ಕನ್ನಡನಾಡು ಸಾಧು-ಸಂತರ, ಅನುಭಾವಿಗಳ, ಶರಣರ, ಹರಿದಾಸರ ನೆಲೆವೀಡು, ನೈತಿಕ, ಆಧ್ಯಾತ್ಮಿಕ ಮೌಲ್ಯಗಳು, ಅನುಭಾವವೇ ಪ್ರಧಾನವಾಗಿ ಶರಣರು ಸಾರಿದರು. ಆದರೆ ನೈತಿಕ, ವೈದಿಕ, ಪಾರಮಾರ್ಥಿಕ, ಜೀವನದ ದರ್ಶನವನ್ನೇ ಹರಿದಾಸರುಗಳು ಜನರೆದುರಿಗೆ ತೆರೆದಿಟ್ಟರು. ಅಂದಿನ ಕಾಲದಲ್ಲಿ ಸಂಸ್ಕೃತದಲ್ಲೇ ಇದ್ದ ತತ್ತ್ವಶಾಸ್ತ್ರಗಳನ್ನು ಪಂಡಿತರು ಮಾತ್ರ ಅರಿಯುತ್ತಿದ್ದರು. ಜನಸಾಮಾನ್ಯರಿಗೆ ಎಟಕುವ ವಸ್ತು ಅದಾಗಿರಲಿಲ್ಲ. ಆಗ ಉದಯಿಸಿದ ದಾಸ ಪಂಥದ ದಿಗ್ಗಜರು ಅದೇ ತತ್ತ್ವಶಾಸ್ತ್ರಗಳನ್ನು ತಿಳಿಯಾದ ಕನ್ನಡ ಭಾಷೆಯಲ್ಲಿ ಜನಸಾಮಾನ್ಯರಿಗೂ ತಲುಪಿಸುವ ಕೈಂಕರ್ಯವನ್ನು ಎತ್ತಿಕೊಂಡರು. ಆಗಿನ ಕಾಲದಲ್ಲಿ ಶ್ರೀ ವೇದವ್ಯಾಸರಿಂದ ರಚಿತವಾದ ಬ್ರಹ್ಮಸೂತ್ರಗಳು, ಪುರಾಣಗಳು, ಭಾರತ ಭಾಗವತಾದಿಗಳು ವ್ಯಾಸ ಸಾಹಿತ್ಯವೆಂದೂ ಖ್ಯಾತವಾಗಿತ್ತು. ಅವರದ್ದೆ ಅನುವಾದವೋ ಎಂಬಂತಿದ್ದ, ಅದಕ್ಕೆ ಸಂವಾದಿಯಾದ ಹರಿದಾಸರಿಂದ ರಚಿತವಾದ ಪದ, ಪದ್ಯ, ಸುಳಾದಿ, ಉಗಾಭೋಗಾದಗಿಳು ದಾಸಸಾಹಿತ್ಯವೆಂದು ಬಳಕೆಗೆ ಬಂತು. ದಾಸ ಸಾಹಿತ್ಯರಚನಕಾರರು ವ್ಯಾಸ ಸಾಹಿತ್ಯವನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡುವ ಅಗತ್ಯವಿತ್ತು. ದಾಸ ಸಾಹಿತ್ಯವು ಶ್ರೀನರಹರಿತೀರ್ಥರಿಂದ ಉದಯಿಸಿದರೂ ಶ್ರೀಪಾದ ರಾಜರಿಂದಲೇ ದಾಸ ಸಾಹಿತ್ಯವು ವ್ಯವಸ್ಥಿತ ರೂಪುಗೊಂಡು ದಾಸಪಂಥಕ್ಕೆ ಭದ್ರವಾದ ಬುನಾದಿ ಉಂಟಾಯಿತು. ವ್ಯಾಸತೀರ್ಥರಿಂದ ಆ ಪಂಥಕ್ಕೆ ಭವ್ಯವಾದ, ಸುಂದರವಾದ ಮಂದಿರ ನಿರ್ಮಾಣವಾಯಿತು. ಶ್ರೀಪುರಂದರ-ಕನಕದಾಸರೇ ಆದರ ಪೂಜಾರಿಗಳೂ, ಪ್ರಚಾರಕರೂ ಆದರು.

 

ಭಾರತದಲ್ಲೇ ವಿಶಿಷ್ಟವಾದ ಹರಿಕಥಾ ಕಲೆಯು ಆಗಲೇ ಕರ್ನಾಟಕದಲ್ಲಿ ಶ್ರೀಪುರಂದರದಾಸರಿಂದ ರೂಪುಗೊಂಡಿತು. ಮೊದಲು ಕೇವಲ ಪುರಾಣವಾಚನ, ತತ್ತ್ವಪ್ರವಚನವಾಗಿ ನಡೆಯುತ್ತಿದ್ದ ಪ್ರಕಾರಕ್ಕೆ ದಾಸವರ್ಯರು ಸಂಗೀತದ ಮಧುರ ಕಂಪನ್ನು ಸೇರಿಸಿ, ಹರಿಕಥಾ ಪ್ರಕಾರವನ್ನು ಬಳಕೆಗೆ ತಂದರು. ಇದು ಜನಪ್ರಿಯವೂ ಆಗಿ, ಆದರಣೀಯವೂ ಆಯಿತು. ಉಪಶಾಸ್ತ್ರೀಯ ಮಾಧ್ಯಮವಾದ ಈ ಹರಿಕಥೆಯು ಕಾಲಾಂತರದಲ್ಲಿ ಕಲಾರೂಪವನ್ನು ಪಡೆದು ಹರಿಕಥಾ ಕಲೆಯಾಗಿ ಮಾರ್ಪಟ್ಟಿತು. ಇದರಲ್ಲಿ ಸಂಗೀತ, ಸಾಹಿತ್ಯ , ಅಭಿನಯ, ನೃತ್ಯ, ಮಾತುಗಾರಿಕೆ, ಮುಂತಾದ ಅನೇಕ ಕಲೆಗಳು ಕಲೆತು ಬಂದು ಸುಂದರ ಕಲಾ ಪ್ರಕಾರವಾಗಿ ಇಂದಿನವರೆವಿಗೂ ಅನೂಚಾನವಾಗಿ ಸಾಗಿ ಬಂದಿದೆ.

 

ಇಂತಹ ಹರಿದಾಸ ಪರಂಪರೆ ನಮ್ಮ ಕನ್ನಡನಾಡಿನಲ್ಲಿ ವಿಫುಲವಾಗಿ ಬೆಳೆದು ಅವ್ಯಾಹತವಾಗಿ ನಡೆದು ಬಂದಿದೆ. ಈ ದಾಸಪರಂಪರೆಯಲ್ಲಿ ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು ಮುಂತಾದ ಅನೇಕ ಹರಿದಾಸ ರತ್ನಗಳು ಉದಿಸಿ, ಈ ಹರಿದಾಸ ಪಂಥವನ್ನು , ಹರಿಕಥಾ ಕಲೆಯನ್ನು ಬೆಳೆಸಿ, ಉಳಿಸಿಕೊಂಡು ಬಂದಿರುವರು. ಈ ಪರಂಪರೆಯಲ್ಲಿ ಉದಿಸಿದ ಇತ್ತೀಚಿನ ಧ್ರುವತಾರೆಯೇ ಹರಿಕಥಾಂಬುಧಿ ಚಂದ್ರ ವೇ||ಮೂ|| ಟಿ.ಕೆ. ವೇಣುಗೋಪಾಲದಾಸರು.

