ಟೈಗರ್ ವರದಾಚಾರ್ಯರು ೧೮೭೬ರ ಆಗಸ್ಟ್ ೧ ರಂದು, ಮದರಾಸಿನ ತಿರುವೊಟ್ಟ್ರಿಯೂರ್ ಬಳಿ ಇರುವ ಕೊಲೆಟ್‌ಪೇಟೆ ಅಥವಾ ಕಾಲಾಡಿ ಪೇಟೆಯಲ್ಲಿ ಜನಿಸಿದರು. ಕಲ್ಯಾಣಿ ಅಮ್ಮಾಳ್ ಮತ್ತು ರಾಮಾನುಜಾಚಾರ್ಯರ ಒಂದು ಹೆಣ್ಣು, ಆರು ಮಂದಿ ಗಂಡು ಮಕ್ಕಳಲ್ಲಿ ಮೂರನೆಯವರು ವರದಾಚಾರ್ಯರು. ರಾಮಾನುಚಾರ್ಯರು ಸಂಗೀತ ಮತ್ತು ತೆಲುಗು ಪಂಡಿತರಾಗಿದ್ದು, ಪುರಾಣಿಕರೂ ಹಾಗೂ ವೈದಿಕ ಬ್ರಾಹ್ಮಣರಾಗಿ ಜೀವನವನ್ನು ನಡೆಸುತ್ತಿದ್ದರು. ಸಂಗೀತದ ಬಗ್ಗೆ ಆಸಕ್ತಿ ಇದ್ದರೂ ಕೂಡ, ತಮ್ಮ ಮಕ್ಕಳು ಸಂಗೀತವನ್ನು ಕಲಿಯುವುದಕ್ಕೆ ಅಷ್ಟು ಪ್ರೋತ್ಸಾಹ ನೀಡಲಿಲ್ಲ. ಆದರೆ ವರದಾಚಾರ್ಯರು ಮತ್ತು ಅವರ ಅಣ್ಣ ಕೆ.ವಿ.ಶ್ರೀನಿವಾಸಚಾರ್ಯ ಹಾಗೂ ತಮ್ಮ ಕೃಷ್ಣಮಾಚಾರ್ಯರೊಂದಿಗೆ, ತಂದೆಗೆ ತಿಳಿಯದಂತೆ ಸಂಗೀತ ಕಚೇರಿಗಳನ್ನು ಕೇಳಲು ಹೋಗುತ್ತಿದ್ದರು. ಈ ಸಹೋದರರಿಗೆ ಸಂಗೀತದಲ್ಲಿ ಆಸಕ್ತಿ ಹುಟ್ಟಿಸಿ, ಅದರಲ್ಲಿ ಮುಂದುವರಿಯುವಂತೆ ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ನೀಡಿದವರು ಪಿಟೀಲು ರಾಮಚಂದ್ರ ಐಯ್ಯರ್, ರಾಘವ ಐಯ್ಯರ್ ರವರ ಶಿಷ್ಯರೂ, ಛಾಯಾಗ್ರಾಹಕರೂ ಆಗಿದ್ದ ಮಾಸಿಲಾಮಣಿ ಮೊದಲಿಯಾರ್ ಮತ್ತು ತಚ್ಚೂರ್ ಸಿಂಗರಾಚಾರ್ಯಲು. ಈ ವಿದ್ವಾಂಸರುಗಳಲ್ಲದೇ, ಬೇರೆ ವಿದ್ವಾಂಸರ ಸಂಗೀತವೂ ಈ ಸಹೋದರರ ಮೇಲೆ ಪ್ರಭಾವ ಬೀರಿತು.

ವರದಾಚಾರ್ಯರು ತಿರುವಯ್ಯಾರಿನಲ್ಲಿದ್ದ ಪಟ್ಣಂ ಸುಬ್ರಮಣ್ಯ ಐಯ್ಯರ್‌ರವರ ಗಾಯನಕ್ಕೆ ಮನಸೋತು, ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ತಿರುವಯ್ಯಾರಿಗೆ ಪ್ರಯಾಣ ಬೆಳೆಸಿದರು. ಮೂರು ವರ್ಷಗಳ ಕಾಲ, ಸುಬ್ರಮಣ್ಯ ಐಯ್ಯರ್‌ರವರ ಗುರುಕುಲವಾಸದಲ್ಲಿದ್ದು, ಸಂಗೀತವನ್ನು ಕಲಿತರು. ಅಂದಿನ ಗುರುಕುಲವಾಸ ಅಷ್ಟು ಸುಖಕರವಾಗಿರುತ್ತಿರಲಿಲ್ಲ. ಗುರುಗಳ ಮನೆ ಕೆಲಸ, ಅಂದರೆ ಬಟ್ಟೆ ಒಗೆಯುವುದು, ಹಸು ಕರುಗಳನ್ನು ನೋಡಿಕೊಳ್ಳುವುದು, ಕಟ್ಟಿಗೆ ಮತ್ತು ನೀರನ್ನು ಹೊತ್ತು ತರುವುದು ಮುಂತಾದ ಅನೇಕ ದೈನಂದಿನ ಕೆಲಸಗಳಲ್ಲಿ ಗುರುಗಳು ಮತ್ತು ಅವರ ಪತ್ನಿಗೆ ನೆರವಾಗಬೇಕಿತ್ತು. ಪ್ರಾರಂಭದಲ್ಲೆ ಶಿಷ್ಯನಿಗೆ ಪಾಠವನ್ನು ಹೇಳಿಕೊಡುತ್ತಿರಲಿಲ್ಲ. ಗುರುಗಳು ಬೇರೆ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವುದನ್ನು ಮತ್ತು ಗುರುಗಳು ಅಭ್ಯಾಸ ಮಾಡಿಕೊಳ್ಳುವುದನ್ನು ಶಿಷ್ಯ ಮನೆಕೆಲಸದೊಂದಿಗೆ ಕೇಳುತ್ತಿರಬೇಕು. ಕೆಲವು ದಿನಗಳ ನಂತರ ಶಿಷ್ಯನ ತಾಳ್ಮೆಯನ್ನು ಪರೀಕ್ಷಿಸಿದ ನಂತರವೇ ಗುರುಗಳು ಅವನಿಗೆ ಪಾಠವನ್ನು ಪ್ರಾರಂಭ ಮಾಡುತ್ತಿದ್ದುದು. ಹೀಗೆ ವರದಚಾರ್ಯರು ಮೂರು ವರ್ಷಗಳ ಕಾಲ, ಗುರುಗಳ ಆಶ್ರಯದಲ್ಲಿದ್ದು, ಮನೆಗೆ ಹಿಂತಿರುಗಿದರು.

ಮನೆಯಲ್ಲಿ ತಂದೆಗೆ, ಮಗ ಸಂಗೀತವನ್ನೇ ಆಧಾರವಾಗಿಟ್ಟುಕೊಂಡು ಜೀವಿಸುವುದು ಇಷ್ಡವಿರಲಿಲ್ಲ. ವರದಾಚಾರ್ಯರು ಎಫ್.ಎ ಪಾಸು ಮಾಡಿದ್ದರಿಂದ, ೧೮೯೯ರಲ್ಲಿ ಕಲ್ಲಿಕೋಟೆಯ ಸರ್ವೆ ಇಲಾಖೆಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ಇವರಿಗೆ ಆಗ ಬರುತ್ತಿದ್ದ ಸಂಬಳ ತಿಂಗಳಿಗೆ ೧೨ ರೂಗಳು. ಕೆಲಸಕ್ಕೆ ಹೋದರೂ, ಸಂಗೀತವನ್ನು ಬಿಡಲಿಲ್ಲ. ಮನೆಯಲ್ಲಿದ್ದಾಗ ಗಂಟೆಗಟ್ಟಲೆ ಅಭ್ಯಾಸ ಮಾಡುತ್ತಿದ್ದರು. ಕಚೇರಿಯಲ್ಲಿ ಇವರ ಮೇಲಧಿಕಾರಿಗಳಿಗೂ ಸಂಗೀತವೆಂದರೆ ಆಸಕ್ತಿ. ಅವರ ಮನೆಯಲ್ಲಿ ನಡೆಸುತ್ತಿದ್ದ ಭಜನ ಗೋಷ್ಠಿಯಲ್ಲಿ, ವರದಾಚಾರ್ಯರು ಭಾಗವಹಿಸಿ, ಜನರ ಮೆಚ್ಚುಗೆಯನ್ನು ಪಡೆಯುತ್ತಿದ್ದರು. ಕಾಲಕ್ರಮೇಣ ಇವರ ವಿದ್ವತ್ತಿಗೆ ಮೆಚ್ಚಿ ಸಂಗೀತ ರಸಿಕರು ಕಚೇರಿಗಳನ್ನು ನೀಡಲು ಆಹ್ವಾನಿಸುತ್ತಿದ್ದರು.

