ರೋಗ ಬರುವುದು ಹೇಗೆ

ರೋಗಗಳಿಲ್ಲವೆಂದರೆ ಅದು ಆರೋಗ್ಯವೆನ್ನಲಾಗದು. ಬದಲಾಗಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಮತ್ತು ಸಾಮಾಜಿಕವಾಗಿ ಸಂಪೂರ್ಣವಾಗಿ ಚೆನ್ನಾಗಿರುವುದೇ ಆರೋಗ್ಯ.  ಇದು ಸಾಧಿತವಾಗಬೇಕೆಂದರೆ  ಪ್ರತಿಯೊಬ್ಬ ವ್ಯಕ್ತಿ ಮತ್ತು ಅವರ ಸುತ್ತಲಿನ ಪರಿಸರದ ಮಧ್ಯೆ ಒಂದು ರೀತಿಯ ಸಮತೋಲನವು ಸದಾ ಇರಬೇಕಾಗುತ್ತದೆ.

ಆರೋಗ್ಯವಂತ ವ್ಯಕ್ತಿ

ಅವರ ಪರಿಸರ

*  ರೋಗದ ವಿರುದ್ದ ಪ್ರತಿರೋಧ ಶಕ್ತಿ *  ಸ್ವಚ್ಛ ಆರೋಗ್ಯಕರ ವಾತಾವರಣ
*  ಪೌಷ್ಟಿಕ ಆಹಾರ *  ಸರಿಯಾದ ಪಾಯಖಾನೆಗಳು
* ನೈಸರ್ಗಿಕ ರೋಗ ಪ್ರತಿರೋಧ ಶಕ್ತಿ *  ಕಸದ ಸರಿಯಾದ  ನಿರ್ವಹಣೆ
* ಬೆಳೆಸಿಕೊಂಡ ರೋಗ ಪ್ರತಿರೋಧ ಶಕ್ತಿ *  ಕುಡಿಯುವ ಶುದ್ದ ನೀರು ಮುಂತಾದವು

ಈ ವಿಷಯಗಳಲ್ಲಿ ಯಾವುದೊಂದರ  ಅಸಮತೋಲನವುಂಟಾದರೂ ವ್ಯಕ್ತಿಗೆ ರೋಗ ಬರುತ್ತದೆ. ಹಾಗೆಯೇ ಬೇರೆ ಬೇರೆ ದೇಶಗಳ, ಬೇರೆ ಬೇರೆ ಹಿನ್ನೆಲೆಯಿಂದ ಬಂದವರ ದೃಷ್ಟಿಯಲ್ಲಿ ರೋಗಕ್ಕೆ ಕಾರಣಗಳು ಬೇರೆ ಬೇರೆಯವಿರುತ್ತವೆ.

ಒಂದು ಮಗುವಿಗೆ ಭೇದಿಯಾಗಿದೆ. ಅದಕ್ಕೆ ಕಾರಣವೇನು?

ಹಳ್ಳಿ ಜನರುಆ ಮಗುವಿನ ತಂದೆತಾಯಿಗಳು ಏನೋ ತಪ್ಪು ಮಾಡಿರಬೇಕು.   ಅಥವಾ ದೈವಕ್ಕೆ ಕೋಪ ಬರುವಂತೆ ಮಾಡಿರಬೇಕು.

ಡಾಕ್ಟರು :  ಮಗುವಿಗೆ ಏನೋ ಸಾಂಕ್ರಾಮಿಕ ರೋಗ ತಗುಲಿದೆ.

ಸಾರ್ವಜನಿಕ ಆರೋಗ್ಯಾಧಿಕಾರಿ :  ಊರಿನಲ್ಲಿ ಒಳ್ಳೆಯ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಅಥವಾ ಶೌಚಾಲಯಗಳಿಲ್ಲ.

ಸಮಾಜ ಸುಧಾರಕ : ಭೂಮಿ ಮತ್ತು ಸಂಪನ್ಮೂಲಗಳ ಹಂಚುವಿಕೆಯಲ್ಲಿ ಸಮಾನತೆ ಇಲ್ಲದಿರುವುದೇ ಮಗುವಿನ ಭೇದಿಗೆ ಕಾರಣ.

