ಬ್ಯಾಕ್ಟೀರಿಯಾದಿಂದ  ಬರುವ  ಸೋಂಕುರೋಗಕ್ಕೆ ಜೀವಿರೋಧಕಗಳು  ಉತ್ತಮವಾದ  ಔಷಧಗಳಾಗಿವೆ. ದೇಹದಲ್ಲಿ ರೋಗವನ್ನುಂಟು ಮಾಡುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆದು, ಅವನ್ನು ಕೊಂದು, ರೋಗ ಹೆಚ್ಚದಂತೆ ಮತ್ತು ಗುಣವಾಗುವಂತೆ ಇವು ನೋಡಿಕೊಳ್ಳುತ್ತವೆ. ಸರಿಯಾಗಿ ಉಪಯೋಗಿಸಿದಾಗ ಅತ್ಯಂತ ಒಳ್ಳೆಯ ಮತ್ತು ಪರಿಣಾಮಕಾರಿ ಔಷಧಗಳಿವು.   ಅವುಗಳಲ್ಲಿ ಮುಖ್ಯವಾದವುಗಳು ಪೆನಿಸಿಲಿನ್, ಟೆಟ್ರಾಸೈಕ್ಲಿನ್ ಸ್ಟ್ರೆಪ್ಟೋಮೈಸಿನ್, ಎಮಾಕ್ಸಿಲಿನ್ ಮತ್ತು ಕ್ಲೋರಂಫೆನಿಕಾಲ್.

ವಿವಿಧ ಜೀವಿರೋಧಕಗಳು ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆಇವೆಲ್ಲವುಗಳ ಉಪಯೋಗದಲ್ಲೂ ಕೆಲವು ತೊಂದರೆಗಳು ಇದ್ದೇ ಇವೆಆದರೆ ಕೆಲವು ಉಳಿದವುಗಳಿಗಿಂತ ಹೆಚ್ಚು ತೊಂದರೆಯನ್ನು ಉಂಟುಮಾಡುತ್ತವೆಇವುಗಳನ್ನು ಆರಿಸಿ, ಉಪಯೋಗಿಸುವಾಗ  ಬಹಳ ಎಚ್ಚರಿಕೆ ವಹಿಸಬೇಕು.

ಜೀವಿರೋಧಕದ ಗುಂಪು (ನಿಜವಾದ ಹೆಸರು) ಉದಾಹರಣೆಗಳು (ಕಂಪನಿಯ ಹೆಸರು)  ಪುಟ ನೋಡಿ
೧. ಪೆನಿಸಿಲಿನ್ ಬೆಸ್ಟ್ ವಿನ್ ೩೯೩
೨. ಎಂಪಿಸಿಲಿನ್ ಆಲ್ಬರ್ ಸಿಲಿನ್, ರೋಸಿಲಿನ್ ೩೯೬
೩. ಟೆಟ್ರಾಸೈಕ್ಲಿನ್ ಟೆರ್ರಾಮೈಸಿನ್, ಹೊಸ್ಪಾ ಸೈಕ್ಲಿನ್ ೩೯೭
೪. ಸಲ್ಫೋನಮೈಡ್ ಸೆಪ್ಟ್ರಾನ್, ಬ್ಯಾಕ್ಟ್ರಿಂ,ಸಿಪ್ಲಿನ್ ೩೯೪
೫. ಸ್ಟ್ರೆಪ್ಟೋಮೈಸಿನ್ ಆಂಬಿಸ್ಟ್ರಿನ್ ೩೯೭
೬. ಕ್ಲೋರಂಫೆನಿಕಾಲ್ ಕ್ಲೋರೋಮೈಸಿಟಿನ್, ರೆಕ್ಲಾರ್ ೩೯೯
೭. ಎರಿಥ್ರೋಮೈಸಿನ್ ಎರಿಥ್ರೋಸಿನ್, ಆಲ್ಥ್ರೋಸಿನ್ ೩೯೭

* ವಿ.ಸೂ. ಎಂಪಿಸಿಲಿನ್ ಎಂಬುದು ಅನೇಕ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ ಒಂದು ವಿಶೇಷ ಪೆನಿಸಿಲಿನ್.