೧೯೧೬ರಲ್ಲಿ ಮೊಟ್ಟಮೊದಲ ಬಾರಿಗೆ ವರದಾಚಾರ್ಯರು ಮೈಸೂರಿಗೆ ಬಂದು, ಕಚೇರಿ ಮಾಡಿದರು. ಆಗ ಅಲ್ಲಿ ನೆರೆದಿದ್ದ ವಿದ್ವಾಂಸರೆಲ್ಲರು ಇವರ ವಿದ್ವತ್ತಿಗೆ ಮೆಚ್ಚಿ ಹೊಗಳಿದರು. ಅಂದಿನ ಮೈಸೂರಿನ ಅರಸರಾಗಿದ್ಗದ ನಾಲ್ವಡಿ ಕೃಷ್ಣರಾಜ ಒಡೆಯರು, ಇವರ ವಿದ್ವತ್ತಿನ ಬಗ್ಗೆ ಕೇಳಿ, ಆಸ್ಥಾನದಲ್ಲಿ ಕಚೇರಿಗಳನ್ನು ಏರ್ಪಡಿಸಿದರು. ಇವರ ಘನವಾದ ಸಂಗೀತವನ್ನು ಕೇಳಿ, ಮಹಾರಾಜರು ತೋಡ ಖಿಲ್ಲತ್ತಿನೊಂದಿಗೆ “ಸಂಗೀತದ ಹುಲಿ” ಎಂಬ ಬಿರುದನ್ನಿತ್ತರು.

ಅಂದಿನಿಂದ ಇವರು ‘ಟೈಗರ್ ವರದಾಚಾರ್’ ಎಂದೇ ಹೆಸರುವಾಸಿಯಾದರು. ಮೈಸೂರಿನ ಬಳಿಯಿದ್ದ ತಿರುಮಕೂಡಲು ಕ್ಷೇತ್ರದಲ್ಲಿ, ಸಂಗೀತಾಸಕ್ತರು, ಪೋಷಕರು ಬಹಳಷ್ಟು ಮಂದಿಯಿದ್ದರು. ಅವರಲ್ಲಿ ಗರ್ಗೇಶ್ವರಿ ಸುಬ್ಬರಾಯರು ಮತ್ತು ನರಸೀಪುರದ ರಾಘವೇಂದ್ರರಾಯರೆಂಬ ಜಮೀನ್ದಾರರು ಮೈಸೂರಿನಲ್ಲಿ ಇವರ ಸಂಗೀತವನ್ನು ಕೇಳಿ, ತಮ್ಮ ಊರಿನಲ್ಲಿಯೂ ಇವರ ಕಚೇರಿಯನ್ನು ಏರ್ಪಡಿಸಬೇಕೆಂದು ಹಂಬಲಿಸಿದರು. ವರದಾಚಾರ್ಯರು ಇವರ ಕರೆಗೆ ಮನ್ನಿಸಿ, ತಿರುಮಕೂಡಲಿಗೆ ಬಂದು ಅಲ್ಲಿ ಕಚೇರಿಗಳನ್ನು ಮಾಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇವರ ಸಂಗೀತವನ್ನು ಯಾವಾಗಲೂ ಕೇಳಬೇಕೆಂಬ ಆಸೆಯಿಂದ, ಸಂಗೀತ ಪ್ರೇಮಿಗಳು ವರದಾಚಾರ್ಯರನ್ನು ಅಲ್ಲಿಯೆ ನೆಲಸುವ ಹಾಗೆ ಏರ್ಪಾಡು ಮಾಡಿದರು. ತಿರುಮಕೂಡಲಿನ ಒಂದು ಪ್ರಶಾಂತವಾದ ವಾತಾವರಣ, ಕಾವೇರಿ ಕಪಿಲಾ ಸ್ಫಟಿಕ ನದಿಗಳ ಸಂಗಮದ ಪವಿತ್ರತೆ, ಸಂಗೀತ ಪ್ರೇಮಿಗಳ ಸಮ್ಮುಖದಲ್ಲಿ ಮೈಮರೆತು ವರದಾಚಾರ್ಯರು ಹಾಡುತ್ತಿದ್ದರೆ, ಯಾರಿಗೂ ಹೊತ್ತಿನ ಪರಿವೆಯಿರುತ್ತಿರಲಿಲ್ಲ. ಯಳಂದೂರು ರಂಗಾಚಾರ್ಯರು, ತಲಕಾಡು ಶ್ರೀನಿವಾಸ ರಂಗಾಚಾರ್ಯರು, ನರಸೀಪುರದ ಪಿಟೀಲು ವೆಂಕಟಸುಬ್ಬಯ್ಯನವರು, ಮೃದಂಗದ ಕಾಳಯ್ಯ ಮುಂತಾದ ಅನೇಕ ಗಣ್ಯ ವ್ಯಕ್ತಿಗಳು ಇವರ ಸ್ನೇಹಿತರು ಮತ್ತು ಅಭಿಮಾನಿಗಳಾದರು.

