ಹದಿನಾಲ್ಕು ವರ್ಷದ ಹುಡುಗಿ. ಎಂಟನೇ ತರಗತಿಯಲ್ಲಿ ಓದುತ್ತಿದ್ದೇನೆ. ಓದಿನಲ್ಲಿ ಮುಂದಿದ್ದೇನೆ. ಈಗ ಸುಮಾರು ಒಂದು ವರ್ಷದ ಹಿಂದಿನ ಮಾತು. ರಾತ್ರಿ ಎಲ್ಲರ ಊಟ ಆದ ಮೇಲೆ ತಟ್ಟೆ ಎತ್ತಲು ತೊಡಗುತ್ತಿದ್ದಂತೆ ಕಿವಿಯಲ್ಲಿ ಇದ್ದಕ್ಕಿದಂತೆ ಗುಂಯ್ ಎಂಬ ಶಬ್ದ ಕೇಳಿಬಂತು. ಒಂದು ರೀತಿ ಭಯ ಆವರಿಸಿತು. ಬಕೆಟ್ ಕೆಳಕ್ಕಿಟ್ಟರೂ ಸ್ಫೋಟದ ಶಬ್ದದಂತೆ ಕೇಳುತ್ತಿತ್ತು.

ಹೊರಗೆ ಬಂದು ಎಲ್ಲರೊಡನೆ ಕುಳಿತೆ. ಯಾರು ಏನೇ ಕೇಳಿದರೂ , ಎಂದಷ್ಟೇ ಉತ್ತಿರಿಸಿದೆ. ತಲೆ ಸುತ್ತಿಬಂದ ಅನುಭವ. ಎಲ್ಲವನ್ನೂ ಎಲ್ಲೋ ಈ ಹಿಂದೆಯೇ ನೋಡಿದಂತೆ ಭಾಸವಾಗುತ್ತಿತ್ತು. ಮತ್ತೇನಾಯಿತೋ ಗೊತ್ತಿಲ್ಲ. ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ.

ವೈದ್ಯರು ಏನೋ ಚಿಕಿತ್ಸೆ ನೀಡಿ ಮನೆಗೆ ಕಳಿಸಿದರು. ಇದಾದನಂತರ ಮತ್ತೊಮ್ಮೆ ಹೀಗೇ ಆಯಿತು. ಇದರ ಜೊತೆಗೆ ಒಮ್ಮೊಮ್ಮೆ ಕ್ಲಾಸಿನಲ್ಲಿ ಭಯಂಕರ ತಲೆನೋವು ಬರುತ್ತದೆ.

ಈ ಸಮಸ್ಯೆಯನ್ನು ನೀವು ಅಲಕ್ಷಿಸುವ ಹಾಗಿಲ್ಲ. ಕೂಡಲೇ ಸಮೀಪದ ಮನೋರೋಗ ತಜ್ಞರನ್ನೋ ಅಥವಾ ನರರೋಗ ತಜ್ಞರನ್ನೋ ಕಂಡು ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆಯುವ ಅವಶ್ಯಕತೆ ಇದೆ. ಸ್ವತಃ ಪರೀಕ್ಷೆ ಮಾಡದೆ ನಿಮ್ಮ ಸಮಸ್ಯೆಗೆ ನಿರ್ದಿಷ್ಟ ಉತ್ತರ ಕೊಡಲಾಗದಿದ್ದರೂ ಇದು ಪ್ರಾಯಶಃ ಸಣ್ಣ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಒಂದು ಬಗೆಯ ಅಪಸ್ಮಾರದ ರೋಗಲಕ್ಷಣ.

ಇದನ್ನು ನಾವು ’ಟೆಂಪೋರಲ್ ಲೋಬ್ ಅಪಸ್ಮಾರ’ ಎಂದು ಕರೆಯುವುದುಂಟು. ಈ ಖಾಯಿಲೆ ಇತರೇ ಬಗೆಯ ಅಪಸ್ಮಾರಗಳಿರುವಂತೆ ಮೆದುಳಿನಲ್ಲಿ ನಡೆಯುತ್ತಿರುವ ವಿದ್ಯುಚ್ಛಕ್ತಿಯ ಲಯ ಗತಿಯ ಏರುಪೇರಿನಿಂದ ಈ ಪರಿಸ್ಥಿತಿ ಉಂಟಾಗುತ್ತದೆ. ಮೆದುಳಿನ ಜೀವಾಣುಗಳಲ್ಲಿ ಅಲ್ಪ ಪ್ರಮಾಣದ ವಿದ್ಯುಚ್ಛಕ್ತಿ ಇದ್ದು ಅದು ಬಲಗಡೆ ಮತ್ತು ಎಡಗಡೆ ಅರೆಗೋಳದಲ್ಲಿ ಸಮತೋಲನದಲ್ಲಿ ಇರಬೇಕಾಗುತ್ತದೆ. ವಿದ್ಯುತ್ ಸಂಚಾರವಾಗುತ್ತಿರುವಾಗ ಅದು ಮೆದುಳಿನಲ್ಲಿನ ಆಘಾತಗೊಂಡ ಅಥವಾ ಮರಣಿಸಿದ ಜೀವಾಣುವಿಗೆ ಬಂದ ಕೂಡಲೇ ವಿದ್ಯುಚ್ಛಕ್ತಿ ಶಾರ್ಟ್‌‌ಸರ್ಕ್ಯೂಟ್ ಆಗುವುದರಿಂದ ಅಪಸ್ಮಾರ ಕಾಣಿಸಿಕೊಳ್ಳುತ್ತದೆ.