ಶಿಕ್ಷಕ  :   ಶಿಕ್ಷಣ  ಇಲ್ಲದಿರುವುದೇ ರೋಗಕ್ಕೆ ಮೂಲಕಾರಣವೆನ್ನಬಹುದು. ಹೀಗೆ ಪ್ರತಿಯೊಬ್ಬರೂ ತಂತಮ್ಮ ಅನುಭವ ಮತ್ತು ದೃಷ್ಟಿಕೋನಕ್ಕೆ ಅನುಗುಣವಾಗಿ ರೋಗದ ಮೂಲವನ್ನು ವಿಶ್ಲೇಷಿಸುತ್ತಾರೆ.   ಹಾಗಾದರೆ ಇವರಲ್ಲಿ ಯಾರು ಸರಿ ಇರಬಹುದು?  ಬಹುಶಃ ಇವರೆಲ್ಲ ಹೇಳುವುದರಲ್ಲೂ ಸ್ವಲ್ಪ ಅಂಶ ರೋಗಕ್ಕೆ ಕಾರಣ ಆಗಿರಬಹುದು.

ಯಾವುದೇ  ರೋಗ  ಅನೇಕ  ಕಾರಣಗಳ  ಮೂಲದಿಂದ ಬಂದಿರುತ್ತದೆ.

ಇಲ್ಲಿ ಮಗುವಿಗೆ ಭೇದಿಯಾಗಲು ಈ ಎಲ್ಲ ಕಾರಣಗಳೂ ಸ್ವಲ್ಪ ಸ್ವಲ್ಪ ಇರಬಹುದು.

ರೋಗವನ್ನು ತಡೆಯಲು ಮತ್ತು ಸಂಪೂರ್ಣವಾಗಿ ಗುಣಪಡಿಸಲು ಮೊದಲು ನಿಮ್ಮ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಕಾಣಿಸುವ ಎಲ್ಲ  ರೋಗಗಳ ಬಗ್ಗೆ, ಎಲ್ಲ ಕಾರಣಗಳ ಬಗ್ಗೆ ಸರಿಯಾದ ತಿಳುವಳಿಕೆ ಮಾಡಿಕೊಳ್ಳಿ.

ಈ ಪುಸ್ತಕದಲ್ಲಿ ಬೇರೆ ಬೇರೆ ರೋಗಗಳ ಬಗ್ಗೆ ಅವುಗಳ ಬಗ್ಗೆ ಸಮಾಜದಲ್ಲಿಯ ನಂಬಿಕೆಗಳ ಬಗ್ಗೆ ಮತ್ತು ಹೊಸ ಆಧುನಿಕ ಔಷಧಗಳ ಬಗ್ಗೆ ವಿವರಿಸಲಾಗಿದೆ.

ಪುಸ್ತಕದ ಸರಿಯಾದ ಉಪಯೋಗ ಮತ್ತು ಇದರಲ್ಲಿ ಹೇಳಿರುವ ಔಷಧಗಳ ಸರಿಯಾದ ಉಪಯೋಗ ಆಗಬೇಕೆಂದರೆ ಮೊದಲು ರೋಗದ ಬಗ್ಗೆ ಸರಿಯಾದ  ತಿಳುವಳಿಕೆ ಅಗತ್ಯ.   ಅದಕ್ಕೆ ಈ ಅಧ್ಯಾಯ ಓದಿ.

ಬೇರೆ ಬೇರೆ ರೀತಿಯ ರೋಗಗಳು ಮತ್ತು ಅವು ಬರುವ ಬಗೆ:

ಬೇರೆ ಬೇರೆ ರೀತಿಯ ರೋಗಗಳನ್ನು ತಡೆಯಬೇಕೆಂದರೆ ಅಥವಾ ಅವುಗಳಿಗೆ ಚಿಕಿತ್ಸೆ ಮಾಡಬೇಕೆಂದರೆ ಮೊದಲು ಅವುಗಳನ್ನು ಎರಡು ಗುಂಪುಗಳಲ್ಲಿ ವಿಭಾಗಿಸುವುದರಿಂದ ಹೆಚ್ಚು ಸುಲಭವಾಗುತ್ತದೆ.

