ಒಂದು ಕಡೆ ಒಂದು ಭಾರಿ ಸಂಗೀತ ಸಭೆ. ಹಾಡುತ್ತಿದ್ದವರು ದಕ್ಷಿಣ ದೇಶದ ಒಬ್ಬ ಪ್ರಸಿದ್ಧ ವಿದ್ವಾಂಸರು. ಪಿಟೀಲು ಪಕ್ಕವಾದ್ಯಕ್ಕೆ ಕುಳಿತಿದ್ದಾತ ಪ್ರಾಯದ ಯುವಕ. ಕಟ್ಟುಮಸ್ತಾದ ಆಳು. ಆರೋಗ್ಯಭಾಗ್ಯವೇ ಆತನಲ್ಲಿ ಮನೆ ಮಾಡಿಕೊಂಡಂತಿತ್ತು. ಗಾಯಕರ ಸರಿಸಮಕ್ಕೂ ನುಡಿಸುತ್ತ ಸಭಾಸದರ ಮನಸ್ಸನ್ನು ಸೂರೆಗೊಳ್ಳುತಿದ್ದ ಆ ಯುವಕ.

ಕೆನ್ನೆಗೇಟು!

ಇದ್ದಕ್ಕಿದ್ದಂತೆ ಎಲ್ಲೋ ಸ್ವಲ್ಪ ಬೆರಳು ಜಾರಿತು ಒಮ್ಮೆ; ಅಪಸ್ವರ ಹೊರಟಿತು ಪಿಟೀಲಿನಿಂದ. ಪಾಪ! ಯುವಕನ ಮುಖ ಪೆಚ್ಚಾಯಿತು. ಅದರಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಸಭೆಯಲ್ಲಿ ಕುಳಿತಿದ್ದ ಹಿರಿಯ ವಿದ್ವಾಂಸರೊಬ್ಬರು ದಡಬಡನೆ ಮೇಲೆದ್ದು ವೇದಿಕೆಯ ಬಳಿಗೆ ಬಂದರು. ಅವರನ್ನು ನೋಡುತ್ತಿದ್ದಂತೆಯೇ ಯುವಕನ ಮೈ ನಡುಗಿತು. ಎದ್ದು ಬಂದ ವಿದ್ವಾಂಸರು ಹಿಂದೆ ಮುಂದೆ ನೋಡದೆಯೇ ತುಂಬಿದ ಸಭೆಯಲ್ಲಿ ಆ ಯುವಕನ ಕೆನ್ನೆಗೆ ಫಳೀರೆಂದು ಬಾರಿಸಿದರು. ’ನಾಚಿಕೆಯಾಗುವುದಿಲ್ಲವೇ ಅಪಸ್ವರ ನುಡಿಸುವುದಕ್ಕೆ?’ ಎಂದು ಮೂದಲಿಸಿದರು. ಯುವಕ ತುಟಿಪಿಟಿಕ್ಕೆನ್ನಲಿಲ್ಲ. ತಗ್ಗಿಸಿದ ತಲೆಯನ್ನು ಮೇಲೆತ್ತಲಿಲ್ಲ. ಸಭೆಯಲ್ಲಿದ್ದ ಇತರ ವಿದ್ವಾಂಸರೂ ಸಂಗೀತಾಭಿಮಾನಿಗಳೂ ಆ ಹಿರಿಯ ವಿದ್ವಾಂಸರನ್ನು ಸಮಾಧಾನಗೊಳಿಸಿದ ಮೇಲೆ ಕಛೇರಿ ಮುಂದುವರಿಯಿತು.

ಅಲ್ಲಿಂದಾಚೆಗೆ ಮೈಯನ್ನೆಲ್ಲ ಕಣ್ಣನ್ನಾಗಿಸಿಕೊಂಡು ವಾದ್ಯದ ಮೇಲೆ ಅತ್ಯಂತ ಎಚ್ಚರಿಕೆಯಿಂದ ಬೆರಳುಗಳನ್ನಿಡುತ್ತ ಆ ಯುವಕ ಅಮೋಘವಾಗಿ ನುಡಿಸಿದ. ಸ್ವರಸ್ಥಾನಗಳನಲ್ಲಾಗಲೀ ತಾಳಲಯಗಳಲ್ಲಾಗಲೀ ಎಳ್ಳಷ್ಟೂ ಹಿಂದು ಮುಂದಿರದೆ ಆತನ ವಾದನ ಪರಿಶುದ್ಧವಾಗಿ ಮೂಡಿ ಬಂದಿತು. ಸಭಾಸದರಿಗೆ ಬ್ರಹ್ಮಾನಂದವಾಯಿತು. ಗಾಯಕರು ಆತನನ್ನು ಮುಕ್ತ ಕಂಠದಿಂದ ಹೊಗಳಿದರು. ಕಛೇರಿ ಮುಗಿಯಿತು.

ಗುರು – ಶಿಷ್ಯ

ಕೆನ್ನೆಗೆ ಅಪ್ಪಳಿಸಿದ ಆ ಹಿರಿಯ ವಿದ್ವಾಂಸರು ಮತ್ತೆ ವೇದಿಕೆಯ ಮೇಲೆ ಬಂದು ಯುವಕನನ್ನು ಆಲಂಗಿಸಿದರು. ’ಚೌಡ! ಮನಸ್ಸಿಗೆ ಬೇಜಾರು ಮಾಡಿಕೊಳ್ಳಬೇಡ. ಅಪಸ್ವರವನ್ನು ನಾನು ಸ್ವಲ್ಪವೂ ಸಹಿಸಲಾರೆ! ಅದರಲ್ಲೂ ಯಮಸಾಧನೆ ಮಾಡುವ ನಿನ್ನ ಕೈಯ್ಯಲ್ಲೂ ಅಪಸ್ವರ ಬಂದರೆ ನಾನು ಹೇಗೆ ಸಹಿಸಲಿ? ಮನಸ್ಸಿನ ಉದ್ವೇಘವನ್ನು ತಡೆಯಲಾರದೆ ನಿನ್ನ ಮೇಲೆ ಕೈ  ಮಾಡಿಬಿಟ್ಟೆ. ಸಭೆಯಲ್ಲಿ ನಿನಗೆ ಅಪಮಾನ ಮಾಡಬೇಕೆಂಬುದು ಸರ್ವಥಾ ನನ್ನ ಉದ್ದೇಶವಲ್ಲ. ನೀನು ದೊಡ್ಡ ವಿದ್ವಾಂಸನಾಗಬೇಕು ನನಗೆ, ನಮ್ಮ ಊರಿಗೆ, ನಮ್ಮ ದೇಶಕ್ಕೇ ನೀನು ಅತ್ಯಂತ ಹೆಚ್ಚಿನ ಖ್ಯಾತಿಯನ್ನು ಸಂಪಾದಿಸಿಕೊಡಬೇಕು ಎನ್ನುವುದೇ ನನ್ನ ಹೆಬ್ಬಯಕೆ. ನಡೆದದ್ದೆಲ್ಲವನ್ನೂ ಮರೆತುಬಿಡು’ ಎಂದು ಸಮಾಧಾನ ಪಡಿಸಿದರು.

ಗುರು ಕೃಷ್ಣಪ್ಪನವರ ಪಾದಗಳಿಗೆರಗಿದ ಯುವಕ.

ಚೌಡಯ್ಯನವರ ಜೀವನದಲ್ಲಿ ಇಂಥ ಘಟನೆಗಳು ಒಂದಲ್ಲ; ನಾಲ್ಕಾರು. ಗುರುಗಳನ್ನು ದೇವರಿಗಿಂತ ಹೆಚ್ಚು ಎಂದು ನಂಬಿದ್ದರು ಚೌಡಯ್ಯ. ಅವರು ಹಾಕಿದ ಗೆರೆಯನ್ನು ಮೀರುತ್ತಿರಲಿಲ್ಲ. ಕೃಷ್ಣಪ್ಪನವರಿಗೂ ಅಷ್ಟೆ. ಚೌಡಯ್ಯ ಎಂದರೆ ಪ್ರಾಣಕ್ಕಿಂತ ಹೆಚ್ಚು. ಎರಡು ಹೊತ್ತೂ ಅವರಿಗೆ ಶಿಷ್ಯನ ಪುರೋಭಿವೃದ್ಧಿಯ ಯೋಚನೆಯೇ ಯೋಚನೆ. ಶಿಷ್ಯನ ಅಪಾರ ಗುರುಭಕ್ತಿ. ಗುರುವಿನ ಅನುಪಮ ಶಿಷ್ಯಾಭಿಮಾನ ಇವರೆಡರ ಫಲವಾಗಿ ಚೌಡಯ್ಯನವರ ಹೆಸರು ಇಂದು ದಕ್ಷಿಣ ಭಾರತದಲ್ಲೆಲ್ಲ ಮನೆಮಾತಾಗಿದೆ.

ಚೌಡಯ್ಯನವರು ಸಂಗೀತ ಪ್ರಪಂಚಕ್ಕೆ ಕಾಲಿಟ್ಟದ್ದು, ಕೃಷ್ಣಪ್ಪನವರು ಅವರಿಗೆ ಗುರುವಾಗಿ ದೊರಕಿದ್ದು, ಒಂದು ವಿಧಿವಿಲಾಸ. ಕೇಳಿದರೆ ಕಟ್ಟು ಕತೆಗಿಂತ ವಿಚಿತ್ರವೆನಿಸುತ್ತದೆ.

ತಂದೆ ತಾಯಿಯ ಬಯಕೆ – ಮಗನ ಕಷ್ಟ

ಕಾವೇರಿ ನದಿಯ ಎರಡು ದಡಗಳುದ್ದಕ್ಕೂ ಹಲವಾರು ಪುಣ್ಯಕ್ಷೇತ್ರಗಳಿವೆ.  ಅವುಗಳಲ್ಲಿ ಒಂದಾದ ತಿರುಮಕೂಡಲು, ಚೌಡಯ್ಯನವರು ಹುಟ್ಟಿದ ಊರು. ಮೈಸೂರಿಗೆ ಹದಿನೆಂಟು ಮೈಲಿ ದೂರದಲ್ಲಿದೆ. ಕಾವೇರಿ ಕಪಿಲೆಗಳ ಸಂಗಮಸ್ಥಳದ ಬಳಿ ಇರುವ ಈ ಊರಿನಲ್ಲಿ ಪ್ರಕೃತಿ ಸೌಂದರ್ಯ ಕಣ್ಣಿಗೆ ಹಬ್ಬ ತರುತ್ತದೆ. ಇಲ್ಲಿಯ ಅಗಸ್ತ್ಯೇಶ್ವರನ ದೇವಸ್ಥಾನ ಪುರಾಣ ಪ್ರಸಿದ್ಧವಾದದ್ದು. ಇಲ್ಲಿರುವ ಪುರಾತನವಾದ ಅಶ್ವತ್ಥ ಮರವನ್ನು ಬ್ರಹ್ಮಾಶ್ವತ್ಥವೆಂದು ಕರೆಯುತ್ತಾರೆ. ದೇವಸ್ಥಾನದ ಹಿಂಭಾಗದಲ್ಲಿ ಕಾವೇರಿ ಕಪಿಲೆಗಳು ಒಡಗೂಡಿ ಹರಿಯುತ್ತವೆ. ಮುಂದುಗಡೆ ರಾಜಬೀದಿಯ ಇಕ್ಕಡೆಗಳಲ್ಲೂ ಸಾಲು ಮನೆಗಳು. ಒಂದು ಭಾಗದ ಮನೆಗಳ ಹಿಂದೆ ಕಾವೇರಿ. ಇನ್ನೊಂದು ಭಾಗದ ಮನೆಗಳ ಹಿಂದೆ ಕಪಿಲೆ. ಕಾವೇರಿ ನದಿಯ ಆಚೆ ದಡದಲ್ಲಿರುವ ಸೋಸಲೆಗ್ರಾಮ ವ್ಯಾಸರಾಯ ಸ್ವಾಮಿಗಳ ಮಠಕ್ಕೆ ಪ್ರಸಿದ್ಧವಾಗಿದೆ. ಕಪಿಲಾ ನದಿಯ ಆಚೆ ದಡದಲ್ಲಿರುವ ನರಸೀಪುರ ದೊಡ್ಡ ಊರು.

ಅಗಸ್ತೇಗೌಡರು ಸುಂದರಮ್ಮ ಚೌಡಯ್ಯನವರ ಮಾತಾಪಿತೃಗಳು.

ವಂಶೋದ್ಧಾರಕನನ್ನು ಪಡೆಯಬೇಕೆಂಬ ಆಸೆಯಿಂದ ಸುಂದರಮ್ಮ ಕೈಗೊಂಡ ವ್ರತನಿಯಮಗಳು ಅಷ್ಟಿಷ್ಟಲ್ಲ. ಚೊಚ್ಚಲ ಹೆಣ್ಣು ಮಗುವನ್ನು ಕಳೆದುಕೊಂಡಿದ್ದ ಆಕೆ ಪುತ್ರ ಸಂತಾನ ಬಯಸಿ ಶೇಷಚಂದ್ರಿಕಾಚಾರ್ಯರ ಬೃಂದಾವನದ ಬಳಿ ಅಖಂಡ ತಪಸ್ಸನ್ನೇ ಕೈಗೊಂಡಳು. ಭಗವಂತ ಆಕೆಯ ತಪಸ್ಸಿಗೆ ಓಗೊಟ್ಟ. ೧೮೯೪ರ ಜನವರಿ ೧ ರಂದು ಚೌಡಯ್ಯನ ಜನನವಾಯಿತು.