ಮೆದುಳಿನಲ್ಲಿ ಟೆಂಪೋರಲ್ ಲೋಬ್ ಎನ್ನುವ ಭಾಗವೊಂದಿದ್ದು ವಿದ್ಯುಚ್ಛಕ್ತಿ ಸೋರುವಿಕೆ ಈ ವಲಯದಲ್ಲಿದ್ದರೆ ಈ ರೀತಿಯ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಇತರೆ ಅಪಸ್ಮಾರದಲ್ಲಿ ಕಾಣಿಸಿಕೊಳ್ಳುವ ಪ್ರಜ್ಞಾಹೀನತೆ, ಕೈಕಾಲು ಸೆಳೆತ ಬಾಯಲ್ಲಿ ಜೊಲ್ಲು ಸುರಿಯುವುದು, ನಾಲಿಗೆ ಕಚ್ಚುವುದು, ಮೂತ್ರ ವಿಸರ್ಜನೆ, ವಾಂತಿಯಾಗುವಿಕೆ ಇವುಗಳಲ್ಲದೆ ವಿಭಿನ್ನ ವಿಲಕ್ಷಣ ರೋಗಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಪ್ರಮುಖವಾದುದು ದೇಜಾವ್ಯೂ ಮತ್ತು ಜಾಮೈಸು ಪ್ರಕ್ರಿಯೆಗಳು.

ಇದರಲ್ಲಿ ತೀರಾ ಪರಿಚಿತ ವ್ಯಕ್ತಿಗಳು ಅಥವಾ ಸ್ಥಳ, ಸಂದರ್ಭ ತುಂಬಾ ಅಪರಿಚಿತವಾಗಿ ಕಾಣಿಸಿಕೊಳ್ಳುವುದು, ಅದೇ ರೀತಿ ತುಂಬಾ ಅಪರಿಚಿತ ವ್ಯಕ್ತಿಗಳು ತೀರಾ ಆತ್ಮೀಯರ ಹಾಗೆ. ಅಪರಿಚಿತ ಸ್ಥಳ, ಸಂದರ್ಭಗಳು ಬಹಳ ಹಿಂದಿನಿಂದಲೂ ಬಳಕೆಯಲ್ಲಿರುವ ಸ್ಥಳ, ಸಂದರ್ಭದ ಅನುಭವ ಎಂದೆನಿಸಬಹುದು. ತುಂಬ ದೊಡ್ಡ ವಸ್ತು ಸೂಕ್ಷ್ಮದರ್ಶಕದಲ್ಲಿ ಕಾಣುವ ಕನಿಷ್ಠ ವಸ್ತುವಿನ ಹಾಗೆಯೂ ಕಾಣಿಸಿಕೊಳ್ಳಬಹುದು ಮತ್ತು ತೀರಾ ಸಣ್ಣದಾಗಿರುವ ವಸ್ತು ತುಂಬಾ ದೊಡ್ಡದಾಗಿಯೂ ಕಾಣಿಸಿಕೊಳ್ಳಬಹುದು. ಇದೇ ಅಪಸ್ಮಾರವು ಮರಕಳಿಸುವುದು. ಮತ್ತೆ ಮತ್ತೆ ಕಣ್ಣು ಮಿಟುಕಿಸುವುದು, ಕೈಯಲ್ಲಿರುವ ವಸ್ತುವನ್ನು ಅನಾಮತ್ತಾಗಿ ಬೀಳಿಸುವುದು, ದೇಹದ ಯಾವುದೇ ಒಂದು ಭಾಗದಲ್ಲಿ ಶಕ್ತಿಹೀನತೆ ಎನಿಸುವುದು ಎಲ್ಲವೂ ಕ್ಷಣಿಕವಾಗಿ ಕಾಣಿಸಿಕೊಂಡು ಮಾಯವಾದಾಗ, ರೋಗಿ ತದನಂತರ ಸಂಪೂರ್ಣ ಸ್ವಾಸ್ಥನಾದಾಗ ಟೆಂಪೋರಲ್ ಲೋಬ್ ಅಪಸ್ಮಾರ ಅಥವಾ ರಿಫ್ಲೆಕ್ಸ್ (reflex) ಅಪಸ್ಮಾರ ರೋಗ ಎಂದು ರೋಗ ನಿರ್ಧಾರ ಮಾಡಬಹುದಾಗಿದೆ.

