“ಭಕ್ತಿಯಲಿ ಭಾಗಣ್ಣ”; “ಯುಕ್ತಿಯಲಿ ಮೋಹನ್ನ”, “ಶಕ್ತಿಯಲಿ ತಿಮ್ಮಣ್ಣ” ಎಂಬುದು ದಾಸ ಪರಂಪರೆಯಲ್ಲಿ ಜನಜನಿತವಾಗಿ ಬಂದಿರುವ ಮಾತು. ಅಂತೆಯೇ “ವ್ಯಕ್ತಿತ್ವದಲ್ಲಿ ಗೋಪಣ್ಣ” ಎನ್ನುವುದೂ ಅಷ್ಟೇ ಹೆಸರು ವಾಸಿ! ಹರಿಕಥಾ ಕ್ಷೇತ್ರದಲ್ಲೇ ಮಾತ್ರವಲ್ಲದೆ ಎಲ್ಲಾ ಕಲಾ ಪ್ರಕಾರಗಳಲ್ಲೂ ಇವರ ಹೆಸರು -ವ್ಯಕ್ತಿತ್ವ ಅಜರಾಮರ.

ಗೋಪಣ್ಣ!

ಕಲಾಕ್ಷೇತ್ರಲದಲ್ಲಿ ಅತ್ಯಂತ ಚಿರಪರಿಚಿತವಾದ ಹೆಸರು! ಆತ್ಮೀಯರೆಲ್ಲರೂ ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದುದೇ ಹೀಗೆ. ಮನೆಯವರಿಗೆಲ್ಲ ಅಚ್ಚುಮೆಚ್ಚಿನ ಗೋಪಣ್ಣಿ. ಈ ಗೋಪಣ್ಣನೇ ಕಲಾತಪಸ್ವಿ ಟಿ.ವಿ. ಗೋಪಿನಾಥದಾಸರು.

‘ದಾಸ’ ಎಂಬುದು ಇವರಿಗೆ ಪಾರಂಪರ್ಯದಿಂದ ಬಂದದ್ದು. ಇದಕ್ಕೆ ಕಾರಣವೂ ಇಲ್ಲದಿಲ್ಲ. ದಾಸಪರಂಪರೆಯಲ್ಲಿ “ಯುಕ್ತಿಯಲಿ ಮೋಹನ್ನ” ಎಂದೆನಿಸಿದ್ದ ವಿಜಯದಾಸರ ಸಾಕುಮಗ “ಮೋಹದಾಸರ” ಪರಂಪರೆಯಲ್ಲಿ ಬಂದವರು ಲಮೂರ್ತಾಚಾರ್ಯರು. ಈ ಮೂರ್ತಾಚಾರ್ಯರ ಹಿರಿಯ ಮಗ ವೆಂಕಣ್ಣದಾಸರು. ಹಾಗೂ ಹರಿಕಥಾಂಬುಧಿ ಚಂದ್ರ ಎಂದೇ ಖ್ಯಾತನಾಮರಾದ ಟಿ.ಕೆ. ವೇಣುಗೋಪಾಲದಾಸರಾದಿಯಾಗಿ ಇತರ ನಾಲ್ಕು ಮಂದಿ ಮಕ್ಕಳು ಮೂರ್ತಾಚಾರ್ಯರಿಗೆ. ವೆಂಕಣ್ಣದಾಸರ ಎರಡನೆಯ ಮಗನೇ ನಮ್ಮ ಗೋಪಣ್ಣ ಉರುಫ್‌ ಗೋಪೀನಾಥದಾಸರು.

ವೆಂಕಣ್ಣದಾಸರಿಗೆ ಗೋಪೀನಾಥದಾಸರಲ್ಲದೆ ಇತರ ಮೂವರು ಪುತ್ರರು. ಎಲ್ಲರಿಗಿಂತ ಹಿರಿಯರು ಕರಿಗಿರಿ ಆಚಾರ್, ಪ್ರಸಿದ್ಧ ಹಾರ್ಮೋನಿಯಂ ವಾದಕರು ಹಾಗೂ ಸೋಲೋವಾಕ್ಸ್‌ ವಾದನದಲ್ಲಿ ಪರಿಣತರಾಗಿದ್ದವರು. ಸೋಸಲೆ ವ್ಯಾಸರಾಜ ಮಠಾಧೀಶರಿಂದ ‘ನಾದಗಂಧರ್ವ’ ಎಂಬ ಬಿರುದು ಗಳಿಸಿದವರು. ಗೋಪೀನಾಥದಾಸರ ನಂತರ ಜನಿಸಿದವರು ಟಿ.ವಿ. ಜಯಸಿಂಹದಾಸ್‌ ಹಾಗೂ ಟಿ.ವಿ. ದ್ವಾರಕಾನಾಥ್‌, ಆತ್ಮೀಯರೆಲ್ಲರಿಗೆ ದ್ವಾರಕಿ.

ವೆಂಕಣ್ಣದಾಸರ ಮನೆತನ ಅತ್ಯಂತ ಸಂಪ್ರದಾಯನಿಷ್ಠರ ವಂಶ. ಈ ಮನೆತನದವರೆಲ್ಲರಿಗೂ ಆನುವಂಶೀಕವಾಗಿ ಬಂದ ದಾಸಪಂಥವನ್ನು ಬಿಡದೆ ಅನುಸರಿಸುತ್ತ ಬಂದರೂ ವೆಂಕಣ್ಣದಾಸರು ಆ ಪಂಥವನ್ನು ಬಿಡದೆ ಹರಿದಾಸರಾದರೂ ನಾಟಕ, ಸಿನಿಮಾಗಳ ಗೀಳನ್ನು ಹತ್ತಿಸಿಕೊಂಡವರು. ಬಹುಶಃ ಅದೇ ಜಾಡಿನಲ್ಲಿ ಗೋಪೀನಾಥದಾಸರೂ ನಡೆದು ಬಂದವರು. ತಮ್ಮ ಜಯಸಿಂಹದಾಸರು ಹರಿಕಥೆಯ ಜೊತೆಗೇ ಗಮಕ, ಹಾಗೂ ಮೃದಂಗ ವಾದನ ಕಲೆಯಲ್ಲಿ ಪರಿಣತರಾಗಿ ಅತೀ ಚಿಕ್ಕವಯಸ್ಸಿನಲ್ಲೇ ಮೈಸೂರು ವಾಸುದೇವಾಚಾರ್ಯರಿಗೆ ಮೃದಂಗ ನುಡಿಸಿದ ಹೆಗ್ಗಳಿಕೆಗೆಕ ಪಾತ್ರರಾದವರು. ದ್ವಾರಕಾನಾಥ್‌ ಒಳ್ಳೆ ವ್ಯವಹಾರಸ್ಥ. ಅಣ್ಣ ಸ್ಥಾಪಿಸಿದ ಪ್ರಭಾತ್‌ ಸಂಸ್ಥೆಯ ನಿರ್ದೇಶಕರಾಗಿ ಅದನ್ನು ಊರ್ಜಿತಗೊಳಿಸಿದವರು.

ವೆಂಕಣ್ಣಾಚಾರ್ಯ (ದಾಸ)ರಿಗೆ ಸಂತಾನ ಭಾಗ್ಯ ಒದಗಿ ಬಂದದ್ದೂ ಒಂದು ಪವಾಡವೇ! ದಾಸರು ಸಾಧ್ವಿ ಭಾಗೀರಥಮ್ಮನ ಕೈ ಹಿಡಿದು ಗೃಹಸ್ಥರಾದರೂ ಅನೇಕ ವರ್ಷಗಳ ಕಾಲ ಅವರಿಗೆ ಮಕ್ಕಳಾಗಲಿಲ್ಲ.

