ಟಿ. ಪ್ರಕಾಶಂ —ಆಂಧ್ರಕೇಸರಿ ಎಂದು ಪ್ರಸಿದ್ಧರಾದ ಧೀರ ದೇಶಭಕ್ತರು. ಸ್ವಾತಂತ್ರ್ಯದ ಹೋರಾಟಕ್ಕಾಗಿ ಸಾವಿರಾರು ರೂಪಾಯಿಗಳ ಆದಾಯವಿದ್ದ ವೃತ್ತಿಯನ್ನು ಬಿಟ್ಟವರು. ಸೆರೆಮನೆ ಸೇರಿದವರು. ಮಂತ್ರಿಯಾಗಿ, ಮುಖ್ಯ ಮಂತ್ರಿಯಾಗಿ ಜನತೆಯ ಸೇವೆ ಮಾಡಿದರು. ದಿಟ್ಟ ಪತ್ರಿಕೋದ್ಯಮಿ.

ಟಿ. ಪ್ರಕಾಶಂ

೧೯೨೮ ರ ಫೆಬ್ರವರಿ ಮೂರರಂದು. ಭಾರತವನ್ನು ಬ್ರಿಟಿಷರು ಆಳುತ್ತಿದ್ದ ಕಾಲವದು. ಇಲ್ಲಿಯ ರಾಜಕೀಯದಲ್ಲಿ ಭಾರತೀಯರಿಗೆ ಅವಕಾಶ ಕೊಡಬೇಕು ಎಂಬ ಬೇಡಿಕೆಯನ್ನು ಬ್ರಿಟಿಷ್ ಸರ್ಕಾರ ಮಾನ್ಯತೆ ಮಾಡುವುದಾಗಿ ಹೇಳಿತ್ತು. ಅದರಂತೆ ಶಾಸನ ಸಭೆಗೆ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗಿದ್ದರು. ಈ ರೀತಿಯ ಆಡಳಿತ ಸುಮಾರು ಹತ್ತು ವರ್ಷಗಳು ನಡೆದಿದ್ದಾಗ ಅದು ಸಮರ್ಪಕವಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸೈಮನ್ ಎಂಬವನ ನಾಯಕತ್ವದಲ್ಲಿ ಇಂಗ್ಲಿಷರು ಮಾತ್ರವೇ ಸದಸ್ಯರಾಗಿದ್ದ ಬ್ರಿಟಿಷ್ ಸಂಸತ್ತಿನ ನಿಯೋಗ ಭಾರತಕ್ಕೆ ಬಂದಿತ್ತು. ಈ ನಿಯೋಗದಲ್ಲಿ ಭಾರತೀಯರಿಗೆ ಸ್ಥಾನವಿಲ್ಲದಿದ್ದ ಕಾರಣ ಕಾಂಗ್ರೆಸ್ ಪಕ್ಷ ಈ ವಿಚಾರಣಾ ಸಮಿತಿಯ ಬಹಿಷ್ಕಾರಕ್ಕೆ ಕರೆಕೊಟ್ಟಿತ್ತು.

೧೯೨೮ ರ ಫೆಬ್ರವರಿ ಮೂರರಂದು ಹಲವೆಡೆಗಳಲ್ಲಿ ಹರತಾಳ, ಪ್ರತಿಭಟನೆಯ ಸಭೆಗಳು ನಡೆದವು. ಮದರಾಸಿನಲ್ಲಿ ಪೊಲೀಸರು ಗುಂಡು ಹಾರಿಸಿದ್ದರಿಂದ ಒಬ್ಬ ಸತ್ತಿದ್ದ. ಪ್ರದರ್ಶನದ ಮುಖಂಡತ್ವ ವಹಿಸಿದ್ದ ವ್ಯಕ್ತಿ ಶವದತ್ತ ಹೊರಟಾಗ ಪೊಲೀಸರು ತಡೆದರು.

ಆಗ ಆ ವ್ಯಕ್ತಿ ತನ್ನ ಎದೆಯನ್ನು ಮುಂದೊಡ್ಡಿ ‘ನಮ್ಮ ಸೋದರ ದೇಶಪ್ರೇಮಿಯನ್ನು ನಾವು ನೋಡಬೇಕು. ತಡೆಯುವುದಿದ್ದರೆ ನನಗೆ ಗುಂಡು ಹೊಡೆಯಿರಿ’ ಎಂದು ಸವಾಲು ಹಾಕಿ, ಮುನ್ನಡೆದರು.

ಪೊಲೀಸರು ಅಸಹಾಯರಾಗಿ ನೋಡುತ್ತ ನಿಂತರು. ಹೀಗೆ ಪೊಲೀಸರ ವಿರುದ್ಧ ಸವಾಲು ಹಾಕಿದ ವ್ಯಕ್ತಿಯೇ ಟಂಗುಟೂರಿ ಪ್ರಕಾಶಂ. ಇವರನ್ನು ಜನ ‘ಆಂಧ್ರ ಕೇಸರಿ’ ಎಂದು ಕರೆದಿದ್ದರಲ್ಲಿ ಆಶ್ಚರ್ಯವೇನು  ಇಲ್ಲ.

ಬಾಲ್ಯ

ಉದ್ದಾಮ ಆಡಳಿತಕಾರರೂ ಹೆಸರಾಂತ ಕವಿಗಳೂ ಜನಿಸಿದಂತಹ ಮನೆತನ ನಿಯೋಗಿಗಳದು. ಇಂತಹ ಮನೆತನದಲ್ಲಿ ಪ್ರಕಾಶಂರ ಜನನವಾದದ್ದು ೧೮೭೨ರ ಆಗಸ್ಟ್ ೨೩ರಂದು. ತಂದೆ ಗೋಪಾಲ ಕೃಷ್ಣಯ್ಯ, ತಾಯಿ ಸುಬ್ಬಮ್ಮ, ಅವರ ಸ್ವಂತ ಸ್ಥಳ ವೆಂಕಟಗಿರಿ ಜಮೀನುದಾರಿಗೆ ಸೇರಿದ ವಲ್ಲೂರು ಗ್ರಾಮ. ತಲೆ ತಲಾಂತರಗಳಿಂದ ಹಳ್ಳಿಯ ಕರಣಿಕೆ ಪ್ರಕಾಶಂರ ವಂಶಸ್ಥರಲ್ಲಿಯೇ ಇತ್ತು. ಆದರೆ ಅವರ ತಂದೆಯ ಕಾಲದಲ್ಲಿ ಭೀಕರ ಕ್ಷಾಮ ಉಂಟಾಗಿ ತೆರಿಗೆ ಕೊಡಲಾರದೆ ಜಮೀನು ಕಳೆದುಕೊಂಡರು. ಗೋಪಾಲಕೃಷ್ಣಯ್ಯ ವೆಂಕಟಗಿರಿ ಎಸ್ಟೇಟಿನಲ್ಲಿ ನೌಕರಿ ಹಿಡಿದರು. ಪ್ರಕಾಶಂನ ಆರಂಭಿಕ ಶಿಕ್ಷಣವಾದದ್ದು ವಲ್ಲೂರು, ಅಡ್ಡಂಕಿ ಹಾಗೂ ನಾಯುಡು ಪೇಟಗಳಲ್ಲಿ. ಮೊದಲೆರಡು ಗ್ರಾಮಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಮೇಲೆ ಬಾಲಕ ಪ್ರಕಾಶಂ ನಾಯುಡುಪೇಟದಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗೆ ಸೇರಿದ. ಇಲ್ಲಿ ಓದುತ್ತಿದ್ದಾಗ ಗೋಪಾಲಕೃಷ್ಣಯ್ಯ ನಿಧನ ಹೊಂದಿ ಪ್ರಕಾಶಂಗೆ ಭಾರಿ ಆಘಾತವಾಯಿತು. ಅನಂತರ ಜೀವನಕ್ಕೆ ಅವಶ್ಯವಾದ ಸಂಪಾದನೆಯನ್ನು ಅರಸಿ ಅವರ ಸಂಸಾರ ಓನಗೊಲ್ ಎಂಬಲ್ಲಿಗೆ  ಹೋಯಿತು. ಅಲ್ಲಿ ಅವರ ತಾಯಿ ಹೋಟೆಲ್ ನಡೆಸುತ್ತ ಜೀವನೋಪಾಯಕ್ಕೆ ಮಾರ್ಗ ಕಲ್ಪಿಸಿಕೊಂಡರು.

ಉಪಾಧ್ಯಾಯರನ್ನು ಗೋಳು ಹೊಯ್ದುಕೊಂಡ ಕಾರಣ ಪ್ರಕಾಶಂಗೆ ಎಷ್ಟೋ ಬಾರಿ ಶಿಕ್ಷೆ ಆಗಿದ್ದೇ ಅಲ್ಲದೆ ಎರಡು ಬಾರಿ ಶಾಲೆಯಿಂದ ಹೊರಗೆ ಕಳಿಸಲ್ಪಟ್ಟ. ಆಗ ತಂದೆಯ ಒಳ್ಳೆಯತನದಿಂದಾಗಿ ಉಪಾಧ್ಯಾಯರು ಹುಡುಗನನ್ನು ಮತ್ತೇ ಶಾಲೆಗೆ ಸೇರಿಸಿಕೊಂಡರು. ಶಾಲೆಯಲ್ಲಿದ್ದಾಗ ವ್ಯಾಯಾಮ, ಕ್ರಿಕೆಟ್ ಆಟ, ಎಸ್ಟೇಟ್‌ನಲ್ಲಿ ಆನೆ ಸವಾರಿಯನ್ನು ಹವ್ಯಾಸವಾಗಿಟ್ಟು ಕೊಂಡು ಸದಾ ಚಟುವಟಿಕೆಯಿಂದ ಇರುತ್ತಿದ್ದ.

ನಾಟಕಗಳಲ್ಲಿ ಆಸಕ್ತಿ

ತಂದೆಯ ಮರಣದ ನಂತರ ಒನಗೋಲ್‌ನಲ್ಲಿ ಸರ್ಕಾರಿ ಶಾಲೆಗೆ ಸೇರಿದಾಗ ಅವನಿಗೆ ನಾಟಕಗಳ ಪರಿಚಯವಾಯಿತು. ಅವನಲ್ಲಿದ್ದ ನಟನಾಕೌಶಲ ಮಿಷನ್ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಹನುಮಂತರಾವ್ ನಾಯುಡು ಅವರ ಗಮನವನ್ನು ಸೆಳೆಯಿತು. ಅಂದಿನಿಂದ ನಾಯುಡು ಪ್ರಕಾಶಂಗೆ ಪಿತೃಸ್ಥಾನದಲ್ಲಿದ್ದು ಆತನ ಜೀವನಗತಿಯನ್ನು ನಿರ್ದೇಶಿಸಿದರು. ಆತ ಮಾಧ್ಯಮಿಕ ಪರೀಕ್ಷೆಯಲ್ಲಿ ಮೊದಲದರ್ಜೆಯಲ್ಲಿ ಉತ್ತೀರ್ಣನಾಗಲು ಕಾರಣರಾದವರು ನಾಯುಡು.

ಮುಂದೆ ನಾಯುಡು ಅವರಿಗೆ ಆಗಿನ ಕಾಲದಲ್ಲಿ ಪ್ರಮುಖ ಪಟ್ಟಣವೆನಿಸಿದ ರಾಜಮಹೇಂದ್ರಿಗೆ ವರ್ಗವಾಯಿತು. ಆತ್ಮೀಯ ಗುರುಗಳನ್ನು ಬಿಟ್ಟಿರಲಾರದೆ ಪ್ರಕಾಶಂ ಸಹ ಅವರೊಂದಿಗೆ ಹೊರಟ.

