ಟೆನಿಸ್ ಇಬ್ಬರು ಆಟಗಾರರು (ಸಿಂಗಲ್ಸ್) ಅಥವಾ ತಲಾ ಇಬ್ಬರು ಆಟಗಾರರ ಎರಡು ತಂಡಗಳು (ಡಬಲ್ಸ್) ಆಡುವ ಕ್ರೀಡೆ. ಆಟಗಾರರು ತಂತಿಗಳಿಂದ ಕಟ್ಟಲಾಗಿರುವ ರಾಕೆಟ್ ನಿಂದ ಒಳಗೆ ಟೊಳ್ಳಿರುವ ರಬ್ಬರ್ ಚೆಂಡನ್ನು ಹೊಡೆಯುತ್ತಾರೆ. ಇಬ್ಬರು ಆಟಗಾರರ ನಡುವೆ ಅಂಕಣವನ್ನು ಬಲೆಯಿಂದ ಪ್ರತ್ಯೇಕಿಸಲಾಗಿರುತ್ತದೆ. ಆಧುನಿಕ ಯುಗದ ಟೆನಿಸ್ ಲಾನ್ ಟೆನಿಸ್ ರೂಪದಲ್ಲಿ ಯುನೈಟೆಡ್ ಕಿಂಗ್ ಡಮ್ ನಲ್ಲಿ 19ನೇ ಶತಮಾನದ ಕೊನೆಯ ಭಾಗದಲ್ಲಿ ಜನಪ್ರಿಯವಾಯಿತು. ಇದು ಇಂಗ್ಲಿಷ್ ಮಾತನಾಡುವ ಜನರಿಂದ ಜಗತ್ತಿನೆಲ್ಲೆಡೆ ಹರಡಿತು. ಇದೊಂದು ಒಲಿಂಪಿಕ್ಸ್ ಕ್ರೀಡೆಯಾಗಿದ್ದು ಸಮಾಜದ ಎಲ್ಲಾ ವರ್ಗ, ವಯೋಮಾನದವರು ಆಡುತ್ತಾರೆ. 1890ರಿಂದೀಚೆಗೆ ಟೆನಿಸ್ ನ ನಿಯಮದಲ್ಲಿ ಬದಲಾವಣೆಯಾಗಿದ್ದು ಬಹಳ ವಿರಳ. ಎರಡು ಅಪವಾದಗಳೆಂದರೆ, 1908ರಿಂದ 1960ರವರೆಗೆ ಆಟಗಾರ ಸರ್ವ್ ಮಾಡುವಾಗ ಒಂದು ಕಾಲು ನೆಲದಲ್ಲೇ ಇರಬೇಕು ಎಂಬ ನಿಯಮ ರೂಪಿಸಲಾಗಿತ್ತು. 1970ರ ದಶಕದಲ್ಲಿ ಟೈಬ್ರೇಕರ್ ನಿಯಮ ಅಳವಡಿಸಲಾಯಿತು. ಇತ್ತೀಚೆಗೆ ವೃತ್ತಿಪರ ಟೆನಿಸ್ ನಲ್ಲಿ ಲೈನ್ ತೀರ್ಪುಗಳ ವಿರುದ್ಧ ಹಾಕ್-ಐ ತಂತ್ರಜ್ಞಾನದ ಬಳಕೆ ನಿಯಮ ಅಳವಡಿಸಿಕೊಳ್ಳಲಾಗಿದೆ.

ಟೆನಿಸ್ ಪ್ರೇಕ್ಷಕ ಕ್ರೀಡೆಯಾಗಿ ಭಾರೀ ಜನಪ್ರಿಯವಾಗಿದೆ. ಪ್ರತೀ ವರ್ಷ ನಾಲ್ಕು ಗ್ರಾಂಡ್ ಸ್ಲಾಂ ಟೂರ್ನಿಗಳು (ಮೇಜರ್ ಗಳೆಂದೂ ಕರೆಯುತ್ತಾರೆ) ಟೆನಿಸ್ ವೇಳಾಪಟ್ಟಿಯ ಭಾಗವಾಗಿರುತ್ತದೆ. ಅವುಗಳು ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಯುಎಸ್ ಓಪನ್ .

