ಈ ಶತಮಾನದ ಪ್ರಾರಂಭದಲ್ಲಿ ಅದೊಂದು ದಿನ. ಆಗಿನ ಕಾಲದಲ್ಲಿ ಮೋಟರು ವಾಹನಗಳು ಬಹು ವಿರಳ. ಈಗೊಂದು ಆಗೊಂದು ಕಾಣುತ್ತಿದ್ದವು ಅಷ್ಟೆ. ನಾಲ್ಕಾರು ಬಗೆಯ ಉದ್ಯಮಗಳಲ್ಲಿ ಕೈಹೂಡಿ ಸಾಕಷ್ಟು ಅನುಭವ ಪಡೆದಿದ್ದ ಉತ್ಸಾಹಿ ತರುಣರೊಬ್ಬರು ಮಧುರೆಯ ರಸ್ತೆ ಅಂಚಿನಲ್ಲಿ ನಿಂತು ಗಂಭೀರ ಕಲ್ಪನೆ ಮಾಡಿಕೊಂಡರು:

’ಸ್ಥಳದಿಂದ ಸ್ಥಳಕ್ಕೆ ಪ್ರಯಾಣ ಹೋಗಬೇಕಾದರೆ ಎತ್ತಿನ ಗಾಡಿಯಲ್ಲಿ ಹೋಗಬೇಕು. ಸಾಮಾನು ಸಾಗಿಸಬೇಕಾದರೂ ಎತ್ತಿನ ಗಾಡಿಯಲ್ಲಿ ಸಾಗಿಸಬೇಕು. ಎಷ್ಟೇ ಆಗಲಿ ಎತ್ತಿನ ಗಾಡಿ ನಿಧಾನ. ಅದರಲ್ಲಿ ಜನರು-ಸಾಮಾನು ಸಾಗಿಸಬಹುದಾದರೂ ಎಷ್ಟು? ಹಳ್ಳಿಗಾಡು ಮತ್ತು ಪಟ್ಟಣ ಪ್ರದೇಶಗಳಿಗೆಲ್ಲಾ ಪ್ರಯಾಣಿಕರನ್ನು ಮತ್ತು ಸರಕುಗಳನ್ನು ಶೀಘ್ರವಾಗಿ ಸಾಗಿಸಲು ಬೇಕಾದಷ್ಟು ಬಸ್ಸುಗಳು ಮತ್ತು ಲಾರಿಗಳು ಇರುವುದಾದರೆ ಎಷ್ಟು ಅನುಕೂಲ!’

ಕಲ್ಪನೆ ಚೆನ್ನ, ಆದರೆ-?

ಅವರ ಕಲ್ಪನೆಯೇನೋ ಚೆನ್ನಾಗಿತ್ತು. ಈಗ ಅದನ್ನು ಸಾಧಿಸುವುದು ಕಷ್ಟ ಎಂದೂ ಎನ್ನಿಸುವುದಿಲ್ಲ. ನೂರಾರು ಬಸ್ಸುಗಳು, ಲಾರಿಗಳು ನಾಡಿನ ಮೂಲೆ ಮೂಲೆಯಲ್ಲಿ ಸಹ ಓಡಾಡುವುದನ್ನು ಕಾಣುತ್ತೇವಲ್ಲ! ಆದರೆ ಆ ಕಾಲದಲ್ಲಿ ಅವರ ಯೋಚನೆ ಕಾರ್ಯರೂಪಕ್ಕೆ ಬರುವುದು ಸುಲಭವಾಗಿರಲಿಲ್ಲ. ರಸ್ತೆ ಸಾರಿಗೆ ಕ್ಷೇತ್ರಕ್ಕೆ ಇಳಿಯುವವರಿಗೆ ಧೈರ್ಯ, ಉತ್ತೇಜನ ಮತ್ತು ಸಾರ್ವಜನಿಕರ ಸಹಕಾರ ಬಹಳವಾಗಿ ಬೇಕಿದ್ದವು. ಮುಂದಿನ ಕಷ್ಟಗಳನ್ನು ಲೆಕ್ಕಿಸದೆ ಆ ತರುಣರು ಮಧುರೆ ಮತ್ತು ದೇವಕೋಟೆಯ ನಡುವೆ ದಕ್ಷಿಣ ಭಾರತದ ಪ್ರಥಮ ಬಸ್ ಸರ್ವಿಸ್ ಪ್ರಾರಂಭಿಸಿದರು. ಜನರಿಗೆ ಬಸ್-ಲಾರಿ ಕಂಡರೆ ಹೆದರಿಕೆ. ಅವನ್ನು ‘ರಸ್ತೆಯ ಭೂತ’ ಎಂದು ಕರೆಯುತ್ತಿದ್ದರು. ಈ ತರುಣ ಅವರನ್ನು ನಯವಾದ ವಿಧಾನಗಳಿಂದ ಆಕರ್ಷಿಸಿ, ಬಸ್ ಪ್ರಯಾಣಕ್ಕೆ ಅವರ ಮನ ಒಲಿಸಿದರು. ಅವರನ್ನು ಊರಿಂದೂರಿಗೆ ಕರೆದುಕೊಂಡು ಹೋದುದು ಮಾತ್ರವಲ್ಲ, ಪ್ರಯಾಣ ಕಾಲದಲ್ಲಿ ಅವರಿಗೆ ಆಹಾರವನ್ನೂ ಒದಗಿಸಿದರು. ತಗ್ಗು ದಿಣ್ಣೆಗಳಿದ್ದ ಕೆಟ್ಟ ರಸ್ತೆಗಳನ್ನು ತಮ್ಮ ವಾಹನಗಳ ಸುಗಮ ಪ್ರಯಾಣಕ್ಕಾಗಿ ಸರಿ ಮಾಡಿಸಿದರು. ಹೊಸ ರಸ್ತೆಗಳನ್ನೂ ನಿರ್ಮಿಸಿದರು.

ಮುಂದಿನ ವರ್ಷಗಳಲ್ಲಿ ಅವರ ರಸ್ತೆ ಸಾರಿಗೆ ವ್ಯವಸ್ಥೆಗಳು ವಿಸ್ತಾರಗೊಂಡು ದೇಶಕ್ಕೆಲ್ಲಾ ಮಾದರಿಯಾದವು. ಅಚಲ ನಿರ್ಧಾರ, ಕಷ್ಟ ಸಹಿಷ್ಣುತೆ ಮತ್ತು ಅವಿರತ ಹೋರಾಟ ಗಳಿಂದಾಗಿ ಅವರು ಸ್ಥಾಪಿಸಿದ ಸಂಸ್ಥೆಗಳು ಇಂದು ರಾಷ್ಟ್ರದಲ್ಲಿ ಮಹತ್ತರವಾಗಿ ಬೆಳೆದಿರುವುದು ಮಾತ್ರವಲ್ಲದೆ ಅನ್ಯದೇಶ ದವರಿಗೂ ಅನುಕರಣೀಯವಾದ ರೀತಿಯಲ್ಲಿ ಅಚ್ಚುಕಟ್ಟಾಗಿ ಸೇವೆ ಸಲ್ಲಿಸುತ್ತಿವೆ. ದಿಟ್ಟ ಮನೋಭಾವ ಮತ್ತು ದೃಢ ಸಂಕಲ್ಪ ಹೊಂದಿದ ಮತ್ತು ರಸ್ತೆ ಸಾರಿಗೆ ಕ್ಷೇತ್ರಕ್ಕೆ ಅಗ್ರಗಾಮಿಯಾದ ತಮಿಳುನಾಡಿನ ಆ ಸಾಹಸಿ ಉತ್ಸಾಹಿ ತರುಣರು ಟಿ. ವಿ. ಸುಂದರಂ ಅಯ್ಯಂಗಾರ್.

ಬಾಲ್ಯ-ಮದುವೆ

ಟಿ.ವಿ.ಎಸ್. ಎಂಬ ನಲ್ಮೆಯ ಹೆಸರಿನಿಂದ ಪ್ರಸಿದ್ಧರಾದ ಮತ್ತು ಜನಪ್ರಿಯ ಟಿ.ವಿ.ಎಸ್. ಮಹಾ ಸಂಸ್ಥೆಯ ಸ್ಥಾಪಕರಾದ ಟಿ.ವಿ. ಸುಂದರಂ ಅಯ್ಯಂಗಾರ್ ೧೮೭೭ರ ಮಾರ್ಚ್ ೨೨ ರಂದು ತಿರುಚ್ಚೂರಿನಲ್ಲಿ ಜನಿಸಿದರು. ಸಂಪ್ರದಾಯಸ್ಥ ಮನೆತನ ಅವರದು.

ಸುಂದರಂರವರ ತಂದೆ ವೆಂಗಾರಸ್ವಾಮಿ ಅಯ್ಯಂಗಾರ್. ತಾಯಿ ತಿರುವೆಂಗಡಮ್ಮಾಳ್. ತಂದೆತಾಯಿಗಳಿಬ್ಬರ ಮನೆತನಗಳೂ ಆತಿಥ್ಯಕ್ಕೆ ಹೆಸರಾಗಿದ್ದವು. ವೆಂಗಾರಸ್ವಾಮಿ ಅಯ್ಯಂಗಾರ್ ತಿರುಚ್ಚೂರಿಗೆ ವಕೀಲಿ ವೃತ್ತಿಗಾಗಿ ಬಂದರು.

ಅವರ ವಕೀಲಿ ವ್ಯವಹಾರಗಳೆಲ್ಲವೂ ತಮಿಳಿನಲ್ಲಿ ಸಾಗುತ್ತಿದ್ದವು. ಪ್ರಸಿದ್ಧ ತಮಿಳು ವಕೀಲರಾಗಿದ್ದರೂ ಅವರಿಗೆ ಇಂಗ್ಲಿಷ್ ಶಿಕ್ಷಣದಲ್ಲಿ ಅಪಾರ ವಿಶ್ವಾಸವಿತ್ತು.

’ಎಳೆ ವಯಸ್ಸಿನಲ್ಲಿ ಕಲಿ’ ಎಂಬ ಲೋಕೋಕ್ತಿಗೆ ಅನುಗುಣವಾಗಿ ಸುಂದರಂ ತಮ್ಮ ಮೂರನೆಯ ವರ್ಷದಲ್ಲೇ ತಿರುಚ್ಚೂರಿನ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆ ಸೇರಿದರು. ಎಂಟು ವರ್ಷಗಳ ಕಾಲ ಓದು ತಡೆಇಲ್ಲದೆ ಸಾಗಿತು. ಬಾಲ್ಯವು ವೈಭವಯುತವಾಗಿ ಕಳೆಯಿತು. ಸುಂದರಂಗೆ ಕೇವಲ ಹನ್ನೊಂದು ವರ್ಷವಾಗಿದ್ದಾಗ ಅವರ ವಿವಾಹ ನಡೆದು ಹೋಯಿತು. ಹೆಂಡತಿ ಲಕ್ಷ್ಮಿ ನಾಗರಕೋಯಿಲ್ ಪಟ್ಟಣದ ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದವರು.

ತಂದೆಯ ಹಂಬಲ

ಹೈಸ್ಕೂಲು ವಿದ್ಯಾಭ್ಯಾಸ ಪೂರೈಸಿದ ಮೇಲೆ ಸುಂದರಂ ತಿರುನೆಲ್‌ವೇಲಿಯ ಹಿಂದು ಕಾಲೇಜಿಗೆ ಸೇರಿದರು. ವೆಂಗಾರಸ್ವಾಮಿ ಅಯ್ಯಂಗಾರರಿಗೆ ತಾವು ಪ್ರಸಿದ್ಧ ತಮಿಳು ವಕೀಲರಾದಂತೆ ಮಗನು ಇಂಗ್ಲಿಷ್ ವಕೀಲನಾಗಿ ಹೆಸರು ಗಳಿಸಲೆಂಬ ಪ್ರಬಲ ಇಚ್ಛೆ. ಅಂದಿನ ಬ್ರಿಟಿಷ್ ಆಡಳಿತದಲ್ಲಿ ಇಂಗ್ಲಿಷ್ ವಕೀಲರಿಗೆ ಎಲ್ಲಾ ಕಡೆಗಳಲ್ಲೂ ಹೆಚ್ಚಿನ ಗೌರವ ದೊರೆಯುತ್ತಿತ್ತು. ಅವರ ಮುಂದೆ ತಮಿಳು ವಕೀಲರು ಒಂದು ಮಟ್ಟದಲ್ಲಿ ಕಡಿಮೆ ಎಂಬಂತೆ ತಗ್ಗಿ ನಡೆಯಬೇಕಾಗುತ್ತಿತ್ತು.

ತಮಗೆ ದೊರೆಯದಿದ್ದ ಆ ಇಂಗ್ಲಿಷ್ ವಕೀಲಿ ಅಂತಸ್ತು ತಮ್ಮ ಮಗನಿಗಾದರೂ ದೊರೆಯಲೆಂಬುದು ಅವರ ಆಕಾಂಕ್ಷೆ. ಆದರೆ ಸುಂದರಂ ಅವರ ನಿರೀಕ್ಷೆಗೆ ಏರಲಿಲ್ಲ. ಎಫ್.ಎ. ತರಗತಿಯ ಓದು ನಿರುತ್ಸಾಹಕರವಾಗಿತ್ತು. ತಿರುನೆಲ್‌ವೇಲಿಯ ಕಾಲೇಜು ವಿದ್ಯೆಯಲ್ಲಿ ಆಸಕ್ತಿ ತೋರದ ಮಗನನ್ನು ತಂದೆ ಕೊಯಮತ್ತೂರಿನ ಸರ್ಕಾರಿ ಆರ್ಟ್ಸ್ ಕಾಲೇಜಿಗೆ ಸೇರಿಸಿದರು. ಸುಂದರಂಗೆ ಕಾಲೇಜು ಓದಿನ ಬಗೆಗಿದ್ದ ಬೇಸರ ಅಲ್ಲಿಯೂ ಕಳೆಯಲಿಲ್ಲ. ‘ಇಂಗ್ಲಿಷ್ ಕಲಿತು ಇಂಗ್ಲಿಷರ ಗುಲಾಮನಾಗುವುದು ಬೇಡ’ ಎಂದು ಹೇಳಿದ ತಮಿಳು ಕವಿ ಸುಬ್ರಮಣ್ಯ ಭಾರತಿಯವರ ಕ್ರಾಂತಿಕಾರಕ ಕವಿತೆಯೂ ಸಹ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು.

