(ಕ್ರಿ. ಶ. ೧೮೬೦-೧೯೩೦)
(ಪ್ಲೇಗ್ ಮತ್ತು ಕಾಲರಾ ವ್ಯಾಕ್ಸೀನುಗಳು)

ಡಬ್ಲ್ಯೂ. ಎಮ್. ಹಾಫ್ಕಿನ್ ಮಾರ್ಚ್ ೧೬, ೧೮೬೦ರಂದು ಸೋವಿಯತ್ ಒಕ್ಕೂಟದಲ್ಲಿ ಕಪ್ಪು ಸಮುದ್ರ ತೀರ ಒದೆಸ್ಸಾ ನಗರದಲ್ಲಿ ಜನಿಸಿದರು. ತಮ್ಮ ನಗರದಲ್ಲಿಯೇ ವಿದ್ಯಾಭ್ಯಾಸ ಮಾಡಿ ೧೮೮೪ರಲ್ಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ೧೮೮೪ರಲ್ಲಿ ಸ್ವಿತ್ಸರ್ಲೆಂಡಿನ ಜಿನೀವಾ ವಿಶ್ವವಿದ್ಯಾಲಯದ ಸ್ವಿಸ್ ಮೆಡಿಕಲ್ ಸ್ಕೂಲಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಉದ್ಯೋಗಕ್ಕೆ ಸೇರಿದರು. ಈತ ಫ್ರೆಂಚ್ ವಿಜ್ಞಾನಿ ಲೂಯಿ ಪಾಶ್ಚರ್ ಅವರ ಶಿಷ್ಯ.
ಹಾಫ್ಕಿನ್ ಪ್ಯಾರಿಸ್ಸಿಗೆ ಹೋಗಿ ಅಲ್ಲಿ ಪಾಶ್ಚರ್ ರ ಸಂಶೋಧನಾ ಸಂಸ್ಥೆಯಲ್ಲಿ ಕಾಲರಾ ವಿರುದ್ಧ ರಕ್ಷಣೆ ನೀಡಬಲ್ಲ ವ್ಯಾಕ್ಸೀನು ತಯಾರಿಸುವ ಸಂಶೋಧನಾ ಕಾರ್ಯದಲ್ಲಿ ತೊಡಗಿದರು. ಕೊನೆಗೂ ಕಾಲರಾ ವ್ಯಾಕ್ಸೀನನ್ನು ತಯಾರಿಸಿದ ಆತ ಪ್ರಾಣಿಗಳ ಮೇಲೆ ಅದರ ಯಶಸ್ವಿ ಪ್ರಯೋಗಗಳನ್ನು ಮಾಡಿದರು.
ಭಾರತದಲ್ಲಿ ಕಾಲರಾ ರೋಗದಿಂದ ಸಾಯುತ್ತಿದ್ದ ಜನರ ಸಂಖ್ಯೆ ಅಧಿಕವಾಗಿತ್ತು. ಈ ಮಾರಕ ರೋಗದ ವಿರುದ್ಧ ಜನರಿಗೆ ರಕ್ಷಣೆ ನೀಡುವ ಉದ್ಧೇಶದಿಂದ ಆತ ಕಲ್ಕತ್ತಾಕ್ಕೆ ಆಗಮಿಸಿದರು. ವಾಯುವ್ಯ ಸರಹದ್ ಪ್ರಾಂತ ಮತ್ತು ಪಂಜಾಬ್ ಗಳಲ್ಲಿ ಸಂಚಾರ ಮಾಡಿ ಕಾಲರಾ ವ್ಯಾಕ್ಸೀನ್ ಚುಚ್ಚುವ ಮೂಲಕ ಸಾವಿರಾರು ಜನರನ್ನು ಆ ಮಾರಕ ರೋಗದಿಂದ ಕಾಪಾಡಿದರು.
ಭಾರತಕ್ಕೆ ಅವರು ಎರಡನೆಯ ಬಾರಿಗೆ ಭೇಟಿಯ ಕಾಲಕ್ಕೆ ಮುಂಬೈಯಲ್ಲಿ ಭಯಂಕರವಾದ ಪ್ಲೇಗ್ ರೋಗ ಕಾಣಿಸಿಕೊಂಡಿತು. ಆಗ ಪ್ಲೇಗ್ ಗೆ ಅಸಂಖ್ಯಾತ ಜನ ಬಲಿಯಾದರು. ಈ ಮಾರಕ ರೋಗದ ವಿರುದ್ಧ ಸೂಕ್ತ ಚಿಕಿತ್ಸೆಯನ್ನು ಕಂಡು ಹಿಡಿಯುವ ಜವಾಬ್ಧಾರಿಯನ್ನು ಭಾರತ ಸರಕಾರ ಹಾಫ್ಕಿನ್ ರಿಗೆ ವಹಿಸಿಕೊಟ್ಟಿತು. ಅವರು ಪರಿಣಾಮಕಾರಿ ಪ್ಲೇಗ್ ವ್ಯಾಕ್ಸೀನು ತಯಾರಿಸುವುದರಲ್ಲಿ ಸಫಲರಾದರು.
ಇಂದು ಪ್ಲೇಗ್ ಸಂಪೂರ್ಣವಾಗಿ ನಿರ್ಮೂಲವಾಗಿದ್ದರೆ ಖ್ಯಾತಿ ಮೂಲತಃ ಹಾಫ್ಕಿನ್ ರಿಗೆ ಸಲ್ಲುತ್ತದೆ.
ಡಬ್ಯ್ಲೂ. ಎಮ್. ಹಾಫ್ಕಿನ್ ಅಕ್ಟೋಬರ್ ೧೬, ೧೯೩೦ರಂದು ಫ್ರಾನ್ಸಿನ ಲಾಸೇನ್ ನಲ್ಲಿ ಮೃತಪಟ್ಟರು.