ಈ ಮಧ್ಯೆ ಭಾಗೀರಥಿ ಬಾಯಿಗೆ ಕ್ಷಯ ರೋಗ ಕಾಣಿಸಿಕೊಂಡು ಅವರು ಬದುಕಿ ಉಳಿಯುವುದೇ ದುಸ್ತರವಾಯಿತು. ಇನ್ನು ಸಂತಾನ ಭಾಗ್ಯದ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು. ಆಗ ಹಿರಿಯರ ಆದೇಶದಂತೆ ದಂಪತಿಗಳಿಬ್ಬರೂ ಮುಳಬಾಗಿಲಿಗೆ ತೆರಳಿ ಶ್ರೀಪಾದರಾಜರ ಸನ್ನಿಧಿಯಲ್ಲಿ ಕಠಿಣವಾಗಿ ಸೇವೆದಗೈದರಂತೆ. ಅವರ ಸೇವೆ ಫಲನೀಡಿತೋ ಎನ್ನುವಂತೆ ಶ್ರೀಗಳು ಸ್ವಪ್ನದಲ್ಲಿ ಕಾಣಿಸಿಕೊಂಡು ಮುಳಬಾಗಿಲಿನ ಸೋಮೇಶ್ವರನನ್ನು ಆರಾಧಿಸಿದಾಗ ಸೇವೆ ಮಾಡುವಂತೆ ನಿರ್ದೇಶಿಸಿದರಂತೆ. ಯತಿಗಳ ಆದೇಶದಂತೆ ದಂಪತಿಗಳಿಬ್ಬರೂ ಅತ್ಯಂತ ನಿಷ್ಠೆಯಿಂದ ಸೋಮೇಶ್ವರನನ್ನು ಆರಾಧಿಸಿ ಅವನ ಅನುಗ್ರಹದಿಂದ ಭಾಗೀರಥಮ್ಮನ ಕ್ಷಯ ರೋಗ ನಿವಾರಣೆಯಾದದ್ದೇ ಅಲ್ಲದೆ, ಮೃತ್ಯವಿನದವಡೆಯಿಂದಲೂ ಪಾರಾದರು. ಅಷ್ಟೇ ಅಲ್ಲದೆ ಆಕೆಗೆಕ ಸಂತಾನಭಾಗ್ಯವೂ ಲಭಿಸಿ ನಾಲ್ಕು ಮಕ್ಕಳನ್ನು ಹಡೆದು ಗಂಡನ ಕೈಗಿತ್ತರು.

ಹೀಗೆ ಹುಟ್ಟಿದವರಲ್ಲಿ ಮೊದಲನೆಯವರು ನಾದಗಂಧರ್ವ ಕರಿಗಿರಿ ದಾಸರು, ಎರಡನೆಯವರೇ ಗೋಪಿನಾಥದಾಸರು. ಆನಂದನಾಮ ಸಂವತ್ಸರದ ಜ್ಯೇಷ್ಠ ಬಹುಳ ದ್ವಾದಶಿ (೨೦.೬.೧೯೧೪) ಯಂದು ಭರಿಣಿ ನಕ್ಷತ್ರದಲ್ಲಿ ಇವರ ಜನನ. ‘ಭರಣೀ ನಕ್ಷತ್ರದಲ್ಲಿ ಹುಟ್ಟಿದವನು ಧರಣೀ ಆಳ್ತಾನೆ’ ಎಂಬುದು ಗಾದೆಯ ಮಾತು. ಆದರೆ ಗೋಪಣ್ಣ ಧರಣಿ ಆಳದಿದ್ದರೂ ಕಲಾಸಾಮ್ರಾಜ್ಞದ ಅನಭಿಷಿಕ್ತ ಚಕ್ರವರ್ತಿಯಾಗಂತೂ ಮೆರೆದರು. ಅಲ್ಲದೆ ರಾಜಮನೆತನದ ಒಡನಾಟವೂ ಇವರಿಗೆ ಲಭಿಸಿತ್ತು. ಆಗಿನ ಕಾಲದಲ್ಲಿ ರಾಜಮನೆತನದ ಮಕ್ಕಳ ಜೊತೆಯಲ್ಲಿ ಓದಲು-ಒಡನಾಟವಾಡಲು ಸುಸಂಸ್ಕೃತ ಮನೆತನದ ಹುಡುಗರನ್ನೇ ಆಯ್ಕೆ ಮಾಡುವ ರೂಢಿಯಿತ್ತು. ಆಗ ಮೈಸೂರಿನ ಆಳರಸರಾಗಿದ್ದ ನಾಲ್ವಡಿ ಕೃಷ್ಣಪ್ರಭುಗಳು ಯುವರಾಜರ ಮಗ ಭಾವೀ ಅರಸ ಜಯಚಾಮರಾಜರ ಜೊತೆ ವ್ಯಾಸಂಗ ಮಾಡಲು ಆಯ್ಕೆ ಮಾಡಿದ ವಿದ್ಯಾರ್ಥಿಗಳ ಪೈಕಿ ನಮ್ಮ ಗೋಪಣ್ಣನ್ನೂ ಒಬ್ಬ. ಆದರೆ ಅದು ಕಾರ್ಯಗತವಾಗಲಿಲ್ಲ. ಹಿರಿಯರು ಈ ಚಿಕ್ಕ ಹುಡುಗನನ್ನು ಒಂಟಿಯಾಗಿ ದೂರದ ಮೈಸೂರಿಗೆ ಕಳುಹಿಸಲು ಸಮ್ಮತಿ ನೀಡಲಿಲ್ಲ. ಹೀಗಾಗಿ ಗೋಪಣ್ಣ ಧರಣಿ ಆಳದಿದ್ದರು ಧರಣಿ ಅಳುವವರ ಕೃಪಾ ದೃಷ್ಟಿಗೆ ಬಿದ್ದದ್ದಷ್ಟೇ ಸಮಾಧಾನ ನೀಡಿದ ವಿಷಯ.

ಹರಿಕಥಾಕಲೆಯನ್ನೇ ರೂಢಿಸಿಕೊಂಡಿದ್ದ ಗೋಪಣ್ಣನಿಗೆ ತಂದೆಯಂತೆ ನಾಟಕ ಸಂಗೀತ ಕಲಿಯುವ ಗೀಳು ಅಂಟಿಕೊಂಡಿತ್ತು. ಈ ದಿಸೆಯಲ್ಲಿ ಮಗನ ಆಸಕ್ತಿಯನ್ನು ಗಮನಿಸಿದ ವೆಂಕಣ್ಣದಾಸರು ಮೈಸೂರಿನ ವೀಣೆ ಶೇಷಣ್ಣನವರ ನೇರ ಶಿಷ್ಯರಾಗಿದ್ದ ಲಕ್ಷ್ಮೀನಾರಣ್ಣಪ್ಪನವರ ಮಗ, ಪ್ರಸಿದ್ಧ ವೈಣಿಕ ಎಲ್‌. ರಾಜಾರಾಯರಲ್ಲಿ ವೀಣೆ ಹಾಗೂ ಗಾಯನ ಶಿಕ್ಣ ಕೊಡಿಸಿದರು. ರಾಜಾರಾಯರ ಪಾಠವೆಂದರೆ ತುಂಬಾ ಕಟ್ಟು ನಿಟ್ಟಿನದು. ಅಂಥ ಸಶ್ರಮ ಶಿಕ್ಷಣ ಪಡೆದ ಗೋಪಣ್ಣ ಒಳ್ಳೆಯ ಗಾಯಕ ಹಾಗೂ ವೈಣಿಕರಾಗಿ ರೂಪುಗೊಂಡರು.

