ಒಂದು ನಾಟಕ-ಅದರಲ್ಲಿ ಒಂದು ದೃಶ್ಯ.

ಒಂದು ಸಂಸಾರ. ಯಜಮಾನ ಹಿರಿಯಣ್ಣಯ್ಯ. ಹೆಂಡತಿ ಭಾಗೀರಥಮ್ಮ. ದೊಡ್ಡ ಮಗ ಪುಟ್ಟು. ಚಿಕ್ಕ ಮಗ ಮಾಧು. ರಾತ್ರಿ ಮನೆಗೆ ಬೆಂಕಿ ಬೀಳುತ್ತದೆ. ಮೊದಲು ಎಚ್ಚರಿಕೆ ಆಗುವುದು ಪುಟ್ಟೂಗೆ. ಬೆಂಕಿಯನ್ನು ಕಂಡು ಬೆದರಿ, ಅವನು ತನ್ನ ಓದಿನ ಪುಸ್ತಕಗಳನ್ನೆಲ್ಲ ಬಾಚಿಕೊಂಡು ಬೀದಿಯ ಬಾಗಿಲಿನಿಂದ ಹೋಗುತ್ತಾನೆ. ಅವನು ‘ಬೆಂಕಿ’ ಎಂದದ್ದು ಕೇಳಿ ಮಾಧುಗೆ ಎಚ್ಚರಿಕೆಯಾಗುತ್ತದೆ. ತಾಯಿಯನ್ನು ಎಬ್ಬಿಸುತ್ತಾನೆ, ಅವಳನ್ನೂ ಅವಳ ಎಳೆಯ ಮಗುವನ್ನೂ ಹೊರಕ್ಕೆ ಕರೆತರುತ್ತಾನೆ. ತಂದೆಯನ್ನು ಎಬ್ಬಿಸುತ್ತಾನೆ. ತಂದೆ ‘ಅಯ್ಯೋ! ಪುಟ್ಟು ಎಲ್ಲಿ?’ ಎಂದು ಚೇತ್ಕರಿಸುತ್ತಾನೆ. ಮಾಧುವನ್ನು ನೋಡಿ, ‘ಅಯ್ಯೋ ಪಿಶಾಚಿ! ಪುಟ್ಟು ಒಳಗೆ ಸಿಕ್ಕೊಂಡಿರೋವಾಗ ಕಂಭದ ಹಾಗೆ ನಿಂತ್ಕೊಂಡಿದ್ದೀಯಲ್ಲೊ ಪಾಪಿ!” ಎಂದು ಅಬ್ಬರಿಸುತ್ತಾನೆ. ಮಾಧು ಬೆಂಕಿ ಹತ್ತಿರುವ ಭಾಗಕ್ಕೆ ಹೋಗುತ್ತಾನೆ. ಮೂರ್ಛಿತನಾದ ಅವನನ್ನು ನಾಲ್ಕೈದು ಜನ ಎತ್ತಿಕೊಂಡು ಬರುತ್ತಾರೆ.

ತಂದೆ ಮಾಧುವನ್ನು ಎಷ್ಟು ನಿಷ್ಠುರವಾಗಿ, ಪಿಶಾಚಿ, ಪಾಪಿ ಎಂದೆಲ್ಲ ಬಯ್ದ, ಅಲ್ಲವೆ! ಪುಟ್ಟೂ ಪರೀಕ್ಷೆಗಳಲ್ಲಿ ಬಿಡದೆ ಫಸ್ಟ್‌ಕ್ಲಾಸ್‌ ಸಿಗಿಯುತ್ತಾನೆ, ಆದುದರಿಂದ ಅವನ ತಂದೆಗೆ ಅವನನ್ನು ಕಂಡರೆ ತುಂಬಾ ಪ್ರೀತಿ. ಅವನು ಮನೆಯ ಕಡೆ ಏನೂ ಗಮನ ಕೊಡುವುದಿಲ್ಲ, ತಾಯಿಗೆ ಕಾಯಿಲೆಯಾಗಲಿ ಮಗುವಿನ ಮೈ ಕೆಂಡದಂತೆ ಸುಡುತ್ತಿರಲಿ ಅವನಾಯಿತು ಅವನ ಪುಸ್ತಕಗಳಾಯಿತು. ಅವನ ‘ಫಸ್ಟ್‌ಕ್ಲಾಸ್‌’ ತಂದೆಯ ಕಣ್ಣನ್ನು ಕುಕ್ಕಿದೆ. ಅವನೇ ಅವರಿಗೆ ಮುಂದಿನ ಭಾಗ್ಯದ ಬಾಗಿಲು. ಮಾಧು ಆಟವನ್ನೂ ಬಿಟ್ಟು ಮನೆಗೆ ಸಾಮಾನು ತಂದುಹಾಕಿ, ತಾಯಿಗೆ ಮಗುವಿಗೆ ಔಷಧ ತಂದುಕೊಟ್ಟು ತೇಯುತ್ತಾನೆ, ಇದರಲ್ಲಿ ಅವನಿಗೆ ಓದಲು ಸಮಯವಿಲ್ಲ. ಆದರೆ ತಂದೆ ‘ಅವನಿದ್ರೇನು? ಇಲ್ಲ್ದಿದ್ರೇನು?’ ಎನ್ನುತ್ತಾನೆ.

ನಾಟಕದ ಕೊನೆಯಲ್ಲಿ ಒಬ್ಬ ಪರಿಚಿತ ಹಿರಿಯಣ್ಣಯ್ಯನಿಗೆ ಹೇಳುತ್ತಾನೆ, “ಈಗ್ಲಾದ್ರೂ ನೋಡಿದ್ರಾ ವ್ಯತ್ಯಾಸ? …ಪಾಸಾದ್ರೇನು!… ಆಗ್ದಿದ್ರೇನು! ಟೊಳ್ಳು ಟೊಳ್ಳೆ ಗಟ್ಟಿ ಗಟ್ಟಿಯೇ!”

ನಾಟಕದ ಹೆಸರೇ ‘ಟೊಳ್ಳು ಗಟ್ಟಿ’ (ಮತ್ತೊಂದು ಹೆಸರು; ‘ಮಕ್ಕಳಿಸ್ಕೂಲ್‌ ಮನೆಲಲ್ವೇ?’) ಬರೆದವರು ಟಿ.ಪಿ. ಕೈಲಾಸಂ. ಅದೇ ಅವರ ಮೊದಲನೆಯ ನಾಟಕ. ಬರೆದದ್ದು ಆಡಿದ್ದು ೧೯೧೮ರಲ್ಲಿ. ಕೈಲಾಸಂ ಅದರಲ್ಲಿ ಮಾಧು ಪಾತ್ರ, ಹಿರಿಯಣ್ಣಯ್ಯನ ತಂಗಿ ವಿಧವೆ ನಾಗತ್ತೆ ಪಾತ್ರ ತಾವೇ ಮಾಡಿದ್ದರು.

ಕೈಲಾಸಂ ತಮ್ಮ ಎಲ್ಲ ನಾಟಕಗಳಲ್ಲಿಯೂ ಇದೇ ಪರೀಕ್ಷೆ ನಡೆಸಿದರು-ಯಾವ ಮನುಷ್ಯರು ಟೊಳ್ಳು ಯಾರು ಗಟ್ಟಿ?

ಸಂಪತ್ತು, ವಿದ್ವತತು ಬೆರೆತ ಮನೆತನ

ಕೈಲಾಸಂ ಅವರ ಪೂರ್ತಿ ಹೆಸರು ತ್ಯಾಗರಾಜ ಪರಮಶಿವ ಕೈಲಾಸಂ. ಹುಟ್ಟಿದ್ದು ೧೮೮೪ ಅಥವಾ ೧೮೮೫ರಲ್ಲಿ – ಖಚಿತವಾಗಿ ತಿಳಿಯದು. ತುಂಬಾ ಶ್ರೀಮಂತ ಮನೆತನದಲ್ಲಿ ಜನಿಸಿದರು. ಹಿಂದೆ ತಂಜಾವೂರಿನಲ್ಲಿದ್ದು ಅನಂತರ ಮೈಸೂರು ಸಂಸ್ಥಾನಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಮನೆತನ. ಅವರ ತಂದೆ ತ್ಯಾಗರಾಜ ಪರಮಶಿವ ಅಯ್ಯರ್. ನ್ಯಾಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಒಳ್ಳೆಯ ಹೆಸರು ಪಡೆದರು. ಮೈಸೂರು ಹೈಕೋರ್ಟಿನ ನ್ಯಾಯಾಧೀಶರಾದರು. ಅವರ ಅಣ್ಣ ಸದಾಶಿವ ಅಯ್ಯರರೂ ಹೀಗೆಯೇ ಒಳ್ಳೆಯ ಹೆಸರು ಸಂಪಾದಿಸಿ ಮೈಸೂರು ಹೈಕೋರ್ಟಿನ ನ್ಯಾಯಾಧೀಶ ರಾದರು. ಅಣ್ಣತಮ್ಮ ಇಬ್ಬರೂ ಕಾನೂನನ್ನು ಬಹು ಚೆನ್ನಾಗಿ ತಿಳಿದವರು. ಜೊತೆಗೇ ಭಾರತೀಯ ಧರ್ಮ ಗ್ರಂಥಗಳನ್ನು, ಮಹಾಕಾವ್ಯಗಳನ್ನು ಆಳವಾಗಿ ಅಭ್ಯಾಸ ಮಾಡಿದವರು. ಮಹಾಭಾರತದ ಕಥೆಗಳನ್ನು ಹೇಳಿ ಅಲ್ಲಿನ ಪರ್ವತಸದೃಶ ಪಾತ್ರಗಳನ್ನು ಬಾಲಕ ಕೈಲಾಸಂಗೆ ಪರಿಚಯ ಮಾಡಿಕೊಟ್ಟವರು ದೊಡ್ಡಪ್ಪ ಸದಾಶಿವ ಅಯ್ಯರ್. ಕೈಲಾಸಂ ತಾಯಿ ಕಮಲಮ್ಮ. ಮೃದು ಸ್ವಭಾವದ, ಅಂತಃಕರಣದ ಹೆಂಗಸು ಆಕೆ.

ಕೈಲಾಸಂ ಬಾಲ್ಯದಲ್ಲಿ ಶ್ರೀಮಂತಿಕೆಯಲ್ಲಿ ಬೆಳೆದರು. ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಹಾಗೆಂದು ಶಿಸ್ತು ಇರಲಿಲ್ಲ ಎನ್ನುವಂತಿಲ್ಲ ಕೈಲಾಸಂಗೆ ತಾಯಿಯಲ್ಲಿ ತುಂಬಾ ಪ್ರೀತಿ, ತಂದೆ-ದೊಡ್ಡಪ್ಪಂದಿರನ್ನು ಕಂಡರೆ ಪ್ರೀತಿಯೊಡನೆ ಸ್ವಲ್ಪ ಭಯ. ಅವರು ದೊಡ್ಡವರಾದಮೇಲೂ ತಂದೆ-ದೊಡ್ಡಪ್ಪ ಎಂದರೆ ಬಹು ಗೌರವದಿಂದ ನಡೆದುಕೊಳ್ಳುತ್ತಿದ್ದರು. ತಂದೆ ಮನೆಯಲ್ಲಿದ್ದಾಗ ತಮ್ಮ ಸ್ನೇಹಿತರು ಬಂದರೆ ಕೈಲಾಸಂ ಹೆಜ್ಜೆ ಶಬ್ದವಾಗದಂತೆ ಬನ್ನಿ ಎಂದು ಸನ್ನೆ ಮಾಡುವರು.

ಭಾರತದಲ್ಲಿ ಶಿಕ್ಷಣ

ಕೈಲಾಸಂ ಅವರ ಪ್ರಾರಂಭದ ಶಿಕ್ಷಣ ಬೆಂಗಳೂರು, ಹಾಸನ ಮತ್ತು ಮೈಸೂರುಗಳಲ್ಲಾಯಿತು. ಅನಂತರ ಮೆಟ್ರಿಕ್ಯುಲೇಷನ್‌ ತರಗತಿ ಸೇರಲು ಮದರಾಸಿಗೆ ಹೋದರು. ಅಲ್ಲಿ ಅವರು ಶಿವಸ್ವಾಮಿ ಅಯ್ಯರ್ ಹಿಂದೂ ಹೈಸ್ಕೂಲಿನ ವಿದ್ಯಾರ್ಥಿ. ಪ್ರಸಿದ್ಧ ಅಧ್ಯಾಪಕರೂ ದೇಶಭಕ್ತರೂ ಆದ ವಿ.ಎಸ್‌. ಶ್ರೀನಿವಾಸ ಶಾಸ್ತ್ರಿಗಳವರ ಶಿಷ್ಯ. ಮೆಟ್ರಿಕ್ಯುಲೇಷನ್‌ ಮುಗಿಸಿ ಮದರಾಸಿನಲ್ಲೆ ಪ್ರಸಿಡೆನ್ಸಿ ಕಾಲೇಜು ಸೇರಿದರು. ಅಲ್ಲಿ ಪ್ರಥಮ ತರಗತಿಯಲ್ಲಿ ಬಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಭೂವಿಜ್ಞಾನವನ್ನು ವಿಶೇಷ ವಿಷಯವಾಗಿ ಆರಿಸಿಕೊಂಡು ಅಭ್ಯಾಸ ಮಾಡಿ ಎಂ.ಎ. ಪದವಿ ಪಡೆದರು. (ಆಗಿನ ದಿನಗಳಲ್ಲಿ ಯಾವ ವಿಷಯವನ್ನೇ ಓದಿರಲಿ ಚರಿತ್ರೆಯಾಗಲಿ, ಸಾಹಿತ್ಯವಾಗಲಿ, ವಿಜ್ಞಾನವಾಗಲಿ ಬಿ.ಎ., ಎಂ.ಎ ಪದವಿಗಳನ್ನೇ ಕೊಡುತ್ತಿದ್ದರು).

