ಟಿ ನರಸೀಪುರ ತಾಲೂಕು ಜಿಲ್ಲಾ ಕೇಂದ್ರದ ಆಗ್ನೇಯ ಭಾಗಕ್ಕೆ ೩೨ ಕಿ.ಮೀ.ಗಳಷ್ಟು ದೂರದಲ್ಲಿದ್ದು ಐದು ಹೋಬಳಿ ಕೇಂದ್ರಗಳನ್ನು ಹೊಂದಿದೆ. ದಕ್ಷಿಣ ಭಾಗಕ್ಕೆ ಚಾಮರಾಜನಗರ ಜಿಲ್ಲೆ ಹಾಗೂ ಉತ್ತರ ಭಾಗಕ್ಕೆ ಮಂಡ್ಯ ಜಿಲ್ಲೆಗಳನ್ನು ಗಡಿಯಾಗಿ ಹೊಂದಿರುವ ಈ ತಾಲೂಕು ೫೯೮ ಚ ಕಿ.ಮೀ. ವಿಸ್ತೀರ್ಣ ಹೊಂದಿದೆ. ಕೃಷಿ ಇಲ್ಲಿನ ಜನರ ಮುಖ್ಯ ಉದ್ಯೋಗ. ಭತ್ತ ಮುಖ್ಯ ಆಹಾರ ಬೆಳೆ ಹಾಗೂ ರೇಷ್ಮೆ ಮುಖ್ಯ ವಾಣಿಜ್ಯ ಬೆಳೆ. ಈ ತಾಲೂಕಿನ ಕೆಲವು ನೆಲಗಳಲ್ಲಿ ನವಶಿಲಾಯುಗದ ಪಳೆಯುಳಿಕೆಗಳು ಉತ್ಖನನದಿಂದ ಪತ್ತೆಯಾಗಿವೆ. ಪುರಂದರ ದಾಸರ ಗುರುಗಳಾದ ವ್ಯಾಸರಾಯರು, ಅದ್ವಿತೀಯ ಪಿಟೀಲು ವಾದಕರಾದ ಟಿ ಚೌಡಯ್ಯನವರು ಈ ತಾಲೂಕಿನಲ್ಲಿ ಜನಿಸಿದವರು. ಗಂಗರ ರಾಜಧಾನಿ ತಲಕಾಡು ಈ ತಾಲೂಕಿನಲ್ಲಿದೆ.

ಬನ್ನೂರು

ದೂರ ಎಷ್ಟು?
ತಾಲ್ಲೂಕಿನಿಂದ: ೧೬ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೨೮ ಕಿ.ಮೀ.

ಈ ಸ್ಥಳವು ಬನ್ನಿಯೂರು, ವನ್ನಿಯೂರು, ವಹಿನಿಪುರ, ವರ್ಣಿಯೂರು ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿತ್ತು. ಗಂಗರಸರ ಕಾಲದಲ್ಲಿ ೮ನೇ ಶತಮಾನದಲ್ಲಿದ್ದ ಶ್ರೀಪುರುಷ ಇದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನೆಂದು ತಿಳಿದುಬರುತ್ತದೆ. ದ್ವೈತ ಸಿದ್ಧಾಂತದ ವಿದ್ವಾಂಸ ವ್ಯಾಸರಾಯರ ಜನ್ಮಸ್ಥಳ. ಕರ್ನಾಟಕ ಖಂಡಸಾರಿ ಸಕ್ಕರೆ ಕಾರ್ಖಾನೆ, ರೇಷ್ಮೆ ಸಾಕಾಣಿಕೆ ಮತ್ತು ತಾಂತ್ರಿಕ ಸೇವಾಕೇಂದ್ರ ಹಾಗೂ ರೇಷ್ಮೆ ಮೊಟ್ಟೆ ವಿತರಣಾ ಕೇಂದ್ರಗಳು ರೇಷ್ಮೆ ಬೆಳೆಯುವ ರೈತರಿಗೆ ಮಾರ್ಗದರ್ಶನ ನೀಡುತ್ತಿವೆ.

ಬನ್ನೂರಿನಿಂದ ಸೋಮನಾಥಪುರಕ್ಕೆ ಹೋಗಿ ಪುನಃ ಹಿಂತಿರುಗಿ ಬಂದು ತಲಕಾಡು ಮಾರ್ಗಕ್ಕೆ ಮುಖ್ಯ ಮಾರ್ಗವಾಗಿದೆ. ಅಲ್ಲದೆ ಬನ್ನೂರು ಪ್ರಮುಖ ವ್ಯಾಪಾರಕೇಂದ್ರವಾಗಿದ್ದು, ಟಿ.ನರಸೀಪುರ ಮತ್ತು ಮಂಡ್ಯವನ್ನು ಸೇರಿಸುವ ಪಟ್ಟಣವಾಗಿದೆ.

