ಸಂಗೀತ ಮನೆತನದಲ್ಲಿ ಹುಟ್ಟಿ, ಪಿಟೀಲು ವಾದನದಲ್ಲಿ ಅಪಾರ ಸಾಧನೆ ಗೈದು ಸಂಗೀತ ಲೋಕದಲ್ಲಿ ಹೆಸರು ಗಳಿಸಿರುವ ಪಂ. ಟಿ.ವ್ಹಿ.ಕಬಾಡಿಯವರು ಕರ್ನಾಟಕದ ಹೆಸರಾಂತ ಹಿಂದೂಸ್ಥಾನಿ ಪಿಟೀಲು ವಾದಕರಲ್ಲೊಬ್ಬರಾಗಿದ್ದಾರೆ. ಪಿಟೀಲು ಸ್ವತಂತ್ರ ವಾದನ ಮತ್ತು ಸಾಥ-ಸಂಗತಿದಲ್ಲಿ ನೈಪುಣ್ಯತೆ ಪಡೆದಿದ್ದಾರೆ.

ತುಕಾರಾಮಸಾ ವಿಠಲಸಾ ಕಬಾಡಿಯವರು ಜನಿಸಿದ್ದು ಗದುಗಿನಲ್ಲಿ; ೧೯೩೯ರ ಡಿಸೆಂಬರ ೨೮ ರಂದು. ಅವರ ತಂದೆ ಪಂ. ವಿಠಲಸಾ ಕಬಾಡಿ ಹಿರಿಯ ತಲೆಮಾರಿನ ಹೆಸರಾಂತ ಹಾರ್ಮೋನಿಯಂ ವಾದಕರಾಗಿದ್ದರು. ನಾಟಕ ಕಂಪನಿಗಳಲ್ಲಿ ಹಾರ್ಮೋನಿಯಂ, ಆರ್ಗನ್‌ ನುಡಿಸುವುದರಲ್ಲಿ ನಿಷ್ಣಾತರಾಗಿದ್ದರು. ಇಂತಹ ಪರಿಸರದಲ್ಲಿ ಹುಟ್ಟಿದ ತುಕಾರಾಮಸಾ ಅವರಿಗೆ ಎಳವೆಯಿಂದಲೇ ಸಂಗೀತದ ಒಲವು ಬೆಳೆಯಿತು.

ತಂದೆಯಿಂದ ಸಂಗೀತದ ಶ್ರೀಕಾರ ಪಡೆದುಕೊಂಡ ಅವರು ಸಾಬಣ್ಣಸಾ ಕಲಬುರ್ಗಿ ಅವರಲ್ಲಿ ಮುಂದುವರೆಸಿದರು. ಮುಂದೆ ಹಿಂದೂಸ್ಥಾನಿ ಸಂಗೀತದ ಹೆಸರಾಂತ ಪಿಟೀಲು ವಾದಕ ಮುಂಬೈಯ ಪಂ. ಗಜಾನನರಾವ ಜೋಶಿಯವರನ್ನು ಉನ್ನತ ಅಧ್ಯಯನ ಮಾಡಿದರು. ಪಂ. ಪುಟ್ಟರಾಜ ಗವಾಯಿಗಳ ಗರಡಿಯಲ್ಲಿ ಕೆಲದಿನ ಸಾಧನೆಗೈದು ಪ್ರಬುದ್ಧ ಪಿಟೀಲು ವಾದಕರೆನಿಸಿದರು.

