ದೈವೈಕ್ಯರಾದಾಗ, ಟೈಗರ್ ವರದಾಚಾರ್ಯರು “ಮೃದಂಗದ ಎಲ್ಲಾ ರತ್ನಗಳೂ ಹೋದವು. ಮತ್ತೊಂದು ಉಳಿದಿವೆ, ಅದು ಮೈಸೂರಿನಲ್ಲಿದೆ” ಎಂದು ಹೇಳುತ್ತಿದ್ದರಂತೆ.

ಮುತ್ತುಸ್ವಾಮಿ ದೇವರ್ ರವರ ಬಳಿ ಅಭ್ಯಾಸ ಮಾಡಿದವರಲ್ಲಿ ಪುತ್ರ ವೆಂಕಟೇಶರಲ್ಲದೆ ಕೆ.ವೀರಪ್ಪಾಚಾರ್, ಕೆಂಪಾಚಾರ್, ತಿರುಮಕೂಡಲು ಚೌಡಪ್ಪ ಹಾಗೂ ತಗಡೂರು ಟಿ. ಪುಟ್ಟಸ್ವಾಮಯ್ಯ (ಮೂಗಯ್ಯ) ಪ್ರಮುಖರು. ಇವರು ೧೯೩೧ರಲ್ಲಿ ಕಾಲವಾದ ನಂತರ ವೆಂಕಟೇಶ ದೇವರ್ ರವರು ಮದ್ರಾಸಿಗೆ ಹೊರಟು ಹೋದರು. ಅದೃಷ್ಟವಶಾತ್‌ ಮಹಾರಾಜರು ಕನ್ಯಯ್ಯದೇವರ ಮುಖಾಂತರ ವೆಂಕಟೇಶದೇವರ್ ರವರನ್ನು ಹಿಂದಕ್ಕೆ ಕರೆಸಿಕೊಂಡು ಅವರ ತಂದೆಯ ಸ್ಥಾನದಲ್ಲಿ ಆಸ್ಥಾನ ವಿದ್ವಾಂಸರನ್ನಾಗಿ ಮಾಡಿಕೊಂಡರು.

ತಂದೆಯವರಂತೆಯೇ, ವೆಂಕಟೇಶ್‌ದೇವರು ಸಹ ಎಲ್ಲಾ ವಿದ್ವಾಂಸರುಗಳ ಮನ್ನಣೆಗೆ ಪಾತ್ರರಾಗಿದ್ದರು. ಮೃದಂಗವೇ ಅಲ್ಲದೆ ಖಂಜರಿ, ಘಟ, ಮೋರ್ಸಿಂಗ್‌ ಹಾಗೂ ಡೋಲಕ್‌ ನುಡಿಸುತ್ತಿದ್ದರು. ಲಕ್ಷ್ಯ ಹಾಗೂ ಲಕ್ಷಣಗಳೆರಡರಲ್ಲೂ ಅಸಮಾನರು. ಮೃದಂಗದ ಪ್ರತಿ ಶಬ್ದಕ್ಕೂ ಹಾಗೂ ತಾಳದ ಪ್ರತಿ ಅಂಶಗಳಿಗೂ ಸಂಸ್ಕೃತ ಶ್ಲೋಕಗಳ ಆಧಾರದೊಂದಿಗೆ ಪಾಠ ಹೇಳುತ್ತಿದ್ದ ಕ್ರಮ ಹಾಗೂ ವಿದ್ವಾಂಸರೊಡನೆ ಚರ್ಚೆ ಮಾಡುತ್ತಿದ್ದುದು ಉಲ್ಲೇಖಾರ್ಹ. ಮಹಾ ಸ್ವಾಭಿಮಾನಿ ಹಾಗೂ ಮುಂಗೋಪಿಯಾಗಿದ್ದ ಇವರ ಬಗ್ಗೆ ಸಮಕಾಲೀನ ವಿದ್ವಾಂಸರುಗಳಿಗೆ ಹಾಗೂ ಶಿಷ್ಯರುಗಳಿಗೆ ಸ್ವಲ್ಪ ದಿಗಿಲೂ ಇತ್ತು. ಗರಡಿ ವ್ಯಾಯಾಮದಲ್ಲಿ ಬಹಳ ಆಸಕ್ತಿ ಹೊಂದಿದ್ದರಿಂದ ಶರೀರ ಪೋಷಣೆಯಲ್ಲಿ ತೀವ್ರ ಗಮನ ಹರಿಸುತ್ತಿದ್ದರು. ಮೃದಂಗ ವಾದನಕ್ಕೆ ಉತ್ತಮ ದೇಹದಾರ್ಡ್ಯ ಅತ್ಯವಶ್ಯವಲ್ಲವೇ? ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಮಾನ ಪ್ರೌಢಿಮೆ ಇದ್ದುದರಿಂದ ತಮ್ಮ ಕ್ಷೇತ್ರದಲ್ಲಿ ಹಾಗೂ ವ್ಯಾವಹಾರಿಕವಾಗಿ ಪ್ರಬಲರಾಗಿದ್ದರು. ಇವರ ಬಳಿ ಅನೇಕ ಅತ್ಯಮೂಲ್ಯ ಗ್ರಂಥಗಳಿದ್ದು, ಆಳವಾದ ಅಧ್ಯಯನ ಮಾಡಿದ್ದರು.