ಮಗನ ಆಸೆ

ಸುಂದರಂಗೆ ವಾಣಿಜ್ಯ ಕ್ಷೇತ್ರದಲ್ಲಿ ಕಾಲಿರಿಸಿ ತಮ್ಮ ತನು, ಮನ, ಬುದ್ಧಿ ಬಳಸಬೇಕೆಂಬ ಉತ್ಸಾಹ. ಹೊಸದಾಗಿ ಏನನ್ನಾದರೂ ತಯಾರಿಸಬೇಕೆಂಬ, ದುಡಿಮೆಯಿಂದ ಸ್ವತಂತ್ರ ಜೀವನ ನಡೆಸಬೇಕೆಂಬ ಆಸೆ. ಕೊಯಮತ್ತೂರಿನಲ್ಲಿ ಓದುತ್ತಿರುವಾಗ ಆಗಾಗ್ಗೆ ಮದರಾಸಿನಲ್ಲಿದ್ದ ಬಂಧುಗಳ ಮನೆಗೆ ಭೇಟಿ ಕೊಡುತ್ತಿದ್ದರು. ಒಮ್ಮೆ ಹಾಗೆ ಮದರಾಸಿಗೆ ಹೋಗಿದ್ದಾಗ ತಿರುವಲ್ಲಿಕೇಣಿ (ಟ್ರಿಪ್ಲಿಕೇನ್) ಬಡಾವಣೆಯಲ್ಲಿನ ಒಂದು ಸಾಹಿತ್ಯ ಸಭೆಗೆ ಹೋಗುವ ಅವಕಾಶ ಒದಗಿತು. ಅಂದು ಪ್ರಸಿದ್ಧ ಬ್ರಿಟಿಷ್ ವಕೀಲರಾದ ನಾರ್ಟನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನೆರೆದಿದ್ದ ಯುವಕರಿಗೆ ನಾರ್ಟನ್ ತಮ್ಮ ಭಾಷಣದಲ್ಲಿ ಹೀಗೆಂದು ಉಪದೇಶಿಸಿದರು:

“ನಿಮ್ಮ ಜೀವನವನ್ನು ಕೇವಲ ಕಾಲೇಜು ವ್ಯಾಸಂಗ ಮತ್ತು ಉದ್ಯೋಗದ ಬೇಟೆಯಲ್ಲಿ ವ್ಯರ್ಥಮಾಡಬೇಡಿ. ದೇಶವು ಪ್ರಗತಿಪರವಾಗಬೇಕಾದರೆ ವಿದ್ಯಾವಂತವರ್ಗವು ವಾಣಿಜ್ಯ, ಕೈಗಾರಿಕೆ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಪ್ರವೇಶ ಮಾಡಬೇಕು.”

ಬಹುಶಃ ಇಂತಹ ಒಂದು ಬುದ್ಧಿವಾದ ಅಥವಾ ಉತ್ತೇಜಕ ಸಲಹೆ ಸುಂದರಂಗೆ ಅವಶ್ಯಕವಾಗಿತ್ತು. ಬುದ್ಧಿವಾದ ಅದಕ್ಕೆ ಸಿದ್ಧವಾಗಿದ್ದ ಮನಸ್ಸಿನಲ್ಲಿ ಇಳಿದು ಅದ್ಭುತ ಫಲವನ್ನೆ ಕೊಟ್ಟಿತು. ಅಂದೇ ಅವರು ತಾವು ಆವರೆಗೆ ಕಲಿತಷ್ಟು ವಿದ್ಯೆ ಮತ್ತು ಬುದ್ಧಿಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಗಳಿಗೆ ಬಳಸುವುದಾಗಿ ಸಂಕಲ್ಪ ತೊಟ್ಟರು. ಅಲ್ಲಿಗೇ ಅವರ ಕಾಲೇಜು ವಿದ್ಯಾಭ್ಯಾಸ ಮುಗಿಯಿತು.

ಗೆಲುವು-ಸೋಲು

೧೮೯೫ ಅವರ ಜೀವಿತದಲ್ಲಿ ದುರ್ದೈವದ ವರ್ಷ. ಸುಂದರಂ ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು. ವಿದ್ಯಾರ್ಥಿ ಜೀವನದಿಂದ ಸ್ವತಂತ್ರ ಬದುಕಿಗಾಗಿ ಕಾಲಿಟ್ಟ ಕಾಲದಲ್ಲಿ ಮಾತೃವಾತ್ಸಲ್ಯದಿಂದ ವಂಚಿತರಾದುದು ಅವರಿಗೆ ಅತೀವ ವ್ಯಥೆಯನ್ನುಂಟು ಮಾಡಿತು. ವಿದ್ಯಾಭ್ಯಾಸ ನಿಲ್ಲಿಸಿದ ಸುಂದರಂ ತಾಯಿಯವರ ಸ್ಥಳವಾದ ತಿರುಕ್ಕರುಂಗುಡಿ ಸೇರಿದರು.

ಆಗಿನ ಕಾಲದಲ್ಲಿ ಹೆಚ್ಚು ಜನಪ್ರಿಯವಾದ ಮತ್ತು ಸಾಹಸದ ಉದ್ಯಮವೆಂದರೆ ಸರ್ವೆಮರಗಳನ್ನು ಬೆಳೆಯು ವುದು. ಅಂತಹ ಉದ್ಯಮಕ್ಕೆ ಸುಂದರಂ ಇಳಿಯುವೆನೆಂದಾಗ ಅವರ ತಂದೆ ಮತ್ತು ಬಂಧುಗಳು ವಿರೋಧಿಸಿದರು. ವಿರೋಧಕ್ಕೆ ಮಣಿಯದೆ ತಿರುಕ್ಕುರುಂಗಡಿಗೆ ಸಮೀಪದಲ್ಲಿದ್ದ ನಡುಂಗಾನಿಮಲೈ ಎಂಬ ಸ್ಥಳದಲ್ಲಿ ಅತ್ಯಂತ ಉತ್ಸಾಹದಿಂದ ಸರ್ವೆಮರಗಳ ಕೃಷಿ ನಡೆಸಿದರು. ಅಲ್ಲಿ ಬೆತ್ತದ ಸಸ್ಯಗಳನ್ನು ನೆಡುವ ಕೆಲಸವೂ ನಡೆದಿತ್ತು. ಬೆತ್ತದ ಮತ್ತು ಸರ್ವೆ ಮರಗಳನ್ನು ಕಡಿದು ಸಾಗಿಸುವ ವ್ಯವಹಾರದಲ್ಲಿ ತೊಡಗಿದರು. ವ್ಯವಹಾರದಿಂದ ಲಾಭ ದೊರೆಯಿತಾದರೂ ತಂದೆ ಅವರ ಉದ್ಯಮವನ್ನು ಮೆಚ್ಚಲಿಲ್ಲ. ಏಕೆಂದರೆ ತಂದೆಯ ಇಷ್ಟದಂತೆ ಮಗನು ವಕೀಲನಾಗಿರಲಿಲ್ಲ!

‘ದಕ್ಷಿಣ ಭಾರತದ ಹೆನ್ರಿ ಫೋರ್ಡ್’ ಎಂದು ಸುಂದರಂರವರನ್ನು ಕರೆಯುವುದರಲ್ಲಿ ಅರ್ಥವಿದೆ. ಅಮೆರಿಕ ದೇಶದ ಪ್ರಸಿದ್ಧ ‘ಮೋಟಾರು ರಾಜ’ ಹೆನ್ರಿ ಫೋರ್ಡ್‌ನಿಗಾದ ಅನುಭವವು ಸುಂದರಂರಿಗೂ ಯೌವನದಲ್ಲಿ ಆಯಿತೆಂಬುದು ಒಂದು ಸ್ವಾರಸ್ಯಕರ ವಿಷಯ. ಹೆನ್ರಿ ಫೋರ್ಡ್ ತಂದೆಗೆ ಮಗನು ಓದಿ ಕೆಲಸಕ್ಕೆ ಸೇರಲಿ ಎಂದು ಇಷ್ಟವಿತ್ತು. ಫೋರ್ಡ್ ತೇಗದ ಮರಗಳನ್ನು ಬೆಳೆಸಿ ಅವನ್ನು ಕಡಿದು ಮಾರುವುದರಲ್ಲಿ ಕೆಲವು ವರ್ಷ ಕಳೆದ. ತಂದೆ ಅವನ ವ್ಯವಹಾರಕ್ಕೆ ಉತ್ತೇಜನ ಕೊಡಲಿಲ್ಲ. ಅನಂತರ ಫೋರ್ಡ್ ತಾನು ನಿರ್ಮಿಸಿದ ಮೊದಲನೆಯ ಮೋಟರ್ ವಾಹನವನ್ನು ಹೆಮ್ಮೆಯಿಂದ ತಂದೆಯ ಮನೆಗೆ ಕೊಂಡೊಯ್ದಾಗ, ತಂದೆಯು ಅವನ ಅಸಾಧಾರಣ ನಿರ್ಮಾಣ ಶಕ್ತಿ, ಬುದ್ಧಿವಂತಿಕೆ ಮತ್ತು ಶ್ರಮವನ್ನು ಎಳ್ಳಷ್ಟೂ ಮೆಚ್ಚದೆ ನಿರಾಶೆ ಮತ್ತು ಕೋಪದಿಂದ ಮನೆಯೊಳಕ್ಕೆ ಹೊರಟು ಹೋದರಂತೆ.

ಅದೇ ರೀತಿ ಸುಂದರಂರವರ ಮೊದಲನೆಯ ಸ್ವತಂತ್ರ ಉದ್ಯಮವಾದ ಮರದ ವ್ಯವಹಾರಗಳ ಕಡೆ ತಂದೆ ಸಂತೋಷ ವ್ಯಕ್ತಪಡಿಸಲಿಲ್ಲ. ಆದರೂ ಸುಂದರಂ ನಿರಾಶರಾಗಲಿಲ್ಲ. ತಂದೆ ಮತ್ತು ಬಂಧುವರ್ಗದವರ ಮನಸ್ಸಿಗೆ ಹಿಡಿಯದ ಸರ್ವೆಮರದ ವ್ಯಾಪಾರದಲ್ಲಿ ಕಾಲಕ್ರಮೇಣ ಹೆಚ್ಚಿನ ಪೈಪೋಟಿ, ಸ್ಪರ್ಧೆ ಉಂಟಾಯಿತು. ಸುಂದರಂರಿಗೆ ಹಣಗಳಿಸುವುದು ದುಸ್ತರವಾಯಿತು. ಕಷ್ಟನಷ್ಟಗಳಿಗೆ ಗುರಿಯಾಗಬೇಕಾಯಿತು. ಊರಿನ ಜನರು ಅವರನ್ನು ಹಾಸ್ಯಮಾಡತೊಡಗಿದರು. ಸುಂದರಂ ಸರ್ವೆಮರದ ವ್ಯವಹಾರವನ್ನು ನಿಲ್ಲಿಸಿ ನಡುಂಗಾನಿಮಲೈಯಿಂದ ಹೊರಬಿದ್ದರು. ಕೆಲವರು ಅವರನ್ನು “ಸುಂದರಂ, ಮುಂದೆ ಮತ್ತಾವ ಉದ್ಯಮಕ್ಕೆ ಇಳಿಯುತ್ತೀಯೆ?” ಎಂದು ಕುಚೋದ್ಯದ ಪ್ರಶ್ನೆ ಹಾಕಿದರು. ಮತ್ತೆ ಕೆಲವರು “ಪ್ರಾಣಿಗಳಿಗೆ ಹಾಕುವ ಅಗಸೆ ಸೊಪ್ಪು, ತವುಡು, ಹಿಂಡಿ ಇವುಗಳ ಸರಬರಾಜು ಕೆಲಸ ಹಿಡಿಯಲು ಅಡ್ಡಿ ಇಲ್ಲವಲ್ಲ!” ಎಂದು ಕೀಟಲೆ ಮಾಡಲೂ ಹಿಂಜರಿಯಲಿಲ್ಲ. ಜನರ ಹಾಸ್ಯ, ಕುಚೋದ್ಯಗಳನ್ನು ಸುಂದರಂ ನಗುಮುಖದಿಂದಲೇ ಸೈರಿಸಿದರು.