ಜನ್ಮ-ಬಾಲ್ಯ: ತುಮಕೂರಿನಲ್ಲಿ ಶ್ರೀ ವ್ಯಾಸರಾಯ ಮಠಾಧಿಕಾರಿಗಳಾಗಿದ್ದ ವೇ||ಮೂ||ಮೂರ್ತ್ಯಾಚಾರ್ಯರು ಮತ್ತು ಸರಸ್ವತಿಯಮ್ಮನವರು ದಾಸರ ಪುಣ್ಯಾತ್ಮರಾದ ತಂದೆ ತಾಯಂದಿರು. ಇವರಲ್ಲಿ ಹತ್ತನೆಯ ಮಗುವಾಗಿ ಕ್ರಿ.ಶ. ೧೯೦೦ ರ ನಾಗಪಂಚಮಿಯ ದಿನ ದಾಸರು ಜನ್ಮತಾಳಿದರು. ಇವರು ವೈದಿಕ ಮನೆತನದವರಾಗಿದ್ದು ತಂದೆ, ಅಜ್ಜ ಮೊದಲಾದವರು ನಿಷ್ಣಾತ ವೈದಿಕರಾಗಿದ್ದರು. ಹಾಗೆಯೇ ಇವರ ತಾಯಿಯ ಮನೆತನ ಪ್ರಸಿದ್ಧ ಹರಿದಾಸರದು. ಇವರಿಗೆ ಆರುಮಂದಿ ಸೊದರಮಾವಂದಿರಿದ್ದರು. ಅವರೆಲ್ಲರೂ ದಾಸ ಪಂಥವನ್ನು ಕೈಗೊಂಡು ಹರಿದಾಸರಾಗಿದ್ದರು. ಹೀಗೆ ವೇಣುಗೋಪಾಲದಾಸರಲ್ಲಿ ತಂದೆಯ ಕಡೆಯಿಂದ ವೈದಿಕ ಸಂಸ್ಕಾರಗಳು, ತಾಯಿಯ ಮನೆತನದಿಂದ ಹರಿದಾಸ ಸಂಸ್ಕಾರಗಳು ಮೇಳೈಸಿದ್ದವು. ದಾಸರ ಮನೆಯಲ್ಲಿ ಕಡು ಬಡತನ, ನಿತ್ಯದ ವೈಶ್ವದೇವಕ್ಕೂ ತತ್ವಾರವಾಗಿತ್ತು. ಇವರ ತಂದೆಯವರ ಚಿಕ್ಕಪ್ಪ ಸುಪ್ರಸಿದ್ಧ ವ್ಯಾಸರಾಯ ಮಠದ ಸುಬೇದಾರರಾದ ಶ್ರೀ ಕರಿಗಿರಿ ಆಚಾರ್ಯರು ಬಾಲಕ ವೇಣುಗೋಪಾಲನ ಸಾಕುವ ಹೊಣೆಯನ್ನು ಹೊತ್ತುಕೊಂಡರು. ಅವರು ಮೊದಲು ಆರ್ಥಿಕವಾಗಿ ಶ್ರೀಮಂತರಾಗಿದ್ದರೂ ಕೂಡ ಕೊನೆಗೆ ಕಾಲಗತಿಯಿಂದಾಗಿ ಅವರೂ ಬಡತನವನ್ನೇ ಅನುಭವಿಸಬೇಕಾಯಿತು. ಹೀಗೆ ದಾಸರ ಬಾಲ್ಯ ಕಡು ಬಡತನದಲ್ಲೇ ಕಳೆಯುವಂತಾಯಿತು. ಶಿಲ್ಪಿಯ ಅಸಂಖ್ಯಾತ ಸುತ್ತಿಗೆ ಏಟು ತಿಂದ ಶಿಲೆಯೇ ದೇವರ ವಿಗ್ರಹವಾಗಿ ಪೂಜ್ಯವಾಗುತ್ತದೆ. ಕಡಿಮೆ ಏಟು ತಿಂದ ಕಲ್ಲು ಮೆಟ್ಟಿಲಾಗಿ ಮೆಟ್ಟಲ್ಪಡುತ್ತದೆ. ಹಾಗೆಯೇ, ಬಾಲ್ಯದಲ್ಲಿ ವಿಧಿಯ  ಕೈವಾಡದ ಅನಂತ ಕಷ್ಟ ಕೋಟಲೆಗಳನ್ನು ಅನುಭವಿಸಿದ ವ್ಯಕ್ತಿಯೇ ಮುಂದೆ ಮಹಾಪುರುಷನಾಗ ಬಲ್ಲನೆಂಬುದನ್ನೂ, ಕಷ್ಟಗಳಿಗೆ ಅಂಜಿದವನು, ಕಷ್ಟಗಳನ್ನು ಅನುಭವಿಸದವನು ಇಷ್ಟವನ್ನು ಪಡೆಯಲಾರ, ಸುಖವನ್ನು ಹೊಂದಲಾರನೆಂಬುದನ್ನು ನಿರೂಪಿಸುವಂತೆ ಅವರ ಬಾಲ್ಯ ಕಳೆದಿತ್ತು.

 

ವಿದ್ಯಾಭ್ಯಾಸ: ವೇಣುಗೋಪಾಲದಾಸರ ವಿದ್ಯಾಭ್ಯಾಸ, ವೈದಿಕ ಮನೆತನವಾದ್ದರಿಂದ, ಬಾಲ್ಯದಲ್ಲೇ ತುಮಕೂರಿನ ಶೃಂಗೇರಿ ಮಠದ ವೇದ ಪಾಠಶಾಲೆಯಲ್ಲಿ ಋಗ್ವೇದದ ಅಧ್ಯಯನದೊಂದಿಗೆ ಪ್ರಾರಂಭವಾಯಿತು. ವೇದಾಧ್ಯಯನದಿಂದ ವಾಖ್‌ ಶುದ್ಧವಾಗಿ, ಉಚ್ಚಾರ ಸ್ಪಷ್ಟವಾಗುತ್ತದೆ. ವೇದ ಓದಿದವರ ಮಾತಿನಲ್ಲಿ ಒಂದು ವಿಶಿಷ್ಟವಾದ ಮಧುರತೆ, ಸೌಂದರ್ಯ ತುಂಬಿರುತ್ತದೆ. ವೇದಪಾಠದ ಜೊತೆಗೆ ಸಂಸ್ಕೃತದ ಕಲಿಕೆಯೂ  ಮುಂದುವರಿಯಿತು. ಹಾಗೆಯೇ, ಪೌರೋಹಿತ್ಯವನ್ನೂ ಕಲಿತುಕೊಂಡರು. ಆದರೆ ಅವರು ಜೀವನದಲ್ಲಿ ಪೌರೋಹಿತ್ಯವನ್ನು ಎಂದು ಮಾಡಿರಲಿಲ್ಲ. ಆಂತರಿಕ ಸಂಸ್ಕಾರ ಬಲದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಡೆಗೆ ಮನ ಒಲಿದು ಸಂಗೀತಾಭ್ಯಾಸವನ್ನು  ಮಾಡಿದರು. ಆಗಲೇ ತುಮಕೂರಿನಲ್ಲಿದ್ದ ರಾಯರ ಮಠದ ಘನವಿದ್ವಾಂಸರಾದ ಶ್ರೀ ರಾಘವೇಂದ್ರಾಚಾರ್ಯರಲ್ಲಿ ಭಾರತ-ಭಾಗವತಾದಿ ಆರ್ಷೇಯ ಗ್ರಂಥಗಳ ಶಾಸ್ತ್ರೀಯ ಅಧ್ಯಯನವೂ ನಡೆಯಿತು. ಜೊತೆಗೆ ಇಂಗ್ಲಿಷ್‌ ಎಲ್‌.ಎಸ್‌. ನಲ್ಲಿಯೂ ಉತ್ತೀರ್ಣರಾದರು. ಬಳಿಕ ತುಮಕೂರಿನಲ್ಲೇ ಉಪಾಧ್ಯಾಯರಾಗಿ ಆರು ವರ್ಷಕಾಲ ಸೇವೆ ಸಲ್ಲಿಸಿದರು. ಆದರೆ ಹರಿಚಿತ್ತವೇ ಬೇರೆಯಾಗಿತ್ತು. ಈ ಬಾಲಕ ಮುಂದೆ ಮಹಾನ್‌ ಹರಿದಾಸನಾಗಿ ಸಾವಿರಾರು ಜನರಿಗೆ ತತ್ತ್ವಬೋಧನೆ ಮಾಡುವವನು, ಈ ನಾಲ್ಕು ಗೋಡೆಗಳ ನಡುವೆ ಕೇವಲ ಕೆಲವೇ ಹುಡುಗರಿಗೆ ಪಾಠ ಹೇಳಿಕೊಡುವುದು ವಿಪರ್ಯಾಸವೇ. ಆದ್ದರಿಂದ ಭಗವತ್‌ ಪ್ರೇರಣೆಯಿಂದ ಅವರ ಮನಸ್ಸು ಹರಿಕಥೆಯ  ಕಡೆಗೆ ಸೆಳೆಯಿತು. ವಿಧಿಯು ಅವರನ್ನು ಬೆಂಗಳೂರಿಗೆ ಎಳೆತಂದಿತು.