ಸಾಂಕ್ರಾಮಿಕ ರೋಗಗಳು ೨) ಸಾಂಕ್ರಾಮಿಕವಲ್ಲದ ರೋಗಗಳು

 • ಸಾಂಕ್ರಾಮಿಕ ರೋಗಗಳು:  ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ರೋಗ, ಸಾಂಕ್ರಾಮಿಕ ರೋಗ.  ಸಾಂಕ್ರಾಮಿಕ ರೋಗ ಬಂದವರಿಂದ  ಆರೋಗ್ಯವಂತರನ್ನು ರಕ್ಷಿಸಬೇಕು.
 • ಸಾಂಕ್ರಾಮಿಕವಲ್ಲದ ರೋಗಗಳು:  ಇವು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಸಾಂಕ್ರಾಮಿಕವಲ್ಲದ ರೋಗಗಳು ಬೇರೆ ಬೇರೆ ಕಾರಣಗಳಿಂದಾಗಿ ಬರುತ್ತವೆ.  ಆದರೆ ಇವು ಎಂದಿಗೂ ಯಾವುದೇ ಸೂಕ್ಷ್ಮ ಜೀವಿಗಳಿಂದ  ಅಂದರೆ ವೈರಸ್, ಬ್ಯಾಕ್ಟೀರಿಯಾ, ಜಂತುಗಳಿಂದ ಬರುವುದಿಲ್ಲ. ಸೂಕ್ಷ್ಮ ಜೀವಿಗಳನ್ನು ಕೊಲ್ಲಲು ಬಳಸುವ ಜೀವಿರೋಧಕದಂಥ ಔಷಧಗಳಿಂದ ಈ ರೋಗಗಳನ್ನು ಗುಣಪಡಿಸಲು ಸಾಧ್ಯವಿಲ್ಲ ಎನ್ನುವುದನ್ನು ನಾವು ಮೊದಲು ಅರಿತುಕೊಳ್ಳಬೇಕು.
ನೆನಪಿಡಿ:ಸಾಂಕ್ರಾಮಿಕವಲ್ಲದ ರೋಗಗಳಿಗೆ ಜೀವಿರೋಧಕಗಳಿಂದ  ಪ್ರಯೋಜನವಿಲ್ಲ.

ಸಾಂಕ್ರಾಮಿಕ ಅಲ್ಲದ ರೋಗಗಳಿಗೆ ಉದಾಹರಣೆಗಳು:

ದೇಹದ ಒಳಗಡೆ ಅಂಗ ಸವೆಯುವುದರಿಂದ ಅಥವಾ ಮತ್ತೇನಾದರೂ ಆಗುವುದರಿಂದ ಉಂಟಾಗುವ ರೋಗಗಳು ಹೊರಗಡೆಯ ಯಾವುದೇ ವಸ್ತುವಿನಿಂದ ದೇಹಕ್ಕೆ ಅಪಾಯ ಆಗುವುದರಿಂದ  ಉಂಟಾಗುವ ರೋಗಗಳು ದೇಹಕ್ಕೆ ಅವಶ್ಯವಿರುವ ಯಾವುದೋ ಆಹಾರಾಂಶ ಸಿಗದೆ ಇರುವುದರಿಂದ ಬರುವ ರೋಗಗಳು
ಸಂದು ನೋವು (ಕೀಲು ನೋವು) ಅರೆತಲೆನೋವು, ಕಣ್ಣು ಪೊರೆ, ಹೃದಯಾಘಾತ, ಕ್ಯಾನ್ಸರ್, ಮಲರೋಗ,  ಲಕ್ವ            ಅಲರ್ಜಿ, ಅಸ್ತಮಾ, ವಿಷಪ್ರಾಶನ, ಹಾವಿನ ಕಡಿತ,  ಬೀಡಿ  ಸಿಗರೇಟುಗಳಿಂದ ಕೆಮ್ಮು, ಕರುಳಿನ ಹುಣ್ಣು, ಕುಡಿತದ  ದುಷ್ಪರಿಣಾಮಗಳು ಪೌಷ್ಟಿಕಾಂಶದ ಕೊರತೆ, ಪೆಲ್ಲಾಗ್ರಾ, ರಕ್ತ ಹೀನತೆ, ಗಳಗಂಡ
ಹುಟ್ಟಿನಿಂದ ಬರಬಹುದಾದ ಕಾಯಿಲೆಗಳು ಮಾನಸಿಕ ರೋಗಗಳು
ಹರಿದ ತುಟಿ  (ಮೊಲದ  ತುಟಿ), ಮೆಳ್ಳೆಗಣ್ಣು, ಕೆಲವು ಜಾತಿಯ ಮೂರ್ಛೆ ರೋಗಗಳು, ಬುದ್ದಿ ಮಾಂದ್ಯತೆ ಹುಟ್ಟು ಗುರುತುಗಳು     ಮನಸ್ಸಿನ ಕಲ್ಪನೆಯಿಂದ ಹುಟ್ಟುವ ಕಾಯಿಲೆಗಳು  (ಅವು ನಿರಪಾಯಕಾರಿಯಾಗಿದ್ದರೂ ಅಪಾಯ ಎಂಬ ಹೆದರಿಕೆ)  ನರದೌರ್ಬಲ್ಯ (ಉದ್ವೇಗ)  ಭೂತ ಪ್ರೇತಗಳ ನಂಬಿಕೆ ನಿಯಂತ್ರಿಸಲಾಗದ ಹೆದರಿಕೆ