ಮತ ಪ್ರಚಾರಕರಲ್ಲಿ, ಆಚಾರ್ಯ ತ್ರಯರ ಹೆಸರು ಹೇಗೆ ಪ್ರಸಿದ್ಧವೋ ಹಾಗೆ ಕಲಾ ಕ್ಷೇತ್ರದಲ್ಲಿಯೂ, ಮೂವರು ಆಚಾರ್ಯರು ಅದ್ವಿತೀಯರೆನಿಸಿದ್ದರು. ಜಗದ್ಗುರು ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಶ್ರೀಮದಾಚಾರ್ಯರು (ಮಧ್ವಮುನಿಗಳು), ಮತತ್ರಯಾಚಾರ್ಯರಾದರೆ, ವೆಂಕಣ್ಣಚಾರ್ಯರು (ಹರಿಕಥೆ) ವರದಾಚಾರ್ಯರು (ನಾಟಕ) ವಾಸುದೇವಾಚಾರ್ಯರು (ಸಂಗೀತ) ಕಲಾಲೋಕದಕ ಆಚಾರ್ಯ ತ್ರಯರೆಂದು ಖ್ಯಾತ ನಾಮರಾದವರು. ತಂದೆ ಹಾಗೂ ಚಿಕ್ಕಪ್ಪ ವೇಣುಗೋಪಾಲದಾಸರಿಂದ ಹರಿಕಥೆ ಹಾಗೂ ಮಧ್ವಶಾಸ್ತ್ರ ಸಿದ್ಧಾಂತ ಅಭ್ಯಸಿಸಿದ ಗೋಪಣ್ಣ ವರದಾಚಾರ್ಯರ ಗರಡಿಯಲ್ಲಿ ನಾಟಕ ರಂಗದಲ್ಲೂ ಪಳಗಿ ಬಾಲ ನಟರಾಗಿ ಮೆರೆದರು. ನೋಡುವುದಕ್ಕೂ ತುಂಬಾ ಲಕ್ಷಣವಂತ. ಜೊತೆಗೆ ಮಾಧ್ವ ಸಂಪ್ರದಾಯದ ದ್ವಾದಶನಾಮದ ಲಾಂಛನ , ಹುಡುಗನ ಕಳೆಯನ್ನು ಹೆಚ್ಚಿಸಿತ್ತು.

ಗೋಪಣ್ಣ ರಂಗಭೂಮಿಗೆ ಪದಾರ್ಪಣೆ ಮಾಡಿದ್ದೂ ಸಹ ಒಂದು ವಿಚಿತ್ರ ಸನ್ನಿವೇಶದಲ್ಲಿ. ಬಹುಷಃ ಆಗ ಈತನಿಗೆ ಎಂಟುವರ್ಷವಿರಬಹುದು. ರಾತ್ರಿ ಮಲಗಿದ್ದ ಈ ಬಾಲಕನನ್ನು ಯಾರೋ ಎತ್ತಿಕೊಂಡು ಹೋದರು. ಇದ್ದಕ್ಕಿದ್ದಂತೆ ಕೇಳಿ ಬಂದ ಬ್ಯಾಂಡಿನ ಶಬ್ದದಿಂದ ಹುಡುಗನಿಗೆ ಎಚ್ಚರವಯಿತು. ಎದ್ದು ನೋಡಿದರೆ ವತಾವರಣವೇ ಬೇರೆ. ಎದುರಿಗೆ ಝಗ ಝಗಿಸುವ ಗ್ಯಾಸ್‌ ಲೈಟುಗಳು, ನಾಟಕದ ಪರದೆ, ಅತ್ತಿಂದಿತ್ತ ಓಡಾಡುತ್ತಿದ್ದ ನಟರುಗಳಿಂದ ತಾನೆಲ್ಲಿರುವೆನೆಂಬುದು ಹುಡುಗನಿಗೆ ಅರ್ಥವಾಗಿಯೇ ಬಿಟ್ಟಿತು. ಆದರೂ ಈ ಬಾಲಕ ವಿಚಲಿತನಾಗಲಿಲ್ಲ. ಕುತೂಹಲದಿಂದ ತಾನಿಲ್ಲಿಗೆ ಹೇಗೆ ಬಂದೆ ಎಂದು ಅತ್ತಿತ್ತ ನೋಡುತ್ತಿದ್ದಾಗ ಅಲ್ಲಿನ ಮುಖ್ಯಸ್ಥ ಇತರ ಹಿರಿಯ ನಟರೊಂದಿಗೆ ಹುಡುಗನ ಬಳಿಗೆ ಬಂದರು. ಅದು ತುಳಸೀ ನಾಟಕ ಕಂಪೆನಿ. ಅಂದು ಪ್ರದರ್ಶನವಾಗಬೇಕಿದ್ದ ನಾಟಕ ಭಕ್ತ ಧ್ರುವ. ಅದರಲ್ಲಿ ಉತ್ತಾನ ಪಾದರಾಯನ ಮಗ ಉತ್ತಮನ ಪಾತ್ರ ಮಾಡಬೇಕಿದ್ದ ಬಾಲನಟನಿಗೆ ದೇಹಾಲಸ್ಯವಾಗಿ ಅವನು ಬರಲಾಗದ್ದರಿಂದ ಆ ಪಾತ್ರಕ್ಕೆ ಗೋಪಣ್ಣನನ್ನು ಆಯ್ಕೆ ಮಾಡಿ ಹಿಂದು ಮುಂದು ನೋಡದೆ ಮೇಕಪ್‌ ಮಾಡಿಸಿಯೇ ಬಿಟ್ಟರು. ಹುಡುಗನೂ ಯಾವ ಅಳುಕೂ ಇಲ್ಲದೆ ಅವರು ಹೇಳಿಕೊಟ್ಟ ಸಂಭಾಷಣೆಗಳನ್ನು ಚಾಚೂ ತಪ್ಪದೆ ಒಪ್ಪಿಸಿ ಬಿಟ್ಟ. ಅಲ್ಲಿಂದ ಮುಂದೆ ಆ ಕಂಪೆನಿಯ ಬಾಲಪಾತ್ರಗಳೆಲ್ಲಾ ಗೋಪಣ್ಣನ ಪಾಲಾಯಿತು. ಹೀಗೆ ಬಾಲನಟನೊಬ್ಬನ ಉದಯವಾಯಿತು. ಅಷ್ಟೇ ಅಲ್ಲ, ಹರಿಕಥೆ, ಸಂಗೀತವೇ ಅಲ್ಲದೆ ಲೌಕಿಕ ವಿದ್ಯಾಭ್ಯಾಸದಲ್ಲೂ ಹಿಂದುಳಿಯದೆ ಸ್ಕೂಲ್‌ ಫೈನಲ್‌ ಮುಗಿಸಿ ಸಕಲಾ ಕಲಾ ನಿಪುಣನಾಗಿ, ಒಂದು ಸುಂದರ ವಿಗ್ರಹವಾಗಿ ರೂಪುಗೊಂಡ ಗೋಪಣ್ಣ. ಹೆಸರಿನ ಜೊತೆಯಲ್ಲೇ ಕೀರ್ತಿಯನ್ನು ಸಂಪಾದಿಸಿದ ಈ ದಿಟ್ಟ ಹುಡುಗ ಚಲನಚಿತ್ರರಂಗವನ್ನು ಪ್ರವೇಶಿಸಿ ಕೆಲವೊಂದು ಮೂಕಿ ಚಿತ್ರಗಳಲ್ಲೂ ಕಾಣಿಸಿಕೊಂಡ.

ಈಗಾಗಲೇ ಸಂಗೀತ ಜ್ಞಾನವನ್ನು ಚೆನ್ನಾಗಿಯೇ ರೂಢಿಸಿಕೊಂಡಿದ್ದ ಗೋಪಣ್ಣನಿಗೆ ಬೆಂಗಳೂರಿನ ಸುಲ್ತಾನ್‌ಪೇಟೆಯಲ್ಲಿದ್ದ ಆರ್ಯಬಾಲಿಕಾ ಪಾಠ ಶಾಲೆಯಲ್ಲಿ ಸಂಗೀತ ಮೇಷ್ಟ್ರಾಗಿ ಕೆಲಸ ದೊರೆಯಿತು. ಚಲನಚಿತ್ರದ ಖ್ಯಾತ ತಾರೆ ಎಂ.ವಿ. ರಾಜಮ್ಮ, ಗಮಕ ವಿದುಷಿ ಶಕುಂತಲಾಬಾಯಿ ಪಾಂಡುರಂಗರಾವ್‌ ಆಗ ಇವರ ವಿದ್ಯಾರ್ಥಿನಿಯರಾಗಿದ್ದರು. ಆಗ ಗೋಪೀನಾಥದಾಸರ/ಇಗೆ ಕೇವಲ ಹತ್ತೊಂಬತ್ತು ವರ್ಷ.