 

ವೇಣುಗೋಪಾಲದಾಸರ ಹಿರಿಯಣ್ಣ ಶ್ರೀ ವೆಂಕಣ್ಣದಾಸರು ಹರಿದಾಸರಾಗಿದ್ದ ತಮ್ಮ ಸೋದರಮಾವಂದಿರಿಂದ ಸ್ಪೂರ್ತಿ ಪಡೆದು, ಮಾವನ ಮಗಳನ್ನೇ ವಿವಾಹವಾಗಿ, ಹರಿದಾಸರಾಗಿ ಹರಿಕಥೆಗಳನ್ನು ನಡೆಸುತ್ತಿದ್ದರು. ಅವರು ಬೆಂಗಳೂರಿಗೆ ಬಂಧು ನೆಲೆಸಿ ತಮ್ಮ ವಿದ್ವತ್‌ ಪೂರ್ಣ ಹರಿಕಥಾ ಕಲಾಕ್ಷೇಪದಿಂದ ಖ್ಯಾತರಾಗಿದ್ದರು. ಅವರ ಸತ್ಪುತ್ರರೇ ಬೆಂಗಳೂರಿನ ಪ್ರಸಿದ್ಧ ಹರಿದಾಸರಾಗಿದ್ದ ಟಿ.ವಿ. ಗೋಪಿನಾಥದಾಸರು ಮತ್ತು ಜಯಸಿಂಹ ದಾಸರು. ಅವರ ಹಿರಿಯ ಮಗ ಕರಿಗಿರಿ ಆಚಾರ್ಯರು ಉತ್ತಮ ಸಂಗೀತಗಾರರಾಗಿದ್ದು, ಹಾರ್ಮೋನಿಯಂ ನುಡಿಸುವುದರಲ್ಲಿ ಸಿದ್ಧ ಹಸ್ತರಾಗಿದ್ದರು. ಕಿರಿಯ ಮಗನೇ ದ್ವಾರಕಾನಾಥ್‌ರವರು. ಇವರು ಒಳ್ಳೆಯ ತಬಲಾವಾದಕರಾಗಿದ್ದು, ನಿಷ್ಣಾತ ಸಂಘಟಕರಾಗಿದ್ದಾರೆ. ಹೀಗೆ ಹಿರಿಯಣ್ಣನವರ ಹರಿಕಥೆಗಳಿಗೆ ಆಕರ್ಷಿತರಾದ ವೇಣುಗೋಪಾಲದಾಸರು ಅವರೊಂದಿಗೆ ಸೇರಿಕೊಂಡು ಅವರ ಹರಿಕಥೆಗಳಿಗೆ ಹಾರ್ಮೋನಿಯಂ ನುಡಿಸತೊಡಗಿದರು. ಪ್ರತಿದಿನ ಹರಿಕಥಾ ಶ್ರವಣ, ಸಂಗೀತದ ಕೈಂಕರ್ಯ ಹೀಗೆ ದಾಸರ ಅಂತರಂಗದಲ್ಲಿ ಓರ್ವ ಹರಿದಾಸನ ಅವಿರ್ಭಾವವಾಯಿತು. ಆಗಲೇ ಕೊಳ್ಳೇಗಾಲದ ಸಂಗೀತ ವಿದ್ವಾಂಸರಾಗಿದ್ದ ಶ್ರೀದಕ್ಷಿಣಾಮೂರ್ತಿ ಶಾಸ್ತ್ರಿಯವರಲ್ಲಿ ಸಂಗೀತದ ಪ್ರೌಢಶಿಕ್ಷಣ ಪಡೆದು ಕೊಂಡರು. ಹೊರಗಿನ ಕಲಿಕೆಗಿಂತಲೂ ಆಂತರಿಕದ ಸಂಸ್ಕಾರಗಳೇ ಮನುಷ್ಯನಲ್ಲಿ ಪ್ರಬಲವಾಗಿರುತ್ತದೆ. ಇದನ್ನು ಜೀವ ಸ್ವಭಾವವೆನ್ನಿ, ಪೂರ್ವಕರ್ಮಫಲವೆನ್ನಿ ಒಂದೇ. ಅದರ ಮುಂದೆ ಮನುಷ್ಯನ ಪುರುಷಾರ್ಥವು ಪಂಗುವೇ ಆಗಿದೆ. ಅದರಿಂದಲೇ ನಾನೇನೋ ಆಗಬೇಕೆಂದಿದ್ದೆ, ಆದರೆ ಹಾಗಾಗದೇ ಬೇರೆಯೇ ಆಗಿ ಹೋದೆ ಎಂಬ ಉದ್ಗಾರ ಎಷ್ಟೋ ಜನರ ಬಾಯಿಂದ ಕೇಳುತ್ತೇವೆ.

 

ವೈವಾಹಿಕ ಜೀವನ: ಸಮಾಜದಲ್ಲಿ ಬಾಲ್ಯವಿವಾಹ ಪದ್ಧತಿ ಪ್ರಚಾರದಲ್ಲಿದ್ದ ಕಾಲವಿದು. ಆದ್ದರಿಂದ ವೇಣುಗೋಪಾಲದಾಸರ ಮದುವೆ ಬೇಗನೇ ನಡೆದು ಹೋಯಿತು. ಕೈ ಹಿಡಿದ ಪತ್ನಿಯಲ್ಲಿ ಒಂದು ಗಂಡು, ಎರಡು ಹೆಣ್ಣು ಸಂತಾನ ಪಡೆದರು. ಇವರ ಹಿರಿಯ ಮಗನೇ ಮೈಸೂರಿನಲ್ಲಿ ಖ್ಯಾತನಾಮರಾಗಿದ್ದ ಟಿ.ವಿ. ಗುರುರಾಜದಾಸರು. ಇವರು ಉತ್ತಮ ಹರಿಕಥಾಕಾರರಾಗಿದ್ದು, ಮಧ್ವಮತದ ನಿತಾಂತ ಅನುಯಾಯಿಗಳಾಗಿದ್ದರು. ಆಚಾರ ಸಂಪನ್ನರೂ, ಸದ್ಗುಣ ಪರಿಪೂರ್ಣರೂ ಆಗಿದ್ದರು. ಆದರೆ ಕಾಲದ ವೈಚಿತ್ಯ್ರದಿಂದಾಗಿ ತಂದೆಯವರಿಗಿಂತ ಮೊದಲೇ ಇವರು ಹರಿಪಾದನವನ್ನು ಸೇರಿದರು.