ಇಂಗ್ಲೆಂಡಿನಲ್ಲಿ ಮೈ, ಮನಗಳು ಬೆಳೆದವು

ಇಷ್ಟು ಬುದ್ಧಿವಂತ ವಿದ್ಯಾರ್ಥಿ ಮೈಸೂರು ಸರ್ಕಾರದ ಕಣ್ಣಿಗೆ ಬಿದ್ದದ್ದು ಆಶ್ಚರ್ಯವಲ್ಲ. ಸರ್ಕಾರ ಅವರಿಗೆ ಭೂವಿಜ್ಞಾನವನ್ನು ಇನ್ನಷ್ಟು ಅಭ್ಯಾಸ ಮಾಡಲು ಲಂಡನ್ನಿಗೆ ಕಳುಹಿಸಿತು. ೧೯೦೮ರಲ್ಲಿ ಕೈಲಾಸಂ ಲಂಡನ್ನಿಗೆ ಹೋದರು. ಅಲ್ಲಿ ರಾಯಲ್‌ ಕಾಲೇಜ್‌ ಆಫ್‌ ಸೈನ್ಸ್‌ ಸೇರಿದರು. ಏಳು ವಿಷಯಗಳಲ್ಲಿ ಮೊದಲನೆಯ ತರಗತಿ ತೆಗೆದುಕೊಂಡು ಪಾಸ್‌ ಮಾಡಿದರು.

ಪರೀಕ್ಷೆಗಳಲ್ಲಿ ಫಸ್ಟ್‌ಕ್ಲಾಸ್‌ ಸಿಗಿಯುತ್ತಿದ್ದ ಪುಟ್ಟುವನ್ನು ಹಾಸ್ಯ ಮಾಡಿದ ಕೈಲಾಸಂ ದಡ್ಡ ವಿದ್ಯಾರ್ಥಿಯೇನೂ ಆಗಿರಲಿಲ್ಲ. ಅವರೂ ಫಸ್ಟ್‌ಕ್ಲಾಸ್‌ ಸಿಗಿದವರೇ. ಆದರೆ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್‌ ಸಿಗಿದವರೇ. ಆದರೆ ಪರೀಕ್ಷೆಯಲ್ಲಿ ಫಸ್ಟ್‌ ಕ್ಲಾಸ್‌ ಗಿಟ್ಟಿಸುವುದೇ ಮುಖ್ಯವಲ್ಲ ಎಂದು ಅವರ ದೃಷ್ಟಿ.

ಇಲ್ಲಿಗೇ ಕೈಲಾಸಂ ತೃಪ್ತರಾಗಲಿಲ್ಲ. ಸ್ವತಃ ಕೆಲವು ವಿಷಯಗಳನ್ನು ಅಭ್ಯಾಸ ಮಾಡಿ ಒಂದು ವಿದ್ವತ್ಪೂರ್ಣವಾದ ದೀರ್ಘ ಪ್ರಬಂಧವನ್ನು ಬರೆದರು. ಇದರಿಂದ ಅವರಿಗೆ,ಭೂವಿಜ್ಞಾನದ ಶ್ರೇಷ್ಠ ವಿದ್ವಾಂಸರ ಸಂಸ್ಥೆ ಎಂದು ಪ್ರಸಿದ್ಧವಾದ ರಾಯಲ್‌ ಜಿಯಲಾಜಿಕಲ್‌ ಸೊಸೈಟಿಯ ‘ಫೆಲೊ’ ಎಂದು ಗೌರವ ದೊರೆಯಿತು. ಪ್ರಬಂಧದಿಂದ ಈ ಗೌರವ ದೊರಕಿಸಿಕೊಂಡ ಮೊದಲನೆಯ ಭಾರತೀಯರು ಕೈಲಾಸಂ.

ಲಂಡನ್ನಿನಲ್ಲಿ ಕೈಲಾಸಂ ಏಳು ವರ್ಷ ಇದ್ದರು. ಈ ಕಾಲದಲ್ಲಿ ಅವರು ಉನ್ನತ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಮುಗಿಸಿದ್ದು ಮಾತ್ರವಲ್ಲ, ಹಲವು ರೀತಿಗಳಲ್ಲಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ಅವರಿಗೆ ಕರ್ನಾಟಕ ಸಂಗೀತ ಚೆನ್ನಾಗಿ ತಿಳಿದಿತ್ತು. ಇಂಗ್ಲೆಂಡಿನಲ್ಲಿ ಪಾಶ್ಚಾತ್ಯರ ಸಂಗೀತವನ್ನು ಅಭ್ಯಾಸ ಮಾಡಿದರು. ಇದನ್ನು ಎಷ್ಟು ಚೆನ್ನಾಗಿ ಕಲಿತರೆಂದರೆ, ಪಾಶ್ಚಾತ್ಯ ಸಂಗೀತದ ರಾಗದಲ್ಲಿ ಒಂದು ಹಾಡನ್ನು ಕೇಳಿದರೆ ಅದೇ ರಾಗದಲ್ಲಿ ಕನ್ನಡದಲ್ಲಿ ಕೂಡಲೇ ಹಾಡು ಕಟ್ಟಬಲ್ಲರು.

ಒಮ್ಮೆ ಒಂದು ಸಂಗತಿ ನಡೆಯಿತು.

ಇಂಗ್ಲೆಂಢಿನ ಒಂದು ಥಿಯೇಟರಿನಲ್ಲಿ ಒಬ್ಬ ಒಂದು ಹಾಡು ಹಾಡಿದ; ‘ಇಟ್‌ ಇಸ್‌ ಎ ಲಾಂಗ್ ಲಾಂಗ್‌ ವೇ ಟು ತಿಪ್ಪರಾರೀ…..’ ಎಂದು ಹಾಡಿನ ಪಾರಂಭ (ತಿಪ್ಪರಾರಿಗೆ ಬಲು ಬಲು ದೂರ…). ತನ್ನ ಹಾಗೆಯೇ ಹಾಡನ್ನು ಯಾರಾದರೂ ಹಾಡಿದರೆ ಬಹುಮಾನ ಕೊಡುತ್ತೇನೆ ಎಂದು ಸವಾಲು ಹಾಕಿದ. ಕೈಲಾಸಂ ಎದ್ದರು, ಅಲ್ಲೆ ಅದೇ ಧಾಟಿಯಲ್ಲಿ ಒಂದು ಹಾಡು ಕಟ್ಟಿ ಹಾಡಿದರು. ‘ನಮ್‌ ತಿಪ್ಪಾರಳ್ಳಿ ಬಲ್ದೂರ….’ ಬಹುಮಾನ ಗೆದ್ದರು.

ಸ್ಯಾಂಡೊ ಎಂಬಾತ ಶರೀರ ವ್ಯಾಯಾಮದ ವಿಷಯದಲ್ಲಿ ಬಹು ದೊಡ್ಡ ತಜ್ಞ. ಕೈಲಾಸಂ ಅವನ ಶಿಷ್ಯರಾದರು. ಸಾಮು ಮಾಡಿದರು. ಕಬ್ಬಿಣದಂತೆ ದೇಹವನ್ನು ಗಟ್ಟಿಮಾಡಿಕೊಂಡರು.

ಇಂಗ್ಲೆಂಡಿನ ನಾಟಕಗಳ ಅಭ್ಯಾಸ

ಬಹು ವರ್ಷ ಇಂಗ್ಲೆಂಡಿನಲ್ಲಿ ನಾಟಕ ಸುರುಟುಕೊಂಡಿತ್ತು. ಕೈಲಾಸಂ ಇಂಗ್ಲೆಂಡಿನಲ್ಲಿ ಇದ್ದ ವರ್ಷಗಳು ಹೊಸ ನಾಟಕಕಾರರು ನಾಟಕಗಳನ್ನು ಬರೆಯುತ್ತಿದ್ದ ಕಾಲ. ಪ್ರತಿಭಾವಂತ ನಟನಟಿಯರ ಕಾಲ. ಅದಕ್ಕೆ ಮುನ್ನೂರೈವತ್ತು ವರ್ಷಗಳ ಹಿಂದಿದ್ದ ಶ್ರೇಷ್ಠ ನಾಟಕಕಾರ ಷೇಕ್ಸ್‌ಪಿಯರನ ನಾಟಕಗಳನ್ನು ಈ ಪ್ರತಿಭಾವಂತ ನಟನಟಿಯರು ಅಭಿನಯಿಸುತ್ತಿದ್ದರು. ಜಾಗ್‌ಗಾಲ್ಸ್ ವರ್ದಿ, ಬರ್ನಾಡ್‌ ಷಾ ಎಂಭ ನಾಟಕಕಾರರು ತಮ್ಮ ಕಾಲದ ಸಮಾಜದ ಅನ್ಯಾಯ, ಶೋಷಣೆ, ತಪ್ಪು ನಂಬಿಕೆಗಳು ಇವನ್ನು ಬಯಲಿಗೆಳೆದು ಚರ್ಚೆ ಮಾಡುವ ನಾಟಕಗಳನ್ನು ಬರೆಯುತ್ತಿದ್ದರು. ಷಾ ಅಂತೂ ಜಗತ್‌ಪ್ರಸಿದ್ಧ ನಾಟಕಕಾರ. ಜನರನ್ನು ನಗಿಸುತ್ತಲೇ ಅವರ ಬುದ್ಧಿಶಕ್ತಿಯನ್ನು ಚುಚ್ಚಿ ಎಬ್ಬಿಸಿ ಅವರು ಯೋಚಿಸುವಂತೆ ಮಾಡುತ್ತಿದ್ದ. ನಾರ್ವೆ ದೇಶದ ಇಬ್ಸನ್‌ ಎಂಬಾತ ತನ್ನ ಸಮಾಜದ ಹುಳಕುಗಳನ್ನು ಹೊರಹಾಕುತ್ತಿದ್ದ; ಅವನ ನಾಟಕಗಳನ್ನು ಇಂಗ್ಲಿಷಿಗೆ ಅನುವಾದಿಸಿ ಆಡುತ್ತಿದ್ದರು. ಕೈಲಾಸಂ ಈ ನಾಟಕಗಳನ್ನೆಲ್ಲ ನೋಡಿದರು. ನಾಟಕಗಳ ತಿರುಳನ್ನು ಪರೀಕ್ಷಿಸಿದರು. ನಾಟಕಕಾರ ಹೇಗೆ ಮನರಂಜನೆಯನ್ನು ಮಾತ್ರ ಒದಗಿಸದೆ ಸಮಾಜಕ್ಕೆ ಚಿಕಿತ್ಸೆ ಮಾಡುವ ಶಸ್ತ್ರವೈದ್ಯ ಆಗಬಲ್ಲ ಎಂದು ಗುರುತಿಸಿದರು. ಪ್ರತಿಭಾವಂತ ನಟನಟಿಯರ ಅಭಿನಯವನ್ನು ಶ್ರದ್ಧೆಯಿಂದ ವೀಕ್ಷಿಸಿದರು. ಅವರನ್ನೆ ಕಂಡು ಮಾತನಾಡಿದರು. ಅವರೆದುರಿಗೇ ಅವರ ಅಭಿನಯವನ್ನು ಅನುಕರಿಸಿ ಅವರ ಮೆಚ್ಚುಗೆ ಪಡೆದರು.

ಸರ್ಕಾರಿ ನೌಕರಿಬಿಡುಗಡೆ

೧೯೧೫ ರಲ್ಲಿ ಕೈಲಾಸಂ ಭಾರತಕ್ಕೆ ಹಿಂತಿರುಗಿದರು. ಅವರಿಗೆ ಒಂದೇ ದುಃಖ-ಅವರು ಇಂಗ್ಲೆಂಡಿನಲ್ಲಿದ್ದಾಗ ಅವರ ಮಮತೆಯ ತಾಯಿ ತೀರಿಕೊಂಡಿದ್ದರು.

ಉನ್ನತ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಮುಗಿಸಿ ಬಂದ ಪ್ರತಿಭಾವಂತ ತರುಣ ಕೈಲಾಸಂಗೆ ಕೆಲಸ ಸಿಕ್ಕುವುದು ಕಷ್ಟವಾಗಲಿಲ್ಲ. ಮೈಸೂರು ಸರ್ಕಾರದ ಭೂವಿಜ್ಞಾನ ಇಲಾಖೆಯಲ್ಲೆ ಒಳ್ಳೆಯ ಕೆಲಸ ಸಿಕ್ಕಿತು.

ಶ್ರೀಮಂತ ಮನೆತನದ, ಮೂವತ್ತು-ಮೂವತ್ತೊಂದು ವಯಸ್ಸಿನ ತರುಣ. ಇಂಗ್ಲೆಂಡಿನಲ್ಲಿ ಉಚ್ಚ ವಿದ್ಯಾಭ್ಯಾಸ ಮುಗಿಸಿ ಬಂದವನು. ಕೈತುಂಬ ಸಂಬಳ ತರುವ ಸರ್ಕಾರಿ ಕೆಲಸ.

ಜೀವನದಲ್ಲಿ ನೆಮ್ಮದಿ-ಸಂತೋಷಗಳ ಹೊಳೆ ಹರಿಯಲು ಇನ್ನೇನು ಬೇಕು?

ಆದರೆ ಕೈಲಾಸಂ ಅವರ ಜೀವನದಲ್ಲಿ ನೆಮ್ಮದಿ ಸಂತೋಷಗಳ ಹೊಳೆ ಹರಿಯಲು ಇನ್ನೇನು ಬೇಕು?

ಕಾರಣ? ಅವರ ಸ್ವಭಾವವೇ.