 

ತಿರುಮಕೂಡಲು ನರಸೀಪುರ

ದೂರ ಎಷ್ಟು?
ತಾಲ್ಲೂಕಿನಿಂದ: ೦೨ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೩೦ ಕಿ.ಮೀ.

ಧಾರ್ಮಿಕ, ಶೈಕ್ಷಣಿಕ ಹಾಗೂ ಚಾರಿತ್ರಿಕವಾಗಿ ಎರಡು ಸಾವಿರ ವರ್ಷಗಳ ಇತಿಹಾಸವಿರುವ ತಿರುಮಕೂಡಲು ನರಸೀಪುರವು ದಕ್ಷಿಣ ಕಾಶಿ ಎಂದು ಹೆಸರಾಗಿದೆ. ವಿಜಯನಗರ ಅರಸರ ಕಾಲದ ಕಾವೇರಿ ನದಿ ತೀರದಲ್ಲಿರುವ ಗುಂಜಾನರಸಿಂಹ ದೇವಾಲಯ ಅತಿ ಪ್ರಮುಖವಾದದ್ದು. ನರಸಿಂಹ ದೇವರ ಪ್ರತಿಮೆಯು ಗುಂಜಾ ಸಸ್ಯದ ಬೀಜದೊಂದಿಗೆ ಶಾಖೆಯಾಗಿರುವುದರಿಂದ ಈ ಹೆಸರು ಬಂದಿದೆ. ದೇವಾಲಯವು ದ್ರಾವಿಡ ಮತ್ತು ಹೊಯ್ಸಳ ಶೈಲಿಯದಾಗಿದೆ. ಇಲ್ಲಿ ನಾಗರೀಲಿಪಿಯಲ್ಲಿರುವ ಅನೇಕ ಶಾಸನಗಳಿವೆ.

ಕಾವೇರಿ ಮತ್ತು ಕಪಿಲಾ ನದಿಗಳು ಸಂಗಮಿಸುವ ಈ ಸ್ಥಳದಲ್ಲಿ ಸ್ಪಟಿಕ ಸರೋವರವೆಂಬುದು ಉಕ್ಕಿ ಹರಿದು ಗುಪ್ತಗಾಮಿನಿಯಾಗಿ ಅಲ್ಲಿಯೇ ವಿಲೀನವಾಗುವುದರಿಂದ ತ್ರಿವೇಣಿ ಸಂಗಮವೆಂದು ಹೆಸರಾಗಿದ್ದು ಇಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳವು ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತದೆ. ೧೮೮೨ ರಿಂದಲೂ ತಿ. ನರಸೀಪುರವು ತಾಲೂಕು ಕೇಂದ್ರವಾಗಿದೆ. ಇಲ್ಲಿನ ಅಗಸ್ತ್ಯೇಶ್ವರ, ಮತ್ತೀತಾಳೇಶ್ವರ ಹಾಗೂ ಗುಂಜಾನರಸಿಂಹ ದೇವಾಲಯಗಳು ಪ್ರಸಿದ್ಧ ಪುರಾತನ ದೇವಾಲಯಗಳು. ಇದು ಅದ್ವಿತೀಯ ಪಿಟೀಲು ವಾದಕರಾಗಿದ್ದ ಸಂಗೀತ ರತ್ನ ಟಿ. ಚೌಡಯ್ಯನವರ ಜನ್ಮಸ್ಥಳ.

 

ಸೋಮನಾಥಪುರ

ದೂರ ಎಷ್ಟು?
ತಾಲ್ಲೂಕಿನಿಂದ: ೧೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೩೭ ಕಿ.ಮೀ.

