೨೨-೫-೧೯೫೦ ರಂದು ಬೆಂಗಳೂರಿನಲ್ಲಿ ಜನಿಸಿದ ರಮಾ ತಮ್ಮ ಸಂಗೀತ ಶಿಕ್ಷಣವನ್ನು ಮೊದಲಿಗೆ ಜಯಂ-ಭಾಗ್ಯಂ ಅವರಿಂದಲೂ ಬಂಗಾರುಪೇಟೆ ಕೃಷ್ಣಮೂರ್ತಿಯವರಿಂದಲೂ ಮುಂದೆ ನಾರಾಯಣಸ್ವಾಮಿ ಭಾಗವತರಿಂದಲೂ ಪಡೆದರು . ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಪ್ರೊ|| ವಿ. ರಾಮರತ್ನಂ ಅವರಿಂದಲೂ ಶಿಕ್ಷಣ ಪಡೆದರು. ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ ಪಡೆದ ಅವಧಿಯಲ್ಲಿಯೂ ಅವರ ಸಾಧನೆದ ರಾಮರತ್ನಂ ಅವರಲ್ಲಿ ಮುಂದುವರೆಯಿತು. ಇತಿಹಾಸ-ಸಂಗೀತವನ್ನು ವಿಷಯವಾಗಿ ಹೊಂದಿ ಪದವಿಯನ್ನೂ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದ ಇವರು ಆಕಾಶವಾಣಿಯ ‘ಎ’ ದರ್ಜೆ ಕಲಾವಿದರು. ಆಕಾಶವಾಣಿ – ದೂರದರ್ಶನ ಕೇಂದ್ರಗಳಿಂದ ಇವರ ಗಾಯನ ಪ್ರಸಾರವಾಗುತ್ತಿರುತ್ತದೆ.

ಸಾರ್ಕ್ ಸಂಗೀತೋತ್ಸವವೇ ಮುಂತಾದ ಮುಖ್ಯವಾದ ಉತ್ಸವಗಳಲ್ಲೂ, ಹಲವು ಸಂಘ ಸಂಸ್ಥೆ ಸಭೆಗಳ ಆಶ್ರಯದಲ್ಲೂ ಕಛೇರಿ ನೀಡಿದ್ದಾರೆ. ಜೊತೆಗೆ ಅಮೆರಿಕದಲ್ಲೂ ಪ್ರವಾಸ ಮಾಡಿ ಗಾಯನವನ್ನು ಮಾಡಿದ್ದಾರೆ. ಆಕಾಶವಾಣಿಯ ಆಡಿಷನ್‌ ಬೋರ್ಡ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಯನ ವಿಭಾಗದ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಸಂಗೀತ ವಿಭಾಗದ ಅಧ್ಯಾಪಕಿಯಾಗಿ, ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿರುವ ರಮಾ ಅವರ ಶಿಷ್ಯರು ಅನೇಕ. ಇವರಿಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ೨೦೦೫-೦೬ರ ಸಾಲಿನಲ್ಲಿ ಪ್ರಶಸ್ತಿ ಲಭಿಸಿದೆ.