ಅರುಣಾಚಲ ಭಾಗವತರ ಸುಪುತ್ರರಾಗಿ (೧೫-೫-೧೯೪೧) ೧೯೩೯ ರಲ್ಲಿ ಜನಿಸಿದವರು ಮಣಿ. ಇವರ ತಾತಾ ಪಾಲ್ಘಾಟ್‌ ಅನಂತರಾಮ ಭಾಗವತರು. ದೊಡ್ಡಪ್ಪ ಸೋಮೇಶ್ವರ ಭಾಗವತರು. ಜಯಂ ಮತ್ತು ಭಾಗ್ಯಂ ಇವರ ಸೋದರಿಯರು. ಇಂತಹ ಸಂಗೀತಮಯ ವಾತಾವರಣದಲ್ಲಿ ಮೈಸೂರಿನಲ್ಲಿ ಜನಿಸಿದ ಮಣಿಯವರು ಸಿ.ಕೆ. ಅಯ್ಯಾಮಣಿ ಅಯ್ಯರವರಲ್ಲಿ ಕ್ರಮಬದ್ಧವಾಗಿ ಶಿಕ್ಷಣ ಪಡೆದು, ಮೃದಂಗ ವಾದನದಲ್ಲಿ ಪರಿಣತಿ ಪಡೆದರು. ಮಣಿಯವರಿಗೆ ಖಂಜರಿ ವಾದನದಲ್ಲೂ ಪರಿಶ್ರಮವಿದೆ. ಅಕ್ಕಂದಿರಿಗೆ ಪಕ್ಕ ವಾದ್ಯ ನುಡಿಸುವ ಮೂಲಕ ಹತ್ತನೇ ವಯಸ್ಸಿನಲ್ಲಿಯೇ ವೇದಿಕೆ ಏರಿದವರು ಸಾಧನೆಯಲ್ಲೂ, ಜೀವನದಲ್ಲೂ ಏರುತ್ತಲೇ ಬಂದರು.

ನಾಡಿನಲ್ಲೂ, ದೇಶದಲ್ಲೂ, ಹೊರ ದೇಶಗಳಲ್ಲೂ ಶಿಷ್ಯರ ತಂಡವನ್ನೇ ಹೊಂದಿರುವ ಉತ್ತಮ ಗುರುಗಳೂ ಆಗಿದ್ದಾರೆ. ಸಂಗೀತ ಕ್ಷೇತ್ರದ ಎಲ್ಲಾ ಸುಪ್ರಸಿದ್ಧ ವಿದ್ವಾಂಸ-ವಿದುಷಿಯರಿಗೂ ಪಕ್ಕವಾದ್ಯ ನುಡಿಸಿ ಮನ್ನಣೆ ಪಡೆದಿದ್ದಾರೆ. ದೇಶದಾದ್ಯಂತ ಸುಪ್ರತಿಷ್ಠ ಸಮ್ಮೇಳನ, ಸಭೆ, ಉತ್ಸವಾದಿಗಳಲ್ಲೂ ಇವರ ವಾದನ ಮೊಳಗಿದೆ. ಆಕಾಶವಾಣಿ ದೂರದರ್ಶನ ಮಾಧ್ಯಮದಲ್ಲೂ ಇವರ ಮೃದಂಗ ವಾದನ ಪ್ರಸಾರವಾಗುತ್ತಿರುತ್ತದೆ.

‘ಕರ್ನಾಟಕ ಕಾಲೇಜ್‌ ಆಫ್‌ ಪರ್ಕಶನ್‌’ ಇವರು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುವತ್ತಿರುವ ಕಾರ್ಯಕ್ಷೇತ್ರ. ತಾಳ ತರಂಗಿಣಿ, ಲಯ ವಾದ್ಯ ತಂಡವನ್ನು ಸಂಘಟಿಸಿ ದೇಶ ವಿದೇಶಗಳಲ್ಲಿ ಹಲವಾರು  ಲಯ ವಾದ್ಯ ಸಮ್ಮೇ ಳನ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಲಯ ವಾದ್ಯ ವಿದ್ಯಾರ್ಥಿಗಳಿಗೂ, ಸಂಶೋಧಕರಿಗೂ ಬಹಳ ಉಪಯುಕ್ತವಾದ ಮೂರು ಸಂಪುಟಗಳ ‘ಸೊಗಸುಗಾ ಮೃದಂಗ ತಾಳಮು’ ಎಂಬ ಕೃತಿಯನ್ನು ಲೋಕಾರ್ಪಣ ಮಾಡಿದ್ದಾರೆ. ತಾಳವಾದ್ಯ ಪರೀಕ್ಷೆಗಳ ಪರೀಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಭಾರತೀಯ ವಿದ್ಯಾ ಭವನಗಳ ಸಂಗೀತ ವಿಭಾಗದಲ್ಲಿ ಬೋಧಕರಾಗಿ ಕೆಲಸ ನಿರ್ವಹಿಸಿದ್ದಾರೆ.

ಇಂಗ್ಲೆಂಡ್‌ ‘ಜರ್ಮನಿ’ ಸ್ವಿಟ್ಸರ್ಲೆಂಡ್‌, ಕೆನಡಾ, ಹಾಂಗ್‌ಕಾಂಗ್‌, ರಷ್ಯಾ, ಜಪಾನ್‌ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿ ಕಾರ್ಯಕ್ರಮಗಳನ್ನು, ಉಪನ್ಯಾಸಗಳನ್ನೂ ನೀಡಿದ್ದಾರೆ. ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯ ‘ಸರ್ ಹೆನ್ರಿ ವಿಲ್ಸನ್‌ ಪ್ರಶಸ್ತಿ’, ‘ಮೃದಂಗ ವಾದನರತ್ನ’, ‘ಮೃದಂಗ ಚಕ್ರವರ್ತಿ’ ‘ಲಯಗಾನ ಕೇಸರಿ’, ‘ಕಲಿಯುಗ ನಂದಿ’, ‘ಪಳನಿ ಸುಬ್ರಹ್ಮಣ್ಯ ಪಿಳ್ಳೆ ಪ್ರಶಸ್ತಿ’, ‘ಗಾನ ಕಲಾಭೂಷಣ’, ‘ಕರ್ನಾಟಕ ಕಲಾಶ್ರೀ’ ಇತ್ಯಾದಿ ಹಲವು ಗೌರವಗಳನ್ನು ಗಳಿಸಿರುವ ಶ್ರೀಯುತರ ಸಾಧನೆ ಅಭಿನಂದನೀಯ.