೧೫-೪-೧೯೧೫ ರಂದು ಭಾಷ್ಯಂ ರಾಮಾಚಾರ್ ಅವರ ಸುಪುತ್ರರಾಗಿ ಜನಿಸಿದ ನರಸಿಂಹಾಚಾರ್ ಅವರ ಮುತ್ತಾತ ಭಾಷ್ಯಂ ತಿರುಮಲಾಚಾರ್ಯರು. ಸಂಗೀತ, ಭರತನಾಟ್ಯಗಳಲ್ಲಿ ಅಪಾರ ಪಾಂಡಿತ್ಯ ಪಡೆದವರಾಗಿ ಮೈಸೂರು ಸದಾಶಿವರಾಯರ ಆಪ್ತ ಗೆಳೆಯರಾಗಿದ್ದವರು. ಇಂತಹ ಹಿನ್ನೆಲೆಯನ್ನು ಹೊಂದಿದ್ದ ಮನೆತನದವರಾಗಿ ನರಸಿಂಹಾಚಾರ್ ಅವರಿಗೆ ಬಾಲ್ಯದಿಂದಲೂ ಸಂಗೀತ, ಹರಿಕಥೆ, ನಾಟ್ಯ, ನಾಟಕಗಳಲ್ಲಿ ಅಪಾರ ಆಸಕ್ತಿ ಇತ್ತು. ಸ್ಥಳೀಯ ಪರಸ್ಥಳೀಯ ವಿದ್ವಾಂಸರನೇಕರ ಸ್ನೇಹವನ್ನು ಗಳಿಸಿ ಲೆಕ್ಕವಿಲ್ಲದಷ್ಟು ಕಚೇರಿಗಳನ್ನು ಕೇಳಿ ಅತಿ ಉತ್ತಮ ಅಭಿರುಚಿ ಬೆಳೆಸಿಕೊಂಡಿದ್ದರು.

ಕರ್ನಾಟಕದ ಯುವ ಕಲಾವಿದರನ್ನು ಪ್ರೋತ್ಸಾಹಿಸಿ ಅವರಲ್ಲಿದ್ದ ಪ್ರತಿಭೆ ಕುಸುಮಿಸಿ ಅರಳಲು ಸಾಕಷ್ಟು ಶ್ರಮ ವಹಿಸುತ್ತಿದ್ದರು. ಅವರ ಕಚೇರಿಗಳನ್ನು ಹೇಳಿ ಅವರಲ್ಲಿರಬಹುದಾದ ಕುಂದು ಕೊರತೆಗಳನ್ನು, ಲೋಪದೋಷಗಳನ್ನು ನೇರವಾಗಿ ತಿಳಿಸಿ, ತಿದ್ದಿಕೊಳ್ಳಲು ಅವಕಾಶ ಮಾಡಿ ಕೊಡುತ್ತಿದ್ದರು. ಯಾರನ್ನೂ ಮುಖ ಭಂಗ ಮಾಡದೆ ಅವರಲ್ಲಿದ್ದ ಒಳಿತು ಪ್ರಕಾಶಕ್ಕೆ ಬರುವಂತೆ ಮಾಡುವ ಸಹೃದಯತೆ ತುಂಬಿದ ಉತ್ತಮ ವ್ಯಕ್ತಿ.

ಮಲ್ಲೇಶ್ವರಂ ಸಂಗೀತ ಸಭೆಯ ಸ್ಥಾಪಕ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿದ ಅವಧಿಯಲ್ಲಿ ಪ್ರಕಾಶಕ್ಕೆ ಬಂದು ಇಂದು ಹಿರಿಯ ವಿದ್ವಾಂಸರಾಗಿರುವವರು ಅದೆಷ್ಟು ಮಂದಿಯೋ! ‘ಸಾರಗ್ರಾಹಿ’ ಎಂಬ ಅಂಕಿತದಲ್ಲಿ ತಾಯಿನಾಡು ಪತ್ರಿಕೆಗೆ ಸಂಗೀತ-ನೃತ್ಯಗಳಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯಲಾರಂಭಿಸಿದ್ದು ೧೯೫೪ರಲ್ಲಿ ಮುಂದೆ ಅನೇಕ ಕನ್ನಡ ಹಾಗೂ ಆಂಗ್ಲಭಾಷೆಯ ಪತ್ರಿಕೆಗಳಿಗೆ ವಿಮರ್ಶಾತ್ಮಕ ಲೇಖನ ಬರೆಯುತ್ತಿದ್ದರು.

ಸಮಕಾಲೀನ ಕರ್ನಾಟಕದ ಕಲಾವಿದರ ಪರಿಚಯಾತ್ಮಕ ಲೇಖನಗಳನ್ನು ಬರೆದಿದ್ದಾರೆ. ‘ಕರ್ನಾಟಕದ ಕಲಾವಿದರು’ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಕಟಿಸಿದ ‘ನಮ್ಮ ಸಂಗೀತ ಕಲಾವಿದರು’ ಗಮನಾರ್ಹವಾದ ಪುಸ್ತಕಗಳು.

ಹಲವಾರು ಸಂಗೀತ ಸಭೆ-ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀಯುತರಿಗೆ ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿಯು ಲಭಿಸಿತ್ತು. ೧೯೮೬ರಲ್ಲಿ ಇವರ ಇಹ ಜೀವನಯಾತ್ರೆ ಅಂತ್ಯವಾಯಿತು.