ಮುಂದೆ ಇವರಿಗೆ ಮಲ್ಲೇಶ್ವರದ ಶಾಲೆಯೊಂದಕ್ಕೆ ವರ್ಗವಾಗಿ ಅಲ್ಲಿ ಸಂಗೀತದ ಕುರಿತು ಅನೇಕ ಸುಧಾರಣೆಗಳನ್ನು ತಂದರು. ಅಲ್ಲಿದ್ದಾಗ ಇವರಿಗೆ ಶಾಲೆ ತಪ್ಪಿಸಿ ನಾಟಕದ ಖಯಾಲಿ ಹತ್ತಿಸಿಕೊಂಡು ಅಡ್ಡಾಡುತ್ತಿದ್ದ ಮುಂದೆ ‘ಕಲ್ಚರ್ರ‍ಡ್‌ ಕಮಿಡಿಯನ್‌’ ಎಂದೇ ಖ್ಯಾತರಾಗಿದ್ದ ಹಿರಣ್ಣಯ್ಯನವರ ಗೆಳೆತನವಾಯಿತು. ಅಣ್ಣ ಕರಿಗಿರಿ, ಹಿರಣ್ಣಯ್ಯ, ಗೋಪಣ್ಣ ಸುತ್ತಮುತ್ತಲಿನ ತುಂಟ ಹುಡುಗರಾದರು.

ಹರಿಕಾ ರಂಗಕ್ಕೆ ಗೋಪಣ್ಣ: ಹರಿಕಥೆ ಅಥವಾ ಕಥಾ ಕೀರ್ತನ ಕಲೆ ಇವರಿಗೆ ವಂಶಪಾರಂಪರ್ಯವಾಗಿ ಬಂದದ್ದು. ತಂದೆ ವೆಂಕಣ್ಣದಾಸರು ಆ ಕಾಲಕ್ಕೇ ಶ್ರೇಷ್ಠ ಹರಿಕಥಾ ವಿದ್ವಾಂಸರಾಗಿದ್ದವರು ಅವರ ತಮ್ಮ ಹರಿಕಥಾಂಬುಧಿ ಚಂದ್ರರೆಂದೇ ಖ್ಯಾತ ನಾಮರಾಗಿದ್ದ ವೇಣುಗೋಪಾಲದಾಸರು. ಕರಿಗಿರಿರಾಯರಿಗೆ ದತ್ತುವಾಗಿ ಕಥಾಕೀರ್ತನ ಕಲೆಯಲ್ಲಿ ಆ ವಂಶವನ್ನೇ ಉದ್ಧರಿಸಿದರು. ವೇಣುಗೋಪಾಲದಾಸರ ಮಗ ಟಿ.ವಿ. ಗುರುರಾಜದಾಸರೂ ತಂದೆಯ ಜಾಡನ್ನೇ ಹಿಡಿದು ಉತ್ತಮ ಹರಿಕಥಾ ಕಪಟುವೆನಿಸಿದ್ದರು.

ಅಂತೆಯೇ ವೆಂಕಣ್ಣದಾಸರ ಮಕ್ಕಳೂ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದರೂ ಸಹ ಲದೇಕೊ ಏನೋ ತಂದೆ ಬದುಕಿರುವ ತನಕ ವೇದಿಕೆ ಹತ್ತಿರಲಿಲ್ಲ. ನಾಟಕ ಸಂಗೀತಗಳಲ್ಲೇ ಕಾಲ ಕಳೆಯುತ್ತಿದ್ದರು. ವೆಂಕಣ್ಣದಾಸರು ೧೯೩೫ರಲ್ಲಿ ಕಾಲವಾದರು.

ಸಂಪ್ರದಾಯದಂತೆ ವಿಧ್ಯುಕ್ತವಾಗಿ ಮಕ್ಕಳು ಅವರ ಕರ್ಮಾಂತರಗಳನ್ನು ಮುಗಿಸಿದ್ದರುಇ. ವೆಂಕಣ್ಣದಾಸರು ತೀರಿಕೊಂಡ ಹತ್ತನೆಯ ದಿನ ರಾತ್ರಿ ಹಿರಿಯ ಮಗ ಕರಿಗಿರಿ ಹಾಗೂ ಗೋಪಣ್ಣನ ಸ್ವಪ್ನದಲ್ಲಿ ಏಕಕಾಲಕ್ಕೆ ಬಂದು ಅವರುಗಳು ಮುಂದೆ ಹರಿಕಥೆ ಮಾಡಲು ಸೂಚಿಸಿದರೆಂತೆ. ಸರಿ ಅಲ್ಲಿಂದ ಆರಂಭವಾಯಿತು ಅವರ ಕಥಾಕೀರ್ತನ ಸೇವೆ. ಗೋಪಣ್ಣನ ಹರಿಕಥೆ ಅಣ್ಣ ಕರಿಗಿರಿ ಆಚಾರ್ ಅವರ ಹಾರ್ಮೋನಿಯಂ, ತಮ್ಮ ಜಯಸಿಂಹದಾಸರ ಮೃದಂಘ ಅಥವಾ ತಬಲ. ಈ ‘ತ್ರಿವಳಿ’ಗಳ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಯಿತು. ರಾಮೋತ್ಸವ, ಗಣೇಶೋತ್ಸವಗಳೇ ಅಲ್ಲದೆ ಬೆಂಗಳೂರಿನ ಹಾಗೂ ಮೈಸೂರಿನ ಅನೇಕ ಪ್ರತಿಷ್ಠಿತ ಸಂಗೀತ ಸಂಸ್ಥೆಗಳು ಇವರ ಕಾರ್ಯಕ್ರಮಗಳನ್ನೇರ್ಪಡಿಸಿ ತಮ್ಮ ಗೌರವವನ್ನು ಹೆಚ್ಚಿಸಿಕೊಂಢವು. ಎಲ್ಲ ಮಾಧ್ವಮಠಗಳಲ್ಲಿ ಶ್ರೀಗಳವರ ಚಾತುರ್ಮಾಸ್ಯ ವ್ರತಗಳ ಸಂದರ್ಭಗಳಲ್ಲಿ, ಯತಿಗಳ ಆರಾಧನಾ ಉತ್ಸವಗಳಲ್ಲಿ ಗೋಪೀನಾಥದಾಸರದೇ ಹರಿಕಥೆ. ಹರಿಕಥಾರಂಗಕ್ಕೆ ಇಳಿದದ್ದೆ ತಡ ಗೋಪಣ್ಣನೆಂಬ ಆತ್ಮೀಯ ಹೆಸರು ಮರೆಯಾಗಿ ‘ಗೋಪೀನಾಥದಾಸರು’ ಎಂದು ಜನ ಗೌರವ ಪೂರ್ವಕವಾಗಿಕ ಕರೆಯುವಂತಾಯ್ತು. ಇವರ ಕಲಾಸಾಮರ್ಥ್ಯವನ್ನು ಮೆಚ್ಚಿದ ವಿದ್ವಾಂಸರುಗಳು ಸ್ವಪ್ರೇರಣೆಯಿಂದ ಇವರನ್ನು ‘ಹರಿಕಥಾರತ್ನಾಕರ’ ಎಂಬ ಬಿರುದು ನಹೀಡಿ ಗೌರವಿಸಿದರು. ಹೀಗೆ ವೈಣಿಕರಾಗಿ, ಗಾಯಕರಾಗಿ, ನಟರಾಗಿ, ಕಥಾಕೀರ್ತನ ವಿದ್ವಾಂಸರಾಗಿ ಕೀರ್ತಿಶಿಖರದ ಸೋಪಾನವನ್ನು ಏರುತ್ತಲೇ ಹೋದರು ಗೋಪೀನಾಥ ದಾಸರು.