ಅಗಸ್ತೇಗೌಡರಿಗೆ ಸಂಗೀತ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ತುಂಬ ಆಸಕ್ತಿ. ಒಳ್ಳೆಯ ಅಭಿರುಚಿ. ಮಗನನ್ನು ದೊಡ್ಡ ಸಂಸ್ಕೃತ ಪಂಡಿತನನ್ನಾಗಿ ಮಾಡಬೇಕೆಂಬುದು ಅವರ ಹೆಬ್ಬಯಕೆ. ಕಾರಣ ಅಗಸ್ತೇಗೌಡರು ಮೊದಲಿನಿಂದಲೂ ಘನ ವಿದ್ವಾಂಸರ ಪಂಡಿತರ ಪರಿಸರದಲ್ಲೇ ಬೆಳೆದು ಬಂದವರು.

ಮಗನನ್ನು ದೊಡ್ಡ ಸಂಸ್ಕೃತ ಪಂಡಿತನನ್ನಾಗಿ ಮಾಡಬೇಕೆಂಬ ತಂದೆತಾಯಿಗಳ ಸಂಕಲ್ಪದಿಂದಾಗಿ ಚೌಡಯ್ಯನಿಗೆ ಸಂಕಟಕ್ಕಿಟ್ಟುಕೊಂಡಿತು. ಹುಡುಗನಿಗೆ ಆ ವಿದ್ಯಾಭ್ಯಾಸ ಬೇಡವಾಯಿತು. ಮೊದಲಿನಿಂದಲೂ ಅವನಿಗೆ ಸಂಗೀತ ಕಲಿಯಬೇಕೆಂಬ ಹುಚ್ಚು. ಆದರೆ ತಂದೆ ತಾಯಿಗಳ ಮಾತೆಂದರೆ ವೇದವಾಕ್ಯ. ಅವರಿಗೆ ಬದಲು ಹೇಳುವುದಂತಿರಲಿ, ತಂದೆಯೆದುರು ತಲೆಯೆತ್ತಿ ನಿಲ್ಲಲ್ಲೂ ಧೈರ್ಯವಿಲ್ಲ ಹುಡುಗನಿಗೆ. ಹೀಗಾಗಿ ಸಂಸ್ಕೃತ ಅಭ್ಯಾಸ ಅವನಿಗೆ ನುಂಗಲಾರದ ತುತ್ತಾಗಿತ್ತು.

ಅವನ ಹಣೆಯಲ್ಲಿ ಬರೆದಿರುವುದು

ಆಗಿನ್ನೂ ಒಂಬತ್ತು ವರ್ಷದ ಹುಡುಗ ಚೌಡಯ್ಯ. ನರಸೀಪುರದ ಶಾಲೆಯೊಂದರಲ್ಲಿ ಓದುತ್ತಿದ್ದ. ಶಾಲೆಗೆ ಹೋಗಬೇಕಾದರೆ ದೋಣಿಯಲ್ಲಿ ಕುಳಿತು ಕಪಿಲಾ ನದಿಯನ್ನು ದಾಟಬೇಕಾಗಿತ್ತು. ಅಂದು ಬೆಳಗ್ಗೆ ದೋಣಿ ಇನ್ನೂ ಬಂದಿರಲಿಲ್ಲ. ಅದಕ್ಕಾಗಿ ಕಾಯುತ್ತ ನಿಂತಿದ್ದ ಹುಡುಗ. ಮೊದಲೇ ಶಾಲೆಗೆ ಹೋಗುವುದೆಂದರೆ ಆಗದು ಅವನಿಗೆ. ಅದರ ಮೇಲೆ ಇಂದು ದೋಣಿಗಾಗಿ ಕಾಯುವುದು ಬೇರೆ! ಸ್ಲೇಟು, ಪುಸ್ತಕಗಳನ್ನು ಎಲ್ಲಾದರು ಎಸೆದು ಓಡಿ ಹೋಗಿಬಿಡಲೇ ಎನ್ನುವಷ್ಟು ಬೇಸರ. ಜುಗುಪ್ಸೆ ಹುಡುಗನಿಗೆ. ಒಣಮುಖ ಹಾಕಿಕೊಂಡು ನಿಂತಿದ್ದ ಪಾಪ. ಆ ಸಮಯಕ್ಕೆ ಆ ಮಾರ್ಗವಾಗಿ ಹೊರಟಿದ್ದ ಸೋಸಲೆ ಮಠದ ಹಿರಿಯ ವಿದ್ವಾಂಸರಾಗಿದ್ದ ವಿದ್ಯಾಕಾಂತಾಚಾರ್ಯರ ಕಣ್ಣಿಗೆ ಬಿದ್ದ ಹುಡುಗ. ಯಾವುದೋ ಯೋಚನೆಯಲ್ಲಿ ಮುಳುಗಿದ್ದ ಚೌಡಯ್ಯನಿಗೆ ಆಚಾರ್ಯರು ತಲೆಯ ಮೇಲೆ ಬೆರಳಾಡಿಸಿದಾಗಲೇ ಎಚ್ಚರ.

’ಯಾರು ಮಗು ನೀನು? ನಿನ್ನ ಹೆಸರೇನು?

’ನನ್ನ ಹೆಸರು ಚೌಡ’.

’ನಿನ್ನ ತಂದೆ?’

’ಅಗಸ್ತೇಗೌಡರು’

’ಇಲ್ಲಿ ಏಕೆ ನಿಂತಿದ್ದೀಯೆ?’

“ಶಾಲೆಗೆ ಹೋಗಬೇಕು. ದೋಣಿ ಬಂದಿಲ್ಲ ಇನ್ನೂ.’

’ ನಿನ್ನ ಮುಖ ನೋಡಿದರೆ ಏನೋ ಬೇಜಾರು ಇದ್ದ ಹಾಗೆ ಇದೆ!’

’ಬೇಜಾರಲ್ಲದೆ ಇನ್ನೇನು? ನನಗೆ ಶಾಲೆಗೆ ಹೋಗುವುದಕ್ಕೆ ಇಷ್ಟವಿಲ್ಲ!’

’ಅಪ್ಪ ಅಮ್ಮನ ಬಲವಂತಕ್ಕೆ ಶಾಲೆಗೆ ಹೋಗ್ತಾ ಇದ್ದಿ ಅನ್ನು ಹಾಗಾದರೆ !’

’ಹೂಂ’

’ಏನು ಪಾಠವಾಗಿದೆ ಇದುವರೆಗೆ?’

’ ಅಮರ, ರಘುವಂಶ’

’ನಿನಗೇನು ಕಲಿಬೇಕೂಂತ ಆಸೆ’

’ ಸಂಗೀತ’

’ಭೇಷ್ ! ಎಲ್ಲಿ ನಿನ್ನ ಬಲಗೈ ತೋರಿಸು ಸ್ವಲ್ಪ.’

ಚೌಡಯ್ಯನ ಹಸ್ತರೇಖೆಗಳನ್ನು ಆಚಾರ್ಯರು ಪರಿಶೀಲಿಸಿದರು. ಸಂಗೀತ ಪ್ರಪಂಚದಲ್ಲೇ ಅವನಿಗೆ ಉನ್ನತ ಸ್ಥಾನ ಕಟ್ಟಿಟ್ಟದ್ದು ಎಂಬುದು ಅವರಿಗೆ ಮನವರಿಕೆಯಾಯಿತು.

’ನಿನಗೆ ಖಂಡಿತ ಬರುತ್ತೆ ಸಂಗೀತ. ದೊಡ್ಡ ಸಂಗೀತ ವಿದ್ವಾಂಸನಾಗತ್ತೀಯೆ’.

’ಆದರೆ ಅಪ್ಪ ಅಮ್ಮ ನನ್ನ ಮಾತು ಕೇಳಬೇಕಲ್ಲ?’ ಎಂದು ಕಕ್ಕಾಬಿಕ್ಕಿಯಾಗಿ ಕೇಳಿದ ಚೌಡಯ್ಯ.

’ನೀನೇನು ಯೋಚನೆ ಮಾಡಬೇಡ. ನಾನು ಹೇಳ್ತೀನಿ ಅವರಿಗೆ. ಬಾ ನನ್ನ ಸಂಗಡ. ನಿಮ್ಮ ಮನೆಗೆ ಹೋಗೋಣ’ ಎಂದು ಆಚಾರ್ಯರು ಹುಡುಗನನ್ನು ಕರೆದುಕೊಂಡು ಅಗಸ್ತೇಗೌಡರ ಮನೆಯತ್ತ ನಡೆದರು.

ಶಾಲೆಗೆ ಹೋಗದೆ ಮಗ ಮನೆಗೆ ಬಂದುದನ್ನು ಕಂಡು ಸುಂದರಮ್ಮನವರಿಗೆ ಗಾಬರಿಯಾಯಿತು. ಸಂಗಡ ಬಂದಿದ್ದ ಆಚಾರ್ಯರನ್ನು ಕಂಡು ಮರ್ಯಾದೆಯಿಂದ ಸಾಷ್ಟಾಂಗವೆರಗಿದರು ಸುಂದರಮ್ಮ.

ಹುಡುಗನನ್ನು ನಾನೇ ಕರೆದುಕೊಂಡು ಬಂದೆ. ಇವನಿಗೆ ಈ ಶಾಲೆಯ ವಿದ್ಯಾಭ್ಯಾಸ ತಲೆಗೆ ಹತ್ತುವುದು ಸಾಧ್ಯವಿಲ್ಲ. ಅವನ ಹಣೆಯಲ್ಲಿ ಬರೆದಿರುವುದು ಸಂಗೀತ. ಅದನ್ನೇ ಹೇಳಿಸು. ಪ್ರಸಿದ್ಧನಾಗುತ್ತಾನೆ’ ಎಂದು ಹೇಳಿ ಆಚಾರ್ಯರು ಹೊರಬಿದ್ದರು.

ವಿದ್ಯಾಕಾಂತಾಚಾರ್ಯರನ್ನು ಕಂಡರೆ ಆ ಪ್ರಾಂತದ ಜನರೆಲ್ಲರಿಗೂ ತುಂಬ ಪೂಜ್ಯಭಾವನೆ. ಗುರುಸ್ವರೂಪ ಕೊಡಿಸಿದ ಮೇಲೆ ಸುಂದರಮ್ಮನವರಾಗಲೀ ಅಗಸ್ತೇಗೌಡರಾಗಲೀ ಬದಲು ಹೇಳುವುದೆಂತು? ಹುಡುಗನಿಗೆ ಸಂಗೀತವನ್ನೇ ಹೇಳಿಸುವುದೆಂದು ನಿರ್ಧಾರವಾಯಿತು. ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದುದರಿಂದ ಚೌಡಯ್ಯನಿಗೂ ಸ್ವರ್ಗಕ್ಕೂ ಎರಡೇ ಬೆರಳಾಯಿತು!

ನೀವೂ ಬೇಡ, ನಿಮ್ಮ ಸಂಗೀತವೂ ಬೇಡ

ಪಕ್ಕಣ್ಣ ಎನ್ನುವವರು ಸುಂದರಮ್ಮನವರ ದೂರದ ನೆಂಟರು. ಅವರು ಪಿಟೀಲು ನುಡಿಸುತ್ತಿದ್ದರು. ಅವರು ಚೌಡಯ್ಯನವರ ಗುರುಗಳಾದರು. ಪಾಠ ಹೇಳಿ ಕೊಡುವುದಕ್ಕಿಂತ ತಮ್ಮ ಪ್ರತಾಪವನ್ನು ಕೊಚ್ಚಿಕೊಳ್ಳುವುದರಲ್ಲೇ ಕಾಲ ಕಳೆದುಬಿಡುತ್ತಿದ್ದರು ಪಕ್ಕಣ್ಣ; ಸಾಲದುದಕ್ಕೆ ಶಿಷ್ಯನ ಮೇಲೆ ಹಾರಾಟ, ಎಗರಾಟ ಬೇರೆ! ’ತಲೆಯ ತುಂಬ ಜೇಡಿಮಣ್ಣು ತುಂಬಿರುವಾಗ ನಿನಗೆ ಸಂಗೀತ ಬರೋಣ ಎಂದರೇನು? ಸಂಗೀತ ಎಂದರೆ ಏನು ಕಡೆಲೆಪುರಿ ತಿಂದ ಹಾಗೆ ಅಂತ ತಿಳಿದಿಯೇನು? ನಾವೆಲ್ಲ ಸಂಗೀತ ಕಲಿಯಬೇಕಾದರೆ ಎಷ್ಟೆಷ್ಟು ಕಷ್ಟಪಟ್ಟೆವು ಗೊತ್ತೇ?’ ಎಂದು ಮುಂತಾಗಿ ಶಿಷ್ಯನನ್ನು ಮೂದಲಿಸುವುದು ಪಕ್ಕಣ್ಣನವರ ದಿನಚರಿಯಾಗಿದ್ದಿತು! ಸ್ವಾಭಿಮಾನದ ಚೌಡಯ್ಯನಿಗೆ ಮೈಯೆಲ್ಲ ಬೆಂಕಿಯಾಗುತ್ತಿತ್ತು.

