ಟಿ. ಎಲ್. ವಾಸವಾನಿ —ಸಾಧು ವಾಸವಾನಿ ಎಂದು ಭಾರತ ಮತ್ತು ಪಾಕಿಸ್ತಾನಗಳಲ್ಲಿ ಜನರಿಗೆ ಪರಿಚಿತವಾದ ಹಿರಿಯರು. ವಿದ್ಯಾರ್ಥಿ ದೆಸೆಯಲ್ಲೆ ಪ್ರತಿಭೆಯನ್ನು ತೋರಿದ ಇವರು ಪ್ರಾಧ್ಯಾಪಕರಾಗಿದ್ದಾಗಲೂ ಸಹ ಮಾನವರ ಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳಲು ಹಂಬಲಿಸಿದರು. ಹಣ, ಪದವಿ, ಕೀರ್ತಿಗಳನ್ನು ತ್ಯಜಿಸಿ ಪರಿಶುದ್ಧವೂ ಸಾರ್ಥಕವೂ ಆದ ಬಾಳನ್ನು ಬಾಳಿದರು.

ಟಿ. ಎಲ್ ವಾಸವಾನಿ

ಸಿಂಧ್ ಪ್ರಾಂತ ಹಲವು ವರ್ಷಗಳ ಹಿಂದೆ ಭಾರತದ ಭಾಗವಾಗಿತ್ತು. ಈಗ ಅದು ನಮ್ಮ ದೇಶದಲ್ಲಿಲ್ಲ. ಅದು ಹಲವು ಮಹಾತ್ಮರ ಜನ್ಮಭೂಮಿ.

ತಂದೆ ತಾಯಿ

ಸಿಂಧದ ಹೈದರಾಬಾದಿನಲ್ಲಿ ಹೆಚ್ಚು ಅಗಲವಿಲ್ಲದ ಗಲ್ಲಿಗಳಲ್ಲಿ ಒಂದು ಮಣ್ಣಿನ ಕಿರುಮನೆ. ಅದು ಲೀಲಾರಾಂ ವಾಸವಾನಿಯವರದು. ೧೮೭೯ ನೇ ಇಸವಿ ನವೆಂಬರ್ ತಿಂಗಳ ೨೫ ನೇ ತಾರೀಖು ಕಾರ್ತೀಕ ಏಕಾದಶಿ. ಆಗತಾನೆ ಕತ್ತಲೆ ಚದುರಿ ಹೊಂಬೆಳಕು ಆಕಾಶಕ್ಕೆ ಕಾಲಿರಿಸಿತ್ತು. ಲೀಲಾರಾಮನ ಹೆಂಡತಿ ವರುಂದೇವಿಗೆ ಮಗುವಾಯಿತು. ಮುದ್ದಾದ ಗಂಡು ಮಗು. ಪುರೋಹಿತರು ಸೂಚಿಸಿದ ಹೆಸರು ತನ್‌ವರ್. ಅಂದರೆ ದೃಢ, ಸಮತೋಲನಚಿತ್ತ ಶರೀರವುಳ್ಳವನು ಎಂದರ್ಥ. ಈ ಅರ್ಥ ಅಕ್ಷರಶಃ ಸತ್ಯವಾಯಿತು. ನಾಮಕರಣದಂದು ‘ತನ್‌ವರ್ ಲೀಲಾರಾಂ ವಾಸಾವಾನಿ’ ಎಂದು ಹೆಸರನ್ನು ಮೂರು ಸಲ ಸಾರಲಾಯಿತು. ‘ವಾಸವಾನಿ’ ಕುಲನಾಮ. ಈ ಕುಲನಾಮವೇ ಮುಂದೆ ಸಂತ ವಾಸವಾನಿಯವರ ನಿಜನಾಮವಾಯಿತು. ಆದರೆ ಅವರು ಸಹಿ ಮಾಡುತ್ತಿದ್ದುದು ಟಿ.ಎಲ್.ವಾಸವಾನಿ ಎಂದೇ.

ಲೀಲಾರಾಂ ರೈತ. ವರುಂದೇವಿ ದೈವಭಕ್ತೆ. ಗುರುನಾನಕರ ‘ಜಾಂಪ್ ಜೀ ಸಾಹಿಬ್’ ಗುರು ಅರ್ಜುನ ದೇವರ ಸುಖಮಾನೀ’ಗಳು ಆಕೆಗೆ ಕಂಠಸ್ಥ.  ಲೀಲಾರಾಂ ಕೂಡಾ ಕಾಳಿಕಾ ಮಾತೆಯ ಅನನ್ಯ ಭಕ್ತ. ಫಾರಸೀ ಭಾಷೆಯಲ್ಲಿ ಸಾಕಷ್ಟು ಪಾಂಡಿತ್ಯ ಗಳಿಸಿದ್ದರು. ತನ್‌ವರ್‌ನ ನಂತರ ಲೀಲಾರಾಂಳ ದಂಪತಿಗಳಿಗೆ ಒಂದು ಹೆಣ್ಣು, ಎರಡು ಗಂಡು ಮಕ್ಕಳಾದವು. ಹಿರಿಯವ ಪಹಲತ್, ಹೆಣ್ಣು ಪಾಪುರ್. ಅನಂತರದವರು ಮಂಗನ್ ಮತ್ತು ಆವತ್.

ಬಾಲ್ಯ

ತಂದೆ ತಾಯಿಗಳು ಮಕ್ಕಳನ್ನು ದೈವ ಭಕ್ತಿ, ಸಂತರ ಕತೆ. ಪುರಾಣ-ಇತಿಹಾಸಗಳ ಕತೆ ಹೇಳಿ ಶಿಸ್ತು, ದೈವಭಕ್ತಿಯ ವಾತಾವರಣದಲ್ಲಿ ಬೆಳೆಸಿದ್ದರು. ಮಗನಿಗೆ ವರುಂದೇವಿ ಭಕ್ತ ಧ್ರುವನ ಕತೆ ಹೇಳಿ ಹೇಳಿ ನಿದ್ದೆ ಮಾಡಿಸುತ್ತಿದ್ದರು.

ಬಾಲಕ ತನ್‌ವರ್‌ಗೆ ಪ್ರಾಣಿ ದಯೆ ಬಾಲ್ಯದಿಂದ ಬಂದುದು. ಚಿಟ್ಟೆಗಳನ್ನು ನೋಡುವುದೇ ಚಂದ. ಹಿಡಿಯಬಾರದು’ ಎಂದೇ ಅವನ ಅನ್ನಿಸಿಕೆ. ಪಾಠ ಶಾಲೆಯ ದಾರಿಯಲ್ಲಿದ್ದ ಮಾಂಸದಂಗಡಿಯಲ್ಲಿ ದಿನವೂ ಆಡು ಕುರಿಗಳನ್ನು ಕತ್ತರಿಸಿ ಸುಲಿದು ನೇತುಹಾಕು ತ್ತಿದ್ದುದನ್ನು ಕಂಡು ತನ್‌ವರ್ ‘ಅಯ್ಯೋ ಎಂದು ಮರುಗಿ ಮಾಂಸ ತಿನ್ನುವುದಿಲ್ಲವೆಂದು ಪ್ರತಿಜ್ಞೆಯನ್ನು ಮಾಡಿದ. ಆದರೆ ತಾಯಿ ತರಕಾರಿ ಬೇಯಿಸಿದಂತೆ ಮಾಂಸ ಬೇಯಿಸಿ ಬಡಿಸುತ್ತಿದ್ದಳು. ಒಮ್ಮೆ ಸಾರಿನಲ್ಲಿ ಎಲುಬಿನ ಚೂರೊಂದು ಕಾಣಿಸಿದಾಗ ತಾಯಿಯ ವಂಚನೆ ತಿಳಿದು ತನ್‌ವರ್ ಬಳಬಳನೆ ಅತ್ತುಬಿಟ್ಟ. ‘ನೀನು ನನಗೆ ಮೋಸ ಮಾಡುತ್ತಿ ಅಂತ ತಿಳಿದಿರಲಿಲ್ಲ’-ಎಂದು ಕಣ್ಣೀರು ಸುರಿಸಿದ. ತಾಯಿ ಮಮ್ಮಲ ಮರುಗಿದಳು. ‘ಕ್ಷಮಿಸಿಬಿಡು ಮಗೂ. ಇನ್ನೆಂದೂ ಹಾಗೆ ಮಾಡುವುದಿಲ್ಲ’ ಎಂದಳು. ಇನ್ನೊಮ್ಮೆ ಶಿವರಾತ್ರಿಯ ಉತ್ಸವದಲ್ಲಿ ಕಾಳಿಕಾ ದೇವಾಲಯದಲ್ಲಿಯೂ ಇಂಥದೇ ಪ್ರಸಂಗ ನಡೆಯಿತು. ಪೂಜೆಯ ನಂತರ ಪೂಜಾರಿ ಪ್ರಸಾದವೆಂದು ಮಾಂಸದ ಚೂರು ಹಂಚುತ್ತಾ ಬಂದ. ತನ್‌ವರ್ ಮಾಂಸದ ಚೂರಿಗೆ ಕೈ ನೀಡಲಿಲ್ಲ. ಜೊತೆಗಿದ್ದ ತಂದೆಗೆ ಕೋಪ ಬಂತು. ‘ದೇವರ ಪ್ರಸಾದ, ನಿರಾಕರಿಸ ಬಾರದು ತೆಗೆದುಕೋ’ ಎಂದರು ತನ್ವರ್ ಅಲುಗಾಡಲಿಲ್ಲ. ಎಲ್ಲರ ನೋಟ ತಂದೆ ಮಗನ ಕಡೆ ಹರಿಯಿತು. ಲೀಲಾರಾಂ ಫಟೀರನೆ ಮಗನ ಕೆನ್ನೆಗೆ ಬಾರಿಸಿ ’ನಡೆ ಹೊರಗೆ’ ಎಂದರು. ತನ್‌ವರ್ ಅಳುತ್ತಾ ಮನೆಗೆ ಬಂದ. ಜಾತ್ರೆಯ ಸಂದರ್ಭದಲ್ಲಿ ಮನೆಯವರೆಲ್ಲ ಮದ್ಯಪಾನ ಮಾಡುವುದು ಸಂಪ್ರದಾಯ. ತಂದೆ ಮಗನನ್ನು ರಮಿಸಿ ಸ್ವಲ್ಪ ಕುಡಿಯುವಂತೆ ಒತ್ತಾಯಿಸಿದರು. ಮಗ ತಾಯಿಯ ಕಡೆ ನೋಡಿದ. ತಾಯಿಯೂ ಸುಮ್ಮನಿದ್ದಳು. ತಂದೆಯ ಒತ್ತಾಯಕ್ಕೆ ಮಗ ಕುಡಿದರೂ ಮರುಕ್ಷಣ ವಾಂತಿ ಯಾಯಿತು.

ವಿದ್ಯಾರ್ಥಿ

ಬಾಲಕ ವಾಸವಾನಿಗೆ ತಾಯಿ ತಂದೆಯರ ಸಹವಾಸದಿಂದ ಪ್ರಾರ್ಥನೆಯಲ್ಲಿ ಅಚಲವಾದ ನಂಬಿಕೆ. ಸೂರ‍್ಯ ಕಿರಣಗಳಲ್ಲಿ ಅಪಾರ ಶಕ್ತಿ ಇದೆಯೆಂದು ತಿಳಿದ ನಂತರ ತಪ್ಪದೆ ಸೂರ‍್ಯ ನಮಸ್ಕಾರ ಮಾಡುತ್ತಲಿದ್ದ. ಧ್ರುವನ ತಪಸ್ಸು ಯಾವಾಗಲೂ ಕಣ್ಣ ಮುಂದೆ ಬರುತ್ತಿತ್ತು. ತರಗತಿಯಲ್ಲಿ ವಾಸಾವಾನಿ ಶಾಂತ, ಗಂಭೀರ, ಮೌನ. ಏನೋ ಯೋಚಿಸುತ್ತಲಿರುವಂತೆ. ತಾನಾಯಿತು, ತನ್ನ ಕೆಲಸವಾಯಿತು.

ಪ್ರಾಥಮಿಕ ಶಾಲೆಯ ಶಿಕ್ಷಣ ಮುಗಿಯುವಾಗ ಆಗತಾನೇ ಕಲ್ಕತ್ತೆಯಲ್ಲಿ ಶಿಕ್ಷಣ ಮುಗಿಸಿ ಬಂದಿದ್ದ ಹೀರಾ ನಂದರು ‘ಯೂನಿಯನ್ ಹೈಸ್ಕೂಲ್’ ಪ್ರಾರಂಭಿಸಿದ್ದರು. ಹೀರಾನಂದರು ಬ್ರಹ್ಮಸಮಾಜದ ಅನುಯಾಯಿ. ಹೋಮಿಯೋಪತಿ ವೈದ್ಯವನ್ನು ತಿಳಿದ ತತ್ವಜ್ಞಾನಿ. ಪ್ರೌಢ ಶಾಲೆಗೆ ಸೇರಲು ಬಂದ ತನ್‌ವರ್‌ನನ್ನು ಕಂಡ ಹೀರಾನಂದರು ಬಾಲಕನಲ್ಲಿರುವ ಪ್ರತಿಭೆಯ ಕಿರಣವನ್ನು ಗುರುತಿಸಿ ಆನಂದದಿಂದ ಸ್ವಾಗತಿಸಿದರು.

ಟಿ. ಎನ್. ವಾಸವಾನಿ ಶಾಲಾ ಬಾಲಕರಿಗೆ ನಾಯಕನಾಗಿ ಆಯ್ಕೆಯಾದ. ಪ್ರಾಮಾಣಿಕತೆ, ಸತ್ಯ ಪರಸ್ಪರ ಸ್ನೇಹದ ವರ್ತನೆ ಶಿಸ್ತು, ಪ್ರಾರ್ಥನೆಗಳ ನಿಯಮವನ್ನು ಇತರ ಹುಡುಗರಿಗೆ ಹೇಳುವುದು ಆತನ ಕೆಲಸ. ಈ ಪ್ರತಿಭಾವಂತ, ಉತ್ತಮ ಭಾಷಣಕಾರ, ಒಳ್ಳೆಯ ನಡತೆಯ ಬಾಲಕರನನ್ನು ಬಂದರವರಿಗೆಲ್ಲ ಪರಿಚಯ ಮಾಡಿ ಕೂಡುವುದೆಂದು ಹೀರಾನಂದರಿಗೆ ಹಿಗ್ಗು. ಆತನ ಇಂಗ್ಲೀಷ್ ಉಚ್ಚಾರಣೆ ಸ್ಪಷ್ಟ, ಮಧುರ. ಹೀರಾನಂದರಿಂದ ಆಕರ್ಷಿತನಾದ ವಾಸವಾನಿ ಸಂತರ ಜೀವನ ಚರಿತ್ರೆ, ಉಪದೇಶಗಳನ್ನು ಹೆಚ್ಚು ಓದತೊಡಗಿದ. ತನ್ನ ಕೊಠಡಿಯಲ್ಲಿ ಒಂದು ಬೆತ್ತ ಇರಿಸಿಕೊಂಡು ಮನಸ್ಸು ಕೆಟ್ಟದ್ದನ್ನು ಯೋಚಿಸಿದಾಗ ಚೆನ್ನಾಗಿ ಥಳಿಸಿಕೊಳ್ಳುತ್ತಿದ್ದ. ಹೀಗೆ ತನ್ನ ಮನಸ್ಸಿನ ಬಯಕೆಗಳನ್ನು ಹತೋಟಿಯಲ್ಲಿಸಿ ಕೊಂಡು ಇಚ್ಛಾಶಕ್ತಿ ಬೆಳೆಸುತ್ತಿದ್ದ.

ಸೇವೆಯ ಬಂಟರು

ಬಡವರನ್ನು, ಭಿಕ್ಷುಕರನ್ನು ಕಂಡರೆ ವಾಸವಾನಿಗೆ ಕನಿಕರ. ಶಾಲೆಗೆ ಬರುವ ದಾರಿಯಲ್ಲಿ ಸಾಲಾಗಿ ಕುಳಿತಿರುತ್ತಿದ್ದ ಭಿಕ್ಷುಕರಿಗೆ ರೊಟ್ಟಿ ಹಂಚುವ ‘ಬಾಲಕರ ಗುಂಪು’ ವಾಸವಾನಿಯ ಹಿರಿತನದಲ್ಲಿ ಸಿದ್ಧವಾಯಿತು. ಎಲ್ಲರೂ ತಮ್ಮ ತಮ್ಮ ಮನೆಗಳಿಂದ ಒಂದೆರಡು ಚಪಾತಿ,  ಸ್ವಲ್ಪ ಪಲ್ಯ ಹೆಚ್ಚಾಗಿ ತರುತ್ತಿದ್ದರು. ಹೀಗೆ ಹಂಚುವುದು ಹುಡುಗರಿಗೂ ಆನಂದ. ಅವರು ಹೆತ್ತವರೂ ಇದಕ್ಕೆ ಅಡ್ಡಿ ಮಾಡಲಿಲ್ಲ. ಹಾಗೇ ಈ ಹುಡುಗರ ಗುಂಪು ಕುಡಿತ, ಜೂಜುಗಳ ವಿರುದ್ಧವೂ ಕೊಗೆಬ್ಬಿಸಲು ನಿರ್ಧರಿಸಿತು. ಆನರ ಗಮನ ಸೇಳೆಯಲು ಹಲವು ತರದ ಪ್ರಚಾರ ಕಾರ್ಯ ಮಾಡಿತು.

ಶಾಲೆಯ ಯಾವ ಕಾರ‍್ಯಕ್ರಮವೂ ಟಿ. ಎಲ್. ವಾಸವಾನಿ ಇಲ್ಲದೆ ಆಗುತ್ತಿದ್ದಿಲ್ಲ. ಒಂದಲ್ಲ ಒಂದು ವಿಧದಲ್ಲಿ ಅವನ ಪಾಲು ಇರುತ್ತಿತ್ತು.

ತಂದೆ ಇನ್ನಿಲ್ಲ

೧೮೯೦ ರ ದೀಪಾವಳಿ. ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದ ಲೀಲಾರಾಂ ಚೇತರಿಸಿಕೊಂಡಿದ್ದರು. ದೀಪಾವಳಿಯ ಮಿಠಾಯಿಕೊಳ್ಳಲು ಅಂದು ವಾಸವಾನಿ ಮಿಠಾಯಿ ಅಂಗಡಿಗೆ ಹೋಗಿದ್ದ. ಸಕ್ಕರೆ ಮಿಠಾಯಿ ಕೊಂಡು ಬಾಯಿಗಿಡ ಬೇಕೆನ್ನುವಷ್ಟರಲ್ಲಿ ಯಾರೋ ಕೂಗಿ ಕರೆದಂತಾಯಿತು. ಮಿಠಾಯಿ ಅಲ್ಲೇ ಎಸೆದು ಓಡಿಬಂದ. ತಂದೆಯ ಹಾಸಿಗೆಯ ಸುತ್ತ ಜನ ನೆರೆದಿದ್ದರು. ಅಣ್ಣ, ಅಮ್ಮ ಅಳುತ್ತ ನಿಂತಿದ್ದರು. ತನ್ನ ಬಳಗವನ್ನೆಲ್ಲ ದಿಟ್ಟಿಸಿ ನೋಡಿದ. ಲೀಲಾರಾಂ ಕಣ್ಣುಮುಚ್ಚಿದ್ದರು. ಅವರು ತನ್‌ವರ್‌ನ ಕೈಹಿಡಿದು ಹೇಳಿದ ಕೊನೆಯ ಮಾತು-‘ನಿನ್ನ ಕೀರ್ತಿ ಪರಿಮಳದಂತೆ ಎಲ್ಲೆಲ್ಲೂ ಹರಡಲಿ’.

ತಂದೆ ಲೀಲಾರಾಮನ ಸಾವಿನಿಂದ ಕುಟುಂಬ ಪೋಷಣೆಯ ಹೊಣೆ ಹಿರಿಮಗ ಪಹಲತ್‌ನ ಮೇಲೆ ಬಂತು. ಅವರಾಗ ಪದವಿ ಪೂರ್ವ ಪರೀಕ್ಷೆಯಲ್ಲಿ ಪಾಸಾಗಿದ್ದರು. ಅಧ್ಯಾಪಕ ವೃತ್ತಿ ಗಿಟ್ಟಿಸಿಕೊಂಡು ಕರಾಚಿ ಯಲ್ಲಿ ಕೆಲಸಕ್ಕೆ ಸೇರಿದರು. ತಮ್ಮ ತನ್‌ವರ್‌ನನ್ನು ಕರಾಚಿಗೇ ಕರೆದೊಯ್ದರು. ಅಲ್ಲಿನ ಎನ್. ಜೆ .ಪಿ ಹೈಸ್ಕೂಲಿನಲ್ಲಿ ಟಿ. ಎಲ್. ವಾಸವಾನಿ ಸೇರಿದ. ಅಣ್ಣ ತಮ್ಮಂದಿರು ಒಂದು ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದರು. ಅಣ್ಣ ಕೆಲಸ ಮುಗಿಸಿ ಗೆಳೆಯರ ಜೊತೆ ಹರಟುತ್ತಾ ತಡವಾಗಿ ಬರುತ್ತಿದ್ದ. ತಮ್ಮ ಕೋಣೆಯಲ್ಲಿ ಒಬ್ಬನೇ ಕುಳಿತು ಧ್ಯಾನಾಸಕ್ತನಾಗು ತ್ತಿದ್ದ. ಓದು, ಬರವಣಿಗೆ, ಚಿಂತನೆಗಳಲ್ಲಿ ಮುಳುಗಿರುತ್ತಿದ್ದ.

ಕಾಲೇಜು ವಿದಾರ್ಥಿ

ಪ್ರೌಢಶಾಲೆಯ ಅಂತಿಮ ಪರೀಕ್ಷೆಯಲ್ಲಿ ಪಾಸಾ ದವರ ಹೆಸರಿನ ಸಾಲಿನಲ್ಲಿ ಟಿ. ಎಲ್. ವಾಸವಾನಿಯ ಹೆಸರು ಮೊದಲನೆಯದು. ಇಡಿಯ ಸಿಂಧ ಪ್ರಾಂತಕ್ಕೇ ಮೊದಲಿಗನಾಗಿ ಪಾಸಾಗಿದ್ದ. ಹಾಗಾಗಿ ವಿದ್ಯಾರ್ಥಿ ವೇತನ ದೊರೆತಿತ್ತು. ಪ್ರಧಾನಾಧ್ಯಾಪಕರೂ ಸಂತಸದಿಂದ ಹೊಗಳಿ ಹಲವು ಪುಸ್ತಕ ಉಡುಗೊರೆ ನೀಡಿದರು. ಯಾವುದಾದ ರೊಂದು ಉದ್ಯೋಗ ಪಡೆದು ತಾಯಿಗೆ ಸಹಾಯ ಮಾಡಬೇಕೆಂಬುದು ಮಗನ ಇಚ್ಛೆ. ‘ಅಮ್ಮಾ ನನಗೆ ಸಂನ್ಯಾಸಿಯಾಗಬೇಕೆಂಬ ಇಚ್ಛೆ’ ಆ ಮೂಲಕ ಮಾನವರ ಸೇವೆ, ದೇವರ ಧ್ಯಾನ ಮಾಡುವುದು ನನಗೆ ಇಷ್ಟ’ ಎಂದು ತಾಯಿಯೊಡನೆ ಒಮ್ಮೆ ತನ್‌ವರ್ ಅಂದರು. ಗಾಬರಿ ಗೊಂಡ ತಾಯಿ ‘ಎಂಥ ಮಾತಾಡುತ್ತೀ ? ನಿನ್ನನ್ನು ಸಂನ್ಯಾಸಿ ವೇಷದಲ್ಲಿ ನೋಡಿದರೆ ನಾನು ಎದೆಯೊಡೆದು ಸತ್ತೇನು ! ಅದನ್ನೆಲ್ಲ ಮರೆತುಬಿಡು. ನಾನು ಬದುಕಿರುವ ತನಕ ಆ ಯೋಚನೆ ಬೇಡ’ ಎಂದು ಕಣ್ಣೀರಿಟ್ಟಿದ್ದಳು. ಹಾಗಾಗಿ ಉದ್ಯೋಗ ಮಾಡುವ ಆಸೆ ಇತ್ತು. ಈಗ ಸ್ಕಾಲರ್ಶಿಪ್ ದೊರೆತ ಸಂಗತಿ ತಿಳಿದು ಕಾಲೇಜಿಗೆ ಹೋಗ ಬೇಕೆಂಬ ಆಸೆ ಬಲಿಯಿತು. ಆಗ ಹೈದರಾಬಾದಿನಲ್ಲಿ ಕಾಲೇಜು ಇರಲಿಲ್ಲ. ಹಾಗಾಗಿ ಕರಾಚಿಯ ಡಿ. ಜೆ. ಸಿಂಧ್ ಕಾಲೇಜಿಗೆ ಟಿ. ಎಲ್ ವಾಸವಾನಿ ೧೮೬೯ ರಲ್ಲಿ ಸೇರಿದರು.

