ಉತ್ತರ ಕರ್ನಾಟಕದ ಕೈಗಾ ಅಣುವಿದ್ಯುತ್ ಸ್ಥಾವರದ ಐವತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಟ್ರೀಶಿಯಂ ಸೇವನೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನುವ ಸುದ್ದಿ ಬಂತು. ಜೊತೆಗೇ ಸ್ಥಾವರದ ಉದ್ಯೋಗಿಗಳಲ್ಲೇ ಯಾರೋ ಟ್ರೀಶಿಯಂ ಅನ್ನು ಕುಡಿಯುವ ನೀರನ್ನು ತಣಿಸುವ ಕೂಲರ್ನೊಳಗೆ ಉದ್ದೇಶಪೂರ್ವಕವಾಗಿ ಕೂಡಿಸಿದ್ದರು ಎಂದು ಸ್ವತಃ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಕೇಂದ್ರಮಂತ್ರಿಗಳು ಹೇಳಿಕೆಯನ್ನೂ ಕೊಟ್ಟರು. ಇದು ಇನ್ನಷ್ಟು ಗಾಭರಿಯನ್ನು ಹುಟ್ಟಿಸಿತು. ಈ ಟ್ರೀಶಿಯಂ ಕೈಗಾ ಸ್ಥಾವರದಿಂದ ಹೊರಚೆಲ್ಲಿದೆಯೇ? ಅದರಿಂದ ಪರಿಸರಕ್ಕೆ ಹಾಗೂ ಜನರಿಗೆ ಆಗಬಹುದಾದ ಅಪಾಯವೇನು? ಅದಕ್ಕಿಂತಲೂ ಮುಖ್ಯವಾಗಿ ಈ ಟ್ರೀಶಿಯಂ ಅಂದರೆ ಎಂತಹ ವಿಷ ಎನ್ನುವ ಕುತೂಹಲ ಎಲ್ಲರನ್ನೂ ತಾಕಿದೆ.

ಟ್ರೀಶಿಯಂ ಎಂದರೆ ಇನ್ನೇನಲ್ಲ. ನೀರು ಗ ಚಿತ್ರನಟ ಉಪ್ಪಿಯವರ ಹಾಗೂ ವಿಜ್ಞಾನಿಗಳ ಮಾತಿನಲ್ಲಿ ಎಚ್2ಓ ಗ ಎನ್ನುವ ನಿತ್ಯ ಬಳಕೆಯ ವಸ್ತುವಿನಲ್ಲಿರುವ ಹೈಡ್ರೊಜನ್ (ಜಲಜನಕ)ದ ಮತ್ತೊಂದು ರೂಪ. ಅಷ್ಟೆ. ಇಷ್ಟಕ್ಕೂ ಕೈಗಾದ ಸಿಬ್ಬಂದಿಗಳು ಕುಡಿದ ಟ್ರೀಶಿಯಂ ಮಿಶ್ರಿತ ನೀರಿಗೂ, ಬೇರೆ ನೀರಿಗೂ, ದೇವಸ್ಥಾನದಲ್ಲಿ ಪೂಜಾರಿಗಳು ನೀಡುವ ತೀರ್ಥ ಹಾಗೂ ಕುಡಿಯುವ ನೀರಿಗೂ ಇರುವಷ್ಟೆ ವ್ಯತ್ಯಾಸ ಇದೆ ಎನ್ನಬಹುದು. ಎರಡೂ ನೋಡಲು ಒಂದೇ. ಮಾಡುವ ಕೆಲಸವೂ ಒಂದೇ. ಎರಡರ ವಾಸನೆಯೂ ಒಂದೇ.  