ತ್ರಿಕೂಟೇಶ್ವರ ದೇವಾಲಯ

ತಿ. ನರಸೀಪುರದಿಂದ ಬನ್ನೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿದೆ. ಇಲ್ಲಿ ೧೨ನೇ ಶತಮಾನದಲ್ಲಿ ಹೊಯ್ಸಳರ ಮಂತ್ರಿಯಾದ ಸೋಮನಾಥನು ನಿರ್ಮಿಸಿದ ಪ್ರಖ್ಯಾತ ಚೆನ್ನಕೇಶವ ದೇವಾಲಯವಿದೆ. ಇದರಲ್ಲಿ ಮೂರು ಗರ್ಭಗುಡಿಗಳಿರುವುದರಿಂದ ಇದಕ್ಕೆ ತ್ರಿಕೂಟೇಶ್ವರ ಎಂಬ ಹೆಸರು ಬಂದಿದ್ದು ಮೂರು ಗರ್ಭಗುಡಿಗಳ ಮೇಲೆ ಮೂರು ಶಿಖರಗಳಿವೆ. ಇದರ ಮುಖ್ಯ ಶಿಲ್ಪಿ ಮಲ್ಲಿತಮ. ಈ ತ್ರಿಕೂಟೇಶ್ವರ ದೇವಾಲಯವು ಐದು ಅಡಿ ಎತ್ತರದ ನಕ್ಷತ್ರಾಕಾರದ ಜಗಲಿಯ ಮೇಲೆ ಇದೆ. ಹೊಯ್ಸಳ ಶೈಲಿಯ ಈ ದೇವಾಲಯದ ಸುತ್ತ ಗೋಡೆಗಳ ಮೇಲೆ ಭಾಗವತ, ರಾಮಾಯಣ, ಮಹಾಭಾರತಗಳನ್ನು ಪ್ರತಿನಿಧಿಸುವ ದಾಖಲೆಗಳಿದ್ದು ಆನೆ, ಕುದುರೆ, ಹಂಸ ಮತ್ತು ಬಳ್ಳಿಗಳ ಸಾಲುಗಳ ಕೆತ್ತನೆಯಿಂದೆ. ಇದರ ಮೇಲ್ಭಾಗದಲ್ಲಿ ಜಾಲಂಧ್ರದ ಕಿಟಕಿಗಳು ಇವೆ.

 

ಹೆಮ್ಮಿಗೆ

ತಿ ನರಸೀಪುರದಿಂದ ಕೊಳ್ಳೇಗಾಲಕ್ಕೆ ಹೋಗುವ ಮಾರ್ಗದಲ್ಲಿ ಹೆಮ್ಮಿಗೆ ಗ್ರಾಮವಿದೆ. ಹೇಮಾಂಬಿಕಾ ಅಗ್ರಹಾರ ಎಂದು ಕರೆಯಲಾಗುತ್ತಿದ್ದ ಈ ಗ್ರಾಮವು ಹೆಮ್ಮಿಗೆ ಎಂದಾಯಿತು. ಇಲ್ಲಿ ವರದರಾಜ ಸ್ವಾಮಿ ದೇವಾಲಯವಿದೆ. ೧೮ನೆಯ ಶತಮಾನದಲ್ಲಿ ರಾಬರ್ಟ್ ಬ್ರೂಸ್‌ಪುಟ್‌ಎಂಬುವವನು ಅನ್ವೇಷಣೆ ನಡೆಸಿ ಪುರಾತನ ನೆಲೆಯನ್ನು ಕಂಡುಹಿಡಿದನು. ಇಲ್ಲಿ ನವಶಿಲಾಯುಗದ ಮಣ್ಣಿನ ಮಡಿಕೆ, ಶವಸಂಸ್ಕಾರ ಪದ್ಧತಿಯ ಅವಶೇಷ ಹಾಗೂ ಇತರ ಪಳೆಯುಳಿಕೆಗಳು ದೊರೆತಿವೆ.

 

ತಲಕಾಡು

ದೂರ ಎಷ್ಟು?
ತಾಲ್ಲೂಕಿನಿಂದ: ೧೬ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೪೩ ಕಿ.ಮೀ.

ಚೋಳರ ಕಾಲದಲ್ಲಿ ರಾಜಪುರ ಎಂದು ಕರೆಯುತ್ತಿದ್ದ ಈ ಪುಣ್ಯಕ್ಷೇತ್ರವು ಹೊಯ್ಸಳರ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಗೆ ಏರಿ ವಿಜಯನಗರ ಕಾಲದಲ್ಲಿ ಅವನತಿಯ ಹಾದಿ ಹಿಡಿಯಿತು. ಐತಿಹ್ಯದ ಪ್ರಕಾರ ತಲಾ-ಕಾಡು ಎಂಬ ರಕ್ಕಸ ಸಹೋದರರಿಂದ ಈ ಹೆಸರು ಬಂದಿರಬಹುದೆಂದು ತಿಳಿದುಬರುತ್ತದೆ. ಗಜಾರಣ್ಯ ಕ್ಷೇತ್ರವೆಂದು ಪೌರಾಣಿಕ ಹಿನ್ನೆಲೆಯಿಂದ ತಿಳಿದುಬರುತ್ತದೆ. ಕಾವೇರಿ ನದಿಯ ದಂಡೆಯ ಮೇಲಿರುವ ಈ ಸ್ಥಳವು ದಟ್ಟವಾದ ಅರಣ್ಯವಿರುವುದರಿಂದ ತಲಕಾಡು ಎಂಬ ಹೆಸರು ಬಂದಿರಬೇಕು. ಇದು ಗಂಗರಸರ ರಾಜಧಾನಿಯೂ ಆಗಿತ್ತು.