ರೈಲ್ವೆ ಕಚೇರಿಯ ಗುಮಾಸ್ತೆ

ತಂದೆ ಮತ್ತು ಬಂಧುಗಳು ಯಾವುದಾದರೂ ಸರ್ಕಾರಿ ಅಥವಾ ಗೌರವಯುತ ಖಾಸಗಿ ಸಂಸ್ಥೆಯಲ್ಲಿ ಕೆಲಸ ಹಿಡಿಯುವಂತೆ ಅವರನ್ನು ಒತ್ತಾಯಪಡಿಸಲಾರಂಭಿಸಿದರು. ಪರಿಸ್ಥಿತಿಯ ಕಾರಣದಿಂದ ಒತ್ತಾಯಕ್ಕೆ ಸೋಲಬೇಕಾಯಿತು. ತಮ್ಮ ಸ್ವತಂತ್ರ ಉದ್ಯಮದ ಆಸೆ, ಪ್ರಯತ್ನಗಳನ್ನು ಕೈಬಿಟ್ಟು ೧೯೦೩ ರಲ್ಲಿ ತಿರುವಚ್ಚಿಯ ರೈಲ್ವೆ ಇಲಾಖೆಯ ಸಂಚಾರ ವಿಭಾಗದಲ್ಲಿ ಗುಮಾಸ್ತರಾಗಿ ಸೇರಿದರು. ಅದು ಅವರಿಗೆ ಇಷ್ಟವಿಲ್ಲದ ಹುದ್ದೆ. ಮಗನು ಉದ್ಯೋಗಸ್ಥನಾದನೆಂದು ತಂದೆಗೆ ಅಲ್ಪ ತೃಪ್ತಿ ಉಂಟಾಯಿತು.

ರೈಲ್ವೆ ಇಲಾಖೆಯಲ್ಲಿ ಅವರಿಗೆ ೭೫ ರೂಪಾಯಿ ಸಂಬಳವಿತ್ತು. ತಿರುಚ್ಚಿಯ ಪಾಂಡಿಯನ್ ಪಿಳ್ಳೆ ಬೀದಿಯಲ್ಲಿ ಒಂದು ವಿಶಾಲವಾದ ಮನೆಯನ್ನು ೨೫ ರೂಪಾಯಿ ಬಾಡಿಗೆಗೆ ಹಿಡಿದಿದ್ದರು. ದುಬಾರಿ ಬಾಡಿಗೆಯ ಅಷ್ಟು ದೊಡ್ಡ ಮನೆ ಪಡೆಯಲು ಕಾರಣ ಅವರ ಆತಿಥ್ಯ ಮನೋಭಾವ. ಅತಿಥಿಯೇ ದೇವರು ಎಂದು ನಂಬಿದ್ದ ಮನೆತನ ಅವರದು. ಸುಂದರಂರವರ ಮನೆಯಲ್ಲಿ ಯಾವತ್ತೂ ಹತ್ತು-ಹನ್ನೆರಡು ಮಂದಿ ಅತಿಥಿಗಳು, ಬಂಧುಗಳು ಇರುತ್ತಿದ್ದರು.

ಸುಂದರಂ ರೈಲ್ವೆ ಇಲಾಖೆಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರು.

ಸುಂದರಂ ಮೊದಲಿನಿಂದಲೂ ಮಿತವಾದ ಸ್ವಸುಖ ಮತ್ತು ತೃಪ್ತಭಾವ ಹೊಂದಿದವರು. ಆಡಂಬರದ ತೊಡಿಗೆಗಳು ಮತ್ತು ಆಭರಣಗಳಿಂದ ಎಂದೂ ಆಕರ್ಷಿತರಾದವರಲ್ಲ. ಆಭರಣಗಳ ಮತ್ತು ಬಂಗಾರದ ಮೋಹಕ್ಕೆ ಯಾರೂ ಒಳಗಾಗಬಾರದೆಂದು ಮನೆಯವರಿಗೆಲ್ಲಾ ಹೇಳುತ್ತಿದ್ದರು. ಅವರಿಗೆ ತಿರುಚ್ಚಿಯಿಂದ ತಂಜಾವೂರಿಗೆ ವರ್ಗವಾಯಿತು. ತಂಜಾವೂರಿನಲ್ಲಿ ಅವರ ಮನೆ ಮಾನಂಬುಚ್ಚಾವಡಿ ಎಂಬ ವಿಭಾಗದಲ್ಲಿತ್ತು. ಒಂದು ರಾತ್ರಿ ಮನೆಯಲ್ಲಿದ್ದ ಎಲ್ಲಾ ಆಭರಣಗಳು ಮತ್ತು ಬೆಲೆ ಬಾಳುವ ವಸ್ತುಗಳು ಕಳುವಾದವು. ಒಡವೆಗಳು ಹೋದುದಕ್ಕೆ ಸುಂದರಂ ಸ್ವಲ್ಪವೂ ವ್ಯಥೆ ಪಡಲಿಲ್ಲ. ಅವರ ಸರಳ ಪ್ರವೃತ್ತಿ ಮತ್ತು ಮಿತಭಾವ ಮತ್ತಷ್ಟು ದೃಢವಾಯಿತು. ಮನೆಮಂದಿಗೆ ಈ ಘಟನೆಯು ಒಂದು ಪಾಠವಾಗಿ ಪರಿಣಮಿಸಿತು. ಒಡವೆಗಳ ವ್ಯಾಮೋಹ ಹರಿದುಹೋಯಿತು.

ಮನೆ ವೆಚ್ಚದ ನಿರ್ವಹಣೆಗೆ ತೊಂದರೆ ಉಂಟಾಯಿತು. ತಂದೆಯಿಂದ ಬಂದ ಹಣದಿಂದ ತಂಜಾವೂರಿನಲ್ಲಿ ದಿನ ಕಳೆದವು.

ಬ್ಯಾಂಕಿನಲ್ಲಿ ಗುಮಾಸ್ತೆ

ರೈಲ್ವೆ ಹುದ್ದೆಯು ಹೆಚ್ಚುಕಾಲ ಉಳಿಯಲಿಲ್ಲ. ಗುಮಾಸ್ತೆ ಕೆಲಸಕ್ಕೆ ರಾಜೀನಾಮೆ ನೀಡಿದ ಸುಂದರಂ ಕುಟುಂಬದೊಡನೆ ಮಧುರೆಗೆ ಬಂದರು. ಅವರ ಸಂಬಂಧಿಗಳು ಶ್ರಮಪಟ್ಟು ಅವರಿಗೆ ಮಧುರೆಯಲ್ಲಿದ್ದ ಮದರಾಸು ಬ್ಯಾಂಕ್ ಶಾಖಾ ಕಚೇರಿಯಲ್ಲಿ ಗುಮಾಸ್ತೆ ಕೆಲಸ ದೊರಕಿಸಿಕೊಟ್ಟರು. ಬ್ಯಾಂಕಿನ ಉಗ್ರಾಣಗಳ ವಿಭಾಗದಲ್ಲಿದ್ದ ಅವರಿಗೆ ವೃತ್ತಿಯಲ್ಲಿ ಉತ್ಸಾಹ ಬರಲಿಲ್ಲ. ‘ದೇಶವು ಪ್ರಗತಿಪರವಾಗಬೇಕಾದರೆ ವಿದ್ಯಾವಂತ ವರ್ಗವು ವಾಣಿಜ್ಯ, ಕೈಗಾರಿಕೆ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಪ್ರವೇಶ ಮಾಡಬೇಕು’ ಎಂದು ನಾರ್ಟನ್ ಹೇಳಿದ್ದ ಮಾತುಗಳು ಅವರ ಮನಸ್ಸಿನಲ್ಲಿ ಬೇರುಬಿಟ್ಟಿದ್ದವು. ಸ್ವತಂತ್ರವಾಗಿ, ತಮ್ಮ ಸಾಹಸ ಪ್ರವೃತ್ತಿಗೆ ಅಡೆತಡೆಗಳಿಲ್ಲದೆ ಕೆಲಸ ಮಾಡಬೇಕು ಎಂಬ ಬಯಕೆ ಮಿಡಿಯುತ್ತಿತ್ತು. ಬ್ಯಾಂಕಿನ ಗುಮಾಸ್ತೆ ಕೆಲಸವು ತಮ್ಮ ಮನೋಭಿಲಾಷೆಗೆ ಅಡ್ಡಬಂದ ಪರೀಕ್ಷೆ ಎಂದು ಭಾವಿಸಿದರು. ಕೇವಲ ಹೊಟ್ಟೆಪಾಡಿಗಾಗಿ ಮತ್ತು ಯಂತ್ರಜೀವನಕ್ಕಾಗಿ ಅದೊಂದು ಕೆಲಸ ಎನ್ನುವ ನಿಸ್ಸಾರಭಾವದಿಂದ ಹುದ್ದೆಗೆ ಅಂಟಿಕೊಂಡಿದ್ದರು.

ಸುಂದರಂಗೆ ಸಿಕ್ಕ ಹುದ್ದೆ ದೊಡ್ಡದಲ್ಲ. ಆದರೆ ದೊಡ್ಡ ಬ್ಯಾಂಕಿನಲ್ಲಿ ಹುದ್ದೆಯೊಂದು ದೊರೆತದ್ದು ಅವರ ತಂದೆಗೆ ಶಾಂತಿ ತಂದಿತ್ತು. ಅದೇ ಕೆಲಸದಲ್ಲಿ ಸ್ವಲ್ಪ ಕಾಲ ಮುಂದುವರಿದರೆ ಬ್ಯಾಂಕಿನಲ್ಲಿ ದೊಡ್ಡ ಸ್ಥಾನ ದೊರೆಯುತ್ತದೆ ಎಂದು ಅವರ ನಿರೀಕ್ಷೆ. ಬ್ಯಾಂಕಿನಲ್ಲಿ ಖಜಾಂಚಿಯ ಕೆಲಸ ಖಾಲಿ ಆಯಿತು. ಅಧಿಕಾರಿಗಳು ಆ ಕೆಲಸಕ್ಕೆ ಸುಂದರಂರನ್ನು ನೇಮಿಸುವುದಾಗಿ ತಿಳಿಸಿದ್ದರು.

೧೯೦೮ ರಲ್ಲಿ ಅಘಾತವೊಂದು ಕಾದಿತ್ತು. ಸುಂದರಂರವರ ಮೂವತ್ತನೆಯ ವಯಸ್ಸಿನಲ್ಲಿ ಅವರ ತಂದೆ ವೆಂಗಾರಸ್ವಾಮಿ ಅಯ್ಯಂಗಾರ್ ಕಾಲವಾದರು. ತಂದೆಯ ಮರಣೋತ್ತರ ಕ್ರಿಯೆಗಳನ್ನು ಪೂರೈಸಿ ಸುಂದರಂ ಮಧುರೆಗೆ ಹಿಂತಿರುಗಿದಾಗ ಅಗಾಧ ನಿರಾಶೆ ಕಾದಿತ್ತು. ಬ್ಯಾಂಕಿನಲ್ಲಿ ಖಜಾಂಚಿ ಹುದ್ದೆ ದೊರೆಯುತ್ತದೆಯೆಂಬ ನಿರೀಕ್ಷೆ ಸುಳ್ಳಾಗಿತ್ತು. ಬ್ಯಾಂಕಿನ ಅಧಿಕಾರಿಗಳು ಆ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸಿದ್ದರು. ಅಂತಹ ದುಃಸ್ಥಿತಿ ಮತ್ತು ನಿರಾಶೆಯಲ್ಲೂ ಅವರು ಕಂಗೆಡಲಿಲ್ಲ. ಆದದ್ದೆಲ್ಲಾ ಒಳ್ಳೆಯದಕ್ಕೇ ಎಂಬ ಆಶಾಭಾವದೊಂದಿಗೆ ಬ್ಯಾಂಕಿನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರಬಂದರು. ತಂದೆಯನ್ನು ಕಳೆದುಕೊಂಡ ಆ ವರ್ಷವು ಕೇವಲ ಅಘಾತವೊಂದನ್ನೇ ತರದೆ ಅವರ ಜೀವಿತದಲ್ಲಿ ಒಂದು ದೊಡ್ಡ ತಿರುವನ್ನೂ ಕೊಟ್ಟಿತು. ‘ಇನ್ನು ಯಾರ ಅಧೀನದಲ್ಲೂ ದುಡಿತಕ್ಕೆ ನಿಲ್ಲಬಾರದು’ ಎಂಬ ದೃಢ ನಿರ್ಧಾರದೊಂದಿಗೆ ಅವರ ಮನಸ್ಸು ನಿಶ್ಚಿತ ಹಾದಿ ತುಳಿದಿತ್ತು.

ಮತ್ತೆ ವ್ಯವಹಾರಕ್ಕೆ

ತಂದೆ ಕಾಲವಾದ ಮೇಲೆ ಸುಂದರಂರವರ ಪಾಲಿಗೆ ಬಂದ ಸ್ವತ್ತುಗಳೆಂದರೆ ತಿರುಕ್ಕುರುಂಗುಡಿಯಲ್ಲಿದ್ದ ಪಿತ್ರಾರ್ಜಿತ ವಾದ ಒಂದು ಮನೆ ಮತ್ತು ಸ್ವಲ್ಪ ನಗದು ಹಣ. ವ್ಯಾಪಾರ ಕ್ಷೇತ್ರಕ್ಕೆ ಇಳಿಯುವುದು ಸರಿಯೆಂದು ತೀರ್ಮಾನಿಸಿ ಕೆಲವು ಸ್ನೇಹಿತರೊಂದಿಗೆ ಸೇರಿ ಹಣವನ್ನು ತೇಗದ ಮರದ ವ್ಯವಹಾರದಲ್ಲಿ ತೊಡಗಿಸಿದರು. ಕೇರಳ ಮತ್ತು ಬರ್ಮಾದಿಂದ ತೇಗದ ದಿಮ್ಮಿಗಳನ್ನು ತರಿಸಿ ಮಾರಾಟ ಮಾಡುವುದರಿಂದ ಲಾಭ ಕೂಡಿ ಬಂತು. ಅಧಿಕ ಪ್ರಮಾಣದಲ್ಲಿ ಮರಗಳನ್ನು ತರಿಸಿ ಮಾರಾಟ ನಡೆಸಿದರೂ ಲಾಭವನ್ನು ಕಡಿಮೆ ಪಡೆಯುವುದು ಅವರ ವ್ಯಾಪಾರ ಕುಶಲತೆ ಮತ್ತು ಧರ್ಮವಾಗಿತ್ತು. ಈ ವ್ಯಾಪಾರಿ ಧರ್ಮವು ಅವರ ಪಾಲುದಾರರಿಗೂ ಹಿಡಿಸಿತ್ತು. ಇದರಿಂದಾಗಿ ವ್ಯಾಪಾರದಲ್ಲಿ ವಿಶ್ವಾಸ ಮತ್ತು ಜನಪ್ರಿಯತೆ ಗಳಿಸಿದರು. ಮರದ ವ್ಯವಹಾರದಲ್ಲಿ ತೊಡಗಿದ್ದಂತೆಯೇ ಜಮೀನು ವ್ಯವಸಾಯ ನಡೆಸುವುದನ್ನು ತಪ್ಪಿಸಿರಲಿಲ್ಲ.