ಕೊನೆಗೊಂದು ದಿನ ಗುರುಗಳ ಮೇಲೆ ತಿರುಗಿ ಬಿದ್ದ. ’ನೀವೂ ಬೇಡ, ನಿಮ್ಮ ಸಂಗೀತವೂ ಬೇಡ”ಎಂದು ಹೇಳಿ ಪಿಟೀಲು ಪೆಟ್ಟಿಗೆಯನ್ನು ಕಂಕುಳಸಂದಿಗೆ ಏರಿಸಿಕೊಂಡು ಮನೆಗೆ ಹಿಂತಿರುಗಿ ನಡೆದ ಸಮಾಚಾರವನ್ನೆಲ್ಲ ತಾಯಿಗೆ ತಿಳಿಸಿದ. ಸುಂದರಮ್ಮನಿಗೆ ಕಳವಳವುಂಟಾಯಿತು.”ಆಚಾರ್ಯರ ಮಾತು ಕೇಳಿ ಶಾಲೆಯನ್ನೂ ಬಿಡಿಸಿ ಹುಡುಗನನ್ನು ಸಂಗೀತಕ್ಕೆ ಹಾಕಿದ್ದಾಯಿತು. ಇತ್ತ ಶಾಲೆಯೂ ಇಲ್ಲ, ಅತ್ತ ಸಂಗೀತವೂ ಇಲ್ಲ! ಮುಂದೇನು ಗತಿ’ ಎಂದು ಪರದಾಡಿದರು.

ಗುರು ದರ್ಶನ

ಹೀಗಿರುವಲ್ಲಿ ಒಂದು ದಿನ ಸುಂದರಮ್ಮನವರ ಅಣ್ಣ ಮನೆಗೆ ಬಂದರು. ಅವರ ಹೆಸರೂ ಚೌಡಯ್ಯ. ಹನ್ನೆರಡು ರೂಪಾಯಿ ಪರೀಕ್ಷೆ (ಈಗಿನ ಎಸ್.ಎಸ್.ಎಲ್.ಸಿ.) ಮಾಡಿ ಸರ್ಕಾರೀ ಕೆಲಸವನ್ನು ಸಂಪಾದಿಸಿಕೊಂಡಿದ್ದರೆಂದು ಅವರನ್ನು ಕಂಡರೆ ಮನೆಯವರೆಲ್ಲರಿಗೂ ಅಭಿಮಾನ, ಗೌರವ. ಅಣ್ಣನಲ್ಲಿ ತಮ್ಮ ಸಂಕಟವನ್ನು ತೋಡಿಕೊಂಡರು ಸುಂದರಮ್ಮ. ’ನೀನೇನೂ ಹೆದರಬೇಡ. ನಾನು ಹುಡುಗನನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಬಿಡಾರಂ ಕೃಷ್ಣಪ್ಪನವರಲ್ಲಿ ಪಾಠಕ್ಕೆ ಏರ್ಪಾಡು ಮಾಡುತ್ತೇನೆ. ಕೃಷ್ಣಪ್ಪನವರೆಂದರೆ ಸಾಮಾನ್ಯರಲ್ಲ. ಅರಮನೆಯ ವಿದ್ವಾಂಸರು. ಸ್ಥಳ ಪರಸ್ಥಳಗಳಲ್ಲಿ ನೂರಾರು ಕಛೇರಿಗಳನ್ನು ಮಾಡಿ ಪ್ರಸಿದ್ಧರಾಗಿದ್ದಾರೆ. ನನ್ನಲ್ಲಿ ತುಂಬ ವಿಶ್ವಾಸ ಅವರಿಗೆ. ನನ್ನ ಮಾತನ್ನು ಅವರು ಎಂದಿಗೂ ತೆಗೆದುಹಾಕುವುದಿಲ್ಲ. ನೀನು ನಿಶ್ಚಿಂತಳಾಗು’ ಎಂದು ತಂಗಿಯನ್ನು ಸಮಾಧಾನ ಪಡಿಸಿದರು. ಇದನ್ನು ಕೇಳಿ ಚೌಡಯ್ಯ ಹಿಗ್ಗಿ ಹೀರೇಕಾಯಿ ಆದ. ಮೈಸೂರಿಗೆ ಹೋಗುವುದೇ ಒಂದು ಸಂಭ್ರಮ. ಮೇಲಾಗಿ ಅರಮನೆಯ ದೊಡ್ಡ ವಿದ್ವಾಂಸರ ಬಳಿ ಶಿಷ್ಯ ವೃತ್ತಿ ಮಾಡುವುದು ಎಂದರೆ ಮತ್ತೂ ಸಡಗರ.

ಮೈಸೂರಿಗೆ ಹೊರಡುವ ದಿನ ಹತ್ತಿರ ಹತ್ತಿರವಾದಂತೆ ಚೌಡಯ್ಯನ ಉತ್ಸಾಹ ಕಡಿಮೆಯಾಗುತ್ತಾ ಬಂದಿತು. ಅದರ ಸ್ಥಳದಲ್ಲಿ ಗಾಬರಿ ತಲೆ ಹಾಕಿತು. ಅಂಥ ದೊಡ್ಡ ವಿದ್ವಾಂಸರ ಬಳಿ ಕುಳಿತು ಪಾಠ ಕಲಿಯುವುದು ಹೇಗೆ ಎಂದು ಹೆದರಿದ. ಮೈಸೂರಿಗೆ ಹೋಗುವುದಿಲ್ಲವೆಂದು ಹಠ ಹಿಡಿದ.

ಹೊರಡುವ ದಿನ ಜೋಡೆತ್ತಿನ ಗಾಡಿ ಮನೆಯ ಮುಂದೆ ಸಿದ್ಧವಾಯಿತು.  ಹುಡುಗನೇ ನಾಪತ್ತೆ ಮನೆಯಲ್ಲಿ! ಪಕ್ಕದ ಮನೆಯಲ್ಲಿ ಅವಿತಿಟ್ಟುಕೊಂಡಿದ್ದ ಹುಡುಗನನ್ನು ಹಿಡಿದು ತಂದು ಕೈಕಾಲು ಕಟ್ಟಿ ಗಾಡಿಯಲ್ಲಿ ಸೇರಿಸಿದ್ದಾಯಿತು. ಮೈಸೂರಿಗೆ ಪ್ರಯಾಣ ಸಾಗಿತು.

ನೇರವಾಗಿ ಕೃಷ್ಣಪ್ಪನವರ ಮನೆಗೆ ಬಂದರು. ಅವರು ಬಂದ ಸಮಾಚಾರವೇನೆಂಬುದನ್ನು  ತಿಳಿದ ಬಳಿಕ ಕೃಷ್ಣಪ್ಪನವರು ಚೌಡಯ್ಯನನ್ನು ಕುರಿತು, ’ಏನಾದರೂ ಸ್ವಲ್ಪ ಹಾಡು ನೋಡೋಣ’ ಎಂದರು. ಹುಡುಗ ಹಾಡಿದ್ದನ್ನು ಕೇಳಿ, ’ಶರೀರದ ಸೌಲಭ್ಯ ಇಲ್ಲ. ಆದ್ದರಿಂದ ಹಾಡಿಕೆ ಬೇಡ.  ಪಿಟೀಲು ಹೇಳಿಕೊಡುತ್ತೇನೆ’ ಎಂದರು ಕೃಷ್ಣಪ್ಪ.

’ತಮ್ಮ ಚಿತ್ತ! ಹಾಗಾದರೆ ಎಂದು ಕರೆದುಕೊಂಡು ಬರಲಿ ಇವನನ್ನು?’ ಎಂದು ಕೇಳಿದರು ಸೋದರಮಾವ ಚೌಡಯ್ಯ.

’ಎಂದೇನು? ಇಂದೇ ಆಗಲಿ’ ಎಂದರು ಕೃಷ್ಣಪ್ಪ.

ಅಂದು ಆಷಾಢ ಬಹುಳ ಅಮಾವಾಸ್ಯೆ! ಸೋದರ ಮಾವನೂ ಚೌಡಯ್ಯನೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಅವರ ಇಂಗಿತವನ್ನರಿತ ಕೃಷ್ಣಪ್ಪ. ಏನು ಯೋಚನೆ ಮಾಡಬೇಕಾದದ್ದಿಲ್ಲ. ಶ್ರೀರಾಮಚಂದ್ರ ಅನುಗ್ರಹ ಮಾಡುತ್ತಾನೆ ಎಂದರು. ಅಂದು ಸಂಜೆಯೇ ಪಾಠ ಪ್ರಾರಂಭವಾಯಿತು.

ಕೃಷ್ಣಪ್ಪನವರ ಬಳಿ ಶಿಷ್ಯವೃತ್ತಿಯನ್ನು ಪ್ರಾರಂಭ ಮಾಡುವ ವೇಳೆಗೆ ಚೌಡಯ್ಯನವರಿಗೆ ಸುಮಾರು ಹದಿನಾರು ವರ್ಷ. ಎಂಟು ವರ್ಷಗಳ ಕಾಲ ಎಂದರೆ ೧೯೧೦ರಿಂದ ೧೯೧೮ರವರೆಗೆ ಚೌಡಯ್ಯನವರ ವಿದ್ಯಾ ವ್ಯಾಸಂಗ ಯಾವ ಅಡ್ಡಿ ಆತಂಕಗಳೂ ಇಲ್ಲದೆ ಮುಂದೆ ಸಾಗಿತು. ಚೌಡಯ್ಯ ಮೈಸೂರಿನಲ್ಲಿಯೇ ನೆಲೆಸಿದರು.

ಎಂತಹ ಗುರು!

ಕೃಷ್ಣಪ್ಪನವರ ಬಳಿ ಸಂಗೀತ ಕಲಿಯುವುದೆಂದರೆ ಅದೊಂದು ಕಠಿಣ ತಪ್ಪಸಿದ್ದಂತೆ.  ಇತರ ಸಮಯಗಳಲ್ಲಿ ಶಿಷ್ಯರೊಡನೆ ಸ್ನೇಹ ಸಲಿಗೆಯಿಂದ ವರ್ತಿಸುತ್ತಿದ್ದ ಗುರುಗಳು ಪಾಠ ಪ್ರವಚನಗಳ ಸಂದರ್ಭದಲ್ಲಿ ಕಬ್ಬಿಣದಷ್ಟು ಕಠಿಣರಾಗುತ್ತಿದ್ದರು. ಶಿಷ್ಯರಿಗೆ ವಿಧಾಯಕವಾಗಿದ್ದ ದಿನಚರಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕಿಡಿಕಿಡಿಯಾಗುತ್ತಿದ್ದರು.

ಚೌಡಯ್ಯ ಅನುಸರಿಸಬೇಕಾಗಿದ್ದ ದಿನಚರಿಯ ವಿವರಗಳನ್ನು ಕೇಳಿದಾಗ ಅವರ ಯಶಸ್ಸಿನ ಗುಟ್ಟು ಅರ್ಥವಾಗುತ್ತದೆ. ಬೆಳಗಿನ ಜಾವ ನಾಲ್ಕು ಗಂಟೆಯಿಂದ ಎಂಟು ಗಂಟೆಯವರೆಗೆ ವ್ಯಾಯಾಮ; ಅಣಗ ಸಾಧನೆ. ಸ್ನಾನ ಫಲಾಹಾರಗಳಾದ ಬಳಿಕ ಒಂಬತ್ತರಿಂದ ಹನ್ನೆರಡವರೆಗೆ ಪಿಟೀಲು. ಊಟವಾದ ನಂತರ ಸ್ವಲ್ಪ ವಿಶ್ರಾಂತಿ. ಮತ್ತೆ ಮೂರರಿಂದ ಐದರವರೆಗೆ ಸಾಧನೆ. ಸಂಜೆ ಐದರಿಂದ ಏಳರವರೆಗೆ ವಾಯು ಸಂಚಾರ. ರಾತ್ರಿ ಎಂಟಕ್ಕೆ ಊಟ ಮುಗಿಸಿ ಸಾಧನೆಗೆ ಕುಳಿತರೆ ರಾತ್ರಿ  ಹನ್ನೊಂದಾದರೂ ಆಯಿತು,  ಹನ್ನೆರಡಾದರೂ ಆಯಿತು! ಹೀಗೆ ದಿನಕ್ಕೆ  ಕನಿಷ್ಠ ಪಕ್ಷ ಎಂಟು ಒಂಬತ್ತು ಗಂಟೆಗಳಷ್ಟು ಕಾಲ ಅಭ್ಯಾಸ ಮಾಡಬೇಕಾಗಿದ್ದಿತು. ಹಗಲು ರಾತ್ರಿ ಎನ್ನದೆ ಒಂದೊಂದು ರಾಗವನ್ನೇ ಒಂದೊಂದು ವಾರ ಪೂರ್ತಿ ಆಭ್ಯಾಸ ಮಾಡಬೇಕೆಂದು ವಿಧಾಯಕ ಮಾಡಿದ್ದರು. ಗುರುಗಳು. ’ನುಡಿಸುವಾಗ ಕಮಾನನ್ನು ಪದೇ ಪದೇ ಬದಲಾಯಿಸಬಾರದು, ಎಷ್ಟು ದೀರ್ಘವಾಗಿ ಕಮಾನನ್ನು ಹಾಕಬಹುದೋ ಅಷ್ಟು ದೀರ್ಘವಾಗಿ ಹಾಕುತ್ತ ಸರಳೆವರಸೆ, ಜಂಟಿ ವರಸೆ, ಅಲಂಕಾರ ವರ್ಣಗಳನ್ನು ಅಭ್ಯಾಸ ಮಾಡು’ ಎಂದು ಅಪ್ಪಣೆ ಮಾಡಿದ್ದರು ಗುರುಗಳು.