 

ಕೆಲಕಾಲದಲ್ಲೆ ಪತ್ನಿಯ ಮರಣದಿಂದಾಗಿ ವಿಯೋಗ ಉಂಟಾದಾಗ ದಾಸರು ಎರಡನೆಯ ಬಾರಿ ವಿವಾಹ ಬಂಧನಕ್ಕೆ ಒಳಗಾದರು. ಎರಡನೆ ಪತ್ನಿಯಿಂದ ಒಂದು ಗಂಡು, ಆರು ಹೆಣ್ಣು ಮಕ್ಕಳನ್ನು ಪಡೆದರು. ಅರ್ಥ ಪ್ರಧಾನವಾದ ಇಂದಿನ ಕಾಲದಲ್ಲಿ ಒಂದೆರಡು ಹೆಣ್ಣು ಮಕ್ಕಳ ಮದುವೆ ಮಾಡುವುದೇ ಅತಿದುಸ್ತರವಾಗಿರುವಾಗ ದಾಸರಿಗೆ ಇದೊಂದು ದೊಡ್ಡ ಹೊರೆಯೇ ಆಯಿತು. ದಾಸರ ಜೀವನವೇ ಇಂದಿದ್ದರೆ ನಾಳೆಗಿಲ್ಲ ಎಂಬ ಪರಿಸ್ಥಿತಿ, ಹೀಗಿದ್ದರೂ ಹರಿಯ ಕರುಣೆಯಿಂದ ಆ ಹೊರೆ ಭಾರವಾಗದೆ, ಹಗುರವಾಗಿ ಎಲ್ಲ ಹೆಣ್ಣು ಮಕ್ಕಳ ವಿವಾಹಗಳು ಸುಗಮವಾಗಿ ನಡೆದು, ಅವರೆಲ್ಲರೂ ಸುಖವಾಗಿ ಸಂಸಾರ ಸಾಗಿಸುತ್ತಿದ್ದಾರೆ. ಒಮ್ಮೆ ಭದ್ರಗಿರಿ ಅಚ್ಯುತದಾಸರ ಬಳಿ ಮಾತಾಡುತ್ತಿರುವಾಗ ವಿನೋದವಾಗಿ ದಾಸರು ಹೇಳಿದರು ದಾಸರೇ! ಹರಿದಾಸರಿಗೆ ಹೆಣ್ಣುಮಕ್ಕಳೇ ಜಾಸ್ತಿಯಾಗಿ ದೇವರು ಏಕೆ ಕೊಡುತ್ತಾನೆ. ನಿಮಗೆ ತಿಳಿದಿದೆಯೆ? ಅಚ್ಯುತದಾಸರು ಇಲ್ಲವೆಂದಾಗ ಅವರೇ ಹೇಳಿದರು.“ನೋಡಿ ನಾವು ಸಾರ್ವಜನಿಕರಿಂದ ಪ್ರತಿದಿನ ದಾನ ಪಡೆಯುತ್ತೇವೆ. ಅದರೊಂದಿಗೆ ಶುದ್ಧಿಯಿಲ್ಲದೆ ಹಣ ಬಂದಾಗ ಪಾಪವು ನಮ್ಮ ಮಡಿಲಿಗೆ ಬೀಳುತ್ತದೆ. ಆ ಪಾಪವನ್ನು ಕಳೆದು ಕೊಳ್ಳಲು ಕನ್ಯಾದಾನ ಮಾಡಿ, ಪುಣ್ಯಗಳಿಸಲೆಂದೇ ದೇವರ ವಿಧಾನವಿದು.” ಎಂಥ ಕಟು ಸತ್ಯ ಈ ಮಾತು!

 

ಹರಿದಾಸರಾಗಿ: ವೇಣುಗೋಪಾಲದಾಸರು ಎಲ್ಲ ಲೌಕಿಕ ಉಪಾಧಿಗಳನ್ನು  ತೊರೆದು ಪೂರ್ಣ ಪ್ರಮಾಣದ ಹರಿದಾಸರಾಗಿ, ಹರಿಕಥೆಗೆ ತಮ್ಮನ್ನೇ ಅರ್ಪಿಸಿಕೊಂಡರು. ೧೯೩೭ ರಿಂದ ೧೯೫೮ರವರೆಗೆ ಇವರು ಮೈಸೂರಿನಲ್ಲಿ ನೆಲೆಸಿ, ಪ್ರತಿದಿನವೂ ಹರಿಕಥೆಗಳನ್ನು ನಡೆಸ ತೊಡಗಿದರು. ಮೈಸೂರಿನ ಎಲ್ಲ ಬಡಾವಣೇಗಳಲ್ಲಿಯೂ ದಾಸರು ಹರಿಕಥೆಗಳನ್ನು ಮಾಡಿದರು. ಒಂದೇ ವೇದಿಕೆಯಿಂದ ತಿಂಗಳುಗಟ್ಟಲೆ ರಾಮಾಯಣವೋ, ಮಹಾಭಾರತವೋ ಆಧರಿಸಿ ಪ್ರತಿದಿನ ಹರಿಕಥೆ ನಡೆಸುವ ಹಿರಿಮೆ ಇವರದು. ಪ್ರತಿ ದಿನವೂ ಹೊಸ-ಹೊಸ ವಿಚಾರ, ಹೊಸ-ಹೊಸ ತಾತ್ವಿಕ ಸಂಗತಿಗಳನ್ನು ಶ್ರೋತೃಗಳಿಗೆ ಹೇಳಬೇಕು. ಹೀಗಿದ್ದರೇನೇ ಶ್ರೋತೃಗಳು ದಿನವು ಬಂದು ಕೇಳಿ ಸಂತೋಷಪಡುವರು. ಬರೆ ನಾಲ್ಕಾರು ಕಥೆ ಕಲಿತು ಸೀಮಿತವಾದ ಜ್ಞಾನ, ವಿಚಾರಗಳಿರುವವರಿಂದ ಈ ರೀತಿ ತಿಂಗಳು ಗಟ್ಟಲೆ ಒಂದೇ ವೇದಿಕೆಯಿಂದ ಹರಿಕಥೆ ನಡೆಸುವುದು ಸಾಧ್ಯವಾಗದು.

