ಟೈಗರ್ ವರದಾಚಾರ್ — ಹಿರಿಯ ಕರ್ನಾಟಕ ಸಂಗೀತಗಾರರು. ವಿಶಿಷ್ಟ ಪ್ರತಿಭಾವಂತರಾದ ಆಚಾರ್ಯರು. ಸರಳ ಸ್ವಭಾವದವರು. ಅಧ್ಯಾಪಕರಾಗಿ ಹಲವಾರು ಕಿರಿಯರಿಗೆ ಮಾರ್ಗದರ್ಶನ ಮಾಡಿದರು.

ಟೈಗರ್ ವರದಾಚಾರ್

ಟೈಗರ್ ವರದಾಚಾರ್ ಒಬ್ಬ ಸುಪ್ರಸಿದ್ಧ ಸಂಗೀತ ವಿದ್ವಾಂಸರು. ಸಂಗೀತ ಪ್ರಪಂಚದಲ್ಲಿ ಅವರು ತಮ್ಮ ಅಪೂರ್ವ ಕಲ್ಪನಾಸಾಮರ್ಥ್ಯದಿಂದ ಮೈಮರೆತು ಹಾಡಿದ ಸಂಗೀತವನ್ನು ಕೇಳಿದ ಜನ, “ಅಹಾ! ಎಂಥಾ ಗಂಡು ಸಂಗೀತ! ಇವರು ಸಂಗೀತದ ಹುಲಿ!’ ಎಂದರು. ಅವರನ್ನು ಇಂದಿಗೂ “ಟೈಗರ್ ವರದಾಚಾರ್’ ಎಂದು ಕರೆಯುವುದೇ ವಾಡಿಕೆಯಾಗಿದೆ.

ತ್ಯಾಗರಾಜರು ಮುತ್ತುಸ್ವಾಮಿ ದೀಕ್ಷಿತರು ಮತು ಶ್ಯಾಮಾಶಾಸ್ರ್ತಿಗಳು – ಇವರು ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದು ಪ್ರಸಿದ್ಧರು. ವರದಾಚಾರ‍್ಯರು ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರಿದವರಾದರು. ವರದಾಚಾರ‍್ಯರಿಗೆ ತ್ಯಾಗರಾಜರಲ್ಲಿ ಅಪಾರವಾದ ಭಕ್ತಿ.

ಬಾಲ್ಯ ಮತ್ತು ವಿದ್ಯಾಭ್ಯಾಸ

ತಮಿಳುನಾಡಿನ ತಿರುವೊಟ್ರಿಯಾರ್ ಬಳಿ ಕಾಲಾಡಿ ಪೇಟೆ ಎಂಬುವುದು ಒಂದು ಸಣ್ಣ ಗ್ರಾಮ. ಅಲ್ಲಿ ರಾಮಾನುಜಾ ಚಾರ್ಯರೆಂಬುವರು ಒಳ್ಳೆಯ ವಿದ್ಯಾಸಂಪನ್ನರಾಗಿ ಹರಿಕಥಾ ವಿದ್ವಾಂಸರಾಗಿದ್ದರು. ಅವರಿಗೆ ಒಬ್ಬ ಹೆಣ್ಣು ಮಗಳು ಮತ್ತು ಆರು ಜನ ಗಂಡು ಮಕ್ಕಳು ಇದ್ದರು. ಈ ಆರು ಗಂಡುಮಕ್ಕಳ ಪೈಕಿ ಮೂರು ಜನರು ಸಂಗೀತ ಕ್ಷೇತ್ರದಲ್ಲಿ ವಿಖ್ಯಾತರಾದರು. ಅವರಲ್ಲಿ ಕೆ.ವಿ. ಶ್ರೀನಿವಾಸಯ್ಯಂಗಾರ‍್ಯರು ಹಿರಿಯರು. ಅವರ ನಂತರ ವರದಾಚಾರ‍್ಯರು ೧೮೭೬ರ ಆಗಸ್ಟ್ ಒಂದರಂದು ಜನಿಸಿದರು. ಕೊನೆಯವರು ವೀಣೆ ಕೃಷ್ಣಮಾಚಾರ್ಯರು.

ಈ ಮೂವರು ಸಹೋದರರು ಸಂಗೀತಶಾಸ್ತ್ರದಲ್ಲಿ ಹೇಳಿರುವಂತೆ ಗೀತ, ವಾದ್ಯ, ನೃತ್ಯ – ಈ ಮೂರು ಭಾಗಗಳಲ್ಲಿಯೂ ಒಬ್ಬೊಬ್ಬರೂ ಪ್ರಜ್ವಲಿಸಿದ್ದಾರೆ. ಹಿರಿಯವ ರಾದ ಶ್ರೀನಿವಾಸಯ್ಯಂಗಾರ‍್ಯರು ಉತ್ತಮ ಸಂಗೀತ ಶಾಸ್ತ್ರಜ್ಞರಾಗಿ, ಗಾನ ಭಾಸ್ಕರ, ತ್ಯಾಗರಾಜ ಹೃದಯ, ಸಂಗೀತ ರಸಾರ್ಣವ ಮೊದಲಾದ ಗ್ರಂಥಗಳನ್ನು ರಚಿಸಿ ಸಂಗೀತಕ್ಷೇತ್ರಕ್ಕೆ ಮಹೋಪಕಾರ ಮಾಡಿದರು. ಇಷ್ಟೇ ಅಲ್ಲದೆ ಸ್ವತಃ ನೃತ್ಯಕಲಾವಿದರಾಗಿ ಒಂದು ಶಾಲೆಯನ್ನು ನಡೆಸುತ್ತಿದ್ದದ್ದೂ ಉಂಟು. ಗಾಯನದಲ್ಲಿ ವರದಾಚಾರ‍್ಯರು ವೈಣಿಕರಾಗಿ ಹಾಗೂ ಅನೇಕ ರಚನೆಗಳನ್ನು ರಚಿಸಿ ವಾಗ್ಗೇಯಕಾರರಾಗಿ ಪ್ರಸಿದ್ಧರಾದರು.

ರಾಮಾನುಜಾಚಾರ್ಯರು ಬಹಳ ನೇಮ ನಿಷ್ಠೆಗಳಿಂದ ಕೂಡಿದ ಭಾಗವತರು. ತಮ್ಮಂತೆ ತಮ್ಮ ಮಕ್ಕಳು ಸಂಗೀತವನ್ನು ವೃತ್ತಿಯಾಗಿ ಅವಲಂಬಿಸುವುದು ಅಷ್ಟಾಗಿ ಅವರಿಗೆ ಇರಲಿಲ್ಲ. ಆದರೆ ದೈವಸಂಕಲ್ಪ ಬೇರೆಯಾಗಿತ್ತು. ತಾವು ಸಂಗೀತವನ್ನು ಕಲಿಯುವುದು ತಂದೆಗೆ ಇಷ್ಟವಿಲ್ಲ ಎಂದು ಮಕ್ಕಳಿಗೆ ತಿಳಿದಿತ್ತು. ಆದರೂ ಮಕ್ಕಳಿಗೆ ಸಂಗೀತದಲ್ಲಿ ಆಸಕ್ತಿ. ತಂದೆಗೆ ತಿಳಿಯದಂತೆಯೇ ಸಂಗೀತವನ್ನು ಕೇಳುವುದು ಮತ್ತು ಅಭ್ಯಾಸ ಮಾಡುವುದನ್ನು ಆರಂಭಿಸಿದರು. ಆಗ ಅವರ ಊರಿನಲ್ಲಿಯೇ ಪಿಟೀಲು ವಿದ್ವಾಂಸರಾಗಿದ್ದ ರಾಮಚಂದ್ರ ಅಯ್ಯರ್ ಎಂಬುವರ ಸ್ನೇಹವು ಬೆಳೆದು, ಅವರು ನುಡಿಸುತ್ತಿದ್ದ ವೈಖರಿ ಮತ್ತು ಭಾವ ನಿರೂಪಣೆಗೆ ಬೆರಗಾದ ಸಹೋದರರು ಅವುಗಳನ್ನು ಸುಲಭವಾಗಿ ಗ್ರಹಿಸಿದರು. ಹಲವರು ಸಂಗೀತ ವಿದ್ವಾಂಸರ ಪ್ರಭಾವ ವರದಾಚಾರ‍್ಯರ ಮೇಲೆ ಆಯಿತು. ಇದರೊಡನೆ ಅವರ ಶಾಲಾ ವಿದ್ಯಾಭ್ಯಾಸವು ಆಗಿನ ಕಾಲದ ಎಫ್. ಎ. ಮಟ್ಟದವರೆಗೂ ತಲುಪಿತ್ತು.

ಆಗ ಪ್ರಸಿದ್ಧ ವಿದ್ವಾಂಸರಾಗಿದ್ದ ಮಹಾ ವೈದ್ಯನಾಥ ಅಯ್ಯರ್ ಮತ್ತು ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್‌ರವರ ಸಂಗೀತವನ್ನು ಕೇಳಿದ ವರದಾಚಾರ್ಯರು ಸುಬ್ರಹ್ಮಣ್ಯ ಅಯ್ಯರ್ ಶೈಲಿಗೆ ಬಹುವಾಗಿ ಮಾರುಹೋದರು. ಅವರಲ್ಲಿಯೇ ಅಭ್ಯಾಸವನ್ನು ಮುಂದುವರಿಸಬೇಕೆಂಬ ಅಕಾಂಕ್ಷೆ ಬಲವಾಗಿ ಬೇರೂರಿತು. ಇದರಿಂದ ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ತಿರುವಯ್ಯಾರಿಗೆ ತೆರಳಿ ಅವರನ್ನು ಬೇಡಿಕೊಂಡಾಗ, ವರದಾಚಾರ‍್ಯರ ಬೇಡಿಕೆಯನ್ನು ಮನ್ನಿಸಿ, ಹಾಗೂ ಇವರ ಸುಪ್ತಪ್ರತಿಭೆ ಶಕ್ತಿ ಸಾಮರ್ಥ್ಯಗಳನ್ನು ಗಮನಿಸಿ, ಅಯ್ಯರ್‌ರವರು ಇವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು.

ಆಗಿನ ಕಾಲದ ಗುರುಕುಲ ವಾಸ ಒಂದು ರೀತಿ ಕಠಿಣವಾಗಿಯೇ ಇತ್ತು. ಶಿಷ್ಯನು ಗುರುಗಳ ಮನೆಯ ಕೆಲಸ, ಗುರು ಶುಶ್ರೂಷೆಗಳನ್ನು ಮಾಡಿ ಅವರಿಂದ ಪ್ರೀತ್ಯಾದರಗಳನ್ನು ಗಳಿಸಬೇಕು. ಗುರುಗಳ ಮನೆಯಲ್ಲಿ ಬಟ್ಟೆ ಒಗೆಯಬೇಕು, ಹಸುಗಳನ್ನು ನೋಡಿಕೊಳ್ಳಬೇಕು. ಗುರುಗಳು, ಅವರ ಪತ್ನಿ ಹೇಳಿದ ಕೆಲಸಗಳನ್ನು ಮಾಡಬೇಕು ಶಿಷ್ಯನ ತಾಳ್ಮೆಯನ್ನು ಪರೀಕ್ಷಿಸಿದ ಗುರುಗಳು, ಅನಂತರವೇ ವಿದ್ಯಾದಾನ ಮಾಡುತ್ತಿದ್ದರು.

ಈ ಕಾಲದಲ್ಲಿ ವರದಾಚಾರ‍್ಯರು ಬಹುಮಟ್ಟಿಗೆ ಗುರುಗಳ ಸೇವೆ ಅವರ ಮನೆಗೆಲಸ ಇವುಗಳಲ್ಲಿ ದಿನವನ್ನು ಕಳೆಯುತ್ತಿದ್ದರು. ಅವರು ಇತರರಿಗೆ ಪಾಠ ಹೇಳಿಕೊಡುವಾಗ ತಾವೂ ಕುಳಿತು ಕೇಳುತ್ತಿದ್ದರು. ಈ ಶಿಸ್ತಿನಲ್ಲೇ ಮೂರು ವರ್ಷಗಳ ಕಾಲ ಅಭ್ಯಾಸಮಾಡಿ ಗುರುಗಳ ಆಶೀರ್ವಾದ ಪಡೆದು ಮನೆಗೆ ಹಿಂದಿರುಗಿದರು.

