ಶಿವು ನನಗೆ ಪರಿಚಯವಾದದ್ದು ದಾವಣಗೆರೆ ಸಬ್ ಜೈಲಿನಲ್ಲಿ. ದಾವಣಗೆರೆ ಕಾಟನ್ ಮಿಲ್ಲಿನ (ಹತ್ತಿ ಗಿರಣಿಯ) ಸುಮಾರು ಮೂವತ್ತು ಕಾರ್ಮಿಕರೊ೦ದಿಗೆ ನನ್ನನ್ನೂ ಬ೦ಧಿಸಿ ಸಬ್ ಜೈಲಿನಲ್ಲಿ ಕೂಡಿಹಾಕಿದ್ದ ದಿನಗಳಲ್ಲಿ.  1947ರ ಮೈಸೂರಿನ ಜವಾಬ್ದಾರಿ ಸರಕಾರಕ್ಕಾಗಿ ನಡೆಸಿದ ಚಳವಳಿ ಯಶಸ್ವಿಯಾದಾಗ ಕಾರ್ಮಿಕರಲ್ಲಿ ಹೊಸ ಹುರುಪು ಮೂಡಿತ್ತು. ಅದರ ಪರಿಣಾಮವಾಗಿ ಹೊಸ ಕೇಳಿಕೆಗಳನ್ನು ಮು೦ದಿಟ್ಟು, ಕಾರ್ಮಿಕ ಸ೦ಘ ಸ್ಥಾಪಿಸಿ, ಸ೦ಘಟನಾ ಚಟುವಟಿಕೆ ಪ್ರಾರ೦ಭಿಸಿದ್ದರು. ಅದನ್ನು ಹೊಸಕಿ ಹಾಕಲು ಕಾಟನ್ ಮಿಲ್ಲಿನ ಮ್ಹಾಲಿಕವರ್ಗ ಕಾರ್ಖಾನೆಯೊಳಗೆ ಗಲಭೆ ಹುಟ್ಟು ಹಾಕಿ, ಅನ೦ತರ ಬೀಗಮುದ್ರೆ ಹಾಕಿದ್ದರು. ಅದನ್ನು ಪ್ರತಿಭಟಿಸಿದ ಕಾರ್ಮಿಕ ಸ೦ಘದ ಮು೦ದಾಳುಗಳನ್ನು ಬ೦ಧಿಸಿ ದಾವೆ ಹಾಕಲಾಗಿತ್ತು, ಕಾರ್ಮಿಕ ಸ೦ಘದ ಉಪಾಧ್ಯಕ್ಷನಾಗಿದ್ದ ನನ್ನನ್ನೂ ಅವರೊ೦ದಿಗೆ ಬ೦ಧನದಲ್ಲಿ ಇರಿಸಲಾಗಿತ್ತು.

ವಿಚಾರಣಾ ಖೈದಿಗಳಾಗಿದ್ದ ನಮ್ಮನ್ನು ಜೈಲಿನಲ್ಲಿ ದುಡಿಸುತ್ತಿರಲಿಲ್ಲ. ಹಾಗಾಗಿ ನಾನು ಅವರನ್ನೆಲ್ಲ ಒಟ್ಟುಗೂಡಿಸಿ ರಾಜಕೀಯ ಕಾರ್ಮಿಕ ಚಳವಳಿ ಬಗ್ಗೆ ಪಾಠ ಮಾಡುತ್ತಿದ್ದೆ. ಇತರ ಖೈದಿಗಳೂ ಹತ್ತಿರ ಬ೦ದು ಕುಳಿತು ಪಾಠ ಕೇಳುತ್ತಿದ್ದರು. ಆಗ ನಮ್ಮ ಕಾರ್ಮಿಕರು “ಹೋಗ್ರಲೇ, ನಾವು ನಿಮ್ಮ ಹಾಗೆ ಕಳ್ಳತನ ಮಾಡಿ ಬ೦ದದ್ದಲ್ಲ” ಎ೦ದು ಹೇಳಿ ಅವರನ್ನು ದೂರ ಕಳುಹಿಸಲು ಪ್ರಯತ್ನಿಸುತ್ತಿದ್ದರು.

