ಠಕ್ಕರ್ ಬಾಪಾ ಅವರ ಪೂರ್ಣ ಹೆಸರು ಅಮೃತ ಲಾಲ್ ವಿಠ್ಠಲದಾಸ್ ’ಠಕ್ಕರ್’ ಬಾಪಾ. ಠಕ್ಕರ್ ಎಂಬುದು ಅವರ ಮನೆತನದ ಹೆಸರು. ’ಬಾಪಾ’ ಎಂಬುದು ಜನ ಅವರಿಗೆ ಪ್ರೇಮ ಆದರಗಳಿಂದ ಕೊಟ್ಟ ಹೆಸರು. ಅವರನ್ನು ’ದೀನಬಂದು’ ಎಂದು ಕರೆಯುವುದೂ ವಾಡಿಕೆಯಲ್ಲಿತ್ತು. ಅವರು ದೀನರಿಗೆ ನಿಜವಾಗಿ ತಂದೆಯಂತೆಯೂ (ಬಾಪಾ) ಮತ್ತು ಬಂಧುವಿನಂತೆಯೂ ಇದ್ದರು.

ಮನೆತನ

ಅಮೃತಲಾಲ್ ವಿಠ್ಠಲದಾಸ್ ಗುಜರಾತ್ ರಾಜ್ಯಕ್ಕೆ ಸೇರಿದ ಭಾವನಗರದಲ್ಲಿ ೧೮೬೯ರ ನವೆಂಬರ್ ೨೮ ರಂದು ಜನಿಸಿದರು. ಅವರ ತಂದೆಯ ಹೆಸರು ವಿಠ್ಠಲದಾಸ್ ಠಕ್ಕರ್; ತಾಯಿಯ ಹೆಸರು ಮೂಲೀಬಾಯಿ. ಈ ದಂಪತಿಗಳಿಗೆ ಆರು ಮಂದಿ ಗಂಡುಮಕ್ಕಳು ಮತ್ತು ಒಬ್ಬಳೇ ಹೆಣ್ಣುಮಗಳು ಹುಟ್ಟಿದರು. ಇವರಲ್ಲಿ ಎರಡನೆಯ ಮಗನೇ ಅಮೃತಲಾಲ್.

ವಿಠ್ಠಲದಾಸ್ ಅವರದು ಒಂದು ಸಾಧಾರಣ ಕುಟುಂಬ. ಅವರು ಒಬ್ಬ ಸೇಠನ ಅಂಗಡಿಯಲ್ಲಿ ತಿಂಗಳಿಗೆ ಇಪ್ಪತ್ತೈದು ರೂಪಾಯಿ ಸಂಬಳಕ್ಕೆ  ಕೆಲಸ ಮಾಡುತ್ತಿದ್ದರು. ಆದರೆ ಅವರು ಬಹಳ ಗೌರವ ಪಡೆದ ವ್ಯಕ್ತಿಯಾಗಿದ್ದರು.ಅವರು ವೈಷ್ಣವ ಪಂಥದವರು; ಎಲ್ಲ ಕೆಲಸಗಳನ್ನೂ ಸ್ವತಃ ಅಚ್ಚುಕಟ್ಟಿನಿಂದ ಮಾಡುತ್ತಿದ್ದರು. ಪರರಿಗೆ ಉಪಕಾರ ಮಾಡುವುದು ಅವರ ಹುಟ್ಟುಗುಣವಾಗಿತ್ತು. ಅವರು ತಮ್ಮ ವಯಸ್ಸಿನ ಕೊನೆಗಾಲದ ಬಹು ಭಾಗವನ್ನು ಬಡವರಾದ ಲೋಹಾನ ಜನರ ವಿದ್ಯಾಭ್ಯಾಸ ಮತ್ತು ಹಣಕಾಸಿನ ಸ್ಥಿತಿ ಗತಿಗಳನ್ನು ಉತ್ತಮ ಪಡಿಸಲು ವಿನಿಯೋಗಿಸುತ್ತಿದ್ದರು; ಅವರಿಗೆ ಒಂದು ಉಚಿತ ವಿದ್ಯಾರ್ಥಿ ನಿಲಯವನ್ನು ಏರ್ಪಡಿಸಿ ಈ ಕೆಲಸ ನಡೆಸುತ್ತಿದ್ದರು.

ವಿದ್ಯಾಭ್ಯಾಸ

ಕುಟುಂಬದ ಸ್ಥಿತಿ ಸಾಧಾರಣವಾಗಿದ್ದರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸಬೇಕೆಂಬ ಪ್ರಬಲ ಇಚ್ಛೆ ವಿಠ್ಠಲದಾಸ್ ಅವರಿಗೆ ಇದ್ದಿತು. ಅಮೃತಲಾಲ್ ಠಕ್ಕರ್ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿ, ಪ್ರೌಢಶಾಲೆಯನ್ನು ಸೇರಿ ೧೮೮೬ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ತೇರ್ಗಡೆ ಹೊಂದಿದರು. ಮಗನಿಗೆ ಕಾಲೇಜ್ ವ್ಯಾಸಂಗ ಮಾಡಿಸುವುದು ವಿಠ್ಠಲದಾಸರಿಗೆ ಸುಲಭವಾಗಿರಲಿಲ್ಲ. ತಮ್ಮ ಪತ್ನಿಯ ಒಡವೆಯಗಳನ್ನಾದರೂ ಒತ್ತೆಯಿಟ್ಟು  ಸಾಲ ತಂದು, ಮಗನ ವಿದ್ಯಾಭ್ಯಾಸ ಮುದುಂವರಿಸಬೇಕೆಂಬುದು ತಂದೆಯ ಆಕಾಂಕ್ಷೆ.

ಅಮೃತಲಾಲ್ ಠಕ್ಕರ್ ಇಂಜಿನಿಯರಿಂಗ್ ಕಾಲೇಜ್ ಸೇರಿ, ಬಹಳ ಕಷ್ಟದಿಂದಲೇ ವ್ಯಾಸಂಗವನ್ನು ಮುಂದುವರಿಸಿದರು. ಮೂರು ವರ್ಷಗಳ ತರುವಾಯ, ೧೮೯೦ರಲ್ಲಿ ಎಲ್.ಸಿ.ಇ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇಂಜಿನಿಯರ್ ಪದವಿ ಪಡೆದರು. ವಿದ್ಯಾರ್ಥಿ ದೆಸೆಯಲ್ಲಿ ಇದ್ದಾಗಲೇ ಅವರಿಗೆ ಅಂದು ಮಹಾರಾಷ್ಟ್ರದಲ್ಲಿ ಪ್ರಸಿದ್ಧ ವ್ಯಕ್ತಿಗಳೆನಿಸಿದ್ದ ರಾನಡೆ ಮತ್ತು ಗೋಪಾಲಕೃಷ್ಭ ಗೋಖಲೆ ಇವರುಗಳ ಪರಿಚಯವಾಯಿತು. ಈ ಇಬ್ಬರು ಮಹನೀಯರ ಲೋಕಸೇವೆಯ ಆದರ್ಶ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿತು.

ದಾಂಪತ್ಯ ಜೀವನ

ಆಗಿನ ಕಾಲದಲ್ಲಿ ರೂಢಿಯಿದ್ದಂತೆ ಸುಮಾರು ೧೨ನೆಯ ವಯಸ್ಸಿನಲ್ಲಿಯೇ ಅಮೃತಲಾಲರಿಗೆ ವಿವಾಹವಾಯಿತು. ಪತ್ನಿಯು ಏನೂ ಅರಿಯದ ಬಾಲಕಿಯೇ ಆಗಿದ್ದಳು. ಆಕೆಯ ಹೆಸರು ಜೀವಕೋರೀಬಾಯಿ. ಆದರೆ ವಿದ್ಯಾಭ್ಯಾಸ ಮುಗಿಯುವವರೆಗೂ ದಾಂಪತ್ಯ ಜೀವನ ಆರಂಭವಾಗಲಿಲ್ಲ. ಅದು ಆರಂಭವಾದಾಗ ಅಮೃತಲಾಲ್ ಗೆ ಇಪ್ಪತ್ತು ವರ್ಷ ವಯಸ್ಸಾಗಿತ್ತು. ೧೮೯೨ರಲ್ಲಿ ಇಪ್ಪತ್ತ ಮೂರನೆಯ ವಯಸ್ಸಿನಲ್ಲಿ ಒಂದು ಗಂಡು ಶಿಶು ಜನಿಸಿತು. ಅದು ಐದಾರು ವರ್ಷ ಬೆಳೆದು ಕಾಲವಾಯಿತು. ೧೯೦೭ರಲ್ಲಿ ಪತ್ನಿಯೂ ಕ್ಷಯ ರೋಗಕ್ಕೆ ತುತ್ತಾಗಿ ಮರಣ ಹೊಂದಿದಳು. ತಂದೆ ವಿಠ್ಠಲದಾಸ್ ಬಹಳ ಬಲವಂತದಿಂದ ಇನ್ನೊಂದು ವಿವಾಹ ಮಾಡಿಸಿದರು. ಅದು ೧೯೦೮ರಲ್ಲಿ ಆಯಿತು. ಆಗ ಅಮೃತಲಾಲರಿಗೆ ಇಪ್ಪತ್ತಾರು ವರ್ಷ ವಯಸ್ಸಾಗಿತ್ತು. ದೀವಲೀ ಬಾಯಿ ಎಂಬ ಹೆಸರಿನ ಆ ಎರಡನೆಯ ಪತ್ನಿಯೂ ವಿವಾಹವಾದ ಎರಡು ವರ್ಷಗಳಲ್ಲಿಯೇ ಕಾಲವಾಗಿಬಿಟ್ಟಳು. ಆಕೆಗೆ ಮಕ್ಕಳೇ ಆಗಲಿಲ್ಲ.

ಇದನ್ನು ಕುರಿತು ಬಾಪಾ ಒಂದು ಕಡೆ ಹೀಗೆ ಬರೆದಿದ್ದಾರೆ : ಪತ್ನಿ ಮತ್ತು ಮಕ್ಕಳು ಇಲ್ಲವಾದುದರಿಂದ ನನಗೆ ವ್ಯಸನವಾಗಲಿಲ್ಲ. ಇದರಿಂದ ದೇಶಸೇವೆಯಲ್ಲಿ ನನ್ನ ಮನಸ್ಸು ಪ್ರವೇಶಿಸಲು ಅವಕಾಶವಾಯಿತು. ಇದರಲ್ಲಿ ನಾನು ಈಶ್ವರೇಚ್ಛೆಯನ್ನು ಕಂಡುಕೊಂಡೆ.

ಉದ್ಯೋಗ

ಎಲ್.ಸಿ.ಇ. ಪದವಿ ಪಡೆದು ಇಂಜಿನಿಯರ್ ಉದ್ಯೋಗಕ್ಕೆ ಅರ್ಹರಾದ ಅಮೃತಲಾಲ್ ವಿಠ್ಠಲದಾಸ್ ಠಕ್ಕರ್, ಸಂಸಾರ ನಿರ್ವಹಣೆಗಾಗಿ ಸಹಜವಾಗಿಯೇ ಉದ್ಯೋಗವನ್ನು ಹುಡುಕಬೇಕಾಯಿತು. ಸೊಲ್ಲಾಪುರ ಜಿಲ್ಲೆಯಲ್ಲಿ ಆಗ ಬಾರ್ಸಾ ರೈಲುದಾರಿಯ ವ್ಯವಸ್ಥೆ ನಡೆಯುತ್ತಿತ್ತು. ತಿಂಗಳಿಗೆ ೭೫ ರೂಪಾಯಿ ವೇತನದ ಮೇಲೆ ’ಓವರ್ ಸಿಯರ್ ’ ನ ಕೆಲಸ ದೊರಕಿತು. ಆ ಕೆಲಸದಲ್ಲಿ ಅವರು ಆರು ತಿಂಗಳು ಸೇವೆ ಸಲ್ಲಿಸಿದ ಮೇಲೆ, ಭಾವನಗರ – ಗಿಂಡಾಲ್ – ಜುನಗಢ-ಪೋರ್ ಬಂದರ್’ (ಬಿ.ಜಿ.ಜೆ.ಪಿ) ರೈಲ್ವೆ ಕಂಪನಿಯಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಕೆಲಸ ಸಿಕ್ಕಿತು. ತಿಂಗಳಿಗೆ ೧೭೫ ರೂಪಾಯಿ ವೇತನ ದೊರಕುವಂತಾಯಿತು.

ಇದೋ ಹಣ!

ಅವರು ಈ ಕೆಲಸದಲ್ಲಿದ್ದಾಗ ನಡೆದ ಒಂದು ಪ್ರಸಂಗ ಗಮನಾರ್ಹವಾದುದು. ಅದು ಬಾಪಾ ಅವರ ಪ್ರಾಮಾಣಿಕ ವರ್ತನೆಗೆ ಒಂದು ದೃಷ್ಟಾಂತ.