 

ವೇಣುಗೋಪಾಲದಾಸರು ಸದಾ ಅಧ್ಯಯನಶೀಲರಾಗಿದ್ದರು. ಮೂಲಗ್ರಂಥಗಳನ್ನು ತಾತ್ತ್ವಿಕ ಪ್ರಮೇಯಗಳೊಂದಿಗೆ ಚೆನ್ನಾಗಿ ಅಧ್ಯಯನ, ಮನನ ಗೈದೇ ಅದನ್ನು ಹರಿಕಥೆಯಾಗಿ ನಿರೂಪಿಸುತ್ತಿದ್ದರು. ದಾಸರ ಇನ್ನೊಂದು ವೈಶಿಷ್ಟ್ಯವೆಂದರೆ ‘ದಾಸಸಾಹಿತ್ಯ ವ್ಯಾಸ ಸಾಹಿತ್ಯದ ಸಮನ್ವಯ’ ಅಂದಿನ ಕಾಲದಲ್ಲಿ ದಾಸ ಸಾಹಿತ್ಯವು ಈಗಿನಷ್ಟು ಪ್ರಚಾರದಲ್ಲಿರಲಿಲ್ಲ. ಕೆಲವೇ ಜನರು ಬಲ್ಲವರಾಗಿದ್ದರು. ಜನ ಸಾಮಾನ್ಯರು ಅಪರಿಚಿತರೇ ಆಗಿದ್ದರು. ಅಂತಹ ಸಮಯದಲ್ಲಿ ವೇಣುಗೋಪಾಲದಾಸರು ವೇದವ್ಯಾಸ ದೇವರ ಪುರಾಣ ಭಾರತಾದಿಗಳಿಂದ ಕಥೆಗಳನ್ನು ಆಧರಿಸಿ, ಅದರ ಸಂದರ್ಭ, ತತ್ವಗಳಿಗೆ ಸರಿಯಾಗಿ ಹೊಂದುವ ದಾಸ ಸಾಹಿತ್ಯದಲ್ಲಿನ ಪದ, ಪದ್ಯ, ಸುಳಾದಿ, ಉಗಾಭೋಗಗಳನ್ನು ಹುಡುಕಿ ಅಲ್ಲಿ ಸೇರಿಸಿ ಹಾಡುತ್ತಿದ್ದರು. ಹಿಂದಿನ ದಾಸಾರ್ಯರು ವೇದವ್ಯಾಸರ ತತ್ತ್ವಗಳನ್ನೇ, ಅದರಲ್ಲಿಯೂ ಶ್ರರೀಮದ್ಭಾಗವತವನ್ನೇ ಅನು ವಾದಿಸಿದ್ದಾರೋ ಎಂಬಂತೆ ತಮ್ಮ ಸಾಹಿತ್ಯವನ್ನು ರಚಿಸಿದ್ದರು. ಹಾಗಾಗಿ ಅದು ಮೂಲಕಥೆಯಲ್ಲಿ ಎಲ್ಲಿಯೂ ಅವಾಸ್ತವವಾಗಿ ಕಾಣದೆ, ದಾಸರು ಇದೇ ಸಂದರ್ಭಕ್ಕೆ ಹಾಡು ರಚಿಸಿದ್ದರೋ ಎನ್ನುವಷ್ಟು ಸಮೀಚೀನವಾಗಿತ್ತು. ಅದರಿಂದ ದಾಸರು ಸಮಗ್ರ ಹರಿದಾಸ ಸಾಹಿತ್ಯವನ್ನು ಕರತಲಾಮಲಕವಾಗಿಸಿಕೊಂಡಿದ್ದರು. ಹೀಗೆ ವ್ಯಾಸಸಾಹಿತ್ಯ ದಾಸಸಾಹಿತ್ಯ ಎರಡನ್ನೂ ದಾಸರು ಪ್ರಚಾರ ಮಾಡಿದರು. ಅವರು ಈ ಪದ್ಧತಿಯನ್ನು ಅನುಸರಿಸುವುದರಿಂದ ನಿಜವಾದ ಅರ್ಥದಲ್ಲಿ ದಾಸಸಾಹಿತ್ಯ ಪ್ರಚಾರ ಮಾಡಿದಂತಾಯಿತು.

 

ದಾಸಸಾಹಿತ್ಯವಿರಲೀ, ಸಂತ ಸಾಹಿತ್ಯವಿರಲೀ, ಶರಣ ಸಾಹಿತ್ಯವಿರಲೀ, ಕೇವಲ ಭಾಷಾಜ್ಞಾನವಿದ್ದರೆ ಮಾತ್ರ ಅರ್ಥೈಸುವುದು ಸಾಧ್ಯವಾಗದು, ತಿಳಿಯುವುದು ದುಸ್ತರವೇ. ಏಕೆಂದರೆ, ಅದರಲ್ಲೂ ಶಬ್ದಗಳಿಗಿಂತಲೂ ಭಾವದ ಪ್ರಾಮುಖ್ಯತೆ ಇರುತ್ತದೆ. ದಾಸವರ್ಯರ ಭಾವವನ್ನು ಅರ್ಥವಿಸಿಕೊಳ್ಳಲು ಸ್ವತಃ ಹರಿದಾಸರಾಗ ಬೇಕಾಗುತ್ತದೆ. ತಾನು ಹರಿದಾಸನಾಗಿ ಅಂತಹ ಭಕ್ತಿಯುಕ್ತ ಅಂತಃಕರಣವನ್ನು ಹೊಂದಿದಾಗಲೇ ದಾಸ ಸಾಹಿತ್ಯದ ಆಳ, ವಿಸ್ತಾರ ಭಾವ ಸೌರಭ ಅರ್ಥವಾಗ ತೊಡಗುತ್ತದೆ. ದಾಸ ಸಾಹಿತ್ಯ ಸಂತ ಸಾಹಿತ್ಯ ಇದು ಶಬ್ದಗಳ ಕಸರತ್ತಾಗಿರದೆ ಅನುಭಾವದಿಂದ ಮೂಡಿಬಂದ ಭಾವ ಸುಮನಗಳಾಗಿವೆ. ಇದು ಬುದ್ಧಿಯ  ಭಾಷೆಯಲ್ಲ, ಹೃದಯದ ಭಾಷೆ ಇದರಲ್ಲಿ ಪಾಂಡಿತ್ಯಕ್ಕೆ ಸ್ಥಾನವಿರದೆ ಹೃದಯವಂತಿಕೆಗೆ ಪ್ರಾಧಾನ್ಯವಿರುತ್ತದೆ. ಹೀಗಾಗಿ ವೇಣುಗೋಪಾಲದಾಸರು ದಾಸಸಾಹಿತ್ಯದ ನೈಜ ತಿರುಳನ್ನು ಆರಿಸಿ, ಆಯಾಯಾ ಸಂದರ್ಭಕ್ಕೆ ಅಳವಡಿಸುವುದು ಅವರ ಹೃದಯ ಭಾವದ ದ್ಯೋತಕವಾಗಿದೆ. ದಾಸ ಸಾಹಿತ್ಯವನ್ನು ಅರ್ಥವಿಸುವ ನಿಜ ಹೃದಯವಂತಿಕೆ ಅವರಲ್ಲಿತ್ತು.

 

ದಾಸರಲ್ಲಿ ಇದ್ದ ಇನ್ನೊಂದು ಮಹಾನ್‌ ಗುಣವೆಂದರೆ ವಿನಯ ಮತ್ತು  ನಿಸ್ಪೃಹತೆ. ಅವರಿಗೆ ಹರಿಕಥೆಗಳಲ್ಲಿ ಅನೇಕ ಪ್ರಶಸ್ತಿ, ಪ್ರಶಂಸೆ, ಆದರೆ, ಸನ್ಮಾನ ದೊರೆತರೂ ಅವರು ಎಂದೂ ಅಭಿಮಾನ ಪಟ್ಟವರಲ್ಲ. ಮೈಸೂರಿನಲ್ಲಿ ಅವರಿಗೆ ಭಕ್ತಾದಿಗಳು ಸೇರಿ ಒಮ್ಮೆ ರತ್ನಕಂಕಣವನ್ನು ತೊಡಿಸಿದ್ದರು. ಆದರೆ ಆಗಲೂ ಅವರು ಶ್ರೀ ಪಾದರಾಜರ ಹಾಡನ್ನು ಅನುಸಂಧಾನ ಮಾಡುತ್ತಾ ಹೇ ಹರೇ! ನೀನೊಲಿದರೆ “ಕೆಂಪಿಲಿ ಹೊಳೆದ ಪೀತಾಂಬರ ಹೊದಿಸುವೆ| ಕಪಿಲ ಹರೇ ನಿನ್ನ ಕರುಣ ತಪ್ಪಲು ಕೌಪೀನ ದೊರೆಯದು ಹರಿಯೆ||” ಅಂದು ಕೊಂಡರಂತೆ. ‘ಬಂದ ಕೀರುತಿ ಎಲ್ಲ ನಿನ್ನದಯ್ಯ’ ಎಂಬ ವ್ಯಾಸರಾಯರ ಪಂಕ್ತಿಯಂತೆ ಆ ಆದರ, ಸನ್ಮಾನ, ಹರಿಗೆ ಅಪಿಸಿ ಆನಂದಿಸಿದರು.

 

ದಾಸರು ತಮ್ಮ ಹರಿಕಥೆಗಳಲ್ಲಿರಲೀ, ಪ್ರವಚನಗಳಲ್ಲಿರಲಿ ಎಂದೂ ಆತ್ಮಶ್ಲಾಘನೆ ಮಾಡಿಕೊಂಡವರಲ್ಲ. ತಮ್ಮ ಕೌಟುಂಬಿಕ ಕಥೆಯನ್ನ ಜನರ ಮುಂದೆ ಇರಿಸಿದವರಲ್ಲ. ಏಕೆಂದರೇ ಕೀರ್ತಿಸುವುದು, ಹೊಗಳುವುದು ಕೇವಲ ಪರಮಾತ್ಮನೊಬ್ಬನನ್ನೇ. ತನ್ನನ್ನಾಗಲೀ, ತನ್ನಂತಿರುವ ಜನರನ್ನಾಗಲಿ ಹೊಗಳುವುದಲ್ಲ ಎಂಬುದು ಅವರು ತಳೆದ ದೃಢವಾದ ನಿಲುವು. ಇಂದಿನ ಸಮಾಜದಲ್ಲಿ ಕೆಲ ಹರಿದಾಸರು ತಮ್ಮ ಹೆಂಡತಿ, ಮಕ್ಕಳು, ಬಡತನ, ಸಿರಿತನ, ತಾವು ಪಡೆದ ಕೀರ್ತಿಯನ್ನು ಜನರ ಮುಂದೆ ಪವಿತ್ರವಾದ ಹರಿಕಥೆಗಳಲ್ಲಿ ಹೇಳಿಕೊಂಡು ಜನರ ಅನುಕಂಪವನ್ನು, ಹೊಗಳಿಕೆಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಇದು ನಿಜವಾಗಿ ಹರಿಕಥಾ ಕಲೆಗೆ ಗೈವ ಅಪಚಾರವೇ ಆಗಿದೆ. ವೇಣುಗೋಪಾಲದಾಸರು ಎಂದೂ ತಮ್ಮ ಸ್ವಂತ ಸಮಸ್ಯೆಗಳನ್ನು, ತನ್ನ ಹಿರಿತನವನ್ನು ಹರಿಕಥೆಗಳಲ್ಲಿ ಹೇಳಕೊಳ್ಳದೆ, ಕೇವಲ ಹರಿಯ ಮಹಿಮೆಯಷ್ಟನ್ನೇ ಹೇಳುತ್ತಿದ್ದರು. ಇದರಿಂದ ನಿಜವಾದ ಅರ್ಥದಲ್ಲಿ ಇವರು ಹರಿದಾಸರು, ಹರಿಕಥೆದಾಸರು.

 

ಇವರ ತತ್ತ್ವನಿಷ್ಟೆಯ ಕುರಿತು ಇನ್ನೊಂದು ನಿದರ್ಶನವೆಂದರೆ, ಮೈಸೂರಿನಲ್ಲಿ ಇವರ ಖ್ಯಾತಿ ಎಲ್ಲೆಡೆ ಪಸರಿಸುವಂತೆ ಮೈಸೂರು ಮಹಾರಾಜರ ಕಿವಿಗೂ ಇವರ ವೈಶಿಷ್ಟ್ಯ ಕೇಳಿಬಂತು. ಕೂಡಲೇ ದಾಸರನ್ನು ಕರೆಸಿ, ಅರಮನೆಯಲ್ಲಿ ಹರಿಕಥೆ ನಡೆಸಲುಲ ಏರ್ಪಾಡಾಯಿತು. ಆದರೆ ಅಂದಿನ ದರಬಾರಿನ ಸಂಪ್ರದಾಯದಂತೆ ಅರಮನೆಗೆ ನಿಗದಿ ಪಡಿಸಿದ ವೇಷ-ಭೂಷಣಾದಿಗಳಿಂದಲೇ ಹೋಗಬೇಕಾಗಿತ್ತು. ಇದು ದಾಸರಿಗೂ ಅನ್ವಯಿಸಿದಾಗ, ದಾಸರು ನನ್ನ ನಿತ್ಯದ ವೇಷ. ಭೂಷಣಗಳಿಂದಲೇ ಬರುವುದಾದರೆ ನಾನು ಬಂದು ಹರಿಕಥೆ ನಡೆಸಿಕೊಡುವೆನು, ಹರಿದಾಸರಿಗೆ ಅಂತಹ ಆಡಂಬರದ ವೇಷ ಭೂಷಣಗಳು ಶೋಭಿಸಲಾರವು ಎಂದು ವಿನಯದಿಂದ ಹೇಳಿದರು. ಮಹಾರಾಜರು ನಿರುಪಾಯರಾಗಿ ಕೊನೆಗೆ ದಾಸರ ಕಥೆ ನಡೆವಲ್ಲಿಗೆ ತಾವೇ ಹೋಗಿ ಕಾರಿನಲ್ಲಿ ಕುಳಿತೇ ಕಥಾ ಶ್ರವಣ ಮಾಡಿದರಂತೆ. ಬಳಿಕ ದಾಸರಿಗೆ ಅರಮನೆಯಿಂದ ಮನ್ನಣೆ-ಗೌರವ ಕಳಿಸಿ ಕೊಡಲಾಯಿತಂತೆ. ರಾಜರಿರಲಿ, ರಂಕರರಿರಲಿ, ತಮ್ಮತನವನ್ನು ಬಿಟ್ಟು ಕೊಡದ ದಾಸರ ನಿಷ್ಠೆಯನ್ನು ಮೆಚ್ಚುತಕ್ಕದ್ದು. ಸಚ್ಚ್ರಾಸ್ತ್ರದ, ಸತ್ಸಂಪ್ರದಾಯದ, ಸದಾಚಾರದ ಗೆರೆಯನ್ನು ದಾಟದ ನಡೆ-ನುಡಿ, ಬರವಣಿಗೆ, ಹರಿಕಥಾ ಶೈಲಿ ಇವರಿಗೆ ಮೀಸಲು. ಇವರು ನಿಜವಾಗಿಯೂ ಈ ಶತಮಾನದ ಕೀರ್ತನಾಚಾರ್ಯರು.

