ಜನನ : ೨೩-೫-೧೯೧೭ ರಂದು ಬೆಂಗಳೂರಿನಲ್ಲಿ

ಮನೆತನ : ಪ್ರಸಿದ್ಧ ಹರಿಕಥಾ ವಿದ್ವಾಂಸರ ಹಾಗೂ ವೈದಿಕ ಸಂಪ್ರದಾಯದ ಮನೆತನ. ಹರಿದಾಸ ಪರಂಪರೆಯವರು ತಂದೆ ವೆಂಕಣ್ಣದಾಸರು – ತಾಯಿ ಭಾಗೀರಥಮ್ಮ ಟಿ. ಕೆ. ವೇಣುಗೋಪಾಲದಾಸರು, ಅಣ್ಣ ಟಿ. ವಿ. ಗೋಪಿನಾಥದಾಸರು ಖ್ಯಾತ ಕಥಾ ಕೀರ್ತನಕಾರರು. ವಿಜಯದಾಸರ ಔರಸ ಪುತ್ರರಾದ ಮೋಹನದಾಸರ ವಂಶಕ್ಕೆ ಸೇರಿದವರು.

ಗುರುಪರಂಪರೆ : ತಂದೆ ವೆಂಕಣ್ಣದಾಸರು. ಚಿಕ್ಕಪ್ಪ ವೇಣುಗೋಪಾಲದಾಸರು ಹರಿಕಥಾ ಕ್ಷೇತ್ರದಲ್ಲಿ ಇವರಿಗೆ ಮಾರ್ಗದರ್ಶಕರಾದವರು. ಪಾಲಕ್ಕಾಡು ಶ್ರೀನಿವಾಸ ಅಯ್ಯರ್ ಅವರಲ್ಲಿ ಮೃದಂಗವಾದನ ಕಲಿತಿದ್ದರು.

ಕ್ಷೇತ್ರ ಸಾಧನೆ : ಕೀರ್ತನಕಾರರಾಗಿ ಕರ್ನಾಟಕ, ಆಂಧ್ರ, ತಮಿಳುನಾಡು, ದೆಹಲಿ, ಬದರಿ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕರ್ನಾಟಕ ಕಥಾ ಕೀರ್ತನದ ಔನ್ನತ್ಯವನ್ನು ಎತ್ತಿ ಹಿಡಿದು ಪುರಸ್ಕೃತರಾಗಿದ್ದಾರೆ. ಪ್ರಸಿದ್ಧ ವೈಣಿಕ ವೀಣಾ ಶೇಷಣ್ಣನವರ ಶಿಷ್ಯ ಪರಂಪರೆಗೆ ಸೇರಿದ ವೀಣಾ ಎಲ್. ರಾಜಾರಾಯರ ಜೊತೆ ದಕ್ಷಿಣದ ಎಲ್ಲಾ ಊರುಗಳಲ್ಲಿ ಪ್ರವಾಸ ಮಾಡಿ ಮೃದಂಗ ಪಕ್ಕವಾದ್ಯ ನುಡಿಸಿದ್ದಾರೆ. ಪ್ರಸಿದ್ಧ ವಾಗ್ಗೇಯಕಾರರಾದ ಸಂಗೀತ ಕಲಾನಿಧಿ ಮೈಸೂರು ವಾಸುದೇವಾಚಾರ್ಯರ ಕಚೇರಿಗೆ ಮೃದಂಗ ಪಕ್ಕವಾದ್ಯ ನುಡಿಸಿ ಅವರ ಅಶೀವಾðದಕ್ಕೆ ಪಾತ್ರರಾಗಿ ಬಾಲ ಪ್ರತಿಭೆ ಎನಿಸಿದವರು. ಆಗ ಇವರಿಗೆ ಕೇವಲ ೧೪ ವರ್ಷ ವಯಸ್ಸು ಕೆಲವು ಕಾಲ ಆರ್ಯ ವಿದ್ಯಾಶಾಲೆಯ ಅಧ್ಯಾಪಕರಾಗಿದ್ದರು. ಮುಂದೆ ಅಣ್ಣ ಗೋಪಿನಾಥದಾಸರೊಂದಿಗೆ ’ಪ್ರಭಾತ್ ಶಿಶು ವಿಹಾರ’ ಸ್ಥಾಪಿಸಿ ಶಿಶು ಸಾಹಿತ್ಯ ರಚಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅಲ್ಲದೆ “ಪ್ರಭಾತ್ ಕಲಾವಿದರು” ಸಂಸ್ಥೆಯ ಮುಖ್ಯಸ್ಥರಲ್ಲೊಬ್ಬರಾಗಿ ಅದರ ಏಳಿಗೆಗಾಗಿ ಅವಿರತವಾಗಿ ದುಡಿದಿದ್ದಾರೆ. ಅಣ್ಣ ಗೋಪಿನಾಥದಾಸರು ಹುಟ್ಟು ಹಾಕಿದ ಈ ಸಂಸ್ಥೆಯನ್ನು ತಮ್ಮ ದ್ವಾರಕಾನಾಥರೊಂದಿಗೆ ಅಭಿವೃದ್ಧಿಪಡಿಸಿ ಅಣ್ಣನಿಗೆ ಗೌರವ ತರುವ ಕೆಲಸ ಮಾಡಿದವರು.