ಇವರ ವಾದನದಲ್ಲಿ ಗಮನಿಸುವಂತಹ ಪ್ರಮುಖ ಅಂಶಗಳೆಂದರೆ, ಶುದ್ಧ ತಂಜಾವೂರು ಶೈಲಿಯ ವಾದನ ನುಡಿಸುವಿಕೆಯಲ್ಲಿ ನಿಖರತೆ, ನಾದ ಸೌಖ್ಯ, ಗಾಂಭೀರ್ಯ ಹಾಗೂ ಎಂತಹ ಕಚೇರಿಯನ್ನಾದರೂ ಕಳೆಗಟ್ಟಿಸುವುದು. ಅಂದಿನ ಕಾಲದಲ್ಲಿ ವೆಂಕಟೇಶ ದೇವರ್ ರವರ ಪಕ್ಕವಾದ್ಯದಲ್ಲಿ ಕಚೇರಿ ಮಾಡುವುದೇ ಗೌರವ ಎಂಬ ಮಟ್ಟಿಗೆ ಆಗಿತ್ತು. ಅವರ ಸಮಕಾಲೀನ ಹಾಗೂ ಹಿರಿಯ ವಿದ್ವಾಂಸರುಗಳಲ್ಲದೆ ಮದ್ರಾಸಿನಿಂದ ಮೈಸೂರು ಕಡೆಗೆ ಬರುತ್ತಿದ್ದ ಎಲ್ಲಾ ವಿದ್ವಾಂಸರುಗಳಿಗೂ ಅವರದೇ ಪಕ್ಕವಾದ್ಯ. ವೀಣೆಯನ್ನು ಉರ್ಧ್ವಮುಖವಾಗಿ ಇಟ್ಟುಕೊಂಡು ನುಡಿಸುತ್ತಿದ್ದ ಕಾರೈಕುಡಿ ಸಾಂಬಶಿವ ಅಯ್ಯರ್, ಗಾಯಕರಾಗಿದ್ದ ಅರಿಯಕ್ಕುಡಿ ರಾಮಾನುಜಯ್ಯಂಗಾರ್, ವಾಸುದೇವಾಚಾರ್ಯರು ಹಾಗೂ ಇತರೆ ವಿದ್ವಾಂಸರುಗಳಿಗೆ ಪಕ್ಕವಾದ್ಯ ನುಡಿಸುತ್ತಿದ್ದರು. ಸಂಗೀತ ರತ್ನ ಟಿ. ಚೌಡಯ್ಯ ನವರಿಗೂ  ವೆಂಕಟೇಶ ದೇವರ್ ರವರಿಗೂ ಬಹಳ ಸ್ನೇಹ ಹಾಗೂ ನೂರಾರು ಕಚೇರಿಗಳನ್ನು ಜೊತೆಯಲ್ಲಿ ಮಾಡಿದರು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜೊತೆ ಇವರ ಹಾಗೂ ಗೋಟುವಾದ್ಯ ನಾರಾಯಣ ಅಯ್ಯಂಗಾರ್ಯರ ಜೋಡಿ ಪ್ರಮಾಣ ಯಾವಾಗಲೂ ಇರುತ್ತಿದ್ದುದು ಸಂಸ್ಥಾನಕ್ಕೆ ಇವರ ಮೇಲೆ ಇದ್ದಕ ವಿಶ್ವಾಸ ಮತ್ತು ಗೌರವದ ಪ್ರತೀಕ. ಚಿಕ್ಕರಾಮರಾಯರು, ಬಿಡಾರಂ ಕೃಷ್ಣಪ್ಪನವರು ಹಾಗೂ ವಾಸುದೇವಾಚಾರ್ಯರಿಗೆ ಇವರ ಮೇಲೆ ಬಹಳ ಪ್ರೀತಿ.

ವೆಂಕಟೇಶ  ದೇವರ್ ರವರ ಮತ್ತೊಂದು ವೈಶಿಷ್ಟ್ಯತೆಯೆಂದರೆ ಪಲ್ಲವಿ ನುಡಿಸುವಿಕೆ. ಬೆಂಗಳೂರು ಎಸ್‌. ಚಂದ್ರಪ್ಪನವರಿಗೂ ಇವರಿಗೂ ಬಹಳ ಸ್ನೇಹ. ಚಂದ್ರಪ್ಪನವರಿಗೆ ಪಲ್ಲವಿ ವಿನ್ಯಾಸದಲ್ಲಿ ತಂತ್ರ ಕೌಶಲ್ಯ ಬೆಳೆಸುವಿಕೆಯಲ್ಲಿ ದೇವರ್ ರವರ ಪಾತ್ರ ಹಿರಿದು. ಚಂದ್ರಪ್ಪನವರಿಗೆ ಅವಧಾನ ಪಲ್ಲವಿ, ನಡೆಭೇದ ಹಾಗೂ ಅಷ್ಟೋತ್ತರ ತಾಳದಲ್ಲಿ ಪಲ್ಲವಿ ಹಾಡುವ ಕ್ರಮಗಳನ್ನು ಹೇಳಿಕೊಟ್ಟು ಚಂದ್ರಪ್ಪನವರನ್ನು ಪಲ್ಲವಿ ಚಂದ್ರಪ್ಪನವರನ್ನಾಗಿ ಮಾಡಿದ ಖ್ಯಾತಿ ಇವರದು. ಆದರೆ ಈ ವಿಷಯ ಯಾರಿಗೂ ಹೇಳುತ್ತಿರಲಿಲ್ಲವೆಂಬುದರಲ್ಲಿ ಇವರ ದೊಡ್ಡತನ ಕಾಣುತ್ತದೆ.

ಇತ್ತೀಚಿನ ಕಚೇರಿಗಳಲ್ಲಿ ಕಾಣದೇ ಇರುವ ‘ಕೊನಗೋಲು’ ಸಂಪ್ರದಾಯದಲ್ಲಿ ಇವರು ಸಿದ್ಧಹಸ್ತರಾಗಿದ್ದರು. ಪೂರ್ಣ ಕಚೇರಿಗೆ, ಮೃದಂಗಕ್ಕೆ ಸರಿಸಮನಾಗಿ ಕೊನೆಗೋಲು ಹೇಳುತ್ತಿದ್ದರು. ೧೯೬೦ರಲ್ಲಿ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿ ವಿದ್ವತ್‌ ಸಭೆಯಲ್ಲಿ ಪಲ್ಲವಿ ಚಂದ್ರಪ್ಪನವರು ನೀಡಿದ ಪಲ್ಲವಿ ಪ್ರಾತ್ಯಕ್ಷಿಕೆಗೆಕ ಇವರ ಕೊನಗೋಲು ಹಾಗೂ ಇವರ ಶಿಷ್ಯ, ವಿದ್ವಾನ್‌ ವಿ. ನಾಗಭೂಷಣಾಚಾರ್ ರವರ ಮೃದಂಗ ಅಪಾರ ವಿದ್ವನ್ಮನ್ನಣೆಗೆ ಪಾತ್ರವಾಯಿತು.