ಲಂಡನ್ ನಲ್ಲಿ ಮೊದಲ ವಿಂಬಲ್ಡನ್ ಚಾಂಪಿಯನ್ ಷಿಪ್ 1877ರಲ್ಲಿ ಆರಂಭವಾಯಿತು. ಈಗ ಯುಎಸ್ ಓಪನ್ ಎಂದು ಕರೆಯಲಾಗುವ ಯುಎಸ್ ರಾಷ್ಟ್ರೀಯ ಪುರುಷರ ಸಿಂಗಲ್ಸ್ ಚಾಂಪಿಯನ್ ಷಿಪ್ 1881ರಲ್ಲಿ ಪ್ರಾರಂಭವಾಯಿತು. ಅದೇ ರೀತಿ ಮೊದಲ ಫ್ರೆಂಚ್ ಓಪನ್ ನಡೆದಿದ್ದು 1891ರಲ್ಲಿ. ಆಸ್ಟ್ರೇಲಿಯನ್ ಓಪನ್ 1905ರಲ್ಲಿ ಮೊದಲು ನಡೆಯಿತು.

ಸದ್ಯ ಅಂತಾರಾಷ್ಟ್ರೀ ಟೆನಿಸ್ ಸಂಸ್ಥೆ (ಐಟಿಎಫ್) ಎಂದು ಕರೆಯಲಾಗುವ ಅಂತಾರಾಷ್ಟ್ರೀಯ ಲಾನ್ ಟೆನಿಸ್ ಒಕ್ಕೂಟದ ನಿಯಮಾವಳಿಗಳನ್ನು 1924ರಲ್ಲಿ ರೂಪಿಸಲಾಯಿತು. ಆದರೆ, ಅದೇ ವರ್ಷ ಒಲಿಂಪಿಕ್ಸ್ ನಿಂದ ಟೆನಿಸ್ ಕೈಬಿಡಲಾಯಿತು. ಇದಾದ 60 ವರ್ಷಗಳ ಬಳಿಕ 21 ವಯೋಮಿತಿಯ ಪ್ರದರ್ಶನ ಕ್ರೀಡೆಯಾಗಿ ಟೆನಿಸ್ ಒಲಿಂಪಿಕ್ಸ್ ಗೆ ಮರಳಿತು. 1988ರ ಸಿಯೋಲ್ ಒಲಿಂಪಿಕ್ಸ್ ನಿಂದ ಟೆನಿಸ್ ಪೂರ್ಣ ಪ್ರಮಾಣದಲ್ಲಿ ಪದಕ ಕ್ರೀಡೆಯೆನಿಸಿತು.

ಪುರುಷರ ರಾಷ್ಟ್ರೀಯ ತಂಡಗಳ ಡೇವಿಸ್ ಕಪ್ ಮೊದಲು ನಡೆದಿದ್ದು 1900ರಲ್ಲಿ. ಇದಕ್ಕೆ ತತ್ಸಮಾನವಾದ ಮಹಿಳೆಯರ ಟೂರ್ನಿ ಫೆಡ್ ಕಪ್ (ಫೆಡರೇಷನ್ ಕಪ್) ಐಟಿಎಫ್ ನ 50ನೇ ವರ್ಷಾಚರಣೆ ಸಂದರ್ಭದಲ್ಲಿ 1963ರಲ್ಲಿ ಆರಂಭಿಸಲಾಯಿತು.

1926ರಲ್ಲಿ ಸಿಸಿ ಪೈಲ್ ಎನ್ನುವವರು ಕೆಲವು ಅಮೆರಿಕ ಹಾಗೂ ಫ್ರೆಂಚ್ ಟೆನಿಸ್ ಆಟಗಾರರ ನೆರವಿನಿಂದ ಪ್ರಪ್ರಥಮ ವೃತ್ತಿಪರ ಟೂರ್ ಪ್ರಾರಂಭಿಸಿದರು. ಇದರಲ್ಲಿ ಭಾಗವಹಿಸಿದ ಖ್ಯಾತನಾಮರೆಂದರೆ ಅಮೆರಿಕದ ವಿನ್ನಿ ರಿಚರ್ಡ್ಸ್ ಮತ್ತು ಫ್ರೆಂಚ್ ಮಹಿಳೆ ಸುಝಾನ್ ಲೆಂಗ್ಲೇನ್. ಆಟಗಾರರು ವೃತ್ತಿಪರರಾದ ಮೇಲೆ ಅವರು ಗ್ರಾಂಡ್ ಸ್ಲಾಂ (ಅಮೆಚೂರ್) ಟೂರ್ನಿಗಳಲ್ಲಿ ಆಡುವಂತಿರಲಿಲ್ಲ.

