Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ।। ಸಿದ್ದಲಿಂಗಯ್ಯ ಸ್ವಾಮಿ ಸೊಪ್ಪಿ ಹಿರೇಮಠ

ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಶ್ರಮಿಸಿದ ಹಿರಿಯ ಸಾಮಾಜಿಕ ಧುರೀಣರು ಹಾಗೂ ಶಿಕ್ಷಣ ತಜ್ಞರು ಡಾ|| ಸಿದ್ದಲಿಂಗಯ್ಯಸ್ವಾಮಿ ಸೊಪ್ಪಿ ಹಿರೇಮಠ ಅವರು.
* ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಾಲಕೆರೆಯಲ್ಲಿ ೧೯೩೩ರಲ್ಲಿ ಜನಿಸಿದ ಡಾ. ಸಿದ್ಧಲಿಂಗಯ್ಯಸ್ವಾಮಿ ಸೊಪ್ಪಿ ಹಿರೇಮಠ ಅವರು ಹುಬ್ಬಳ್ಳಿಯಲ್ಲಿ ವೈದ್ಯವಿಶಾರದ ಪದವಿ ಪಡೆದು ಆಯುರ್ವೇದ ವೈದ್ಯಪದ್ಧತಿಯನ್ನು ವೃತ್ತಿಯನ್ನಾಗಿಸಿಕೊಂಡರು.
ನರೇಗಲ್ಲಿನ ಶ್ರೀ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅನ್ನದಾನೇಶ್ವರ ಕಿವುಡ, ಮೂಗರ ಶಾಲೆಯ ಅಧ್ಯಕ್ಷರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ.
ಶಿಕ್ಷಣ ಕ್ಷೇತ್ರದೊಂದಿಗೆ, ಸಹಕಾರ, ಕೃಷಿ, ವೈದ್ಯಕೀಯ ಕ್ಷೇತ್ರಗಳಲ್ಲಿಯೂ ಅಪಾರ ಸೇವೆ ಸಲ್ಲಿಸಿರುವ ಡಾ. ಸಿದ್ಧಲಿಂಗಯ್ಯಸ್ವಾಮಿ ಸೊಪ್ಪಿ ಹಿರೇಮಠ ಅವರು ಸಿದ್ಧನಕೊಳ್ಳದ ಅಜ್ಜರೆಂದು ಹೆಸರುವಾಸಿಯಾದ ತಪಸ್ವಿ ಮನೆತನದವರು. ದೀನದಲಿತರು, ಅಲ್ಪಸಂಖ್ಯಾತರ ಏಳಿಗೆಗೆ ಶ್ರಮಿಸುತ್ತಿರುವ ಶ್ರೀಯುತರು ಬಡಕುಟುಂಬಗಳಿಗೆ ಉಚಿತ ಚಿಕಿತ್ಸೆ, ಮಕ್ಕಳ ರೋಗನಿವಾರಣೆಗೆ ಆದ್ಯತೆ, ಉಚಿತ ನೇತ್ರ ಚಿಕಿತ್ಸಾ ಶಿಬಿರ, ರೈತರ ಸಮಾವೇಶ ಮೊದಲಾದ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ.
ಹಾಲಕೆರೆ ಗ್ರಾಮ ಪಂಚಾಯಿತಿ ನಿರ್ದೇಶಕರಾಗಿ, ಹೊಳೆ ಆಲೂರು ಎ.ಪಿ.ಎಂ.ಸಿ. ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ ದೊಡ್ಡ ಪ್ರಮಾಣದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಹೀಗೆ ಸಹಕಾರಿ ರಂಗದಲ್ಲಿ ಮೂವತ್ತೆರಡು ವರ್ಷಗಳು ಅಧ್ಯಕ್ಷರಾಗಿ ಜನಪ್ರೀತಿ, ಗೌರವಕ್ಕೆ ಪಾತ್ರರಾದ ಡಾ. ಸಿದ್ದಲಿಂಗಯ್ಯಸ್ವಾಮಿ ಸೊಪ್ಪಿ ಹಿರೇಮಠ ಅವರು ಹಾಲಕೆರೆ ಸಹಕಾರಿ ಸಂಘವನ್ನು ದಕ್ಷ ಆಡಳಿತ ಸೇವಾ ಸೌಲಭ್ಯದ ಮೂಲಕ ಬೃಹತ್ ಸಂಸ್ಥೆಯಾಗಿ ಬೆಳಸಿದ ಕೀರ್ತಿಗೆ ಭಾಜನರು.
ವೃತ್ತಿಯ ಅನುಭವವನ್ನು ತಮಗೆ ಪ್ರಿಯವಾದ ಶೈಕ್ಷಣಿಕ ಕ್ಷೇತ್ರದಲ್ಲಿ ಬಳಸಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿರುವವರು ಡಾ|| ಸಿದ್ದಲಿಂಗಯ್ಯ ಸ್ವಾಮಿ ಸೊಪ್ಪಿ ಹಿರೇಮಠ ಅವರು.