ಪ್ರಕಾಶಂ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೊದಲ ಬಾರಿ ಉತ್ತೀರ್ಣರಾಗಲಿಲ್ಲ. ಅನಂತರ ಖಾಸಗಿ ಯಾಗಿ ಕುಳಿತು ಉತ್ತೀರ್ಣರಾದರು. ರಾಜಮಹೇಂದ್ರಿ ಯಲ್ಲಿ ಕಾಲೇಜಿನಿಂದ ಎಫ್. ಎ. ಪರೀಕ್ಷೆಯಲ್ಲಿ ತೇರ್ಗಡೆ ಯಾದರು.

ಪ್ರಕಾಶಂ ಅವರಿಗೆ ಪ್ಲೀಡರ್ ಆಗಬೇಕೆಂದು ಆಸೆ ಇತ್ತು. ಹನುಮಂತರಾವ್ ನಾಯುಡು ಅವರು ಹಣದ ವಿಷಯದಲ್ಲಿ ಕಷ್ಟದಲ್ಲಿದ್ದರೂ ಪ್ರಕಾಶಂ ಅವರಿಗೆ ಸಹಾಯ ಮಾಡಿ ಅವರನ್ನು ಮದರಾಸಿಗೆ ಕಳುಹಿಸಿಕೊಟ್ಟರು. ಪ್ರಕಾಶಂ ಪ್ಲೀಡರ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಮದರಾಸಿನಲ್ಲಿ ಪ್ಲೀಡರ್

ಸಾಮಾನ್ಯವಾಗಿ ಪ್ಲೀಡರ್ ಎಂದರೆ ಎರಡನೆ ದರ್ಜೆಯ ವಕೀಲ. ಅವರು ಕೆಳಕೋರ್ಟಿನಲ್ಲಿಯೇ ಕೇಸುಗಳನ್ನು  ನಡೆಸುತ್ತಿದ್ದರು. ಆದರೆ ಛಲಸ್ವಭಾವದ ಪ್ರಕಾಶಂ ಇದಕ್ಕೆ ವಿರುದ್ಧವಾಗಿ ಮದರಾಸಿನಲ್ಲಿ ವಕೀಲವೃತ್ತಿಯನ್ನು ಆರಂಭಿಸಿದರು.

ಇನ್ನೂ ಹೆಚ್ಚಿಗೆ ಓದಿದವರು, ಅನುಭವಶಾಲಿಗಳು ವಕೀಲರಾಗಿ ದುಡಿಯುತ್ತಿದ್ದ ಸ್ಥಳವದು. ಅಂತಹ ಕಡೆ ತೀವ್ರ ಸ್ಪರ್ಧೆಯಿರುತ್ತಿತ್ತು. ಆದರೂ ಪ್ರಾಮಾಣಿಕವಾದ ಹಾಗೂ ಕಷ್ಟದ ದುಡಿಮೆಯಿಂದ ಒಳ್ಳೆಯ ಕೀರ್ತಿ ಲಭಿಸಿ ಇತರ ಕಡೆಗಳಿಂದಲೂ ಅವರಿಗೆ ಕೇಸುಗಳು ಬರಲಾರಂಭಿಸಿದವು. ಕೆಲವು ವೇಳೆ ಅವರು ಹಿರಿಯ ವಕೀಲರುಗಳಿಗಿಂತ ಹೆಚ್ಚಾಗಿ ಹಣ ತೆಗೆದುಕೊಳ್ಳುತ್ತಿದ್ದರೂ ಜನ ಅವರ ಬಳಿಗೆ ಬರುತ್ತಿದ್ದರು.

ಈ ಯಶಸ್ಸಿನಿಂದ ಉತ್ತೇಜಿತರಾದ ಅವರಿಗೆ ಬ್ಯಾರಿಸ್ಟರ್ ಆಗಬೇಕೆಂಬ ಆಕಾಂಕ್ಷೆಯುಂಟಾಯಿತು. ಇದಕ್ಕಾಗಿ ಇಂಗ್ಲೆಂಡಿಗೆ ಹೋಗಿ ಬರಲು ಅಪಾರ ವೆಚ್ಚವಾಗುತ್ತಿತ್ತು. ತಾಯಿಗೂ ಭಯ, ಮಗ ಕೆಟ್ಟು ಹೋದಾ ನೆಂದು. ಒಳ್ಳೆಯ ಹಣವಂತರಾಗಿದ್ದ ಸ್ನೇಹಿತರೊಬ್ಬರು ಹಾಗೂ ಕಕ್ಷಿದಾರರೊಬ್ಬರು ವೆಚ್ಚ ಭರಿಸಲು ಮುಂದೆ ಬಂದರು. ತಾನು ಯಾವ ರೀತಿಯಲ್ಲಿಯೂ ಕೆಡುವುದಿಲ್ಲವೆಂದು ಭರವಸೆ ಕೊಟ್ಟು ತಾಯಿಯನ್ನು ಒಪ್ಪಿಸಿ ಇಂಗ್ಲೆಂಡಿಗೆ ಪ್ರಕಾಶಂ ಪ್ರಯಾಣ ಬೆಳೆಸಿದರು.

ಇಂಗ್ಲೆಂಡಿನಲ್ಲಿ

ಇಂಗ್ಲೆಂಡ್ ಪ್ರವಾಸ ಪ್ರಕಾಶಂರ ವ್ಯಕ್ತಿತ್ವದಲ್ಲಿ ಪ್ರಮುಖ ಬದಲಾವಣೆಯನ್ನುಂಟುಮಾಡಿತೆನ್ನಬಹುದು. ಬ್ರಿಟಿಷರ ಶಿಸ್ತು ಹಾಗೂ ಪ್ರಾಮಾಣಿಕತೆ ಅವರಿಗೆ ಹಿಡಿಸಿತು. ಅಲ್ಲಿ ದಾದಾಭಾಯಿ ನವರೋಜಿ, ರಮೇಶ್ ಚಂದರ್ ದತ್, ಲಾಲಾಲಜಪತರಾಯ್ ಮುಂತಾದ ಮಹಾ ವ್ಯಕ್ತಿಗಳ ಪರಿಚಯವಾಗಿ ದೇಶಪ್ರೇಮ ಜಾಗೃತವಾಯಿತು. ಆಗಲೇ ಅವರಿಗೆ ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸಬೇಕು ಎನ್ನಿಸಿತು. ಆದರೆ ಅವರ ಹಣಕಾಸಿನ ಸ್ಥಿತಿ ನೆಮ್ಮದಿ ಯಾಗಿರಲಿಲ್ಲ. ಅವರು ವ್ಯಾಸಂಗವನ್ನು ಮುಗಿಸುವುದು ಅವಶ್ಯಕವಾಗಿತ್ತು. ಹೀಗಾಗಿ ಅವರು ಓದಿಗೆ ತಮ್ಮ ಸಂಪೂರ್ಣ ಗಮನ ಹರಿಸಿದರು.

ಈ ಸಮಯದಲ್ಲಿ ಒಂದು ಪ್ರಸಂಗ ನಡೆಯಿತು.

ಬಾರ್ (ಅಂದರೆ ವಕೀಲರುಗಳಿಗೆ ಸಂಬಂಧಿಸಿದ ಒಂದು ಸಂಘ)ನಲ್ಲಿ ಔತಣಕೂಟ ಏರ್ಪಡಿಸಿದಾಗ ಅತೀ ಚಿಕ್ಕ ವಯಸ್ಸಿನವರಿಂದ ಭಾಷಣವಾಗಬೇಕು. ಭಾಷಣದ ನಂತರ ಆ ವ್ಯಕ್ತಿ ಧೂಮಪಾನ ಮಾಡಲು ಹಿರಿಯರಿಂದ ಅನುಮತಿ ಪಡೆಯಬೇಕು. ಇದು ಸಂಪ್ರದಾಯವಾಗಿತ್ತು. ಯಾರೂ ಅದುವರೆಗೆ ಈ ಸಂಪ್ರದಾಯವನ್ನು ಮುರಿದಿರಲಿಲ್ಲ. ತಾಯಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಪ್ರಕಾಶಂ ಧೂಮಪಾನ ಮಾಡಲು ನಿರಾಕರಿಸಿ ಸಂಪ್ರದಾಯವನ್ನು ಮೊಟ್ಟಮೊದಲಿಗೆ ಮುರಿದರು. ಇದಕ್ಕಾಗಿ ಅವರನ್ನು ಗೇಲಿ ಮಾಡಲಾಯಿತಲ್ಲದೆ ಆ ವಿಷಯವನ್ನು ಅವರ ಗುರುಗಳ ಬಳಿಗೂ ಒಯ್ದರು. ‘ನನ್ನ ಮನಸ್ಸಿಗೆ ಸರಿಯೆನಿಸದ ಕೆಲಸವನ್ನು ನಾನು ಮಾಡಲಾರೆ’ ಎಂದು ಪ್ರಕಾಶಂ ಖಡಾ ಖಡಿಂತವಾಗಿ ನುಡಿದರು. ಅವರ ಈ ನಿಲುವನ್ನು ಅವರ ಗುರುಗಳೂ ಮೆಚ್ಚಿಕೊಂಡರು.

ಪ್ರಕಾಶಂ ‘ಬಾರ್ ಎಟ್ ಲಾ’ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಮುಗಿಸಿದ್ದೇ ಅಲ್ಲದೆ ೫೦ ಪೌಂಡುಗಳ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನೂ ಪಡೆದರು.

ಬಾರಿಸ್ಟರ್ ಆಗಿ

ಆಗಿನ  ಕಾಲದಲ್ಲಿ ಮದರಾಸು ದಕ್ಷಿಣ ಭಾರತದ ಅತ್ಯಂತ ಪ್ರಮುಖ ನಗರ. ಯಾವುದೇ ವೃತ್ತಿಯಲ್ಲಿ ಮದರಾಸಿನಲ್ಲಿ ಯಶಸ್ಸು ಗಳಿಸಿದರೆ ಸಾಕು, ಅದರ ಕೀರ್ತಿ ದಕ್ಷಿಣ ಭಾರತಕ್ಕೆಲ್ಲ ವ್ಯಾಪಿಸುತ್ತಿತ್ತು. ಇಂಗ್ಲಿಷ್ ಕಲಿಕೆಗೆ ಮದರಾಸಿನಲ್ಲಿ ಅವಕಾಶ ಹೆಚ್ಚಾಗಿದ್ದುದರಿಂದ ವಕೀಲಿ ವೃತ್ತಿಯಲ್ಲಿ ತಮಿಳುನಾಡಿನವರು ಅತ್ಯುನ್ನತ ಸ್ಥಾನದಲ್ಲಿ ದ್ದರು. ಈ ಸೌಲಭ್ಯವಿಲ್ಲದ ಆಂಧ್ರದ ವಕೀಲರು ಗಳು ಅಷ್ಟು ಯಶಸ್ಸು ಗಳಿಸಿರಲಿಲ್ಲ. ಆದ್ದರಿಂದಲೇ ಅನೇಕರು ಪ್ರಕಾಶಂಗೆ ಸಹ ಮದರಾಸಿನಲ್ಲಿ ವಕೀಲವೃತ್ತಿ ಆರಂಭಿಸಬೇಡಿ ಎಂದು ಸಲಹೆಯಿತ್ತರು.

ಬುದ್ಧಿಶಾಲಿಯಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದರೆ ವಕೀಲನಾಗಿ ಮುಂದೆ ಬರಲು ಏನೂ ಅಡ್ಡಿಯಾಗಲಾರದು ಎಂಬ ಛಲದಿಂದ ಪ್ರಕಾಶಂ ಮದರಾಸಿನ ಹೈಕೋರ್ಟಿನಲ್ಲಿ ವಕೀಲರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಅನತಿ ಕಾಲದಲ್ಲಿಯೇ ಖ್ಯಾತರಾದ ಅವರು ಕ್ರಿಮಿನಲ್ ಮೊಕದ್ದಮೆಗಳನ್ನೂ ತೆಗೆದುಕೊಂಡಾಗ ಅವರಿಗೆ ಮದರಾಸಿನಲ್ಲಿ ಪ್ರಗತಿಗೆ ಅವಕಾಶವಿಲ್ಲ ಎಂದು ಕೊಂಡಿದ್ದವರಿಗೇ ಅಚ್ಚರಿ ಯಾಯಿತು.

ಬ್ಯಾರಿಸ್ಟರ್ ಆಗಿ ಪ್ರಕಾಶಂ ಅವರು ಎಂದೂ ತೀರ್ಪು ತಮ್ಮ ಪರವಾಗಿ ಬರಲಿ ಎಂದು ನ್ಯಾಯಾಧೀಶರ ಕೃಪೆಗಾಗಿ ಪ್ರಯತ್ನಿಸುತ್ತಿರಲಿಲ್ಲ. ತಮ್ಮ ಮನಸ್ಸಿಗೆ ಅನ್ನಿಸಿದ್ದನ್ನು ಸ್ಪಷ್ಟವಾಗಿ ನೇರವಾಗಿ ನಿರ್ಭಯದಿಂದ ಹೇಳುವ ಪ್ರವೃತ್ತಿ ಅವರದು. ಇದರಿಂದ ಅನೇಕ ಬಾರಿ ಅವರು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದ್ದರು. ಆದರೆ ಎಂದೂ ಅವರು ತೊಂದರೆಗೆ ಈಡಾಗಲಿಲ್ಲ.

ಅವರ ಖ್ಯಾತಿ ಎಲ್ಲಡೆಗೆ ವ್ಯಾಪಿಸಿ ಎಲ್ಲ ಪ್ರಮುಖ ಪಟ್ಟಣಗಳಿಂದಲೂ ಅವರಿಗೆ ಬೇಡಿಕೆ ಇರುತ್ತಿತ್ತು. ಅವರು ತಮ್ಮ ಕಕ್ಷಿದಾರರಿಂದ ವಸೂಲು ಮಾಡುತ್ತಿದ್ದ ಶುಲ್ಕ ದಿನಕ್ಕೆ ಐದುನೂರರಿಂದ ಸಾವಿರ ರೂಪಾಯಿಗಳು (ಆಗಿನ ಒಂದು ರೂಪಾಯಿ ಈಗಿನ ಹತ್ತು ರೂಪಾಯಿಗೆ ಸಮ ಎನ್ನಬಹುದು). ಅವರು ವಿದ್ಯಾರ್ಥಿಯಾಗಿದ್ದಾಗ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಕಟ್ಟಲು ಮೂರು ರೂಪಾಯಿ ಗಳಿಗಾಗಿ ಅವರ ತಾಯಿ ಸೀರೆಯೊಂದನ್ನು ಅಡವು ಇಡ ಬೇಕಾಗಿತ್ತು. ಅಂತಹ ಬಡತನದಿಂದ ಉದಕಮಂಡಲ, ರಾಜಮಹೇಂದ್ರಿ, ಮದರಾಸು, ಓನಗೋಲ್‌ಗಳಲ್ಲಿ ಒಂದೊಂದು ಬಂಗಲೆ, ಲಕ್ಷಾಂತರ ರೂಪಾಯಿ ಮೌಲ್ಯದ ಜಮೀನುಗಳನ್ನು ಮಾಡುವಷ್ಟು ಮೇಲಕ್ಕೆ ಬಂದರು. ಇದಕ್ಕೆ ಕಾರಣ ಅವರ ಶ್ರದ್ಧಾಪೂರ್ಣ ದುಡಿಮೆ.

ಪುರಸಭೆಯ ಕೆಲಸ

ಲಾರ್ಡ್ ರಿಪ್ಪನ್ ವೈಸ್‌ರಾಯ್ ಆಗಿದ್ದಾಗ ಸ್ಥಳೀಯ ಸಂಸ್ಥೆಗಳ ಸ್ಥಾಪನೆಗೆ ಪ್ರೋತ್ಸಾಹ ಕೊಟ್ಟ. ಅದರಂತೆ ರಾಜಮಹೇಂದ್ರಿಯಲ್ಲಿ ಒಂದು ಪುರಸಭೆ ಜನ್ಮ ತಾಳಿತು. ೧೯೦೦ ರಲ್ಲಿ ಪ್ರಕಾಶಂ ಪುರಸಭಾ ಸದಸ್ಯರಾಗಿ ಆಯ್ಕೆಯಾದರು. ೧೯೦೩ ರಲ್ಲಿ ಅದರ ಅಧ್ಯಕ್ಷರಾದರು.

ಪುರಸಭೆಯ ಅಧ್ಯಕ್ಷರಾಗಿ ನಿಸ್ಪೃಹತೆಯಿಂದ ಅವರು ಕಾರ್ಯ ನಿರ್ವಹಿಸಿದರು. ಪುರಸಭೆಯ ವಿರುದ್ಧ ಸಾರ್ವಜನಿಕರು ನಡೆದುಕೊಂಡಾಗ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದಂತೆ ಪುರಸಭೆಯಿಂದ ಜನರಿಗೆ ತೊಂದರೆ ಆಗಿದ್ದಲ್ಲಿ ಅದರ ನಿವಾರಣೆಗೆ ತತ್‌ಕ್ಷಣ ಏರ್ಪಾಡು ಮಾಡಿಸುತ್ತಿದ್ದರು. ಯಾವುದೇ ಕೆಲಸಕ್ಕೆ ಶಿಫಾರಸನ್ನು ಮಾಡುತ್ತಲೂ ಇರಲಿಲ್ಲ, ಇತರರು ಮಾಡಿದರೆ ಅದಕ್ಕೆ ಗಮನವನ್ನೂ ಕೊಡುತ್ತಿರಲಿಲ್ಲ. ಆದರೆ ಪ್ರತಿಯೊಂದು ಪ್ರಕರಣದಲ್ಲಿಯೂ ವಿಶಾಲದೃಷ್ಟಿಯಿಂದ ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಕ್ಕೆ ಬರುತ್ತಿದ್ದರು. ಆ ಊರಿನಲ್ಲಿ ಒಂದು ಉದ್ಯಾನವನ ಸ್ಥಾಪಿಸಲು, ಊರಿನಲ್ಲಿ ಒಳ್ಳೆಯ ಚರಂಡಿ ವ್ಯವಸ್ಥೆಯನ್ನು ಏರ್ಪಡಿಸಲು ತುಂಬ ಶ್ರಮವಹಿಸಿದರು. ಪುರಸಭೆಯ ಆದಾಯವೂ ಹೆಚ್ಚಿತು. ಅಂದ ಮಾತ್ರಕ್ಕೆ ಪುರಸಭೆಯ ಅಧ್ಯಕ್ಷಸ್ಥಾನ ತುಂಬ ಹಿತಕರವಾಗಿತ್ತು ಎಂದಲ್ಲ. ಅವರಿಗೆ ಅನೇಕ ಜನ ಅನೇಕ ಅಡೆತಡೆಗಳನ್ನು ಒಡ್ಡಿದರು. ಆದರೆ ಪ್ರಕಾಶಂರ ಕಾರ್ಯದಕ್ಷತೆಯ ಮುಂದೆ ಅವರ ವಿರೋಧಿಗಳು ಅಸಹಾಯಕರಾಗಿದ್ದರು. ೧೯೦೪ ರಲ್ಲಿ  ಪ್ರಕಾಶಂ ಇಂಗ್ಲೆಂಡಿಗೆ ಹೋದಾಗ ಪುರಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ದೇಶದ ಸ್ಥಿತಿ

ಕಾಂಗ್ರೆಸ್ ಪಕ್ಷದಲ್ಲಿ ಎರಡು ವಿಭಿನ್ನ ಗುಂಪು ಗಳಿದ್ದುವು. ತೀವ್ರಗಾಮಿ  ಕ್ರಮಗಳನ್ನು ಅನುಸರಿಸ ಬೇಕೆಂಬ ಗುಂಪಿಗೆ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ನಾಯಕರು. ಉಗ್ರಕ್ರಮಗಳನ್ನು ಅನುಸರಿಸದೆ ಸೌಮ್ಯ ಮಾರ್ಗ ಅನುಸರಿಸಬೇಕೆಂದು ಹೇಳುವ ಗುಂಪಿಗೆ ಗೋಪಾಲಕೃಷ್ಣ ಗೋಖಲೆ ಅವರು ನಾಯಕರು. ತಿಲಕ್ ಅವರನ್ನು ಭೇಟಿ ಮಾಡಿದ್ದ ಪ್ರಕಾಶಂ ಅವರಿಂದ ಪ್ರಭಾವಿತ ರಾಗಿದ್ದರು.

ಬ್ರಿಟಿಷ್ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಉಗ್ರನೀತಿ ಅನುಸರಿಸತೊಡಗಿತು. ‘ವಂದೇ ಮಾತರಂ’ ಎಂದು ಘೋಷಿಸುವುದು, ‘ಸ್ವರಾಜ್’ ಎನ್ನುವುದೂ ಅಪರಾಧವಾಯಿತು. ಯಾರಾದರೂ ತಮ್ಮ ಮನೆಯಲ್ಲಿ ದೇಶದ ನಾಯಕರುಗಳ ಭಾವಚಿತ್ರಗಳನ್ನು ಇಟ್ಟುಕೊಳ್ಳಲೂ ಅವಕಾಶವಿರಲಿಲ್ಲ.

ಇಂತಹ ಘಟನೆಗಳು ಸ್ವಾತಂತ್ರ್ಯ ಪ್ರೇಮಿಗಳನ್ನು ಕೋಪಗೊಳಿಸಿತ್ತು. ಗಾಯದ ಮೇಲೆ ಬರೆ ಹಾಕಿದಂತೆ ಬಂಗಾಳ ವಿಭಜನೆಯಾದಾಗ ಪರಿಸ್ಥಿತಿ ಇನ್ನೂ ಹದಗೆಟ್ಟಿತು. ಇಂತಹ ಹಿನ್ನಲೆಯಲ್ಲಿ ಬಿಪಿನ್ ಚಂದ್ರಪಾಲ್ ೧೯೦೭ ರಲ್ಲಿ ಮದರಾಸಿಗೆ ಬಂದಾಗ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಲು ಯಾರೂ ಮುಂದೆ ಬರಲಿಲ್ಲ. ಆಗ ಧೈರ್ಯ ತೋರಿಸಿದವರು ಪ್ರಕಾಶಂ.

ರಾಜಕೀಯ ನಾಯಕ

೧೯೨೧ರಲ್ಲಿ ಗಾಂಧೀಜಿಯವರು ಅಸಹಕಾರ ಚಳುವಳಿಗೆ ಕರೆಕೊಟ್ಟಾಗ ಪ್ರಕಾಶಂ ಸತ್ಯಾಗ್ರಹದಲ್ಲಿ ಕಾಲಿಟ್ಟರು. ವಕೀಲೀ ವೃತ್ತಿಯಲ್ಲಿಯೇ ಮುಂದುವರೆದಿದ್ದರೆ ಸ್ವಲ್ಪ ಸಮಯದಲ್ಲಿಯೇ ನ್ಯಾಯಾಧೀಶರಾಗಿ ನೇಮಕ ವಾಗುವ ಸಂಭವವಿತ್ತು. ಆದರೆ ಪ್ರಕಾಶಂ ಅದಕ್ಕಾಗಲೀ ಅಥವಾ ಆದಾಯಕ್ಕಾಗಲೀ ಆಸೆ ಪಡದೆ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಉದ್ದೇಶದಿಂದ ವಕೀಲಿವೃತ್ತಿಯನ್ನು ತ್ಯಜಿಸಿದರು. ಅದೇ ವರ್ಷ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾದರು.