ವರದಚಾರ್ಯರ ಸಂಗೀತ ಎಲ್ಲರನ್ನೂ ಆಕರ್ಷಿಸುತ್ತಿರಲಿಲ್ಲ. ಅವರ ಸಂಗೀತವನ್ನು ‘ನಾರಿ ಕೇಳ ಪಾಕಕ್ಕೆ’ ಹೋಲಿಸಲಾಗುತ್ತಿತ್ತು. ಅವರ ಸಂಗೀತವನ್ನು ಗ್ರಹಿಸಿ ಸವಿಯುವುದು ಅಷ್ಟು ಸುಲಭವಾಗಿರಲಿಲ್ಲ. ತೆಂಗಿನಕಾಯಿಯನ್ನು ಒಡೆದು, ಹೇಗೆ ಅದರ ಸೀಯಾಳವನ್ನು ಸವಿಯಬೇಕೋ, ಹಾಗೆ ಇವರ ಸಂಗೀತವನ್ನು ಸವಿಯಬೇಕೆಂಬುದು ಹಿರಿಯರ ಅಭಿಪ್ರಾಯವಿತ್ತು. ಇವರ ಕಚೇರಿಗಳಲ್ಲಿ ವಿದ್ವಾಂಸರು ಮತ್ತು ವಿದ್ಯಾರ್ಥಿಗಳೇ ತುಂಬಿರುತ್ತಿದ್ದರು. ಉತ್ತಮ ಶಾರೀರವಿಲ್ಲದಿದ್ದರೂ, ಅವರು ಹಾಡುಗಾರಿಕೆಯ ಶೈಲಿ, ವಿದ್ವತ್ತು, ಅದರಲ್ಲಿದ್ದ ಸಂಗೀತ ಶಾಸ್ತ್ರ ನಿರ್ಣಯ, ಭಾವ ರಸಗಳನ್ನೊಳಗೊಂಡ ಮನೋಧರ್ಮ ಇವೆಲ್ಲವೂ ಅವರ ಶಾರೀರದಲ್ಲಿದ್ದ ಕೊರತೆಯನ್ನು ಮುಚ್ಚಿಹಾಕುತ್ತಿತ್ತು.

ಮದರಾಸು ಮ್ಯೂಸಿಕ್‌ಅಕಾಡೆಮಿಯು ೧೯೩೧ರಲ್ಲಿ ಪ್ರಥಮ ಬಾರಿಗೆ ಸಂಗೀತದ ಉಪಾಧ್ಯಾಯರ ತರಬೇತಿ ಕಾಲೇಜನ್ನು ಪ್ರಾರಂಭ ಮಾಡಿತು. ವರದಾಚಾರ್ಯರನ್ನು ಅದರ ಪ್ರಥಮ ಪ್ರಾಂಶುಪಾಲರಾಗಿ ನೇಮಿಸಿದರು. ೧೯೩೨ರಲ್ಲಿ ಮದರಾಸು ವಿಶ್ವವಿದ್ಯಾಲಯವು ಸಂಗೀತದ ಡಿಪ್ಲೊಮಾ ತರಗತಿಗಳನ್ನು ಪ್ರಾರಂಭ ಮಾಡಿದಾಗ, ವರದಾಚಾರ್ಯರನ್ನು ಸಂಗೀತ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಿದರು. ಅಲ್ಲಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿ, ಚಿದಂಬರದ (ಅಣ್ಣಾಮಲೈ ವಿಶ್ವವಿದ್ಯಾಲಯಕ್ಕೆ ಸೇರಿದ) ಸಂಗೀತದ ಕಾಲೇಜಿಗೆ ಮುಖ್ಯಸ್ಥರಾಗಿ ಸೇರಿದರು. ಹಲವು ವರ್ಷಗಳು ಅಲ್ಲಿ ಸೇವೆ ಸಲ್ಲಿಸಿದ ನಂತರ, ರುಕ್ಮಿಣಿದೇವಿ ಅರುಂಡೇಲ್‌ರವರು ಮದರಾಸಿನ ಅಡಿಯಾರ್‌ನಲ್ಲಿ ಪ್ರಾರಂಭ ಮಾಡಿದ್ದ ಕಲಾಕ್ಷೇತ್ರಕ್ಕೆ, ಸಂಗೀತ ವಿಭಾಗದ ಮುಖ್ಯಸ್ಥರನ್ನಾಗಿ ವರದಾಚಾರ್ಯರನ್ನು ನೇಮಿಸಿ, ಮದರಾಸಿಗೆ ಕರೆಸಿಕೊಂಡರು. ಕಡೆಯ ಉಸಿರಿರುವವರೆಗೂ ಕಲಾಕ್ಷೇತ್ರದಲ್ಲಿಯೇ ವರದಾಚಾಯ್ರು ನೆಲೆಸಿದ್ದರು.