ಮಲಬಾರಿನಲ್ಲಿ

ಮನೆಯ ವಾತಾವರಣವು ಅಷ್ಟು ಹಿತಕರವಾಗಿಲ್ಲದಿದ್ದ ಕಾರಣ ತಂದೆಯವರು ತಮ್ಮ ಮಗನು ಸಂಗೀತದಿಂದ ಜೀವನ ಸಾಗಿಸಲು ಒಪ್ಪಲಿಲ್ಲ. ಇದರಿಂದ ವರದಾಚಾರ‍್ಯರು ಕಲ್ಲಿಕೋಟೆಯ ಸರ್ವೇ ಇಲಾಖೆಯಲ್ಲಿ ೧೮೯೯ರ ಆಗಸ್ಟ್‌ನಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ಇದಕ್ಕಾಗಿ ಅವರಿಗೆ ತಿಂಗಳಿಗೆ ಹನ್ನೆರಡು ರೂಪಾಯಿಗಳು ಸಂಬಳ ಬರುತ್ತಿತ್ತು. ವರದಾಚಾರ‍್ಯರು ಕಚೇರಿಯಿಂದ ಬಂದ ನಂತರ ಸಂಗೀತದ ಅಭ್ಯಾಸದಲ್ಲಿ ತನ್ಮಯರಾಗುತ್ತಿದ್ದರು, ಅದೇ ಆಫೀಸಿನಲ್ಲಿ ಇದ್ದ ಇವರ ಮೇಲಾಧಿಕಾರಿಗಳು ಸಹ ಸಂಗೀತ ತಿಳಿದವರು. ಅವರ ಮನೆಯಲ್ಲಿ ಭಜನ ಗೋಷ್ಠಿಯನ್ನು ನಡೆಸುತ್ತಿದ್ದರು. ಆ ಗೋಷ್ಠಿಗೆ ವರದಾಚಾರ‍್ಯರು ಸೇರಿದರು. ಅವರು ಹಾಡುವುದನ್ನು ಕೇಳಿದವರಿಗೆಲ್ಲ ಅವರ ಪ್ರತಿಭೆ ಸ್ಪಷ್ಟವಾಗುತ್ತಿತ್ತು. ಸ್ವಲ್ಪ ಕಾಲದಲ್ಲೆ ಒಳ್ಳೆಯ ಸಂಗೀತಗಾರರೆಂದು ಪ್ರಸಿದ್ಧರಾದರು. ಜೊತೆಗೆ ಅಲ್ಲಿ ಕೆಲವು ಗಣ್ಯ ಮಿತ್ರರ ಸ್ನೇಹವಾಯಿತು. ಒಳ್ಳೆಯ ಸಂಗೀತ ಪಾಠವು ದೊರೆಯಿತು. ಕೈಗೆ ಒಂದಿಷ್ಟು ಹಣವೂ ಬರಲು ಪ್ರಾರಂಭವಾಯಿತು. ಹಲವು ಸಮಾರಂಭಗಳಲ್ಲಿ ಕಚೇರಿ ನಡೆಸಲು ಜನರು ಇವರನ್ನು ಆಹ್ವಾನಿಸುತ್ತಿದ್ದರು. ಇವರ ಕೀರ್ತಿಯು ಮಲಬಾರಿನಿಂದ ಮೈಸೂರಿನ ಕಡೆಗೂ ಹಬ್ಬಿತು.

ಮೊಟ್ಟಮೊದಲು ೧೯೧೬ರಲ್ಲಿ ಮೈಸೂರಿಗೆ ವರದಾಚಾರ‍್ಯರು ಆಗಮಿಸಿ ನಡೆಸಿಕೊಟ್ಟ ಕಚೇರಿಯನ್ನು ಕೇಳಲು ಬಂದಿದ್ದ ಆಸ್ಥಾನ ವಿದ್ವಾಂಸರುಗಳೂ, ಕಲಾಪ್ರೇಮಿಗಳೂ ಬಹಳವಾಗಿ ಶ್ಲಾಘಿಸಿದರು. ಆಗಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಂಗೀತ ಎಂದರೆ ತುಂಬ ಅಭಿಮಾನ. ಅವರಿಗೆ ಸುದ್ದಿ ತಲುಪುವುದು ಎಷ್ಟು ಹೊತ್ತು? ಕೆಲವೇ ದಿನಗಳಲ್ಲಿ ಮಹಾರಾಜರ ಸಮ್ಮುಖದಲ್ಲಿ ಹಾಡುವ ಸುಯೋಗ ವರದಾಚಾರ‍್ಯರಿಗೆ ದೊರೆಯಿತು. ಕೇಳಿ ಆನಂದಿಸಿದ ಮಹಾರಾಜರು ‘ಸಂಗೀತದ ಹುಲಿ’, ಎಂದು ಅವರನ್ನು ಹೊಗಳಿದರು ಎಂದು ಹೇಳುತ್ತಾರೆ. ಮಹಾರಾಜರು ತೋಡಾ, ಖಿಲ್ಲತ್ತು, ಜೋಡಿಶಾಲು ಮತ್ತು ಸಂಭಾವನೆಯನ್ನು ಕೊಟ್ಟು ಅವರನ್ನು ಗೌರವಿಸಿದರು. ಇಲ್ಲಿಂದ ಮುಂದೆ ಇವರು ‘ಟೈಗರ್ ವರದಾಚಾರ್’ ಎಂದೇ ಪ್ರಖ್ಯಾತಿ ಹೊಂದಿದರು. ಆಗ ಅವರಿಗೆ ನಲವತ್ತು ವರ್ಷ.

ತಿರುಮಕೂಡಲಿನಲ್ಲಿ ವರದಾಚಾರ‍್ಯರು

ತಿರುಮಕೂಡಲು ನರಸೀಪುರವು, ಕಾವೇರಿ ಹಾಗೂ ಕಪಿಲಾ ನದಿಗಳ ಸಂಗಮದಲ್ಲಿದೆ. ಇದು ಅಗಸ್ತ್ಯೇಶ್ವರ, ಗುಂಜಾ ನರಸಿಂಹಸ್ವಾಮಿಗಳ ಪವಿತ್ರಕ್ಷೇತ್ರವೂ ಹೌದು. ಸುಮಾರು ಅರವತ್ತು ವರ್ಷಗಳ ಹಿಂದೆ ತಿರುಮಕೂಡಲು ವಿವಿಧ ಕಲೆಗಳ ಬೀಡಾಗಿತ್ತು. ವೇದಾಧ್ಯಯನ ಸಂಪನ್ನರು, ಗಾಯಕ- ವಾದಕರು ನೃತ್ಯ- ಅಭಿನಯ ಕೋವಿದರು ಮುಂತಾದವರಿಂದ ತುಂಬಿರುತ್ತಿದ್ದ ಸಂಪದ್ಭರಿತ ಗ್ರಾಮ. ಪಿಟೀಲು ಚೌಡಯ್ಯನವರು ಹಾಗೂ ಅವರ ಬಂಧುವರ್ಗದವರೆಲ್ಲಾ ಇಲ್ಲಿಯವರೇ. ಗರ್ಗೇಶ್ವರಿ, ನರಸೀಪುರ, ತಲಕಾಡು, ಸೋಸಲೆ ಮೊದಲಾದ ಊರಿನ ಜಮೀನ್ದಾರರು, ಸಾಹುಕಾರರುಗಳು ಇಂತಹ ಕಲಾವಿದರ ಪೋಷಕವರ್ಗವಾಗಿದ್ದರು. ಅವರುಗಳ ಮನೆಯಲ್ಲಿ ನಡೆಯುತ್ತಿದ್ದ ಅನೇಕ ಸಮಾರಂಭಗಳು ಹಾಗೂ ಉತ್ಸವಗಳಲ್ಲಿ ಈ ಕಲಾವಿದರ ಕಾರ್ಯಕ್ರಮಗಳನ್ನು ಏರ್ಪಡಿಸಿ, ಆದರದಿಂದ ಸನ್ಮಾನಿಸುತ್ತಿದ್ದರು. ದೊಡ್ಡ ಜಮೀನ್ದಾರರುಗಳಾಗಿದ್ದ ಗರ್ಗೇಶ್ವರಿ ಸುಬ್ಬರಾಯರು ಮತ್ತು ನರಸೀಪುರದ ರಾಘವೇಂದ್ರರಾಯರು ಕಲಾಭಿಮಾನಿಗಳಲ್ಲಿ ಪ್ರಮುಖರಾದವರು. ಇವರು ವರದಾಚಾರ‍್ಯರ ಕಚೇರಿಯನ್ನು ಮೈಸೂರಿನಲ್ಲಿ ಕೇಳಿ ಆನಂದಪರವಶರಾಗಿ, ತಮ್ಮ ಊರಿಗೂ ಸಹ ಕರೆಸಿ, ಕಚೇರಿ ಏರ್ಪಡಿಸಿ ಗೌರವಿಸಿದರು. ಅಲ್ಲದೆ ಅಲ್ಲಿಯ ಕಲಾಭಿಮಾನಿಗಳು ಟೈಗರ್‌ರವರನ್ನು ತಮ್ಮಲ್ಲಿಯೇ ಕೆಲವು ಕಾಲ ಉಳಿಸಿಕೊಳ್ಳಬೇಕೆಂದು ಅಪೇಕ್ಷೆಪಟ್ಟು, ಜೊತೆಗೆ ಊಟ, ವಸತಿ ಸೌಕರ್ಯಗಳನ್ನೂ ಸಹ ಏರ್ಪಡಿಸುವುದಾಗಿ ಸೂಚಿಸಿದರು. ಕಲಾಭಿಮಾನಿಗಳ ಔದಾರ್ಯ, ಪ್ರೇಮ ಹಾಗೂ ಅಲ್ಲಿನ ಪ್ರಕೃತಿ ಸೌಂದರ‍್ಯಕ್ಕೆ ಮನಸೋತ ಟೈಗರ್‌ರವರು ಕುಟುಂಬ ಸಮೇತ ಕೆಲವು ವರ್ಷಗಳು ತಿರುಮಕೂಡಲಿನಲ್ಲೇ ನೆಲಸಬೇಕಾಯಿತು.

ಸುತ್ತಮುತ್ತಲಿನ ಜನರು ಇವರ ಅನಿರೀಕ್ಷಿತ ಆಗಮನವನ್ನು ತಮ್ಮ ಸುದೈವವೆಂದು ತಿಳಿದರು. ಟೈಗರ್‌ರವರಿಗೂ ಸಹ ಗಣ್ಯಮಿತ್ರರ ಕೂಟವು ಲಭಿಸಿತು. ಯಳಂದೂರು ರಂಗಾಚಾರ‍್ಯರು, ಅಹೋಬಲ ಮಠದ ಏಜಂಟರಾಗಿದ್ದ ತಲಕಾಡು ಶ್ರೀನಿವಾಸರಂಗಾಚಾರ‍್ಯರು, ಕೊಳಲುವಾದಕರಾದ ತಿರುಮಕೂಡಲು ಸುಬ್ಬಣ್ಣನವರು. ನರಸೀಪುರದ ಪಿಟೀಲು ವೆಂಕಟಸುಬ್ಬಯ್ಯನವರು, ಮೃದಂಗದ ಕಾಳಯ್ಯನವರು ಮುಂತಾದವರು ಅವರ ಸ್ನೇಹಿತರಾದರು. ಇವರೆಲ್ಲರೂ ಸದಾಕಾಲ ಅವರ ಮನೆಯಲ್ಲಿಯೋ, ಹೊಳೆಯ ತೀರದಲ್ಲಿಯೋ ಇದ್ದು ವರದಾಚಾರ‍್ಯರ ಸಂಗೀತವನ್ನು ಕೇಳಿ, ಪಕ್ಕವಾದ್ಯವನ್ನು ನುಡಿಸಿ ಆನಂದಿಸುತ್ತಿದ್ದರು.

ಲಯನ್ – ಟೈಗರ್

ತಿರುಮಕೂಡಲಿನಲ್ಲಿ ಕೆಲವು ವರ್ಷಗಳು ಕಳೆದ ನಂತರ ಟೈಗರ್ ಮೈಸೂರಿನಲ್ಲೇ ೧೯೩೦ರ ವರೆಗೂ ಇರಬೇಕಾಯಿತು. ಆಗ ಮೈಸೂರಿನಲ್ಲಿ ಶೇಷಣ್ಣನವರು ತಮ್ಮ ಮನೆಯಲ್ಲಿ ನಡೆಸುತ್ತಿದ್ದ ರಾಮೋತ್ಸವ, ಕೃಷ್ಣೋತ್ಸವ ಸಂದರ್ಭಗಳಲ್ಲಿ ಇವರ ಕಚೇರಿಯೂ ಏರ್ಪಾಡಾಗಿತ್ತು. ಆ ದಿನ ಕಚೇರಿ ಕೇಳಲು ಬಂದಿದ್ದ ವೈಣಿಕಪ್ರವೀಣ ಭಕ್ತಿ ಸುಬ್ಬಣ್ಣನವರು, ಗಾನವಿಶಾರದ ಬಿಡಾರಂ ಕೃಷ್ಣಪ್ಪನವರು ಮತ್ತು ಎಲ್ಲಾ ಆಸ್ಥಾನ ವಿದ್ವಾಂಸರುಗಳೂ ಮೈ ಮರೆಯುವ ಸಂಗೀತವನ್ನು ಕೇಳಿ ಸಂತುಷ್ಟರಾದರು. ಆಗ ಶೇಷಣ್ಣನವರು, ವರದಾಚಾರ‍್ಯರನ್ನು ಕುರಿತು, “ಕೇವಲ ಟೈಗರ್ ಎಂದು ಕರೆದರೆ ಸಾಲದು. ಸಿಂಹದಂತಹ ಗಾಂಭಿರ್ಯಕ್ಕೆ “ಲಯನ್’ ಎಂದು ಕರೆಯಬೇಕು” ಎಂದು ಮನತುಂಬಿ ಹೇಳಿದರು.