ವೈಣಿಕರಾಗಿ ಆಕಾಶವಾಣಿಯಲ್ಲಿ: ಆಕಾಶವಾಣಿ ಪ್ರಸಾರ ಭಾರತಕ್ಕೆ ಪ್ರವೇಶಿಸಿದ ಸಮಯ. ಮೈಸೂರಿನಲ್ಲಿ ಗೋಪಾಲಸ್ವಾಮಿಯವರು ತಮ್ಮ ಮನೆಯಲ್ಲೇ ಅದರ ಪ್ರಯೋಗವನ್ನು ನಡೆಸಿ ಮೈಸೂರು ಸಂಸ್ಥಾನದಲ್ಲಿ ಮೊಟ್ಟಮೊದಲ ಬಾನುಲಿ ಪ್ರಸಾರಕರು ಎಂಬ ಕೀರ್ತಿಗೆ ಪಾತ್ರಾದರು. ಅಂತೆಯೇ ಬೆಂಗಳೂರಿನ ಟಾಟಾ ವಿಜ್ಞಾನ ಸಂಸ್ಥೆ (ಈಗಿನ ಭಾರತೀಯ ವಿಜ್ಜಾನ ಸಂಸ್ಥೆ) ಸಹ ಒಂದು ಪ್ರಯೋಗವನ್ನೇ ಮಾಡಿ ಬೆಂಗಳೂರಿನ ಸೆಂಟ್ರಲ್‌ ಕಾಲೇಜ್‌ ಆವರಣದಲ್ಲಿ ಇದರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಪ್ರಸಿದ್ಧ ವಿಜ್ಞಾನಿ ಸರ್.ಸಿ.ವಿ. ರಾಮನ್‌ರವರ ನಿರ್ದೇಶನದಲ್ಲಿ ಇದರ ಪ್ರಾರಂಭೋತ್ಸವವನ್ನ ಹಮ್ಮಿಕೊಳ್ಳಲಾಗಿತ್ತು. ಅಂದು ಆಹ್ವಾನಿತ ಗಣ್ಯ ಶ್ರೋತೃಗಳ ಮುಂದೆ ವೈಣಿಕ ವಿದ್ವಾನ್‌ ಎಲ್‌. ರಾಜಾರಾಯರ ವೀಣಾವಾದನ. ಅಲ್ಲಿ ಗುರುಗಳ ಜೊತೆಯಲ್ಲಿ ವೀಣಾ ಸಹವಾದನ ನುಡಿಸುವ ಯೋಗ ಗೋಪೀನಾಥ ದಾಸರಿಗೆ! ಹೀಗೆ ಆಕಾಶವಾಣಿಯಲ್ಲಿ ವೀಣೆ ನುಡಿಸಿದ  ಪ್ರಥಮ ಯುವ ಕಲಾವಿದನೆಂಬ ಹೆಗ್ಗಳಿಕೆಗೆ ಪಾತ್ರರಾದವರು ನಮ್ಮ ಗೋಪಣ್ಣ!

ಮನೆಯೇ ನಂದಗೋಕುಲ: ಗೋಪೀನಾಥದಾಸರ ಮನೆ ಪಾರಂಪರಿಕವಾಗಿ ಯಾವ ಒಡಕೂ ಇಲ್ಲದ ಒಂದು ಅವಿಭಕ್ತ ಕುಟುಂಬವಾಗಿ ನಡೆದುಕೊಂಡ ಬಂದ ಸಂಸಾರ. ಮನೆಯ ಹೆಸರೇ ಕಲಾಚಂದ್ರಿಕೆ. ಒಮ್ಮತದ ಜೀವನ ಎಂದರೇನು ಎಂಬುದನ್ನು ತಿಳಿಯಬೇಕಾದರೆ ಗೋಪೀನಾಥದಾಸರ ಮನೆ ಒಂದು  ಜ್ವಲಂತ ಉದಾಹರಣೆ.  ಇದು ಕೇವಲ ಮನೆಯಾಗಿರದೆ ಒಂದು ಸಂಸ್ಥೆಯಂತೆ ನಡೆಸಲ್ಪಡುತ್ತಿತ್ತು. ದಾಯಾದಿ ಮಾತ್ಸರ್ಯದ ಸುಳಿವೂ ಇಲ್ಲದಂಥ ನಂದ ಗೋಕುಲದಂತಿದ್ದ ಸಂಸಾರ. ಅಣ್ಣ ತಮ್ಮಂದಿರು, ವಾರಗಿತ್ತಿಯರು, ಅವರವರ ಮಕ್ಕಳು, ಅಳಿಯಂದಿರು, ಸೊಸೆಯರು ಇವರಲ್ಲಿ ಯಾವ ಮಾತ್ಸರ್ಯ, ಭಿನ್ನಾಭಿಪ್ರಾಯಗಳಿಗೆ ಎಡೆಯಿಲ್ಲದಂತೆ ಎಲ್ಲರೂ ಸ್ನೇಹಭಾವದಿಂದಿದ್ದಂತಹ ಅವಿಭಕ್ತ ಕುಟುಂಬ. ಒಂದು ಹೊತ್ತಿಗೆ ಏನಿಲ್ಲೆಂದರೂ ಎಂಬತ್ತು ಜನ ಒಂದೇ ಸಾಲಿನಲ್ಲಿ ಊಟಕ್ಕೆಕ ಕೊಡುತ್ತಿದ್ದರೆಂದರೆ ಮನೆ ಎಷ್ಟು ವಿಶಾಲವೋಕ ಅಷ್ಟೇ ವಿಶಾಲ ಮನಸ್ಸೂ ಕೂಡ! ಉಪಚಾರಕ್ಕೇನೂ ಕೊರತೆಯಿರಲಿಲ್ಲ’. ಮನೆಯ ಪ್ರತಿಯೊಬ್ಬ ಸದಸ್ಯನೂ ತನಗೆ ಒಪ್ಪಿಸಲ್ಪಟ್ಟ ಕೆಲಸಗಳನ್ನೇ ಹಿರಿಯರ ಆದೇಶದಂತೆ ಮಾಡುತ್ತಿದ್ದರು. ಈ ಇಡೀ ‘ಕಲಾಚಂದ್ರಿಕಾ’ದ ಎಲ್ಲಾ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದುದು ಗೋಪಣ್ಣನ ನಿರ್ದೇಶನದಲ್ಲಿ! ಅಷ್ಟೇನೂ ವ್ಯವಹಾರ ಜ್ಞಾನವಿಲ್ಲದ ಅಣ್ಣ ಕರಿಗಿರಿದಾಸರು ಈ ಜವಾಬ್ದಾರಿಯನ್ನೆಲ್ಲಲ ಸ್ವಪೇರಿತರಾಗಿ ತಮ್ಮನಿಗೇ ವಹಿಸಿದ್ದರು. ಅವರ ವ್ಯವಹಾರ ಚತುರತೆಯ ಬಗ್ಗೆ ಇವರಿಗೆ ಸಂಪುರ್ಣ ವಿಶ್ವಾಸವಿತ್ತು. ತಮ್ಮಂದಿರಾದ ಜಯಸಿಂಹದಾಸ್‌ ಹಾಗೂ ದ್ವಾರಕಿಗೂ ಅಣ್ಣನ ಮೇಲೆ ಅಷ್ಟೇಧ ನಿಷ್ಠೆ, ವಿಶ್ವಾಸ. ಗೋಪೀನಾಥದಾಸರಾದರೋ ಯಾವ ಕೆಲಸ ಮಾಡಬೇಕಾದರೂ ಸರಿಯಾದ ರೀತಿಯಲ್ಲಿ ವಿವೇಚಿಸಿ ಕಾರ್ಯಾಚರಣೆಗೆ ತರುತ್ತಿದ್ದರು ಎಂದೂ ಯಾವತ್ತೂ ದಿಡೀರ್ ನಿರ್ಧಾರ ಕೈಗೊಂಡವರಲ್ಲ. ಅಷ್ಟೇ ಅಲ್ಲ ನಿರ್ಧಾರವನ್ನು ತಾವೊಬ್ಬರೇ ಮಾಡುತ್ತಿರಲಿಲ್ಲ. ಅದರ ಫಲಾಫಲಗಳನ್ನು ಸಹೋದರರೊಂದಿಗೆ ವಿವೇಚಿಸಿ ಮುಕ್ತ

ಮನಸ್ಸಿನಿಂದ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತಿದ್ದರು.

ಹರಿಕಥೆ ಮಾಡುವಾಗಲೂ ಇವರದ್ದು ಅದೇ ಸಂಪ್ರದಾಯ, ಕಥೆಯ ಆಯ್ಕೆ, ಅನಂತರ ಅದರ ಆಳವಾದ ಅಧ್ಯಯ ನ, ಅದರಲ್ಲಿ ಉಲ್ಲೇಖವಾದ ಶಾಸ್ತ್ವ ಸಂಪ್ರದಾಯ ಪ್ರಮೇಯಗಳ ಬಗ್ಗೆ ವೇಣುಗೋಪಾಲದಾಸರ ಬಳಿ ಚರ್ಚಿಸಿ ಅವರ ಮಾರ್ಗದರ್ಶನ ಪಡೆದು ಮುಂದುವರಿಯುತ್ತಿದ್ದರು. ಸಂಗೀತದ ವಿಭಾಗದಲ್ಲಿ ಅಣ್ಣ ತಮ್ಮಂದಿರೊಡನೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು . ಎಂದೂ ಬೇಕಾಬಿಟ್ಟಿ ಕಾರ್ಯಕ್ರಮ ನೀಡಿದವರಲ್ಲ. ಜೊತೆಗೆ ಸಂಸ್ಕೃತದ ಅಧ್ಯಯನವನ್ನೂ ಸಾಕಷ್ಟು ಮಾಡಿ ಅದರಲ್ಲೂ ತಮ್ಮ ಜ್ಞಾನವನ್ನು ವೃದ್ಧಿಪಡಿಸಿಕೊಂಡಿದ್ದರು.

ಪ್ರಭಾತ್‌”ಉದಯ: ಗೋಪಣ್ಣ ಹರಿಕಥೆ ಮಾಡುವ ಕಾಲಕ್ಕಾಗಲೇ ಧ್ವನಿವರ್ಧಕದ ಬಳಕೆ ಆರಂಭವಾಗಿತ್ತು. ಆದಾಗ್ಯೂ ಅದರಲ್ಲಿನ ತಾಂತ್ರಿಕ ಸೌಲಭ್ಯಗಳ ಕೊರರೆ ಇದ್‌ಏ ಇತ್ತು. ಈಗಿನಷ್ಟು ಆಧುನಿಕ ಯಂತ್ರೋಪಕರಣಗಳೂ ಸಹ ಆಗಿರಲಿಲ್ಲ. ಇದನ್ನು ತಮ್ಮ ಕಾರ್ಯಕ್ರಮಗಳ ಸಮಯದಲ್ಲಿ ಸ್ವತಃ ಅನುಭವಿಸಿ ಬವಣೆ ಪಟ್ಟ ದಾಸರು ಸಾಕಷ್ಟು  ಆಲೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದರು. ಅಣ್ಣ ತಮ್ಮಂದಿರೊಡನೆ ಕೂಲಂಕಷವಾಗಿ ಚರ್ಚಿಸಿ ಧ್ವನಿವರ್ಧಕ ಸೌಲಭ್ಯಗಳ ಕೊರತೆಯ ಬಗ್ಗೆ ಅವರಿಗೂ ತಿಳಿಯ ಹೇಳಿ ಅದಕ್ಕೆ ಸೂಕ್ತ ಪರಿಹಾರವಗಿ ತಮ್ಮದೆ ಆದ ಒಂದು “ಸೌಂಡ್‌ ಸಿಸ್ಟಂ”ಅನ್ನು ಸ್ಥಾಪಿಸುವ ಇರಾದೆಯನ್ನು ವ್ಯಕ್ತಪಡಿಸಿದಾಗ ಸಹೋದರರೆಲ್ಲರೂ ಅದನ್ನು ಒಕ್ಕೊರಲಿನಿಂದ ಅನುಮೋದಿಸಿದರು. ಹೀಗೆ ರೂಪತಾಳಿತು. ಪ್ರಭಾತ್ ಸೌಂಡ್ ಸಿಸ್ಟಂ.

ನಾಟಕ ಕ್ಷೇತ್ರದಲ್ಲೂ ಸಾಕಷ್ಟು ಪಳಗಿ ಅಲ್ಲಿನ ತಾಂತ್ರಿಕ ತೊಂದರೆಗಳನ್ನು ಕಂಡಿದ್ದ ಗೋಪಣ್ಣ ರಂಗಭೂಮಿಯಲ್ಲಿ ಬಳಸುವ ಪರದೆಗಳು, ಸೈಡ್‌ವಿಂಗ್ಸ್‌, ಸೀನರಿಗಳೇ ಅಲ್ಲದೆ ಪೌರಾಣಿಕ ನಾಟಕಗಳಿಗೆ ಬೇಕಾಗುವ ಕಿರೀಟ, ಭುಜಕೀರ್ತಿಗಳು, ಆಯುಧಗಳು, ಪೋಷಾಕುಗಳು ಇತ್ಯಾದಿ ಸೌಲಭ್ಯಗಳನ್ನು ಒದಗಿಸಲು ಮುಂದಾದರು. ಹರಿಕಥೆ ಮಾಡುವವರಿಗೆ ಗಾಯನದ ಜೊತೆಗೆ ಭಾಷಾಜ್ಞಾನನೂ ಇರುವುದು ಸಹಜ. ಅಂತೆಯೇ ರಂಗನಟರೂ ಸಹ. ಅನೇಕ ನಾಟಕ ಕಂಪೆನಿಗಳು ಆರ್ಥಿಕ ಅಡಚಣೆಗಳಿಂದಲೋ ಇನ್ನಾವುದೋ ತೊಂದರೆಗಳಿಂಧ ಮುಚ್ಚಲ್ಪಟ್ಟಾಗ ಅಲ್ಲಿನ ರಾಜಾಪಾರ್ಟು ಮಾಡುತ್ತಿದ್ದ ನಟರು ಸ್ವಸಾಮರ್ಥ್ಯದಿಂದ ಹರಿಕಥಾ ಕ್ಷೇತ್ರಕ್ಕೆ ಧುಮುಕಿರುವ ನಿದರ್ಶನಗಳೆಷ್ಟೋ. ಹೀಗೆ ಹರಿಕಥೆಗೂ ನಾಟಕರಂಗಕ್ಕೂ ಒಂದು ರೀತಿಯ ನಂಟು ಇದ್ದೇ ಇತ್ತು. ಹರಿಕಥೆ ನಾಟಕ ಎರಡೂ ಕ್ಷೇತ್ರದಲ್ಲಿ ನುರಿತಿದ್ದು ಒಳ್ಳೆಯ ಭಾಷಾ ಸಂಪತ್ತನ್ನು ಹೊಂದಿದ್ದ ಗೋಪೀನಾಥದಾಸರು ಅನೇಕ ನಾಟಕಗಳಿಗೆ ಸಂಭಾಷಣೆ ಹಾಡುಗಳನ್ನು ರಚಿಸಿ ನಟವರ್ಗವನ್ನೂ ತಾವೇ ಸೇರಿಸಿ, ನಾಟಕ-ರೂಪಕ ಮೊದಲಾದುವುಗಳನ್ನು ನಿರ್ದೇಶಿಸಿ ಹೆಚ್ಚಿನಂಶ ಕಿರಿಯರಿಗೆ ಉತ್ತೇಜನ ನೀಡುವಲ್ಲಿ ಯಶಕಂಡರು. ಹೀಗೆ ಕಿರಿಯರ ನಾಟಕ ತಂಡ ತಲೆಯೆತ್ತಿತು.