ಅಸಹಕಾರ ಚಳುವಳಿಯ ಬಗ್ಗೆ ತನಿಖೆ ನಡೆಸಲು ಸರ್ಕಾರವು ಒಂದು ಸಮಿತಿಯನ್ನು ನೇಮಿಸಿತು. ಅದು ವಿಚಾರಣೆ ನಡೆಸಲು ಗುಂಟೂರಿಗೆ ಬಂದಾಗ ಪ್ರಕಾಶಂ ಮೂವತ್ತು ಸಾವಿರ ಕಾಂಗ್ರೆಸ್ ಕಾರ್ಯಕರ್ತರುಗಳ ಭಾರಿ ಪ್ರದರ್ಶನವನ್ನು ಏರ್ಪಡಿಸಿದರು. ಸಮಿತಿಯ ಭೇಟಿಗೆ ವಿರೋಧ ವ್ಯಕ್ತಪಡಿಸುವುದು ಇದರ ಉದ್ದೇಶ. ಭಾಷಣ ಮಾಡದಂತೆ ನಿಷೇಧಾಜ್ಞೆ ಇದ್ದರೂ ಅದನ್ನು ಉಲ್ಲಂಘಿಸಿ ಹಲವು ಹತ್ತು ಕಡೆ ಭಾಷಣಗಳನ್ನು ಮಾಡಿದರು. ಆದರೆ ಪೊಲೀಸರಿಗೆ ಅವರನ್ನು ಬಂಧಿಸುವ ಧೈರ್ಯ ಇರಲಿಲ್ಲ. ಅದರಿಂದ ಮತ್ತಷ್ಟು ಗಲಭೆಗಳಾಗಬಹುದೆಂದು ಅವರು ಸುಮ್ಮನಿದ್ದರು.

ಇದೇ ರೀತಿ ಕೇರಳದ ಮಲಬಾರಿನಲ್ಲಿ  ಗಲಭೆ ಯಾದಾಗ ಹೊರಗಿನ ಜನ ಅಲ್ಲಿಗೆ ಹೋಗುವುದನ್ನು ಪ್ರತಿಬಂಧಿಸಲಾಗಿತ್ತು. ಆಗ ಸಹ ಪ್ರಕಾಶಂ ಹೆದರದೆ ಅಲ್ಲಿಗೆ ಹೋಗಿ ಜನರ ಕಷ್ಟಸುಖಗಳನ್ನು ವಿಚಾರಿಸಿಕೊಂಡರು. ಇದಕ್ಕೆ ಶಿಕ್ಷೆಯಾಗಿ ಸರ್ಕಾರ ಉದಕಮಂಡಲದಲ್ಲಿದ್ದ ಅವರ ಬಂಗಲೆಯನ್ನು ಮುಟ್ಟುಗೋಲು ಹಾಕಿಕೊಂಡಿತು.

ಪ್ರಕಾಶಂ ಅವರ ನಡುವಳಿಕೆ ಜನಕ್ಕೆ ತುಂಬ ಮೆಚ್ಚುಗೆಯಾಯಿತು. ಜನ ಕಷ್ಟದಲ್ಲಿದ್ದಾಗ ಅವರ ನಡುವೆಯೇ ಪ್ರಕಾಶಂ ಇರುತ್ತಿದ್ದ ಕಾರಣ ಅವರು ಅಪಾರ ಜನಪ್ರಿಯತೆ ಗಳಿಸಿದರು.

೧೯೨೬ರಲ್ಲಿ ಕಾಂಗ್ರೆಸ್ ಕೇಂದ್ರ ಶಾಸನಸಭೆಗೆ ಸ್ಪರ್ಧಿಸಲು ನಿರ್ಧರಿಸಿತು. ಆಗ ಪ್ರಕಾಶಂ ಸಹ  ಸ್ಪರ್ಧಿಸಿ ಗಣನೀಯ ಬಹುಮತದಿಂದ ಆಯ್ಕೆಯಾದರು. ವಲ್ಲಭ ಬಾಯಿ ಪಟೇಲ್, ಮದನ ಮೋಹನ ಮಾಳವೀಯ, ಮೋತಿಲಾಲ ನೆಹರು ಮುಂತಾದ ಘಟಾನುಘಟಿಗಳೆಲ್ಲ ಆಗ ಕೇಂದ್ರ ಶಾಸನ ಸಭೆಗೆ ಆಯ್ಕೆಯಾಗಿದ್ದರು.

ಸ್ವರಾಜ್ಯ ಪತ್ರಿಕೆ

ಕಾಂಗ್ರೆಸ್ ಪಕ್ಷ ನಡೆಸುತ್ತಿದ್ದ ಸ್ವಾತಂತ್ರ್ಯ ಸಮರದ ಬಗ್ಗೆ ಜನಕ್ಕೆ ಪ್ರಚುರಪಡಿಸಲು ಒಂದು ಆಂಗ್ಲಪತ್ರಿಕೆ ತೀವ್ರ ಅವಶ್ಯವಾಗಿತ್ತು. ಆಗ ಆ ಜವಾಬ್ದಾರಿಯನ್ನು ಹೊರಲು ಪ್ರಕಾಶಂ ಮುಂದೆ ಬಂದರು.

ಈ ಮುಂಚೆಯೇ ಅವರು ಪತ್ರಿಕೋದ್ಯಮದಲ್ಲಿ ಒಂದಷ್ಟು ಕೆಲಸ ಮಾಡಿದ್ದರು. ೧೯೧೨ರಲ್ಲಿ ‘ದಿ ಮದ್ರಾಸ್ ಲಾ ಟೈಮ್ಸ್’ ಎಂಬ ಕಾನೂನಿಗೆ ಸಂಬಂಧಿಸಿದ ಪತ್ರಿಕೆಯನ್ನು ತೆಗೆದುಕೊಂಡಿದ್ದರು. ಈ ಪತ್ರಿಕೆ ಸೌಮ್ಯಭಾಷೆ ಬಳಸಿದರೂ ಸರ್ಕಾರದ  ಕೆಲವು ಕಾನೂನು ಗಳು ಅಸಮರ್ಪಕ ಎನಿಸಿದಾಗ ಟೀಕಿಸುವುದರಲ್ಲಿ ಹಿಂದೆ ಬೀಳಲಿಲ್ಲ.

೧೯೨೧ರ ಅಕ್ಟೋಬರ್ ೧೬ರಂದು ರಾಜಾಜಿಯವರ ಸಲಹೆಯಂತೆ ‘ಸ್ವರಾಜ್ಯ’ಎಂಬ ದಿನಪತ್ರಿಕೆಯನ್ನು ಸ್ವಾತಂತ್ರ್ಯ ಸಮರದ ಪ್ರಚಾರಕ್ಕಾಗಿ ಪ್ರಕಾಶಂ ಆರಂಭಿಸಿದರು. ಅದಕ್ಕೆ ಅವಶ್ಯವಿದ್ದ ಸುಮಾರು ಮೂರು ಲಕ್ಷ ರೂಪಾಯಿಗಳ ಬಂಡವಾಳವನ್ನು ಒದಗಿಸಲು ತಾವೇ ಗಣನೀಯವಾಗಿ ವೆಚ್ಚಮಾಡಿದರು. ಅಲ್ಲದೆ ಸಾರ್ವಜನಿಕರೂ ಷೇರುಗಳನ್ನು ಕೊಂಡರು. ಆರಂಭದಲ್ಲಿ ಪ್ರಕಾಶಂ ಅವರೇ ಸಂಪಾದಕರಾಗಿದ್ದರು. ಅವರು ಪತ್ರಿಕೆಯ ಪ್ರಸಾರವನ್ನು ಹತ್ತು ಸಾವಿರಕ್ಕೆ  ಮುಟ್ಟಿಸಿದರು. ಮುಂದೆ ಸರದಾರ್ ಕೆ. ಎಂ. ಪಣಿಕ್ಕರ್ ಅವರು ಸಂಪಾದಕರಾಗಿ ಕೆಲಸ ಮಾಡತೊಡಗಿದಾಗ ಪತ್ರಿಕೆ ತುಂಬ ಅಭಿವೃದ್ಧಿ ಹೊಂದಿತು.

ಆದರೆ ಕೆಲಕಾಲದ ನಂತರ ಸೂಕ್ತವಾದ ಮೇಲ್ವಿಚಾರಣೆಯಿಲ್ಲದ ಕಾರಣ ಪತ್ರಿಕೆ ತೀವ್ರ ನಷ್ಟ ಅನುಭವಿಸಲಾರಂಭಿಸಿತು. ಪರಿಸ್ಥಿತಿ ಸುಧಾರಿಸಲು ಬೇಕಾದ ಹಣಕ್ಕಾಗಿ ಪ್ರಕಾಶಂ ತಮ್ಮ ಆಸ್ತಿಯನ್ನು ವಿನಿಯೋಗಿಸಿದರು. ಅದು ಸಾಲದಾದಾಗ ಚಂದಾ ಎತ್ತಲು ತುಂಬ ಶ್ರಮಿಸಿದರು.

‘ಸ್ವರಾಜ್ಯ’ ಪತ್ರಿಕೆ ಜನರ ಹಕ್ಕುಗಳನ್ನು ರಕ್ಷಿಸಲು ತುಂಬ ಹೋರಾಡುತ್ತಿತ್ತು. ಶಾಸನ ಸಭೆಗಳಿಗೆ ಚುನಾವಣೆ ನಡೆಯುತ್ತಿದ್ದ ಸಮಯದಲ್ಲಿ ಅದು ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿತ್ತು. ಗೋದಾವರಿ ನದಿಯ ಮುಖಜ ಭೂಮಿಯ ಸುತ್ತಣ ಪ್ರದೇಶದಲ್ಲಿ ಜಮೀನು ತೆರಿಗೆಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದಾಗ ‘ಸ್ವರಾಜ್ಯ’ ಅದನ್ನು ಉಗ್ರವಾಗಿ ಪ್ರತಿಭಟಿಸಿತು. ಈ ವಿಷಯದಲ್ಲಿ ಪ್ರಕಾಶಂ ಅವರು ಬರೆದ ಸುಮಾರು ಇಪ್ಪತ್ತು ಲೇಖನಗಳು ತೆರಿಗೆಯ ಹೆಚ್ಚಳದಿಂದ ಜನಕ್ಕೆ ಆಗುವ ಅನಾನುಕೂಲಗಳನ್ನು ಕೂಲಂಕಷವಾಗಿ ವಿವರಿಸಿದವು. ತತ್ಪರಿಣಾಮವಾಗಿ ಸರ್ಕಾರ ತೆರಿಗೆಯನ್ನು ಹಿಂತೆಗೆದುಕೊಂಡಿತು.

ಅದೇ ರೀತಿ ಮದರಾಸು ಪ್ರಾಂತ್ಯದಿಂದ ಒರಿಯಾ ಪ್ರದೇಶಗಳನ್ನು ಬೇರ್ಪಡಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಾಗ ಆಂಧ್ರದ ಜನಗಳ ಹಿತರಕ್ಷಣೆ ಕುರಿತು ‘ಸ್ವರಾಜ್ಯ’ ಪ್ರಕಟಿಸಿದ ಲೇಖನಗಳನ್ನು ಸರ್ಕಾರ ಗಮನಕ್ಕೆ ತಂದುಕೊಂಡಿತು. ಆಂಧ್ರ ಜನತೆಯ ಹಿತ ರಕ್ಷಣೆಗೆ ಸರ್ವ ಪ್ರಯತ್ನಗಳನ್ನೂ ‘ಸ್ವರಾಜ್ಯ’ ಮಾಡಿತು. ಆದರೆ ಅದು ಎಂದೂ ಪಕ್ಷಪಾತವನ್ನು ಮಾಡಲಿಲ್ಲ. ಕೆಲವು ತೆಲುಗು ಪತ್ರಿಕೆಗಳು ತಮಿಳುನಾಡಿನ ನಾಯಕರುಗಳನ್ನು ವಿನಾಕಾರಣ ಟೀಕಿಸಿದಾಗ ‘ಸ್ವರಾಜ್ಯ’ ಅದನ್ನು ಖಂಡಿಸಿ ಭಾಷಾದುರಭಿಮಾನ ಸಲ್ಲದು ಎಂದು ಎಚ್ಚರಿಸಿತು.

