ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ೨೬-೧೦-೧೯೪೦ ರಂದು ಜನಿಸಿದವರು ಶಚೀದೇವಿ. ತಾಯಿ ಲೋಕ ಜನನಿಯವರಲ್ಲಿ ಸಂಗೀತದ ಪ್ರಾರಂಭಿಕ ಶಿಕ್ಷಣ ಪಡೆದು ಮುಂದೆ ಎ.ಎಚ್‌. ಶ್ರೀನಿವಾಸಮೂರ್ತಿ ಬೆಳಕವಾಡಿ ವರದರಾಜಯ್ಯಂಗಾರ್, ಸಿ.ಪಿ. ರಂಗಸ್ವಾಮಿ ಅಯ್ಯಂಗಾರ್ ಅವರುಗಳಲ್ಲಿ ಮುಂದುವರೆಸಿದರು. ಶಚೀದೇವಿ ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೈ ಅವರಲ್ಲಿ ಉನ್ನತ ಶಿಕ್ಷಣ ಪಡೆದು ಸಂಗೀತ ವಿದ್ವತ್‌ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ನಂತರ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಸಂಗೀತ ಶಾಸ್ತ್ರದಲ್ಲಿ ಸ್ನಾತಕೋತ್ತರ

ಪದವಿಯನ್ನು ಪಡೆದರು. ಎಂ.ಎಸ್‌. ಶೆಲ್ವಪುಳ್ಳೆ ಅಯ್ಯಂಗಾರ್ ಮತ್ತು ರಾಳ್ಳಪಲ್ಲಿ ಅನಂತ ಕೃಷ್ಣಶರ್ಮರವರ ಮಾರ್ಗದರ್ಶನದ ಲಾಭವನ್ನೂ ಪಡೆದಿದ್ದಾರೆ.

ಶಚೀದೇವಿ ತಮ್ಮ ಸೋದರಿ ಟಿ. ಶಾರದಾ ಅವರೊಡನೆ ಪ್ರತಿಷ್ಠಿತ ಸಂಘ ಸಂಸ್ಥೆ, ಸಭೆಗಳ ಆಶ್ರಯದಲ್ಲಿ ಯುಗಳ ಗಾಯನದ ಕಾರ್ಯಕ್ರಮಗಳನ್ನು ಅನೇಕ ಬಾರಿ ನೀಡಿದ್ದಾರೆ. ಶಚೀದೇವಿ ವೀಣಾ ವಾದನದಲ್ಲೂ ಪರಿಣತರಾಗಿದ್ದು ಇವರ ವಾದನ ಆಕಾಶವಾಣಿಯಿಂದ ಪ್ರಸಾರವಾಗಿದೆ.

‘ಕರ್ನಾಟಕ ಸಂಗೀತದಲ್ಲಿ ಸಂಗೀತ ರಚನೆಗಳ  ಬೆಳವಣಿಗೆ’ ಎಂಬ ಇವರ ಅಧ್ಯಯನದ ದೀರ್ಘ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್‌ ಪದವಿ ದೊರಕಿದೆ. ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ  ನಿವೃತ್ತಿ ಪಡೆದಿರುವ ಡಾ|| ಶಚೀದೇವಿ ಹಲವಾರು ಸಂಶೋಧಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಸೂಳಾದಿಗಳು, ಅಪೂರ್ವವಾದ ವರ್ಣಗಳು, ಸಂಗೀತದ ಸಾಂಪ್ರದಾಯಿಕ ಮಟ್ಟುಗಳು ಇತ್ಯಾದಿ ವಿಷಯಗಳಲ್ಲಿ ಇವರು ನಡೆಸಿರುವ ವಿಶೇಷ ಅಧ್ಯಯನ ಮಹತ್ತರವಾದುದು.

ರಾಜ್ಯ ಸರ್ಕಾರವು ನಡೆಸುವ ವಿಶೇಷ ಸಂಗೀತ ಪರೀಕ್ಷೆಗಳಿಗಾಗಿ ಪಠ್ಯ ವಸ್ತು ಹಾಗೂ ಪುಸ್ತಕಗಳ ತಯಾರಿಕೆಯಲ್ಲಿ ಇವರ ಪಾತ್ರ ಹಿರಿದಾದುದು. ‘ಸಂಗೀತ ಕಲಾ ಭೂಷಣಿ’, “ಕರ್ನಾಟಕ ಕಲಾ ಶ್ರೀ”, “ಗಾನ ಕಲಾ ಭೂಷಣ” ಇತ್ಯಾದಿ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿರುವ ಡಾ|| ಶಚೀದೇವಿಯವರ ಉತ್ತಮ ಅಧ್ಯಾಪಕಿಯಾಗಿ ಹಲವಾರು ಆಸಕ್ತ ಸಂಗೀತ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. “ಕರ್ನಾಟಕ ಸಂಗೀತ ದರ್ಪಣ” ಎಂಬ ಲಕ್ಷಣ – ಲಕ್ಷ್ಯಗಳನ್ನೊಳಗೊಂಡ ಸಂಗೀತ ಪುಸ್ತಕ ಇವರ ಪರಿಶ್ರಮದ ಫಲ.