ಪ್ರಾಧ್ಯಾಪಕರಾಗಿ ಮದರಾಸಿನಲ್ಲಿ

೧೯೩೦ರ ವರೆಗೆ ಮೈಸೂರಿನಲ್ಲಿದ್ದ ಆಚಾರ್ಯರು ಅನಂತರ ಅವರ ಕುಟುಂಬದ ಆಶಯದಂತೆ ಮೈಸೂರನ್ನು ಬಿಟ್ಟು ಮದರಾಸಿನಲ್ಲಿಯೇ ನೆಲಸಿದರು. ಆಗ ಮದರಾಸಿನಲ್ಲಿ ಮ್ಯೂಸಿಕ್ ಅಕಾಡೆಮಿಯ ಕಾರ್ಯ ಚಟುವಟಿಕೆಗಳು ಆರಂಭವಾಗಿ ಉತ್ತಮಕಾರ್ಯವನ್ನು ಮಾಡುತ್ತಿದ್ದಿತು. ೧೯೩೧ರಲ್ಲಿ ಅದು ನಡೆಸುತ್ತಿದ್ದ ಸಂಗೀತೋತ್ಸವ ಮತ್ತು ತ್ರೈಮಾಸಿಕ ಪತ್ರಿಕೆಯೊಡನೆ ಸಂಗೀತ ಉಪಾಧ್ಯಾಯರ ತರಬೇತಿ ಶಾಲೆಯನ್ನು ವಿಜಯದಶಮಿಯ ದಿನ ಆರಂಭಿಸಿತು. ಟೈಗರ್‌ರವರೇ ಮೊಟ್ಟ ಮೊದಲನೆಯ ಪ್ರಾಧ್ಯಾಪಕರಾಗಿ ಒಂದು ವರ್ಷ ಕಾಲ ಇಲ್ಲಿ ಸೇವೆ ಸಲ್ಲಿಸಿದರು.

೧೯೩೨ರಲ್ಲಿ ಮದರಾಸ್ ವಿಶ್ವವಿದ್ಯಾನಿಲಯವು ಕರ್ಣಾಟಕ ಸಂಗೀತದ ಡಿಪ್ಲೊಮಾ ವಿಭಾಗವನ್ನು ಆರಂಭಿಸಿದಾಗ ಅದಕ್ಕೆ ಮುಖ್ಯಸ್ಥರನ್ನಾಗಿ ವರದಾಚಾರ‍್ಯರನ್ನೇ ನೇಮಕಮಾಡಿತು.

ಪಾಠಕ್ರಮ ಮತ್ತು ಶೈಲಿ

ವರದಾಚಾರ‍್ಯರಲ್ಲಿ ಅಭ್ಯಾಸ ಮಾಡುವುದೆಂದರೆ ಒಂದು ಸಾಹಸದ ಕೆಲಸವೇ. ಸಾಮಾನ್ಯ ತಿಳುವಳಿಕೆ ಉಳ್ಳವರು ಅವರಿಂದ ಏನನ್ನೂ ಕಲಿಯಲು ಸಾಧ್ಯವಿರುತ್ತಿರಲಿಲ್ಲ. ಕಾರಣ, ಅವರು ಹಾಡುತ್ತಿದ್ದ ಕ್ರಮದಲ್ಲಿ ಒಂದೇ ರಾಗವು ಪ್ರತಿದಿನವೂ ನೂತನ ರೀತಿಯಲ್ಲಿ ಹೊರ ಹೊಮ್ಮುತ್ತಿತು. ಅವರ ಶೈಲಿಯಲ್ಲಿದ್ದ ಮನೋಧರ್ಮ, ಲಯನಿರ್ಣಯ, ಹಾಗೂ ಭಾವ ಪೂರಿತವಾದ ಹಾಡಿಕೆಯನ್ನು ಅನುಕರಣೆಮಾಡುವುದು ನಿಜಕ್ಕೂ ಅಸಾಧ್ಯವೇ. ಅವರು ಸಾಮಾನ್ಯ ರಾಗಗಳಾದ ತೋಡಿ, ಖರಹರಪ್ರಿಯ, ಕಲ್ಯಾಣಿ ರಾಗಗಳನ್ನು ಎಷ್ಟು ನಿರಾಯಾಸವಾಗಿ ಹಾಡುತ್ತಿದ್ದರೋ ಅಷ್ಟೇ ನಿರಾಯಾಸ ವಾಗಿ ಅಪೂರ್ವ ರಾಗಗಳಾದ ಕೋಕಿಲಪ್ರಿಯ, ಕಾನಡ, ಯದುಕುಲ ಕಾಂಬೋಧಿ, ಪೂರ್ಣಚಂದ್ರಿಕೆ ಮೊದಲಾದ ರಾಗಗಳನ್ನೂ ಹಾಡಬಲ್ಲವರಾಗಿದ್ದರು. ೧೯೩೨ರ ಸಂಗೀತ ಸಮ್ಮೇಳನಕ್ಕೆ ಟೈಗರ್‌ರವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದಾಗ, ತಜ್ಞರ ಸಮಿತಿಯಲ್ಲಿ ನಡೆಯುತ್ತಿದ್ದ ರಾಗಗಳ ಚರ್ಚೆಗಳಲ್ಲಿ ಸಂಪೂರ್ಣರಾಗಿ ಪಾಲುಗೊಂಡು ತಮ್ಮ ಅನುಭವ, ನಿಲುವನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದ ಧೀಮಂತ ವ್ಯಕ್ತಿ. ಆ ವರ್ಷ ಚರ್ಚೆಗೆ ಬಂದ ಬೇಗಡೆ ರಾಗದಲ್ಲಿ ಎಲ್ಲಾ ವಿದ್ವಾಂಸರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಆದರೆ ಅಧ್ಯಕ್ಷಸ್ಥಾನದಲ್ಲಿದ್ದ ವರದಾಚಾರ‍್ಯರು ವಿವರಿಸಿದ ವೈಖರಿಯೇ ಬೇರೆ.

ಭಾವಪೂರ್ಣವಾದ ರಾಗವೆಂದು ಹೇಳಿ, ಬೇಗಡೆ ರಾಗದ ಛಾಯೆಯು ಸ್ವಲ್ಪವೂ ಕೆಡದಂತೆ ಆರೋಹಣ ಅವರೋಹಣಗಳನ್ನು ಅವರು ಸಂಪೂರ್ಣರಾಗಿಯೇ ಹಾಡಿದರು. ಅವರ ಚಾತುರ್ಯ ಮತ್ತು ಸಾಮರ್ಥ್ಯವನ್ನು ಅಂದಿನ ತಜ್ಞರು ಹಾಗೂ ಸಭಿಕರೆಲ್ಲರೂ ಮೆಚ್ಚಿದರು. “ಇದು ವರದಾಚಾರ‍್ಯರಿಂದ ಸಾಧ್ಯವೇ ಹೊರತು ಬೇರೆ ಯಾರಿಂದಲೂ ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು ಅವರಿಗೆ “ಸಂಗೀತ ಕಲಾನಿಧಿ’ ಎಂಬ ಬಿರುದನ್ನು ಕೊಟ್ಟು ಅಕಾಡೆಮಿಯವರು ಗೌರವಿಸಿದರು.

ಮಾರ್ಗದರ್ಶನ

ದರ್ಬಾರ್ ರಾಗದ ಪಾಠವನ್ನು ಬೋಧಿಸುತ್ತಿದ್ದಾಗ ವರದಾಚಾರ‍್ಯರು ತಮ್ಮ ಸೋದರಿಯನ್ನು ಬಹಳವಾಗಿ ನೆನೆಯುತ್ತಿದ್ದರು. ಕಾರಣ, ಆ ರಾಗವನ್ನು ಆಕೆಯು ರಸವತ್ತಾಗಿ ನಿರೂಪಿಸಬಲ್ಲವರಾಗಿದ್ದರೆಂದು ಹೇಳುತ್ತಿದ್ದರು. ಇದರಿಂದ ದರ್ಬಾರ್ ರಾಗವು ಇವರ ಮೇಲೆ ಸಾಕಷ್ಟು ಪರಿಣಾಮ ಬೀರಿರಲೇಬೇಕು. ಕಚೇರಿಯಲ್ಲಿ ದರ್ಬಾರ್ ಅಥವಾ ಕಲ್ಯಾಣಿ ರಾಗದ ವರ್ಣವನ್ನು ತ್ರಿಕಾಲದಲ್ಲಿ ಹಾಡುತ್ತಿದ್ದುದ್ದು ಇವರ ಮತ್ತೊಂದು ವೈಶಿಷ್ಟ್ಯ. ಆ ವರ್ಣವನ್ನು ಹಾಡುವಾಗ ಆ ರಾಗದ ಸ್ವರಗಳ ರಸಪೋಷಣೆಯನ್ನು ಮಾಡಿ ಕಾಲಪ್ರಮಾಣಕ್ಕೆ ಲೋಪವಿಲ್ಲದಂತೆ ಹಾಡಿ ತೋರಿಸುತ್ತಿದ್ದರು. ಇದರೊಡನೆ ಅವರ ಅಚ್ಚುವ್ಮೆಚ್ಚಿನ “ಏತಾವುನಾರಾ’ ಎಂಬ ಯದುಕುಲ ಕಾಂಬೋಧಿ ರಾಗದ ಕೀರ್ತನೆಯು ವೈಶಿಷ್ಟ್ಯ ಪೂರ್ಣವಾಗಿತ್ತು.

ಒಂದು ವರ್ಷದ ಅವರ ಕಚೇರಿಯಲ್ಲಿ ಇದರೊಡನೆ ಶಿಷ್ಯರಿಗೆ ಬೋಧನಪ್ರದವಾಗಿ ಕಾನಡಾ ರಾಗವನ್ನೇ ಆಯ್ಕೆಮಾಡಿಕೊಂಡು, ರಾಗತಾನಗಳನ್ನು ಹಾಡಿ ‘ನೀಲ ಮಣಿ ನಿಭದ ಶರೀರ’ ಎಂಬ ಪಲ್ಲವಿಯನ್ನು ಆತ್ಯಮೋಘವಾಗಿ ಹಾಡಿದರು. ಅದಕ್ಕೆ ತಕ್ಕಂತೆ ಅವರು ಮಾಡಿದ ಸಾಹಿತ್ಯ ವಿನ್ಯಾಸ (ರವಲ್) ಹಾಗೂ ಸರ್ವ ಲಘು ಸ್ವರಗಳನ್ನು ಹಾಡಿದ ಶೈಲಿಕೇಳಿದವರ ಮನದಲ್ಲಿ ಇನ್ನೂ ಅಚ್ಚಳಿಯದೆ ನಿಂತಿದೆ. ಅಂದರೆ ವರದಾಚಾರ‍್ಯರು ರಾಗ, ತಾನ, ಪಲ್ಲವಿ, ನೆರವಲ್, ಸ್ವರಗಳೆಲ್ಲ ದವರಲ್ಲೂ ಪಳಗಿದ ಹುಲಿ! ಸಂಗೀತಶಾಸ್ತ್ರವನ್ನು ಕುರಿತು ಬಹು ಒಳ್ಳೆಯ ಲೇಖನಗಳನ್ನು ಬರೆಯುತ್ತಿದ್ದರು, ಅಧಿಕಾರ ಯುತವಾದ ಪ್ರದರ್ಶನ ಭಾಷಣಗಳನ್ನು ವಿಶಿಷ್ಟ ರೀತಿಯಲ್ಲಿ ಮಾಡುತ್ತಿದ್ದರು.

ಪ್ರದರ್ಶನ ಭಾಷಣಕ್ಕೆ ಉದಾಹರಣೆಯಾಗಿ ಒಮ್ಮೆ ಅವರು ‘ತ್ಯಾಗರಾಜರ ಕೃತಿಯಲ್ಲಿಯ ರಸ ಮತ್ತು ಭಾವ ವಿವರಣೆ’ ಎಂಬ ವಿಷಯವನ್ನು ತೆಗೆದುಕೊಂಡರು. ಅದನ್ನು ಪ್ರತಿಪಾದಿಸಲು “ನಿನುವಿನಾಸುಖಮುಗಾನು” ಎಂಬ ತೋಡಿ ರಾಗದ ಕೃತಿಯ ಚರಣದ ಒಂದು ಭಾಗವಾದ ‘ರೂಪಮು, ಪ್ರತಾಪಮು,  ಶರಚಾಪಮು, ಸಲ್ಹಾಪಮುಗಲ’ ಎಂಬ ಆ ಒಂದು ಸಾಲಿನಲ್ಲಿ, ಶ್ರೀ ತ್ಯಾಗರಾಜಸ್ವಾಮಿಗಳು ವಿವಿಧ ರಸ ಮತ್ತು ಭಿನ್ನಭಾವಗಳನ್ನುಎಷ್ಟು ಉತ್ಕೃಷ್ಟವಾಗಿ ಒಂದು ಗೂಡಿಸಿದ್ದಾರೆ ಎಂಬುದನ್ನು ತಿಳಿಸಿದರು. ಅಂದರೆ, ‘ರೂಪಮು’ ಎಂದು ಹಾಡಿ ತೋರಿಸಿದ ಸಂದರ್ಭದಲ್ಲಿ ರಾಮನ ಸೌಂದರ್ಯವನ್ನು, ‘ಪ್ರತಾಪಮು’ ಎಂದು ಹಾಡಿದಾಗ ರಾಮನ ಶೌರ್ಯವನ್ನು ‘ಶರಚಾಪಮು’ ಎಂದು ಹಾಡಿದಾಗ ತಾರಾಮಂಡಲದಂತೆ ಸಂಗತಿಯು ಹರಡಿ ಶರವೃಷ್ಟಿಯೇ ಅಯಿತೋ ಎನ್ನುವ ಮಟ್ಟಕ್ಕೂ, “ಸಲ್ಲಾಪಮುಗಲ’ ಎಂದು ಹಾಡಿದಾಗ ರಾಮನ ಸರಸಮಯವಾದ ಹಾಗೂ ಕರುಣಾಮಯವಾದ ಮಾತುಗಳು ನುಡಿದಂತೆ ಈ ನಾಲ್ಕು ವಿಧವಾದ ರಸಭಾವವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದರು.