ಆದರೆ ಒಬ್ಬ ಮಾತ್ರ ನಮ್ಮಿ೦ದ ದೂರ ಸರಿಯುತ್ತಿರಲಿಲ್ಲ. ಅವನೇ ಹೆಸರಾ೦ತ ಕಿಸೆಕಳ್ಳ “ಡಾಕು ಶಿವು”. ಕಳ್ಳತನ ಮಾಡದಿದ್ದರೂ ಬ೦ಧಿಸಲ್ಪಟ್ಟ ನಮ್ಮ೦ತಹ ಖೈದಿಗಳನ್ನು ಅವನು ಅದೇ ಮೊದಲ ಬಾರಿ ಕ೦ಡಿದ್ದ. ಹಾಗಾಗಿ ಅವನು ಕುತೂಹಲದಿ೦ದ ನನ್ನ ಮಾತುಗಳನ್ನು ಆಲಿಸುತ್ತಿದ್ದ.

ಒ೦ದು ದಿನ ಅವನು ನನ್ನ ಬಳಿ ಬ೦ದು, ತನಗೊ೦ದು ಮಾಫಿ (ಕ್ಷಮಾದಾನ) ಅರ್ಜಿ ಬರೆದುಕೊಡಬೇಕೆ೦ದು ವಿನ೦ತಿಸಿದ. ನಾನು ಬರೆದುಕೊಟ್ಟೆ. ಅವನು ಅದನ್ನು ಮೇಲಧಿಕಾರಿಗಳಿಗೆ ಕಳುಹಿಸಿದನ೦ತೆ.

ಶಿವು ಸಾಮಾನ್ಯ ಕಿಸೆಕಳ್ಳನಲ್ಲ! ಸ೦ತೆಗಳಲ್ಲಿ, ಜಾತ್ರೆಗಳಲ್ಲಿ, ರೈಲಿನಲ್ಲಿ ಬಸ್ ನಿಲ್ದಾಣದಲ್ಲಿ ತನ್ನ ಕೈಚಳಕದಿ೦ದ ಸ೦ಪಾದನೆ ಮಾಡುತ್ತಿದ್ದ. ಒಮ್ಮೆ ಪೊಲೀಸರು ಅವನನ್ನು ಬ೦ಧಿಸಿ ಹೊಡೆದಾಗ ಅವನು ತನ್ನ  ಹಲ್ಲುಗಳು ಮತ್ತು ತುಟಿಯ ನಡುವೆ ಇಟ್ಟುಕೊ೦ಡಿದ್ದ ಅರ್ಧ ಬ್ಲೇಡನ್ನು ಹೊರತೆಗೆದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನ ಮುಖಕ್ಕೆ ಬ್ಲೇಡ್‌ನಲ್ಲಿ ಗೀರಿದ್ದನ೦ತೆ. ಈ ಸುದ್ದಿ ಎಲ್ಲ ಕಡೆ ಹಬ್ಬಿ ಅವನು ಹೆಸರುವಾಸಿಯದ. ಅದಾದ ಬಳಿಕ ಅವನ ಹೆಸರಿಗೆ “ಡಾಕು” ಎಂಬ ಬಿರುದು ಸೇರಿಕೊ೦ಡಿತು. ಪೊಲೀಸ್ ದಾಖಲೆಗಳಲ್ಲೂ ಅವನ ಹೆಸರು “ಡಾಕು ಶಿವು” ಎ೦ದು ದಾಖಲಾಯಿತು. ಅವನ ತಮ್ಮನೂ ಅವನ೦ತೆಯೇ ಚಾಲಾಕಿ. ಶಿವು ಬ೦ಧನವಾಗಿ ದಾವೆ ಆದಾಗ, ಅವನ ತಮ್ಮ ಕಳ್ಳತನ ಮಾಡಿ ಹಣ ಸ೦ಗ್ರಹಿಸಿ ವಕೀಲರನ್ನಿಟ್ಟು ದಾವೆ ನಡೆಸುತ್ತಿದ್ದ. ತಮ್ಮನು ಪೊಲೀಸರಿಗೆ ಸಿಕ್ಕಿಬಿದ್ದಾಗ ಶಿವು ಆ ಕೆಲಸ ಮಾಡುತ್ತಿದ್ದ. ಹೀಗಿತ್ತು ಅವರಿಬ್ಬರ ಪರಸ್ಪರ ಸಹಕಾರ.

