ತಿರುಮಕೂಡಲ ನರಸೀಪುರದಲ್ಲಿ ಶ್ರೀ ಅಗಸ್ತ್ಯ ಗೌಡರ ಪುತ್ರರಾಗಿ, ಟಿ. ಚೌಡಯ್ಯನವರ ಅನುಜರಾಗಿ ೧೯೧೦ರಲ್ಲಿ ಜನಿಸಿದ ಪುಟ್ಟಸ್ವಾಮಿಯ್ಯನವರಿಗೆ ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ, ಅಭಿರುಚಿ ಬೆಳೆದದ್ದು ಸಹಜವಾಗಿತ್ತು. ತಮ್ಮ ಹನ್ನೆರಡೆಯ ವಯಸ್ಸಿನಿಂದ ಬಿಡಾರಂ ಕೃಷ್ಣಪ್ಪನವರಲ್ಲಿ ಕ್ರಮವಾಗಿ ಸಂಗೀತಾಭ್ಯಾಸ ಮಾಡಿ ಆರೆಂಟು ವರ್ಷಗಳ ಕಲಿಕೆಯ ಬಲದಿಂದ ಗುರುಗಳೊಡನೆ ಸಭೆಗಳಲ್ಲಿ ಹಾಡುವಷ್ಟು ಪರಿಶ್ರಮ ಹೊಂದಿದರು.

ಇಪ್ಪತ್ತನೆಯ ವಯಸ್ಸಿನಿಂದ ಸ್ವತಃ ಕಛೇರಿ ಮಾಡಲು ಕ್ರಮಿಸಿದ ಶ್ರೀಯುತರು ಕನ್ನಡ ನಾಡಿನಷ್ಟೇ ತಮಿಳು ನಾಡಿನಲ್ಲಿಯೂ ಪ್ರಸಿದ್ಧರಾಗಿ ಜನಪ್ರಿಯತೆ ವಿದ್ವಾಂಸರಿಂದ ಮನ್ನಣೆ ಪಡೆದರು. ನಾಲ್ಕು ದಶಕಗಳಿಗೂ ಮೀರಿ ಸಂಗೀತ ಕ್ಷೇತ್ರದಲ್ಲಿ ವಿಜೃಂಭಿಸಿದ ಪ್ರತಿಭಾನ್ವಿತ ಗಾಯಕರು.ಕಲಾತ್ಮಕತೆಗೆ,ಕಲ್ಪನಾತ್ಮತೆಗೆ ಹೆಸರಾಗಿದ್ದ ಪುಟ್ಟಸ್ವಾಮಯ್ಯನವರು ೧೯೩೬ರಲ್ಲಿ ಮೈಸೂರು ದರ್ಬಾರಿನ ಆಸ್ಥಾನ ವಿದ್ವಾಂಸರಾಗಿ ನೇಮಕಗೊಂಡರು.

ಪಿಟೀಲು ವಿದ್ವಾನ್‌ ಮೈಸೂರು ಮಹದೇವಪ್ಪ ವೀಣಾ ವಿದೂಷಿ ಚೊಕ್ಕಮ್ಮನವರೂ ಸೇರಿದಂತೆ ಇವರಿಂದ ಶಿಕ್ಷಣ ಪಡೆದು ಗಣ್ಯರಾದ ಶಿಷ್ಯರು ಅನೇಕರು. ರಾಜ್ಯ ಸಂಗೀತ ನಾಟಕ ಅಕಾಡೆಮಿ ೧೯೭೦-೭೧ರಲ್ಲಿ ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿತು. ಪುಟ್ಟಸ್ವಾಮಯ್ಯನವರ ಸಂಗೀತ ಅವರ ಶಿಷ್ಯ-ಪ್ರಶಿಷ್ಯರ ಮೂಲಕ ಉಳಿದು ಅವರ ಹೆಸರನ್ನು ಅಮರವಾಗಿಸಿದೆ.