ಅಖಿಲ ಭಾರತ ಗಾಂಧರ್ವ ಮಹಾಮಂಡಲದಿಂದ ‘ಸಂಗೀತ ವಿಶಾರದ’ ಪದವಿ ಪಡೆದರು. ಸೊಂಡೂರಿನ ರೆಸಿಡೆನ್ಸಿಯಲ್‌ ಶಾಲೆಯಲ್ಲಿ ೧೦ ವರ್ಷ ಸಂಗೀತ ಶಿಕ್ಷಕರಾಗಿ, ಧಾರವಾಡ ಆಕಾಶವಾಣಿಯ ನಿಲಯದ ಪಿಟೀಲು ಕಲಾವಿದರಾಗಿ ೨೩ ವರ್ಷ (೧೯೩೪-೧೯೯೬) ಸೇವೆ ಸಲ್ಲಿಸಿ ನಿವೃತ್ತರಾಗಿ ಈಗ ಬೆಂಗಳೂರಿನಲ್ಲಿ ನೆಲೆಸಿ ಆಸಕ್ತರಿಗೆ ಪಿಟೀಲು ಶಿಕ್ಷಣ ನೀಡುತ್ತಿರುವ ಅವರು ದೇಶದ ಹೆಸರಾಂತ ಸಂಗೀತಗಾರರಿಗೆ ಸಾಥ ಹಾಗೂ ಲೆಹೆರಾ ಸೋಲೊ ನೀಡಿದ್ದಾರೆ. ಹಿಂದೂಸ್ಥಾನಿ ಸಂಗೀತದ ಪಂಡಿತೋತ್ತಮರಾದ ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ಲ, ಪುಟ್ಟರಾಜ ಕವಿ ಗವಾಯಿ, ಗಜಾನನರಾವ ಜೋಶಿ, ಶ್ರೀಮತಿಯರಾದ ಸುಲೋಚನಾ ಬೃಹಸ್ಪತಿ ಹಾಗೂ ಲಕ್ಷ್ಮೀ ಶಂಕರ ಮುಂತಾದ ದಿಗ್ಗಜರಿಗೆ ಪಿಟೀಲು ಸಾಥ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ಗುರು ಪಂ. ಗಜಾನನರಾವ ಜೋಶಿ ಅವರೊಂದಿಗೆ ಪಾಕಿಸ್ತಾನದ ಲಾಹೋರವರೆಗೂ ಹೋಗಿ ಪಿಟೀಲು ಸಾಥ್ ನೀಡಿದ್ದಾರೆ. ಇವರ ಪಿಟೀಲು ವಾದನ ಕೌಶಲ್ಯಕ್ಕೆ ಮನಸೋತ ಸೊಂಡೂರಿನ ಮಹಾರಾಜ ಶ್ರೀ ಎಂ. ವೈ. ಘೋರ್ಪಡೆಯವರು ಅವರಿಗೆ ಜರ್ಮನಿಯ ಪಿಟೀಲು ವಾದ್ಯವನ್ನು ಕಾಣಿಕೆಯಾಗಿ ನೀಡಿದ್ದಾರೆ. ‘ವಯೋಲಿನ್‌ ಸ್ವಯಂ ಶಿಕ್ಷಕ’ ಎಂಬ ಪುಸ್ತಕ ರಚಿಸಿದ್ದಾರೆ.

ಪಂ. ಟಿ.ವ್ಹಿ. ಕಬಾಡಿಯವರ ಸಂಗೀತ ಪರಂಪರೆಯನ್ನು ಅವರ ಶಿಷ್ಯರು ಹಾಗೂ ಮಕ್ಕಳು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಅವರ ಮಕ್ಕಳಾದ ಶಂಕರ ಪಿಟೀಲು ವಾದಕ ಹಾಗೂ ಧಾರವಾಡ ಆಕಾಶವಾಣಿಯ ನಿಲಯದ ಕಲಾವಿದ, ದತ್ತಾತ್ರೇಯ ತಬಲಾ ವಾದಕ, ಜಗನ್ನಾಥ ಪಿಟೀಲು ವಾದಕ, ಮಗಳು ಶ್ರೀಮತಿ ರೇಣುಕಾ ರಘುನಾಥ ನಾಕೋಡ ಗಾಯಕಿಯಾಗಿದ್ದಾರೆ. ತುಕಾರಾಮ ಸಾಕಬಾಡಿಯವರಿಗೆ ಅನೇಕ ಪ್ರಶಸ್ತಿ-ಪುರಸ್ಕಾರ ಸಂದಿವೆ. ಅವುಗಳಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (೧೯೯೫-೯೬) ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ನಾಡ ಧೀಮಂತ ಪ್ರಶಸ್ತಿ (೧೯೯೭) ಗದುಗಿನ ಪಂಚಾಕ್ಷರಿ ಗವಾಯಿ ಮ್ಯೂಜಿಕ್‌ ಅಕಾಡೆಮಿಯ ಸಂಗೀತ ರತ್ನ (೧೯೯೮) ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೦೬) ಉಲ್ಲೇಖನೀಯವಾಗಿವೆ.