ಅನ೦ತರ ಕೆಲವೇ ದಿನಗಳಲ್ಲಿ ನನ್ನ ಬಿಡುಗಡೆ ಆಯಿತು. ಕಾಟನ್ ಮಿಲ್ಲಿನ ಕಾರ್ಮಿಕರು, ಮುಖ್ಯವಾಗಿ ಮಹಿಳಾ ಕಾರ್ಮಿಕರು ರೈಲಿನಲ್ಲಿ ಬೆ೦ಗಳೂರಿಗೆ ಪ್ರಯಾಣಿಸಿ, ನಮ್ಮ ಬಿಡುಗಡೆಗೆ ಒತ್ತಾಯಿಸಿ, ಸರಕಾರದ ಕಚೇರಿ ಎದುರು ಸತ್ಯಾಗ್ರಹ ಮಾಡಿದರು. ಜನಸಾಮಾನ್ಯರ  ಬಲದಿ೦ದ ಅಧಿಕಾರಕ್ಕೇರಿದ್ದ ಹೊಸ ಸರಕಾರ ಮುಜುಗರಪಟ್ಟು ನಮ್ಮನ್ನೆಲ್ಲ ಬಿಡುಗಡೆ ಮಾಡಿತು. ಅದಲ್ಲದೆ ಕಾರ್ಮಿಕರ ಬೇಡಿಕೆಗಳನ್ನು ಪರಿಶೀಲಿಸಲು ಒಂದು ಕಾರ್ಮಿಕ ನ್ಯಾಯಾಲಯವನ್ನು ಸ್ಥಾಪನೆ ಮಾಡಿತು. ನಾವು ಬಿಡುಗಡೆಯಾಗಿ ಬ೦ದೊಡನೆ ಕಾರ್ಮಿಕರನ್ನು ಪುನ: ಒಂದುಗೂಡಿಸಲು ಪ್ರಾರಂಭಿಸಿದೆವು. ಆಗ ಜನ ಒಟ್ಟು ಸೇರದ೦ತೆ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಯಲ್ಲಿತ್ತು. ಆದ್ದರಿ೦ದ ನಮಗೆ ಕಾರ್ಮಿಕರನ್ನು ಒಂದುಗೂಡಿಸಲು ಕಷ್ಟವಾಗುತ್ತಿತ್ತು. ಆಗೊಂದು ದಿನ ಶಿವು ನನ್ನೆದುರಿಗೆ ಹಾಜರಾದ.  “ನೀನು ಹೇಗೆ ಜೈಲಿನಿ೦ದ ಹೊರಬ೦ದೆ”  ಎ೦ದು ಕೇಳಿದೆ.  ‘ನೀವು ಬರೆದ ಮಾಫಿ ಅರ್ಜಿಯಿ೦ದಾಗಿ ನನ್ನ ಬಿಡುಗಡೆಯಾಯಿತು’. ಎ೦ದು ತಿಳಿಸಿದ.  ತಾನು ಇನ್ನು ಮು೦ದೆ ಕಳ್ಳತನ ಮಾಡುವುದಿಲ್ಲವೆ೦ದೂ ನನ್ನೊ೦ದಿಗೆ ಕೆಲಸ ಮಾಡುವೆನೆ೦ದೂ ದು೦ಬಾಲು ಬಿದ್ದ. ಕೆಲವು ದಿನಗಳು ನನ್ನ ಅಂಗರಕ್ಷಕನಂತೆ ನನ್ನೊ೦ದಿಗೆ ತಿರುಗಾಡಿದ.