೧೯೫೭ರಲ್ಲಿ ಮದರಾಸು ಮ್ಯೂಸಿಕ್ ಅಕಾಡೆಮಿಯಲ್ಲಿ ಪಿಟೀಲು ವಾದನದ ಬಗೆಗೆ ಪ್ರದರ್ಶನವೀಯುತ್ತ ಚೌಡಯ್ಯನವರು ಒಂದೇ ಕಮಾನಿನಲ್ಲಿ ೨೫೬ ಅಕ್ಷರ ಕಾಲ ಖಚಿತವಾಗಿ  ನುಡಿಸಿ ಸಭಾಸದರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದುದಕ್ಕೆ ಈ ಯಮಸಾಧನೆಯೇ  ಕಾರಣ.

ಖರಹರಪ್ರಿಯವನ್ನೇ ನುಡಿಸು ಈ ವಾರ ಪೂರ್ತ, ಅಧಿಕಪ್ರಸಂಗಿ!

ಬಿಡಾರಂ ಕೃಷ್ಣಪ್ಪನವರ ಶಿಷ್ಯ ಸಂಪತ್ತು ಅಪಾರ. ಆದರೂ ಚೌಡಯ್ಯನವರನ್ನು ಕಂಡರೆ ಕೃಷ್ಣಪ್ಪನವರಿಗೆ ಬಹು ಪ್ರೀತಿ, ಅಭಿಮಾನ. ಆದರೂ ’ನನ್ನಷ್ಟು ಬೈಗುಳವನ್ನು ತಿಂದವರು ಬೇರೆ ಯಾರೂ ಇಲ್ಲ;’ ಎನ್ನುತ್ತಿದ್ದರು ಚೌಡಯ್ಯ. ಅವರೇ ಹೇಳಿದ ಒಂದು ಪ್ರಸಂಗ ಇದು.

ಆ ವಾರ ಚೌಡಯ್ಯನವರ ಸಾಧನೆಗೆ ಗೊತ್ತಾಗಿದ್ದ ರಾಗ ಖರಹರಪ್ರಿಯ. ನುಡಿಸಿದ್ದನ್ನೇ ನುಡಿಸಿ ಬೇಸರವಾಗಿತ್ತು ಅವರಿಗೆ. ಆದರೆ ಗುರುಗಳ ಅಣತಿಯನ್ನು ಮೀರುವ ಧೈರ್ಯವಿರಲಿಲ್ಲ. ಮನೆಯಲ್ಲಿ ಎಲ್ಲೇ ಇದ್ದರೂ ಏನೇ ಕೆಲಸ ಮಾಡುತ್ತಿದ್ದರೂ ಕೃಷ್ಣಪ್ಪನವರ ಕಿವಿಯೆಲ್ಲ ಶಿಷ್ಯರ ಅಭ್ಯಾಸದ ಮೇಲೆಯೇ ಇರುತ್ತಿತ್ತು. ಶ್ರುತಿ, ತಾಳಗಳಲ್ಲಿ ಕೂದಲೆಳೆಯಷ್ಟು ಹಿಂದು ಮುಂದಾದರೂ ದೂರ್ವಾಸರ ಆವಾಹನೆಯೇ ಆಗುತ್ತಿತ್ತು ಅವರ ಮೇಲೆ!

ಆ ದಿನ ಮಹಡಿಯ ಮೇಲೆ ಚೌಡಯ್ಯ ಸಾಧನೆ ಮಾಡುತ್ತಿದ್ದಾಗ ಕೃಷ್ಣಪ್ಪ ಕೆಳಗಡೆ ಪಡಸಾಲೆಯಲ್ಲಿ ಕುಳಿತು ಸ್ನೇಹಿತರೊಬ್ಬರೊಂದಿಗೆ ಮಾತುಕತೆಯಾಡುತ್ತಿದ್ದರು. ಗುರುಗಳ ಗಮನ ತಮ್ಮ ಅಭ್ಯಾಸದ ಕಡೆಗೆ ಇರಲಾರದೆಂದು ಭಾವಿಸಿ ಚೌಡಯ್ಯ ಖರಹರಪ್ರಿಯ ರಾಗವನ್ನು ಬಿಟ್ಟು ಬೇರೊಂದು ರಾಗಕ್ಕೆ ಕೈ ಹಾಕಿದರು. ಒಡನೆಯೇ ಕುಳಿತ ಸ್ಥಳದಿಂದಲೇ ಗುಡುಗಿದರು ಕೃಷ್ಣಪ್ಪ. ’ಕೆಳಗಿಳಿದು ಬಾ’  ಎಂದು ಅಬ್ಬರಿಸಿದರು. ಆಳುದ್ದ ದೇಹವನ್ನು ಗೇಣುದ್ದ ಮಾಡಿಕೊಂಡು ನಡುಗುತ್ತ. ಅಳುಕುತ್ತ ಗುರುಗಳೆದರು ನಿಂತರು ಚೌಡಯ್ಯ.

’ಇನ್ನು ಮೇಲೆ ಕಛೇರಿಗಳಲ್ಲಿ ಈ ಏಳು ತಂತಿ ಪಿಟೀಲನ್ನೇ ನುಡಿಸು”

”ಎರಡೇ ದಿನಗಳಲ್ಲಿ ಖರಹರಪ್ರಿಯ ಕರತಲಾಮಲಕವಾಗಿ ಹೋಯಿತು ನಮ್ಮ ಹುಡುಗನಿಗೆ! ಅದರಲ್ಲಿ ಇನ್ನು ಕಲಿಯಬೇಕಾದ ಅಂಶ ಯಾವುದೂ ಉಳಿದಿಲ್ಲ. ಎಂತಲೇ ಇಂದು ಬೇರೆ ರಾಗದ ಅಭ್ಯಾಸವನ್ನು ಪ್ರಾರಂಭಿಸಿದ್ದಾನೆ ’ಎಂದರು ಕೃಷ್ಣಪ್ಪ ಅವರ ಸ್ನೇಹಿತರನ್ನುದ್ದೇಶಿಸಿ.

’ಹೋಗು. ಖರಹರಪ್ರಿಯವನ್ನೇ ನುಡಿಸು ಈ ವಾರ ಪೂರ್ತ, ಅಧಿಕ ಪ್ರಸಂಗಿ! ’ ಎಂದೂ ಛೀಮಾರಿ ಹಾಕಿದರು ಶಿಷ್ಯನಿಗೆ.

ತಗ್ಗಸಿದ್ದ ಮುಖವನ್ನು ಮೇಲೆತ್ತಲಿಲ್ಲ ಚೌಡಯ್ಯ. ಮರುಮಾತನಾಡದೆಯೇ ಸರಸರನೆ ಮಹಡಿ ಏರಿ ಹೋಗಿ ಖರಹರಪ್ರಿಯ ರಾಗವನ್ನು ಮತ್ತೆ ಅಭ್ಯಾಸ ಮಾಡಲು ಪ್ರಾರಂಭಿಸಿದರು. ಹೊಸ ಹೊಸ ಕಲ್ಪನೆಗಳು ಮೇಲೊಂದು ಮೇಲೆ ಅಲೆ ಅಲೆಯಾಗಿ ಬರಲಾರಂಭಿಸಿದದವು. ಎಷ್ಟು ಹೊತ್ತು ನುಡಿಸುತ್ತಿದ್ದರೆಂಬ ಅರಿವು ಸಹ ಅವರಿಗಿರಲಿಲ್ಲ.

ಅಮೋಘವಾದ ಖರಹರಪ್ರಿಯವನ್ನು ಕೇಳಿ ಕೃಷ್ಣಪ್ಪನವರು ತಲೆದೂಗಿದರು. ಶಿಷ್ಯ ಕೊಠಡಿಗೆ ಬಂದು ಸದ್ದಿಲ್ಲದೆ ನಿಂತು ಕೆಲಕಾಲ ಆಲಿಸಿದರು. ಮೈಮರೆತು ನುಡಿಸುತ್ತಿದ್ದ ಚೌಡಯ್ಯನವರನ್ನು ಆಲಂಗಿಸಿದರು. ’ನೋಡಿದೆಯಾ ಚೌಡಯ್ಯ. ಎಲ್ಲಿಂದ ಬಂದಿತು ಇಷ್ಟು ಹೊತ್ತೂ ಇಲ್ಲದ ಈ ಮನೋಧರ್ಮ ಈಗ? ಸಂಗೀತ ಸಾಗರದಷ್ಟು ಆಳ. ಆಕಾಶದಷ್ಟು ವಿಸ್ತಾರ. ನಿನ್ನ ತಪಸ್ಸು ಎಷ್ಟು ದೃಢವಾಗುತ್ತದೋ ಅಷ್ಟು ವಿಕಾಸಗೊಳ್ಳುತ್ತದೆ. ನಿನ್ನ ಕಲ್ಪನೆಯ ಶಕ್ತಿ. ಒಂದೊಂದು ರಾಗಕ್ಕೆ ತಮ್ಮ ಆಯುಷ್ಯವನ್ನೇ ಧಾರೆಯೆರೆದು ಕೃತಕೃತ್ಯರಾದ ವಿದ್ವಾಂಸರಿದ್ದಾರೆ. ಇನ್ನು ಮೇಲೆ ನನ್ನ ಮಾತನ್ನು ಹೀಗೆ ನಿರ್ಲಕ್ಷ್ಯ ಮಾಡಬೇಡ. ನಿನ್ನ ಪುರೋಭಿವೃದ್ಧಿಯೇ ನನ್ನ ಗುರಿ’ ಎಂದು ಚೌಡಯ್ಯನವರ ಬೆನ್ನು ತಟ್ಟಿದರು ಕೃಷ್ಣಪ್ಪ.

ಮೊದಲ ಬಾರಿ ಕಛೇರಿಯಲ್ಲಿ

ಬಿಡಾರಂ ಕೃಷ್ಣಪ್ಪನವರ ಬಳಿ ಸಂಗೀತವನ್ನು ಕಲಿಯಲು ಪ್ರಾರಂಭಿಸಿದ ಒಂದು ವರ್ಷದೊಳಗಾಗಿ ಕಛೇರಿಯಲ್ಲಿ ಪಕ್ಕವಾದ್ಯ ನುಡಿಸುವಷ್ಟು ಪ್ರಾವೀಣ್ಯವನ್ನು ಸಂಪಾದಿಸಿದ್ದರು. ಚೌಡಯ್ಯ. ಅವರು ಸಂಗೀತ ಸಭೆಯಲ್ಲಿ ಮೊಟ್ಟ ಮೊದಲು ಕಾಣಿಸಿಕೊಂಡಿದ್ದು ೧೯೧೧ರಲ್ಲಿ. ಅವರು ಸಭಾಪ್ರವೇಶ ಮಾಡಿದ ಸಂದರ್ಭ ಸಹ ದೈವಯೋಗದಿಂದಲೇ ಕೂಡಿಬಂದದ್ದು.