ಗಂಗರ ಕಾಲದ ಮರುಳೇಶ್ವರ, ಪಾತಾಳೇಶ್ವರ, ಅರ್ಕೇಶ್ವರ ದೇವಾಲಯಗಳು ಕಂಡುಬರುತ್ತವೆ. ಪಂಚಲಿಂಗೇಶ್ವರ, ವೀರಭದ್ರೇಶ್ವರ, ಗೋಕರ್ಣೇಶ್ವರ, ಆನಂದೇಶ್ವರ ಇತ್ತೀಚೆಗೆ ನಿರ್ಮಿತವಾದ ದೇವಾಲಯಗಳು. ಹತ್ತು ಅಡಿ ಎತ್ತರವಿರುವ ಪ್ರಭಾವಳಿಯ ಮೇಲೆ ವಿಷ್ಣುವಿನ ದಶಾವತಾರಗಳನ್ನು ನೋಡಬಹುದಾದ ಹೊಯ್ಸಳ ಕಾಲದ ಕೀರ್ತಿನಾರಾಯಣ ದೇವಾಲಯವಿದೆ. ವೈದ್ಯೇಶ್ವರ ದೇವಾಲಯವು ದ್ರಾವಿಡ ಮತ್ತು ಹೊಯ್ಸಳ ಶೈಲಿಯಲ್ಲಿದೆ. ಕಾರ್ತಿಕ ಬುಳ ಅಮವಾಸ್ಯೆಯ ಸೋಮವಾರ ಸೂರ್ಯ ಚಂದ್ರರಿಬ್ಬರೂ ವೃಶ್ಚಿಕ ರಾಶಿಯಲ್ಲಿದ್ದಾಗ ಉಷಾಕಾಲದಲ್ಲಿ ಕುಹೂ ಯೋಗವು ಫಲಪ್ರದವಾಗಿದ್ದು ಪಂಚಲಿಂಗ ದರ್ಶನದ ಸಮಯವಾಗಿದ್ದು ಲಕ್ಷಾಂತರ ಭಕ್ತರು ಆಗ ತಲಕಾಡಿಗೆ ಭೇಟಿ ನೀಡುತ್ತಾರೆ.

 

ಮುಡುಕುತೊರೆ

ಕಾವೇರಿ ನದಿಯ ತಿರುವು ಪಡೆಯುವ ಸ್ಥಳದ ದಂಡೆಯ ಮೇಲಿರುವ ಬೆಟ್ಟದಲ್ಲಿ ಮಲ್ಲಿಕಾರ್ಜುನ ದೇವಾಲಯವಿದೆ. ತಲಕಾಡಿನ ಪಂಚಲಿಂಗಗಳಲ್ಲಿ ಇದೂ ಒಂದು. ಈ ಬೆಟ್ಟಕ್ಕೆ ಸೋಮಗಿರಿ ಎಂಬ ಹೆಸರೂ ಇದೆ.

ದೂರ ಎಷ್ಟು?
ತಾಲ್ಲೂಕಿನಿಂದ: ೧೩ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೪೧ ಕಿ.ಮೀ.

 

ಮೂಗೂರು

ಪ್ರಾಚೀನ ದೇವಾಲಯಗಳಿರುವ ಈ ಹೋಬಳಿ ಕೇಂದ್ರ ಹೊಯ್ಸಳರ ಕಾಲದ ನಾರಾಯಣ ಸ್ವಾಮಿ ದೇವಾಲಯ, ಚೋಳರ ಕಾಲದ ದೇಶೇಶ್ವರ ದೇವಾಲಯ, ಆದಿನಾಥ, ಪಾರ್ಶ್ವನಾಥರ ಬಸದಿಗಳು ಇವೆ. ಪುರಾತನ ಶಾಸನಗಳನ್ನೊಳಗೊಂಡ ಶ್ರೀ ತ್ರಿಪುರಸುಂದರಿ ದೇವಾಲಯ ಇನ್ನೊಂದು ಪ್ರೇಕ್ಷಣೀಯ ಸ್ಥಳ.