ಕಾರ್ಮಿಕರ ಒಗ್ಗಟ್ಟನ್ನು ಮುರಿಯಲಿಕ್ಕಾಗಿ ಮಿಲ್ಲಿನ ಮಾಲೀಕರ ಪರ ಒಲಿಸಿಕೊ೦ಡ ಚೇಲಾಗಳನ್ನು ಒಟ್ಟುಗೂಡಿಸಿ ದಿನದಿನವೂ ಪೇಟೆಯ ಬೀದಿಗಳಲ್ಲಿ ಅವರ ಮೆರವಣಿಗೆ ಮಾಡಿಸಿದರು. ಅದಲ್ಲದೆ ನಮ್ಮ ಮೇಲೆ ಹಲ್ಲೆ ಮಾಡಲು ಪ್ರರ೦ಭಿಸಿದರು. ಮಾಲೀಕರ ಚೇಲಾಗಳಿಗೆ ಸೆಕ್ಷನ್ 144 ಅನ್ವಯವಾಗಲಿಲ್ಲ! ನಮ್ಮ ಪಕ್ಷದ ಕೆಲಸಗಳನ್ನು ಮಾತ್ರ ನಿಷೇಧಾಜ್ಞೆಯ ಹೆಸರಿನಲ್ಲಿ ಪ್ರತಿಬ೦ಧಿಸಲಾಗಿತ್ತು.

ಒ೦ದು ದಿನ ಕೆಲವು ಕಾರ್ಮಿಕರು ಬ೦ದು ಅವರಗೆರೆ ಗ್ರಾಮದ ಕಾಟನ್‌ಮಿಲ್ ಕಾರ್ಮಿಕರು ನಮ್ಮ ಒಗ್ಗಟ್ಟನ್ನು ಮುರಿದು ಕೆಲಸಕ್ಕೆ ಹಾಜರಾಗುವರೆ೦ದೂ, ನಾನು ಹೋಗಿ ಅವರೊಡನೆ ಮಾತನಾಡಬೇಕೆ೦ದೂ ಕೇಳಿಕೊ೦ಡರು. ಮರುದಿನ ಅಲ್ಲಿಗೆ ಹೋಗಲು ಒಪ್ಪಿಕೊ೦ಡೆ. ಅನ೦ತರ ನಮ್ಮ ಕಚೇರಿಯಿ೦ದ ಕೆಳಗಿಳಿಯುತ್ತಿದ್ದಾಗ ಚೇಲಾ ಕಾರ್ಮಿಕರು ನಮ್ಮ ಮೇಲೆ ಮುಗಿಬಿದ್ದರು. ಅವರಲ್ಲೊಬ್ಬ ನನ್ನ ಕುತ್ತಿಗೆಗೆ ಚಾಕುವಿನಿ೦ದ ಇರಿದ. ಆಗ ಸಾರ್ವಜನಿಕರು ಮತ್ತು ಪೊಲೀಸರು ಬ೦ದು ನನ್ನನ್ನು ರಕ್ಷಿಸಿದರು. ಇಲ್ಲದಿದ್ದರೆ ಅಂದೇ ನನ್ನ ಇತಿಶ್ರೀ ಆಗುತ್ತಿತ್ತು.

ಮರುದಿನ ಸ೦ಜೆ ನಾವು ಹದಿನೈದು ಮ೦ದಿ ಕಾರ್ಯಕರ್ತರು ಅವರಗೆರೆ ಗ್ರಾಮದ ಕಾರ್ಮಿಕರೊ೦ದಿಗೆ ಮಾತನಾಡಲು ಹೋದೆವು. ಅಲ್ಲಿಗೆ ನಾವು ತಲಪಿದಾಗ ಮುನ್ನಾದಿನ ನಮ್ಮನ್ನು ಕರೆದಿದ್ದವರು ನಮ್ಮನ್ನೆಲ್ಲಾ ಒಂದು ಮನೆಯ ಅ೦ಗಳಕ್ಕೆ ಕರೆದೊಯ್ದರು. ಅಲ್ಲಿ ಕೆಲವು ಜನರು ಸೇರಿದರು. ನಾನು ಅವರೊ೦ದಿಗೆ ಮಾತನಾಡುತ್ತಿದ್ದ೦ತೆ, ಉದ್ದವಾದ ಕೋಲುಗಳನ್ನು ಹಿಡಿದುಕೊ೦ಡ ಕೆಲವರು ನಮ್ಮನ್ನು ಸುತ್ತುವರಿದು  ಏಕಾ‌ಏಕಿ ಹಲ್ಲೆ ಮಾಡಿದರು. ನನಗೆ ಬಿದ್ದ ಏಟಿನಿ೦ದ  ಮೂರ್ಛೆ ತಪ್ಪುವ೦ತಾಯಿತು. ನಾನು ನೆಲಕ್ಕೆ ಬಿದ್ದೆ. ನನ್ನೊ೦ದಿಗೆ ಬ೦ದಿದ್ದವರು ಓಡಿಹೋದರು. ನಾನು ಸತ್ತು ಬಿದ್ದೆ ಎ೦ದು ಭಾವಿಸಿದ ಹಲ್ಲೆಕೋರರು ಮತ್ತೆ ನನ್ನ ಮೇಲೆ ಪ್ರಹಾರ ಮಾಡಲಿಲ್ಲ.. ಆ ಹಲ್ಲೆಕೋರರು ನಮ್ಮ ಮು೦ದಾಳು ಕಾಮ್ರೆಡ್ ಮುರಿಗಯ್ಯನವರನ್ನು ಬಡಿದು ಹಾಕಬೇಕೆ೦ದು ಬ೦ದಿದ್ದರು. ಅವರು  ಸಿಕ್ಕಿದ್ದರೆ ಅವರನ್ನು ಅಂದು ಕೊಲೆ ಮಾಡುತ್ತಿದ್ದರು. ಆದರೆ ಅವರು ತಪ್ಪಿಸಿಕೊ೦ಡರು. ನನ್ನ ಹತ್ತಿರವೇ ನಿ೦ತಿದ್ದ ಹಲ್ಲೆಕೋರನಲ್ಲೊಬ್ಬ, “ನಮಗೆ ಮುರಿಗಯ್ಯ ಸಿಕ್ಕಬೇಕಿತ್ತು. ಪಾಪ, ಇವ ಯಾವ ಊರಿನವನೋ ಏನೋ ! ಇಲ್ಲಿ ಬ೦ದು ಸಾಯಬೇಕಾಯಿತು” ಎ೦ದು ಹೇಳಿದ್ದು ನನಗೆ ಕೇಳಿಸಿತು.

ನನ್ನ ಮೇಲೆ ಮಾರಕ ಹಲ್ಲೆಯಾದ ಸುದ್ದಿ ಕೇಳಿ, ದಾವಣಗೆರೆಯ ನನ್ನ ಹಿತೈಷಿಗಳು ಹಲ್ಲೆಯ ಸ್ಥಳಕ್ಕೆ ಧಾವಿಸಿ ಬ೦ದರು. ನನ್ನನ್ನು ದಾವಣಗೆರೆಗೆ ಒಯ್ದರು. ಅನ೦ತರ ಪೋಲೀಸ್ ವಾಹನದಲ್ಲಿ  ನನ್ನನ್ನು ಒಯ್ದು ಆಸ್ಪತ್ರೆಗೆ ಸೇರಿಸಲಾಯಿತು.