ಪದವಿ ಪೂರ‍್ವ ತರಗತಿಯ ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲರು ಒಮ್ಮೆ ಒಂದು ವಿಷಯ ಕೊಟ್ಟು ಇಂಗ್ಲಿಷಿನಲ್ಲಿ ಪ್ರಬಂಧ ಬರೆಯಲು ಹೇಳಿದರು. ಪ್ರಬಂಧಗಳನ್ನು ಓದಿದ ಅವರು ಟಿ. ಎಲ್. ವಾಸವಾನಿಯನ್ನು ಕರೆಸಿದರು. ಅವರಿಗೆ ಈತನ ಪ್ರಬಂಧ ನಕಲು ಮಾಡಿದಿರಬಹುದೆಂಬ ಸಂಶಯ ಬಂದಿತ್ತು. ಟಿ. ಎಲ್. ವಾಸವಾನಿ ಪ್ರಿನ್ಸಿಪಾಲರ ಮುಂದೆ ವಿನಯವಾಗಿ ಬಂದು ನಿಂತ. ‘ನೀನು ಚೆನ್ನಾಗಿ ಓದಬೇಕು, ನಿನ್ನ ಕೈಬರಹ ಚೆನ್ನಾಗಿದೆ. ಆದರೆ ಮುಂದೆಂದೂ ಕಾಪಿ ಮಾಡಿ ಬರೆಯಬೇಡ’ ಎಂದರು. ಟಿ,ಎಲ್. ವಾಸವಾನಿಗೆ ತಣ್ಣೀರು ಎರಚಿದಂತಾಯಿತು. ಕಣ್ಣಲ್ಲಿ ನೀರು ಉಕ್ಕಿತು. ಕೆಲಕ್ಷಣ ಸುಮ್ಮನಾದರು. ಅನಂತರ ಧೈರ‍್ಯ ತಂದುಕೊಂಡು ‘ಸರ್, ನಾನು ವಿನಯ ಪೂರ‍್ವಕ ಹೇಳುವುದೇನೆಂದರೆ ನಾನು ಕಾಪಿ ಮಾಡಲಿಲ್ಲ.’ ಪ್ರಿನ್ಸಿಪಾಲರು ಒಪ್ಪಲಿಲ್ಲ. ಒಬ್ಬ ಭಾರತೀಯ ಇಷ್ಟು ಸುಂದರವಾದ ಇಂಗ್ಲಿಷು ಭಾಷೆ ಬರೆಯುವುದು ಸಾಧ್ಯವೇ ? ‘ನಿನ್ನ ಶೈಲಿ ಅನಿಬೆಸೆಂಟರ ಶೈಲಿಯನ್ನು ಹೋಲುತ್ತದೆ. ನೀನು ಅವರ ಭಾಷಣಗಳಿಂದ ಪ್ರಬಂಧ ನಕಲು ಮಾಡಿದಿ. ಈ ಭಾಷೆಯೇ ಅದಕ್ಕೆ ಸಾಕ್ಷಿ’ ಎಂದರು ಪ್ರಿನ್ಸಿಪಾಲರು. ಟಿ. ಎಲ್. ವಾಸವಾನಿ ಹತ್ತಾರು ಸಲ ಡಾಕ್ಟರ್ ಅನಿಬೆಸೆಂಟರ ಭಾಷಣ ಕೇಳಿದ್ದ. ಅವರ ಪುಸ್ತಕ ಓದಿದ್ದ. ಆ ಭಾಷಾ ಶೈಲಿ ರೂಢಿಸಿಕೊಳ್ಳಲು ಶ್ರಮಿಸಿದ್ದ. ಆದರೆ ಕಾಪಿ ಮಾಡಿರಲಿಲ್ಲ. ಮುಗುಳು ನಗುತ್ತಾ ಹೇಳಿದ, ‘ಸರ್, ಬೇಕಾದರೆ ನೀವು ನಿಮ್ಮ ಇದಿರಿನಲ್ಲೇ ಒಂದು ಪ್ರಬಂಧ ಬರೆಯಿಸಿ ಪರೀಕ್ಷಿಸಬಹುದು.’ ಈ ಮಾತು ಪ್ರಿನ್ಸಿಪಾಲರಿಗೂ ಒಪ್ಪಿಗೆಯಾಯಿತು. ಅಲ್ಲೆ ಒಂದು ವಿಷಯ ಕೊಟ್ಟು ಪ್ರಬಂಧ ಬರೆಯಲು ಹೇಳಿದರು. ವಾಸವಾನಿ ಅಲ್ಲೇ ಕುಳಿತು ೧೬ ಪುಟದ ಪ್ರಬಂಧ ಬರೆದು ಪ್ರಿನ್ಸಿಪಾಲರಿಗೆ ಒಪ್ಪಿಸಿದ. ಪ್ರಿನಿಪಾಲರು ಓದಿ ನೋಡಿದರು. ಹಿಂದಿನದಕ್ಕಿಂತಲೂ ಇದು ಅದ್ಭುತವಾಗಿದೆ. ತನ್ನ ತಪ್ಪು ತಿಳುವಳಿಕೆಯನ್ನು ಒಪ್ಪಿಕೊಂಡ ಪ್ರಿನ್ಸಿಪಾಲ್ ಟಿ. ಎಲ್. ವಾಸವಾನಿಯನ್ನು ಹೊಗಳಿದರು. ಮರುದಿನ ತರಗತಿಯಲ್ಲಿ ಎಲ್ಲರೆದರು ‘ಟಿ.ಎಲ್. ವಾಸವಾನಿಯು ಅನಿಬೆಸೆಂಟರನ್ನೂ ಮೀರಿಸುವ ಪ್ರತಿಭಾವಂತ, ಖ್ಯಾತಿವಂತನಾಗುವುದರಲ್ಲಿ ಸಂದೇಹವಿಲ್ಲ’ ಎಂದು ನುಡಿದರು ಆ ಮಾತು ಸತ್ಯವಾಯಿತು.

ಸ್ವಭಾವತಃ ಟಿ. ಎಲ್. ವಾಸವಾನಿ ಏಕಾಂತಪ್ರಿಯ. ಯಾರೊಂದಿಗೂ ಸೇರಲಾರ. ಆದರೆ ಬೇಜವಾಬ್ದಾರಿ ಜೀವನ ಕಳೆಯುವ ಹುಡುಗರನ್ನು ಕಂಡರೆ ಕನಿಕರ ಕ್ರಮೇಣ ತರುಣರ ಒಂದು ಗುಂಪು ಕಟ್ಟಿದ, ‘ದೇವರ ಶಕ್ತಿ ಕರುಣೆಗಳನ್ನು ಕುರಿತು ಚಿಂತಿಸುವ’ ಎಂದು ಕಲೆಹಾಕಿದ. ಈ ಗುಂಪು ದಿನವೂ ಒಂದು ಗಂಟೆಕಾಲ ಭಗವದ್ಗೀತೆ, ‘ಸುಖ್ಮಾನೀ’, ‘ಗುರುಗ್ರಂಥ ಸಾಹಿಬ್’ಗಳಲ್ಲಿರುವ ಉಪದೇಶ, ಹಿತವಚನಗಳನ್ನು ಕೇಳುವುದು.

ಆ ಕಾಲದಲ್ಲಿ ಕಾಲೇಜು ಪರೀಕ್ಷೆಗೆ ಬೊಂಬಾಯಿಗೇ ಬರಬೇಕಾಗುತ್ತಿತ್ತು. ಕರಾಚಿಯಿಂದ ಮುಂಬಯಿಗೆ ನಾಲ್ಕು ದಿನಗಳ ಹಡಗಿನ ಪ್ರಯಾಣ. ಉಳ್ಳವರು ಪ್ರಥಮ, ದ್ವಿತೀಯ ದರ್ಜೆಯಲ್ಲಿ ಪ್ರಯಾಣ ಮಾಡುತ್ತಿದ್ದರೆ, ಹೆಚ್ಚಿನವರು ‘ಡೇಕ್’ ನಲ್ಲಿ ಪ್ರಯಾಣ ಮಾಡುವುದು. ನಾಲ್ಕು ದಿನ ಗೆಳೆಯರ ಗುಂಪು ಹಡಗಿನ ಡೆಕ್’ನಲ್ಲಿ ಹಗಲು-ರಾತ್ರಿ ಹಲವಾರು ಸಲ ಸಭೆ, ಭಾಷಣ ಭಜನೆಯಲ್ಲಿ ತೊಡಗುತ್ತಿತ್ತು. ಅಂತಿಮ ಪರೀಕ್ಷೆಗೆ ಮುಂಬಯಿಗೆ ಹೋದಾಗ ಟಿ. ಎಲ್. ವಾಸವಾನಿಯವರು ಲೋಕಮಾನ್ಯ ತಿಲಕರನ್ನು ನೋಡಬಯಸಿದರು. ಆ ರಾಷ್ಟ್ರಪುರುಷನ ಭಾಷಣ, ಲೇಖನ, ಧೈರ‍್ಯ ಸಾಹಸಗಳಿಂದ ಸ್ಫೂರ್ತಿ ಪಡೆದಿದ್ದ ಟಿ. ಎಲ್. ವಾಸವಾನಿ ಲೋಕಮಾನ್ಯರ ದರ್ಶನಕ್ಕೆ ಕಾತರರಾಗಿದ್ದರು. ಆದರೆ ಅವರು ಯರವಾಡದ ಜೈಲಿನಲ್ಲಿದ್ದುದರಿಂದ ವಿದ್ಯಾರ್ಥಿ ವಾಸವಾನಿಗೆ ಅವರನ್ನು ನೋಡಲು ಅವಕಾಶ ದೊರೆಯಲಿಲ್ಲ.

ಇಲ್ಲಮ್ಮ ಈಗಿಲ್ಲ

ಅಂತಿಮ ಪರೀಕ್ಷೆ ಮುಗಿಸಿ ಊರಿಗೆ ಬಂದ ವಾಸವಾನಿ ತಾಯಿ, ತಂಗಿ, ತಮ್ಮಂದಿರ ಜೊತೆಗೆ ಸಂತೋಷವಾಗಿ ಕಾಲಕಳೆಯುತ್ತಿದ್ದರೂ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾದಿದ್ದರು. ನಿಶ್ಚಿತ ದಿನ ಅಂಚೆಯಾಳು ಬಾಗಿಲು ಬಡಿದ. ನಡುಗುವ ಕೈಗಳಿಂದ ಗೆಳೆಯ ರೂಪಚಂದ್ ಕಳಿಸಿದ್ದ ತಂತಿ ಸಂದೇಶ ತೆಗೆದುಕೊಂಡು ನೋಡಿದರು. ಉತ್ತೀರ್ಣರಾದ ಇಂಗ್ಲೀಷ್ ಭಾಷೆಯ ವಿದ್ಯಾರ್ಥಿಗಳಲ್ಲಿ ವಾಸವಾನಿ ಮೊದಲನೆಯವರು! ಜೊತೆಗೆ ‘ಇಲ್ಲಿಸ್ ಸ್ಕಾಲರ್‌ಶಿಪ್’ ಕೂಡ ಗಿಟ್ಟಿಸಿ ಕೊಂಡಿದ್ದರು. ತಾಯಿ ಸಂತದಿಂದ ಕುಣಿದಾಡಿದಳು, ‘ಈ ಸಂತಸದ ಸುದ್ದಿಗಾಗಿ ನಾನು ಎಷ್ಟು ಕಾತುರಳಾಗಿ ಕಾಯುತ್ತಿದ್ದೆ ಗೊತ್ತೆ ? ಎಂದು ಮಗನನ್ನು ತಬ್ಬಿಕೊಂಡಳು.

‘ಅಮ್ಮಾ, ನನಗೆ ಇಲ್ಲಿಸ್ ಸ್ಕಾಲರ್‌ಶಿಪ್ ದೊರೆತಿದೆ. ಇದರಂತೆ ನಾನು ಮುಂದೆ ಓದಬೇಕಾಗುತ್ತದೆ. ನನಗೆ ಬಿಡುಗಡೆ ಯಾವಾಗ ?’ ವಾಸವಾನಿ ಮರುಗಿದರು.

‘ಬಿಡುಗಡೆ ? ಯಾಕಾಗಿ ಬಿಡುಗಡೆ?’ ತಾಯಿ ಗಾಬರಿಯಿಂದ ಕೇಳಿದಳು.

‘ನಾನು ಸಂನ್ಯಾಸಿಯಾಗಿ ಪ್ರಪಂಚವನ್ನು ತಿಳಿದು ನನ್ನ ಜೀವನವನ್ನೇ ದೇವರಿಗೆ ಅರ್ಪಿಸಬೇಕು’ ಎಂದ ಮಗ. ‘ನೀನು ಸಂನ್ಯಾಸಿಯಾದರೆ ನಮ್ಮ ಗತಿ ಏನು ? ನಾವೆಲ್ಲ ಭಿಕ್ಷುಕರಾಗಬೇಕಾಗುತ್ತದೆ. ನಿನ್ನ ವಿದ್ಯಾಭ್ಯಾಸಕ್ಕೆ ನಾನು ಎಷ್ಟು ಸಾಲ ಮಾಡಿದ್ದೇನೆಂದು ನಿನಗೇನು ಗೊತ್ತು?’ ತಾಯಿ ಗಳಗಳನೆ ಅತ್ತಳು. ‘ಇಲ್ಲಮ್ಮ ಈಗಿಲ್ಲ’ ಎಂದ ವಾಸವಾನಿ ದೈವೇಚ್ಛೆ ಇದ್ದಂತೆ ಆಗಲಿ ಎಂದು ತಾಯಿಯ ಮುಂದೆ ತಲೆಬಾಗಿದರು.

ಶಿಕ್ಷಣ ಮುಗಿಯಿತು

ಕೆಲವೇ ದಿನಗಳಲ್ಲಿ ಪ್ರಿನ್ಸಿಪಾಲರಿಂದ ಅಭಿನಂದನಾ ಪತ್ರ ಬಂತು. ಸ್ಕಾಲರ್‌ಶಿಪ್‌ನಂತೆ ವಾಸವಾನಿಯವರು ಕಾಲೇಜಿನಲ್ಲಿ ‘ದಕ್ಷಿಣದ ಫೆಲೋ’ ಆಗಿದ್ದರು. ಕಾಲೇಜಿನಲ್ಲಿ ಕೆಲವು ಗಂಟೆಗಳ ಕಾಲ ಕಲಿಸಿ ಶಿಷ್ಯವೇತನದ ಜೊತೆಗೆ ಅಧ್ಯಯನ ಮುಂದುವರೆಯಬೇಕಾಗಿತ್ತು. ಕರಾಚಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಮೊದಲಬಾರಿಗೆ ಈ ಗೌರವ ವಾಸವಾನಿಯವರಿಗೆ ದೊರೆತಿತ್ತು.

ವಾಸವಾನಿ ಕಾಲೇಜು ಸೇರಿದರು. ಅಧ್ಯಾಪಕರು, ಪ್ರಿನ್ಸಿಪಾಲರು, ವಿದ್ಯಾರ್ಥಿಗಳು ಅವರನ್ನು ಅಭಿನಂದಿಸಿ ದರು. ಹಲವು ಉಡುಗೊರೆ, ಬಹುಮಾನಗಳು ಬಂದವು. ಕಾಲೇಜಿನಲ್ಲಿ ಕಲಿಸಿದ್ದಕ್ಕೆ ಗೌರವಧನ ಬೇರೆ. ಸ್ಕಾಲರ್‌ಶಿಪ್ ಬೇರೆ. ಸಂಪಾದನೆಯ ಜೊತೆಗೇ ವಿದ್ಯಾಭ್ಯಾಸ. ಕರಾಚಿಯಲ್ಲಿ ನಡೆಯುತ್ತಿದ್ದ ‘ಗೀತಾಪ್ರವಚನ’ ತರಗತಿ ಮುಂದುವರೆಯಿತು. ಅಲ್ಲಿನ ಬ್ರಹ್ಮಸಮಾಜದಲ್ಲಿ ಆಗಾಗ ಭಾಷಣಗಳೂ ಏರ್ಪಾಡಾಗುತ್ತಿದ್ದವು. ದಿನದಲ್ಲಿ ಹಲವು ಭಾಷಣಗಳನ್ನು ವಾಸವಾನಿ ಮಾಡಬೇಕಾಗುತ್ತಿತ್ತು. ನಾಗರಿಕರೂ ಆಗಾಗ ಸಭೆ ಏರ್ಪಡಿಸಿ ಇವರ ಭಾಷಣ ವ್ಯವಸ್ಥೆ ಮಾಡುತ್ತಿದ್ದರು. ಮಧುರ ಕಂಠದ ಸ್ಪಷ್ಟ ಉಚ್ಚಾರಣೆಯ ವಾಸವಾನಿಯವರ ಪಾಂಡಿತ್ಯ ವಿನಮ್ರ ವಾದುದು. ಆಪ್ಯಾಯಮಾನವಾದುದು. ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕೆನಿಸುವಂತಹ ವಾಕ್ ವೈಖರಿ.

೧೯೦೨ ರಲ್ಲಿ ಟಿ,ಎಲ್. ವಾಸವಾನಿ ತಮ್ಮ ಎಂ. ಎ. ಪದವಿ ಪೂರೈಸಿದರು. ತನ್ನ ಮಗ ಆತನ ಚಿಕ್ಕಪ್ಪನಂತೆ ವಕೀಲನಾಗಬೇಕು. ಹಣ ಸಂಪಾದಿಸಬೇಕು ಎಂದು ತಾಯಿಯ ಆಸೆ. ಜೊತೆಗೇ ಕನ್ಯಾಪಿತೃಗಳ ಕಾಟ. ಅನೇಕರು ತುಂಬ ಶ್ರೀಮಂತರು ಹೆಣ್ಣು ಕೊಡಲು ಮುಂದೆ ಬಂದರು. ಮಗನಿಗೆ ಮದುವೆ ಮಾಡಿ ಸಂಸಾರದ ಹೊಣೆ ಹೊರಿಸುವ ಆತುರ ತಾಯಿಗೆ. ಆದರೆ ಈ ಬಂಧನದಿಂದ ಊರವಿರುವ ಸಂಕಲ್ಪ ವಾಸವಾನಿಯವರದು. ಈ ಸಂಕಟದಿಂದ ಅವರನ್ನು ವಿಧಿ ಪಾರುಮಾಡಿತು.

ಕೆಲವೇ ತಿಂಗಳಲ್ಲಿ ಕಲ್ಕತ್ತೆಯ ಮೆಟ್ರೋ ಪಾಲಿಟನ್ ಕಾಲೇಜಿನಿಂದ ತತ್ವಶಾಸ್ತ್ರ ಇತಿಹಾಸದ ಪ್ರಾಧ್ಯಾಪಕರಾಗಿ ಬರುವಂತೆ ವಾಸವಾನಿಯವರಿಗೆ ಕರೆ ಬಂತು.

ಗುರು ದೊರೆತರು

ಕಲ್ಕತ್ತೆಯಲ್ಲಿದ್ದು ವಾಸವಾನಿಯವರು ತನ್ನ ಆಧ್ಯಾತ್ಮ ಚಿಂತನೆಯ ದಾರಿಯಲ್ಲಿ ಪರಿಣಿತರಾದರು. ರಾಮಕೃಷ್ಣ ವಿವೇಕಾನಂದರ ಪ್ರೇರಣೆಯ ನೆಲ ಅವರ ಜ್ಞಾನದಾಹಕ್ಕೆ ತಂಪೆರೆಯಿತು. ಮತ್ತೊಬ್ಬ ಪ್ರೊಫೆಸರರು ಪ್ರಮೋತೋ ಲಾಲ್‌ಸೆನ್‌ರವರ ಪರಿಚಯವಾದುದಂತೂ ವಾಸವಾನಿ ಯವರಿಗೆ ಪರಮ ಗುರು ದೊರೆತಂತಾಯಿತು. ಅವರ ಸಂಗ, ಸಹವಾಸದಿಂದ ಭಕ್ತಿ ಪಂಥದ ಬೆಳಕು ತುಂಬಿಕೊಂಡರು. ಕಾಲೇಜಿನ ಕೆಲಸ ಮುಗಿಸಿಕೊಂಡು ವಾಸವಾನಿ ಗುರುವಿನ ಬಳಿ ಕುಳಿತು ಆಧ್ಯಾತ್ಮ ಚಿಂತನ ಚರ್ಚೆಯಲ್ಲೇ ಕಾಲ ಕಳೆಯುತ್ತಿದ್ದರು. ಹೊಳಪುಗಣ್ಣಿನ, ಗುಂಗುರು ಕೂದಲಿನ, ಸುಂದರ ಮೈಕಟ್ಟಿನ ತರುಣ ವಾಸವಾನಿ ವಿದ್ಯಾರ್ಥಿಗಳಿಗೆ ಮೆಚ್ಚು.

ಒಂದು ಅನುಭವ

ಒಮ್ಮೆ ವಿದ್ಯಾರ್ಥಿಗಳೆಲ್ಲ ಸೇರಿ ಒಂದು ‘ಪಿಕ್ನಿಕ್’ ವ್ಯವಸ್ಥೆ ಮಾಡಿದರು. ಗಂಗೆ ದಾಟಿ, ಆಚೆಕಡೆ ಒಂದು ತೋಪಿಗೆ ಎರಡು ದೋಣಿಗಳಲ್ಲಿ ಗುಂಪು ಸಾಗಿತು. ಜೊತೆಗೆ ವಾಸವಾನಿಯವರೂ ಇದ್ದೇ ತೀರಬೇಕು. ಮಧ್ಯಾಹ್ನದವರೆಗೆ ತೋಪುತುಂಬ ಅಲೆದಾಡಿ ಊಟ ಮುಗಿಸಿದರು. ಆಗ ವಾಸವಾನಿ ‘ನಾವಿನ್ನು ಹಿಂತಿರುಗುವುದು ಒಳ್ಳೆಯದು’ ಎಂದರು ‘ಸಂಜೆತನಕ ಇರುವ ಕಾರ‍್ಯಕ್ರಮ ಸರ್’ ಎಂದರು ವಿದ್ಯಾರ್ಥಿಗಳು. ವಾಸವಾನಿ ಮಾತನಾಡಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಆಕಾಶ ಮೋಡಗಳಿಂದ ತುಂಬಿತು ‘ಈಗಲಾದರೂ ಹೊರಡ ಬಹುದಲ್ಲ’ ಎಂದರು. ವಿದ್ಯಾರ್ಥಿಗಳಿಗೆ ಸರಿಕಂಡಿತು. ಎಲ್ಲರೂ ನದೀ ದಡಕ್ಕೆ ಬಂದು ದೋಣಿ ಹತ್ತಿದರು. ಸ್ವಲ್ಪ ದೂರ ದೋಣಿ ಸಾಗಿತ್ತು. ಆಗಲೇ ಬಿರುಗಾಳಿ, ಮಳೆ ಆರಂಭವಾಯಿತು. ಗಾಳಿಗೆ ದೋಣಿ ತೂರಾಡತೊಡಗಿತು. ವಿದ್ಯಾರ್ಥಿಗಳು ಗಾಬರಿಯಾದರು. ನಾವೆಲ್ಲ ಒಟ್ಟಾಗಿ ಪ್ರಾರ್ಥಿಸೋಣ. ಹರೇರಾಮ ಹರೇರಾಮ ರಾಮರಾಮ ಹರೇಹರೇ ಹಾಡೋಣ’ ಎಂದರು ವಾಸವಾನಿಯವರು ಜಾತಿ, ಮತ, ಪಂಥಗಳ ಭೇದವಿಲ್ಲದೆ, ಎಲ್ಲರೂ ಹಾಡಿದರು. ದೋಣಿ ನಡೆಸುವವನೂ ಧೈರ‍್ಯತಳೆದ. ಪವಾಡವೋ ಎಂಬಂತೆ ಗಾಳಿ, ಮಳೆ ನಿಂತಿತು. ದೋಣಿ ಸರಾಗವಾಗಿ ದಡ ಸೇರಿತು.

ಕಲ್ಕತ್ತೆಯಲ್ಲಿ ಐದು ವರ್ಷ ಇದ್ದ ವಾಸವಾನಿ ಅಲ್ಲಿನ ಎಲ್ಲ ರೀತಿಯ ಸಾಮಾಜಿಕ, ರಾಜಕೀಯ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಪಾಲುಗೊಂಡಿದ್ದರು. ತಾನು ಬಾಲ್ಯದಿಂದಲೂ ನೋಡಲು ಬಯಸುತ್ತಿದ್ದ ಆದರ್ಶ ಪುರುಷ ತಿಲಕರು ಕಲ್ಕತ್ತೆಗೆ ಬಂದಾಗ ಅವರನ್ನು ಕಣ್ತುಂಬ ನೋಡಿ, ಮಾತನಾಡಿಸಿದರು. ವಿಶ್ವಕವಿ ರವೀಂದ್ರರನ್ನು ಭೇಟಿ ಮಾಡಿದಾಗ ಈ ಪ್ರತಿಭಾವಂತನನ್ನು ಶಾಂತಿನಿಕೇತನದ ಮುಖ್ಯಸ್ಥರಾಗಲು ಆವರು ಕೇಳಿದರು. ಅದನ್ನು ವಾಸವಾನಿ ಒಪ್ಪಲಿಲ್ಲ. ಆ ಹೊಣೆ ತಮಗೆ ತೀರ ಹೆಚ್ಚಿನದು ಎಂದು ಅವರಿಗೆ ಎನ್ನಿಸಿತ್ತು. ಕಲ್ಕತ್ತೆಯ ಕಾಲೇಜಿನ ಹಲವು ವಿದ್ಯಾರ್ಥಿಗಳ ‘ಆಟೋಗ್ರಾಫ್’ಗಳಲ್ಲಿ ವಾಸವಾನಿಯವರು, ‘ಅವನಿದ್ದರೆ ಮಾತ್ರ ಈ ಪ್ರಪಂಚ, ಅವನಿಲ್ಲದಿದ್ದರೆ ಇದೊಂದು ಕಾಡು’, ‘ನೀನು ಬೆಳೆದರೆ ಹುಲ್ಲಿನಂತೆ ವಿನಮ್ರನಾಗಿರು, ಮರಗಳಂತೆ ಸಹನಶೀಲ ನಾಗಿರು, ಸೂರ‍್ಯನೆಡೆ ಮುಖಮಾಡಿ ನಿಂತ ಕಾನನದ ಕುಸುಮದಂತೆ ಪ್ರಾರ್ಥನಾ ಪರನಾಗಿರು’ ಎಂದು ಬರೆದಿದ್ದರು.

ಒಂದು ದಿನ ವಾಸವಾನಿಯವರಿಗೆ ಅಣ್ಣ ಪಹಲತ್‌ನಿಂದ ಪತ್ರಬಂತು. ಕರಾಚಿಯ ಕಾಲೇಜಿನಲ್ಲಿ ಫಲಾಸಫಿ(ತತ್ವಶಾಸ್ತ್ರ) ಪ್ರೊಫೆಸರ್ ಹುದ್ದೆ ಖಾಲಿ ಇದೆ ಅರ್ಜಿಹಾಕು ಎಂದು ಬರೆದಿದ್ದರು. ವಾಸವಾನಿ ತನ್ನ ಗುರುವನ್ನು ಕೇಳಿದರು. ಅವರೂ ಸಮ್ಮತಿಸಿದರು. ಅಂಚೆ ಯಲ್ಲಿ ಅರ್ಜಿ ಕಳಿಸಲು ದಿನಕಳೆದಿತ್ತು. ಹಾಗಾಗಿ ದೀರ್ಘ ತಂತಿ ಸಂದೇಶದ ಮೂಲಕ ಅರ್ಜಿ ಸಲ್ಲಿಸಿದರು.

ಆಡಳಿತ ಮಂಡಳಿ ಅವರ ಅರ್ಜಿಯನ್ನು ಸಂತೋಷದಿಂದ ಸ್ವಾಗತಿಸಿತು. ೧೯೦೮ ರಲ್ಲಿ ವಾಸವಾನಿ ತಾವು ಕಲಿತ ಕಾಲೇಜಿಗೇ ಪ್ರಾಧ್ಯಾಪಕರಾಗಿ ಸೇರಿದರು. ಮತ್ತೆ ಗೀತಾ ತರಗತಿಗಳು, ಉಪನ್ಯಾಸಗಳು ಪ್ರಾರಂಭ ವಾದವು. ಅದೇ ವೇಳೆಗೆ ಅವರ ಶಿಷ್ಯವರ್ಗ ‘ಆಶ್ರಮ’ ವೊಂದನ್ನು ಸ್ಥಾಪಿಸುವ ಸಂಕಲ್ಪ ಮಾಡಿತು. ಗೀತೆ, ವೇದಾಂತ, ದೈವ ಚಿಂತನೆಯ ದಾರಿದೀಪವಾಗಿ ವಾಸವಾನಿ ಕರಾಚಿಯಲ್ಲಿ ಪ್ರಸಿದ್ಧರಾದರು.

ಜರ‍್ಮನಿಯಲ್ಲಿ

೧೯೧೦ ರಲ್ಲಿ ವಾಸವಾನಿಯವರಿಗೆ ಜರ‍್ಮನಿಯ ಬರ್ಲಿನ್‌ನಲ್ಲಿ ನಡೆವ ಜಾಗತಿಕ ಧರ‍್ಮ ಸಮ್ಮೇಳನಕ್ಕೆ ಕರೆಬಂತು. ಆಗ ವಾಸವಾನಿಯವರಿಗೆ ಮೂವತ್ತೊಂದೇ ವರ್ಷ. ತಾನಿನ್ನೂ ಚಿಕ್ಕವನು ಎಂದು ಆಮಂತ್ರಣ ನಿರಾಕರಿಸಿ ವ್ಯವಸ್ಥಾಪಕರಿಗೆ ತಿಳಿಸಿದರು. ಆಹ್ವಾನ ಸೆನ್‌ರವರಿಗೂ ಬಂದಿತ್ತು. ತನ್ನ ಶಿಷ್ಯನ ಜೊತೆಗೆ ಹೋಗುವ ಸಂತಸದಿಂದಿದ್ದ ಅವರಿಗೆ ವಾಸವಾನಿಯವರ ಪತ್ರ ನಿರಾಶೆ ಉಂಟು ಮಾಡಿತು. ಒಡನೇ ‘ಎಂಥ ಹುಚ್ಚುತನ ಮಾಡುತ್ತೀ? ಒಪ್ಪಿಕೊಂಡು ಕೂಡಲೇ ಪತ್ರ ಬರೆ’ ಎಂದು ಬರೆದು ತಾವೂ ಬರುವುದಾಗಿ ತಿಳಿಸಿದರು. ವಾಸವಾನಿ ಯವರಿಗೆ ತನ್ನ ಗುರುವೂ ಬರುವ ಸಂಗತಿ ತಿಳಿದಿರಲಿಲ್ಲ. ಈಗ ‘ಗುರು ಆಜ್ಞೆ’ ಯೆಂದು ಒಪ್ಪಿಕೊಂಡರು. ತಮ್ಮ ಕುಟುಂಬದಲ್ಲಿ ಯಾರೂ ಸಮುದ್ರ ದಾಟಿ ಪ್ರಯಾಣ ಮಾಡಿಲ್ಲವೆಂಬ ಅಳುಕಿನ ಜೊತೆಗೇ ತನ್ನ ಮಗನಿಗೆ ದೊಡ್ಡ ಗೌರವ ಸಂದಿದೆಯೆಂಬ ಸಂತಸ ತಾಯಿಗೆ. ಅಡ್ಡಿ ಮಾಡದೆ ಆಕೆಯೂ ಆಶೀರ್ವದಿಸಿದರು. ಗುರು ಶಿಷ್ಯರು ಮುಂಬಯಿಂದ ಹಡಗಿನಲ್ಲಿ ವಿದೇಶಕ್ಕೆ ಹೊರಟರು.

೧೯೧೦ ಜುಲೈ ೨೪ ರಂದು ಹಡಗು ಏಡನ್ ಬಂದರು ತಲುಪಿತು. ಈ ತರುಣನನ್ನು ಕಂಡರೆ ಎಲ್ಲರಿಗೂ ಅಚ್ಚರಿ. ನಿನಗೆ ಇಂಗ್ಲೀಷು ಬರುತ್ತದೆಯೇ ?’ ಎಂದು ಒಬ್ಬ ಆಂಗ್ಲ ವಿಚಾರಿಸಿದ. ಇನ್ನೂ ಈತ ವಿದ್ಯಾರ್ಥಿ ಎಂದೇ ಅವನ ಅನ್ನಿಸಿಕೆ. ದಾರಿಯುದ್ದಕ್ಕೂ ಹಡಗು ನಿಂತ ಊರು ಗಳಲ್ಲಿ ಇಳಿದು ಊರು ನೋಡಿಕೊಂಡು ವಾಸವಾನಿ ಆಗಸ್ಟ್ ೧೦ ರಂದು ಬರ್ಲಿನ್ ತಲುಪಿದರು. ಗಟ್ಟಿನೆಲದಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದ ವಾಸವಾನಿಯವರಿಗೆ ಬರ್ಲಿನಿನ ರಾಜ ವೈಭವದ ಹೋಟೆಲ್‌ಗಳ ಸುಪ್ಪತ್ತಿಗೆ ಮುಳ್ಳಿನ ಹಾಸಿಗೆ. ಹಾಸಿಗೆಯಲ್ಲಿ ನಿದ್ದೆಯೇ ಬರಲಿಲ್ಲ. ಬರ್ಲಿನ್ ಬೀದಿಗಳಲ್ಲಿ ಸಂಚರಿಸಿದರೆ ಜನ ಇವರನ್ನು ಕಾಡು ಪ್ರಾಣಿ ನೋಡಿದಂತೆ ನೋಡುತ್ತಿದ್ದರು.

ಎರಡು ದಿನಗಳ ನಂತರ ಜಾಗತಿಕ ಧರ‍್ಮ ಸಮ್ಮೇಳನದಲ್ಲಿ ವಾಸವಾನಿಯವರ ಭಾಷಣ. ಭಾರತೀಯ ಚಿಂತನ ಪದ್ಧತಿಯಂತೆ ‘ಆತ್ಮ’ ತತ್ವದ ಕುರಿತು ನಿರರ್ಗಳ ವಾಗಿ ಜೇನಿನ ಹೊಳೆ ಹರಿದಂತೆ ಭಾರತೀಯ ಧರ್ಮ, ಸಂಸ್ಕೃತಿ, ತತ್ವ ಚಿಂತನೆಯ ಸರ್ವಸ್ವವನ್ನು ಭಟ್ಟಿ ಇಳಿಸಿದಂತೆ ಮಾತಾಡಿದ ಈ ತರುಣ ವಾಗ್ಮಿ, ಪಂಡಿತನನ್ನು ನೋಡಿ, ಕೇಳಿದ ಜನ ಸ್ವಾಮಿ ವಿವೇಕಾನಂದರನ್ನು ನೆನೆದು ಕೊಂಡರು. ಪತ್ರಿಕೆಗಳು ಹಾಡಿ ಹೊಗಳಿದವು.

ಇಂಗ್ಲೆಂಡು

ಬರ‍್ಲಿನ್ ಕಾರ್ಯಕ್ರಮ ಮುಗಿಸಿ ವಾಸವಾನಿ ಯವರು ಫ್ರಾನ್ಸ್, ಅಥೆನ್ಸ್‌ಗಳ ಮೂಲಕ ಇಂಗ್ಲೆಂಡಿಗೆ ಬಂದರು. ಅಲ್ಲಿನ ಬ್ರುಕ್ ಚೇಪಲ್ (ಚರ್ಚ್) ನಲ್ಲಿ ವಾಸವಾನಿಯವರ ಪ್ರಥಮ ಭಾಷಣವಾಯಿತು. ವಿಷಯ ‘ಯೂರೋಪಿನ ಅವಶ್ಯಕತೆ’ ‘ಸರಳತೆಯಲ್ಲಿ ಸುಖವಿದೆ’ ಎಂಬ ತತ್ವ ಮಂಡಿಸಿ ಭೋಗ ವಿಲಾಸವನ್ನು ಖಂಡಿಸಿದರು. ಅದು ಕೆಲವರಿಗೆ ಹಿಡಿಸಲಿಲ್ಲ. ಹಲವರಿಗೆ ರುಚಿಸಿತು. ಹತ್ತಾರು ಕಡೆ ಭಾಷಣಗಳ ಏರ್ಪಾಡಾದವು. ಇಂಗ್ಲೆಂಡಿನ ಅವರ ಶ್ರೋತೃಗಳಲ್ಲಿ ಒಬ್ಬ ಪ್ರತಿಷ್ಠಿತ ಭಾರತೀಯ ಮಹಿಳೆಯೂ ಇದ್ದರು. ಆಕೆ ವಾಸವಾನಿ ಯವರನ್ನು ಮನೆಗೆ ಕರೆದು ಗೌರವಿಸಿದರು. ಆಕೆಯ ಅಣ್ಣ ಕರಾಚಿಯಲ್ಲಿ ಕಮಿಶನರ್ ಆಗಿದ್ದರು. ಅಣ್ಣನಿಗೆ ಪತ್ರ ಬರೆದು ಆಕೆ ವಾಸವಾನಿಯವರನ್ನು ಗೌರವಿಸಲು ತಿಳಿಸಿದ್ದರು. ಕಮೀಶನರ್ ಸಾಹೇಬರು ವಾಸವಾನಿ ಯವರನ್ನು ಕರೆಸಿಕೊಂಡು ಖಿಲ್ಲತ್ತು, ಹಣ ಹುದ್ದೆಗಳನ್ನು ಕೊಡುವುದಾಗಿ ತಿಳಿಸಿದರು. ಆದರೆ ವಿನಯಶೀಲರಾದ ವಾಸವಾನಿ ಇದಾವುದನ್ನು ಒಪ್ಪಲಿಲ್ಲ. ಪದವಿ, ಹಣ, ಅಧಿಕಾರ ಯಾವುದನ್ನೂ ಒಲ್ಲದ ಈ ಮನುಷ್ಯನನ್ನು ಕಂಡ ಕಮೀಶನರ್ ‘ಆಸೆ ಇಲ್ಲದಿರುವುದು ಮಹಾಪುರುಷರಿಗೆ ಮಾತ್ರ ಸಾಧ್ಯ’ಎಂದು ಉದ್ಗರಿಸಿದರು.

ಒದಗಿಬಂದ ನೆರವು

ವಾಸವಾನಿಯವರು ಆರು ತಿಂಗಳ ತಮ್ಮ ವಿದೇಶ ಪ್ರವಾಸದ ಕಾಲದಲ್ಲಿ ಹತ್ತಾರು ಕಡೆ, ಹಲವಾರು ಭಾಷಣಗಳಿಂದ ವಿದೇಶಿಯರ ಮನ ಗೆದ್ದಿದ್ದರು. ಮಿತ್ರರನ್ನು ಸಂಪಾದಿಸಿದ್ದರು.  ಕೊನೆಗೊಮ್ಮೆ ತಾಯಿಯಿಂದ ಕರೆ ಬಂದಾಗ ಊರಿಗೆ ಹಿಂತಿರುಗಲು ನಿರ್ಧರಿಸಿದರು. ಆದರೆ ಹಣ? ಹಣದ ಬಗ್ಗೆ ಚಿಂತಿಸಿದವರೇ ಅಲ್ಲ ವಾಸವಾನಿ. ತಮ್ಮ ‘ಬ್ಯಾಂಕ್ ಅಕೌಂಟ್’ ದೇವರ ಬಳಿ ಇದೆ ಎಂದೇ ಅವರು ಹೇಳುತ್ತಿದ್ದರು. ಅವರ ಗುರು ಸೆನ್ ಇನ್ನು ಕೆಲವು ಕಾಲ ಇಂಗ್ಲೆಂಡಿನಲ್ಲಿರುವುದಾಗಿ ತಿಳಿಸಿದರು. ಆ ವೇಳೆಗೆ ಕೂಚ್ ಬಿಹಾರದ ಮಹಾರಾಣಿ ಇಂಗ್ಲೆಂಡಿನಲ್ಲಿದ್ದರು. ಭಾರತೀಯರ ಬಗೆಗೆ ವಿದೇಶಿಯರಲ್ಲಿ ಗೌರವ ಭಾವನೆ ಮೂಡಿಸಿದ ಪಂಡಿತನನ್ನು ತನ್ನಲ್ಲಿಗೆ ಕರೆದು ಗೌರವಿಸಿದರು. ವಾಸವಾನಿಯವರು ಸತ್ಕಾರಕ್ಕೆ ಕೃತಜ್ಞತೆ ಸೂಚಿಸಿ, ತಾನು ಬೇಗನೇ ಸ್ವದೇಶಕ್ಕೆ ಹಿಂತಿರುಗುವುದಾಗಿ ತಿಳಿಸಿದರು. ಆಗ ಮಹಾರಾಣಿಯವರು ‘ತಮ್ಮ ಪ್ರಯಾಣದ ಟಿಕೆಟ್ ತೆಗೆದುಕೊಡುವ ಗೌರವ ನನಗೆ ದೊರೆಯುತ್ತದೆಯೇ ? ಆ ಕೆಲಸ ನಾನು ಮಾಡಲೇ ? ಎಂದರು. ವಾಸವಾನಿ ಏನೂ ಹೇಳದೆ ಮುಗಳು ನಕ್ಕು ‘ದೇವರ ಕೃಪೆ’ಯೆಂದು ಮನಸ್ಸಿನಲ್ಲಿ ಅಂದುಕೊಂಡರು. ಮಹಾರಾಣಿಗೆ ಆ ಮೊತ್ತ ಬಹಳ ಚಿಕ್ಕದು. ವಾಸವಾನಿಯವರಿಗೆ ಅದೇ ದೊಡ್ಡದು.

ಹೊಸ ಸೇವಾಕ್ಷೇತ್ರಗಳು

೧೯೧೨ ರ ಬೇಸಿಗೆಯಲ್ಲಿ ವಾಸವಾನಿ ಗುರುಸೆನ್‌ರವರ ಜೊತೆಗೆ ಸಿಮ್ಲಾಕ್ಕೆ ಹೋದರು. ಅಲ್ಲಿನ ಜನರು ವಿದೇಶ ಗಳಲ್ಲಿಯೂ ಹರಡಿರುವ ಅವರ ಕೀರ್ತಿ ಕೇಳಿ ಅಲ್ಲಿಯೂ ಹಲವು ಭಾಷಣಗಳನ್ನು ಏರ್ಪಡಿಸಿದರು. ಭಾಷಣ ಕೇಳಲು ಬಂದ ಸಿಮ್ಲಾದ ದಯಾಳ್‌ಸಿಂಗ್ ಕಾಲೇಜಿನ ಆಡಳಿತ ವರ್ಗದವರು ವಾಸವಾನಿಯವರ ಶುದ್ಧ ಜೀವನ, ಆದರ್ಶ, ಚಾರಿತ್ರ್ಯ, ಅಪಾರ ಪಾಂಡಿತ್ಯಗಳನ್ನು ಗಮನಿಸಿ ತಮ್ಮ ಕಾಲೇಜಿಗೆ ಪ್ರಾಧ್ಯಾಪಕರಾಗಿ ಬರುವಂತೆ ವಿನಂತಿಸಿದರು. ದೇವರ ಇಚ್ಛೆಯೆಂದು ತಿಳಿದ ವಾಸವಾನಿ ಒಪ್ಪಿದರು. ೮ ವರ್ಷಗಳ ಪ್ರಾಧ್ಯಾಪಕತನದ ನಂತರ ಟಿ. ಎಲ್ ವಾಸವಾನಿಯವರು ಪ್ರಿನ್ಸಿಪಾಲರಾದರು. ವಾಸವಾನಿ ಯವರು ತಾಯಿ ತಂಗಿಯನ್ನು ಜೊತೆಗೆ ಕರೆಸಿಕೊಂಡರು. ಎಲ್ಲ ಸುಖ ವೈಭವಗಳನ್ನು ತಾಯಿಗೆ ಅರ್ಪಿಸಿ ತಾನು ನಿರ್ಲಿಪ್ತನಂತೆ, ಸಂಬಳದ ಹಣವನ್ನು ತಾಯಿಗೆ ಒಪ್ಪಿಸುತ್ತಿದ್ದರು. ತಾಯಿಗೆ ಬೇಕಾದ ಹಣದ ರಾಶಿ ಸುರಿಸಿದರು.

೧೯೧೫ ರಲ್ಲಿ ಕೂಚ್ ಬಿಹಾರದ ವಿಕ್ಟೋರಿಯಾ ಕಾಲೇಜಿನ ಪ್ರಿನ್ಸಿಪಾಲರಾಗಲು ಅಧಿಕಾರಿಗಳು ಕೇಳಿ ಕೊಂಡರು. ‘ತನ್ನ ಸೇವೆ ಅಲ್ಲಿಗೂ ಇರಲಿ’ ಎಂದು ವಾಸವಾನಿ ಒಪ್ಪಿಕೊಂಡರು. ಅಲ್ಲಿನ ಅವರ ನಿಷ್ಕಳಂಕ ಸೇವೆ ಯನ್ನು ಕೇಳಿ, ತಿಳಿದ ಮಹಾರಾಜರು ವಾಸವಾನಿ ಯವರನ್ನು ಕರೆಸಿಕೊಂಡು, ಗೌರವಿಸಿ ಪಾಟಿಯಾಲದ ಮಹೇಂದ್ರ ಕಾಲೇಜಿಗೆ ಬರಲು ಕೇಳಿಕೊಂಡರು. ದೇಶದಾದ್ಯಂತ ಆಧ್ಯಾತ್ಮದ ಬೆಳಕು, ಭಕ್ತಿಯ ಕಿರಣ ಪ್ರಸಾರ ಮಾಡುವ ಧ್ಯೇಯ ಹೊಂದಿದ ಸಂನ್ಯಾಸಿಸದೃಶ ವಾಸವಾನಿ ಯವರು ಒಪ್ಪಿದರು. ಭಾರಿ ಬಂಗಲೆ, ವೈಭವದ ಜೀವನ, ಹಿಂದೆ ಮುಂದೆ ಚಾಕರರು. ಮಾತು ಬಾಯಿಂದ ಬಂದರೆ ಸಾಕು ನಡೆಸಿಕೊಡುವ ಮಹಾರಾಜರು. ಹಣದ ಕೊರತೆಯೇ ಇಲ್ಲ. ಒಮ್ಮೆ ಅರವತ್ತು ರೂಪಾಯಿಗಳ ತನ್ನ ಪ್ರಯಾಣದ ಭತ್ಯದ ನಿಜವಾದ ಬಿಲ್ಲನ್ನು ಸಲ್ಲಿಸಿದಾಗ ಮಹಾರಾಜರು ‘ಇಷ್ಟು ಸಣ್ಣ ಮೊತ್ತ ಮಂಜೂರು ಮಾಡುವುದು ತಮ್ಮ ಗೌರವಕ್ಕೆ ಕುಂದೆಂದು’ ಒಂದು ಸಾವಿರ ರೂಪಾಯಿ ಮಂಜೂರು ಮಾಡಿದರು. ಪ್ರಿನ್ಸಿಪಾಲರ ವೈಯಕ್ತಿಕ ಪುಸ್ತಕ ಭಂಡಾರಕ್ಕೆ ಸಾವಿರಾರು ರೂಪಾಯಿಗಳ ಪುಸ್ತಕ ಮಂಜೂರು ಮಾಡಿದ್ರು. ಮಹಾರಾಜರಿಗೆ ವಾಸವಾನಿಯವರ ಮಾತೆಂದರೆ ವೇದವಾಕ್ಯ.

 ಜೀವನ ಸಾರ್ಥಕವಾಗುವುದು

೧೯೨೮ ರಲ್ಲಿ ಕಾಲಾರ ಬೇನೆ ವಾಸವಾನಿಯವರ ತಾಯಿಯನ್ನು ನುಂಗಿತು. ಕೊನೆಗಾಲದಲ್ಲಿ ವಾಸವಾನಿ ತಾಯಿಯ ಬಳಿ ಇದ್ದರು. ‘ನಾನು ಮದುವೆಯಾಗ ಬೇಕೆಂದು ನೀನು ಬಯಸಿದೆ, ಆದರೆ ನಾನು ಆಗಲಿಲ್ಲ. ನನ್ನ ಅಪರಾಧವನ್ನು ಕ್ಷಮಿಸಲಾರೆಯಾ?’ ಎಂದು ಕೇಳಿದರು. ತಾಯಿ ಅಸಮಾಧಾನವಿಲ್ಲದೆ, ‘ನನಗೆ ಸ್ವಲ್ಪವೂ ದು:ಖವಿಲ್ಲ. ನೀನು ಮಹಾತ್ಮ, ಸಂತ’ ಎಂದು ಹೇಳಿ ಮಕ್ಕಳನ್ನು ನೋಡಿಕೊಳ್ಳುವ ಹೊಣೆ ಒಪ್ಪಿದರು.

ತಾಯಿ  ತೀರಿಕೊಂಡಿದ್ದರಿಂದ ವಾಸವಾನಿಯವ ರಿಗಿದ್ದ ಒಂದೇ ಒಂದು ಲೌಕಿಕ ಬಂಧನ ಕಡಿಯಿತು. ಮಹಾರಾಜರಿಗೆ ತಂತಿ ಸಂದೇಶ ಕಳಿಸಿ ಪ್ರಿನ್ಸಿಪಾಲ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಮನೆಯಲ್ಲಿದ್ದ ತನ್ನ ಉಡುಪು ಗಳನ್ನೆಲ್ಲ ಅಣ್ಣನಿಗೆ ಹೇಳಿ ದಾನ ಮಾಡಿಸಿದರು. ಮಿತ್ರರು ಸಂತಾಪ ಸೂಚಿಸಲು ಬಂದಾಗ ವಾಸವಾನಿ ಖಾದಿ ಬಟ್ಟೆ ಹೊದೆದು ಕುಳಿತುದನ್ನು ಕಂಡು ಗಾಬರಿಯಾದರು. ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ ಸುದ್ದಿ ತಿಳಿದು ಬಂಧುಗಳು ಹೇಳಿದರು ‘ನಿನಗಿನ್ನೂ ನಲ್ವತ್ತರ ಪ್ರಾಯ. ಬೇಕಾದಷ್ಟು ಸಾಧಿಸಬಹುದಿತ್ತು’ ವಾಸವಾನಿಯವರು ‘ಆ ಕೆಲಸ ಕ್ಕಾಗಿಯೇ ರಾಜಿನಾಮೆ ಸಲ್ಲಿಸಿದೆ. ಜೀವನ ಸಾರ್ಥಕ ವಾಗುವುದು ಸೇವೆ, ಪ್ರೇಮಗಳಿಗೆ ತನ್ನನ್ನು ಅರ್ಪಿಸಿ ಕೊಂಡಾಗ’ ಎಂದರು.

ಸಾಧು ವಾಸವಾನಿ

ಅಂದಿನಿಂದ ವಾಸವಾನಿಯವರ ಉಡುಪು ತುಂಡು ಪಂಚೆ, ಖಾದಿಯಿಂದ ತಯಾರಿಸಿದ ಉದ್ದನೆಯ ನಿಲುವಂಗಿ. ಗುಂಗುರು ಕೂದಲಿಗೆ ಬಾಚಣಿಕೆ ತಾಕಿಸಲಿಲ್ಲ. ಜನ ಜಂಗುಳಿ ತುಂಬಿದ ತೃತೀಯ ದರ್ಜೆಯ ರೈಲಿನಲ್ಲೇ ಪ್ರಯಾಣ. ಕಿರುಮನೆಯಲ್ಲಿ ವಾಸ. ದೇಶದ ಉದ್ದಗಲಕ್ಕೂ ಸೇವೆ, ತ್ಯಾಗ, ಪ್ರೇಮ, ಭಕ್ತಿ, ಸರಳತೆಯ ಸಂದೇಶ ಸಾರುತ್ತ ಸಾಗಿದ ಸಿಂಧದ ಸಂತ ವಾಸವಾನಿಯವರು ದೇವದೂತನಂತೆ ಕಂಗೊಳಿಸಿದರು. ನಡಿಗೆಯಲ್ಲಿ ದೇವರಿಗೆ ಪ್ರದಕ್ಷಿಣೆ, ನುಡಿಯಲ್ಲಿ ದೇವರ ಗುಣಗಾನ. ಚಿಂತನೆಯಲ್ಲಿ ದೈವ ಚಿಂತನೆ. ಸಹಸ್ರಾರು ಹೃದಯಗಳನ್ನು ಭಗವಂತನ ಚರಣಕಮಲಗಳಿಗೆ ಬಗ್ಗಿಸಿದ ಸಾಧು ವಾಸವಾನಿಯವರು ಆಧುನಿಕ ಕಾಲದ ಮಹಾನ್ ಸಂತ. ಅವರನ್ನು ಜನ ‘ಸಾಧು ವಾಸವಾನಿ’ಯೆಂದೇ ಗುರುತಿಸಿದರು. ಜ್ಞಾನ ಭಕ್ತಿ, ವೈರಾಗ್ಯ ಸಂನ್ಯಾಸಿಗಳ ದಾರಿ. ಅದರ ಸಾಧು ವಾಸವಾನಿಯವರು ಜ್ಞಾನ ಭಕ್ತಿಯ ಜೊತೆಗೆ ತ್ಯಾಗಪೂರ್ಣ ಸೇವಾ ಕರ‍್ಮವನ್ನು ವ್ರತವಾಗಿ ಅಳವಡಿಸಿಕೊಂಡರು. ಸರಳ ಜೀವನ, ಉನ್ನತ ಚಿಂತನಕ್ಕೆ ಅವರು ಮಾದರಿ.

ದೀನದಲಿತರಲ್ಲಿ ದೇವರು

ಕರಾಚಿಯಲ್ಲಿದ್ದ ಅಣ್ಣನ ಮನೆಯಲ್ಲಿ ವಾಸ. ಮಿತ್ರವರ್ಗದವರು ಪ್ರಾರಂಭಿಸಿದ ‘ನ್ಯೂ ಟೈಂಸ್’ ಪತ್ರಿಕೆಯಲ್ಲಿ ಕೆಲಸ. ಕೆಲಕಾಲ ಹೀಗೆ ಸಾಗಿತು. ಜೊತೆಗೆ ‘ಸತ್ಸಂಗ’ ಕಾರ‍್ಯಕ್ರಮಗಳು ಆರಂಭವಾದವು. ನಿಶ್ಚಿತ ಕಾರ‍್ಯಕ್ರಮ, ನಿಯಮಿತ ಜೀವನ. ಈ ವೇಳೆಗೆ ಆರಂಭವಾದ ಸ್ವಾತಂತ್ರ್ಯ ಸಂಗ್ರಾಮದ ಅಸಹಕಾರ ಚಳುವಳಿಯಲ್ಲಿ ವಾಸವಾನಿಯವರೂ ಹಿಂದುಳಿಯಲಿಲ್ಲ. ಕೊನೆಗೆ ರಾಜಕೀಯ ತನಗೆ ಸರಿಕಾಣದ್ದರಿಂದ ಸಾಮಾಜಿಕ ಸೇವೆಗೆ ಕಂಕಣ ಬದ್ಧರಾದರು. ಭಾರತದಾದ್ಯಂತ ತೀರ್ಥಕ್ಷೇತ್ರ ಗಳನ್ನು ಸಂದರ್ಶಿಸಿ ಅಲ್ಲಿನ ಅನುಚಿತ ರೀತಿ ನೀತಿಗಳನ್ನು ಕಂಡ ವಾಸವಾನಿಯವರು ಬೇಸರ ಗೊಂಡರು. ಅವರು ಬಡವರಲ್ಲಿ, ದೀನದಲಿತರಲ್ಲಿ, ಅನಾಥರಲ್ಲಿ ದೇವರನ್ನು ಕಾಣತೊಡಗಿದರು. ‘ದೇವರನ್ನು ಪರಿಶ್ರಮ, ಹೋರಾಟ, ದುರಂತ ಕಣ್ಣೀರಿನ ಜೀವನದಲ್ಲಿ ಕಾಣಬಹುದು. ಬಡವರ ಕಣ್ಣೀರು ಒರೆಸುತ್ತಾ ಮುರುಕು ಮನೆಗಳಲ್ಲಿ ದೇವರು ಇರುತ್ತಾನೆ’ ಎಂದರು ಸಾಧು ವಾಸವಾನಿಯವರು ಹೈದರಾಬಾದು, ಕರಾಚಿಗಳಲ್ಲಿ ಆರಂಭವಾದ ‘ಗೀತಾ ಸತ್ಸಂಗ’ ಸಭೆಗಳು,  ಕ್ರಮೇಣ ಬೆಳೆದು ಭಾರಿ ಸಂಸ್ಥೆಗಳಾದವು. ಇದೇ ವೇಳೆಗೆ ಡೆಹರಾಡೂನ್‌ನಿಂದ ಏಳು ಮೈಲಿದೂರದ ರಾಜಾಪುರದಲ್ಲಿ ‘ಶಕ್ತಿ ಆಶ್ರಮ’ ಆರಂಭವಾಯಿತು. ಬೇಸಿಗೆ ಕಾಲದ ಬಿಡುವಿನಲ್ಲಿ ಕಾಲೇಜನ ತರುಣರಿಗೆ ಪ್ರಾಧ್ಯಾಪಕ ವರ್ಗಕ್ಕೆ ಆಧಾತ್ಮಿಕ, ನೈತಿಕ, ಶಾರೀರಿಕ, ಮಾನಸಿಕ ಪ್ರಶಿಕ್ಷಣ ನೀಡುವ ಕೇಂದ್ರವಾಗಿ ಮುಂದೆ ಇದು ಬೆಳೆಯಿತು.

ಅಣ್ಣ ಪಹಲತ್‌ರಾಯ್ ನಿಧನರಾದರು. ಅಣ್ಣನ ಮಕ್ಕಳ ಜೊತೆಗೆ ತಂಗಿ ತಮ್ಮಂದಿರ ಭಾರವೂ ವಾಸವಾನಿಯವರ ಹೆಗಲಿಗೆ ಬಂತು. ಆದರೆ ಸಂನ್ಯಾಸಿಗೆಲ್ಲಿಯ ಸಂಸಾರ? ’ಎಲ್ಲರೂ ದೇವರ ಮಕ್ಕಳು. ದೇವರೆ ಅವರನ್ನು ಕಾಪಾಡುತ್ತಾನೆ ಎನ್ನುತ್ತಿದ್ದವರು.

ಸಖೀ ಸತ್ಸಂಗ

ಡಾಕ್ಟರ್ ಠಾಕುರ್‌ದಾಸ್ ರವರ ಮಗಳು ಪಾರ್ವತಿ ತನ್ನ ಅಣ್ಣನನ್ನು ಕಳೆದುಕೊಂಡು ಸಾಧು ವಾಸವಾನಿಯವರ ಶಿಷ್ಯಳಾದಳು. ಆಕೆಯ ಜೊತೆಗೆ ಇತರ ಕೆಲವು ಮಹಿಳೆಯರೂ ಸೇರಿದರು, ಹಾಗಾಗಿ ‘ಸಖೀ ಸತ್ಸಂಗ’ ಪ್ರಾರಂಭವಾಯಿತು. ಇದು ಕ್ರಮೇಣ ಬೆಳೆದು ಸಮಾಜ ಸೇವೆಯಲ್ಲಿ ತೊಡಗಿತು. ‘ಸಖೀ ಸ್ಟೋರ್’ ಎಂಬ ಅಂಗಡಿಯ ಮೂಲಕ ಲಾಭ ಸಂಪಾದಿಸಿ ದೀನ ದಲಿತರ ಸೇವೆಗೆ ಆ ಹಣವನ್ನು ಉಪಯೋಗಿಸಿದರು. ವರದಕ್ಷಿಣೆ ವಿರುದ್ಧ ಮಹಿಳೆಯರ ಬಾರೀ ಚಳುವಳಿ ವಾಸವಾನಿ ಯವರ ನಿರ್ದೇಶನದಲ್ಲಿ ರೂಪುಗೊಂಡು ಮಹಿಳಾ ಜಾಗೃತಿಗೆ ಕಾರಣವಾಯಿತು, ಸಮಾಜ, ಸಂಸ್ಕೃತಿ, ಶಿಕ್ಷಣ, ಧರ‍್ಮಗಳಲ್ಲಿ ಆಸಕ್ತಿ ಉಳ್ಳ ಹಲವಾರು ಧನಿಕರು  ದಾನಿಗಳು ಸಾಧು ವಾಸವಾನಿಯವರ ಚಟುವಟಿಕೆ ಸೇವಾಕಾರ‍್ಯಗಳಿಗೆ ಧನ ಸಹಾಯ ಮಾಡಿದರು. ಪರ್ದಾ ಪದ್ಧತಿ, ಮಾಂಸಹಾರಗಳ ವಿರುದ್ಧ ಚಳುವಳಿ ನಡೆಸುವುದರಲ್ಲೂ ಸಾಧು ವಾಸವಾನಿಯವರ ಪ್ರೇgಣೆ, ಹೈದರಾಬಾದು, ಕರಾಚಿಗಳ ನಡುವೆ ಸಾಧು ವಾಸವಾನಿಯವರ ಸೇವೆಯ ಕಾರ್ಯಕ್ರಮಗಳು ಹೆಣೆದುಕೊಂಡು ದೀನ ದಲಿತರ ಸೇವೆ, ಮಹಿಳೆಯರ ಮುನ್ನಡೆ, ಭಕ್ತಿ, ಧರ‍್ಮಗಳ ಜಾಗೃತಿ ಉಂಟಾಯಿತು. ‘ಸಖೀಸತ್ಸಂಗ’ ದ ಸದಸ್ಯೆಯರಿಂದ ‘ಮೀರಾ ಸ್ಕೂಲ್’ ಪ್ರಾರಂಭವಾದುದು ಕ್ರಮೇಣ ಭಾರೀ ಕಟ್ಟಡದ ಭಾರೀ ಸಂಸ್ಥೆಯಾಗಿ ಬೆಳೆಯಿತು. ಇವೆಲ್ಲಕ್ಕೂ ಸಾಧು ವಾಸವಾನಿ ಪ್ರೇರಕ ಶಕ್ತಿಯಾಗಿ ದೂರ ನಿಂತು ನಡೆಸುತ್ತಿದ್ದರು. ‘ಹರಮಂದಿರ’ ಎಂಬ ಭಾರೀ ಕಟ್ಟಡದಲ್ಲಿ ‘ಮೀರಾ ಸ್ಕೂಲ್’ ಬಂದಾಗ ಅದೊಂದು ಸಂಪೂರ್ಣ ಭಾರತೀಯ ಗುರುಕುಲದಂತೆ ಕಂಗೊಳಿಸಿತು. ಸರಳತೆ, ಸೇವೆ, ಪಾವಿತ್ರ್ಯ, ಪ್ರಾರ್ಥನೆಗಳು ಮೀರಾ ಸ್ಕೂಲ್‌ನ ಮೂಲ ಮಂತ್ರಗಳು ‘ಮೀರಾ’ ಎಂಬ ಸಾಪ್ತಾಹಿಕ ಪತ್ರಿಕೆಯೂ ಈ ಸಂಸ್ಥೆಯ ವತಿಯಿಂದ ಪ್ರಾರಂಭವಾಯಿತು. ‘ಶಕ್ತಿ’ ಆಶ್ರಮದ ಪ್ರತಿಬಿಂಬವಾಗಿ ಶಕ್ತಿ ಹೈಸ್ಕೂಲ್ ಪ್ರಾರಂಭ ವಾಯಿತು.

ಜೀವನ ರೀತಿ

ಸಿಂಧ್‌ನ ಈ ಸಂತ ಭಾರತದ ಎಲ್ಲೆಡೆ ಸಂಚರಿಸಿ ಭಕ್ತಿ, ಜ್ಞಾನ, ಸೇವೆ, ಸತ್ಯ, ಪ್ರಾಮಾಣಿಕತೆಗಳ ಸಂದೇಶ ಸಾರಿದರು. ಬುದ್ಧನ ಅಹಿಂಸೆ, ಏಸುಕ್ರಿಸ್ತನ ದಯೆ, ಶ್ರೀಕೃಷ್ಣನ ದೀನ ಸೇವಾ ಭಾವನೆ, ಗುರುನಾನಕರ ಭಕ್ತಿ, ಮೀರಾಳ ತ್ಯಾಗ-ಇವರ ಆದರ್ಶಗಳು. ನಿರ್ಗತಿಕ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ಬೇಡಿದರು. ಜಟಕಾದ ಕುದುರೆಗೆ ವೇಗವಾಗಿ ಓಡಲು ಹೊಡೆ ಯುವುದನ್ನು ಕಂಡು ಗಾಡಿ ನಿಲ್ಲಿಸಿ ಕೆಳಗಿಳಿದು ನಡೆದೇ ಹೋದರು. ಬಡವರಿಗೆ ತಮ್ಮ ಮೈ ಮೇಲಿನ ಬಟ್ಟೆಯನ್ನು ಕೊಟ್ಟರು. ಕುಳಿತಲ್ಲಿ ನಿಂತಲ್ಲಿ ಭಜನೆ, ಹರಿನಾಮ ಕೀರ್ತನೆ. ಮಾತನಾಡಿದರೆ ಮಾನವ ಪ್ರೇಮ. ನಡೆನುಡಿಗಳಲ್ಲಿ ವಿನಯ ಸರಳತೆ, ದೈವಭಕ್ತಿಯ ಅಣಿ ಮುತ್ತುಗಳು. ಹಿಂದೂಗಳಿಗೆ ‘ಸಾಧು’ ಮುಸಲ್ಮಾನರಿಗೆ ‘ದುರ‍್ವೇಶ್.’ ಇಬ್ಬರಲ್ಲಿಯೂ ಪ್ರೀತಿ. ವಿಶ್ವಾಸ.

ಮುಂಬಯಿಗೆ ಬಂದರು

ಸ್ವಾತಂತ್ರ್ಯ ಸಂಗ್ರಾಮದ ಬಿಸಿ ಏರಿತು. ಭಾರತ ಭಾಗವಾಯಿತು. ಇತ್ತ ಸ್ವಾತಂತ್ರ್ಯದ ಆನಂದ. ಅತ್ತ ಸಹಸ್ರಾರು ನಿರಾಶ್ರಿತರು ಹೈದರಾಬಾದ್ ಕರಾಚಿಯಿಂದ ಬಾರತಕ್ಕೆ ವಲಸೆ ಬಂದರು. ನಿರ್ಗತಿಕರಾದರು. ಸಾಧು ವಾಸವಾನಿಯವರನ್ನೂ ಭಕ್ತರು, ಶಿಷ್ಯರು ಕರೆದರು. ಅವರು ಜಗ್ಗಲಿಲ್ಲ. ಹಿಂದುಗಳಲ್ಲಿ ಧೈರ‍್ಯ ತುಂಬಿ ಮುಸಲ್ಮಾನರಲ್ಲಿ ಸೌಹಾರ್ದ ಭಾವ ಉಂಟುಮಾಡಲು ಪ್ರಯತ್ನಿಸಿದರು. ಆದರೆ ಗಾಂಧೀಜಿಯ ಕೊಲೆಯ ನಂತರ ನಡೆದ ಹಿಂಸಾಕೃತ್ಯಗಳಿಂದ ಕಂಗೆಟ್ಟು ಜನರ ರಕ್ತಪಾತಗಳನ್ನು ಕಂಡಾಗ ಭಾರತಕ್ಕೆ ಹೋಗುವ ನಿರ್ಧಾರ ಮಾಡಿದರು. ಸೇವಾಸಂಸ್ಥೆಗಳು ಬರಿದಾದವು. ಮೀರಾಸ್ಕೂಲ್‌ನ ಬಾಲಕಿಯರು ವಲಸೆ ಹೋದರು.

ಬಿಳಿಯ ಕೆದರು ಕೂದಲಿನ ತುಸುಬಾಗಿ ನಡೆವ ನಿಲುವಂಗಿಯ ಸಂತ ಸಿಂಧದ ಮರುಭೂಮಿಯಿಂದ ಭಾರತಕ್ಕೆ ಕಾಲಿಟ್ಟರು. ಮುಂಬಯಿಯಲ್ಲಿದ್ದ ಅವರ ಸಹಸ್ರಾರು ಭಕ್ತರು ಅವರನ್ನು ಸ್ವಾಗತಿಸಿದರು. ಕೆಲವೇ ತಿಂಗಳಲ್ಲಿ ಪೂನಾದಲ್ಲಿ ಅವರ ಕಾರ್ಯಕ್ಷೇತ್ರ ಮತ್ತೆ ಪ್ರಾರಂಭವಾಯಿತು. ಕಾರ್ಯಕರ್ತರು, ಶ್ರದ್ಧಾಳುಗಳು ಇಲ್ಲಿ ಕೂಡಿಕೊಂಡರು. ಅವರ ಉದಾರ ಕಾಣಿಕೆಗಳಿಂದ ಪೂನಾದಲ್ಲಿ ಕಾರ್ಯಕ್ಷೇತ್ರ ಬೆಳೆಯಿತು. ಹಳೆಯ ವಿದ್ಯಾರ್ಥಿಗಳು, ಸ್ನೇಹಿತರು ಉದಾರವಾಗಿ ಹಣ ನೀಡಿದರು. ಸ್ವಯಂಸೇವಕರ ತಂಡ ಕಂಕಣ ಕಟ್ಟಿ ನಿಂತಿತು. ಸಾಧು ವಾಸವಾನಿಯವರು ಹೈದರಾಬಾದ್, ಕರಾಚಿಯಲ್ಲಿ ನಡೆಸುತ್ತಿದ್ದ ಚಟುವಟಿಕೆಗಳೆಲ್ಲ ಶೈಕ್ಷಣಿಕ, ಸಾಮಾಜಿಕ. ಧಾರ‍್ಮಿಕ. ಪೂನಾ ಮುಂಬಯಿಯಲ್ಲಿ ಇಮ್ಮಡಿಯಾಗಿ ತಲೆ ಎತ್ತಿದುವು. ಆಸ್ಪತ್ರೆ, ಮಹಿಳೆಯರಿಗಾಗಿ ವೃತ್ತಿಶಿಕ್ಷಣ, ಧಾರ‍್ಮಿಕ ಗ್ರಂಥಗಳ ಪ್ರಕಟಣೆ, ಮೀರಾ ಹೈಸ್ಕೂಲ್, ಕಾಲೇಜುಗಳು ಎದ್ದು ನಿಂತವು. ಅಲ್ಲಿ ಹೈದರಾಬಾದು ಕರಾಚಿಗಳ ನಡುವೆ ಓಡಾಡುತ್ತಿದ್ದ ಸಾಧು ವಾಸವಾನಿ ಇಲ್ಲಿ ಪೂನಾ ಮುಂಬಯಿಗಳ ನಡುವೆ ಓಡಾಡಿದರು. ೧೯೫೨ ರಲ್ಲಿ ಸಾಧು ವಾಸವಾನಿಯವರ ೭೩ ನೇ ಜನ್ಮದಿನೋತ್ಸವ ಸಂದರ್ಭದಲ್ಲಿ ಪ್ರಾರಂಭವಾದ ‘ಮೀರಾ ಯೂನಿಯನ್’ ಬೃಹಾದಾಕಾರವಾಗಿ ಸೇವಾ ಕ್ಷೇತ್ರದಲ್ಲಿ ಇಳಿಯಿತು.

ಕಡೆಯ ದಿನಗಳು

೧೯೫೯ ರಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ಮೂರು ದಿನಗಳ ಬಾರೀ ಉತ್ಸವ ಜರುಗಿತು. ಉತ್ಸವದ ಕೊನೆಯ ದಿನ ಸಾಧು ವಾಸವಾನಿಯವರು ತಮ್ಮ ಕೋಣೆಯಲ್ಲಿ ಜಾರಿ ಬಿದ್ದರು. ತೊಡೆಯ ಎಲುಬು ಮುರಿಯಿತು. ಸುದ್ದಿ ತಿಳಿದ ತಂಗಿ, ತಮ್ಮಂದಿರು ಬಂದರು, ವೈದ್ಯರುಗಳ ಸತತ ಪರಿಶ್ರಮದಿಂದ ಸಾಧು ವಾಸವಾನಿ ಬದುಕಿಕೊಂಡರು. ಆದರೆ ಓಡಾಡುವುದು ಕಷ್ಟವಾಯಿತು. ಇದೇ ವೇಳೆಗೆ ಅವರ ೮೦ ನೇ ಜನ್ಮದಿನೋತ್ಸವದ ಸಿದ್ಧತೆ ನಡೆದಿತ್ತು. ನಿಧಿ ಸಮರ್ಪಣೆಗಾಗಿ ನಿಧಿ ಸಂಗ್ರಹ ಕಾರ‍್ಯ ನಡೆದಿತ್ತು. ವಾಸವಾನಿಯವರ ನೋವು, ನರಳಿಕೆ, ಜ್ವರಗಳ ನಡುವೆ ಭಜನೆ, ನಾಮಕೀರ್ತನೆಗಳಲ್ಲಿ ಮಗ್ನರಾಗಿ ಎಲ್ಲವನ್ನೂ ಮರೆತು ಬಿಡುತ್ತಿದ್ದರು. ನವಂಬರ್ ೨೫ ರಂದು ಜನ್ಮದಿನೋತ್ಸವ, ‘ನಿಧಿ ಸಮರ್ಪಣೆ’ ಸರಳವಾಗಿ ನಡೆಯಿತು. ತಮ್ಮ ಶೈಕ್ಷಣಿಕ ಚಟುವಟಿಕೆಗಳಿಗೆ ನಿಧಿಯನ್ನು ವರ್ಗಾಯಿಸಿದ ಸಾಧು ವಾಸವಾನಿ ಎಂದಿನಂತೆ ನಿರ್ಲಿಪ್ತರಾಗಿದ್ದರು. ದೇಶ ವಿದೇಶದ ಮಹಾ ಮಹಾ ಮೇಧಾವಿಗಳು ಮುಖಂಡರು ಬಂದು ಸಾಧು ವಾಸವಾನಿ ಯವರ ಚಟುವಟಿಕೆಗಳನ್ನು ನೋಡಿ ಹೊಗಳಿದರು. ಇದೇ ವೇಳೆಗೆ ಅಭಯ, (ಬಡವರಿಗೆ, ನಿರ್ಗತಿಕರಿಗೆ ಆಶ್ರಯ ನೀಡುವಿಕೆ) ಅಹಿಂಸೆ, ಅಸಂಗಗಳೆಂಬ (ಯಾವುದರಲ್ಲೂ ಅತಿ ಮೋಹ ಇಲ್ಲದಿರುವುದು) ಮೂರು ಮಹಾಮಂತ್ರ ಗಳನ್ನು ಸಾಧು ವಾಸವಾನಿ ಜಗತ್ತಿಗೆ ಸಾರಿದರು. ’ಗೀತಾ ಭವನ’ದ ಉದ್ಘಾಟನೆಯ ಕಾರ‍್ಯಕ್ರಮ ಈ ಮಂತ್ರದ ಪ್ರಸಾರದೊಂದಿಗೆ ನಡೆಯಿತು. ಮಲಗಿದಲ್ಲಿಂದ ಮಗ್ಗಲು ಬದಲಾಯಿಸಲೂ ಅನ್ಯರ ಸಹಾಯ ಬೇಕು. ಆದರೆ ಅದಾವುದರ ಪರಿವೆಯೂ ಇಲ್ಲ. ಕಿವಿ ಕೇಳಿಸದು. ಆದರೆ ‘ಹೃದಯಕ್ಕೆ ಕೇಳಿಸುತ್ತದೆ’ ಎನ್ನುತ್ತಿದ್ದರು. ತಮ್ಮ ಮಂಘರಾಂ, ತಂಗಿಯ ಮಗ ಡಾಕ್ಟರ್ ಹರಿಕೃಷ್ಣ ಮೃತರಾದರು. ಇಬ್ಬರದೂ ದುರ‍್ಮರಣ. ತಂಗಿ ಪಾಪುರ್ ಕೂಡ ನಿಧನರಾದ ಸುದ್ದಿ ಬಂತು. ತಂಗಿಯ ಅಂತ್ಯಕ್ರಿಯೆಯಲ್ಲಿ ತಾನು ಸ್ವತಃ ಭಾಗವಹಿಸಿ ಬಂದ ವಾಸವಾನಿ ಜ್ವರ ಪೀಡಿತರಾದರು. ನೋವು ನರಳಾಟಗಳಿಲ್ಲ. ಕಾಲ ಉರುಳಿತು. ಅವರ ಸೇವೆಯ ಕೆಲಸ ನಿಲ್ಲಲಿಲ್ಲ. ದಿನವೂ ಬರುತ್ತಿದ್ದ ನೂರಾರು ಭಕ್ತರಿಗೆ ಸಂದರ್ಶನ, ಸಾಂತ್ವನದ ಮಾತು, ಭಜನೆ, ಕೀರ್ತನೆ, ಉಪದೇಶಗಳಲ್ಲಿ ನೋವು ಕಾಣಿಸುತ್ತಿರಲಿಲ್ಲ. ನಿದ್ದೆ ಬಾರದು. ನೋವು ಅಧಿಕ. ಆಗ ನಾಮಸಂಕೀರ್ತನೆ, ಶೈಕ್ಷಣಿಕ ಸಂಸ್ಥೆಗಳಿಗೆ ಮಹರ್ಷಿ ಕರ್ವೆಯವರು ಅಧ್ಯಕ್ಷರಾದರು ಡಾಕ್ಟರ್ ರಾಧಾಕೃಷ್ಣನ್‌ರವರು ಸಾಧು ವಾಸವಾನಿ ಯವರನ್ನು ಕಂಡು ಹೋದರು. ಅಣ್ಣನ ಮಗ ಜಶನ್ ಯಾವಾಗಲೂ ಜೊತೆಗೇ ಇರಬೇಕು. ೧೯೬೫ ದಾಟಿತು. ೧೯೬೬ಕ್ಕೆ ಕಾಲಿರಿಸಿತು. ಸಾಧು ವಾಸವಾನಿ ಯವರಆರೋಗ್ಯ ದಿನ ದಿನಕ್ಕೆ ಕ್ಷೀಣಿಸುತ್ತಿತ್ತು. ಅವರು ದೇವರ  ಪಾದಕ್ಕೆ ಹತ್ತಿರವಾಗುತ್ತಿದ್ದರು.

ಅವರ ಸಾಧನೆ ಅಮರ

ಜನವರಿ ೧೫ ಚಹಾಪಾನದ ನಂತರ ಜಶನ್‌ನನ್ನು ಕರೆದು ತನ್ನೆಲ್ಲ ಬಟ್ಟೆಬರೆಗಳಲ್ಲಿ ಎರಡು ಜೊತೆ ಮಾತ್ರ ಇರಿಸಿ ಉಳಿದುದನ್ನು ಬಡವರಿಗೆ ದಾನ ಮಾಡಲು ಹೇಳಿದರು. ೧೬ರ ಬೆಳಿಗ್ಗೆ ಮಾಮೂಲಿನಂತೆ ವೈದ್ಯರುಗಳು ಪರೀಕ್ಷೀಸಿದರು. ಉಸಿರಾಟಕ್ಕೆ ಸ್ವಲ್ಪ ತೊಂದರೆಯಾಗುತ್ತಿತ್ತು. ಔಷದೋಪಚಾರ ನಡೆಯಿತು. ದಿನಚರಿ ಕೆಡಲಿಲ್ಲ. ಸಂಜೆಗೆ ಮತ್ತೆ ಸ್ವಲ್ಪ ಕಷ್ಟ ಕಾಣಿಸಿತು. ‘ಮಗೂ ಜಶನ್ ನೀನು ಈ ರಾತ್ರೆ ಇಲ್ಲೇ ಇರು’ ಎಂದರು. ದೀಪ ಆರಿಸಿ ಎಲ್ಲರೂ ಮಲಗಿದರು. ಮಗ್ಗುಲು ಬದಲಾಯಿಸಲೂ ಬೇರೆಯವರ ಸಹಾಯ ಬೇಕು. ಬೆಳಗಿನ ಜಾವ ಇಂದೇಕೆ ರಾತ್ರೆ ಕರೆಯಲೇ ಇಲ್ಲ ? ಜಶನ್ ಹತ್ತಿರ ಹೋಗಿ ‘ಈ ಕಡೆ ತಿರುಗಿ ಮಲಗುತ್ತೀರಾ?’ ಎಂದರು. ಉತ್ತರವಿಲ್ಲ ಒಡನೇ ಡಾಕ್ಟರ್ ಗಳಿಗೆ ಕರೆ ಕಳಿಸಿದರು. ಆದರೇನು? ವಾಸವಾನಿಯವರು ಆಗಲೇ ಲೋಕ ಬಿಟ್ಟಿದ್ದರು. ಮಿಂಚಿನ ವೇಗದಲ್ಲಿ ಸುತ್ತೆಲ್ಲ ಸುದ್ದಿ ಹರಡಿತು. ಬಿರುಗಾಳಿಯಂತೆ ದೇಶಾದ್ಯಂತ ಬೀಸಿ ಮಧ್ಯಾಹ್ನವೆಲ್ಲ ವಿಶ್ವಕ್ಕೆ ತಿಳಿಯಿತು. ಸಾಧು ವಾಸವಾನಿ ಇನ್ನಿಲ್ಲ. ಮರುಭೂಮಿಯ ಮಹಾಸಂತ ಕಾಲವಾದರು. ಆಧುನಿಕ ಕಾಲದ ಋಷಿ ಸಮಾಧಿಸ್ಥರಾದರು.  ಆದರೆ ಸಾಧು ವಾಸವಾನಿಯವರ ಉಪದೇಶ, ಆದರ್ಶ, ಅವರು ಕಟ್ಟಿ ಬೆಳೆಸಿದ ಸಂಸ್ಥೆಗಳು ಅವರ ನೆರಳಿನಲ್ಲಿ ಬೆಳೆದ ಸಹಸ್ರಾರು ಜನ ಶಿಷ್ಯರಿಂದ ಇಂದಿಗೂ ಸತ್ಯ. ಎಂದೆಂದಿಗೂ ಇರುತ್ತದೆ.