ಸರ್ಕಾರಿ ಕೆಲಸದಲ್ಲಿ ನಿಗದಿಯಾದ ವೇಳೆಯಲ್ಲಿ ಕಛೇರಿಗೆ ಹೋಗಬೇಕು. ನಿಗದಿಯಾದ ಸಮಯದಲ್ಲಿ ಒಂದು ಕಡೆ ಕುಳಿತು ಕೆಲಸ ಮಾಡಬೇಕು. ಕೈಲಾಸಂಗೆ ಬೆಂಗಳೂರಿನಿಂದ ಆಚೆ ಮೈಸೂರು ಸಂಸ್ಥಾನದ ಮೂಲೆಗಳಲ್ಲಿ ಕೆಲಸ ಬೀಳುತ್ತಿತ್ತು. ಅಲ್ಲಿ ತಿಂಗಳಗಟ್ಟಲೆ ಇರಬೇಕು. ಕೂಲಿಯವರನ್ನು ಗೊತ್ತುಮಾಡಿ ಕೆಲಸ ಮಾಡಿಸಬೇಕು. ವಾರಕೊಮ್ಮೆ ಸರಕಾರಕ್ಕೆ ‘ಇಷ್ಟು ಕೆಲಸವಾಯಿತು’ ಎಂದು ವರದಿ ಕಳುಹಿಸಬೇಕು. ಒಂದು ಕಡೆ ಕುಳಿತು ಕ್ರಮವಾಗಿ, ವ್ಯವಸ್ಥಿತವಾಗಿ ಕೆಲಸ ಮಾಡುವ ಸ್ವಭಾವವೇ ಅಲ್ಲ ಕೈಲಾಸಂದು. ಅವರ ಕಣ್ಣು ಸುತ್ತಮುತ್ತಲಿನ ಜನರನ್ನು, ಅವರ ರೀತಿನೀತಿಗಳನ್ನು, ಸಮಾಜವನ್ನು, ಅದರ ನ್ಯಾಯ, ಅನ್ಯಾಯಗಳನ್ನು ನೋಡುತ್ತಿರುವುದು. ಅವರ ಮನಸ್ಸು ಮನುಷ್ಯ ಎಷ್ಟು ಸಣ್ಣವನಾಗಬಲ್ಲ, ಎಷ್ಟು ಆಷಾಢಭೂತಿತನ ಮಾಡಬಲ್ಲ, ಅನ್ಯಾಯ ಮಾಡಬಲ್ಲ, ಇದೇ ಮನುಷ್ಯ ಎಷ್ಟು ದೊಡ್ಡವನಾಗಬಲ್ಲ, ಇತರರಿಗಾಗಿ ಎಷ್ಟು ದುಡಿಯಬಲ್ಲ, ನ್ಯಾಯಕ್ಕಾಗಿ ಹೇಗೆ ಪ್ರಾಣವನ್ನೇ ಕೊಡಬಲ್ಲ ಎಂದು ಚಿಂತಿಸುವುದು, ಬೆರಗಾಗುವುದು.

ಕೈಲಾಸಂ ‘ವಸಂತ ಸೇನ’ ಚಿತ್ರದಲ್ಲಿ ಶಕಾರನಾಗಿ

ಇಂತಹ ವ್ಯಕ್ತಿ ಸರ್ಕಾರದ ಯಂತ್ರದ ಭಾಗವಾಗಿ ಎಷ್ಟು ಕಾಲ ಕೆಲಸ ಮಾಡಬಲ್ಲರು? ಅವರಿಗೂ ಬೇಸರ, ಮೇಲಿನಧಿಕಾರಿಗಳಿಗೂ ಅತೃಪ್ತಿ.

ಒಮ್ಮೆ ಹೀಗಾಯಿತು. ಕೈಲಾಸಂ ಮೈಸೂರು ಸಂಸ್ಥಾನದ ಒಂದು ಮೂಲೆಯಲ್ಲಿ ಕೆಲಸಕ್ಕೆ ಹೋದರು. ವಾರಗಳೇ ಕಳೆದವು. ಮೇಲಿನ ಅಧಿಕಾರಿಗಳಿಗೆ ಅವರಿಂದ ವರದಿ ಬರುವುದಿರಲಿ, ಕಾಗದವೂ ಇಲ್ಲ, ಬರೆದ ಕಾಗದಕ್ಕೆ ಉತ್ತರವೂ ಇಲ್ಲ. ಕಡೆಗೆ ಮೇಲಧಿಕಾರಿಗಳು ಬರೆದರು: “ನೀವು ಕಾಲಕ್ಕೆ ಸರಿಯಾಗಿ ವರದಿಗಳನ್ನು ಕಳುಹಿಸದಿದ್ದರೆ ನಿಮಗೆ ಕೊಡಬೇಕಾದ ಭತ್ಯಗಳನ್ನು ನಿಲ್ಲಿಸಬೇಕಾಗುತ್ತದೆ.” (ಅಧಿಕಾರಿ ತನ್ನ ಕಚೇರಿ ಇರುವ ಸ್ಥಳದಿಂದ ಬೇರೆ ಸ್ಥಳಕ್ಕೆ ಸರ್ಕಾರಿ ಕೆಲಸಕ್ಕಾಗಿ ಹೋದರೆ ಸರ್ಕಾರ ದಿನಕ್ಕಿಷ್ಟು ಎಂದು ಭತ್ಯ ಕೊಡುತ್ತದೆ.) ಕೈಲಾಸಂ ಉತ್ತರ ಬರೆದರು. “ನೀವು ನನ್ನನ್ನು ಕಳುಹಿಸಿರುವ ಈ ಬಿಲದಲ್ಲಿ ನನಗೆ ಬರುವ ಸಂಬಳವನ್ನೆ ಖರ್ಚು ಮಾಡಲು ಸಾಧ್ಯವಿಲ್ಲ, ನಿಮ್ಮ ಭತ್ಯ ನನಗೇಕೆ! ನಾನು ಭತ್ಯವನ್ನು ತೆಗೆದುಕೊಳ್ಳುವುದಿಲ್ಲ. ಇಲ್ಲಿ ನನ್ನ ಕೆಲಸ ಮುಗಿಯುವವರೆಗೆ ನನ್ನಿಂದ ಕಾಗದ ಬರುತ್ತದೆ ಎಂದು ನಿರೀಕ್ಷಿಸಬೇಡಿ.”

ಐದು ವರ್ಷಗಳ ಕಾಲ ಕೈಲಾಸಂ ಹಾಗೂ ಹೀಗೂ ಸರ್ಕಾರಿ ಕೆಲಸದಲ್ಲಿದ್ದರು. ಅದಕ್ಕೆ ಒಗ್ಗಿಕೊಳ್ಳಲು ಪ್ರಯತ್ನಿಸಿದರು. ಆದರೆ ಅವರ ಚೇತನಕ್ಕೆ ತಾನೇ ಒಡೆಯ, ಅದರ ರೀತಿಯೇ ಅದಕ್ಕೆ ಕುರ್ಚಿಗೆ ಅಂಟಿಕೊಂಡು ನಿಯಮಗಳ ಚೌಕಟ್ಟಿನಲ್ಲಿ ಕೆಲಸ ಮಾಡಲು ಅವರಿಂದ ಆಗಲೇ ಇಲ್ಲ. ೧೯೨೦ರ ಜುಲೈ ಒಂದರಂದು ಕೆಲಸಕ್ಕೆ ರಾಜೀನಾಮೆ ಕೊಟ್ಟು ಸರ್ವಸ್ವತಂತ್ರರಾದರು.

ಸರ್ಕಾರಿ ಕೆಲಸ ಬಿಟ್ಟನಂತರ ಕೈಲಾಸಂ ಯಾವ ಉದ್ಯೋಗವನ್ನೂ ಕೈಗೊಳ್ಳಲಿಲ್ಲ. ನಾಟಕಗಳನ್ನು ಆಡಿಸಿದರು, ತಾವೂ ಪಾತ್ರ ವಹಿಸಿದರು. ಚಲನಚಿತ್ರ ತಯಾರಿಸಲು ಪ್ರಯತ್ನಿಸಿದರು. ‘ವಸಂತಸೇನ’ ಎಂಬ ಚಲನಚಿತ್ರದಲ್ಲಿ ಶಕಾರ ಎಂಬಾತನ ಪಾತ್ರ ವಹಿಸಿದರು.

ವಿಚಿತ್ರ ಜೀವನ ವೈಖರಿ

ಅಲ್ಲಿಂದಾಚೆ ಈ ಲಕ್ಷ್ಮೀಪುತ್ರರ ಜೀವನ ವಿಚಿತ್ರವಾಯಿತು. ಬೆಳಗ್ಗೆ ಏಳುವುದೇ ಸುಮಾರು ಹತ್ತು ಗಂಟೆಗೆ ಕ್ವೌರ ಮಾಡಿಕೊಂಡರೆ ಮಾಡಿಕೊಂಡರು, ಇಲ್ಲದಿದ್ದರೆ ಇಲ್ಲ. ಬಂದ ಸ್ನೇಹಿತರೊಡನೆ ಹರಟೆ. ಮಾತಿನಲ್ಲಿ ಅವರದು ಸಮ್ಮೋಹನಾಸ್ತ್ರ. ಕೇಳುವವರು ಎಲ್ಲವನ್ನೂ ಮರೆತು ಬಿಡುವಂತೆ ಗಂಟೆಗಟ್ಟಲೆ ಮಾತನಾಡುವರು-ಮುಖ್ಯವಾಗಿ ಅವರು ಮಾತನಾಡುತ್ತಿದ್ದುದು ನಾಟಕವನ್ನು ಕುರಿತು. ತಾವು ಬರೆದಿದ್ದ ನಾಟಕಗಳು, ಬರೆಯಬೇಕೆಂದು ಯೋಚಿಸಿದ್ದ ನಾಟಕಗಳು, ನೋಡಿದ್ದ ನಾಟಕಗಳು, ಓದಿದ್ದ ನಾಟಕಗಳು, ನಾಟಕ ರಚಿಸುವ ಖಯಾಲಿ ಬಂತೆಂದರೆ, ಜೊತೆಗಿದ್ದವರಿಗೆ, ‘ಬರ್ಕೊ ನನ್ರಾಜಾ’ ಎನ್ನುವರು. ನಾಟಕದ ಸಂಭಾಷಣೆಯನ್ನು ಹೇಳುತ್ತ ಹೋಗುವರು. ಯಾವಾಗಲೋ ಮನಸ್ಸು ಎತ್ತಲೋ ತಿರುಗಿದಾಗ ನಾಟಕ ರಚನೆ ನಿಲ್ಲುವುದು. (ಕೈಲಾಸಂ ತಮ್ಮ ನಾಟಕ ಯಾವುದನ್ನೂ ತಾವು ಬರೆಯಲಿಲ್ಲ.) ಊಟ ಮಾಡಿದರೆ ಮಾಡಿದರು, ಇಲ್ಲದಿದ್ದರೆ ಇಲ್ಲ. ಸಂಜೆ ಮತ್ತೆ ಗೆಳೆಯರೊಡನೆ ಮನಸ್ಸು ಬಂದರೆ ಒಂದು ನಾಟಕವನ್ನೋ ಸಿನಿಮಾವನ್ನೊ ನೋಡುವರು. ಇಲ್ಲದಿದ್ದರೆ ಹರಟೆ-ರಾತ್ರಿ ಹನ್ನೆರಡು, ಒಂದು ಒಮ್ಮೊಮ್ಮೆ ಬೆಳಗಿನ ಜಾವ ನಾಲ್ಕೈದರವರೆಗೆ ಹರಟೆ.

ಒಮ್ಮೊಮ್ಮೆ ಯಾರಾದರೂ ಹೋಟೆಲಿನಿಂದ ಊಟ ತರುವರು. ಅಥವಾ, ಕೈಲಾಸಂ ಯಾರ ಮನೆಯಲ್ಲಾದರೂ ಇಳಿದುಕೊಂಡಿದ್ದರೆ ಮನೆಯವರು ಅವರ ಕೊಠಡಿಗೆ ಊಟ ತರುವರು. ‘ಇಟ್ಟುಬಿಟಿ’ ಎನ್ನುವರು ಕೈಲಾಸಂ. ಎಷ್ಟೋ ಬಾರಿ ಮರುದಿನ ನೋಡಿದಾಗ ಊಟ ಹಾಗೆಯೇ ಇರುವುದು. ಊಟ ಮಾಡಿದರೂ ತಿನ್ನುವುದು ಬಹು ಕಡಿಮೆ. ಒಂದೆರಡು ಚಪಾತಿ, ಇಷ್ಟು ಮೊಸರನ್ನ ಆದರೆ ಸಾಕು. ಕಾಫಿ, ಸಿಗರೇಟ್‌ ಎರಡಿದ್ದರೆ ಆಯಿತು. ಹರಿದ ಜಮಖಾನೆಯೇ ಹಾಸಿಗೆ. ಕೊಠಡಿ ಎಲ್ಲ ಧೂಳು, ಕೊಳಕು. ಯಾರಾದರೂ ‘ಹೀಗೇಕೆ?’ ಎಂದರೆ, ‘ಸಾಹಿತ್ಯ ಸೃಷ್ಟಿ ಮಾಡಬೇಕಾದರೆ ಹೀಗೆ ಚರಂಡಿಯ ಬಳಿಯೇ ಇರಬೇಕು, ಕುಳಿತು ಆಕಾಶವನ್ನ, ಸೂರ್ಯನನ್ನ, ಸುತ್ತ ಇರುವ ಜಗತ್ತನ್ನ ದಿಟ್ಟಿಸಬೇಕು’ ಎನ್ನುವರು.

ವಾಸ? ಎಲ್ಲಿ ಆದರೆ ಅಲ್ಲಿ. ಸ್ನೇಹಿತರ ಮನೆಯಲ್ಲಿ, ನೆಂಟರ ಮನೆಯಲ್ಲಿ, ಆಹ್ವಾನಿಸಿದವರು ಇಳಿಸಿದ ಕಡೆ. ಇದ್ದಕ್ಕಿದ್ದಂತೆ ಮದರಾಸಿಗೋ ಮುಂಬಯಿಗೋ ಚಿತ್ತೂರಿಗೋ ಮೈಸೂರಿಗೋ ಹೋಗಬೇಕು ಎನ್ನಿಸಿದರೆ-ಹೊರಟುಬಿಡುವರು. ಟಿಕೆಟಿಗೆ ಕೈಯಲ್ಲಿ ಹಣವಿಲ್ಲದಿದ್ದರೆ ಯಾರೋ ಪರಿಚಿತರು ಕೊಂಡುಕೊಡುವರು. ಕೆಲವರು ಸ್ನೇಹಿತರು, ವಿದ್ಯಾರ್ಥಿಗಳು ಆಹ್ವಾನಿಸಿದರೆಂದು ಒಂದು ವಾರ ಇರಲು ಲಹೋದ ಊರಿನಲ್ಲಿ ಏಳು ತಿಂಗಳಿದ್ದದ್ದುಂಟು. ಅಂತೂ ಯಾವಾಗ ಎಲ್ಲಿರುವರು ಎಂಬುದು ತಿಳಿಯದು. ೧೯೪೪ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರಿಸಿತು. ಅವರಿಗೆ ಈ ವಿಷಯ ಬರೆದ ಕಾಗದಗಳು ಒಂದೂ ಅವರಿಗೆ ತಲುಪಲಿಲ್ಲ. ಅವರು ಎಲ್ಲಿದ್ದರು ಎಂದು ಯಾರಿಗೂ ಖಚಿತವಾಗಿ ತಿಳಿಯದು. ಅವರಿಂದ ಉತ್ತರ ಬಾರದಿದ್ದುದರಿಂದ ಬೇರೊಬ್ಬ ಸಾಹಿತಿಗಳನ್ನು ಆರಿಸಿದ್ದಾಯಿತು. ಮರುವರ್ಷ (೧೯೪೫) ಕೈಲಾಸಂ ಮದರಾಸಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.