ಸಾಂಕ್ರಾಮಿಕ ರೋಗಗಳು

ಬ್ಯಾಕ್ಟೀರಿಯಾ ಮತ್ತಿತರ ಸೂಕ್ಷ್ಮ ಜೀವಾಣುಗಳು ದೇಹಕ್ಕೆ ಹಾನಿಮಾಡಿ ತರುವ ರೋಗಕ್ಕೆ ಸಾಂಕ್ರಾಮಿಕ ರೋಗವೆನ್ನುತ್ತಾರೆ.  ಇವು ಅನೇಕ ರೀತಿಯಲ್ಲಿ ಹರಡುತ್ತವೆ.   ಈ ಮುಂದೆ ಕೆಲವು ಸಾಂಕ್ರಾಮಿಕ ರೋಗಗಳನ್ನು ತರುವ ರೋಗಾಣುಗಳ ಹೆಸರುಗಳನ್ನೂ,  ಅವು ತರುವ ರೋಗಗಳ ಹೆಸರುಗಳನ್ನೂ ಕೊಟ್ಟಿದೆ.

ಅತಿ ಚಿಕ್ಕ ವಸ್ತುಗಳನ್ನು ದೊಡ್ಡದು ಮಾಡಿ ತೋರಿಸುವ ಸಾಧನವೊಂದಿದೆ.  ಅದಕ್ಕೆ ಸೂಕ್ಷ್ಮದರ್ಶಕವೆನ್ನುತ್ತಾರೆ.  ಬರಿಗಣ್ಣಿಗೆ ಕಾಣದ ಬ್ಯಾಕ್ಟೀರಿಯಾಗಳನ್ನು ಇದರೊಳಗೆ ನೋಡಬಹುದು.  ಆದರೆ ವೈರಸ್ ಗಳು ಕಾಣುವುದಿಲ್ಲ.

(ಚಿತ್ರ ೭೮)

ಬ್ಯಾಕ್ಟೀರಿಯಾ ಸೋಂಕು ತಗುಲಿದರೆ  ಜೀವಿರೋಧಕ ಅದಕ್ಕೆ ಔಷಧ.  ಆದರೆ  ಜೀವಿರೋಧಕಗಳು ವೈರಸ್ ಗಳನ್ನು ಕೊಲ್ಲಲಾರವು.  ಕಾರಣ ವೈರಸ್‌ನಿಂದ ಬರುವ ರೋಗಗಳಿಗೆ ಜೀವಿರೋಧಕಗಳನ್ನು ಉಪಯೋಗಿಸಬೇಡಿ.

ಸಾಂಕ್ರಾಮಿಕ ರೋಗಗಳ ಉದಾಹರಣೆಗಳು: 