ಇಂಜಿನಿಯರ್ ಠಕ್ಕರ್ ಕಾರ್ಯಾಲಯದಲ್ಲಿದ್ದರು. ಕೆಲವರು ರೈತರು ಅವರ ಬಳಿಗೆ ಬಂದರು, ಹೀಗೆ ಬಿನ್ನವಿಸಿದರು : ’ಸ್ವಾಮಿ, ನಮ್ಮ ಜಮೀನುಗಳಲ್ಲಿ ರೈಲು ಮಾರ್ಗ ಹಾಕುವುದನ್ನು ದಯಮಾಡಿ ತಪ್ಪಿಸಿ’.

’ಅದು ಹೇಗೆ ಸಾಧ್ಯ? ಎಲ್ಲ ವಿಚಾರ ಮಾಡಿ, ಯಾರಿಗೂ ಹೆಚ್ಚಿನ ತೊಂದರೆಯಾಗದಂತೆ ಯೋಜನೆಯನ್ನು ತಯಾರಿಸಲಾಗಿದೆ’ ಎಂದರು ಇಂಜಿನಿಯರ್‌.

’ಅದು ಸರಿ, ನಮ್ಮ ಜಮೀನುಗಳಲ್ಲಿ ಮಾತ್ರ ತಪ್ಪಿಸಿ. ಇದೋ! ನಿಮಗೆಂದು ಕೊಡಲು ಹಣ ಸಿ‌ದ್ಧವಾಗಿದೆ. ಸ್ವೀಕರಿಸಿ.’

ರೈತರು ಹಣದ ಥೈಲಿಯನ್ನು ಮೇಜಿನ ಮೇಲೆ ಇಟ್ಟರು. ಅದು ಲಂಚ, ರುಷುವತ್ತು! ಪ್ರಾಮಾಣಿಕ ಸ್ವಭಾವದ ಇಂಜಿನಿಯರ್ ಗೆ ಇದೊಂದು ನೀತಿಯ ಸವಾಲಾಯಿತು. ಅವರು ಹಣವನ್ನು ಒಲ್ಲದೆ, ಈ ಕೆಲಸವನ್ನು ಮಾಡಲಾರೆ. ನೀವು ಬಂದ ದಾರಿ ಹಿಡಿಯಿರಿ ’ ಎಂದು ರೈತರನ್ನು ಕಳುಹಿಸಿ ಬಿಟ್ಟರು.

ಕೆಲಸಗಳ ಬದಲಾವಣೆ

ಕಂಪೆನಿಯ ಮೇಲಧಿಕಾರಿ ಲಂಚ-ರುಷುವತ್ತಿಗೆ ಹೆಸರು ಪಡೆದಿದ್ದನು. ಅಮೃತಲಾಲ್ ಠಕ್ಕರ್ ಅವರ ಪ್ರಾಮಾಣಿಕತೆ ವರ್ತನೆ ಅವನಿಗೆ ಹಿಡಿಸಲಿಲ್ಲ; ಕೆಲಸದಲ್ಲಿ ಕಿರುಕುಳ ಕೊಡಲಾರಂಭಿಸಿದ. ಇದರಿಂದ ಬೇಸರ ಹೊಂದಿದ ಠಕ್ಕರ್ ತಮ್ಮ ಕೆಲಸಕ್ಕೇ ರಾಜೀನಾಮೆ ಇತ್ತರು. ಆದರೆ ವಧ್ವಾನ್ ರಾಜ್ಯದಲ್ಲಿ ಮುಖ್ಯ ಇಂಜಿನಿಯರ್ ಕೆಲಸ ದೊರಕಿತು. ಪ್ರಾಮಾಣಿಕ ಕೆಲಸಗಾರನಿಗೆ ದೊರೆತ ಗೌರವವಿದು.  ವಧ್ವಾನ್ ನಲ್ಲಿಯೂ ಲೋಭ ಲಾಭದಾಸೆಗಳು ಸುತ್ತುವರಿದಿದ್ದವು. ಅದು ಅವರಿಗೆ ಸಹನೆಯಾಗಲಿಲ್ಲ. ಸುಮಾರು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ, ಅಲ್ಲಿಂದಲೂ ಕಾಲ್ತಗೆದರು. ಇದಾದ ಮೇಲೆ ಪೋರ್ ಬಂದರ್ ರಾಜ್ಯದಿಂದ ಮುಖ್ಯ ಇಂಜಿನಿಯರ್ ಕೆಲಸಕ್ಕೆ ಆಹ್ವಾನ ಬಂದಿತು. ಅಲ್ಲಿ ಅವರು ೧೮೯೯ರವರೆಗೂ ಸೇವೆ ಸಲ್ಲಿಸಿದರು.

’ನೀವು ಬಂದ ದಾರಿ ಹಿಡಿಯಿರಿ!”

ಪೋರ್ ಬಂದರ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಠಕ್ಕರ್ ಅವರಂತೆಯೇ ಸೇವಾ ಮನೋಭಾವದಿಂದ ಕೂಡಿದ್ದ ಡಾ.ಎಚ್.ಎಸ್.ದೇವ್ ವೈದ್ಯರ ಪರಿಚಯ ಆಯಿತು. ಮುಂದೆ ಕೆಲವು ವರ್ಷಗಳ ತರುವಾಯ ಇವರಿಬ್ಬರೂ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ (ಭಾರತ ಸೇವಕರ ಸಂಘ) ಯನ್ನು ಸೇರಿದುದು ಒಂದು ಗಮನಾರ್ಹವಾದ ಸಂಗತಿ.

ಯುಗಾಂಡಾಕ್ಕೆ

ಪೋರ್ ಬಂದರ್ ನಲ್ಲಿ ಇದ್ದಾಗ, ಪೂರ್ವ ಆಫ್ರಿಕದ ಯುಗಾಂಡಾದಲ್ಲಿ ಒಂದು ಹೊಸ ರೈಲುದಾರಿ ನಿರ್ಮಾಣದ ಬಗೆಗೆ ಪ್ರಕಟನೆಯನ್ನು ಠಕ್ಕರ್ ಓದಿದರು. ಅಲ್ಲಿ ಇಂಜಿನಿಯರ್ ಗಳ ಅಗತ್ಯವಿತ್ತು., ಹೆಚ್ಚಿನ ವೇತನವೂ ದೊರಕುತ್ತಿತ್ತು. ಇದರಿಂದ ಕುಟುಂಬಕ್ಕೆ ಹೆಚ್ಚಿನ ಸಹಾಯ ಮಾಡಲು ಸಾಧ್ಯವಾಗುತ್ತದೆಂದು ಯೋಚಿಸದ ಅಮೃತಲಾಲ್ ಅರ್ಜಿ ಸಲ್ಲಿಸಿದರು. ಸ್ವಲ್ಪ ಕಾಲದಲ್ಲಿಯೇ ನೇಮಕದ ಆಜ್ಞೆಯೂ ಬಂದಿತು. ತಂದೆಯ ಆಶೀರ್ವಾದ ಪಡೆದು ಅವರು ಯುಗಾಂಡಾಕ್ಕೆ ಪ್ರಯಾಣ ಬೆಳೆಸಿದರು.

ಯುಗಾಂಡಾದಲ್ಲಿ ಕೆಲಸ ಮಾಡುವಾಗಲೂ ಹಲವಾರು ನೀತಿಯ ಸವಾಲನ್ನು ಅವರು ಎದುರಿಸಬೇಕಾಯಿತು. ಅಲ್ಲಿಯೂ ಅಧಿಕಾರಿಗಳು ಮತ್ತು ನೌಕರರು ಭ್ರಷ್ಟಾಚಾರರಿಂದ ಕೂಡಿದ್ದರು. ಆದರೆ ಠಕ್ಕರ್ ಪ್ರಾಮಾಣಿಕವಾಗಿ ಕಷ್ಟಪಟ್ಟು ಮೂರು ವರ್ಷಗಳ ಸೇವೆ ಸಲ್ಲಿಸಿ, ಭಾರತಕ್ಕೆ ಹಿಂದಿರುಗಿದರು. ಅವರು ದಿನನಿತ್ಯದ ಅನುಭವ ಕುರಿತು ತಪ್ಪದೆ ಬರೆದಿಡುತ್ತಿದ್ದರು. ಭಾರತದ ವಿದ್ಯಮಾನಗಳ ಬಗೆಗೆ ಅರಿತುಕೊಳ್ಳುತ್ತಿದ್ದರು. ಹಿಂದೂ ಧರ್ಮ ಗ್ರಂಥಗಳನ್ನೂ ಅಂದಿನ ಗುಜರಾತೀ ಸಾಹಿತ್ಯವನ್ನೂ ಶ್ರದ್ಧೆಯಿಂದ ವ್ಯಾಸಂಗ ಮಾಡುತ್ತಿದ್ದರು.

ತಂದೆಯ ಸೇವಾ ಆದರ್ಶ

ಠಕ್ಕರ್ ಬಾಪಾ ಯುಗಾಂಡಾದಲ್ಲಿ ಇದ್ದಾಗ, ೧೮೯೯-೧೯೦೦ರಲ್ಲಿ, ಭಾರತದಲ್ಲಿ ದೊಡ್ಡ ಬರಗಾಲ ಬಂದಿತು. ಅವರ ತಂದೆ ವಿಠ್ಠಲದಾಸ್ ಠಕ್ಕರ್ ಅನಾಥ ಬಡ ಜನರಿಗೆ ಉಚಿತ ಅನ್ನಶಾಲೆಯನ್ನು ಏರ್ಪಡಿಸಿದರು, ಧನ-ಧಾನ್ಯ ಶೇಖರಿಸಿ, ತಾವೇ ಎಲ್ಲವನ್ನೂ ವ್ಯವಸ್ಥೆ ಮಾಡಿ ನಡೆಸಿದರು. ಎಲ್ಲರಿಗೂ ರೊಟ್ಟಿಯನ್ನು ಹಂಚಿದ ಮೇಲೆ ಮನೆಗೆ ಬಂದು ತಮ್ಮ ಊಟವನ್ನು ಮಾಡುತ್ತಿದ್ದರು. ಇಂಥ ಬರಗಾಲದಲ್ಲಿ ತಾವು ಸಲ್ಲಿಸುತ್ತಿದ್ದ ಸೇವಾಕಾರ್ಯದ ವಿವರಗಳನ್ನು ತಮ್ಮ ಮಗನಿಗೆ ಬರೆದು ತಿಳಿಸುತ್ತಿದ್ದರು. ತಂದೆ ಇಂಥ ಸೇವೆ ಸಲ್ಲಿಸುತ್ತಿದ್ದುದು ಮಗನಿಗೆ ತುಂಬ ಹೆಮ್ಮೆಯ ವಿಷಯವಾಗಿತ್ತು. ತಾನೂ ಇದೇ ಪರಿಯ ಸೇವಾಕಾರ್ಯ ಸಲ್ಲಿಸಬೇಕೆಂದು ಕನಸು ಕಾಣಲು ಸ್ಫೂರ್ತಿ ನೀಡುತ್ತಿತ್ತು. ಹೀಗೆ ತಂದೆಯೇ ಮಗನಿಗೆ ಆದರ್ಶ ನೀಡಿದರು.

ಸ್ವದೇಶಕ್ಕೆ ಮರಳಿ ಬಂದ ಬಾಪಾ ಅವರಿಗೆ ಸ್ವಲ್ಪ ಕಾಲ ಯಾವ ಉದ್ಯೋಗವೂ ಸಿಗಲಿಲ್ಲ. ತರುವಾಯ ೧೯೦೩ರಲ್ಲಿ ಸಾಂಗ್ಲೀ ರಾಜ್ಯದಲ್ಲಿ ಕೆಲಸ ಸಿಕ್ಕಿತು. ಅಲ್ಲಿಯೇ  ಅವರ ಗೆಳೆಯ ಡಾ. ದೇವ್ ಮುಖ್ಯ ವೈದ್ಯಾಧಿಕಾರಿಯಾಗಿದ್ದರು. ಸ್ನೇಹಿತರಿಬ್ಬರೂ ಮತ್ತೊಮ್ಮೆ ಒಂದೇ ರಾಜ್ಯದಲ್ಲಿ ಕೂಡಿ ಕೆಲಸ ಮಾಡುವ ಅವಕಾಶ ದೊರಕಿತು. ಆದರೆ, ರಾಜ್ಯದ ಆಡಳಿತದ ಒಬ್ಬ ಇಂಗ್ಲಿಷ್ ಅಧಿಕಾರಿಯ ವಶದಲ್ಲಿತ್ತು. ಆತ್ಮಗೌರವವನ್ನು ಹಿರಿದಾಗಿ ಎಣಿಸಿದ್ದ ಬಾಪಾ, ಆ ಆಧಿಕಾರಿಯ ದೌರ್ಜನ್ಯಕ್ಕೆ ಮಣಿಯದೆ ತಮ್ಮ ನೌಕರಿಯನ್ನು ತ್ಯಜಿಸಿದರು. ಇದರ ತರುವಾಯ ಮುಂಬಯಿ ಪುರಸಭೆಯ ಆಶ್ರಯದಲ್ಲಿ ಕೆಲಸಕ್ಕೆ ಸೇರಿದರು.