ಪ್ರತಿಯೊಂದು ಔಷಧಕ್ಕೆ ಮೂಲ ಹೆಸರು (ಜನೆರಿಕ್ ನೇಮ್) ಮತ್ತು ಕಂಪನಿಯ ಹೆಸರು (ಬ್ರಾಂಡ್ ನೇಮ್) ಬೇರೆ ಬೇರೆಯವಿರುತ್ತವೆ.  ಔಷಧ ಖರೀದಿಸಿದ ನಂತರ ಆ ಔಷಧದ ಬಾಟಲು ಅಥವಾ ಸ್ಟ್ರಿಪ್ ಮೇಲೆ ನೋಡಿ.  ಉದಾ: ಮಾಕ್ಸ್  ಎಂಬ ಹೆಸರಿನ ಔಷಧದ ಸ್ಟ್ರಿಪ್‌ನ್ನು  ಓದಿ.   ಅತಿ ಸಣ್ಣ ಅಕ್ಷರದಲ್ಲಿ ಎಮಾಕ್ಸಿಸಿಲಿನ್ ಎಂದು ಬರೆದಿರುತ್ತದೆ.

ಕ್ಲೋರಂಫೆನಿಕಾಲ್ ಬಗ್ಗೆ ಹಸಿರು ಪುಟಗಳಲ್ಲಿ (೩೯೯ ನೇ ಪುಟ) ನೋಡಿ.  ಇದು ಬಲು ತೀವ್ರವಾದ ಕೆಲವೇ ರೋಗಗಳಿಗೆ ಉಪಯೋಗಿಸಬೇಕಾದ ಔಷಧವೆಂಬುದನ್ನು ತಿಳಿಯುವಿರಿ.  ನವಜಾತ ಶಿಶುಗಳಿಗಂತೂ ಇದನ್ನು ಕೊಡಲೇ ಬಾರದು.

ಯಾವುದೇ ಜೀವಿರೋಧಕ ಔಷಧವನ್ನು ಅದರ ಗುಂಪು ತಿಳಿಯದೆ ಅಥವಾ ಯಾವ ಕಾಯಿಲೆಗೆ ಉಪಯೋಗಿಸುವುದೆಂದು ಗೊತ್ತಿಲ್ಲದೆ ಮತ್ತು ಉಪಯೋಗಿಸುವಾಗ ಅದರ ಮುನ್ನೆಚ್ಚರಿಕೆ ಕ್ರಮಗಳು ತಿಳಿಯದಿರುವಾಗ ಅದನ್ನು ಉಪಯೋಗಿಸಲೇ ಬಾರದು.

ಜೀವಿರೋಧಕ ಔಷಧಗಳನ್ನು ಉಪಯೋಗಿಸುವ ಬಗೆ, ಪ್ರಮಾಣ, ಮುಂಜಾಗರೂಕತೆ, ಇವುಗಳನ್ನು ಹಸಿರು ಪುಟಗಳಲ್ಲಿ ವಿವರಿಸಲಾಗಿದೆ.

ಜೀವಿರೋಧಕಗಳನ್ನು ಉಪಯೋಗಿಸಲು ಕೆಲವು ಸಲಹೆಗಳು

೧. ಉಪಯೋಗಿಸುವ ವಿಧಾನ ಮತ್ತು ಯಾವ ಕಾಯಿಲೆಗೆ ಉಪಯೋಗಿಸಬಹುದು ಎಂದು ತಿಳಿಯದಿದ್ದಾಗ ಅದನ್ನು ಉಪಯೋಗಿಸಲೇಬಾರದು.