ರಾಷ್ಟ್ರೀಯ ದಿನಪತ್ರಿಕೆಯಾಗಿ ಸಹ ‘ಸ್ವರಾಜ್ಯ’ ತುಂಬ ಕೆಲಸ ಮಾಡಿತು. ಜಾಹೀರಾತುಗಳನ್ನು ಹಾಕುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯ ಚಟುವಟಿಕೆಗಳಿಗೆ, ತತ್ವಗಳಿಗೆ ಮೀಸಲಾಗಿತ್ತು. ಅಕಾಲಿ ದಳದ ಸಮಸ್ಯೆಗಳು, ಹಿಂದೂ ಮುಸ್ಲಿಮ್ ಐಕ್ಯತೆ ಮುಂತಾದ ರಾಷ್ಟ್ರೀಯ ಸಮಸ್ಯೆಗಳನ್ನು ಕುರಿತ ‘ಸ್ವರಾಜ್ಯ’ ಲೇಖನಗಳು ತುಂಬ ಉಪಯುಕ್ತವಾಗಿದ್ದುವು ಆದರೆ ಹಲವು ವರ್ಷಗಳ ನಂತರ ರಾಜಾಜಿ, ಪ್ರಕಾಶಂ ಹಾಗೂ ಗಾಂಧೀಜಿಯವರ ನಡುವೆ ಕೆಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಬಂದು ಪತ್ರಿಕೆಯನ್ನು ನಡೆಸುವುದು ದುಸ್ತರವಾಯಿತು. ಬರಬರುತ್ತ ಆರ್ಥಿಕ ಸ್ಥಿತಿ ತುಂಬ ಹದಗೆಟ್ಟಿತು. ಪ್ರಕಾಶಂ ತಮ್ಮ ಸರ್ವಸ್ವವನ್ನೂ ಅದಕ್ಕೆ ವಿನಿಯೋಗಿಸಿದ್ದೇ ಅಲ್ಲದೇ ಸುಮಾರು ಹನ್ನೆರಡು ಲಕ್ಷರೂಪಾಯಿಗಳನ್ನು ಸಂಗ್ರಹಿಸಿದರು. ಆದರೆ ಜಾಹೀರಾತುಗಳಿಲ್ಲದೆ ಪತ್ರಿಕೆ ಬದುಕುವುದು ಕಷ್ಟ. ಹೀಗಾಗಿ ಅನಿವಾರ್ಯವಾಗಿ ‘ಸ್ವರಾಜ್ಯ’ ಪತ್ರಿಕೆಯನ್ನು ೧೯೩೫ರಲ್ಲಿ ನಿಲ್ಲಿಸಬೇಕಾಯಿತು.

ಆಗಿನ ಕಾಲದಲ್ಲಿ ಬೇರಾವ ಪತ್ರಿಕೆಗಿಂತ ರಾಷ್ಟ್ರೀಯ ಸಮಸ್ಯೆಗಳನ್ನು ಹೆಚ್ಚು ಯಶಸ್ವಿಯಾಗಿ ಪ್ರಚಾರಪಡಿಸಿದ್ದು ‘ಸ್ವರಾಜ್ಯ.’ ಸರ್ದಾರ್ ಪಣಿಕ್ಕರ್, ಖಾಸಾ ಸುಬ್ಬರಾವ್, ಜೆ.ಎ.ಕೃಪಾನಿಧಿ ಮುಂತಾದ ಹೆಸರಾಂತ ಪತ್ರಿಕೋದ್ಯಮಿಗಳನ್ನು ಪತ್ರಿಕಾರಂಗಕ್ಕೆ ಕೊಡುಗೆಯಾಗಿ ಕೊಟ್ಟ ಖ್ಯಾತಿ ಅದರದು.

ಪ್ರಜಾಪತ್ರಿಕಾ

ಪ್ರಕಾಶಂ ಅವರು ಪತ್ರಿಕಾರಂಗವನ್ನು ಬಿಟ್ಟು ಬಿಡಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದನಂತರ ಮತ್ತೆ ಆ ರಂಗಕ್ಕೆ ಮರಳಿದರು. ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದ್ದ ವೈಖರಿ ಪ್ರಕಾಶಂಗೆ ಹಿಡಿಸಲಿಲ್ಲ. ದೇಶದಲ್ಲಿ ಕ್ಷಾಮ, ಅಭಾವ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮುಂತಾದ ಅಹಿತಕರ ಸನ್ನಿವೇಶಗಳಿಗೆ ಸರ್ಕಾರದ ದುರಾಡಳಿತ ಕಾರಣವೆಂದು ಅವರು ಹೇಳುತ್ತಿದ್ದರು. ಅದನ್ನು ಪ್ರತಿಭಟಿಸಿ ಆಡಳಿತ ಪಕ್ಷವನ್ನು ಸರಿಯಾದ ಹಾದಿಗೆ ತಿರುಗಿಸಲೆಂದು ೧೯೫೨ ರಲ್ಲಿ ‘ಪ್ರಜಾಪತ್ರಿಕಾ’ ಎಂಬ ವಾರಪತ್ರಿಕೆಯನ್ನು ಆರಂಭಿಸಿದರು. ಹಲವು ಕಾಂಗ್ರೆಸ್ಸಿಗರು ಕಾಂಗ್ರೆಸ್ ತತ್ವಗಳಿಗೆ ತಿಲಾಂಜರಲಿಕೊಟ್ಟು ಜನಗಳ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದುದನ್ನು ‘ಪ್ರಜಾಪತ್ರಿಕಾ’ ಬಯಲಿಗೆಳೆಯಿತು. ಮದರಾಸು ಪ್ರಾಂತ್ಯದಲ್ಲಿ ಆಂಧ್ರರಿಗೆ ಸಾಮಾಜಿಕ ನ್ಯಾಯ ದೊರೆಯುತ್ತಿಲ್ಲವೆಂಬ ಕಾರಣ ಪ್ರತ್ಯೇಕ ಆಂಧ್ರ ರಾಜ್ಯಕ್ಕಾಗಿ ‘ಪ್ರಜಾಪತ್ರಿಕಾ’ ಚಳುವಳಿಯನ್ನೇ ಆರಂಭಿಸಿತು. ೧೯೩೩ ರವರೆಗೆ ಇದು ಪ್ರಕಟವಾಗುತ್ತಿತ್ತು.

ಕಾಂಗ್ರೆಸಿನ  ವಿಜಯದ ಶಿಲ್ಪಿ

ಜಮೀನುದಾರರ ಅಧೀನದಲ್ಲಿ ಕೆಲಸ ಮಾಡು ತ್ತಿದ್ದ ರೈತರು ತುಂಬ ಕಷ್ಟಗಳನ್ನು ಅನುಭವಿ ಸುತ್ತಿದ್ದರು. ಅವರ ಅಭಿವೃದ್ಧಿಗಾಗಿ ಮೊದ ಮೊದಲು ಕಾಂಗ್ರೆಸ್ ಸಹ ಗಮನ ಕೊಡಲಿಲ್ಲ. ಈ ಜನಗಳ ಮೇಲ್ಮೈಗಾಗಿ ಬಿಹಾರದ ಚಂಪಾರಣ್ಯದಲ್ಲಿ ಗಾಂಧೀಜಿ, ವಲ್ಲಭಭಾಯಿ ಪಟೇಲರು ಗುಜರಾತಿನಲ್ಲಿ, ಉತ್ತರ ಪ್ರದೇಶದಲ್ಲಿ ಜವಹರಲಾಲ ನೆಹರೂರವರು ಕೆಲವು ಕಾರ್ಯಕ್ರಮಗಳನ್ನು ಹಾಕಿ ಕೊಂಡಿದ್ದರು. ೧೯೨೮ರಲ್ಲಿ ಪ್ರಕಾಶಂ ಈ ಹಿಂದೆಯೇ ಹೇಳಿದಂತೆ ತೆರಿಗೆಯ ಹೆಚ್ಚಳದ ವಿರುದ್ಧ  ಪ್ರತಿಭಟಿಸಿ ಅದು ಜಾರಿಗೆ ಬರದಂತೆ ಮಾಡಿದ್ದರು. ಅದರ ಹೊರತು ದೀರ್ಘಕಾಲ ಕಾಂಗ್ರೆಸ್ ಈ ಸಮಸ್ಯೆಯನ್ನು ನಿರ್ಲಕ್ಷಿಸಿತ್ತು. ಕಡೆಗೆ ಸಮಾಜವಾದಿಗಳು ಕಾಂಗ್ರೆಸ್ ಪಕ್ಷದೊಳಗಡೆ ಸಂಘಟಿತರಾದಾಗ ಅವರು ಕಾಂಗ್ರೆಸ್‌ನ ಲಕ್ಷ್ಯವನ್ನು ರೈತರತ್ತ ಸೆಳೆಯುವದರಲ್ಲಿ ಸಮರ್ಥರಾದರು.

೧೯೩೭ರಲ್ಲಿ ಭಾರತದಲ್ಲಿ ಬ್ರಿಟಿಷ್ ಸರ್ಕಾರ ಪ್ರಾಂತೀಯ ಸರ್ಕಾರಗಳ ರಚನೆಗಾಗಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು. ಈ ಚುನಾವಣೆಯಲ್ಲಿ ಅಕ್ಷರಸ್ಥರು ಮಾತ್ರ ಮತದಾನ ಮಾಡಬಹುದಿತ್ತು.

ಆಂಧ್ರದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸಿನ ಹೋರಾಟ ಪ್ರಕಾಶಂ ಅವರ ಜವಾಬ್ದಾರಿಯಾಗಿತ್ತು. ಜಸ್ಟಿಸ್ ಪಕ್ಷ ಎಂಬ ಪಕ್ಷ ಸಹ ಕಣದಲ್ಲಿತ್ತು. ಆ ಪಕ್ಷಕ್ಕೆ ಶ್ರೀಮಂತ ಜಮೀನುದಾರರ ಬೆಂಬಲವಿತ್ತು. ಆದರೆ ಕಾಂಗ್ರೆಸ್ ಪಕ್ಷದ ಬಳಿ ಹಣವಿರಲಿಲ್ಲ. ಆದರೆ ಪ್ರಕಾಶಂ ಧೃತಿಗೆಡಲಿಲ್ಲ. ಊಟ, ತಿಂಡಿ, ನಿದ್ದೆಗಳನ್ನು ಕಡೆಗಣಿಸಿ ವಿಶ್ರಾಂತಿಯಿಲ್ಲದೆ ಆಂಧ್ರದಾದ್ಯಂತ ಬಿರುಗಾಳಿಯಂತೆ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ಅದರ ಪರಿಣಾಮವಾಗಿ ೧೯೨೨ರಿಂದ ಅಧಿಕಾರದಲ್ಲಿದ್ದ ‘ಜಸ್ಟಿಸ್ ಪಕ್ಷ’ ಸೋತಿತು. ಮುಖ್ಯಮಂತ್ರಿ ಸಹ ಚುನಾವಣೆಯಲ್ಲಿ ಗೆಲ್ಲಲಿಲ್ಲ. ಇಡಿಯ ಆಂಧ್ರ ಪ್ರಾಂತದಲ್ಲಿ ಆ ಪಕ್ಷಕ್ಕೆ ಒಂದೇ ಒಂದು ಸ್ಥಾನ ದೊರಕಿತು. ಆದರೂ ಜನತೆ ಪ್ರಕಾಶಂರಲ್ಲಿ ಅಷ್ಟೊಂದು ಅಭಿಮಾನ ಇಟ್ಟು ಕೊಂಡಿದ್ದರು.

ಕಂದಾಯ ಮಂತ್ರಿ

ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಪಕ್ಷ ಮಂತ್ರಿ ಮಂಡಲವನ್ನು ರಚಿಸಿತು ರಾಜಾಜಿ ಮುಖ್ಯ ಮಂತ್ರಿಯಾದರು. ಪ್ರಕಾಶಂ ಕಂದಾಯ ಮಂತ್ರಿಯಾದರು.