ಭಂಗಿಗಳ ಬವಣೆ

ಬಾಪಾ, ಕುರ‍್ಲಾ ಪ್ರದೇಶದಲ್ಲಿ ಚೆಂಬೂರು ರೈಲು ಮಾರ್ಗವನ್ನು ಮೇಲ್ವಿಚಾರಕವಾಗಿ ನೋಡಿಕೊಳ್ಳುತ್ತಿದ್ದರು. ಪುರಸಭೆ ಝಾಡಮಾಲಿಗಳು ಆ ಮಾರ್ಗದಲ್ಲಿ ಮುಂಬಯಿ ನಗರದ ಎಲ್ಲ ಕಶ್ಮಲವನ್ನೂ ರೈಲು ವ್ಯಾಗನ್ ಗಳಲ್ಲಿ ಸಾಗಿಸಿ, ಅದನ್ನು ಗುಂಡಿಗಳಲ್ಲಿ ತುಂಬಿ ಮುಚ್ಚಬೇಕಾಗಿದ್ದಿತು. ಈ ಸಂದರ್ಭದಲ್ಲಿ ಬಾಪಾ ಹೊಲಸು ತೆಗೆಯುವ ಝಾಡಮಾಲಿಗಳ ಪ್ರತ್ಯಕ್ಷ ಸಂಪರ್ಕ ಹೊಂದಿದರು; ಅವರು ಭಂಗಿಗಳ ಮತ್ತು ಮಹಾರ್ ಜನರ ಸುಖಮಯ ಜೀವನದ ಪರಿಚಯವನ್ನು ಪಡೆದುಕೊಂಡರು. ಅವರಲ್ಲಿ ಅನೇಕ ಮಂದಿ ಗುಜರಾತಿನಿಂದ ಬಂದವರಾಗಿದ್ದರು. ಈ ಕೆಲಸವನ್ನು ಪಡೆಯಲು ಅವರು ದಲ್ಲಾಳಿಗಳಿಗೆ ಹೇರಳ ದಸ್ತೂರಿ (ಲಂಚ) ತೆರಬೇಕಾಗಿದ್ದಿತು. ಅವರ ವಾಸದ ಸ್ಥಳ ಹೊಲಸು ಕೊಳಚೆ ಪ್ರದೇಶವಾಗಿತ್ತು. ಹರಕು-ಮುರಕು ಗುಡಿಸಲು, ವಾಸದ ಮನೆಯಾಗಿದ್ದಿತು. ಅವರ ಪಠಾಣನಿಂದ ಸಾಲ ತೆಗೆದುಕೊಂಡು, ಅಧಿಕ ದರದಲ್ಲಿ ಬಡ್ಡಿ ತೆರುತ್ತಿದ್ದರು. ಎಷ್ಟು ವರ್ಷಗಳ ಕಾಲ ಕೆಲಸ ಮಾಡಿದರೂ ಅದನ್ನು ತೀರಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಇದನ್ನೆಲ್ಲ ಪ್ರತ್ಯಕ್ಷ ಕಂಡು ಕೇಳಿದ  ಬಾಪಾರವರ ಹೃದಯ ಅಪಾರ ನೊಂದಿತು. ಈ ನಿರ್ಭಾಗ್ಯ, ಬಡಪಾಯಿ ಜನರನ್ನು ಹೇಗಾದರೂ ಉದ್ಧಾರ ಮಾಡಬೇಕು ಎಂಬ ನಿರ್ಧಾರ ಅವರ ಮನಸ್ಸಿನಲ್ಲಿ ಮೂಡಿತು. ಆದರೆ ಮಾರ್ಗ ಯಾವುದು? ಈ ಪ್ರಶ್ನೆ ಅವರನ್ನು ಸದಾ ಕಾಡುತ್ತಿತ್ತು.

ಕುರ‍್ಲಾ ಪ್ರದೇಶದಲ್ಲಿ ಒಂದು ವರ್ಷ ಕಾಲ ಪ್ರಾಮಾಣಿಕತೆಯಿಂದಲೂ ಸಾಮಾರ್ಥ್ಯದಿಂದಲೂ ಕೆಲಸ ಮಾಡಿದ ಇಂಜಿನಿಯರರ ಸೇವೆಯನ್ನು ಮೆಚ್ಚಿದ ಪುರಸಭೆ ಅವರನ್ನು ಮುಂಬಯಿ ನಗರದ ರಸ್ತೆಗಳ ಮೇಲ್ವಿಚಾರಕರನ್ನಾಗಿ ನೇಮಿಸಿ, ಮಾಸಿಕ ವೇತನವನ್ನು ಮುನ್ನೂರು ಅರವತ್ತು ರೂಪಾಯಿಗಳಿಗೆ ಏರಿಸಿತು.

ತಂದೆಗಾಗಿ

ಮುಂಬಯಿಯಲ್ಲಿ ನೌಕರಿಯಲ್ಲಿದ್ದ ಮಗನ ಮನೆಯಲ್ಲಿ ಕೆಲವು ಕಾಲ ಇರಲು ವಿಠ್ಠಲದಾಸ್ ಬಂದರು. ಅವರು ವೃದ್ಧಾಪ್ಯದಲ್ಲಿದ್ದರು. ಆರೋಗ್ಯವೂ ಕೆಟ್ಟಿದ್ದಿತು. ಬಾಪಾ ತಂದೆಗೆ ಸಕಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟು ಸೇವೆ ಮಾಡುತ್ತಿದ್ದರು.

ಅಂದು ಮುಂಬಯಿಯ ಹಿಂದೂ ಸಮಾಜದಲ್ಲಿ ಒಂದು ಮಹತ್ವಪೂರ್ಣ ಪ್ರಸಂಗ ನಡೆಯಿತು. ಹಿಂದು ಸುಧಾರಕರು ಜಾತಿ ವ್ಯತ್ಯಾಸವನ್ನು ಅಳಿಸಿ ಹಾಕುವುದಕ್ಕಾಗಿ ಅಸ್ಪೃಶ್ಯರೊಂದಿಗೆ ಒಂದು ಭೋಜನ ಕೂಟವನ್ನು ಏರ್ಪಡಿಸಿದರು.  ಬಾಪಾ ಜಾತಿ ವ್ಯತ್ಯಾಸವನ್ನು  ಎಂದೋ ತೊರೆದಿದ್ದರು. ಅವರೂ ಆಹ್ವಾನಿತರಾಗಿ ಕೂಟದಲ್ಲಿ ಭಾಗವಹಿಸಿದರು. ಇದಕ್ಕಾಗಿ ಅವರ ಜಾತಿಯ ಮುಖಂಡರು ದಂಢ ವಿಧಿಸಿದರು; ಜೊತೆಗೆ ಪ್ರಾಯಶ್ಚಿತ್ತ ಮಾಡಿಸಿಕೊಳ್ಳಬೇಕಾಗಿತ್ತು. ಅದರ ಪ್ರಕಾರ, ತಲೆಯ ಕೂದಲನ್ನು ಪೂರ್ಣವಗಿ ಬೋಳಿಸಿಕೊಳ್ಳಬೇಕಾಗಿತ್ತು. ಇದಕ್ಕೆ ಒಪ್ಪದಿದ್ದರೆ, ಜಾತಿಯ ಜನ ಬಹಿಷ್ಕಾರ ಹಾಕುತ್ತಿದ್ದರು. ತಂದೆ ಕಾಲವಾದರೆ ಹೆಣ ಹೊರುವುದಕ್ಕೂ ಮತ್ತು ಶ್ರಾದ್ಧಕ್ಕೂ ಯಾರೂ ಬರುತ್ತಿರಲಿಲ್ಲ.

ಬಾಪಾ ಇದನ್ನೆಲ್ಲ ಕುರಿತು ಯೋಚಿಸಿದರು. ತಂದೆಗೆ ಇದೆಲ್ಲ ತಿಳಿದರೆ ದುಃಖದಿಂದ ಪ್ರಾಣಣ ಬಿಡುವುದು ಖಚಿತವಾಗಿತ್ತು. ಅವರು ತಂದೆಗಾಗಿ ಸರ್ವ ತ್ಯಾಗಕ್ಕೂ ಸಿದ್ಧರಾಗಿದ್ದರು. ದಂಡ ತೆತ್ತರು; ತಲೆ ಬೋಳಿಸಿಕೊಂಡರು.

ಹಾಸಿಗೆ ಹಿಡಿದು ಮಲಗಿದ್ದ ತಂದೆ ’ಮಗೂ, ಯಾರು ಕಾಲವಾದರು? ಎಂದು ಪ್ರಶ್ನಿಸಿದರು. ’ಯಾರಾದರೂ ಕಾಲವಾದಾಗಲೇ ತಲೆ ಬೋಳಿಸಿಕೊಳ್ಳುವುದು ಪ್ರಾಚೀನ ಸಂಪ್ರದಾಯ!’

’ನನ್ನ ಮಾವನವರ ಕಡೆಯವರೊಬ್ಬು ಕಾಲವಾದರು’ ಎಂದು ಬಾಪಾ ಉತ್ತರವಿತ್ತರು.

ತಂದೆಯ ಮನಸ್ಸಿಗೆ ಸ್ವಲ್ಪವೂ ನೋವನ್ನು ಉಂಟು ಮಾಡಬಾರದೆಂಬುದು ಬಾಪಾ ಅವರ ಇಚ್ಛೆಯಾಗಿತ್ತು. ಅವರು ಕಡೆಯವರೆಗೂ ಹಾಗೆಯೇ ನಡೆದುಕೊಂಡರು.

ಭಾರತ ಸೇವಕರ ಸಂಘದ ಸಂಪರ್ಕ

ಮುಂಬಯಿಯಲ್ಲಿ ಕಾರ್ಯಮಗ್ನರಾದ ಬಾಪಾ ಅವರಿಗೆ ಭಾರತ ಸೇವಕರ ಸಂಘದ ಸಂಪರ್ಕ ಹೆಚ್ಚಾಗಿ ಬೆಳೆಯಿತು. ಅದರ ಸ್ಥಾಪಕರಾದ ಗೋಪಾಲಕೃಷ್ಣ ಗೋಖಲೆ, ದಲಿತ ವರ್ಗದವರ ಮೇಲ್ಮೈಗಾಗಿ ಏರ್ಪಡಿಸಿದ್ದ ಕಾರ್ಯದ ಪರಿಚಯವಾಯಿತು. ಸಂಘದ ಸದಸ್ಯರಾಗಿದ್ದ ವಿಠ್ಠಲ್ ರಾಮಜೀ ಶಿಂಥೇ ಎನ್ನುವವರು ಅಮೋಘವಾದ ಕಾರ್ಯವನ್ನು ಮಾಡುತ್ತಿದ್ದರು. ಅವರ ನಿಸ್ವಾರ್ಥ, ನಿರಾಡಂಬರ ಸೇವೆ ಬಾಪಾರ ಹೃದಯವನ್ನು ಸೂರೆಗೊಂಡಿತು.ಶಿಂದೇ ಸಂಪ್ರದಾಯ ಶರಣ ಹಿಂದೂ ಸಮಾಜದ ವಿರುದ್ಧ ಪ್ರಬಲ ಹೋರಾಟವನ್ನೇ ನಡೆಸುತ್ತಿದ್ದರು. ಸಂಘದ ಇನ್ನೊಬ್ಬ ಕಾರ್ಯಕರ್ತ ದೇವಧರ್ ಮತ್ತು ಇತರ ಸದಸ್ಯರು ಮಾಡುತ್ತಿದ್ದ ಘನವಾದ ಕಾರ್ಯ ಬಾಪಾ ಅವರಿಗೆ ಮೆಚ್ಚಿಗೆಯಾಯಿತು. ವಿಧವೆಯರ ಬಾಳನ್ನು ಹಸನಾಗಿ ಮಾಡಲು ಪ್ರೊ. ಕರ್ವೆಯವರು ನಡೆಸುತ್ತಿದ್ದ ಮಾನವೀಯ ಕಾರ್ಯವಂತೂ ಅವರಿಗೆ ಬಹಳ ಪ್ರಿಯವಾಯಿತು. ಹೀಗೆ ಶಿಂಧೇ, ದೇವಧರ್, ಕರ್ವೆ ಇವರುಗಳು ಬಾಪಾಗೆ ಪೂಜ್ಯ ವ್ಯಕ್ತಿಗಳೆನಿಸಿದರು; ಜನ್ಮವಿತ್ತ ತಂದೆ ಲೋಕಸೇವೆ ಸಲ್ಲಿಸಲು ಅವರಿಗೆ ಹೇಗೆ ಆದರ್ಶ ಗುರು ಎನಿಸಿದರೋ ಅಂತೆಯೇ ಗುರುಗಳೆನಿಸಿದರು.

ಬಾಪಾ ತಮ್ಮ ದಿನನಿತ್ಯದ ಕಾರ್ಯ ಮುಗಿಸಿಕೊಂಡು ಸಂಘದ ಕಾರ್ಯಾಲಯಕ್ಕೆ ಹೋಗುತ್ತಿದ್ದರು. ಅಲ್ಲಿ ಕಾರ್ಯಕರ್ತರ ಜೊತೆ ಸೇರಿ, ದಲಿತ ವರ್ಗದವರ ಉದ್ಧಾರಕ್ಕಾಗಿ ಯೋಜನೆಗಳನ್ನು ಕುರಿತು ಚರ್ಚಿಸುತ್ತಿದ್ದರು. ಈ ರೀತಿ ಬಾಪಾ ಸಂಘದ ಆಂಶಿಕ ಕಾಲದ ಸೇವಕರಂತೆಯೇ ಆಗಿದ್ದರು.

ಸೇವಾದೀಕ್ಷೆ

ಬಾಪಾ ಒಂದು ದಿನ ತಮ್ಮ ತಂದೆಗೆ ಪತ್ರ ಬರೆದು, ದೀನ – ದಲಿತರ ಸೇವೆಗೆ ತಮ್ಮ ಪೂರ್ಣ ಕಾಲವನ್ನು ಮತ್ತು ಶಕ್ತಿಯನ್ನು ವಿನಿಯೋಗಿಸಲು ಅಪ್ಪಣೆ ಬೇಡಿದರು. ಅದಕ್ಕೆ ತಂದೆ ಹೀಗೆ ಉತ್ತರವಿತ್ತರು : ’ನಾನು ಜೀವಂತವಾಗಿರುವವರೆಗೂ ಇದು ಬೇಡ. ನಾನಂತೂ ಬಹಳ ಕಾಲ ಜೀವಿಸಿರುವುದು ಅಸಂಭವ. ತಂದೆಯ ಈ ಉತ್ತರ ಬಾಪಾಗೆ ಬಹಳ ದುಃಖವನ್ನೇ ಉಂಟುಮಾಡಿತು. ಆದರೆ ತಂದೆಯ ವಿಷಯದಲ್ಲಿ ಅವರು ಹೊಂದಿದ್ದ ಭಕ್ತಿಭಾವ ತೀವ್ರ ಆಕಾಂಕ್ಷೆಯನ್ನು ತಡೆಯಹಿಡಿಯಿತು. ವಿಠ್ಠಲ್ ದಾಸ್ ೧೯೧೩ರಲ್ಲಿ ಕಾಲವಾದರು.

ತಂದೆಯ ನಿಧನದಿಂದ ಬಾಪಾ ಅವರಿಗೆ ಸ್ವತಂತ್ರವಾಗಿ ಸೇವೆ ಮಾಡುವ ಅವಕಾಶ ದೊರಕಿದಂತಾಯಿತು,. ಒಂದು  ವರ್ಷದ ಅವಧಿಯಲ್ಲಿ ಅವರು ತಮ್ಮ ಕುಟುಂಬದವರಿಗೆಲ್ಲ ಸೂಕ್ತವಾದ ಏರ್ಪಾಡನ್ನು ಮಾಡಿ, ತಮ್ಮ ಮುಂಬಯಿ ಪುರಸಭೆಯ ಇಂಜಿನಿಯರ್ ಕೆಲಸಕ್ಕೆ ೧೯೧೪ರ ಜನವರಿ ತಿಂಗಳಿನಲ್ಲಿ ರಾಜೀನಾಮೆ ಇತ್ತರು. ಪುರಸಭೆಯ ಆಡಳಿತಾಧಿಕಾರಿ ಇದನ್ನು ಹಿಂತೆಗೆಸಲು ಎಲ್ಲ ಪ್ರಯತ್ನ ಮಾಡಿದನು. ವೇತನ ಬಡ್ತಿ ಕೊಡುವುದಾಗಿ ಆಸೆ ತೋರಿಸಿದನು. ಠಕ್ಕರ್ ಬಾಪಾ ಅವರ ಮನಸ್ಸು ಕದಲಿಲ್ಲ. ಅವರು ಭಾರತ ಸೇವಕರ ಸಂಘವನ್ನು ಸೇರಲು ಅಣಿಯಾದರು.  ಅವರ ಗೆಳೆಯ ಡಾ. ದೇವ್ ಸಂಘದ ಕಾರ್ಯಕರ್ತರಾಗಲು ಸಿದ್ಧರಾಗಿದ್ದರು. ಅವರೇ ಬಾಪಾ ಹೆಸರನ್ನು ಗೋಖಲೆಯವರಿಗೆ ಸೂಚಿಸಿದರು. ಇಬ್ಬರೂ ಸಂಘದ ಪೂರ್ಣಕಾಲದ ಸದಸ್ಯರಾಗಿ ೧೯೧೪ರ ಫೆಬ್ರವರಿ ೨ ರಂದು ದೀಕ್ಷೆ ಪಡೆದರು. ಈ ಸೇವಾ ಜೀವನದ ದೀಕ್ಷೆ ಕೈಕೊಂಡಾಗ ಬಾಪಾ ಅವರಿಗೆ ನಲವತ್ತೈದು ವರ್ಷ ವಯಸ್ಸಾಗಿತ್ತು.

ಬಂಗಾಳದ ಕ್ಷಾಮದಲ್ಲಿ ಕರುಣೆಯ ದೇವತೆ

ಅಂದಿನಿಂದ ಮೂವತ್ತಾರು ವರ್ಷಗಳ ಕಾಲ ಎಂಬತ್ತೊಂದನೆಯ ವಯಸ್ಸಿನವರೆಗೆ, ಅವರ ಬಾಲು  ದೀನ-ದಲಿತರ, ಬವಣೆಗೆ ತುತ್ತಾದವರ ಸೇವೆಗೆ ಹಗಲಿರುಳು ಮುಡಿಪಾಯಿತು. ಅವರು ದೇಶಸೇವೆ ಮತ್ತು ಮಾನವ ಸೇವೆಗಳಿಗೆ ತಮ್ಮನ್ನು ಅರ್ಪಿಸಿಕೊಂಡರು.

ಸೇವೆಗೆ ಹಲವು ಮುಖಗಳು

ಭಾರತ ಸೇವಕರ ಸಂಘದ ಕಾರ್ಯಕರ್ತರಾಗಿ ಬಾಪಾ ಹೃತ್ಪೂರ್ವಕವಾಗಿ ಆರಿಸಿಕೊಂಡ ಪ್ರಥಮ ಸೇವಾಕಾರ್ಯ, ಕ್ಷಾಮ ಪೀಡಿತರಿಗೆ ಸೇವೆ ಸಲ್ಲಿಸುವ ಕಾರ್ಯವಾಗಿದ್ದಿತು. ಆಗ ಉತ್ತರ ಪ್ರದೇಶದಲ್ಲಿ ಬರಗಾಲ ಬಂದಿದ್ದಿತು. ಅಲ್ಲಿ ಅವರು ವ್ಯವಸ್ಥಿತ ಪರಿಹಾರ ಕಾರ್ಯ ಸಲ್ಲಿಸಿದರು. ಆನಂತರ ದೇಶದಲ್ಲಿ ಯಾವ ಕಡೆ ಬರಗಾಲ ಬರಲಿ, ಅಥವಾ ಪ್ರವಾಹ ಇತ್ಯಾದಿ ಪ್ರಕೃತಿಯ ವಿಕೋಪಕ್ಕೆ ಜನ ಸಿಲುಕಿ ಕಂಗಾಲಾಗಿರಲಿ, ಅಲ್ಲೆಲ್ಲ ಬಾಪಾರವರ ಕರುಣೆಯ ಸೇವೆ ಸಿದ್ಧವಿರುತ್ತಿತ್ತು. ಇದರ ನಡುವೆ, ೧೯೧೫ರಲ್ಲಿ ಅವರು ಹಿಂದೆ ನೇರ ಸಂಪರ್ಕದಿಂದ ಅರಿತಿದ್ದ ಮುಂಬಯಿ ನಗರದ ಝಾಡಮಾಲಿಗಳ ಮತ್ತು ಭಂಗಿಗಳ ಬವಣೆ ನಿವಾರಣೆಗಾಗಿ ಪರಸ್ಪರ ಸಹಕಾರ ಸಂಘಗಳನ್ನು ಏರ್ಪಡಿಸಿದರು. ೧೯೧೬ರಲ್ಲಿ ಕಚ್ಛ್ ಪ್ರದೇಶದಲ್ಲಿ ಕ್ಷಾಮ ಪರಿಹಾರ ಕಾರ್ಯವನ್ನು ವ್ಯವಸ್ಥೆಗೊಳಿಸಿದರು. ೧೯೧೭ರಲ್ಲಿ ಸಹ ಕಾರ್ಯಕರ್ತರಾದ ದೇವಧರ್ ಮತ್ತು ಜೋಷಿ ಇವರ ಜೊತೆಗೂಡಿ ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಸುಧಾರಣೆಯ ಬಗೆಗೆ ವಿಚಾರಣೆ ನಡೆಸಿದರು.

ಬೇರೊಬ್ಬರು

ನಿರ್ವಹಿಸಲಾರರು

೧೯೨೦ರಲ್ಲಿ ಒರಿಸ್ಸಾದಲ್ಲಿ ಮಹಾ ಕ್ಷಾಮ ಬಂದಿತು. ಆ ಸಂದರ್ಭದಲ್ಲಿ ಬಾಪಾ ಸಲ್ಲಿಸಿದ ಸೇವೆ ಅವರ ಜೀವನದಲ್ಲೇ ಅತ್ಯಂತ ಸ್ಮರಣೀಯವಾದುದು. ಮಹಾತ್ಮಾ ಗಾಂಧಿಯವರ ಕೋರಿಕೆಯಂತೆ ಅಲ್ಲಿಗೆ ಹೋಗಿ, ಅನ್ನವಿಲ್ಲದೆ ಸಾವಿನ ದವಡೆಗೆ ಸಿಲುಕಿ ತೊಳಲುತ್ತಿದ್ದ ಜನ ಸಮೂಹಕ್ಕೆ ಪ್ರಾಣದಾನ ಮಾಡಿದರು. ಅವರು ಏರ್ಪಡಿಸಿದ ಪರಿಹಾರ ಯೋಜನೆಗಳು ವ್ಯಾಪಕವಾಗಿದ್ದವು. ಒರಿಸ್ಸಾದಲ್ಲಿ ಇನ್ನೂ ಕಾರ್ಯ ಪೂರ್ಣವಾಗಿರಲಿಲ್ಲ. ಭಾರತ ಸೇವಕರ ಸಂಘದವರು ಬಾಪಾರವರನ್ನು ಬ್ರಿಟಿಷ್ ಗಯಾನಕ್ಕೆ ಕಳಿಸಿ, ಅಲ್ಲಿ ನೆಲೆಸಿದ್ದ ಭಾರತೀಯ ಜನಾಂಗದವರಿಗೆ ನೆರವನ್ನು ನೀಡಬೇಕೆಂದು ಅಪೇಕ್ಷಿಸಿದರು. ಗಾಂಧೀಜಿಗೆ ಇದು ಸರಿ ಎನಿಸಲಿಲ್ಲ. ಅವರು ಸಂಘದ ಅಧ್ಯಕ್ಷರಾಗಿದ್ದ ಶ್ರೀನಿವಾಸ ಶಾಸ್ತ್ರಿಗಳಿಗೆ ಹೀಗೆ ಪತ್ರ ಬರೆದರು;

’ಅಮೃತಲಾಲ್ ಅವರನ್ನು ಬ್ರಿಟಿಷ್ ಗಯಾನಕ್ಕೆ ಕಳಿಸಬೇಕೆಂಬ ವಿಷಯದಲ್ಲಿ ನಿಮ್ಮೊಡನೆ ಮಾತನಾಡಬೇಕೆಂದು ಅಪೇಕ್ಷಿಸಿದ್ದೆ. ಅವರು ಬ್ರಿಟಿಷ್ ಗಯಾನಾದಲ್ಲಿ ಸಲ್ಲಿಸಬೇಕಾಗಿರುವ ಕಾರ್ಯವನ್ನು ಈಗ ಒರಿಸ್ಸಾದಲ್ಲಿ ಸಲ್ಲಿಸುತ್ತಿರುವ ಕಾರ್ಯದ ಜೊತೆಗೆ ಹೋಲಿಸಿದರೆ ಅದು ಸಾಟಿ ನಿಲ್ಲದು. ಯಾವನೊಬ್ಬ ಸಾಧಾರಣ ವ್ಯಕ್ತಿಯಾದರೂ ಬ್ರಿಟಿಷ್ ಗಯಾನಕ್ಕೆ ಹೋಗಿ ಅಲ್ಲಿನ ಕೆಲಸ ಮಾಡಬಹುದು. ಆದರೆ ಒರಿಸ್ಸಾದ ಕಾರ್ಯವನ್ನು ಬೇರೊಬ್ಬ ವ್ಯಕ್ತಿ ಬಾಪಾರವರಂತೆ ಸಾಮರ್ಥ್ಯದಿಂದ ನಿರ್ವಹಿಸಲಾರ. ಆದುದರಿಂದ ಒರಿಸ್ಸಾದಲ್ಲಿ ಕ್ಷಾಮ ಪರಿಹಾರ ಕಾರ್ಯವನ್ನು ಪೂರ್ಣಗೊಳಿಸುವವರೆಗೂ ಅವರನ್ನು ಅಲ್ಲಿಂದ ಬೇರೆ ಕಡೆಗೆ ಕದಲಿಸುವುದಿಲ್ಲವೆಂದು ನಂಬಿದ್ದೇನೆ’ ಬಾಪಾ ತಮ್ಮ ಕಾರ್ಯವನ್ನು ಅಲ್ಲಿಯೇ ಮುಂದುವರಿಸಿದರು.

ಖಾದೀ ಕಾರ್ಯ

ಮಹಾತ್ಮಾ ಗಾಂಧೀಜಿ ಭಾರತದ ಗ್ರಾಮ ಜೀವನದ ಪುನರುದ್ಧಾರಕ್ಕಾಗಿ ಖಾದೀ ಕಾರ್ಯವನ್ನು ಆರಂಭಿಸಿದರು. ಇದು ಠಕ್ಕರೆ ಬಾಪಾ ಅವರಿಗೆ ಬಹಳ ಸೂಕ್ತವೆನಿಸಿತು. ಒಂದು ಹೊತ್ತಿಗೂ ಆಹಾರ ಕಾಣದ ಜನರಿಗೆ, ಅನಾಥರೆನಿಸಿದ ವಿಧವೆಯರಿಗೆ, ಇದು ಸ್ವಾವಲಂಬನೆಯ ಮಾರ್ಗ ತೋರಿಸಿತು. ಕ್ಷಾಮ – ಡಾಮರ ಬಂದ ಕಡೆಗಳಲ್ಲಿ ಸುಲಭವಾಗಿ ಕೈಗೊಳ್ಳಬಹುದಾದ ಉದ್ಯೋಗವೆನಿಸಿತು. ಖಾದಿಯ ಭವಿಷ್ಯ ಉಜ್ವಲವಾದುದು. ಚರಕಾವನ್ನು ಮತ್ತೆ ವ್ಯಾಪಕವಾಗಿ ಆಚರಣೆಗೆ ತರುವುದರಿಂದ ಗ್ರಾಮ ಜೀವನ ಉತ್ತಮಗೊಳ್ಳಲು ಒಳ್ಳೆಯ ಸಾಧನವಾಗುತ್ತದೆ ಎಂದು ಸ್ವಾಗತಿಸಿದರು ಬಾಪಾ. ಅದಕ್ಕಾಗಿ ಪ್ರೋತ್ಸಾಹ ವಿತ್ತರು. ಕೈಯಿಂದ ತೆಗೆದ ನೂಲಿನಿಂದ ಕೈಮಗ್ಗದಲ್ಲಿ ನೇಯ್ಗೆ ಮಾಡುವ ಸಲುವಾಗಿ ಅನೇಕ ಕಡೆಗಳಲ್ಲಿ ಉದ್ಯೋಗವಿಲ್ಲದೆ, ಕಷ್ಟದಲ್ಲಿ ದಾರಿಗಾಣದೆ ಇದ್ದ ಅಸ್ಪೃಶ್ಯ ನೇಕಾರ ಕುಟುಂಬಗಳನ್ನು ಪತ್ತೆ ಹಚ್ಚಿ, ಅವರಿಗೆಲ್ಲ ಉತ್ತೇಜನವನ್ನಿತ್ತರು. ಗುಜರಾತಿನ ಕಾಥೇವಾಡದಲ್ಲಿ ಈ ಕಾರ್ಯವನ್ನು ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಿದರು. ಇದೇ ಕಾಲದಲ್ಲಿ, ೧೯೨೨ರಲ್ಲಿ, ಗುಜರಾತಿನ ಪಂಚಮಹಲ್ ನಲ್ಲಿ ಕ್ಷಾಮ ಸಂಭವಿಸಿತು. ಇದರ ನಿವಾರಣೆಗಾಗಿ ಬಾಪಾ ತಮ್ಮ ಸರ್ವ ಸಾಮರ್ಥ್ಯವನ್ನೂ ವಿನಿಯೋಗಿಸಿದರು.

ಭಿಲ್ಲ -ಸೇವಾ ಮಂಡಲಿ

ಪಂಚಮಹಲ್ ಸೇವೆ ಸಲ್ಲಿಸುವಾಗ ಭಿಲ್ಲ ಜನರ ದಯನೀಯ ಸ್ಥಿತಿಯನ್ನು ಬಾಪಾ ಕಣ್ಣಾರೆ ಕಂಡು ಮರುಗಿದರು. ಈ ಆದಿವಾಸಿ ಜನರ ಎಲ್ಲ ವಿಧದ ಅಭಿವೃದ್ಧಿಗಾಗಿ ೧೯೨೨ರಲ್ಲಿ ದೋಹದ್ ಎಂಬಲ್ಲಿ ’ಭಿಲ್ಲ ಸೇವಾಮಂಡಲಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

ಈ ಸಂಸ್ಥೆಯ ಕಾರ್ಯವನ್ನು ವಿಸ್ತರಿಸುವುದಕ್ಕೆ ಸೇವಾ ಮನೋಭಾವದಿಂದ ಕೂಡಿದ್ದು, ಸರಳ ಜೀವನ ನಡೆಸುವ ನವಯುವಕರ ಒಂದು ತಂಡವನ್ನೇ ಸೃಷ್ಟಿಸಿದರು. ಹಲವಾರು ಸೇವಾ ಕೇಂದ್ರಗಳನ್ನು ಸ್ಥಾಪಿಸಿದರು. ಈ ಕೇಂದ್ರಗಳು ಗ್ರಾಮಾಂತರ ಪ್ರದೇಶದಲ್ಲಿ ರೂಪುಗೊಂಡವು. ಪ್ರತಿ ಕೇಂದ್ರದಲ್ಲಿಯೂ ಒಂದು ಪಾಠಶಾಲೆ, ಸಣ್ಣ ಪ್ರಮಾಣದ ವೈದ್ಯಶಾಲೆ, ಜನರು ಮದ್ಯಪಾನದ ಚಟವನ್ನು ಹತೋಟಿಯಲ್ಲಿಟ್ಟುಕೊಳ್ಳುವಂತೆ ಪ್ರಚಾರ, ಆರೋಗ್ಯ ಶಿಕ್ಷಣ ಪ್ರಚಾರ ಇತ್ಯಾದಿ ಸಮಾಜ ಕಲ್ಯಾಣ ಕಾರ್ಯಕ್ರಮ ಏರ್ಪಟ್ಟಿತು. ಭಿಲ್ಲ ಜನಾಂಗದ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳೂ ಮತ್ತು ಆ ಪಾಠಶಾಲೆಗಳಲ್ಲಿ ಸ್ಕೌಟ್ ಶಿಕ್ಷಣಕ್ಕೆ ವ್ಯವಸ್ಥೆಯೂ ಸೇರಿದ್ದವು. ಮುಂದಿನ ಎರಡು ವರ್ಷಗಳ ಕಾಲ ಭಿಲ್ಲ ಜನಾಂಗ ಹಾಗೂ ಅಂತ್ಯಜನರ ಸಮಾಜ ಕಲ್ಯಾಣ ಇವುಗಳಿಗಾಗಿ ಇಡೀ ಗುಜರಾತಿನಲ್ಲಿ ಅನೇಕ ಸೇವಾಮಂಡಲಿಗಳನ್ನು ಸ್ಥಾಪಿಸಿ, ಅವುಗಳನ್ನು ಸುವ್ಯವಸ್ಥಿತವಾಗಿ ನಿಲ್ಲಿಸುವ ಕಾರ್ಯದಲ್ಲಿ ಬಾಪಾ ನಿರತರಾದರು. ಇದೇ ಕಾಲದಲ್ಲಿ ಅವರು ಮಧ್ಯಪ್ರದೇಶ, ಅಸ್ಸಾಂ ಮತ್ತು ಛೋಟಾ ನಾಗಪುರ ಮೊದಲಾದ ಪ್ರದೇಶದಲ್ಲಿ ಐದು ತಿಂಗಳ ಕಾಲ ಸಂಚರಿಸಿ ಅಲ್ಲಿನ ಆದಿವಾಸಿಗಳ ಸ್ಥಿತಿಗತಿಗಳ ಅಧ್ಯಯನವನ್ನು ಮಾಡಿದರು. ಈ ಅಧ್ಯಯನದ ಪರಿಣಾಮವಾಗಿ ಇಡೀ ದೇಶದಲ್ಲಿರುವ ಎಲ್ಲ ಆದಿವಾಸಿ ಬುಡಕಟ್ಟಿನ ಜನರ ಪರಿಹಾರ ಮತ್ತು ಕಲ್ಯಾಣಕ್ಕಾಗಿ ಸ್ಪಷ್ಟವಾದ ಯೋಜನೆಗಳೂ ರೂಪುಗೊಂಡವು.

ದೇಶೀ ಅರಸರ ಸಂಸ್ಥಾನಗಳಲ್ಲಿ

ಸ್ವಾತಂತ್ರ‍್ಯ ಬರುವುದಕ್ಕೆ ಮೊದಲು ಭಾರತದ ಕೆಲವು ಭಾಗಗಳಲ್ಲಿ ಬ್ರಿಟಿಷ್ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದರು. ಕೆಲವು ಭಾಗಗಳಲ್ಲಿ ರಾಜಮಹಾರಾಜರು, ನವಾಬರು ಬ್ರಿಟಿಷ್ ಸರ್ಕಾರದ ಅಧಿಕಾರಕ್ಕೆ ಒಳಗಾಗಿ ಆಳುತ್ತಿದ್ದರು. ರಾಜರು -ನವಾಬರು ಆಳುತ್ತಿದ್ದ ಪ್ರದೇಶಗಳು ದೇಶೀ ಅರಸರ ಸಂಸ್ಥಾನಗಳು.

ಬಾಪಾ ಇಷ್ಟೆಲ್ಲ ಸೇವಾಕಾರ್ಯಗಳಲ್ಲಿ ನಿರತರಾಗಿದ್ದರು ದೇಶೀ ಅರಸರ ಸಂಸ್ಥಾನಗಳಲ್ಲಿ ಜನಜಾಗೃತಿಯನ್ನು ಉಂಟುಮಾಡುವ ಕಾರ್ಯವನ್ನು ಕಡೆಗಣಿಸಲಿಲ್ಲ. ಅನೇಕ ಅರಸರು ತಮ್ಮ ಸುಖಗಳಲ್ಲೇ ಮಗ್ನರಾಗಿ ಪ್ರಜಾಹಿತವನ್ನು ಗಮನಿಸುತ್ತಲೇ ಇರಲಿಲ್ಲ. ಆದುದರಿಂದ ಎಲ್ಲ ಸಂಸ್ಥಾನಗಳಲ್ಲಿಯೂ ರಾಜಕೀಯ ಸುಧಾರಣೆಗಳನ್ನು ತರಬೇಕೆಂಬ ಚಳವಳಿ ಆರಂಭವಾಯಿತು. ಬಾಪಾ ಸಹಜವಾಗಿಯೇ ಅದರಲ್ಲಿ ಪಾಲುಗೊಂಡರು. ೧೯೨೬ರಲ್ಲಿ ಭಾವನಗರ ಸಂಸ್ಥಾನದಲ್ಲಿ ನಡೆದು ಪ್ರಜಾ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದರು. ಮುಂದಿನ ವರ್ಷ, ಪೋರ್ ಬಂದರ್  ನಲ್ಲಿ ನಡೆದ ಕಾಥೇವಾಡ ಸಂಸ್ಥಾನಗಳ ಪ್ರಜಾ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದರು.

ದೇಶೀ ಸಂಸ್ಥಾನಗಳಲ್ಲಿ ಅವರು ಉಂಟು ಮಾಡಿದ ಜನ ಜಾಗೃತಿಯ ಪರಿಣಾಮವಾಗಿ ಪಾಟಿಯಾಲಾದಲ್ಲಿ ಅರಸನ ವಿರುದ್ಧ ಪ್ರಜೆಗಳ ಕಷ್ಟ ಕೋಟಲೆಗಳನ್ನು ವಿಚಾರಿಸಲು ಪ್ರಜಾ ಸಮ್ಮೇಳನದ ಸಮಿತಿಯೊಂದು ನೇಮಕವಾಯಿತು. ಬಾಪಾ ಅವರು ಅದರ ಸದಸ್ಯರಾಗಿ ಅಮೋಘ ಸೇವೆ ಸಲ್ಲಿಸಿದರು. ಈ ಸಮಿತಿಯ ವರದಿಯನ್ನು ಲಕ್ಷ್ಯಕ್ಕೆ ತಂದುಕೊಂಡ ಭಾರತ ಸರ್ಕಾರ, ಸಂಸ್ಥಾನದಲ್ಲಿ ಆಡಳಿತ ಹೇಗೆ ನಡೆಯುತ್ತಿದೆ ಎಂದು ರಾಜಕೀಯ ಇಲಾಖೆಯ ವಿಚಾರಣೆ ಮಾಡಬೇಕು ಎಂದು ಆಜ್ಞೆ ಮಾಡಿತು.

ಸರ್ಕಾರದ ಕಣ್ಣು ತೆರೆಯಿತು.