ಮೈಸೂರಿಗೆ ದಯಮಾಡಿಸಿದ್ದ ಶಿವಗಂಗೆ ಮಠಾಧಿಪತಿಗಳ ಸನ್ನಿಧಿಯಲ್ಲಿ ಒಂದು ಸಂಜೆ ಬಿಡಾರಂ ಕೃಷ್ಣಪ್ಪನವರ ಕಛೇರಿ ಏರ್ಪಾಡಾಗಿತ್ತು. ಪಿಟೀಲು ಪಕ್ಕವಾದ್ಯಕ್ಕೆ ಗೊತ್ತಾಗಿದ್ದ ವಿದ್ವಾಂಸರು ಏಕೋ ಏನೋ ಬರಲಾಗಲಿಲ್ಲ. ಶಿಷ್ಯನನ್ನು ಕರೆದು, ’ಕಛೇರಿಗೆ ಸಿದ್ಧವಾಗು’ ಎಂದರು ಕೃಷ್ಣಪ್ಪ. ಪದ್ಧತಿಯಂತೆ ತಂಬೂರಿಯನ್ನು ಶುದ್ಧವಾಗಿ ಶ್ರುತಿಗೆ ಸೇರಿಸಿ, ಗವನು ಹಾಕಿ, ಎತ್ತಿಕೊಂಡು ಬಂದು,”ಇಗೋ ಸಿದ್ಧ ಗುರುಗಳೇ ’ಎಂದರು ಚೌಡಯ್ಯ.’ ನಿನ್ನ ತಲೆ ನೀನು ಸಿದ್ಧನಾಗು ಪಿಟೀಲೇ ಇಲ್ಲದೆ ಹೊರಟರೆ ಹೇಗೋ” ಎಂದು ನಸು ನಕ್ಕರು ಗುರುಗಳು. ಚೌಡಯ್ಯ ಅವಾಕ್ಕಾದರು. ’ಇಂದು ನಿನ್ನದೇ ಪಕ್ಕವಾದ್ಯ ನನಗೆ. ವಾದ್ಯವನ್ನು ತೆಗೆದುಕೋ’ ಎಂದು ಕೃಷ್ಣಪ್ಪ ನುಡಿದಾಗ ಚೌಡಯ್ಯನವರಿಗೆ ಅಮೃತ ಧಾರೆಯಾದಂತಾಯಿತು. ಪ್ರಥಮ ಬಾರಿಗೆ ಗುರುಗಳ ಪಕ್ಕದಲ್ಲಿ ಕುಳಿತು ತುಂಬಿದ ಸಭೆಯಲ್ಲಿ ನುಡಿಸುವುದೆಂದರೆ ಯಾರಿಗೆ ತಾನೆ ಕಳವಳ ಉಂಟಾಗುವುದಿಲ್ಲ? ಹೆದರಿ ಬೆದರಿ ಕುಳಿತುಕೊಂಡರು ಚೌಡಯ್ಯ ವೇದಿಕೆಯ ಮೇಲೆ. ಆದರೆ ದೇವರ ಪೂಜೆಯಲ್ಲಿ ನಿರತರಾಗಿದ್ದ ಯತಿಗಳು ಚೌಡಯ್ಯನವರಿಗೆ ಸಾಕ್ಷಾತ್ ಪರಮೇಶ್ವರನಂತೆ ಕಂಡರು. ಅವರ ದರ್ಶನ ಮಾತ್ರದಿಂದಲೇ ಚೌಡಯ್ಯನವರ ಮನಸ್ಸಿನಲ್ಲಿದ್ದ ಭಯಭೀತಿಗಳು ಪರಾರಿಯಾದರು. ಆತ್ಮವಿಶ್ವಾಸ ತುಂಬಿ ಬಂದಿತು. ಯತಿ ಶ್ರೇಷ್ಠರನ್ನೂ ವಿದ್ಯಾಗುರುಗಳನ್ನೂ ಹಿರಿಯರನ್ನೂ ಭಕ್ತಿಯಿಂದ ಸ್ಮರಿಸಿ ನುಡಿಸಲಾರಂಭಿಸಿದರು. ಸ್ವಾಮಿಗಳು ತಲೆದೂಗಿದರು. ಸಭಾಸದರು ಬೆರಗಾದರು. ಶಿಷ್ಯನ ಶಕ್ತಿ ಸಾಮರ್ಥ್ಯಗಳನ್ನು ಗುರುಗಳು ಮನಸ್ಸಿನಲ್ಲಿಯೇ ಮೆಚ್ಚಿಕೊಂಡರು. ಉಜ್ವಲ ಭವಿಷ್ಯ ತಮ್ಮ ಶಿಷ್ಯನಿಗೆ ಕಟ್ಟಿಟ್ಟದ್ದು ಎಂದು ತೃಪ್ತಿ ಪಟ್ಟರು. ಅಲ್ಲಿಂದಾಚೆಗೆ ಗುರುಗಳ ಕಛೇರಿಗೆ ಚೌಡಯ್ಯ ಪಕ್ಕವಾದ್ಯ ನುಡಿಸುವುದು ಸಾಮಾನ್ಯವಾಯಿತು.

ಬಂಗಾರದ ಪದಕ

ಮೈಸೂರಿನ ಸದ್ವಿದ್ಯಾ ಪಾಠಶಾಲೆಯಲ್ಲಿ ನಡೆದ ಕಛೇರಿಯೊಂದನ್ನು ಚೌಡಯ್ಯ ಪದೇ ಪದೇ ಜ್ಞಾಪಿಸಿಕೊಳ್ಳುತ್ತಿದ್ದರು.

ಆ ಕಛೇರಿ ನಡೆಯುವುದಕ್ಕೆ ಸ್ವಲ್ಪ ದಿನಗಳ ಹಿಂದೆ ಮಂಡೀ ಪೇಟೆಯ ಸಾಹುಕಾರರು ಕೆಲವರು ಸೇರಿ ಚೌಡಯ್ಯನವರಿಗೆ ಬಂಗಾರದ ಪದಕವನ್ನು ನೀಡಿ ಗೌರವಿಸಿದ್ದರು. ಅಂದು ಕಛೇರಿಗೆ ಬರುವಾಗ ಚೌಡಯ್ಯ ಆ ಪದಕವನ್ನು ಧರಿಸಿಕೊಂಡು ಬಂದಿದ್ದರು. ಗುರುಗಳೋ ದೃಷ್ಟಿ ಅದರ ಮೇಲೆ ಬಿದ್ದಿತು. ಅದನ್ನು ತೆಗೆದಿರಿಸಿ ನುಡಿಸುವಂತೆ ಸಂಜ್ಞೆ ಮಾಡಿದರು  ಗುರುಗಳು. ಅದನ್ನು ಗಮನಿಸಿಯೂ ಗಮನಿಸದವರಂತೆ ಇದ್ದರು ಚೌಡಯ್ಯ. ಪದಕದ ಮೇಲೆ ಗಮನ ಹೋದದ್ದರಿಂದ ನುಡಿಸುವುದರ ಮೇಲೆ ಎಚ್ಚರ ತಪ್ಪಿತು. ಅಪಸ್ವರವೊಂದು ಕೈಯಿಂದ ನುಣುಚಿಕೊಂಡಿತು! ಅದರ ಹಿಂದಿನಿಂದಲೇ ಕಪಾಳ ಪ್ರಕ್ಷಾಳನವಾಯಿತು ಗುರುಗಳಿಂದ. ’ತೆಗೆಯೋ ಆ ಪದಕವನ್ನು. ನೀನು ದೊಡ್ಡ ವಿದ್ವಾಂಸ ಎನ್ನುವುದನ್ನು ಎಲ್ಲರೂ ಬಲ್ಲರು’ ಎಂದು ಗುಡುಗಿದರು ಗುರುಗಳು. ತುಟಿಪಿಟಿಕ್ಕೆನ್ನದೆ ಚೌಡಯ್ಯ ಪದಕವನ್ನು ತೆಗೆದಿಟ್ಟರು. ಅಲ್ಲಿಂದ ಮುಂದೆ ಮನೋಧರ್ಮ ಕುದುರಿತು ಚೌಡಯ್ಯನವರಿಗೆ. ಅಮೋಘವಾಗಿ ನುಡಿಸಿದರು. ’ನೋಡಿದೆಯಾ ಚೌಡಯ್ಯ! ಬಂಗಾರದ ಪದಕವನ್ನು ಸಂಪಾದಿಸಿಬಿಟ್ಟೆ ಎನ್ನುವ ಅಹಂಕಾರ ನಿನ್ನ ತಲೆಯ ತುಂಬ ತುಂಬಿಕೊಂಡು ಶ್ರುತಿ ಶುದ್ಧತೆಯನ್ನು ಓಡಿಸಿತ್ತು. ಅದಕ್ಕೇ ಅಪಸ್ವರ ಬಂದದ್ದು. ಯಾವಾಗ ಬಂಗಾರದ ಪದಕದ ಅಹಂಭಾವ ಮನಸ್ಸಿನಿಂದ ದೂರವಾಯಿತೋ ಸುಸ್ವರ  ಮತ್ತೆ ನಿನ್ನ ವಶವಾಯಿತು. ಇನ್ನು ಮೇಲೆ ಹೀಗೆ ನಿನ್ನ ತಲೆಯನ್ನು ಆಕಾಶದಲ್ಲಿರಿಸಲು  ಹೋಗಬೇಡ. ನಿನ್ನ ಹೃದಯದ ತುಂಬ ಪಿಟೀಲೇ ತುಂಬಿರಬೇಕು. ಇಂತಹ ನೂರಾರು ಪದಕಗಳು ತಾವಾಗಿಯೇ ಬರುತ್ತವೆ’ ಆಗ ಎಂದರು ಕೃಷ್ಣಪ್ಪ.

ಗುರುಗಳ ಸನ್ನಿಧಿಯಲ್ಲಿ ಇಂತಹ ಹತ್ತಾರು ಪೆಟ್ಟು ಬಿದ್ದು ಚಕ್ಕುಯೊಡೆದು ಗಟ್ಟಿರೂಪ ಪಡೆದಿದ್ದರು ಚೌಡಯ್ಯ.

ಒಂದು ಅಮೃತ ಘಳಿಗೆ

ಅದೊಂದು ಸಂಜೆ ಕೃಷ್ಣಪ್ಪನವರ ಕಛೇರಿಗೆ ಪಿಟೀಲು ನುಡಿಸಲು ವೇದಿಕೆಯನ್ನೇರಿದಾಗ ಚೌಡಯ್ಯನವರ ಮನಸ್ಸಿನಲ್ಲಿ ಏನೋ ಕಳವಳ. ’ಗುರುಗಳಿಗೆ ಒಂದು ಮಾತು ತಿಳಿಸಿಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತೇನೋ; ಇನ್ನು ಇಂದೂ ಏನು ಅಭಾಸವಾಗುತ್ತದೆಯೋ ಕಾಣೆನಲ್ಲ’ ಎಂದು ಪರಿತಪಿಸುತ್ತಿತ್ತು ಅವರ ಮನಸ್ಸು. ತಲೆಯೆತ್ತಿ ಗುರುಗಳ ಮುಖವನ್ನು ನೋಡಲೂ ಧೈರ್ಯವಿರಲಿಲ್ಲ. ಹೆದರಿ ಹೆದರಿ ನುಡಿಸುತ್ತಿದ್ದರು.

ಅಂದಿನ ಅವರ ವಾದನದಲ್ಲಿ ಏನೋ ವ್ಯತ್ಯಾಸವಿದ್ದಂತೆ ಕೃಷ್ಣಪ್ಪನವರಿಗೂ ಭಾಸವಾಗಿತ್ತು. ಆದರೆ ಏನು ಬದಲಾವಣೆ ಎನ್ನುವುದು ಮಾತ್ರ ಥಟಕ್ಕನೆ ಅವರಿಗೆ ಗೋಚರವಾಗಲಿಲ್ಲ. ಪದೇ ಪದೇ ಪಿಟೀಲು ಕಡೆಗೆ ನೋಡುತ್ತಿದ್ದರು. ಅವರು ಹಾಗೆ ನೋಡಿದಾಗಲೆಲ್ಲ ಚೌಡಯ್ಯನಾದವನ್ನು ಅದುಮಿ ಅದುಮಿ ನುಡಿಸಲು ಯತ್ನಿಸುತ್ತಿದ್ದರು. ಆದರೂ ಎಂದಿಗಿಂತ ಇಂದು ನಾದದ ಮೊರೆತ ಅಧಿಕವಾಗಿತ್ತು.

ಕೊನೆಗೆ ಕೃಷ್ಣಪ್ಪನವರ ದೃಷ್ಟಿ ಪಿಟೀಲಿಗೆ ಕಟ್ಟಿದ್ದ ಹೆಚ್ಚುವರಿ ತಂತಿಗಳ ಮೇಲೆ ಬಿದ್ದಿತು.’ಏನಿದು? ಏಳುತಂತಿಗಳನ್ನು ಕಟ್ಟಿರುವ ಹಾಗಿದೆ! ಎಲ್ಲಿ ನೋಡೋಣ’ ಎಂದರು. ಕೃಷ್ಣಪ್ಪ ಹಾಡಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು, ಬೆವರು ಹನಿ ಸಾಲುಗಟ್ಟಿತ್ತು ಚೌಡಯ್ಯವರ ಹಣೆಯ ಮೇಲೆ. ಏಟು ತಿನ್ನಲು ಸಿದ್ಧರಾಗುತ್ತಿದ್ದಾರೋ ಏನೋ ಎನ್ನಿಸುತ್ತಿತ್ತು. ಅವರು ಟರ್ಕಿ ಟವಲಿನಿಂದ ಕೆನ್ನೆಗಳನ್ನು ಒರೆಸಿಕೊಳ್ಳುತ್ತಿದ್ದಾಗ! ಮುಂದೆ ಏನೋ ಎಂತೋ ಎಂದು ಸಭಾಸದರೂ ಬೆದರಿದ್ದರು.

’ಭಲೆ! ಇದೆಲ್ಲ ಪ್ರಯೋಗ ಯಾವಾಗಿನಿಂದ? ನನಗೇ ಗೊತ್ತಿಲ್ಲವಲ್ಲ? ಎಲ್ಲಿ ಸ್ವಲ್ಪ ನುಡಿಸು’ ಎಂದರು ಕೃಷ್ಣಪ್ಪ.