1968ರಲ್ಲಿ ವಾಣಿಜ್ಯ ಒತ್ತಡಗಳು ಹಾಗೂ ಕೆಲವು ಅಮೆಚೂರ್ ಆಟಗಾರರು ಗುಪ್ತವಾಗಿ ಹಣ ಪಡೆದು ಆಡುತ್ತಾರೆ ಎಂಬ ವದಂತಿಗಳು ಹರಡಿದ ಬಳಿಕ ಮುಕ್ತ ಟೆನಿಸ್ ಯುಗ ಆರಂಭವಾಯಿತು. ಅದರಿಂದಾಗಿ ಎಲ್ಲಾ ಆಟಗಾರರು ಎಲ್ಲಾ ಟೂರ್ನಿಗಳಲ್ಲಿ ಭಾಗವಹಿಸುವುದು ಸಾಧ್ಯವಾಯಿತು. ಇದಾದ ಬಳಿಕ ಅಂತಾರಾಷ್ಟ್ರೀಯ ವೃತ್ತಿಪರ ಟೆನಿಸ್ ಸರ್ಕ್ಯುಟ್ ಸ್ಥಾಪನೆಯಾಯಿತು. ಟಿವಿ ಹಕ್ಕುಗಳ ಮಾರಾಟದಿಂದ ಹಣದ ಹೊಳೆ ಹರಿಯಿತು. ಟೆನಿಸ್ ಜಗತ್ತಿನಾದ್ಯಂತ ಜನಪ್ರಿಯವಾಯಿತು. ಇದು ಮೇಲ್ಮಧ್ಯಮ ವರ್ಗದವರ ಕ್ರೀಡೆ ಎಂಬ ಭಾವನೆ ದೂರವಾಯಿತು. 1954ರಲ್ಲಿ ಅಮೆರಿಕದ ನ್ಯೂಪೋರ್ಟ್ ನಲ್ಲಿ ವಾನ್ ಅಲೆನ್ ಲಾಭದ ಅಪೇಕ್ಷೆ ಇಲ್ಲದ ಸಂಗ್ರಹಾಲಯ, ಟೆನಿಸ್ ಹಾಲ್ ಆಫ್ ಫೇಮ್ ಸ್ಥಾಪಿಸಿದರು.

ಪ್ರಾರಂಭದ ದಿನಗಳಲ್ಲಿ ಮರದ ರಾಕೆಟ್ ಗಳನ್ನು ಬಳಸುತ್ತಿದ್ದರು. ಆನಂತರ ಲೋಹ, ಕಾರ್ಬನ್ ಗ್ರಾಫೈಟ್, ಸೆರಾಮಿಕ್ಸ್, ಟೈಟಾನಿಯಂನಂಥ ಲಘು ಲೋಹಗಳ ಬಳಕೆಯಾದವು. ಈಗ ಸಿಂಥೆಟಿಕ್ ತಂತಿಗಳನ್ನು ಬಳಸುವುದರಿಂದ ಹೆಚ್ಚು ಬಾಳಿಕೆ ಬರುತ್ತಿವೆ.

tennis_court

ಟೆನಿಸ್ ಚೆಂಡು ಆರಂಭದಲ್ಲಿ ಬಿಳಿಯ ಬಣ್ಣದ್ದಾಗಿದ್ದವು. ದೂರದಿಂದ ಕಾಣಲು ಅನುಕೂಲವಾಗುವಂತೆ 20ನೇ ಶತಮಾನದ ಕೊನೆಯ ಭಾಗದಲ್ಲಿ ಹಳದಿ ಚೆಂಡುಗಳ ಬಳಕೆ ಆರಂಭವಾದವು.