ಜಮೀನುದಾರರು ತಮ್ಮ ಕೈಕೆಳಗೆ ದುಡಿಯುತ್ತಿದ್ದ ರೈತವರ್ಗದವರನ್ನು ಶೋಷಣೆ ಮಾಡುತ್ತಿದ್ದರು. ಅದನ್ನು ತಪ್ಪಿಸಲು ಜಮೀನುದಾರಿ ಪದ್ಧತಿಯನ್ನು ರದ್ದುಪಡಿಸ ಬೇಕೆಂದು  ಸಮಾಜವಾದಿಗಳು ಒತ್ತಾಯ ಪಡಿಸುತ್ತಿದ್ದರು. ರೈತರ ಶೋಷಣೆಯನ್ನು ಕೊನೆಗಾಣಿಸುವುದು, ರೈತರ ಸ್ಥಿತಿಗತಿಗಳನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಪ್ರಕಾಶಂ ಅವರ ಉದ್ದೇಶ. ರೈತರ ನ್ಯಾಯಬದ್ಧ ಹಕ್ಕುಗಳು, ಗೇಣಿಯ ವಸೂಲಿ ಮುಂತಾದ ವಿಷಯಗಳನ್ನು ಕುರಿತು ಕೂಲಂಕಷ ವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಒಂದು ಸಮಿತಿಯ ನೇಮಕ ವಾಯಿತು. ಇದರಲ್ಲಿ ಒಂಭತ್ತು ಸದಸ್ಯರಿದ್ದು ಪ್ರಕಾಶಂ ಅಧ್ಯಕ್ಷರಾಗಿದ್ದರು. ಸುಮಾರು ಹದಿನಾಲ್ಕು ತಿಂಗಳು ಸಮಗ್ರವಾಗಿ ಅಧ್ಯಯನ ನಡೆಸಿ ೬೦೦೦ ಪುಟಗಳ ಬೃಹತ್ ವರದಿಯನ್ನು ಈ ಸಮಿತಿ ಸಿದ್ಧಪಡಿಸಿತು. ಇದರಲ್ಲಿ ಹದಿನೆಂಟು ಅಧ್ಯಾಯ ಗಳಿದ್ದುದಲ್ಲದೆ ಅನೇಕ  ವಿಷಯ ಗಳು ಅಡಕವಾಗಿದ್ದುವು. ಆದಕಾರಣ ಇದಕ್ಕೆ ‘ಮಹಾಭಾರತ’ವೆಂದು ನಾಮಕರಣವಾಯಿತು.

ಈ ವರದಿಯಲ್ಲಿ ಜಮೀನುದಾರರಿಗೆ ಹಿಡಿಸದ ತೀರ್ಪುಗಳಿದ್ದುವು. ಅನೇಕ ಸರ್ಕಾರಿ ಅಧಿಕಾರಿಗಳು ಅವರ ಪರವಾಗಿದ್ದು ಸಮಿತಿಯ ಕೆಲಸಕ್ಕೂ ಸಹಕರಿಸುತ್ತಿರಲಿಲ್ಲ. ಅಲ್ಲದೆ ಶಾಸನಸಭೆ ವರದಿಯನ್ನು ಅಂಗೀಕರಿಸಿದ ಮೇಲೆ ಗವರ್ನರನ ಸಹಿ ಹಾಕವುದರಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಯಿತು. ಆ ಮಧ್ಯೆ ಕಾಂಗ್ರೆಸ್ ಹೈಕಮ್ಯಾಂಡ್ ಅಧಿಕಾರ ತ್ಯಜಿಸುವ ನಿರ್ಧಾರ ತೆಗೆದುಕೊಂಡಿತು. ಅದರ ಪರಿಣಾಮವಾಗಿ ರಾಜಾಜಿ ಮಂತ್ರಿಮಂಡಲ ರಾಜೀನಾಮೆ ಕೊಡಬೇಕಾಯಿತು.

ಮುಖ್ಯಮಂತ್ರಿಯಾಗಿ

೧೯೩೯ರ ನಂತರ ರಾಜಕೀಯ ರಂಗದಲ್ಲಿ ಕೆಲವು ಬದಲಾವಣೆಗಳಾದುವು. ರಾಜಾಜಿಯವರು ಕಾಂಗ್ರೆಸಿನ ಕೆಲವು ನೀತಿಗಳನ್ನು ವಿರೋಧಿಸಿ ಪಕ್ಷದಿಂದ ಹೊರಗೆ ಬಂದರು. ಪ್ರಕಾಶಂರ ಬಲಗೈಯಂತಿದ್ದ ಸಾಂಬ ಮೂರ್ತಿ (ಮದರಾಸ್ ಶಾಸನ ಸಭೆಯ ಸ್ಪೀಕರ್) ಸಹ ಪ್ರಕಾಶಂರಿಂದ ಬೇರೆಯಾದರು.

ಕಾಂಗ್ರೆಸ್ ಪಕ್ಷ ೧೯೪೨ ರಲ್ಲಿ ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಎಂದು ಘರ್ಜಿಸಿ ‘ಕ್ವಿಟ್ ಇಂಡಿಯಾ’ ಚಳುವಳಿಯನ್ನು ಆರಂಭಿಸಿತು. ಇದರಿಂದ ಕೋಪಗೊಂಡ ಬ್ರಿಟಿಷ್ ಸರ್ಕಾರ ಕಾಂಗ್ರೇಸ್ ಪಕ್ಷವನ್ನು ಬಹಿಷ್ಕರಿಸಿತು. ಪಕ್ಷದ ನಾಯಕರುಗಳನ್ನೂ ಸದಸ್ಯರನ್ನೂ ಸೆರೆಮನೆಗೆ ತಳ್ಳಿತು. ಆಂಧ್ರ ಪ್ರಾಂತದಲ್ಲಿ ಚಳುವಳಿಯ ನಾಯಕತ್ವ ವಹಿಸಿದ್ದ ಪ್ರಕಾಶಂ ಅವರಿಗೆ ಮೂರು ವರ್ಷ ಸೆರೆವಾಸ ಪ್ರಾಪ್ತವಾಯಿತು.

೧೯೪೬ರಲ್ಲಿ ಮತ್ತೇ ಸಾರ್ವತ್ರಿಕ ಚುನಾವಣೆಗಳು ನಡೆದು ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂದಿತು. ಪ್ರಕಾಶಂ ಅವರು ಮದರಾಸ್ ಪ್ರಾಂತದ ಮುಖ್ಯಮಂತ್ರಿಗಳಾಗು ವುದನ್ನು ಅವರ ಪಕ್ಷದಲ್ಲಿ ಹಲವರು ವಿರೋಧಿಸಿದರು. ಆದರೂ ಅವರು ಪಕ್ಷದ ಶಾಸಕರ ನಾಯಕರಾಗಿ ಆಯ್ಕೆಯಾದರು, ಮುಖ್ಯಮಂತ್ರಿಗಳಾದರು.

ಒಂದು ಅಹಿತ ಪ್ರಸಂಗ

ಪ್ರಕಾಶಂ ಅವರು ಮುಖ್ಯಮಂತ್ರಿಯಾಗುವ ಮೊದಲು ಒಂದು ಕಹಿಯಾದ ಸನ್ನಿವೇಶವನ್ನು ಎದುರಿಸ ಬೇಕಾಯಿತು.

ಪ್ರಕಾಶಂ  ವಕೀಲರಾಗಿ ಅಪಾರ ಯಶಸ್ಸು ಗಳಿಸಿ ಲಕ್ಷಾಂತರ ರೂಪಾಯಿಗಳನ್ನು ಗಳಿಸಿದ್ದರಷ್ಟೆ. ೧೯೩೫ ರ ವೇಳೆಗೆ ರಾಷ್ಟ್ರಕ್ಕಾಗಿ ದುಡಿಯುವುದರಲ್ಲಿ ಈ ಆಸ್ತಿಯೆಲ್ಲ ವಿನಿಯೋಗವಾಗಿ ಅವರು ಭಿಕಾರಿಯಾಗಿದ್ದರು. ಅವರು ೧೯೪೫ರಲ್ಲಿ ಸೆರೆಯಿಂದ ಹೊರಬಂದಾಗ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದರು. ಇದನ್ನು ಅರಿತ ಜನ ಅವರಿಗೆ ನೆರವು ನೀಡಲು ನಿರ್ಧರಿಸಿದರು. ಅತ್ಯಂತ ಕ್ಷಿಪ್ರವಾಗಿ ಐವತ್ತು ಸಾವಿರ ರೂಪಾಯಿಗಳನ್ನು ಕಾಣಿಕೆ ನೀಡಿ ಆಂಧ್ರದ ಜನತೆ ತಮ್ಮ ನಾಯಕನ ಮೇಲೆ ತಮಗೆ ಇದ್ದ ಅಭಿಮಾನವನ್ನು ತೋರಿಸಿದರು. ದೇಶದ ರಾಜಕೀಯ ಪರಿಸ್ಥಿತಿಯನ್ನು ವಿವರಿಸಲು ಅವರು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಾಗ ಎಲ್ಲೆಡೆಯಲ್ಲಿ ಅವರಿಗೆ ನಿಧಿ ಅರ್ಪಿತವಾಯಿತು. ಸುಮಾರು ಆರು ತಿಂಗಳ ನಂತರ ಗಾಂಧೀಜಿ ಹಾಗೂ ಪಟೇಲ್ ಅವರುಗಳು ‘ಈ ರೀತಿ ನಿಮಗೆ ಅರ್ಪಿಸಲ್ಪಟ್ಟ ನಿಧಿಯನ್ನು ನೀವು ಪಕ್ಷಕ್ಕೆ ಕೊಡುವುದು ಸೂಕ್ತ’ ಎಂದು ಹೇಳಿ ಪತ್ರಗಳನ್ನು ಬರೆದರು. ನಿಜಕ್ಕೂ ಪ್ರಕಾಶಂರ ವೈಯುಕ್ತಿಕ ವೆಚ್ಚಗಳಿಗಾಗಿ ಆಂಧ್ರದ ಜನತೆ ಈ ಹಣವನ್ನು ಸಂಗ್ರಹಿಸಿಕೊಟ್ಟಿದ್ದರು. ಪಕ್ಷಕ್ಕೂ ಅದಕ್ಕೂ ಏನೂ ಸಂಬಂಧವಿರಲಿಲ್ಲ. ಅವರು ಜನಗಳನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಹುರಿದುಂಬಿ ಸಲು ಅಗತ್ಯವಿದ್ದ ಓಡಾಟಕ್ಕೆ ಈ ಹಣವನ್ನು ವಿನಿಯೋಗಿಸಿ ದ್ದರೇ ಹೊರತು ತಮ್ಮ ಸಾಲಗಳನ್ನು ತೀರಿಸಿ ಕೊಳ್ಳಲು ಅಲ್ಲ. ಮದರಾಸು ಪ್ರಾಂತ ಶಾಸಕರು ಪ್ರಕಾಶಂ ಅವರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದಾಗ ಈ ಅಹಿತಕರ ಪ್ರಸಂಗ ಮುಕ್ತಾಯ ಗೊಂಡಿತು.

ಪ್ರಾಮಾಣಿಕತೆಯೇ ಅವರಿಗೆ ಶತ್ರು

ಅಂದಮಾತ್ರಕ್ಕೆ ಪ್ರಕಾಶಂ ಮುಖ್ಯಮಂತ್ರಿಯಾಗಿ ಸುಲಭವಾಗಿ ಕೆಲಸ ಮಾಡಲು ಸಾಧ್ಯವಾಯಿತು ಎಂದಲ್ಲ. ಕಾಂಗ್ರೆಸಿನ ಬಹು ಹಿರಿಯ ನಾಯಕರಲ್ಲೇ ಹಲವರು ಅವರಿಗೆ ವಿರೋಧವಾಗಿದ್ದರು.