ಅರ್ಥ ಮಾಡಿಕೊಳ್ಳುವುದು ಕಷ್ಟ

ಕೈಲಾಸಂ ಅವರನ್ನು ಅರ್ಥ ಮಾಡಿಕೊಳ್ಳುವುದು ಅವರ ಹತ್ತಿರದ ಸ್ನೇಹಿತರಿಗೂ ಕಷ್ಟವಾಗಿತ್ತು. ಸಾಮಾನ್ಯವಾಗಿ ತಾಳ್ಮೆಯ, ಸ್ನೇಹದ ಮನುಷ್ಯ ಅವರು. ಆದರೆ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಸಿಟ್ಟಿಗೇಳುವರು. ಎಷ್ಟೋ ನಾಟಕಗಳನ್ನು ಬರೆಯಬೇಕೆಂದು ಯೋಚಿಸಿದರು; ಇಡೀ ನಾಟಕಗಳೇ ಅವರ ತಲೆಯಲ್ಲಿ ಇದ್ದುವೆಂದು ಕಾಣುತ್ತದೆ. ಆದರೆ ಅವರು ಅವನ್ನು ಬರೆಯಲೇ ಇಲ್ಲ. ಈಗ ಅವರದೆಂದು ನಮಗೆ ಲಭ್ಯವಾಗಿರುವ ನಾಟಕಗಳೂ ಅವರ ಸ್ನೇಹಿತರೋ ಅವರ ಪ್ರತಿಭೆಯನ್ನು ಮೆಚ್ಚಿಕೊಂಡ ಕಿರಿಯರೋ ಅವರು ಹೇಳಿದಾಗ ಬರೆದು ಕೊಂಡದ್ದರಿಂದ ಉಳಿದಿವೆ. ಕೆಲವು ನಾಟಕಗಳನ್ನು ಅವರು ತಮ್ಮ ಸ್ನೇಹಿತರೆದುರಿಗೆ ಹೇಳಿ ತೋರಿಸದ್ದರು; ಅವರ ಸ್ನೇಹಿತರು, ಅವರು ತೀರಿಕೊಂಡ ನಂತರ, ತಮ್ಮ ಟಿಪ್ಪಣಿಗಳಿಂದ ಅಥವಾ ನೆನಪಿನಿಂದ ಅವನ್ನು ಬರೆದರು. ಇಂಗ್ಲಿಷಿನಲ್ಲಿ ‘ಕೀಚಕ’, ‘ಕರ್ಣ’ ಈ ನಾಟಕಗಳು ರೂಪತಾಳಿದ್ದು ಹೀಗೆ.

ಏಕೆ ಹೀಗೆ?

ಎರಡು ಪ್ರಸಂಗಗಳು

ಅವರ ಸ್ನೇಹಿತರಿಂದ ತಿಳಿದು ಬರುವ ಒಂದೆರಡು ಪ್ರಸಂಗಗಳನ್ನು ಗಮನಿಸಿದರೆ ಸ್ವಲ್ಪಮಟ್ಟಿಗೆ ಉತ್ತರ ಸಿಕ್ಕಬಹುದು.

ಒಮ್ಮೆ ಅವರೂ ಒಬ್ಬ ಸ್ನೇಹಿತರೂ ಒಂದು ನಾಟಕವನ್ನು ನೋಡಿ ಹಿಂತಿರುಗುತ್ತಿದ್ದರು. ರಾತ್ರಿ ಎರಡು ಗಂಟೆ. ಇದ್ದಕ್ಕಿದಂತೆ ಕೈಲಾಸಂ, “ಈಗ ನಿಮಗೆ ನನ್ನ ‘ಕರ್ಣ’ ನಾಟಕ ಹೇಳುತ್ತೇನೆ” ಎಂದರು. ಡಿಸೆಂಬರ್ ತಿಂಗಳ ಕೊರೆತದಲ್ಲಿ ರಸ್ತೆಯಲ್ಲೆ ಒಂದೆರಡು ಗಂಟೆ ತಾವು ಬರೆಯಬೇಕೆಂದಿದ್ದ ‘ಕರ್ಣ’ ನಾಟಕದಿಂದ ಲೀಲಾಜಾಲವಾಗಿ ಭಾಗಗಳನ್ನು ಪಠಿಸಿಬಿಟ್ಟರು. ಮತ್ತೊಮ್ಮೆ ಒಬ್ಬ ಹಿರಿಯ ಸಾಹಿತಿಗಳ ಮನೆಯಲ್ಲಿ ಮಾತನಾಡುತ್ತ ಕುಳಿತಿದ್ದರು. ಇದ್ದಕ್ಕಿದ್ದಂತೆ ‘ಅಲ್ಲಿ ನೋಡಿ!’ ಎನ್ನುತ್ತ ಎದ್ದರು. ಅವರ ಕಣ್ಣಿನಿಂದ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ನಿಂತ ಹಾಗೆಯೇ, ದಶರಥನು ಸತ್ತ ನಂತರ ಅಯೋಧ್ಯೆಗೆ ಹಿಂದಿರುಗಿದ ಭರತನು ಎಲ್ಲ ದುಃಖಕ್ಕೆ ಕಾರಣಳಾದ ತನ್ನ ತಾಯಿ ಕೈಕೆಯಿಯನ್ನು ಕಾಣುವ ದೃಶ್ಯವನ್ನು ಹೇಳುತ್ತ ಹೋದರು.

ಅವರದೇ ಬೇರೆ ಜಗತ್ತು

ಎಂದರೆ, ದಿನ ಕಳೆದಂತೆ ಕೈಲಾಸಂ ಸುತ್ತಮುತ್ತಲಿನ ಜಗತ್ತನ್ನು ಮರೆತು ತಮ್ಮ ನಾಟಕಗಳ ಪಾತ್ರಗಳನ್ನೆ ಚಿಂತಿಸುತ್ತಿದ್ದರು. ಅದರಲ್ಲಿಯೂ, ಹಿಮಾಲಯ ಪರ್ವತದಂತಹ ಅದ್ಭುತ ವ್ಯಕ್ತಿಗಳನ್ನು-ರಾಮ, ಭೀಷ್ಮ, ಕೃಷ್ಣ, ಏಕಲವ್ಯ, ಕರ್ಣ ಇಂತಹವರನ್ನು ಕುರಿತೇ ಯೋಚಿಸುತ್ತಿದ್ದರು. ಅವರ ಇಂಗ್ಲಿಷ್‌ ನಾಟಕಗಳು ಈ ಪೌರಾಣಿಕ ವ್ಯಕ್ತಿಗಳನ್ನು ಕುರಿತವು. ಇಂತಹ ಧೀರರು, ಸಾರ್ಥಕವಾಗಿ ಬದುಕಲು ತ್ಯಾಗಗಳನ್ನು ಮಾಡಿದವರು ಇವರ ಜೀವನ ಹೇಗಾಯಿತು, ಇವರು ಎಷ್ಟು ಕಷ್ಟಪಟ್ಟರು, ಹಾಗಾದರೆ ಜೀವನದಲ್ಲಿ ಯಾವುದು ಮುಖ್ಯ? ಇಂತಹ ಪ್ರಶ್ನೆಗಳು ಅವರ ತಲೆಯ ತುಂಬ ತುಂಬಿದ್ದವು. ಭೀಷ್ಮ, ದ್ರೋಣ, ಏಕಲವ್ಯ, ಕರ್ಣ, ಕೃಷ್ಣ, ಭರತ ಇವರು ಅವರಿಗೆ, ನಮ್ಮ ಸ್ನೇಹಿತರು ನಮಗೆ ಎಷ್ಟು ಹತ್ತಿರದವರೋ ಅಷ್ಟೇ ಹತ್ತಿರವಾಗಿದ್ದರು. ತಮ್ಮ ಬಟ್ಟೆ ಬರೆ ಊಟ ಇವುಗಳ ಚಿಂತೆಗೆ ಅವರಿಗೆ ಅವಕಾಶವೆಲ್ಲಿ?

ಕೆಲಸ ಬಿಟ್ಟ ನಂತರ ಸುಮಾರು ೨೫ ವರ್ಷ ಕೈಲಾಸಂ ಈ ವಿಚಿತ್ರ ರೀತಿಯ ಬದುಕನ್ನು ನಡೆಸಿದರು. ೧೯೪೬ರ ನವೆಂಬರ್ ೨೩ರಂದು ಒಬ್ಬ ಸ್ನೇಹಿತರ ಮನೆಯಲ್ಲಿದ್ದರು. ರಾತ್ರಿ ಮಲಗಿದವರು ಬೆಳಗ್ಗೆ ಏಳಲಿಲ್ಲ.

ಬಹುಮುಖ ವ್ಯಕ್ತಿತ್ವ

ಕೈಲಾಸಂ ತುಂಬ ಗಂಭೀರ ಪ್ರಕರತಿಯವರು, ನಾಲ್ಕು ಜನರ ಜೊತೆ ಸೇರದೆ ಚಿಂತನೆಯಲ್ಲಿ ಮುಳುಗಿದ್ದರು ಎಂದು ಭಾವಿಸಿದರೆ ತಪ್ಪಾಗುತ್ತದೆ. ಅವರು ಇದ್ದ ಕಡೆ ಜನ ಮುತ್ತುತ್ತಿದ್ದರು. ಕಾರಣ ಗಂಟೆಗಟ್ಟಲೆ ತಾವೂ ನಗುತ್ತ ಜನರನ್ನು ನಗಿಸುತ್ತ ಜೊತೆಗೇ ಅವರು ಯೋಚಿಸುವಂತೆ ಮಾಡುತ್ತ, ಹೊತ್ತು ಕಳೆದದ್ದೆ ತಿಳಿಯದ ಹಾಗೆ ಮೋಡಿ ಮಾಡುತ್ತಿದ್ದರು. ಸಾವಿರಕ್ಕೂ ಮೀರಿದ ವಿದ್ಯಾರ್ಥಿಗಳ ಸಭೆಯಲ್ಲಿ, ‘ನಿಮಗೆ ಬೇಕಾದ ಪ್ರಶ್ನೆ ಕೇಳಿ’ ಎಂದು ಹೇಳಿ ಎರಡು ಗಂಟೆ ಕಾಲ ಬಂದ ಎಲ್ಲ ಬಗೆಯ ಪ್ರಶ್ನೆಗೆ ಸರಸರನೆ ಚುರುಕಿನ ಉತ್ತರಗಳನ್ನೆಸೆದು ಅವರನ್ನು ನಗಿಸಿ ಜಯಭೇರಿ ಬಾರಿಸುತ್ತಿದ್ದರು. ಸಾವಿರಾರು ಜನ ತುಂಬಿದ ಸಭೆಯಲ್ಲಿ ತಮ್ಮ ‘ದಿ ಬರ್ಡನ್‌’ ನಾಟಕವನ್ನು ತಾವು ಒಬ್ಬರೇ ಅಭಿನಯಿಸಿ ಪ್ರೇಕ್ಷಕರನ್ನು ಮೆಚ್ಚಿಕೆಯಿಂದ ಮೂಕರನ್ನಾಗಿ ಮಾಡಿದ್ದರು; ಒಂಬತ್ತು ಪಾತ್ರಗಳಿಗೂ ಧ್ವನಿ ಬದಲಾಯಿಸಿಕೊಂಡರು. ಅವರ ದೈಹಿಕ ಶಕ್ತಿ ಅಸಾಧಾರಣವಾಗಿತ್ತು. ಅವರಿಗೆ ಐವತ್ತೇಳು ವರ್ಷವಾಗಿದ್ದಾಗ ಚಳಿಗಾಲದಲ್ಲಿ ಬಾವಿಯಿಂದ ತಾವೇ ನೀರು ಸೇದಿಕೊಂಡು ತಲೆಯ ಮೇಲೆ ಸುರಿದುಕೊಂಡು ಸ್ನಾನ ಮಾಡಿದರಂತೆ. ಅವರ ಬುದ್ಧಿ ಅಷ್ಟೇ ತೀಕ್ಷ್ಣವಾಗಿತ್ತು. ಡಾಕ್ಟರ್ ರಾಧಾಕೃಷ್ಣನ್‌ ಅಂತಹವರು ಅವರ ಮಾತನ್ನು ಕೇಳಿ ಬೆರಗಾಗಿದ್ದರು. ಜೊತೆಗೆ ಅವರದು ಸರಳವಾದ, ಸ್ನೇಹದ, ಹಾಸ್ಯಪ್ರಿಯತೆಯ ಸ್ವಭಾವ. ಡಾಕ್ಟರ್ ಆಲ್‌ಬುಕರ್ಕ್ ಎಂಬಾಕೆ ಒಂದು ಆಸ್ಪತ್ರೆ ಕಟ್ಟಲು ಹಣ ಸಂಗ್ರಹ ಮಾಡಲು ತೀರ್ಮಾನಿಸಿದರು. ಅದಕ್ಕಾಗಿ ಒಂದು ವಿವಿಧ ವಿನೋದಾವಳಿ ಕಾರ್ಯಕ್ರಮವನ್ನು ಏರ್ಪಡಿಸಲು ಯೋಚಿಸಿ ಆಕೆ ಕೈಲಾಸಂ ಅವರಿಗೆ ಹೇಳಿ ಕಳುಹಿಸಿದರು. ಕೈಲಾಸಂ ಕಾರ್ಯಕ್ರಮದ ಹೊಣೆಯನ್ನೆಲ್ಲ ಹೊತ್ತು ಹತ್ತು ಕಡೆ ಓಡಾಡಿ ಕಲಾವಿದರನ್ನು ಸೇರಿಸಿ ಒಂದು ಸೊಗಸಾದ ಕಾರ್ಯಕ್ರಮವನ್ನು ಏರ್ಪಡಿಸಿ ಕೊಟ್ಟರು. ಪ್ರಸಿದ್ಧ ವಿದ್ವಾಂಸರುಗಳು, ಘಟಾನುಘಟಿ ಪತ್ರಿಕಾಕರ್ತರು, ವಿದ್ಯಾರ್ಥಿಗಳು-ಎಲ್ಲ ಅವರ ಸ್ನೇಹಿತರು, ಸಮೀಪವರ್ತಿಗಳು. ಅವರ ಸ್ವಭಾವ ಎಷ್ಟು ಸರಳ, ಹಾಸ್ಯ ಅವರಿಗೆ ಹೇಗೆ ರಕ್ತಗತ ಎಂಬುದಕ್ಕೆ ಒಂದು ಪ್ರಸಂಗವನ್ನು ಸ್ಮರಿಸಬಹುದು. ಒಂದು ದಿನ ರಾತ್ರಿ ಅವರೂ ಒಬ್ಬ ಗೆಳೆಯರೂ ಮನೆಗೆ ಹಿಂದಿರುಗುತ್ತಿದ್ದರು. ದಾರಿಯಲ್ಲಿ ಒಂದು ನಾಟಕ ಮಂದಿರ; ಅಲ್ಲಿ ನಾಟಕ ನಡೆಯುತ್ತಿತ್ತು. ನಾಟಕ ‘ರಾಮಾಂಜನೇಯ ಯುದ್ಧ’, ಆಡುತ್ತಿದ್ದುದು ಯಾವುದೋ ಒಂದು ಸಣ್ಣ ಕಂಪೆನಿ. ‘ನಾಟಕ ನೋಡೋಣ’ ಎಂದರು ಕೈಲಾಸಂ. ಜೊತೆಯಲ್ಲಿದ್ದವರು ‘ಯಾವುದೋ ಹೆಸರಿಲ್ಲದ ಕಂಪೆನಿಯ ಪ್ರದರ್ಶನ ಅದೂ ನಾಟಕ ಪ್ರಾರಂಭವಾಗಿ ಹೋಗಿದೆ’ ಎಂದರು. ‘ಚಿಂತೆ ಇಲ್ಲ,’ ಎಂದು ಕೈಲಾಸಂ ನಾಲ್ಕು ಆಣೆಗಳ (ಇಪ್ಪತ್ತೈದು ಪೈಸೆ) ಎರಡು ಟಿಕೆಟ್‌ ಕೊಂಡರು. ಎಂದರೆ ನೆಲದ ಮೇಲೆ ಕುಳಿತುಕೊಳ್ಳಬೇಕು. ಜೊತೆಯಲ್ಲಿದ್ದವರು, ಈಚಲ ಚಾಪೆ ಕೂಡ ಹಾಸಿರೊಲ್ಲ. ಅಲ್ಲೇ ಉಗುಳಿರುತ್ತಾರೆ, ಬೀಡಿ ತುಂಡುಗಳು ಬೇರೆ’ ಎಂದರು. ಕೈಲಾಸಂ, ‘ನಾಟಕ ಚೆನ್ನಾಗಿದ್ದರೆ ನಾಳೆ ನಾಲ್ಕು ರೂಪಾಯಿ ಕ್ಲಾಸಿಗೆ ಹೋಗೋಣ’ ಎನ್ನುತ್ತ ಒಳಕ್ಕೆ ನುಗ್ಗಿಯೇ ಬಿಟ್ಟರು. ಮಫ್ಲರನ್ನು ತಲೆಗೆ ಸುತ್ತಿ, ಕೋಟನ್ನು ನೆಲದ ಮೇಲೆ ಹಾಸಿ ಕುಳಿತೇ ಬಿಟ್ಟರು. ಅವರು ಕುಳಿತ ಸ್ಥಳದಿಂದ ರಂಗಭೂಮಿ ಸರಿಯಾಗಿ ಕಾಣುತ್ತಿರಲಿಲ್ಲ. ಕಂಬಳಿ ಹೊದ್ದ ಮನುಷ್ಯನೊಬ್ಬ ನಿಂತುಕೊಂಡು ನಾಟಕ ನೋಡುತ್ತಿದ್ದ. ಅವನಿಂದ ಹಿಂದೆ ಕುಳಿತವರಿಗೆಲ್ಲ ತೊಂದರೆ. ಹಲವರು ಅವನಿಗೆ ಒಳ್ಳೆಯ ಮಾತಿನಲ್ಲಿ ಹೇಳಿದರು, ಕೆಲವರು ಕೋಪದಿಂದ ಹೇಳಿದರು, ಕೂಗಿದರು, ಉಹುಂ, ಪ್ರಯೋಜನವಾಗಲಿಲ್ಲ. ಅವನು ನಿಂತೇ ಇದ್ದ. ಅವನ ಕೆಟ್ಟ ಹಠವನ್ನು ನೋಡಿ ಕೈಲಾಸಂಗೆ ರೇಗಿತು. “ಕೂತ್ಕೊಳ್ಲೇಲೇ ಕಂಬ್ಳೀವುಳ” ಎಂದು ಒಂದು ಬಾರಿ ಆ ಕಂಬಳಿ ಹೊದ್ದವನಿಗೆ ಕೂಗಿ ಹೇಳಿದರು. ಅವನು ಥಟ್ಟನೆ ಕುಳಿತು ಬಿಟ್ಟ. ಎಲ್ಲರೂ ನಕ್ಕಿದ್ದೇ ನಕ್ಕಿದ್ದು. ಕೈಲಾಸಂ ಆ ಬಡಜನರ ಮಧ್ಯೆ ನೆಲದ ಮೇಲೆ ಕುಳಿತು, ಅವರ ಜೊತೆಗೆ ನಕ್ಕು ಖುಷಿಯಾಗಿ ಹೊರಬಂದರು.

ಕೈಲಾಸಂ ಜನಪ್ರಿಯ ನಾಟಕಕಾರರು. ಇಪ್ಪತ್ತೈದು-ಮೂವತ್ತು ವರ್ಷಗಳ ಕಾಲ ಕನ್ನಡ ನಾಡಿನ ಮೂಲೆ ಮೂಲೆಯಲ್ಲಿ ಖ್ಯಾತ ನಟರು, ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರು,ಶಾಲೆಗಳ ಅಧ್ಯಾಪಕರು, ವಿದ್ಯಾರ್ಥಿಗಳು ಅವರ ನಾಟಕಗಳನ್ನು ಉತ್ಸಾಹದಿಂದ ಆಡಿದರು. ಕೈಲಾಸಂ ಸ್ವತಃ ನುರಿತ ನಟರು, ಊಟ, ತಿಂಡಿ, ಕೀರ್ತಿ, ಹಣಗಳ ಚಿಂತೆ ಇಲ್ಲದೆ ತಾವೂ ನಕ್ಕು ಇತರರನ್ನು ನಗಿಸಿ, ಜೊತೆಗೆ ಸಮಾಜದ ಅನ್ಯಾಯಗಳತ್ತ ಬೊಟ್ಟುಮಾಡಿ ತೋರಿಸಿ, ಜನ ಅವನ್ನು ಕುರಿತು ಯೋಚಿಸುವಂತೆ ಮಾಡಿ, ಕಷ್ಟಪಡುವವರನ್ನು ಕಂಡು ಕರಗುವಂತೆ ಮಾಡಿ, ಒಂದು ರಾತ್ರಿ ಸದ್ದಿಲ್ಲದೆ ಈ ಲೋಕ ಬಿಟ್ಟು ನಡೆದರು.

ನಾಟಕ ಕಂಪೆನಿಗಳ  ಬವಣೆ

ಕೈಲಾಸಂ ನಾಟಕಗಳನ್ನು ಬರೆಯಲು ಪ್ರಾರಂಭಿಸಿದಾಗ ಕನ್ನಡ ನಾಟಕ ಕಷ್ಟದ ಸ್ಥಿತಿಯಲ್ಲಿತ್ತು. ನಾಟಕಗಳನ್ನು ಅಭಿನಯಿಸುತ್ತಿದ್ದವರು ಅದರಿಂದಲೇ ಜೀವನ ನಡೆಸುತ್ತಿದ್ದ ನಟರ ಕಂಪೆನಿಗಳು-ಎಂದರೆ ವೃತ್ತಿನಿರತ ಕಂಪೆನಿಗಳು. ವಿದ್ಯಾಭ್ಯಾಸ ಬೆಳೆಯುತ್ತಿತ್ತು. ಇಂಗ್ಲಿಷಿನಿಂದ ಹಲವಾರು ನಾಟಕಗಳ ಭಾಷಾಂತರವಾಗಿತ್ತು. ಪಟ್ಟಣಗಳಲ್ಲಿ ಜನಸಂಖ್ಯೆ ಹೆಚ್ಚುತ್ತಿತ್ತು. ಈ ಎಲ್ಲ ಕಾರಣಗಳಿಂದ ಜನ ಹೊಸ ಬಗೆಯ ನಾಟಕಗಳು ಬೇಕೆಂದು ಅಪೇಕ್ಷಿಸುತ್ತಿದ್ದರು. ಕಂಪೆನಿಗಳವರು ಬಹುಮಟ್ಟಿಗೆ ಆಡುತ್ತಿದ್ದುದು ಪೌರಾಣಿಕ ನಾಟಕಗಳನ್ನು-ಶಾಕುಂತಲಾ, ಸೀತಾಸ್ವಯಂವರ, ರುಕ್ಮಿಣೀಸ್ವಯಂವರ ಇಂತಹವು; ಅಥವಾ ಸಂತರನ್ನು ಕುರಿತವು-ಭಕ್ತ ಕಬೀರ. ಭಕ್ತ ತುಕಾರಾಮ ಇಂತಹವು. ಈ ನಾಟಕಗಳನ್ನು ಹಲವು ಕಂಪೆನಿಗಳವರು ಚೆನ್ನಾಗಿ ಶ್ರದ್ಧೆಯಿಂದ ಆಡುತ್ತಿದ್ದರು. ಆದರೆ ಜನಕ್ಕೆ ಇಷ್ಟೇ ಸಾಲದು. ಹೊಸ ಬಗೆಯ ನಾಟಕಗಳು ಬೇಕೆಂದು ಅವರು ಅಪೇಕ್ಷಿಸುತ್ತಿದ್ದರು. ಕಂಪೆನಿಗಳಲ್ಲಿ ಅನೇಕ ಜನ ನಟನಟಿಯರಿರುತ್ತಿದ್ದರು. ಅವರೆಲ್ಲರ ಜೀವನ ನಾಟಕಗಳ ಪ್ರದರ್ಶನಗಳಿಂದಲೇ ನಡೆಯಬೇಕಾಗಿತ್ತು. ಕಂಪೆನಿಯ ಮಾಲಿಕರಿಗೂ ಅವರಿಗೂ ಜಗಳ, ಅವರವರೆಲ್ಲೆ ಜಗಳ. ಒಬ್ಬ ಮುಖ್ಯ ನಟ ಅಥವಾ ನಟಿ ಕಂಪೆನಿ ಬಿಟ್ಟರೆ ಇಡೀ ಕಂಪೆನಿಗೆ ಕಷ್ಟ. ಮಾಲೀಕರು ತೀರಿಹೋದರೆ ಎಲ್ಲರೂ ನಡುನೀರಿನಲ್ಲಿ. ಆಗಿನ ನಾಟಕಗಳಲ್ಲಿ ಸಂಗೀತ ಸಮೃದ್ಧವಾಗಿರುತ್ತಿತ್ತು. ಆದುದರಿಂದ ಎಲ್ಲ ಪಾತ್ರಗಳಿಗೂ ಸಂಗೀತ ಬರುವವರನ್ನೆ ಆರಿಸಬೇಕಾಗಿತ್ತು. ಎಷ್ಟೋ ಬಾರಿ ನಟನಟಿಯರಿಗೆ ಎರಡು ಹೊತ್ತು ಊಟ ಸಿಕ್ಕುವುದೇ ಕಷ್ಟವಾಗುತ್ತಿತ್ತು. ನಾಟಕಮಂದಿರದ ಬಾಡಿಗೆ ಕೊಡಲಿಲ್ಲ ಎಂದು ಮಂದಿರದ ಮಾಲೀಕರು ಕಂಪೆನಿಯ ಸಾಮಾನುಗಳನ್ನೆಲ್ಲ ಕಿತ್ತಿಟ್ಟುಕೊಳ್ಳುತ್ತಿದ್ದುದೂ ಉಂಟು. ಇದೇ ಕಾಲಕ್ಕೆ ಚಲನಚಿತ್ರಗಳೂ ಬಂದವು. ನಾಟಕಗಳನ್ನು ನೋಡುತ್ತಿದ್ದವರಿಗೆ ಇದೊಂದು ಹೊಸ ಸೊಗಸಾದ ಆಕರ್ಷಣೆ.

ಕನ್ನಡ ನಾಟಕ ಉಳಿಯುವುದು ಹೇಗೆ ಎನ್ನುವ ಸ್ಥಿತಿ.