ಸುಂದರಂ ನಾಲ್ಕು ವರ್ಷಗಳ ತೇಗದ ವ್ಯವಹಾರದಿಂದ ಒಳ್ಳೆಯ ಹೆಸರು ಪಡೆದರು. ಮಧುರೆಯಲ್ಲಿನ ಅತ್ಯುನ್ನತ ತೇಗದ ಮರದ ವ್ಯಾಪಾರಿಗಳ ಮಧ್ಯೆ ತಾವೂ ಒಂದು ಪ್ರಮುಖ ಸ್ಥಾನ ಸಂಪಾದಿಸಿಕೊಂಡರು. ಹಣವೂ ಅವರಲ್ಲಿ ಸೇರಿತು. ಈ ಉದ್ಯಮದಲ್ಲಿ ಅವರು ಹೂಡಿದ ಮೂಲಧನ ಇಪ್ಪತ್ತೈದು ಸಾವಿರ ರೂಪಾಯಿಗಳು. ಹಲವು ವರ್ಷಗಳ ವ್ಯಾಪಾರದಲ್ಲಿ ಗಳಿಸಿದ ಲಾಭವೂ ಇಪ್ಪತ್ತೈದು ಸಾವಿರ ರೂಪಾಯಿಗಳು. ಮಿತವಾದ ಲಾಭ ಪಡೆದು ನಿಯಮಬದ್ಧವಾಗಿ ನಡೆಸಿದ ವ್ಯಾಪಾರದಲ್ಲಿ ಅವರು ಅಧಿಕವಾಗಿ ಗಳಿಸಿದುದು ಕೀರ್ತಿ. ಒಂದು ತತ್ವದ ಚೌಕಟ್ಟಿನಲ್ಲಿ ನಡೆಸುವ ವ್ಯಾಪಾರವು ಒಂದು ರೀತಿಯ ಸೇವೆ ಎಂಬುದನ್ನು ತೋರಿಸಿಕೊಟ್ಟರು.

ಹೊಸ ಸಾಹಸ

ಅವರ ಅವಿಶ್ರಾಂತ ಚೇತನಕ್ಕೆ ಮರದ ವ್ಯಾಪಾರ ಒಂದರಿಂದಲೇ ತೃಪ್ತಿ ದೊರೆಯುವುದು ಸಾಧ್ಯವಿರಲಿಲ್ಲ. ಹೊಸ ಉದ್ಯಮದಲ್ಲಿ ಕೈ ಇಡುವ ಬಯಕೆ ಸ್ವಲ್ಪವೂ ಕುಗ್ಗಿರಲಿಲ್ಲ. ಪ್ರಯಾಣಿಕರನ್ನು ಮತ್ತು ಸರಕುಗಳನ್ನು ಸಾಗಿಸಲು ಇದ್ದ ಮಂದಗಾಮಿ ಎತ್ತಿನ ಗಾಡಿಗಳನ್ನು ಹಾಗೂ ಎಣಿಕೆಗೆ ಸಿಗುವಂತಹ ಕೆಲವೇ ಮೋಟರು ವಾಹನಗಳನ್ನು ಕಂಡು ತಮ್ಮದೇ ಆದ ಕನಸು, ಕಲ್ಪನೆಗಳನ್ನು ಕಂಡಿದ್ದರು. ಬಹು ದಿನಗಳ ಅಭಿಲಾಷೆ ಯನ್ನು ಪೂರೈಸಲು ತಮ್ಮಲ್ಲಿದ್ದ ಐವತ್ತು ಸಾವಿರ ರೂಪಾಯಿಗಳನ್ನು ಹೊಸ ಉದ್ಯಮದಲ್ಲಿ ಧೈರ್ಯವಾಗಿ ತೊಡಗಿಸಿದರು. ಆ ಸಾಹಸದ ಉದ್ಯಮವೇ ಅವರ ಹೆಸರನ್ನು ಶಾಶ್ವತಗೊಳಿಸಿದ ರಸ್ತೆ ಸಾರಿಗೆಯ ಉದ್ಯಮ.

೧೯೧೧ ಸುಂದರಂರವರ ಜೀವನದಲ್ಲೊಂದು ಮಹತ್ತರದ ವರ್ಷ. ಸ್ವತಂತ್ರ ಕಾರ್ಯಪಥದ ಮೈಲಿಗಲ್ಲು. ಆ ವರ್ಷ ಅವರು ಮಧುರೆ ಮತ್ತು ದೇವಕೋಟೆಯ ನಡುವೆ ದಕ್ಷಿಣ ಭಾರತದ ಪ್ರಥಮ ಬಸ್ ಸರ್ವಿಸ್ ಪ್ರಾರಂಭಿಸಿದರು. ಮರುವರ್ಷದಲ್ಲಿ ಅಂದರೆ ೧೯೧೨ ರಲ್ಲಿ ಪುದುಕೋಟೆಗೆ ಕಚೇರಿಯನ್ನು ವರ್ಗಾಯಿಸಿ ಹೊಸ ಒಪ್ಪಂದದ ಮೇಲೆ ಖಾದರ್ ನವಾಜ್‌ಖಾನ್ ಎಂಬ ಪ್ರಮುಖರೊಂದಿಗೆ ಸೇರಿ ತಮ್ಮ ಬಂಡವಾಳವನ್ನು ತೊಡಗಿಸಿ ಪುದುಕೋಟೆ ಮತ್ತು ತಂಜಾವೂರುಗಳ ನಡುವೆ ಪ್ರಯಾಣಿಕರ ಬಸ್ ಸರ್ವಿಸ್ ಹೂಡಿದರು. ಆ ಪ್ರಾರಂಭವೇ ಇಂದಿನ ಟಿ.ವಿ.ಎಸ್. ಸಂಸ್ಥೆಗೆ ಅಡಿಗಲ್ಲು.

ರಸ್ತೆಯ ಅಂಚಿನಲ್ಲಿ ನಿಂತು ತರುಣ ಸುಂದರಂ ಶೀಘ್ರವಾಗಿ ಸಾಗುವ ವಾಹನಗಳ ಕಲ್ಪನೆ ಮಾಡಿಕೊಂಡರು

ಹೊಸ ಮನೋಧರ್ಮ

ಅಂದಿನ ದಿನಗಳಲ್ಲಿ ಬಸ್ ಸರ್ವಿಸ್ ನಡೆಸುವುದು ಸುಲಭದ ಕೆಲಸವಾಗಿರಲಿಲ್ಲ. ವಾಹನಗಳು ಜನರನ್ನು ಹೆದರಿ ಸುವಂತಿದ್ದವು. ಲೋಹದ ಮತ್ತು ಮರದ ಮುದ್ದೆಗಳಂತಿದ್ದ ಬಸ್ಸುಗಳು ಧೂಳು, ಹೊಗೆ ಎಬ್ಬಿಸಿ ನಿಜಕ್ಕೂ ರಸ್ತೆಯ ದೈತ್ಯನಂತೆ ಕಾಣುತ್ತಿದ್ದವು. ಅವುಗಳು ಹೊರಗಿನಿಂದ ನೋಡು ವವರಿಗೆ ಭೂತಗಳಂತೆ ಕಾಣುತ್ತಿದ್ದವು; ಒಳಗೆ ಕುಳಿತು ಪ್ರಯಾಣ ಮಾಡುವವರಿಗೂ ಕಷ್ಟವನ್ನೇ ಕೊಡುವ ಭೂತ ಗಳಾಗಿದ್ದವು. ಭೀಕರ ಸದ್ದಿನೊಂದಿಗೆ ಗಟ್ಟಿಯಾದ ಟೈರುಗಳ ಮೇಲೆ ಕುಲುಕಾಡುತ್ತಾ ಪ್ರಯಾಣಿಕರ ಮೈ ಹೊರಳಾಡಿಸಿ ನೋವು, ಆಯಾಸ ಉಂಟುಮಾಡುತ್ತಿದ್ದವು. ಸುಂದರಂ ಹಳ್ಳಿಗರನ್ನು ಬಸ್ ಪ್ರಯಾಣಕ್ಕಾಗಿ ಆಕರ್ಷಿಸಬೇಕಾಗಿತ್ತು. ಬಸ್ಸುಗಳು ಹೆಚ್ಚು ಕುಲಕಾಟವಿಲ್ಲದೆ ಓಡುವುದು ಸಾಧ್ಯವಾಗಲು ರಸ್ತೆಗಳನ್ನು ಸರಿಪಡಿಸಬೇಕಾಗಿತ್ತು, ಸುಂದರಂ ಈ ಕೆಲಸವನ್ನೂ ಮಾಡಿದರು. ಹೊಸ ರಸ್ತೆಗಳನ್ನೂ ನಿರ್ಮಿಸಬೇಕಾಯಿತು, ಆ ಕೆಲಸವನ್ನೂ ಮಾಡಿದರು. ಪ್ರಯಾಣಿಕರಿಗೆ ಉಪಾಹಾರ ಒದಗಿಸಿದರು. ಹಾದಿಯಲ್ಲಿ ಅವರಿಗೆ ಇಳಿದುಕೊಳ್ಳಲು ತಂಗುದಾಣಗಳನ್ನು ಏರ್ಪಡಿಸಿದರು. ಕಷ್ಟಕರವಾದ ಸಾರಿಗೆ ಸಾಹಸಕಾರ್ಯದಲ್ಲಿ ಎರಡು ಮುಖ್ಯ ವಿಷಯಗಳನ್ನು ಅರಿತುಕೊಂಡರು. ಗೆಲುವು ಎಂದಿಗೂ ವಿನಯ, ಕಾರ್ಯ ಸಾಮರ್ಥ್ಯ ಮತ್ತು ಸಮಯಪಾಲನೆಯನ್ನು ಅವಲಂಬಿಸುತ್ತದೆಯೆಂಬುದು ಮೊದಲನೆಯ ಅಂಶ. ದೇಶದ ಪ್ರಗತಿಗೆ ಆಧಾರವಾದ ಸಾರಿಗೆ ಕ್ಷೇತ್ರಕ್ಕೆ ಬಸ್ ಸರ್ವಿಸ್ ಮಾತ್ರವೇ ಸಾಲದು, ಮೋಟರು ವಾಹನ ಕೈಗಾರಿಕೆಗಳು ಅಗತ್ಯ ಎಂಬುದು ಎರಡನೆಯ ಅಂಶ.