ರೋಗ ತರುವ ರೋಗಾಣುವಿನ ಹೆಸರು ರೋಗದ ಹೆಸರು ಹರಡುವ ರೀತಿ ಮುಖ್ಯ ಔಷಧ
ಬ್ಯಾಕ್ಟೀರಿಯಾ ಕ್ಷಯ, ಧನುರ್ವಾಯು, ಕೆಲವೊಂದು ಭೇದಿಗಳು, ನ್ಯುಮೋನಿಯಾ, ಪರಮಾ, ಸಿಫಿಲಿಸ್,, ಸೋಂಕು ತಗುಲಿದ ಗಾಯ, ಕೀವುಗಟ್ಟಿದ ಹುಣ್ಣು ಕೆಮ್ಮಿನಿಂದ, ಗಾಳಿಯಲ್ಲಿ, ಹೊಲಸು ಗಾಯ, ಹೊಲಸು ಉಗುರು, ನೀರು, ನೊಣ, ಕೆಮ್ಮಿನಿಂದ, ಗಾಳಿಯಲ್ಲಿ ಲೈಂಗಿಕ ಸಂಪರ್ಕ, ಸ್ವಚ್ಛವಿಲ್ಲದ ಗಾಯಕ್ಕೆ ತಗಲುವ ಹೊಲಸು, ಸ್ಪರ್ಶ ಸಂಪರ್ಕದಿಂದ ಬೇರೆ ಬೇರೆ ಬ್ಯಾಕ್ಟೀರಿಯ ಸೋಂಕಿಗೆ ಬೇರೆ ಬೇರೆ ಜೀವಿರೋಧಕಗಳು
ವೈರಸ್ (ಬ್ಯಾಕ್ಟೀರಿಯಾಗಿಂತ ಚಿಕ್ಕ ಸೂಕ್ಷ್ಮಾಣುಗಳು) ನೆಗಡಿ,  ಫ್ಲೂ,  ಧಡಾರ, ಮಂಗನಬಾವು, ಗಣಜಿಲೆ, ಶಿಶುಗಳಿಗೆ ತಗಲುವ  ಭೇದಿ, ರೇಬೀಸ್, ಚರ್ಮ ರೋಗ ರೋಗಿಗಳ ಸಂಪರ್ಕದಿಂದ, ಕೆಮ್ಮಿನಿಂದ, ಗಾಳಿಯಲ್ಲಿ ನೊಣಗಳಿಂದ ಹುಚ್ಚುನಾಯಿಯ ಕಡಿತ ಸ್ಪರ್ಶ ಸಂಪರ್ಕದಿಂದ ವೈರಸ್ಗಳನ್ನು ಕೊಲ್ಲುವ ಔಷಧವಿಲ್ಲ. ಆದರೆ ಅವು ತನ್ನಿಂದ ತಾನೆ ನಿವಾರಣೆಯಾಗುತ್ತವೆ.  ರೇಬೀಸ್ ಇಂಜೆಕ್ಷನ್ ತೆಗೆದುಕೊಳ್ಳುವ ಮೂಲಕ
ಬೂಸ್ಟು ಗಜಕರ್ಣ, ಅತ್ಲೆಟ್ಸ್ ಫುಟ್ (ಕಾಲಿನ ಬೆರಳುಗಳ ಸಂದಿಗೆ ತುರಿಕೆ) ಬಟ್ಟೆ ಮತ್ತು ಸ್ಪರ್ಶ ಸಂಪರ್ಕದಿಂದ ಸಲ್ಫರ್ ಮತ್ತು ವಿನೇಗರ್ ಮುಲಾಮುಗಳು,  ಬೆಂಝೋಯಿಕ್, ಸಾಲಿಸಿಲಿಕ್ ಆಸಿಡ್
ದೇಹದೊಳಗಿನ ಪರಪುಷ್ಟ ಜೀವಿಗಳು ಜೀರ್ಣನಾಳದಲಿ; ಜಂತು ಆಮಶಂಕೆ ರಕ್ತದಲ್ಲಿ; ಮಲೇರಿಯಾ ಆನೆಕಾಲು ರೋಗ ಸ್ವಚ್ಛತೆಯಿಲ್ಲದಿರುವುದು ಸೊಳ್ಳೆ ಕಡಿತ ಬೇರೆ ಬೇರೆ ಔಷಧಗಳು
ಕ್ಲೋರೋಕ್ವೀನ್
ಹೊರಗಿನ ಪರಪುಷ್ಟ ಜೀವಿಗಳು ಹೇನು, ತಗಣಿ, ಚಿಕ್ಕಾಡು, ಹುರುಕು ಕಜ್ಜಿ  ಸೋಂಕಾದವರ ಸಂಪರ್ಕ, ಅವರ ಬಟ್ಟೆಗಳ ಸಂಪರ್ಕ ಕೀಟ ನಾಶಕಗಳು, ಲಿಂಡೇನ್ 

ವಿಂಗಡಿಸಲು ಕಷ್ಟವಾಗುವ ಕೆಲವು ರೋಗಗಳು:

ಕೆಲವು ರೋಗಗಳಿವೆ.  ಅವು ನೋಡಲು ಒಂದೇ ರೀತಿ ಕಂಡರೂ ಕೂಡ ಅವುಗಳ ಮೂಲ ಬೇರೆ ಬೇರೆ ಇದ್ದು, ಚಿಕಿತ್ಸೆ ಕೂಡಾ ಬೇರೆ ಬೇರೆಯವಿರುತ್ತವೆ.

(ಚಿತ್ರ ೭೯)

. ಮಗುವೊಂದು ದಿನದಿನಕ್ಕೆ ಸೊರಗುತ್ತಿರುತ್ತದೆಹೊಟ್ಟೆ ಮಾತ್ರ ಎದ್ದು ಕಾಣುತ್ತದೆ. ಇದಕ್ಕೆ ಕಾರಣ ಕೆಳಗಿನವುಗಳಲ್ಲಿ ಯಾವುದಾದರೂ ಆಗಿರಬಹುದು.