ದೇವರ್ ರವರ ಮತ್ತೊಂದು ಗುರುತಿಸಬಹುದಾದ ಅಂಶವೆಂದರೆ ಗುಣಗ್ರಾಹ್ಯತೆ ಹಾಗೂ ಸಹ ಸಂಗೀತ ವಿದ್ವಾಂಸರಿಗೆ ಗೌರವ ತೋರಿಸುವುದು. ಇದಕ್ಕೆ ಉದಾಹರಣೆ ಎಂಬಂತೆ ಇವರ ತಂದೆಯವರೊಡನೆ ಪಂಥದಲ್ಲಿ ಸೋತಿದ್ದ ಪಳನಿ ಮುತ್ತಯ್ಯ ಪಿಳ್ಳೆಯವರನ್ನು ಕರೆಯಿಸಿ ವಿದ್ವಾನ್‌ ತಿರುಪತಿ ನರಸಿಂಹಲು ನಾಯುಡು (ನಾಯನಾ ಪಿಳ್ಳೆ ಶಿಷ್ಯರು) ರ ಜೊತೆ ಪಕ್ಕವಾದ್ಯ ಕಚೇರಿ ಏರ್ಪಡಿಸಿ ಸತ್ಕರಿಸಿದ್ದು ಶ್ಲಾಘನಾರ್ಹ. ಅಂದು ನರಸಿಂಹಲುನಾಯುಡುರವರು ಅದೇ ಮಿಶ್ರ ನಡೆ ಪಲ್ಲವಿಯನ್ನು ಚೌಕಕಾಲದಲ್ಲಿ ಹಾಡಿದ್ದು ವಿಶೇಷ. ಮುಕ್ತ ಕಂಠಗಳಲ್ಲಿ ಹೊಗಳಿ ಸಭಾ ಸನ್ಮಾನ ಮಾಡಿದರು. ದೇವರ್ ರವರು ಗುಣ ಗ್ರಾಹಿ. ತಮಗಿಂತ ಹಿರಿಯ ವಿದ್ವಾಂಸರ ಕಚೇರಿಗಳನ್ನು ಕೇಳುತ್ತಿದ್ದರು. ಜೊತೆಗೆ ಉತ್ತಮ ಅಂಶಗಳ ಬಗ್ಗೆ ಶ್ಲಾಘಿಸುತ್ತಿದ್ದರು. ಇವರ ಮೇಲೆ ಬಹಳ ಪ್ರಭಾವ ಬೀರಿದ ವಿದ್ವಾಂಸರೆಂದರೆ ಅಳಗೂ ನಂಬಿಯಾ ಪಿಳ್ಳೆ, ಮೃದಂಗ ನಾರಾಯಣ ಸ್ವಾಮಿ ಅಪ್ಪ ಹಾಗೂ ಪುದುಕ್ಕೋಟ್ಟೈ ದಕ್ಷಿಣಾಮೂರ್ತಿ ಪಿಳ್ಳೆಯವರು.

ಇಂದಿನ ಕರ್ಣಾಟಕದ ಬಹು ಸಂಖ್ಯಾತ ಶ್ರೇಷ್ಠ ಮೃದಂಗ ವಾದಕರು ಇವರ ಪರಂಪರೆಗೆ ಸೇರಿದವರು. ಇವರ ಶಿಷ್ಯರಲ್ಲಿ ಪ್ರಮುಖರು ಎಂ.ಎಸ್‌. ರಾಮಯ್ಯ, ಸೋಸಲೆ ಶೇಷಗಿರಿದಾಸ್‌, ನಂಜನಗೂಡು ಸೀತಾರಾಮಶಾಸ್ತ್ರಿ, ವರದಾಚಾರ್, ಕಾಸರಗೋಡು ಬಾಬುರೈ, ಶಂಕರನಾರಾಯಣ ಹಾಗೂ ವಿ.ನಾಗಭೂಷಣಾಚಾರ್. ಶಿಷ್ಯರಲ್ಲಿ ಅಪಾರ ಪ್ರೀತಿ ಇದ್ದರೂ ಅಶಿಸ್ತನ್ನು ಎಂದಿಗೂ ಕ್ಷಮಿಸುತ್ತಿರಲಿಲ್ಲವಾದ್ದರಿಂದ ಇವರಲ್ಲಿ ಪಾಠ ಕಲಿಯುವುದೆಂದರೆ ಕಠಿಣ ಪರೀಕ್ಷೆಯೇ ಸರಿ. ತಮ್ಮ ಶಿಷ್ಯರ ಕಚೇರಿ ಎಲ್ಲಿಯಾದರೂ ಇದ್ದರೆ ಸ್ನೇಹಿತರಿಗೆಲ್ಲರಿಗೂ ಹೇಳಿ ತಾವೂ ಹೋಗಿ ಕುಳಿತು ಕೇಳಿ ಆನಂದಿಸುತ್ತಿದ್ದರು. ಇವರ ಆಪ್ತ ಶಿಷ್ಯರಲ್ಲಿ ಒಬ್ಬರಾದ ಶಂಕರನಾರಾಯಣ ಎಂಬುವರು ಪ್ರತಿಭಾನ್ವಿತ. ತಮ್ಮ ಗುರುಗಳಂತೆ ಹಟ ಯೋಗ ಮಾಡಲು ಹೋಗಿ ಮಹೋದರ ಎಂಬ ಖಾಯಿಲೆಗೆ ಬಲಿಯಾಗಿದ್ದನ್ನು ತಮ್ಮ ಕೊನೆಯವರೆಗೂ ನೆನೆಸಿಕೊಂಡು ಮರುಗುತ್ತಿದ್ದರು. ತಾವು ಕೊನಗೋಲು ಮಾಡುತ್ತಾ ಹಾಗೂ ಖಂಜರಿ ನುಡಿಸುತ್ತಾ ಶಿಷ್ಯರೊಡನೆ ಮೃದಂಗ ನುಡಿಸಲು ಹೇಳಿ ನೂರಾರು ಕಚೇರಿಗಳನ್ನು ಮಾಡಿ ಕಚೇರಿ ತಂತ್ರಗಳನ್ನು ಶಿಷ್ಯರಿಗೆ ಕಲಿಸುತ್ತಿದ್ದರು.