ತಮಿಳುನಾಡಿನ ಬಸ್ ಸರ್ವಿಸ್ ಕ್ಷೇತ್ರದಲ್ಲಿ ಅನುಕೂಲಕರ ಮತ್ತು ಕ್ರಮಬದ್ಧವಾದ ಸುಧಾರಣೆಗಳನ್ನು ಮೊದಲು ಜಾರಿಗೆ ತಂದವರು ಸುಂದರಂ. ಆ ಕಾಲದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬಸ್ಸಿನಲ್ಲಿ ಪ್ರಯಾಣ ಮಾಡಲು ಇಷ್ಟು ಹಣ ಕೊಡಬೇಕು ಎಂಬುದೇ ಖಚಿತವಿರಲಿಲ್ಲ. ಮನಸ್ಸು ಬಂದಹಾಗೆ ಹಣ ವಸೂಲು ಮಾಡುತ್ತಿದ್ದರು. ಸುಂದರಂ ಇದನ್ನು ತಪ್ಪಿಸಿದರು. ಇಷ್ಟು ದೂರದ ಪ್ರಯಾಣಕ್ಕೆ ಇಷ್ಟು ದರ ಎಂಬ ಪದ್ಧತಿಯನ್ನು ರೂಢಿಗೆ ತಂದರು. ಪ್ರಯಾಣಿಕರ ರಸ್ತೆ ಸಾಗಾಣಿಕೆಯ ಹಂತದಲ್ಲಿ ’ಮೈಲು-ದೂರ’ದ ಸಂಬಂಧ ಮತ್ತು ವಿವಿಧ ದೂರಗಳಿಗೆ ತಕ್ಕಂತೆ ನಿಗದಿಯಾದ ಮತ್ತು ನ್ಯಾಯವಾದ ದರವನ್ನು ಗೊತ್ತುಪಡಿಸಿದುದು ಅವರು ಸಾರಿಗೆ ಪ್ರಪಂಚಕ್ಕೆ ನೀಡಿದ ಗಮನಾರ್ಹವಾದ ಕೊಡುಗೆ. ಅದು ದಕ್ಷಿಣ ಭಾರತದಲ್ಲಿ ಒಂದು ಹೊಸ ಶಕೆಯ ಪ್ರಾರಂಭ. ಪ್ರಯಾಣಿಕರಿಗೆ ಟಿಕೆಟ್ ಕೊಡುವ ಪದ್ಧತಿಯನ್ನು ಪ್ರಥಮತಃ ಜಾರಿಗೆ ತಂದವರೂ ಅವರೇ. ಬಸ್ಸುಗಳು ಇಷ್ಟು ಹೊತ್ತಿಗೆ ಈ ಊರು ಬಿಡಬೇಕು, ಇಷ್ಟು ಹೊತ್ತಿಗೆ ಇಂತಹ ಊರು ಸೇರಬೇಕು ಎಂದು ನಿಯಮವಿರಲಿಲ್ಲ. ಯಾವಾಗಲೋ ಹೊರಟು ಯಾವಾಗಲೋ ಸೇರುವುದು-ಇದರಿಂದ ಪ್ರಯಾಣಿಕರಿಗೆ ಕಿರುಕುಳ. ಸುಂದರಂ ಎಲ್ಲದಕ್ಕೂ ಹೆಚ್ಚಾಗಿ ಬಸ್ಸುಗಳು ಗೊತ್ತಾದ ಕಾಲಕ್ಕೆ ಹೊರಡುವಂತೆ, ಒಂದು ತಾಣದಿಂದ ಮತ್ತೊಂದು ತಾಣಕ್ಕೆ ಗೊತ್ತಾದ ಅವಧಿಯಲ್ಲಿ ಹೋಗುವಂತೆ ಮಾಡುವುದಕ್ಕೆ ವಿಶೇಷ ಗಮನ ಕೊಟ್ಟರು. ಅವರ ಬಸ್ಸುಗಳ ಪ್ರಯಾಣದ ವೇಳಾಪಟ್ಟಿಯು ಎಷ್ಟೊಂದು ನಿಖರವಾಗಿತ್ತೆಂದರೆ, ಮಧುರೆಯಲ್ಲಿ ಜನ ಅವರ ಬಸ್ಸುಗಳು ಬಂದದ್ದನ್ನೂ ಹೋದದ್ದನ್ನೂ ನೋಡಿ ತಮ್ಮ ಗಡಿಯಾರವನ್ನು ಸರಿಪಡಿಸಿಕೊಳ್ಳುತ್ತಿದ್ದರೆಂಬಬುದು ಸತ್ಯ ಸಂಗತಿ.

ಅಭಿವೃದ್ಧಿಯ ಕಥೆ

೧೯೧೯ ರಲ್ಲಿ ಸುಂದರಂರವರ ಹಿರಿಯ ಮಗ ಟಿ.ಎಸ್.ರಾಜಂ ತಂದೆಯವರ ಉದ್ಯಮದಲ್ಲಿ ಸೇರಿಕೊಂಡರು. ಅನಂತರ ಅವರ ನಾಲ್ವರು ಸಹೋದರರೂ ತಮ್ಮ ಕೈಗೂಡಿಸಿ ಉದ್ಯಮವನ್ನು ವಿಸ್ತರಿಸಲು ಶ್ರಮಿಸಿದರು. ಬಸ್ ಸರ್ವಿಸ್ ನಡೆಸುತ್ತಿದ್ದಾಗಲೇ ಸುಂದರಂಗೆ ಆ ಉದ್ಯಮದ ಅತ್ಯಗತ್ಯಗಳಾದ ಸಹಾಯಕ ಭಾಗಗಳ ಮತ್ತು ಬಿಡಿ ಭಾಗಗಳ ಕಡೆಗೆ ದೃಷ್ಟಿ ಇತ್ತು. ಮೋಟರು ವಾಹನ ಬಿಡಿ ಭಾಗಗಳ ಹಂಚಿಕೆಯನ್ನು ಬಹು ಹುರುಪಿನಿಂದ ಕೈಗೊಂಡರು. ಸಂಸ್ಥೆಯ ವಿವಿಧ ರೀತಿಯ ಬೆಳವಣಿಗೆಗೆ ಅದು ತಳಹದಿ ಆಯಿತು. ೧೯೨೦ ರಲ್ಲಿ ಪುದುಕೋಟೆಯಲ್ಲಿ ಬಸ್ ಸರ್ವಿಸ್ ನಡೆಸುವುದರೊಂದಿಗೆ ಬಿಡಿಭಾಗಗಳ ವಿತರಣೆಗೆ ಎಲ್ಲಾ ಏರ್ಪಾಟು ಮಾಡಿದರು. ವಿದೇಶಗಳಿಂದ ಮೋಟಾರು ವಾಹನ ಮತ್ತು ಸಹಾಯಕ ಭಾಗಗಳನ್ನು ಆಮದು ಮಾಡಿಕೊಂಡು ಬೇರೆಯವರಿಗೂ ಒದಗಿಸುತ್ತಿದ್ದರು. ಈ ರೀತಿ ಇವರ ಕಂಪನಿಯಿಂದ ವಾಹನ ಸರಕುಗಳನ್ನು ಪಡೆದು ಸಾರಿಗೆ ವಾಹನಗಳನ್ನು ನಡೆಸುತ್ತಿದ್ದ ಪ್ರಸಿದ್ಧ ಸಂಸ್ಥೆಗಳ ಪೈಕಿ ಮದರಾಸಿನ ರಾಯಲ್ ಮೇಲ್ ಸರ್ವಿಸ್ ಒಂದು. ವಾಹನ ಬಿಡಿಭಾಗಗಳ ಬಗೆಗೆ ಪೂರ್ಣ ಕೌಶಲ ಸಾಧಿಸಲು ಸುಂದರಂ ಸೂಕ್ತ ತಾಂತ್ರಿಕ ಸಿಬ್ಬಂದಿಯನ್ನು ವಿದೇಶಕ್ಕೆ ಕಳುಹಿಸಿ ಶಿಕ್ಷಣ ಪಡೆದು ಬರುವಂತೆ ಮಾಡಿದರು.

ಕಷ್ಟನಷ್ಟಗಳಲ್ಲಿ ಒಬ್ಬರೇ

೧೯೨೧ ರಲ್ಲಿ ಮಧುರೆಯಲ್ಲಿ ಮೋಟರು ವಾಹನಗಳ ಮಾರಾಟ ಮತ್ತು ಸರ್ವಿಸ್ ವಿಭಾಗ ಪ್ರಾರಂಭವಾಯಿತು. ಅದರೊಂದಿಗೆ ಟೈರುಗಳು, ಬಿಡಿ ಭಾಗಗಳು ಮತ್ತು ಯಂತ್ರೋಪಕರಣಗಳ ವ್ಯವಹಾರಗಳೂ ಸೇರಿದವು. ಸುಂದರಂ ಆ ವರ್ಷದ ಅಂತ್ಯದಲ್ಲಿ ಫೋರ್ಡ್ ಕಂಪನಿ ಕಾರುಗಳ ಸ್ಥಳೀಯ ಉಪಮಾರಾಟಗಾರರಾದರು. ಪುದುಕೋಟೆಯಲ್ಲಿ ಬಸ್ ಸರ್ವಿಸ್ ನಡೆಸಲು ಮಾಡಿಕೊಂಡಿದ್ದ ಒಪ್ಪಂದವು ಮುಗಿದನಂತರ ಕೆಲವು ಪಾಲುದಾರರೊಂದಿಗೆ ಚಿಕ್ಕ ವಾಣಿಜ್ಯ ಸಂಸ್ಥೆಯನ್ನು ಸ್ಥಾಪಿಸಿ ಬೈಸಿಕಲ್ ಮತ್ತು ಮೋಟರು ಭಾಗಗಳ  ವಹಿವಾಟು ನಡೆಸಿದರು. ಆಗ ಅವರು ಅಧಿಕ ಕಷ್ಟನಷ್ಟಗಳನ್ನು ಅನುಭವಿಸಬೇಕಾಯಿತು. ಪಾಲುದಾರರು ಒಬ್ಬೊಬ್ಬರಾಗಿ ಬಿಟ್ಟು ಹೋದರು. ಸುಂದರಂ ಧೈರ್ಯಗೆಡದೆ ಒಬ್ಬರೇ ನಿಂತು ಸಂಸ್ಥೆಯು ಮುಳುಗುವುದನ್ನು ತಪ್ಪಿಸಿದರು. ೧೯೨೪ ರಲ್ಲಿ ಷವರ್ಲೆ ಕಾರುಗಳ ಅಧಿಕೃತ ಮಾರಾಟದ ಹಕ್ಕುಗಳು ದೊರೆತು ಅವರ ಸಂಸ್ಥೆಯು ಟಿ.ವಿ.ಸುಂದರಂ ಅಯ್ಯಂಗಾರ್ ಅಂಡ್ ಸನ್ಸ್ ಎಂಬ ಹೆಸರಿನಲ್ಲಿ ವಹಿವಾಟುಗಳನ್ನು ಪ್ರಾರಂಭಿಸಿತು.

ಮತ್ತೆ ಗೆಲುವು

ಸುಂದರಂರವರ ಹೊಸ ಉದ್ಯಮ ಶಾಖೆಯೊಂದು ೧೯೨೬ರಲ್ಲಿ ಕಾರ್ಯೋನ್ಮುಖವಾಯಿತು. ಸುಂದರಂ ಇಂಡಸ್ಟ್ರೀಸ್ ಎಂಬ ಹೆಸರಿನಲ್ಲಿ ಬಂದ ಈ ಸಂಸ್ಥೆಯ ಕೆಲಸ ವಾಹನಗಳಿಗೆ ಮೈ ಕಟ್ಟುವುದು (ಬಾಡಿ ಬಿಲ್ಡಿಂಗ್). ೧೯೪೦ರ ವರೆಗೆ ಷವರ್ಲೆ ಮತ್ತು ಫೋರ್ಡ್ ವಾಹನಗಳಿಗೆ ತೆರೆದ ಭಂಗಿಯ (ಓಪನ್ ಟೈಪ್) ಮೈ ಕಟ್ಟಲಾಯಿತು. ಸುಂದರಂ ರವರಿಗೆ ಸಾಮಾನ್ಯ ಮೋಟರು ವಾಹನ ಮತ್ತು ಬಿಡಿ ಭಾಗ ಗಳನ್ನು ಮಾರುವ ಅವಕಾಶ ಸಿಕ್ಕಿತು. ಇತರರು ಸುಂದರಂರವರ ಬೆಲೆಗೆ ಸರಕುಗಳನ್ನು ತೆಗೆದುಕೊಳ್ಳುವ ಹಂತಕ್ಕೆ ಬರುವಂತಾಯಿತು. ಅಮೆರಿಕದ ಜನರಲ್ ಮೋಟಾರ‍್ಸ್ ಕಂಪನಿಯ ಎಲ್ಲಾ ವಿಧದ ವಾಹನಗಳ ಏಜೆನ್ಸಿ ಹಕ್ಕುಗಳನ್ನು ಪಡೆದ ಸುಂದರಂ ನೇರ ಮಾರಾಟಗಾರ ರಾದರು. ಅಂದಿನಿಂದ ಉದ್ಯಮದಲ್ಲಿ ಮತ್ತೊಂದು ಹೊಸ ಅಧ್ಯಾಯವು ಆರಂಭವಾಯಿತು. ಟಿ.ವಿ.ಎಸ್. ಸಂಸ್ಥೆಯ ಪ್ರಥಮ ಶಾಖೆ ೧೯೩೫ ರಲ್ಲಿ ಪುದುಕೋಟೆಯಲ್ಲಿ ಕಾರ್ಯ ಕೈಗೊಂಡ ಮೇಲೆ ಮರು ವರ್ಷದಲ್ಲಿ ಪ್ರಥಮ ಟಿ.ವಿ.ಎಸ್. ಕಟ್ಟಡವು ತಿರುನೆಲ್ ವೇಲಿಯಲ್ಲಿ ನಿರ್ಮಿತವಾಯಿತು. ಕಾಲಕ್ರಮೇಣ ಸಂಸ್ಥೆಯ ಶಾಖೆಗಳು ಕ್ರಮವಾಗಿ ತಿರುಚ್ಚಿ, ಸೇಲಂ, ಕೊಯಮತ್ತೂರು, ತಿರುವನಂತಪುರ, ಎರ್ನಾಕುಲಂ ಮತ್ತು ಪಾಂಡಿಚೇರಿಯಲ್ಲಿ ಸ್ಥಾಪನೆಗೊಂಡವು. ವಾಹನ ಮತ್ತು ವಾಹನ ಭಾಗಗಳ ಪರಿಣಾಮಕಾರಿ ಮಾರಾಟ ಈ ಶಾಖೆಗಳ ಒಂದು ಉದ್ದೇಶ. ಆದರೆ ಇಷ್ಟೇ ಅಲ್ಲ. ಮಾರಾಟದ ನಂತರ ಗ್ರಾಹಕರಿಗೆ ಅಗತ್ಯವಾದಾಗ ಸಮರ್ಪಕವಾದ ಸೇವೆ ದೊರೆಯಬೇಕಲ್ಲವೆ? ಗ್ರಾಹಕರು ಬೇಕಾದಾಗ ವಾಹನಗಳ ವಿಷಯ ತಿಳಿದ ಸಮರ್ಥ ರಿಂದ ಸಹಾಯ ಪಡೆಯಲು ಈ ಶಾಖೆಗಳಿಂದ ಸಾಧ್ಯವಾಯಿತು.

