ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಮರೆಯಲಾಗದ ಹೆಸರು ಸಂಗೀತ ರತ್ನ ಟಿ. ಚೌಡಯ್ಯನವರದು. ಪಿಟೀಲು ವಾದನದಲ್ಲಿ ಅಪ್ರತಿಮ ಸಾಧನೆಗೆ ಹೆಸರಾದ ಇವರು ತನಿವಾದಕರಾಗಿಯೂ ಪಕ್ಕವಾದ್ಯಗಾರರಾಗಿಯೂ ಪಡೆದ ಖ್ಯಾತಿ ಅನುಪಮವಾದುದು. ಸುಮಾರು ನಾಲ್ಕು ದಶಕಗಳ ಪರ್ಯಂತ ದಕ್ಷಿಣದ ಎಲ್ಲ ಖ್ಯಾತ ವಿದ್ವಾಂಸರುಗಳಿಗೂ ಪಕ್ಕವಾದ್ಯ ಒದಗಿಸಿ ಜನಮನ್ನಣೆ ಪಡೆದುದರ ಜೊತೆಗೆ ತಾವೇ ನಿರ್ಮಿಸಿ ಜಾರಿಗೆ ತಂದ ಏಳು ತಂತಿ ಪಿಟೀಲಿನಲ್ಲಿ ತನಿ ಕಛೇರಿಗಳನ್ನು ನಡೆಸಿ ಗುರುಗಳ ಪ್ರಶಂಸೆಗೂ ಪಾತ್ರರಾಗಿ ದಾಖಲೆಯನ್ನೇ ನಿರ್ಮಿಸಿದರು. ಅವರ ಶಿಷ್ಯರುಗಳನೇಕರು ಈ ಏಳುತಂತಿ ವಾದ್ಯದಲ್ಲಿ ಪರಿಣತಿ ಹೊಂದಿದರು. ಈಗಲೂ ಅವರಲ್ಲಿ ಕೆಲವರು ಅದನ್ನು ಬಳಸುತ್ತಿದ್ದಾರೆ.

ಹಳೆಯ ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿ ಅಂದಿನ ಆಳರಸರ ವಿಶ್ವಾಸ ಗಳಿಸಿಕೊಂಡಿದ್ದ ಚೌಡಯ್ಯನವರು ಜನಿಸಿದ್ದು ತಿರುಮಕೂಡಲು ನರಸೀಪುರದಲ್ಲಿ ಕಿರಿಯ ವಯಸ್ಸಿನಲ್ಲಿಯೇ ತಮ್ಮ ಪ್ರತಿಭೆಯಿಂದಾಗಿ ಸುವಿಖ್ಯಾತ ಸಂಗೀತ ವಿದ್ವಾಂಸರಾಗಿದ್ದ ಗಾನವಿಶಾರದ ಬಿಡಾರಂ ಕೃಷ್ಣಪ್ಪನವರ ಶಿಷ್ಯರಾಗಿ ಅವರ ಪ್ರೀತಿಗೆ ಪಾತ್ರರಾದರು. ಸ್ವಂತ ಸಾಧನೆಯಿಂದ ಪ್ರಖ್ಯಾತ ವಿದ್ವಾಂಸರುಗಳಿಗೆ ಪಕ್ಕವಾದ್ಯ ಒದಗಿಸಿ ಅದರಿಂದ ಗಳಿಸಿದ ಅನುಭವದಿಂದ ಸಂಗೀತ ಜಗತ್ತಿನಲ್ಲಿ ಅಜರಾಮರವಾದ ಕೀರ್ತಿ, ಸ್ಥಾನ, ಯಾಗಾದಿಗಳನ್ನು ಗಳಿಸಿಕೊಂಡರು. ಕನ್ನಡ ನಾಡಿನಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಖ್ಯಾತನಾಮರಾಗಿ ಅನೇಕಾನೇಕ ಬಿರುದು ಸನ್ಮಾನಗಳನ್ನು ಪಡೆದರು. ಅವುಗಳಲ್ಲಿ ಪ್ರಧಾನವಾದುವು-ಮೈಸೂರು ಮಹಾರಾಜರಿಂದ ‘ಸಂಗೀತ ರತ್ನ’; ಕೇಂದ್ರ ಮತ್ತು ರಾಜ್ಯ ಸಂಗೀತ ನಾಟಕ ಅಕಾಡೆಮಿಗಳ ಪ್ರಸ್ತಿ; ಮದರಾಸಿನ ಮ್ಯೂಸಿಕ್‌  ಅಕಾಡೆಮಿಯಿಂದ ಪಡೆದ ‘ಸಂಗೀತ ಕಲಾನಿಧಿ’.

ವಾಗ್ಗೇಯ ಕಾರರಾಗಿಯೂ ಚೌಡಯ್ಯನವರ ಕೊಡುಗೆ ಗಮನಾರ್ಹ. ಅವರ ರಚನೆಗಳು ರಸಿಕರ ವಿದ್ವಾಂಸರ ಮನ್ನಣೆ ಪಡೆದಿವೆ.

೧೮೯೫ರಲ್ಲಿ ಜನಿಸಿದ್ದ ಚೌಡಯ್ಯನವರು ಹಲವಾರು ದಶಕಗಳು ಸಂಗೀತ ಸಾಮ್ರಾಜ್ಯದಲ್ಲಿ ವಿಹರಿಸಿ ೧೯೬೭ರಲ್ಲಿ ನಾದದಲ್ಲಿಯೇ ಲೀನರಾದರು.