ಟೆನಿಸ್ ಪಂದ್ಯವನ್ನು ಚೌಕಾಕಾರದ ಅಂಕಣದಲ್ಲಿ ಆಡಲಾಗುತ್ತದೆ. ಹುಲ್ಲು ಹಾಸು, ಮಣ್ಣು ಹಾಗೂ ಗಟ್ಟಿ ಅಂಕಣದಲ್ಲಿ ಟೆನಿಸ್ ಆಡಲಾಗುತ್ತದೆ. ಒಳಾಂಗಣಗಳಲ್ಲಿ ಕಾರ್ಪೆಟ್ ಹಾಸಿನ ಮೇಲೂ ಆಡಲಾಗುತ್ತದೆ. ಟೆನಿಸ್ ಕೋರ್ಟ್ 78 ಅಡಿ (23.77ಮೀ.) ಉದ್ದ ಹಾಗೂ 27 ಅಡಿ (8.3ಮೀ.) ಅಗಲವಿರುತ್ತದೆ. ಡಬಲ್ಸ್ ಪಂದ್ಯಗಳಿಗೆ ಅಗಲ 36 ಅಡಿ (10.97ಮೀ.) ಇರುತ್ತದೆ. ಕೋರ್ಟ್ ನ ಸುತ್ತ ಹೆಚ್ಚುವರಿ ಖಾಲಿ ಜಾಗ ಇರುತ್ತದೆ. ಕೋರ್ಟ್ ಎರಡು ಭಾಗವಾಗಿಸಿ ಮಧ್ಯ ಭಾಗದಲ್ಲಿ ನೆಟ್ ಕಟ್ಟಲಾಗಿರುತ್ತದೆ. ಇದು ತುದಿಗಳಲ್ಲಿ 3 ಅಡಿ 6 ಇಂಚು (1.07ಮೀ.) ಎತ್ತರ ಹಾಗೂ ನಡುವೆ 3 ಅಡಿ (91.4ಸೆಂ.ಮೀ.) ಎತ್ತರ ಇರುತ್ತದೆ. ಆಧುನಿಕ ಕೋರ್ಟ್ ನ ವಿನ್ಯಾಸ ರೂಪಿಸಿದವರು ಮೇಜರ್ ವಾಲ್ಟರ್ ಕ್ಲಾಪ್ಟನ್ ವಿಂಗ್ ಫೀಲ್ಡ. 1873ರಲ್ಲಿ. ಇದನ್ನು 1875ರಲ್ಲಿ ಈಗಿರುವಂತೆ ಮಾರ್ಪಡಿಸಲಾಯಿತು. ಟೂರ್ನಿಗಳು: ನಾಲ್ಕು ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲದೆ, ಒಲಿಂಪಿಕ್ಸ್ ಟೆನಿಸ್, ಡೇವಿಸ್ ಕಪ್, ಫೆಡ್ ಕಪ್ ಮತ್ತು ಹಾಪ್ ಮನ್ ಕಪ್ ಟೂರ್ನಿಗಳು ಐಟಿಎಫ್ ನ ನಿಯಂತ್ರಣದಲ್ಲಿ ನಡೆಯುತ್ತವೆ. ಇದಲ್ಲದೆ ಎಟಿಪಿ ಮಾಸ್ಟರ್ಸ್ 1000 ಟೂರ್ನಿಗಳು ಪುರುಷರಿಗಾಗಿ ನಡೆಯುವ 9 ಟೂರ್ನಿಗಳ ಗೊಂಚಲು. ಇದರಲ್ಲಿ ಗೆಲ್ಲುವವರು 1000 ಶ್ರೇಯಾಂಕ ಅಂಕ ಪಡೆಯುತ್ತಾರೆ. ಈ ಎಲ್ಲಾ ಟೂರ್ನಿಗಳು ಹಾಗೂ ಗ್ರಾಂಡ್ ಸ್ಲಾಂಗಳ ಶ್ರೇಷ್ಠ ಎಂಟು ಆಟಗಾರರು ವರ್ಷಾಂತ್ಯದ ಮಾಸ್ಟರ್ಸ್ ನಲ್ಲಿ ಭಾಗವಹಿಸುತ್ತಾರೆ. ಇದಲ್ಲದೆ ವಿವಿಧ ಶ್ರೇಣಿಯ ಎಟಿಪಿ ಟೂರ್ನಿಗಳು, ಚಾಲೆಂಜರ್ಸ್ ಮತ್ತು ಐಟಿಎಫ್ ಟೂರ್ನಿಗಳು ವಿಶ್ವಾದ್ಯಂತ ವಾರ್ಷಿಕವಾಗಿ ನಡೆಯುತ್ತವೆ.