ತೀರ್ಥದಲ್ಲಿ ಇದೆ ಎನ್ನಲಾದ ಪವಾಡ ಸದೃಶ ಶಕ್ತಿ ಹೇಗೆ ಅನುಭವಕ್ಕೆ ಬರುವುದಿಲ್ಲವೋ ಹಾಗೆಯೇ ಟ್ರೀಶಿಯಂ ನೀರಿನ ಪ್ರಭಾವವೂ ಸುಲಭವಾಗಿ ಗಮನಕ್ಕೆ ಬರುವುದಿಲ್ಲ. ಸಾಮಾನ್ಯವಾದ ನೀರು ಮತ್ತು ಟ್ರೀಶಿಯಂ ನೀರಿನಲ್ಲಿರುವ ವ್ಯತ್ಯಾಸವಿಷ್ಟೆ: ಟ್ರೀಶಿಯಂ ನೀರು ಟೀ2ಓ ಅಂದರೆ ಎರಡು ಟ್ರೀಶಿಯಂ ಪರಮಾಣು ಮತ್ತು ಒಂದು ಆಕ್ಸಿಜನ್ ಅಣು ಸಂಯೋಗವಾಗಿ ಹುಟ್ಟಿದ ವಸ್ತು. ನೀರು ಎರಡು ಹೈಡ್ರೊಜನ್ (ಜಲಜನಕ) ಪರಮಾಣುಗಳು ಮತ್ತು ಒಂದು ಆಕ್ಸಿಜನ್ ಅಣು ಸಂಯೋಗವಾಗಿ ಹುಟ್ಟಿದ ವಸ್ತು.

ಟ್ರೀಶಿಯಂ ಎನ್ನುವುದು ಜಲಜನಕದ ಮತ್ತೊಂದು ಸ್ವರೂಪ. ಪರಮಾಣುಗಳಲ್ಲಿ ಇಲೆಕ್ಟ್ರಾನುಗಳು, ಪ್ರೊಟಾನುಗಳು ಮತ್ತು ನ್ಯೂಟ್ರಾನುಗಳು ಎನ್ನುವ ಮೂಲಕಣಗಳು ಇರುತ್ತವೆ ಅನ್ನುವುದು ಗೊತ್ತಿದೆಯಲ್ಲ? ಜಲಜನಕದ ಪರಮಾಣುಗಳಲ್ಲಿ ಕೇವಲ ಒಂದು ಇಲೆಕ್ಟ್ರಾನ್ ಮತ್ತು ಒಂದು ಪ್ರೊಟಾನ್ ಇರುತ್ತವೆ ಅಷ್ಟೆ. ನ್ಯೂಟ್ರಾನ್ ಇರುವುದಿಲ್ಲ. ಅದಕ್ಕೇ ಜಲಜನಕವನ್ನು ಭೂಮಿಯ ಮೇಲಿನ ಅತ್ಯಂತ ಹಗುರವಾದ ಧಾತು ಎನ್ನುತ್ತಾರೆ. ಟ್ರೀಶಿಯಂ ಇದಕ್ಕಿಂತಲೂ ತುಸು ಭಾರ ಅಷ್ಟೆ. ಅದರಲ್ಲಿ ಪ್ರೊಟಾನ್ನ ಜೊತೆಗೆ ಎರಡು ನ್ಯೂಟ್ರಾನ್ಗಳು ಇರುತ್ತವೆ. ಹೀಗಾಗಿ ಅದು ತುಸು ಭಾರ. ಸಾಮಾನ್ಯವಾದ ನೀರಿನ ಕೆಲವು ಅಣುಗಳ ಒಟ್ಟು ತೂಕ 34 ಗ್ರಾಂ ಎಂದಿಟ್ಟುಕೊಳ್ಳಿ. ಟ್ರೀಶಿಯಂ ನೀರಿನ ಅಷ್ಟೇ ಅಣುಗಳ ತೂಕ 38 ಗ್ರಾಂ ಆಗುತ್ತವೆ ಅಷ್ಟೆ! ಇದರ ಹೊರತಾಗಿ ಟ್ರೀಶಿಯಂ ನೀರಿನ ಗುಣವೆಲ್ಲವೂ ನಾವು, ನೀವು ನಿತ್ಯ ಬಳಸುವ ನೀರಿನಂತೆಯೇ ಇರುತ್ತದೆ.

