ಕನ್ನಿವಾಡಿ ಹಳ್ಳಿಯ ಪೂಮಣಿ ಸ್ವಯಂ ಸಹಾಯ ತಂಡದಲ್ಲಿರುವ ಮಹಿಳೆಯರು ಹತ್ತು ಜನ.  ಗೀತಾರಾಣಿ (೧೭) ಇದರ ಮುಖ್ಯಸ್ಥೆ.  ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಸಂಸ್ಥೆ ಈ ರೀತಿಯ ನಲವತ್ತಕ್ಕೂ ಹೆಚ್ಚು ಸ್ವಸಹಾಯ ತಂಡಗಳಿಗೆ ಮಾರ್ಗದರ್ಶನ ಮಾಡುತ್ತಿದೆ.  ಈ ಪೂಮಣಿ ತಂಡ ತಯಾರಿಸುತ್ತಿರುವುದು ತಾಯಿತ.  ಅಲ್ಲಲ್ಲ ಒಂದೂಕಾಲು ಸೆಂಟಿಮೀಟರ್‍ ಅಗಲ ಹಾಗೂ ಐದು ಸೆಂಟಿಮೀಟರ್‍ ಉದ್ದದ ಅರಿಸಿನ ಬಣ್ಣದ ಕಾರ್ಡೇ ಟ್ರೈಕೊಗ್ರಾಮ್ಮಾ ಎನ್ನುವ ಪಿಡುಗು ನಿವಾರಕ, ಅಂದರೆ ಬಯೋ ಪೆಸ್ಟಿಸೈಡ್.

ನೀವೂ ಈ ಪಿಡುಗು ನಿವಾರಕವನ್ನು ತಯಾರಿಸಬಹುದು.  ಒಂದು ಅಗಲ ಬಾಯಿಯ ಪ್ಲಾಸ್ಟಿಕ್ ಪಾತ್ರೆಗೆ ಎರಡು ಕೆಜಿಯಷ್ಟು ಅರ್ಧ ಬೇಯಿಸಿದ ಸಜ್ಜೆಯನ್ನು ಹಾಕಿ.  ಜತೆಗೆ ೧೦೦ ಗ್ರಾಂ ಶೇಂಗಾ ಪುಡಿ ಸೇರಿಸಿ.  ಈ ಮಿಶ್ರಣಕ್ಕೆ ೫ ಗ್ರಾಂ ಗಂಧಕ, ೫ ಗ್ರಾಂ ಯೀಸ್ಟ್ ಸೇರಿಸಿ ಸರಿಯಾಗಿ ಕಲೆಸಿ.  ಈ ಮಿಶ್ರಣಕ್ಕೆ ಸ್ವಾಮಿನಾಥನ್ ಸಂಸ್ಥೆ ನೀಡುವ ಕಾರ್‌ಸೇರ ಮೊಟ್ಟೆಯನ್ನು ೫ ಹನಿಯಷ್ಟು (೦.೩ಸಿಸಿ) ಸೇರಿಸಿ.  (ಈ ಮೊಟ್ಟೆಗಳನ್ನು ತಮಿಳುನಾಡು ಸರ್ಕಾರವೂ ಕೊಡುತ್ತದೆ).  ಇಲ್ಲಿಗೆ ಒಂದು ಹಂತ ಮುಗಿಯಿತು.

ಹೀಗೆ ತಯಾರಾದ ಮಿಶ್ರಣವನ್ನು ಹೆಚ್ಚು ಬೆಳಕು ಬಾರದ ಕೋಣೆಯಲ್ಲಿ ಬಲೆಯೊಳಗೆ ೪೫ ದಿನ ಇಡಬೇಕು.  ಕೀಟಗಳಾಗಿ ಬದಲಾಗುತ್ತವೆ.  ಮುಂದಿನದೆಲ್ಲಾ ನಾಜೂಕಿನ ಕೆಲಸ.

ಈ ಕೀಟಗಳಿಗೆ ಬಲೆಯ ಒಳಗೇ ಆಹಾರವಾಗಿ ಜೇನುತುಪ್ಪವನ್ನು ನೀಡಬೇಕು.  ಈ ಕೀಟಗಳು ಹೀರತೊಡಗಿದ ಕೀಟ(ಹಾತೆ)ಗಳು.  ನಾಲ್ಕು ದಿನಗಳ ಕಾಲ ಲಕ್ಷೋಪಲಕ್ಷ ಮೊಟ್ಟೆ ಇಡುತ್ತವೆ.  ಇದು ಎರಡನೇ ಹಂತ.  ಮುಂದಿನ ಹಂತಕ್ಕೆ ಒಂದು ಚಿಕ್ಕ ಪ್ರಯೋಗಶಾಲೆ ಬೇಕು.