ಅಷ್ಟೇ ಏಕೆ? ಇನ್ನೂ ಉತ್ತಮ ಮಟ್ಟದಲ್ಲಿ ಮುಖಾರಿ ರಾಗದ “ಎಂತ ನಿನ್ನೆ ವರ್ಣಿಂತುನುಶಬರಿ’ ಎಂಬ ಕೀರ್ತನೆ ಹಾಡಿ, ಚರಣಭಾಗವನ್ನು ವಿವರಿಸಿ ಹಾಡಿ ತೋರಿಸುತ್ತಾ,  ಶಬರಿಯು ರಾಮನನ್ನು ಕಂಡೊಡನೆ ಪುಳಕಿತಳಾಗಿ, ತಾನು ತನ್ನ ಕೈಯಿಂದಲೇ ರಾಮನಿಗೆ ಉತ್ತಮ ಹಣ್ಣುಗಳನ್ನು ಸಮರ್ಪಿಸಿ, ಅವನ ಪಾದಗಳೆರಡನ್ನೂ ಬಿಗಿದಪ್ಪಿ, ತನಗೆ ಇನ್ನು ಪುನರ್ಜನ್ಮ ಬೇಡವೆಂದು ಬೇಡಿ, ರಾಮನ ಪಾದಲ್ಲಿ ಐಕ್ಯವಾದ ರಸ ಸನ್ನಿವೇಶವನ್ನು ಅಭಿನಯಪೂರ್ವಕವಾಗಿ ಸಭಿಕರ ಕಣ್ಣೆದುರಿನಲ್ಲೇ ನಡೆದಂತೆ, ತನ್ಮಯತೆ ಬರುವಂತೆ ಹಾಡಿ ತೋರಿಸಿದರು.

ಈ ರೀತಿ ತಮ್ಮ ಕಲಾ ನೈಪುಣ್ಯವನ್ನೇ ತೋರಿದ್ದಲ್ಲದೆ, ವರದಾಚಾರ‍್ಯರು ಮದರಾಸು ವಿಶ್ವವಿದ್ಯಾನಿಲಯದಲ್ಲಿ ಆರು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಆಣ್ಣಾಮಲೈ ವಿಶ್ವವಿದ್ಯಾನಿಲಯ

ಅಣ್ಣಾಮಲೈ ವಿಶ್ವವಿದ್ಯಾನಿಲಯಕ್ಕೆ ರೈಟ್ ಆನರಬಲ್ ವಿ. ಎಸ್. ಶ್ರೀನಿವಾಸ ಶಾಸ್ತ್ರಿಗಳು ಉಪಕುಲಪತಿಗಳಾಗಿದ್ದರು. ಇವರು ೧೯೩೮ರಲ್ಲಿ ಟೈಗರ್‌ರವರನ್ನು ಅಣ್ಣಾಮಲೈ ವಿಶ್ವವಿದ್ಯಾನಿಲಯದ ಸಂಗೀತ ಕಾಲೇಜಿನ ಪ್ರಾಧ್ಯಾಪಕರಾಗಿ ಬರಮಾಡಿಕೊಂಡರು. ಆ ಸ್ಥಾನದಲ್ಲಿ ಇವರು ೧೯೪೪ರವರೆಗೂ ಆಚಾರ್ಯರಾಗಿ ಬೋಧನೆ ಮಾಡಿದರು. ಇದರೊಡನೆ ಅಲ್ಲಿಯ ಮುಖ್ಯ ಚಟುವಟಿಕೆಯಾಗಿದ್ದ ತಮಿಳ್ ಇಶೈ ಸಂಘದಲ್ಲೂ ಪ್ರಮುಖ ಪಾತ್ರವಹಿಸಿದರು. ಆಗ ಇವರು ತಮಿಳಿನಲ್ಲಿ ರಚಿಸಿದ ಆರು ಗೀತೆಗಳು ಮತ್ತು ಹನ್ನೆರಡು ಆದಿತಾಳದ ವರ್ಣಗಳು ವಿಶ್ವವಿದ್ಯಾನಿಲಯದಿಂದಲೇ ಪ್ರಚುರವಾಗಿವೆ. ಅಲ್ಲಿ ಇವರು ತ್ಯಾಗರಾಜ ಉತ್ಸವದ ಅಂಗವಾಗಿ, ಸಂಗೀತದ ವಿಚಾರವಾಗಿ ಉತ್ತಮ ವಿದ್ವಾಂಸರುಗಳನ್ನು ಕರೆಸಿ ಚರ್ಚಾಗೋಷ್ಠಿಗಳನ್ನು, ಉಪನ್ಯಾಸಗಳನ್ನೂ, ಕಚೇರಿಗಳನ್ನೂ ಏರ್ಪಡಿಸುತ್ತಿದ್ದರು.

ಅಸೂಯೆಯು ವರದಾಚಾರ‍್ಯರ ಹತ್ತಿರ ಸುಳಿಯು ತ್ತಿರಲಿಲ್ಲ. ಇತರ ಸಂಗೀತ ವಿದ್ವಾಂಸರ ಯೋಗ್ಯತೆಯನ್ನು ಗುರುತಿಸಿ ಹೊಗಳಿ ಸಂತೋಷ ಪಡುತ್ತಿದ್ದರು. ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದ ವೈಣಿಕ ಪ್ರವೀಣ ವೆಂಕಟಗಿರಿ ಯಪ್ಪನವರು ಮೈಸೂರು ವೀಣಾ ಶೈಲಿಯನ್ನು ಕಾಪಾಡಿ, ಪೋಷಿಸಿಕೊಂಡು ಬಂದ ಹಿರಿಯ ವಿದ್ವಾಂಸರು. ಅವರಿಗೂ ಮತ್ತು ಟೈಗರ್‌ರವರಿಗೂ ಎರಡು ದಶಕಗಳಿಗಿಂತಲೂ ಹೆಚ್ಚಿನ ಪರಿಚಯ ಇದ್ದು ಆತ್ಮೀಯರಾಗಿದ್ದರು. ವೀಣಾ ವೆಂಕಟಗಿರಿ ಯಪ್ಪನವರು ದಕ್ಷಿಣ ಭಾರತದಲ್ಲೆಲ್ಲಾ ಕಚೇರಿಗಳನ್ನೂ ನಡೆಸಿಕೊಟ್ಟು ಅಪಾರ ಕೀರ್ತಿಯಿಂದ ಅಣ್ಣಾಮಲೈ ವಿಶ್ವವಿದ್ಯಾನಿಲಯಕ್ಕೆ ಬಂದು ಟೈಗರ್‌ರವರ ಅತಿಥಿಗಳಾಗಿದ್ದರು. ಆ ಸಂದರ್ಭವನ್ನು ಉಪಯೋಗಿಸಿಕೊಂಡು ವಿಶ್ವವಿದ್ಯಾ ನಿಲಯದ ಆಶ್ರಯದಲ್ಲಿ ಅವರ ಕಚೇರಿಯನ್ನು ಏರ್ಪಡಿಸಿದರು. ಅವರ ಅದ್ಭುತ ವೀಣಾವಾದನವನ್ನು ಕೇಳಿ ‘ಪರಂಪರಾಗತ ಸಂಗೀತವನ್ನು ಪೋಷಿಸಿಕೊಂಡು ಬಂದಿರುವವರಲ್ಲಿ ವೆಂಕಟಗಿರಿಯಪ್ಪನವರ ಪಾತ್ರವು ಬಹಳ ಹಿರಿದಾದುದು’ ಎಂದು ಮುಕ್ತಕಂಠದಿಂದ ಪ್ರಶಂಶಿಸಿ, ಅದರ ಸವಿನೆನಪಿಗಾಗಿ ಅವರಿಗೆ ಚಿನ್ನದ ಪದಕವನ್ನು ತೊಡಿಸಿ ಗೌರವಿಸಿದರು. ವರದಾಚಾರ‍್ಯರ ಜೀವನದಲ್ಲಿ ಅವರು ಇತರ ವಿದ್ವಾಂಸರುಗಳನ್ನು ಗೌರವಿಸಿರುವ ಸಂದರ್ಭಗಳು ಹಲವು.

ಮುಂದೆ ವರದಾಚಾರ‍್ಯರು ಅಡಿಯಾರ್ ಕಲಾಕ್ಷೇತ್ರಕ್ಕೆ ಆಗಮಿಸಿದರು.

ಕಲಾಕ್ಷೇತ್ರ

ಮದರಾಸಿನ ಅಡಿಯಾರ್‌ನಲ್ಲಿರುವ ‘ಕಲಾಕ್ಷೇತ್ರ’ ಸಂಗೀತಕ್ಕಾಗಿ ತುಂಬಾ ಶ್ರಮಿಸುವ ಸಂಸ್ಥೆ. ಮದರಾಸು ವಿಶ್ವವಿದ್ಯಾನಿಲಯ ನಡೆಸುತ್ತಿದ್ದ, ‘ಸಂಗೀತ ಶಿರೋಮಣಿ ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಲು ಏರ್ಪಾಡು ಮಾಡಿದರೆ ಅನೇಕರಿಗೆ ಅನುಕೂಲವಾಗುತ್ತದೆ ಎಂದು ಕಲಾಕ್ಷೇತ್ರದ ಹಿರಿಯರಿಗೆ ತೋರಿತು. ಈ ವಿಷಯವನ್ನು ಅವರು ವಿಶ್ವವಿದ್ಯಾನಿಲಯಕ್ಕೆ ತಿಳಿಸಿದರು. ೧೯೪೪ರಲ್ಲಿ ವಿಶ್ವವಿದ್ಯಾನಿಲಯವು ಈ ತರಗತಿಗಳನ್ನು ನಡೆಸಲು ಕಲಾಕ್ಷೇತ್ರಕ್ಕೆ ಅನುಮತಿಯನ್ನು ನೀಡಿತು. ಅದರ ನಿರ್ವಹಣೆಗಾಗಿ ರುಕ್ಮಿಣಿ ದೇವಿಯವರ ಆಹ್ವಾನವನ್ನು ಮನ್ನಿಸಿ ಕಲಾಕ್ಷೇತ್ರಕ್ಕೆ ಟೈಗರ್‌ರವರು ಆಚಾರ್ಯರಾಗಿ ಬಂದರು. ಮುಂದೆ ತಮ್ಮ ಜೀವಮಾನವನ್ನೆಲ್ಲಾ ಅಲ್ಲಿಯೇ ಕಳೆದರು. ಇದು ಅವರ ಬಾಳಿನ ಸುವರ್ಣಯುಗವೆಂದೇ ಹೇಳಬಹುದು. ಅಲ್ಲಿ ಅವರು ಮಾಡಿದ ಕೆಲವು ಕಾರ್ಯಗಳು ಚಿರಸ್ಮರಣೀಯವಾದವು.

ರುಕ್ಷಿಣಿದೇವಿಯವರು ಕಲಾಕ್ಷೇತ್ರದ ಹಿರಿಯರಲ್ಲಿ ಒಬ್ಬರು. ಅದನ್ನು ನಡೆಸುವುದರಲ್ಲಿ ಬಹು ಆಸಕ್ತಿ ಉಳ್ಳವರು. ಅವರ ಅಪೇಕ್ಷೆಯಂತೆ ಕಾಳಿದಾಸನ ‘ಕುಮಾರಸಂಭವ’ ಕಾವ್ಯವನ್ನು ನೃತ್ಯರೂಪಕಕ್ಕೆ ಅಳವಡಿಸಿರುವುದು ವರದಾಚಾರ‍್ಯರ ಕಲ್ಪನೆ ಮತ್ತು ರಚನಾಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಉತ್ತಮ ವರ್ಣಮಟ್ಟು ಹಾಗೂ ಸ್ವರ ಸಂಯೋಜನೆಗಳಿಂದ ಸಂಯೋಜನೆಗಳಿಂದ ಸ್ವಲ್ಪವಾದರೂ ಲೋಪ ಬರದಂತೆ ಅಳವಡಿಸಿರುವುದು ಇವರ ಕವಿತಾಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಆರಂಭದಲ್ಲಿ ಹಿಮಾಲಯ ಪರ್ವತದ ದೃಶ್ಯವನ್ನು ವಿವರಿಸುವಾಗ ಘನರಾಗಗಳನ್ನೆಲ್ಲ ಉಪಯೋಗಿಸಿ ಕೊಂಡು ಹಾಕಿರುವ ವರ್ಣಮಟ್ಟುಗಳಲ್ಲಿ ಸ್ವರಸಾಹಿತ್ಯ ಜೋಡಣೆಯು ತ್ಯಾಗರಾಜರ ಪಂಚರತ್ನ ಕೃತಿಗಳನ್ನು ಹೋಲುತ್ತದೆ. ಅವರು ಉಪಯೋಗಿಸಿರುವ ಬೇಗಡೆ, ಹಿಂದೋಳ, ತೋಡಿ, ಬಿಲಹರಿ, ಕಾಂಬೋಧಿ ರಾಗಗಳು ಮೇಲ್ಮೆಯಾಗಿ ಕಾಣುತ್ತವೆ. ಅದರಲ್ಲಿ ತೋರಿಸಿರುವ  ಲಯವಿನ್ಯಾಸ ಹಾಗೂ ತೀರ್ಮಾನಗಳು ಚಮತ್ಕಾರ ಯುತವಾಗಿವೆ. ಈ ನೃತ್ಯರೂಪಕದಲ್ಲಿ ಒಟ್ಟು ಐವತ್ತು ವರ್ಣಮಟ್ಟುಗಳು ಅಡಕವಾಗಿವೆ.

ಸಂಗೀತಶಾಸ್ತ್ರ ವಿಶಾರದ

ಮೈಸೂರಿನ ವಾಸುದೇವಾಚಾರ್ಯರು ಈಚೆಗಿನ ದಶಕಗಳಲ್ಲಿ ಕರ್ನಾಟಕ ಸಂಗೀತದಲ್ಲಿ ಬಹು ಕೀರ್ತಿವಂತರು. ಅವರು ರಚಿಸಿದ ಅನೇಕ ಸೊಗಸಾದ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ.

ವರದಾಚಾರ‍್ಯರಿಗೂ ಮತ್ತು ವಾಸುದೇವ ಚಾರ್ಯರಿಗೂ ಬಹಳ ವರ್ಷಗಳಿಂದ ಇದ್ದ ನಿಕಟ ಸಂಬಂಧವು ಮತ್ತೊಂದು ರೂಪವನ್ನು ತಾಳಿತು. ವಾಸುದೇವಚಾರ್ಯರ ಪ್ರಾರ್ಥನೆಯಂತೆ ಆಗ ಆಳುತಿದ್ದ ಜಯಚಾಮರಾಜೇಂದ್ರ ಒಡೆಯರವರು ತಮ್ಮ ಆಸ್ಥಾನಕ್ಕೆ ವರದಾಚಾರ‍್ಯರನ್ನು ಬರಮಾಡಿಕೊಂಡರು. ಆಗ ಅವರ ಸಂಗೀತವನ್ನು ಕೇಳಿ ಸಂತೋಷಪಟ್ಟು ಅವರಿಗೆ ೨೫೦ ರೂಪಾಯಿಗಳ ಮಾಸಿಕ ವೇತನವನ್ನು ಕೊಟ್ಟು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿಕೊಂಡರು. ಅದೇ ವರ್ಷ ಜರುಗಿದ ನವರಾತ್ರಿ ಉತ್ಸವದ ಅಂಗವಾಗಿ ದರ್ಬಾರಿನಲ್ಲಿ ಅವರಿಗೆ ‘ಸಂಗೀತಶಾಸ್ತ್ರ ವಿಶಾರದ’ ಎಂಬ ಬಿರುದನ್ನು ದಯಪಾಲಿಸಿ, ಗಂಡಭೇರುಂಡದಿಂದ ಕೂಡಿದ ವಜ್ರದ ಹಾರವನ್ನು ಉಚಿತ ಖಿಲ್ಲತ್ತು ಜೋಡಿಶಾಲುಗಳೊಡನೆ ಗೌರವಿಸಿದರು.

ವರದಾಚಾರ‍್ಯರಿಗೆ ಬಂದ ಸನ್ಮಾನಕ್ಕಾಗಿ ಮೈಸೂರಿನ ವಿದ್ವಾಂಸರೆಲ್ಲರೂ ಸೇರಿ ಸತ್ಕಾರ ಸಮಾರಂಭವೊಂದನ್ನು ಏರ್ಪಡಿಸಿದರು. ಆ ಸಂದರ್ಭದಲ್ಲಿ ವರದಾಚಾರ‍್ಯರದೇ ಹಾಡಿಕೆ. ಆ ದಿನ ಅವರು ಹಾಡಿದ ಕಲ್ಯಾಣಿ ರಾಗದ ‘ವನಜಾಕ್ಷಿ’ ಅಟ್ಟತಾಳದ ವರ್ಣವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಕಚೇರಿಯು ಮುಂದುವರೆದು ಕೊನೆಗೆ ಅವರು ಪ್ರದರ್ಶಿಸಿದ ನವರೋಜ್ ರಾಗವು ನಿಜಕ್ಕೂ ಕಳಶಪ್ರಾಯವಾಗಿತ್ತು. ಕಚೇರಿಯನ್ನು ಮುಗಿಸಿದ ನಂತರ ಟೈಗರ್‌ರವರು ಸಭೆಯಲ್ಲೇ ವಾಸುದೇವಚಾರ್ಯರನ್ನು ಕುರಿತು ನವರೋಜ್ ರಾಗವು ಹೇಗಿತ್ತೆಂದು ಕೇಳಿದಾಗ ಉತ್ತರವಾಗಿ ಆಚಾರ‍್ಯರು, “ಇದು ಕೇವಲ ನವರೋಜ್ ಅಲ್ಲ, ಪರಿಮಳ ನವರೋಜ್” ಎಂದು ಹೇಳಿದ ಮಾತು ನಿಜಕ್ಕೂ ಅರ್ಥಗರ್ಭಿತ!.

ಮೈಸೂರಿನಿಂದ ಕಲಾಕ್ಷೇತ್ರಕ್ಕೆ ವೈಭವದಿಂದ ಹಿಂತಿರುಗಿದ ನಂತರ ವರದಾಚಾರ‍್ಯರಿಗೆ ಪತ್ನಿಯ ವಿಯೋಗವಾದುದು ಒಂದು ದುಃಖದ ಘಟನೆ. ಇದರಿಂದ ಕೆಲವು ಕಾಲ ಅವರು ನೊಂದಿದ್ದರು. ಅವರಿಗೆ ಹುಟ್ಟಿದ್ದು ಒಂದು ಮಗು, ಅದೂ ಉಳಿದಿರಲಿಲ್ಲ. ಬೇರೆ ಮಕ್ಕಳಿಲ್ಲದೆ ತಮ್ಮ ಬಂಧುಗಳಲ್ಲೇ ಒಬ್ಬರನ್ನು ದತ್ತು ಸ್ವೀಕಾರ ಮಾಡಿದ್ದರು.

ಇತರ ರಚನೆಗಳು

ಮಾತೃಭಾಷೆ ತಮಿಳಾದರೂ ಟೈಗರ್‌ರವರು ಬಹು ಭಾಷಾ ಪಂಡಿತರಾಗಿ ಕನ್ನಡ, ತೆಲುಗು, ಮಲೆಯಾಳಂ. ಸಂಸ್ಕೃತ ಹಾಗೂ ಇಂಗ್ಲಿಷ್ ಭಾಷೆಗಳನ್ನು ಬಲ್ಲವಾಗಿದ್ದರು.

ಇವರು ‘ಕುಮಾರಸಂಭವ’ಕ್ಕಾಗಿ ಮಾಡಿದ ರಚನೆಗಳೇ ಅಲ್ಲದೇ ಅರಭಿ ಹಾಗೂ ಕಲ್ಯಾಣಿ ರಾಗಗಳ ಆದಿತಾಳದ ವರ್ಣಗಳು ಮುಖ್ಯವಾದವು. ಜೊತೆಗೆ ಮಣಿರಂಗು, ಜನರಂಜಿನಿ ರಾಗಗಳಲ್ಲಿ ಎರಡು ಝಂಪೆತಾಳ ವರ್ಣಗಳು, ಅಭೋಗಿ, ವಾಚಸ್ಪತಿ, ಕೇದಾರ ರಾಗಗಳಲ್ಲಿ ಅಟ್ಟತಾಳ ವರ್ಣಗಳು, ಶ್ರೀರಂಜಿನಿ ಮತ್ತು ಸಾವೇರಿ ರಾಗಗಳಲ್ಲಿ ಪದತಾನ ವರ್ಣಗಳನ್ನೂ ರಚಿಸಿರುತ್ತಾರೆ. ಇವಲ್ಲದೆ ಬಹುದಾರಿ ಮತ್ತು ಯದುಕುಲ ಕಾಂಬೋಧಿ ರಾಗಗಳಲ್ಲಿ ಎರಡು ವರ್ಣಗಳಿವೆ. ೧೯೪೮ರಲ್ಲಿ ರಾಜಾಜಿಯವರು ಗೌರ‍್ನರ್ ಜನರಲ್ ಆಗಿ ಕಲಾಕ್ಷೇತ್ರಕ್ಕೆ ಭೇಟಿ ಕೊಟ್ಟಾಗ, ದರ್ಬಾರ್ ರಾಗದಲ್ಲಿ ರಚಿಸಿದ “ನೀದೇ ಸುದಿನಮು” ಎಂಬ ಕೀರ್ತನೆಯು ಅತ್ಯುತ್ತಮವಾಗಿದೆ. ಇವರು ರಚಿಸಿದ ಎಪ್ಪತ್ತು ಎಂಬತ್ತು- ಹಾಡುಗಳಷ್ಟೇ ಆದರೂ ಅನೇಕ ಹಾಡುಗಳು ಗುಣದಲ್ಲಿ ಉತ್ತಮವಾಗಿವೆ.

ಇವರಿಗೆ ತ್ರಿಮೂರ್ತಿಗಳ ಕೃತಿಗಳಲ್ಲಿ ಬಹು ಆಸಕ್ತಿ. ತ್ಯಾಗರಾಜರ ಕೀರ್ತನೆಗಳನ್ನು ತುಂಬ ಅರ್ಥಗರ್ಭಿತವಾಗಿ ಹಾಡುತ್ತಿದ್ದರು. ತಾವು ರಚಿಸಿದ ಕೇದಾರರಾಗದ ಅಟ್ಟತಾಳ ವರ್ಣದ ಸಾಹಿತ್ಯವನ್ನು ಆ ಸದ್ಗುರುವಿನ ಅಡಿದಾವರೆಗಳಲ್ಲಿ ಸಮರ್ಪಿಸಿರುತ್ತಾರೆ. ದೀಕ್ಷಿತರ ಕೀರ್ತನೆಗಳನ್ನು ಇವರು ಆಳವಾಗಿ ಅಭ್ಯಾಸಮಾಡಿ ಹಾಡುತ್ತಿದ್ದರು. ಶಾಮಾಶಾಸ್ತ್ರಿಗಳ ಕೀರ್ತನೆಗಳಲ್ಲಿ ಇವರಿಗೆ ಅಪಾರ ಮಮತೆ, ಆನಂದಭೈರವಿ ರಾಗದ ‘ಓ ಜಗದಂಬ’, ಪೂರ್ವಕಲ್ಯಾಣಿ ರಾಗದ ‘ನಿನುವಿನಾ ಗಾಮರಿ’, ತೋಡಿ ರಾಗದ ‘ನಿನ್ನೆ ನಮ್ಮಿನಾನು’ ಮತ್ತು ಕಲ್ಯಾಣಿ ರಾಗದ ‘ಬಿರಾನ ವರಲಿಚ್ಚಿ’ ಎಂಬ ಕೀರ್ತನೆಗಳನ್ನು ಸುಂದರವಾಗಿ ಹಾಡುತ್ತಿದ್ದರು. ಅಭಿನಯ ಶಾಸ್ತ್ರದಲ್ಲಿ ಆಳವಾದ ಪಾಂಡಿತ್ಯವಿದ್ದದ್ದರಿಂದ ಕ್ಷೇತ್ರಜ್ಞರ ಪದಗಳನ್ನು ವಿಶೇಷ ಅರ್ಥ ಮತ್ತು ಭಾವಪೂರ್ಣ ಶೈಲಿಯೊಂದಿಗೆ ಹಾಡುವ ಸಾಮರ್ಥ್ಯ ಇವರಲ್ಲಿತ್ತು.

ವರದಾಚಾರ‍್ಯರು ಕರ್ನಾಟಕದಲ್ಲಿ ಬಹುಕಾಲ ಇದ್ದದ್ದರಿಂದ ಕನ್ನಡ ದೇವರನಾಮಗಳನ್ನು ಉತ್ತಮ ರೀತಿಯಲ್ಲಿ ಹಾಡುತ್ತಿದ್ದರು. ಕನಕದಾಸರ ‘ಭಜಿಸಿ ಬದುಕಲೋ ಮಾನವ’ ಎಂಬ ದೇವರನಾಮ ಎಂದರೆ ಇವರಿಗೆ ತುಂಬಾ ಇಷ್ಟ. ಇದಲ್ಲದೆ ಇವರಿಗೆ ಜಾವಳಿ ಮತ್ತು ಜಾನಪದ ಸಂಗೀತದಲ್ಲೂ ಅಭಿರುಚಿಯಿತ್ತು.

ಟೈಗರ್‌ರವರ ಸಂಗೀತ ಮತ್ತು ಸಿದ್ಧಿ

ಸಾಹಿತ್ಯ ಮತ್ತು ಸಂಗೀತಕಲೆಯ ಗುಣಮಟ್ಟವನ್ನು ಸಾಮಾನ್ಯವಾಗಿ ಅಳೆಯುವಾಗ, ಅವುಗಳನ್ನು ‘ದ್ರಾಕ್ಷಾಪಾಕ’ ಅಥವಾ ‘ನಾರಿಕೇಳಪಾಕ’ವೆಂದು ಗುರುತಿಸಿ ಹೇಳುವುದು ಸಾಮಾನ್ಯವಾಡಿಕೆ. ಈ ದೃಷ್ಟಿಯಿಂದ ಸುಲಭವೂ, ನವೀನವೂ ಮತ್ತು ಲಲಿತವೂ ಆದ ತ್ಯಾಗರಾಜರ ಕೃತಿಗಳನ್ನು ದ್ರಾಕ್ಷಾಪಾಕವೆಂದೂ, ಕಷ್ಟಕರವಾದ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳನ್ನು ನಾರೀಕೇಳಪಾಕವೆಂದೂ ಶಾಸ್ತ್ರಜ್ಞರು ವಿವರಿಸುತ್ತಾರೆ. (ದ್ರಾಕ್ಷಿಯ ರಸವನ್ನು ಸುಲಭವಾಗಿ ಪಡೆದು ಸವಿಯಬಹುದು. ಆದುದರಿಂದ ಯಾವುದನ್ನು ಗ್ರಹಿಸಿ ಸವಿಯುವುದು ಸುಲಭವೋ ಅದು ದ್ರಾಕ್ಷಾಪಾಕದಂತೆ, ತೆಂಗಿನಕಾಯಿಯನ್ನು ಒಡೆದು ಅದರೊಳಗಿನ ಸೀಯಾಳವನ್ನು ಸವಿಯಬೇಕು. ಯಾವುದನ್ನು ಗ್ರಹಿಸುವುದು ಸ್ವಲ್ಪ ಕಷ್ಟವೋ, ಅದರೆ ಕಷ್ಟಪಟ್ಟರೆ ಆನಂದ ಕೊಡುವುದೋ ಅದು ನಾರಿಕೇಳ ಪಾಕದಂತೆ.) ಈ ದೃಷ್ಟಿಯಿಂದ ಟೈಗರ್ ವರದಾಚಾರ‍್ಯರ ಸಂಗೀತವನ್ನು ಇತರ ವಿದ್ವಾಂಸರ ಸಂಗೀತದೊಡಣೆ ಹೋಲಿಸಿ ನೋಡಿದಾಗ ಗುಣಮಟ್ಟದಲ್ಲಿ ನಾರಿಕೇಳಪಾಕವೆಂದು ಹೇಳಬಹುದು.

ವರದಾಚಾರ‍್ಯರ ಸಂಗೀತವನ್ನು ಕೇಳಲು ಜನ ಕಿಕ್ಕಿರಿಯುತ್ತಿರಲಿಲ್ಲ. ನಿಜ, ಆದರೆ ಹಿರಿಯ, ಕಿರಿಯ ವಿದ್ವಾಂಸರುಗಳ ಗುಂಪೇ ಪ್ರಧಾನವಾಗಿರುತ್ತಿತ್ತು. ಅವರಿಗೆ ಹೇಳಿ ಗುರುತಿಸಬಹುದಾದಂತಹ ಉತ್ತಮ ಶಾರೀರವೇನೂ ಇರಲಿಲ್ಲ. ಆದರೆ ಈ ಕಾರಣದಿಂದಾಗಿ ಅವರ ಸಂಗೀತಕ್ಕೆ ಯಾವ ರೀತಿಯ ಲೋಪವೂ ಇರಲಿಲ್ಲ. ಹಾಡುವಾಗ ಅವರು ಪ್ರದರ್ಶಿಸುತ್ತಿದ್ದ ತಾಳದ ನಡೆಯು ಉತ್ತಮ ಶಾರೀರವುಳ್ಳವರೂ ಸಹಾ ತೋರಿಸಲಾಗದಂತಹ ನಡೆ. ಶೈಲಿಯಿಂದ ಅವರ ಸಂಗೀತವು ಮನೋಜ್ಞವಾಗಿದ್ದುದು ಮುಖ್ಯವಾದ ಅಂಶ. ಅವರ ಹಾಡಿಕೆಯಲ್ಲಿದ್ದ ಶಾಸ್ತ್ರ ನಿರ್ಣಯ, ಆಳವಾದ ರಸ, ಭಾವಯುತವಾದ ಮನೋಧರ್ಮದಿಂದ ಸಂಗೀತವು ಅದ್ಭುತವಾಗಿರುತ್ತಿತ್ತು.

ವರದಾಚಾರ‍್ಯರ ಸಂಗೀತವನ್ನು ಕುರಿತು ವಿಮರ್ಶಕರ ಅಭಿಪ್ರಾಯ ಹೀಗಿವೆ-

ವರದಾಚಾರ‍್ಯರ ಹಾಡಿಕೆಯು ಎಷ್ಟು ಶಾಸ್ತ್ರಬದ್ಧವೋ ಅಷ್ಟೇ ಸ್ವತಂತ್ರವಾದದ್ದು. ಅವರ ದಾರಿ ಇತರರಿಂದ ಅನುಸರಿಸಲಾಗದ ದಾರಿ. ಅವರ ಪ್ರತಿಭೆ ಹೊಸ ಹೊಸ ರೀತಿಯಲ್ಲಿ ಪ್ರಕಟವಾಗುತ್ತಿತ್ತು. ವಿದ್ವಾಂಸರ ಸಭೆಗಳಲ್ಲಿ ಮಾತ್ರವಲ್ಲದೆ ಎಲ್ಲಿ ತೋರಿದರಲ್ಲಿ ಪಕ್ಕವಾದ್ಯದ ಅಪೇಕ್ಷೆಯೂ ಇಲ್ಲದೆ, ಕಾಲನಿಯಮಕ್ಕೆ ಒಳಗಾಗದೆ, ಮನಸ್ಸಿಗೆ ಬಂದ ಯಾವುದೋ ರಾಗದ, ಯಾವುದೋ ರಚನೆಯ ಭಾಗವನ್ನು ಹಿಡಿದು ಲೀಲಾಜಾಲವಾಗಿ ಹಂಚಿ ಹರಡುವುದು ಅವರ ಅಸಾಧಾರಣ ಸಾಮರ್ಥ್ಯ. ಮಿಂಚಿನಂತೆ ಆಕಸ್ಮಿಕವಾಗಿ ಹೊರಸೂಸಿ ಮರೆಯಾಗುವುದು ಅವರ ಕಲ್ಪನಾಭಾವನೆಗಳ ಇಂದ್ರಜಾಲ. ಆಗ ಕೇಳಿದವರಿಗೆ ಉಂಟು, ಅಷ್ಟೆ. ಟೈಗರ್‌ರವರ ಸಂಗೀತವನ್ನು ಇತರರು ಅನುಕರಿಸಲು ಸಾಧ್ಯವಿರಲಿಲ್ಲ. ಅವರ ಶೈಲಿಗೆ ಒಂದು ರೂಪಕೊಟ್ಟು ನಿಲ್ಲುವಂತೆ ಮಾಡಲು ಅವರಿಗೇ ಸಾಧ್ಯವಾಗಲಿಲ್ಲ. ಅವರು ಹಾಡುವಾಗ ಮನಸ್ಸನ್ನು ಪೂರ್ಣವಾಗಿ ಅರ್ಪಿಸಿಕೊಡು, ಮೈ ಮರೆತು ಹಾಡುತ್ತಿದ್ದರು. ಒಂದೊಂದು ಕಚೇರಿಯಲ್ಲಿ ಅವರ ಪ್ರತಿಭೆ ಒಂದೊಂದು ರೀತಿಯಲ್ಲಿ ಬೆಳಗುತ್ತಿತ್ತು. ಅವರದು ನಿಷ್ಕಲ್ಮಷವಾದ ಆಧ್ಯಾತ್ಮಿಕ ಹೃದಯವೆಂದು ಹೇಳಿರುವುದನ್ನು, ಅವರ ಸಂಗೀತವನ್ನು ಕೇಳಿರುವವ ರ‍್ಯಾರು ಅತಿಶಯೋಕ್ತಿಯೆಂದು ಭಾವಿಸುವುದಿಲ್ಲ.

ಟೈಗರ್‌ರವರಿಗೆ ಐಹಿಕ ಸಂಬಂಧವಾದ ಚಿಂತೆ ಯಾವಾಗಲೂ ಇರಲಿಲ್ಲ. ಸದಾಕಾಲ ಅವರ ಸ್ಮೃತಿ ಪಥದಲ್ಲಿದ್ದುದು ನಾದರೂಪದಿಂದ ಕೂಡಿದ ಸಂಗೀತ. ಅವರು ಒಬ್ಬ ಅಪೂರ್ವ ಕಲಾತಪಸ್ವಿಗಳು. ಮುತ್ತಯ್ಯ ಭಾಗವತರು, ವೆಂಕಟರಾಮ ಅಯ್ಯರ್ ಮುಂತಾದ ಹಿರಿಯ ಸಂಗೀತ ವಿದ್ಯಾಂಸರು ವರದಾಚಾರ‍್ಯರಿಂದ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಬಯಸುತ್ತಿದ್ದರು. ಅನೇಕ ಬಾರಿ ಹಿರಿಯ ವಿದ್ವಾಂಸರು, ಕಿರಿಯ ವಿದ್ವಾಂಸರು ಅವರನ್ನು ಸುತ್ತುವರಿದು, ಸಂಗೀತದ ವಿಷಯಗಳನ್ನು ಪ್ರಸ್ತಾಪಿಸಿ ವಾದಕ್ಕೆಳೆದು ಅವರಿಂದ ಹೊಸ ಹೊಸ ವಿಷಯಗಳನ್ನು ತಿಳಿಯುತ್ತಿದ್ದರು. ಒಮ್ಮೊಮ್ಮೆ ವಿಷಯವನ್ನು ಸ್ಪಷ್ಟಮಾಡಲು ಆಚಾರ್ಯರು ಹಾಡಿ ತೋರಿಸುತ್ತಿದ್ದುಂಟು. ಅಂತಹ ಸಂದರ್ಭದಲ್ಲಿ ಅಲ್ಲಿದ್ದವರದೇ ಸುಯೋಗ. ಈ ದೃಷ್ಟಿಯಲ್ಲಿ ಅವರ ಸಾಧನೆ ಮತ್ತು ಸಿದ್ಧಿ ಅಪೂರ್ವವಾದದ್ದು.

ಒಂದು ಸಂದರ್ಭದಲ್ಲಿ ವರದಾಚಾರ‍್ಯರು ಮೈಸೂರಿಗೆ ಆಹ್ವಾನಿತರಾಗಿ ಬಂದಿದ್ದರು. ತಮ್ಮ ಆತ್ಮೀಯ ಗೆಳೆಯರಾದ ವಾಸುದೇವಚಾರ್ಯರ ಮನೆಯಲ್ಲಿ ಬೆಳಿಗ್ಗೆ ಕಲಾಪ್ರೇಮಿ ಗಳೊಡನೆ ಕುಳಿತಿದ್ದರು.  ಆಗ ಅವರು ಧನ್ಯಾಸಿ ರಾಗವನ್ನು ಹಾಡಬೇಕೆಂದು ಎಲ್ಲರೂ ಕೇಳಿಕೊಂಡರು. ಆಚಾರ್ಯರು ಬರಿಯ ತಂಬೂರಿ ಶ್ರುತಿಯಲ್ಲಿ ಧನ್ಯಾಸಿರಾಗದ ವಿವಿಧ ಭಾವಗಳನ್ನು ಹಂತ ಹಂತವಾಗಿ ಹಾಡಿ ‘ನೀಚಿತ್ತಮು ನಿರ್ಮಲವಮು’ ಎಂಬ ತ್ಯಾಗರಾಜ ಕೃತಿಯೊಂದಿಗೆ ಹಾಡಿ ಮುಗಿಸಿದಾಗ, ಮೈಮರೆತು ಕೇಳುತ್ತಿದ್ದವರು ಸಂಗೀತ ಸಮುದ್ರದಲ್ಲಿ ಮುಳುಗಿದಂತಿತ್ತು. ವಾಸುದೇವಾಚಾರ್ಯರು ಅವರ ಹಾಡಿಕೆಯನ್ನು ಕೇಳಿ, “ನಿಮ್ಮ ಈ ಅಮೃತಪ್ರಾಯವಾದ ಸಂಗೀತಧಾರೆಯಿಂದ ನಮಗೆಲ್ಲಾ ಮನಸ್ಸು ಸಂತೋಷದಿಂದ ತುಂಬಿಹೋಗಿದೆ. ಇಂತಹ ಸಂಗೀತವನ್ನು ಕೇಳಿಸಿ ಹಸಿವೂ ಸಹ ಇಲ್ಲದಂತೆ ಮಾಡಿದ ತಮಗೆ ನಾವು ಏನನ್ನು ತಾನೇ ಕೊಡಬಲ್ಲೆವು! ನಿಜವಾಗಿಯೂ ಈ ದಿನವೇ ಸುದಿನ!” ಎಂದು ಸಂತೋಷದಿಂದ ಹೇಳಿದರು.

