ಜನನ : ೯-೨-೧೯೩೦ ತುಮಕೂರಿನಲ್ಲಿ

ಮನೆತನ : ಸಂಗೀತದ ಮನೆತನ ಕರ್ನಾಟಕ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪರಂಪರೆ. ತಂದೆ ವಾಣಿ ಮಲ್ಲಪ್ಪ ಸಂಗೀತಗಾರರು. ತಾಯಿ ವೀರಮ್ಮ.

ಗುರುಪರಂಪರೆ : ಆರಂಭದಲ್ಲಿ ತಂದೆ ವಾಣಿ ಮಲ್ಲಪ್ಪನವರಿಂದಲೇ ಪ್ರಾರಂಭಿಕ ಶಿಕ್ಷಣ. ಮುಂದೆ ಗುರು ಭೋಜರಾವ್ ಬೋಳಾರ್ ಅವರ ಬಳಿ ಹಿಂದೂಸ್ಥಾನಿ ಗಾಯನದಲ್ಲಿ ಶಿಕ್ಷಣ. ಸುಗಮ ಸಂಗೀತದತ್ತ ಒಲವು.

ಸಾಧನೆ: ಇವರ ಗಾಯನ ಶೈಲಿ ಸಾಕಷ್ಟು ರೀತಿಯಲ್ಲಿ ಕಾಳಿಂಗರಾಯರ ಗಾಯನದಂತೆ ತೋರುತ್ತಿದ್ದುದರಿಂದ ಇವರು ಜ್ಯೂನಿಯರ್ ಕಾಳಿಂಗರಾಯರೆಂದೇ ಖ್ಯಾತರಾದವರು. ಕಳೆದ ೩೦ ವರ್ಷಗಳಿಂದ ಆಕಾಶವಾಣಿ ದೂರದರ್ಶನ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ತುಮಕೂರು ಜಿಲ್ಲಾ ಉತ್ಸವ, ಮಂಗಳೂರಿನ ಕನ್ನಡ ಸಂಗೀತ ಸಮ್ಮೇಳನ ಮುಂಬೈ, ಚೆನ್ನೈ ನಗರಗಳಲ್ಲೂ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಹಲವಾರು ಧ್ವನಿ ಸುರುಳಿಗಳಿಗಾಗಿ ಸಾಹಿತ್ಯ ಹಾಗೂ ರಾಗ ಸಂಯೋಜನೆ ಮಾಡಿದ್ದಾರೆ. ೧೯೬೧ರ ಕಾಂಗ್ರೆಸ್ ವಸ್ತುಪ್ರದರ್ಶನದಲ್ಲಿ ಶ್ರೇಷ್ಠ ಕಾರ್ಯಕ್ರಮ ನೀಡಿದ್ದಕ್ಕಾಗಿ ಚಿನ್ನದ ಪದಕ ಗಳಿಸಿದ್ದಾರೆ. ಕೊಲಂಬಿಯಾ ಹಾಗೂ ಹೆಚ್. ಎಂ.ವಿ. ಸಂಸ್ಥೆಗಳಲ್ಲಿ ಜಾನಪದ ಮತ್ತು ಭಾವಗೀತೆಗಳನ್ನು ಹಾಡಿಧ್ವನಿ ಮುದ್ರಿಕೆಯಾಗಿ ಹೊರಬಂದಿವೆ. ಇವರು ಉತ್ತಮ ಕವಿಗಳೂ ಕೂಡ ಇವರ ಸಾಹಿತ್ಯಕ್ಕೆ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರುಗಳಾದ ಎಂ. ರಂಗರಾವ್, ಉಪೇಂದ್ರ ಕುಮಾರ್, ಬಿ.ವಿ.ಶ್ರೀನಿವಾಸ ಮುಂತಾದವರು ರಾಗ ಸಂಯೋಜನೆ ಮಾಡಿದ್ದಾರೆ. ಕೆಲವೊಂದು ಚಲನಚಿತ್ರಗಳಿಗೆ ಸಹ ನಿರ್ದೇಶಕರಾಗಿ, ನಿರ್ಮಾಪಕರಾಗಿ, ಗೀತರಚನಾಕಾರರಾಗಿ ಕೆಲಸ ಮಾಡಿದ್ದಾರೆ. ಈಟಿವಿಯ ’ಎದೆ ತುಂಬಿ ಹಾಡಿದೆನು’ ಮಾಲಿಕೆಯಲ್ಲಿ ತೀರ್ಪುಗಾರರಾಗಿ ಮೆರೆದಿದ್ದಾರೆ. ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ – ಸನ್ಮಾನ : ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿಯೇ ಅಲ್ಲದೆ ೨೦೦೮ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.