೧೯೩೯ರಲ್ಲಿ ಜನಿಸಿದ ಶ್ರೀ ಟಿ. ಎನ್. ಸೋಮಶೇಖರ್ ನಮ್ಮ ನಾಡಿನ ಹಿರಿಯ ನಾಟ್ಯಾಚಾರ್ಯರು. ಶ್ರೀ ಕೆ.ಎಸ್. ರಾಜಗೋಪಾಲ್, ಎಂ.ಚನ್ನವೀರಪ್ಪ, ನಂಜನಗೂಡು ನಾಗರತ್ನಮ್ಮ, ಕೆ.ವೆಂಕಟಲಕ್ಷ್ಮಮ್ಮ ಮುಂತಾದ ಗಣ್ಯರಿಂದ ನೃತ್ಯದಲ್ಲಿ ವಿದ್ವಾನ್ ರಾಮಚಂದ್ರ, ವಿದ್ವಾನ್ ಎಂ.ನಾರಾಯಣ, ವಿದ್ವಾನ್ ಎಸ್.ಎನ್. ಮರಿಯಪ್ಪನವರಲ್ಲಿ ಶಾಸ್ತ್ರೀಯ ಸಂಗೀತದಲ್ಲಿ, ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮಿಯವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸದಲ್ಲಿ ಸೋಮಶೇಖರ್ ಅವರಿಗೆ ಶಿಕ್ಷಣವಾಗಿದೆ.

ಕಳೆದ ೪೦ ವರ್ಷಗಳಿಂದ ದೇಶಾದ್ಯಂತ ಶಾಸ್ತ್ರೀಯ ಹಾಗೂ ಜಾನಪದ ನೃತ್ಯ ಪ್ರದರ್ಶನ ನೀಡುತ್ತಾ ಬಂದಿರುವ ಶ್ರೀಯುತರು ಮೋಹಿನೀ ಭಸ್ಮಾಸುರ,ವಿಶ್ವಾಮಿತ್ರ ಮೇನಕೆ, ಚಂದ್ರಗ್ರಹಣ, ಗರುಡನಾಗ, ಮೋದಕಾಮೃತಕ, ದಕ್ಷಯಜ್ಞ, ಮಹಿಷಾಸುರ ಮರ್ಧೀನಿ, ಮನ್ಮಥ ದಹನ, ದತ್ತರೂಪಕ ಮೊದಲಾದ ನೃತ್ಯ ನಾಟಕಗಳನ್ನು ಸಂಯೋಜಿಸಿದ್ದಾರೆ. ಕೆಲವು ನೃತ್ಯ ನಾಟಕಗಳನ್ನು ಸ್ವತಃ ತಾವೇ ರಚಿಸಿದ್ದಾರೆ. ಜೊತೆಗೆ ಕೆಲವು ಚಲನಚಿತ್ರಗಳಿಗೂ ಶ್ರೀಯುತರು ನೃತ್ಯ ನಿರ್ದೇಶನ ಮಾಡಿದ್ದಾರೆ.

ಇವರ ನೃತ್ಯ ಶಾಲೆಯಲ್ಲಿ ಕಲಿತ ಅನೇಕ ಯುವ ನೃತ್ಯ ಕಲಾವಿದರು ಮಾಧ್ಯಮದಲ್ಲಿ ಹೆಸರು ಗಳಿಸುತ್ತಿದ್ದಾರೆ. ಅಲ್ಲದೆ ಇವರ ನೃತ್ಯ ಸೇವೆಯನ್ನು ಗುರುತಿಸಿ ಮೈಸೂರಿನ ಕನ್ನಡ ಕ್ರಾಂತಿ ದಳದವರು ’ನಾಟ್ಯ ಶೇಖರ’ ಎಂಬ ಬಿರುದು ನೀಡಿ ಸನ್ಮಾನಿಸಲಾಗಿರುವ ಶ್ರೀಯುತರಿಗೆ ೨೦೦೦-೦೧ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.