ಟೊಳ್ಳುಗಟ್ಟಿ

ಇಂತಹ ಸಮಯದಲ್ಲಿ ಕೈಲಾಸಂ ಕನ್ನಡ ನಾಟಕ ಪ್ರಪಂಚಕ್ಕೆ ಕಾಲಿಟ್ಟರು. ಅವರಿಂದ ಆಧುನಿಕ ಕನ್ನಡ ನಾಟಕ ಪ್ರಾರಂಭವಾಯಿತು. ‘ಟೊಳ್ಳು-ಗಟ್ಟಿ’ ಆಧುನಿಕ ಕನ್ನಡ ನಾಟಕ ಪ್ರಾರಂಭವಾಯಿತು. ‘ಟೊಳ್ಳು-ಗಟ್ಟಿ’ ಆಧುನಿಕ ಕನ್ನಡ ನಾಟಕ ಪರದೆಯನ್ನು ಎತ್ತಿತು ಎನ್ನಬೇಕು. ನಾಟಕ ಪ್ರಪಂಚದಲ್ಲಿ ಅವರು ಕ್ರಾಂತಿಯನ್ನೆ ಮಾಡಿದರು.

ಅವರ ಮೊದಲನೆಯ ನಾಟಕ ‘ಟೊಳ್ಳು-ಗಟ್ಟಿ’ಯನ್ನೆ ನೋಡೋಣ. ಅದರ ನಾಯಕ ಶ್ರೀರಾಮನಲ್ಲ, ದುಷ್ಯಂತನಲ್ಲ, ಒಬ್ಬ ಸಂತನೂ ಅಲ್ಲ, ರಾಜನಲ್ಲ. ಆಗ ತಾನೇ ಯೌವನಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿ-ಅದೂ ಪರೀಕ್ಷೆಗಳಲ್ಲಿ ಫೇಲಾಗುತ್ತಿರುವ ವಿದ್ಯಾರ್ಥಿ! ಕಥೆ ಮದುವೆಯನ್ನು ಕುರಿತದ್ದಲ್ಲ, ಪಟ್ಟಾಭಿಷೇಕ ತೋರಿಸುವುದಲ್ಲ, ಧೀರರ ಹೋರಾಟದ ಚಿತ್ರಣವಲ್ಲ, ಮಗ ತಂದೆಯ ಬಳಿ, ಸೊಸೆ ಗಂಡನ ಸೋದರತ್ತೆಯ ಬಳಿ ಬೈಸಿಕೊಳ್ಳುವುದು ಮನೆಗೆ ಬೆಂಕಿ ಬೀಳುವುದು-ಇಷ್ಟು ನಡೆಯುತ್ತದೆ, ಅಷ್ಟೆ. ನಮ್ಮ ದೇಶದಲ್ಲಿ ನೂರಾರು ವರ್ಷಗಳಿಂದ ಗಂಡನನ್ನು ಕಳೆದುಕೊಂಡವಳನ್ನು ನೋಡುವುದೇ ಅಮಂಗಳ ಎಂಬ ಮೂರ್ಖ ಭಾವನೆ. ಕೈಲಾಸಂ ವಿಧವೆ ನಾಗತ್ತೆಯನ್ನು ರಂಗಭೂಮಿಯ ಮೇಲೆ ತಂದರು. ತಾವೇ ಆ ಪಾತ್ರವನ್ನು ಮಾಡಿದರು. ಅವಳು ಮೊದಲ ಬಾರಿ ರಂಗಭೂಮಿಯ ಮೇಲೆ ಕಾಣಿಸಿಕೊಳ್ಳುವ ರೀತಿಯೇ ತಮಾಷೆಯಾಗಿದೆ. ಅವಳು ಹಿಂದಿನ ಕಾಲದವಳು. ಮೈಗೆ ಸೋಪು ಹಾಕುವುದೆಂದರೆ ಅವಳ ದೃಷ್ಟಿಯಲ್ಲಿ ಮಹಾಪರಾಧ. ಪುಟ್ಟು ಹೆಂಡತಿ ಪಾತು ಸಾಬೂನನ್ನು ಉಪಯೋಗಿಸಿ ಬಚ್ಚಲುಮನೆಯಲ್ಲಿ ಬಿಟ್ಟು ಬಂದಿದ್ದಾಳೆ. ನಾಗತ್ತೆ ಕಣ್ಣಿಗೆ ಅದು ಕಂಡಿದೆ. ಅವಳು ಸಾಬೂನಿನ ಬಿಲ್ಲೆಯನ್ನು ಒಂದು ಕೊಳ್ಳಿಯ ಕೊನೆಗೆ ಸಿಕ್ಕಿಸಿಕೊಂಡು ಅದನ್ನು ಕೈಯಲ್ಲಿ ಹಿಡಿದುಕೊಂಡು ರಂಗಭೂಮಿಯ ಮೇಲೆ ಬರುತ್ತಾಳೆ. “ಬ್ರಾಹ್ಮಣರ ಮನೇಲಿ ಇದೇನೇ ಅನ್ಯಾಯ? ಸಾಬೂನ್ಹಾಕಿ ತಿಕ್ಕೊಂಡ್ರೇನ್‌ ಸುಣ್ಣ ಬಳದ್ಹಾಗೆ ಬೆಳ್ಳಗಾಗತ್ಮೈ ಅಂತ ತಿಳಿದುಕೊಂಡಿದ್ದೀರಾ?” ಎಂದು ಗುಡುಗುತ್ತಾಳೆ. “ಯಾರದ್ದ್ರೇ ಈ ಸಾಬೂನು?” ಎಂದು ಕೇಳುತ್ತಾಳೆ. ಪಾತು, “ನಂದೂ ಅಂತ್ಕಾಣುತ್ತೆ” ಎನ್ನುತ್ತಾಳೆ. ನಾಗತ್ತೆ ಅವಳನ್ನು ಅಣಕಿಸುತ್ತಾ, “ನಂದೂಂತ್ಕಾಣುತ್ತೆ. ಅರ್ಷ್ಣ ಹಚ್ಚೊಳ್ಳೊಕೇನ್ಕೇಡೆ ನಿಂಗೆ?” ಎಂದು ಅಬ್ಬರಿಸುತ್ತಾಳೆ. ಮಾಧುವಿನ ಹೆಂಡತಿ ಸಾತು ಅವನ ಹಾಗೆಯೇ ಸೌಮ್ಯ, ಮೂಕಾಗಿ ದುಡಿಯುವವಳು. ಅವಳು ಮದುವೆಯಾಗಿ ಅತ್ತೆ ಮನೆಗೆ ಬಂದ ಮೂರು ತಿಂಗಳಿಗೆ ನಾಗತ್ತೆ ಗಂಡನನ್ನು ಕಳೆದುಕೊಂಡಳು. ಅವಳನ್ನು ಕಂಡರೆ ನಾಗತ್ತೆ ಬಯ್ಗಳ ಮಳೆ ಸುರಿಸುತ್ತಾಳೆ. “ಏನೇ! ನಿನ್ಮನೆಗೆ ಬಂದ ಸುಲಗ್ನದ್ಛಲ ಕೇಳಿದ್ಯೇನೇ! ನಿನ್ಗಂಡನ್ಗೆ ಫೇಲು. ಇನ್ನವನ್ಹಣೇಬರಹ… ಪೋಲಿ ತಿರುಗೋದು-ಪರ್ಚಾಕೆ ಮಾಡೋದು ಅಷ್ಟೇ!” ಎನ್ನುತ್ತಾಳೆ. ಅನಂತರ ಅಣ್ಣನ ಜೊತೆಗೆ ಮಾತಾನಾಡುವಾಗಲೂ ಇಬ್ಬರು ಸೊಸೆಯರನ್ನೂ ಆಕ್ಷೇಪಿಸುತ್ತಾಳೆ. ಸಾತುವಿನಿಂದಲೇ ತನಗೆ ವೈಧವ್ಯ ಬಂದಿತು ಎನ್ನುತ್ತಾಳೆ. ‘ಈಗ್ಮಾಧೂ ಹೆಂಡ್ತೀನ ಮನೇಲಿಟ್ಕೊಂಡು ಏನು ಪ್ರಯೋಜನ ಅಣ್ಣ?’ ಎಂದು ಕೇಳುತ್ತಾಳೆ. ನಮಗೆ ನಾಗತ್ತೆಯನ್ನು ಮೊದಲು ಕಂಡಾಗ ನಗು ಬರುತ್ತದೆ. ಅನ್ಯಾಯವಾಗಿ ಅವಳು ಸಾತುವನ್ನು ಬಯ್ಯುವುದನ್ನು ಕೇಳಿದಾಗ ಕೋಪಬರುತ್ತದೆ. ಮುಂದೆ ಈ ಸಂಸಾರದ ಕತೆಯನ್ನು ಬೆಳಸಿ ಕೈಲಾಸಂ ‘ಸಾತು ತೌರ್ಮನೆ’ ಎಂಬ ನಾಟಕ ಬರೆದರು. ಅದರಲ್ಲಿ ಸಾತು ತಾಯಿ ನರಸಮ್ಮನ ಮುಂದೆ, ಅತ್ತೆ ಮನೆಯಲ್ಲಿ ನಾಗತ್ತೆ ಕೊಡುವ ಹಿಂಸೆಯನ್ನು ಪ್ರಸ್ತಾಪಿಸಿದಾಗ ನರಸಮ್ಮ ಹೀಗೆನ್ನುತ್ತಾಳೆ.

“ಸಾತೂ! ಒಂದು ಮಾತು ಹೇಳ್ತೇನೆ…. ಸಾಯೋವರಿಗೂ ಮರೀಬೇಡಾ!.. ಲೋಕದಲ್ಲಿ ಕಷ್ಟಪಟ್ಟು ನರಳೋವ್‌ರು ದೇವರಿಗೆ ಸಮಾನ…. ನಮ್ಮ ಕಣ್ಣಿಗೆ ದೇವರಿಗಿಂತಲೂ ಜಾಸ್ತಿ. ಈಗ್ನೋಡು! ಈ ಕೂಸಿಗೆ ಸ್ವಲ್ಪ ಮೈ ಬೆಚ್ಚಗಾಯಿತು ಅಂದ್ರೆ ನನ್ನ ಗುಂಡಿ ಬಿರಿದ ಹಾಗಾಗುತ್ತೆ…. ಇಷ್ಟು ಮಕ್ಕಳು ಇದ್ರೂ ದೇವರ ದಯದಿಂದ ಮನೆ ಬಾಗಿಲು ಅಂಬೋದನ್ನ ಅನುಭವಿಸ್ತಿದ್ರೂ ಸ್ವಲ್ಪ ಹೆಚ್ಚು ಕಡಿಮೆ ಆಗತ್ಲೂನೂವೆ ನನಗೆ ಇಷ್ಟು ಯಾತನೆ ಆಗುತ್ತಲ್ಲಾ… ಈಕೆ ಅಂಥಾ ಹೆಂಗಸರು ಪಾಪ! ಕೈ ಹಿಡಿದವನನ್ನು ಕಳಕೊಂಡು, ತನ್ನ ಹಣೆಯಲ್ಲಿ ಬರೆಯದ ಸಂಸಾರದ ಸುಖಾನ ಸುತ್ತಮುತ್ತಲೂ ಇರೋರು ಅನುಭವಿಸೋದ್ನೂ ತನಗೆ ಮಕ್ಕಳಿಲ್ಲದ್ದಲ್ಲದೆ ಇತರರು ಮಕ್ಕಳನ್ನು ಹೆತ್ತು ಸಾಕೋ ಸುಖಾನೂ ನೋಡೂತ್ಲೂ ಇದಾರಲ್ಲಾ… ಇವರಿಗೆ ಹುಚ್ಚು ಹಿಡೀದೆ ಇರೋದು ಆಶ್ಚರ್ಯ!… ತನ್ನ ಭಾಗ್ಯಾನ ಕಳಕೊಂಡ ಯಾತನೇಲಿ ಅಲ್ಪಸ್ವಲ್ಪ ರೇಗಿದಾಕ್ಷಣವೇ, ನಾವು ಮನಸ್ಸಿಗೆ ತಂದ್ಕೋಳೋದೆ!”

ಹೀಗೆ ಕೈಲಾಸಂ ನಾವು ದಿನನಿತ್ಯ ಕಾಣುವ ಜನರನ್ನೆ ಹೊಸ ರೀತಿಯಿಂದ ಕಾಣುವಂತೆ ಮಾಡುತ್ತಾರೆ, ಅವರ ವಿಷಯ ಯೋಚಿಸುವಂತೆ ಮಾಡುತ್ತಾರೆ, ಅವರ ಕಷ್ಟ, ನೋವುಗಳನ್ನು ಗುರುತಿಸುವಂತೆ ಮನಸ್ಸಿನ ಕಣ್ಣನ್ನು ತೆರೆಸುತ್ತಾರೆ. ಮತ್ತೆ ಪ್ರಶ್ನೆ ಕೇಳಿಸುತ್ತಾರೆ: ‘ನಿಜವಾಗಿ ಮನುಷ್ಯರಲ್ಲಿ ಯಾರು ಟೊಳ್ಳು, ಯಾರು ಗಟ್ಟಿ?’