 • ಪೌಷ್ಟಿಕ ಆಹಾರದ ಕೊರತೆ (೧೩೯ ನೇ ಪುಟ ನೋಡಿ).
 • ಹೊಟ್ಟೆಯಲ್ಲಿ ಬಹಳ ಜಂತು ಹುಳುಗಳಾಗಿರಬಹುದು (೨೦೩ ನೇ ಪುಟ). ಇದರ ಜೊತೆಗೆ ಪೌಷ್ಟಿಕ ಆಹಾರದ ಕೊರತೆಯೂ ಸೇರಿರಬಹುದು.
 • ತೀವ್ರ ಕ್ಷಯ  (೨೩೦ ನೇ ಪುಟ).
 • ಬಹಳ ದಿನಗಳಿಂದ ಮೂತ್ರಕೋಶದ ಸಾಂಕ್ರಾಮಿಕ ರೋಗ ಪೀಡಿತವಾಗಿರಬಹುದು.
 • ಪಿತ್ಥಕೋಶದ ಅಥವಾ ಗುಲ್ಮದ ಬೇರೆ ಬೇರೆ ಕಾಯಿಲೆಗಳು.
 • ಲ್ಯುಕೇಮಿಯಾ ಅಥವಾ ರಕ್ತದ ಕ್ಯಾನ್ಸರ್.

. ಮಧ್ಯವಯಸ್ಕನೊಬ್ಬನ ಹಿಂಗಾಲಿನಲ್ಲಿ ದಿನದಿಂದ ದಿನಕ್ಕೆ

ಬೆಳೆಯುತ್ತಿರುವ ದೊಡ್ಡದಾದ ತೆರೆದ ಹುಣ್ಣು

 • ಕಾಲಿನ ರಕ್ತನಾಳಗಳು ಉಬ್ಬಿ ಒಡೆದು ಅಥವಾ ಇನ್ನಿತರ ಕಾರಣಗಳಿಂದ ರಕ್ತಚಲನೆ ಸರಿಯಾಗಿಲ್ಲದಿರುವುದು. (೨೬೫ ನೇ ಪುಟ )
 • ಮಧುಮೇಹ ರೋಗ (೧೫೯ ನೇ ಪುಟ)
 • ಎಲುಬಿಗೆ ತಗುಲಿರುವ ಸಾಂಕ್ರಾಮಿಕ ರೋಗ
 • ಕುಷ್ಠ (೨೪೪ ನೇ ಪುಟ )
 • ಚರ್ಮದ ಕ್ಷಯ (೨೬೩ ನೇ ಪುಟ )
 • ಮುಂದುವರೆದ ಹಂತದಲ್ಲಿರುವ ಸಿಫಲಿಸ್ (೨೯೬ ನೇ ಪುಟ )

ಈ ಎಲ್ಲ ರೋಗಗಳಿಗೆ ಬೇರೆ ಬೇರೆ ರೀತಿಯ ಚಿಕಿತ್ಸೆಗಳಿವೆ.  ಆದ್ದರಿಂದ ಸರಿಯಾದ  ಚಿಕಿತ್ಸೆ ಮಾಡಬೇಕೆಂದರೆ ರೋಗ ಯಾವುದೆಂದು ಸರಿಯಾಗಿ ಪತ್ತೆ ಹಚ್ಚುವ ಅವಶ್ಯವಿದೆ. ಮೊದಲ ನೋಟಕ್ಕೆ ಇವೆಲ್ಲ ಒಂದೇ ರೀತಿ ಕಂಡರೂ ನೀವು ಸರಿಯಾದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರೆ ಮತ್ತು ಸೂಕ್ಷ್ಮ ಪರಿಶೀಲನೆಯಿಂದ ಯಾವ ರೋಗ ಅದು ಎಂದು ಸರಿಯಾಗಿ ಗುರುತಿಸಲು  ಸಾಧ್ಯವಿದೆ.

ಈ ಪುಸ್ತಕದಲ್ಲಿ ಕೆಲವು ರೋಗಗಳು ತೋರಿಸುವ ಸಾಮಾನ್ಯ ಸೂಚನೆಗಳು, ರೋಗಗಳ ಚರಿತ್ರೆಗಳ ಬಗ್ಗೆ ವಿವರಿಸಲಾಗಿದೆ.  ಆದರೂ ಎಚ್ಚರಿಕೆ:  ರೋಗ ಇದೇ ಚರಿತ್ರೆ, ಸೂಚನೆಗಳನ್ನು ತೋರಿಸದೆಯೂ ಇರಬಹುದು.  ಕೆಲವೊಮ್ಮೆ ದೇಹದ ಮೇಲೆ ಕಂಡುಬರುವ ಸೂಚನೆಗಳು ಗೊಂದಲಕ್ಕೀಡುಮಾಡಬಹುದು. ಅಂಥ ಕಷ್ಟಕರ ಪ್ರಸಂಗ ಬಂದರೆ ಆರೋಗ್ಯ ಕಾರ್ಯಕರ್ತ ಅಥವಾ ಡಾಕ್ಟರರನ್ನು ಕಂಡು ಸಮಸ್ಯೆ ಬಗೆಹರಿಸಿಕೊಳ್ಳಿ.   ಕೆಲವೊಮ್ಮೆ ವಿಶೇಷ ಪರೀಕ್ಷೆಗಳ ಅಗತ್ಯವೂ ಇರಬಹುದು.

ನಿಮ್ಮ ಸೀಮೆಯನ್ನು ಅರಿತು ಕೆಲಸ ಮಾಡಿರಿ. ನಿಮಗೆಲ್ಲ ಗೊತ್ತಿದೆ ಎಂಬಂತೆ ಎಂದೂ ನಟಿಸಬೇಡಿ. ಪುಸ್ತಕ ಉಪಯೋಗಿಸುವಾಗ ತಪ್ಪುಗಳಾಗಬಹುದು.   ನಿಮಗೆ ರೋಗದ ಬಗ್ಗೆ ಸ್ಪಷ್ಟ ಕಲ್ಪನೆ ಬಾರದೆ ಹೋದರೆ, ಅದರ ಚಿಕಿತ್ಸೆಯ ಬಗ್ಗೆ ಗೊಂದಲವಿದ್ದರೆಅಥವಾ ರೋಗ ನಿಮ್ಮ ಕೈಮೀರಿದ್ದರೆ ಕೂಡಲೇ  ವೈದ್ಯಕೀಯ ಸಹಾಯ ಕೋರಿ.

ಗೊಂದಲಕ್ಕೀಡುಮಾಡುವ ಮತ್ತು ಒಂದೇ ಹೆಸರಿನಲ್ಲಿರುವ ಕೆಲವು ರೋಗಗಳು

ರೋಗಗಳ ಬಗ್ಗೆ ಹೊಸ ಸಂಶೋಧನೆಗಳು, ಆಧುನಿಕ ಚಿಕಿತ್ಸೆಗಳು ಈಗ ಬಂದಿವೆಯಾದರೂ ರೋಗಗಳು ಮನುಷ್ಯನಷ್ಟೇ ಹಳೆಯವು.  ಹೀಗಾಗಿ ರೋಗಗಳಿಗೆ ಜನರು ಉಪಯೋಗಿಸುವ ಸಾಮಾನ್ಯ ಹೆಸರುಗಳು ಬಹಳ ಮುಂಚಿನಿಂದ ಬಂದಿವೆ.  ಸೂಕ್ಷ್ಮಜೀವಿ, ಬ್ಯಾಕ್ಟೀರಿಯಾ, ಮತ್ತು ಅವುಗಳನ್ನು ಕೊಲ್ಲುವ ಔಷಧಗಳ ಕಲ್ಪನೆ ಬಂದಿದ್ದು ಇತ್ತೀಚೆಗಷ್ಟೇ.  ಒಂದೇ ರೀತಿಯ ಸೂಚನೆಗಳಿಂದ ಪ್ರತ್ಯಕ್ಷವಾಗುವ ಕೆಲವು ರೋಗಗಳು ಒಂದೇ ಹೆಸರಿನಿಂದ ಕರೆಯಲ್ಪಡುತ್ತಿದ್ದವು.  ಜಗತ್ತಿನ ಅನೇಕ ಕಡೆ ಈ ಸಾಮಾನ್ಯ ಹೆಸರುಗಳು ಇಂದಿಗೂ ಬಳಕೆಯಾಗುತ್ತಿವೆ.  ಪೇಟೆಯಲ್ಲಿ ಕಲಿತು ಬಂದ ಡಾಕ್ಟರುಗಳಿಗೆ ಈ ಹಳೆ ಹೆಸರುಗಳ ಪರಿಚಯವಿರುವುದಿಲ್ಲ.  ಆದ್ದರಿಂದ ಜನರು ಇವುಗಳಿಗೆಲ್ಲ ಡಾಕ್ಟರರು ಔಷಧ ಕೊಡದ ರೋಗಗಳು ಎಂದೆನ್ನುತ್ತಾರೆ.  ಈ ರೋಗಗಳನ್ನು ಮನೆಯಲ್ಲೇ ನಾರು ಬೇರುಗಳ ಸಹಾಯದಿಂದ ಗುಣಪಡಿಸಲು ಪ್ರಂiತ್ನಿಸುತ್ತಾರೆ. ಹೆಚ್ಚಿನ ಈ ರೋಗ ಸೂಚನೆಗಳು ಡಾಕ್ಟರರಿಗೂ ಗೊತ್ತು.  ಆದರೆ ವೈದ್ಯಕೀಯ ಪುಸ್ತಕದಲ್ಲಿ ಅವುಗಳಿಗೆ ಬೇರೆ ಹೆಸರುಗಳೇ ಇವೆ.