ಮದರಾಸ್ ಆಟೊ ಸರ್ವಿಸ್ ಕಂಪನಿಯು ಅಮೆರಿಕದ ಪ್ರಸಿದ್ಧ ಜನರಲ್ ಮೋಟರ‍್ಸ್ ಸಂಸ್ಥೆಯಿಂದ ಬಿಡಿ ಭಾಗಗಳನ್ನು ಆಮದು ಮಾಡಿಕೊಂಡು ಒಂದು ಅಧೀನ ಸಂಸ್ಥೆಯಂತೆ ದಕ್ಷಿಣ ಭಾರತದಲ್ಲಿ ಮಾರಾಟ ನಡೆಸುತ್ತಿತ್ತು. ಟಿ.ವಿ.ಎಸ್. ಸಂಸ್ಥೆಯು ಅದನ್ನು ೧೯೩೬ರಲ್ಲಿ ವಹಿಸಿಕೊಂಡು ಕಾರ್ಯಗಳನ್ನು ತೀವ್ರಗೊಳಿಸಿತು. ಇಂಗ್ಲೆಂಡ್ ಮತ್ತು ಅಮೆರಿಕದಿಂದ ವಾಹನ ಭಾಗಗಳನ್ನು ತರಿಸಿ ವಿತರಣೆ ಮಾಡುವ ಹಕ್ಕುಗಳನ್ನು ಪಡೆಯಿತು. ಸುಂದರಂ ವಿದೇಶಗಳಿಂದ ಸರಕುಗಳನ್ನು ಪಡೆದು ವಿತರಣೆ ಮಾಡುವುದರಿಂದಲೇ ತೃಪ್ತರಾಗಲಿಲ್ಲ. ಸ್ವದೇಶಗಳಲ್ಲಿ ತಯಾರಾದ ವಾಹನ ಭಾಗಗಳನ್ನು ವಿತರಣೆ ಮಾಡುವುದರಲ್ಲೂ ಅಷ್ಟೇ ಆಸ್ಥೆ ವಹಿಸಿದರು. ಇದಕ್ಕಾಗಿ ಶಾಖೆಯು ಬೆಂಗಳೂರಿನಲ್ಲಿ ಸ್ಥಾಪಿತವಾಯಿತು. ಅನಂತರ ಶಾಖೆಗಳು ವಿಜಯವಾಡ ಮತ್ತು ಕಲ್ಲಿಕೋಟೆಗೂ ಬಂದವು.

ಮಹಾಯುದ್ಧದ ಬಿಸಿ

ಎರಡನೆಯ ಪ್ರಪಂಚದ ಮಹಾಯುದ್ಧವು ೧೯೩೯ ರಲ್ಲಿ ಪ್ರಾರಂಭವಾದ ಮೇಲೆ ಪೆಟ್ರೋಲ್‌ಗೆ ತೀವ್ರ ಅಭಾವ ಉಂಟಾಯಿತು. ಸುಂದರಂ ಸಕಾಲಿಕವಾಗಿ ತಮ್ಮ ಬುದ್ಧಿ ಚಾತುರ್ಯದಿಂದ ಇದ್ದಿಲು ಅನಿಲವನ್ನು ಬಳಸಿ ವಾಹನಗಳ ಚಾಲನೆಗೆ ’ಅನಿಯ ಯಂತ್ರ’ (ಗ್ಯಾಸ್ ಪ್ಲಾಂಟ್) ನಿರ್ಮಿಸಿದರು. ಈ ಅನಿಲ ಯಂತ್ರಗಳು ಪೆಟ್ರೋಲ್‌ಕ್ಷಾಮವನ್ನು ಪರಿಣಾಮಕಾರಿಯಾಗಿ ಬಗೆಹರಿಸಿ ಕೊಟ್ಟವು. ಯುದ್ಧದ ಬಿಸಿ ರಬ್ಬರ್ ಮೇಲೆಯೂ ಚೆನ್ನಾಗಿ ತಟ್ಟಿತು. ೧೯೪೩ ರಲ್ಲಿ ಯುದ್ಧವು ತೀವ್ರ ಘಟ್ಟದಲ್ಲಿದ್ದು ವಾಹನಗಳ ಟೈರುಗಳಿಗೆ ಅಗತ್ಯವಾದ ರಬ್ಬರ್ ದೊರೆಯದಂತಾಯಿತು. ರಸ್ತೆ ಸಾರಿಗೆ ವಾಹನಗಳ ಮಾಲೀಕರಿಗೆ, ಕಾರುಗಳ ಒಡೆಯರಿಗೆ ಹೊಸ ಟೈರುಗಳು ಸಿಕ್ಕದೆ ಹೋದವು. ರಸ್ತೆಯಲ್ಲಿ ವಾಹನಗಳ ಓಡಾಟ ನಿಂತೇಹೋಗುವ ಪರಿಸ್ಥಿತಿ ಬಂತು. ಟೈರುಗಳ ಅವಶ್ಯಕತೆಯನ್ನು ಪೂರೈಸಲು ಸುಂದರಂ ಇಂಡಸ್ಟ್ರೀಸ್‌ನ ಟೈರುಗಳ ರಿಟ್ರೆಡಿಂಗ್ ವಿಭಾಗವು ಆರಂಭವಾಯಿತು.

ರಿಟ್ರೆಡಿಂಗ್ ಎಂದರೆ ಸವೆದುಹೋದ ಟೈರುಗಳಿಗೆ ರಬ್ಬರ್ ಪಟ್ಟಿಗಳನ್ನು ಅಂಟಿಸಿ ಮತ್ತೆ ಬಳಕೆಗೆ ಅರ್ಹವನ್ನಾಗಿ ಮಾಡುವುದು. ಇದಕ್ಕಾಗಿ ಸುಂದರಂ ಪುದುಕೋಟೆಯಲ್ಲಿ ಪ್ರಥಮ ಯಂತ್ರಗಾರ ಸ್ಥಾಪಿಸಿದರು. ತಮ್ಮಲ್ಲಿದ್ದಷ್ಟು ಯಂತ್ರಗಳು ಮತ್ತು ಅಲ್ಪ ಸಿಬ್ಬಂದಿವರ್ಗದಿಂದಲೇ ತ್ವರಿತವಾಗಿ ಕಾರ್ಯ ಪ್ರಾರಂಭಿಸಿದರು. ರಬ್ಬರ್ ಕ್ಷಾಮವನ್ನು ತೀವ್ರತರ ರಿಟ್ರೆಡಿಂಗ್ ನಿರ್ವಹಣೆಗಳಿಂದ ಬಗೆಹರಿಸಲಾಯಿತು. ವಾಹನಗಳ ಮಾಲೀಕರಿಗೆ ಅದೊಂದು ವರವಾಯಿತು. ರಿಟ್ರೆಡ್ ಆದ ಟೈರುಗಳು ಅನೇಕ ತಿಂಗಳ ಕಾಲ ಬಾಳಿಕೆಗೆ ಬರುವುದು ಸಾಧ್ಯವಾಯಿತು. ಮತ್ತು ರಿಟ್ರೆಡ್ ಮಾಡಿಸಲು ತಗಲುವ ವೆಚ್ಚವು ಹೊಸ ಟೈರುಗಳ ಬೆಲೆಯ ಮೂರನೆ ಒಂದು ಭಾಗಕ್ಕೂ ಕಡಿಮೆ ಆಗಿತ್ತು. ಈ ಕೆಲಸದ ಬೇಡಿಕೆ ಎಷ್ಟೊಂದು ಏರಿ ತೆಂದರೆ, ಅದಕ್ಕಾಗಿ ಯಂತ್ರಾಗಾರಗಳನ್ನು ಮುಂದೆ ಎಂಟು ನಗರಗಳಲ್ಲಿ ಹೂಡಬೇಕಾಯಿತು. ಇಂದು ಈ ಸಂಸ್ಥೆಯಲ್ಲಿ ತಿಂಗಳಿಗೆ ಹದಿನೆಂಟು ಸಾವಿರಕ್ಕೂ ಹೆಚ್ಚು ಟೈರುಗಳು ರಿಟ್ರೆಡ್ ಆಗುತ್ತಿವೆ.

ಅಭಾವ, ಕಷ್ಟನಷ್ಟಗಳು ಸುಂದರಂರವರ ಶೋಧಕ ಪ್ರತಿಭೆಯನ್ನು ಪ್ರಜ್ವಲಿಸುವಂತೆ ಮಾಡಿದವೇ ಹೊರತು ಅವರನ್ನು ಧೃತಿಗೆಡಿಸಲಿಲ್ಲ. ಪ್ರಪಂಚ ಯುದ್ಧದ ಪ್ರಭಾವ ಅಷ್ಟಕ್ಕೇ ಮುಗಿಯಲಿಲ್ಲ. ವಾಹನಗಳ ಅವಯವ ಭಾಗಗಳಿಗೂ ತೀವ್ರ ರೀತಿಯ ಕೊರತೆಯುಂಟಾಯಿತು. ಮಧುರೆಯ ಟಿ.ವಿ.ಎಸ್. ಸರ್ವಿಸ್ ಸ್ಟೇಷನ್‌ನಲ್ಲಿ ಪ್ರಥಮತಃ ಮೋಟಾರ್ ವಾಹನಗಳ ದುರಸ್ತು, ಪುನರ್‌ನಿರ್ಮಾಣ ಮತ್ತು ಸವೆದ ಭಾಗಗಳನ್ನು ಸರಿಪಡಿಸುವ ಕೆಲಸಗಳನ್ನು ಬಹು ದೊಡ್ಡ ಪ್ರಮಾಣದಲ್ಲಿ ಕೈಗೊಂಡರು. ಇಂದು ಮಧುರೆಯಲ್ಲಿರುವ ಈ ಸರ್ವಿಸ್ ಸ್ಟೇಷನ್ ಆಧುನಿಕ ಯಂತ್ರೋಪಕರಣಗಳಿಂದ ಸುಸಜ್ಜಿತವಾಗಿದ್ದು ಪ್ರಪಂಚದ ಯಾವುದೇ ಉನ್ನತ, ಆಧುನಿಕ ಸರ್ವಿಸ್ ಸ್ಟೇಷನಿಗೆ ಸಾಟಿಯಾಗಿ ನಿಲ್ಲಬಲ್ಲದು.

ಹೊಸ ದಿಟ್ಟ ಹೆಜ್ಜೆಗಳು

೧೯೪೫ ರಲ್ಲಿ ಸುಂದರಂ ಮೋಟರ‍್ಸ್ ಸಂಸ್ಥೆಯು ಮದರಾಸಿನಲ್ಲಿ ಸ್ಥಾಪಿತವಾದುದು ಟಿ.ವಿ.ಎಸ್. ಕಾರ್ಯ ಚಟುವಟಿಕೆಗಳ ವಿಸ್ತರಣದ ದಿಸೆಯಲ್ಲಿ ಒಂದು ಮುಖ್ಯ ಘಟ್ಟ. ಈ ಕಂಪನಿಯು ಕಾರು ಮತ್ತು ಟ್ರಕ್ಕುಗಳ ಮಾರಾಟ ಮತ್ತು ಸರ್ವಿಸ್‌ನಲ್ಲಿ ಅಮೋಘ ಕಾರ್ಯಸಾಗಿಸುತ್ತಿದೆ.

ಸುಂದರಂರವರ ರಸ್ತೆ ಸಾರಿಗೆ ಚರಿತ್ರೆಯಲ್ಲಿ ೧೯೪೬ ಒಂದು ನಿರ್ಣಾಯಕ, ಮಹತ್ವದ ವರ್ಷ. ಮೂವತ್ತು ವರ್ಷಗಳಿಗೂ ಅಧಿಕವಾಗಿ ಕೆಲಸ ನಿರ್ವಹಿಸಿದ ಪ್ರಯಾಣಿಕರ ಮತ್ತು ಸರಕು ಸಾಗಾಣಿಕೆಯ ಅವರ ಸಂಸ್ಥೆಯು ಇತರ ಕೆಲವು ಸಾರಿಗೆ ಕಂಪನಿಗಳೊಂದಿಗೆ ಕಲೆತು ಸದರ್ನ್ ರೋಡ್‌ವೇಸ್ ಎಂಬ ಹೆಸರಿನಲ್ಲಿ ಒಂದಾಯಿತು. ಮಧುರೆಯಲ್ಲಿ ಕೇಂದ್ರ ಕಚೇರಿ ಹೋಂದಿರುವ ಈ ದೊಡ್ಡ ಸಂಸ್ಥೆಯ ೩೫೦ ಬಸ್ಸುಗಳು, ೩೦೦ ಲಾರಿಗಳು ಮತ್ತು ೫೨ ಟ್ರೈಲರ್‌ಗಳು ದೇಶದ ಎಂಟು ದಿಕ್ಕುಗಳಿಗೂ ಹರಿಯುತ್ತಿದ್ದು, ಒಂದು ದಿವಸದ ಅವಧಿಯಲ್ಲಿ ಬಸ್ಸುಗಳು ೯೫ ಸಾವಿರ ಕಿಲೋ ಮೀಟರ್ ಮತ್ತು ಲಾರಿಗಳು ೭೫ ಸಾವಿರ ಕಿಲೋ ಮೀಟರ್ ದೂರದ ಪ್ರಯಾಣವನ್ನು ನಡೆಸುತ್ತಿದ್ದವು. ಪ್ರಯಾಣಿಕರ ಸಾರಿಗೆ ಬಸ್ ವಿಭಾಗವು ಕೆಲವು ವರ್ಷಗಳ ಹಿಂದೆ ರಾಷ್ಟ್ರೀಕೃತ ವಾಯಿತು. ೧೫ ಶಾಖಾ ಕಚೇರಿಗಳು, ೫೫೦ ಬುಕಿಂಗ್ ಆಫೀಸುಗಳು ಮತ್ತು ಆರು ಸಾವಿರ ಸಿಬ್ಬಂದಿವರ್ಗವಿರುವ ಸದರ್ನ್ ರೋಡ್‌ವೇಸ್ ರಾಷ್ಟ್ರದ ಖಾಸಗಿ ವಲಯದಲ್ಲಿ ಅತ್ಯಂತ ದೊಡ್ಡ ಸ್ವತಂತ್ರ ಸಾರಿಗೆ ಸಂಸ್ಥೆ.