ಹಿರಿಯಣ್ಣ ಕರಿಗಿರಿರಾಯರ ಹಾರ್ಮೋನಿಯಂ, ಇವರ ಮೃದಂಗ, ಗೋಪಿನಾಥದಾಸರ ಹರಿಕಥೆಯೆಂದರೆ ಅಪಾರ ಸಂಖ್ಯೆಯಲ್ಲಿ ಜನಸ್ತೋಮ ಸೇರಿ ಕಥಾ ಪ್ರಸಂಗವನ್ನು ಆಲಿಸುತ್ತಿದ್ದರು. ವೇಣುಗೋಪಾಲದಾಸರ ಹರಿಕಥೆಗೂ ಇವರು ಅನೇಕ ಬಾರಿ ಪಕ್ಕ ವಾದ್ಯ ನುಡಿಸಿರುತ್ತಾರೆ. ಇವರ ಹರಿಕಥೆಗಳನ್ನು ಕೇಳಿದ ಅನೇಕ ಮಹನೀಯರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಅಂಥವರಲ್ಲಿ ನಾಟಕರಾದ ಪರ್ವತವಾಣಿ, ರಾಜಕಾರಿಣಿ ಸಮಾಜ ಸೇವಾ ಧುರೀಣ ಟಿ. ಆರ್. ಶಾಮಣ್ಣ, ಸಂಗೀತಜ್ಞ ಎಸ್. ಕೃಷ್ಣಮೂರ್ತಿ, ಡಾ|| ಹೆಚ್. ಕೆ. ರಂಗನಾಥ್ ಪ್ರಮುಖರು.

ಪ್ರಶಸ್ತಿ – ಪುರಸ್ಕಾರಗಳು : ’ಹರಿಕಥಾ ವಾರಿನಿಧಿ ಚಂದ್ರ’ ಎಂಬ ಬಿರುದಿನೊಡನೆ ವ್ಯಾಸರಾಜಮಠಾಧೀಶರಾದ ವಿದ್ಯಾ ಪ್ರಸನ್ನ ತೀರ್ಥ ಶ್ರೀಗಳಿಂದ ಗೌರವಿಸಲ್ಪಟ್ಟಿದ್ದಾರೆ. ಕೀರ್ತನ ಕಲಾ ಪರಿಷತ್ತಿನಿಂದಲೂ ಪುರಸ್ಕೃತರಾಗಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೮೫-೮೬ರ ಸಾಲಿನ ’ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ ನೀಡಿ ಗೌರವಿಸಿದೆ.

೧೯೯೦ ರ ದಶಕದಲ್ಲಿ ಇವರು ನಿಧನರಾದರು.