ಅನೇಕ ರೋಗಗಳಿಗೆ ಮನೆವೈದ್ಯ ಚೆನ್ನಾಗಿ ಕೆಲಸ ಮಾಡುತ್ತವಾದರೂ ಇನ್ನು ಅನೇಕ ರೋಗಗಳಿಗೆ ಹೊಸ ಔಷಧಗಳೇ ಪರಿಣಾಮಕಾರಿಯಾಗಬಲ್ಲವುಅಲ್ಲದೇ ಜೀವ ಉಳಿಸುವಲ್ಲೂ ಅವು ಸಹಾಯಕವಾಗಿವೆ. ನ್ಯುಮೋನಿಯಾ, ಟೈಫಾಯಿಡ್, ಕ್ಷಯ ಮತ್ತು ಲೈಂಗಿಕ ಸಂಪರ್ಕದಿಂದ ಹರಡುವ ರೋಗಗಳು, ಮಗುವಿನ ಜನನದ ನಂತರ ಬರಬಹುದಾದ ರೋಗಗಳು ಇವುಗಳಿಗೆಲ್ಲ ಹೊಸ ಔಷಧಗಳೇ ಅತ್ಯುತ್ತಮ.

ಯಾವ ರೋಗಕ್ಕೆ ಹೊಸ ಔಷಧಗಳು ಬೇಕು ಮತ್ತು ಎಂಥ ಔಷಧಗಳನ್ನು ಉಪಯೋಗಿಸಬೇಕು ಎಂಬುದನ್ನು ತಿಳಿದುಕೊಳ್ಳಲು ಆ ರೋಗ ಈ  ಪುಸ್ತಕದಲ್ಲಿ ಹೆಸರಿಸಿದ ಯಾವ ಗುಂಪಿಗೆ ಸೇರುತ್ತದೆ ಎಂಬುದನ್ನೂ,  ಆರೋಗ್ಯ ಕಾರ್ಯಕರ್ತರು ಏನನ್ನುತ್ತಾರೆ ಎಂಬುದನ್ನೂ ತಿಳಿದುಕೊಳ್ಳುವುದು ಅತೀ ಮುಖ್ಯ.  ರೋಗ ತೀವ್ರವಾಗಿದ್ದರೆ ಅಥವಾ ಅದರ ಬಗ್ಗೆ ಇನ್ನೂ ನಿಮಗೆ ಗೊಂದಲವಿದ್ದರೆ ವೈದ್ಯಕೀಯ ಸಹಾಯ ಪಡೆಯಿರಿ.

ನಿಮಗೆ ಬೇಕಾದ ರೋಗದ ಬಗ್ಗೆ ನೀವು ವಿವರ ಹುಡುಕುತ್ತಿದ್ದು ಸಿಗದಿದ್ದರೆ, ಅದು ಬೇರೆ ಹೆಸರಿನಡಿಯಲ್ಲಿ  ಇರುವುದೋ ನೋಡಿ.  ಅಥವಾ ಅದೇ ರೀತಿಯ ಸಮಸ್ಯೆಗಳ ಬಗ್ಗೆ ವಿವರಿಸಿರುವ ಅಧ್ಯಾಯದಲ್ಲಿ ನೋಡಿ. ಪರಿವಿಡಿ ಮತ್ತು ಇಂಡೆಕ್ಸ್ ಗಳ ಸಹಾಯ ಪಡೆಯಿರಿ.

ಬೇರೆ ಬೇರೆ ರೋಗಗಳಿಗೆ ಸಾಮಾನ್ಯವಾಗಿ ಜನರು ಉಪಯೋಗಿಸುವ ಸಾಂಪ್ರದಾಯಿಕ ಹೆಸರುಗಳನ್ನು ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೊಟ್ಟಿದೆ.  ಹೆಚ್ಚಿನ ಬಾರಿ ಬೇರೆ ಬೇರೆ ರೋಗಗಳಿಗೆ ಜನರು ಕರೆಯುವ ಹೆಸರುಗಳು ಒಂದೇ ಇರುವುದನ್ನು ನೀವು ಕಾಣಬಹುದು.