ಲಕ್ಷ್ಯ ಲಕ್ಷಣಗಳೆರಡರಲ್ಲೂ ಬಿಗಿ ಹಿಡಿತವಿದ್ದ ಕಾರಣ ಕೆಲವೊಮ್ಮೆ ಹೊಸ ಅಂಶಗಳ ಪ್ರಯೋಗ ಮಾಡಲು ಪ್ರಯತ್ನಿಸುತ್ತಿದ್ದರು. ಉದಾಹರಣೆಗೆ, ಮೈಸೂರು ಟಿ. ಚೌಡಯ್ಯನವರು ಏರ್ಪಡಿಸಿದ್ದ ಸಂಗೀತ ಸಮ್ಮೇಳನವು ಬಿಡಾರಂ ಕೃಷ್ಣಪ್ಪನವರ ಮಂದಿರದಲ್ಲಿ ನಡೆಯುತ್ತಿತ್ತು. ಆಗ ವಿದ್ವತ್‌ ಸಭೆಯಲ್ಲಿ ಏಳು ತಾಳಗಳ ಅವಧಾನ ತನಿಯಾವರ್ತನವನ್ನು ಮೃದಂಗದಲ್ಲಿ ನಾಗಭೂಷಣಾಚಾರ್ ಹಾಗೂ ಕೊನಗೋಲು ಮತ್ತೊಬ್ಬ ಶಿಷ್ಯೆ ಪ್ರೇಮರವರ ಜೊತೆ ನಡೆಸಿದ್ದು ಹಾಗೂ ಸಿಂಹನಂದನ ತಾಳದ ಪ್ರಾತ್ಯಕ್ಷಿಕೆ ನೀಡಿದ್ದು ಅವಿಸ್ಮರಣೀಯ. ಅಂದಿನ ವಿದ್ವಾಂಸರುಗಳು ವಿಸ್ಮಿತರಾಗಿ ಪ್ರಶಂಸಿಸಿದ್ದು ಇಂದಿಗೂ ದಾಖಲೆಗೆ ಅರ್ಹ. ಇದೆಲ್ಲಕ್ಕೂ ಮಿಗಿಲಾಗಿ ಕೃಷ್ಣರಾಜ ಒಡೆಯರ ಸಮ್ಮುಖದಲ್ಲಿಕ ಎರಡು ಕೈ ಹಾಗೂ ಎರಡು ಪಾದಗಳಲ್ಲಿ ಪ್ರತ್ಯೇಕ ತಾಳಗಳಲ್ಲಿ ಅವಧಾನ ಮಾಡಿ ಮಹಾರಾಜರ ಪ್ರಶಂಸೆಗೆ ಪಳಗಾಗಿದ್ದು ಉಲ್ಲೇಖಾರ್ಹ. ಇವರ ನಿಷ್ಠುರತೆ ಹಾಗೂ ಸಿದ್ಧಾಂತಗಳು ಬಹುಶಃ ಸ್ವಲ್ಪಮಟ್ಟಿಗೆ ಇವರ ವ್ಯಾಪ್ತಿಯನ್ನು ಮಿತಿಗೊಳಿಸಿತೇ ಎಂದು ಅನ್ನಿಸುತ್ತದೆ. ಕಚೇರಿ ಕೇಳಿಕೊಂಡು ಎಂದಿಗೂ ಯಾವ ವ್ಯವಸ್ಥಾಪಕರ ಬಳಿ ಹೋದವರಲ್ಲ ಅಥವಾ ಇತರ ವಿದ್ವಾಂಸರನ್ನು ಸಂಪರ್ಕಿಸುತ್ತಿರಲಿಲ್ಲ. ಮನಸ್ಸಿಲ್ಲದಿದ್ದರೆ ಯಾವುದೇ ಕಚೇರಿಗೆ ಒಪ್ಪಿಕೊಳ್ಳುತ್ತಿರಲಿಲ್ಲ. ಸಿದ್ಧಾಂತದೊಡನೆ ಎಂದಿಗೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಸಿದ್ಧಾಂತದೊಡನೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಆದರೆ ಶಿಷ್ಯರನ್ನು ಪರಿಚಯಿಸುವುದರಲ್ಲಿ ಸಂಕೋಚ ಇಟ್ಟುಕೊಳ್ಳುತ್ತಿರಲಿಲ್ಲ. ಕೆಲವು ಶಿಷ್ಯರನ್ನು ಆಕಾಶವಾಣಿಗೆ ಸೇರಿಸಿದ್ದು ಹಾಗೂ ಆ ಸ್ಥಾನಕ್ಕೆ ಪರಿಚಯಿಸಿ ಸೇರಿಸಿದ್ದೂ ಅದೇ ರೀತಿ. ೫) ಇವರಲ್ಲಿ ಪ್ರಮುಖರು, ನಂಜನಗೂಡು ಸೀತಾರಾಮ ಶಾಸ್ತ್ರಿಗಳು, ಸೋಸಲೆ ಶೇಷಗಿರಿದಾಸ್‌, ಎಂ.ಎಸ್‌. ರಾಮಯ್ಯನವರು ಆಕಾಶವಾಣಿಯಲ್ಲಿದ್ದರು. ವೈಯ್‌ಆಪುರಿದೇವರ್ ಹಾಗೂ ಸೀತಾರಾಮಶಾಸ್ತ್ರಿಗಳನ್ನು ಪ್ರಥಮತಃ ಅರಮನೆಗೆ ಪರಿಚಯಿಸಿ ಕಾಲಾನುಕ್ರಮದಲ್ಲಿ ಆಕಾಶವಾಣಿಗೆ ಸೇರಿಸಿದರು. ವರದಾಚಾರ್ ಧಾರವಾಡದ ಆಕಾಶವಾಣಿಯಲ್ಲಿ ಮೃದಂಗ ಕಲಾವಿದರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಮೈಸೂರು ಆಕಾಶವಾಣಿ ಪ್ರಾರಂಭವಾದದ್ದು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಒಂದು ಸಂಗತಿ. ಇದು ಪ್ರಾರಂಭವಾದದ್ದು ಮೈಸೂರು ವಾಸುದೇವಚಾರ್ಯರ ಹಾಡುಗಾರಿಕೆಯೊಂದಿಗೆ, ಅಂದಿನ ಕಚೇರಿಯಲ್ಲಿ ಪಕ್ಕವಾದ್ ಯದಲ್ಲಿ, ವಿದ್ವಾನ್‌ ಎಚ್‌.ವಿ. ರಾಮರಾವ್‌ ಪಿಟೀಲು ಮತ್ತು ದೇವರ್ ರವರು ಮೃದಂಗದಲ್ಲಿ ಭಾಗವಹಿಸಿದ್ದರು.

ಇವರನ್ನು ಅನೇಕ ಸಂಘ ಸಂಸ್ಥೆಗಳು ಸತ್ಕರಿಸಿದ್ದುವು. ಅದರಲ್ಲಿ ೧೯೬೨ರಲ್ಲಿ ಮೈಸೂರಿನ ಸಾರ್ವಜನಿಕ ನಾಗರಿಕ ಸಮಿತಿ ‘ನಾದಪ್ರವೀಣ’ ಎಂಬ ಬಿರುದು ನೀಡಿ ಸತ್ಕರಿಸಿದುದು ಮುಖ್ಯವಾದುದು.