ಬಂಡ್ವಾಳ್ವಿಲ್ಲದ ಬಡಾಯಿ, ಹೋಂರೂಲು

ಕೈಲಾಸಂ ಮನುಷ್ಯನ ಒಣಜಂಬವನ್ನು ಬಯಲಿಗೆಳೆಯುವ ಹಲವಾರು ನಾಟಕಗಳನ್ನು ಬರೆದರು. ‘ಬಂಡ್ವಾಳ್ವಿಲ್ಲದ ಬಡಾಯಿ’ ಅವರ ಒಂದು ಪ್ರಸಿದ್ಧ ನಾಟಕ. ಅಹೋಬ್ಲು ಒಬ್ಬ ವಕೀಲ. ಅವನಿಗೆ ಕಕ್ಷಿಗಾರರೇ ಇಲ್ಲ. ಆದರೆ ಎಲ್ಲರೂ ತಾನೊಬ್ಬ ಶ್ರೇಷ್ಠ ವಕೀಲ ತನಗೆ ಬಿಡುವೇ ಇಲ್ಲ ಎಂದು ಬಾವಿಸಬೇಕು ಎಂದು ಅವನ ಬಯಕೆ. ಮನೆಯ ಜವಾನ ಬೋರ, ತನ್ನಲ್ಲಿ ವೃತ್ತಿ ಕಲಿಯಲು ಬಂದ ಬಾಳು ಯಾರಿಗೂ ಸಂಬಳ ಕೊಟ್ಟಿಲ್ಲ. ಆದರೆ ಅವನ ಬಡಾಯಿಯೇ ಬಡಾಯಿ. ತನ್ನ ಮಾತಿನ ಚಮತ್ಕಾರದಿಂದಲೇ ಎಲ್ಲರನ್ನೂ ಮರುಳುಗೊಳಿಸಲು ಯತ್ನಿಸುತ್ತಾನೆ. ಹಳ್ಳಿಗ ಕೆಂಪೇಗೌಡ ಒಂದು ‘ಕೇಸು’ ತಂದರೆ ಅವನಿಗೆ ಮನೆಯ ಸೌದೆ ಒಡೆಯುವ ಕೆಲಸ ಹೊರಿಸುತ್ತಾನೆ. ಅಡಿಗೆಯಾತ ಒಬ್ಬ ಬಮದರೆ ಅವನಿಗೆ ಅಡಿಗೆಯ ಕೆಲಸ ಹೂರಿಸುತ್ತಾನೆ. ಮನೆಗೆ ಬಂದ ಸ್ನೇಹಿತರಿಗೆ, ಆತ ಒಬ್ಬ ಶ್ರೀಮಂತ ಜಮೀನ್ದಾರ ಯಾರಿಗೂ ಗುರುತು ಸಿಕ್ಕದಿರಲಿ ಅಂತ ಅಡಿಗೆಯವನ ವೇಷದಲ್ಲಿ ಬಂದಿದ್ದಾನೆ ಎಂದು ಹೇಳುತ್ತಾನೆ. ನಾಟಕದ ಕೊನೆಯಲ್ಲಿ ಯಾವಾತ ಹಳ್ಳಿಯ ಗುಗ್ಗು ಎಂದು ಅಹೋಬ್ಲು ಎಂದುಕೊಂಡಿದ್ದನೊ ಅದೇ ಕೆಂಪೇಗೌಡ ಅಹೋಬ್ಲುವಿನ ಹೆಂಡತಿಯ ಸೀರೆಗಳು, ಮನೆಯಲ್ಲಿದ್ದ ಹಣದ ಪೆಟ್ಟಿಗೆ ಎಲ್ಲವನ್ನೂ ಕಳ್ಳತನ ಮಾಡಿ ಮಾಯವಾಗುತ್ತಾನೆ. ಅವನು ತಂದ ಕಡತದಲ್ಲಿ ಅವನ ವಿಳಾಸವಿದೆ, ಊರಿನಲ್ಲೆಲ್ಲ ಅತ್ಯಂತ ಬುದ್ಧಿವಂತನಾದ ತನ್ನನ್ನು ಈ ಹಳ್ಳಿಗೆಮಾರ ಮೋಸಮಾಡಬಲ್ಲನೆ ಎಂದು ಬಡಾಯಿ ಕೊಚ್ಚುತ್ತ ಅಹೋಬ್ಲು ಕೆಂಪೇಗೌಡ ತಂದ ಕಡತವನ್ನು ಬಿಚ್ಚಿದರೆ ಆದರೆ ತುಂಬ ಬರೀ ಖಾಲಿ ಕಾಗದ! ‘ಹೋಂರೂಲು’ ನಾಟಕದಲ್ಲಿ ರಾಮಣ್ಣ ಇತರರನ್ನು ಹಾಸ್ಯ ಮಾಡುತ್ತಾನೆ. “ಹಯ್ಯೋ… ಸಿಂಮ್ಲಾದಲ್ಲಿ ಸ್ವರಾಜ್ಯ ಸ್ವರಾಜ್ಯಾಂತ ಚೀತ್ಕಾರ ಮಾಡೋ ಸಿಂಹಗಳೂ, ಮತ್ತೂರ್ಗೆ ರೈಲು ಹತ್ತತ್ಲೂನೂವೇ ಹುಲಿಗ್ಳೂ… ತಮ್ಮೂರು ತಾವು ಸೇರತ್ಲೂನೂವೇ ತೋಳುಗಳೂ ತಮ್ಕೇರಿಗೆ ಕಾಲು ಹಾಕೋವಾಗ ಕತ್ತೆಗ್ಳೂ… ಇನ್ನು ತಮ್ಮ ಬೀದಿಗೆ ಬರತ್ಲೂನೂವೇ ಬೆಕ್ಕುಗಳೂ ಆಗಿ, ಇನ್ನು ತಮ್ಮ ಮನೆಹೊಸಲು ದಾಟತ್ಲೂನೂವೇ ಮನೆ ಆಕೆಗೆ ಬೆದರ್ಕೂಂಡು … ಮೂಲೇಲಿ ಮುದರ್ಕೊಂಡು.. ಮೂತೀ ಮುಚ್ಕೊಳ್ಳೋ ಮೂಗಿಲಿಗಳ್ರಾ!” ಎಂದು. ಆದರೆ ಅವನ ಮನೆಯಲ್ಲಿ ಅವನ ಹೆಂಡತಿ ಅವನನ್ನು ಬೆಕ್ಕು ಇಲಿಯನ್ನು ಆಡಿಸುವ ಹಾಗೆ ಆಡಿಸುತ್ತಾಳೆ. ಹೀಗೆ ಹಲವು ನಾಟಕಗಳಲ್ಲಿ ಕೈಲಾಸಂ ಬಂಡವಾಳವಿಲ್ಲದೆ ಬಡಾಯಿ ಮಾಡುವವರನ್ನು ಕೊಚ್ಚಿ ಹಾಕುತ್ತಾರೆ.

ಪೋಲೀ ಕಿಟ್ಟೀ

ಕೈಲಾಸಂ ಬರೆದ ಒಂದು ಸೊಗಸಾದ ನಾಟಕ ‘ಪೋಲೀ ಕಿಟ್ಟಿ’. ಕಿಟ್ಟಿಗೆ ತಾಯಿಯಿಲ್ಲ. ಬಡ ಹುಡುಗ. ಆದರೆ ಗಟ್ಟಿ ಮೈ. ಅವನೆಂದರೆ ಓರಗೆಯ ಹುಡುಗರಿಗೆ ನಡುಕ. ಅವರನ್ನು ಹೆದರಿಸಿ ಬೀಳಿಸಿ ಕೈ ತಿರುಚಿ ಅವರ ಜೇಬಿನಲ್ಲಿದ್ದ ತಿಂಡಿಯನ್ನು ವಸೂಲು ಮಾಡಿಕೊಳ್ಳುತ್ತಾನೆ. ಶುದ್ಧ ಒರಟನಂತೆ ಕಾಣುವ ಇವನು ಇತರರಿಗೆ ಪೋಲಿ, ಫಟಿಂಗ, ಪುಂಡ ಎಂದೇ ಕಾಣುತ್ತಾನೆ. ಇತರ ಹುಡುಗರು ಇವನನ್ನು ಪಳಗಿಸಲು ಒಂದೇ ದಾರಿ ಎಂದು, ಸ್ಕೌಟ್‌ ರ‍್ಯಾಲಿಗಳಲ್ಲಿ ದೂದ್‌ಪೇಡ, ಹಲ್ವ ಕೊಡುತ್ತಾರೆ ಎಂದು ಆಸೆ ತೋರಿಸಿ ಸ್ಕೌಟ್‌ ಬ್ರಿಗೇಡಿಗೆ ಸೇರಿಸುತ್ತಾರೆ. ಇತರರಿಗೆ ಸಹಾಯ ಮಾಡುವುದನ್ನು ಹೇಳಿಕೊಡುವುದು ಸ್ಕೌಟ್‌ ವ್ಯವಸ್ಥೆಯ ಗುರಿ. ಪೋಲಿ, ಫಟಿಂಗ, ಪುಂಡ ಎಂದು ಕಾಣುವ ಕಿಟ್ಟಿ ಹುಟ್ಟು ಸ್ಕೌಟ್‌. ಬಡ ಮುದುಕ ಕಟ್ಟಿಗೆ ಹೊರುತ್ತಿದ್ದರೆ ನೋಡಲಾರ, ಅವನ ಹೊರೆಯನ್ನು ತಾನು ಹೊರುತ್ತಾನೆ. ಜೊತೆಯ ಹುಡುಗನೊಬ್ಬ ‘ನಾವೂ ನಿಮ್‌ ಜಾತಿ ಕಣೋ… ಬ್ರಾಹ್ಮಣ್ರು’ ಎಂದರೆ ಇನ್ನೂ ಹೆಚ್ಚು ವಿದ್ಯಾಭ್ಯಾಸವಿಲ್ಲದೆ ಒರಟ, ಫಟಿಂಗ, ಎನ್ನಿಸಿಕೊಂಡ ಎಳೆಯ ಕಿಟ್ಟಿ ವಿವೇಕದ ಮಾತುಗಳನ್ನೇ ಆಡುತ್ತಾನೆ. “ಈಗ ಸದ್ಯ ಇರೋ ಜಾತಿಗಳೆರಡೇ ಎರಡು… ನಾವ್‌ನಾವೆ ಏರ್ಪಡಿಸಿಕೊಂಡಿದ್ದು… ದುಡ್ಡಿರೋವ್ರು…. ದುಡ್ಡಿಲ್ದೋರು ಅಂತ.” ಒಂದು ದಿನ ಮನೆಗೆ ಬರುತ್ತಾ ಇರುವಾಗ ದಾರಿಯಲ್ಲಿ ಒಂದು ಮನೆಗೆ ಬೆಂಕಿ ಬಿದ್ದಿರುತ್ತದೆ. ಕಿಟ್ಟೀ ಸ್ನೇಹಿತ ಮಗು ಒಳಕ್ಕೆ ನುಗ್ಗಿ ಮನೆಯಲ್ಲಿದ್ದವರನ್ನು ಪಾರು ಮಾಡುತ್ತಾನೆ. ಒಂದು ಎಳೆಯ ಕೂಸು ಒಳಗೆ ಸಿಕ್ಕಿಕೊಂಡಿದೆ. ಅದನ್ನು ಹೊರಕ್ಕೆ ತರುತ್ತಾನೆ. ಒಳಗಿರುವ ಹಣದ ಪೆಟ್ಟಿಗೆಯನ್ನು ರಕ್ಷಿಸಲು ಮತ್ತೆ ಬೆಂಕಿ ಹತ್ತಿದ ಮನೆಗೆ ನುಗ್ಗುತ್ತಾನೆ. ಆ ಹೊತ್ತಿಗೆ ಕಿಟ್ಟಿ ಮತ್ತು ಇತರರು ಬಂದು ಸೇರುತ್ತಾರೆ. ಕಿಟ್ಟಿ ಒಳಕ್ಕೆ ನುಗ್ಗಿ ಮಗುವನ್ನೂ ಹಣದ ಪೆಟ್ಟಿಗೆಯನ್ನೂ ಹೊತ್ತು ತಂದು ಕೆಳಗಿಳಿಸಿ ಮೂರ್ಛೆ ಹೋಗುತ್ತಾನೆ. ಹುಟ್ಟು ಸ್ಕೌಟ್‌ ಆತ.

ಚಿಕ್ಕ ವಯಸ್ಸಿನ ಹುಡುಗನನ್ನೆ ನಾಯಕನನ್ನಾಗಿ ಮಾಡಿಕೊಂಡ ನಾಟಕಗಳು ಪ್ರಪಂಚದ ಇತಿಹಾಸದಲ್ಲೆ ವಿರಲ. ಪೋಲೀ ಕಿಟ್ಟಿ ಎಳೆಯ ವಯಸ್ಸಿನವನಾದರೂ ಅವನು ರಂಗದ ಮೇಲೆ ಕಾಣಿಸಿಕೊಂಡ ಎಂದರೆ ರಂಗ ಮಂಚವನ್ನೆಲ್ಲ ತುಂಬಿ ಬಿಡುತ್ತಾನೆ. ಬಹು ಶಕ್ತಿವಂತ ವ್ಯಕ್ತಿತ್ವ ಅವನದು. ಕನ್ನಡ, ಉರ್ದು ಎಲ್ಲ ತುರುಕಿ ಅವನಾಡುವ ಭಾಷೆಯಲ್ಲಿ ಶಕ್ತಿ ತುಂಬಿ ತುಳುಕುತ್ತದೆ. ಅವನ ತೋಳುಗಳೋ-ಉಕ್ಕು. ನಾಲ್ಕು ಜನ ಹುಡುಗರಿದ್ದರೂ ಅವನು ಕಾಲಿಟ್ಟರೆ-ಎಲ್ಲರೂ ಮೂಕು. ಮೂಲೆ ಹುಡುಕುತ್ತಾರೆ ಹುದುಗಿಕೊಳ್ಳಲು. ಚಿಕ್ಕ ಹುಡುಗ, ತಿಂಡಿಯ ಆಸೆ, ಸ್ಕೌಟ್‌ ಮಾಸ್ಟರನ್ನು ಬೇಡಿಕೊಳ್ಳುತ್ತಾನೆ, ‘ಸಾರ್, ಸಣ್ಣದೊಂದು ರ‍್ಯಾಲಿ ಇಡಿಸಿ, ಮೂರ್ಟಿನ್ನು ಇಲ್ದಿದ್ರೂನೂವೆ… ಒಂದು ಟಿನ್ನು, ಅರ್ಧ ಟಿನ್ನು’ ಎಂದು. ಅವನಿಗೆ ದೂದ್‌ ಫೇಡ, ಹಲ್ವದ ಕನಸು. ಇಷ್ಟಾದರೂ ಹೆಂಗರಳು ಅವನದು. ಬಡ ಸಂಸಾರದಿಂದ ಬಂದಿದ್ದಾನೆ. ಬೆಳಗೆಯಿಂದ ಸಂಜೆಯವರೆಗೆ ಕಷ್ಟದಲ್ಲಿರುವವರಿಗೆಲ್ಲ ನೆರವಾಗುತ್ತಾನೆ. ಸ್ಕೌಟ್‌ ಮಾಸ್ಟರು ‘ಇವತ್ತು ಯಾರಿಗೆ ಸಹಾಯ ಮಾಡಿದೆ?’ ಎಂದು ಕೇಳಿದರೆ ‘ಯಾರಿಗೂ ಇಲ್ಲ’ ಎನ್ನುತ್ತಾನೆ. ‘ಪೋಲೀ ಕಿಟ್ಟೀ’ ಒಂದು ಅಪೂರ್ವ ನಾಟಕ.