ಇದೇ ಕಾಲದಲ್ಲಿ ನಡೆದ ಇನ್ನೊಂದು ವಿಷಯವೂ ಗಮನಾರ್ಹ. ಸುಮಾರು ಹದಿನಾಲ್ಕು ವರ್ಷಗಳ ಕಾಲ ಬಾಪಾ ಏಕಪ್ರಕಾರವಾಗಿ ನಡೆಸಿದ ಆದಿವಾಸಿ, ಹರಿಜನ, ಭಂಗಿ ಮತ್ತು ಭಿಲ್ಲರು ಇತ್ಯಾದಿ ದಲಿತ ಜನಾಂಗದ ಸೇವೆಗೆ ಪ್ರತಿಫಲವೋ ಎಂಬಂತೆ ಮುಂಬಯಿ ಸರ್ಕಾರ ತನ್ನ ಪ್ರಾಂತದ ಆದ್ಯಂತ ಎಲ್ಲ ದಲಿತ ವರ್ಗಗಳವರ ಮತ್ತು ಬುಡಕಟ್ಟಿನ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಪರಿಶೀಲಿಸಿ, ಅವರ ಅಭಿವೃದ್ಧಿಗೆ ಮಾರ್ಗಗಳನ್ನು ಸೂಚಿಸಿ, ವರದಿ ಮಾಡಬೇಕೆಂದು ಒಂದು ಸಮಿತಿಯನ್ನು ನೇಮಕ ಮಾಡಿತು. ಇದರಿಂದ ಸರ್ಕಾರ ಯಾವ ಕೆಲಸವನ್ನು ಮಾಡಬೇಕು ಎಂದು ಅದರ ಕಣ್ಣನ್ನು ತೆರೆಸಿದಂತಾಯಿತು.

ಸ್ವಾತಂತ್ರ‍್ಯ ಸಂಗ್ರಾಮದಲ್ಲಿ

ಮಾನವ ಸೇವಕ ದೇಶ ಸೇವಕನಾದುದು ಅಚ್ಚರಿಯಲ್ಲ. ರಾಷ್ಟ್ರದ ರಚನಾತ್ಮಕ ಕಾರ್ಯದಲ್ಲಿ ತೊಡಗಿದ್ದ ಬಾಪಾ ಸ್ವಾತಂತ್ರ‍್ಯ ಸಂಗ್ರಾಮದಲ್ಲಿಯೂ ಅನಿವಾರ್ಯವಾಗಿಯೇ ಭಾಗವಹಿಸಬೇಕಾಯಿತು.

೧೯೩೦ರಲ್ಲಿ ಬ್ರಿಟಿಷ್ ಸರ್ಕಾರದ ಕಾನೂನುಗಳನ್ನು ಮುರಿಯುವ ಸತ್ಯಾಗ್ರಹ ಪ್ರಾರಂಭವಾಯಿತು. ಸ್ವಲ್ಪ ಕಾಲದಲ್ಲೇ ದೇಶದಲ್ಲೆಲ್ಲ ಕಾಳ್ಗಿಚ್ಚಿನಂತೆ ಹರಡಿತು. ಗುಜರಾತ್ ರಾಜ್ಯದಲ್ಲಿ ಚಳವಳಿ ಶಿಖರಾಗ್ರಕ್ಕೆ ಏರಿತ್ತು. ಮದ್ಯದಂಗಡಿಗಳ ಸರ್ಪಗಾವಲು ಇತ್ಯಾದಿ ಕಾರ್ಯಗಳು ಭರದಿಂದ ಸಾಗಿದ್ದವು. ಬಾಪಾ ಇದರಲ್ಲಿ ಭಾಗವಹಿಸಿದ್ದರು. ೧೯೩೦ರ ಆಗಸ್ಟ್ ೨ ರಂದು ಅವರು ಬಂಧಿತರಾದರು; ಆರು ತಿಂಗಳ ಕಠಿಣ ಶ್ರಮದ ಕಾರಾಗೃಹ ಶಿಕ್ಷೆಗೆ ಗುರಿಯಾದರು. ಆದರ ಎರಡು ತಿಂಗಳಲ್ಲಿ ಸರ್ಕಾರ ಅವರನ್ನು ಬಿಡುಗಡೆ ಮಾಡಿತು.

ಹರಿಜನ ಸೇವಕ ಸಂಘ

ಗುಜರಾತಿನವರೇ ಆದ ಬಾಪಾ ಮತ್ತು ಬಾಪೂ ಪರಸ್ಪರ ಮೆಚ್ಚಿಕೊಳ್ಳಲು ಬಹಳ ಕಾಲ ಹಿಡಿಯಲಿಲ್ಲ. ಗಾಂಧೀಜಿ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಹಿಂದಿರುಗಿ ಬಂದ ಸರಿ ಸುಮಾರು ಕಾಲದಲ್ಲೇ ಬಾಪಾ ಅವರ ದೀಕ್ಷಾಬದ್ಧ ಜೀವನ ಆರಂಭವಾಗಿತ್ತು. ಅವರ ಸೇವಾಭಾವನವನ್ನು ಬಾಪೂ ಮನಸಾರ ಮೆಚ್ಚಿಕೊಂಡಿದ್ದರು. ಹಿಂದೆ ಒಮ್ಮೆ, ಅವರು ಶ್ರೀನಿವಾಸ ಶಾಸ್ತ್ರಿಗಳಿಗೆ ಬರೆದ ಪತ್ರದ ವಿಷಯವನ್ನು ಆಗಲೇ ಹೇಳಿದೆ. ಶಾಸನೋಲ್ಲಂಘನೆ ಮಾಡಿ, ಸೆರೆಮನೆವಾಸ ಅನುಭವಿಸಿ, ಬಿಡುಗಡೆ ಹೊಂದಿದ ಬಾಪಾ, ಬಾಪೂವೊಂದಿಗೆ ಜೊತೆ ಗೂಡಿ ಕೆಲಸ ಮಾಡುವ ಅವಕಾಶ ಹೆಚ್ಚಿತು.

೧೯೩೧ರಲ್ಲಿ ಬ್ರಿಟಿಷ್ ಸರ್ಕಾರ ಒಂದು ತೀರ್ಮಾನ ಮಾಡಿತು. ಹರಿಜನರು ಪ್ರತ್ಯೇಕವಾಗಿ ಮತದಾನ ಮಾಡಿ ತಮ್ಮ ಪ್ರತಿನಿಧಿಗಳನ್ನು ಆರಿಸಬಹುದು ಎಂದಿತು. ಇದರಿಂದ ಹರಿಜನರನ್ನು ಇತರ ಹಿಂದೂಗಳಿಂದ ಬೇರೆ ಮಾಡಿದ ಹಾಗೆ ಎನ್ನಿಸಿತು ಗಾಂಧೀಜಿಗೆ. ಅವರು ಅದನ್ನು ಪ್ರತಿಭಟಿಸುವ ಸಲುವಾಗಿ ಚರಿತ್ರಾರ್ಹ ಅಮರಣಾಂತ ಉಪವಾಸ ವ್ರತವನ್ನು ಕೈಗೊಂಡರು. ಆ ಸಂದರ್ಭದಲ್ಲಿ ಪೂನಾ ಒಪ್ಪಂದ ಆಗಿ ಉಪವಾಸ ನಿಲ್ಲುವಂತೆ ಮಾಡಲು ಬಾಪಾ ಪ್ರಭಾವಯುತ ಪಾತ್ರವನ್ನು ವಹಿಸಿದರು. ಒಪ್ಪಂದಕ್ಕೆ ಸಹಿ ಮಾಡಿದವರಲ್ಲಿ ಅವರೂ ಒಬ್ಬರು. ಅವರು ಅಸ್ಪೃಶ್ಯತಾ ನಿವಾರಣಾ ಸಂಘದ ಮಹಾ ಕಾರ್ಯದರ್ಶಿಯಾದರು. ಈ ಸಂಘವೇ ಮುಂದೆ ’ಹರಿಜನ ಸೇವಕ ಸಂಘ’ ಎಂಬ ಹೆಸರನ್ನು ಪಡೆಯಿತು. ಅದು ಗಾಂಧೀಜಿಯ ನೇತೃತ್ವದಲ್ಲಿ ಬೆಳೆಯುವ ಸಂಸ್ಥೆಯಾಯಿತು.

ಬಾಪಾ ಈ ಸಂಘದ ಹೊಣೆಗಾರಿಕೆಯನ್ನು ಹೊತ್ತ ಮೇಲೆ ಆರು ತಿಂಗಳ ಕಾಲ ವಿಶ್ರಾಂತಿಯರಿಯದೆ ಎಲ್ಲ ಪ್ರಾಂತಗಳಲ್ಲಿಯೂ ಸಂಚರಿಸಿ, ಅಸ್ಪೃಶ್ಯತೆಯ ವ್ಯಾಪ್ತಿ ಮತ್ತು ತೀವ್ರತೆಯ ಬಗೆಗೆ ಆಳವಾದ ಅಧ್ಯಯನ ನಡೆಸಿದರು. ಒಂದು ವರ್ಷ ಅವಧಿ ಮುಗಿಯುವುದರೊಳಗೆ ಇಪ್ಪತ್ತೆರಡು ಪ್ರಾಂತೀಯ ಶಾಖೆಗಳನ್ನೂ ಮತ್ತು ನೂರೆಪ್ಪತ್ತೆಂಟು ಜಿಲ್ಲಾ ಶಾಖೆಗಳನ್ನೂ ವ್ಯವಸ್ಥೆ ಮಾಡಿದರು. ಇದಲ್ಲದೆ ಗಾಂಧೀಜಿಯೇ ಸ್ವತಃ ಭಾರತದ ಆದ್ಯಂತ ಹರಿಜನ ಸೇವಾ ಕಾರ್ಯಕ್ಕಾಗಿ ಐತಿಹಾಸಿಕ ಪ್ರವಾಸ ನಡೆಸಿದಾಗ, ಅವರೊಡನೆ ಬಾಪಾ ಒಂಬತ್ತು ತಿಂಗಳ ಕಾಲ ಪ್ರವಾಸ ಮಾಡಿದರು. ಬಾಪೂ ಅಸ್ಪೃಶ್ಯತೆಯನ್ನು ಪೂರ್ಣವಾಗಿ ತೊಡೆದು ಹಾಕಲು ಪಣತೊಟ್ಟು ಕೈಗೆತ್ತಿಕೊಂಡ ಸಾಮಾಜಿಕ ನೈತಿಕ ಸುಧಾರಣೆಯ ಈ ಕಾರ್ಯ, ಮಾನವ ಸೇವೆಯನ್ನು ಜೀವನ ದೀಕ್ಷೆಯಾಗಿ ಅಂಗೀಕರಿಸಿದ್ದ ಬಾಪಾಗೆ ಸ್ಪೂರ್ತಿಯ ಕಾರ್ಯವೇ ಆಯಿತು.

೧೯೩೭ರಲ್ಲಿ ಕಾಂಗ್ರೆಸ್ ಸರ್ಕಾರಗಳು ಪ್ರಾಂತೀಯ ಅಧಿಕಾರವನ್ನು ಸ್ವೀಕರಿಸಿದವು. ಬಾಪಾ ಎಲ್ಲ ಪ್ರಾಂತಗಳ ಮುಖ್ಯ ಮಂತ್ರಿಗಳನ್ನೂ ಭೇಟಿಯಾಗಿ, ಹರಿಜನರ ಏಳಿಗೆಗಾಗಿ ಉದಾರ ಹಣ ವೆಚ್ಚ ಮಾಡಬೇಕೆಂದು ಪ್ರಾರ್ಥಿಸಿದರು. ಅದಕ್ಕಾಗಿ ಕೈಗೊಳ್ಳಬಹುದಾದ ಕಾರ್ಯ ಕ್ರಮವನ್ನು ರೂಪಿಸಿಕೊಟ್ಟರು.

ಒರಿಸ್ಸಾ ಸರ್ಕಾರ, ೧೯೪೦ರಲ್ಲಿ ರಾಜ್ಯದ ಹಿಂದುಳಿದ ಜನಾಂಗದ ಸ್ಥಿತಿಗತಿಗಳನ್ನು ಕುರಿತು ಪರಿಶೀಲಿಸಿ ವರದಿಯನ್ನು ಒಪ್ಪಿಸಬೇಕೆಂದು ಕೋರಿ, ಬಾಪಾ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ಏರ್ಪಡಿಸಿತು.  ಆ ಸಮಿತಿ ಮೂಲನಿವಾಸಿಗಳ, ಹರಿಜನರ ಮತ್ತು ಎಲ್ಲ ಹಿಂದುಳಿದ ಜನಾಂಗದ ಪರಿಸ್ಥಿತಿಯನ್ನು ಉತ್ತಮ ಪಡಿಸಲು ಮಾರ್ಗಗಳನ್ನು ಸೂಚಿಸಿತು. ಹಾಗೆಯೇ ಈ ಉದ್ದೇಶ ಈಡೇರಲು ಅಗತ್ಯವಾದ ಆಡಳಿತ ಬದಲಾವಣೆಗಳನ್ನೂ ಸಲಹೆ ಮಾಡಿತು. ಈ ಸಂದರ್ಭದಲ್ಲಿ ಬಾಪಾ  ಒರಿಸ್ಸಾದ ಗೊಂಡರು, ಕೋಯಾಗಳು, ಬಂಡಾಗಳು, ಪರಾಜ್ ಗಳು ಮೊದಲಾದ ಎಲ್ಲ ಮೂಲ ನಿವಾಸಿಗಳ ನೆಲೆಗಳಿಗೂ ಭೇಟಿಯಿತ್ತು ಅವರ ಜೀವನದ ಆದ್ಯಂತವನ್ನು ಅರಿತುಕೊಂಡರು. ಮತ್ತೊಮ್ಮೆ ಅಖಿಲ ಭಾರತ ಪ್ರವಾಸ ಕೈಗೊಂಡು ಹರಿಜನ ಕಾರ್ಯವನ್ನು ಚೆನ್ನಾಗಿ ವ್ಯವಸ್ಥೆ ಗೊಳಿಸಿದರು. ಅಸ್ಸಾಂ ಮತ್ತು ಖಾನ್ದೇಶಗಳಲ್ಲಿಯೂ ವ್ಯಾಪಕವಾಗಿ ಪ್ರವಾಸ ಮಾಡಿದರು.