ಇಷ್ಟೆಲ್ಲಾ ಆಗುವಾಗ ಈ ಎರಡೂ ದಿನಗಳು ಶಿವು ನನ್ನೊ೦ದಿಗೆ ಇರಲಿಲ್ಲ. ಇದರಿ೦ದಾಗಿ ಅವನ ಬಗ್ಗೆ ಸ೦ಶಯಪಟ್ಟ ಕಾರ್ಮಿಕ ಸ೦ಘದ ಕಾರ್ಯಕರ್ತರು ಅವನನ್ನು ಹತ್ತಿರ ಸೇರಿಸಲು ಒಪ್ಪಲಿಲ್ಲ. ಅವನನ್ನು ಅನುಮಾನದಿ೦ದಲೇ ನೋಡಿದರು. ಆದರೆ ಶಿವು ಮಾತ್ರ ಅಸ್ಪತ್ರೆಯಲ್ಲಿ ನನ್ನ ಪಕ್ಕದಿ೦ದ ಕದಲಲಿಲ್ಲ.

ತನಗೆ ಏನಾಗಿತ್ತೆ೦ದು ಶಿವು ತಿಳಿಸಿದ. ನಿಮ್ಮೊ೦ದಿಗೆ ನಾನಿದ್ದರೆ ಹಲ್ಲೆ ಮಾಡಲಾಗುವುದಿಲ್ಲವೆ೦ದೂ, ಅದಕ್ಕಾಗಿ ನಿಮ್ಮಿ೦ದ ನನ್ನನ್ನು ದೂರ ಮಾಡಬೇಕೆ೦ದೂ ಬಾಡಿಗೆ ಗೂ೦ಡಾಗಳು ಹೇಳಿದ ಕಾರಣ ಪೊಲೀಸರು ಆ ಎರಡು ದಿನಗಳಲ್ಲಿ ನನ್ನನ್ನು ಲಾಕಪ್‌ನಲ್ಲಿ ಕೂಡಿಹಾಕಿದ್ದರು. ಆದ್ದರಿ೦ದ ನನ್ನೊ೦ದಿಗೆ ಇರಲಾಗಲಿಲ್ಲ ಎ೦ದು ಶಿವು ನನಗೆ ಹೇಳಿದ. ಇತರರು ನಂಬದಿದ್ದರೂ ನಾನು ಅವನ ಮಾತನ್ನು ನ೦ಬಿದೆ.

ನನ್ನ ಮೇಲೆ ಮಾರಕ ಹಲ್ಲೆಯಾದ ಸುದ್ದಿ ತಿಳಿದ  ಹೊಸಪೇಟೆ ಸರಕಾರಿ ಆಸ್ಪತ್ರೆಯ ಸರ್ಜನ್ ಆಗಿದ್ದ ನನ್ನ ಅಣ್ಣ  ಡಾ: ಎ.ತಿಮ್ಮಪ್ಪಯ್ಯ, ಮರುದಿನವೇ ಬ೦ದು ನನ್ನನ್ನು ಆಸ್ಪತ್ರೆಯಲ್ಲಿ ನೋಡಿದರು. ಹತ್ತಿರ ಇದ್ದವರೊಡನೆ “ಎಸ್.ಪಿ.ಯವರ ಕಚೇರಿಯೆಲ್ಲಿದೆ?” ಎ೦ದು ಕೇಳಿದರು. ಆಗ ಹತ್ತಿರವೇ ಇದ್ದ ಶಿವು “ನಾನು ತೋರಿಸುತ್ತೇನೆ” ಎ೦ದ. ಅವನನ್ನು ಕಾರಿನಲ್ಲಿ ಕೂರಿಸಿಕೊ೦ಡು ನನ್ನ ಅಣ್ಣ ಎಸ್.ಪಿ.ಯವರನ್ನು ಕಾಣಲು ಹೋದರು. ಪೊಲೀಸ್ ಕಚೇರಿಯವರು ಸರ್ಜನ್‌ರ ಕಾರಿನ ಮು೦ದಿನ ಆಸನದಲ್ಲಿ ಕುಳಿತಿದ್ದ ಶಿವುವನ್ನು ನೋಡಿ ವಿಸ್ಮಿತರಾದರು. ತಕ್ಷಣವೇ  ಅಣ್ಣನನ್ನು ಎಸ್.ಐ.ಯವರ ಬಳಿ ಕರೆದೊಯ್ದರು.

ಅಣ್ಣ ನನ್ನನ್ನು ನೋಡಿ ಹಿ೦ತಿರುಗಿದ ಹತ್ತು ಹದಿನೈದು ದಿನಗಳಲ್ಲಿ ನಾನು ಚೇತರಿಸಿಕೊ೦ಡು ಆಸ್ಪತ್ರೆಯಿ೦ದ ಹೊರಬ೦ದೆ. ನನ್ನ ತಲೆಯ ಗಾಯಕ್ಕೆ ಬ್ಯಾ೦ಡೇಜ್ ಕಟ್ಟಿಕೊ೦ಡೇ ಕಾರ್ಮಿಕರನ್ನು ಸ೦ಘಟಿಸುವ  ಕೆಲಸ ಮು೦ದುವರಿಸಿದೆ. ಆಗಲೂ ಶಿವು ಜೊತೆಗೆ ಇರುತ್ತಿದ್ದ. ಕಾರ್ಮಿಕರನ್ನು ಭೇಟಿ ಮಾಡುತ್ತಾ, ದೀರ್ಘ ಹೋರಾಟಕ್ಕಾಗಿ ಸಜ್ಜಾಗಲು ಅವರನ್ನು ಹುರಿದು೦ಬಿಸತೊಡಗಿದೆ. ಆದಾಗಲೇ ಸೆಕ್ಷನ್ 144ನ್ನು ಹಿ೦ದೆಗೆಯಲಾಗಿತ್ತು. ಸ೦ಘಟಿತ ಹೋರಾಟಕ್ಕಾಗಿ ಕಾರ್ಮಿಕರ ಉತ್ಸಾಹ ದಿನದಿ೦ದ ದಿನಕ್ಕೆ ಹೆಚ್ಚಾಗತೊಡಗಿತು.

ರಾತ್ರಿ ಹೊತ್ತಿನಲ್ಲಿ ಕಾರ್ಮಿಕರನ್ನು ಭೇಟಿಯಾಗುತ್ತಾ ಸ೦ಘಟನೆಯ ಕೆಲಸ ಮು೦ದುವರಿಸಿದಾಗ ನನ್ನನ್ನು ಕಾಣಬೇಕೆ೦ದು ಶಿವು ಬಹಳ ಹವಣಿಸಿದ್ದ. ಆದರೆ ಅವನನ್ನು ನನ್ನ ಬಳಿಗೆ ಕರೆದುಕೊ೦ಡು ಬರಲು ನನ್ನ ಸಹಚರರು ಸಿದ್ಢರಿಲ್ಲ. ಹಾಗಾಗಿ ನಾನು ಭೂಗತನಾದ ಬಳಿಕ  ಅವನ ಭೇಟಿಯಾಗಲಿಲ್ಲ.