 

ದಾಸರ ದಿನಚರಿ: ಶ್ರೀ ವೇಣುಗೋಪಾಲದಾಸರು ಪರಂಪರೆಯಿಂದ ಮಾಧ್ವ ಪಂಥಕ್ಕೆ ಸೇರಿದವರು. ಶ್ರೀ ಮಧ್ವಾಚಾರ್ಯರ ತತ್ತ್ವಗಳಲ್ಲಿ ನಿತಾಂತ ಶ್ರದ್ಧೆಯುಳ್ಳವರು. ಮೈಸೂರು ಮಹಾರಾಜಾ ಸಂಸ್ಕೃತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಶ್ರೀ ವಾಸುದೇವ ಆಚಾರ್ಯರಲ್ಲಿ ಮಧ್ವಶಾಸ್ತ್ರವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ್ದರುಇ. ಜೀವನವಿಡೀ ಆ ತತ್ತ್ವಗಳನ್ನೇ ಹರಿಕಥೆಗಳ ಮೂಲಕ ಪ್ರಚಾರಗೈದು ಮಧ್ವಮತದ ಅಪಾರ ಸೇವೆಯನ್ನು ಮಾಡಿದರು. ಇವರು ವ್ಯಾಸರಾಯ ಮಠ ಪರಂಪರೆಗೆ ಸೇರಿದವರಾಗಿದ್ದರೂ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಅನನ್ಯ ಭಕ್ತರು. ಅವರನ್ನು ನೆನೆಯದೆ ಹರಿಕಥೆಯಾಗಲೀ, ಬೇರೆ ಯಾವುದೇ ಕೆಲಸವನ್ನು ಅವರು ಪ್ರಾರಂಭಿಸುತ್ತಿರಲಿಲ್ಲ. ದಾಸರ ನಿತ್ಯದ ಹಾಗೂ ಹರಿಕಥೆಯ ವೇಷ-ಭೂಷಣಗಳು ತುಮಬಾ ಸಾದಾ-ಸರಳ. ಅವರು ಹರಿದಾಸರಾದ ಮೇಲೆಯಂತೂ ಶರ್ಟ ಹಾಕಲೇ ಇಲ್ಲ. ಧೋತ್ರ ಮತ್ತು ಮೇಲೊಂದು ಶಾಲು ಹೊದೆಯುತ್ತಿದ್ದರು ಅಷ್ಟೆ. ದಾಸರಲ್ಲಿ ಆಡಂಬರವಂತೂ ಇರಲೇ ಇಲ್ಲ.

 

ದಾಸರ ಹರಿಕಥೆಗಳಲ್ಲಿ ಪರಮತದ ನಿಂದನೆಯಾಗಲೀ, ರಾಜಕೀಯವಾಗಲೀ, ವ್ಯಂಗ್ಯ, ಕೀಳಾದ ನಗೆ ಚಟಕಿಗಳು ಎಲ್ಲಿಯೂ ಇಣುಕುತ್ತಿರಲಿಲ್ಲ. ತಮ್ಮ ಮತದ ಬಗ್ಗೆ ಅಚಲ ಶ್ರದ್ಧೆಯಿದ್ದು, ಅದರಂತೆ ನಡೆ ನುಡಿ ರೂಢಿಸಿಕೊಂಡು, ಪರರ ಮತವನ್ನು ಹಳಿಯದೆ, ಗೌರವಿಸಿವುದೇ ನಿಜವಾದ ಮತ ಸಹಿಷ್ಣುತೆಯಾಗಿದೆ. ದಾಕ್ಷಿಣ್ಯಕ್ಕಾಗಿ, ಆಮಿಶಕ್ಕಾಗಿ, ಪರರನ್ನು ಸಂತೋಷ ಪಡಿಸಲು ಸ್ವಮತವನ್ನು ಬಿಟ್ಟು ಕೊಡುವುದು ಮತ ಸಹಿಷ್ಣುತೆಯಲ್ಲ.

 

ಇವರು ಪ್ರತಿದಿನ ಬೆಳಗೆದ್ದು ಸ್ನಾನ-ಸಂಧ್ಯಾವಂದನೆ-ದೇವತಾರ್ಚನೆ ಆಗುವವರೆಗೆ ನೀರೀ ಮುಟ್ಟುತ್ತಿರಲಿಲ್ಲ. ಬಳಿಕ ಲಘು ಉಪಹಾರ ತೆಗೆದುಕೊಂಡು ಅಧ್ಯಯನಕ್ಕೆ ತೊಡಗಿದರೆಂದರೆ ಮಧ್ಯಾಹ್ನ ಊಟಕ್ಕೆ ಏಳುವುದು. ಊಟ ಮಾಡಿ ಪುನಃ ಗ್ರಂಥಾವಲೋಕನ ಮೂರರಿಂದ ನಾಲ್ಕರವರೆಗೆ ಒಂದು ಗಂಟೆ ವಿಶ್ರಾಂತಿ. ಪುನಃ ಅಂದಿನ ಕಥೆಯ ಬಗ್ಗೆ ತಯಾರಿ. ಸಂಜೆ ಆರರ ನಂತರ ಹರಿಕಥೆ. ಕಥೆ ಮುಗಿಸಿ ಮನಗೆ ಬಂದು ಊಟ ಮುಗಿಸಿ, ಓದಲು, ಬರೆಯಲು ಕುಳಿತರೆ ರಾತ್ರಿ ಒಂದು ಅಥವಾ ಎರಡು ಗಂಟೆಯವರೆಗೆ ಸತತವಾಗಿ ವ್ಯಾಸಂಗದಲ್ಲಿ ತೊಡಗುತ್ತಿದ್ದರು. ಹೀಗೆ ಅವರ ಅತಿವೃದ್ಧಾಪ್ಯದಲ್ಲಿಯೂ ಈ ಕ್ರಮಕ್ಕೆ ಚ್ಯುತಿ ಬಂದಿರಲಿಲ್ಲ. ಹೊರಗಂತೂ ಎಲ್ಲಿಯೂ ಆಹಾರ ಸ್ವೀಕರಿಸುತ್ತಲೇ ಇರಲಿಲ್ಲ. ನಿಷ್ಠಾವಂತ, ಶುಚಿಯಾದ ಅವರ ಜೀಔನ ಕ್ರಮದಿಂದಾಗಿ ಅವರ ಆರೋಗ್ಯವು ಉತ್ತಮವಾಗಿಯೇ ಇತ್ತು. ಆಜಾನುಬಾಹುವಾದ ಎತ್ತರದ ನಿಲುವು ಅವರದುಇ. ವೈದಿಕ ಸಂಪ್ರದಾಯದಂತೆ ಶಿಖೆಯಿಂದ ಅಲಂಕೃತರಾಗಿದ್ದರು. ಹಣೆಯಲ್ಲಿ ತಿದ್ದಿದ ಊರ್ಧ್ವಪುಂಡ್ರ, ಅಂಗಾರ ಅಕ್ಷತೆ ಸದಾ ಶೋಭಿಸುತ್ತಿತ್ತು . ಹೀಗೆ ದಿನದಲ್ಲಿ ಕೇವಲ ೫-೬ ಗಂಟೆಗಳಿಗಿಂತ ಹೆಚ್ಚು ನಿದ್ರಿಸಿದವರಲ್ಲ ದಾಸರು, ಆಲಸ್ಯ, ವ್ಯರ್ಥ ಮಾತುಕತೆ, ಹರಟೆಯಂತು ಅವರ ಬಳಿ ಸುಳಿಯುತ್ತಿರಲಿಲ್ಲ. ಹಾಗಿರುವಾಗ ವ್ಯಸನಗಳ ಕುರಿತು ಹೇಳುವುದೇನಿದೆ? ಲೌಕಿಕವಾದ ಯಾವ ವ್ಯಸನವೂ ಹಚ್ಚಿಕೊಳ್ಳದೆ ಕೇವಲ ಸ್ವಾಧ್ಯಾಯ , ಹರಿನಾಮಸ್ಮರಣೆ ಈ ವ್ಯಸನವನ್ನೇ ಬೆಳೆಸಿಕೊಂಡ ದಾಸರು ಹರಿಕಥಾ ದಾಸರೆಲ್ಲರಿಗೆ ಆದರ್ಶ ಪ್ರಾಯರಾಗಿದ್ದರು. ಅನೇಕ ಹರಿಕಥಾ ದಾಸರು ಅವರಲ್ಲಿ ಮಾರ್ಗದರ್ಶನ ಪಡೆಯುತ್ತಿದ್ದರು.

