ಸುಗಮ ಸಂಗೀತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪ್ರಕಾರಗಳಲ್ಲಿ ಹಾರ್ಮೋನಿಯಂ ವಹಿಸುವ ಪಾತ್ರ ಅತಿ ಹಿರಿದಾದುದು. ಕರ್ನಾಟಕ ಸಂಗೀತದಲ್ಲಿಯೂ ಪಿಟೀಲು ಜನಪ್ರಿಯವಾಗುವುದಕ್ಕೆ ಮುನ್ನ ಪಕ್ಕ ವಾದ್ಯವಾಗಿ ಬಳಕೆಯಲ್ಲಿದ್ದುದು ಹಾರ್ಮೋನಿಯಂ ವಾದ್ಯವೇ. ಅದ್ದರಿಂದ ಈ ವಾದ್ಯ ತಯಾರಿಕೆಯಲ್ಲಿ ತೊಡಗಿರುವ ಗುಂಡೇರಾ ಅವರು ಅಭಿನಂದನಾರ್ಹರು.

ಗುಂಡೇರಾ ಜನಿಸಿದ್ದು ೧೯೧೫ ರಲ್ಲಿ, ಹದಿಮೂರು ವಯಸ್ಸಿನಲ್ಲಿಯೇ ಕಾಂತಪ್ಪನವರಿಂದ ಹಾರ್ಮೋನಿಯಂ ತಯಾರಿಸುವುದನ್ನು ಕಂಡು ಮೊದಲಲ್ಲಿ ತಮ್ಮ ಗುರುಗಳೊಂದಿಗೇ ಕಾರ್ಯತತ್ಪರರಾಗಿದ್ದರ. ನಂತರ ಉದ್ಯೋಗವನ್ನು ಅವಲಂಬಿಸಿ ಸಿಂಗಪೂರದಲ್ಲಿ ಮೂರು ವರ್ಷಗಳಿದ್ದರು. ಸುಭಾಷ್‌ಚಂದ್ರಬೋಸ್ ಅವರ ಭಾರತೀಯ ದೇಶೀಯ ಸೇನಾಪಡೆ (ನ್ಯಾಷನಲ್ ಆರ್ಮಿ ಆಫ್ ಇಂಡಿಯ)ಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ಸ್ವಾತಂತ್ರ ಹೋರಾಟದಲಲ್ಲೂ ಸೇನಾನಿಯಾಗಿದ್ದ ದೇಶಪ್ರೇಮಿ ಇವರು. ಅನಂತರ ದಾವಣಗೆರೆಯಲ್ಲಿ ನೆಲಸಿ ಸುಮಾರು ಮೂವತ್ತೈದು ವರ್ಷಗಳ ಕಾಲ ಹಾರ್ಮೋನಿಯಂ ತಯಾರಿಕೆಯ ತಮ್ಮ ಮೆಚ್ಚಿನ ಕಾಯಕವನ್ನು ನಂಬಿ ಜೀವನ ನಡೆಸಿದರು.

ಇವರು ತಯಾರಿಸಿದ ವಾದ್ಯಗಳು ಗುಬ್ಬಿ ನಾಟಕ ಕಂಪೆನಿಯೂ ಸೇರಿದಂತೆ ಹಲವಾರು ವೃತ್ತಿ ನಾಟಕ ಕಂಪನಿಗಳಲ್ಲೂ ಧ್ವನಿಗೈದುವು. ಇಂದಿಗೂ ಸುಪ್ರಸಿದ್ಧ ಕಲಾವಿದರನೇಕರ ಕೈಗಳಲ್ಲಿ ಇವರ ವಾದ್ಯಗಳು ನಾದ ಬೀರುತ್ತ ದೃಢವಾಗಿವೆ. ಆಕರ್ಷಕ ವಿನ್ಯಾಸ, ದೀರ್ಘ ಬಾಳಿಕೆ ಯೋಗ್ಯ ಬೆಲೆ ಗುಂಡೇರಾ ಅವರ ವಾದ್ಯಗಳ ಯಶಸ್ಸಿನ ಗುಟ್ಟು.

ಹಾರ್ಮೋನಿಯಂ ಜೊತೆಗೆ ಶ್ರುತಿ ಪೆಟ್ಟಿಗೆ, ಪಿಟೀಲು ಆರ್ಗನ್ ಮುಂತಾದ ವಾದ್ಯಗಳ ತಯಾರಿಕೆಯಲ್ಲೂ ಸಿದ್ಧ ಹಸ್ತರಾದ ಶ್ರೀಯುತರನ್ನು ರಾಜ್ಯ ಸಂಗೀತ ನೃತ್ಯ ಅಕಾಡೆಮಿ ೧೯೯೯-೨೦೦೦ರ ಸಾಲಿನಲ್ಲಿ “ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತು.