ಅವು ನಿಮ್ಮ ಮನೆಗಳಲ್ಲಿ ಕನಿಷ್ಟವೆಂದರೂ ಐದರಿಂದ ಹತ್ತು ಕೋಟಿಯಷ್ಟಿರುತ್ತವೆ.

ಏನು? ಇರುವೆ-ಜಿರಲೆಗಳಾ? ಅಕ್ಕಿ ಮೂಟೆಯಲ್ಲಿರುವ ಕಾಳುಗಳಾ? ಎಂದು ನೀವು ಕೇಳುವ ಮೊದಲೇ ಹೇಳಿಬಿಡುತ್ತೇನೆ ಕೇಳಿ – ಅವು ಟ್ರಾನ್ಸಿಸ್ಟರ್‌ಗಳು, ನಮ್ಮ ಜಗತ್ತನ್ನೇ ಬದಲಿಸಿಬಿಟ್ಟಿರುವ ಪುಟ್ಟ ಸಾಧನಗಳು.

ಟ್ರಾನ್ಸಿಸ್ಟರ್‌ಗಳು ವಿದ್ಯುನ್ಮಾನ ಉಪಕರಣಗಳಲ್ಲಿರುವ ಮಂಡಲ ಅಥವಾ ಸರ್ಕ್ಯೂಟುಗಳಲ್ಲಿ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸುತ್ತವೆ (ಹೀಗಾಗಿಯೇ ಪ್ರೊ. ಜಿ ವೆಂಕಟಸುಬ್ಬಯ್ಯನವರು ಇವುಗಳನ್ನು ಕನ್ನಡದಲ್ಲಿ ‘ವಿದ್ಯುನ್ನಿಯಂತ್ರಕ’ಗಳೆಂದು ಕರೆದಿದ್ದಾರೆ). ಇವು ವಿದ್ಯುತ್ ಸಂಕೇತಗಳನ್ನು ವರ್ಧಿಸಲು ಹಾಗೂ ಅತಿವೇಗದ ಸ್ವಿಚ್‌ಗಳಂತೆ ಕೂಡ ಬಳಕೆಯಾಗುತ್ತವೆ. ಇದರಿಂದಾಗಿಯೇ ದೂರಸಂಪರ್ಕ ಹಾಗೂ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಟ್ರಾನ್ಸಿಸ್ಟರ್‌ಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ.

ನೂರು ರೂಪಾಯಿಯ ಮೇಡ್ ಇನ್ ಚೈನಾ ರೇಡಿಯೋವಿನಿಂದ ಹಿಡಿದು ಸಾವಿರಾರು ರೂಪಾಯಿ ಬೆಲೆಯ ಕಂಪ್ಯೂಟರ್‌ನವರೆಗೆ, ಲಕ್ಷಾಂತರ ರೂಪಾಯಿ ಬೆಲೆಯ ವೈದ್ಯಕೀಯ ಯಂತ್ರಗಳಿಂದ ಪ್ರಾರಂಭಿಸಿ ಕೋಟ್ಯಂತರ ಬೆಲೆಯ ವಿಮಾನಗಳ ನಿಯಂತ್ರಣವ್ಯವಸ್ಥೆಯವರೆಗೆ ಎಲ್ಲ ವಿದ್ಯುನ್ಮಾನ ಉಪಕರಣಗಳ ಜೀವಾಳವಾಗಿರುವ ಈ ಪುಟಾಣಿ ವಿಸ್ಮಯಗಳು ಇಂದಿನ ನಮ್ಮ ಡಿಜಿಟಲ್ ಜೀವನಶೈಲಿಯನ್ನು ಸಾಧ್ಯವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.

ಟ್ರಾನ್ಸಿಸ್ಟರ್‌ಗಳ ಆವಿಷ್ಕಾರದ ಹಿಂದೆ ಒಂದು ಕುತೂಹಲಕರ ಕತೆಯಿದೆ, ಎರಡನೇ ವಿಶ್ವಯುದ್ಧ ಮುಗಿದ ಸಂದರ್ಭದಲ್ಲಿ ನಡೆದದ್ದು.

ಯುದ್ಧಕಾಲದಲ್ಲಿ ಸೇನಾಪಡೆಗಳ ಉಪಯೋಗಕ್ಕಾಗಿ ವಿದ್ಯುನ್ಮಾನ ಉಪಕರಣಗಳನ್ನು ತಯಾರಿಸಲು ಸತತ ಸಂಶೋಧನೆಗಳು ನಡೆಯುತ್ತಿದ್ದವು. ಇವೇ ಸಂಶೋಧನೆಗಳ ಫಲವಾಗಿ ವಿಶ್ವದ ಮೊತ್ತಮೊದಲ ಗಣಕಗಳು ಅದೇ ತಾನೆ ತಯಾರಾಗಿದ್ದವು. ಈ ಗಣಕಗಳು ವ್ಯಾಕ್ಯೂಮ್ ಟ್ಯೂಬ್ ಅಥವಾ ಥರ್ಮಯಾನಿಕ್ ವಾಲ್ವ್‌ಗಳನ್ನು ಬಳಸುತ್ತಿದ್ದವು.

ಗಾತ್ರದಲ್ಲಿ ಹೆಚ್ಚೂಕಡಿಮೆ ವಿದ್ಯುತ್ ಬಲ್ಬುಗಳಷ್ಟಿದ್ದ ಈ ವ್ಯಾಕ್ಯೂಮ್ ಟ್ಯೂಬುಗಳು ಸಿಕ್ಕಾಪಟ್ಟೆ ವಿದ್ಯುತ್ತನ್ನು ಕಬಳಿಸುತ್ತಿದ್ದವು. ಅಷ್ಟೇ ಅಲ್ಲ, ಬಲ್ಬುಗಳ ಹಾಗೆ ಬಿಸಿಯಾಗುತ್ತಿದ್ದವು; ಸುಟ್ಟುಹೋಗುತ್ತಲೂ ಇದ್ದವು. ಪ್ರತಿಯೊಂದು ಗಣಕದಲ್ಲೂ ಇಂತಹ ನೂರಾರು-ಸಾವಿರಾರು ವ್ಯಾಕ್ಯೂಮ್ ಟ್ಯೂಬುಗಳು ಬಳಕೆಯಾಗುತ್ತಿದ್ದರಿಂದ ಗಣಕದ ಗಾತ್ರ ಕೂಡ ಕೊಂಚ ಅತಿ ಎನಿಸುವಷ್ಟೇ ದೊಡ್ಡದಾಗಿರುತ್ತಿತ್ತು.

ಕೇವಲ ಹದಿನೆಂಟು ಸಾವಿರ ವ್ಯಾಕ್ಯೂಮ್ ಟ್ಯೂಬ್‌ಗಳನ್ನು ಹೊಂದಿದ್ದ ಇನಿಯಾಕ್ ಎಂಬ ಗಣಕವನ್ನು ಇಡಲು ಒಂದು ಇಡೀ ಕೊಠಡಿಯೇ ಬೇಕಾಗುತ್ತಿತ್ತು.

ಅಷ್ಟೇ ಅಲ್ಲ, ಅದರ ಮೇಲ್ವಿಚಾರಣೆಗಾಗಿಯೇ ನಾಲ್ಕೈದು ತಜ್ಞರ ಅವಶ್ಯಕತೆಯಿತ್ತು.

ಇವೆಲ್ಲ ಸಮಸ್ಯೆಗಳ ಕಾರಣದಿಂದ ಹೆಚ್ಚು ಹೆಚ್ಚು ವೇಗವಾಗಿ ಕೆಲಸಮಾಡುವ ಗಣಕಗಳನ್ನು ನಿರ್ಮಿಸುವುದು ಅಸಾಧ್ಯವೇ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಪರಿಸ್ಥಿತಿಯಿಂದ ಬೇಸತ್ತ ವಿಜ್ಞಾನಿಗಳು ವ್ಯಾಕ್ಯೂಮ್ ಟ್ಯೂಬ್‌ಗಳ ಬದಲಿಗೆ ಬಳಸಲು ಸೂಕ್ತವಾದ ಸಾಧನಗಳನ್ನು ರೂಪಿಸಲು ಸತತ ಪ್ರಯತ್ನ ನಡೆಸತೊಡಗಿದ್ದರು.

ಈ ಪ್ರಯತ್ನದ ಫಲವಾಗಿ ರೂಪುಗೊಂಡಿದ್ದೇ ಟ್ರಾನ್ಸಿಸ್ಟರ್.

ಅಮೆರಿಕದ ನ್ಯೂಜೆರ್ಸಿಯ ಬೆಲ್ ಟೆಲಿಫೋನ್ ಲ್ಯಾಬೊರೆಟರೀಸ್‌ನಲ್ಲಿ ವಿಲಿಯಂ ಶಾಕ್ಲಿ, ಜಾನ್ ಬಾರ್ಡೀನ್ ಹಾಗೂ ವಾಲ್ಟರ್ ಬ್ರಾಟೇನ್ ಎಂಬ ವಿಜ್ಞಾನಿಗಳು ಕೆಲಸಮಾಡುತ್ತಿದ್ದರು. ಹೊಸದಾಗಿ ಕೆಲಸಕ್ಕೆ ಸೇರಿದ್ದ ಜಾನ್ ಹಾಗೂ ಹಿರಿಯ ವಿಜ್ಞಾನಿಯಾಗಿದ್ದ ವಿಲಿಯಂ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದ ಕಾರಣ ಅವರಿಬ್ಬರೂ ಜೊತೆಗೆ ಹೊಂದಿಕೊಂಡುಹೋಗುವುದು ಕಷ್ಟವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಒಟ್ಟಿಗೆ ಸೇರಿಕೊಂಡ ಜಾನ್ ಹಾಗೂ ವಾಲ್ಟರ್ ಜೋಡಿಯ ಹದಿನೆಂಟು ತಿಂಗಳ ಸತತ ಪರಿಶ್ರಮದ ಫಲವೇ ಟ್ರಾನ್ಸಿಸ್ಟರ್‌ನ ಹುಟ್ಟು.

ಜರ್ಮೇನಿಯಂ ಬಳಸಿ ತಯಾರಾಗಿದ್ದ, ಚಿನ್ನದ ಸಂಪರ್ಕ ತಂತಿಗಳನ್ನು ಹೊಂದಿದ್ದ ಈ ಸಾಧನ ಪ್ಲಾಸ್ಟಿಕ್ ಆಧಾರದ ಮೇಲೆ ನಿರ್ಮಿತವಾಗಿತ್ತು. ನೋಡಲು ಒಡ್ಡೊಡ್ಡಾಗಿ ಕಾಣುತ್ತಿದ್ದ, ಅರ್ಧ ಇಂಚು ಉದ್ದದ ಈ ಸಾಧನ ಬಹಳ ವೇಗವಾಗಿ ತನ್ನ ಸ್ಥಿತಿಯನ್ನು ಬದಲಿಸಿಕೊಳ್ಳಲು ಶಕ್ತವಾಗಿತ್ತು. ಹೀಗಾಗಿ ಅದೊಂದು ಸ್ವಿಚ್‌ನಂತೆ ಕೆಲಸಮಾಡುತ್ತಿತ್ತು. ವಿದ್ಯುನ್ಮಾನ ಉಪಕರಣಗಳಲ್ಲಿ ಬಳಸಲು ಹೇಳಿ ಮಾಡಿಸಿದಂತಿದ್ದ ಈ ಮೊದಲ ಟ್ರಾನ್ಸಿಸ್ಟರ್ ನಮ್ಮೆಲ್ಲರ ಇಂದಿನ ಡಿಜಿಟಲ್ ಜೀವನಶೈಲಿಗೆ ೧೯೪೭ರಲ್ಲೇ ಮುನ್ನುಡಿ ಬರೆದಿತ್ತು.

ಮುಂದಿನ ವರ್ಷಗಳಲ್ಲಿ ಟ್ರಾನ್ಸಿಸ್ಟರ್ ಇನ್ನಷ್ಟು ಮತ್ತಷ್ಟು ಶಕ್ತವಾಗುತ್ತ ಹೋದಂತೆ ಹೊಸಹೊಸ ವಿದ್ಯುನ್ಮಾನ ಉಪಕರಣಗಳು ಮಾರುಕಟ್ಟೆಗೆ ಬರಲಾರಂಭಿಸಿದವು. ಮೊದಲಿಗೆ ೧೯೫೨ರಲ್ಲಿ ಹಿಯರಿಂಗ್ ಏಡ್ ಬಂತು, ನಂತರ ೧೯೫೪ರಲ್ಲಿ ಟ್ರಾನ್ಸಿಸ್ಟರ್ ರೇಡಿಯೋ ಕೂಡ ಬಂತು. ಪುಟ್ಟ ಟಿವಿಯಷ್ಟಿರುತ್ತಿದ್ದ ರೇಡಿಯೋ ಜೇಬಿನಲ್ಲಿಟ್ಟುಕೊಳ್ಳಬಹುದಾದ ಗಾತ್ರಕ್ಕೆ ಕುಗ್ಗಿದಾಗ ಅದಕ್ಕೆ ಟ್ರಾನ್ಸಿಸ್ಟರ್ ಎಂಬ ಹೆಸರೇ ಅಂಟಿಕೊಂಡುಬಿಟ್ಟಿತು.

ಟ್ರಾನ್ಸಿಸ್ಟರ್‌ಗಳನ್ನು ಬಳಸಿ ಕೆಲಸಮಾಡುತ್ತಿದ್ದ ಮೊದಲ ಗಣಕ ೧೯೫೬ರಲ್ಲಿ ಹೊರಬಂತು. ಮುಂದೆ ೧೯೫೮ರಲ್ಲಿ ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್ ಸಂಸ್ಥೆಯ ಜಾಕ್ ಕಿಲ್ಬಿ ಎಂಬ ವಿಜ್ಞಾನಿ ಇಂಟಿಗ್ರೇಟೆಡ್ ಸರ್ಕಿಟ್ ಅಥವಾ ಐಸಿಯನ್ನು ರೂಪಿಸಿದಮೇಲಂತೂ ಟ್ರಾನ್ಸಿಸ್ಟರ್‌ಗಳ ಉಪಯೋಗ ಮತ್ತಷ್ಟು ವಿಸ್ತಾರಗೊಂಡಿತು.

ಸಿಲಿಕಾನ್‌ನ ಚಿಕ್ಕದೊಂದು ತುಂಡಿನ ಮೇಲೆ ಸಂಪೂರ್ಣ ವಿದ್ಯುನ್ಮಾನ ಮಂಡಲಗಳನ್ನು ರಚಿಸಲು ಅನುವುಮಾಡಿಕೊಟ್ಟ ಈ ಆವಿಷ್ಕಾರ ಟ್ರಾನ್ಸಿಸ್ಟರ್‌ನ ಗಾತ್ರವನ್ನು ಗಮನಾರ್ಹವಾಗಿ ಕುಗ್ಗಿಸಲು ಸಹಕಾರಿಯಾಯಿತು.

ಹಲವು ಸೆಂಟೀಮೀಟರ್‌ನಲ್ಲಿರುತ್ತಿದ್ದ  ಟ್ರಾನ್ಸಿಸ್ಟರ್‌ನ ಗಾತ್ರವನ್ನು ಮಿಲೀಮೀಟರ್, ಮೈಕ್ರೋಮೀಟರ್, ಕಡೆಗೆ ನ್ಯಾನೋಮೀಟರುಗಳಿಗೆ ಇಳಿಸುವುದು ಸಾಧ್ಯವಾಯಿತು. ಕೇವಲ ಹದಿನೆಂಟು ಸಾವಿರ ವ್ಯಾಕ್ಯೂಮ್ ಟ್ಯೂಬ್ ಬಳಸುತ್ತಿದ್ದ ಗಣಕ ಒಂದು ಕೋಣೆತುಂಬಾ ತುಂಬಿಕೊಳ್ಳುತ್ತಿದ್ದ ಕಾಲ ಹೋಗಿ ಆ ಗಣಕಕ್ಕಿಂತ ಅದೆಷ್ಟೋ ಸಾವಿರ ಪಾಲು ಹೆಚ್ಚು ವೇಗವಾಗಿ ಕೆಲಸಮಾಡುವ ಗಣಕವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವುದು ಸಾಧ್ಯವಾಯಿತು.

ಅಂಗೈಯಗಲದ ಡಿಜಿಟಲ್ ಕ್ಯಾಮೆರಾ, ಮೂರು ಬೆರಳಗಲದ ಎಂಪಿ೩ ಪ್ಲೇಯರ್ ಮುಂತಾದ ಹತ್ತಾರು ಉಪಕರಣಗಳು ನಮ್ಮ ಜೀವನದ ಅಂಗಗಳಾಗಿಹೋದವು.

ಇದನ್ನೆಲ್ಲ ಸಾಧ್ಯವಾಗಿಸಿದ ಟ್ರಾನ್ಸಿಸ್ಟರ್ ಹಾಗೂ ಅದರ ಸುತ್ತ ಬೃಹದಾಕಾರವಾಗಿ ಬೆಳೆದ ಸೆಮಿಕಂಡಕ್ಟರ್ ಉದ್ದಿಮೆ ಈಗ ವರ್ಷಕ್ಕೆ ಸುಮಾರು ಮೂವತ್ತು ಸಾವಿರ ಕೋಟಿ ಡಾಲರುಗಳ ವ್ಯವಹಾರ ನಡೆಸುತ್ತಿದೆ. ಈ ಉದ್ದಿಮೆಯ ವ್ಯಾಪ್ತಿ ಗಣಕ ವಿಜ್ಞಾನದಿಂದ ಆರೋಗ್ಯ ವಿಜ್ಞಾನದವರೆಗೆ, ಮನರಂಜನೆಯಿಂದ ದೂರಸಂಪರ್ಕ ಕ್ಷೇತ್ರದವರೆಗೆ ಎಲ್ಲೆಲ್ಲೂ ಹರಡಿಕೊಂಡಿದೆ.

(ಪ್ರಜಾವಾಣಿಯ ಡಿಸೆಂಬರ್ , ೨೦೦೭ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನದ ಸುಧಾರಿತ ರೂಪ)