ಚದುರಿ ಹೋಗಿದ್ದ ಧೈರ್ಯವನ್ನೆಲ್ಲ ಒಂದು ಗೂಡಿಸಿಕೊಂಡು ಚೌಡಯ್ಯ ನುಡಿಸಲಾರಂಭಿಸಿದರು. ಪದೇ ಪದೇ ಕಮಾನನ್ನು ಬದಲಾಯಿಸಿದಂತೆ, ಕಮಾನನ್ನು ನಿಧಾನವಾಗಿ, ದೀರ್ಘವಾಗಿ ಜೋಡಿ ತಂತಿಗಳ ಮೇಲೆ ಹರಿಸಿದಾಗ ತುಂಬು ಹೊಳೆಯಂತೆ ಪ್ರವಹಿಸಿದ ನಾದಲಹರಿಯನ್ನು ಕೇಳಿ ಮುಗ್ಧರಾದರು  ಕೃಷ್ಣಪ್ಪ. ’ಭಲೇ ಚೌಡಯ್ಯ! ಇನ್ನು ಮೇಲೆ ಕಛೇರಿಗಳಲ್ಲಿ ಈ ಏಳು ತಂತಿ ಪಿಟೀಲನ್ನೇ ನುಡಿಸು’ ಎಂದು ಚೌಡಯ್ಯನವರ ಬೆನ್ನು ತಟ್ಟಿದ್ದರು.

ಸ್ವರ್ಗಸುಖಾನುಭವವಾಯಿತು. ಚೌಡಯ್ಯನವರಿಗೆ. ಅದೊಂದು ಅಮೃತ ಘಳಿಗೆ ಅವರ ಜೀವಮಾನದಲ್ಲಿ.

ಸಂಗೀತ ಪ್ರಪಂಚದ ಭಾಗ್ಯ

ಸಂಪ್ರದಾಯ ಶರಣರು ಏಳು ತಂತಿ ಪಿಟೀಲಿನ ಬಗೆಗೆ ವಿರೋಧದ ಬಿರುಗಾಳಿಯನ್ನೇ ಎಬ್ಬಿಸಿದರು. ೧೯೫೨ರಲ್ಲಿ ಮದರಾಸಿನಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ ಈ ವಾದ್ಯದ ಬಗೆಗೆ ಬಿರುಸಿನ ವಾದ ವಿವಾದಗಳು ನಡೆದವು. ಈ ವಾದ್ಯ ಅಶಾಸ್ತ್ರೀಯ ಎಂದು ಕೆಲವು ವಿದ್ವಾಂಸರು ಗುಡುಗಾಡಿದರು. ಬೆ‌ಟ್ಟದಂತೆ ನಿಂತು ಆ ಎಲ್ಲ ಆಕ್ಷೇಪಣೆಗಳನ್ನೂ ಸದ್ದಿಲ್ಲದಂತೆ ಅಡಗಿಸಿದರು ಚೌಡಯ್ಯ. ಅಂದಿನಿಂದ ಒಂದು ಕ್ರಾಂತಿಯೇ ಪ್ರಾರಂಭವಾಯಿತು ದಾಕ್ಷಿಣಾತ್ಯ ಸಂಗೀತ ಪ್ರಪಂಚದಲ್ಲಿ.

೧೯೧೧ರಲ್ಲಿ ಪ್ರಾರಂಭವಾದ ಮೊದಲ ಕಛೇರಿಯಿಂದ ತಮ್ಮ ಕೊನೆಯ ಉಸಿರಿನವರೆಗೆ ಸುಮಾರು ಐವತ್ತು ಐವತ್ತೈದು ವರ್ಷಗಳ ಕಾಲ ನೂರಾರು ಕಚೇರಿಗಳನ್ನು ಮಾಡಿ ಸಂಗೀತದ ಕಡಲನ್ನೇ ಹರಿಯಿಸಿದರು ಚೌಡಯ್ಯ. ಅವರು ನುಡಿಸಿದ ತನಿ ಕಛೇರಿಗಳನ್ನೂ ಪಕ್ಕ ವಾದ್ಯ ಕಛೇರಿಗಳನ್ನೂ ಪಟ್ಟಿ ಮಾಡುತ್ತ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತಾ ಹೊಗುತ್ತದೆ ಅಷ್ಟೇ! ಒಂದೇ ದಿನದಲ್ಲಿ ಎರಡು ಮೂರು ಕಛೇರಿಗಳನ್ನು ಮಾಡಿದ ಸಂದರ್ಭಗಳೆಷ್ಟೋ! ಬೆಳಗ್ಗೆ ಒಂದು ಊರು, ಮಧ್ಯಾಹ್ನ ಇನ್ನೊಂದು ಊರು, ರಾತ್ರಿ ಮತ್ತೊಂದು ಊರು, ಹೀಗೆ ಸರ್ವಾಂತರ್ಯಾಮಿಯಾಗಿ ಓಡಾಡಿ ಕಛೇರಿ ಮಾಡುತ್ತಿದ್ದರು. ಪಾದರಸದಂತೆ ಪುಟಿಯುತ್ತ ಹತ್ತಾರು ಸಹಸ್ರ ಜನರಿಗೆ ರಸದೌತಣ ನೀಡಿದರು.

ಬಿಡಾರಂ ಕೃಷ್ಣಪ್ಪ, ವಾಸುದೇವಾಚಾರ್ಯ, ಅರಿಯಾಕುಡಿ ರಾಮಾನುಜಯ್ಯಂಗಾರ್ಯರು, ಪಲ್ಲಡು ಸಂಜೀವರಾವ್, ಟೈಗರ್ ವರದಾಚಾರ್ಯರು, ಮುಸುರಿ ಸುಬ್ರಹ್ಮಣ್ಯಯ್ಯರ್, ಅಲತ್ತೂರು ಸಹೋದರರು, ಮಹಾಲಿಂಗಂ, ಜಿ.ಎನ್. ಬಾಲಸುಬ್ರಹ್ಮಣ್ಯಂ, ಶೆಮ್ಮಂಗುಡಿ ಶ್ರೀನಿವಾಸಯ್ಯರ್, ಪಾಲ್ಘಾಟ್ ರಾಮಭಾಗವತರು – ಹೀಗೆ ಘಟಾನುಘಟಿಗಳು ಎನಿಸಿಕೊಂಡಿದ್ದ ವಿದ್ವಾಂಸರನ್ನೆಲ್ಲ ಚೌಡಯ್ಯನವರು ಕೆಣಕಿ ಸೈ ಎನಿಸಿಕೊಂಡಿದ್ದರು. ಮೈಸೂರಿನಲ್ಲಿ ಒಬ್ಬ ಚೌಡಯ್ಯನವರು ಇಲ್ಲದಿದ್ದಲ್ಲಿ ದಕ್ಷಿಣ ದೇಶದ ಈ ಪ್ರಖ್ಯಾತ ವಿದ್ವಾಂಸರೊಡನೆ ಸಮಾನಸ್ಕಂದವಾಗಿ ನಿಂತು ಎದುರಿಸುವ ಪಿಟೀಲು ವಾದಕರು ಬೇರೆ ಯಾರಾದರೂ ದೊರಕುತ್ತಿದ್ದರೆ ಎಂಬ ಪ್ರಶ್ನೆಗೆ  ಉತ್ತರ ಹೇಳುವುದು ಕಷ್ಟ!

ಬಿರುದು ಬಾವಲಿಗಳು ಚೌಡಯ್ಯನವರನ್ನು ಹುಡುಕಿಕೊಂಡು ಬಂದವು. ೧೯೩೯ರಲ್ಲಿ ಮೈಸೂರು ಸಂಸ್ಥಾನದ ವಿದ್ವಾಂಸರಾದರು. ೧೯೪೭ರಲ್ಲಿ ಮೈಸೂರು ಮಹಾರಾಜರು ’ಸಂಗೀತ ರತ್ನ’ ಎಂಬ ಬಿರುದನ್ನು ಕೊಟ್ಟು ಗೌರವಿಸಿದರು. ೧೯೫೬ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ. ‘೧೯೫೭ರಲ್ಲಿ ಮದರಾಸು ಮ್ಯೂಸಿಕ್ ಅಕಾಡೆಮಿಯ ಅಧ್ಯಕ್ಷ ಪಟ್ಟ. ’ಸಂಗೀತ ಕಳಾನಿಧಿ’ ಪ್ರಶಸ್ತಿ. ೧೯೫೯ರಲ್ಲಿ ಮೈಸೂರು ಸಂಗೀತ ಸಮ್ಮೇಳನದ ಅಧ್ಯಕ್ಷತೆ, ’ಗಾನಕಲಾಸಿಂಧು ಪ್ರಶಸ್ತಿ’. ೧೯೬೦ರಲ್ಲಿ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಅಭಿನವತೀರ್ಥರಿಂದ ’ಸಂಗೀತ ರತ್ನಾಕರ’ ಎಂಬ ಪ್ರಶಸ್ತಿಯ ಅನುಗ್ರಹ. ಹೀಗೆ ಐವತ್ತು ವರ್ಷಗಳಿಗೂ ಮೀರಿ ಸಂಗೀತ ಸಾಮ್ರಾಟರಾಗಿ ಮೆರೆದರು ಚೌಡಯ್ಯ.

ನಾದೋಪಾಸನೆ

ಚೌಡಯ್ಯನವರಿಗೆ ಸಂಸಾರದಲ್ಲಿನ ಸೌಖ್ಯ ಅಷ್ಟಕಷ್ಟೆ. ಮದುವೆಯಾದ ವರ್ಷದೊಳಗಾಗಿ ರಾಮಮ್ಮ ಕಾಲವಾದರು. ಪ್ರಪಂಚವೇ ಬೇಡವಾಯಿತು ಚೌಡಯ್ಯನವರಿಗೆ. ಬಂಧುಗಳ, ಸ್ನೇಹಿತರ ಬಲವಂತಕ್ಕೊಳಗಾಗಿ ಎರಡನೆಯ ಸಂಬಂಧಕ್ಕೆ ಒಪ್ಪಿ ನಂಜಮ್ಮ ಎಂಬುವರನ್ನು ಮದುವೆಯಾದರು. ಮನೆಯಲ್ಲಿ ಕುಳಿತು ತಿನ್ನುವ ಬಂಧುಗಳಿಗೆ ಲೆಕ್ಕವೇ ಇರಲಿಲ್ಲ. ಎಷ್ಟು  ಹಣ ಸಂಪಾದಿಸಿದರೂ ಸಂಸಾರವನ್ನು ತೂಗಿಸುವುದೇ ಕಷ್ಟವಾಗಿತ್ತು.  ಹಿರಿಯರ ಆಸ್ತಿಪಾಸ್ತಿಗಳು ೯ ಭಾಗವಾದಾಗ ಚೌಡಯ್ಯನವರ ಪಾಲಿಗೆ ಬಂದದ್ದು ಹೊರಲಾರದ ಸಾಲದ ಹೊರೆ!  ಇದರಿಂದಾಗಿ ಎಷ್ಟೋ ವೇಳೆ ಚೌಡಯ್ಯನವರಿಗೆ ಜೀವನವೇ ಭಾರವಾಗಿ ತೋರುತ್ತಿತ್ತು. ಪಿಟೀಲು ಹಿಡಿದು ಕುಳಿತಾಗ ಮಾತ್ರ ಈ ಕಷ್ಟಕಾರ್ಪಣ್ಯಗಳೆಲ್ಲ ಮರೆತು ಹೋಗುತ್ತಿದ್ದವು! ಎಂತಲೇ ಅವರು ಹಗಲು ರಾತ್ರಿ ಎನ್ನದೆ ನಾದೋಪಾಸನೆಯಲ್ಲಿ ಮಗ್ನರಾಗಿರುತ್ತಿದ್ದರು. ಹೃದಯರೋಗದಿಂದ ನರಳುತ್ತಿದ್ದು ಸಾಯುವುದು ನಾಳೆ ಎನ್ನುವಾಗಲೂ ಚೌಡಯ್ಯನವರಿಗೆ ಪಿಟೀಲಿನ ಚಿಂತೆ: ’ನಾಳೆ ಒಂದು ಕಛೇರಿಯಿದೆ. ನುಡಿಸಲು ಅನುಮತಿ ಕೊಡುತ್ತೀರಾ ಡಾಕ್ಟರೇ?’ ಎಂದು ಅಂಗಲಾಚಿದರು! ಆ ನಾಳೆ ಬರಲೇ ಇಲ್ಲ! ೧೯೬೭ರ ಜನವರಿ ೧೯ರಂದು ಚೌಡಯ್ಯ ನಮನ್ನಗಲಿದರು.

ಪಿಟೀಲಿನ ಸುನಾದ ಚೌಡಯ್ಯನವರ  ಜೀವದುಸಿರಾಗಿದ್ದಿತು.