ಹನ್ನೊಂದು ಜನಗಳಿದ್ದ ಸಚಿವ  ಸಂಪುಟದಲ್ಲಿ ಹರಿಜನರಿಗೆ, ಕ್ರಿಶ್ಚಿಯನ್ನರಿಗೆ ಹಾಗೂ ಮಹಿಳೆಯರಿಗೆ ಪ್ರಾತಿನಿಧ್ಯವಿತ್ತು.  ಅವರ ಸಂಪುಟದ ಸದಸ್ಯರುಗಳಿಗೆ ೧೫೦೦ ರೂಪಾಯಿಗಳ ವೇತನ ದೊರೆಯುತ್ತಿತ್ತು. ಪ್ರಕಾಶಂ ಮಾತ್ರ ಒಂದು ಸಾವಿರ ರೂಪಾಯಿಗಳ ಸಂಬಳ ತೆಗೆದುಕೊಳ್ಳುತ್ತಿದ್ದರು.

ಪ್ರಕಾಶಂ ಅವರ ಅಧಿಕಾರಾವಧಿಯಲ್ಲಿ ಸಮು ದಾಯ ಅಭಿವೃದ್ಧಿ ಕಾರ್ಯಕ್ರಮಗಳು, ಖಾದಿಗೆ ಪ್ರೋತ್ಸಾಹ, ಸಹಕಾರಿ ಸಂಘಗಳ ಬೆಳವಣಿಗೆಗೆ ಉತ್ತೇಜನ ಮುಂತಾದುವುಗಳಿಗೆ ತುಂಬ ಗಮನ ದೊರೆಯಿತು.

ಆದರೆ ಪ್ರಕಾಶಂರಿಗೆ ರಾಜಕೀಯದ ಕುಟಿಲ ತಂತ್ರಗಳು, ಗುಂಪುಗಾರಿಕೆ ಮೊದಲಾದವುಗಳ ಬಗ್ಗೆ ತಿಳಿವಳಿಕೆಯಿರಲಿಲ್ಲ. ಇದರಿಂದ ಅವರ ವಿರೋಧಿಗಳು ಪ್ರಕಾಶಂರನ್ನು ಅಧಿಕಾರದಿಂದ ಕೆಳಗಿಳಿಸುವುದರಲ್ಲಿ ಸಮರ್ಥರಾದರು. ಅವರ ಸರ್ಕಾರ ೧೩ ತಿಂಗಳು ಅಧಿಕಾರದಲ್ಲಿತ್ತು. ಒಬ್ಬ ವ್ಯಕ್ತಿ ದೇಶಕ್ಕಾಗಿ ಎಷ್ಟೇ ಶ್ರಮಿಸಿರಲಿ, ತ್ಯಾಗ ಮಾಡಿರಲಿ, ಹಲವು ಹತ್ತು ಗುಂಪು ಗಳಿಗೆ ತೃಪ್ತಿಕೊಡುವ ಸಾಮರ್ಥ್ಯವಿಲ್ಲದಿದ್ದರೆ ರಾಜಕೀಯ ವಾತಾವರಣದಲ್ಲಿ ಅಧಿಕಾರದಲ್ಲಿ ಮುಂದುವರಿಯುವುದು ಅಸಾಧ್ಯ ಎಂಬುದು ಇದರಿಂದ ಗೊತ್ತಾಗುತ್ತದೆ.

ಭ್ರಮನಿರಸನ

ಸ್ವಾತಂತ್ರ್ಯ ಬಂದ ಮೇಲೆ ಕಾಂಗ್ರೆಸ್ ಸರ್ಕಾರ ದೇಶಕ್ಕೆ ಉತ್ತಮ ಆಡಳಿತ ಕೊಡುವುದೆಂದು ಪ್ರಕಾಶಂ ನಿರೀಕ್ಷಿಸಿದ್ದರು. ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಉದ್ದೇಶವನ್ನೇ ಹೊಂದಿದ್ದರೂ ಕೂಡ. ಆದರೆ ಅನತಿಕಾಲದಲ್ಲಿಯೇ ಅವರಿಗೆ ಭ್ರಮನಿರಸನವಾಯಿತು. ಪ್ರಕಾಶಂರ ನಿರ್ಗಮನ ಶಾಸಕಪಕ್ಷದಲ್ಲಿ ಮುಖ್ಯವಾದ ಸಮಸ್ಯೆಯನ್ನು ಉಂಟುಮಾಡಿತು. ಅಧಿಕಾರದಲ್ಲಿದ್ದ ಗುಂಪು ಪ್ರಕಾಶಂ ಅವರ ಗುಂಪಿಗಿಂತ ಪ್ರಬಲವಾಗಲು ಶಾಸಕರು ಕೇಳಿದ ಅನುಕೂಲಗಳನ್ನು ಮಾಡಿ ಕೊಡುತ್ತಿದ್ದರು. ಸ್ವಂತಕ್ಕಾಗಿ ಹಣಮಾಡಿಕೊಳ್ಳುವ ಆಸೆಯಿಂದ ಶಾಸಕರು ಒಂದು ದಿನ ಈ ನಾಯಕರಿಗೆ ಮತ್ತೊಂದು ದಿನ ಇನ್ನೊಬ್ಬ ನಾಯಕರಿಗೆ ಬೆಂಬಲ ಕೊಡುತ್ತಿದ್ದರು. ಪ್ರತಿಯೊಬ್ಬ ಮಂತ್ರಿಗೂ ತನಗೆ ಎಷ್ಟು ಶಾಸಕರ ಬೆಂಬಲ ಇದೆಯೆಂದು ಖಚಿತವಾಗಿ ಗೊತ್ತಿರದ ಪ್ರಯುಕ್ತ ತಾನು ಎಷ್ಟು ಕಾಲ ಮಂತ್ರಿಯಾಗಿರು ವೆನೆಂಬುದೂ ನಿಶ್ಚಯವಾಗಿ ತಿಳಿದಿರುತ್ತಿರಲಿಲ್ಲ. ಇಂತಹ ಹಿನ್ನೆಲೆಯಲ್ಲಿ ದೇಶದ ಪ್ರಗತಿಗಾಗಿ ಕೆಲಸ ಮಾಡುವುದು ತಾನೆ ಹೇಗೆ ಸಾಧ್ಯ? ಕ್ರಮೇಣ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಜನರಿಗೆ ಅತೃಪ್ತಿ ಹೊಗೆಯಾಡತೊಡಗಿತು.

ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಮಂತ್ರಿಗಳ ವಿರುದ್ಧ ವಿಚಾರಣೆಯಾಗಬೇಕೆಂದು ಪ್ರಕಾಶಂ ಒತ್ತಾಯಿಸಿದರು. ಅದಕ್ಕಾಗಿ ಶಂಕರರಾವ್‌ದೇವ್ ಎಂಬುವರನ್ನು ಕಾಂಗ್ರೆಸ್   ಹೈಕಮ್ಯಾಂಡ್ ಕಳುಹಿಸಿತು. ಈ ಮಧ್ಯೆ ರಾಘವಯ್ಯ ಎಂಬ ಶಾಸಕ ಪ್ರಕಾಶಂ ಮಂತ್ರಿ ಮಂಡಲದ ವಿರುದ್ಧ ಲಂಚಕೋರತನದ ದೂರನ್ನು ಸಲ್ಲಿಸಿದ್ದರು. ಶಂಕರರಾವ್ ದೇವ್ ಎರಡೂ ದೂರುಗಳನ್ನು ವಿಚಾರಿಸುವುದಾಗಿ ಮದರಾಸಿಗೆ ಬಂದರು.

‘ಈಶ್ವರ ಪ್ರಗಡ ಜಗನ್ನಾಥಮ್ ಎಂಬ ವ್ಯಕ್ತಿ ೧೯೪೫ರ ಜನವರಿ ೨೧ರಂದು ಪ್ರಕಾಶಂಗೆ ೧೯೦೦೦ ರೂಪಾಯಿಗಳಿಗೆ ಒಂದು ಚೆಕ್ಕನ್ನು ಆಂಧ್ರ ಬ್ಯಾಂಕಿನ ಮೇಲೆ ಕೊಟ್ಟಿದ್ದರು. ಈ ಲಂಚ ತೆಗೆದುಕೊಂಡು ಅದಕ್ಕೆ ಪ್ರತಿಯಾಗಿ ಪ್ರಕಾಶಂ ಅರಣ್ಯ ಕಡಿಯುವ ಕೆಲಸವನ್ನು ಅವರಿಗೆ ಕೊಡಿಸಿದರು’ ಇದು ಪ್ರಕಾಶಂರ ವಿರುದ್ಧ ಮಾಡಲಾದ ಆಪಾದನೆ.

ಪ್ರಕಾಶಂ ಮುಖ್ಯಮಂತ್ರಿಯ ಪದವಿ ಬಿಟ್ಟು ಎರಡು ವರ್ಷಗಳ ನಂತರ ಬಂದಿತ್ತು ಈ ಆಪಾದನೆ. ಮಂತ್ರಿಗಳ ವಿರುದ್ಧ ಮಾಡಿದ ಆಪಾದನೆಗೆ ಪ್ರತೀಕಾರವಿದು ಎಂಬುದು ಪ್ರಕಾಶಂರಿಗೆ ತಿಳಿದಿತ್ತು. ಅವರು ಶಂಕರರಾವ್ ದೇವ್‌ಗೆ  ಜಗನ್ನಾಥಮ್‌ರ ವಿಳಾಸ ಕೊಟ್ಟು ‘ಆ ರೀತಿಯ ಒಂದು ಚೆಕ್‌ನ್ನು ಅವರು ಕೊಟ್ಟಿದ್ದರೇ? ಆಂದ್ರ ಬ್ಯಾಂಕಿನ ಲೆಕ್ಕಪುಸ್ತಕಗಳನ್ನು ಪರಿಶೀಲಿಸಿದರೆ ಆ ಚೆಕ್ಕಿನ ಹಣ ಯಾರಿಗೆ ಪಾವತಿಯಾಗಿದೆಯೆಂದು ತಿಳಿಯುತ್ತದಲ್ಲವೆ?’ ಎಂದು ಕೇಳಿದರು.

ಆದರೆ ದೂರು ಕೊಟ್ಟ ರಾಘವಯ್ಯ ಪತ್ತೆಯಿರಲಿಲ್ಲ. ಆರೋಪವನ್ನು ಮಾಡಿದ್ದು ಕೇವಲ ವೈಯುಕ್ತಿಕ ದ್ವೇಷದಿಂದ ಎಂದು ಸ್ಪಷ್ಟವಾಯಿತು.

ಕಾಂಗ್ರೆಸ್ ಪಕ್ಷದ ನಾಯಕವರ್ಗ ಆಡಳಿತದ ಗುಣಮಟ್ಟ ಸುಧಾರಿಸುವ ಪ್ರಯತ್ನ ಮಾಡಲಿಲ್ಲ. ದೇಶಾದ್ಯಂತ ಅನೇಕ ನಿಷ್ಠಾವಂತ ಕಾಂಗ್ರೆಸ್ಸಿಗರು ತಮ್ಮ ನಿರಾಸೆಯನ್ನು ವ್ಯಕ್ತಪಡಿಸುತ್ತಿದ್ದರು. ಆಚಾರ್ಯ ಜೆ. ಬಿ. ಕೃಪಲಾನಿ, ರಫಿ ಅಹ್ಮದ್ ಕಿದ್ವಾಯಿ, ಪ್ರಕಾಶಂ ಹಾಗೂ ಪಿ.ಸಿ.ಘೋಷ್ ಅವರುಗಳು ಕಾಂಗ್ರೆಸ್ ಪಕ್ಷದಲ್ಲಿ ‘ಕಾಂಗ್ರೆಸ್ ಪ್ರಜಾಪ್ರಭುತ್ವ ಪಕ್ಷ’ ಎಂಬ ಹೆಸರಿನಲ್ಲಿ ಒಂದು ಪಂಥವನ್ನು ಪ್ರಾರಂಭಿಸಿದರು.

