ಶ್ರೀನಿವಾಸಚಾರ್ – ಬಕುಲಮ್ಮ ದಂಪತಿಗಳ ಸುಪುತ್ರರಾಗಿ ೨೨-೫-೧೯೧೭ ರಂದು ಪಾವಗಡದಲ್ಲಿ ಜನಿಸಿದ ತಾತಾಚಾರ್ ಅವರ ತಂದೆ ಹಾಗೂ ಚಿಕ್ಕಪ್ಪ ಶೇಷಾಚಾರ್ ಇಬ್ಬರೂ ವಯೋಲಿನ್‌ ವಿದ್ವಾಂಸರು. ಮನೆಯಲ್ಲಿಯೇ ಆರಂಭವಾದ ಸಂಗೀತ ಶಿಕ್ಷಣ ಮುಂದೆ ವೀಣಾ ಕೃಷ್ಣಮಾಚಾರ್ ಹಾಗೂ ರಾಳ್ಲಪಲ್ಲಿ ಅನಂತ ಕೃಷ್ಣಶರ್ಮ ಅವರಲ್ಲಿ ಪ್ರೌಢ ರೀತಿಯಲ್ಲಿ ಮುಂದೆ ಸಾಗಿತು.

ಗುರು ಅನಂತ ಕೃಷ್ಣಶರ್ಮರ ಮನೆಯಲ್ಲಿಯೇ ಆಹ್ವಾನಿತ ಸಹೃದಯರ ಸಮ್ಮುಖದಲ್ಲಿ ಆರಂಭವಾದ ತಾತಾಚಾರ್ ಅವರ ಕಛೇರಿ ಜೀವನ ತಡೆಯಿಲ್ಲದೆ ಮುನ್ನಡೆಯಿತು. ಪ್ರತಿಷ್ಠಿತ ಸಭೆಗಳ ಆಶ್ರಯದಲ್ಲಿ ದೇಶದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನಡೆಸಿದರು. ಪಕ್ಕವಾದ್ಯವಾಗಿಯೂ ತನಿ ವಾದಕರಾಗಿಯೂ ಅವರ ಸಾಧನೆ ಅಪಾರ.

ಮದ್ರಾಸ್‌ ಆಕಾಶವಾಣಿಯ ನಿಲಯದ ಕಲಾವಿದರಾಗಿ ಮೊದಲು ಸೇವೆಯಲ್ಲಿ ತೊಡಗಿ ನಂತರ ಮೈಸೂರು ಆಕಾಶವಾಣಿಯಲ್ಲಿಯೂ, ಬೆಂಗಳೂರು ಆಕಾಶವಾಣಿಯಲ್ಲಿಯೂ ಸೇವೆ ಸಲ್ಲಿಸಿದರು. ಆಕಾಶವಾಣಿಯ ವಾದ್ಯ ವೃಂದದ ನಿರ್ದೇಶಕರಾಗಿ ಹಲವಾರು ಉತ್ತಮ ಸಂಗೀತ ರೂಪಕಗಳು ರೂಪತಾಳಲು ಕಾರಣರಾದರು.

ಹಲವಾರು ಸಂಗೀತ ದಿಗ್ಗಜರಿಗೆ ವಯೋಲಿನ್‌ ಪಕ್ಕವಾದ್ಯ ನುಡಿಸಿರುವುದಲ್ಲದೆ ಅನ್ಯ ವಯೋಲಿನ್‌ ಕಲಾವಿದರೊಡನೆ ಯುಗಳ ಕಾರ್ಯಕ್ರಮ ನೀಡಿಯೂ ಸಹ ವಿಖ್ಯಾತಿ ಪಡೆದರು. ಪುತ್ರ ಟಿ. ಟಿ. ಶ್ರೀನಿವಾಸನ್‌ ಸೇರಿದಂತೆ ಹಲವು ಮಂದಿ ಉತ್ತಮ ವಯೋಲಿನ್‌ ವಾದಕರಿಗೆ ತರಬೇತಿ ನೀಡಿರುತ್ತಾರೆ. ‘ಕಲಾಭೂಷಣ’, ‘ದಿವ್ಯಗಾನ ಅನುಭವ’, ‘ಗಾನ ಕಲಾ ಭೂಷಣ’, ‘ಕರ್ನಾಟಕ ಕಲಾ ತಿಲಕ’, ‘ವಯೋಲಿನ್‌ ವಾದನ ನಿಪುಣ’, ‘ಸಂಗೀತ ವಿದ್ಯಾ ಸಾಗರ’, ‘ಅಭಿನವ ಸಾರ್ವಭೌಮ’, ‘ಚೌಡಯ್ಯ ಪ್ರಶಸ್ತಿ’, ‘ಸಂಗೀತ ನಾದ ಕಲಾ ವಸಂತ’, ‘ಕಲಾ ಜ್ಯೋತಿ’, ‘ರಾಜ್ಯ ಸಂಗೀತ ವಿದ್ವಾನ್‌’ ಮುಂತಾದ ಪ್ರತಿಷ್ಠಿತ ಬಿರುದು ಗೌರವಗಳಲ್ಲದೆ ಹಲವು ಸಂಘ-ಸಂಸ್ಥೆಗಳ ಸನ್ಮಾನಗಳೂ ಶ್ರೀಯುತರಿಗೆ ಲಭ್ಯವಾಗಿದ್ದುವು.

ಇಂತಹ ಮಹಾ ಚೇತನವು ೮-೧೨-೨೦೦೧ ರಂದು ಅನಂತದಲ್ಲಿ ಲೀನವಾಯಿತು.