ವರದಾಚಾರ್ಯರ ಅಣ್ಣ ಶ್ರೀನಿವಾಸ ಐಯ್ಯಂಗಾರ್ಯರು ಸಮಗೀತದ ಲಕ್ಷ್ಯ ಲಕ್ಷಣಭಾಗಗಳೆರಡರಲ್ಲೂ ಪಾಂಡಿತ್ಯವಿದ್ದು ಗಾನಭಾಸ್ಕರ, ತ್ಯಾಗರಾಜ ಹೃದಯ, ಸಂಗೀತ ರಸಾರ್ಣವ ಮುಂತಾದ ಅನೇಕ ಗ್ರಂಥಗಳನ್ನು ರಚಿಸಿದ್ದರು. ಅವರ ಕಿರಿಯ ಸಹೋದರ ಕೃಷ್ಣಮಾಚಾರ್ಯರು ಅತ್ಯುತ್ತಮ ವೈಣಿಕರು ಮತ್ತು ವಾಗ್ಗೇಯಕಾರರು. ವರದಾಚಾರ್ಯರು ನಟರೂ ಆಗಿದ್ದರು. ಅವರ ಅಣ್ಣ ನಿರ್ದೇಶಿಸಿದ ಇಂದ್ರಕೀಲ ಎಂಬ ನಾಟಕದಲ್ಲಿ ವರದಾಚಾರ್ಯರು ಪಾತ್ರ ವಹಿಸಿದ್ದರು. ಇವರಿಗೆ ಬೇಗಡೆ ಮುಂತಾದ ರಾಗಗಳೆಂದರೆ ಬಲು ಪ್ರೀತಿ, ಪದ, ಜಾವಳಿ, ಜಾನಪದ ಗೀತೆಗಳನ್ನು ಹಾಡುವುದೆಂದರೆ ಅವರಿಗೆ ಎಲ್ಲಿಲ್ಲದ ಖುಷಿ. ಇಷ್ಟಲ್ಲದೆ ವರದಾಚಾರ್ಯರು ವಾಗ್ಗೇಯಕಾರರೂ ಕೂಡ. ಆದರೆ ರಚಿಸುವುದನ್ನು ಪ್ರಾರಂಭ ಮಾಡಿದ್ದು, ಅವರಿಗೆ ೫೦ ವರ್ಷಗಳು ಕಳೆದ ಮೇಲೆ, ಗೀತೆ, ತಾನ ವರ್ಣ, ಪದವರ್ಣ, ಕೃತಿ, ಕಾಳಿದಾಸನ ಕುಮಾರ ಸಂಭವಕ್ಕಾಗಿ ರಚಿಸಿದ ವರ್ಣಮಟ್ಟುಗಳು ಇವನ್ನೆಲ್ಲಾ ಒಳಗೊಂಡಂತೆ ಸುಮಾರು ೭೦-೮೦ ರಚನೆಗಳನ್ನು ರಚಿಸಿದ್ದಾರೆ. ರುಕ್ಷಿಣಿದೇವಿ ಅರುಂಡೇಲ್‌ರವರ ಅಪೇಕ್ಷೆಯಂತೆ, ವರದಾಚಾರ್ಯರು ಕಾಳಿದಾಸನ ಕುಮಾರ ಸಂಭವ ಕಾವ್ಯವನ್ನು ನೃತ್ಯರೂಪಕ್ಕೆ ಅಳವಡಿಸಿದ್ದಾರೆ. ಇದರಲ್ಲಿ ಶೊಲ್ಕಟ್ಟು ಮತ್ತು ಸ್ವರ ಗುಚ್ಛಗಳನ್ನ ಮಧ್ಯಮ, ಧೃತ ಕಾಲಗಳಲ್ಲಿ ಬಹಳ ಸುಂದರವಾಗಿ ಹೆಣೆದಿದ್ದಾರೆ. ಸುಮಾರು ೫೦ ವರ್ಣ ಮಟ್ಟುಗಳನ್ನು ಈ ನೃತ್ಯ ನಾಟಕಕ್ಕಾಗಿ ರಚಿಸಿದ್ದಾರೆ. ಕಲಾಕ್ಷೇತ್ರದಲ್ಲಿ ಇದರ ಪ್ರದರ್ಶನವಾದಾಗ, ಎಲ್ಲರೂ ಟೈಗರ್‌ರವರನ್ನು ಹೊಗಳುವವರೇ.