ಯುದ್ಧ ಮುಗಿದ ನಂತರವೂ ಸುಂದರಂ ತೊಂದರೆ ಗಳನ್ನು ಎದುರಿಸಬೇಕಾಗಿ ಬಂತು. ವಾಹನಗಳ ವಿನ್ಯಾಸ, ಯಾಂತ್ರಿಕ ಕುಶಲತೆ ಮತ್ತು ವ್ಯವಹಾರಗಳಲ್ಲಿ ಆಗಬೇಕಾದ ಬದಲಾವಣೆ ಹಾಗೂ ಸುಧಾರಣೆಗಳನ್ನು ಗಂಭೀರವಾಗಿ ಯೋಚಿಸಬೇಕಾಯಿತು. ಯುದ್ಧಾನಂತರದ ವಸ್ತುಗಳ ಕೊರತೆ ಮತ್ತು ಆರ್ಥಿಕ ಮುಗ್ಗಟ್ಟು ಅವರ ವ್ಯವಹಾರಗಳ ಮೇಲೆ ಪ್ರಭಾವ ಬೀರಿದವು. ಹೊರದೇಶಗಳಿಂದ ಸಾಮಾನು ತರಿಸುವುದು ಕಷ್ಟವಾಯಿತು. ಯಾವ ದೇಶವೇ ಆಗಲಿ ಇತರ ದೇಶಗಳಿಂದ ಸಾಮಾನು ತರಿಸುವುದು ಹೆಚ್ಚಾಗಿ, ಇತರ ದೇಶ ಗಳಿಗೆ ಸಾಮಾನು ಮಾರುವುದು ಕಡಿಮೆಯಾದರೆ ಅದರ ಹಣಕಾಸಿನ ಸ್ಥಿತಿ ಏರುಪೇರಾಗುತ್ತದೆ. ಆದುದರಿಂದ ಸ್ವಾತಂತ್ರ್ಯ ಬಂದ ಮೇಲೆ ಭಾರತ ಸರ್ಕಾರ ಬೇರೆ ದೇಶಕ್ಕೆ ಭಾರತೀಯರು ಪ್ರಯಾಣ ಮಾಡುವುದು, ಬೇರೆ ದೇಶಗಳಿಂದ ಸಾಮಾನು ತರಿಸುವುದು ಇವಕ್ಕೆಲ್ಲ ಬಿಗಿಯಾದ ನಿಯಮಗಳನ್ನು ಮಾಡಿದೆ. ಹೀಗಾಗಿ ಸುಂದರಂ ಅವರಿಗೂ ಬೇರೆ ದೇಶಗಳಿಂದ ಯಂತ್ರಗಳನ್ನೂ ಯಂತ್ರಗಳ ಭಾಗಗಳನ್ನೂ ತರಿಸುವುದು ಕಷ್ಟವಾಯಿತು. ಸುಂದರಂ ಅವನ್ನೆಲ್ಲಾ ತಾಳ್ಮೆಯಿಂದ, ದಿಟ್ಟತನದಿಂದ ಎದುರಿಸಿ ಕಾರ್ಯ ನಿರ್ವಹಿಸಿದರು.

೧೯೪೭ ರಲ್ಲಿ ಸುಂದರಂ ಅಮೆರಿಕ ದೇಶಕ್ಕೆ ಭೇಟಿ ನೀಡಿದರು. ಆಗ ಅವರಿಗೆ ೭೧ ವರ್ಷ ವಯಸ್ಸಾಗಿದ್ದರೂ ಹೊರ ರಾಷ್ಟ್ರದಲ್ಲಿ ನಡೆಯುತ್ತಿದ್ದ ಮೋಟರು ವಾಹನಗಳ ನಿರ್ಮಾಣ, ಸಾರಿಗೆ ವ್ಯವಸ್ಥೆ, ಯಾಂತ್ರಿಕ ಹಾಗೂ ಕೈಗಾರಿಕಾ ಕೌಶಲಗಳನ್ನು ಸ್ಥೂಲವಾಗಿ ಅರಿತು ಬಂದರು. ಅವರು ವ್ಯವಸಾಯದ ವಿಷಯದಲ್ಲೂ ವೀಕ್ಷಣೆ ನಡೆಸಿ ಬಂದುದು ವಿಶೇಷದ ಸಂಗತಿ. ಪಡೆದುಬಂದ ಅನುಭವಗಳನ್ನು ಏರ್ವಾಡಿಯಲ್ಲಿದ್ದ ತಮ್ಮ ಜಮೀನುಗಳ ಕೃಷಿಯಲ್ಲಿ ಸೇರಿಸಲು ಮರೆಯಲಿಲ್ಲ.

೧೯೫೪ರಲ್ಲಿ ‘ಇಂಡಿಯಾ ಮೋಟರ್ ಪಾರ್ಟ್ಸ್ ಅಂಡ್ ಅಕ್ಸೆಸರೀಸ್’ ಎಂಬ ವಿಭಾಗವು ಮಧುರೆಯ ಟಿ.ವಿ.ಎಸ್. ಸಂಸ್ಥೆಯ ಅಂಗವಾಗಿ ಕೆಲಸ ಮಾಡತೊಡಗಿತು. ರಕ್ಷಣಾ ಇಲಾಖೆಗೆ ಮತ್ತು ಸರ್ಕಾರಿ ವಲಯಗಳಿಗೆ ಮೋಟಾರು ಭಾಗಗಳನ್ನು ಸರಬರಾಜು ಮಾಡುವುದು ಅದರ ಉದ್ದೇಶ ವಾಗಿತ್ತು.

ವ್ಯಕ್ತಿತ್ವ

ನಲವತ್ತು ವರ್ಷಗಳಿಗೂ ಹೆಚ್ಚು ಕಾಲ ಸತತ ಪ್ರಯತ್ನಗಳ ಯಂತ್ರವೇ ಆಗಿದ್ದು, ಜೀವಿತದಲ್ಲಿ ಅಲೆಅಲೆಯಾಗಿ ಬಂದ ಕಷ್ಟ ನಷ್ಟ, ಅಘಾತ, ಪರೀಕ್ಷೆಗಳನ್ನು ಹೆಬ್ಬಂಡೆಯಂತೆ ನಿಂತು ಎದುರಿಸಿದ ಸುಂದರಂರವರು ೧೯೫೫ರ ಏಪ್ರಿಲ್ ೨೮ರಂದು ಕೊಡೈಕೆನಾಲ್ ಗಿರಿಧಾಮದಲ್ಲಿ ಕಾಲವಾದರು.

ಅವರ ಹೋರಾಟ, ಶ್ರಮಗಳ ಸ್ಮಾರಕದಂತೆ ನಿಂತಿರುವ ಅವರ ಸಂಸ್ಥೆಯು ಸುಂದರಂರವರ ಹೆಸರನ್ನು ಅಮರ ಗೊಳಿಸಿದೆ.

ವಿದ್ಯೆ, ಪದವಿ ಅಥವಾ ಅದೃಷ್ಟದಿಂದ ಜನರು ಹಣ, ಕೀರ್ತಿ ಗಳಿಸುವುದು ಸಾಮಾನ್ಯ ಸಂಗತಿ. ಸುಂದರಂರವರು ಹಣ, ಕೀರ್ತಿ ಎಲ್ಲವನ್ನೂ ಗಳಿಸಿದುದು ತಮ್ಮ ದುಡಿಮೆ ಮತ್ತು ಶ್ರಮದಿಂದ. ಅವರ ಎಲ್ಲಾ ಕಾರ್ಯಕ್ಷೇತ್ರಗಳಲ್ಲೂ ಎದ್ದು ಕಾಣುತ್ತಿದ್ದುದು ಅವಿಶ್ರಾಂತ ಕುಡಿಮೆ, ದಿಟ್ಟತನ, ಶ್ರದ್ಧೆ ಹಾಗೂ ನಿಷ್ಠೆ. ಇಂದು ಟಿ.ವಿ.ಎಸ್. ಎಂಬ ಮೂರು ಅಕ್ಷರಗಳ ಹಿರಿಯ ಹೆಸರಿನ ಹಿಂದೆ ನಿಂತಿರುವುದು ಒಂದು ದೊಡ್ಡ ಚರಿತ್ರೆ. ಸೋಲು, ನಿರಾಸೆಗಳಿಗೆ ಕುಗ್ಗದೆ, ಗೆಲವಿನಿಂದ ಮೆರೆಯದೆ, ಕೀರ್ತಿಯಿಂದ ಸೊಕ್ಕದೆ, ಕಾರ್ಯಪಥದಲ್ಲಿ ಒಂದೇ ಗತಿಯಿಂದ ಸಾಗಿದ ಮೇಧಾವಿ ಅವರು.

ವ್ಯಕ್ತಿಯ ಹೊರನೋಟ ಮತ್ತು ವ್ಯಕ್ತಿಯ ಪ್ರತಿಭೆ ಇವೆರಡಕ್ಕೂ ಸಂಬಂಧ ಕಡಿಮೆ ಎನ್ನುವುದಕ್ಕೆ ಸುಂದರಂ ಉತ್ತಮ ನಿದರ್ಶನ. ತುಂಬು ತೋಳಿನ ಷರಟು, ಕಚ್ಚೆ ಪಂಚೆ, ಸಾಧಾರಣ ಪಾದರಕ್ಷೆ. ಕುತ್ತಿಗೆಯನ್ನು ಅಲಂಕರಿಸಿದ ಮಡಿಕೆ ವಸ್ತ್ರ. ಕೈಯಲ್ಲೊಂದು ನಡೆಗೋಲು. ವಿಶಾಲಹಣೆಯಲ್ಲಿ ಚೆನ್ನಾಗಿ ಕಾಣುವ ನಾಮ. ಕಿರುನಗೆ ತೋರುವ ತುಟಿಗಳು. ಕನ್ನಡಕದ ಹಿಂದೆ ದೂರದೃಷ್ಟಿ ತೂರುವ ಹೊಳಪಾದ ಕಣ್ಣುಗಳು- ಇವು ಹೊರ ನೋಟಕ್ಕೆ ಸಿಗುತ್ತಿದ್ದ ಸುಂದರಂರವರ ಸರಳ ಚಿತ್ರ. ಹೊರ ನೋಟದ ಮರೆಯಲ್ಲಿ ಅಡಗಿದ್ದುದು ಅಸಾಧಾರಣ ಶೋಧಕ ಶಕ್ತಿ, ಮೇಧಾವಿತನ ಮತ್ತು ಧೀಮಂತಿಕೆ.

ಶಾಲೆಯ ವಿದ್ಯೆ-ಬಾಳು ಬೇಡುವ ವಿದ್ಯೆ

ಸುಂದರಂ ತಮ್ಮ ಓದಿನ ವಿಷಯದಲ್ಲಿ ತಂದೆಯನ್ನು ನಿರಾಶೆಗೊಳಿಸಿದರೂ ತಂದೆಯ ಬಗೆಗೆ ಅವರು ಅಪಾರ ಭಕ್ತಿ, ಗೌರವ ಹೊಂದಿದ್ದರು. ಕಾಲೇಜು ಓದಿನಲ್ಲಿ ತಾವು ನಿರಾಸಕ್ತ ರಾದರೂ ಕಾಲೇಜು ವ್ಯಾಸಂಗಕ್ಕೆ ಅವರು ವಿರೋಧಿಗಳಲ್ಲ. ತಮ್ಮ ಮಕ್ಕಳನ್ನೆಲ್ಲಾ ಕಾಲೇಜುಗಳಲ್ಲಿ ಓದಿಸಿದುದೇ ಅದಕ್ಕೆ ನಿದರ್ಶನ. ಶಾಲಾ ವಿದ್ಯೆಗೂ ಕ್ರಿಯಾಶೀಲ ವಿದ್ಯೆಗೂ ಇರುವ ವ್ಯತ್ಯಾಸವನ್ನು ಅಧಿಕಾರಯುತವಾಗಿ ಅವರು ಹೇಳಬಲ್ಲವ ರಾಗಿದ್ದರು. ಪ್ರಾಯೋಗಿಕ, ತಾಂತ್ರಿಕ ಹಾಗೂ ಕ್ರಿಯಾಶೀಲ ಜ್ಞಾನಾರ್ಜನೆಗಾಗಿ ಮಕ್ಕಳನ್ನು ವಿದೇಶಗಳಿಗೆ ಕಳುಹಿಸಿ ಅಲ್ಲಿ ಕಲಿತು ಬಂದುದನ್ನು ಕಾರ್ಯಕ್ಷೇತ್ರಗಳಲ್ಲಿ ರೂಢಿಸುವಂತೆ ಮಾಡಿದರು. ತಮ್ಮ ಕುಟುಂಬ ವರ್ಗವು ಕೇವಲ ಶಾಲೆಗಳಲ್ಲಿ ಕಲಿತವರ ಗುಂಪಾಗದೆ, ಸ್ವಂತಿಕೆ ಮತ್ತು ಶ್ರಮ ಜೀವನದಿಂದ ಬದುಕುವ ಆದರ್ಶ ತಂಡವಾಗಲೆಂಬುದು ಅವರ ಆಕಾಂಕ್ಷೆ. ಸಾರಿಗೆ ಕ್ಷೇತ್ರಕ್ಕೆ ಕಾಲಿಟ್ಟ ಆರಂಭದಲ್ಲಿ ಅವರು ತಮ್ಮ ಮನೆಗೆಲಸದವರನ್ನು ಮತ್ತು ಎತ್ತಿನ ಗಾಡಿ ನಡೆಸುತ್ತಿದ್ದವರನ್ನು ಮೋಟರ್ ಚಾಲಕರಾಗುವಂತೆ, ಯಂತ್ರ ಕುಶಲಿಗಳಾಗುವಂತೆ ತರಪೇತು ಮಾಡಿದರು. ವಿದ್ಯಾವಂತರು ಕ್ರಿಯಾಶೀಲ ಕೆಲಸ ಗಳನ್ನು ಮಾಡಲು ಹಿಂಜರಿಯಬಾರದೆಂಬುದು ಅವರ ಅಭಿಪ್ರಾಯ. ಎರಡು ಜಾಗತಿಕ ಮಹಾ ಯುದ್ಧಗಳ ಕಾಲದಲ್ಲಿ ತಮ್ಮ ಕಾರ್ಯಗಳನ್ನು ಮಹತ್ತರವಾಗಿ ಸಾಧಿಸಿದ ಸುಂದರಂ ತಮ್ಮ ಮಕ್ಕಳಿಗೆ ದೇಶಭಕ್ತರ, ಸ್ವಾತಂತ್ರ್ಯ ಹೋರಾಟಗಾರರ ಮತ್ತು ಸ್ವಂತ ಶ್ರಮದಿಂದ ಪ್ರವರ್ಧಮಾನಕ್ಕೆ ಬಂದ ವ್ಯಕ್ತಿಗಳ ಕಥೆ ಮತ್ತು ಜೀವನಗಳನ್ನು ಓದಿಹೇಳಿ, ಆ ವ್ಯಕ್ತಿಗಳನ್ನು ಅನುಸರಿಸುವಂತೆ ತಿಳುವಳಿಕೆ ನೀಡುತ್ತಿದ್ದರು.