ಒಮ್ಮೆ ಕೊಯಮತ್ತೂರಿನಲ್ಲಿ ಕಛೇರಿ. ಅಂದು ವಾದ್ಯ ಏನೋ ತೊಂದರೆ ಕೊಡುತ್ತಿತ್ತು. ಚೌಡಯ್ಯನವರಿಗೆ ಅವರು ನುಡಿಸುವಿಕೆಯಲ್ಲಿ ಅವರಿಗೇ ಸಮಾಧಾನವಿರಲಿಲ್ಲ.

ಕಛೇರಿ ಮುಗಿಯಿತು. ತಾವು ಇಳಿದುಕೊಂಡಿದ್ದ ಡಾಕ್ಟರ ಶ್ರೀನಿವಾಸರಾಯರ ಮನೆಗೆ ಹಿಂತಿರುಗಿದರು. ರಾಯರು ಚೌಡಯ್ಯನವರನ್ನು ಊಟಕ್ಕೆ ಎಬ್ಬಿಸಿದರು. ’ನನಗೆ ಹಸಿವೆ ಇಲ್ಲ. ನೀವೆಲ್ಲ ಊಟ ಮಾಡಿಬಿಡಿ’ ಎಂದರು ಚೌಡಯ್ಯ. ಎಲ್ಲರೂ ಊಟ ಮುಗಿಸಿ ಮಲಗಿದರು.

ಚೌಡಯ್ಯನವರ ಕೊಠಡಿಯಲ್ಲಿ ಮಾತ್ರ ದೀಪ ಉರಿಯುತ್ತಲೇ ಇತ್ತು.ಏನೋ ಕರಪರ ಶಬ್ದ ರಾತ್ರಿಯೆಲ್ಲ! ಶ್ರೀನಿವಾಸರಾಯರಿಗೆ ಏನೊಂದೂ ಅರ್ಥವಾಗಲಿಲ್ಲ. ಮೆಲ್ಲಗೆ ಎದ್ದು ಕಿಟಕಿಯಿಂದ ಇಣಿಕಿ ನೋಡಿದರು. ಚೌಡಯ್ಯ ಪಿಟೀಲಿನ ದುರಸ್ತಿಯಲ್ಲಿ ಮಗ್ನರಾಗಿದ್ದರು.  ಅರದಿಂದ ’ಬ್ರಿಜ್ಜ’ನ್ನು ಉಜ್ಜಿದರು. ಹಳೆಯ ತಂತಿಗಳನ್ನು ಬಿಚ್ಚಿ ಹೊಸ ತಂತಿಗಳನ್ನು ಕಟ್ಟಿದರು. ಒಂದು ಸೆಟ್ ತಂತಿ ಸರಿ ಹೋಗಲಿಲ್ಲ. ಮತ್ತೆ ಬಿಚ್ಚಿ ಬೇರೆ ಸೆಟ್ ತಂತಿಗಳನ್ನು ಕಟ್ಟಿದರು. ಫಿಂಗರ್ ಬೋರ್ಡನ್ನು ಉಜ್ಜಿದರು. ಕಮಾನನ್ನು ಸರಿಪಡಿಸಿದರು. ಇಷ್ಟು ಹೊತ್ತಿಗೆ ರಾತ್ರಿ ಒಂದು ಗಂಟೆಯಾಯಿತು.  ವಾದ್ಯದ ಮೇಲೆ ಒಂದು ಬಾರಿ ಕಮಾನನ್ನು ಹರಿಯಿಸಿದರು. ಹೊರ ಹೊಮ್ಮಿದ ಶುದ್ಧವಾದ ತುಂಬುನಾದ ಕಿವಿಗೆ ಬಿದ್ದ ಮೇಲೆ ಪ್ರಸನ್ನವದನರಾದರು ಚೌಡಯ್ಯ.

ಚೌಡಯ್ಯ ಪಿಟೀಲಿನ ದುರಸ್ತಿಯಲ್ಲಿ ಮಗ್ನರಾಗಿದ್ದರು.

ಹೊರಗಡೆಯೇ ನಿಂತು ಆನಂದಿಸಿದರು ರಾಯರು. ಇಷ್ಟು ಹೊತ್ತಿಗೆ ಬೆಳಗಿನ ಝಾವ ಮೂರು ಗಂಟೆಯಾಯಿತು.

’ಏನು ಚೌಡಯ್ಯನವರೇ, ಅರ್ಧ ರಾತ್ರಿಯಲ್ಲಿ ಹೀಗೆ ಗೌರಿ ಕಲ್ಯಾಣ?’ ಎಂದರು ಶ್ರೀನಿವಾಸರಾಯರು ಕೊಠಡಿಯನ್ನು ಪ್ರವೇಶಿಸುತ್ತ.

”ಏನೋ ಡಾಕ್ಟರೇ, ಈ ಹೊತ್ತು ವಾದ್ಯ ಕೈಕೊಟ್ಟು ಬಿಟ್ಟಿತು. ಕಛೇರಿ ಕಳೆಗಟ್ಟಲಿಲ್ಲ. ಈಗ ನೋಡಿ ವಾದ್ಯ ಸರಿಹೋಯಿತು. ವಾದ್ಯಕ್ಕೂ ಮನುಷ್ಯನ ಹಾಗೆ ಒಂದೊಂದು ದಿನ ಒಂದೊಂದು ಮೂಡ್ ಬರುತ್ತದೋ ಏನೋ!’

”ಅದು ಸರಿ ಹೊಟ್ಟೆ ಹಸಿವಾಗುವುದಿಲ್ಲವೇ? ಕಛೇರಿಯಿಂದ ಬಂದವರೇ ಊಟ, ಫಲಾಹಾರ ಏನೂ ಇಲ್ಲದೆ ಹೀಗೆ ಪಿಟೀಲು ರಿಪೇರಿ ಮಾಡುತ್ತ ಕುಳಿತುಬಿಟ್ಟರಲ್ಲ!’

”ವಾದ್ಯ ಸರಿಯಾಗಿಲ್ಲದೆ ನಾದ ಸೌಖ್ಯಕ್ಕೆ ಅಡಚಣೆಯಾದರೆ ನನ್ನ ಮನಸ್ಸಿಗೆ ಆಗುವ ಬೇಸರ ಅಷ್ಟಿಷ್ಟಲ್ಲ. ಊಟವೂ ಬೇಡ, ನಿದ್ರೆಯೂ ಬೇಡ ಎನ್ನಿಸುತ್ತದೆ. ಸುನಾದ ಕಿವಿಗೆ ಬಿದ್ದ ಮೇಲೆ ಎಷ್ಟೋ ಸಮಾಧಾನವಾಯಿತು. ಮನಸ್ಸಿಗೆ. ಈಗ ಹೊಟ್ಟೆ ಚುರುಗುಟ್ಟುತ್ತಿದೆ. ಒಂದು ಲೋಟ ಹಾಲಿದ್ದರೆ ಕೊಡಿ. ಕುಡಿದು ಮಲಗಿಕೊಳ್ಳುತ್ತೇನೆ ’ಎಂದರು ಚೌಡಯ್ಯ.

ತಿರುಚಿನಾಪಳ್ಳಿಗೆ ಹೋದಾಗಲೆಲ್ಲ ರತ್ನಾಚಲಂ ಅಯ್ಯರ್ ಎಂಬ ಕಲಾಭಿಮಾನಿಗಳ ಮನೆಯಲ್ಲಿ ತಂಗುತ್ತಿದ್ದರು ಚೌಡಯ್ಯ. ಅಯ್ಯರ್ ಅವರಿಗೆ ಸಂಗೀತದಲ್ಲಿ ಒಳ್ಳೆಯ ತಿಳುವಳಿಕೆ.

ಒಂದು ಸಂಜೆ ತಿಂಡಿ ತೀರ್ಥಗಳನ್ನು ಮುಗಿಸಿ ಲೋಕಾಭಿರಾಮವಾಗಿ ಮಾತುಕತೆಯಾಡುತ್ತಿದ್ದಾಗ ಆ ಮಿತ್ರರು”ನಿಮ್ಮ ಕೈಯಲ್ಲಿ ಸ್ವಲ್ಪ ಜನರಂಜಿನಿ ರಾಗವನ್ನು ಕೇಳಬೇಕಲ್ಲ ಚೌಡಯ್ಯ’ ಎಂದರು.

’ಅಗತ್ಯವಾಗಿ ಆಗಬಹುದು” ಎಂದು ಚೌಡಯ್ಯ ಪಿಟೀಲನ್ನೆತ್ತಿಕೊಂಡರು. ಸ್ವಲ್ಪ ಹೊತ್ತು ನುಡಿಸಿದರು. ಆ ರಾಗದಲ್ಲಿ ಅವರಿಗೆ ಆ ಸಮಯದಲ್ಲಿ ಮನೋಧರ್ಮವೇ ಒದಗಿ ಬರಲಿಲ್ಲ. ಪೂರ್ಣಚಂದ್ರಿಕೆ ರಾಗಕ್ಕೆ ಜಾರುತ್ತಿತ್ತು ಆಲಾಪನೆ.

ಇದನ್ನು ಗ್ರಹಿಸಿದ ಆ ಮಿತ್ರರು ’ಏನೋ ಇಂದು ನಿಮ್ಮ ಮನೋಧರ್ಮ ಸರಿಯಿಲ್ಲವೆಂದು ತೋರುತ್ತಿದೆ. ನಿಮ್ಮ ಆಲಾಪನೆ ಜನರಂಜಿನಿಯಂತೆ ಕೇಳಿಸುತ್ತೇ ಇಲ್ಲ. ಎಲ್ಲ ಪೂರ್ಣಚಂದ್ರಿಕೆಯನ್ನೇ ಹೋಲುತ್ತಿದೆ’ಎಂದರು.

’ಛೇ ಛೇ ಎಲ್ಲಾದರೂ ಉಂಟೆ? ಇನ್ನು ಹೇಗಿರುತ್ತೆ ಜನರಂಜಿನಿ” ಎಂದು ಚೌಡಯ್ಯ ಬಾಯಿ ಬಡಿದುಬಿಟ್ಟರು.

ಆದರೆ ಅವರ ಮನಸ್ಸಿಗೆ ಒಂದು ವಿಧವಾದ ಅತೃಪ್ತಿ.

ಅಂದು ರಾತ್ರಿ ಊಟವಾದ ಮೇಲೆ ಕುಳಿತು ಜನರಂಜಿನಿ ರಾಗದಲ್ಲಿ ತಮಗೆ ಪಾಠವಾಗಿದ್ದ ಕೀರ್ತನೆಗಳನ್ನೆಲ್ಲ ಹತ್ತಾರು ಸಲ ನುಡಿಸಿದರು. ಆ ರಾಗದ ಸಂಚಾರಗಳನ್ನೆಲ್ಲ ಮೆಲುಕು ಹಾಕಿದರು.

ಮಲಗಿ ಗೊರಕೆ ಹೊಡೆಯುತ್ತಿದ್ದ ರಸಿಕ ಮಿತ್ರರನ್ನು ಎಬ್ಬಿಸಿದರು ಚೌಡಯ್ಯ’ಈಗ ಕೇಳಿ ಜನರಂಜಿನಿಯನ್ನು’ ಎಂದು ನುಡಿಸಲು ಪ್ರಾರಂಭಿಸಿದರು.

’ಇದಲ್ಲವೆ ಜನರಂಜಿನಿ ಎಂದರೆ? ಭಲೆ ಚೌಡಯ್ಯ! ಎಂದು ಹೇಳಿ ಒಳಗಡೆಯಿಂದ ಬೆಲೆ ಬಾಳುವ ಅಂಗವಸ್ತ್ರವೊಂದನ್ನು ತಂದು ಹೊದಿಸಿದರು’ ಆ ಶ್ರೀಮಂತ ಮಿತ್ರರು.

ಇಂಥ ನಾದ ಋಷಿ ಚೌಡಯ್ಯ ಇಂದು ನಮ್ಮ ಮಧ್ಯೆ ಇಲ್ಲ. ನಿಜ. ಆದರೆ ಶ್ರೀಮಕುಟ ಎಂಬ ಅಂಕಿತದಲ್ಲಿ ಅವರು ರಚಿಸಿರುವ ಕೃತಿಗಳನ್ನು ಕೇಳಿದಾಗ, ಅವರ ಧ್ವನಿ ಮುದ್ರಿಕೆಗಳನ್ನು  ಕೇಳಿದಾಗ, ಅವರ ಅಪಾರ ಶಿಷ್ಯ ಸಂಪತ್ತನ್ನು ನೋಡಿದಾಗ, ಅವರ ನೆನಪು ಮತ್ತೆ ಮತ್ತೆ ನಮ್ಮ ಮನಸ್ಸಿನಲ್ಲಿ ಮರುಕಳಿಸುತ್ತದೆ.