ಇವರು ಕರ್ನಾಟಕ ವೈಭ, ಸಿಂಡ್ರೆಲಾ, ಪುಣ್ಯಕೋಟಿ ಮುಂತಾದ ನಾಟಕಗಳು ಅತ್ಯಂತ ಯಶಸ್ವಿಯ ಆಗಿ, ಪ್ರದರ್ಶನಗೊಂಡ ಕಡೆಯಲ್ಲೆಲ್ಲಾ ಶತದಿನಗಳನ್ನಾಚರಿಸಿದವು. ಕೇವಲ ಕರ್ನಾಟಕವೇ ಅಲ್ಲದೆ ಹೊರ ರಾಜ್ಯಗಳಲ್ಲೂ ಯಶಸ್ವೀ ಪ್ರದರ್ಶನ ನಡೆದು ರಾಜಧಾನಿ ದೆಹಲಿಗೂ ಕಾಲಿಟ್ಟು ಅಲ್ಲೂ ಹೆಸರು ಗಳಿಸಿ ರಾಷ್ಟ್ರ ಅಂತರಾಷ್ಟ್ರೀಯ ಖ್ಯಾತಿ ಗಳಿಸಿತು. ಹೀಗೆ “ಪ್ರಭಾತ್‌ ಸೌಂಡ್‌ ಸಿಸ್ಟಂ” ಆಗಿ ಹುಟ್ಟಿಕೊಂಡದ್ದು ತನ್ನ ಆಜಾನುಬಾಹು ಕೈಗಳನ್ನು ಎಲ್ಲಡೆ ಚಾಚಿ ಪ್ರಭಾತ್‌ ಕಲಾ ಸಂಸ್ಥೆಯಾಗಿ ಮಾರ್ಪಟ್ಟು ಅದರ ಪ್ರಮುಖ ರೂವಾರಿಯಾದರು ಗೋಪೀನಾಥದಾಸರು.

ಧೀಮಂತ ಪುರುಷ: ವಾಮನ ಬಲಿಚಕ್ರವರ್ತಿಯಲ್ಲಿ ಮೂರು ಹೆಜ್ಜೆ ದಾನ ಪಡೆದು ಅದನ್ನು ಅಳೆಯಲು ತ್ರಿವಿಕ್ರಮನಾದ. ಹರಿಕಥೆ, ನಾಟಕ, ಸಂಗೀತ ಸಾಹಿತ್ಯಗಳ ಕ್ಷೇತ್ರಗಳಲ್ಲಿ ತನ್ನ ಹೆಜ್ಜೆಯಿಟ್ಟ ಗೋಪಣ್ಣ ಸಹ ತ್ರಿವಿಕ್ರಮನಂತೆ ಬೆಳೆದು ಅತ್ಯಂತ ವರ್ಣರಂಜಿತ ವ್ಯಕ್ತಿಯಾಗಿ ಕನ್ನಡ ಜನತೆಯ ಆತ್ಮೀಯರಾದರು. ಕರ್ನಾಟಕ ವೈಭವ ಎಂದರೇನು ಎಂದು ಜಗತ್ತಿಗೇ ತೋರಿಸಿ ಕೊಟ್ಟ ಧೀಮಂತ ಪುರುಷ. ಸಿದ್ಧಾಪುರದಲ್ಲಿ ಹರಿಕಥಾ ಕ್ಷೇತ್ರಕ್ಕೆ ಕಾಲಿಟ್ಟ ಗೋಪಣ್ಣ ಸಿಂಗಪುರದ  ತನಕಕ ತನ್ನದಾಪುಗಾಲನ್ನು ವಿಸ್ತರಿಸಿ ಗೌರವ ಡಾಕ್ಟರೇಟ್‌ ಪಡೆದ ಪ್ರಥಮ ಹರಿಕಥಾ ವಿದ್ವಾಂಸ ಎಂಬ ಹಿರಿಮೆಗೆ ಪಾತ್ರರಾದ ಕಲಾತಪಸ್ವಿ.

ಗೋಪೀನಾಥದಾಸರು ಈಗಾಗಲೇ ತಿಳಿಸಿದಂತೆ ಅವಿಭಕ್ತ ಕುಟುಂಬ ಅದರ ಸಂಪೂರ್ಣ ಹೊಣೆಗಾರಿಕೆ ಗೋಪಣ್ಣನದು. ಕಾರಣ ಅವರ ಸಹನಾಶೀಲತೆ, ಸದಾ ಹಸನ್ಮುಖಕ ಕಷ್ಟವೋ ನಷ್ಟವೋ,; ಅದಕ್ಕಾಗಿ ಮುಖಸಿಂಡರಿಸಿ ಕೊಂಡವರಲ್ಲ. ಅವರದ್ದು ಅಕ್ಷಯ ತೂಣೀರ. ದೇಹಿ ಎಂದು ಬಂದವರಿಗೆ ನಾಸ್ತಿ ಕೆನ್ನದೆ ಕೈಲದ ಸಹಾಯ ಮಾಡುತ್ತಿದ್ದ ದಾನಶೂರ. ತಮ್ಮ ನಾಟಕಗಳನ್ನೆಲ್ಲ ಅನೇಕ ಬಾರಿ ‘ಸಹಾಯಾರ್ಥ’ ಪ್ರದರ್ಶನ ನೀಡಿ ಅನೇಕ ಸಂಘ ಸಂಸ್ಥೆಗಳಿಗೆ ನೆರವಾಗಿದ್ದಾರೆ. ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದ ಅಶಕ್ತ ಕಲಾವಿದರನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಅನ್ನ ಹಾಕಿ, ಬಟ್ಟೆ ಕೊಟ್ಟು, ಕೈಗೂ ಅಷ್ಟಿಷ್ಟು ಪುಡಿಗಾಸುಕೊಟ್ಟು ಪೋಷಿಸಿದ್ದಾರೆ. ಕರ್ನಾಟಕ ಘನ ಸರ್ಕಾರಕ ಇವರಿಗೆ ಗೌರವ ಸನ್ಮಾನವನ್ನು ಘೋಷಿಸಿದಾಗ ಅದನ್ನು ನಯವಾಗಿ ನಿರಾಕರಿಸಿ ತಮಗಿಂತ ಹಿಂದುಳಿದ, ಬಡ ಕಲಾವಿದರಿಗೆ ಅದನ್ನು ನೀಡುವಂತೆ ಸಲಹೆ ಮಾಡಿದ ವಿಶಾಲ ಹೃದಯಿ.

ಮರೀಚಿಕೆಯಾಗುಳಿದ ಕಲಾಭವನ: ಗೋಪೀನಾಥದಾಸರಿಗೆ ತಾವು ಇಷ್ಟೆಲ್ಲ ಮಾಡಿದರೂ ಕಲಾವಿದರಿಗಾಗಿ ಒಂದು ಸುಭದ್ರವಾದಕ ಕಟ್ಟಡ ನಿರ್ಮಿಸಿ ಅದನ್ನು  ‘ಕಲಾಭವನ’ವನ್ನಾಗಿ ಮಾಡಬೇಕೆಂಬ ಮಹತ್ವಾಕಾಂಕ್ಷೆ ಇತ್ತು. ಅದಕ್ಕಾಗಿ ಒಂದು ಸೂಕ್ತವಾದ ಜಾಗಕ್ಕೆ ಅರಸುತ್ತಿದ್ದಾಗ್ಗೆ ಚಾಮರಾಜಪೇಟೆಯ ಪಂಪಮಹಾಕವಿ ರಸ್ತೆಯಲ್ಲಿರುವ ರಾಯ್‌ ರಾಯ್‌ ಕಲ್ಯಾಣ ಮಂಟಪದ ಆವರಣದಲ್ಲಿದ್ದ ವಿಶಾಲವಾದ ಖಾಲಿನಿವೇಶನ ಅವರ ಗಮನ ಸೆಳೆದು ಅದನ್ನು ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದರೂ ಅದು ಫಲ ನೀಡಲಿಲ್ಲ. ಅವರ ಪ್ರಯತ್ನ ಆಸೆ ಆಕಾಂಕ್ಷೆಗಳು ಮರುಭೂಮಿಯ ಮರೀಚಿಕೆಯಂತಾಯಿತು. ಕೊನೆಯ ತನಕ ಇದು ಇವರ ಮನಸ್ಸಿನಲ್ಲಿ ಕೊರೆಯುತ್ತಿತ್ತು.