೨. ಆಯಾ ಸೋಂಕುರೋಗಕ್ಕೆ ಉಪಯೋಗಿಸಬಹುದೆಂದು ಹೇಳಿದ ಜೀವಿರೋಧಕವನ್ನೇ ಉಪಯೋಗಿಸಿ.

೩. ಜೀವಿರೋಧಕಗಳನ್ನು ಉಪಯೋಗಿಸುವಾಗ ಬರುವ ತೊಂದರೆ ಮತ್ತು ಅನುಸರಿಸಬೇಕಾದ ಮುನ್ನೆಚ್ಚರಿಕೆ ಇವುಗಳ ಬಗ್ಗೆ ತಿಳಿದಿರಬೇಕು (ಹಸಿರು ಪುಟUಳನ್ನು ನೋಡಿ.)

೪. ಜೀವಿರೋಧಕಗಳನ್ನು ಸರಿಪ್ರಮಾಣದಲ್ಲಿ ಉಪಯೋಗಿಸಬೇಕು.  ಹೆಚ್ಚಾಗಲೀ ಅಥವಾ ಕಡಿಮೆಯಾಗಲೀ ಕೊಡಬಾರದು.  ಈ ಪ್ರಮಾಣ ರೋಗಿಯ ಕಾಯಿಲೆ, ವಯಸ್ಸು ಮತ್ತು ತೂಕವನ್ನು ಅವಲಂಬಿಸಿರುತ್ತದೆ.

೫. ಈ ಔಷಧಗಳನ್ನು ಬಾಯಿಯ ಮೂಲಕವೇ ಕೊಡಬೇಕು. ಇಂಜೆಕ್ಷನ್ ಕೊಡಬಾರದು.  ಕಾಯಿಲೆ ತೀವ್ರವಾಗಿದ್ದಾಗ ಮಾತ್ರ ಇಂಜೆಕ್ಷನ್ ಕೊಡಬೇಕು.

೬. ಜೀವಿರೋಧಕಗಳನ್ನು ಕಾಯಿಲೆ ವಾಸಿಯಾಗುವವರೆಗೆ ಕೊಡಬೇಕು. ಅಥವಾ ಜ್ವರ ಮತ್ತು ನಂಜಿನ ಲಕ್ಷಣಗಳು ನಿಂತ ನಂತರ ಎರಡು ದಿನಗಳವರೆಗೆ ಕೊಡಬೇಕು. (ಕೆಲವು ಕಾಯಿಲೆಗಳಿಗೆ ಉದಾ: ಕ್ಷಯ ಮತ್ತು ಕುಷ್ಟರೋಗದಲ್ಲಿ ರೋಗಿ ಆರಾಮವಾದಂತೆ ಕಂಡರೂ ಕೆಲವು ತಿಂಗಳವರೆಗೆ, ಅಥವಾ ಒಮ್ಮೊಮ್ಮೆ ಕೆಲವು ವರ್ಷಗಳವರೆಗೆ ಔಷಧಿ ನುಂಗುತ್ತಿರಬೇಕಾಗುತ್ತದೆ.  ಪ್ರತಿ ರೋಗಕ್ಕೂ ಹೇಳಿರುವ ಸೂಚನೆಗಳನ್ನು ಪಾಲಿಸಬೇಕು.)

೭. ಅಕಸ್ಮಾತ್ ದೇಹದ ಮೇಲೆ ಕೆಂಪು ಗುಳ್ಳೆ ಬಂದರೆ, ಕಡಿತ, ನವೆ ಶುರುವಾದರೆ, ಉಸಿರಾಡಲು ಕಷ್ಟವಾದರೆ ಅಥವಾ ತೀವ್ರವಾದ ತೊಂದರೆಯಾದರೆ ಆ ಜೀವಿರೋಧಕವನ್ನು ನಿಲ್ಲಿಸಬೇಕು. ಮತ್ತು ಜೀವನ ಪೂರ್ತಿ ಅದನ್ನು ಅವರು ತೆಗೆದುಕೊಳ್ಳಬಾರದು.

. ಜೀವಿರೋಧಕಗಳನ್ನು ಅವುಗಳ ಅವಶ್ಯಕತೆ ತುಂಬಾ ಇರುವಾಗ ಮಾತ್ರ ತೆಗೆದುಕೊಳ್ಳಬೇಕು. ಅವುಗಳನ್ನು ಅತಿಯಾಗಿ ಉಪಯೋಗಿಸಿದರೆ ಅವಶ್ಯಕತೆಯಿದ್ದಾಗ ಏನೂ ಪ್ರಯೋಜನವಾಗದೆ ಇರಬಹುದು.

ಕೆಲವು ಜೀವಿರೋಧಕಗಳಿಗಾಗಿ ವಿಶೇಷ ಸಲಹೆಗಳು

೧. ಪೆನಿಸಿಲಿನ್, ಎಂಪಿಸಿಲಿನ್‌ಗಳನ್ನು ಕೊಡುವಾಗ ಅಡ್ರಿನಾಲಿನ್ ಇಂಜೆಕ್ಷನ್‌ನ್ನು  ಪಕ್ಕದಲ್ಲಿಯೇ ಇಟ್ಟುಕೊಳ್ಳಬೇಕು.  ಈ ಔಷಧಗಳು ರೋಗಿಗೆ ಹೊಂದಾಣಿಕೆ ಆಗದಿದ್ದರೆ (ಅಲರ್ಜಿ) ತೊಂದರೆಯಾದರೆ ಈ ಇಂಜೆಕ್ಷನ್ ಉಪಯೋಗಕ್ಕೆ ಬರುತ್ತದೆ.  (ಪುಟ ೯೪).

೨. ಪೆನಿಸಿಲಿನ್ ಅಲರ್ಜಿಯಾಗುವ ಜನರಿಗೆ ಬೇರೆ ಜೀವಿರೋಧಕಗಳನ್ನು ಉದಾ: ಎರಿಥ್ರೋಮೈಸಿನ್  ಉಪಯೋಗಿಸಬೇಕು. ( ೩೯೭ ನೇ ಪುಟ)

೩. ಚಿಕ್ಕ ಪುಟ್ಟ ನಂಜಿಗೆ ತೀವ್ರ ಸ್ವರೂಪದ ಜೀವಿರೋಧಕಗಳನ್ನು, ಉದಾ: ಕ್ಲೋರಂಫೆನಿಕಾಲ್, ಉಪಯೋಗಿಸಬಾರದು. ಇಂತಹ ಜಾಗದಲ್ಲಿ ಪೆನಿಸಿಲಿನ್ ಮತ್ತು ಇತರ ಮೊದಲ ಗುಂಪಿನ ಜೀವಿರೋಧಕಗಳನ್ನು ಉಪಯೋಗಿಸಬೇಕು. (೮೨ ನೇ ಪುಟ ನೋಡಿ.)

೪. ಕ್ಲೋರಂಫೆನಿಕಾಲ್‌ನ್ನು ಟೈಫಾಯಿಡ್‌ಗೆ ಮಾತ್ರ ಕೊಡಬೇಕು.  ಇದು ಅಪಾಯಕರವಾದ ಔಷಧವಾದ್ದರಿಂದ ಸಣ್ಣಪುಟ್ಟ ಕಾಯಿಲೆಗಳಿಗೆ ಕೊಡಬಾರದು.   ನವಜಾತ ಶಿಶುಗಳಿಗೆ ಎಂದೂ ಕೊಡಲೇಬಾರದು.