ನಾಟಕ ಜಗತ್ತಿನಲ್ಲಿ ಕ್ರಾಂತಿ

ಕೈಲಾಸಂ ಅನೇಕ ನಾಟಕಗಳನ್ನು ಬರೆದರು. ಅವರ ನಾಟಕಗಳಲ್ಲಿ ಸಂಭಾಷಣೆ ಕುದುರೆ ಓಡುವಂತೆ ಓಡುತ್ತದೆ. ನಗಿಸುತ್ತದೆ. ಈ ನಗುವಿನ ಮಧ್ಯೆ, ನಮ್ಮ ವಿಚಾರಶಕ್ತಿಯನ್ನು ತಿವಿದೆಬ್ಬಿಸುವಂತೆ ಒಂದೊಂದು ವಾಕ್ಯ ಸಿಡಿದು ಬರುತ್ತದೆ.

“ಲೋಕದಲ್ಲಿ ಕಷ್ಟ ಪಟ್ಟು ನರಳೋವ್‌ರು ದೇವರಿಗೆ ಸಮಾನ.”

“ಈಗ ಸದ್ಯ ಇರೋ ಜಾತಿಗಳೆರಡೇ ಜಾತಿ… ದುಡ್ಡಿರೋರು… ದುಡ್ಡಿಲ್ದೊರು ಅಂತ.”

“ಸಮಾಜಕ್ಕಾಗೋ ಲಾಭ ಒಂದಿಷ್ಟೂ ಇಲ್ದಿದ್ರೆ ಜೀವನದಲ್ಲಿ ನಿಮಗೆ ಸ್ಥಳವೇ ಇಲ್ಲ.”

“ಈ ಭೂಮಿಲಿ ಜೀವಿಸೋಕೆ ದೇವರಿಗೆ ಕೊಡೋ ಬಾಡಿಗೆ ಸುತ್ತಮುತ್ತಲೂ ಇರೋ ಜನರಿಗೆ ಉಪಯೋಗವಾಗಿರೋದೇ.”

ಕೈಲಾಸಂ ಸಮಾಜದ ಹುಳುಕುಗಳನ್ನು ಬಯಲಿಗೆಳೆದರು, ಜನರ ಪೊಳ್ಳು ನಂಬಿಕೆಗಳನ್ನು ಹಂಗಿಸಿದರು. ಮಗ ಪರೀಕ್ಷೆಯಲ್ಲಿ ಫಸ್ಟ್‌ಕ್ಲಾಸ್‌ ಪಡೆಯುವುದೇ ಮುಖ್ಯ ಎಂದು ಭಾವಿಸಿ ಮಾನವೀಯ ಗುಣಗಳನ್ನು ಮರೆತ ತಂದೆ, ಮದುವೆಯ ಹೆಸರಿನಲ್ಲಿ ವರದಕ್ಷಿಣೆ ಸೆಳೆದು ಹೆಣ್ಣಿನ ಸಂಸಾರ ದಿವಾಳಿಯಾದರೂ ಚಿಂತೆ ಇಲ್ಲ ಎಂದು ನಡೆದುಕೊಳ್ಳುವ ಹುಡುಗ, ಅವನ ತಂದೆ ತಾಯಿಯರು (ವರದಕ್ಷಿಣಯನ್ನು ‘ತಾಳಿ ಕಟ್ಟೋಕ್ಕೊಲಿ’ ಎಂದು ಕರೆದು ಹಾಸ್ಯ ಮಾಡಿದರು ಕೈಲಾಸಂ), ಹಣದಿಂದ ಕೊಬ್ಬಿದವರು, ಜಾತಿ ಪ್ರಾಮುಖ್ಯ ಎಂದು ಕೊಂಡವರು – ಎಲ್ಲರನ್ನೂ ರಂಗಮಂಚಕ್ಕೆ ತಂದರು. ಅವರ ಮೂರ್ಖತನಕ್ಕೆ ಕನ್ನಡಿ ಹಿಡಿದರು. ಹಿಂದಿನ ಕಾಲದ ಕಂಪೆನಿಗಳವರ ನಾಟಕ ಆಡಲು ಅದ್ಧೂರಿಯ ಉಡಿಗೆ ತೊಡಿಗೆಗಳು ಬೇಕು. ವೈಕುಂಠ, ಕೈಲಾಸ ರಾಜನ ಆಸ್ಥಾನ ಇಂತಹವನ್ನು ತೋರಿಸಲು ಉಪಕರಣಗಳು ಬೇಕು. ಸಂಗೀತ ಹಾಡುವ ನಟನಟಿಯರು ಬೇಕು. ಕೈಲಾಸಂ ನಾಟಕಗಳ ದೃಶ್ಯಗಳು ನಡೆಯುವುದು ಬೀದಿಗಳಲ್ಲಿ, ಸಾಮಾನ್ಯ ಕುಟುಂಬಗಳ ಮನೆಗಳಲ್ಲಿ. ನಾಲ್ಕು ಜನ ಉತ್ಸಾಹೀ ಹುಡುಗರು ಸೇರಿ ಹಾಡಬಹುದಾದ ನಾಟಕಗಳು ಅವರವು. ಹೀಗಾಗಿ ಅವರ ನಾಟಕಗಳು ಕನ್ನಡ ನಾಡಿನ ಮೂಲೆಮೂಲೆಗಳಲ್ಲಿ ಪ್ರದರ್ಶಿತವಾದವು. ಕನ್ನಡ ಸಂಘಗಳು, ಹೈಸ್ಕೂಲು ಕಾಲೇಜುಗಳ ಸಂಘಗಳು ನಾಟಕಗಳನ್ನು ಆಡಿದವು. ಸಾವಿರಾರು ಜನ ನೋಡಿ ನಕ್ಕರು, ಹೊಸ ದೃಷ್ಟಿಯಿಂದ ಮನುಷ್ಯರನ್ನು ಕಾಣುವುದರ ಅಗತ್ಯವನ್ನು ಗುರುತಿಸಿದರು. ಜೀವನದಲ್ಲಿ ಯಾರು ಗಟ್ಟಿ, ಯಾರು ಟೊಳ್ಳು, ಯಾವುದು ನಿಜವಾಗಿಯೂ ಬೆಲೆ ಬಾಳುವುದು, ಯಾವುದು ಬರಿಯ ಥಳಕು ಎಂದು ಕೇಳಿ ಕೊಂಡರು. ಕಾಯಿಲೆಯಲ್ಲೆ ದಿನ ನೂಕುವ ಭಾಗೀರಥಮ್ಮನಂತಹ ವಿಧವೆಯರು, ಓದಿನಲ್ಲಿ ಗಟ್ಟಿಗರಲ್ಲದಿದ್ದರೂ ಹೃದಯವಂತಿಕೆಯಲ್ಲಿ ಶ್ರೀಮಂತರಾದ ಹುಡುಗರು, ಬಡವರಾದರೂ ನಿಷ್ಠೆಯಿಂದ ದುಡಿಯುವ ಸೇವಕರು ಇವರೆಲ್ಲ ನಾಟಕದ ಚರಿತ್ರೆಯಲ್ಲೆ ಮೊಟ್ಟಮೊದಲ ಬಾರಿಗೆ ರಂಗಮಂಟಪದ ಮೇಲೆ ಕಾಣಿಸಿಕೊಂಡರು. ನಗೆ-ಅಂತಃಕರಣ-ಚಿಂತನೆ ಬೆರೆತ ನಾಟಕಗಳನ್ನು ಕೊಟ್ಟರು ಕೈಲಾಸಂ.

ದಿ ಪರ್‌ಪಸ್

ಅವರು ಇಂಗ್ಲಿಷ್‌ ನಾಟಕಗಳನ್ನು ಬರೆದರು. ಇವುಗಳಲ್ಲಿ ಅತ್ಯುತ್ತಮವಾದದ್ದು ‘ದಿ ಪರ್ಪಸ್‌ (ಉದ್ದೇಶ). ಇದು ಪಾಂಡವ ರಾಜಕುಮಾರರ ಮತ್ತು ಏಕಲವ್ಯನ ಕಥೆ. ಪಾಂಡವ ರಾಜಕುಮರರು ಶಸ್ತ್ರಾಭ್ಯಾಸ ಮಾಡುತ್ತಿದ್ದಾರೆ. ಅವರ ಗುರು ದ್ರೋಣಾಚಾರ್ಯರು, ವಂಶದ ಹಿರಿಯ ಭೀಷ್ಮಾಚಾರ್ಯರು. ಇವರೆಲ್ಲರ ಶಸ್ತ್ರವಿದ್ಯಾಭ್ಯಾಸಕ್ಕೆ ಭಗವಂತ ಯಾವ ಉದ್ದೇಶವನ್ನು ಇಟ್ಟುಕೊಂಡಿದ್ದಾನೋ ನಾವು ಮನುಷ್ಯಮಾತ್ರರು ತಿಳಿಯಲಾರೆವು, ಕೆಲಸ ಮಾಡುವುದಷ್ಟೇ ನಮ್ಮ ಕರ್ತವ್ಯ ಎನ್ನುತ್ತಾರೆ ಭೀಷ್ಮಾಚಾರ್ಯರು. ಅರ್ಜುನನಿಗೆ ತಾನು ಪ್ರಪಂಚದಲ್ಲೆ ಅಸಮಾನ ಬಿಲ್ಲುಗಾರನಾಗಬೇಕೆಂಬ ಆಸೆ; ಇದರ ಮೂಲ ಅವನ ಅಹಂಕಾರ ಅಷ್ಟೇ. ದ್ರೋಣರೇ ಹೇಳುತ್ತಾರೆ, ಪ್ರಪಂಚದಲ್ಲಿ ಮೂರು ಬಗೆಗಳಲ್ಲಿ ಕೆಲಸ ಮಾಡಬಹುದು ಎಂದು. ಸ್ವಾರ್ಥಕ್ಕಾಗಿ ಕೆಲಸ ಮಾಡುವುದು ಒಂದು ರೀತಿ, ಇದು ಅಧಮ, ಕೆಲಸಕ್ಕಾಗಿ ಕೆಲಸ ಮಾಡುವುದು ಮಧ್ಯಮ. ಇತರರಿಗೆ ಸಹಾಯವಾಗಲಿ ಎಂದು ಕೆಲಸ ಮಾಡುವುದು ಉತ್ತಮ. ಬೇಟೆಗಾರರ ಕುಲದಿಂದ ಬಂದ ಏಕಲವ್ಯ, ಆರ್ಯನೂ ರಾಜಕುಮಾರನೂ ಆದ ಅರ್ಜುನನ್ನು ಮೀರಿಸುತ್ತಾನೆ; ಅದೂ, ದ್ರೋಣರ ವಿಗ್ರಹವನ್ನು ಮಾಡಿಕೊಂಡು ಅದರ ಮುಂದೆ ಶಸ್ತ್ರಾಭ್ಯಾಸ ಮಾಡಿ, ಅವನು ಅರ್ಜುನನನ್ನು ಮಾತ್ರವಲ್ಲ, ಗುರು ದ್ರೋಣರನ್ನೆ ಮೀರಿಸುತ್ತಾನೆ. ಕಾರಣ: ದ್ರೋಣರು ಕೆಲಸಕ್ಕಾಗಿ ಕೆಲಸ ಮಾಡಿದವರು, ಏಕಲವ್ಯ ಬಡ ಜಿಂಕೆಗಳನ್ನು ತೋಳಗಳಿಂದ ರಕ್ಷಿಸಲು ಧನುರ್ವಿದ್ಯೆ ಕಲಿತವನು. ಅವನ ನಿರ್ಮಲ ಉದ್ದೇಶವೆ ಅವನನ್ನು ಸರಿಸಾಟಿ ಇಲ್ಲದ ಬಿಲ್ಲುಗಾರನನ್ನಾಗಿ ಮಾಡುತ್ತದೆ, ಅಹಂಕಾರದಿಂದ ಬೀಗುವ ಅರ್ಜುನನ ತೇಜೋಭಂಗ ಮಾಡುತ್ತದೆ.

ಯೋಚಿಸಬೇಕಾದ ಎರಡು ಮಾತುಗಳು

ಯಾವುದು ಉತ್ತಮ ಸಾಹಿತ್ಯ? ಈ ಪ್ರಶ್ನೆಗೆ ಉತ್ತರ ಹೇಳುತ್ತ ಕೈಲಾಸಂ ಒಂದು ಭಾಷಣದಲ್ಲಿ ಹೇಳಿದರು:

“ಸಮಾಜಕ್ಕೆ ಯಾವುದು ಉಪಯೋಗ್ವೋ ಅದೇ ಉತ್ತಮ ಸಾಹಿತ್ಯ. ಸಾಹಿತ್ಯ ಆಗಲಿ, ವಿಜ್ಞಾನ ಆಗಲಿ, ಯಾರು ಯಾವ ದಾರೀನೇ ಹಿಡೀಲಿ ನಾವು ಹುಟ್ಟಿದ ಸಮಾಜಕ್ಕೆ ಸಲ್ಲಿಸಬೇಕಾದ ಋಣ- ಸಮಾಜ ಸೇವೆ ಅಂತ ಶಾಸ್ತ್ರ ಹೇಳತ್ತೆ. ಆದ್ರಿಂದ ಸಮಾಜಕ್ಕೆ ಉಪಯೋಗವಾಗಿರೋದೇ ಉತ್ತಮ ಸಾಹಿತ್ಯದ ಲಕ್ಷಣ.”

ತಮ್ಮ ಒಂದು ಪದ್ಯದಲ್ಲಿ ಹೇಳಿದರು. ನನಗೆ ಬಂಗಾರ ಬೇಡ, ಬಿರುದು ಬೇಡ, ಹಾಲುಗಲ್ಲಿನ ವಿಗ್ರಹ ಬೇಡ, ಕಿರಿಯರು, ಹಿರಿಯರು ನಕ್ಕರೆ, ಎರಡು ಹನಿ ಕಣ್ಣೀರು ಹಾಕಿದರೆ ಸಾಕು.

ಕಣ್ಣೀರು ಹಾಕಿದರೆ ಸಾಕು’