ಮಂತ್ರಿಗಳು ಹಾಗೂ ಪ್ರಕಾಶಂ ನಡುವೆ ತಿಕ್ಕಾಟವಿದ್ದೇ ಇತ್ತು. ಕಾಂಗ್ರೆಸ್  ಹೈಕಮ್ಯಾಂಡ್ ಪ್ರತಿ ಹಂತ ದಲ್ಲಿಯೂ ಮಂತ್ರಿಗಳ ಪರವಾಗಿ ವರ್ತಿಸಿತು. ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಕುರಿತು ತನಿಖೆ ಮಾಡಲಿಲ್ಲ. ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿಯೂ ಇದೇ ರೀತಿ ಪಕ್ಷಪಾತ ತೋರಿಸಿತು.

ಈ ಎಲ್ಲ ಅಹಿತಕರ ಪ್ರಸಂಗಗಳು ಪ್ರಕಾಶಂರ ಮನಸ್ಸನ್ನು ಕೆಡಿಸಿದವು. ಕಡೆಗೆ ಅವರು ಹಾಗೂ ಎನ್ ಜಿ. ರಂಗಾ ಕಾಂಗ್ರೆಸಿನಿಂದ ಹೊರಬಂದು ‘ಪ್ರಜಾಪಕ್ಷ’ ಎಂಬ ಹೊಸ ಪಕ್ಷ ಕಟ್ಟಿದರು. ಮುಂದೆ ಕೃಪಲಾನಿ, ಘೋಷ್ ಮುಂತಾದವರೊಟ್ಟಿಗೆ ಸೇರಿ ’ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ’ ಎಂಬ ಅಖಿಲಭಾರತ ಮಟ್ಟದ ಪಕ್ಷ ಕಟ್ಟಿದಾಗ ಪ್ರಜಾಪಕ್ಷ ಇಬ್ಬಾಗವಾಯಿತು. ಪ್ರಕಾಶಂ ನೇತೃತ್ವದ ಗುಂಪು ಕಿಸಾನ್ ಮಜ್ದೂರ್ ಪ್ರಜಾಪಾರ್ಟಿಯೊಂದಿಗೆ ವಿಲೀನ ವಾಯಿತು.

ಆಂಧ್ರ ರಾಜ್ಯದ ಉದಯ

ಭಾರತ ಬಹು ವಿಶಾಲವಾದ ದೇಶ. ಬೇರೆ ಬೇರೆ ಭಾಷೆಯ ಜನಗಳು, ಬೇರೆ ಬೇರೆ ಅಭಿರುಚಿಯ ಜನಗಳು, ಬೇರೆ ಬೇರೆ ಜೀವನಕ್ರಮಗಳನ್ನು ಅನುಸರಿಸುವ ಜನರು ಇದ್ದಾರೆ. ಒಂದು ಭಾಷೆ ಮಾತನಾಡುವವರು ಒಂದೇ ರಾಜ್ಯದಲ್ಲಿದ್ದರೆ ಆಯಾ ಜನರ ಅಭಿವೃದ್ಧಿಗೆ ಸಹಾಯ ವಾಗುತ್ತದೆ ಎಂಬ ಅಭಿಪ್ರಾಯ ಕ್ರಮೇಣ ಜನರಲ್ಲಿ ಮೂಡತೊಡಗಿತು.

ಈ ರೀತಿಯ ಒಂದು ಬೇಡಿಕೆಯ ಆದ್ಯ ಪ್ರವರ್ತಕರು ಆಂಧ್ರರೇ. ೧೯೧೩ರಲ್ಲಿ ಸ್ಥಾಪಿತವಾದ ಆಂಧ್ರ ಮಹಾಸಭಾ ಈ ಬೇಡಿಕೆಯನ್ನು ಪದೇ ಪದೇ ಸರ್ಕಾರದ ಮುಂದಿಡುತ್ತಿತ್ತು. ಸ್ವಾತಂತ್ರ್ಯ ಬಂದ ಮೇಲೆ ಆಂಧ್ರ ರಾಜ್ಯದ ರಚನೆಯ ಬೇಡಿಕೆ ಗಂಭೀರ ರೂಪ ತಳೆಯಿತು. ೧೯೫೩ರಲ್ಲಿ ಭಾರತ ಸರ್ಕಾರ ಈ ಬೇಡಿಕೆಯನ್ನು ಒಪ್ಪಿತು.

ನವೋದಿತ ರಾಜ್ಯದ ಪ್ರಪ್ರಥಮ ಮುಖ್ಯಮಂತ್ರಿ ಯಾಗಿ ಪ್ರಕಾಶಂ ಆಯ್ಕೆಯಾದರು. ೧೯೫೩ ರ ಅಕ್ಟೋಬರ್ ಒಂದರಂದು ಆಗಿನ ಪ್ರಧಾನಿ ನೆಹರೂರವರು ಆಂಧ್ರ ರಾಜ್ಯವನ್ನು ಉದ್ಘಾಟನೆ ಮಾಡುತ್ತ ‘ಈ ಇಳಿವಯಸ್ಸಿನಲ್ಲಿ ಒಂದು ರಾಜ್ಯದ ಹೊಣೆ ಹೊರುವಂತೆ ಪ್ರಕಾಶಂರನ್ನು ಕೇಳುವುದು ಸೂಕ್ತ ಎನಿಸಲಿಲ್ಲ. ಆದರೆ ಆಂಧ್ರ ರಾಜ್ಯದ ವಿಶಿಷ್ಟ ವ್ಯಕ್ತಿ ಪ್ರಕಾಶಂ ಅಂತಹವರು ಮುಖ್ಯಮಂತ್ರಿಯಾಗುವುದು ಹೊಸ ರಾಜ್ಯದ ಅದೃಷ್ಟ. ಈ ಕಾರಣಕ್ಕಾಗಿ ನಾವು ಅವರನ್ನೇ ಕೇಳಿಕೊಂಡೆವು’ ಎಂದು ನುಡಿದರು.

ಪ್ರಕಾಶಂ ಅವರು ಮುಖ್ಯಮಂತ್ರಿಯಾದ ಕೂಡಲೇ ನೂತನ ಯುಗದ ಆರಂಭದ ಕುರುಹಾಗಿ ಖೈದಿಗಳನ್ನು ಬಿಡುಗಡೆ  ಮಾಡಿದರು. ರಾಜ್ಯದ ಬೆಳವಣಿಗೆಗಾಗಿ ತಿರುಪತಿಯಲ್ಲಿ ವೆಂಕಟೇಶ್ವರ ವಿಶ್ವವಿದ್ಯಾನಿಲಯ ಆರಂಭಿ ಸಿದರು. ನಾಗಾರ್ಜುನ ಸಾಗರ ಜಲಾಶಯ ಯೋಜನೆ ಆರಂಭಿಸಿದರು. ಕೇಂದ್ರ ಸರ್ಕಾರದ ಅನುಮತಿ ದೊರೆ ಯುವ ಮುನ್ನವೇ ಕೃಷ್ಣಾನದಿಗೆ ಅಣೆಕಟ್ಟು ಕಟ್ಟಿಸುವ ಕೆಲಸ ಪ್ರಾರಂಭಿಸಿದರು. ಹೀಗೆ ಪ್ರಕಾಶಂ ಅಧಿಕಾರದಲ್ಲಿದ್ದ ಅಲ್ಪಕಾಲದಲ್ಲಿ ರಾಜ್ಯದ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಂಡರು. ೧೯೫೫ ರ ಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾದರು. ೧೯೫೬ ರ ನವೆಂಬರ್‌ನಲ್ಲಿ ತೆಲಂಗಾಣ ವನ್ನೂ ಸೇರಿಸಿ ವಿಶಾಲಾಂಧ್ರ ರಚನೆಯಾದಾಗ ಪ್ರಕಾಶಂರಿಗೆ ತುಂಬ ಮಹತ್ತರವಾದ ಆಸೆ ಈಡೇರಿದ ತೃಪ್ತಿಯಾಯಿತು.

ಕ್ರಮೇಣ ವಯಸ್ಸಾದಂತೆ ಅವರ ಆರೋಗ್ಯ ಸಹ ಹದಗೆಡುತ್ತಿತ್ತು. ಉಸ್ಮಾನಿಯ ಆಸ್ಪತ್ರೆಯಲ್ಲಿ ಅವರನ್ನು ಸೇರಿಸಲಾಯಿತು. ೧೯೫೭ ರ ಮೇ ೨೦ ರಂದು ತಮ್ಮ ೮೫ ನೆಯ ವಯಸ್ಸಿನಲ್ಲಿ ಅವರು ದಿವಂಗತರಾದರು.

ವ್ಯಕ್ತಿ

ದೃಢಕಾಯರಾಗಿದ್ದ ಪ್ರಕಾಶಂರದು ಸಿಂಹಕಂಠ. ಮುಖದಲ್ಲಿ ಅಪೂರ್ವ ತೇಜಸ್ಸು. ಅವರು ಅಪ್ರತಿಮ ಧೈರ್ಯಶಾಲಿ.

ಅವರು ಎಂದೂ ತಮ್ಮ ವೈಯುಕ್ತಿಕ ಲಾಭವನ್ನು ಗಮನಿಸಿದವರಲ್ಲ. ಯಾವಾಗಲೂ ಪ್ರಜೆಗಳ ಯೋಗ ಕ್ಷೇಮದ ಚಿಂತನೆ ಮಾಡುತ್ತಿದ್ದರು. ಅವರು ಸದಾ ಜನಗಳ ಕಷ್ಟ ಕೋಟಲೆಗಳ ಚಿಂತೆ ಮಾಡುತ್ತಿದ್ದು ತಮ್ಮ ಜೀವನದ ಕಥೆಯನ್ನು ‘ನಾ ಜೀವಿತ ಯಾತ್ರ’ ಎಂಬ ಪುಸ್ತಕದಲ್ಲಿ ವರ್ಣಿಸಿದ್ದಾರೆ. ಸರಳ ಸುಂದರ ಶೈಲಿಯಲ್ಲಿ ಬರೆಯಲ್ಪಟ್ಟಿರುವ ಆತ್ಮ ಚರಿತ್ರೆ ಅದು. ತೆಲುಗಿನಲ್ಲಿ ‘ಭಗವದ್ಗೀತೆಯ ತಾತ್ಪರ್ಯ’ ಅವರು ರಚಿಸಿರುವ ಮತ್ತೊಂದು ಕೃತಿ.

ಪ್ರಕಾಶಂರಿಗೆ ರಾಷ್ಟ್ರನಾಯಕನಾಗುವ ಎಲ್ಲ ಲಕ್ಷಣಗಳೂ ಇದ್ದುವು. ಆದರೆ ಆಂಧ್ರರಾಜ್ಯಕ್ಕಾಗಿ, ಆಂಧ್ರ ಜನಗಳ ಹಿತರಕ್ಷಣೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟರು. ತಮ್ಮ ಸರ್ವಸ್ವವನ್ನೂ ಪ್ರಜೆಗಳಿಗಾಗಿ ಧಾರೆಯೆರೆದು ಜೀವನವನ್ನು ದೇಶಕ್ಕೆ ಅರ್ಪಿಸಿದ ಮಹಾನ್ ನಾಯಕ ಪ್ರಕಾಶಂ. ಜನಗಳ ದೃಷ್ಟಿಯಲ್ಲಿ ‘ಪ್ರಕಾಶಂ’ ಸಾಹಸಕ್ಕೆ ಮತ್ತೊಂದು ಹೆಸರು

ಆಂಧ್ರರಿಗೆ ಮಾತ್ರವಲ್ಲ, ಭಾರತೀಯರಿಗೇ ಮರೆಯಲಾಗದ ಅಜರಾಮರ ನಾಯಕ ಟಂಗುಟೂರಿ ಪ್ರಕಾಶಂ.