ಮೊಟ್ಟೆಗಳನ್ನು ಅರಿಸಿನ ಬಣ್ಣದ ಡ್ರಾಯಿಂಗ್‌ಶೀಟ್‌ನ ಮೇಲೆ ಸಮಪ್ರಮಾಣದಲ್ಲಿ ಸಂಗ್ರಹಿಸಬೇಕು.  ಅವುಗಳ ಮೇಲೆ ೨೦ ನಿಮಿಷ ಅತಿ ನೇರಳೆಬಣ್ಣದ ಕಿರಣ (ಯು.ವಿ.) ಹಾಯಿಸಬೇಕು.

ಯು.ವಿ. ಉಪಚಾರ ಪಡೆದ ಮೊಟ್ಟೆಗಳನ್ನು ಡ್ರಾಯಿಂಗ್ ಶೀಟ್‌ಗೆ ಸರಿಯಾಗಿ ತಿಕ್ಕಬೇಕು.  ಹೀಗೆ ತಿಕ್ಕಿದ ಕಾರ್ಡ್ ಕಪ್ಪಾಗಿರುತ್ತದೆ.  ಮೊಟ್ಟೆಗಳನ್ನು ಪ್ರತ್ಯೇಕ ಪಾತ್ರೆಯಲ್ಲಿಟ್ಟು ಯುವಿ ಹಾಯಿಸಿ ಅನಂತರ ಬೇಕಾದರೂ ಡ್ರಾಯಿಂಗ್‌ಶೀಟ್‌ಗೆ ತಿಕ್ಕಬಹುದು.  (ಅರಿಸಿನಬಣ್ಣದ್ದೇ ಡ್ರಾಯಿಂಗ್‌ಶೀಟ್ ಆಗಬೇಕೆಂದಿಲ್ಲ.)  ಇದು ಮೂರನೇ ಹಂತ.

ಈ ಕಾರ್ಡ್‌ನ್ನು (ಡ್ರಾಯಿಂಗ್‌ಶೀಟ್) ಏಳು ದಿನಗಳ ಕಾಲ ಕತ್ತಲಲ್ಲಿ ಇಡಬೇಕು.  ಏಳನೇ ದಿನಕ್ಕೆ ಸರಿಯಾಗಿ ಕಪ್ಪಾದ ಕಾರ್ಡುಗಳು ಉಪಯೋಗಕ್ಕೆ ಸಿದ್ಧವಾಗುತ್ತವೆ.  ಈ ರೀತಿ ಸಿದ್ಧವಾದ ಕಾರ್ಡನ್ನು ಒಂದೂಕಾಲು ಸೆಂಟಿಮೀಟರ್‍ ಉದ್ದ ಮತ್ತು ಐದು ಸೆಂಟಿಮೀಟರ್‍ ಅಗಲದ ಚಿಕ್ಕ ಚಿಕ್ಕ ತಾಯಿತಗಳಾಗಿ ತಯಾರಿಸಿ ಬುಡದಲ್ಲೊಂದು ಕಂಡಿ ಹೊಡೆದರಾಯಿತು.  ಕಬ್ಬಿನ ಬೆಳೆಗೋ ಜೋಳದ ಬೆಳೆಗೋ ಸೂರ್ಯಕಾಂತಿ ಗಿಡಕ್ಕೋ… ಹೀಗೆ ಯಾವುದೇ ಜೈವಿಕ ಪೀಡೆಕಾರಕ ಕೀಟನಿಯಂತ್ರಣಕ್ಕೆ ಈ ತಾಯಿತಗಳು ತಯಾರ್.  ಆದರೆ ಯಾವಾಗೆಂದರಾವಾಗ ಇದು ಸಿಗಲಾರದು ಹಾಗೂ ತಯಾರಾಗಿದ್ದನ್ನು ತಕ್ಷಣ ಬಳಸಬೇಕು.  ಪ್ರಯೋಗಶಾಲೆಯಿಂದ ನೀವು ಒಯ್ದ ೮ ತಾಸಿನ ಒಳಗೆ ಈ ತಾಯಿತಗಳನ್ನು ಕಬ್ಬಿಗೋ, ಸೂರ್ಯಕಾಂತಿಗೋ ಕಟ್ಟಿಬಿಡಬೇಕು.  ನೆಲದಿಂದ ಸುಮಾರು ಒಂದು ಮೊಳ (೪೦=೪೦ ಸೆಂಟಿಮೀಟರ್‍) ಎತ್ತರಕ್ಕೆ ಕಟ್ಟಿದರಾಯಿತು.  ತಾಯಿತದ ಕಪ್ಪುಚುಕ್ಕೆಗಳೆಲ್ಲಾ ಜೀವ ತಳೆದು ಒಂದೊಂದೇ ಕೆಳಗಿಳಿಯತೊಡಗುತ್ತವೆ.  ಒಂದಿಷ್ಟು ಮೇಲೇರತೊಡಗುತ್ತವೆ.  ಇವೆಲ್ಲಾ ಸೂಕ್ಷ್ಮಜೀವಿಗಳೆನ್ನಬಹುದು.  ತಾಯಿತ ಕಟ್ಟಿದ ಜಾಗದ ಸುತ್ತಲಿನ ಪೀಡೆಕಾರಕ ಹುಳಗಳನ್ನು ಈ ಸೂಕ್ಷ್ಮಜೀವಿಗಳು ತಿಂದು ಬೆಳೆ ರಕ್ಷಣೆ ಮಾಡುತ್ತವೆ.  ಆಹಾರ ಸಿಗದಿದ್ದಾಗ ಸಾಯುತ್ತವೆ.

ಗೀತಾರಾಣಿಯ ಪ್ರಕಾರ ಒಂದು ಎಕರೆಯಷ್ಟು ಬೆಳೆಗೆ ೨೪ ತಾಯಿತಗಳು ಸಾಕು.  ೬ ತಾಯಿತಗಳಿಗೆ ೧೫ ರೂಪಾಯಿ ಆಗುತ್ತದೆ.  (ಸೆಂಟಿಮೀಟರ್‍. ಲೆಕ್ಕದಲ್ಲಿ ಬೆಲೆ ನಿಗದಿಯಾಗುತ್ತದೆ) ಅಂದರೆ ಒಂದು ಎಕರೆಗೆ ೯೦ ರೂಪಾಯಿಗಳು ಬೇಕಾಗುತ್ತದೆ.  ಒಂದೊಂದು ತಾಯಿತದಿಂದಲೂ ಕೋಟಿ ಕೋಟಿ ಸಂಖ್ಯೆಯ ಸೂಕ್ಷ್ಮಜೀವಿಗಳು ಉತ್ಪನ್ನವಾಗಿ ಭೂಮಿಯನ್ನು ಸೇರುತ್ತವೆ.  ಮಣ್ಣನ್ನು ಜೈವಿಕಗೊಳಿಸಿ ರೋಗಬಾಧೆಯನ್ನು ತಡೆಯುತ್ತವೆ.

ಪೂಮಣಿ ಸ್ವಸಹಾಯ ತಂಡ ಈ ಉದ್ಯಮದಿಂದ ಒಂದು ವರ್ಷಕ್ಕೆ ೫೦,೦೦೦ ರೂಪಾಯಿಗಳನ್ನು ಗಳಿಸಿದೆ.  ಸ್ವಾವಲಂಬನೆಯ ದಾರಿಯನ್ನು ಅನುಮಾನಿಸುತ್ತಿರುವ ಮಹಿಳೆಯರಿಗೆ ಈ ತಂಡದ ಸಾಧನೆ ಮಾರ್ಗದರ್ಶಿಯಾದೀತೇ?  ಗೀತಾರಾಣಿಯರು ನಮ್ಮೂರಿನಲ್ಲೂ ತಯಾರಾದಾರೇ?  ಎಂಡೋಸಲ್ಫಾನ್‌ನಂತಹ ಕೀಟನಾಶಕ ಮರೆಯಾದೀತೆ? ಕಾದು ನೋಡೋಣ.

ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ವಿಳಾಸಕ್ಕೆ ಸಂಪರ್ಕಿಸಿ :
M/s Swaminathan Research Foundation, Opp. Highschool,ChampattiVillage, Kannivadi Po. Dindigul Dt. TN624705, Website : www. mssrf.org, e-mail:Volkart1@eth.net