‘ಪ್ರಯಾಣಿಕರ ಮತ್ತು ಸಾಮಾನುಗಳನ್ನು ಒಪ್ಪಿಸಿದವರ ಹಿತವನ್ನೂ ಲಕ್ಷಿಸಬೇಕು’

ದೂರದೃಷ್ಟಿ

ಪ್ರಯಾಣ, ಸಾಮಾನುಗಳ ಸಾಗಾಣಿಕೆ ಇವು ಸುಲಭ ಮತ್ತು ವೇಗ ಆಗುವವರೆಗೆ ಒಂದು ದೇಶದ ಕೃಷಿ, ಕೈಗಾರಿಕೆ ಮತ್ತು ವಾಣಿಜ್ಯ ಮುಂದೆ ಬರಲಾರವು. ಕೃಷಿಯಂತ್ರಗಳನ್ನು ಉತ್ಪಾದಿಸುವ ಕಾರ್ಖಾನೆಗಳು ಇದ್ದರಲ್ಲವೆ ಕೃಷಿಯಲ್ಲಿ ಹಿಂದಿನ ಕಾಲದ ರೀತಿಗಳನ್ನು ಬಿಡಲು ಸಾಧ್ಯ? ಎತ್ತಿನ ಗಾಡಿಗಳಷ್ಟೆ ಇದ್ದರೆ ರೈತ ಬೆಳೆದ ಬೆಳೆ ಅವನ ಹಳ್ಳಿ ಅಥವಾ ಪಕ್ಕದ ಊರಿನಲ್ಲೆ ಮಾರಾಟವಾಗಬೇಕು. ಬೆಳೆದ ಬೆಳೆ ದೂರದ ಊರಿಗೆ ಬೇಗನೆ, ಕೆಡದಂತೆ ಹೋಗಲು ಸಾಧ್ಯವಾದರೆ ಅವನಿಗೂ ಒಳ್ಳೆಯ ಬೆಲೆ ಸಿಕ್ಕುತ್ತದೆ, ದೇಶದ ಎಲ್ಲ ಭಾಗಗಳವರಿಗೂ ಎಲ್ಲ ಬೆಳೆಯೂ ಸಿಕ್ಕುತ್ತದೆ. ಕಾರ್ಖಾನೆಗಳಿಗೆ ಸಾಮಾನುಗಳು ಬೇಗ ಬೇಗ ಸರಬರಾಜಾಗಬೇಕು, ಕಾರ್ಖಾನೆ ಸಿದ್ಧಮಾಡಿದ ವಸ್ತುಗಳು ಬೇಗನೆ ಮೂಲೆಮೂಲೆಗಳ ಮಾರುಕಟ್ಟೆಗೆ ಸಾಗಬೇಕು. ಸಣ್ಣ ಕೈಗಾರಿಕೆಗಳಿಗಂತೂ ಇದು ತುಂಬಾ ಮುಖ್ಯ. ಎಲ್ಲ ಊರುಗಳಿಗೂ ಹಳ್ಳಿಗಳಿಗೂ ರೈಲುಗಳಿರುವುದಿಲ್ಲ. ಆದುದರಿಂದ ರಸ್ತೆಯ ಪ್ರಯಾಣ ಮತ್ತು ಸರಕು ಸಾಗಾಣಿಕೆ ದೇಶದ ಜೀವನದಲ್ಲಿ ಇಂದು ತುಂಬಾ ಮುಖ್ಯವಾಗಿದೆ. ಇದು ದಕ್ಷಿಣ ಭಾರತದಲ್ಲಿ ದಕ್ಷತೆಯಿಂದ ನಡೆಯಲು ದೂರ ದೃಷ್ಟಿಯಿಂದ, ನಿಷ್ಠೆಯಿಂದ ಶ್ರಮಿಸಿದವರು ಸುಂದರಂ ಅಯ್ಯಂಗಾರರು.

ಮಹಾವೃಕ್ಷ

ಸುಂದರಂರವರ ದೂರದರ್ಶಕ ಶಕ್ತಿ, ವ್ಯಾಪಾರ ಕುಶಲತೆ ಮತ್ತು ಅಸಾಧಾರಣ ಸ್ವಾನುಭವಗಳಿಂದಾಗಿ ಟಿ. ವಿ. ಎಸ್. ಮಹಾಸಂಸ್ಥೆಯು ಇಂದು ವಿದೇಶಿ ಕೈಗಾರಿಕಾ ಸಂಸ್ಥೆಗಳೊಡನೆ ಜಂಟಿಯಾಗಿ ಉತ್ಪಾದಿಸುತ್ತಿರುವ ಮೋಟರು ವಾಹನ ಭಾಗಗಳು ಹಲವಾರು. ಈ ಸರಕುಗಳ ರಫ್ತುಗಳಿಂದಾಗಿ ರಾಷ್ಟ್ರಕ್ಕೆ ಉಳಿಯುತ್ತಿರುವ ವಿದೇಶಿ ವಿನಿಮಯವೂ ಸಾಕಷ್ಟು ದೊಡ್ಡದು. ಟಿ.ವಿ.ಎಸ್. ಸಂಸ್ಥೆ ಹಲವು ವಿದೇಶೀ ಸಂಸ್ಥೆಗಳೊಡನೆ ಕೆಲಸ ಮಾಡುತ್ತಿದೆ. ಅದು ಹೀಗೆ ಸಹಕಾರದಿಂದ ತಯಾರಿಸುವ ವಾಹನಚಕ್ರಗಳು, ತಡೆಯಂತ್ರದ ಭಾಗಗಳು, ವಾಹನ ವಿದ್ಯುತ್ ಉಪಕರಣಗಳು, ಸ್ಪ್ರಿಂಗ್, ಸ್ಪ್ರಿಂಗ್ ತಟ್ಟೆಗಳು ಅರೇಬಿಯ, ಇರಾನ್, ಸಿಂಗಪುರ, ಥೈಲೆಂಡ್, ಶ್ರೀಲಂಕಾ, ಮಲೇಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಗೊಸ್ಲಾವಿಯ ಮತ್ತು ಇಂಗ್ಲೆಂಡ್ ದೇಶಗಳಿಗೆ ರಫ್ತಾಗುತ್ತವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತಯಾರಾಗುವ ಈ ಸರಕುಗಳಿಗೆ ವಿಶೇಷ ಬೇಡಿಕೆ ಇದ್ದು ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆದಿದೆ. ಮಧುರೆಯಲ್ಲಿರುವ ಸಿಂಗರ್-ಟಿ.ವಿ.ಎಸ್. ಲಿಮಿಟೆಡ್ ಎಂಬುದು ಹೊಲಿಗೆ ಯಂತ್ರಗಳ ಸೂಜಿಗಳನ್ನು ನಿರ್ಮಿಸಿ ಭಾರತಕ್ಕೆಲ್ಲ ಸರಬರಾಜು ಮಾಡುವುದಲ್ಲದೆ ದೂರ ಪ್ರಾಚ್ಯ ರಾಷ್ಟ್ರಗಳಿಗೂ ಕಳುಹಿಸಿಕೊಡುತ್ತದೆ.

ಹೀಗೆ ಈ ಶತಮಾನದ ಪ್ರಾರಂಭದಲ್ಲಿ ಸುಂದರಂ ಅವರು ನೆಟ್ಟ ಸಣ್ಣ ಸಸಿ ಇಂದು ಮಹಾವೃಕ್ಷವಾಗಿ ನೂರಾರು ರೆಂಬೆ ಗಳನ್ನು ಹರಡಿದೆ. ಸಾವಿರಾರು ಮಂದಿಗೆ ಉದ್ಯೋಗಗಳನ್ನು ಕಲ್ಪಿಸಿಕೊಟ್ಟಿದೆ.

ಪ್ರಯಾಣಿಕರನ್ನೂ ಸರಕುಗಳನ್ನೂ ಕೊಂಡೊಯ್ಯುವ ಸಂಸ್ಥೆ ತನ್ನ ಲಾಭವನ್ನಷ್ಟೆ ನೋಡಿಕೊಳ್ಳಬಾರದು, ಪ್ರಯಾಣಿಕರ ಮತ್ತು ಸಾಮನುಗಳನ್ನು ಒಪ್ಪಿಸಿದವರ ಹಿತವನ್ನೂ ಲಕ್ಷಿಸಬೇಕು ಎಂಬುದು ಸುಂದರಂ ಅವರು ಅನುಸರಿಸಿದ ಮೂಲ ಸೂತ್ರ. ಬಸ್‌ಗಳು ಗೊತ್ತುಮಾಡಿದ ಕಾಲಕ್ಕೆ ಸರಿಯಾಗಿ ಹೊರಡುವುದು, ಗೊತ್ತುಮಾಡಿದ ಕಾಲಕ್ಕೆ ಸರಿಯಾಗಿ ಸ್ಥಳವನ್ನು ಸೇರುವುದು, ಸರಕುಗಳನ್ನು ಆದಷ್ಟು ವೇಗವಾಗಿ, ಸುರಕ್ಷಿತವಾಗಿ ಸಾಗಿಸುವುದು, ಸಂಸ್ಥೆಗೆ ಬರುವ ಸಾರ್ವಜನಿಕರನ್ನು ಗೌರವದಿಂದ ಕಾಣುವುದು ಇವೆಲ್ಲ ಅಗತ್ಯ ಎಂದು ಅವರು ಸಿಬ್ಬಂದಿಯವರಿಗೆ ಹೇಳುತ್ತಿದ್ದರು, ಅವರು ಹಾಗೆಯೇ ನಡೆದುಕೊಳ್ಳುವಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳುತ್ತಿದ್ದರು. ಇಂದು ಟಿ.ವಿ.ಎಸ್.ನ ಎಲ್ಲ ಸಂಸ್ಥೆಗಳೂ ಈ ಆದರ್ಶಗಳನ್ನು ಆಚರಿಸಲು, ಶ್ರಮಿಸಲು ಅವರ ನೆನಪು ಸ್ಫೂರ್ತಿಯಾಗಿದೆ.

ರಸ್ತೆ ಸಾರಿಗೆಯ ಭೂಪಟದಲ್ಲಿ ದಕ್ಷಿಣ ಭಾರತವನ್ನು ಉನ್ನತವಾಗಿ, ವರ್ಣಮಯವಾಗಿ ಗುರ್ತಿಸಿದ ಪ್ರತಿಭಾಶಾಲಿ ಸುಂದರಂ ಅವರು. ‘ದಕ್ಷಿಣ ಭಾರತದ ಹೆನ್ರಿ ಫೋರ್ಡ್’ ಎಂಬುದು ಅವರಿಗೆ ಸಲ್ಲುವ ಸಾರ್ಥಕ ಪ್ರಶಸ್ತಿ. ರಾಷ್ಟ್ರ ನಿರ್ಮಾಪಕರ ಸಾಲಿನಲ್ಲಿ ನಿಲ್ಲುವ ಸುಂದರಂರವರ ಪರಿಶ್ರಮದ ಬದುಕು ಕೈಗಾರಿಕೋದ್ಯಮಿಗಳಿಗೆ ಚೇತನದಾಯಕ. ಸುಂದರಂ ಎಂಬುದು ಕೇವಲ ಹೆಸರಲ್ಲ, ರಸ್ತೆ ಸಾರಿಗೆಯ ಹಾಗೂ ಮೋಟರು ಕೈಗಾರಿಕೆಗಳ ವಿಶಾಲ ವಲಯದಲ್ಲಿ ಭವ್ಯವಾಗಿ ನಿಂತಿರುವ ದೀಪಸ್ತಂಭ.