ಮಹಿಳಾ ವಿಭಾಗದಲ್ಲೂ ಕೆಲವು ಕಡ್ಡಾಯ ಟೂರ್ನಿ ಸೇರಿದಂತೆ ಹಲವು ಶ್ರೇಣಿಯ ಟೂರ್ನಿಗಳು ನಡೆಯುತ್ತವೆ. ಮಹಿಳಾ ಟೆನಿಸ್ ನಲ್ಲಿ ಶ್ರೇಣೀಕೃತ ಟೂರ್ನಿ ಪದ್ಧತಿ 1988ರಲ್ಲಿ ಆರಂಭವಾಯಿತು. ಭಾರತದಲ್ಲಿ ಪ್ರತೀ ವರ್ಷ ಜನವರಿಯಲ್ಲಿ ಚೆನ್ನೈ ಓಪನ್ ನಡೆಯುತ್ತದೆ. ಇದು ಪುರುಷರ ಟೂರ್ನಿ. ಇದಲ್ಲದೆ ಇದಲ್ಲದೆ ಕೋಲ್ಕತ್ತದಲ್ಲಿ ನಡೆಯುತ್ತಿದ್ದ ಸನ್ ಫೀಸ್ಟ್ ಓಪನ್ ಹಾಗೂ ಬೆಂಗಳೂರು ಓಪನ್ ಮಹಿಳಾ ಟೂರ್ನಿಗಳು ಹಾಗೂ ಮುಂಬೈ ಓಪನ್ ಪುರುಷರ ಟೂರ್ನಿ 2008ರಿಂದ ನಡೆಯುತ್ತಿಲ್ಲ. ಶ್ರೇಷ್ಠರು: ಆಸ್ಟ್ರೇಲಿಯಾದ ರಾಡ್ ಲೇವರ್ ಟೆನಿಸ್ ನ ಸರ್ವಶ್ರೇಷ್ಠ ಎಂದು ಪರಿಗಣಿಸಲ್ಪಟ್ಟ ಆಟಗಾರ. ಮುಕ್ತ ಯುಗದಲ್ಲಿ ಬ್ಜೋರ್ನ್ ಬೋರ್ಗ್, ಇವಾನ್ ಲೆಂಡ್ಲ್, ಜಿಮ್ಮಿ ಕಾನರ್ಸ್, ಜಾನ್ ಮೆಕೆನ್ರೋ, ಪೀಟ್ ಸಾಂಪ್ರಾಸ್, ಆಂಡ್ರೆ ಅಗಾಸ್ಸಿ ಇತ್ಯಾದಿ ಆಟಗಾರರು ಖ್ಯಾತಿ ಶಿಖರವೇರಿದ್ದಾರೆ. ಗ್ರಾಂಡ್ ಸ್ಲಾಂ ಗಳಿಕೆಯಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿರುವ ರೋಜರ್ ಫೆಡರರ್, ಲೇವರ್ ಗಿಂತ ಶ್ರೇಷ್ಠನೇ ಎಂಬ ಚರ್ಚೆ ಸದ್ಯ ನಡೆಯುತ್ತಿದೆ.

ಮಹಿಳಾ ಟೆನಿಸ್ ಕ್ರಿಸ್ ಎವರ್ಟ್ , ಮಾರ್ಟಿನಾ ನವ್ರಾಟಿಲೋವ, ಸ್ಟೆಫಿ ಗ್ರಾಫ್ ರಂಥ ದಂತಕಥೆಗಳನ್ನು ಕಂಡಿದೆ. ಸದ್ಯ ಸೆರೇನಾ ವಿಲಿಯಮ್ಸ್ ಮುಂಚೂಣಿಯಲ್ಲಿದ್ದಾರೆ. ಭಾರತ ಟೆನಿಸ್ ಗೆ ರಾಮನಾಥನ್ ಕೃಷ್ಣನ್, ವಿಜಯ್ ಅಮೃತ್ ರಾಜ್, ರಮೇಶ್ ಕೃಷ್ಣನ್, ಲಿಯಾಂಡರ್ ಪೇಸ್, ಮಹೇಶ್ ಭೂಪತಿಯಂಥ ಅಪ್ರತಿಮ ಸಾಧಕರನ್ನು ಕೊಡುಗೆ ನೀಡಿದೆ. ಮಹಿಳಾ ಟೆನಿಸ್ ನಲ್ಲಿ ಸಾನಿಯಾ ಮಿರ್ಜಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಏಕೈಕ ಪ್ರತಿನಿಧಿ.