ಆಧುನಿಕ ಕನ್ನಡ ನಾಟಕದ ರಚನೆಯಲ್ಲಿ ಟಿ.ಪಿ. ಕೈಲಾಸಂ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತದೆ. ಟಿ.ಪಿ. ಕೈಲಾಸಂ ಅವರ ಕಾಲ ೧೮೮೪-೧೯೪೬. ಮದರಾಸಿನಲ್ಲಿ ಬಿ. ಎ. ಮತ್ತು ಎಂ.ಎ. ಪದವಿ ಪಡೆದು ಲಂಡನ್ನಿನ ರಾಯಲ್ ಕಾಲೇಜ್ ಅಫ್ ಸೈನ್ಸ್ ನಲ್ಲಿ ಶಿಕ್ಷಣ ಪಡೆದರು. ರಾಯಲ್ ಜಿಯಾಲಜಿಕಲ್ ಸೊಸೈಟಿಗೆ ಪ್ರಭಂಧ ಬರೆದು ಕೊಟ್ಟು ಫೆಲೋಷಿಪ್ ಪಡೆದ ಮೊದಲ ಭಾರತೀಯರು. ೧೯೪೫ ರಲ್ಲಿ ಮದರಾಸ್ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೈಲಾಸಂ ಸ್ವತಃ ಎಂದೂ ಬರೆಯಲಿಲ್ಲ ಅವರು ಹೇಳಿದುದನ್ನು ಮಿತ್ರರು ಬರೆದುಕೊಂಡರು. ಎಂದು ಹೇಳುತ್ತಾರೆ. ಅವರು ತೀರಿಕೊಂಡ ನಂತರ ಕೀಚಕ, ಮೊದಲಾದ ನಾಟಕಗಳು ಪ್ರಕಟವಾದವು.

ಅವರ ಜೀವಿತ ಕಾಲದಲ್ಲಿ ಹದಿನೇಳು ಕನ್ನಡ ನಾಟಕಗಳು ತಾವರೆಕೆರೆ ಎಂಬ ಕಥಾಸಂಗ್ರಹ, ದಿ ಪರ್ಪಸ್, ದಿ ಬರ್ಡನ್, ದಿ ಫುಲ್ಫಿಲ್ಮೆಂಟ್, ಎಂಬ ಇಂಗ್ಲಿಷ್ ನಾಟಕಗಳು ಕನ್ನಡಕ್ಕೆ ಅನುವಾದವಾಗಿವೆ.

ಕೈಲಾಸಂ ಸ್ವತಃ ನಟರು. ಇಂಗ್ಲೆಂಡಿನಲ್ಲಿ ಹಲವಾರು ನಾಟಕಗಳನ್ನು ಅಭ್ಯಾಸ ಮಾಡಿದವರು.

ಪ್ರದರ್ಶನಗಳನ್ನು ಶ್ರದ್ದೆಯಿಂದ ವೀಕ್ಷಿಸಿದವರು ನಾಟಕ ಜನಸಾಮಾನ್ಯರ ಜೀವನಕ್ಕೆ ಸಂಬಂದಿಸಿರಬೇಕು, ಅವರ ಕಷ್ಟ-ಸುಖಗಳನ್ನು ಸಮಸ್ಯೆಗಳನ್ನು ಪ್ರತಿಬಿಂಬಿಸಿರಬೇಕು. ವಿಚಾರ ಪ್ರಚೋದನೆ ಮಾಡಬೇಕು ಎಂದು ತೀರ್ಮಾನಿಸಿದ್ದರು. ಪೌರಾಣಿಕ ಅಥವಾ ಐತಿಹಾಸಿಕ ಸಮಗ್ರಿಯನ್ನು ಒಂದು ಸಿದ್ದವಾದ ಅಚ್ಚಿನಲ್ಲಿ ಎರಕ ಹೊಯ್ದು ಆಡುತ್ತಿದ್ದ ವೃತ್ತಿ ನಟ ತಂಡಗಳನ್ನು ಶೂರ್ಪನಕಾ, ಕುಲವೈಭವ, ಅಥವಾ ನಮ್ ಕಂಪ್ನಿ, ಯಲ್ಲಿ ಸ್ವಲ್ಪವಾಗಿಯೇ ಹಾಸ್ಯ ಮಾಡಿದರು. ನಾಟಕ ಮಂದಿರವನ್ನು ವಿಚಾರ ಮಂದಿರವನ್ನಾಗಿ ಮಾಡಲು ಅವರು ಬಹುಮಟ್ಟಿಗೆ ಹಾಸ್ಯವನ್ನೇ ಬಳಸಿದರು. ಹಾಸ್ಯ ಸಾಹಿತ್ಯ ಕಡಿಮೆ ಇದ್ದ ಕೊರತೆಯನ್ನು ಸ್ವಲ್ಪ ಮಟ್ಟಿಗೆ ತುಂಬಿಕೊಟ್ಟರು. ಮುಖ್ಯವಾಗಿ ಪಟ್ಟಣದ ಮಧ್ಯಮ ವರ್ಗದವರ ಜೀವನವನ್ನೂ, ಹಂಬಲ ಒಣಪ್ರತಿಷ್ಠೆ, ಅತ್ತೆ-ಸೊಸೆ ಜಗಳ, ಗಂಡಸಿನ ಅಹಂ, ಎಲ್ಲವನ್ನೂ ವಿಮರ್ಶೆಯ ನೋಟದಿಂದ ನೋಡಿದರು. ವಿಧವೆಯರು ಅಡಿಗೆಯವರು, ಸೇವಕರು, ಹುಡುಗರು, ಎಲ್ಲ ಅವರ ರಂಗಭೂಮಿಯ ಮೇಲೆ ನಡೆದಾಡಿದರು. ಆದರೆ ಕೈಲಾಸಂ ಸಮಸ್ಯೆಗಳನ್ನು ಸರಳೀಕರಿಸಿದರು. ಇಂಗ್ಲಿಷ್ ನಾಟಕಗಳಲ್ಲಿ ಅವರು ವಿಶಿಷ್ಟವಾದ ವಸ್ತು ನಿರ್ವಹಣೆಯನ್ನು ಪಾತ್ರ ಸೃಷ್ಟಿಯನ್ನೂ ಸಾದಿಸಿದರು. ಹವ್ಯಾಸಿ ನಾಟಕ ಚಟುವಟಿಕೆಗೆ ಜೀವಕೊಟ್ಟವರು. ನಾಟಕವನ್ನು ಜನಸಾಮನ್ಯರ ಜೀವನಕ್ಕೆ ಹತ್ತಿರ ತಂದವರು, ನಾಟಕ ಮಂದಿರದಲ್ಲಿ ವಿಚಾರಶಕ್ತಿಯ ಪ್ರಚೋದನೆಯಾಗಬೇಕು ಎಂಬ ಕಲ್ಪನೆಯನ್ನು ತಂದು ಕೊಟ್ಟವರು ಕೈಲಾಸಂ. ಹಾಸ್ಯಕ್ಕೆ ಕ್ಷಾಮವಿದ್ದ ಕಾಲದಲ್ಲಿ ಹಾಸ್ಯವನ್ನು ಸೃಷ್ಟಿಸಿದವರು ಕೈಲಾಸಂ. ಈ ಕಾರಣಗಳಿಗಾಗಿ ಕೈಲಾಸಂ ಅವರನ್ನು ಸ್ಮರಿಸಬೇಕು.