ಗೋಪೀನಾಥದಾಸರದ್ದು ಸುಮ್ಮನೆ ಕುಳಿತುಕೊಳ್ಳುವ ಪ್ರವೃತ್ತಿಯಾಗಿರಲಿಲ್ಲ. ಅವರದ್ದು ಪ್ರಯೋಗ ಶೀಲ ವ್ಯಕ್ತಿತ್ವ. ಒಂದೊಂದು ಹೊಸ ಪ್ರಯೋಗಕ್ಕೆಗೋಪೀನಾಥದಾಸರ ವ್ಯಕ್ತಿತ್ವದೊಂದಿಗೆ ಪ್ರಭಾತ್‌ ಸಂಸ್ಥೆಯೂ ಬೆಳೆಯತೊಡಗಿತು. ಅದು ಒಂದು ‘ಕಲಾ ಚಂದ್ರಿಕೆ’ಯಾಗಿ ಕಂಗೊಳಿಸಿತು. ಬೆಂಗಳೂರಿನ ವಿಶ್ವೇಶ್ವರಪುರದಲ್ಲಿ ರೂಪುಗೊಂಡ ಈ ಕಲಾಚಂದ್ರಿಕೆಯ ಶಿಲ್ಪಿಗೋಪಣ್ಣ! ಈ ಕಲಾಮಂದಿರದಿಂದ ಉದ್ಭವಗೊಂಡ ಎಲ್ಲಾ ಪ್ರಕಾರಗಳ ರೂವಾರಿ ಗೋಪಣ್ಣ! ಪ್ರಭಾತ್‌ ಸೌಂಢ್‌ ಸಿಸ್ಟಂ,ಪ್ರಭಾತ್‌ ರಂಗಶಾಲೆ, ಪ್ರಭಾತ್‌ ಚಲನಚಿತ್ರ, ಪ್ರಭಾತ್‌ ಚಿಕಿತ್ಸಾ ವಿಭಾಗ, ಪ್ರಭಾತ್‌ ಶಿಶುವಿಹಾರ, ಗುರುರಾಜ ನಾಟಕ ಮಂಡಳಿ, ಕರ್ನಾಟಕಕ ಹರಿದಾಸ ಪರಂಪರೆ ಒಂದೊಂದು ಕೊಂಡಿಗೂ ಬಿಡಿಸಲಾಗದ ಬೆಸುಗೆಯನ್ನು ಹಾಕಿ ಒಂದು ಅಖಂಡ ಸರಪಳಿಯನ್ನಾಗಿ ಮಾಡಿ ಆ ಕಲಾಮಂದಿರದ ದೇಗುಲದ ಕಲಾ ತಪ್ಪಸ್ವಿಯಾಗಿ ಸಿದ್ಧಿಯನ್ನು ಸಾಧಿಸಿವರು ಗೋಪೀನಾಥದಾಸರು. ಗೋಪಣ್ಣ ಎಂದರೆ ಪ್ರಭಾತ್‌. ಪ್ರಭಾತ್‌ ಎಂದರೆ ಗೋಪಣ್ಣ ಅನ್ನುವಷ್ಟು ಹಾಸುಹೊಕ್ಕಾಗಿ ಬಿಟ್ಟಿತ್ತು ಈ ಎರಡರ ಬೆಸುಗೆ.

ಹೀಗೆ ಅವಿರತವಾಗಿ ಕಲೆಯ ಏಳಿಗೆಗಾಗಿ ದುಡಿದು, ಸಂಸ್ಥೆಯ ಮೇಲ್ಮೆಗಾಗಿ ಶ್ರಮಿಸಿ, ಕುಟುಂಬದ ಎಲ್ಲರಿಗೂ ಮಾರ್ಗದರ್ಶಿಯಾಗಿ ಮೆರೆದ ಗೋಪಣ್ಣ ತನ್ನ ಆರೋಗ್ಯದ ಕಡೆ ಗಮನ ಕೊಡಲೇ ಇಲ್ಲ. ಆಗಾಗ್ಗೆ ಎದೆ ನೋವು ಕಾಣಿಸಿಕೊಳ್ಳುತ್ತಿದ್ದರೂ ದುಡಿಯುವುದನ್ನು ಬಿಡಲಿಲ್ಲ. ಕತೆ ಮಾಡುವುದನ್ನು ನಿಲ್ಲಿಸಲಿಲ್ಲ. ಹೀಗೆ ಅವಿಶ್ರಾಂತರಾಗಿ ಅವಿರತವಾಗಿ ದುಡಿಯುತ್ತಿದ್ದಕ ಗೋಪಣ್ಣನಿಗೆ ತಾನೇ ಒಂದು ಕತೆಯಾಗಿ ಬಿಡುತ್ತೇನೆಂಬ ಅಂಶ ಹೊಳೆಯಲೇ ಇಲ್ಲ. ಅಣ್ಣ-ತಮ್ಮಂದಿರಿಗೆ, ಮಕ್ಕಳಿಗೆ ಗೋಪಣ್ಣನ ಈ ಸ್ಥಿತಿಯ ಬಗ್ಗೆ ಅರಿವು  ಮೂಡುವ ಹೊತ್ತಿಗೆ ಅವರ ಸ್ಥಿತಿ ವಿಷಮಿಸಿತ್ತು . ತುರ್ತು ಚಿಕಿತ್ಸೆಗಾಗಿ ವೆಲ್ಲೂರಿಗೇ ಹೋಗಬೇಕಾಯಿತು. ಅಲ್ಲಿ ಚಿಕಿತ್ಸೆಯೇನೋ ನಡೆಯಿತು. ಆದರೆ ಫಲಕಾರಿಯಾಗಲಿಲ್ಲ. ಹೋಗುವಾಗಲೇ ಎಲ್ಲರೊಡನೆ ನಗುತ್ತಾ ಬೀಳ್ಕೊಂಡವರು ಬರುತ್ತಾ ಪಾರ್ಥಿವ ಶರೀರವಾಗಿ ಬಂದರು. ಎಲ್ಲರನ್ನೂ ದುಃಖ ಸಾಗರದಲ್ಲಿ ಮುಳಿಗಿಸಿ ಬಿಟ್ಟು ಸುಪ್ರಭಾತವನ್ನು ಕಂಡಿದ್ದ ಕಲಾಚಂದ್ರಿಕೆಯ, ಪ್ರಭಾತ್‌ ಸಂಸ್ಥೆಗಳ ಶಿಲ್ಪಿ, ಜೀವನ ಸಂಧ್ಯೆಯಲ್ಲಿ ಲೀನವಾಗಿ ಬಿಟ್ಟರು.

ಗೋಪಣ್ಣನ ಶರೀರ ಹೋಯಿತು. ಅವರ ಶಾರೀರದ ಕಂಪು ಇಂದು ಹರಿಕಥಾ ಕ್ಷೇತ್ರದಲ್ಲಿ ಶಾಶ್ವತವಾಗಿ ಹರಡಿದೆ. ವೀಣೆಯ ನಾದ ಸಂಗೀತ ಲೋಕದಲ್ಲಿ ಝೇಂಕರಿಸುತ್ತಿದೆ. ರಂಗಶಾಲೆಯ ಮೂಲಕ ಕಲವರ ಹೆಸರು ರಂಗುರಂಗಾಗಿ ನಾಟಕ ಕ್ಷೇತ್ರದಲ್ಲಿ ವರ್ಣರಂಜಿತವಾಗಿದೆ. ಅಂತೆಯೇ ಅವರೇ ಕಟ್ಟಿ ಬೆಳೆಸಿದ ಪ್ರಭಾತ್‌ ಸಂಸ್ಥೆಯ ಮೂಲಕ ಅವರ ಹೆಸರು ಚಿರಂತನವಾಗಿ ಹಚ್ಚ ಹಸಿರಗಿ ನಿಂತಿದೆ.

ಕಲಾತಪಸ್ವಿ ಇನ್ನಿಲ್ಲವಾದರು, ಕಲಾಚಂದ್ರಿಕಾ ಇಂದಿಗೂ ಇದೆ. ಅದನ್ನು ಕಂಡಾಗ ಗೋಪಣ್ಣನ ಧೀಮಂತ ವ್ಯಕ್ತಿತ್ವವೇ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ.

ಗ್ರಂಥ ಋಣ: ಕಲಾತಪಸ್ವಿ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ಕೀರ್ತನ ದಿಗ್ಗಜರುಗಳು: ಭದ್ರಗಿರಿ ಸವೋತ್ತಮದಾಸರು