ಟಿ.ಎಸ್.ವೆಂಕಣ್ಣಯ್ಯನವರು ೧೮೮೫ ರಲ್ಲಿ ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ತಳುಕು ಗ್ರಾಮದಲ್ಲಿ ಜನಿಸಿದರು. ಇವರ ವ್ಯಕ್ತಿತ್ವ ಬಹುಮುಖವಾದುದು. ಹೊಸಗನ್ನಡ ಸಾಹಿತ್ಯವನ್ನು ಬೆಳೆಸಬೇಕಾಗಿದ್ದಂತ ಪರ್ವಕಾಲದಲ್ಲಿ ಇವರ ಪಾತ್ರ ಗಮನಾರ್ಹ. ಇವರು ಕನ್ನಡದ ಜೊತೆಗೆ ತಮಿಳು, ತೆಲುಗು, ಇಂಗ್ಲಿಷ್, ಬಂಗಾಳಿ ಭಾಷಾಸಾಹಿತ್ಯದಲ್ಲಿ ಪಾಂಡಿತ್ಯ ಪಡೆದಿದ್ದರು. ಇವರ ಸತ್ಸಂಗ, ಆತ್ಮವಿಮರ್ಶೆ, ಅಂತರ್ಮುಖತೆಗಳಿಂದ ಸುಸಂಸ್ಕೃತರಾಗಿ ಸಾಧುಗಳಂತಿದ್ದರು. ಸುಪ್ರಸಿದ್ದ ಕನ್ನಡ ತ್ರೈಮಾಸಿಕ ಪತ್ರಿಕೆಯಾದ ಪ್ರಬುದ್ದ ಕರ್ನಾಟಕ- ಇತ್ಯಾದಿ ಸಂಸ್ಥೆಗಳನ್ನೂ, ಪತ್ರಿಕೆಗಳನ್ನೂ ಪೋಷಿಸಿ ಬೆಳೆಸುವುದರಲ್ಲಿಯೂ ಹೊಸಗನ್ನಡ ಸಾಹಿತ್ಯ ಸರ್ವತೋಮುಖವಾಗಿ ಹಬ್ಬಿ ಹರಡುವುದರಲ್ಲಿಯೂ ಅದ್ವಿತೀಯವಾದ ಪಾತ್ರವನ್ನು ವಹಿಸಲು ಸಾಧ್ಯವಾಯಿತು.

ವೆಂಕಣ್ಣಯ್ಯನವರು ಕನ್ನಡದ ಜೊತೆಗೆ ತೆಲುಗು, ಇಂಗ್ಲಿಷ್,ಬಂಗಾಳಿ ಮತ್ತು ತಮಿಳು ಭಾಷಾ ಸಾಹಿತ್ಯಗಳಲ್ಲಿ ಆಳವಾದ ಪಾಂಡಿತ್ಯವನ್ನು ಗಳಿಸಿಕೊಂಡಿದ್ದರು. ಸಿದ್ದರಾಮಚಾರಿತ್ರ್ಯ, ಹರಿಶ್ಚಂದ್ರ ಕಾವ್ಯ ಸಂಗ್ರಹ, ಕಾದಂಬರೀ ಸಂಗ್ರಹ, ಬಸವರಾಜ ದೇವರ ರಗಳೆ, ಇವು ಅವರ ಸಂಪಾದಿತ ಗ್ರಂಥಗಳು.

ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟವಾಗಿರುವ ಕನ್ನಡ ಕೈಪಿಡಿಗೆ ಹಳಗನ್ನಡ ವ್ಯಾಕರಣ ಮತ್ತು ಭಾಷಾಚರಿತ್ರೆಯ ಭಾಗಗಳನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯಪರಿಷತ್ತು ಪ್ರಕಟಿಸಿದ ಪಂಪಭಾರತ ಮತ್ತು ಪ್ರಾಚ್ಯ ಸಂಶೋಧನಾಲಯ ಪ್ರಕಟಿಸಿದ ಕುಮಾರವ್ಯಾಸ ಭಾರತ, ಇವುಗಳ ಸಂಪಾದನಾ ಕಾರ್ಯದಲ್ಲೂ ಇವರು ಮುಖ್ಯ ಪಾತ್ರ ವಹಿಸಿದ್ದಾರೆ. ರವೀಂದ್ರರು ಸಾಹಿತ್ಯ ವಿಷಯವಾಗಿ ಬರೆದ ಲೇಖನಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅದನ್ನು ಪ್ರಾಚೀನ ಸಾಹಿತ್ಯ ಎಂಬ ಹೆಸರಿನಿಂದ ಪ್ರಕಟಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ತರಾಗಿದ್ದ ಇವರು ಕನ್ನಡದ ಹೊಸ ಪೀಳಿಗೆಯ ಸಂವೇದನೆಯ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದರು.

ವೆಂಕಣ್ಣಯ್ಯನವರ ಕೃತಿಗಳು ವಿದ್ವತ್ ಪೂರ್ಣವಾಗಿವೆ. ಆಳವಾದ ಸಂಶೋಧನೆಯ ಫಲಗಳಾಗಿವೆ. ಅವು ಗಂಬೀರವಾದ ಚಿಂತನೆಯಿಂದ ಗಾಡವಾದ ವಿಮರ್ಶನಾ ಶಕ್ತಿಯಿಂದ ರೂಪುಗೊಂಡಿವೆ. ಅವರ ಶೈಲಿ ಸರಳ ಹಾಗೂ ಸ್ಪಷ್ಟ.