ಇದೇ ಸಂದರ್ಭದಲ್ಲಿ ವರದಾಚಾರ‍್ಯರು ಚೌಡಯ್ಯ ನವರ ಪ್ರಾರ್ಥನೆಯನ್ನು ಮನ್ನಿಸಿ ಗಾನವಿಶಾರದ ಬಿಡಾರಂ ಕೃಷ್ಣಪ್ಪನವರ ಪ್ರಸನ್ನ ಸೀತಾರಾಮ ಮಂದಿರದಲ್ಲಿ ಮರೆಯಲಾಗದ ಸಂಗೀತ ಕಚೇರಿಯನ್ನು ನಡೆಸಿಕೊಟ್ಟರು. ಆ ದಿನ ಪಕ್ಕವಾದ್ಯವಾಗಿ ಚೌಡಯ್ಯನವರ ಪಿಟೀಲು ಮತ್ತು ಮೂಗಯ್ಯನವರ ಮೃದಂಗ. ಕಚೇರಿಯ ಮಧ್ಯದಲ್ಲಿ ಸಿಂಹೇಂದ್ರ ಮಧ್ಯಮ ರಾಗವನ್ನು ವಿಸ್ತಾರವಾಗಿ ಹಾಡಿ, “ನತಜನಪರಿಪಾಲಕ” ಎಂಬ ಕೀರ್ತನೆಯನ್ನು ಹಾಡಿ, ಅನುಪಲ್ಲವಿಯ ಭಾಗವಾದ “ಶ್ರುತಿಮೊರಲಿಡಲೇದಾ” ಎಂಬುದನ್ನು ಸಾಹಿತ್ಯ ವಿನ್ಯಾಸ (ನೆರವಲ್) ಮಾಡಿ ಹಾಡುತ್ತಿದ್ದಾಗ, ಚೌಡಯ್ಯನವರು ತಮ್ಮ ವಾದ್ಯದಲ್ಲಿ ಅತಿ ತಾರಾಸ್ಥಾಯಿಯ ಷಡ್ಜವನ್ನು ಹಿಡಿದು ಒಂದು ಕೋಲಾಹಲವನ್ನೇ ಎಬ್ಬಿಸಿದರು. ವರದಾಚಾರ‍್ಯರು ಮಿಂಚಿನ ವೇಗದಲ್ಲಿ ಸ್ವಲ್ಪವೂ ಶ್ರಮಪಡದೆ ಅದೇ ಸ್ವರವನ್ನು ಹಿಡಿದು ಮುಟ್ಟಿದಾಗ, ಸಭಿಕರಿಗೆ ಅತ್ಯಾನಂದವೂ ಮತ್ತು ಆಶ್ಚರ್ಯವೂ ಆಗಿ ಕರತಾಡನ ಮಾಡಿದರು.

ಚೌಡಯ್ಯನವರು ಒಂದು ನಿಮಿಷ ಸ್ತಬ್ಧರಾಗಿ, “ಗುರುಗಳೇ,  ಅಪಚಾರವಾಯಿತು” ಎಂದರು.

ವರದಾಚಾರ‍್ಯರು ತಾಳ್ಮೆಯಿಂದ ನಗುತ್ತಾ, “ನೀವಿಬ್ಬರೂ ತರುಣ ಪಕ್ಕವಾದ್ಯಗಾರರು. ಯಾವ ಕೆಲಸ ವನ್ನಾದರೂ ವಾದ್ಯದಲ್ಲಿ ಮಾಡಬಲ್ಲಿರಿ. ವಯಸ್ಸಾದ ನಮ್ಮಂತಹವರನ್ನು ಏಕೆ ಪರೀಕ್ಷಿಸುತ್ತೀರಿ? ಎಂದರು.

ಆಗ ಚೌಡಯ್ಯನವರು “ತಪ್ಪಾಯಿತು ಗುರುಗಳೆ. ತಮ್ಮಲ್ಲಿ ಗುಪ್ತವಾಗಿರುವ ಈ ಉತ್ತಮ ಸಂಗೀತವು ಹೊರಬರಲೆಂದು ಮಾಡಿದೆ. ತಾವು ಹಾಡಿ, ನಮ್ಮಂತಹ ತರುಣರು ನಾಚುವಂತೆ ಮಾಡಿರುವಿರಿ. ಇಲ್ಲಿ ನೆರೆದಿರುವ ಸಭಿಕರೆಲ್ಲರೂ ಕೇಳಿ ಆನಂದಿಸಿರುವುದಕ್ಕೆ ಮತ್ಯಾವುದಾದರೂ ಸಾಟಿಯಾಗಬಲ್ಲುದೇ? ಎಂದರು.

ಒಮ್ಮೆ ಅವರು ಮದರಾಸಿನ ಸಂಗೀತ ಅಕಾಡೆಮಿಯಲ್ಲಿ ಪ್ರದರ್ಶನ ಭಾಷಣ ಮಾಡುತ್ತಿದ್ದರು. ಕಾಪಿರಾಗದ ಲಕ್ಷಣಗಳನ್ನೆಲ್ಲಾ ಉದಾಹರಣಸಹಿತವಾಗಿ ಹಾಡಿ ತೋರಿಸಿದರು. ತ್ಯಾಗರಾಜರ “ಅನ್ಯಾಯಮು ಸೇಯಕುರಾ” ಎಂಬ ಕೃತಿಯನ್ನು ವಿಶಿಷ್ಟ ಸಂಚಾರಗಳಿಂದ ಹಾಡಿ ತೋರಿಸಿ, ಸ್ವರ ಪ್ರಸ್ತಾರಗಳನ್ನು ಹೊಂದಿಸಿಕೊಂಡು ರಾಗ ಲಕ್ಷಣವನ್ನು ನಿರೂಪಿಸಿದರು. ಕೊನೆಯಲ್ಲಿ “ಇದೇ ನಿಜವಾದ ಕಾಫಿ, ಉಳಿದುದೆಲ್ಲ ಡಿಕಾಕ್ಷನ್ ಇಲ್ಲದ ಕಾಫಿ!” ಎಂದು ಹೇಳಿ ಸಭೆಯಲ್ಲಿದ್ದವರನ್ನೆಲ್ಲಾ ನಗೆಗಡಲಲ್ಲಿ ಮುಳುಗಿಸಿದರು.

ಇವರ ಸಂಗೀತವನ್ನು ಪ್ರಶಂಶಿಸಿ, ಶೇಷಣ್ಣನವರು “ಸಿಂಹ”ವೆಂದೂ, ವಾಸುದೇವಾಚಾರ್ಯರು “ಭಾವಜ್ಞ” ರೆಂದೂ ಸಾಂಬಮೂರ್ತಿಗಳು “ಸಂಗೀತ ನಿಧಿ” ಎಂದೂ ಕರೆದರು. ಹಿರಿಯ ಕನ್ನಡ ಸಾಹಿತಿಗಳಾಗಿದ್ದ ಡಿ.ವಿ.ಗುಂಡಪ್ಪನವರು ಮತ್ತು ಪಾಲಘಾಟ್ ಅನಂತರಾಮು ಭಾಗವತರು ಇವರ ಶೈಲಿಯನ್ನು “ಗಂಡು ಶೈಲು” ಎಂದು ಕರೆದರು.

ನಡೆ-ನುಡಿ

ವರದಾಚಾರ‍್ಯರು ಒಳ್ಳೆಯ ಸಂಗೀತಗಾರರಾ ಗಿದ್ದುದಷ್ಟೇ ಅಲ್ಲ, ಅವರು ತಮ್ಮ ನಡೆ-ನುಡಿಯಿಂದಲೂ ಇತರರಿಗೆ ಆದರ್ಶವಾಗಿದ್ದರು. ವಾಸುದೇವಾಚಾರ್ಯರು ಮತ್ತು ವರದಾಚಾರ‍್ಯರು ಒಬ್ಬ ಗುರುಗಳ ಶಿಷ್ಯರೇ. ಹಿರಿಯವರಾದ ವಾಸುದೇವಚಾರ್ಯರಲ್ಲಿ ಅಪಾರ ವಿಶ್ವಾಸ ಮತ್ತು ಗೌರವ ವರದಾಚಾರ್ಯರಿಗೆ.

ಒಮ್ಮೆ ಅಡಿಯಾರ್ ಕಲಾಕ್ಷೇತ್ರದ ಸಂಗೀತೋತ್ಸವ ದಲ್ಲಿ ವರದಾಚಾರ‍್ಯರ ಕೋರಿಕೆಯಂತೆ ವಾಸುದೇವಾ ಚಾರ್ಯರ ಸಂಗೀತವು ಏರ್ಪಾಡಾಯಿತು. ಪಾಲು ಗೊಳ್ಳಲು ವಾಸುದೇವಾಚಾರ್ಯರು ಉತ್ಸವಕ್ಕೆ ಮೊದಲನೇ ದಿನವೇ ಮದರಾಸನ್ನು ತಲುಪಿ ಟೈಗರ್‌ರವರನ್ನು ಕಾಣಲು ಕಲಾಕ್ಷೇತ್ರಕ್ಕೆ ಹೋದರು. ಆಗ ಟೈಗರ್‌ರವರು ಆಚಾರ್ಯರನ್ನು ಕಂಡೊಡನೆಯೇ, ತಾವು ಹೊದೆದಿದ್ದ ಅಂಗವಸ್ತ್ರವನ್ನು ನಡುವಿಗೆ ಕಟ್ಟಿ, ಸಾಷ್ಟಾಂಗ ಪ್ರಣಾಮ ಮಾಡಿ, ಎದ್ದುನಿಂತು ಬಾಚಿ ತಬ್ಬಿಕೊಂಡು, “ಅಣ್ಣಾ, ಇವತ್ತು ನಮ್ಮ ಭಾಗ್ಯೋದಯವಾಯಿತು.  ಈ ಪಾಮರನ ಬಹಳ ದಿವಸಗಳ ಬಯಕೆ ಇಂದಾದರೂ ಈಡೇರಿತಲ್ಲಾ” ಎಂದು ಹೇಳಿ ಆನಂದಾಶ್ರುವನ್ನು ಕರೆದರು.

ಮರುದಿನ, ಸಂಗೀತೋತ್ಸವದ ಆರಂಭದ ದಿನವೇ ವರದಾಚಾರ‍್ಯರ ಹಾಡಿಕೆ. ಅವರು ಆ ದಿನ ಹಾಡಿದ ಎಲ್ಲಾ ವಿಷಯಗಳನ್ನೂ ವಾಸುದೇವಾಚಾರ್ಯರೇ ಮುಕ್ತಕಂಠದಿಂದ ಪ್ರಶಂಶಿಸಿ, ಅವರೇ ಬರೆದಿರುವ ‘ನಾ ಕಂಡ ಕಲಾವಿದರು’ ಎಂಬ ಪುಸ್ತಕದಲ್ಲಿ ವರ್ಣಿಸಿರುತ್ತಾರೆ. ಅವರ ಮಾತಿನಲ್ಲಿಯೇ ಹೇಳುವುದಾದರೆ “ಮುಟ್ಟಿದ್ದೆಲ್ಲ ಚಿನ್ನ ಎನ್ನುವ ಹಾಗೆ, ಹಾಡಿದ ಸಂಗತಿ ಸ್ವರಗಳೆಲ್ಲ ಅನರ್ಘ್ಯ ರತ್ನಗಳಂತಿದ್ದವು” ಎಂದಿರುವುದು ಸತ್ಯ ಸಂಗತಿ. ಅದೇ ದಿನ ಅಲ್ಲಿಯೇ ನಡೆದ ಮತ್ತೊಂದು ಘಟನೆ ಮುಖ್ಯವಾದುದು.