ಅಪದ್ಬಂಧು

ಈಗ ಅಖಿಲ ಭಾರತವೇ ಬಾಪಾ ಅವರ ಸೇವಾಕ್ಷೇತ್ರವಾಯಿತು. ಅದು ಒಂದೇ ಕಾರ್ಯಕ್ಕೆ ಸೀಮಿತವಾಗಲಿಲ್ಲ. ಹರಿಜನ ಸೇವಕ ಸಂಘದ ಕಾರ್ಯವೇ ಮಿತಿಮೀರಿದ್ದಿತು. ಇದರ ಜೊತೆಜೊತೆಗೆ ದಲಿತ ವರ್ಗಗಳವರ ಸೇವಾ ಕಾರ್ಯವೂ ನಿಲುವಿಲ್ಲದೆ ಸಾಗುತ್ತಿತ್ತು.

೧೯೪೩ರಲ್ಲಿ ದೇಶದ ನಾನಾ ಕಡೆಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸಂಕಟ ಪರಿಸ್ಥಿತಿ ಒದಗಿತು. ಬಾಪಾ ಎಲ್ಲ ಕಡೆ ಸಂಚರಿಸಿ, ನೊಂದ ಜನಕ್ಕೆ ಪರಿಹಾರ ಕಲ್ಪಿಸಲು ಶ್ರಮಿಸಿದರು. ಒರಿಸ್ಸಾ ರಾಜ್ಯದಲ್ಲಂತೂ ಚಂಡಮಾರುತದ ಪರಿಣಾಮವಾಗಿ ಸಂಭವಿಸಿದ ಕಷ್ಟ ನಷ್ಟ ಅಪಾರ. ಬೆಳೆಗಳೆಲ್ಲ ನಾಶವಾದವು. ಬಾಪಾ ಅವರ ಪ್ರಭಾವದಿಂದ ಹೇರಳ ಧನ – ಧಾನ್ಯ ಶೇಖರಣೆ ಆಯಿತು. ಇದನ್ನೆಲ್ಲ ನಿರ್ಗತಿಕರ ದುಃಖ ಪರಿಹರಿಸುವ ಕಾರ್ಯಕ್ಕೆ ವಿನಿಯೋಗಿಸಲಾಯಿತು.

ಇದೇ ವರ್ಷ ಬಂಗಾಳ ಪ್ರಾಂತಕ್ಕೆ ಬವಣೆ ಅನಂತ. ಅಂದು ಪ್ರಪಂಚದ ಎರಡನೆಯ ಮಹಾಯುದ್ಧದ ಪರ್ವ ಕಾಲ. ಬ್ರಿಟಿಷ್ ಸಾಮ್ರಾಜ್ಯದ ಶಕ್ತಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾವು ಬದುಕಿನ ಹೋರಾಟ ನಡೆಸಿತ್ತು. ಸಾಮ್ರಾಜ್ಯದ ವಿರುದ್ಧ ಬಂಡೆದ್ದ ಬಂಗಾಳದ ಜನತೆಯ ಮೇಲೆ ಸರ್ಕಾರ ಪ್ರತೀಕಾರ ಕ್ರಿಯೆ ಆರಂಭಿಸಿತು. ಗಾಂಧೀಜಿ, ನೆಹರೂ, ರಾಜೇಂದ್ರ ಬಾಬೂ ಮೊದಲಾದ ರಾಷ್ಟ್ರದ ಮಹಾ ನಾಯಕರೆಲ್ಲ ಸೆರೆಮನೆಯಲ್ಲಿ ಕೊಳೆಯುತ್ತಿದ್ದರು. ಸರ್ಕಾರ ಒಂದು ಕೃತಕ ಕ್ಷಾಮ ಪರಿಸ್ಥತಿಯನ್ನೇ ಉಂಟು ಮಾಡಿತು.ಲಕ್ಷಾಂತರ ಮಂದಿ ಹಸಿವಿನಿಂದ ಸಾಯುವ ಪರಿಸ್ಥಿತಿ  ಬಂದಿತು; ಎಷ್ಟೋ ಮಂದಿ ಯಾವ ನೆರವೂ ಇಲ್ಲದೆ ಸತ್ತರು. ಕಲ್ಕತ್ತಾ ಮಹಾನಗರ ಸ್ಮಶಾನದಂತೆ ಆಗುವ ಸ್ಥಿತಿ ಬಂದಿತು. ಇಂಥ ವಿಷಮ ಸ್ಥಿತಿಯಲ್ಲಿ ಬಾಪಾ ಕರುಣೆ ದೇವತೆಯಂತೆ ಕಂಡು ಬಂದರು. ಮೂರು ದಶಕಗಳ ಮೇಲ್ಪಟ್ಟು ಅವರು ವಿವಿಧ ಸೇವಾಕ್ಷೇತ್ರಗಳಲ್ಲಿ ಸಲ್ಲಿಸಿದ್ದ ಸೇವಾನುಭವದ ಶಕ್ತಿಯನ್ನೆಲ್ಲ ಉಪಯೋಗಿಸಿ ದುಡಿದರು. ಅವರು ಎಸಗಿದ ಪರಿಹಾರ ಕಾರ್ಯ ಭಾರತೀಯ ಇತಿಹಾಸದಲ್ಲಿ ಉಲ್ಲೇಖಾರ್ಹ. ಅದು ಅವರ ಮಾನವ ಸೇವೆ, ದೇಶ ಸೇವೆ, ಈಶ ಸೇವೆ ಎಲ್ಲದರ ಉಜ್ವಲ ನಿದರ್ಶನ.

೧೯೪೪ರಲ್ಲಿ ಸ್ವಲ್ಪ ವಿಶ್ರಾಂತಿ ದೊರಕಿತು ಎನ್ನುವಂತಾದರೆ ಮತ್ತೆ ಒರಿಸ್ಸಾದಲ್ಲಿ ಪ್ರಚಂಡ ಬರಗಾಲ ಬಂದಿತು. ಬಾಪಾ ಪರಿಹಾರ ಕಾರ್ಯದಲ್ಲಿ ತೊಡಗಬೇಕಾಯಿತು. ಹರಿಜನ ಕಾರ್ಯ ಮತ್ತು ಆದಿವಾಸಿ ಸೇವಾ ಕಾರ್ಯಗಳಂತೂ ಸದಾ ಇದ್ದೇ ಇರುತ್ತಿದ್ದವು.

ನಿಧಿಗಳ ಹೊಣೆ

ರಾಷ್ಟ್ರಮಾತೆ ಕಸ್ತೂರ ಬಾ ಗಾಂಧಿ ೧೯೪೪ರ ಫೆಬ್ರವರಿ ಇಪ್ಪತ್ತೆರಡರಂದು ಮಹಾಶಿವರಾತ್ರಿಯ ದಿನ ಸೆರೆಮನೆಯ ಬಂಧನದಲ್ಲಿ ಕಾಲವಾದರು. ಇದೊಂದು ಮಹಾ ದುರಂತ. ಈ ಸಾಧ್ವೀಮಣಿಯ ನೆನಪಿಗೆ ರಾಷ್ಟ್ರೀಯ ಸ್ಮಾರಕ ರಚಿಸಲು ನಿಧಿ ಸಂಗ್ರಹ ಕಾರ್ಯ ಆರಂಭಿಸಬೇಕೆಂದು ನಿಶ್ಚಯವಾಯಿತು. ಈ ಕಾರ್ಯವನ್ನು ನಿರ್ವಹಿಸುವುದಕ್ಕೆ ಬಾಪಾ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಒಂದು ಕೋಟಿ ರೂಪಾಯಿ ಮೇಲ್ಪಟ್ಟು ಹಣ ಸಂಗ್ರಹಯವಾಯಿತು. ಈ ಹಣವನ್ನು ರಾಷ್ಟ್ರದ ಗ್ರಾಮೀಣ ದಲಿತ ಮಹಿಳೆಯರ ಮತ್ತು ಮಕ್ಕಳ ಉದ್ಧಾರಕ್ಕೆ ವಿನಿಯೋಗಿಸತಕ್ಕದೆಂದು ನಿರ್ಧಾರವಾಗಿ, ಅದೊಂದು ಟ್ರಸ್ಟ್ ಆಯಿತು. ಬಾಪಾ ಅವರ ಕಾರ್ಯದರ್ಶಿಯಾದರು. ಬಾಪೂ ಅವರ ರಚನಾತ್ಮಕ ಕಾರ್ಯಗಳನ್ನು, ಪ್ರಧಾನವಾಗಿ ಮಹಿಳೆಯರ ಉನ್ನತಿಯನ್ನು, ಸಾಧಿಸುವ ಅವಕಾಶ ಬಾಪಾ ಅವರ ಪಾಲಿಗೆ ಬಂದಿತು. ಇದು ಹಿರಿಯ  ಸೇವಾಜೀವಿಗೆ ದೊರೆತ ಮಹಾ ಮನ್ನಣೆಯೆಂದರೆ ಉತ್ಪ್ರೇಕ್ಷೆಯಲ್ಲ.

ಬಾಪಾ ಅವರ ಪ್ರಾಮಾಣಿಕತೆ, ಸೇವಾ ಶ್ರದ್ದೆ, ಕಳಂಕವಿಲ್ಲದೆ ಚಾರಿತ್ರ‍್ಯ, ಅಪೂರ್ವ ವ್ಯವಸ್ಥಾ ಸಾಮರ್ಥ್ಯ, ತ್ಯಾಗಭಾವ ಇವುಗಳನ್ನು ಕಂಡು ಗಾಂಧೀಜಿ ಮಾರುಹೋಗಿದ್ದರು.ದೀನ – ದಲಿತರಿಗೆ ಸಲ್ಲಿಸುತ್ತಿದ್ದ ಸೇವೆಗೆ. ಬಾಪಾ ಆದರ್ಶ ವ್ಯಕ್ತಿಯಾಗಿದ್ದು ೧೯೪೨ರ ಆಗಸ್ಟ್ ೧೫ರಂದು ಸೆರೆಮನೆಯಲ್ಲಿ ಅಕಾಲ ಮರಣಕ್ಕೆ ತುತ್ತಾದ ಮಹಾದೇವ ದೇಸಾಯಿ ಅವರ ಚಿರ ನೆನಪಿಗೆ ಸ್ಮಾರಕ ನಿಧಿಯೊಂದು ೧೯೪೫ರಲ್ಲಿ ಸ್ಥಾಪಿತವಾದಾಗ ಬಾಪಾ ಅವರನ್ನೇ ಅದಕ್ಕೆ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು. ಸಾರ್ವಜನಿಕ ಕಾರ್ಯಗಳಿಗೆ ಹಣ ಕೂಡಿಸುವ ಹೊಣೆ ಬಹು ದೊಡ್ಡದು. ಒಂದೊಂದು ಪೈಗೆ ಲೆಕ್ಕ ಇಡಬೇಕು. ಜನಕ್ಕೆ ಲೆಕ್ಕ ಒಪ್ಪಿಸಲು ಸಿದ್ಧರಾಗಿರಬೇಕು. ತಮ್ಮ ಸಹಾಯಕ್ಕೆ ಆರಿಸಿಕೊಂಡವರೆಲ್ಲರ ಕೆಲಸವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಸಾರ್ವಜನಿಕ ಕಾರ್ಯಗಳಿಗೆ ಧನಸಂಗ್ರಹ, ಅದರ ವಿನಿಯೋಗ ಇತ್ಯಾದಿ ಕಾರ್ಯಗಳಲ್ಲಿ ಬಾಪಾ ಅವರ ಮೇಲ್ಪಂಕ್ತಿ ಸದಾ ಸ್ಫೂರ್ತಿದಾಯಕ.

ಗಾಂಧೀಜಿಯ ಜೊತೆಗೆ

೧೯೪೭ರಲ್ಲಿ ಭಾರತ ರಾಷ್ಟ್ರಕ್ಕೆ ಸ್ವಾತಂತ್ರ‍್ಯ ಬಂದಿತು. ಆದರೆ ದೇಶ ಎರಡು ಪ್ರತ್ಯೇಕ ರಾಷ್ಟ್ರಗಳಾಗಿ ವಿಭಜಿತವಾಯಿತು.ಅಂದು ನಡೆದ ಕೋಮುವಾರು ಗಲಭೆಗಳು, ರಕ್ತಪಾತ ಮಾನವನ ಇತಿಹಾಸದಲ್ಲಿ ಎಂದೂ ನಡೆಯದಿದ್ದಂಥವು. ಪೂವ ಬಂಗಾಳದ ನವಕಾಲೀ ಮತ್ತು ತಿಪ್ಪೇರಾಗಳಲ್ಲಿ ನಡೆದ ಘೋರ ಕೊಲೆಗಳು ಅಮಾನುಷ ರೀತಿಯವು. ಗಾಂಧೀಜಿ ಆ ಪ್ರದೇಶದಲ್ಲಿ ಏಕಾಂಗೀ ಪಾದಚಾರಿಯಾಗಿ ಸಂಚರಿಸಿ, ಹಿಂದು-ಮುಸ್ಲಿಂ ಐಕಮತ್ಯ ಸಾಧಿಸಲು ಯತ್ನಿಸಿದರು. ಬಾಪಾ ಕೆಲವು ಕಾಲ ಗಾಂಧೀಜಿಯ ಜೊತೆಯಲ್ಲಿದ್ದು ಸಂಕಟಕ್ಕೆ ತುತ್ತಾದ ಜನರಿಗೆ ಸಾಂತ್ವನ ನೀಡುವ ಕಾರ್ಯದಲ್ಲಿ ನೆರವಾದರು.

ರಾಜ್ಯಾಂಗ ರಚನಾ ಸಭೆಯಲ್ಲಿ

ಸ್ವತಂತ್ರ ಭಾರತಕ್ಕೆ ರಾಜ್ಯಾಂಗ ರಚಿಸುವ ಕಾರ್ಯ ಮೊದಲಾಯಿತು. ಬಾಪಾ ಅವರನ್ನು ೧೯೪೮ರ ಅಕ್ಟೋಬರ್ ನಲ್ಲಿ ಸೌರಾಷ್ಟ್ರ ಒಕ್ಕೂಟದಿಂದ ರಾಜ್ಯಾಂಗ ರಚನಾ ಸಭೆಗೆ ಸದಸ್ಯರನ್ನಾಗಿ ಚುನಾಯಿಸಲಾಯಿತು. ಅವರು ಆ ಸಭೆಯ ಕಾರ್ಯ ಮುಕ್ತಾಯವಾಗುವವರೆಗೂ ಕ್ರಿಯಾತ್ಮಕ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಅವರನ್ನು ಕೆಲವು ಉಪಸಮಿತಿಗಳ ಸದಸ್ಯರನ್ನಾಗಿಯೂ ಮತ್ತು ಅಧ್ಯಕ್ಷರನ್ನಾಗಿಯೂ ಆರಿಸಲಾಗಿತ್ತು.

ಎಂಬತ್ತು ತುಂಬಿತು

ಮೂರೂವರೆ ದಶಕಗಳ ಕಾಲ ದಣಿವರಿಯದೆ ಬಹುಮುಖ ಸೇವೆ ಸಲ್ಲಿಸಿದ ಬಾಪಾ ಅವರಿಗೆ ೧೯೪೯ರಲ್ಲಿ ಎಂಬತ್ತು ವರ್ಷ ತುಂಬಿತು. ಅವರದು ಸಾರ್ಥಕ ಬದುಕಾಗಿತ್ತು. ಲಕ್ಷಾಂತರ ಮಂದಿ ದೀನ ದುಃಖಿತರು ಅವರ ಕರುಣಾಭರಿತ ಪರಿಹಾರ ಕಾರ್ಯಗಳಿಂದ ಬಾಳಿನಲ್ಲಿ ಹರ್ಷದ ರೇಖೆಯನ್ನು ಕಂಡರು. ಕಿಂಚಿತ್ತಾದರೂ ನೆಮ್ಮದಿಯ ಉಸಿರೆಳೆದು ಶಾಂತಿ ಕಂಡರು, ದಲಿತರ, ಆದಿವಾಸಿಗಳ, ಹರಿಜನರ ಯುವ ಪೀಳಿಗೆ ಶಿಕ್ಷಣ ಪಡದು ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮ ಪಡಿಸಿಕೊಳ್ಳುವಂತಾಯಿತು,

ಕೃತಜ್ಞತೆ ತುಂಬಿದ ಜನ ರಾಷ್ಟ್ರಾದ್ಯಂತ ಬಾಪಾ ಅವರ ಜನ್ಮ ದಿನಾಚರಣೆ ಆಚರಿಸಿ ಅವರ ಬಗೆಗೆ ಹಾಡಿ, ಹರಸಿ, ಆ ಪುಣ್ಯಜೀವಿಗೆ ದೀರ್ಘಾಯುಷ್ಯ ಸಲ್ಲಲೆಂದು ಭಗವಂತನಲ್ಲಿ ಮೊರೆ ಇಟ್ಟರು. ಒಮ್ಮೆ ಗೋಖಲೆಯವರು ನುಡಿದಿದ್ದ ಈ ಮಾತು ಸತ್ಯವಾಗಿತ್ತು. ಠಕ್ಕರ್ ಅವರಂಥ  ವ್ಯಕ್ತಿಗಳೇ ಭಾರತ ಸೇವಕರ ಸಂಘದ ಕೀರ್ತಿಯನ್ನು ಹರಡಬಲ್ಲರು ಎಂದು ನನ್ನ ನಂಬಿಕೆ. ಅವರು ಯೋಗ್ಯ, ಶ್ರಮನಿಷ್ಠೆ, ಉತ್ಸಾಹೀ ವ್ಯಕ್ತಿಯಷ್ಟೇ ಅಲ್ಲ; ಒಳ್ಳೆಯ ವಿಚಾರವಂತರು; ನಿಸ್ವಾರ್ಥಿಯೂ ಹೌದು.

ಮಹಾತ್ಮಗಾಂಧೀಜಿ ಹೀಗೆ ನುಡಿದಿದ್ದರು : ’ಠಕ್ಕರ್ ಬಾಪಾ ಒಬ್ಬ ವಿನಮ್ರ ಲೋಕಸೇವಕ. ಅವರು ಪ್ರಶಂಸೆಗಳಿಂದ ಹಿಗ್ಗಿ ಹೋಗುವುದಿಲ್ಲ. ಅವರು ಕೈಗೊಂಡ ಕಾರ್ಯವೇ ಅವರಿಗೆ ಏಕಮಾತ್ರ ಆತ್ಮ ಸಂತೋಷ ಮತ್ತು ಪುರಸ್ಕಾರ. ವೃದ್ದಾಪ್ಯದಲ್ಲಿಯೂ ಅವರ ಉತ್ಸಾಹ ಕುಗ್ಗಿಲ್ಲ; ಅವರೇ ಒಂದು ಸ್ವತಂತ್ರ ಸಂಸ್ಥೆ.’

ಈ ಈರ್ವರು ಮಹಾ ನಾಯಕರು ಬಾಪಾ ಅವರ ವ್ಯಕ್ತಿತ್ವವನ್ನು ಚೆನ್ನಾಗಿ ಅರಿತಿದ್ದರು: ಅವರ ಬಗೆಗೆ ಇಟ್ಟಿದ್ದ ನಂಬಿಕೆ, ಭರವಸೆ ವಾಸ್ತವವಾದವು.

ಸೇವೆಯ ಯಾತ್ರೆ ಮುಗಿಯಿತು

ಬದುಕು ಹಣ್ಣಾಗಿ, ಕಾಯ ಕುಗ್ಗಿದರೂ ಬಾಪಾ ಅವರ ಕಾರ್ಯೋತ್ಸಾಹ ಇಳಿಮುಖವಾಗಲಿಲ್ಲ. ಅವರದು ಅಖಂಡ ತಪಸ್ಸಾಗಿತ್ತು. ಆದರೂ ಕಾಲನ ಆಕ್ರಮಣ ಬರದೇ ಇದ್ದೀತೇ? ಅವರಿಗೆ ಒಂದೆರಡು ಸಲ ಹೃದಯದ ರೋಗ ಕಾಣಿಸಿಕೊಂಡಿತು. ಆರೋಗ್ಯ ತಪ್ಪಿತು.

೧೯೫೦ರ ಮಧ್ಯಭಾಗದಲ್ಲಿ ಅವರು ತಮ್ಮ ಹುಟ್ಟೂರು ಭಾವನಗರಕ್ಕೆ ಕೆಲವು ಕಾಲ ಹೋಗಿ ಬಂದರು. ಆಗಾಗ ಜ್ವರ ಬರುತ್ತಿತ್ತು. ಹೃದಯಕ್ಕೆ ಲಘು ಆಘಾತವಾಯಿತು. ಅವರು ಪ್ರವಾಸ ಮಾಡಲು ಆಶಕ್ತರಾದರು. ಇಷ್ಟಾದರೂ ಸ್ವಲ್ಪ ಚೇತನಗೊಂಡರೆ ಸಾಕು, ಯಾವುದಾದರೂ ಸ್ಥಳೀಯ ಸಂಸ್ಥೆಗೆ ಹೋಗಿ ಅಲ್ಲಿನ ವ್ಯವಸ್ಥೆಯ ಬಗೆಗೆ ಸಲಹೆ, ಸೂಚನೆಗಳನ್ನು ಕೊಟ್ಟು ಬರುತ್ತಿದ್ದರು.

ಇದೇ ಸಮಯದಲ್ಲಿ ಅಸ್ಸಾಂ ಪ್ರಾಂತದಲ್ಲಿ ಭೂಕಂಪವಾಯಿತು. ಇದರ ವಾರ್ತೆ ಕೇಳಿದ ಬಾಪಾಗೆ ಅತ್ಯಂತ ದುಃಖವಾಯಿತು. ಅವರು ತಮ್ಮ ಐದು ಮಂದಿ ಸಹ ಕಾರ್ಯಕರ್ತರನ್ನು ಅಲ್ಲಿಗೆ ಕಳಿಸಿ, ಅಸ್ಸಾಂ ಸರ್ಕಾರ ಕೈಗೊಂಡ ಪರಿಹಾರ ಕಾರ್ಯದಲ್ಲಿ ನೆರವನ್ನು ನೀಡುವಂತೆ ಮಾಡಿದರು. ಅವರು ದೈಹಿಕವಾಗಿ ಎಷ್ಟೇ ನಿಶ್ಯಕ್ತರಾದರೂ ತಮ್ಮ ಕಾರ್ಯಕರ್ತರ, ಅವರ ಮಕ್ಕಳ ಮತ್ತು ಹಲವಾರು ಸಂಸ್ಥೆಗಳಲ್ಲಿ ಹಾಗೂ ಆಶ್ರಮಗಳಲ್ಲಿ, ದಲಿತ ವರ್ಗಗಳವರ ವಿದ್ಯಾರ್ಥಿ ನಿಲಯಗಳಲ್ಲಿ ಇದ್ದ ಬಾಲಕರ ಯೋಗಕ್ಷೇಮವನ್ನು ಕಳಕಳಿಯಿಂದ ವಿಚಾರಿಸುತ್ತಿದ್ದರು.

ಬಾಪೂ ಜೊತೆಗೆ - ಹಿಂದು ಮುಸ್ಲಿಂ ಐಕಮತ್ಯಕ್ಕಾಗಿ

೧೯೫೧ರ ಜನವರಿ ೧೯ರ ಶುಕ್ರವಾರ ಭಾರತೀಯ ಸುಪುತ್ರರಲ್ಲೊಬ್ಬರಾದ ಠಕ್ಕರ್ ಬಾಪಾ ತಮ್ಮ ಇಹದ ಕೊನೆಯ ಉಸಿರನ್ನು ಎಳೆದರು. ಮಾನವ ಸೇವೆಯಲ್ಲಿ ಪೂತವಾದ ಜೀವ ಭಗವಂತನ ಸಾನ್ನಿಧ್ಯ ಸೇರಿತು. ಇಂಥವರು ಜನಿಸುವುದು ಯುಗಕ್ಕೊಮ್ಮೆ ; ತಾವು ಕೃತಾರ್ಥರಾಗಿ ಲೋಕವನ್ನು ಅಷ್ಟಿಷ್ಟು ಹದಗೊಳಿಸಿ, ’ಚಿರಂಜೀವಿಗಳು’ ಎನ್ನಿಸಿಕೊಳ್ಳುವವರು.

ಬಾಪಾ ಬದುಕಿನ ಅಂತಿಮ ಕಂಡ ದಿನ, ’ಇಂದು ವಾರ ಯಾವುದು? ಎಂದು ಪಕ್ಕದಲ್ಲಿ ಇದ್ದವರನ್ನು ಪ್ರಶ್ನಿಸಿದರಂತೆ. ಅದು ಶುಕ್ರವಾರ ಎಂದು ಕೇಳಿ ಅವರ ವದನದಲ್ಲಿ ಮಂದಹಾಸ ಸುಳಿದಾಡಿದಂತೆ. ಏಕೋ!

ಶುಕ್ರವಾರದಂದೇ ಗೋಪಾಲಕೃಷ್ಣ ಗೋಖಲೆ, ಬಾಪು ಮತ್ತು ಸರದಾರ್ ವಲ್ಲಭಭಾಯಿ ಪಟೇಲ್ ಇವರೆಲ್ಲ ಪರಮ ಪಾದ ಸೇರಿದುದು. ಅದೇ ವಾರದ ದಿನ ಪುಣ್ಯಜೀವಿ. ಬಾಪಾ ಅವರೂ ಪಾರ್ಥಿವ ಶರೀರ ತ್ಯಜಿಸಿದುದು ಅಚ್ಚರಿಯಲ್ಲವೇ?