 

ಅವರಿಗೆ ಶಿಷ್ಯ ಸಂಪತ್ತು ಅಪಾರವಾಗಿತ್ತು. ಮೈಸೂರಿನ ದಿ. ಹೆಚ್.ಟಿ. ಶ್ಯಾಮಣ್ಣನವರು, ಟಿ.ವಿ. ಗೋಪೀನಾಥದಾಸರು, ಟಿ.ವಿ. ಜಯಸಿಂಹದಾಸರು, ಟಿ.ವಿ. ಗುರುರಾಜದಾಸರು, ಮಂಡ್ಯದ ಎಂ.ಆರ್. ಗುರುರಾಜ ದಾಸರು, ಶ್ರೀ ರಾಘವೇಂದ್ರಾಚಾರ್ಯರು ಮುಂತಾದವರು ಇವರ ಶಿಷ್ಯರುಗಳಲ್ಲಿ ಪ್ರಮುಖರು.

 

ಇವರು ಹರಿಕಥೆಗಳಿಗಾಗಿ ಬರೆದು ಸಿದ್ಧಪಡಿಸಿಕೊಂಡ ಟಿಪ್ಪಣಿಗಳು, ಬರೆದಿಟ್ಟ ಹರಿಕಥೆಗಳು, ಆರಿಸಿ ತೆಗೆದ ದಾಸರ ಪದ-ಪದ್ಯ-ಸುಳಾದಿಗಳ ಸಂಗ್ರಹ ಸಾವಿರಾರು ಪುಟಗಳಷ್ಟು ಅವರ ಮನೆಯಲ್ಲಿದೆ. ಇಂತಹ ಅಮೂಲ್ಯ ಸಂಪತ್ತನ್ನು ಮುಂದಿನ ಹರಿದಾಸರು ಬಳಸಿಕೊಂಡರೆ, ಹರಿಕಥಾರಂಗ ಮತ್ತು ಹರಿದಾಸರು ಉದ್ಧಾರವಾದಾರು.

 

ಬಿರುದುಗಳು: ದಾಸರು ಪ್ರಶಸ್ತಿ, ಬಿರುದುಗಳಿಗೆ ಎಂದೂ ಕೈ ಚಾಚಿದವರಲ್ಲ, ಬಯಸಿದವರಂತೂ ಅಲ್ಲವೇ ಅಲ್ಲ. ಆದರೂ ಅನೇಕ ಮಠಾಧಿಪತಿಗಳು, ಸಾರ್ವಜನಿಕರು ಇವರಿಗೆ ಸಲ್ಲಿಸಿದ ಬಿರುದು ಪ್ರಶಸ್ತಿಗಳನ್ನು ನೀಡುವವರಿಗೆ ನೋವಾಗದಿರಲೆಂದು ಪ್ರೀತಿಯಿಂದ ಸ್ವೀಕರಿಸಿದವರು. ಮಂತ್ರಾಲಯ ಮಠಾಧೀಶ ಶ್ರೀ ಶ್ರೀ ಸುಯಮೀಂದ್ರ ತೀರ್ಥರು, ಶ್ರೀ ವ್ಯಾಸರಾಯ ಮಠಾಧೀಶ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥರು, ಪಲಿಮಾರು ಮಠಾಧೀಶ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥರು, ಶ್ರೀ ಪೇಜಾವರ ಮಠಾಧಿಪತಿಗಳು ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಹೀಗೆ ಅನೇಕ ಮಠಾಧಿಪತಿಗಳು ದಾಸರನ್ನು ಮಠಕ್ಕೆ ಕರೆಸಿ ಸನ್ಮಾನಿಸಿ, ಬಿರುದು ಬಾವಲಿಗಳನ್ನು ಕರುಣಿಸಿದ್ದರು.

 

ಪ್ರಧಾನವಾಗಿ ಹರಿಕಥಾಂಬುಧಿ ಚಂದ್ರ, ಹರಿದಾಸರತ್ನ, ದಾಸ ಸಾಹಿತ್ಯ ನಿಧಿ, ಕೀರ್ತನಾಲಂಕಾರ, ಕೀರ್ತನ ಕಂಠೀರವ ಮುಂತಾದವುಗಳಲ್ಲದೆ ಇನ್ನೂ ಅನೇಕ ಬಿರುದುಗಳು ದಾಸರಿಗೆ ಸಂದಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪ್ರಶಸ್ತಿಯೂ ಇವರಿಗೆ ಸಂದಿದೆ. ಎಷ್ಟೇ ಬಿರುದುಗಳಿದ್ದರೂ ಹರಿದಾಸ ಎಂಬ ಬಿರುದಿನಷ್ಟು ಹಿರಿದಾದ ಉಪಾಧಿ ಬೇರೊಂದಿಲ್ಲ. ಅದು ಹೆಸರಿಗಷ್ಟೆ ಆಗಿರದೆ, ಜೀವನದಲ್ಲಿ ಹಾಸುಹೊಕ್ಕಾಗಿರಬೇಕು.

 

ಇವರು ರಚಿಸದಿ ಗ್ರಂಥ ಸಂಪತ್ತು: ಸನತ್ಸುಜಾತೀಯ, ಶ್ರೀ ವ್ಯಾಸರಾಯರು, ಶ್ರೀ ಪುರಂದರ ದಾಸರು, ಶ್ರೀ ಜಗನ್ನಾಥದಾಸರು, ರಾಘವೇಂದ್ರ ವೈಶಿಷ್ಟ್ಯ, ಕನಕನ ಗುಟ್ಟು, ಬಿಂಬಗುರು ಕಲ್ಪತರು ಶ್ರೀ ರಾಘವೇಂದ್ರರು, ಶ್ರೀ ಮದ್ಭಾಗವತ, ಮಾಧ್ವನಿಘಂಟು, ಶ್ರೀ ಮದ್ರಾಮಾಯಣ.

ಶ್ರೀ ನಾರಾಯಣಾನುಗ್ರಹದಿಂದ ಆಯುಷ್ಯ, ಆರೋಗ್ಯ, ಐಶ್ವರ್ಯ ಇವು ಮೂರು ಇವರಿಗೆ ಲಭಿಸಿತ್ತು. ಹರಿಯ ಸೇವೆಯಲ್ಲೆ ಜೀವನವೆಲ್ಲ ಸವೆಸಿದ ದಾಸರು ೯೬ ವರ್ಷಗಳಷ್ಟು ಕಾಲ ದೀರ್ಘಜೀವಿಯಾಗಿ ೧೯೯೬ರಲ್ಲಿ ಭೌತಿಕ ಶರೀರವನ್ನು ಬಿಟ್ಟು ಹರಿಪಾದವನ್ನು ಸೇರಿದರು. ಕೀರ್ತಿ ಶರೀರಿಯಾಗಿ ಕರ್ನಾಟಕದ ಹರಿಕಥಾರಂಗದಲ್ಲಿ ಅಜರಾಮರರಾಗಿದ್ದಾರೆ.