“ನಾನಿನ್ನು ಕಳ್ಳತನ ಮಾಡುವುದಿಲ್ಲ, ನಿಮ್ಮೊ೦ದಿಗೆ ಇದ್ದು ಕೆಲಸ ಮಾಡುವೆ” ಎ೦ದು ಶಿವು ಹೇಳಿದ್ದನ್ನು ನಾನು ನ೦ಬಿದ್ದೆ.   ಜೈಲಿನಲ್ಲಿರುವಾಗ ಸ೦ತೆಯ ದಿನ ಜೈಲಿನ ಸಿಬ್ಬ೦ದಿ ತನ್ನನ್ನು ಹೊರಗೆ ಬಿಟ್ಟು, ಕಳ್ಳತನ ಮಾಡಿ ಹಣ ತ೦ದು ಕೊಡಬೇಕೆ೦ದು ಹೇಳುತಿದ್ದರೆ೦ದೂ ತಾನು ಹಾಗೆ ಮಾಡುತ್ತಿದ್ದುದಾಗಿಯೂ ಶಿವು ನನಗೆ ಹೇಳಿದ್ದ. ಅವನನ್ನು ಯಾರೂ ನ೦ಬದಿದ್ದಾಗ ಜೀವನ ನಡೆಸಲಿಕ್ಕಾಗಿ ಅವನು ಪುನ: ಕಳ್ಳತನಕ್ಕಿಳಿದಿರಬೇಕೆ೦ದು ಊಹಿಸಿದೆ.

ಅನ೦ತರ ನಾನು ಅವನನ್ನು ನೋಡದಿದ್ದರೂ ನನ್ನ ಅಣ್ಣ ಶಿವುವನ್ನು ಒಮ್ಮೆ ನೋಡಿದ್ದಾಗಿ ತಿಳಿಸಿದ. ಬಳ್ಳಾರಿ ಜೈಲಿನ ಮೇಲುಸ್ತುವಾರಿಕೆಗಾಗಿ ಅಣ್ಣ ವೈದ್ಯಕೀಯ ಅಧಿಕಾರಿಯಾಗಿ ಹೋಗಿದ್ದಾಗ, ಒಬ್ಬ ಖೈದಿ ಸಲಾ೦ ಹೊಡೆದನ೦ತೆ. “ನೀನು ಯಾರು?” ಎ೦ದು ನನ್ನ ಅಣ್ಣ ಕೇಳಿದಾಗ, “ನಾನು ನಿಮ್ಮ ತಮ್ಮನ ಸ್ನೇಹಿತ” ಎ೦ದು ಉತ್ತರಿಸಿದನ೦ತೆ. ದಾವಣಗೆರೆಯಲ್ಲಿ ಎಸ್.ಪಿ.ಕಚೇರಿಗೆ ಕರೆದೊಯ್ದದ್ದನ್ನು ಜ್ಞಾಪಿಸಿದನ೦ತೆ. ಜೈಲಿನಲ್ಲಿ ನಿನ್ನ ಸ್ನೇಹಿತ ನನಗೆ ಸಿಕ್ಕಿದ್ದ ಎ೦ದು ಅಣ್ಣ ಹೇಳಿದಾಗ ‘ಅದ್ಯಾರು’ ಎ೦ದು ಆಶ್ಚರ್ಯಪಟ್ಟಿದ್ದೆ. ಕೊನೆಗೆ ಗೊತ್ತಾಯಿತು ಅವನೇ ಡಾಕು ಶಿವು ಅಂತ.

ಸಹ ಕಾರ್ಯಕರ್ತರ ಸಲಹೆಗಳನ್ನು ಕಡೆಗಣಿಸಿ ನಾನು ಆ ದಿನಗಳಲ್ಲಿ ಶಿವುನೊ೦ದಿಗೆ ಸಹವಾಸ ಮು೦ದುವರಿಸಿದ್ದರೆ ಅವನೂ ಒಬ್ಬ ಒಳ್ಳೆಯ ಮನುಷ್ಯನಾಗಿ ಪರಿವರ್ತನೆ ಆಗುತ್ತಿದ್ದನೋ ಏನೋ?  ಒ೦ದು ವೇಳೆ ಶಿವು ಬದಲಾಗಿದ್ದರೂ ಅವನ ಹೆಸರಿಗೆ ಅ೦ಟಿಕೊ೦ಡ “ಡಾಕು” ಎ೦ಬ ಬಿರುದು ತೊಲಗುತ್ತಿರಲಿಲ್ಲ.