ವರದಾಚಾರ‍್ಯರು ಪಲ್ಲವಿಗಾಗಿ ಕಾಂಬೋಧೀ ರಾಗವನ್ನು ಆರಿಸಿಕೊಂಡು ತಮ್ಮದೇ ಆದ ವಿಶಾಲ ಶೈಲಿಯಲ್ಲಿ ಹಾಡಿ ಮುಗಿಸಿದರು. ತಾನವನ್ನು ಹಾಡದೆ ಪಲ್ಲವಿ ಆರಂಭಮಾಡಿದಾಗ ಸಭಿಕರಲ್ಲಿ ಅವರ ಅಂದಿನ ರೀತಿಯು ಅತಿ ಆಶ್ಚರ್ಯವನ್ನುಂಟು ಮಾಡಿತು. ಹಾಗೂ ಕೆಲವರು ತಾನವನ್ನು ಹಾಡಬೇಕೆಂದೂ ಸಹ ಪ್ರಾರ್ಥಿಸಿದರು. ಆಗ ವರದಾಚಾರ‍್ಯರು “ಮಧ್ಯಮಕಾಲ ಹಾಡುವುದಕ್ಕಾಗಿಯೇ ಮತ್ತೊಬ್ಬ ಮಹನೀಯರು ಆಹ್ವಾನಿತರಾಗಿದ್ದಾರೆ. ನಾಳೆಯ ದಿನ ನಿಮ್ಮ ಮನದಣಿಯುವಷ್ಟು ಅವರ ಸಂಗೀತವನ್ನು ಕೇಳಬಹುದು” ಎಂದು ವಾಸುದೇವಾಚಾರ್ಯರ ಕಡೆ ಬೊಟ್ಟುಮಾಡಿ, “ಮಧ್ಯಮ ಕಾಲ ಅವರ ಸ್ವತ್ತು ಎಂದರು. ಹಾಡಲು ಕುಳಿತಿದ್ದ ಟೈಗರ್‌ರವರಂತೆ ವಿನಯದಿಂದ ಎಷ್ಟು ಜನ ವಿದ್ವಾಂಸರು ಮಾತನಾಡಬಲ್ಲರು? ಆಗ ವಾಸುದೇವಾಚಾರ್ಯರೇ “ತಾನವನ್ನು ಹಾಡಬೇಕು” ಎಂದು ಪ್ರಾರ್ಥಿಸಿದರು ವರದಾಚಾರ್ಯರು “ಇದೊಂದು ವಿಚಾರದಲ್ಲಿ ಈ ದಿನ ನಿಮ್ಮ ಮಾತನ್ನು ಮೀರಲು ಅನುಮತಿಯನ್ನು ನೀಡಬೇಕು” ಎಂದು ನುಡಿದು, ತಾನವನ್ನು ಆ ದಿನ ಹಾಡದೆಯೇ ಪಲ್ಲವಿಯನ್ನು ಮುಕ್ತಾಯ ಮಡಿದರು. ಇದು ಎಂತಹ ಉನ್ನತ ಮಾರ್ಗದರ್ಶನ!

ವ್ಯಕ್ತಿತ್ವ

ಟೈಗರ್‌ರವರ ಮನಸ್ಸು ಹೂವಿನಂತೆ ಕೋಮಲ ವಾಗಿದ್ದು, ಮಗುವಿನಂತೆ ನಿಷ್ಕಲ್ಮಷವಾಗಿತ್ತು. ಶಿಷ್ಯರಾದವರನ್ನು ಸದಾಕಾಲವೂ ಪ್ರೀತಿವಿಶ್ವಾಸಗಳಿಂದ ಕಾಣುತ್ತಿದ್ದರು. ಅವರು ಯಾರನ್ನು ದೂಷಣೆ ಮಾಡಿದುದಿಲ್ಲ. ಅವರದು ಸಣ್ಣದರಲ್ಲೂ ದೊಡ್ಡದನ್ನು ಕಾಣುವ ವಿಶಾಲಗುಣ. ಪರೀಕ್ಷಕರಾಗಿ ಕುಳಿತಾಗ, ವಿದ್ಯಾರ್ಥಿಗಳಿಗೆ ಪೂರ್ಣಸ್ವಾತಂತ್ರ್ಯವನ್ನು ಕೊಟ್ಟು ಹಾಡಿಸಿ, ಅವರಲ್ಲಿ ಕಂಡ ಉತ್ತಮ ಗುಣಗಳನ್ನು ಮಾತ್ರ ಗ್ರಹಿಸಿ, ಉದಾರವಾಗಿ ಅಂಕಗಳನ್ನು ಕೊಟ್ಟು ಮುಂದಿನ ಪೀಳಿಗೆಯವರನ್ನು ಹುರಿದುಂಬಿಸುತ್ತಿದ್ದರು. ಸ್ವಲ್ಪವೇ ಪರಿಚಯವಿದ್ದರೂ ಸಾಕು; ಕೇಳಿದೊಡನೆ ಶಿಷ್ಯರಿಗೆ ಪರಿಚಯ ಪತ್ರಗಳನ್ನು ಬಹಳ ಉತ್ತಮ ರೀತಿಯಲ್ಲಿ ಬರೆದು ಕೊಡುತ್ತಿದ್ದುದು ಅವರ ದೊಡ್ಡತನ. ಹಾಡುವಾಗ ಸಂಗೀತದಲ್ಲಿ ಎಷ್ಟು ತನ್ಮಯರಾಗುತ್ತಿದ್ದರು ಎಂದರೆ, ಗಾಯನದ

ಸೊಗಸಿಗೆ ಕೇಳಿದವರು ಚಪ್ಪಾಳೆ ತಟ್ಟಿದರೆ ತಾವೂ ಚಪ್ಪಾಳೆ ತಟ್ಟಿಬಿಡುತ್ತಿದ್ದರು.

ಸಮಯ ಸ್ಪೂರ್ತಿ

ವರದಾಚಾರ‍್ಯರ ಬಾಹ್ಯರೂಪ ಅಷ್ಟಕ್ಕಷ್ಟೆ, ಸ್ಥೂಲ ಶರೀರ, ಮೇಲಾಗಿ ಧರಿಸುತ್ತಿದ್ದ ಟೋಪಿಗೂ ತೊಡುತ್ತಿದ್ದ ಪೋಷಾಕಿಗೂ ಯಾವ ರೀತಿಯ ಹೊಂದಾಣಿಕೆಯೂ ಇಲ್ಲ. ಆದರೆ ಅವರು ತಮ್ಮನ್ನು ತಾವೇ ಹಾಸ್ಯಮಾಡಿಕೊಳ್ಳಬಲ್ಲವರು. ತಮ್ಮ ಶರೀರದ ಅಂದಚೆಂದವನ್ನು ಕನ್ನಡಿಯಲ್ಲಿ ನೋಡಿಕೊಂಡು “ಆಂಜನೇಯನೇ ನಮೋ” ಎಂದು ತಮ್ಮನ್ನು ತಾವೇ ಹಾಸ್ಯಮಾಡಿಕೊಂಡು ನಗುತ್ತಿದ್ದರು.

ಒಮ್ಮೆ ಯಾರೋ ಒಬ್ಬರು ಇವರ ದೊಡ್ಡ ಹೊಟ್ಟೆಯನ್ನು ಗಮನಿಸಿ “ಇದು ಪಾಟ್ ಬೆಲ್ಲಿ” (ಕೊಡದಂತಹ ಹೊಟ್ಟೆ)” ಎಂದು ಇಂಗ್ಲಿಷಿನಲ್ಲಿ ವ್ಯಂಗ್ಯವಾಗಿ ನುಡಿದರು. ಟೈಗರ್‌ರವರು, “ಆಮ, ಪಾಟ್‌ಕ್ಕಾಹ ಇಂದ ಬೆಲ್ಲಿ, ಸಾಪಾಡ್ ಬೆಲ್ಲಿ ಇಲ್ಲೇ!” (ಹೌದು, ಹಾಡುವುದಕ್ಕಾಗಿ ಈ ಹೊಟ್ಟೆ ಊಟದ ಹೊಟ್ಟೆ ಅಲ್ಲ) ಎಂದು ತಟ್ಟನೆ ತಮಿಳಿಗೆ ತಿರುಗಿಸಿ ಉತ್ತರಿಸಿದರು.

ಅಣ್ಣಾಮಲೈ ವಿಶ್ವವಿದ್ಯಾನಿಲಯದ ‘ತಮಿಳು ಇಶೈ ಆಂದೋಲನ’ದಲ್ಲಿ ತಮಿಳುನಾಡಿನ ಏಕಾಂಬರಂ ಪಂಡಾರತ್ತಾರ್ ಎಂಬುವವರು ಮುಖ್ಯರಾದರು. ಇವರು ಸಾಹಿತ್ಯವೇ ಅಲ್ಲದೆ ಸಂಗೀತದ ರಚನೆಗಳೂ ಕೂಡ ತಮಿಳಿನಲ್ಲೇ ಇರಬೇಕೆಂದು ಸಮರ್ಥನೆ ಮಾಡಿದಾಗ, ಅಧ್ಯಕ್ಷತೆ ವಹಿಸಿದ್ದ ವರದಾಚಾರ‍್ಯರು, “ಪಂಡಾರತ್ತಾರ್ ಹೇಳುವುದು ಸರ್ವಸಮ್ಮತ. ಆದರೆ ಅವರ ಹೆಸರಿನಲ್ಲಿ ‘ಏಕಾಂಬರಂ’ ಎನ್ನುವ ಸಂಸ್ಕೃತ ಪದವನ್ನು ‘ಒತ್ತೈತುಣಿ’ ಎಂದು ತಮಿಳಿಗೆ ಬದಲಿಸಿ, ‘ಒತ್ತೈತುಣಿ ಪಂಡತ್ತಾರ್’ ಎಂದೇ ಹೆಸರಿಟ್ಟುಕೊಂಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!’ ಎಂದು ಹೇಳಿ ಸಭಿಕರು ಯಾವ ವಾದವನ್ನು ಅತಿಗೆ ಕೊಂಡೊಯ್ಯಬಾರದು ಎಂಬುದನ್ನು ಯೋಚಿಸುವಂತೆ ಮಾಡಿದರು. ಟೈಗರ್‌ರವರ ಸಮಯಸ್ಫೂರ್ತಿಯ ಭಂಡಾರದಲ್ಲಿ ಇಂತಹ ಮಾತಿಗೆ ಲೆಕ್ಕವೇ ಇರಲಿಲ್ಲ.

ನೋಡಲು ಹೇಗಿದ್ದರೇನು? ವಿದ್ಯೇ, ವಿನಯ, ಗಾಂಭೀರ್ಯದಿಂದ ತುಂಬಿಒ ಸರಸ್ವತಿಯ ವರಪುತ್ರರಾದ ವರದಾಚಾರ್ಯರನ್ನು ಯಾರು ನೋಡಿದರೂ ಪೂಜ್ಯಭಾವನೆ ಯನ್ನು ತಳೆಯುತ್ತಿದ್ದರು.

ನಾದ್ಯಕ್ಯರಾದರು

ವರದಾಚಾರ‍್ಯರು ಕಟ್ಟಕಡೆಯವರೆಗೂ ಕಲಾಕ್ಷೇತ್ರ ವನ್ನೇ ಉಸಿರಾಗಿಟ್ಟುಕೊಂಡು ಬಾಳಿದ ವ್ಯಕ್ತಿ. ಎಪ್ಪತ್ನಾಲ್ಕು ವರ್ಷಗಳ ತುಂಬುಜೀವನ ನಡೆಸಿ ೧೯೫೦ರ ಜನವರಿಯಲ್ಲಿ ನಿಧನರಾದರು. ಅವರ ಸಾಯುವ ದಿನ ತಮ್ಮ ಮೆಚ್ಚಿನ ಶಿಷ್ಯಂದಿರಾದ ಎಮ್. ಡಿ. ರಾಮನಾಥನ್‌ರವರನ್ನು ‘ಎಂತರಾನಿ ತನಕೆಂತ’ ಎಂಬ ಹರಿಕಾಂಬೋಧಿ ರಾಗದ ತ್ಯಾಗರಾಜರ ಕೃತಿಯನ್ನು ಹಾಡಲು ಹೇಳಿದರು. ಹಾಡನ್ನು ಕೇಳುತ್ತಲೇ ನಾದ್ಯಕ್ಯರಾದರು.

ಟೈಗರ್‌ರವರು ಅವರ ಆಪ್ತಮಿತ್ರರಾಗಿದ್ದ ವಾಸುದೇವಾಚಾರ್ಯರನ್ನು ಮುಂದಿನ ಪ್ರಾಧ್ಯಾಪಕರನ್ನಾಗಿ ತೆಗೆದುಕೊಳ್ಳಬೇಕೆಂದು ಕಲಾಕ್ಷೇತ್ರದ ರುಕ್ಮಿಣೀದೇವಿ ಯವರಿಗೆ ಸಲಹೆ ಮಾಡಿದ್ದರು. ವಾಸುದೇವಾಚಾರ್ಯರೇ ಆ ಸ್ಥಾನವನ್ನು ವಹಿಸಿಕೊಂಡರು.

ವೃದ್ಧಾಪ್ಯವದಲ್ಲಿ ತಮಗೆ ಆಶ್ರಯ ನೀಡಿ ಗೌರವಿಸಿ ಕಾಪಾಡಿದ ಶ್ರೀಮತಿ ರುಕ್ಮಿಣೀದೇವಿಯವರಲ್ಲಿ ವರದಾಚಾರ‍್ಯರಿಗೆ ಅಪಾರ ಗೌರವ, ಕೃತಜ್ಞತೆ, ವಿಶ್ವಾಸಗಳಿದ್ದವು. ಇಂದಿಗೂ ಕಲಾಕ್ಷೇತ್ರದವರು ಇವರ ಪುಣ್ಯದಿನವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

ದೇಹ ಅಳಿದರೇನು? ಧೀಮಂತ ವ್ಯಕ್ತಿಯಾಗಿ, ಆದರ್ಶ ಶಿಕ್ಷಕರಾಗಿ, ಸಂಪ್ರದಾಯ ಶರಣರಾಗಿ, ನಾದಲೋಕದಲ್ಲಿ ಬಾಳಿ ಬೆಳಗಿದ ವರದಾಚಾರ‍್ಯರನ್ನು ಸ್ಮರಿಸುವುದು ನಮ್ಮ ಪುಣ್ಯ. ಅವರು ತೋರಿದ ಉನ್ನತ ಮಾರ್ಗದಲ್ಲಿ ನಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ.