ನಾದಮುನಿಗಳ ವಂಶಸ್ಥರಾಗಿ ವೇದಾಧ್ಯಾಯನ ಸಂಪನ್ನರಾಗಿ ‘ಅತ್ರಿ’ ಎಂಬ ಬಿರುದಿನಿಂದ ಭೂಷಿತರಾಗಿದ್ದ ತಿರು ನಾರಾಯಣಾಚಾರ್ಯರ ಮೊಮ್ಮಗಳಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ೧೮-೯-೧೯೩೮ ರಂದು ಜನಿಸಿದವರು ಶಾರದಾ. ಗಾಯನ, ವೀಣಾ ವಾದನಗಳೆರಡರಲ್ಲೂ ಪರಿಣತಿ ಪಡೆದು ಶಾಸ್ತ್ರಭಾಗದಲ್ಲೂ ಅದ್ವಿತೀಯ ಪಾಂಡಿತ್ಯ ಪಡೆದಿರುವ ವಿದ್ವಾಂಸರು. ಶಂಕರನಾರಾಯಣ ಶಾಸ್ತ್ರಿ ಮತ್ತು ರಂಗಸ್ವಾಮಿ ಅಯ್ಯಂಗಾರರಲ್ಲಿ ವೀಣೆ ಹಾಗೂ ಬೆಳಕವಾಡಿ ವರದರಾಜ ಅಯ್ಯಂಗಾರ್, ಶೆಲ್ವ ಪುಳ್ಳೆ ಅಯ್ಯಂಗಾರ್ ಅವರಲ್ಲಿ ಗಾಯನವನ್ನು ಅಭ್ಯಾಸ ಮಾಡಿದ ಇವರಿಗೆ ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೆ, ರಾಳ್ಲಪಲ್ಲಿ, ಅನಂತ ಕೃಷ್ಣಶರ್ಮರ ಮಾರ್ಗದರ್ಶನದ ಲಾಭವೂ ಸೇರಿತು.

ಮಹಾರಾಷ್ಟ್ರ ಮಹಿಳಾ ವಿದ್ಯಾಲಯ (ಈಗಿನ ವಾಸವಿ ವಿದ್ಯಾನಿಕೇತನ) ದಲ್ಲಿ ಸಂಗೀತ ಅಧ್ಯಾಪಕಿಯಾಗಿ ವೃತ್ತಿ ಆರಂಭಿಸಿದ ಇವರು ಮಹಾರಾಣಿ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ, ವಿಭಾಗದ ಮುಖ್ಯಸ್ಥೆಯಾಗಿ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿ ಪಡೆದ ನಂತರವೂ ಉತ್ತಮ ಗುರುವಾಗಿ ಇವರು ಶಿಕ್ಷಣ ನೀಡುತ್ತಿರುವ ವಿದ್ಯಾರ್ಥಿಗಳ ತಂಡ ಬಹಳ ಹಿರಿದು.

ಸಹೋದರಿ ಡಾ|| ಶಚೀದೇವಿಯವರೊಡನೆ ಅನೇಕ ಸಂಗೀತದ ಲಕ್ಷ್ಯ-ಲಕ್ಷಣಗಳ ಪುಸ್ತಕಗಳನ್ನು ಲೇಖನಿ ಪ್ರಕಟಿಸಿದ್ದಾರೆ. ಆಕಾಶವಾಣಿಯ ಮೂಲಕ ಇವರ ವೀಣಾವಾದನ ಮೂಡಿ ಬರುತ್ತಿರುತ್ತದೆ. ಸಂಗೀತ ಸಮ್ಮೇಳನಗಳಲ್ಲಿ ಸೋದಾಹರಣ ಭಾಷಣ-ಪ್ರತ್ಯಕ್ಷಿಕೆಗಳನ್ನು ನೀಡುತ್ತಿರುತ್ತಾರೆ. ಇವರ ಹಲವಾರು ಲೇಖನಗಳು ಅನೇಕ ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾಗಿವೆ.

ಕರ್ನಾಟಕ ಗಾನಕಲಾ ಪರಿಷತ್ತು, ಕರ್ನಾಟಕ ಗಮಕ ಕಲಾ ಪರಿಷತ್ತಿನ ಪರಿಣತರ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ‘ಶ್ರುತಿ ಟ್ರಸ್ಟ್‌’ ಇವರ ಕಾರ್ಯಕ್ಷೇತ್ರವಾಗಿ ಸಂಗೀತ ಸೇವೆ ಸಲ್ಲಿಸುವ ಮಾಧ್ಯಮವಾಗಿದೆ. ಹಲವಾರು ಪ್ರತಿಷ್ಠಿತ ಸಭೆ-ಸಂಸ್ಥೆಗಳಿಂದ ಸನ್ಮಾನಿತರಾಗಿರುವ ಶ್ರೀಮತಿಯವರಿಗೆ ಸಂದಿರುವ ಪ್ರಶಸ್ತಿಗಳಲ್ಲಿ ‘ಗಾನ ಕಲಾ ಭೂಷಿಣಿ’, ‘ಕರ್ನಾಟಕ ಕಲಾಶ್ರೀ’ ‘ಗಾಂಧರ್ವ ವಿದ್ಯಾನಿಧಿ’ ಮುಖ್ಯವಾದುವು.