೫. ಕ್ಲೋರಂಫೆನಿಕಾಲ್ ಅಥವಾ ಟೆಟ್ರಾಸೈಕ್ಲಿನ್ ಇಂಜೆಕ್ಷನ್ ಕೊಡಲೇಬಾರದು.  ಬಾಯಿಯಿಂದ ಕೊಡುವ ಈ ಔಷಧಗಳ ಮಾತ್ರೆಗಳು ಇಂಜೆಕ್ಷನ್ನಿನಷ್ಟೇ ಕೆಲಸ ಮಾಡುತ್ತವೆ. ಅಲ್ಲದೇ ನೋವೂ ಸಹ ಇರುವುದಿಲ್ಲ. ಬೇರೆ ಯಾವ ತೊಂದರೆಯೂ ಇರುವುದಿಲ್ಲ.

೬. ಟೆಟ್ರಾಸೈಕ್ಲಿನ್‌ನ್ನು ಗರ್ಭಿಣಿ ಸ್ತ್ರೀಯರಿಗೆ ಮತ್ತು ಆರು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಕೊಡಬಾರದು (೩೯೮ ನೇ ಪುಟ ನೋಡಿ).

೭. ಸ್ಟ್ರೆಪ್ಟೋಮೈಸಿನ್ ಮತ್ತು ಅದರ ಮಿಶ್ರ ಔಷಧಗಳನ್ನು ಕ್ಷಯರೋಗ ಚಿಕಿತ್ಸೆಗೆ ಮಾತ್ರ ಉಪಯೋಗಿಸಬೇಕು.

೮. ಪೆನಿಸಿಲಿನ್ ಪೌಡರ್ ಅಥವಾ ಮುಲಾಮನ್ನು  ಗಾಯದ ಮೇಲೆ ಹಾಕಬೇಡಿ.  ಇದರಿಂದ ಆ ವ್ಯಕ್ತಿ ಪೆನಿಸಿಲಿನ್ ಗೆ ಅಲರ್ಜಿ ಬೆಳೆಸಿಕೊಳ್ಳಬಹುದು ಅಥವಾ ಪೆನಿಸಿಲಿನ್‌ಗೆ ಪ್ರತಿರೋಧವನ್ನೂ ಬೆಳೆಸಿಕೊಳ್ಳಬಹುದು.  ಈ ಔಷಧವನ್ನು ಮತ್ತೊಮ್ಮೆ ಉಪಯೋಗಿಸಿದಾಗ ಅದು ಕೆಲಸ ಮಾಡದೆ ಹೆಚ್ಚು ಬೆಲೆಯ ಬೇರೆ ಔಷಧಗಳನ್ನು ಸೇವಿಸಬೇಕಾದೀತು  (೩೯೪ ನೇ ಪುಟ).

ಜೀವಿರೋಧಕ ಕೆಲಸ ಮಾಡದಿದ್ದಾಗ ಏನು ಮಾಡಬೇಕು

ಸಾಮಾನ್ಯವಾಗಿ ಎಲ್ಲಾ ಸೋಂಕು ರೋಗಗಳಿಗೆ ಜೀವಿರೋಧಕಗಳ ಉಪಯೋಗದಿಂದ ಒಂದೆರಡು ದಿನಗಳಲ್ಲಿ ಗುಣ ಕಂಡುಬರುತ್ತದೆ.  ಯಾವುದೇ ಜೀವಿರೋಧಕ ಕಾಯಿಲೆಯನ್ನು ಗುಣಪಡಿಸದಿದ್ದರೆ;

೧. ಕಾಯಿಲೆಯ ಸ್ವರೂಪ ಬೇರೆಯಾಗಿರಬಹುದು.  ತಪ್ಪು ಔಷಧವನ್ನು  ಬಳಸುತ್ತಿರಬಹುದು. ಆದ್ದರಿಂದ ಕಾಯಿಲೆ ಯಾವುದೆಂದು ಸರಿಯಾಗಿ ಕಂಡುಹಿಡಿದು ಸರಿಯಾದ ಔಷಧ ಕೊಡಬೇಕು.