ಸ್ವಾರಸ್ಯದ ವ್ಯಕ್ತಿತ್ವ

ಏಳು ತಂತಿಯ ಪಿಟೀಲನ್ನು ಹಿಡಿದು, ಕಮಾನನ್ನೇರಿಸಿ ಚೌಡಯ್ಯ ಕಛೇರಿಗೆ ಕುಳಿತುಕೊಳ್ಳುತ್ತಿದ್ದ ಗತ್ತೆ ಗತ್ತು. ಸಾಮುಮಾಡಿ, ದಂಡ ಹೊಡೆದ ಗಟ್ಟಿ ದೇಹ. ಸಾಮಾನ್ಯ ಎತ್ತರ, ಪೊದೆಯ ಹುಬ್ಬು, ಬೊಗಸೆ ಕಣ್ಣುಗಳು. ಕಿವಿಗಳಲ್ಲಿ ಥಳಥಳಿಸುವ ವಜ್ರದ ಹತ್ತು ಗಡಕು. ವಿಶಾಲವಾದ ಹಣೆಯಲ್ಲಿ ಅಚ್ಚುಕಟ್ಟಾದ ವಿಭೂತಿ ಪಟ್ಟೆ, ಹುಬ್ಬಗಳು ನಡುವೆ ದುಂಡು ಕುಂಕುಮ. ಸಹಸ್ರ ಜನರ ಮಧ್ಯೆ ಎದ್ದು ಕಾಣುವ ಭವ್ಯ ಆಕೃತಿ.

ಮನುಷ್ಯನಿಗೆ ಸಹಜವಾದ  ಕೆಲವು ವಿಲಕ್ಷಣಗಳಿಗೆ ಚೌಡಯ್ಯ ಹೊರತಾಗಿರಲಿಲ್ಲ. ಇತರರ ಚಾಡಿ ಮಾತುಗಳನ್ನು ನಂಬಿ ಕಹಿಯಾಗುವುದು, ದುಡುಕು ಬಾಯಿಯ, ಒರಟು ನಾಲಗೆ, ಕೆಂಡದಂಥ ಕಣ್ಣುಗಳು ಕೂಗಾಟ, ಹಾರಾಟ, ಇವೆಲ್ಲ ಆ ಘನವಿದ್ವಾಂಸರ ಹೊರಲಕ್ಷಣಗಳು ಮಾತ್ರ. ಆಂತರ್ಯದಲ್ಲಿ ಅವರದು ಮೇಣದಂತಹ ಹೃದಯ, ಉದಾರ ಮನಸ್ಸು, ಕೈಯಲ್ಲಾದ ಉಪಕಾರ ಮಾಡುವ ಬುದ್ಧಿ.

ಕಲಾವಿದರಿಗೆ ಉಚಿತ ಗೌರವವನ್ನು ತೋರಿಸಲಿಲ್ಲವೆಂದು ರಾಜ್ಯದ ಮುಖ್ಯಮಂತ್ರಿಯವರ ಮೇಲೆಯೇ ಗುಡುಗಾಡಿದ್ದ ಭೂಪ ಇವರು.

ರಾಜ್ಯಕ್ಕೆ ಒಂದು ಬಾರಿ ಭೀಕರ ಕ್ಷಾಮ ಒದಗಿ ಬಂದಾಗ ಸಹಸ್ರಾರು ಜನ ಹೊಟ್ಟೆಗಿಲ್ಲದೆ ಹಾಹಾಕಾರ ಮಾಡುತ್ತಿದ್ದುದನ್ನು ಕಂಡು ಕಣ್ಣೀರು ಸುರಿಸಿದರು ಚೌಡಯ್ಯ. ಹಲವಾರು ಕಛೇರಿಗಳನ್ನು ಮಾಡಿ ಬಂದ ಹಣವನ್ನೆಲ್ಲ ಕ್ಷಾಮಪರಿಹಾರ ನಿಧಿಗೆ ಅರ್ಪಿಸಿ ಬಡಬಗ್ಗರ ಕೃತಜ್ಞತೆಗೆ ಪಾತ್ರರಾದರು.

ಕಿರಿಯ ವಿದ್ವಾಂಸರ ಬೆನ್ನು ತಟ್ಟಿ ಅವರನ್ನು ಮುಂದೆ ತಂದ ಸಂದರ್ಭಗಳೆಷ್ಟೋ!

ಅರಮನೆಯಲ್ಲಿ ಮಹಾರಾಜರೆದುರು ನುಡಿಸಿ ಮರ್ಯಾದೆ ಸಂಪಾದಿಸಬೇಕೆಂದು ಬಂದಿದ್ದ ಪರಸ್ಥಳ ಘಟವಾದ್ಯ ವಿದ್ವಾಂಸರೊಬ್ಬರು ಬಂದ ದಾರಿಗೆ ಸುಂಕವಿಲ್ಲವೆಂದು ಹಿಂತಿರುಗಿ ಹೋಗಬೇಕಾಗಿ ಬಂದಿತು.

”ಮಹಾರಾಜರೆದುರು ಮೈಮೇಲೆ ಬಟ್ಟೆಯಿಲ್ಲದೆ ಕುಳಿತು ಘಟ ನುಡಿಸುವುದೆಂದರೇನು? ಅರಮನೆಯ ಸಂಪ್ರದಾಯಕ್ಕೆ ಅದು ವಿರುದ್ಧ ಎಂದು ವಾದಿಸಿ ಅರಮನೆಯ ಅಧಿಕಾರಿಗಳು ಆ ವಿದ್ವಾಂಸರ ಉತ್ಸಾಹಕ್ಕೆ ತಣ್ಣೀರೆರಚಿದ್ದರು. ಅರಮನೆಯ ಸಂಪ್ರದಾಯಕ್ಕೆ ನಾವು ಹೇಗೆ ಮರ್ಯಾದೆ ಕೊಡಬೇಕೋ ಹಾಗೆಯೇ ಸಂಗೀತ ಸಂಪ್ರದಾಯಕ್ಕೆ ನೀವೂ ಗೌರವ ಕೊಡಬೇಕು’ ಎಂದು  ಪ್ರತಿಪಾದಿಸಿದರು ಚೌಡಯ್ಯ. ದೊರೆಗಳ ತನಕ ದೂರು ಹೋಯಿತು. ಮಹರಾಜರೆದುರು ಆ ವಿದ್ವಾಂಸರ ಕಛೇರಿ ನಡೆದೇ ನಡೆಯಿತು. ಕಲೆಗೆ ವಿದ್ವಾಂಸರಿಗೆ ಆಗುವ ಅಪಮಾನ, ತಿರಸ್ಕಾರಗಳನ್ನು ಎಂದೂ ಸಹಿಸಿದವರಲ್ಲ ಚೌಡಯ್ಯ.

ತಮ್ಮ ವಿಲಕ್ಷಣ ಸ್ವಭಾವದಿಂದ ಒಂದೊಂದು ವೇಳೆ ಚೌಡಯ್ಯ ನಗೆಪಾಟಲಾಗುತ್ತಿದ್ದರು. ಇಲ್ಲವೇ ವಿನಾ ಕಾರಣ ಪೇಚಾಟಕ್ಕೀಡಾಗುತ್ತಿದ್ದರು.

ದಢೂತಿ ಶಿಷ್ಯನೊಬ್ಬನಿಗೆ ಮೈ ಕರಗಿಸುವ ಔಷಧ ಕೊಡುತ್ತೇನೆಂದು ಹೊರಟು ಅವನ ಪ್ರಾಣಕ್ಕೇ ಸಂಚಕಾರ ತಂದಿಟ್ಟಿದ್ದರು  ಒಮ್ಮೆ!

”ಮರದ ಮೇಲೆ ಕುಳಿತು ಸಾವೇರಿ ರಾಗಾಲಾಪನೆ ಮಾಡಿ ತಮ್ಮನ್ನು ಸುತ್ತುವರಿದಿದ್ದ ಮದ್ದಾನೆಗಳನ್ನು ಓಡಿಸಿಬಿಟ್ಟೆ’ ಎಂದು ಜಂಬ ಕೊಚ್ಚಕೊಂಡ ಸಂದರ್ಭ ಸ್ವಾರಸ್ಯವಾಗಿದೆ.

ಶಬರಿಮಲೈ ಬೆಟ್ಟ ಇಳಿದು ಬರು‌ತ್ತಿದ್ದರು ಚೌಡಯ್ಯ. ಕತ್ತಲಾಗುತ್ತ ಬಂದಿತ್ತು. ಅಲ್ಲಿಯೇ ಒಂದು ಮಂಟಪದಲ್ಲಿ ರಾತ್ರಿ ಕಳೆದು ಮರುದಿನ ಬೆಳಗ್ಗೆ ಪ್ರಯಾಣ ಮುಂದುವರಿಸುವುದೆಂದು ತೀರ್ಮಾನಿಸಿಕೊಂಡರು. ಮಧ್ಯರಾತ್ರಿಯ ಸಮಯದಲ್ಲಿ ಏನೋ ಭಯಂಕರವಾದ ಹಾವಳಿಯ ಶಬ್ದ ಕೇಳಿಸಿತು. ಎದ್ದು ನೋಡುತ್ತಾರೆ. ಒಂದು ಭಾರಿ ಆನೆಯ ಹಿಂಡು  ಇವರ ಕಡೆಗೇ ಬರುತ್ತಿದೆ! ಮುಂದೇನು ಗತಿ?! ತಕ್ಷಣವೇ ಮಂಟಪದ ಮುಂದಿನ ಒಂದು ಭಾರಿ ಮರವನ್ನೇರಿ ಕುಳಿತರು. ಆನೆಗಳೆಲ್ಲ ಆ ಮರವನ್ನೇ ಸುತ್ತುವರಿದು ಘೇರಾಯಿಸಿಕೊಳ್ಳಬೇಕೇ! ಅಲ್ಲಿಗೂ ಹೆದರಲಿಲ್ಲ ಚೌಡಯ್ಯ. ಪೆಟ್ಟಿಗೆಯಿಂದ ಪಿಟೀಲನ್ನು ತೆಗೆದದ್ದೇ ಕೆಲಸ. ಶ್ರುತಿ ಮಾಡಿ ಸಾವೇರಿ ರಾಗಾಲಾಪನೆಯನ್ನು ಪ್ರಾರಂಭಿಸಿದರು. ಸುಮಾರು ಅರ್ಧ ಗಂಟೆಯ ಕಾಲ ಹೀಗೆಯೇ ಸಾಗಿತು. ನಾದ ಸುಧೆಯಿಂದ ತೃಪ್ತಿಗೊಂಡ ಮದಗಜಗಳು ತಮ್ಮ ದಾರಿಯನ್ನು ಹಿಡಿದು ಹೊರಟು ಬಿಟ್ಟವು. ಚೌಡಯ್ಯ ಮರದಿಂದ ಕೆಳಗಿಳಿದು  ನಿರಾತಂಕವಾಗಿ ಉಸಿರಾಡಿದರು.

’ಅಲ್ಲ ಚೌಡಯ್ಯನವರೇ, ನಿಮಗೆ ಮರ ಹತ್ತುವ ಅಭ್ಯಾಸವಿತ್ತೇ? ಒಂದು ವೇಳೆ ಇದ್ದಿದ್ದರೂ ಈ ನಿಮ್ಮ  ಸ್ಥೂಲಕಾಯವನ್ನು ಹೊತ್ತುಕೊಂಡು  ಮರ ಕತ್ತಲು ಸಾಧ್ಯವಾಯಿತೇ? ಪಿಟೀಲನ್ನು ಹೊತ್ತುಕೊಂಡು ಮರ ಹೇಗೆ ಹತ್ತಿದಿರಿ? ಮರದ ಮೇಲೆ ಕುಳಿತು ಶ್ರುತಿಯನ್ನು ಹೇಗೆ ಮಾಡಿಕೊಂಡಿರಿ?”ಎಂದು ಅವರ ಆಪ್ತ ಮಿತ್ರರು ಕೇಳಿದರೆ,’ಭಲೆ ಖದೀಮರು ರೀ ನೀವು!”ಎನ್ನುತ್ತಿದ್ದರು ಮೆಲುನಗೆಯೊಂದಿಗೆ.

ಆದರೆ ಚೌಡಯ್ಯನವರ ಈ ಸ್ವಭಾವ ಅತಿರೇಕಗಳೆಲ್ಲ ಅವರ ಸುನಾದದ ಮೋಡಿಯ ಮುಂದೆ ಮಾಯವಾಗುತ್ತಿದ್ದವು. ಮಗುವಿನ ಮನಸ್ಸಿನಂತಹ ನಿಷ್ಕಪಟ ಮನಸ್ಸು. ಇತರ ಸಂಗೀತಗಾರರ ಹಿರಿಮೆಯನ್ನು ಮೆಚ್ಚುವ ಔದಾರ್ಯ, ಅದ್ವಿತೀಯ ಗುರುಭಕ್ತಿ, ತಾವು ಆರಿಸಿದ ಕಲೆಗೆ ಸರ್ವಾರ್ಪಣ ಮನೋಭಾವ. ಅವರಲ್ಲಿ ಮೆಚ್ಚಬೇಕಾದ ಗುಣಗಳು ಹಲವು. ನಮ್ಮ ಚೌಡಯ್ಯ ಎಂದು ಜನ ಅವರನ್ನು ಪ್ರೀತಿಸಿದರು. ಗೌರವಿಸಿದರು, ವೈಭವದಿಂದ ಮೆರೆದಾಡಿಸಿದರು.