ಕಿವಿಯಲ್ಲಿ ಗುಂಯ್‌ಗುಡುವುದು, ಕಣ್ಣಿನಲ್ಲಿ ಮಿಂಚು ಕಾಣಿಸಿಕೊಳ್ಳುವುದು ಮತ್ತು ಕೆಲವು ಬಾರಿ ಕಣ್ಣಿನ ಮುಂದೆ ಕ್ಷಣಿಕವಾಗಿ ಯಾವುದೇ ಒಂದು ದೃಶ್ಯಾವಳಿ ಕಂಡು ಮಾಯಾವಾಗುವುದು ಸಹ ಈ ಸ್ಥಿತಿಯಲ್ಲಿ ಸರ್ವೇಸಾಮಾನ್ಯ, ಕೆಲವೊಮ್ಮೆ ಈ ಅಟ್ಯಾಕ್‌ಗಳು ನಿರ್ದಿಷ್ಟ ಸಮಯದಲ್ಲಿಯೇ ಕಾಣಿಸಿಕೊಳ್ಳುತ್ತವೆ. ಊಟ ಮಾಡುವ ಸಂದರ್ಭದಲ್ಲಿ, ಮಲಗಿದೊಡನೆ, ನಿದ್ರೆಯ ಆಳಕ್ಕೆ ಇಳಿಯುತ್ತಿರುವಾಗ, ಅಥವಾ ಮುಂಜಾನೆ ಏಳುವ ಸಂದರ್ಭಗಳಲ್ಲಿ ಈ ಅಟ್ಯಾಕ್‌ಗಳು ಬರುವುದು ಸಾಮಾನ್ಯ. ನಿಮಗೆ ಕಾಣಿಸಿಕೊಳ್ಳುತ್ತಿರುವ ತಲೆನೋವು ಸಹ ಅಪಸ್ಮಾರದ ಒಂದು ಭಾಗವಾಗಿರಬಹುದು ಇಲ್ಲವೇ ಅಪಸ್ಮಾರದಿಂದ ಆದ ಮೆದುಳಿನ ಆಘಾತದಿಂದಲೂ ಇರಬಹುದು.

ಇದಕ್ಕೆ ಖಚಿತವಾದ ಚಿಕಿತ್ಸಾಕ್ರಮಗಳುಂಟು. ಆದರೆ ಇದಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ಕೆಲವೇ ವರ್ಷಗಳು ಒಮ್ಮೆಯೂ ಬಿಡದೇ ನಿಖರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಮಾತ್ರೆಗಳನ್ನು ಮನೆಯಲ್ಲಿ ಜೋಪಾನವಾಗಿಟ್ಟುಕೊಂಡು ನಿಮಗೆ ಕೊಟ್ಟರೆ ಒಳಿತು. ಮೆದುಳಿನ ಆಘಾತದಿಂದ ಆಗಬಹುದಾದ ಮರವಿನಿಂದ ನೀವು ನಿಖರವಾಗಿ ಮಾತ್ರೆಗಳನ್ನಿಟ್ಟುಕೊಂಡು ತೆಗೆದುಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ. ಇದಕ್ಕೆ ಪಥ್ಯ ಪರಿಪಾಠಗಳೇನೂ ಇಲ್ಲ. ಸಾಮಾನ್ಯವಾಗಿ ಇದರ ಚಿಕಿತ್ಸೆಗಾಗಿ ಕಾರ್ಬೋಮಿಜಪೀನ್ ೨೦ ಮಿಲಿಗ್ರಾಂ ಔಷಧಿಯನ್ನು ೫ ರಿಂದ ೮ ವರ್ಷಗಳ ಕಾಲ ಸೇವಿಸಬೇಕಾಗುತ್ತದೆ. ಯಾವುದಕ್ಕೂ ನಿಮ್ಮ ವೈದ್ಯರ ಸಲಹೆಯ ನಂತರ ಚಿಕಿತ್ಸೆಯನ್ನು ಪ್ರಾರಂಭಿಸಿ.