ಟಿ. ನರಸಿಂಹ ಶಾಸ್ತ್ರಿ – ಸುಬ್ಬಲಕ್ಷಮ್ಮ ದಂಪತಿಗಳ ಸುಪುತ್ರಿಯಾಗಿ ಮೈಸೂರಿನಲ್ಲಿ ೨೩-೪-೧೯೪೯ ರಂದು ಜನಿಸಿರುವ ಪದ್ಮ ಲಕ್ಷ್ಯ- ಲಕ್ಷಣ ವಿಚಕ್ಷಣೆಯಾಗಿ ಇಂದು ಸಂಗೀತ ಕ್ಷೇತ್ರದಲ್ಲಿ ಆದರಣೀಯರಾಗಿದ್ದಾರೆ.

ವಿದುಷಿ ಸುಶೀಲಮ್ಮ ಪ್ರೊ. ಎಂ.ವಿ. ರತ್ನ ಪ್ರೊ. ಗೌರಿ ಕುಪ್ಪುಸ್ವಾಮಿ, ಪ್ರೊ. ಬಿ.ಎಸ್‌. ವಿಜಯರಾಘವನ್‌ ಮತ್ತು ಪ್ರೊ.ವಿ. ರಾಮರತ್ನಂ ಅವರುಗಳಲ್ಲಿ ಸಂಗೀತ ಶಿಕ್ಷಣ ಹೊಂದಿ ಪದವೀಧರರಾಗಿ ಬಿ.ಎಡ್‌. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ‘ಶ್ರೀ ತ್ಯಾಗರಾಜರ ಕೃತಿಗಳಲ್ಲಿ ಸಂಗೀತ ಮತ್ತು ಭಕ್ತಿ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮಹಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ.

ಸಂಗೀತ ಬೋಧನೆ, ಸ್ನಾತಕೋತ್ತರ ಪದವಿ ತರಗತಿಗಳಿಗೆ ಶಾಸ್ತ್ರ ಬೋಧನೆ ಮಾಡುತ್ತ ಮೂರು ದಶಕಗಳಿಗೂ ಮೀರಿ ಅಧ್ಯಾಪಕಿ, ಪ್ರವಾಚಕಿ, ಪ್ರಾಧ್ಯಾಪಕಿ ವಿಭಾಗದ ಮುಖ್ಯಸ್ಥೆ – ಹೀಗೆ ಹಲವು ಸ್ತರಗಳಲ್ಲಿ ಸೇವೆ ಸಲ್ಲಿಸಿರುವ ಪದ್ಮಾ ಅವರ ಕೊಡುಗೆ ಗಣನೀಯ, ಇದಲ್ಲದೆ ಲಲಿತ ಕಲಾ ಮಂಡಳಿಯ ಅಧ್ಯಕ್ಷೆಯಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶಕ ಕಲೆಗಳ ಮಂಡಳಿಯಲ್ಲಿ ಪ್ರವಾಚಕಿಯಾಗಿ, ಆಯ್ಕೆ ಸಮಿತಿಯ ಸದಸ್ಯೆಯಾಗಿ ಇವರ ಸೇವೆ ಬಹುಮುಖವಾದುದು.

ಸಂಗೀತ ಶಿಕ್ಷಣ ಶಿಬಿರ-ಕಾರ್ಯಾಗಾರಗಳಲ್ಲಿ ಗಾಯನ-ಶಾಸ್ತ್ರಗಳನ್ನು ಕುರಿತು ಬೋಧಪ್ರದ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ರಾಜ್ಯದಾದ್ಯಂತ ಹಲವೆಡೆ ಇವರ ಸಂಗೀತ ಕಾರ್ಯಕ್ರಮಗಳು ನಡೆದಿವೆ. ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾ ಪ್ರಬಂಧದ ಜೊತೆಗೆ ಜಾವಳಿಗಳು, ತ್ಯಾಗರಾಜ ಪಿಟೀಲು ವಿದ್ವಾನ್‌ ವೆಂಕಟಸುಬ್ಬಯ್ಯ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಡಾ|| ರಾಜ್‌ಕುಮಾರ್ ಸನ್ಮಾನ ಸಮಿತಿಯ ಚಿನ್ನದ ಪದಕ, ಕರ್ನಾಟಕ ರಾಜ್ಯ ಪ್ರಶಸ್ತಿ, ನಗದುದ ಬಹುಮಾನಗಳನ್ನು ಗಳಿಸಿರುವ ಶ್ರೀಮತಿಯವರನ್ನು ಅನೇಕ ಸಂಸ್ಥೆಗಳು ಸನ್ಮಾನಿಸಿವೆ. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ೨೦೦೩-೦೪ರಲ್ಲಿ ಇವರಿಗೆ ಲಭಿಸಿದೆ.