ಸಂಗೀತ ಕ್ಷೇತ್ರದಲ್ಲಿ ಹೀಗಿದ್ದ ದೇವರ್ ರವರ ವೈಯಕ್ತಿಕಕ ಜೀವನ ರೋಚಕವಾಗಿದ್ದಿತು. ಯಾರಾದರೂ ಸಾಧು ಸಂತರು ಸಿಕ್ಕಿದರೆ, ಅವರ ಹಿಂದೆಯೇ ಹೋಗಿಕ ಅನೇಕ ದಿನಗಳು ನಾಪತ್ತೆಯಾಗುತ್ತಿದ್ದರು. ಅಪಾರ ದೈವಭಕ್ತರು ಹಾಗೂ ಧಾರ್ಮಿಕರು. ದಿನಕ್ಕೆ ಎರಡುಬಾರಿ ಮಡಿ ಬಟ್ಟೆ ಬದಲಿಸುತ್ತಿದ್ದರಂತೆ.

ಪರಿಪಕ್ವ ಜೀವನವನ್ನು ನಡೆಸುತ್ತಿದ್ದ ಘಟ್ಟದಲ್ಲಿ ಶ್ರೀಯುತರು ಕೇವಲ ಮೂರು ದಿನಗಳ ಅಲ್ಪ ಅನಾರೋಗ್ಯದಿಂದ ಬಳಲಿ, ೧೯೬೩ ನೇ ಇಸವಿ ಭಾದ್ರಪದ ಶುದ್ಧ ನವಮಿಯಂದು, ಹೃದಯಾಘಾತದಿಂದ ಮರಣ ಹೊಂದಿದರು. ಅಂತ್ಯಕಾಲದವರೆಗೂ ಶ್ರೀಯುತರ ಸೇವೆಯನ್ನು ಸಂಪೂರ್ಣ ಮಾಡಿದ ಆದರ್ಶ ಭಾರತೀಯ ನಾರಿಮಣಿ ಇವರ ಮೂರನೆಯ ಪತ್ನಿ ಪುಟ್ಟಮ್ಮ. ಅಂತಯೇ ಪುತ್ರ ಸ್ಥಾನೀಯರಾಗಿ ಸೇವೆ ಮಾಡುವ ಸುಯೋಗ ದೊರೆತದ್ದು ಇವರ ಆಪ್ತ ಶಿಷ್ಯರಾದ ವಿ. ನಾಗಭೂಷಣಾಚಾರ್ಯರಿಗೆ. ೬ ( ಇವರು ಮೈಸೂರಿನ ಹಿರಿಯ ವಿದ್ವಾಂಸರಲ್ಲಿ ಒಬ್ಬರಾಗಿದ್ದು ಮೊದಲು ೧೯೫೬-೬೭ರವರೆಗೆ ಮೃದಂಗ ಆಸ್ಥಾನ ವಿದ್ವಾಂಸರಾಗಿದ್ದು ನಂತರ ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲೆಗಳ ಕಾಲೇಜಿನಲ್ಲಿ ಮೃದಂಗ ಪ್ರಾಧ್ಯಾಪಕರಾಗಿ ಸುಮಾರು ೩೦ ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಇವರು, ದೇವರ್ ವಂಶದ ಸಂಪ್ರದಾಯ ಮೃದಂಗ ವಾದನವೇ ಅಲ್ಲದೆ, ಮೃದಂಗಗಳಿಗೂ ಸಹ ಉತ್ತರಾಧಿಕಾರಿಗಳಾಗಿದ್ದಾರೆ. ಮುತ್ತುಸ್ವಾಮಿದೇವರ್ ನುಡಿಸುತ್ತಿದ್ದ ಮೃದಂಗಗಳು ಇಂದಿಗೂ ಇವರ ಬಳಿ ಉಳಿದಿರುವುದು ಸಂಗೀತ ಕ್ಷೇತ್ರದ ಪುಣ್ಯ.) ದೈಹಿಕವಾಗಿ ಮರೆಯಾದರೂ, ತಮ್ಮನ್ನೂ ಮೃದಂಗದ ಮೂಲಕ, ಶಿಷ್ಯರ ಮೂಲಕ ಇಂದಿಗೂ ಜೀವಂತವಾಗಿರುವ ಮೃದಂಗದ ಟಿ.ಎಂ. ವೆಂಕಟೇಶ್‌ ದೇವರು ಚಿರಂಜೀವಿಗಳು.