ವರದಾಚಾರ್ಯರ ಗೀತೆಗಳು ಮತ್ತು ೧೨ ವರ್ಣಗಳನ್ನು ಅಣ್ಣಾಮಲೈ ವಿಶ್ವವಿದ್ಯಾಲಯದವರು ಪ್ರಕಟಿಸಿದ್ದಾರೆ. ಒಮ್ಮೆ ಭಾರತದ ಗವರ‍್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರ್ಯರು, ಕಲಾಕ್ಷೇತ್ರಕ್ಕೆ ಭೇಟಿಯಿತ್ತಾಗ, ಟೈಗರ್ರವರು “ನೀದೇ ಸುದಿನಮು” ಎಂಬ ಕೃತಿಯನ್ನು ದರ್ಬಾರ್ ರಾಗದಲ್ಲಿ ರಚಿಸಿ, ಅವರಿಗೆ ಅರ್ಪಿಸಿದ್ದರು. ಮತ್ತೊಮ್ಮೆ ಡಾ. ಅರುಂಡೇಲ್‌ರವರ ಮೇಲೆ ನಾಲ್ಕು ರಾಗಗಳನ್ನೊಳಗೊಂಡ ಒಂದು ರಾಗಮಾಲಿಕೆಯನ್ನು ರಚಿಸಿದ್ದರು. ವರದಾಚಾರ್ಯರ ಮಾತೃಭಾಷೆ ತಮಿಳಾದರೂ, ಕನ್ನಡ, ತೆಲುಗು, ಮಲಯಾಳಂ ಸಂಸ್ಕೃತ, ಇಂಗ್ಲೀಷ್ ಮುಂತಾದ ಭಾಷೆಗಳನ್ನು ಬಲ್ಲವರಾಗಿದ್ದರು.

ವರದಾಚಾರ್ಯರಿಗೆ ಸಂದ ಬಿರುದು ಸನ್ಮಾನಗಳು ಅಪಾರ. ವೀಣೆ ಶೇಷಣ್ಣನವರ ಮನೆಯಲ್ಲಿ ನಡೆಸುತ್ತಿದ್ದ ರಾಮೋತ್ಸವ, ಕೃಷ್ಣೋತ್ಸವ ಸಂದರ್ಭದಲ್ಲಿ, ಒಮ್ಮೆ ಟೈಗರ್ ರವರ ಕಚೇರಿ ಏರ್ಪಾಡಾಗಿತ್ತು. ಅಂದು ಎಲ್ಲ ಹಿರಿಯ ಆಸ್ಥಾನ ವಿದ್ವಾಂಸರೂ ಉಪಸ್ಥಿತರಿದ್ದರು. ಇವರ ಅತ್ಯದ್ಭುತವಾದ ಕಚೇರಿಯನ್ನು ಕೇಳಿ, ಎಲ್ಲರೂ ಹೊಗಳಿದರು. ಶೇಷಣ್ಣನವರು ವರದಾಚಾರ್ಯರನ್ನು ಬರೇ ಟೈಗರ್ ಅಂದರೆ ಸಾಲದು, ಲಯನ್‌ ಥರ ಗಾಂಭೀರ್ಯ ಇವರ ಸಂಗೀತದಲ್ಲಿ ಅಡಗಿರುವುದರಿಂದ ಲಯನ್‌-ಟೈಗರ್ ಎಂದು ಕರೆದರು. ೧೯೩೨ರಲ್ಲಿ ಮದರಾಸು ಮ್ಯೂಸಿಕ್‌ ಸಂಗೀತ ಅಕಾಡೆಮಿಯ ಸಮ್ಮೇಳನದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು,ಸಂಗೀತ ಕಲಾನಿಧಿ ಬಿರುದನ್ನು ಪಡೆದರು. ೧೯೪೪ರಲ್ಲಿ ಮೈಸೂರು ಅರಸರಾಗಿದ್ದ ಜಯಚಾಮರಾಜ ಒಡೆಯರು, ಇವರನ್ನ ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿಕೊಂಡು ಸಂಗೀತ ಶಾಸ್ತ್ರ ವಿಶಾರದ ಎಂಬ ಬಿರುದಿನೊಂದಿಗೆ ರಾಜಲಾಂಛನವಾದ ಗಂಡ ಭೇರುಂಡ ಪದಕವನ್ನೊಳಗೊಂಡ ವಜ್ರದ ಹಾರವನ್ನಿತ್ತರು. ಈ ಸನ್ಮಾನದಿಂದ ಸಂತೋಷಗೊಂಡ ಮೈಸೂರಿನ ವಿದ್ವಾಂಸರು, ಇವರಿಗಾಗಿ ಒಂದು ಔತಣಕೂಟವನ್ನು ಏರ್ಪಡಿಸಿ, ವರದಾಚಾರ್ಯರಿಂದಲೇ ಸಂಗೀತ ಕಚೇರಿಯನ್ನು ಮಾಡಿಸಿದರು.

ವರದಾಚಾರ್ಯರ ವ್ಯಕ್ತಿತ್ವ ಬಹಳ ಸುಂದರ, ಆತ್ಮೀಯ ಹಾಗೂ ಹಾಸ್ಯ ಪ್ರವೃತ್ತಿಯುಳ್ಳದ್ದು. ಎಂದೂ ಯಾರ ಮೇಲೂ ಅಸೂಯೆ ಪಡುತ್ತಿರಲಿಲ್ಲ. ಎಲ್ಲರನ್ನೂ ಆದರಿಸಿ, ಅವರ ಯೋಗ್ಯತಾನುಸಾರ ಹೊಗಳುತ್ತಿದ್ದರು. ಕೊಯಂಬತ್ತೂರ್ ರಾಘವ ಐಯ್ಯರ್ ರವರು ಇವರಿಗೆ ಸಾಧಾರಣವಾಗಿ ಪಿಟೀಲಿನಲ್ಲಿ ಸಹಕಾರ ನೀಡುತ್ತಿದ್ದರು. ಇವರ ತುಂಬು ನಾದದ ಧ್ವನಿಗೆ ಹೋಲುವಂತೆ ಐಯ್ಯರ್ ರವರು ಪಿಟೀಲಿನಲ್ಲಿ ಮತ್ತೊಂದು ತಂತಿಯನ್ನು ಅಳವಡಿಸಿದ್ದರು. ಟೈಗರ್‌ ಮತ್ತು ವಾಸುದೇವಚಾರ್ಯರು ಒಂದೇ ಗುರುಗಳ ಶಿಷ್ಯರು ಅಂದರೆ ಪಟ್ಣಂ ಸುಬ್ರಮಣ್ಯ ಐಯ್ಯರ್ ರವರಲ್ಲಿ. ಹಾಗಾಗಿ ಹಿರಿಯರಾದ ಆಚಾರ್ಯರನ್ನು ಕಂಡರೆ ಬಹಳ ಗೌರವ ಟೈಗರ್ ರವರಿಗೆ.

ಇವರ ಸಂಗೀತದಲ್ಲಿ ಮುಖ್ಯವಾದ ಅಂಶ ತಡೆಯಿಲ್ಲದ ಮನೋಧರ್ಮ ಮತ್ತು ಮಧ್ಯಮ ಕಾಲದಲ್ಲಿ ಪಾಂಡಿತ್ಯ. ಅವರ ರಾಗ ವಿಸ್ತಾರ, ನಳನಳಿಸುವ ಒಂದು ದೊಡ್ಡ ವೃಕ್ಷಕ್ಕೆ ಹೋಲಿಸಲಾಗುತ್ತಿತ್ತು. ಒಂದು ಕೊಂಬೆ ಹೇಗೆ ಮತ್ತೊಂದು ಕೊಂಬೆಗೆ ಆಧಾರವಾಗಿ, ಅದು ಮತ್ತೊಂದಕ್ಕೆ ಹೀಗೆ ಅಸಂಖ್ಯಾತ ಕೊಂಬೆಗಳು ಹುಟ್ಟುತ್ತವೆಯೋ ಹಾಗೆ ಇವರ ಆಲಾಪನೆ ಬೆಳೆಯುತ್ತಿತ್ತು. ಟೈಗರ್ ರವರನ್ನು ಒಂದು ವಿದ್ಯಾ ಸಂಸ್ಥೆಯೆಂದೂ, ಸಂಗೀತಗಾರರಿಗೆ ಸಂಗೀತಗಾರರೆಂದೂ, ಉತ್ತಮ ಪ್ರಾಧ್ಯಾಪಕರೆಂದೂ ವರ್ಣಿಸುತ್ತಿದ್ದರು. ರಾಗ, ತಾನ, ಪಲ್ಲವಿ, ನೆರವಲ್‌ ಸ್ವರ ಪ್ರಸ್ತಾರ ಎಲ್ಲದರಲ್ಲೂ ಪಳಗಿದ ಹುಲಿ, ಶಾಸ್ತ್ರ ಭಾಗದಲ್ಲೂ ಇವರಿಗೆ ಪಾಂಡಿತ್ಯವಿತ್ತು. ಬಹಳಷ್ಟು ಒಳ್ಳೆಯ ಲೇಖನಗಳನ್ನು ಬರೆದಿದ್ದರು. ಇವರು ಕರ್ನಾಟಕದಲ್ಲಿ ಬಹುಕಾಲ ಇದ್ದದ್ದರಿಂದ ಕನ್ನಡ ದೇವರನಾಮಗಳನ್ನು ಬಹಳ ಚೆನ್ನಾಗಿ ಹಾಡುತ್ತಿದ್ದರು.

ಅವರು ಎಷ್ಟು ಹಾಸ್ಯಪ್ರವೃತ್ತಿಯವರೋ, ಅಷ್ಟೇ ದುಃಖ ಅವರ ಮನದಾಳದಲ್ಲಿತ್ತು. ಅವರಿಗೆ ಮಕ್ಕಳಿರಲಿಲ್ಲ. ನಂತರ ಹೆಂಡತಿಯ ಸಹೋದರನ ಪುತ್ರನನ್ನು ದತ್ತು ತೆಗೆದುಕೊಂಡರು. ಅವರು ಸಾಯುವ ಕೆಲವೇ ದಿನಗಳ ಮುಂಚೆ ಅವರನ್ನು ಕಾಣಲು ಬಂದವರಿಗೆ “ನಾನು ರಿಸರ್ವ್ ಮಾಡಿ ಆಗಿದೆ. ಬರೇ ಟಿಕೆಟ್‌ ಕೊಂಡುಕೊಳ್ಳಬೇಕಷ್ಟೆ” ಅಂತ ಹೇಳುತ್ತಿದ್ದರಂತೆ. ತಮ್ಮ ೭೪ನೇ ವಯಸ್ಸಿನಲ್ಲಿ ೧೯೫೦ರ ಜನವರಿ ೧ ರಂದು, ಮೆಚ್ಚಿನ ಶಿಷ್ಯರಾಗಿದ್ದ ಎಂ.ಡಿ. ರಾಮನಾಥನ್‌ ರವರನ್ನು ತ್ಯಾಗರಾಜರ ಹರಿಕಾಂಬೋಧಿ ರಾಗದ “ಎಂತರಾನೀತನಕೆಂತ” ಕೃತಿಯನ್ನು ಹಾಡಲು ಹೇಳಿ, ಅದನ್ನು ಕೇಳುತ್ತಾ ಪ್ರಾಣ ಬಿಟ್ಟರು. ಟೈಗರ್‌ ವರದಾಚಾರ್ಯರು ಸಂಗೀತ ಪ್ರಪಂಚಕ್ಕೆ ನೀಡಿದ ಕೊಡುಗೆ ಅಪಾರವಾದದ್ದು.