೨. ಜೀವಿರೋಧಕದ ಪ್ರಮಾಣ ತಪ್ಪಿರಬೇಕು. ಅದನ್ನು ಪರೀಕ್ಷಿಸಿ ಸರಿಪಡಿಸಿ.

೩. ಉಪಯೋಗಿಸಿದ ಜೀವಿರೋಧಕಕ್ಕೆ ರೋಗಾಣುಗಳು ಪ್ರತಿರೋಧ ಬೆಳೆಸಿಕೊಂಡಿರಬಹುದು.  (ರೋಗಾಣುಗಳಿಗೆ ಔಷಧ ಏನೂ ತೊಂದರೆ ಮಾಡಲಾರದ ಸ್ಥಿತಿಗೆ ಪ್ರತಿರೋಧ ಬೆಳೆಸಿಕೊಂಡಿರುವುದು ಎನ್ನುತ್ತಾರೆ.)

೪. ಆ ಕಾಯಿಲೆಯನ್ನು ಗುಣಪಡಿಸಲು ಬೇಕಾದ ಪರಿಣಿತಿ ನಿಮಗಿಲ್ಲದಿರಬಹುದು.  ಕೂಡಲೇ ಡಾಕ್ಟರರ ಸಲಹೆ ಪಡೆಯಿರಿ.

ಜೀವಿರೋಧಕವನ್ನು ಏಕೆ ಅತಿಯಾಗಿ ಬಳಸಬಾರದು

ಯಾವುದೇ ಔಷಧವನ್ನೂ ಅತಿಯಾಗಿ ಬಳಸಬಾರದು.  ಮುಖ್ಯವಾಗಿ ಜೀವಿರೋಧಕಗಳನ್ನು ಅತಿ ಕಡಿಮೆ ಬಳಸಬೇಕು. ಏಕೆಂದರೆ;

. ವಿಷಪೂರಿತ ಗುಣಗಳು ಹಾಗೂ ಅಲರ್ಜಿ ಮುಂತಾದ ತೊಂದರೆಗಳು

ಜೀವಿರೋಧಕಗಳು ರೋಗಾಣುಗಳನ್ನು ಕೊಲ್ಲುವುದಲ್ಲದೆ, ತಮ್ಮ ವಿಷದ ಗುಣಗಳಿಂದ ಹಾಗೂ ಅಲರ್ಜಿ ಉಂಟುಮಾಡಬಹುದಾದ್ದರಿಂದ ದೇಹಕ್ಕೂ ತೊಂದರೆ ಉಂಟುಮಾಡುತ್ತವೆ.  ಪ್ರತಿ ವರ್ಷ ಅನೇಕ ಜನರು ಅನಾವಶ್ಯಕವಾಗಿ ಜೀವಿರೋಧಕಗಳನ್ನು ಸೇವಿಸಿ ಸಾವನ್ನಪ್ಪುತ್ತಾರೆ.

. ದೇಹದ ಸೂಕ್ಷ್ಮಾಣುಗಳ ಸಮತೋಲನ  ತಪ್ಪುವುದು:

ನಮ್ಮ ದೇಹದಲ್ಲಿ ಅನೇಕ ತೆರನ ಬ್ಯಾಕ್ಟೀರಿಯಾಗಳಿವೆ. ಅವೆಲ್ಲವೂ ರೋಗಾಣುಗಳಲ್ಲ.  ದೇಹದ ವಿವಿಧ ಅಂಗಾಂಗಗಳು ಕೆಲಸ ಮಾಡಲು ಕೆಲವು ಬ್ಯಾಕ್ಟೀರಿಯಾಗಳ ಅವಶ್ಯಕತೆ ಇದೆ.  ಜೀವಿರೋಧಕಗಳು ರೋಗಾಣುಗಳನ್ನಲ್ಲದೆ, ಉಪಕಾರಿ ಬ್ಯಾಕ್ಟೀರಿಯಾಗಳನ್ನೂ ಸಾಯಿಸುತ್ತವೆ.  ಮಕ್ಕಳಿಗೆ  ಜೀವಿರೋಧಕಗಳನ್ನು ಕೊಡುವುದರಿಂದ ಬಾಯಿ ಮತ್ತು ಚರ್ಮದ ಮೇಲೆ ಹುಣ್ಣು ಮತ್ತು ಕಜ್ಜಿ ಉಂಟಾಗಬಹುದು (೨೮೬ ನೇ ಪುಟ ನೋಡಿ.) ಇದು ಹೇಗೆಂದರೆ: ಕಜ್ಜಿ ಮತ್ತು ಹುಣ್ಣುಗಳನ್ನುಂಟುಮಾಡುವ ಬೂಸ್ಟುಗಳನ್ನು ಕೆಲವು ಉಪಕಾರಿ ಬ್ಯಾಕ್ಟೀರಿಯಾಗಳು ತಡೆ ಹಿಡಿದಿರುತ್ತವೆ. ಈ ಬ್ಯಾಕ್ಟೀರಿಯಾಗಳನ್ನೇ ಜೀವಿರೋಧಕಗಳು ಕೊಂದುವೆಂದರೆ ಬೂಸ್ಟುಗಳು ಮೇಲೆದ್ದು ಬೆಳೆದು ಕಜ್ಜಿ ಉಂಟುಮಾಡುತ್ತವೆ.

. ಚಿಕಿತ್ಸೆಗೆ ಪ್ರತಿರೋಧ:

ಜೀವಿರೋಧಕಗಳನ್ನು ಬಹಳ ಉಪಯೋಗಿಸಿದಾಗ ಕಾಲ ಕಳೆದಂತೆ ಇವುಗಳ ಪ್ರಭಾವವೂ ಕಡಿಮೆಯಾಗುತ್ತದೆ. ಒಂದು ಜಾತಿಯ ರೋಗಾಣುಗಳನ್ನು ಒಂದೇ ಜೀವಿರೋಧಕದಿಂದ ಅನೇಕ ಬಾರಿ ಚಿಕಿತ್ಸೆ ಮಾಡಿದಾಗ ಆ ರೋಗಾಣುಗಳು ಪ್ರತಿರೋಧ ಬೆಳೆಸಿಕೊಂಡು ಬಲಿಷ್ಠವಾಗುತ್ತವೆ.  ಈ ಕಾರಣದಿಂದಲೇ ಟೈಫಾಯಿಡ್ ನಂತಹ ಭಯಂಕರ ಕಾಯಿಲೆಗಳನ್ನು ಕೆಲವು ವರ್ಷಗಳ ಹಿಂದೆ  ಚಿಕಿತ್ಸೆ ಮಾಡುತ್ತಿದ್ದಷ್ಟು ಪರಿಣಾಮಕಾರಿಯಾಗಿ ಈಗ ಮಾಡಲಿಕ್ಕೆ ಆಗುವುದಿಲ್ಲ.