ಈ ವಸ್ತು ಸಹಜವಾಗಿ ನಿಸರ್ಗದಲ್ಲಿ ದೊರಕುವುದಿಲ್ಲ. ದೊರಕಿದರೂ ಅತ್ಯಲ್ಪ ಪ್ರಮಾಣದಲ್ಲಿಯಷ್ಟೆ ಕಾಣಸಿಗುತ್ತದೆ. ಉದಾಹರಣೆಗೆ, ವ್ಯೋಮಕಿರಣ (ಬಾಹ್ಯಾಕಾಶದಿಂದ ಬರುವ ಶಕ್ತಿಶಾಲಿ ಕಿರಣಗಳು) ಗಳು ತಾಕಿದಾಗ ವಾತಾವರಣದಲ್ಲಿರುವ ಕೆಲವು ನೈಟ್ರೊಜನ್ ಪರಮಾಣುಗಳು ಒಡೆದು ಟ್ರೀಶಿಯಂ ಉತ್ಪತ್ತಿಯಾಗುತ್ತದೆ. ಶಿಲೆಗಳಲ್ಲಿರುವ ವಿಕಿರಣಶಾಲಿ ಯುರೇನಿಯಂ ಮತ್ತು ಥೋರಿಯಂಗಳ ಪ್ರಭಾವದಿಂದಲೂ ಕಲ್ಲಿನಲ್ಲಿರುವ ಲಿಯಂ ಅಣು ಒಡೆದು ಟ್ರೀಶಿಯಂ ಉತ್ಪತ್ತಿಯಾಗಬಹುದು. ಆದರೆ ಇದು ಬಣವೆಯಲ್ಲಿ ಸೂಜಿ ಸಿಕ್ಕಿದ್ದಕ್ಕಿಂತಲೂ ವಿರಳ. ಒಂದು ಸಾವಿರ ಕೋಟಿ ಕೋಟಿ ಹೈಡ್ರೊಜನ್ ಪರಮಾಣುಗಳಲ್ಲಿ ಎಲ್ಲೋ ಒಂದು ಟ್ರೀಶಿಯಂ ಪರಮಾಣು ದೊರೆತರೆ ನಿಮ್ಮ ಅದೃಷ್ಟ! ಅಷ್ಟು ಅಪರೂಪ ಹೈಡ್ರೊಜನ್ನ ಈ ರೂಪ. ಕೈಗಾದ ನೀರಿನ ಕೂಲರ್ಗೆ ಮಿಶ್ರವಾಯಿತೆನ್ನಲಾದ 50 ಮಿಲಿ ಎನ್ನುವುದು ಈ ಲೆಕ್ಕದಲ್ಲಿ ಭಾರಿ ಪ್ರಮಾಣ. ಇಷ್ಟು ಭಾರಿ ಪ್ರಮಾಣದ ಟ್ರೀಶಿಯಂ ಉತ್ಪತ್ತಿ ಪರಮಾಣು ಸ್ಥಾವರಗಳಲ್ಲಿ ಅಥವಾ ಪರಮಾಣು ಬಾಂಬುಗಳ ಸಿಡಿತದಿಂದ ಅಷ್ಟೆ ಸಾಧ್ಯ. ಜೊತೆಗೆ ಅದು ವಿಕಿರಣಶಾಲಿ ವಸ್ತು. ಅಂದರೆ ಅದರಿಂದ ಬೀಟ ಕಿರಣಗಳೆಂಬ (ಇಲೆಕ್ಟ್ರಾನ್ಗಳ ಸುರಿಮಳೆ) ಶಕ್ತಿಶಾಲಿ ವಿಕಿರಣಗಳು ಹೊಮ್ಮುತ್ತವೆ. ಟ್ರೀಶಿಯಂನ ಇರವನ್ನು ಈ ಕಿರಣಗಳನ್ನು ಪತ್ತೆ ಮಾಡಿಯೇ ಕಂಡುಕೊಳ್ಳಬೇಕು. ಹೀಗೆ ಶಕ್ತಿ ಕಳೆದುಕೊಳ್ಳುತ್ತಾ ಅದು ಕ್ರಮೇಣ ಸಹಜ ಹೈಡ್ರೊಜನ್ ಆಗಿ ಬದಲಾಗುತ್ತದೆ. ಆದರೆ ನೂರು ಟ್ರೀಶಿಯಂ ಪರಮಾಣುಗಳಲ್ಲಿ 50ರಷ್ಟು ಹೈಡ್ರೊಜನ್ ಆಗಲು ಕನಿಷ್ಟ 125 ವರ್ಷಗಳಾದರೂ ಬೇಕು. ಅಂದರೆ ಅರ್ಥ ಇಷ್ಟೆ. ಟ್ರೀಶಿಯಂ ನೂರಾರು ವರ್ಷಗಳ ಕಾಲ ತನ್ನಲ್ಲಿರುವ ಅಧಿಕ ಶಕ್ತಿಯನ್ನು ಕಳೆದುಕೊಳ್ಳುತ್ತಲೇ ಇರುತ್ತದೆ!

ಇದು ಎಷ್ಟು ಅಪಾಯಕಾರಿ? ಸಾಮಾನ್ಯವಾಗಿ ಬೀಟಕಿರಣಗಳನ್ನು ಒಂದು ತೆಳು ಕಾಗದದ ಹಾಳೆಯಿಂದಲೇ ತಡೆಗಟ್ಟಬಹುದು. ಆದರೆ ಟ್ರೀಶಿಯಂ ಅನ್ನೇ ನುಂಗಿದರೆ? ದೇಹ ಹೊಕ್ಕ ಟ್ರೀಶಿಯಂನ ಗತಿ ಏನಾಗುತ್ತದೆನ್ನುವುದು ಅದು ಯಾವ ಸ್ವರೂಪದಲ್ಲಿ ದೇಹವನ್ನು ಕೂಡಿತೆನ್ನುವುದನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಅನಿಲದ ರೂಪದಲ್ಲಿ ಅದನ್ನು ಉಸಿರಾಡಿದರೆ ಆಗುವ ಅಪಾಯ ಟ್ರೀಶಿಯಂ ನೀರು ಕುಡಿದರೆ ಆಗುವ ಅಪಾಯಕ್ಕಿಂತ ಹತ್ತು ಸಾವಿರ ಪಟ್ಟು ಕಡಿಮೆ. ಜೊತೆಗೆ ಮನುಷ್ಯನ ಶ್ವಾಸಕೋಶದಲ್ಲಿರುವ ಬ್ಯಾಕ್ಟೀರಿಯಾಗಳು ಈ ಅನಿಲವನ್ನು ನಿರಪಾಯಕಾರಿಯಾಗಿ ಪರಿವರ್ತಿಸಬಲ್ಲುವು. ಹೈಡ್ರೊಜನ್ನ ಬದಲಿಗೆ ಟ್ರೀಶಿಯಂ ಕೂಡಿರುವ ಆಹಾರ ಅಥವಾ ಇನ್ಯಾವುದೇ ವಸ್ತುವನ್ನು ಸೇವಿಸಿದಾಗ ಅಪಾಯ ತುಸು ಹೆಚ್ಚು. ನೀರಿನ ರೂಪದಲ್ಲಿ ಸೇವಿಸಿದ ಟ್ರೀಶಿಯಂ ಹತ್ತು ದಿನಗಳೊಳಗೆ ಮೂತ್ರ, ಬೆವರು ಇತ್ಯಾದಿಗಳ ಮೂಲಕ ದೇಹದಿಂದ ಹೊರ ಹೋಗಿಬಿಡುತ್ತದೆ. ಆಹಾರ ಅಥವಾ ಇತರೇ ವಸ್ತುಗಳ ರೂಪದಲ್ಲಿ ಸೇವಿಸಿದ ಟ್ರೀಶಿಯಂ ಕೂಡ ಹೆಚ್ಚೆಂದರೆ ನಾಲ್ವತ್ತು ದಿನಗಳ ಕಾಲವಷ್ಟೆ ದೇಹದಲ್ಲಿ ಉಳಿದಿರುತ್ತದೆ ಎಂದು ಸಿದ್ಧವಾಗಿದೆ. ಟ್ರೀಶಿಯಂ ನೀರು ಮಿಶ್ರಿತ ನೀರನ್ನು ಕುಡಿದ ಟನೆ ಈ ಹಿಂದೆ ಜಪಾನಿನ ವಿದ್ಯುತ್ ಸ್ಥಾವರದಲ್ಲಿಯೂ ನಡೆದಿತ್ತು. ಆದರೆ ಅದರಿಂದ ಯಾರೂ ಸಾವನ್ನಪ್ಪಿದ್ದು ವರದಿಯಾಗಿಲ್ಲ! ಹೆಚ್ಚೆಂದರೆ ಕೆಲವು ಕಾಲ ಹೊಟ್ಟೆ ಕೆಡಬಹುದು, ಬೇಧಿಯಾಗಬಹುದು. ಅದೂ ಲೀಟರುಗಟ್ಟಲೆ ಟ್ರೀಶಿಯಂ ನೀರನ್ನು ಕುಡಿದಿದ್ದರೆ. ಹೀಗಾಗಿ ಕೈಗಾದ ಸಿಬ್ಬಂದಿಗಳು ಟ್ರೀಶಿಯಂ ಮಿಶ್ರಣವಾದ್ದು ಗೊತ್ತಾಗುವುದಕ್ಕೂ ಎಷ್ಟು ದಿನಗಳು ಈ ನೀರನ್ನೇ ಕುಡಿಯುತ್ತಿದ್ದರು ಎನ್ನುವುದು ಮುಖ್ಯವಾಗುತ್ತದೆ. ಒಮ್ಮೆಯಷ್ಟೆ ಆ ನೀರನ್ನು ಸೇವಿಸಿದ್ದಲ್ಲಿ ಅಪಾಯ ಕಡಿಮೆಯೇ!

 

ಟ್ರೀಶಿಯಂನಿಂದ ಹಾನಿಯಾಗುತ್ತದೆ ನಿಜ. ಆದರೆ ಪರಮಾಣು ಬಾಂಬಿನಲ್ಲಿ ಬಳಸುವ ಇತರೆ ವಿಕಿರಣಶಾಲಿ ಧಾತುಗಳಿಂದ ಆಗುವಷ್ಟು ಅಲ್ಲ. ಉದಾಹರಣೆಗೆ ಒಂದು ಮಿಲಿಗ್ರಾಂ ಪ್ಲುಟೋನಿಯಂ ಮನುಷ್ಯನನ್ನು ಕೊಲ್ಲಬಹುದು. ರಷ್ಯಾದ ಬೇಹುಗಾರನೊಬ್ಬನನ್ನು ಕೆಲವು ವರ್ಷಗಳ ಹಿಂದೆ ಇಂತಹ ವಸ್ತುವನ್ನು ಬಳಸಿ ಕೊಲ್ಲಲಾಗಿತ್ತು. ಆದರೆ ಅಷ್ಟೇ ಪ್ರಮಾಣದ ಹಾನಿಯಾಗಬೇಕಾದರೆ ಬಹುಶಃ ನೂರಾರು ಲೀಟರು ಅಪ್ಪಟ ಟ್ರೀಶಿಯಂ ನೀರು ಕುಡಿಯಬೇಕಾಗುತ್ತದೆ! ಇದು ದೇಹದಲ್ಲಿ ಇರುವಷ್ಟು ಹೊತ್ತೂ ವಿಕಿರಣ ಸೂಸುವುದರಿಂದ ಜೀವಕೋಶಗಳಿಗೆ ಹಾನಿಯಾಗಬಹುದು. ಆದ್ದರಿಂದ ಅದನ್ನು ದೇಹದಿಂದ ಆದಷ್ಟು ಶೀ್ರ ಹೊರಗಟ್ಟಬೇಕು. ಇದನ್ನೂ ಸುಲಭವಾಗಿ ಮಾಡಬಹುದು. ಸಾಧಾರಣ ನೀರನ್ನು ಹೆಚ್ಚೆಚ್ಚು ಕುಡಿದು ಟ್ರೀಶಿಯಂ ಅನ್ನು ಶೀ್ರವಾಗಿ ದೇಹದಿಂದ ಹೊರಕ್ಕೆ ಸಾಗಿಸಬಹುದು. ಅಥವಾ ಮೂತ್ರವರ್ಧಕ ಔಷಧಗಳನ್ನು ಸೇವಿಸಿದರೂ ಆದೀತು. ಇವುಗಳ ಹೊರತಾಗಿ ಇನ್ಯಾವ ಚಿಕಿತ್ಸೆಯೂ ಈ ವಿಶಿಷ್ಟ ನೀರು ಕುಡಿದವರಿಗೆ ಇರದು.

ಅಷ್ಟೇ ಆಗಿದ್ದರೆ ಇಷ್ಟೊಂದು ಗಾಭರಿ ಏಕೆ? ಕೈಗಾದ ಸಿಬ್ಬಂದಿಗಳು ಟ್ರೀಶಿಯಂ ಸೇವಿಸಿದ್ದು ವೈದ್ಯರಿಗೆ ಗಾಭರಿ ಹುಟ್ಟಿಸುವುದಕ್ಕಿಂತಲೂ ವಿಜ್ಞಾನಿಗಳಲ್ಲಿ ಗಾಭರಿಯಾಕಿದ್ದು ಏಕೆ? ಏಕೆಂದರೆ, ಉತ್ಪಾದನೆಯಾದ ಒಂದೊಂದು ಮಿಲಿ ಟ್ರೀಶಿಯಂ ನೀರಿನದ್ದೂ ಲೆಕ್ಕ ಇರುತ್ತದೆ. ಅದರ ಬಳಕೆಯ ಬಗ್ಗೆ, ಬಳಸುವ ವಿಧಾನದ ಬಗ್ಗೆಯೂ ನಿಯಂತ್ರಣವಿರುತ್ತದೆ. ಹೀಗಿದ್ದರೂ, ಯಾರೋ ಅದನ್ನು ಎಲ್ಲರೂ ಕುಡಿಯುವ ನೀರಿನಲ್ಲಿ ಕೂಡಿಸಿದ್ದರು ಎಂದರೆ ನಮ್ಮ ಸುರಕ್ಷತಾ ವ್ಯವಸ್ಥೆ, ಹೊಣೆಗಾರಿಕೆಯ ಬಗ್ಗೆಯೇ ಅನುಮಾನ ಬರುತ್ತದೆ. ಟ್ರೀಶಿಯಂ ಬದಲಿಗೆ ಇನ್ಯಾವುದಾದರೂ ವಿಕಿರಣಶೀಲ ಧಾತುವನ್ನು ಕಿಡಿಗೇಡಿಗಳು ಕೂಡಿಸಿದ್ದರೆ ಏನಾಗಬಹುದಿತ್ತು ಎನ್ನುವದೇ ಗಾಭರಿ ಹುಟ್ಟಿಸಿದೆ. ಏನೇ ಇರಲಿ. ನಮ್ಮ ಸ್ಥಾವರಗಳು ಸೋರಿಕೆಯಿಲ್ಲದ ಭದ್ರಕೋಟೆಗಳು ಎನ್ನುವ ನಂಬಿಕೆ ಈ ಘಟನೆ ದೊಡ್ಡದಾಗಿಯೇ ಕನ್ನ ಹಾಕಿದೆ!