ಅನೇಕ ಕಡೆಗಳಲ್ಲಿ ಟೈಫಾಯಿಡ್ ರೋಗಾಣುಗಳು ಅದರ ಮುಖ್ಯ ಔಷಧವಾದ ಕ್ಲೋರಂಫೆನಿಕಾಲ್‌ಗೆ  ಪ್ರತಿರೋಧವನ್ನು ಬೆಳೆಸಿಕೊಂಡಿವೆ.  ಸಣ್ಣ ಪುಟ್ಟ ಕಾಯಿಲೆಗಳಿಗೂ ಅತಿಯಾದ ಕ್ಲೋರಂಫೆನಿಕಾಲ್ ಬಳಕೆಯಿಂದ ಈ ಪರಿಸ್ಥಿತಿ ಉಂಟಾಗಿದೆ.  ಪ್ರಪಂಚದ ಎಲ್ಲಾ ಕಡೆ ಮುಖ್ಯವಾದ ಕಾಯಿಲೆಗಳು ಜೀವಿರೋಧಕಗಳಿಗೆ ಪ್ರತಿರೋಧವನ್ನು  ಬೆಳೆಸಿಕೊಳ್ಳುತ್ತಿವೆ.  ಇದಕ್ಕೆ ಮುಖ್ಯ ಕಾರಣ ಎಲ್ಲ ರೀತಿಯ ಜೀವಿರೋಧಕಗಳ ಅತಿಯಾದ ದುರ್ಬಳಕೆ.  ಇನ್ನೂ ಜೀವಿರೋಧಕಗಳು ಜನರ ಕಾಯಿಲೆಗಳನ್ನು ಗುಣಪಡಿಸಿ ಸಾವುಗಳನ್ನು ತಪ್ಪಿಸಬೇಕೆಂದರೆ ಅವುಗಳ ಬಳಕೆಯನ್ನು ಈಗಿನದಕ್ಕಿಂತ ಅತಿ ಕಡಿಮೆ ಮಾಡಲೇ ಬೇಕು.  ಇದು ಡಾಕ್ಟರರ, ಆರೋಗ್ಯ ಕಾರ್ಯಕರ್ತರ ಮತ್ತು ಜನಸಾಮಾನ್ಯರ ಸಹಕಾರವನ್ನು ಅವಲಂಬಿಸಿದೆ.

ಅನೇಕ ಸಣ್ಣ-ಪುಟ್ಟ ಕಾಯಿಲೆಗಳಿಗೆ ಜೀವಿರೋಧಕಗಳ ಅವಶ್ಯಕತೆಯೂ ಇಲ್ಲ.  ಕೊಡಲೂ ಬಾರದು.  ಚರ್ಮದ ಅನೇಕ ಕಾಯಿಲೆಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯುವುದರಿಂದ, ಬಿಸಿ ನೀರಿನ ಶಾಖದಿಂದ ಮತ್ತು ಜೆನ್‌ಶಿನ್ ವಯೋಲೆಟ್‌ನ್ನು ಹಚ್ಚುವುದರಿಂದ ವಾಸಿಮಾಡಬಹುದು (೪೧೭ ನೇ ಪುಟ ನೋಡಿ.)  ನೆಗಡಿ, ಕೆಮ್ಮುಗಳನ್ನು ಆದಷ್ಟು ಜಾಸ್ತಿ ದ್ರವ ಸೇವಿಸುವುದರಿಂದ, ಒಳ್ಳೆಯ ಆಹಾರ ಸೇವನೆಯಿಂದ ಮತ್ತು ವಿಶ್ರಾಂತಿಯಿಂದ ವಾಸಿ ಮಾಡಬಹುದು.  ಸಾಮಾನ್ಯವಾಗಿ ಭೇದಿಗೆ ಜೀವಿರೋಧಕಗಳ ಅವಶ್ಯಕತೆ ಇರುವದಿಲ್ಲ.  ಮತ್ತು ಇದರಿಂದ ಹಾನಿ ಕೂಡ ಆಗಬಹುದು.  ಹೆಚ್ಚು ಹೆಚ್ಚು ದ್ರವ ಸೇವನೆ (೧೯೬ ನೇ ಪುಟ) ಮತ್ತು ಒಳ್ಳೆಯ ಆಹಾರ ಸೇವನೆ ಅತಿ ಮಖ್ಯ.

ದೇಹವು ತಾನೇ ವಾಸಿ ಮಾಡುವಂಥ ಕಾಯಿಲೆಗೆ ಜೀವಿರೋಧಕಗಳನ್ನು ಕೊಡಬೇಡಿ.  ಅತ್ಯಂತ ಅವಶ್ಯಕ ಸಂದರ್ಭಗಳಿಗಾಗಿ ಅವನ್ನು ಉಳಿಸಿರಿ.

* * *